(1) ತನ್ನ ದಾಸನ ಮೇಲೆ ಗ್ರಂಥವನ್ನು ಅವತೀರ್ಣಗೊಳಿಸಿದ ಅಲ್ಲಾಹುವಿಗೆ ಸ್ತುತಿ. ಅವನು ಅದರಲ್ಲಿ ಯಾವುದೇ ವಕ್ರತೆಯನ್ನುಂಟುಮಾಡಲಿಲ್ಲ.
(2) ಅದನ್ನು ನೇರವಾದ ವಿಧದಲ್ಲಾಗಿಸಿದನು. ಇದು ಅವನ ವತಿಯ ಕಠಿಣವಾದ ಶಿಕ್ಷೆಯ ಬಗ್ಗೆ ಮುನ್ನೆಚ್ಚರಿಕೆ ನೀಡುವ ಸಲುವಾಗಿ ಮತ್ತು ಸತ್ಕರ್ಮಗೈಯ್ಯುವ ಸತ್ಯವಿಶ್ವಾಸಿಗಳಿಗೆ ಉತ್ತಮವಾದ ಪ್ರತಿಫಲವಿದೆಯೆಂಬ ಶುಭವಾರ್ತೆಯನ್ನು ತಿಳಿಸುವ ಸಲುವಾಗಿದೆ.
(3) ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
(4) ‘ಅಲ್ಲಾಹು ಸಂತತಿಯನ್ನು ಮಾಡಿಕೊಂಡಿರುವನು’ ಎಂದು ಹೇಳಿದವರಿಗೆ ಮುನ್ನೆಚ್ಚರಿಕೆ ನೀಡುವ ಸಲುವಾಗಿಯೂ ಆಗಿದೆ.
(5) ಅವರಿಗಾಗಲಿ, ಅವರ ಪೂರ್ವಿಕರಿಗಾಗಲಿ ಅದರ ಬಗ್ಗೆ ಯಾವುದೇ ಅರಿವಿಲ್ಲ. ಅವರ ಬಾಯಿಯಿಂದ ಹೊರಬರುವ ಆ ಮಾತು ಗಂಭೀರವಾದುದಾಗಿದೆ. ಅವರು ಸುಳ್ಳನ್ನೇ ಹೊರತು ನುಡಿಯುವುದಿಲ್ಲ.
(6) ಆದ್ದರಿಂದ ಅವರು ಈ ಸಂದೇಶದಲ್ಲಿ ವಿಶ್ವಾಸವಿಡದಿದ್ದರೆ, ಅವರು ವಿಮುಖರಾಗಿ ಹೋಗಿರುವುದರಿಂದಾಗಿ (ಅದರ) ಸಂಕಟದಿಂದಾಗಿ ತಾವು ತಮ್ಮ ಜೀವಕ್ಕೆ ಅಪಾಯವನ್ನು ತಂದೊಡ್ಡುವವರಾಗಲೂ ಬಹುದು.(582)
582. ಜನರು ಸತ್ಯವನ್ನು ಸ್ವೀಕರಿಸದಿರುವುದರಿಂದ ಮನನೊಂದು ಸಂಕಟಪಡಬೇಕಾಗಿಲ್ಲವೆಂದು ಅಲ್ಲಾಹು ಪ್ರವಾದಿ(ಸ) ರನ್ನು ಸಾಂತ್ವನಪಡಿಸುತ್ತಿದ್ದಾನೆ. ಜನರನ್ನು ವಿಶ್ವಾಸಿಗಳನ್ನಾಗಿ ಮಾಡುವುದು ಅವರ ಹೊಣೆಯಲ್ಲ. ಅವರ ಹೊಣೆಯು ಸತ್ಯವನ್ನು ತಿಳಿಸಿಕೊಡುವುದು ಮಾತ್ರವಾಗಿದೆ.
(7) ಖಂಡಿತವಾಗಿಯೂ ನಾವು ಭೂಮಿಯ ಮೇಲಿರುವುದನ್ನು ಅದಕ್ಕೊಂದು ಅಲಂಕಾರವನ್ನಾಗಿ ಮಾಡಿರುವೆವು. ಮನುಷ್ಯರ ಪೈಕಿ ಅತ್ಯುತ್ತಮವಾಗಿ ಕರ್ಮವೆಸಗುವವರು ಯಾರೆಂಬುದನ್ನು ನಾವು ಪರೀಕ್ಷಿಸುವ ಸಲುವಾಗಿ.(583)
583. ಅಲ್ಲಾಹು ನೀಡಿದ ಜೀವನಾಲಂಕಾರಗಳೊಂದಿಗೆ ಸಹಜ ರೀತಿಯಲ್ಲಿ ಪ್ರತಿಕ್ರಿಯಿಸುವವರಾರೆಂದು ಪರೀಕ್ಷಿಸುವ ಸಲುವಾಗಿ.
(8) ಖಂಡಿತವಾಗಿಯೂ ಅದರ ಮೇಲಿರುವುದನ್ನು ನಾಶ ಮಾಡಿ ನಾವು ಅದನ್ನೊಂದು ಬರಡು ಪ್ರದೇಶವನ್ನಾಗಿ ಮಾಡುವೆವು.(584)
584. ಇದು ಲೋಕಾಂತ್ಯವಾಗುವಾಗ ಭೂಮಿಗೆ ಅಲ್ಲಾಹು ಮಾಡುವ ಬದಲಾವಣೆಯ ಬಗ್ಗೆಯಿರುವ ಸೂಚನೆಯಾಗಿದೆ.
(9) ಗುಹೆಯ ಮತ್ತು ‘ರಕೀಮ್’ನ ಜನರು ನಮ್ಮ ದೃಷ್ಟಾಂತಗಳ ಪೈಕಿ ಒಂದು ಅಚ್ಚರಿಯಾಗಿರುವರು ಎಂದು ತಾವು ಭಾವಿಸಿರುವಿರಾ?(585)
585. ಗುಹಾವಾಸಿಗಳ ಬಗ್ಗೆ ಕುರ್‌ಆನಿನ ವಿವರಣೆ ಇಲ್ಲಿಂದ ಆರಂಭವಾಗುತ್ತದೆ. ಗುಹಾವಾಸಿಗಳ ಚರಿತ್ರೆಯು ಕುರ್‌ಆನ್ ಅವತೀರ್ಣ ಕಾಲದಲ್ಲಿ ಅರಬಿಗಳ ಮಧ್ಯೆ ಮನೆಮಾತಾಗಿತ್ತು. ಅವರದನ್ನು ಬಹುದೊಡ್ಡ ಅದ್ಭುತವಾಗಿ ಗಣಿಸಿದ್ದರು. ಆದರೆ ಅಲ್ಲಾಹುವಿನ ಇನ್ನೂ ಅನೇಕ ಅದ್ಭುತಕರವಾದ ದೃಷ್ಟಾಂತಗಳಿವೆ. ಈ ಘಟನೆಯು ಅವುಗಳ ಪೈಕಿ ಅಷ್ಟೊಂದು ಅದ್ಭುತಕರವಲ್ಲದ ಒಂದಾಗಿದೆ. ‘ರಕೀಮ್’ ಎಂಬುದು ಆ ಗುಹೆಯು ಅಸ್ತಿತ್ವದಲ್ಲಿರುವ ಸ್ಥಳದ ಹೆಸರಾಗಿದೆ ಅಥವಾ ಗುಹಾವಾಸಿಗಳ ಹೆಸರುಗಳನ್ನು ಬರೆದಿಡಲಾದ ಹಲಗೆಯಾಗಿದೆ ಎಂದು ಹೇಳಲಾಗುತ್ತದೆ.
(10) ಆ ಯುವಕರು ಗುಹೆಯಲ್ಲಿ ಆಶ್ರಯ ಪಡೆದ ಸಂದರ್ಭ.(586) ಅವರು ಹೇಳಿದರು: ‘ನಮ್ಮ ಪ್ರಭೂ! ನಿನ್ನ ವತಿಯ ಕಾರುಣ್ಯವನ್ನು ನಮಗೆ ದಯಪಾಲಿಸು ಮತ್ತು ನಮ್ಮ ಕಾರ್ಯವನ್ನು ಸರಿಯಾದ ವಿಧದಲ್ಲಿ ನಿರ್ವಹಿಸಲು ನಮಗೆ ಅನುಕೂಲಮಾಡಿಕೊಡು’.
586. ಆ ಯುವಕರು ಅಚಂಚಲ ಏಕದೇವವಿಶ್ವಾಸಿಗಳಾಗಿದ್ದರು. ಆದರೆ ಆ ದೇಶವನ್ನು ಆಳುತ್ತಿದ್ದ ದಖ್ಯಾನೂಸ್ ಎಂಬ ಅರಸನು ಏಕದೇವವಿಶ್ವಾಸದ ಕಡು ವಿರೋಧಿಯಾಗಿದ್ದನು. ವಿಗ್ರಹಾರಾಧನೆ ಮಾಡಲು ಸಿದ್ಧರಾಗದವರನ್ನು ಕೊಂದು ಹಾಕಬೇಕೆಂದು ಅರಸನು ಅಪ್ಪಣೆ ಹೊರಡಿಸಿದಾಗ ಈ ಯುವಕರು ಪಲಾಯನ ಮಾಡಿ ಗುಹೆಯೊಳಗೆ ಆಶ್ರಯಪಡೆದರು.
(11) ಹೀಗೆ ನಾವು ಹಲವಾರು ವರ್ಷಗಳ ಕಾಲ ಆ ಗುಹೆಯಲ್ಲಿ ಅವರ ಕಿವಿಗಳನ್ನು ಮುಚ್ಚಿದೆವು (ಅವರನ್ನು ನಿದ್ದೆಗೆ ಶರಣಾಗಿಸಿದೆವು).(587)
587. ‘ದ್ವರಬ್‍ನಾ ಅಲಾ ಆಝಾನಿಹಿಮ್’ ಎಂಬುದರ ಭಾಷಿಕ ಅರ್ಥವು ನಾವು ಅವರ ಕಿವಿಗಳ ಮೇಲೆ ಹೊಡೆದೆವು ಎಂದಾಗಿದೆ. ಇದರ ತಾತ್ಪರ್ಯವು ಅವರನ್ನು ಒಂದು ವಿಶೇಷ ರೀತಿಯಲ್ಲಿ ನಿದ್ದೆಗಿಳಿಸಿದೆವು ಎಂದಾಗಿದೆ.
(12) ಅವರು (ಗುಹೆಯಲ್ಲಿ) ತಂಗಿದ ಅವಧಿಯ ಬಗ್ಗೆ ಎರಡು ಗುಂಪುಗಳ ಪೈಕಿ(588) ಖಚಿತವಾಗಿ ಅರಿಯುವವರು ಯಾರೆಂದು ತಿಳಿಯುವ ಸಲುವಾಗಿ ತರುವಾಯ ನಾವು ಅವರನ್ನು ಎಬ್ಬಿಸಿದೆವು.
588. ತಾವು ಎಷ್ಟು ಕಾಲ ಗುಹೆಯಲ್ಲಿ ತಂಗಿದೆವು ಎಂಬ ಬಗ್ಗೆ ಗುಹಾವಾಸಿಗಳು ಎರಡು ಅಭಿಪ್ರಾಯವನ್ನು ಹೊಂದಿದ್ದರು. ಎರಡು ಗುಂಪುಗಳು ಎಂಬ ಪದದ ಉದ್ದೇಶವು ಇದಾಗಿರಬಹುದು. ಗುಹಾವಾಸಿಗಳನ್ನು ಎಬ್ಬಿಸಲಾದ ಕಾಲದಲ್ಲಿ ಊರಿನಲ್ಲಿದ್ದ ಸತ್ಯವಿಶ್ವಾಸಿಗಳು ಮತ್ತು ಸತ್ಯನಿಷೇಧಿಗಳ ಬಗ್ಗೆ ಎರಡು ಗುಂಪುಗಳು ಎಂದು ಹೇಳಿರಲೂಬಹುದು.
(13) ಅವರ ವೃತ್ತಾಂತವನ್ನು ನಾವು ತಮಗೆ ನೈಜ ರೂಪದಲ್ಲಿ ವಿವರಿಸಿಕೊಡುವೆವು. ಅವರು ತಮ್ಮ ರಬ್‌ನಲ್ಲಿ ವಿಶ್ವಾಸವಿಟ್ಟಿದ್ದ ಕೆಲವು ಯುವಕರಾಗಿದ್ದರು. ನಾವು ಅವರಿಗೆ ಸನ್ಮಾರ್ಗವನ್ನು ಹೆಚ್ಚಿಸಿಕೊಟ್ಟೆವು.
(14) ‘ನಮ್ಮ ರಬ್ ಆಕಾಶಗಳ ಮತ್ತು ಭೂಮಿಯ ರಬ್ ಆಗಿರುವನು. ಅವನೊಂದಿಗಲ್ಲದೆ ಅನ್ಯ ಆರಾಧ್ಯರೊಂದಿಗೆ ನಾವೆಂದೂ ಪ್ರಾರ್ಥಿಸಲಾರೆವು. ಹಾಗೇನಾದರೂ (ಪ್ರಾರ್ಥಿಸಿದರೆ) ಖಂಡಿತವಾಗಿಯೂ ನಾವು ಅನ್ಯಾಯವಾದ ಮಾತನ್ನು ಹೇಳಿದವರಾಗುವೆವು’ ಎಂದು ಅವರು ಎದ್ದುನಿಂತು ಘೋಷಿಸಿದ ಸಂದರ್ಭದಲ್ಲಿ ನಾವು ಅವರ ಹೃದಯಗಳಿಗೆ ಸ್ಥಿರತೆಯನ್ನು ನೀಡಿದೆವು.
