(1) ಅಲಿಫ್. ಲಾಮ್. ರಾ. ಇವು ಸ್ಪಷ್ಟವಾದ ಗ್ರಂಥದ ಸೂಕ್ತಿಗಳಾಗಿವೆ.
(2) ನೀವು ಚಿಂತಿಸಿ ಗ್ರಹಿಸುವ ಸಲುವಾಗಿ ನಾವು ಅದನ್ನು ಅರಬಿ ಭಾಷೆಯಲ್ಲಿ ಓದಲ್ಪಡುವ ಒಂದು ಪ್ರಮಾಣಗ್ರಂಥವಾಗಿ(401) ಅವತೀರ್ಣಗೊಳಿಸಿರುವೆವು.
401. ‘ಕುರ್‌ಆನ್’ ಎಂಬ ಅರಬಿ ಪದಕ್ಕೆ ಪಾರಾಯಣ, ಪಾರಾಯಣ ಮಾಡಲ್ಪಡುವ ಗ್ರಂಥ ಎಂಬಿತ್ಯಾದಿ ಅರ್ಥಗಳಿವೆ.
(3) ಈ ಕುರ್‌ಆನನ್ನು ತಮಗೆ ದಿವ್ಯ ಸಂದೇಶವಾಗಿ ನೀಡುವುದರ ಮೂಲಕ ಅತ್ಯುತ್ತಮವಾದ ಒಂದು ಚರಿತ್ರೆಯನ್ನು ನಾವು ತಮಗೆ ವಿವರಿಸಿಕೊಡುತ್ತಿರುವೆವು. ಖಂಡಿತವಾಗಿಯೂ ಇದಕ್ಕಿಂತ ಮುಂಚೆ ತಾವು ಅದರ ಬಗ್ಗೆ ಅರಿವಿಲ್ಲದವರ ಪೈಕಿ ಸೇರಿದವರಾಗಿದ್ದಿರಿ.(402)
402. ಯೂಸುಫ್(ಅ) ರವರ ಚರಿತ್ರೆ ಸೇರಿದಂತೆ ಅನೇಕ ಚರಿತ್ರೆಗಳು ಕುರ್‌ಆನ್‍ನಲ್ಲಿವೆ. ಸತ್ಯವಿಶ್ವಾಸಿಗಳು ಅನಿವಾರ್ಯವಾಗಿ ತಿಳಿದಿರಬೇಕಾದ ವಿಷಯಗಳನ್ನು ಚರಿತ್ರೆಯಿಂದ ಆರಿಸಿ ಅವುಗಳನ್ನು ಉತ್ತಮವಾದ ಶೈಲಿಯಲ್ಲಿ ವಿವರಿಸಿಕೊಡುವುದು ಅಲ್ಲಾಹುವಿನ ಕ್ರಮವಾಗಿದೆ. ದಿವ್ಯ ಸಂದೇಶವು ಲಭಿಸುವುದಕ್ಕೆ ಮುಂಚೆ ಪ್ರವಾದಿ(ಸ) ರಿಗೆ ಈ ಚರಿತ್ರೆಗಳೊಂದೂ ತಿಳಿದಿರಲಿಲ್ಲ.
(4) ಯೂಸುಫ್ ತಮ್ಮ ತಂದೆಯೊಂದಿಗೆ ಹೇಳಿದ ಸಂದರ್ಭ: “ಓ ನನ್ನ ತಂದೆಯವರೇ! ಖಂಡಿತವಾಗಿಯೂ ನಾನು ಹನ್ನೊಂದು ನಕ್ಷತ್ರಗಳನ್ನು, ಸೂರ್ಯನನ್ನು ಮತ್ತು ಚಂದ್ರನನ್ನು (ಕನಸಿನಲ್ಲಿ) ಕಂಡಿರುವೆನು. ಅವು ನನಗೆ ಸಾಷ್ಟಾಂಗವೆರಗುವುದಾಗಿ ನಾನು ಕಂಡಿರುವೆನು.”
(5) ಅವರು (ತಂದೆ) ಹೇಳಿದರು: “ಓ ನನ್ನ ಮಗನೇ! ನಿನ್ನ ಕನಸನ್ನು ನಿನ್ನ ಸಹೋದರರಿಗೆ ವಿವರಿಸಿಕೊಡದಿರು. ಅವರು ನಿನ್ನ ವಿರುದ್ಧ ಯಾವುದಾದರೂ ಸಂಚನ್ನು ಹೂಡಬಹುದು. ಖಂಡಿತವಾಗಿಯೂ ಸೈತಾನನು ಮನುಷ್ಯನ ಬಹಿರಂಗ ಶತ್ರುವಾಗಿರುವನು.(403)
403. ಮುಂದೆ ಯೂಸುಫ್(ಅ) ರಿಗೆ ಸಿಗಲಿರುವ ಮಹತ್ವದೆಡೆಗೆ ಸೂಚನೆ ನೀಡುವ ಈ ಕನಸಿನ ಬಗ್ಗೆ ಸಹೋದರರು ಅರಿತರೆ ಅವರಿಗೆ ಯೂಸುಫ್(ಅ) ರ ಮೇಲೆ ಮತ್ಸರವುಂಟಾಗುವುದು. ಆಗ ಯೂಸುಫ್(ಅ) ರ ವಿರುದ್ಧ ಸಂಚು ಹೂಡಲು ಸೈತಾನನು ಅವರನ್ನು ಪ್ರೇರೇಪಿಸಿಬಿಡುವನೋ ಎಂಬ ಭಯವು ಯಅ್‌ಕೂಬ್(ಅ) ರಿಗಿತ್ತು.
(6) ಹೀಗೆ ನಿನ್ನ ರಬ್ ನಿನ್ನನ್ನು ಆರಿಸುವನು. ನಿನಗೆ ಸ್ವಪ್ನವ್ಯಾಖ್ಯಾನಗಳ ಪೈಕಿ ಕೆಲವನ್ನು ಕಲಿಸಿಕೊಡುವನು. ಮುಂಚೆ ನಿನ್ನ ಪೂರ್ವಿಕರಾದ(404) ಇಬ್ರಾಹೀಮ್ ಮತ್ತು ಇಸ್‍ಹಾಕ್‍ರ ಮೇಲೆ ಅವನು ತನ್ನ ಅನುಗ್ರಹವನ್ನು ಪೂರ್ಣಗೊಳಿಸಿದಂತೆ ನಿನ್ನ ಮೇಲೂ ಯಅ್‌ಕೂಬ್ ಕುಟುಂಬದ ಮೇಲೂ ಪೂರ್ಣಗೊಳಿಸುವನು. ಖಂಡಿತವಾಗಿಯೂ ನಿನ್ನ ರಬ್ ಸರ್ವಜ್ಞನೂ ಯುಕ್ತಿಪೂರ್ಣನೂ ಆಗಿರುವನು”.
404. ಇಲ್ಲಿ ‘ಆಬಾಅ್’ ಎಂದರೆ ಪೂರ್ವಿಕರು ಎಂದರ್ಥ.
(7) ಖಂಡಿತವಾಗಿಯೂ ಯೂಸುಫ್ ಮತ್ತು ಅವರ ಸಹೋದರರಲ್ಲಿ ಕೇಳಿ ಮನವರಿಕೆ ಮಾಡಿಕೊಳ್ಳುವವರಿಗೆ ಅನೇಕ ದೃಷ್ಟಾಂತಗಳಿವೆ.
(8) ಅವರು (ಸಹೋದರರು) ಹೇಳಿದ ಸಂದರ್ಭ: “ನಮ್ಮ ತಂದೆಗೆ ನಮಗಿಂತಲೂ ಹೆಚ್ಚು ಪ್ರಿಯರು ಯೂಸುಫ್ ಮತ್ತು ಅವನ ಸಹೋದರನಾಗಿರುವರು. ನಾವೊಂದು (ಬಲಿಷ್ಠ) ತಂಡವಾಗಿರುವೆವು. ಖಂಡಿತವಾಗಿಯೂ ನಮ್ಮ ತಂದೆ ಸ್ಪಷ್ಟವಾದ ಪ್ರಮಾದದಲ್ಲಿರುವರು.
(9) ನೀವು ಯೂಸುಫ್‍ನನ್ನು ಕೊಂದುಬಿಡಿರಿ ಅಥವಾ ಅವನನ್ನು ಯಾವುದಾದರೊಂದು ಭೂಪ್ರದೇಶದಲ್ಲಿ ಎಸೆದು ಬನ್ನಿರಿ. ಹಾಗಾದರೆ ನಿಮ್ಮ ತಂದೆಯ ಮುಖವು ನಿಮಗೆ ಸಿಗುವುದು.(405) ಅದರ ಬಳಿಕ ನಿಮಗೆ ಸಾತ್ವಿಕರಾದ ಜನರಾಗಿ ಮಾರ್ಪಡಬಹುದು.”(406)
405. ಯಅ್‌ಕೂಬ್(ಅ) ರಿಗೆ ಯೂಸುಫ್(ಅ) ಸೇರಿದಂತೆ ಹನ್ನೆರಡು ಮಕ್ಕಳಿದ್ದರು. ಅವರು ಯೂಸುಫ್(ಅ) ರನ್ನು ಹೆಚ್ಚು ಪ್ರೀತಿಸುತ್ತಿರುವರು ಎಂಬ ಭಾವನೆಯಿಂದಾಗಿ ಅಣ್ಣಂದಿರಿಗೆ ಯೂಸುಫ್(ಅ) ರೊಂದಿಗೆ ತೀವ್ರ ಅಸೂಯೆಯಿತ್ತು. ಯೂಸುಫ್(ಅ) ರನ್ನು ಕೊಂದುಬಿಟ್ಟರೆ ಸ್ವಲ್ಪಕಾಲ ತಂದೆಗೆ ತೀವ್ರ ದುಃಖವುಂಟಾಗಬಹುದಾದರೂ ಕ್ರಮೇಣ ಅವರು ಯೂಸುಫ್(ಅ) ರನ್ನು ಮರೆತುಬಿಡುವರು. ನಂತರ ತಂದೆಯ ಪ್ರೀತಿಯು ನಮಗೆ ಮರಳಿ ಸಿಗುವುದು ಎಂದು ಅವರು ಎಣಿಸಿದ್ದರು.
406. ಕೊಲೆ ಮಾಡಿದ ಬಳಿಕ ಪಶ್ಚಾತ್ತಾಪಪಟ್ಟು ಸಾತ್ವಿಕರಾಗಿ ಬಾಳಬಹುದು ಎಂದು ಅವರು ಆಶಿಸಿದ್ದರು.
(10) ಅವರ ಪೈಕಿ ಒಬ್ಬ ವಕ್ತಾರನು ಹೇಳಿದನು: “ನೀವು ಯೂಸುಫ್‍ನನ್ನು ಕೊಲ್ಲಬೇಡಿರಿ. ನಿಮಗೇನಾದರೂ ಮಾಡಬೇಕೆಂದಿದ್ದರೆ ಅವನನ್ನು ಬಾವಿಯ ತಳಭಾಗಕ್ಕೆ ಎಸೆದು ಬಿಡಿರಿ. ಯಾವುದಾದರೂ ಯಾತ್ರಿಕರ ತಂಡವು ಅವನನ್ನು ಎತ್ತಿಕೊಳ್ಳಬಹುದು”.
(11) (ತರುವಾಯ ತಮ್ಮ ತಂದೆಯ ಬಳಿ ಬಂದು) ಅವರು ಹೇಳಿದರು: “ಓ ನಮ್ಮ ತಂದೆಯವರೇ! ತಮಗೇನಾಗಿದೆ? ಯೂಸುಫ್‍ನ ವಿಷಯದಲ್ಲಿ ತಾವೇಕೆ ನಮ್ಮನ್ನು ನಂಬುತ್ತಿಲ್ಲ? ಖಂಡಿತವಾಗಿಯೂ ನಾವು ಅವನ ಹಿತಾಕಾಂಕ್ಷಿಗಳಾಗಿರುವೆವು.
(12) ನಾಳೆ ಅವನನ್ನು ನಮ್ಮೊಂದಿಗೆ ಕಳುಹಿಸಿಕೊಡಿರಿ. ಅವನು ಉಲ್ಲಾಸದೊಂದಿಗೆ ನಡೆಯುತ್ತಾ ಆಟವಾಡಲಿ. ಖಂಡಿತವಾಗಿಯೂ ನಾವು ಅವನನ್ನು ಕಾಯುವೆವು”.
(13) ಅವರು (ತಂದೆ) ಹೇಳಿದರು: “ನೀವು ಅವನನ್ನು ಕೊಂಡೊಯ್ಯುವುದು ಖಂಡಿತವಾಗಿಯೂ ನನಗೆ ಸಂಕಟವನ್ನುಂಟು ಮಾಡುತ್ತಿದೆ. ನೀವು ಅವನ ಬಗ್ಗೆ ಅಲಕ್ಷ್ಯರಾಗಿರುವಾಗ ತೋಳವು ಅವನನ್ನು ತಿನ್ನಬಹುದು ಎಂದು ನಾನು ಭಯಪಡುತ್ತಿರುವೆನು”.
(14) ಅವರು ಹೇಳಿದರು: “ನಾವೊಂದು (ಬಲಿಷ್ಠ) ತಂಡವಾಗಿರುವಾಗ ತೋಳವು ಅವನನ್ನು ತಿನ್ನುವುದಾದರೆ ಖಂಡಿತವಾಗಿಯೂ ನಷ್ಟ ಹೊಂದಿದವರು ನಾವೇ ಆಗಿರುವೆವು”.
(15) ತರುವಾಯ ಅವರು ಅವರೊಂದಿಗೆ (ಯೂಸುಫ್‍ರೊಂದಿಗೆ) ಹೊರಟಾಗ ಮತ್ತು ಅವರನ್ನು ಬಾವಿಯೊಂದರ ತಳಭಾಗಕ್ಕೆ ಎಸೆಯುವುದರ ಬಗ್ಗೆ ಏಕಾಭಿಪ್ರಾಯ ಹೊಂದಿದಾಗ (ಅವರು ತಮ್ಮ ಕ್ರೂರಕೃತ್ಯವನ್ನು ಜಾರಿಗೊಳಿಸಿಯೇ ಬಿಟ್ಟರು). “ತಾವು ಅವರಿಗೆ (ಎಂದಾದರೊಮ್ಮೆ) ಅವರ ಈ ಕೃತ್ಯದ ಬಗ್ಗೆ ಖಂಡಿತವಾಗಿಯೂ ತಿಳಿಸಿಕೊಡುವಿರಿ.(407) (ಅಂದು) ಅವರು ಇದರ ಬಗ್ಗೆ ಪ್ರಜ್ಞೆಯಿಲ್ಲದವರಾಗಿರುವರು.” ಎಂದು ನಾವು ಅವರಿಗೆ (ಯೂಸುಫ್‍ರಿಗೆ) ದಿವ್ಯಸಂದೇಶವನ್ನು ನೀಡಿದೆವು.
