(1) ಅಲಿಫ್ ಲಾಮ್ ರಾ. ಇದು ತಾವು ಮನುಷ್ಯರನ್ನು ಅವರ ರಬ್ನ ಅನುಮತಿಯ ಮೇರೆಗೆ ಅಂಧಕಾರಗಳಿಂದ ಪ್ರಕಾಶದೆಡೆಗೆ, ಪ್ರತಾಪಶಾಲಿಯೂ ಸ್ತುತ್ಯರ್ಹನೂ ಆಗಿರುವ (ಅಲ್ಲಾಹುವಿನ) ಮಾರ್ಗದೆಡೆಗೆ ಹೊರತರಲು ತಮಗೆ ನಾವು ಅವತೀರ್ಣಗೊಳಿಸಿರುವ ಗ್ರಂಥವಾಗಿದೆ.
(2) ಆಕಾಶಗಳಲ್ಲಿರುವುದು ಮತ್ತು ಭೂಮಿಯಲ್ಲಿರುವುದು ಯಾರಿಗೆ ಸೇರಿದೆಯೋ ಆ ಅಲ್ಲಾಹುವಿನ (ಮಾರ್ಗದೆಡೆಗೆ). ಸತ್ಯನಿಷೇಧಿಗಳಿಗೆ ಕಠಿಣವಾದ ಶಿಕ್ಷೆಯ ನಿಮಿತ್ತ ವಿನಾಶವು ಕಾದಿದೆ.
(3) ಪರಲೋಕಕ್ಕಿಂತಲೂ ಹೆಚ್ಚಾಗಿ ಇಹಲೋಕವನ್ನು ಪ್ರೀತಿಸುವವರು, ಅಲ್ಲಾಹುವಿನ ಮಾರ್ಗದಿಂದ ಜನರನ್ನು ತಡೆಗಟ್ಟುವವರು ಮತ್ತು ಅದನ್ನು (ಆ ಮಾರ್ಗವನ್ನು) ವಕ್ರಗೊಳಿಸಲು ಆಶಿಸುವವರು ಯಾರೋ ಅವರಿಗೆ. ಅವರು ಅತಿವಿದೂರವಾದ ಪಥಭ್ರಷ್ಟತೆಯಲ್ಲಿರುವರು.
(4) ನಾವು ಯಾವುದೇ ಸಂದೇಶವಾಹಕರನ್ನೂ ಅವರು ತಮ್ಮ ಜನತೆಗೆ (ಸಂಗತಿಗಳನ್ನು) ವಿವರಿಸುವ ಸಲುವಾಗಿ ಅವರ ಭಾಷೆಯಲ್ಲಿಯೇ (ಸಂದೇಶ ನೀಡಿದ) ಹೊರತು ಕಳುಹಿಸಿಲ್ಲ. ಅಲ್ಲಾಹು ಅವನಿಚ್ಛಿಸುವವರನ್ನು ಪಥಭ್ರಷ್ಟಗೊಳಿಸುವನು ಮತ್ತು ಅವನಿಚ್ಛಿಸುವವರನ್ನು ಸನ್ಮಾರ್ಗಕ್ಕೆ ಸೇರಿಸುವನು. ಅವನು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.
(5) “ತಮ್ಮ ಜನತೆಯನ್ನು ಅಂಧಕಾರಗಳಿಂದ ಪ್ರಕಾಶದೆಡೆಗೆ ತನ್ನಿರಿ ಮತ್ತು ಅಲ್ಲಾಹುವಿನ (ಅನುಗ್ರಹದ) ದಿನಗಳ ಬಗ್ಗೆ ಅವರಿಗೆ ನೆನಪಿಸಿಕೊಡಿರಿ” ಎಂಬ ಆದೇಶದೊಂದಿಗೆ ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳೊಂದಿಗೆ ಕಳುಹಿಸಿದೆವು. ಅತ್ಯಧಿಕ ತಾಳ್ಮೆ ವಹಿಸುವ ಮತ್ತು ಅತಿಹೆಚ್ಚು ಕೃತಜ್ಞತೆ ಸಲ್ಲಿಸುವ ಎಲ್ಲರಿಗೂ ಖಂಡಿತವಾಗಿಯೂ ಅದರಲ್ಲಿ ದೃಷ್ಟಾಂತಗಳಿವೆ.
(6) ಮೂಸಾ ತನ್ನ ಜನತೆಯೊಂದಿಗೆ ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ): “ನಿಮಗೆ ಘೋರ ಶಿಕ್ಷೆಯನ್ನು ನೀಡುತ್ತಿದ್ದ, ನಿಮ್ಮ ಗಂಡುಮಕ್ಕಳನ್ನು ಸಾಯಿಸುತ್ತಿದ್ದ ಮತ್ತು ನಿಮ್ಮ ಸ್ತ್ರೀಯರನ್ನು ಜೀವಂತ ಬಿಡುತ್ತಿದ್ದ ಫಿರ್ಔನನ ಜನರಿಂದ ನಿಮ್ಮನ್ನು ರಕ್ಷಿಸಿದ ಸಂದರ್ಭದಲ್ಲಿ ಅಲ್ಲಾಹು ನಿಮ್ಮೊಂದಿಗೆ ತೋರಿಸಿದ ಔದಾರ್ಯವನ್ನು ಸ್ಮರಿಸಿರಿ. ಖಂಡಿತವಾಗಿಯೂ ಅದರಲ್ಲಿ ನಿಮ್ಮ ರಬ್ನ ಕಡೆಯ ಮಹಾ ಪರೀಕ್ಷೆಯಿತ್ತು”.
(7) “ನೀವು ಕೃತಜ್ಞತೆ ಸಲ್ಲಿಸುವುದಾದರೆ ಖಂಡಿತವಾಗಿಯೂ ನಾನು ನಿಮಗೆ (ಅನುಗ್ರಹವನ್ನು) ಹೆಚ್ಚಿಸಿ ಕೊಡುವೆನು. ಆದರೆ ನೀವು ಕೃತಘ್ನರಾಗುವುದಾದರೆ ಖಂಡಿತವಾಗಿಯೂ ನನ್ನ ಶಿಕ್ಷೆಯು ಅತಿಕಠೋರವಾಗಿದೆ” ಎಂದು ನಿಮ್ಮ ರಬ್ ಘೋಷಿಸಿದ ಸಂದರ್ಭ.
