111 - Al-Masad ()

|

(1) ಅಬೂಲಹಬ್‍ನ ಎರಡು ಕೈಗಳೂ ನಾಶವಾಗಿವೆ. ಅವನೂ ನಾಶವಾಗಿರುವನು.(1436)
1436. ಅಬೂಲಹಬ್ ಎಂಬ ಹೆಸರಲ್ಲಿ ಪರಿಚಿತನಾಗಿದ್ದ ಅಬ್ದುಲ್ ಉಝ್ಝಾ ಎಂಬವನು ಪ್ರವಾದಿ(ಸ) ರವರ ಚಿಕ್ಕಪ್ಪನಾಗಿದ್ದನು. ಪ್ರವಾದಿ(ಸ) ರವರ ಧರ್ಮಪ್ರಚಾರವನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಮತ್ತು ಪ್ರವಾದಿ(ಸ) ರವರ ಮೇಲೆ ಅಪಪ್ರಚಾರ ಮಾಡುತ್ತಿದ್ದ ಕಾರಣ ಅವನು ಅಲ್ಲಾಹುವಿನ ಶಾಪ ಮತ್ತು ಕೋಪಕ್ಕೆ ಗುರಿಯಾದನು.

(2) ಅವನ ಸಂಪತ್ತಾಗಲಿ, ಅವನು ಸಂಪಾದಿಸಿರುವುದಾಗಲಿ ಅವನಿಗೆ ಪ್ರಯೋಜನಪಡಲಿಲ್ಲ.

(3) ಅಗ್ನಿಜ್ವಾಲೆಗಳುಳ್ಳ ನರಕಾಗ್ನಿಯನ್ನು ಅವನು ಪ್ರವೇಶಿಸುವನು.

(4) ಸೌದೆ ಹೊರುವವಳಾದ ಅವನ ಪತ್ನಿಯ ಸಹಿತ.

(5) ಅವಳ ಕೊರಳಲ್ಲಿ ಖರ್ಜೂರ ಮರದ ನಾರಿನಿಂದ ನೇಯಲಾದ ಒಂದು ಹಗ್ಗವಿರುವುದು.(1437)
1437. ಸೌದೆ ಹೊರುವವಳು ಎಂದರೆ ಅನ್ಯರನ್ನು ದೂಷಿಸುವವಳು ಎಂಬ ಅರ್ಥದಲ್ಲಿ ರೂಪಕವಾಗಿ ಹೇಳಲಾಗಿದೆಯೆಂದು ಕೆಲವು ವ್ಯಾಖ್ಯಾನಕಾರರು ಅಭಿಪ್ರಾಯ ಪಟ್ಟಿದ್ದಾರೆ. ಪ್ರವಾದಿ(ಸ) ರವರು ಚಲಿಸುತ್ತಿದ್ದ ದಾರಿಯಲ್ಲಿ ಆಕೆ ಮುಳ್ಳುಗಳನ್ನು ಹಾಕುತ್ತಿದ್ದುದರಿಂದಲೇ ಆಕೆಯನ್ನು ಹಾಗೆ ಕರೆಯಲಾಗಿದೆಯೆಂದು ಇತರರು ಅಭಿಪ್ರಾಯ ಪಟ್ಟಿದ್ದಾರೆ. ಅವಳ ಕತ್ತಿನಲ್ಲಿ ಹಗ್ಗವಿರುವುದು ಎಂದರೆ ಮುಳ್ಳುಗಳನ್ನು ಕಟ್ಟಿ ತರುವ ಸಲುವಾಗಿ ಆಕೆ ಹಗ್ಗವನ್ನು ಕೊರಳಿಗೆ ಹಾಕಿ ಸಾಗುತ್ತಿದ್ದಳು ಎಂಬ ಅರ್ಥದಲ್ಲಾಗಿರಬಹುದು. ಇದು ನರಕದಲ್ಲಿ ಆಕೆಗೆ ಲಭ್ಯವಾಗಲಿರುವ ಶಿಕ್ಷೆಯೆಡೆಗೆ ಸೂಚನೆಯೆಂದು ಕೆಲವು ವ್ಯಾಖ್ಯಾನಕಾರರು ಅಭಿಪ್ರಾಯ ಪಡುತ್ತಾರೆ.