407. ತದನಂತರ ಈಜಿಪ್ಟಿನಲ್ಲಿ ಅವರು ಇದರ ಬಗ್ಗೆ ಸಹೋದರರೊಂದಿಗೆ ಮಾತನಾಡಿದ್ದಾಗಿ 89ನೇ ಸೂಕ್ತಿಯಲ್ಲಿ ಹೇಳಲಾಗಿದೆ.
(16) ಸಂಜೆಯಾದಾಗ ಅವರು ತಮ್ಮ ತಂದೆಯ ಬಳಿಗೆ ಅಳುತ್ತಾ ಬಂದರು.
(17) ಅವರು ಹೇಳಿದರು: “ಓ ನಮ್ಮ ತಂದೆಯವರೇ! ನಾವು ಸ್ಪರ್ಧಿಸುತ್ತಾ ಓಡಿದೆವು ಮತ್ತು ಯೂಸುಫ್‍ನನ್ನು ನಮ್ಮ ಸಾಮಗ್ರಿಗಳ ಬಳಿ ಬಿಟ್ಟಿದ್ದೆವು. ಆಗ ತೋಳವು ಅವನನ್ನು ತಿಂದು ಹಾಕಿತು. ನಾವು ಸತ್ಯವನ್ನೇ ನುಡಿಯುವವರಾಗಿದ್ದರೂ ಕೂಡ ತಾವು ನಮ್ಮನ್ನು ನಂಬಲಾರಿರಿ”.
(18) ಅವರು ಯೂಸುಫ್‍ರ ಅಂಗಿಗೆ ಮಿಥ್ಯರಕ್ತವನ್ನು ಹಚ್ಚಿ ತಂದಿದ್ದರು. ತಂದೆ ಹೇಳಿದರು: “ಅಲ್ಲ, ನಿಮ್ಮ ಮನಸ್ಸುಗಳು ನಿಮಗೆ ಯಾವುದೋ ಒಂದು ವಿಷಯವನ್ನು ಆಕರ್ಷಣೀಯವಾಗಿ ತೋರಿಸಿದೆ. ಆದುದರಿಂದ ಉತ್ತಮ ವಾಗಿ ತಾಳ್ಮೆ ವಹಿಸುವುದೇ ಸರಿ. ನೀವು ವರ್ಣಿಸುತ್ತಿರುವ ವಿಷಯದಲ್ಲಿ ಸಹಾಯ ಬೇಡಲಾಗುವವನು ಅಲ್ಲಾಹು ಮಾತ್ರವಾಗಿರುವನು”.
(19) ಅಲ್ಲಿಗೆ ಯಾತ್ರಿಕರ ಒಂದು ತಂಡವು ಬಂದಿತು. ಅವರು ತಮ್ಮ ನೀರು ತರುವವನನ್ನು ಕಳುಹಿಸಿದರು. ಅವನು ತನ್ನ ಬಕೆಟ್ಟನ್ನು ಇಳಿಸಿದನು. ಅವನು ಹೇಳಿದನು: “ಓ ಸಂತಸದ ಸುದ್ದಿ! ಇಲ್ಲೊಬ್ಬ ಹುಡುಗ!” ಅವರು ಅವರನ್ನು (ಯೂಸುಫ್‍ರನ್ನು) ಒಂದು ವ್ಯಾಪಾರದ ಸರಕಾಗಿ ಬಚ್ಚಿಟ್ಟರು. ಅವರು ಮಾಡುತ್ತಿರುವುದರ ಬಗ್ಗೆ ಅಲ್ಲಾಹು ಚೆನ್ನಾಗಿ ಅರಿಯುವವನಾಗಿರುವನು.
(20) ಅವರು ಅವರನ್ನು (ಯೂಸುಫ್‍ರನ್ನು) ಚಿಲ್ಲರೆ ಕಾಸಿಗೆ -ಕೆಲವು ಬೆಳ್ಳಿ ನಾಣ್ಯಗಳಿಗೆ- ಮಾರಿದರು. ಅವರು ಅವರ (ಯೂಸುಫ್‍ರ) ವಿಷಯದಲ್ಲಿ ಅನಾಸಕ್ತಿಯುಳ್ಳವರ ಪೈಕಿ ಸೇರಿದವರಾಗಿದ್ದರು.(408)
408. ದಾರಿಯಲ್ಲಿ ಸಿಕ್ಕಿದ ಹುಡುಗನಿಗೆ ಯಾವುದೇ ಬೆಲೆ ಸಿಕ್ಕಿದರೂ ಪರವಾಗಿಲ್ಲ ಎಂದವರು ಪರಿಗಣಿಸಿದ್ದರು.
(21) ಅವರನ್ನು ಈಜಿಪ್ಟಿನಿಂದ ಖರೀದಿಸಿದ ವ್ಯಕ್ತಿ ತನ್ನ ಪತ್ನಿಯೊಂದಿಗೆ ಹೇಳಿದನು: “ಇವನಿಗೆ ಗೌರವಾನ್ವಿತ ವಸತಿಯನ್ನು ಒದಗಿಸು. ಇವನು ನಮಗೆ ಪ್ರಯೋಜನಕಾರಿಯಾಗಲೂ ಬಹುದು ಅಥವಾ ನಮಗೆ ಇವನನ್ನು ಮಗನನ್ನಾಗಿ ಮಾಡಿಕೊಳ್ಳಬಹುದು”. ಹೀಗೆ ನಾವು ಯೂಸುಫ್‍ರಿಗೆ ಆ ಭೂಪ್ರದೇಶದಲ್ಲಿ ಅನುಕೂಲತೆಯನ್ನು ಮಾಡಿಕೊಟ್ಟೆವು. ಇದು ನಾವು ಅವರಿಗೆ ಸ್ವಪ್ನ ವ್ಯಾಖ್ಯಾನವನ್ನು ಕಲಿಸಿಕೊಡುವ ಸಲುವಾಗಿತ್ತು. ಅಲ್ಲಾಹು ತನ್ನ ವಿಷಯದಲ್ಲಿ ಜಯಶಾಲಿಯಾಗುವನು. ಆದರೆ ಜನರಲ್ಲಿ ಹೆಚ್ಚಿನವರೂ ಅರಿತುಕೊಳ್ಳಲಾರರು.
(22) ತರುವಾಯ ಅವರು (ಯೂಸುಫ್) ಪೂರ್ಣ ಬೆಳವಣಿಗೆಯನ್ನು ತಲುಪಿದಾಗ ನಾವು ಅವರಿಗೆ ಯುಕ್ತಿಯನ್ನೂ ಜ್ಞಾನವನ್ನೂ ಕರುಣಿಸಿದೆವು. ಸತ್ಕರ್ಮವೆಸಗುವವರಿಗೆ ನಾವು ಹೀಗೆ ಪ್ರತಿಫಲವನ್ನು ನೀಡುವೆವು.
(23) ಅವರು ಯಾವಾಕೆಯ ಮನೆಯಲ್ಲಿದ್ದರೋ ಆಕೆ(409) ಅವರನ್ನು ವಶೀಕರಿಸಲು ಯತ್ನಿಸಿದಳು. ಆಕೆ ಕದಗಳನ್ನು ಮುಚ್ಚಿ ಹೇಳಿದಳು: “ಇತ್ತ ಬಾ”. ಅವರು (ಯೂಸುಫ್) ಹೇಳಿದರು: “ನಾನು ಅಲ್ಲಾಹುವಿನೊಂದಿಗೆ ಅಭಯ ಯಾಚಿಸುತ್ತಿರುವೆನು. ಖಂಡಿತವಾಗಿಯೂ ಅವನು ನನ್ನ ರಬ್ ಆಗಿರುವನು. ಅವನು ನನ್ನ ವಾಸಸ್ಥಳವನ್ನು ಉತ್ತಮಗೊಳಿಸಿರುವನು.(410) ಖಂಡಿತವಾಗಿಯೂ ಅಕ್ರಮಿಗಳು ಯಶಸ್ವಿಯಾಗಲಾರರು”.
409. ಅರಸನ ಪತ್ನಿಯ ಹೆಸರನ್ನು ಕುರ್‌ಆನ್‍ನಲ್ಲಿ ಹೇಳಲಾಗಿಲ್ಲ. ಆಕೆಯ ಹೆಸರು ಝುಲೈಖಾ ಆಗಿದೆಯೆಂದು ತಫ್ಸೀರ್ ಗ್ರಂಥಗಳಲ್ಲಿ ಕಾಣಬಹುದು.
410. ‘ನನ್ನ ರಬ್’ ಎಂಬ ಈ ವಚನವು ಪ್ರಪಂಚದ ಪರಿಪಾಲಕ ಎಂಬ ಅರ್ಥದಲ್ಲಿಯೂ, ಒಡೆಯ, ಅಥವಾ ಮನೆಯ ಯಜಮಾನ ಎಂಬರ್ಥದಲ್ಲಿಯೂ ಆಗಿರುವ ಸಾಧ್ಯತೆಯಿದೆ.
(24) ಆಕೆಗೆ ಅವರಲ್ಲಿ ಮೋಹವುಂಟಾಯಿತು. ತನ್ನ ರಬ್‌ನ ಪುರಾವೆಯನ್ನು ಕಾಣದಿರುತ್ತಿದ್ದರೆ ಅವರಿಗೂ ಆಕೆಯಲ್ಲಿ ಮೋಹವುಂಟಾಗುತ್ತಿತ್ತು. ಹೀಗೆ ಅವರಿಂದ ಕೆಡುಕು ಹಾಗೂ ನೀಚಕೃತ್ಯವನ್ನು ತಿರುಗಿಸಿಬಿಡುವ ಸಲುವಾಗಿ (ಇದು ಸಂಭವಿಸಿತು). ಖಂಡಿತವಾಗಿಯೂ ಅವರು ನಮ್ಮ ನಿಷ್ಕಳಂಕ ದಾಸರಲ್ಲಿ ಸೇರಿದವರಾಗಿದ್ದರು.
(25) ಅವರಿಬ್ಬರೂ ಸ್ಪರ್ಧಿಸುತ್ತಾ ಬಾಗಿಲಿನೆಡೆಗೆ ಓಡಿದರು. ಆಕೆ ಅವರ ಅಂಗಿಯನ್ನು ಹಿಂಭಾಗದಿಂದ (ಹಿಡಿದು) ಹರಿದಳು. ಅವರಿಬ್ಬರೂ ಬಾಗಿಲ ಬಳಿ ಆಕೆಯ ಯಜಮಾನನನ್ನು (ಪತಿಯನ್ನು) ಕಂಡರು. ಆಕೆ ಹೇಳಿದಳು: “ತಮ್ಮ ಪತ್ನಿಯೊಂದಿಗೆ ಕೆಟ್ಟ ಬಯಕೆಯನ್ನು ಹೊಂದಿರುವವನಿಗೆ ದೊರೆಯುವ ಶಿಕ್ಷೆಯು ಅವನನ್ನು ಸೆರೆಮನೆಯಲ್ಲಿಡುವುದು ಅಥವಾ ಯಾತನಾಮಯ ಶಿಕ್ಷೆಯನ್ನು ನೀಡುವುದರ ವಿನಾ ಬೇರೇನೂ ಆಗಿರಬಾರದು”.
(26) ಯೂಸುಫ್ ಹೇಳಿದರು: “ನನ್ನನ್ನು ವಶೀಕರಿಸಲು ಯತ್ನಿಸಿದವಳು ಆಕೆಯೇ ಆಗಿರುವಳು”. ಆಗ ಆಕೆಯ ಕುಟುಂಬದಲ್ಲಿ ಸೇರಿದ ಒಬ್ಬ ಸಾಕ್ಷಿ ಹೀಗೆ ಸಾಕ್ಷಿ ನುಡಿದನು: “ಅವನ ಅಂಗಿಯು ಮುಂಭಾಗದಿಂದ ಹರಿದಿರುವುದಾದರೆ ಆಕೆ ಹೇಳಿದ್ದು ಸತ್ಯವಾಗಿದೆ ಮತ್ತು ಅವನು ಸುಳ್ಳು ನುಡಿಯುವವರಲ್ಲಿ ಸೇರಿದವನಾಗಿರುವನು.
(27) ಆದರೆ ಅವನ ಅಂಗಿಯು ಹಿಂಭಾಗದಿಂದ ಹರಿದಿರುವುದಾದರೆ ಆಕೆ ಹೇಳಿದ್ದು ಸುಳ್ಳಾಗಿದೆ ಮತ್ತು ಅವನು ಸತ್ಯ ನುಡಿಯುವವರಲ್ಲಿ ಸೇರಿದವನಾಗಿರುವನು”.
(28) ಆದರೆ ಅವರ ಅಂಗಿಯು ಹಿಂಭಾಗದಿಂದ ಹರಿದಿರುವುದನ್ನು ಕಂಡಾಗ ಅವನು (ಅರಸನು ತನ್ನ ಪತ್ನಿಯೊಂದಿಗೆ) ಹೇಳಿದನು: “ಖಂಡಿತವಾಗಿಯೂ ಇದು ನಿಮ್ಮ (ಸ್ತ್ರೀಯರ) ತಂತ್ರಗಳಲ್ಲಿ ಸೇರಿದ್ದಾಗಿದೆ. ಖಂಡಿತವಾಗಿಯೂ ನಿಮ್ಮ ತಂತ್ರವು ಭೀಕರವಾಗಿದೆ.
(29) ಓ ಯೂಸುಫ್! ನೀನು ಇದನ್ನು ಕಡೆಗಣಿಸು. (ಓ ಹೆಣ್ಣೇ!) ನೀನು ನಿನ್ನ ಪಾಪಕ್ಕಾಗಿ ಕ್ಷಮೆಯಾಚಿಸು. ಖಂಡಿತವಾಗಿಯೂ ನೀನು ಪಾಪಿಗಳಲ್ಲಿ ಸೇರಿದವಳಾಗಿರುವೆ”.