(15) ‘ನಮ್ಮ ಈ ಜನತೆ ಅವನ ಹೊರತಾಗಿ ಅನೇಕ ಆರಾಧ್ಯರನ್ನು ಮಾಡಿಕೊಂಡಿರುವರು. ಅವರ (ಆ ಆರಾಧ್ಯರ) ಬಗ್ಗೆ ಸ್ಪಷ್ಟವಾದ ಯಾವುದೇ ಪ್ರಮಾಣವನ್ನು ಇವರೇಕೆ ತರುತ್ತಿಲ್ಲ? ಅಲ್ಲಾಹುವಿನ ಮೇಲೆ ಸುಳ್ಳನ್ನು ಹೆಣೆದವನಿಗಿಂತಲೂ ದೊಡ್ಡ ಅಕ್ರಮಿ ಇನ್ನಾರಿರುವನು?’
(16) (ಅವರು ಪರಸ್ಪರ ಹೇಳಿದರು): ‘ಅವರನ್ನು ಮತ್ತು ಅಲ್ಲಾಹುವಿನ ಹೊರತು ಅವರು ಆರಾಧಿಸುತ್ತಿರುವವುಗಳನ್ನು ನೀವು ವರ್ಜಿಸಿರುವುದರಿಂದ ಆ ಗುಹೆಯಲ್ಲಿ ಆಶ್ರಯ ಪಡೆಯಿರಿ. ನಿಮ್ಮ ರಬ್ ಅವನ ಕಾರುಣ್ಯದಿಂದ ನಿಮಗೆ ಹೇರಳವಾಗಿ ದಯಪಾಲಿಸುವನು ಮತ್ತು ನಿಮ್ಮ ವಿಷಯದಲ್ಲಿ ಅವನು ಅನುಕೂಲತೆಯನ್ನು ಮಾಡಿಕೊಡುವನು’.
(17) ಸೂರ್ಯನು ಉದಯಿಸುವಾಗ ಅದು ಅವರ ಗುಹೆಯ ಬಲಭಾಗದೆಡೆಗೆ ಚಲಿಸುತ್ತಿರುವುದಾಗಿ ಮತ್ತು ಅದು ಅಸ್ತಮಿಸುವಾಗ ಅದು ಅವರನ್ನು ದಾಟಿ ಎಡಭಾಗದೆಡೆಗೆ ಚಲಿಸುತ್ತಿರುವುದಾಗಿ ತಾವು ಕಾಣುವಿರಿ. ಅವರು ಅದರ (ಗುಹೆಯ) ವಿಶಾಲವಾದ ಭಾಗದಲ್ಲಿರುವರು.(589) ಅದು ಅಲ್ಲಾಹುವಿನ ದೃಷ್ಟಾಂತಗಳಲ್ಲಿ ಸೇರಿದ್ದಾಗಿದೆ. ಅಲ್ಲಾಹು ಯಾರನ್ನು ಸನ್ಮಾರ್ಗದಲ್ಲಿ ಸೇರಿಸುವನೋ ಅವನು ಸನ್ಮಾರ್ಗವನ್ನು ಪಡೆದವನಾಗಿರುವನು. ಅವನು ಯಾರನ್ನು ದುರ್ಮಾರ್ಗದಲ್ಲಿ ಸೇರಿಸುವನೋ ಅವನನ್ನು ಸನ್ಮಾರ್ಗದೆಡೆಗೆ ತರುವ ಯಾವುದೇ ರಕ್ಷಕನನ್ನು ತಾವೆಂದೂ ಕಾಣಲಾರಿರಿ.
589. ಆ ಗುಹೆಯ ವಿನ್ಯಾಸವು ಹೇಗಿತ್ತೆಂದರೆ ಪೂರ್ವಾಹ್ನವಾಗಲಿ, ಮಧ್ಯಾಹ್ನವಾಗಲಿ ಬಿಸಿಲು ಅದರೊಳಗೆ ಪ್ರವೇಶಿಸುತ್ತಿರಲಿಲ್ಲ.
(18) ಅವರು ಎಚ್ಚರದಲ್ಲಿರುವರೆಂದು ತಾವು ಭಾವಿಸುವಿರಿ. ಆದರೆ ಅವರು ನಿದ್ರೆಯಲ್ಲಿರುವರು. ನಾವು ಅವರನ್ನು ಬಲಭಾಗಕ್ಕೂ ಎಡಭಾಗಕ್ಕೂ ಹೊರಳಿಸುತ್ತಿರುವೆವು. ಅವರ ನಾಯಿಯು ಗುಹೆಯ ಬಾಗಿಲಲ್ಲಿ ತನ್ನ ಎರಡು ಕೈಗಳನ್ನು ಚಾಚಿಕೊಂಡಿದೆ. ತಾವು ಅವರೆಡೆಗೆ ಇಣುಕಿ ನೋಡುತ್ತಿದ್ದರೆ ಅವರಿಂದ ಬೆನ್ನು ತಿರುಗಿಸಿ ಓಡುತ್ತಿದ್ದಿರಿ ಮತ್ತು ಅವರ ಬಗ್ಗೆ ಭಯವಿಹ್ವಲರಾಗಿ ಬಿಡುತ್ತಿದ್ದಿರಿ.
(19) ಹೀಗೆ ಅವರು ಪರಸ್ಪರ ಪ್ರಶ್ನಿಸುವ ಸಲುವಾಗಿ ನಾವು ಅವರನ್ನು ಎಬ್ಬಿಸಿದೆವು.(590) ಅವರ ಪೈಕಿ ಒಬ್ಬರು ಹೇಳಿದರು: ‘ನೀವು ಎಷ್ಟು ಕಾಲದವರೆಗೆ (ಗುಹೆಯಲ್ಲಿ) ತಂಗಿದಿರಿ?’ ಇತರರು ಹೇಳಿದರು: ‘ನಾವು ಒಂದು ದಿನ ಅಥವಾ ದಿನದ ಅಲ್ಪಭಾಗದಷ್ಟು ಮಾತ್ರ ತಂಗಿರುವೆವು’. ಇತರ ಕೆಲವರು ಹೇಳಿದರು: ‘ನೀವು ಎಷ್ಟು ಕಾಲದವರೆಗೆ ತಂಗಿದ್ದಿರಿ ಎಂಬ ಬಗ್ಗೆ ನಿಮ್ಮ ರಬ್ ಚೆನ್ನಾಗಿ ಅರಿತಿರುವನು. ಆದ್ದರಿಂದ ನಿಮ್ಮ ಪೈಕಿ ಒಬ್ಬನನ್ನು ನಿಮ್ಮ ಈ ಬೆಳ್ಳಿನಾಣ್ಯದೊಂದಿಗೆ ಪಟ್ಟಣಕ್ಕೆ ಕಳುಹಿಸಿರಿ. ಅಲ್ಲಿ ಯಾರ ಬಳಿ ಅತ್ಯುತ್ತಮವಾದ ಆಹಾರವಿರುವುದೆಂದು ನೋಡಿ ಅವನು ಅಲ್ಲಿಂದ ನಿಮಗಾಗಿ ಆಹಾರವನ್ನು ತರಲಿ. ಅವನು ಎಚ್ಚರವಹಿಸಲಿ. ನಿಮ್ಮ ಬಗ್ಗೆ ಅವನು ಯಾರಿಗೂ ತಿಳಿಸಿಕೊಡದಿರಲಿ’.
590. ಒಬ್ಬ ಕುರುಬನು ಗುಹೆಯ ಬಾಗಿಲನ್ನು ತೆರೆದಾಗ ಅವರು ನಿದ್ದೆಯಿಂದ ಎಚ್ಚೆತ್ತರೆಂದು ವ್ಯಾಖ್ಯಾನಕಾರರು ದಾಖಲಿಸಿದ್ದಾರೆ.
(20) ‘ನಿಮ್ಮ ಬಗ್ಗೆ ಅವರಿಗೇನಾದರೂ ಮಾಹಿತಿ ಸಿಕ್ಕಿದರೆ ಖಂಡಿತವಾಗಿಯೂ ಅವರು ನಿಮ್ಮನ್ನು ಕಲ್ಲೆಸೆದು ಸಾಯಿಸುವರು ಅಥವಾ ಅವರ ಧರ್ಮಕ್ಕೆ ಮರಳುವಂತೆ ನಿಮ್ಮನ್ನು ಬಲವಂತಪಡಿಸುವರು. ಹಾಗೇನಾದರೂ (ನೀವು ಮರಳಿದರೆ) ನೀವು ಎಂದಿಗೂ ಯಶಸ್ವಿಯಾಗಲಾರಿರಿ’.
(21) ಹೀಗೆ ಅಲ್ಲಾಹುವಿನ ವಾಗ್ದಾನವು ಸತ್ಯವಾಗಿದೆ ಮತ್ತು ಅಂತ್ಯದಿನದ ವಿಷಯದಲ್ಲಿ ಸಂದೇಹವೇ ಇಲ್ಲ ಎಂಬುದನ್ನು ಅವರು (ಜನರು) ಅರಿಯುವ ಸಲುವಾಗಿ ನಾವು ಅವರಿಗೆ ಅವರನ್ನು (ಗುಹಾವಾಸಿಗಳನ್ನು) ತೋರಿಸಿಕೊಟ್ಟೆವು.(591) ಅವರು ಗುಹಾವಾಸಿಗಳ ವಿಷಯದಲ್ಲಿ ಪರಸ್ಪರ ತರ್ಕಿಸುತ್ತಿದ್ದ ಸಂದರ್ಭ(ವನ್ನು ಸ್ಮರಿಸಿರಿ). ಆಗ ಅವರು (ಅವರ ಪೈಕಿ ಒಂದು ಗುಂಪು) ಹೇಳಿದರು: ‘ನೀವು ಅವರ ಮೇಲೆ ಒಂದು ಕಟ್ಟಡವನ್ನು ನಿರ್ಮಿಸಿರಿ. ಅವರ ಬಗ್ಗೆ ಅವರ ರಬ್‌ಗೆ ಚೆನ್ನಾಗಿ ತಿಳಿದಿದೆ’. ಅವರ ವಿಷಯದಲ್ಲಿ ಪ್ರಾಬಲ್ಯ ಪಡೆದವರು ಹೇಳಿದರು: ‘ಖಂಡಿತವಾಗಿಯೂ ನಾವು ಅವರ ಮೇಲೆ ಒಂದು ಮಸೀದಿಯನ್ನು ನಿರ್ಮಿಸುವೆವು’.(592)
591. ಆಹಾರ, ಪಾನೀಯಗಳನ್ನು ಸೇವಿಸದೆ ಮೂರು ಶತಮಾನಗಳ ಕಾಲ ನಿದ್ದೆ ಮಾಡಿದ ಗುಹಾವಾಸಿಗಳನ್ನು ಎಬ್ಬಿಸಿದ ಅಲ್ಲಾಹುವಿಗೆ ಲೋಕಾಂತ್ಯದ ನಂತರ ಜನರನ್ನು ಪುನರುತ್ಥಾನಗೊಳಿಸಲು ಯಾವುದೇ ಪ್ರಯಾಸವಿರಲಾರದೆಂದು ಈ ಘಟನೆಗೆ ಸಾಕ್ಷಿಯಾದ ಯಾರಿಗೂ ಮನದಟ್ಟಾಗಬಹುದು. 592. ಎಬ್ಬಿಸಲ್ಪಟ್ಟ ಯುವಕರು ಕೆಲವೇ ಸಮಯದೊಳಗೆ ಮರಣಹೊಂದಿದರೆಂದು ವ್ಯಾಖ್ಯಾನಕಾರರು ಹೇಳಿದ್ದಾರೆ. ಆಗ ಅವರ ನೆನಪು ಅಳಿದುಹೋಗದಿರಲು ಏನು ಮಾಡಬೇಕೆಂಬ ಬಗ್ಗೆ ಊರಿನವರಿಗೆ ತರ್ಕವುಂಟಾಯಿತು. ಅವರ ಗುಹೆಯ ಸಮೀಪ ಒಂದು ಕಟ್ಟಡವನ್ನು ನಿರ್ಮಿಸೋಣವೆಂದು ಕೆಲವರು ಹೇಳಿದರು. ಬಲಶಾಲಿಗಳಾದ ಕೆಲವರು ಅಲ್ಲಿ ಮಸೀದಿ ನಿರ್ಮಿಸಬೇಕೆಂದು ಹೇಳಿದರು.
(22) ಅವರು (ಜನರ ಪೈಕಿ ಒಂದು ಗುಂಪು) ಹೇಳುವರು: ‘ಅವರು ಮೂವರು ಮತ್ತು ನಾಲ್ಕನೆಯದು ಅವರ ನಾಯಿ’. ಇತರರು ಹೇಳುವರು: ‘ಅವರು ಐವರು ಮತ್ತು ಆರನೆಯದು ಅವರ ನಾಯಿ’. ಇವು ಅಗೋಚರ ವಿಷಯದ ಬಗ್ಗೆ ಊಹಿಸಿ ಹೇಳುವುದು ಮಾತ್ರವಾಗಿದೆ. ಇನ್ನು ಕೆಲವರು ಹೇಳುವರು: ‘ಅವರು ಏಳು ಜನರು ಮತ್ತು ಎಂಟನೆಯದು ಅವರ ನಾಯಿ’.(593) (ಓ ಪ್ರವಾದಿಯವರೇ!) ತಾವು ಹೇಳಿರಿ: ‘ಅವರ ಸಂಖ್ಯೆಯ ಬಗ್ಗೆ ನನ್ನ ರಬ್ ಚೆನ್ನಾಗಿ ಅರಿತಿರುವನು. ಅವರಲ್ಲಿ ಕೆಲವರ ಹೊರತು ಇನ್ನಾರೂ ಅವರ ಬಗ್ಗೆ ಅರಿತಿರಲಾರರು. ಆದ್ದರಿಂದ ಸ್ಪಷ್ಟವಾದ ಅರಿವಿನ ತಳಹದಿಯಲ್ಲೇ ವಿನಾ ತಾವು ಅವರ ವಿಷಯದಲ್ಲಿ ತರ್ಕಿಸದಿರಿ.(594) ಅವರ ಬಗ್ಗೆ ಜನರಲ್ಲಿ ಯಾರೊಂದಿಗೂ ಅಭಿಪ್ರಾಯವನ್ನು ಕೇಳದಿರಿ.