(8) ಮೂಸಾ ಹೇಳಿದರು: “ನೀವು ಮತ್ತು ಭೂಮಿಯಲ್ಲಿರುವವರೆಲ್ಲರೂ ಒಟ್ಟಾಗಿ ನಿಷೇಧಿಸಿದರೂ ಖಂಡಿತವಾಗಿಯೂ ಅಲ್ಲಾಹು ಪರಾಶ್ರಯ ಮುಕ್ತನೂ ಸ್ತುತ್ಯರ್ಹನೂ ಆಗಿರುವನು (ಎಂಬುದನ್ನು ನೀವು ಅರಿತುಕೊಳ್ಳಿರಿ)”.(453)
453. ಮಾನವ ಕುಲವು ಸಂಪೂರ್ಣವಾಗಿ ಅಲ್ಲಾಹುವನ್ನು ನಿಷೇಧಿಸಿದರೂ ಅಲ್ಲಾಹುವಿಗೆ ಅದರಲ್ಲಿ ಯಾವುದೇ ನಷ್ಟವಿಲ್ಲ. ಆದರೆ ಅವರಿಗೇ ಅಪಾರ ನಷ್ಟವನ್ನು ಅನುಭವಿಸಬೇಕಾಗಿ ಬರುವುದು.
(9) ನೂಹ್ರ ಜನತೆ, ಆದ್, ಸಮೂದ್ ಜನಾಂಗ ಮತ್ತು ಅವರ ನಂತರ ಬಂದ ಅಲ್ಲಾಹುವಿಗೆ ಮಾತ್ರ (ಕರಾರುವಾಕ್ಕಾಗಿ) ತಿಳಿದಿರುವ ಜನಾಂಗಗಳು, ಇವರೆಲ್ಲರನ್ನೊಳಗೊಂಡ ನಿಮ್ಮ ಪೂರ್ವಿಕರ ವೃತ್ತಾಂತವು ನಿಮ್ಮೆಡೆಗೆ ಬಂದಿಲ್ಲವೇ? ನಮ್ಮ ಸಂದೇಶವಾಹಕರು ಸ್ಪಷ್ಟವಾದ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಾಗ ಅವರು ತಮ್ಮ ಕೈಗಳನ್ನು ತಮ್ಮ ಬಾಯಿಯೆಡೆಗೆ(454) ಮರಳಿಸಿ “ಖಂಡಿತವಾಗಿಯೂ ನೀವು ಯಾವುದರೊಂದಿಗೆ ಕಳುಹಿಸಲ್ಪಟ್ಟಿರುವಿರೋ ಅದರಲ್ಲಿ ನಾವು ಅವಿಶ್ವಾಸವಿಟ್ಟಿರುವೆವು ಮತ್ತು ನೀವು ಯಾವುದರೆಡೆಗೆ ನಮ್ಮನ್ನು ಆಹ್ವಾನಿಸುತ್ತಿರುವಿರೋ ಅದರ ಬಗ್ಗೆ ಖಂಡಿತವಾಗಿಯೂ ನಾವು ಅವಿಶ್ವಾಸ ಹುಟ್ಟಿಸುವಂತಹ ಸಂದೇಹದಲ್ಲಿರುವೆವು” ಎಂದು ಹೇಳಿದರು.
454. ಕೋಪದಿಂದ ಕೈಕಚ್ಚಿದರು ಅಥವಾ ಪ್ರತಿಭಟನೆ ಸೂಚಿಸುವ ಸಲುವಾಗಿ ಬಾಯಿಮುಚ್ಚಿದರು ಎಂದು ಅರ್ಥೈಸಬಹುದು.
(10) ಅವರೆಡೆಗೆ ಕಳುಹಿಸಲಾದ ಸಂದೇಶವಾಹಕರು ಹೇಳಿದರು: “ಭೂಮ್ಯಾಕಾಶಗಳ ಸೃಷ್ಟಿಕರ್ತನಾಗಿರುವ ಅಲ್ಲಾಹುವಿನ ಬಗ್ಗೆ ನಿಮಗೆ ಸಂದೇಹವೇ? ನಿಮಗೆ ನಿಮ್ಮ ಪಾಪಗಳನ್ನು ಮನ್ನಿಸಿಕೊಡಲು ಮತ್ತು ನಿರ್ಣಿತವಾದ ಒಂದು ಅವಧಿಯವರೆಗೆ ನಿಮಗೆ ಕಾಲಾವಕಾಶವನ್ನು ಹೆಚ್ಚಿಸಿಕೊಡಲು ಅವನು ನಿಮ್ಮನ್ನು ಕರೆಯುತ್ತಿರುವನು”. ಅವರು (ಜನರು) ಹೇಳಿದರು: “ನೀವು ನಮ್ಮಂತಿರುವ ಮನುಷ್ಯರು ಮಾತ್ರವಾಗಿದ್ದೀರಿ. ನಮ್ಮ ಪೂರ್ವಿಕರು ಯಾವುದನ್ನು ಆರಾಧಿಸುತ್ತಿದ್ದರೋ ಅದರಿಂದ ನಮ್ಮನ್ನು ವಿಮುಖರನ್ನಾಗಿಸಲು ನೀವು ಇಚ್ಛಿಸುತ್ತಿದ್ದೀರಿ. ಆದುದರಿಂದ ಸ್ಪಷ್ಟವಾದ ಯಾವುದಾದರೂ ಆಧಾರ ಪ್ರಮಾಣವನ್ನು ನೀವು ನಮಗೆ ತಂದುಕೊಡಿರಿ”.
(11) ಅವರೆಡೆಗೆ ಕಳುಹಿಸಲಾದ ಸಂದೇಶವಾಹಕರು ಅವರೊಂದಿಗೆ ಹೇಳಿದರು: “ನಾವು ನಿಮ್ಮಂತಿರುವ ಮನುಷ್ಯರು ಮಾತ್ರವಾಗಿರುವೆವು. ಆದರೆ ಅಲ್ಲಾಹು ತನ್ನ ದಾಸರ ಪೈಕಿ ತಾನಿಚ್ಛಿಸುವವರ ಮೇಲೆ ಔದಾರ್ಯ ತೋರುವನು. ಅಲ್ಲಾಹುವಿನ ಅನುಮತಿಯ ವಿನಾ ನಿಮಗೆ ಯಾವುದಾದರೂ ಆಧಾರ ಪ್ರಮಾಣವನ್ನು ತಂದುಕೊಡಲು ನಮ್ಮಿಂದಾಗದು. ಸತ್ಯವಿಶ್ವಾಸಿಗಳು ಅಲ್ಲಾಹುವಿನ ಮೇಲೆ ಭರವಸೆಯಿಡಲಿ.