(30) ಪಟ್ಟಣದಲ್ಲಿರುವ ಕೆಲವು ಸ್ತ್ರೀಯರು ಹೇಳಿದರು: “ಅರಸನ ಪತ್ನಿ ಆಕೆಯ ಸೇವಕನನ್ನು ವಶೀಕರಿಸಲು ಯತ್ನಿಸುತ್ತಿರುವಳು. ಆಕೆ ಅವನನ್ನು ಗಾಢವಾಗಿ ಪ್ರೀತಿಸುತ್ತಿರುವಳು. ಖಂಡಿತವಾಗಿಯೂ ನಾವು ಆಕೆಯನ್ನು ಸ್ಪಷ್ಟವಾದ ದಾರಿಗೇಡಿನಲ್ಲಿರುವುದಾಗಿ ಕಾಣುತ್ತಿರುವೆವು”.
(31) ಅವರ ಕುಚೇಷ್ಟೆಯ ಬಗ್ಗೆ ಕೇಳಿ ತಿಳಿದಾಗ ಆಕೆ ಅವರೆಡೆಗೆ ಆಳನ್ನು ಕಳುಹಿಸಿದಳು. (ಅವರು ಬಂದಾಗ) ಅವರಿಗೆ ಒರಗಿ ಕೂರಲು ಆಸನಗಳ ವ್ಯವಸ್ಥೆಯನ್ನು ಮಾಡಿದಳು.(411) ಅವರಲ್ಲಿ ಪ್ರತಿಯೊಬ್ಬರಿಗೂ (ಹಣ್ಣನ್ನು ಕತ್ತರಿಸಲು) ಒಂದೊಂದು ಚೂರಿಯನ್ನು ನೀಡಿದಳು. ತರುವಾಯ ಆಕೆ (ಯೂಸುಫ್‍ರೊಂದಿಗೆ) ಹೇಳಿದಳು: “ಅವರ ಮುಂಭಾಗಕ್ಕೆ ಹೊರಡು”. ಅವರನ್ನು (ಯೂಸುಫ್‍ರನ್ನು) ಕಂಡಾಗ ಅವರು ಮೂಕವಿಸ್ಮಿತರಾದರು ಮತ್ತು ತಮ್ಮ ಕೈಗಳನ್ನೇ ಕತ್ತರಿಸಿದರು.(412) ಅವರು ಹೇಳಿದರು: “ಅಲ್ಲಾಹು ಪರಮಪಾವನನು! ಇವರು ಮನುಷ್ಯರಲ್ಲ! ಇವರೊಬ್ಬ ಗೌರವಾನ್ವಿತ ಮಲಕ್ ಮಾತ್ರವಾಗಿರುವರು”.
411. ‘ಮುತ್ತಕಅ್’ ಎಂದರೆ ಒರಗಿ ಕೂರುವ ಆಸನ ಎಂದರ್ಥ. ಕೆಲವರು ಇದಕ್ಕೆ ಔತಣಕೂಟ ಎಂಬರ್ಥವನ್ನು ನೀಡಿರುವರು.
412. ರಾಣಿ ಯೂಸುಫ್(ಅ) ರನ್ನು ಕರೆದದ್ದು ಆ ಸ್ತ್ರೀಯರು ಹಣ್ಣನ್ನು ಕತ್ತರಿಸಿ ತಿನ್ನುತ್ತಿರುವ ಸಂದರ್ಭದಲ್ಲಾಗಿತ್ತು. ಯೂಸುಫ್(ಅ) ರವರ ಸೌಂದರ್ಯವನ್ನು ಕಂಡು ಬೆರಗಾದ ಅವರು ತಮಗರಿವಿಲ್ಲದೆಯೇ ತಮ್ಮ ಬೆರಳುಗಳನ್ನು ಕತ್ತರಿಸಿದ್ದರು.
(32) ಆಕೆ ಹೇಳಿದಳು: “ಯಾವ ವ್ಯಕ್ತಿಯ ಬಗ್ಗೆ ನೀವು ನನ್ನನ್ನು ದೂಷಿಸಿದಿರೋ ಆ ವ್ಯಕ್ತಿಯೇ ಇವನು! ಖಂಡಿತವಾಗಿಯೂ ನಾನು ಅವನನ್ನು ವಶೀಕರಿಸಲು ಯತ್ನಿಸಿದ್ದೆನು. ಆದರೆ ಅವನು (ಸ್ವತಃ ಕಳಂಕಕ್ಕೊಳಗಾಗದೆ) ಪಾರಾದನು. ನಾನು ಅವನೊಂದಿಗೆ ಏನನ್ನು ಆದೇಶಿಸುವೆನೋ ಅದನ್ನು ಅವನು ಮಾಡದಿದ್ದರೆ ಖಂಡಿತವಾಗಿಯೂ ಅವನನ್ನು ಸೆರೆಮನೆಯಲ್ಲಿಡಲಾಗುವುದು ಮತ್ತು ಅವನು ಅಪಮಾನಿತರಲ್ಲಿ ಸೇರಿದವನಾಗುವನು”.
(33) ಅವರು (ಯೂಸುಫ್) ಹೇಳಿದರು: “ನನ್ನ ಪ್ರಭೂ! ಇವರು ನನ್ನನ್ನು ಯಾವುದರೆಡೆಗೆ ಕರೆಯುತ್ತಿರುವರೋ ಅದಕ್ಕಿಂತಲೂ ಸೆರೆಮನೆಯೇ ನನಗೆ ಹೆಚ್ಚು ಪ್ರಿಯವಾಗಿದೆ. ಇವರ ಸಂಚನ್ನು ನೀನು ನನ್ನಿಂದ ಸರಿಸಿ ಬಿಡದಿದ್ದರೆ ನಾನು ಅವರೆಡೆಗೆ ವಾಲುವವನಾಗುವೆನು ಮತ್ತು ನಾನು ಅಜ್ಞಾನಿಗಳ ಪೈಕಿ ಸೇರಿದವನಾಗುವೆನು”.
(34) ಆಗ ಅವರ ರಬ್ ಅವರ ಪ್ರಾರ್ಥನೆಗೆ ಉತ್ತರಿಸಿದನು. ಅವರ ಸಂಚನ್ನು ಅವರಿಂದ ಸರಿಸಿಬಿಟ್ಟನು. ಖಂಡಿತವಾಗಿಯೂ ಅವನು ಎಲ್ಲವನ್ನು ಆಲಿಸುವವನೂ ಆಗಿರುವನು.
(35) ತರುವಾಯ ಪುರಾವೆಗಳನ್ನು ಕಂಡು ಮನದಟ್ಟಾದ ಬಳಿಕವೂ ಅವರನ್ನು ಒಂದು ಕಾಲಾವಧಿಯ ತನಕ ಸೆರೆಮನೆಯಲ್ಲಿಡಬೇಕೆಂದು ಅವರಿಗೆ ಹೊಳೆಯಿತು.(413)
413. ಯೂಸುಫ್(ಅ) ರವರು ಅಪರಾಧಿಯಲ್ಲದಿದ್ದರೂ ಸಮಸ್ಯೆಯನ್ನು ಬಗೆಹರಿಸಲು ಅವರನ್ನು ಸೆರೆಮನೆಯಲ್ಲಿಡುವುದು ಸೂಕ್ತವೆಂದು ಅರಸನು ಭಾವಿಸಿದನು. ಯೂಸುಫ್(ಅ) ರವರು ಕೇವಲ ಒಬ್ಬ ಸೇವಕ. ಅವರು ನಾಡಿನ ದೊರೆಗಳು. ಆದುದರಿಂದ ಅವರ ನಿರ್ಧಾರವನ್ನು ಪ್ರಶ್ನಿಸುವವರಾರೂ ಇರಲಾರರು.
(36) ಇಬ್ಬರು ಯುವಕರು ಯೂಸುಫ್‍ರೊಂದಿಗೆ ಸೆರೆಮನೆಯನ್ನು ಪ್ರವೇಶಿಸಿದರು. ಅವರಲ್ಲೊಬ್ಬನು ಹೇಳಿದನು: “ನಾನು ಮದ್ಯವನ್ನು ಹಿಂಡುತ್ತಿರುವುದಾಗಿ ಕನಸು ಕಂಡಿರುವೆನು”. ಇನ್ನೊಬ್ಬನು ಹೇಳಿದನು: “ನಾನು ನನ್ನ ತಲೆಯ ಮೇಲೆ ರೊಟ್ಟಿಯನ್ನು ಹೊತ್ತುಕೊಂಡಿದ್ದು ಹಕ್ಕಿಗಳು ಅದರಿಂದ ತಿನ್ನುತ್ತಿರುವುದಾಗಿ ಕನಸು ಕಂಡಿರುವೆನು. ಇದರ ವ್ಯಾಖ್ಯಾನವನ್ನು ತಾವು ನಮಗೆ ತಿಳಿಸಿಕೊಡಿರಿ. ಖಂಡಿತವಾಗಿಯೂ ನಾವು ತಮ್ಮನ್ನು ಸಜ್ಜನರಲ್ಲಿ ಸೇರಿದವರಾಗಿ ಕಾಣುತ್ತಿರುವೆವು”.
(37) ಯೂಸುಫ್ ಹೇಳಿದರು: “ನಿಮಗೆ ಒದಗಿಸಲಾಗುವ ಯಾವುದೇ ಆಹಾರವು ನಿಮ್ಮ ಬಳಿಗೆ ಬರುವ ಮೊದಲೇ ನಾನು ಅದರ (ಕನಸಿನ) ವ್ಯಾಖ್ಯಾನವನ್ನು ನಿಮಗೆ ತಿಳಿಸಿಕೊಡದೆ ಇರಲಾರೆನು. ಅದು ನನ್ನ ರಬ್ ನನಗೆ ಕಲಿಸಿಕೊಟ್ಟಿರುವುದರಲ್ಲಿ ಸೇರಿದ್ದಾಗಿದೆ. ಅಲ್ಲಾಹುವಿನಲ್ಲಿ ವಿಶ್ವಾಸವಿಡದ ಮತ್ತು ಪರಲೋಕವನ್ನು ನಿಷೇಧಿಸುವವರಾಗಿರುವ ಜನರ ಮಾರ್ಗವನ್ನು ನಾನು ತ್ಯಜಿಸಿರುವೆನು.
(38) ನಾನು ನನ್ನ ಪೂರ್ವಿಕರಾದ ಇಬ್ರಾಹೀಮ್, ಇಸ್‍ಹಾಕ್ ಮತ್ತು ಯಅ್‌ಕೂಬ್‍ರವರ ಮಾರ್ಗವನ್ನು ಹಿಂಬಾಲಿಸಿರುವೆನು. ಅಲ್ಲಾಹುವಿನೊಂದಿಗೆ ಏನನ್ನೂ ಸಹಭಾಗಿತ್ವ ಮಾಡುವುದು ನಮಗೆ ಯುಕ್ತವಾದುದಲ್ಲ. ಅದು (ಸನ್ಮಾರ್ಗವು) ನಮ್ಮ ಮತ್ತು (ಇತರ) ಮನುಷ್ಯರ ಮೇಲಿರುವ ಅಲ್ಲಾಹುವಿನ ಅನುಗ್ರಹದಿಂದಾಗಿದೆ. ಆದರೆ ಜನರಲ್ಲಿ ಹೆಚ್ಚಿನವರೂ ಕೃತಜ್ಞತೆ ಸಲ್ಲಿಸುವುದಿಲ್ಲ.
(39) ಓ ನನ್ನ ಸೆರೆಮನೆಯ ಇಬ್ಬರು ಗೆಳೆಯರೇ! ವ್ಯತ್ಯಸ್ತರಾದ ಅನೇಕ ರಬ್‌ಗಳಿರುವುದು ಉತ್ತಮವೋ, ಅಥವಾ ಏಕೈಕನೂ ಸರ್ವಾಧಿಕಾರಿಯೂ ಆಗಿರುವ ಅಲ್ಲಾಹುವೋ?
(40) ನೀವು ಅಲ್ಲಾಹುವಿನ ಹೊರತು ಆರಾಧಿಸುತ್ತಿರುವುದು ನೀವು ಮತ್ತು ನಿಮ್ಮ ಪೂರ್ವಿಕರು ಹೆಸರಿಟ್ಟಿರುವ ಕೆಲವು ಹೆಸರುಗಳನ್ನೇ ವಿನಾ ಇನ್ನೇನನ್ನೂ ಅಲ್ಲ. ಅವುಗಳ ಬಗ್ಗೆ ಅಲ್ಲಾಹು ಯಾವುದೇ ಆಧಾರಪ್ರಮಾಣವನ್ನೂ ಅವತೀರ್ಣಗೊಳಿಸಿಲ್ಲ. ಆಜ್ಞಾಧಿಕಾರವಿರುವುದು ಅಲ್ಲಾಹುವಿಗೆ ಮಾತ್ರವಾಗಿದೆ. ನೀವು ಅವನ ಹೊರತು ಇತರ ಯಾರನ್ನೂ ಆರಾಧಿಸಬಾರದೆಂದು ಅವನು ಆಜ್ಞಾಪಿಸಿರುವನು. ನೇರವಾದ ಧರ್ಮವು ಅದಾಗಿದೆ. ಆದರೆ ಜನರಲ್ಲಿ ಹೆಚ್ಚಿನವರೂ ಅರಿಯುವುದಿಲ್ಲ.
(41) ಓ ನನ್ನ ಸೆರೆಮನೆಯ ಇಬ್ಬರು ಗೆಳೆಯರೇ! ನಿಮ್ಮಲ್ಲೊಬ್ಬನು ತನ್ನ ಯಜಮಾನನಿಗೆ ಮದ್ಯವನ್ನು ಕುಡಿಸುವನು.(414) ಆದರೆ ಇನ್ನೊಬ್ಬನು ಶಿಲುಬೆಗೇರಿಸಲಾಗುವನು. ತರುವಾಯ ಅವನ ತಲೆಯಿಂದ ಹಕ್ಕಿಗಳು ಕುಕ್ಕಿ ತಿನ್ನುವುವು. ಯಾವ ವಿಷಯದ ಬಗ್ಗೆ ನೀವಿಬ್ಬರು ವಿಧಿ ಕೇಳಿರುವಿರೋ ಆ ವಿಷಯವು ತೀರ್ಮಾನಿಸಲ್ಪಟ್ಟಿರುವುದು”.(415)
414. ಅವನು ಸೆರೆಮನೆಯಿಂದ ವಿಮುಕ್ತನಾಗಿ ಅರಸನಿಗೆ ಮದ್ಯವನ್ನು ಬಡಿಸುವ ಕೆಲಸದಲ್ಲಿ ನೇಮಿಸಲ್ಪಡುವನು ಎಂದರ್ಥ.415. ಅಲ್ಲಾಹು ತೀರ್ಮಾನಿಸಿದ ಸಂಗತಿಯನ್ನು ಅವನು ತಿಳಿಸಿಕೊಟ್ಟ ಪ್ರಕಾರ ಯೂಸುಫ್(ಅ) ರವರು ವಿವರಿಸಿಕೊಡುತ್ತಿದ್ದರು.