593. ಈ ಅಭಿಪ್ರಾಯವನ್ನು ಕುರ್‌ಆನ್ ವಿಮರ್ಶಿಸದಿರುವುದರಿಂದ ಇದೇ ಸರಿಯಾದುದೆಂದು ಭಾವಿಸಬಹುದಾಗಿದೆ. 594. ಚರಿತ್ರೆಯನ್ನು ವಿವರಿಸುವುದರಲ್ಲಿ ಕುರ್‌ಆನಿನ ಶೈಲಿ ಇತಿಹಾಸ ಗ್ರಂಥಗಳಿಗಿಂತ ವಿಭಿನ್ನವಾಗಿದೆ. ಸ್ಥಳ, ತಾರೀಕು, ಜನನ, ಮರಣ ಇತ್ಯಾದಿಗಳನ್ನು ವಿವರಿಸುವ ಬದಲು ಪ್ರತಿಯೊಂದು ಘಟನೆಯಿಂದಲೂ ನಮಗೆ ಉಪಯುಕ್ತವಾಗಿರುವ ನೀತಿಪಾಠವನ್ನು ಹೇಳುವುದಾಗಿದೆ ಕುರ್‌ಆನಿನ ಶೈಲಿ. ಕುರ್‌ಆನ್‍ನಿಂದಿರುವ ಸ್ಪಷ್ಟವಾದ ಅರಿವಿನ ಆಧಾರದಲ್ಲಿ ಮಾತನಾಡಬೇಕೇ ವಿನಾ ಅದರಾಚೆಗಿರುವ ಅನಗತ್ಯ ವಿಷಯಗಳ ಬಗ್ಗೆ ತರ್ಕಿಸಬಾರದೆಂದು ಅಲ್ಲಾಹು ಇಲ್ಲಿ ಪ್ರವಾದಿ(ಸ) ರವರನ್ನು ಎಚ್ಚರಿಸುತ್ತಿದ್ದಾನೆ.
(23) ಯಾವುದೇ ವಿಷಯದ ಬಗ್ಗೆಯೂ ‘ಖಂಡಿತವಾಗಿಯೂ ನಾನು ಅದನ್ನು ನಾಳೆ ಮಾಡುವೆನು’ ಎಂದು ಹೇಳದಿರಿ.
(24) ಅಲ್ಲಾಹು ಇಚ್ಛಿಸಿದರೆ (ಮಾಡುವೆನು) ಎಂದು ಹೇಳುವ ಹೊರತು. ತಾವು ಮರೆತರೆ (ನೆನಪಾದಾಗ) ತಮ್ಮ ರಬ್ಬನ್ನು ಸ್ಮರಿಸಿರಿ.(595) ‘ಸನ್ಮಾರ್ಗದೊಂದಿಗೆ ಇದಕ್ಕಿಂತಲೂ ಹೆಚ್ಚು ನಿಕಟವಾಗಿರುವ ಬದುಕಿಗೆ ನನ್ನ ರಬ್ ನನ್ನನ್ನು ಮುನ್ನಡೆಸಲೂಬಹುದು’ ಎಂದು ಹೇಳಿರಿ.
595. ಓರ್ವ ಸತ್ಯವಿಶ್ವಾಸಿ ಯಾವುದೇ ಕಾರ್ಯವನ್ನು ಮಾಡುವೆನೆಂದು ಹೇಳುವಾಗ ಇನ್‍ಶಾ ಅಲ್ಲಾಹ್ (ಅಲ್ಲಾಹು ಇಚ್ಛಿಸಿದರೆ) ಎಂದು ಹೇಳಬೇಕಾಗಿದೆ. ಅದು ಮರೆತುಹೋದರೆ ನೆನಪಾದಾಗ ಹೇಳಬೇಕಾಗಿದೆ.
(25) ಅವರು ತಮ್ಮ ಗುಹೆಯಲ್ಲಿ ಮುನ್ನೂರು ವರ್ಷಗಳ ಕಾಲ ತಂಗಿದರು. ಅವರು ಒಂಬತ್ತು ವರ್ಷಗಳನ್ನು ಹೆಚ್ಚಿಸಿದರು.(596)
596. ಚಾಂದ್ರಮಾನ ಪದ್ಧತಿಯನ್ನು ಅನುಸರಿಸಿ ಅರಬರು ಕಾಲಗಣನೆ ಮಾಡುತ್ತಾರೆ. ರೋಮನ್ನರು ಮತ್ತಿತರರು ಸೌರಮಾನ ಪದ್ಧತಿಯನ್ನು ಅನುಸರಿಸುತ್ತಾರೆ. 300 ಸೌರಮಾನ ವರ್ಷಗಳು 309 ಚಾಂದ್ರಮಾನ ವರ್ಷಗಳಾಗುತ್ತವೆ.
(26) ಹೇಳಿರಿ: ‘ಅವರು ತಂಗಿದ ಕಾಲದ ಬಗ್ಗೆ ಅಲ್ಲಾಹು ಚೆನ್ನಾಗಿ ಅರಿತಿರುವನು. ಆಕಾಶಗಳ ಮತ್ತು ಭೂಮಿಯ ಅಗೋಚರ ಜ್ಞಾನವಿರುವುದು ಅವನಲ್ಲಾಗಿದೆ. ಅವನು ಎಂತಹ ದೃಷ್ಟಿಯುಳ್ಳವನು; ಎಂತಹ ಶ್ರವಣವುಳ್ಳವನು! ಅವನ ಹೊರತು ಅವರಿಗೆ ಯಾವುದೇ ರಕ್ಷಕರೂ ಇಲ್ಲ. ತನ್ನ ಶಾಸನಾಧಿಕಾರದಲ್ಲಿ ಅವನು ಯಾರನ್ನೂ ಸಹಭಾಗಿಯನ್ನಾಗಿ ಮಾಡಲಾರನು’.
(27) ತಮಗೆ ದಿವ್ಯಸಂದೇಶವಾಗಿ ನೀಡಲಾಗಿರುವ ತಮ್ಮ ರಬ್‌ನ ಗ್ರಂಥವನ್ನು ಪಾರಾಯಣ ಮಾಡಿರಿ. ಅವನ ವಚನಗಳನ್ನು ಬದಲಾವಣೆ ಮಾಡುವವರಿಲ್ಲ. ಅವನ ಹೊರತು ಯಾವುದೇ ಅಭಯಸ್ಥಾನವನ್ನು ತಾವೆಂದೂ ಕಾಣಲಾರಿರಿ.
597. ಅಲ್ಲಾಹುವಿನ ಸಂತೃಪ್ತಿಯನ್ನು ಮಾತ್ರ ಆಶಿಸಿ ಎಂದರ್ಥ. 598. ಪ್ರವಾದಿ(ಸ) ರವರ ಸಹಚರರಾಗಿದ್ದ ಬಡಪಾಯಿಗಳನ್ನು ದೂರ ಅಟ್ಟಿದರೆ ನಾವು ತಮ್ಮೊಂದಿಗೆ ಸೇರುವೆವೆಂದು ಮಕ್ಕಾದ ಕೆಲವು ಕುರೈಶೀ ಮುಖಂಡರು ಪ್ರವಾದಿ(ಸ) ರವರಿಗೆ ವಾಗ್ದಾನವಿತ್ತಿದ್ದರು. ಅವರ ಮಾತಿಗೆ ಕಿವಿಗೊಡಬಾರದೆಂದು ಅಲ್ಲಾಹು ಇಲ್ಲಿ ತಿಳಿಸುತ್ತಿರುವನು.
(28) ತಮ್ಮ ರಬ್‌ನ ಮುಖವನ್ನು ಆಶಿಸಿ(597) ಬೆಳಗ್ಗೆ ಮತ್ತು ಸಂಜೆ ಅವನೊಂದಿಗೆ ಪ್ರಾರ್ಥಿಸುತ್ತಿರುವವರ ಜೊತೆಗೆ ತಾವು ತಮ್ಮ ಮನಸ್ಸನ್ನು ತಾಳ್ಮೆಯೊಂದಿಗೆ ನಿಲ್ಲಿಸಿರಿ. ಐಹಿಕ ಜೀವನದ ಅಲಂಕಾರಗಳನ್ನು ಆಶಿಸಿ ತಮ್ಮ ಕಣ್ಣುಗಳು ಅವರನ್ನು ದಾಟಿ ಹೋಗದಿರಲಿ. ನಾವು ಯಾರ ಹೃದಯವನ್ನು ನಮ್ಮ ಸ್ಮರಣೆಯಿಂದ ಅಲಕ್ಷ್ಯಗೊಳಿಸಿರುವೆವೋ, ಯಾರು ಸ್ವೇಚ್ಛೆಯನ್ನು ಹಿಂಬಾಲಿಸುವನೋ ಮತ್ತು ಯಾರ ವಿಷಯವು ಮಿತಿಮೀರಿ ಹೋಗಿರುವುದೋ ಅವನನ್ನು ತಾವು ಅನುಸರಿಸದಿರಿ.(598)
(29) ಹೇಳಿರಿ: ‘ಸತ್ಯವು ನಿಮ್ಮ ರಬ್‌ನ ವತಿಯಿಂದಾಗಿದೆ’. ಆದ್ದರಿಂದ (ವಿಶ್ವಾಸವಿಡಲು) ಇಚ್ಛೆಯುಳ್ಳವರು ವಿಶ್ವಾಸವಿಡಲಿ ಮತ್ತು (ಅವಿಶ್ವಾಸವಿಡಲು) ಇಚ್ಛೆಯುಳ್ಳವರು ಅವಿಶ್ವಾಸವಿಡಲಿ. ಅಕ್ರಮಿಗಳಿಗೆ ನಾವು ನರಕಾಗ್ನಿಯನ್ನು ಸಿದ್ಧಗೊಳಿಸಿರುವೆವು. ಅದರ ಗೋಡೆಗಳು ಅವರನ್ನು ಆವರಿಸಿಕೊಂಡಿರುವುದು. ಅವರು ನೀರನ್ನು ಬೇಡುವಾಗ ಕಾಯಿಸಿದ ಲೋಹದ್ರಾವಕದಂತಿರುವ ನೀರನ್ನು ಅವರಿಗೆ ಕುಡಿಯಲು ನೀಡಲಾಗುವುದು. ಅದು ಅವರ ಮುಖಗಳನ್ನು ಸುಟ್ಟು ಹಾಕುವುದು. ಆ ಪಾನೀಯ ಎಷ್ಟು ನಿಕೃಷ್ಟವಾದುದು! ಆ ವಾಸಸ್ಥಳ ಎಷ್ಟು ನಿಕೃಷ್ಟವಾದುದು!.
(30) ಖಂಡಿತವಾಗಿಯೂ ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರು ಯಾರೋ ಅಂತಹ ಸತ್ಕರ್ಮ ಮಾಡುವ ಯಾರ ಪ್ರತಿಫಲವನ್ನೂ ಖಂಡಿತವಾಗಿಯೂ ನಾವು ವ್ಯರ್ಥಗೊಳಿಸಲಾರೆವು.
(31) ಅಂತಹವರಿಗೆ ವಾಸಿಸಲು ಶಾಶ್ವತವಾದ ಸ್ವರ್ಗೋದ್ಯಾನಗಳಿವೆ. ಅವರ ತಳಭಾಗದಿಂದ ನದಿಗಳು ಹರಿಯುತ್ತಿರುವುವು. ಅಲ್ಲಿ ಅವರಿಗೆ ಚಿನ್ನದ ಬಳೆಗಳನ್ನು ತೊಡಿಸಲಾಗುವುದು. ನಯವಾದ ಮತ್ತು ದಪ್ಪವಾದ ಹಸಿರು ರೇಷ್ಮೆ ಉಡುಪುಗಳನ್ನು ಅವರು ಧರಿಸುವರು. ಅಲ್ಲಿ ಅವರು ಅಲಂಕರಿಸಿದ ಮಂಚಗಳಲ್ಲಿ ಒರಗಿ ಕುಳಿತು ವಿಶ್ರಾಂತಿ ಪಡೆಯುತ್ತಿರುವರು. ಆ ಪ್ರತಿಫಲ ಎಷ್ಟು ಉತ್ಕೃಷ್ಟ ವಾದುದು! ಆ ವಾಸಸ್ಥಳ ಎಷ್ಟು ಉತ್ತಮವಾದುದು!
(32) ತಾವು ಅವರಿಗೆ ಇಬ್ಬರು ವ್ಯಕ್ತಿಗಳ ಉದಾಹರಣೆಯನ್ನು ತಿಳಿಸಿಕೊಡಿರಿ. ಅವರಲ್ಲೊಬ್ಬನಿಗೆ ನಾವು ಎರಡು ದ್ರಾಕ್ಷಿತೋಟಗಳನ್ನು ಮಾಡಿಕೊಟ್ಟೆವು. ಅವುಗಳನ್ನು (ತೋಟಗಳನ್ನು) ನಾವು ಖರ್ಜೂರ ಮರಗಳಿಂದ ಆವರಿಸಿದೆವು. ಅವುಗಳ ಮಧ್ಯೆ (ತೋಟಗಳ ಮಧ್ಯೆ) ನಾವು ಧಾನ್ಯದ ಕೃಷಿಯನ್ನೂ ಮಾಡಿಕೊಟ್ಟೆವು.
