(1) ಭಯಾನಕವಾದ ಆ ಘಟನೆ!
(2) ಭಯಾನಕವಾದ ಆ ಘಟನೆ ಎಂದರೇನು?
(3) ಭಯಾನಕವಾದ ಆ ಘಟನೆ ಎಂದರೇನೆಂದು ತಮಗೆ ಗೊತ್ತಿದೆಯೇ?
(4) ಮನುಷ್ಯರು ಚದುರಿದ ಹಾತೆಗಳಂತಾಗುವ ದಿನ!
(5) ಪರ್ವತಗಳು ಹಿಂಜಿದ ಉಣ್ಣೆಯಂತಾಗುವ ದಿನ!
(6) ಆಗ ಯಾರ ತಕ್ಕಡಿಗಳು ಭಾರವಾಗುವುದೋ.
(7) ಅವನು ಸಂತೃಪ್ತವಾದ ಬದುಕಿನಲ್ಲಿರುವನು.(1425)
1425. ಸತ್ಕರ್ಮಗಳ ತಕ್ಕಡಿಯ ತಟ್ಟೆಗಳು ಭಾರವಾದರೆ ಪರಲೋಕದಲ್ಲಿ ಸಂತೃಪ್ತ ಜೀವನ ಖಚಿತ. ಕರ್ಮಗಳ ತೂಕ ಮತ್ತು ಅದನ್ನು ತೂಗುವ ತಕ್ಕಡಿ ಅಗೋಚರ ಪ್ರಪಂಚದ ವಾಸ್ತವತೆ ಎಂಬ ನೆಲೆಯಲ್ಲಿ ಕುರ್ಆನ್ ನಮಗೆ ಕಲಿಸಿಕೊಡುವ ವಿಷಯಗಳಾಗಿವೆ. ಅದರ ಬಗ್ಗೆಯಿರುವ ಮಾಹಿತಿಗಳನ್ನು ಈ ಭೌತಿಕ ಲೋಕದಲ್ಲಿ ನಮ್ಮಿಂದ ಗ್ರಹಿಸಲಾಗದು.
(8) ಆದರೆ ಯಾರ ತಕ್ಕಡಿಗಳು ಹಗುರವಾಗುವುದೋ.
(9) ಅವನ ವಾಸಸ್ಥಳವು ಹಾವಿಯಃ ಆಗಿರುವುದು.
(10) ಹಾವಿಯಃ ಎಂದರೇನೆಂದು ತಮಗೆ ಗೊತ್ತಿದೆಯೇ?
(11) ಅದು ತೀವ್ರ ಶಾಖವಿರುವ ನರಕಾಗ್ನಿಯಾಗಿದೆ.