(42) ಅವರಿಬ್ಬರ ಪೈಕಿ ಪಾರಾಗುವವನೆಂದು ತಾನು ಭಾವಿಸಿದ ವ್ಯಕ್ತಿಯೊಂದಿಗೆ ಅವರು (ಯೂಸುಫ್) ಹೇಳಿದರು: “ನಿನ್ನ ಯಜಮಾನನ ಬಳಿ ನನ್ನ ಬಗ್ಗೆ ಪ್ರಸ್ತಾಪ ಮಾಡು”. ಆದರೆ ಅವನು ತನ್ನ ಯಜಮಾನನ ಬಳಿ ಆ ಪ್ರಸ್ತಾಪವೆತ್ತುವುದನ್ನು ಸೈತಾನನು ಅವನಿಗೆ ಮರೆಯುವಂತೆ ಮಾಡಿದನು. ಆದುದರಿಂದ ಕೆಲವು ವರ್ಷಗಳ ಕಾಲ ಅವರು (ಯೂಸುಫ್) ಸೆರೆಮನೆಯಲ್ಲೇ ಕಳೆದರು.
(43) (ಒಮ್ಮೆ) ಅರಸನು ಹೇಳಿದನು: “ಕೊಬ್ಬಿದ ಏಳು ಹಸುಗಳನ್ನು ಕೃಶಕಾಯದ ಏಳು ಹಸುಗಳು ತಿನ್ನುತ್ತಿರುವುದಾಗಿ ಮತ್ತು ಏಳು ಹಸಿರು ಪೈರುಗಳನ್ನು ಹಾಗೂ ಏಳು ಒಣಗಿದ ಪೈರುಗಳನ್ನು ನಾನು (ಕನಸಿನಲ್ಲಿ) ಕಂಡಿರುವೆನು. ಓ ಮುಖಂಡರೇ! ನೀವು ಸ್ವಪ್ನ ವ್ಯಾಖ್ಯಾನವನ್ನು ನೀಡುವವರಾಗಿದ್ದರೆ ನನ್ನ ಈ ಕನಸಿನ ವಿಷಯದಲ್ಲಿ ನೀವು ನನಗೆ ವಿಧಿಯನ್ನು ತಿಳಿಸಿಕೊಡಿರಿ”.
(44) ಅವರು ಹೇಳಿದರು: “ಹಲವು ತರಹದ ದುಸ್ವಪ್ನಗಳು! ನಾವು ಇಂತಹ ದುಃಸ್ವಪ್ನಗಳ ವ್ಯಾಖ್ಯಾನದ ಬಗ್ಗೆ ಅರಿವುಳ್ಳವರಲ್ಲ”.
(45) ಅವರಿಬ್ಬರ (ಯೂಸುಫ್‍ರೊಂದಿಗೆ ಸೆರೆಮನೆಯಲ್ಲಿದ್ದ ಇಬ್ಬರ) ಪೈಕಿ ಪಾರಾದವನು ಒಂದು ದೀರ್ಘ ಕಾಲಾವಧಿಯ ಬಳಿಕ (ಯೂಸುಫ್‍ರನ್ನು) ಸ್ಮರಿಸಿ ಹೇಳಿದನು: “ಅದರ ವ್ಯಾಖ್ಯಾನದ ಬಗ್ಗೆ ನಾನು ನಿಮಗೆ ತಿಳಿಸಿಕೊಡುವೆನು. ನೀವು (ಅದಕ್ಕೋಸ್ಕರ) ನನ್ನನ್ನು ಕಳುಹಿಸಿರಿ”.
(46) (ಅವನು ಯೂಸುಫ್‍ರ ಬಳಿಗೆ ಬಂದು ಹೇಳಿದನು:) “ಓ ಸತ್ಯಸಂಧರಾದ ಯೂಸುಫ್‍ರವರೇ! ಕೊಬ್ಬಿದ ಏಳು ಹಸುಗಳನ್ನು ಕೃಶಕಾಯದ ಏಳು ಹಸುಗಳು ತಿನ್ನುವುದರ ಬಗ್ಗೆ, ಮತ್ತು ಏಳು ಹಸಿರು ಪೈರುಗಳು ಹಾಗೂ ಏಳು ಒಣಗಿದ ಪೈರುಗಳ ಬಗ್ಗೆ ತಾವು ನಮಗೆ ವಿಧಿಯನ್ನು ತಿಳಿಸಿಕೊಡಿರಿ. ಜನರು ಅರಿತುಕೊಳ್ಳುವ ಸಲುವಾಗಿ ಆ ಮಾಹಿತಿಯೊಂದಿಗೆ ನಾನು ಅವರ ಬಳಿಗೆ ಮರಳುವೆನು”.
(47) ಯೂಸುಫ್ ಹೇಳಿದರು: “ನೀವು ಏಳು ವರ್ಷಗಳ ಕಾಲ ನಿರಂತರವಾಗಿ ಕೃಷಿ ಮಾಡುವಿರಿ. ತರುವಾಯ ನೀವು ಕಟಾವು ಮಾಡಿರುವುದರಲ್ಲಿ ನೀವು ತಿನ್ನುವುದಕ್ಕಾಗಿ ಸ್ವಲ್ಪ ಉಳಿಸಿ, ಉಳಿದವುಗಳನ್ನು ಅದರ ಪೈರಿನಲ್ಲೇ ಬಿಟ್ಟುಬಿಡಿರಿ.
(48) ತರುವಾಯ ಅದರ ಬಳಿಕ ಕಠಿಣವಾದ ಏಳು ವರ್ಷಗಳು ಬರುವುವು. ಅವು (ಆ ಏಳು ವರ್ಷಗಳು) ನೀವು ಪೂರ್ವಭಾವಿಯಾಗಿ ತೆಗೆದಿಟ್ಟಿರುವ ಎಲ್ಲವನ್ನೂ ತಿಂದು ಮುಗಿಸುವುವು. ನೀವು ಜೋಪಾನವಾಗಿಟ್ಟಿರುವ ಕೆಲವನ್ನು ಹೊರತು.
(49) ತರುವಾಯ ಅದರ ಬಳಿಕ ಒಂದು ವರ್ಷವು ಬರುವುದು. ಅದರಲ್ಲಿ ಜನರಿಗೆ ಸಮೃದ್ಧಿ ನೀಡಲಾಗುವುದು. ಅದರಲ್ಲಿ ಅವರು (ಮದ್ಯ ಮತ್ತಿತರ ವಸ್ತುಗಳನ್ನು) ಹಿಂಡಿ ತೆಗೆಯುವರು”.
(50) ಅರಸನು ಹೇಳಿದನು: “ನೀವು ಅವರನ್ನು (ಯೂಸುಫ್‍ರನ್ನು) ನನ್ನ ಬಳಿಗೆ ಕರೆತನ್ನಿರಿ”. ತನ್ನ ಬಳಿಗೆ ದೂತನು ಬಂದಾಗ ಅವರು ಹೇಳಿದರು: “ತಾವು ತಮ್ಮ ಯಜಮಾನನ ಬಳಿಗೆ ಮರಳಿ ತಮ್ಮ ಕೈಗಳನ್ನು ಕತ್ತರಿಸಿದ ಆ ಸ್ತ್ರೀಯರ ನಿಲುವೇನೆಂದು ಅವರೊಂದಿಗೆ ಕೇಳಿರಿ. ಖಂಡಿತವಾಗಿಯೂ ನನ್ನ ರಬ್ ಅವರ ಸಂಚಿನ ಬಗ್ಗೆ ಚೆನ್ನಾಗಿ ಅರಿವುಳ್ಳವನಾಗಿರುವನು”.
(51) ಅರಸನು (ಆ ಸ್ತ್ರೀಯರನ್ನು ಕರೆಸಿ) ಕೇಳಿದನು: “ನೀವು ಯೂಸುಫ್‍ರನ್ನು ವಶೀಕರಿಸಲು ಯತ್ನಿಸಿದಾಗ ನಿಮ್ಮ ಸ್ಥಿತಿ ಏನಾಗಿತ್ತು?” ಅವರು ಹೇಳಿದರು: “ಅಲ್ಲಾಹು ಪರಮಪಾವನನು! ಅವರ ಬಗ್ಗೆ ಕೆಡುಕಾಗಿರುವ ಏನನ್ನೂ ನಾವು ಅರಿತಿಲ್ಲ”. ಅರಸನ ಪತ್ನಿ ಹೇಳಿದಳು: “ಈಗ ಸತ್ಯವು ಬಹಿರಂಗವಾಗಿದೆ. ಅವರನ್ನು ವಶೀಕರಿಸಲು ಯತ್ನಿಸಿದವಳು ನಾನೇ ಆಗಿದ್ದೆನು. ಖಂಡಿತವಾಗಿಯೂ ಅವರು ಸತ್ಯಸಂಧರಲ್ಲಿ ಸೇರಿದವರಾಗಿರುವರು.
(52) ಅದು (ನಾನು ಹೀಗೆ ಹೇಳುತ್ತಿರುವುದು) ಯಾಕೆಂದರೆ (ಅವರ) ಅನುಪಸ್ಥಿತಿಯಲ್ಲಿ ನಾನು ಅವರನ್ನು ವಂಚಿಸಿಲ್ಲವೆಂದು ಅವರು ಅರಿಯುವ ಸಲುವಾಗಿಯೂ(416) ಮತ್ತು ವಂಚಕರ ತಂತ್ರವನ್ನು ಅಲ್ಲಾಹು ಖಂಡಿತವಾಗಿಯೂ ಗುರಿಮುಟ್ಟಿಸಲಾರನು ಎಂಬುದರಿಂದಲೂ ಆಗಿದೆ.
416. ಯೂಸುಫ್(ಅ) ರನ್ನು ಸೆರೆಮನೆಗೆ ತಳ್ಳಿದ ಬಳಿಕ ತಾನು ಅವರ ಅನುಪಸ್ಥಿತಿಯಲ್ಲಿ ಅವರ ಬಗ್ಗೆ ಯಾವುದೇ ಕೆಟ್ಟ ಆರೋಪವನ್ನೂ ಮಾಡಿಲ್ಲವೆಂದು ರಾಣಿ ಶ್ರುತಪಡಿಸುತ್ತಾಳೆ. ಆಕೆಗೆ ತಪ್ಪು ಮನವರಿಕೆಯಾಗಿರುವುದರಿಂದಾಗಿ ಆಕೆ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿದ್ದಳು. ‘ಲಮ್ ಅಖುನ್‍ಹು ಬಿಲ್‍ಗೈಬ್’ ಎಂಬುದನ್ನು ‘ಅರಸನ ಅನುಪಸ್ಥಿತಿಯಲ್ಲಿ ನಾನು ಅವರನ್ನು ವಂಚಿಸಿಲ್ಲ’ ಅಂದರೆ ಯೂಸುಫ್(ಅ) ರನ್ನು ವಶೀಕರಿಸಲು ಯತ್ನಿಸಿದ್ದರೂ ಸಹ ಅವರೊಂದಿಗೆ ಅನೈತಿಕ ಕ್ರಿಯೆಯಲ್ಲಿ ಏರ್ಪಟ್ಟಿಲ್ಲ ಎಂದು ಕೆಲವು ವ್ಯಾಖ್ಯಾನಕಾರರು ಅರ್ಥ ನೀಡಿರುವರು.
(53) ನಾನು ನನ್ನ ಮನಸ್ಸನ್ನು ಪಾಪದಿಂದ ವಿಮುಕ್ತಗೊಳಿಸಲಾರೆನು. ಖಂಡಿತವಾಗಿಯೂ ಮನಸ್ಸು ದುಷ್ಕರ್ಮವನ್ನು ಪ್ರೇರೇಪಿಸುತ್ತಲೇ ಇರುವಂತದ್ದಾಗಿದೆ. ನನ್ನ ರಬ್‌ನ ಕರುಣೆಗೆ ಪಾತ್ರವಾದ ಮನಸ್ಸಿನ ಹೊರತು. ಖಂಡಿತವಾಗಿಯೂ ನನ್ನ ರಬ್ ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು”.
(54) ಅರಸನು ಹೇಳಿದನು: “ನೀವು ಅವರನ್ನು ನನ್ನ ಬಳಿಗೆ ಕರೆತನ್ನಿರಿ. ನಾನು ಅವರನ್ನು ನನ್ನ ಆಪ್ತವ್ಯಕ್ತಿಯಾಗಿ ಮಾಡಿಕೊಳ್ಳುವೆನು”. ತರುವಾಯ ಅವರೊಂದಿಗೆ ಮಾತನಾಡಿದಾಗ ಅರಸನು ಹೇಳಿದನು: “ಖಂಡಿತವಾಗಿಯೂ ತಾವು ಇಂದು ನಮ್ಮ ಬಳಿ ಪದವಿಯುಳ್ಳವರೂ, ಪ್ರಾಮಾಣಿಕರೂ ಆಗಿದ್ದೀರಿ”.
(55) ಅವರು (ಯೂಸುಫ್) ಹೇಳಿದರು: “ತಾವು ನನಗೆ ಭೂಮಿಯ ಖಜಾನೆಗಳ ಅಧಿಕಾರವನ್ನು ನೀಡಿರಿ. ಖಂಡಿತವಾಗಿಯೂ ನಾನು ಸಂಪೂರ್ಣ ಜ್ಞಾನವಿರುವ ಒಬ್ಬ ಕಾವಲುಗಾರನಾಗಿರುವೆನು”.(417)
417. ಸುಸ್ಥಿತಿಯ ಕಾಲದಲ್ಲಿ ಬೆಳೆದ ಕೃಷಿಯಲ್ಲಿ ಅತ್ಯಾವಶ್ಯಕವಾಗಿರುವುದನ್ನು ಬಳಸಿ ಮಿಕ್ಕಿದ್ದನ್ನು ಸಂಗ್ರಹಿಸಿಟ್ಟು ತರುವಾಯ ಅದನ್ನು ಬಳಸುವ ಮೂಲಕ ಬರಗಾಲವನ್ನು ಮಣಿಸಲು ಕೆಲವು ಯೋಜನೆಗಳನ್ನು ತಕ್ಷಣ ರೂಪಿಸಬೇಕಾದ ಅಗತ್ಯವಿತ್ತು. ಅದರ ಹೊಣೆಯನ್ನು ತನಗೆ ವಹಿಸಿಕೊಡುವಂತೆ ಯೂಸುಫ್(ಅ) ರವರು ಅರಸನೊಂದಿಗೆ ವಿನಂತಿಸಿದರು.