(33) ಎರಡು ತೋಟಗಳೂ ಅವುಗಳ ಫಲಗಳನ್ನು ನೀಡುತ್ತಿದ್ದವು. ಅದರಲ್ಲಿ ಅವು ಯಾವುದೇ ಕೊರತೆಯನ್ನೂ ತೋರಿಸುತ್ತಿರಲಿಲ್ಲ. ಅವುಗಳ ಮಧ್ಯೆ ನಾವು ಒಂದು ಹೊಳೆಯನ್ನೂ ಹರಿಸಿದೆವು.
(34) ಅವನಿಗೆ ಹಲವು ಆದಾಯಗಳಿದ್ದವು. ತನ್ನ ಗೆಳೆಯನೊಂದಿಗೆ ಸಂಭಾಷಣೆ ಮಾಡುತ್ತಿರುವಾಗ ಅವನು ಹೇಳಿದನು: ‘ಸಂಪತ್ತಿನಲ್ಲಿ ಮತ್ತು ಜನಬಲದಲ್ಲಿ ನಾನು ನಿನಗಿಂತಲೂ ಮಿಗಿಲಾಗಿರುವೆನು’.
(35) ಸ್ವತಃ ತನ್ನ ಮೇಲೆ ಅಕ್ರಮವೆಸಗಿದವನಾಗಿರುತ್ತಾ ಅವನು ತನ್ನ ತೋಟವನ್ನು ಪ್ರವೇಶಿಸಿ ಹೇಳಿದನು: ‘ಇದು ಎಂದೆಂದಿಗೂ ನಾಶವಾಗಿ ಹೋಗಬಹುದೆಂದು ನಾನು ಭಾವಿಸಲಾರೆನು.
(36) ಅಂತ್ಯಘಳಿಗೆಯು ಸಂಭವಿಸುವುದೆಂದೂ ನಾನು ಭಾವಿಸುವುದಿಲ್ಲ. ಇನ್ನು ನನ್ನನ್ನು ನನ್ನ ರಬ್‌ನೆಡೆಗೆ ಮರಳಿಸಲ್ಪಟ್ಟರೂ, ಮರಳುವುದಕ್ಕಾಗಿ ನನಗೆ ಖಂಡಿತವಾಗಿಯೂ ಇದಕ್ಕಿಂತಲೂ ಉತ್ತಮವಾಗಿರುವುದು ಸಿಗುವುದು’.(599)
599. ಪರಲೋಕವೆಂಬುದು ಇದ್ದರೂ ಕೂಡ ಅಲ್ಲಿ ತನಗೆ ಸಿಗುವ ಸ್ಥಾನ ಕೀಳ್ಮಟ್ಟದ್ದಾಗಿರಲಾರದು ಎಂದಾಗಿತ್ತು ಅವನ ಭಾವನೆ.
(37) ಅವನೊಂದಿಗೆ ಸಂಭಾಷಣೆ ಮಾಡುತ್ತಿರುವಾಗ ಅವನ ಗೆಳೆಯನು ಹೇಳಿದನು: ‘ನಿನ್ನನ್ನು ಮಣ್ಣಿನಿಂದ, ತರುವಾಯ ವೀರ್ಯಕೋಶದಿಂದ ಸೃಷ್ಟಿಸಿದ, ತದನಂತರ ನಿನ್ನನ್ನು ಒಬ್ಬ ಮನುಷ್ಯನನ್ನಾಗಿ ರಚಿಸಿದವನನ್ನು ನೀನು ನಿಷೇಧಿಸುತ್ತಿರುವೆಯಾ?
(38) ಆದರೆ ಅವನು -ಅಲ್ಲಾಹು- ನನ್ನ ರಬ್ ಆಗಿರುವನು. ನಾನು ನನ್ನ ರಬ್‌ನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡಲಾರೆನು.
(39) ನೀನು ನಿನ್ನ ತೋಟವನ್ನು ಪ್ರವೇಶಿಸಿದಾಗ ‘ಇದು ಅಲ್ಲಾಹು ಇಚ್ಛಿಸಿರುವುದಾಗಿದೆ. ಅಲ್ಲಾಹುವಿನಿಂದಲ್ಲದೆ ಯಾವುದೇ ಶಕ್ತಿಯೂ ಇಲ್ಲ’ ಎಂದು ನಿನಗೆ ಹೇಳಬಾರದಿತ್ತೇ? ಸಂಪತ್ತು ಮತ್ತು ಸಂತತಿಯಲ್ಲಿ ನನ್ನನ್ನು ನೀನು ನಿನಗಿಂತಲೂ ಕಡಿಮೆಯವನಾಗಿ ಕಾಣುತ್ತಿರುವುದಾದರೆ.
(40) ನನ್ನ ರಬ್ ನನಗೆ ನಿನ್ನ ತೋಟಕ್ಕಿಂತಲೂ ಉತ್ತಮವಾಗಿರುವುದನ್ನು ನೀಡಲೂಬಹುದು ಮತ್ತು ನಿನ್ನ ತೋಟಕ್ಕೆ ಅವನು ಆಕಾಶದಿಂದ ಶಿಕ್ಷೆಯನ್ನು ಕಳುಹಿಸಿ ಅದು ಜಾರುವ ನೆಲವಾಗಿ ಮಾರ್ಪಡಲೂಬಹುದು.
(41) ಅಥವಾ ನಿನಗೆ ಎಂದಿಗೂ ಹುಡುಕಿ ತರಲು ಸಾಧ್ಯವಾಗದ ರೀತಿಯಲ್ಲಿ ಅದರ ನೀರು ಬತ್ತಿಹೋಗಲೂ ಬಹುದು’.
(42) ಅವನ ಫಲಸಮೃದ್ಧಿಯು (ವಿನಾಶದಿಂದ) ಆವರಿಸಲ್ಪಟ್ಟಿತು. ಅವು (ತೋಟಗಳು) ಅವುಗಳ ಚಪ್ಪರಗಳ ಸಹಿತ ಕುಸಿದು ಬಿದ್ದಿರುವಾಗ, ತಾನು ಅದಕ್ಕೆ ಮಾಡಿದ ಖರ್ಚಿಗಾಗಿ ಅವನು (ಹತಾಶೆಯಿಂದ) ಕೈಗಳನ್ನು ತಿರುಗಿಸತೊಡಗಿದನು. ಅವನು ಹೇಳಿದನು: ‘ನಾನು ನನ್ನ ರಬ್‌ನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!’
(43) ಅಲ್ಲಾಹುವಿನ ಹೊರತು ಅವನಿಗೆ ಸಹಾಯ ಮಾಡಲು ಯಾವುದೇ ಗುಂಪು ಅವನಿಗಿರಲಿಲ್ಲ. (ಸ್ವತಃ) ಕಾಪಾಡಿಕೊಳ್ಳಲೂ ಅವನಿಂದಾಗಲಿಲ್ಲ.
(44) ಅಲ್ಲಿ ರಕ್ಷಾಧಿಕಾರವಿರುವುದು ನೈಜ ಆರಾಧ್ಯನಾಗಿರುವ ಅಲ್ಲಾಹುವಿಗೆ ಮಾತ್ರವಾಗಿದೆ. ಅವನು ಉತ್ತಮ ಪ್ರತಿಫಲವನ್ನು ನೀಡುವವನೂ ಉತ್ತಮ ಪರ್ಯಾವಸಾನದೆಡೆಗೆ ತಲುಪಿಸುವವನೂ ಆಗಿರುವನು.
(45) (ಓ ಪ್ರವಾದಿಯವರೇ!) ಐಹಿಕ ಜೀವನದ ಉದಾಹರಣೆಯನ್ನು ತಾವು ಅವರಿಗೆ ವಿವರಿಸಿಕೊಡಿರಿ. ನಾವು ಆಕಾಶದಿಂದ ನೀರನ್ನು ಇಳಿಸಿದೆವು. ತರುವಾಯ ಭೂಮಿಯ ಸಸ್ಯಗಳು ಅದರೊಂದಿಗೆ ಬೆರೆತು ಬೆಳೆದವು. ತರುವಾಯ ಅವು ಗಾಳಿಗೆ ಹಾರಿ ಹೋಗುವಂತಹ ಧೂಳಿಗಳಾಗಿ ಮಾರ್ಪಟ್ಟವು. (ಐಹಿಕ ಜೀವನವು ಹೀಗೆಯೇ ಆಗಿದೆ). ಅಲ್ಲಾಹು ಸಕಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.
(46) ಸಂಪತ್ತು ಮತ್ತು ಸಂತತಿಗಳು ಐಹಿಕ ಜೀವನದ ಅಲಂಕಾರಗಳಾಗಿವೆ.(600) ಆದರೆ ನೆಲೆನಿಲ್ಲುವ ಸತ್ಕರ್ಮಗಳು ತಮ್ಮ ರಬ್‌ನ ಬಳಿ ಅತ್ಯುತ್ತಮವಾದ ಪ್ರತಿಫಲವಿರುವಂತದ್ದೂ ಅತ್ಯುತ್ತಮವಾದ ನಿರೀಕ್ಷೆಯನ್ನು ನೀಡುವಂತದ್ದೂ ಆಗಿವೆ.
600. ಸಂಪತ್ತು ಮತ್ತು ಸಂತತಿಯನ್ನು ಪ್ರೀತಿಸುವುದು ಸ್ವಾಭಾವಿಕವಾಗಿದೆ. ಅದು ತಪ್ಪಲ್ಲ. ಆದರೆ ವಿಶ್ವಾಸಿಗಳು ಆದ್ಯತೆ ನೀಡಬೇಕಾದುದು ಶಾಶ್ವತವಾದ ಫಲವನ್ನು ನೀಡುವ ಸತ್ಕರ್ಮಗಳಿಗಾಗಿರಬೇಕು.
(47) ನಾವು ಪರ್ವತಗಳನ್ನು ಚಲಿಸುವಂತೆ ಮಾಡುವ ಮತ್ತು ತಾವು ಭೂಮಿಯನ್ನು ಸಮತಟ್ಟಾದ ಬಯಲಾಗಿ ಕಾಣುವ ಹಾಗೂ ಅವರಲ್ಲಿ (ಮನುಷ್ಯರಲ್ಲಿ) ಒಬ್ಬರನ್ನೂ ಬಿಡದೆ ನಾವು ಅವರನ್ನು ಒಟ್ಟುಗೂಡಿಸುವ ದಿನ!(601)
601. ಪುನರುತ್ಥಾನ ದಿನ.
(48) ಅವರನ್ನು ತಮ್ಮ ರಬ್‌ನ ಮುಂದೆ ಸಾಲು ಸಾಲಾಗಿ ಪ್ರದರ್ಶಿಸಲಾಗುವುದು. (ಅಲ್ಲಾಹು ಹೇಳುವನು): ‘ನಾವು ನಿಮ್ಮನ್ನು ಮೊದಲ ಬಾರಿ ಸೃಷ್ಟಿಸಿದಂತೆಯೇ ನೀವು ನಮ್ಮ ಬಳಿಗೆ ಬಂದಿರುವಿರಿ. ಆದರೆ ನಾವು ನಿಮಗೆ ನಿಶ್ಚಿತ ಸಮಯವನ್ನು(602) ಎಂದೂ ಮಾಡಿಕೊಡಲಾರೆವು ಎಂದು ನೀವು ವಾದಿಸುತ್ತಿದ್ದಿರಿ’.
602. ನಿಶ್ಚಿತ ಸಮಯವು ಸರ್ವ ಕರ್ಮಗಳನ್ನೂ ಸೂಕ್ಷ್ಮವಾಗಿ ವಿಚಾರಣೆ ಮಾಡಿ ಪ್ರತಿಫಲವನ್ನು ನೀಡುವ ಸಮಯವಾಗಿದೆ.
(49) (ಕರ್ಮಗಳ) ಗ್ರಂಥವನ್ನು ಇಡಲಾಗುವುದು. ಆಗ ಅದರಲ್ಲಿರುವುದರ ಬಗ್ಗೆ ಭಯಭೀತರಾಗಿರುವ ಸ್ಥಿತಿಯಲ್ಲಿ ತಾವು ಅಪರಾಧಿಗಳನ್ನು ಕಾಣುವಿರಿ. ಅವರು ಹೇಳುವರು: ‘ಅಯ್ಯೋ! ನಮ್ಮ ಪಾಡೇ! ಇದೆಂತಹ ಗ್ರಂಥ? ಇದು ಚಿಕ್ಕದು ಮತ್ತು ದೊಡ್ಡದಾಗಿರುವ ಏನನ್ನೂ ನಿಖರವಾಗಿ ದಾಖಲಿಸದೆ ಬಿಟ್ಟಿಲ್ಲವಲ್ಲ!’. ತಾವು ಮಾಡಿರುವುದೆಲ್ಲವೂ ಅದರಲ್ಲಿ ಅಸ್ತಿತ್ವದಲ್ಲಿರುವುದಾಗಿ ಅವರು ಕಾಣುವರು. ತಮ್ಮ ರಬ್ ಯಾರೊಂದಿಗೂ ಅನ್ಯಾಯವೆಸಗಲಾರನು.
(50) ‘ನೀವು ಆದಮ್‍ರಿಗೆ ಸಾಷ್ಟಾಂಗವೆರಗಿರಿ’ ಎಂದು ನಾವು ಮಲಕ್‍ಗಳೊಂದಿಗೆ ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ). ಅವರು ಸಾಷ್ಟಾಂಗ ಮಾಡಿದರು. ಇಬ್ಲೀಸನ ಹೊರತು. ಅವನು ಜಿನ್ನ್‌ಗಳಲ್ಲಿ ಸೇರಿದವನಾಗಿದ್ದನು. ತನ್ನ ರಬ್‌ನ ಆದೇಶವನ್ನು ಅವನು ಧಿಕ್ಕರಿಸಿದನು. ಅವರು ನಿಮ್ಮ ಶತ್ರುಗಳಾಗಿದ್ದೂ ಸಹ ನೀವು ನನ್ನ ಹೊರತು ಅವನನ್ನು ಮತ್ತು ಅವನ ಸಂತತಿಗಳನ್ನು ರಕ್ಷಕರನ್ನಾಗಿ ಮಾಡಿಕೊಳ್ಳುವಿರಾ? (ಅಲ್ಲಾಹುವಿಗೆ) ಬದಲಿಯಾಗಿ ಅಕ್ರಮಿಗಳಿಗೆ ಸಿಕ್ಕಿದ್ದು ಎಷ್ಟು ನಿಕೃಷ್ಟವಾದುದು!