(12) ಅಲ್ಲಾಹು ನಮ್ಮನ್ನು ನಮ್ಮ ಮಾರ್ಗಗಳೆಡೆಗೆ ಮುನ್ನಡೆಸಿರುವಾಗ ಅವನ ಮೇಲೆ ಭರವಸೆಯಿಡದಿರಲು ನಮಗೇನಾಗಿದೆ? ನೀವು ನಮಗೆ ನೀಡಿದ ಹಿಂಸೆಗಳನ್ನು ಖಂಡಿತವಾಗಿಯೂ ನಾವು ಸಹಿಸಿಕೊಳ್ಳುವೆವು. ಭರವಸೆಯಿಡುವವರು ಅಲ್ಲಾಹುವಿನ ಮೇಲೆ ಭರವಸೆಯಿಡಲಿ”.
(13) ತಮ್ಮೆಡೆಗೆ ಕಳುಹಿಸಲಾದ ಸಂದೇಶವಾಹಕರೊಂದಿಗೆ ಅವಿಶ್ವಾಸಿಗಳು ಹೇಳಿದರು: “ಖಂಡಿತವಾಗಿಯೂ ನಾವು ನಿಮ್ಮನ್ನು ನಮ್ಮ ಊರಿನಿಂದ ಹೊರಗಟ್ಟುವೆವು ಅಥವಾ ನೀವು ನಮ್ಮ ಧರ್ಮಕ್ಕೆ ಮರಳಲೇಬೇಕು”. ಆಗ ಅವರಿಗೆ (ಆ ಸಂದೇಶವಾಹಕರಿಗೆ) ಅವರ ರಬ್ ಹೀಗೆ ದಿವ್ಯಸಂದೇಶವನ್ನು ನೀಡಿದನು: “ಖಂಡಿತವಾಗಿಯೂ ನಾವು ಆ ಅಕ್ರಮಿಗಳನ್ನು ನಾಶಗೊಳಿಸುವೆವು.
(14) ಅವರ ಬಳಿಕ ನಾವು ನಿಮ್ಮನ್ನು ಭೂಮಿಯಲ್ಲಿ ವಾಸಗೊಳಿಸುವೆವು. ಇದು ನನ್ನ ಸ್ಥಾನವನ್ನು(455) ಭಯಪಡುವ ಮತ್ತು ನನ್ನ ಮುನ್ನೆಚ್ಚರಿಕೆಯನ್ನು ಭಯಪಡುವ ಜನರಿಗಿರುವ ನನ್ನ ಅನುಗ್ರಹವಾಗಿದೆ”.
455. ಯಾವುದೇ ಹೊಂದಾಣಿಕೆಯಿಲ್ಲದಂತಹ ಅಲ್ಲಾಹುವಿನ ವಿಚಾರಣೆಯನ್ನು ಸಕಲ ಏಕಾಧಿಪತಿಗಳೂ ಎದುರಿಸುವ ದಿನದಂದು ಅಲ್ಲಾಹುವಿಗಿರುವ ಅನುಪಮವೂ ಅತ್ಯುನ್ನತವೂ ಆಗಿರುವ ಸ್ಥಾನ.
(15) ಅವರು (ಆ ಸಂದೇಶವಾಹಕರು ಅಲ್ಲಾಹುವಿನೊಂದಿಗೆ) ಜಯವನ್ನು ಬೇಡಿದರು. ಪ್ರತಿಯೊಬ್ಬ ಹಠಮಾರಿ ಸರ್ವಾಧಿಕಾರಿಯೂ ಪರಾಭವಗೊಂಡನು.(456)
456. ಸತ್ಯನಿಷೇಧಿಗಳ ಧಿಕ್ಕಾರವು ಮಿತಿಮೀರಿದಾಗ ಪ್ರವಾದಿಗಳು ಅವರ ವಿರುದ್ಧ ಅಲ್ಲಾಹುವಿನೊಂದಿಗೆ ಪ್ರಾರ್ಥಿಸಿದರು ಮತ್ತು ವಿವಿಧ ರೀತಿಯ ಶಿಕ್ಷೆಗಳಿಗೆ ಸತ್ಯನಿಷೇಧಿಗಳು ವಿಧೇಯರಾದರು.
(16) ನರಕಾಗ್ನಿಯು ಅವನ ಮುಂದೆಯೇ ಇರುವುದು. ರಕ್ತ ಮತ್ತು ಕೀವು ಮಿಶ್ರಿತವಾಗಿರುವ ನೀರಿನಿಂದ ಅವನಿಗೆ ಕುಡಿಸಲಾಗುವುದು.
(17) ಅವನು ಅದನ್ನು ಗುಟುಕರಿಸಲು ಪ್ರಯತ್ನಿಸುವನು. ಅದನ್ನು ಗಂಟಲ ಕೆಳಗಿಳಿಸಲು ಅವನಿಂದ ಸಾಧ್ಯವಾಗದು. ಮರಣವು ಎಲ್ಲ ಕಡೆಗಳಿಂದಲೂ ಅವನೆಡೆಗೆ ಬರುವುದು. ಆದರೂ ಅವನು ಮರಣಹೊಂದಲಾರನು. ಅದರ ಹಿಂದೆಯೇ ಅತಿಕಠೋರ ಶಿಕ್ಷೆಯೂ ಇರುವುದು.
(18) ತಮ್ಮ ರಬ್ಬನ್ನು ನಿಷೇಧಿಸಿದವರ ಕರ್ಮಗಳ ಉದಾಹರಣೆಯು ಬಿರುಗಾಳಿಯ ದಿನದಂದು ಭೀಕರವಾಗಿ ಬೀಸಿದ ಗಾಳಿಗೆ ಹಾರಿಹೋಗುವ ಬೂದಿಯಂತಾಗಿದೆ. ಅವರು ಸಂಪಾದಿಸಿದವುಗಳಿಂದ ಏನನ್ನೂ ಸವಿಯಲು ಅವರಿಗೆ ಸಾಧ್ಯವಾಗದು.(457) ಅತಿ ವಿದೂರವಾದ ಪಥಭ್ರಷ್ಟತೆಯು ಅದೇ ಆಗಿದೆ.
457. ಗಾಳಿಯಲ್ಲಿ ಹಾರಿದ ಬೂದಿಯನ್ನು ಮರಳಿ ಪಡೆದು ಉಪಯೋಗಿಸಲು ಸಾಧ್ಯವಾಗದಂತೆ ಸತ್ಯನಿಷೇಧಿಗಳ ಕರ್ಮಗಳೂ ಸಂಪೂರ್ಣವಾಗಿ ಫಲಶೂನ್ಯವಾಗಿವೆ.
(19) ಅಲ್ಲಾಹು ಆಕಾಶಗಳನ್ನು ಮತ್ತು ಭೂಮಿಯನ್ನು ಸತ್ಯದೊಂದಿಗೆ ಸೃಷ್ಟಿಸಿರುವನು ಎಂಬುದನ್ನು ತಾವು ಕಂಡಿಲ್ಲವೇ? ಅವನಿಚ್ಛಿಸಿದರೆ ನಿಮ್ಮನ್ನು ಅಳಿಸಿಬಿಡುವನು ಮತ್ತು ಹೊಸದೊಂದು ಸೃಷ್ಟಿಯನ್ನು ತರುವನು.