(56) ಹೀಗೆ ನಾವು ಯೂಸುಫ್‍ರಿಗೆ ಭೂಮಿಯಲ್ಲಿ ಅವರು ಇಚ್ಛಿಸುವ ಕಡೆ ವಾಸಿಸುವ ರೀತಿಯಲ್ಲಿ ಅಧಿಕಾರವನ್ನು ನೀಡಿದೆವು. ನಾವಿಚ್ಛಿಸುವವರಿಗೆ ನಾವು ನಮ್ಮ ಕಾರುಣ್ಯವನ್ನು ನೀಡುವೆವು. ಸತ್ಕರ್ಮವೆಸಗುವವರ ಪ್ರತಿಫಲವನ್ನು ನಾವು ವ್ಯರ್ಥಗೊಳಿಸಲಾರೆವು.
(57) ವಿಶ್ವಾಸವಿಟ್ಟವರಿಗೆ ಮತ್ತು ಭಯಭಕ್ತಿ ಪಾಲಿಸುವವರಿಗೆ ಪರಲೋಕದ ಪ್ರತಿಫಲವು ಅತ್ಯುತ್ತಮವಾಗಿದೆ.
(58) ಯೂಸುಫ್‍ರ ಸಹೋದರರು ಬಂದು(418) ಅವರ ಬಳಿಗೆ ಪ್ರವೇಶಿಸಿದರು. ಯೂಸುಫ್ ಅವರನ್ನು ಗುರುತಿಸಿದರು. ಆದರೆ ಅವರು ಯೂಸುಫ್‍ರನ್ನು ಗುರುತಿಸಲಿಲ್ಲ.
418. ಕನ್‌ಆನ್ ಪ್ರದೇಶದಲ್ಲಿ ಬರಗಾಲವು ತೀವ್ರವಾದಾಗ ಈಜಿಪ್ಟಿನಲ್ಲಿ ಆಹಾರಸಾಮಗ್ರಿಗಳು ದೊರೆಯುತ್ತವೆ ಎಂಬ ಮಾಹಿತಿ ಪಡೆದು ಅವರ ಸಹೋದರರು ಬಂದಿದ್ದರು. ಧಾನ್ಯದ ಬೆಲೆಯಾಗಿ ನೀಡಬೇಕಾದ ಸಾಮಗ್ರಿಗಳನ್ನೂ ಅವರು ತಂದಿದ್ದರು.
(59) ಅವರಿಗೆ ಬೇಕಾದ ಸಾಮಗ್ರಿಗಳನ್ನು ಅವರಿಗೆ ಸಿದ್ಧಪಡಿಸಿಕೊಟ್ಟಾಗ ಅವರು (ಯೂಸುಫ್) ಹೇಳಿದರು: “ನಿಮ್ಮ ತಂದೆಗೆ ಸೇರಿರುವ ನಿಮ್ಮ ಸಹೋದರನನ್ನು(419) ನನ್ನ ಬಳಿಗೆ ಕರೆತನ್ನಿರಿ. ನಾನು ಅಳತೆಯನ್ನು ಪೂರ್ಣವಾಗಿ ನೀಡುವವನೂ, ಅತ್ಯುತ್ತಮವಾದ ಆತಿಥ್ಯವನ್ನು ನೀಡುವವನೂ ಆಗಿರುವೆನೆಂದು ನೀವು ಕಾಣುತ್ತಿಲ್ಲವೇ?
419. ಪ್ರವಾದಿ ಯೂಸುಫ್(ಅ) ಮತ್ತು ಕಿರಿಯ ಸಹೋದರ ಬಿನ್ಯಾಮಿನ್ ಒಂದೇ ತಾಯಿಯ ಮಕ್ಕಳಾಗಿದ್ದರು. ಇತರ ಸಹೋದರರು ಮಲತಾಯಿಯ ಮಕ್ಕಳಾಗಿದ್ದರು.
(60) ನೀವು ಅವನನ್ನು ನನ್ನ ಬಳಿಗೆ ಕರೆತರದಿದ್ದರೆ ಇನ್ನು ಮುಂದೆ ನಿಮಗೆ ನನ್ನ ಕಡೆಯಿಂದ ಅಳೆದು ನೀಡಲಾಗುವುದಿಲ್ಲ ಮತ್ತು ನೀವು ನನ್ನ ಬಳಿಗೆ ಬರಬೇಕಾಗಿಯೂ ಇಲ್ಲ”.
(61) ಅವರು ಹೇಳಿದರು: “ಅವನ ವಿಷಯದಲ್ಲಿ ನಾವು ಅವನ ತಂದೆಯ (ಮನವೊಲಿಸಲು) ಪ್ರಯತ್ನಿಸುವೆವು. ಖಂಡಿತವಾಗಿಯೂ ನಾವದನ್ನು ಮಾಡುವೆವು”.
(62) ಅವರು (ಯೂಸುಫ್) ತಮ್ಮ ಆಳುಗಳೊಂದಿಗೆ ಹೇಳಿದರು: “ಅವರು ತಂದಿರುವ ಸಾಮಗ್ರಿಗಳನ್ನು ನೀವು ಅವರ ಗಂಟುಮೂಟೆಗಳಲ್ಲಿಯೇ ಇಟ್ಟುಬಿಡಿರಿ. ಅವರು ತಮ್ಮ ಕುಟುಂಬದ ಬಳಿಗೆ ಮರಳಿದಾಗ ಅದನ್ನು ಅರಿತುಕೊಳ್ಳುವರು. ಒಂದು ವೇಳೆ ಅವರು ಮರಳಿ ಬರಲೂಬಹುದು”.
(63) ತರುವಾಯ ಅವರು ತಮ್ಮ ತಂದೆಯ ಬಳಿಗೆ ಮರಳಿದಾಗ ಅವರು ಹೇಳಿದರು: “ಓ ನಮ್ಮ ತಂದೆಯವರೇ! ನಮಗೆ ಅಳೆದುಕೊಡುವುದನ್ನು ತಡೆಹಿಡಿಯಲಾಗಿದೆ. ಆದುದರಿಂದ ತಾವು ನಮ್ಮ ಜೊತೆಗೆ ನಮ್ಮ ಸಹೋದರನನ್ನು ಕಳುಹಿಸಿಕೊಡಿರಿ. ಆಗ ನಮಗೆ ಅಳೆದುಕೊಡಲಾಗುವುದು. ಖಂಡಿತವಾಗಿಯೂ ನಾವು ಅವನನ್ನು ಕಾಪಾಡಿಕೊಳ್ಳುವೆವು”.
(64) ಅವರು (ತಂದೆ) ಹೇಳಿದರು: “ಮುಂಚೆ ಅವನ ಸಹೋದರನ ವಿಷಯದಲ್ಲಿ ನಾನು ನಿಮ್ಮನ್ನು ನಂಬಿದಂತೆಯೇ ವಿನಾ ಇವನ ವಿಷಯದಲ್ಲಿ ನನಗೆ ನಿಮ್ಮನ್ನು ನಂಬಲಾದೀತೇ? ಆದರೆ ಉತ್ತಮವಾಗಿ ಕಾಪಾಡುವವನು ಅಲ್ಲಾಹುವಾಗಿರುವನು. ಅವನು ಕರುಣೆಯುಳ್ಳವರಲ್ಲೇ ಅತ್ಯಧಿಕ ಕರುಣೆಯುಳ್ಳವನಾಗಿರುವನು”.
(65) ಅವರು ತಮ್ಮ ಗಂಟುಮೂಟೆಗಳನ್ನು ಬಿಚ್ಚಿದಾಗ ತಮ್ಮ ಸರಕುಗಳನ್ನು ತಮಗೇ ಮರಳಿಸಲಾಗಿರುವುದಾಗಿ ಕಂಡರು. ಅವರು ಹೇಳಿದರು: “ಓ ನಮ್ಮ ತಂದೆಯವರೇ! ನಮಗೆ ಇನ್ನೇನು ಬೇಕು? ಇಗೋ ನಮ್ಮ ಸರಕುಗಳನ್ನು ನಮಗೇ ಮರಳಿಸಲಾಗಿದೆ. (ಆದರೂ) ನಾವು ನಮ್ಮ ಕುಟುಂಬಕ್ಕೆ ಆಹಾರವನ್ನು ತರುವೆವು ಮತ್ತು ನಮ್ಮ ಸಹೋದರನನ್ನು ಕಾಪಾಡಿಕೊಳ್ಳುವೆವು. ಒಂದು ಒಂಟೆಯು ಹೊರುವ ತೂಕವು ನಮಗೆ ಹೆಚ್ಚುವರಿಯಾಗಿ ಸಿಗುವುದು. ಅದೊಂದು ಕಡಿಮೆ ಪ್ರಮಾಣದ ಅಳತೆಯಾಗಿದೆ”.(420)
420. ಯಸೀರ್ ಎಂಬ ಪದಕ್ಕೆ ಸುಲಭ, ಕಡಿಮೆ ಎಂಬಿತ್ಯಾದಿ ಅರ್ಥಗಳಿವೆ. ಈಜಿಪ್ಟಿನ ಅರಸನ ಮಟ್ಟಿಗೆ ಒಂದು ಒಂಟೆ ಹೊರುವಷ್ಟು ತೂಕವು ಒಂದು ಚಿಕ್ಕ ಪ್ರಮಾಣವಾಗಿದೆ. ಯೂಸುಫ್(ಅ) ರ ಸಹೋದರರ ಮಟ್ಟಿಗೆ ಅದು ಸುಲಭವಾಗಿ ಸಿಗುವಂತದ್ದೂ ಆಗಿದೆ.
(66) ಅವರು (ತಂದೆ) ಹೇಳಿದರು: “ನೀವು ಅವನನ್ನು ಖಂಡಿತವಾಗಿಯೂ ನನ್ನ ಬಳಿಗೆ ಕರೆತರುವಿರಿ ಎಂದು ಅಲ್ಲಾಹುವಿನ ಹೆಸರಲ್ಲಿ ನೀವು ಖಾತ್ರಿ ನೀಡುವವರೆಗೆ ಅವನನ್ನು ನಿಮ್ಮ ಜೊತೆಗೆ ನಾನೆಂದೂ ಕಳುಹಿಸಿ ಕೊಡಲಾರೆನು. ಆದರೆ ನೀವು (ಅಪಾಯಗಳಿಂದ) ಆವರಿಸಲ್ಪಡುವ ಹೊರತು”.(421) ಕೊನೆಗೆ ಅವರು ಅವರಿಗೆ ಖಾತ್ರಿ ನೀಡಿದಾಗ ಅವರು (ತಂದೆ) ಹೇಳಿದರು: “ನಾವು ಹೇಳುತ್ತಿರುವುದರ ಮೇಲ್ನೋಟ ವಹಿಸುವವನು ಅಲ್ಲಾಹುವಾಗಿರುವನು”.
421. ಅವರು ಮಹಾ ಅಪಾಯಕ್ಕೊಳಗಾಗಿ ಸ್ವತಃ ತಮ್ಮನ್ನು ಅಥವಾ ಕಿರಿಯ ಸಹೋದರನನ್ನು ಕಾಪಾಡಲು ಸಾಧ್ಯವಾಗದೆ ಹೋದರೆ ಯಾರನ್ನೂ ದೂಷಿಸಿ ಪ್ರಯೋಜನವಿರಲಾರದು.
(67) ಅವರು (ತಂದೆ) ಹೇಳಿದರು: “ಓ ನನ್ನ ಮಕ್ಕಳೇ! ನೀವು ಒಂದೇ ಬಾಗಿಲಿನ ಮೂಲಕ ಪ್ರವೇಶಿಸದೆ ಬೇರೆ ಬೇರೆ ಬಾಗಿಲುಗಳ ಮೂಲಕ ಪ್ರವೇಶಿಸಿರಿ.(422) ಅಲ್ಲಾಹು ವಿಧಿಸಿದ ಏನನ್ನೂ ನಿಮ್ಮಿಂದ ದೂರೀಕರಿಸಲು ನನ್ನಿಂದಾಗದು. ವಿಧಿ ನೀಡುವ ಅಧಿಕಾರವು ಅಲ್ಲಾಹುವಿಗೆ ಮಾತ್ರವಾಗಿದೆ. ನಾನು ಅವನ ಮೇಲೆ ಭರವಸೆಯಿಟ್ಟಿರುವೆನು. ಭರವಸೆಯಿಡುವವರು ಅವನ ಮೇಲೆಯೇ ಭರವಸೆಯಿಡಲಿ”.
422. ಈಜಿಪ್ಟನ್ನು ಪ್ರವೇಶಿಸುವಾಗ ಅಥವಾ ರಾಜಧಾನಿಯನ್ನು ಪ್ರವೇಶಿಸುವಾಗ.
(68) ಅವರ ತಂದೆಯು ಅವರೊಂದಿಗೆ ಆದೇಶಿಸಿದ ರೀತಿಯಲ್ಲೇ ಅವರು ಪ್ರವೇಶಿಸಿದಾಗ ಅಲ್ಲಾಹು ವಿಧಿಸಿದ ಏನನ್ನೂ ತಡೆಯಲು ಅವರಿಂದ ಸಾಧ್ಯವಾಗಲಿಲ್ಲ. ಯಅ್‌ಕೂಬ್ ತಮ್ಮ ಮನಸ್ಸಿನಲ್ಲಿದ್ದ ಆಸೆಯೊಂದನ್ನು ಈಡೇರಿಸಿದರು ಎಂಬುದರ ಹೊರತು.(423) ನಾವು ಅವರಿಗೆ ಕಲಿಸಿಕೊಟ್ಟಿರುವ ನಿಮಿತ್ತ ಖಂಡಿತವಾಗಿಯೂ ಅವರು ಅರಿವುಳ್ಳವರೇ ಆಗಿರುವರು. ಆದರೆ ಜನರಲ್ಲಿ ಹೆಚ್ಚಿನವರೂ ಅರಿತುಕೊಳ್ಳುವುದಿಲ್ಲ.