(51) ಆಕಾಶಗಳ ಮತ್ತು ಭೂಮಿಯ ಸೃಷ್ಟಿಗೆ ಅಥವಾ ಸ್ವತಃ ಅವರ ಸೃಷ್ಟಿಗೆ ನಾವು ಅವರನ್ನು ಸಾಕ್ಷಿಗಳನ್ನಾಗಿ ಮಾಡಿಲ್ಲ. ದಾರಿಗೆಡಿಸುವವರನ್ನು ನಾನು ಸಹಾಯಕರನ್ನಾಗಿ ಮಾಡಿಕೊಳ್ಳುವುದೂ ಇಲ್ಲ.(603)
603. ಅಲ್ಲಾಹುವಿಗೆ ಸಹಾಯಕರ ಅಗತ್ಯವಿಲ್ಲ. ದಾರಿಗೆಡಿಸುವ ಸೈತಾನರನ್ನು ಅವನೆಂದೂ ಸಹಾಯಕರನ್ನಾಗಿ ಮಾಡಿಕೊಳ್ಳಲಾರನು.
(52) ‘ನನ್ನ ಸಹಭಾಗಿಗಳೆಂದು ನೀವು ವಾದಿಸುತ್ತಿದ್ದವರನ್ನು ಕರೆಯಿರಿ’ ಎಂದು ಅವನು (ಅಲ್ಲಾಹು) ಹೇಳುವ ದಿನ (ಗಮನಾರ್ಹವಾಗಿದೆ). ಆಗ ಅವರು ಅವರನ್ನು ಕರೆಯುವರು. ಆದರೆ ಅವರು ಅವರಿಗೆ ಉತ್ತರವನ್ನು ನೀಡಲಾರರು. ನಾವು ಅವರ ಮಧ್ಯೆ ವಿನಾಶದ ಒಂದು ಕಂದರವನ್ನುಂಟು ಮಾಡುವೆವು.(604)
604. ‘ಜಅಲ್‍ನಾ ಬೈನಹುಮ್ ಮೌಬಿಕನ್’ ಎಂಬ ವಾಕ್ಯವು ಹಲವಾರು ವಿಧದಲ್ಲಿ ವ್ಯಾಖ್ಯಾನಿಸಲ್ಪಟ್ಟಿದೆ. ಪ್ರಾರ್ಥಿಸುವವರ ಮತ್ತು ಪ್ರಾರ್ಥಿಸಲ್ಪಡುವವರ ಮಧ್ಯೆ ವಿನಾಶಕಾರಿಯಾದ ನರಕವಿರುವುದು, ಪ್ರಾರ್ಥಿಸಲ್ಪಡುವ ಸಜ್ಜನರ ಮತ್ತು ಪ್ರಾರ್ಥಿಸುವ ಬಹುದೇವಾರಾಧಕರ ಮಧ್ಯೆ ವಿನಾಶಕರವಾದ ದೂರ (ತಲುಪಲು ಪ್ರಯತ್ನಿಸುವವರು ದಣಿದು ಹೋಗುವಷ್ಟು ದೂರ) ಇರುವುದು, ಪ್ರಾರ್ಥಿಸಲ್ಪಡುವ ಮಿಥ್ಯದೇವರುಗಳು ಮತ್ತು ಪ್ರಾರ್ಥಿಸುವವರ ನಡುವಿನ ಸಂಬಂಧವು ನಾಶಕ್ಕೆ ಹೇತುವಾಗುವುದು ಇತ್ಯಾದಿ ಪ್ರಮುಖ ವ್ಯಾಖ್ಯಾನಗಳಾಗಿವೆ.
(53) ಅಪರಾಧಿಗಳು ನರಕವನ್ನು ನೇರವಾಗಿ ಕಾಣುವರು. ಖಂಡಿತವಾಗಿಯೂ ತಾವು ಅದರಲ್ಲಿ ಬೀಳಲಿರುವೆವೆಂದು ಅವರಿಗೆ ಖಾತ್ರಿಯಾಗುವುದು. ಅದರಿಂದ ಪಾರಾಗಲು ಯಾವುದೇ ಮಾರ್ಗವನ್ನೂ ಅವರು ಕಾಣಲಾರರು.
(54) ಖಂಡಿತವಾಗಿಯೂ ಜನರಿಗೋಸ್ಕರ ಸರ್ವ ವಿಧದ ಉಪಮೆಗಳನ್ನೂ ನಾವು ಈ ಕುರ್‌ಆನಿನಲ್ಲಿ ನಾನಾ ವಿಧಗಳಲ್ಲಿ ವಿವರಿಸಿಕೊಟ್ಟಿರುವೆವು. ಆದರೆ ಮನುಷ್ಯನು ಅತಿ ಹೆಚ್ಚು ತರ್ಕಿಸುವವನಾಗಿರುವನು.
(55) ಮಾರ್ಗದರ್ಶನವು ತಮ್ಮ ಬಳಿಗೆ ಬಂದಾಗ ಅದರಲ್ಲಿ ವಿಶ್ವಾಸವಿಡಲು ಮತ್ತು ತಮ್ಮ ರಬ್‌ನೊಂದಿಗೆ ಪಾಪಮುಕ್ತಿಯನ್ನು ಬೇಡಲು ಜನರಿಗೆ ಯಾವುದೂ ತಡೆಯಾಗಿರಲಿಲ್ಲ, ಪೂರ್ವಿಕರ ವಿಷಯದಲ್ಲಿ ಜರುಗಿದ ಅದೇ ಕ್ರಮವು ತಮಗೂ ಬರಬೇಕು ಅಥವಾ ಶಿಕ್ಷೆಯು ತಮ್ಮೆಡೆಗೆ ನೇರವಾಗಿ ಬರಬೇಕು ಎಂಬ ಅವರ ನಿಲುವಿನ ಹೊರತು.(605)
605. ಅಲ್ಲಾಹುವಿನ ಶಿಕ್ಷೆಯ ಬಗ್ಗೆ ಪ್ರವಾದಿಗಳು ಮುನ್ನೆಚ್ಚರಿಕೆ ನೀಡಿದಾಗಲೆಲ್ಲಾ ಆ ಶಿಕ್ಷೆಯು ಬರಲಿ, ಅದನ್ನು ನೋಡಿದ ನಂತರ ನಾವು ವಿಶ್ವಾಸವಿಡುತ್ತೇವೆ ಎಂದು ಸತ್ಯನಿಷೇಧಿಗಳು ಪ್ರತಿಕ್ರಿಯಿಸುತ್ತಿದ್ದರು. ಶಿಕ್ಷೆಯು ಬರುವಾಗ ಅವರಿಗೆ ಸ್ವಲ್ಪವೂ ಕಾಲಾವಕಾಶ ನೀಡಲಾಗುತ್ತಿರಲಿಲ್ಲ.
(56) ಶುಭವಾರ್ತೆ ತಿಳಿಸುವವರಾಗಿ ಮತ್ತು ಮುನ್ನೆಚ್ಚರಿಕೆ ನೀಡುವವರಾಗಿಯೇ ವಿನಾ ನಾವು ಸಂದೇಶವಾಹಕರನ್ನು ಕಳುಹಿಸಲಾರೆವು. ಸತ್ಯನಿಷೇಧಿಗಳು ಅಸತ್ಯದೊಂದಿಗೆ ಅದರ ಮೂಲಕ ಸತ್ಯವನ್ನು ಧ್ವಂಸ ಮಾಡುವುದಕ್ಕಾಗಿ ತರ್ಕಿಸುತ್ತಿರುವರು. ಅವರು ನನ್ನ ದೃಷ್ಟಾಂತಗಳನ್ನು ಮತ್ತು ಅವರಿಗೆ ನೀಡಲಾಗಿರುವ ಮುನ್ನೆಚ್ಚರಿಕೆಗಳನ್ನು ಹಾಸ್ಯವಸ್ತುವನ್ನಾಗಿ ಮಾಡಿಕೊಂಡರು.
(57) ತನ್ನ ರಬ್‌ನ ದೃಷ್ಟಾಂತಗಳನ್ನು ಜ್ಞಾಪಿಸಲ್ಪಟ್ಟು ತರುವಾಯ ಅದರಿಂದ ವಿಮುಖನಾದವನಿಗಿಂತ ಮತ್ತು ತನ್ನ ಕೈಗಳು ಪೂರ್ವಭಾವಿಯಾಗಿ ಮಾಡಿಟ್ಟಿರುವುದನ್ನು (ದುಷ್ಕರ್ಮಗಳನ್ನು) ಮರೆತುಬಿಟ್ಟವನಿಗಿಂತ ದೊಡ್ಡ ಅಕ್ರಮಿ ಇನ್ನಾರಿರುವನು? ಅವರು ಅದನ್ನು ಗ್ರಹಿಸುವುದಕ್ಕೆ (ತಡೆಯಾಗಿ) ನಾವು ಅವರ ಹೃದಯಗಳಲ್ಲಿ ಹೊದಿಕೆಗಳನ್ನು ಮತ್ತು ಕಿವಿಗಳಲ್ಲಿ ಮುಚ್ಚಳಗಳನ್ನು ಇಟ್ಟಿರುವೆವು. (ಹೀಗಿರುವಾಗ) ತಾವು ಅವರನ್ನು ಸನ್ಮಾರ್ಗದೆಡೆಗೆ ಆಹ್ವಾನಿಸಿದರೆ ಅವರು ಎಂದಿಗೂ ಸನ್ಮಾರ್ಗವನ್ನು ಸ್ವೀಕಾರ ಮಾಡಲಾರರು.
(58) ತಮ್ಮ ರಬ್ ಅತ್ಯಧಿಕ ಕ್ಷಮಿಸುವವನೂ, ಪರಮ ದಯಾಳುವೂ ಆಗಿರುವನು. ಅವರು ಮಾಡಿರುವ ಪಾಪಗಳಿಗಾಗಿ ಅವನು ಅವರನ್ನು ಶಿಕ್ಷಿಸುವುದಾದರೆ ಅವನು ಅವರಿಗೆ ಶಿಕ್ಷೆಯನ್ನು ತ್ವರಿತಗೊಳಿಸುತ್ತಿದ್ದನು. ಆದರೆ ಅವರಿಗೆ ನಿಶ್ಚಿತವಾದ ಒಂದು ಅವಧಿಯಿದೆ. ಅದನ್ನು ದಾಟಿ ರಕ್ಷಣೆ ಪಡೆಯಬಹುದಾದ ಯಾವುದೇ ಸ್ಥಳವನ್ನೂ ಅವರು ಕಾಣಲಾರರು.
(59) ಆ ನಾಡುಗಳು ಅಕ್ರಮವೆಸಗಿದಾಗ ನಾವು ಅವರನ್ನು ನಾಶ ಮಾಡಿದೆವು. ಅವರ ನಾಶಕ್ಕೆ ನಾವು ಒಂದು ನಿಶ್ಚಿತ ಅವಧಿಯನ್ನು ಇಟ್ಟಿದ್ದೆವು.
(60) ಮೂಸಾ ತನ್ನ ಸೇವಕನೊಂದಿಗೆ ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ): ‘ನಾನು ಎರಡು ಸಮುದ್ರಗಳ ಸಂಗಮ ಸ್ಥಳವನ್ನು ತಲುಪುವ ತನಕ ಅಥವಾ ದೀರ್ಘ ಕಾಲಾವಧಿಯನ್ನು ನಡೆದು ಕ್ರಮಿಸುವ ತನಕ (ಈ ಯಾತ್ರೆಯನ್ನು) ಮುಂದುವರಿಸುತ್ತಲೇ ಇರುವೆನು’.
(61) ತರುವಾಯ ಅವರು ಅವೆರಡರ (ಸಮುದ್ರ ಗಳೆರಡರ) ಸಂಗಮ ಸ್ಥಳವನ್ನು ತಲುಪಿದಾಗ ತಮ್ಮ ಮೀನನ್ನು ಮರೆತುಬಿಟ್ಟರು.(606) ಅದು ಸಮುದ್ರಕ್ಕೆ (ಹಾರಿ) ತಾನು ಸಾಗಿದ ಹಾದಿಯನ್ನು ಒಂದು ಸುರಂಗ(ದಂತೆ) ಮಾಡಿತು.(607)
606. ಆ ಮೀನನ್ನು ಅವರು ಒಯ್ದಿದ್ದು ಅಲ್ಲಾಹುವಿನ ಆದೇಶ ಪ್ರಕಾರವಾಗಿತ್ತೆಂದು ಹದೀಸಿನಲ್ಲಿದೆ. 607. ಮೀನು ಸಾಗಿದ ಹಾದಿಯು ಒಂದು ಸುರಂಗದಂತಾಗಿದ್ದು ಅಲ್ಲಾಹು ಮೂಸಾರಿಗೆ ಕೆಲವು ವಿಷಯಗಳನ್ನು ಕಲಿಸುವುದಕ್ಕಾಗಿ ನಿಶ್ಚಯಿಸಿದ ವಿಶೇಷ ಕ್ರಮದ ಒಂದು ಭಾಗವಾಗಿತ್ತು.