(20) ಅಲ್ಲಾಹುವಿನ ಮಟ್ಟಿಗೆ ಅದೊಂದು ಕಷ್ಟಕರ ವಿಷಯವಲ್ಲ.
(21) ಅವರೆಲ್ಲರೂ ಅಲ್ಲಾಹುವಿನೆಡೆಗೆ ಹೊರಟು ಬರುವರು.(458) ಆಗ ಬಲಹೀನರು ದುರಹಂಕಾರಿಗಳೊಂದಿಗೆ ಹೇಳುವರು: “ಖಂಡಿತವಾಗಿಯೂ ನಾವು ನಿಮ್ಮ ಹಿಂಬಾಲಕರಾಗಿದ್ದೆವು. ಆದುದರಿಂದ ನೀವು ಅಲ್ಲಾಹುವಿನ ಶಿಕ್ಷೆಯಿಂದ ಸ್ವಲ್ಪವನ್ನಾದರೂ ನಮ್ಮಿಂದ ತೊಲಗಿಸುವಿರಾ?” ಅವರು (ದುರಹಂಕಾರಿಗಳು) ಹೇಳುವರು: “ಅಲ್ಲಾಹು ನಮ್ಮನ್ನು ಸನ್ಮಾರ್ಗದಲ್ಲಿ ಸೇರಿಸಿರುತ್ತಿದ್ದರೆ ನಾವು ನಿಮ್ಮನ್ನೂ ಸನ್ಮಾರ್ಗದಲ್ಲಿ ಸೇರಿಸುತ್ತಿದ್ದೆವು. ನಾವು ತಾಳ್ಮೆಗೆಟ್ಟರೂ ತಾಳ್ಮೆ ವಹಿಸಿದರೂ ನಮ್ಮ ಪಾಲಿಗೆ ಅದು ಸಮಾನವಾಗಿದೆ. ನಮಗೆ ಯಾವುದೇ ರಕ್ಷಾಮಾರ್ಗವೂ ಇಲ್ಲ”.
458. ಪರಲೋಕದಲ್ಲಿ ಎದುರಾಗಲಿರುವ ಒಂದು ಸನ್ನಿವೇಶವನ್ನು ಮುಂದಿಟ್ಟು ಅಲ್ಲಾಹು ಜನರ ಚಿಂತನೆಯನ್ನು ಇಲ್ಲಿ ಬಡಿದೆಬ್ಬಿಸುತ್ತಿರುವನು.
(22) ವಿಷಯವನ್ನು ತೀರ್ಮಾನಿಸಲಾದಾಗ ಸೈತಾನನು ಹೇಳುವನು:(459) “ಖಂಡಿತವಾಗಿಯೂ ಅಲ್ಲಾಹು ನಿಮ್ಮೊಂದಿಗೆ ಸತ್ಯವಾಗ್ದಾನವನ್ನು ವಾಗ್ದಾನ ಮಾಡಿದ್ದನು. ನಾನೂ ನಿಮ್ಮೊಂದಿಗೆ ವಾಗ್ದಾನ ಮಾಡಿದ್ದೆನು. ಆದರೆ ನಾನು (ನನ್ನ ವಾಗ್ದಾನವನ್ನು) ಉಲ್ಲಂಘಿಸಿರುವೆನು. ನನಗೆ ನಿಮ್ಮ ಮೇಲೆ ಯಾವುದೇ ಅಧಿಕಾರವೂ ಇರಲಿಲ್ಲ. ನಾನು ನಿಮ್ಮನ್ನು ಕರೆದಾಗ ನೀವು ನನ್ನ ಕರೆಗೆ ಓಗೊಟ್ಟಿರಿ. ಆದುದರಿಂದ ನೀವು ನನ್ನನ್ನು ದೂಷಿಸದಿರಿ. ನಿಮ್ಮನ್ನೇ ನೀವು ದೂಷಿಸಿರಿ. ನಿಮಗೆ ನೆರವು ನೀಡಲು ನನ್ನಿಂದಾಗದು. ನನಗೆ ನೆರವು ನೀಡಲು ನಿಮ್ಮಿಂದಲೂ ಆಗದು. ಮುಂಚೆ ನೀವು ನನ್ನನ್ನು ಸಹಭಾಗಿಯನ್ನಾಗಿ ಮಾಡಿರುವುದನ್ನು ನಾನು ನಿಷೇಧಿಸಿರುವೆನು.(460) ಖಂಡಿತವಾಗಿಯೂ ಅಕ್ರಮಿಗಳಿಗೆ ಯಾತನಾಮಯ ಶಿಕ್ಷೆಯಿರುವುದು”.
459. ಅಲ್ಲಾಹು ಇಲ್ಲಿ ಪರಲೋಕದ ಇನ್ನೊಂದು ದೃಶ್ಯವನ್ನು ಮುಂದಿಡುತ್ತಿದ್ದಾನೆ. ಸೈತಾನನಿಗೂ ಅವನ ಸಂಗಡಿಗರಿಗೂ ನರಕಾಗ್ನಿಯನ್ನು ವಿಧಿಸಲ್ಪಟ್ಟ ನಂತರ ತನ್ನ ದುರ್ಬೋಧನೆಗೆ ಒಳಗಾಗಿ ನರಕವಾಸಿಗಳಾದವರೊಂದಿಗೆ ಸೈತಾನನು ಮಾಡುವ ಪ್ರಸ್ತಾವನೆಯನ್ನು ಅಲ್ಲಾಹು ಇಲ್ಲಿ ಉದ್ಧರಿಸುತ್ತಿದ್ದಾನೆ. 460. ಸೈತಾನನನ್ನು ಅಲ್ಲಾಹುವಿಗೆ ಸಹಭಾಗಿಯನ್ನಾಗಿ ಮಾಡುವುದು ಎರಡು ವಿಧದಲ್ಲಾಗಿರುತ್ತದೆ. ಒಂದು: ನೇರವಾಗಿ ಅವನನ್ನೇ ಆರಾಧಿಸುವುದು. ಅಗೋಚರ ಮಾರ್ಗಗಳ ಮೂಲಕ ನೆರವು ದೊರೆಯುವುದಕ್ಕಾಗಿ ಸೈತಾನನ ಸೇವೆ ಮಾಡುವ ಜನರು ಎಲ್ಲ ಕಾಲದಲ್ಲೂ ಇದ್ದರು. ಭೂತ ಸೇವೆಗಳು ಇದರಲ್ಲಿ ಸೇರಿದ್ದಾಗಿವೆ. ಎರಡು: ಅವನ ಪ್ರಲೋಭನೆಗೆ ಒಳಗಾಗಿ ವಿವಿಧ ವ್ಯಕ್ತಿಗಳನ್ನು ಮತ್ತು ಶಕ್ತಿಗಳನ್ನು ಆರಾಧಿಸುವುದು.