423. ಮನುಷ್ಯನು ಎಷ್ಟೇ ಮುಂಜಾಗ್ರತೆ ವಹಿಸಿದರೂ ಅಲ್ಲಾಹು ವಿಧಿಸಿದ್ದೆಲ್ಲವೂ ಸಂಭವಿಸಿಯೇ ತೀರುವುದು. ಆದರೂ ತನಗೆ ಸಾಧ್ಯವಿರುವ ಎಲ್ಲ ಮುಂಜಾಗ್ರತೆಗಳನ್ನು ಮನುಷ್ಯನು ವಹಿಸಬೇಕಾಗಿದೆ. ತನ್ನ ಅಜಾಗರೂಕತೆಯ ನಿಮಿತ್ತ ಸಂಭವಿಸುವ ನಷ್ಟಗಳ ಹೊಣೆಯನ್ನು ಅವನೇ ವಹಿಸಬೇಕಾಗಿದೆ. ಮಕ್ಕಳನ್ನು ಈಜಿಪ್ಟಿಗೆ ಕಳಿಸುವಾಗ ಯಅ್‌ಕೂಬ್‍ರವರ ಮನಸ್ಸಿನಲ್ಲಿ ಯಾವುದೋ ಒಂದು ಭಯವಿತ್ತು. ಆದುದರಿಂದ ಅವರು ಮಕ್ಕಳೊಂದಿಗೆ ಬೇರೆ ಬೇರೆ ಬಾಗಿಲುಗಳ ಮೂಲಕ ಪ್ರವೇಶಿಸುವಂತೆ ಆಜ್ಞಾಪಿಸಿದರು. ಅವರ ಭಯ ಯಾವುದರ ಕುರಿತಾಗಿತ್ತೆಂದು ಕುರ್‌ಆನ್‍ನಿಂದಾಗಲಿ ಹದೀಸಿನಿಂದಾಗಲಿ ಸ್ಪಷ್ಟವಲ್ಲ.
(69) ಅವರು ಯೂಸುಫ್‍ರ ಬಳಿಗೆ ಪ್ರವೇಶಿಸಿದಾಗ ಅವರು ತಮ್ಮ ಸಹೋದರನನ್ನು(424) ತಮ್ಮೆಡೆಗೆ ಸೆಳೆದುಕೊಂಡರು. ತರುವಾಯ ಅವರು ಹೇಳಿದರು: “ಖಂಡಿತವಾಗಿಯೂ ನಾನು ನಿನ್ನ ಸಹೋದರನಾಗಿರುವೆನು. ಆದುದರಿಂದ ಅವರು (ಹಿರಿಯ ಸಹೋದರರು) ಮಾಡುತ್ತಿರುವುದರ ಬಗ್ಗೆ ನೀನು ದುಃಖಿಸದಿರು”.
424. ಯೂಸುಫ್(ಅ) ರವರು ತಮ್ಮ ಸಹೋದರನಾದ ಬಿನ್ಯಾಮಿನ್‍ರನ್ನು ತಮ್ಮೆಡೆಗೆ ಸೆಳೆದು ತಾನಾರೆಂದು ತಿಳಿಸಿಕೊಟ್ಟರು.
(70) ತರುವಾಯ ಅವರ ಪಾಲಿನ ಸಾಮಗ್ರಿಗಳನ್ನು ಅವರಿಗೆ ಸಿದ್ಧಪಡಿಸಿಕೊಡುವಾಗ ಅವರು (ಯೂಸುಫ್) ಪಾನ ಪಾತ್ರೆಯನ್ನು(425) ತಮ್ಮ ಸಹೋದರನ ಗಂಟುಮೂಟೆಯಲ್ಲಿಟ್ಟರು. ತರುವಾಯ ಉದ್ಘೋಷಕನು ಘೋಷಿಸಿದನು: “ಓ ಯಾತ್ರಿಕ ತಂಡದವರೇ! ಖಂಡಿತವಾಗಿಯೂ ನೀವು ಕಳ್ಳರಾಗಿದ್ದೀರಿ”.
425. ಧಾನ್ಯಗಳನ್ನು ಅಳೆಯಲು ಅವರು ಬಳಸುತ್ತಿದ್ದುದು ನಿರ್ದಿಷ್ಟ ಪ್ರಮಾಣವನ್ನು ಹೊಂದಿರುವ ಒಂದು ಪಾನಪಾತ್ರೆಯನ್ನಾಗಿತ್ತು.
(71) ಅವರು (ಯಾತ್ರಿಕ ತಂಡದವರು) ಅವರೆಡೆಗೆ ತಿರುಗಿ ಕೇಳಿದರು: “ನೀವು ಏನನ್ನು ಕಳಕೊಂಡಿದ್ದೀರಿ?”
(72) ಅವರು ಹೇಳಿದರು: “ನಾವು ಅರಸನ ಅಳತೆ ಪಾತ್ರೆಯನ್ನು ಕಳೆದುಕೊಂಡಿರುವೆವು. ಅದನ್ನು ತಂದು ಕೊಡುವವನಿಗೆ ಒಂದು ಒಂಟೆಯು ಹೊರುವಷ್ಟು ತೂಕ(ದ ಧಾನ್ಯ)ವನ್ನು ನೀಡಲಾಗುವುದು. ಅದರ ಹೊಣೆಯನ್ನು ನಾನು ವಹಿಸಿಕೊಂಡಿರುವೆನು”.
(73) ಅವರು ಹೇಳಿದರು: “ಅಲ್ಲಾಹುವಿನ ಮೇಲಾಣೆ! ನಾವು ಭೂಮಿಯಲ್ಲಿ ಕ್ಷೋಭೆಯನ್ನುಂಟುಮಾಡಲು ಬಂದವರಲ್ಲವೆಂದು ನೀವು ಅರಿತಿದ್ದೀರಿ. ನಾವು ಕಳ್ಳರೂ ಅಲ್ಲ”.
(74) ಅವರು ಕೇಳಿದರು: “ನೀವು ಸುಳ್ಳು ನುಡಿಯುವವರಾಗಿದ್ದರೆ ಅದಕ್ಕೆ ಯಾವ ಶಿಕ್ಷೆಯನ್ನು ನೀಡಬೇಕು?”
(75) ಅವರು ಹೇಳಿದರು: “ಅದಕ್ಕಿರುವ ಶಿಕ್ಷೆಯೇನೆಂದರೆ ಯಾರ ಗಂಟುಮೂಟೆಯಲ್ಲಿ ಅದು ಪತ್ತೆಯಾಗುವುದೋ ಅವನನ್ನು ಹಿಡಿದಿಡುವುದು ಅದಕ್ಕಿರುವ ಶಿಕ್ಷೆಯಾಗಿದೆ. ಅಕ್ರಮಿಗಳಿಗೆ ನಾವು ಹೀಗೆ ಶಿಕ್ಷೆಯನ್ನು ನೀಡುವೆವು”.
(76) ತರುವಾಯ ಅವರು ತಮ್ಮ ಸಹೋದರನ ಗಂಟುಮೂಟೆಗಳಿಗಿಂತ ಮುಂಚಿತವಾಗಿ ಅವರ ಗಂಟು ಮೂಟೆಗಳಿಂದಲೇ ತಪಾಸಣೆಯನ್ನು ಆರಂಭಿಸಿದರು. ತರುವಾಯ ತಮ್ಮ ಸಹೋದರನ ಮೂಟೆಯಿಂದ ಅವರು ಅದನ್ನು ಹೊರತೆಗೆದರು. ಹೀಗೆ ನಾವು ಯೂಸುಫ್‍ರಿಗಾಗಿ ತಂತ್ರ ಹೂಡಿದೆವು. ಅಲ್ಲಾಹು ಇಚ್ಛಿಸುವ ಹೊರತು ಅರಸನ ಕಾನೂನಿನ ಪ್ರಕಾರ ತಮ್ಮ ಸಹೋದರನನ್ನು ತಮ್ಮ ಬಳಿ ಹಿಡಿದಿಟ್ಟುಕೊಳ್ಳಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ನಾವಿಚ್ಛಿಸುವವರನ್ನು ನಾವು ಹಲವು ಪದವಿಗಳಿಗೇರಿಸುವೆವು. ಜ್ಞಾನವುಳ್ಳವರೆಲ್ಲರ ಮೇಲೊಬ್ಬ ಪರಮ ಜ್ಞಾನಿಯಿರುವನು.
(77) ಅವರು (ಸಹೋದರರು) ಹೇಳಿದರು: “ಈತ ಕಳ್ಳತನ ಮಾಡಿದ್ದರೆ (ಅದರಲ್ಲಿ ಅಚ್ಚರಿಯಿಲ್ಲ), ಮುಂಚೆ ಈತನ ಸಹೋದರನೂ ಕಳ್ಳತನ ಮಾಡಿರುವನು”.(426) ಆದರೆ ಯೂಸುಫ್ ಅದನ್ನು ತಮ್ಮ ಮನಸ್ಸಿನಲ್ಲಿ ಗುಟ್ಟಾಗಿಟ್ಟರು. ಅವರು ಅದನ್ನು (ಅದರ ಪ್ರತಿಕ್ರಿಯೆಯನ್ನು) ಅವರಿಗೆ ಬಹಿರಂಗಪಡಿಸಲಿಲ್ಲ. ಅವರು (ಸ್ವಗತವಾಗಿ) ಹೇಳಿದರು: “ನೀವು ನಿಕೃಷ್ಟ ನಿಲುವನ್ನು ಹೊಂದಿದವರಾಗಿದ್ದೀರಿ. ನೀವು ಹೆಣೆಯುತ್ತಿರುವುದರ ಬಗ್ಗೆ ಅಲ್ಲಾಹು ಚೆನ್ನಾಗಿ ಅರಿತಿರುವನು”.
426. ಮುಂಚೆ ಯೂಸುಫ್(ಅ) ರವರು ಕಳವು ಮಾಡಿದ್ದರೆಂದು ಅವರು ಆರೋಪಿಸಿದರು. ಯೂಸುಫ್(ಅ) ರವರು ಕಳ್ಳತನ ಮಾಡಿದರೆಂದು ಅವರು ಹೇಳುವ ಘಟನೆಯು ಯಾವುದೆಂಬುದರ ಬಗ್ಗೆ ವ್ಯಾಖ್ಯಾನಕಾರರಲ್ಲಿ ಏಕಾಭಿಪ್ರಾಯವಿಲ್ಲ. ಯಾರೂ ಕಾಣದಂತೆ ಒಂದು ವಿಗ್ರಹವನ್ನು ಧ್ವಂಸಗೊಳಿಸಿದ್ದರ ಬಗ್ಗೆಯಾಗಿದೆಯೆಂದು ಕೆಲವರು ಹೇಳಿರುವರು. ಮನೆಯವರಿಗೆ ಗೊತ್ತಾಗದೆ ಏನೋ ಒಂದು ವಸ್ತುವನ್ನು ದಾನ ಮಾಡಿದ್ದರ ಬಗ್ಗೆಯಾಗಿದೆಯೆಂದು ಇತರ ಕೆಲವರು ಹೇಳಿರುವರು.
(78) ಅವರು ಹೇಳಿದರು: “ಓ ದೊರೆಯೇ! ಈತನಿಗೆ ವಯೋವೃದ್ಧರಾದ ಒಬ್ಬ ತಂದೆಯಿರುವರು. ಆದುದರಿಂದ ಈತನ ಸ್ಥಾನದಲ್ಲಿ ನಮ್ಮಲ್ಲೊಬ್ಬನನ್ನು ಹಿಡಿದಿಟ್ಟುಕೊಳ್ಳಿರಿ. ಖಂಡಿತವಾಗಿಯೂ ತಮ್ಮನ್ನು ನಾವು ಸಾತ್ವಿಕರಲ್ಲಿ ಸೇರಿದವರಾಗಿ ಕಾಣುತ್ತಿರುವೆವು”.
(79) ಅವರು (ಯೂಸುಫ್) ಹೇಳಿದರು: “ಅಲ್ಲಾಹು ಕಾಪಾಡಲಿ! ನಾವು ನಮ್ಮ ವಸ್ತುವನ್ನು ಯಾರ ಬಳಿ ಪತ್ತೆ ಮಾಡಿರುವೆವೋ ಅವನನ್ನಲ್ಲದೆ ಬೇರೊಬ್ಬನನ್ನು ನಾವು ಹಿಡಿದಿಟ್ಟುಕೊಳ್ಳುವುದೇ? ಹಾಗೆ ಮಾಡಿದರೆ ಖಂಡಿತವಾಗಿಯೂ ನಾವು ಅಕ್ರಮಿಗಳಾಗುವೆವು”.
(80) ಕೊನೆಗೆ ಅವರು ಅವನ (ಸಹೋದರನ) ಬಗ್ಗೆ ನಿರಾಶರಾದಾಗ ಏಕಾಂತ ಸ್ಥಳಕ್ಕೆ ತೆರಳಿ ಸಮಾಲೋಚನೆ ಮಾಡಿದರು. ಅವರ ಪೈಕಿ ಹಿರಿಯವನು ಹೇಳಿದನು: “ನಿಮ್ಮ ತಂದೆ ಅಲ್ಲಾಹುವಿನ ಹೆಸರಿನಲ್ಲಿ ನಿಮ್ಮಿಂದ ಖಾತ್ರಿ ಪಡೆದಿರುವರು ಮತ್ತು ಯೂಸುಫ್‍ರ ವಿಷಯದಲ್ಲಿ ಹಿಂದೆ ನೀವು ಲೋಪವೆಸಗಿದ್ದೀರಿ ಎಂದು ನೀವು ಅರಿತಿಲ್ಲವೇ? ಆದುದರಿಂದ ನನ್ನ ತಂದೆ ನನಗೆ ಅನುಮತಿ ನೀಡುವ ತನಕ ಅಥವಾ ಅಲ್ಲಾಹು ನನಗೆ ವಿಧಿತೀರ್ಪು ನೀಡುವ ತನಕ ನಾನೆಂದೂ ಈ ದೇಶವನ್ನು ಬಿಟ್ಟು ಕದಲಲಾರೆನು. ವಿಧಿ ನೀಡುವವರಲ್ಲಿ ಅವನು ಅತ್ಯುತ್ತಮನಾಗಿರುವನು.
(81) ನೀವು ನಿಮ್ಮ ತಂದೆಯ ಬಳಿಗೆ ಮರಳಿ ಹೇಳಿರಿ: “ಓ ನಮ್ಮ ತಂದೆಯವರೇ! ಖಂಡಿತವಾಗಿಯೂ ನಿಮ್ಮ ಮಗನು ಕಳ್ಳತನ ಮಾಡಿರುವನು. ನಾವು ಅರಿತಿರುವ ಆಧಾರದಲ್ಲೇ ವಿನಾ ನಾವು ಸಾಕ್ಷ್ಯವಹಿಸಿಲ್ಲ.(427) ಅಗೋಚರವಾಗಿರುವುದನ್ನು ಅರಿಯಲು ನಮ್ಮಿಂದ ಸಾಧ್ಯವಿಲ್ಲ.(428)
427. ಸಹೋದರನ ಗಂಟುಮೂಟೆಯಿಂದ ‘ಕಳವುಗೈದ ವಸ್ತುವನ್ನು’ ಪತ್ತೆ ಮಾಡಿರುವುದಕ್ಕೆ ನಾವು ದೃಕ್ಸಾಕ್ಷಿಗಳಾಗಿದ್ದೆವು ಎಂದರ್ಥ.