(62) ತರುವಾಯ ಅವರು ಆ ಸ್ಥಳವನ್ನು ದಾಟಿ ಮುಂದಕ್ಕೆ ಸಾಗಿದಾಗ ಮೂಸಾ ತನ್ನ ಸೇವಕನೊಂದಿಗೆ ಹೇಳಿದರು: ‘ನಮ್ಮ ಆಹಾರವನ್ನು ನಮ್ಮ ಬಳಿಗೆ ತಾ. ನಮ್ಮ ಈ ಯಾತ್ರೆಯಿಂದಾಗಿ ನಮಗೆ ದಣಿವುಂಟಾಗಿದೆ’.
(63) ಅವನು ಹೇಳಿದನು: ‘ತಾವು ಕಂಡಿರುವಿರಾ? ನಾವು ಆ ಬಂಡೆಯಲ್ಲಿ ಆಶ್ರಯ ಪಡೆದಿದ್ದ ಸಂದರ್ಭ ನಾನು ಆ ಮೀನನ್ನು ಮರೆತೇ ಬಿಟ್ಟಿದ್ದೆ. ನಾನು ಅದರ ಬಗ್ಗೆ ಹೇಳುವುದನ್ನು ಮರೆಯುವಂತೆ ಮಾಡಿದ್ದು ಸೈತಾನನ ಹೊರತು ಇನ್ನಾರೂ ಅಲ್ಲ. ಅದು ಸಮುದ್ರದಲ್ಲಿ ತಾನು ಸಾಗಿದ ಹಾದಿಯನ್ನು ಒಂದು ಅದ್ಭುತವನ್ನಾಗಿ ಮಾಡಿತ್ತು’.
(64) ಅವರು (ಮೂಸಾ) ಹೇಳಿದರು: ‘ನಾವು ಅರಸುತ್ತಿದ್ದುದು ಅದನ್ನೇ ಆಗಿದೆ’.(608) ತಕ್ಷಣ ಅವರಿಬ್ಬರೂ ತಮ್ಮ ಹೆಜ್ಜೆಗುರುತುಗಳನ್ನು ನೋಡುತ್ತಾ ಮರಳಿದರು.
608. ಆ ಮೀನು ಚಿಮ್ಮಿ ಹೋಗುವ ಸ್ಥಳದಲ್ಲಿ ತಾವೊಬ್ಬ ಮಹಾ ವಿದ್ವಾಂಸನನ್ನು ಕಾಣುವಿರೆಂದು ಅಲ್ಲಾಹು ಮೂಸಾ(ಅ)ರಿಗೆ ಮುಂಚಿತವಾಗಿ ತಿಳಿಸಿದ್ದನು ಎಂದು ಹದೀಸಿನಲ್ಲಿದೆ.
(65) ಆಗ ಅವರಿಬ್ಬರೂ ನಮ್ಮ ದಾಸರ ಪೈಕಿ ಒಬ್ಬರನ್ನು(609) ಕಂಡರು. ಅವರಿಗೆ ನಾವು ನಮ್ಮ ವತಿಯ ಕಾರುಣ್ಯವನ್ನು ದಯಪಾಲಿಸಿದ್ದೆವು ಮತ್ತು ನಮ್ಮ ವತಿಯ ಜ್ಞಾನವನ್ನೂ ಕಲಿಸಿದ್ದೆವು.
609. ಮೂಸಾ(ಅ) ರವರ ಸೇವಕನ ಹೆಸರು ಯೂಶಅ್ ಇಬ್ನ್ ನೂನ್ ಮತ್ತು ಅವರು ಅನುಗಮಿಸಿದ ಆ ಮಹಾ ವಿದ್ವಾಂಸರ ಹೆಸರು ಖಿದ್ರ್ ಆಗಿದೆಯೆಂದು ತಫ್ಸೀರ್‌ಗಳಲ್ಲಿ ಕಾಣಬಹುದು. ಖಿದ್ರ್ ಪ್ರವಾದಿ ಹೌದೋ ಅಲ್ಲವೋ ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿವೆ. ದಿವ್ಯ ಸಂದೇಶ ಸಿಕ್ಕಿರುವುದರಿಂದಾಗಿ ಅವರು ಪ್ರವಾದಿಯಾಗಿರುವ ಸಾಧ್ಯತೆಯು ಹೆಚ್ಚಾಗಿದೆ.
(66) ಮೂಸಾ ಅವರೊಂದಿಗೆ ಹೇಳಿದರು: ‘ತಮಗೆ ಕಲಿಸಿಕೊಡಲಾಗಿರುವ ಸನ್ಮಾರ್ಗಜ್ಞಾನದಿಂದ ತಾವು ನನಗೆ ಕಲಿಸಿಕೊಡುವುದಕ್ಕಾಗಿ ನಾನು ತಮ್ಮನ್ನು ಹಿಂಬಾಲಿಸಲೇ?’
(67) ಅವರು ಹೇಳಿದರು: ‘ಖಂಡಿತವಾಗಿಯೂ ನನ್ನ ಜೊತೆಗೆ ತಾಳ್ಮೆಯಿಂದಿರಲು ತಮಗೆ ಸಾಧ್ಯವಾಗದು.
(68) ತಮಗೆ ಸೂಕ್ಷ್ಮ ಅರಿವಿಲ್ಲದ ಒಂದು ವಿಷಯದಲ್ಲಿ ತಾವು ತಾಳ್ಮೆಯಿಂದಿರುವುದಾದರೂ ಹೇಗೆ?’
(69) ಅವರು (ಮೂಸಾ) ಹೇಳಿದರು: ‘ಅಲ್ಲಾಹು ಇಚ್ಛಿಸಿದರೆ ತಾವು ನನ್ನನ್ನು ತಾಳ್ಮೆಯುಳ್ಳವನಾಗಿ ಕಾಣುವಿರಿ. ತಮ್ಮ ಯಾವುದೇ ಆಜ್ಞೆಯನ್ನೂ ನಾನು ಧಿಕ್ಕರಿಸಲಾರೆನು’.
(70) ಅವರು ಹೇಳಿದರು: ‘ಆದರೆ ತಾವು ನನ್ನನ್ನು ಹಿಂಬಾಲಿಸುವುದಾದರೆ ಯಾವುದೇ ವಿಷಯದ ಬಗ್ಗೆಯೂ, ನಾನು ಅದರ ಬಗ್ಗೆ ತಮಗೆ ಮಾಹಿತಿಯನ್ನು ನೀಡುವ ತನಕ ತಾವು ನನ್ನೊಂದಿಗೆ ಪ್ರಶ್ನಿಸಬಾರದು’.
(71) ತರುವಾಯ ಅವರಿಬ್ಬರೂ ಹೊರಟರು. ಬಳಿಕ ಅವರಿಬ್ಬರೂ ಹಡಗನ್ನೇರಿದಾಗ, ಅವರು ಅದರಲ್ಲಿ ತೂತು ಕೊರೆದರು. ಮೂಸಾ ಹೇಳಿದರು: ‘ಅದರಲ್ಲಿರುವವರನ್ನು ಮುಳುಗಿಸುವುದಕ್ಕಾಗಿ ತಾವು ಅದರಲ್ಲಿ ತೂತು ಕೊರೆದಿರುವಿರಾ? ಖಂಡಿತವಾಗಿಯೂ ತಾವೊಂದು ಗಂಭೀರ ವಿಷಯವನ್ನೇ ಮಾಡಿರುವಿರಿ’.
(72) ಅವರು ಹೇಳಿದರು: ‘ನನ್ನ ಜೊತೆಗೆ ತಾಳ್ಮೆಯಿಂದಿರಲು ತಮಗೆ ಖಂಡಿತವಾಗಿಯೂ ಸಾಧ್ಯವಾಗದೆಂದು ನಾನು ತಮ್ಮೊಂದಿಗೆ ಹೇಳಿರಲಿಲ್ಲವೇ?’
(73) ಮೂಸಾ ಹೇಳಿದರು: ‘ನಾನು ಮರೆತುಬಿಟ್ಟಿರುವುದಕ್ಕಾಗಿ ತಾವು ನನ್ನನ್ನು ಶಿಕ್ಷಿಸದಿರಿ. ನನ್ನ ವಿಷಯದಲ್ಲಿ ಕಷ್ಟಕರವಾಗಿರುವ ಯಾವುದಕ್ಕೂ ತಾವು ನನ್ನನ್ನು ಬಲವಂತ ಪಡಿಸದಿರಿ’.
(74) ತರುವಾಯ ಅವರಿಬ್ಬರೂ ಹೊರಟರು. ಬಳಿಕ ಅವರು ಒಬ್ಬ ಹುಡುಗನನ್ನು ಸಂಧಿಸಿದಾಗ ಅವರು ಆ ಹುಡುಗನನ್ನು ಕೊಂದು ಹಾಕಿದರು. ಮೂಸಾ ಹೇಳಿದರು: ‘ನಿರ್ದೋಷಿ ಯಾದ ಒಬ್ಬನನ್ನು ಇನ್ನೊಬ್ಬನಿಗೆ ಬದಲಿಯಾಗಿ ಹೊರತು(610) ತಾವು ಕೊಂದು ಹಾಕಿದಿರಾ? ಖಂಡಿತವಾಗಿಯೂ ತಾವೊಂದು ನಿಷಿದ್ಧ ಕೃತ್ಯವನ್ನು ಮಾಡಿರುವಿರಿ’.
610. ಅಂದರೆ ಯಾರನ್ನೂ ಹತ್ಯೆ ಮಾಡಿರದ ನಿರಪರಾಧಿ ವ್ಯಕ್ತಿಯನ್ನು ತಾವು ಕೊಂದು ಹಾಕಿದಿರಾ? ಎಂದರ್ಥ.
(75) ಅವರು ಹೇಳಿದರು: ‘ನನ್ನ ಜೊತೆಗೆ ತಾಳ್ಮೆ ಯಿಂದಿರಲು ತಮಗೆ ಖಂಡಿತವಾಗಿಯೂ ಸಾಧ್ಯವಾಗದೆಂದು ನಾನು ತಮ್ಮೊಂದಿಗೆ ಹೇಳಿರಲಿಲ್ಲವೇ?’
(76) ಮೂಸಾ ಹೇಳಿದರು: ‘ಇದರ ಬಳಿಕ ನಾನು ತಮ್ಮೊಂದಿಗೆ ಯಾವುದಾದರೂ ವಿಷಯದ ಬಗ್ಗೆ ಪ್ರಶ್ನಿಸಿದರೆ ತರುವಾಯ ತಾವು ನನ್ನನ್ನು ಜೊತೆಗಾರನನ್ನಾಗಿ ಮಾಡಬೇಕಾಗಿಲ್ಲ. ನನ್ನಿಂದ ತಮಗೆ ಸೂಕ್ತವಾದ ಒಂದು ಕಾರಣವು ಸಿಕ್ಕಿರುತ್ತದೆ’.(611)
611. ಮೂರನೇ ಬಾರಿಯೂ ನಾನು ಆಜ್ಞೆಯನ್ನು ಉಲ್ಲಂಘಿಸಿದರೆ ನನ್ನಿಂದ ಬೇರ್ಪಡಲು ಅದು ತಮಗೆ ಸೂಕ್ತ ಕಾರಣವಾಗಿರುವುದು.
(77) ತರುವಾಯ ಅವರಿಬ್ಬರೂ ಹೊರಟರು. ಬಳಿಕ ಅವರಿಬ್ಬರೂ ಒಂದು ಪಟ್ಟಣವನ್ನು ತಲುಪಿದಾಗ ಅದರ ನಿವಾಸಿಗಳೊಂದಿಗೆ ಅವರು ಆಹಾರವನ್ನು ಬೇಡಿದರು. ಆದರೆ ಅವರು ಇವರಿಗೆ ಆತಿಥ್ಯವನ್ನು ನೀಡಲು ನಿರಾಕರಿಸಿದರು. ಆಗ ಅವರು ಅಲ್ಲಿ ಕುಸಿದು ಬೀಳಲು ಸಿದ್ಧವಾಗಿರುವ ಒಂದು ಗೋಡೆಯನ್ನು ಕಂಡರು. ತಕ್ಷಣ ಅವರು ಅದನ್ನು ನೇರವಾಗಿಸಿದರು. ಮೂಸಾ ಹೇಳಿದರು: ‘ತಾವು ಇಚ್ಛಿಸುತ್ತಿದ್ದರೆ ಇದಕ್ಕಾಗಿ ತಾವು ಏನಾದರೂ ಪ್ರತಿಫಲವನ್ನು ಪಡೆಯಬಹುದಿತ್ತು!’
(78) ಅವರು ಹೇಳಿದರು: ‘ಇದು ನನ್ನ ಹಾಗೂ ತಮ್ಮ ನಡುವಿನ ಅಗಲುವಿಕೆಯಾಗಿದೆ. ಯಾವುದರ ಬಗ್ಗೆ ತಮಗೆ ತಾಳ್ಮೆಯಿಂದಿರಲು ಸಾಧ್ಯವಾಗಲಿಲ್ಲವೋ ಅದರ ತಿರುಳನ್ನು ನಾನು ತಮಗೆ ತಿಳಿಸಿಕೊಡುವೆನು.
(79) ಆ ಹಡಗು ಸಮುದ್ರದಲ್ಲಿ ಕೆಲಸ ಮಾಡುವ ಕೆಲವು ಬಡವರಿಗೆ ಸೇರಿದ್ದಾಗಿತ್ತು. ಆದ್ದರಿಂದ ನಾನು ಅದನ್ನು ಹಾಳುಮಾಡಲು ಇಚ್ಛಿಸಿದೆನು. (ಯಾಕೆಂದರೆ ಉತ್ತಮ ಸ್ಥಿತಿಯಲ್ಲಿರುವ) ಎಲ್ಲ ಹಡಗುಗಳನ್ನೂ ಬಲವಂತದಿಂದ ವಶಪಡಿಸಿಕೊಳ್ಳುವ ಒಬ್ಬ ಅರಸನು ಅವರ ಹಿಂದಿದ್ದನು.