(23) ವಿಶ್ವಾಸವಿಟ್ಟವರು ಮತ್ತು ಸತ್ಕರ್ಮಗೈದವರನ್ನು ತಳಭಾಗದಲ್ಲಿ ನದಿಗಳು ಹರಿಯುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಮಾಡಿಸಲಾಗುವುದು. ಅವರ ರಬ್ನ ಅನುಮತಿ ಮೇರೆಗೆ ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅಲ್ಲಿ ಅವರಿಗಿರುವ ಅಭಿವಂದನೆಯು “ಸಲಾಮ್” ಎಂದಾಗಿರುವುದು.
(24) ಉತ್ತಮವಾದ ವಚನಕ್ಕೆ ಅಲ್ಲಾಹು ನೀಡುವ ಉಪಮೆಯು ಹೇಗಿದೆಯೆಂದು ತಾವು ಕಂಡಿಲ್ಲವೇ? (ಅದು) ಒಂದು ಉತ್ತಮ ವೃಕ್ಷದಂತಾಗಿದೆ. ಅದರ ಬೇರು ಸುಭದ್ರವಾಗಿದೆ ಮತ್ತು ರೆಂಭೆಗಳು ಆಕಾಶದೆತ್ತರಕ್ಕೇರಿ ನಿಂತಿವೆ.
(25) ತನ್ನ ರಬ್ನ ಅಪ್ಪಣೆಯೊಂದಿಗೆ ಅದು ಎಲ್ಲ ಕಾಲಗಳಲ್ಲೂ ತನ್ನ ಫಲವನ್ನು ನೀಡುತ್ತಲೇ ಇರುವುದು.(461) ಜನರು ಚಿಂತಿಸಿ ಗ್ರಹಿಸುಸಲುವಾಗಿ ಅಲ್ಲಾಹು ಅವರಿಗೆ ಉದಾಹರಣೆಗಳನ್ನು ನೀಡುತ್ತಿರುವನು.
461. ಸತ್ಯಸಾಕ್ಷ್ಯವನ್ನು ಘೋಷಿಸುವ ವಚನವು ಯಾವುದೇ ಗಾಳಿಗೂ ಮುರಿದು ಬೀಳದೆ, ತನ್ನ ಗೆಲ್ಲುಗಳನ್ನು ಆಕಾಶದೆತ್ತರಕ್ಕೆ ಚಾಚಿ ಕೊಂಡಿರುವ ಮತ್ತು ಎಲ್ಲ ಋತುಗಳಲ್ಲೂ ಫಲಗಳನ್ನು ನೀಡುವ ಒಂದು ಉತ್ತಮವಾದ ಮರದಂತೆ ಸುದೃಢವೂ ಫಲದಾಯಕವೂ ಆಗಿದೆ.
(26) ಕೆಟ್ಟ ವಚನದ ಉಪಮೆಯು ಭೂಮಿಯ ಮೇಲ್ಮೈಯಿಂದ ಕೀಳಲಾಗಿರುವ ಒಂದು ಕೆಟ್ಟ ವೃಕ್ಷದಂತಾಗಿದೆ. ಅದಕ್ಕೆ ಯಾವುದೇ ಅಸ್ತಿತ್ವವಿಲ್ಲ.
(27) ಅಲ್ಲಾಹು ಸತ್ಯವಿಶ್ವಾಸಿಗಳನ್ನು ಇಹಲೋಕದಲ್ಲೂ ಪರಲೋಕದಲ್ಲೂ ಸುದೃಢ ವಚನದ ಮೂಲಕ ಸ್ಥಿರವಾಗಿ ನೆಲೆಗೊಳಿಸುವನು.(462) ಅಲ್ಲಾಹು ಅಕ್ರಮಿಗಳನ್ನು ಪಥಭ್ರಷ್ಟಗೊಳಿಸುವನು. ಅಲ್ಲಾಹು ಅವನಿಚ್ಛಿಸಿದ್ದನ್ನು ಮಾಡುವನು.
462. ಯಾವುದೇ ಪರೀಕ್ಷೆಯಲ್ಲೂ ಅಲುಗಾಡದೆ ಅಚಂಚಲರಾಗಿ ನಿಲ್ಲಲು ಅಲ್ಲಾಹು ಸತ್ಯವಿಶ್ವಾಸಿಗಳಿಗೆ ನೆರವನ್ನು ನೀಡುವನು.
(28) ಅಲ್ಲಾಹುವಿನ ಅನುಗ್ರಹಕ್ಕೆ (ಕೃತಜ್ಞತೆ ಸಲ್ಲಿಸುವ) ಬದಲು ಕೃತಘ್ನತೆ ತೋರಿಸುವ ಮತ್ತು ತಮ್ಮ ಜನತೆಯನ್ನು ನಾಶದ ಭವನಕ್ಕೆ ಇಳಿಸಿದ ಜನರನ್ನು(463) ತಾವು ಕಂಡಿಲ್ಲವೇ?
463. ಈ ಸೂಕ್ತಿಯು ಬಹುದೇವಾರಾಧನೆಯ ವಕ್ತಾರರ ಬಗ್ಗೆಯಾಗಿದೆ. ಅಲ್ಲಾಹು ನೀಡಿದ ಸಮೃದ್ಧಿ ಹಾಗೂ ಐಶ್ವರ್ಯಕ್ಕೆ ಅವನಿಗೆ ಕೃತಜ್ಞತೆ ಅರ್ಪಿಸುವುದರ ಬದಲು ಯಾವುದೋ ದೇವ ದೇವತೆಗಳಿಗೆ, ಸಜ್ಜನ ಮಹಾತ್ಮರಿಗೆ ಬಲಿ ಹರಕೆಗಳನ್ನು ಅರ್ಪಿಸಲು ಪ್ರೇರೇಪಿಸುವವರು ಜನರನ್ನು ನರಕಕ್ಕೆ ಇಳಿಸುತ್ತಿದ್ದಾರೆ.
(29) ಅದೇ ನರಕಾಗ್ನಿ. ಅವರು ಅದರಲ್ಲಿ ಉರಿಯುವರು. ಆ ವಾಸಸ್ಥಳವು ಎಷ್ಟು ನಿಕೃಷ್ಟವಾದುದು!