428. ಅವನು ಕಳವು ಮಾಡುವನೆಂದು ಮುಂಚಿತವಾಗಿ ಅರಿತುಕೊಳ್ಳಲು ನಮಗೆ ಸಾಧ್ಯವಾಗಿರಲಿಲ್ಲ ಎಂದರ್ಥ.
(82) ನಾವು ಯಾವ ದೇಶಕ್ಕೆ ಹೋಗಿದ್ದೆವೋ ಅವರೊಂದಿಗೂ ನಾವು ಜೊತೆಯಾಗಿ ಯಾತ್ರೆ ಮಾಡಿದ ಯಾತ್ರಿಕ ತಂಡದವರೊಂದಿಗೂ ವಿಚಾರಿಸಿರಿ. ಖಂಡಿತವಾಗಿಯೂ ನಾವು ಸತ್ಯವನ್ನೇ ನುಡಿಯುವವರಾಗಿರುವೆವು”.
(83) ಅವರು (ತಂದೆ) ಹೇಳಿದರು: “ಅಲ್ಲ, ನಿಮ್ಮ ಮನಸ್ಸು ನಿಮಗೆ ಯಾವುದೋ ಒಂದು ವಿಷಯವನ್ನು ಆಕರ್ಷಣೀಯವಾಗಿ ತೋರಿಸಿದೆ. ಆದುದರಿಂದ ಉತ್ತಮವಾಗಿ ತಾಳ್ಮೆ ವಹಿಸುವುದೇ ಸರಿ. ಅವರೆಲ್ಲರನ್ನೂ ಅಲ್ಲಾಹು ನನ್ನ ಬಳಿಗೆ ತರಲೂಬಹುದು. ಖಂಡಿತವಾಗಿಯೂ ಅವನು ಎಲ್ಲವನ್ನು ಅರಿಯುವವನೂ ಯುಕ್ತಿಪೂರ್ಣನೂ ಆಗಿರುವನು”.
(84) ತರುವಾಯ ಅವರು (ತಂದೆ) ಅವರಿಂದ ವಿಮುಖರಾಗಿ ಹೇಳಿದರು: “ಯೂಸುಫ್‍ನ ವಿಷಯವು ಎಷ್ಟು ದುಃಖಕರವಾಗಿದೆ!” ತಾವು ಅದುಮಿಟ್ಟುಕೊಂಡಿರುವ ದುಃಖದ ನಿಮಿತ್ತ ಅವರು ದೃಷ್ಟಿಯನ್ನು ಕಳೆದುಕೊಂಡಿದ್ದರು.
(85) ಅವರು ಹೇಳಿದರು: “ಅಲ್ಲಾಹುವಿನ ಮೇಲಾಣೆ! ತಾವು ಸಂಪೂರ್ಣವಾಗಿ ಅಶಕ್ತರಾಗುವವರೆಗೆ ಅಥವಾ ಮರಣಹೊಂದುವವರೆಗೆ ಯೂಸುಫ್‍ರನ್ನು ಸ್ಮರಿಸುತ್ತಲೇ ಇದ್ದೀರಿ!”
(86) ಅವರು (ತಂದೆ) ಹೇಳಿದರು: “ನಾನು ನನ್ನ ವೇದನೆ ಮತ್ತು ಸಂಕಟವನ್ನು ಅಲ್ಲಾಹುವಿನೊಂದಿಗೆ ಮಾತ್ರ ತೋಡಿಕೊಳ್ಳುವೆನು. ನೀವು ಅರಿತಿರದ ವಿಷಯಗಳನ್ನು ಅಲ್ಲಾಹುವಿನಿಂದ ನಾನು ಅರಿಯುತ್ತಿರುವೆನು.(429)
429. ಯೂಸುಫ್(ಅ) ಚಿಕ್ಕ ವಯಸ್ಸಿನಲ್ಲಿ ಕಂಡ ಕನಸು ಮತ್ತು ತದನಂತರ ಸಂಭವಿಸಿದ ಕೆಲವೊಂದು ಘಟನೆಗಳು ಅಸಹಜವಾದ ಕೆಲವು ಸಂಗತಿಗಳೆಡೆಗೆ ಸೂಚನೆಯನ್ನು ನೀಡುತ್ತಿವೆಯೆಂದು ಅವರಿಗೆ ಭಾಸವಾಗಿತ್ತು. ಅಲ್ಲಾಹು ಅವರನ್ನು ಕೈಚೆಲ್ಲಲಾರನು ಎಂಬ ಶುಭನಿರೀಕ್ಷೆಯೂ ಅವರಿಗಿತ್ತು. ಆದರೂ ಅಲ್ಲಾಹು ತಿಳಿಸಿಕೊಡದೆ ಅಗೋಚರ ವಿಷಯಗಳ ಬಗ್ಗೆ ಕರಾರುವಾಕ್ಕಾಗಿ ಅರಿತುಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಪ್ರವಾದಿಗಳಿಗೂ ಕೂಡ.
(87) ಓ ನನ್ನ ಮಕ್ಕಳೇ! ನೀವು ಹೋಗಿ ಯೂಸುಫ್ ಮತ್ತು ಅವನ ಸಹೋದರನ ಬಗ್ಗೆ ವಿಚಾರಿಸಿರಿ. ಅಲ್ಲಾಹುವಿನಿಂದಿರುವ ಸಾಂತ್ವನದ ಬಗ್ಗೆ ನಿರಾಶರಾಗದಿರಿ. ಖಂಡಿತವಾಗಿಯೂ ಅವಿಶ್ವಾಸಿಗಳ ಹೊರತು ಇನ್ನಾರೂ ಅಲ್ಲಾಹುವಿನಿಂದಿರುವ ಸಾಂತ್ವನದ ಬಗ್ಗೆ ನಿರಾಶರಾಗಲಾರರು”.
(88) ತರುವಾಯ ಅವರು ಯೂಸುಫ್‍ರ ಬಳಿಗೆ ಪ್ರವೇಶಿಸಿ ಹೇಳಿದರು: “ಓ ದೊರೆಯೇ! ನಮಗೂ ನಮ್ಮ ಕುಟುಂಬಕ್ಕೂ ವಿಪತ್ತು ತಟ್ಟಿದೆ. ನಾವು ತಂದಿರುವುದು ಕಳಪೆ ಸರಕುಗಳಾಗಿವೆ. ಆದುದರಿಂದ ತಾವು ನಮಗೆ ಪೂರ್ಣವಾಗಿ ಅಳೆದುಕೊಡಿರಿ ಮತ್ತು ಔದಾರ್ಯತೆ ತೋರಿರಿ. ಖಂಡಿತವಾಗಿಯೂ ಅಲ್ಲಾಹು ಔದಾರ್ಯವಂತರಿಗೆ ಪ್ರತಿಫಲವನ್ನು ನೀಡುವನು”.
(89) ಅವರು (ಯೂಸುಫ್) ಹೇಳಿದರು: “ನೀವು ಅಜ್ಞಾನಿಗಳಾಗಿದ್ದಾಗ ಯೂಸುಫ್ ಮತ್ತು ಅವನ ಸಹೋದರನೊಂದಿಗೆ ನೀವೇನು ಮಾಡಿದ್ದೀರಿ ಎಂಬುದನ್ನು ನೀವು ಅರಿತಿದ್ದೀರಾ?”
(90) ಅವರು ಕೇಳಿದರು: “ಯೂಸುಫ್ ತಾವೇ ಏನು?” ಅವರು (ಯೂಸುಫ್) ಹೇಳಿದರು: “ನಾನೇ ಯೂಸುಫ್ ಮತ್ತು ಈತ ನನ್ನ ಸಹೋದರ. ಅಲ್ಲಾಹು ನಮ್ಮ ಮೇಲೆ ಕೃಪೆ ತೋರಿರುವನು. ಖಂಡಿತವಾಗಿಯೂ ಯಾರು ಭಯಭಕ್ತಿ ಪಾಲಿಸುವರೋ ಮತ್ತು ತಾಳ್ಮೆ ವಹಿಸುವರೋ ಆ ಸತ್ಕರ್ಮಿಗಳಿಗಿರುವ ಪ್ರತಿಫಲವನ್ನು ಅಲ್ಲಾಹು ಖಂಡಿತವಾಗಿಯೂ ವ್ಯರ್ಥಗೊಳಿಸಲಾರನು”.
(91) ಅವರು ಹೇಳಿದರು: “ಅಲ್ಲಾಹುವಿನ ಮೇಲಾಣೆ! ಖಂಡಿತವಾಗಿಯೂ ಅಲ್ಲಾಹು ತಮಗೆ ನಮಗಿಂತಲೂ ಆದ್ಯತೆಯನ್ನು ನೀಡಿರುವನು. ಖಂಡಿತವಾಗಿಯೂ ನಾವು ಪಾಪಿಗಳಾಗಿರುವೆವು”.
(92) ಅವರು (ಯೂಸುಫ್) ಹೇಳಿದರು: “ಇಂದು ನಿಮ್ಮ ಮೇಲೆ ಯಾವುದೇ ಆಕ್ಷೇಪಣೆಯಿಲ್ಲ. ಅಲ್ಲಾಹು ನಿಮ್ಮನ್ನು ಕ್ಷಮಿಸಲಿ. ಅವನು ಕರುಣೆಯುಳ್ಳವರಲ್ಲೇ ಅತ್ಯಧಿಕ ಕರುಣೆಯುಳ್ಳವನಾಗಿರುವನು”.
(93) “ನೀವು ನನ್ನ ಈ ಅಂಗಿಯನ್ನು ಕೊಂಡೊಯ್ದು ಅದನ್ನು ನನ್ನ ತಂದೆಯ ಮುಖದ ಮೇಲೆ ಹಾಕಿರಿ. ಆಗ ಅವರು ದೃಷ್ಟಿಯುಳ್ಳವರಾಗುವರು.(430) ನೀವು ನಿಮ್ಮ ಕುಟುಂಬದವರೆಲ್ಲರನ್ನೂ ನನ್ನ ಬಳಿಗೆ ಕರೆತನ್ನಿರಿ”.
430. ಯೂಸುಫ್(ಅ) ರನ್ನು ತೋಳ ತಿಂದಿದೆ ಎಂದು ಭಾವಿಸುವುದಕ್ಕಾಗಿ ಅವರು ಮುಂಚೆ ಅವರ ಅಂಗಿಗೆ ನಕಲಿ ರಕ್ತವನ್ನು ಹಚ್ಚಿ ತಂದೆಗೆ ತೋರಿಸಿದ್ದರು. ಅದು ಅವರ ನಿತ್ಯ ದುಃಖಕ್ಕೂ ದೃಷ್ಟಿಹೀನತೆಗೂ ಕಾರಣವಾಗಿತ್ತು. ಈಗ ಮತ್ತೊಂದು ಅಂಗಿಯನ್ನು ಅದಕ್ಕೆ ತದ್ವಿರುದ್ಧವಾದ ಫಲಿತಾಂಶವನ್ನು ಸೃಷ್ಟಿಸಲು ಕಳುಹಿಸಲಾಗಿದೆ.
(94) ಯಾತ್ರಿಕ ತಂಡವು (ಈಜಿಪ್ಟಿನಿಂದ) ಹೊರಟಾಗ, ಅವರ ತಂದೆ (ತನ್ನ ಬಳಿಯಿರುವವರೊಂದಿಗೆ) ಹೇಳಿದರು: “ಖಂಡಿತವಾಗಿಯೂ ನನಗೆ ಯೂಸುಫ್‍ನ ಪರಿಮಳವು ಅನುಭವವಾಗುತ್ತಿದೆ.(431) ನೀವು ನನ್ನನ್ನು ಬುದ್ಧಿ ಭ್ರಮಣೆಗೊಂಡವನೆಂದು ಭಾವಿಸುವುದಿಲ್ಲವೆಂದಾದರೆ (ನಿಮಗಿದನ್ನು ನಂಬಬಹುದಾಗಿದೆ)”.
431. ಅದು ಅಲ್ಲಾಹು ಅವರಿಗೆ ಉಂಟು ಮಾಡಿದ ಒಂದು ವಿಶೇಷ ಅನುಭವವಾಗಿತ್ತು.
(95) ಅವರು ಹೇಳಿದರು: “ಅಲ್ಲಾಹುವಿನ ಮೇಲಾಣೆ! ಖಂಡಿತವಾಗಿಯೂ ತಾವು ತಮ್ಮ ಹಳೆಯ ಪ್ರಮಾದದಲ್ಲೇ ಇದ್ದೀರಿ”.
(96) ತರುವಾಯ ಶುಭವಾರ್ತೆ ನೀಡುವವನು ಬಂದಾಗ ಅವನು ಆ ಅಂಗಿಯನ್ನು ಅವರ ಮುಖದ ಮೇಲೆ ಹಾಕಿದನು. ಆಗ ಅವರು ದೃಷ್ಟಿಯುಳ್ಳವರಾದರು. ಅವರು ಹೇಳಿದರು: “ನೀವು ಅರಿಯದಿರುವ ಅನೇಕ ವಿಷಯಗಳನ್ನು ನಾನು ಅಲ್ಲಾಹುವಿನಿಂದ ಅರಿಯುತ್ತಿರುವೆನೆಂದು ನಾನು ನಿಮ್ಮೊಂದಿಗೆ ಹೇಳಿರಲಿಲ್ಲವೇ?”
(97) ಅವರು ಹೇಳಿದರು: “ಓ ನಮ್ಮ ತಂದೆಯವರೇ! ನಮ್ಮ ಪಾಪಗಳನ್ನು ಕ್ಷಮಿಸುವುದಕ್ಕೋಸ್ಕರ ತಾವು (ಅಲ್ಲಾಹುವಿನೊಂದಿಗೆ) ನಮಗಾಗಿ ಪ್ರಾರ್ಥಿಸಿರಿ. ಖಂಡಿತವಾಗಿಯೂ ನಾವು ಪಾಪಿಗಳಾಗಿರುವೆವು”.
(98) ಅವರು ಹೇಳಿದರು: “ನಾನು ತರುವಾಯ ನಿಮಗೋಸ್ಕರ ನನ್ನ ರಬ್‌ನೊಂದಿಗೆ ಪಾಪಮುಕ್ತಿಯನ್ನು ಬೇಡುವೆನು. ಖಂಡಿತವಾಗಿಯೂ ಅವನು ಅತ್ಯಧಿಕ ಕ್ಷಮಿಸುವವನೂ, ಅಪಾರ ಕರುಣೆಯುಳ್ಳವನೂ ಆಗಿರುವನು”.