(80) ಆ ಹುಡುಗನ ಮಾತಾಪಿತರು ಸತ್ಯವಿಶ್ವಾಸಿಗಳಾಗಿದ್ದರು. ಆದರೆ ಅವನು ಅವರನ್ನು ಅತಿರೇಕಕ್ಕೂ, ಸತ್ಯ ನಿಷೇಧಕ್ಕೂ ನಿರ್ಬಂಧಿಸುವನೆಂದು ನಾವು ಭಯಪಟ್ಟೆವು.
(81) ಆದ್ದರಿಂದ ಅವರಿಗೆ ಅವರ ರಬ್ ಸ್ವಭಾವದಲ್ಲಿ ಅವನಿಗಿಂತ ಉತ್ತಮನೂ, ಕಾರುಣ್ಯದಲ್ಲಿ ಹೆಚ್ಚು ನಿಕಟನೂ ಆಗಿರುವ ಒಬ್ಬ ಮಗನನ್ನು ಬದಲಿಯಾಗಿ ನೀಡಲೆಂದು ನಾವು ಬಯಸಿದೆವು.
(82) ಆ ಗೋಡೆ ಪಟ್ಟಣದ ಇಬ್ಬರು ಅನಾಥ ಬಾಲಕರಿಗೆ ಸೇರಿದ್ದಾಗಿತ್ತು. ಅದರ ಅಡಿಯಲ್ಲಿ ಅವರಿಗಾಗಿರುವ ಒಂದು ನಿಧಿಯಿತ್ತು. ಅವರ ತಂದೆ ಒಬ್ಬ ಸಾತ್ವಿಕನಾಗಿದ್ದನು. ಆದ್ದರಿಂದ ಅವರಿಬ್ಬರೂ ಅವರ ಹರೆಯವನ್ನು ತಲುಪಿ ತರುವಾಯ ತಮ್ಮ ನಿಧಿಯನ್ನು ಹೊರತೆಗೆಯಬೇಕೆಂದು ತಮ್ಮ ರಬ್ ಬಯಸಿದನು.(612) ಅದು ತಮ್ಮ ರಬ್‌ನ ವತಿಯ ದಯೆಯಿಂದಾಗಿದೆ. ಇವಾವುದನ್ನೂ ನಾನು ನನ್ನ ಇಚ್ಛೆ ಪ್ರಕಾರ ಮಾಡಿರಲಿಲ್ಲ.(613) ತಮಗೆ ಯಾವುದರ ಬಗ್ಗೆ ತಾಳ್ಮೆಯಿಂದಿರಲು ಸಾಧ್ಯವಾಗಲಿಲ್ಲವೋ ಅದರ ತಿರುಳು ಇದಾಗಿದೆ’.
612. ಅದಕ್ಕಾಗಿ ನಾನು ಆ ಗೋಡೆಯ ಬಿರುಕುಗಳನ್ನು ದುರಸ್ಥಿಗೊಳಿಸಿದೆನು. 613. ಇವೆಲ್ಲವನ್ನೂ ಅಲ್ಲಾಹುವಿನ ಆದೇಶ ಪ್ರಕಾರವೇ ಮಾಡಿದೆ ಎಂದರ್ಥ. ಅಲ್ಲಾಹು ಮಾಡುವ ಪ್ರವೃತ್ತಿಗಳ ಯುಕ್ತಿಯನ್ನು ಸಂಪೂರ್ಣವಾಗಿ ಗ್ರಹಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗದು. ಅವನು ಸರ್ವಜ್ಞನು. ಅವನು ತಿಳಿಸಿಕೊಟ್ಟ ಹೊರತು ಏನನ್ನೂ ಅರಿತುಕೊಳ್ಳಲು ನಮಗೆ ಸಾಧ್ಯವಿಲ್ಲ.
(83) ಅವರು ತಮ್ಮೊಂದಿಗೆ ದುಲ್‍ಕರ್ನೈನ್‍ರ(614) ಬಗ್ಗೆ ಕೇಳುವರು. ತಾವು ಹೇಳಿರಿ: ‘ಅವರ ಬಗೆಗಿನ ಮಾಹಿತಿಯನ್ನು ನಾನು ನಿಮಗೆ ಓದಿಕೊಡುವೆನು’.
614. ‘ದುಲ್‍ಕರ್ನೈನ್’ ಎಂಬ ಪದದ ಅರ್ಥವು ಎರಡು ಶತಮಾನಗಳ ಕಾಲ ಬದುಕಿದವನು ಅಥವಾ ಎರಡು ಕೊಂಬುಗಳಿರುವವನು ಎಂದಾಗಿರಬಹುದು. ಆದ್ದರಿಂದ ಇದೊಬ್ಬ ವ್ಯಕ್ತಿಯ ಹೆಸರಾಗಿರಲಾರದು. ಇದೊಂದು ಉಪನಾಮವಾಗಿರಬಹುದು. ಈ ಉಪನಾಮವಿರುವ ವ್ಯಕ್ತಿ ಯಾರೆಂಬ ಬಗ್ಗೆ ಕುರ್‌ಆನ್ ವ್ಯಾಖ್ಯಾನಕಾರರಲ್ಲಿ ಏಕಾಭಿಪ್ರಾಯವಿಲ್ಲ.
(84) ಖಂಡಿತವಾಗಿಯೂ ನಾವು ಅವರಿಗೆ ಭೂಮಿಯಲ್ಲಿ ಅಧಿಕಾರವನ್ನು ನೀಡಿದೆವು ಮತ್ತು ಎಲ್ಲ ವಿಷಯಗಳಿಗಿರುವ ಮಾರ್ಗಗಳನ್ನು ನಾವು ಅವರಿಗೆ ಅನುಕೂಲ ಮಾಡಿಕೊಟ್ಟೆವು.
(85) ತರುವಾಯ ಅವರು ಒಂದು ಮಾರ್ಗವನ್ನು ಅನುಗಮಿಸಿದರು.(615)
615. ಅವರು ಒಂದು ದಿಕ್ಕಿಗೆ ತಿರುಗಿ ಯಾತ್ರೆ ಹೊರಟರು ಎಂದರ್ಥ.
(86) ಅವರು ಸೂರ್ಯಾಸ್ತಮಾನದ ಸ್ಥಳಕ್ಕೆ ತಲುಪಿದಾಗ ಅದು ಕೆಸರು ನೀರಿರುವ ಒಂದು ಜಲಾಶಯದಲ್ಲಿ ಅಸ್ತಮಿಸುತ್ತಿರುವುದಾಗಿ ಕಂಡರು.(616) ಅದರ ಬಳಿ ಒಂದು ಜನತೆಯನ್ನೂ ಕಂಡರು. ನಾವು ಹೇಳಿದೆವು: ‘ಓ ದುಲ್‍ಕರ್ನೈನ್! ಒಂದೋ ಇವರನ್ನು ಶಿಕ್ಷಿಸಿರಿ ಅಥವಾ ಇವರಲ್ಲಿ ಒಳಿತನ್ನುಂಟುಮಾಡಿರಿ.(617)
616. ಜನವಾಸವಿರುವ ಪ್ರದೇಶಗಳ ಪಶ್ಚಿಮ ತುದಿಗೆ ದುಲ್‍ಕರ್ನೈನ್ ತಲುಪಿದರು ಮತ್ತು ಅದರಾಚೆಗಿನ ಸಮುದ್ರದಲ್ಲಿ ಸೂರ್ಯನು ಅಸ್ತಮಿಸಿ ಮರೆಯಾಗುತ್ತಾನೆಂದು ಅಂದಿನ ಜನರು ಭಾವಿಸಿದ್ದರೆಂದು ಕುರ್‌ಆನ್ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ. ಇದು ಮೆಡಿಟರೇನಿಯನ್ ಸಾಗರ ಅಥವಾ ಅಟ್ಲಾಂಟಿಕ್ ಸಾಗರದ ಪೂರ್ವ ತೀರವಾಗಿರಬಹುದು. ಸಮುದ್ರ ತೀರದಲ್ಲಿ ಸೂರ್ಯಾಸ್ತವನ್ನು ವೀಕ್ಷಿಸುವಾಗ ಅದು ಕೆಸರು ನೀರಿನಲ್ಲಿ ಮುಳುಗುವಂತೆ ತೋರುತ್ತದೆ. 617. ಒಬ್ಬ ಚಕ್ರವರ್ತಿಗೆ ತಾನು ವಶಪಡಿಸಿದ ದೇಶಗಳಲ್ಲಿ ಕೆಟ್ಟ ಆಡಳಿತ ನೀಡಿ ಜನರನ್ನು ಹಿಂಸಿಸಲು ಮತ್ತು ಉತ್ತಮ ಆಡಳಿತ ನೀಡಿ ಜನರನ್ನು ಉತ್ತಮ ಸ್ಥಿತಿಗೆ ತಲುಪಿಸಲು ಸಾಧ್ಯವಿದೆ. ಅವುಗಳ ಪೈಕಿ ಅವನು ಯಾವುದನ್ನು ಆರಿಸುತ್ತಾನೋ ಅದೇ ಅವನ ಸೋಲುಗೆಲುವುಗಳನ್ನು ನಿರ್ಣಯಿಸುತ್ತದೆ.
(87) ಅವರು (ದುಲ್‍ಕರ್ನೈನ್) ಹೇಳಿದರು: ‘ಯಾರು ಅಕ್ರಮವೆಸಗುವನೋ ಅವನನ್ನು ನಾವು ಶಿಕ್ಷಿಸುವೆವು. ತರುವಾಯ ಅವನನ್ನು ಅವನ ರಬ್‌ನ ಕಡೆಗೆ ಮರಳಿಸಲಾಗುವುದು. ಆಗ ಅವನು ಅವನಿಗೆ ಕಠಿಣ ಶಿಕ್ಷೆಯನ್ನು ನೀಡುವನು’.
(88) ಆದರೆ ಯಾರು ವಿಶ್ವಾಸವಿಟ್ಟು ಸತ್ಕರ್ಮವೆಸಗುವನೋ ಅವನಿಗೆ ಪ್ರತಿಫಲವಾಗಿ ಉತ್ಕೃಷ್ಟವಾದ ಸ್ವರ್ಗವಿರುವುದು. ನಮ್ಮ ಆಜ್ಞೆಗಳಲ್ಲಿ ಸುಲಭವಾಗಿರುವುದನ್ನು ನಾವು ಅವನೊಂದಿಗೆ ಆದೇಶಿಸುವೆವು.(618)
618. ಸತ್ಯವಿಶ್ವಾಸಿಯೊಂದಿಗೆ ಅಲ್ಲಾಹು ಆಜ್ಞಾಪಿಸುವ ಸಂಗತಿಗಳು ಕಾರ್ಯಗತಗೊಳಿಸಲು ಅತ್ಯಂತ ಸುಲಭವಿರುವುದಾಗಿವೆ.
(89) ತರುವಾಯ ಅವರು ಬೇರೊಂದು ಮಾರ್ಗವನ್ನು ಅನುಗಮಿಸಿದರು.
(90) ಅವರು ಸೂರ್ಯೋದಯವಾಗುವ ಸ್ಥಳಕ್ಕೆ ತಲುಪಿದಾಗ(619) ಅದು ಒಂದು ಜನತೆಯ ಮೇಲೆ ಉದಯವಾಗುತ್ತಿರುವುದಾಗಿ ಕಂಡರು. ಅದರ (ಸೂರ್ಯನ) ಮುಂದೆ ನಾವು ಅವರಿಗೆ ಯಾವುದೇ ಪರದೆಯನ್ನೂ ಮಾಡಿಕೊಟ್ಟಿರಲಿಲ್ಲ.(620)
619. ಪೂರ್ವದಿಕ್ಕಿನೆಡೆಗೆ ಯಾತ್ರೆ ಮಾಡಿ ಅಂದು ಜನವಾಸವಿದ್ದ ಪ್ರದೇಶಗಳ ಪೂರ್ವ ತುದಿಗೆ ತಲುಪಿದರು ಎಂದು ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ. 620. ಬಿಸಿಲಿನಿಂದ ರಕ್ಷಣೆ ಪಡೆಯಲು ವಸ್ತ್ರವನ್ನು ಧರಿಸುವ ಅಥವಾ ಮನೆಗಳಲ್ಲಿ ಆಶ್ರಯ ಪಡೆಯುವ ರೂಢಿಯು ಅವರಿಗಿರಲಿಲ್ಲ.
(91) ಅದೇ ರೀತಿ (ಅವರು ಮಾಡಿದರು)!(621) ನಾವು (ನಮ್ಮ) ಸೂಕ್ಷ್ಮಜ್ಞಾನದಿಂದ ಅವರ ಬಳಿಯಿರುವುದನ್ನು ಪೂರ್ಣವಾಗಿ ಅರಿತಿರುವೆವು.
621. ಪಶ್ಚಿಮ ದೇಶಗಳಲ್ಲಿರುವವರ ವಿಷಯದಲ್ಲಿ ಮಾಡಿದಂತೆಯೇ ಪೂರ್ವ ದೇಶಗಳಲ್ಲಿರುವವರ ವಿಷಯದಲ್ಲೂ ಮಾಡಿದರು ಎಂದಾಗಿರಬಹುದು.
(92) ತರುವಾಯ ಅವರು ಬೇರೊಂದು ಮಾರ್ಗವನ್ನು ಅನುಗಮಿಸಿದರು.
