105 - Al-Fil ()

|

(1) ಆನೆಯ ಜನರೊಂದಿಗೆ ತಮ್ಮ ರಬ್ ಹೇಗೆ ವರ್ತಿಸಿದನೆಂದು ತಾವು ಕಂಡಿಲ್ಲವೇ?

(2) ಅವನು ಅವರ ತಂತ್ರವನ್ನು ಪ್ರಮಾದದಲ್ಲಾಗಿಸಲಿಲ್ಲವೇ?

(3) ಅವನು ಅವರೆಡೆಗೆ ಗುಂಪು ಗುಂಪಾಗಿರುವ ಹಕ್ಕಿಗಳನ್ನು ಕಳುಹಿಸಿದನು.(1429)
1429. ಈ ಅಧ್ಯಾಯದಲ್ಲಿ ಪ್ರಸ್ತಾಪಿಸಿರುವುದು ಪ್ರವಾದಿ(ಸ) ರವರ ಜನನಕ್ಕಿಂತ ಕೆಲವೇ ತಿಂಗಳ ಹಿಂದೆ ಸಂಭವಿಸಿದ ಒಂದು ಘಟನೆಯಾಗಿದೆ. ಅಂದು ಯಮನ್ ದೇಶವು ಇತಿಯೋಪಿಯಾ ಸಾಮ್ರಾಟನ ವಶದಲ್ಲಿತ್ತು. ಯಮನ್ ರಾಜ್ಯವನ್ನು ಅವನ ಅಧೀನದಲ್ಲಿದ್ದ ಅಬ್ರಹಃ ಎಂಬ ಅರಸನು ಆಳುತ್ತಿದ್ದನು. ಯಮನ್‍ನಲ್ಲಿ ಮಹಾ ದೇವಾಲಯವೊಂದನ್ನು ನಿರ್ಮಿಸಿ ಅದನ್ನು ಅರಬರ ತೀರ್ಥಾಟನಾ ಕೇಂದ್ರವನ್ನಾಗಿಸಿ ಅವರ ಗಮನವನ್ನು ಕಅ್‌ಬಾಲಯದಿಂದ ತಿರುಗಿಸಿಬಿಡಬೇಕೆಂದು ಕ್ರೈಸ್ತನಾಗಿದ್ದ ಅಬ್ರಹಃ ಹವಣಿಸಿದ್ದನು. ಆದರೆ ಅರಬರು ಅತ್ತ ಮುಖಮಾಡದ್ದರಿಂದ ಹತಾಶನಾದ ಅಬ್ರಹಃ ಕಅ್‌ಬಾಲಯವನ್ನೇ ಕೆಡವಿ ಹಾಕಲು ಆನೆಯ ಮೇಲೇರಿ ತನ್ನ ಸೈನ್ಯದೊಂದಿಗೆ ಹೊರಟನು. ಕಅ್‌ಬಾಲಯದ ಪರಿಪಾಲಕರಾಗಿದ್ದ ಕುರೈಶರಿಗೆ ಅವನ ಮಹಾ ಸೈನ್ಯವನ್ನು ಎದುರಿಸುವ ತಾಕತ್ತಿರಲಿಲ್ಲ. ಪ್ರತಿರೋಧಿಸಲು ಸಾಧ್ಯವಾಗದ್ದರಿಂದ ಅವರು ಕೈಚೆಲ್ಲಿ ಕುಳಿತರು. ಈ ಸಂದರ್ಭ ಅಸಾಮಾನ್ಯ ಘಟನೆಯ ಮೂಲಕ ಅಲ್ಲಾಹು ಅಬ್ರಹಃನ ಸೈನ್ಯವನ್ನು ನಾಶ ಮಾಡಿದನು. ಸುಟ್ಟ ಜೇಡಿ ಮಣ್ಣಿನ ಕಲ್ಲುಗಳನ್ನು ಅವರ ಮೇಲೆಸೆಯಲು ಅಲ್ಲಾಹು ಹಕ್ಕಿಗಳ ಗುಂಪುಗಳನ್ನು ಕಳುಹಿಸಿದನು. ಆ ಕಲ್ಲುಗಳು ಅವರನ್ನು ನಾಶ ಮಾಡಿದವು. ಪವಿತ್ರ ಕಅ್‌ಬಾಲಯಕ್ಕೆ ಯಾವುದೇ ಹಾನಿಯೂ ಉಂಟಾಗದೆ ದಾಳಿಕೋರರು ನಾಶವಾದರು. ಪ್ರವಾದಿ(ಸ) ರವರು ಪ್ರವಾದಿಯಾದ ಆರಂಭಕಾಲದಲ್ಲಿ ಕುರೈಶರು ಅಬ್ರಹಃನ ಈ ನಾಶವನ್ನು ತಮ್ಮ ಇತಿಹಾಸದಲ್ಲಿ ಜರಗಿದ ಮಹಾ ಘಟನೆಯಾಗಿ ಪರಿಗಣಿಸಿದ್ದರು. ಆದರೆ ಇದರ ಸಮಗ್ರ ಜ್ಞಾನ ಅವರಿಗಿರಲಿಲ್ಲ. ಅಲ್ಲಾಹು ತಿಳಿಸಿಕೊಟ್ಟಿರುವುದಕ್ಕಿಂತ ಹೆಚ್ಚಾಗಿ ಏನನ್ನೂ ತಿಳಿಯಲು ನಮಗೂ ಸಾಧ್ಯವಿಲ್ಲ.

(4) ಸುಟ್ಟ ಜೇಡಿಮಣ್ಣಿನ ಕಲ್ಲುಗಳನ್ನು ಅವರ ಮೇಲೆಸೆಯುವ (ಹಕ್ಕಿಗಳನ್ನು).

(5) ಹಾಗೆ ಅವನು ಅವರನ್ನು ತಿಂದುಳಿದ ಹೊಟ್ಟಿನಂತಾಗಿಸಿದನು.(1430)
1430. ಇಲ್ಲಿನ ತಾತ್ಪರ್ಯವು ಹೊಲದಲ್ಲಿ ಜಾನುವಾರುಗಳು ಮೇಯ್ದು ಉಳಿದ ಹುಲ್ಲುಗಳ ಅವಶೇಷಗಳಂತೆ ಅಥವಾ ಹುಳು ತಿಂದು ನಾಶ ಮಾಡಿದ ಒಣಹುಲ್ಲಿನ ಕಿಲುಬುಗಳಂತೆಯೂ ಆಗಿರಬಹುದು.