(30) ಅವರು ಅಲ್ಲಾಹುವಿನ ಮಾರ್ಗದಿಂದ (ಜನರನ್ನು) ಪಥಭ್ರಷ್ಟಗೊಳಿಸುವ ಸಲುವಾಗಿ ಅವನಿಗೆ ಕೆಲವು ಪ್ರತಿಸ್ಪರ್ಧಿಗಳನ್ನು ಮಾಡಿರುವರು. ಹೇಳಿರಿ: “ನೀವು ಸುಖವಾಗಿ ಜೀವಿಸಿರಿ. ಖಂಡಿತವಾಗಿಯೂ ನಿಮ್ಮ ಮರಳುವಿಕೆಯು ನರಕಾಗ್ನಿಯೆಡೆಗಾಗಿದೆ”.
(31) ಸತ್ಯವಿಶ್ವಾಸಿಗಳಾದ ನನ್ನ ದಾಸರೊಂದಿಗೆ ಅವರು ನಮಾಝನ್ನು ಸಂಸ್ಥಾಪಿಸಲಿ ಮತ್ತು ಯಾವುದೇ ಕ್ರಯ-ವಿಕ್ರಯವಾಗಲಿ, ಗೆಳೆತನವಾಗಲಿ ಪ್ರಯೋಜನಪಡದ ದಿನವೊಂದು ಬರುವ ಮುನ್ನ ನಾವು ಅವರಿಗೆ ನೀಡಿರುವ ಸಂಪತ್ತಿನಿಂದ ಅವರು (ಒಳಿತಿನ ಮಾರ್ಗದಲ್ಲಿ) ಗುಪ್ತವಾಗಿ ಮತ್ತು ಬಹಿರಂಗವಾಗಿ ಖರ್ಚು ಮಾಡಲಿ ಎಂದು ಹೇಳಿರಿ.
(32) ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು ಅಲ್ಲಾಹುವಾಗಿರುವನು. ಅವನು ಆಕಾಶದಿಂದ ಮಳೆನೀರನ್ನು ಸುರಿಸಿದನು. ತರುವಾಯ ಅದರ ಮೂಲಕ ನಿಮಗೆ ಆಹಾರವಾಗಿ ಫಲವರ್ಗಗಳನ್ನು ಉತ್ಪಾದಿಸಿದನು. ಸಮುದ್ರದಲ್ಲಿ ಅವನ ಆಜ್ಞೆಯ ಮೇರೆಗೆ ಚಲಿಸುವ ಸಲುವಾಗಿ ಅವನು ನಿಮಗೆ ಹಡಗುಗಳನ್ನು ಅಧೀನಪಡಿಸಿಕೊಟ್ಟಿರುವನು. ಅವನು ನಿಮಗೆ ನದಿಗಳನ್ನೂ ಅಧೀನಪಡಿಸಿಕೊಟ್ಟಿರುವನು.(464)
464. ಹಡಗುಗಳು ನೀರಿನಲ್ಲಿ ತೇಲುತ್ತಿರುವುದು ಮತ್ತು ಹಾಯಿದೋಣಿಗಳು ಗಾಳಿಯ ನೆರವಿನ ಮೂಲಕ ಚಲಿಸುತ್ತಿರುವುದು ಅಲ್ಲಾಹು ನಿಶ್ಚಯಿಸಿದ ಪ್ರಕೃತಿ ನಿಯಮದ ಪ್ರಕಾರವಾಗಿದೆ.
(33) ನಿರಂತರವಾಗಿ ಚಲಿಸುವ ರೀತಿಯಲ್ಲಿ ಸೂರ್ಯನನ್ನೂ ಚಂದ್ರನನ್ನೂ ಅವನು ನಿಮಗೆ ಅಧೀನಪಡಿಸಿಕೊಟ್ಟಿರುವನು. ರಾತ್ರಿಯನ್ನೂ ಹಗಲನ್ನೂ ಅವನು ನಿಮಗೆ ಅಧೀನಪಡಿಸಿಕೊಟ್ಟಿರುವನು.
(34) ನೀವು ಅವನೊಂದಿಗೆ ಬೇಡಿರುವುದೆಲ್ಲವನ್ನೂ ಅವನು ನಿಮಗೆ ನೀಡಿರುವನು. ನೀವು ಅಲ್ಲಾಹುವಿನ ಅನುಗ್ರಹಗಳನ್ನು ಎಣಿಸುವುದಾದರೆ ಅವುಗಳನ್ನು ಎಣಿಕೆ ಮಾಡಲು ನಿಮ್ಮಿಂದ ಸಾಧ್ಯವಾಗದು. ಖಂಡಿತವಾಗಿಯೂ ಮನುಷ್ಯನು ಮಹಾ ಅಕ್ರಮಿಯೂ ಕೃತಘ್ನನೂ ಆಗಿರುವನು.
(35) ಇಬ್ರಾಹೀಮ್ರು ಪ್ರಾರ್ಥಿಸಿದ ಸಂದರ್ಭ(ವನ್ನು ಸ್ಮರಿಸಿರಿ): “ಓ ನನ್ನ ಪ್ರಭೂ! ಈ ನಾಡನ್ನು (ಮಕ್ಕಾವನ್ನು) ಸುರಕ್ಷಿತತೆಯುಳ್ಳದ್ದಾಗಿ ಮಾಡು ಮತ್ತು ನನ್ನನ್ನೂ ನನ್ನ ಮಕ್ಕಳನ್ನೂ ವಿಗ್ರಹಾರಾಧನೆ ಮಾಡುವುದರಿಂದ ದೂರವಿರಿಸು”.
(36) “ನನ್ನ ಪ್ರಭೂ! ಖಂಡಿತವಾಗಿಯೂ ಅವು (ವಿಗ್ರಹಗಳು) ಜನರ ಪೈಕಿ ಅನೇಕರನ್ನು ಪಥಭ್ರಷ್ಟಗೊಳಿಸಿವೆ. ಆದುದರಿಂದ ಯಾರು ನನ್ನನ್ನು ಅನುಸರಿಸುವನೋ ಅವನು ನನ್ನವನಾಗಿರುವನು. ಯಾರಾದರೂ ನನಗೆ ಅವಿಧೇಯತೆ ತೋರಿದರೆ ಖಂಡಿತವಾಗಿಯೂ ನೀನು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವೆ”.