(99) ತರುವಾಯ ಅವರು ಯೂಸುಫ್‍ರ ಬಳಿ ಪ್ರವೇಶಿಸಿದಾಗ ಯೂಸುಫ್‍ರು ತಮ್ಮ ಮಾತಾಪಿತರನ್ನು ತಮ್ಮೆಡೆಗೆ ಸೆಳೆದುಕೊಂಡರು. ಅವರು ಹೇಳಿದರು: “ಅಲ್ಲಾಹು ಇಚ್ಛಿಸುವುದಾದರೆ ನೀವು ನಿರ್ಭೀತರಾಗಿ ಈಜಿಪ್ಟನ್ನು ಪ್ರವೇಶಿಸಿರಿ”.
(100) ಅವರು (ಯೂಸುಫ್) ತಮ್ಮ ಮಾತಾಪಿತರನ್ನು ಸಿಂಹಾಸನದಲ್ಲಿ ಕೂರಿಸಿದರು. ಅವರು ಯೂಸುಫ್‍ರಿಗೆ ಸಾಷ್ಟಾಂಗ ಮಾಡುತ್ತಾ ಬಿದ್ದರು.(432) ಅವರು ಹೇಳಿದರು: “ಓ ನನ್ನ ತಂದೆಯವರೇ! ಇದು ಮುಂಚೆ ನಾನು ಕಂಡ ಕನಸಿನ ವ್ಯಾಖ್ಯಾನವಾಗಿದೆ. ನನ್ನ ರಬ್ ಅದನ್ನು ನೈಜೀಕರಿಸಿರುವನು. ಅವನು ನನ್ನನ್ನು ಸೆರೆಮನೆಯಿಂದ ಹೊರತಂದಾಗಲೂ, ನನ್ನ ಮತ್ತು ನನ್ನ ಸಹೋದರರ ಮಧ್ಯೆ ಸೈತಾನನು ಕಲಹವನ್ನು ಹುರಿದುಂಬಿಸಿದ ಬಳಿಕ ಮರುಭೂಮಿಯಿಂದ ಅವನು ನಿಮ್ಮೆಲ್ಲರನ್ನೂ (ನನ್ನ ಬಳಿಗೆ) ಕರೆತಂದಾಗಲೂ, ಅವನು ನನ್ನೊಂದಿಗೆ ಒಳಿತನ್ನೇ ಬಗೆದಿರುವನು. ಖಂಡಿತವಾಗಿಯೂ ನನ್ನ ರಬ್ ಅವನಿಚ್ಛಿಸುವವುಗಳನ್ನು ಸೂಕ್ಷ್ಮವಾಗಿ ನಿಯಂತ್ರಿಸುವವನಾಗಿರುವನು. ಖಂಡಿತವಾಗಿಯೂ ಅವನು ಎಲ್ಲವನ್ನು ಅರಿಯುವವನೂ ಯುಕ್ತಿಪೂರ್ಣನೂ ಆಗಿರುವನು”.
432. ಈ ಸಾಷ್ಟಾಂಗವು ಆರಾಧನೆಯ ರೂಪದಲ್ಲಿರುವುದಲ್ಲ. ಪ್ರೀತ್ಯಾದರವನ್ನು ಸೂಚಿಸುವ ಒಂದು ಉಪಚಾರವಾಗಿದೆ.
(101) (ಯೂಸುಫ್ ಪ್ರಾರ್ಥಿಸಿದರು:) “ಓ ನನ್ನ ಪ್ರಭೂ! ನೀನು ನನಗೆ ಆಡಳಿತದಿಂದ (ಒಂದಂಶವನ್ನು) ನೀಡಿರುವೆ ಮತ್ತು ಸ್ವಪ್ನ ವ್ಯಾಖ್ಯಾನದಿಂದ (ಕೆಲವನ್ನು) ಕಲಿಸಿರುವೆ. ಓ ಭೂಮ್ಯಾಕಾಶಗಳ ಸೃಷ್ಟಿಕರ್ತನೇ! ಇಹಲೋಕದಲ್ಲೂ ಪರಲೋಕದಲ್ಲೂ ನನ್ನ ಸಂರಕ್ಷಕನು ನೀನೇ ಆಗಿರುವೆ. ನನ್ನನ್ನು ಮುಸ್ಲಿಮನನ್ನಾಗಿ ಮೃತಪಡಿಸು ಮತ್ತು ನನ್ನನ್ನು ಸಜ್ಜನರಲ್ಲಿ ಸೇರಿಸು”.
(102) (ಓ ಪ್ರವಾದಿಯವರೇ!) ಅದು ಅಗೋಚರ ವೃತ್ತಾಂತಗಳಲ್ಲಿ ಸೇರಿದ್ದಾಗಿದೆ. ನಾವು ಅದನ್ನು ದಿವ್ಯಸಂದೇಶವಾಗಿ ತಮಗೆ ನೀಡುತ್ತಿರುವೆವು. (ಯೂಸುಫ್‍ರ ವಿರುದ್ಧ) ಸಂಚು ರೂಪಿಸುತ್ತಾ ಅವರು ತಮ್ಮ ಕಾರ್ಯವಿಧಾನವನ್ನು ಸಮಾಲೋಚನೆ ಮಾಡಿ ನಿರ್ಧರಿಸಿದಾಗ ತಾವು ಅವರ ಬಳಿಯಿರಲಿಲ್ಲ.
(103) ತಾವು ಎಷ್ಟು ಹಂಬಲಿಸಿದರೂ ಜನರಲ್ಲಿ ಹೆಚ್ಚಿನವರೂ ವಿಶ್ವಾಸವಿಡಲಾರರು.(433)
433. ಎಷ್ಟು ಪ್ರಬಲ ಪುರಾವೆಗಳು ಸಿಕ್ಕಿದರೂ ಅಲ್ಲಾಹುವಿನ ಸಂದೇಶವನ್ನು ತಿರಸ್ಕರಿಸುವುದನ್ನೇ ರೂಢಿ ಮಾಡಿಕೊಂಡ ಅನೇಕ ಜನರಿರುವರು. ಸೈತಾನನ ಪ್ರಚೋದನೆಯನ್ನು ಗೆಲ್ಲುವಂತಹ ಮನೋದಾರ್ಢ್ಯತೆ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ.
(104) ಇದಕ್ಕಾಗಿ ತಾವು ಅವರೊಂದಿಗೆ ಯಾವುದೇ ಪ್ರತಿಫಲವನ್ನೂ ಬೇಡುತ್ತಿಲ್ಲ. ಇದು ಸರ್ವಲೋಕದವರಿಗಿರುವ ಒಂದು ಉಪದೇಶ ಮಾತ್ರವಾಗಿದೆ.
(105) ಆಕಾಶಗಳಲ್ಲೂ, ಭೂಮಿಯಲ್ಲೂ ಎಷ್ಟೊಂದು ದೃಷ್ಟಾಂತಗಳಿವೆ! ಅವುಗಳನ್ನು ಕಡೆಗಣಿಸುತ್ತಾ ಅವರು ಅವುಗಳ ಬಳಿಯಿಂದಲೇ ಹಾದುಹೋಗುತ್ತಿರುವರು.
(106) ಅವರಲ್ಲಿ ಹೆಚ್ಚಿನವರೂ ಅಲ್ಲಾಹುವಿನೊಂದಿಗೆ ಸಹಭಾಗಿತ್ವ ಮಾಡುವವರಾಗಿಯೇ ವಿನಾ ಅವನಲ್ಲಿ ವಿಶ್ವಾಸವಿಡಲಾರರು.(434)
434. ಸರ್ವಲೋಕಗಳ ರಬ್‌ನಲ್ಲಿ ವಿಶ್ವಾಸವಿಡುವ ಮತ್ತು ಅವನ ಏಕತ್ವವನ್ನು ಅಂಗೀಕರಿಸುವವರಲ್ಲಿಯೇ ಹೆಚ್ಚಿನವರೂ ಶಿರ್ಕ್ (ದೇವಸಹಭಾಗಿತ್ವ) ಮಾಡುತ್ತಾರೆ. ಅರ್ಥಾತ್ ಅಲ್ಲಾಹೇತರರನ್ನು ಆರಾಧಿಸುವವರೋ, ಪ್ರಾರ್ಥಿಸುವವರೋ ಆಗಿರುವರು. ಇದೊಂದು ಕ್ಷಮೆಯಿಲ್ಲದ ಮಹಾಪಾಪವಾಗಿದೆ. ಅಲ್ಲಾಹು ಏಕೈಕನೆಂದು ವಿಶ್ವಾಸವಿಟ್ಟ ಮಾತ್ರಕ್ಕೆ ಓರ್ವನು ಸತ್ಯವಿಶ್ವಾಸಿಯಾಗಲಾರನು, ಬದಲಾಗಿ ಇಬಾದತ್‍ನ (ಆರಾಧನೆಯ) ಒಂದಂಶವನ್ನು ಕೂಡ ಅಲ್ಲಾಹೇತರರಿಗೆ ಅರ್ಪಿಸದಿರುವುದು ಸತ್ಯವಿಶ್ವಾಸದ ಅನಿವಾರ್ಯ ಘಟಕವಾಗಿದೆ ಎಂಬುದನ್ನು ಈ ಸೂಕ್ತಿಯು ಸಂಶಯಕ್ಕೆಡೆಯಿಲ್ಲದಂತೆ ಸ್ಪಷ್ಟಪಡಿಸುತ್ತದೆ.
(107) ಅವರನ್ನು ಸುತ್ತುವರಿಯುವ ವಿಧದಲ್ಲಿ ಅಲ್ಲಾಹುವಿನ ಶಿಕ್ಷೆಯು ಅವರೆಡೆಗೆ ಬರುವುದರ ಬಗ್ಗೆ ಅಥವಾ ಅವರು ಅರಿತಿರದೆಯೇ ಹಠಾತ್ತನೆ ಅಂತ್ಯದಿನವು ಅವರೆಡೆಗೆ ಬರುವುದರ ಬಗ್ಗೆ ಅವರು ನಿರ್ಭೀತರಾಗಿರುವರೇ?
(108) (ಓ ಪ್ರವಾದಿಯವರೇ!) ಹೇಳಿರಿ: “ಇದೇ ನನ್ನ ಮಾರ್ಗ. ನಾನು ದೃಢವಾದ ಪರಿಜ್ಞಾನದೊಂದಿಗೆ ಅಲ್ಲಾಹುವಿನೆಡೆಗೆ ಆಹ್ವಾನಿಸುತ್ತಿರುವೆನು. ನಾನು ಮತ್ತು ನನ್ನನ್ನು ಅನುಸರಿಸಿದವರು. ಅಲ್ಲಾಹು ಪರಮಪಾವನನು. ನಾನು (ಅವನೊಂದಿಗೆ) ಸಹಭಾಗಿತ್ವ ಮಾಡುವವರಲ್ಲಿ ಸೇರಿದವನಲ್ಲ”.
(109) ವಿವಿಧ ದೇಶದವರ ಪೈಕಿ ತಮಗಿಂತ ಮುಂಚೆ ನಾವು ಪುರುಷರನ್ನೇ ಹೊರತು ಇನ್ನಾರನ್ನೂ ದಿವ್ಯಸಂದೇಶ ನೀಡಿ ಸಂದೇಶವಾಹಕರನ್ನಾಗಿ ಕಳುಹಿಸಿಲ್ಲ.(435) ಅವರು (ಸತ್ಯನಿಷೇಧಿಗಳು) ಭೂಮಿಯಲ್ಲಿ ಸಂಚರಿಸಿ ತಮ್ಮ ಪೂರ್ವಿಕರ ಪರ್ಯಾವಸಾನವು ಹೇಗಿತ್ತು ಎಂಬುದನ್ನು ನೋಡಲಿಲ್ಲವೇ? ಭಯಭಕ್ತಿ ಪಾಲಿಸುವವರಿಗೆ ಪರಲೋಕವೇ ಅತ್ಯುತ್ತಮವಾಗಿದೆ. ಹೀಗಿದ್ದೂ ನೀವು ಆಲೋಚಿಸುವುದಿಲ್ಲವೇ?
435. ಪ್ರತಿಯೊಂದು ಪ್ರದೇಶಕ್ಕೂ ಅವರಿಂದಲೇ ವಿಶೇಷವಾಗಿ ಆರಿಸಲ್ಪಟ್ಟ ಪುರುಷರನ್ನು ಮಾತ್ರ ಅಲ್ಲಾಹು ಸಂದೇಶವಾಹಕರನ್ನಾಗಿ ಕಳುಹಿಸಿರುವನು.
(110) ಹಾಗೆ ಸಂದೇಶವಾಹಕರು ನಿರಾಶರಾದಾಗ ಮತ್ತು ಅವರು ತಮ್ಮೊಂದಿಗೆ ಹೇಳಿದ್ದು ಸುಳ್ಳೆಂದು ಜನರಿಗೆ ಖಾತ್ರಿಯಾದಾಗ ನಮ್ಮ ಸಹಾಯವು ಅವರೆಡೆಗೆ (ಸಂದೇಶ ವಾಹಕರೆಡೆಗೆ) ಬಂದಿತು. ತರುವಾಯ ನಾವಿಚ್ಛಿಸಿದವರಿಗೆ ರಕ್ಷೆ ನೀಡಲಾಯಿತು. ಅಪರಾಧಿಗಳಾದ ಜನರಿಂದ ನಮ್ಮ ಶಿಕ್ಷೆಯನ್ನು ತಡೆ ಹಿಡಿಯಲಾಗದು.
(111) ಅವರ ಚರಿತ್ರೆಗಳಲ್ಲಿ ಬುದ್ಧಿವಂತರಿಗೆ ಖಂಡಿತವಾಗಿಯೂ ನೀತಿಪಾಠವಿದೆ. ಅದು ಹೆಣೆಯಲಾಗಿರುವ ಸುದ್ದಿಯಲ್ಲ. ಆದರೆ ಅದು ಅದಕ್ಕಿಂತ ಮೊದಲಿನ (ಗ್ರಂಥಗಳ) ದೃಢೀಕರಣವೂ, ಸಕಲ ವಿಷಯಗಳ ಬಗ್ಗೆ ಯಿರುವ ಒಂದು ವಿಶದೀಕರಣವೂ, ವಿಶ್ವಾಸವಿಡುವ ಜನರಿಗೆ ಮಾರ್ಗದರ್ಶಿಯೂ ಕಾರುಣ್ಯವೂ ಆಗಿದೆ.