(93) ಅವರು ಎರಡು ಬೆಟ್ಟ ತಪ್ಪಲುಗಳ ನಡುವೆ ತಲುಪಿದಾಗ ಅದರ ಈಚೆ ಬದಿಯಲ್ಲಿ ಒಂದು ಜನತೆಯನ್ನು ಕಂಡರು. ಅವರಿಗೆ ಬಹುತೇಕ ಮಾತುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
(94) ಅವರು ಹೇಳಿದರು: ‘ಓ ದುಲ್‍ಕರ್ನೈನ್! ಖಂಡಿತವಾಗಿಯೂ ಯಅ್‌ಜೂಜ್ ಮತ್ತು ಮಅ್‌ಜೂಜ್‌ಗಳು ಭೂಮಿಯಲ್ಲಿ ವಿನಾಶವನ್ನುಂಟು ಮಾಡುವವರಾಗಿರುವರು. ಆದ್ದರಿಂದ ನಮ್ಮ ಮತ್ತು ಅವರ ಮಧ್ಯೆ ಒಂದು ತಡೆಗೋಡೆಯನ್ನು ನಿರ್ಮಿಸಲು ನಾವು ತಮಗೆ ಒಂದು ತೆರಿಗೆಯನ್ನು ನಿಗದಿಗೊಳಿಸಿಕೊಡಲೇ?’
(95) ಅವರು ಹೇಳಿದರು: ‘ನನ್ನ ರಬ್ ನನಗೆ ಅಧೀನಪಡಿಸಿಕೊಟ್ಟಿರುವುದು (ಅಧಿಕಾರ ಮತ್ತು ಸಂಪತ್ತು) (ನೀವು ನೀಡುವುದಕ್ಕಿಂತಲೂ) ಉತ್ತಮವಾಗಿದೆ. ಆದರೂ (ನಿಮ್ಮ ದೈಹಿಕ) ಶಕ್ತಿಯೊಂದಿಗೆ ನೀವು ನನಗೆ ಸಹಾಯ ಮಾಡಿರಿ. ನಿಮ್ಮ ಮತ್ತು ಅವರ ಮಧ್ಯೆ ನಾನು ಬಲಿಷ್ಠ ಗೋಡೆಯೊಂದನ್ನು ನಿರ್ಮಿಸಿಕೊಡುವೆನು.(622)
622. ಯಅ್‌ಜೂಜ್ ಮತ್ತು ಮಅ್‌ಜೂಜ್‍ರ ಆಕ್ರಮಣವನ್ನು ತಡೆಯಲು ದುಲ್‍ಕರ್ನೈನ್ ಗೋಡೆ ನಿರ್ಮಿಸಿದ್ದೆಲ್ಲಿ ಎಂಬ ಬಗ್ಗೆ ಕುರ್‌ಆನ್ ವ್ಯಾಖ್ಯಾನಕಾರರಲ್ಲಿ ಏಕಾಭಿಪ್ರಾಯವಿಲ್ಲ. ಅಝರ್ ಬೈಜಾನ್ ಮತ್ತು ಅರ್ಮೇನಿಯಾದ ಮಧ್ಯೆಯಿರುವ ಎರಡು ಬೆಟ್ಟಗಳ ನಡುವೆ ಈ ಕಬ್ಬಿಣದ ಗೋಡೆಯಿತ್ತು ಎಂಬ ಅಭಿಪ್ರಾಯಕ್ಕೆ ಕುರ್‌ಆನ್ ವ್ಯಾಖ್ಯಾನಕಾರರ ಪೈಕಿ ಹೆಚ್ಚಿನವರು ಆದ್ಯತೆ ನೀಡಿದ್ದಾರೆ.
(96) ನೀವು ನನಗೆ ಕಬ್ಬಿಣದ ತುಂಡುಗಳನ್ನು ತಂದುಕೊಡಿರಿ’. ಕೊನೆಗೆ ಆ ಎರಡು ಬೆಟ್ಟಗಳ ಪಾರ್ಶ್ವಗಳ ಎಡೆಯನ್ನು ಸಮಗೊಳಿಸಿದ ಬಳಿಕ ಅವರು ಹೇಳಿದರು: ‘ಊದಿರಿ’. ಬಳಿಕ ಅದನ್ನು (ಉರಿಸಿ) ಬೆಂಕಿಯಂತಾಗಿಸಿದಾಗ ಅವರು ಹೇಳಿದರು: ‘ನೀವು ನನಗೆ ಕರಗಿಸಿದ ತಾಮ್ರವನ್ನು ತಂದು ಕೊಡಿರಿ. ಅದನ್ನು ನಾನು ಅದರ ಮೇಲೆ ಸುರಿಯುವೆನು’.
(97) ತರುವಾಯ ಆ ಗೋಡೆಯನ್ನು ಏರಿ ದಾಟಲು ಅವರಿಗೆ (ಯಅ್‌ಜೂಜ್ ಮತ್ತು ಮಅ್‌ಜೂಜ್‍ರಿಗೆ) ಸಾಧ್ಯವಾಗಲಿಲ್ಲ. ಅದಕ್ಕೆ ಕನ್ನ ಕೊರೆಯಲೂ ಅವರಿಗೆ ಸಾಧ್ಯವಾಗಲಿಲ್ಲ.
(98) ಅವರು (ದುಲ್‍ಕರ್ನೈನ್) ಹೇಳಿದರು: ‘ಇದು ನನ್ನ ರಬ್‌ನ ವತಿಯ ಕರುಣೆಯಾಗಿದೆ. ಆದರೆ ನನ್ನ ರಬ್‌ನ ವಾಗ್ದಾನವು ಬಂದರೆ ಅವನು ಅದನ್ನು ನುಚ್ಚು ನೂರು ಮಾಡುವನು.(623) ನನ್ನ ರಬ್‌ನ ವಾಗ್ದಾನವು ಸತ್ಯವಾಗಿದೆ’.
623. ಯಅ್‌ಜೂಜ್ ಮತ್ತು ಮಅ್‌ಜೂಜ್‍ರಿಗೆ ಆ ಗೋಡೆಯನ್ನು ಕೆಡವಿ ಮುನ್ನಡೆಯಲು ಅಲ್ಲಾಹು ಇಚ್ಛಿಸುವ ಸಂದರ್ಭದಲ್ಲಿ ಖಂಡಿತವಾಗಿಯೂ ಸಾಧ್ಯವಾಗುವುದು ಎಂದರ್ಥ.
(99) (ಅಂದು) ಅವರಲ್ಲಿ ಕೆಲವರು ಇತರ ಕೆಲವರ ಮೇಲೆ ತೆರೆಗಳಂತೆ ಏರಿಬರುವ ವಿಧದಲ್ಲಿ ನಾವು ಬಿಟ್ಟುಬಿಡುವೆವು. ಕಹಳೆಯಲ್ಲಿ ಊದಲಾಗುವುದು. ಆಗ ನಾವು ಅವರನ್ನು ಒಟ್ಟಾಗಿ ಒಟ್ಟುಗೂಡಿಸುವೆವು.
(100) ಅಂದು ನಾವು ಸತ್ಯನಿಷೇಧಿಗಳಿಗೆ ನರಕಾಗ್ನಿಯನ್ನು ನೇರವಾಗಿ ಪ್ರದರ್ಶಿಸುವೆವು.
(101) ಅಂದರೆ ನನ್ನ ಸಂದೇಶದ ಮುಂದೆ ಯಾರ ಕಣ್ಣುಗಳಿಗೆ ಪರದೆ ಬಿದ್ದಿರುವುದೋ ಮತ್ತು ಅದನ್ನು ಆಲಿಸಿ ಗ್ರಹಿಸಲು ಯಾರಿಗೆ ಸಾಧ್ಯವಾಗಲಿಲ್ಲವೋ ಅಂತಹ (ಸತ್ಯನಿಷೇಧಿಗಳಿಗೆ).
(102) ನನ್ನ ಹೊರತು ನನ್ನ ದಾಸರನ್ನು ರಕ್ಷಕರನ್ನಾಗಿ ಮಾಡಿಕೊಳ್ಳಬಹುದೆಂದು ಸತ್ಯನಿಷೇಧಿಗಳು ಭಾವಿಸಿರುವರೇ? ಖಂಡಿತವಾಗಿಯೂ ಸತ್ಯನಿಷೇಧಿಗಳಿಗೆ ಅತಿಥಿ ಸತ್ಕಾರವಾಗಿ ನಾವು ನರಕಾಗ್ನಿಯನ್ನು ಸಿದ್ಧಗೊಳಿಸಿರುವೆವು.
(103) (ಓ ಪ್ರವಾದಿಯವರೇ!) ಕೇಳಿರಿ: ‘ಕರ್ಮಗಳು ಅತಿ ಹೆಚ್ಚು ನಷ್ಟವಾದವರ ಬಗ್ಗೆ ನಾವು ನಿಮಗೆ ತಿಳಿಸಿಕೊಡಲೇ?’
(104) ಅಂದರೆ ಐಹಿಕ ಜೀವನದಲ್ಲಿರುವ ತಮ್ಮ ಪರಿಶ್ರಮಗಳು ವ್ಯರ್ಥವಾಗಿ ಹೋಗಿರುವವರು. ಆದರೆ ತಾವು ಉತ್ತಮ ಕರ್ಮಗಳನ್ನು ಮಾಡುತ್ತಿರುವೆವು ಎಂದು ಅವರು ಭಾವಿಸುತ್ತಿರುವರು.
(105) ಅವರು ತಮ್ಮ ರಬ್‌ನ ದೃಷ್ಟಾಂತಗಳಲ್ಲಿ ಮತ್ತು ಅವನೊಂದಿಗಿರುವ ಭೇಟಿಯಲ್ಲಿ ವಿಶ್ವಾಸವಿಡದವರಾಗಿರುವರು. ಆದ್ದರಿಂದ ಅವರ ಕರ್ಮಗಳು ವ್ಯರ್ಥವಾದವು. ಪುನರುತ್ಥಾನ ದಿನದಂದು ನಾವು ಅವರಿಗೆ ಯಾವುದೇ ತೂಕವನ್ನೂ (ಪದವಿಯನ್ನೂ) ಸ್ಥಾಪಿಸಲಾರೆವು.(624)
624. ಕರ್ಮಗಳ ಭಾರವು ಪರಲೋಕದ ಪದವಿಗಳಿಗಿರುವ ಮಾನದಂಡವಾಗಿದೆ.
(106) ಅದು ಅವರಿಗಿರುವ ಪ್ರತಿಫಲವಾಗಿದೆ. ನರಕಾಗ್ನಿ! ಅವರು ಸತ್ಯವನ್ನು ನಿಷೇಧಿಸಿರುವುದಕ್ಕಿರುವ ಮತ್ತು ನನ್ನ ದೃಷ್ಟಾಂತಗಳನ್ನೂ, ಪ್ರವಾದಿಗಳನ್ನೂ ಲೇವಡಿ ಮಾಡಿರುವುದಕ್ಕಿರುವ (ಶಿಕ್ಷೆಯಾಗಿದೆ).
(107) ಖಂಡಿತವಾಗಿಯೂ ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ ಅತಿಥಿ ಸತ್ಕಾರವಾಗಿ ಸ್ವರ್ಗೋದ್ಯಾನಗಳಿವೆ.
(108) ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅದರಿಂದ ದೂರವಾಗಲು ಅವರೆಂದೂ ಬಯಸಲಾರರು.
(109) (ಓ ಪ್ರವಾದಿಯವರೇ!) ಹೇಳಿರಿ: ‘ಸಮುದ್ರವು ನನ್ನ ರಬ್‌ನ ವಚನಗಳನ್ನು ಬರೆಯಲಿರುವ ಶಾಯಿಯಾಗಿದ್ದರೆ ನನ್ನ ರಬ್‌ನ ವಚನಗಳು ಮುಗಿಯುವ ಮೊದಲೇ ಖಂಡಿತವಾಗಿಯೂ ಸಮುದ್ರ ಜಲವು ಬತ್ತಿಹೋಗುವುದು. ಅದಕ್ಕೆ ಸಮಾನವಾದ ಇನ್ನೊಂದು ಸಮುದ್ರವನ್ನು ನಾವು ಸಹಾಯಕ್ಕಾಗಿ ತಂದರೂ ಸರಿ’.
(110) (ಓ ಪ್ರವಾದಿಯವರೇ!) ಹೇಳಿರಿ: ‘ನಾನು ನಿಮ್ಮಂತಿರುವ ಒಬ್ಬ ಮನುಷ್ಯನು ಮಾತ್ರವಾಗಿರುವೆನು.(625) ನಿಮ್ಮ ಆರಾಧ್ಯನು ಏಕಮೇವ ಆರಾಧ್ಯನಾಗಿರುವನೆಂದು ನನಗೆ ದಿವ್ಯಸಂದೇಶ ನೀಡಲಾಗುತ್ತಿದೆ. ಆದ್ದರಿಂದ ಯಾರಾದರೂ ತನ್ನ ರಬ್‌ನ ಭೇಟಿಯನ್ನು ಆಶಿಸುವುದಾದರೆ ಅವನು ಸತ್ಕರ್ಮವನ್ನು ಮಾಡಲಿ ಮತ್ತು ತನ್ನ ರಬ್‌ನ ಆರಾಧನೆಯಲ್ಲಿ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರಲಿ’.
625. ಪ್ರವಾದಿ ಮುಹಮ್ಮದ್(ಸ) ರವರು ತಿನ್ನುವ, ಕುಡಿಯುವ, ಮಾಂಸ-ನೆತ್ತರುಗಳಿರುವ, ನೋವು-ನಲಿವುಗಳನ್ನು ಹೊಂದಿರುವ ಓರ್ವ ಮನುಷ್ಯರೇ ಆಗಿದ್ದರು. ಅಲ್ಲಾಹುವಿನಿಂದ ಅವರಿಗೆ ವಹ್ಯ್ ಲಭಿಸುತ್ತದೆ ಎಂಬುದು ಅವರನ್ನು ಇತರ ಜನಸಾಮಾನ್ಯರಿಂದ ಉನ್ನತಗೊಳಿಸುತ್ತದೆ.