(37) “ನಮ್ಮ ಪ್ರಭೂ! ನಾನು ನನ್ನ ಸಂತತಿಯಲ್ಲಿ ಸೇರಿದವರನ್ನು (ಕೆಲವರನ್ನು) ಯಾವ ಕೃಷಿಯೂ ಇಲ್ಲದ ಕಣಿವೆಯೊಂದರಲ್ಲಿ ನಿನ್ನ ಪವಿತ್ರ ಭವನ(ಕಅ್ಬಾಲಯ)ದ ಬಳಿ ತಂಗುವಂತೆ ಮಾಡಿರುವೆನು.(465) ನಮ್ಮ ಪ್ರಭೂ! ಅವರು ನಮಾಝ್ ಸಂಸ್ಥಾಪಿಸುವ ಸಲುವಾಗಿ (ಹೀಗೆ ಮಾಡಿರುವೆನು). ಆದುದರಿಂದ ನೀನು ಜನರಲ್ಲಿ ಕೆಲವರ ಹೃದಯಗಳು ಅವರೆಡೆಗೆ ವಾಲುವಂತೆ ಮಾಡು ಮತ್ತು ಅವರಿಗೆ ಫಲವರ್ಗಗಳಿಂದ ಅನ್ನಾಧಾರವನ್ನು ನೀಡು.(466) ಅವರು ಕೃತಜ್ಞತೆ ಸಲ್ಲಿಸಲೂಬಹುದು”.
465. ಪ್ರವಾದಿ ಇಬ್ರಾಹೀಮ್(ಅ) ರವರು ತಮ್ಮ ಪುತ್ರರ ಪೈಕಿ ಒಬ್ಬರಾದ ಇಸ್ಮಾಈಲ್(ಅ) ರನ್ನು ಮಕ್ಕಾದಲ್ಲಿ ತಂಗುವಂತೆ ಮಾಡಿದರು. ಅವರ ಸಂತತಿಯು ಕಅ್ಬಾ ಪರಿಸರದಲ್ಲಿ ದೇವಪ್ರಜ್ಞೆಯುಳ್ಳವರಾಗಿ ಬಾಳುವುದಾಗಿತ್ತು ಅದರ ಗುರಿ. ಕೃಷಿ ಮಾಡಲು ಯೋಗ್ಯವಲ್ಲದ ಮಕ್ಕಾ ಭೂಮಿಯಲ್ಲಿ ಫಲವರ್ಗಗಳು ಲಭ್ಯವಾಗುವ ಸಾಧ್ಯತೆ ತೀರಾ ವಿರಳವಾಗಿತ್ತು. 466. ಪ್ರವಾದಿ ಇಬ್ರಾಹೀಮ್(ಅ) ರವರ ಪ್ರಾರ್ಥನೆಯನ್ನು ಅಲ್ಲಾಹು ಸ್ವೀಕರಿಸಿದನು. ನಂತರದ ಕಾಲಘಟ್ಟದಲ್ಲಿ ಮಕ್ಕಾ ಫಲವರ್ಗಗಳು ಹೇರಳವಾಗಿ ತಲುಪುವ ಒಂದು ಜನನಿಬಿಡ ಪ್ರದೇಶವಾಯಿತು.
(38) “ನಮ್ಮ ಪ್ರಭೂ! ನಾವು ಗೌಪ್ಯವಾಗಿಡುವುದನ್ನೂ, ಬಹಿರಂಗಗೊಳಿಸುವುದನ್ನೂ ನೀನು ಅರಿಯುವೆ. ಭೂಮಿಯಲ್ಲಾಗಲಿ, ಆಕಾಶದಲ್ಲಾಗಲಿ ಯಾವುದೇ ಒಂದು ವಸ್ತುವೂ ಅಲ್ಲಾಹುವಿನಿಂದ ಮರೆಯಾಗಿರಲಾರದು”.
(39) “ವೃದ್ಧಾಪ್ಯದಲ್ಲಿ ನನಗೆ ಇಸ್ಮಾಈಲ್ ಮತ್ತು ಇಸ್ಹಾಕ್ರನ್ನು ದಯಪಾಲಿಸಿದ ಅಲ್ಲಾಹುವಿಗೆ ಸ್ತುತಿ. ಖಂಡಿತವಾಗಿಯೂ ನನ್ನ ರಬ್ ಪ್ರಾರ್ಥನೆಯನ್ನು ಆಲಿಸುವವನಾಗಿರುವನು”.
(40) “ನನ್ನ ಪ್ರಭೂ! ನೀನು ನನ್ನನ್ನು ಮತ್ತು ನನ್ನ ಸಂತತಿಯಲ್ಲಿ ಸೇರಿದವರನ್ನು ನಮಾಝ್ ಸಂಸ್ಥಾಪಿಸುವವರನ್ನಾಗಿ ಮಾಡು. ನಮ್ಮ ಪ್ರಭೂ! ನನ್ನ ಪ್ರಾರ್ಥನೆಯನ್ನು ಸ್ವೀಕರಿಸು”.
(41) “ನಮ್ಮ ಪ್ರಭೂ! ವಿಚಾರಣೆಯನ್ನು ಸ್ಥಾಪಿಸಲಾಗುವ ದಿನದಂದು ನನಗೂ, ನನ್ನ ಮಾತಾಪಿತರಿಗೂ, ಸತ್ಯವಿಶ್ವಾಸಿಗಳಿಗೂ ಪಾಪಮುಕ್ತಿಯನ್ನು ನೀಡು”.
(42) ಅಕ್ರಮಿಗಳು ಮಾಡುತ್ತಿರುವವುಗಳ ಬಗ್ಗೆ ಅಲ್ಲಾಹು ಅಲಕ್ಷ್ಯನಾಗಿರುವನೆಂದು ತಾವೆಂದೂ ಭಾವಿಸದಿರಿ. ಅವನು ಅವರಿಗೆ ಕಾಲಾವಕಾಶವನ್ನು ನೀಡುತ್ತಿರುವುದು ಕಣ್ಣುಗಳು ಭೀತಿಯಿಂದ ದಿಟ್ಟಿಸಿ ನೋಡುವ (ಭಯಾನಕವಾದ) ದಿನವೊಂದರ ತನಕ ಮಾತ್ರವಾಗಿದೆ.
(43) (ಅಂದು) ಧಾವಂತದಿಂದ ಓಡುತ್ತಾ ತಲೆಗಳನ್ನು ಎತ್ತಿಹಿಡಿಯುತ್ತಾ (ಅವರು ಬರುವರು). ಅವರ ದೃಷ್ಟಿಗಳು ಅವರೆಡೆಗೆ ಮರಳಲಾರವು. ಅವರ ಹೃದಯಗಳು ಬರಿದಾಗಿರುವುವು.
(44) ಜನರೆಡೆಗೆ ಶಿಕ್ಷೆಯು ಬರುವ ದಿನವೊಂದರ ಬಗ್ಗೆ ತಾವು ಅವರಿಗೆ ಮುನ್ನೆಚ್ಚರಿಕೆಯನ್ನು ನೀಡಿರಿ. ಆಗ ಅಕ್ರಮವೆಸಗಿದವರು ಹೇಳುವರು: “ನಮ್ಮ ಪ್ರಭೂ! ಸಮೀಪದ ಒಂದು ಅವಧಿಯವರೆಗೆ ನಮಗೆ ಕಾಲಾವಕಾಶವನ್ನು ನೀಡು. ನಾವು ನಿನ್ನ ಕರೆಗೆ ಓಗೊಡುವೆವು ಮತ್ತು ಸಂದೇಶವಾಹಕರನ್ನು ಅನುಸರಿಸುವೆವು”. “ನಿಮಗೆ (ಪರಲೋಕದೆಡೆಗೆ) ಹೋಗಬೇಕಾಗಿ ಬರಲಾರದೆಂದು ಮುಂಚೆ ನೀವು ಆಣೆ ಹಾಕಿ ಹೇಳುತ್ತಿರಲಿಲ್ಲವೇ?” (ಎಂದು ಅವರಿಗೆ ಉತ್ತರಿಸಲಾಗುವುದು).
(45) ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗಿದವರ ವಾಸಸ್ಥಳಗಳಲ್ಲಿ ನೀವು ವಾಸಿಸಿದಿರಿ. ಅವರೊಂದಿಗೆ ನಾವು ಹೇಗೆ ವರ್ತಿಸಿದೆವು ಎಂಬುದು ನಿಮಗೆ ಸ್ಪಷ್ಟವಾಗಿ ತಿಳಿದಿತ್ತು. ನಾವು ನಿಮಗೆ ಉಪಮೆಗಳನ್ನೂ ವಿವರಿಸಿಕೊಟ್ಟಿದ್ದೆವು.
(46) ಅವರು ತಮ್ಮ ತಂತ್ರವನ್ನು ಹೂಡಿದರು. ಅವರಿಗಿರುವ ತಂತ್ರವು ಅಲ್ಲಾಹುವಿನ ಬಳಿಯಿದೆ.(467) ಅವರ ತಂತ್ರದಿಂದಾಗಿ ಪರ್ವತಗಳು ಚಲಿಸುವಂತೇನೂ ಆಗಿಲ್ಲ.
467. ‘ಮಕ್ರುಹುಂ’ ಎಂಬ ಪದಕ್ಕೆ ಅವರ ತಂತ್ರ ಅಥವಾ ಅವರಿಗಿರುವ ತಂತ್ರ ಎಂದು ಅರ್ಥ ನೀಡಬಹುದಾಗಿದೆ. ಅವರಿಗಿರುವ ಅಲ್ಲಾಹುವಿನ ತಂತ್ರವೆಂದರೆ ಅವರಿಗಾಗಿ ತಂತ್ರಪೂರ್ವಕ ಸಿದ್ಧಪಡಿಸಲಾದ ಶಿಕ್ಷೆಯಾಗಿದೆ. ಅವರ ತಂತ್ರವೆಂದು ಭಾಷಾಂತರಿಸುವಾಗ ತಂತ್ರದ ಫಲವನ್ನು ಉದ್ದೇಶಿಸಲಾಗುತ್ತದೆ.
(47) ಅಲ್ಲಾಹು ತನ್ನ ಸಂದೇಶವಾಹಕರಿಗೆ ನೀಡಿರುವ ವಾಗ್ದಾನವನ್ನು ಉಲ್ಲಂಘಿಸುವನು ಎಂದು ತಾವು ಭಾವಿಸದಿರಿ. ಖಂಡಿತವಾಗಿಯೂ ಅಲ್ಲಾಹು ಪ್ರತಾಪಶಾಲಿಯೂ ಶಿಕ್ಷಾಕ್ರಮ ಕೈಗೊಳ್ಳುವವನೂ ಆಗಿರುವನು.
(48) ಭೂಮಿಯು ಈ ಭೂಮಿಯಲ್ಲದ ಇನ್ನೊಂದಾಗಿಯೂ, ಅದರಂತೆ ಆಕಾಶಗಳೂ ಮಾರ್ಪಡುವ(468) ಮತ್ತು ಏಕೈಕನೂ ಸರ್ವಾಧಿಕಾರಿಯೂ ಆಗಿರುವ ಅಲ್ಲಾಹುವಿನೆಡೆಗೆ ಅವರೆಲ್ಲರೂ ಹೊರಟು ಬರುವ ದಿನ!
468. ಪರಲೋಕವು ಅಸ್ತಿತ್ವಕ್ಕೆ ಬರುವಾಗ ಭೂಮ್ಯಾಕಾಶಗಳ ವ್ಯವಸ್ಥೆಗಳೆಲ್ಲವೂ ಬದಲಾಗುವುದು ಎಂದು ಇದರಿಂದ ತಿಳಿದುಬರುತ್ತದೆ.
(49) ಅಂದು ಅಪರಾಧಿಗಳನ್ನು ಸಂಕೋಲೆಗಳಲ್ಲಿ ಪರಸ್ಪರ ಜೋಡಿಸಿ ಬಂಧಿಸಿರುವುದಾಗಿ ತಾವು ಕಾಣುವಿರಿ.
(50) ಅವರ ಉಡುಪುಗಳು ಕಪ್ಪು ಡಾಮರಿನದ್ದಾಗಿರುವುದು ಮತ್ತು ಅವರ ಮುಖಗಳನ್ನು ಬೆಂಕಿಯು ಮುಚ್ಚಿಕೊಳ್ಳುವುದು.
(51) ಅಲ್ಲಾಹು ಪ್ರತಿಯೊಬ್ಬ ವ್ಯಕ್ತಿಗೂ ಅವನು ಸಂಪಾದಿಸಿರುವುದರ ಪ್ರತಿಫಲವನ್ನು ನೀಡುವ ಸಲುವಾಗಿ. ಖಂಡಿತವಾಗಿಯೂ ಅಲ್ಲಾಹು ವೇಗವಾಗಿ ವಿಚಾರಣೆ ಮಾಡುವವನಾಗಿರುವನು.
(52) ಇದು ಮನುಷ್ಯರಿಗಿರುವ ಒಂದು ಸುಸ್ಪಷ್ಟ ಉಪದೇಶವಾಗಿದೆ. ಇದರ ಮೂಲಕ ಅವರಿಗೆ ಮುನ್ನೆಚ್ಚರಿಕೆ ನೀಡಲಾಗುವ ಸಲುವಾಗಿ, ಏಕೈಕ ಆರಾಧ್ಯನು ಅವನು ಮಾತ್ರವಾಗಿರುವನೆಂದು ಅವರು ಅರಿತುಕೊಳ್ಳುವ ಸಲುವಾಗಿ ಮತ್ತು ಬುದ್ಧಿವಂತರು ಚಿಂತಿಸಿ ಗ್ರಹಿಸುವ ಸಲುವಾಗಿ(ರುವ ಉಪದೇಶ).