(1) ಕಾಫ್ ಹಾ ಯಾ ಐನ್ ಸ್ವಾದ್.
(2) ತಮ್ಮ ರಬ್ ತನ್ನ ದಾಸನಾಗಿರುವ ಝಕರಿಯ್ಯಾಗೆ ದಯಪಾಲಿಸಿರುವ ಅನುಗ್ರಹದ ಬಗೆಗಿನ ಪ್ರಸ್ತಾಪವಾಗಿದೆ.
(3) ಅವರು ತಮ್ಮ ರಬ್ಬನ್ನು ಮೆಲುದನಿಯಲ್ಲಿ ಕರೆದು ಪ್ರಾರ್ಥಿಸಿದ ಸಂದರ್ಭ.
(4) ಅವರು ಹೇಳಿದರು: “ನನ್ನ ಪ್ರಭೂ! ನನ್ನ ಮೂಳೆಗಳು ಬಲಹೀನವಾಗಿವೆ. ತಲೆಯು ನೆರೆತು ಹೊಳೆಯುತ್ತಿದೆ. ನನ್ನ ಪ್ರಭೂ! ನಿನ್ನೊಂದಿಗೆ ಪ್ರಾರ್ಥಿಸಿ ನಾನೆಂದೂ ಭಾಗ್ಯಹೀನನಾಗಿಲ್ಲ.
(5) ನನ್ನ ನಂತರ ಬರುವ ಸಂಬಂಧಿಕರ ಬಗ್ಗೆ ನಾನು ಭಯಪಡುತ್ತಿರುವೆನು. ನನ್ನ ಪತ್ನಿ ಬಂಜೆಯಾಗಿರುವಳು. ಆದುದರಿಂದ ನಿನ್ನ ಕಡೆಯಿಂದ ನನಗೊಬ್ಬ ಸಂಬಂಧಿ (ಹಕ್ಕುದಾರ)ಯನ್ನು ದಯಪಾಲಿಸು.
(6) ಅವನು ನನ್ನ ಉತ್ತರಾಧಿಕಾರಿಯಾಗುವನು ಮತ್ತು ಯಅ್ಕೂಬ್ ಕುಟುಂಬದ ಉತ್ತರಾಧಿಕಾರಿಯಾಗುವನು. ನನ್ನ ಪ್ರಭೂ! ಅವನನ್ನು (ಎಲ್ಲರಿಗೂ) ಸಂತೃಪ್ತನಾಗಿರುವವನಂತೆ ಮಾಡು”.
(7) “ಓ ಝಕರಿಯ್ಯಾ! ಖಂಡಿತವಾಗಿಯೂ ನಾವು ತಮಗೆ ಒಂದು ಗಂಡುಮಗುವಿನ ಬಗ್ಗೆ ಶುಭವಾರ್ತೆಯನ್ನು ನೀಡುತ್ತಿರುವೆವು. ಅವನ ಹೆಸರು ಯಹ್ಯಾ ಎಂದಾಗಿದೆ. ಇದಕ್ಕಿಂತ ಮುಂಚೆ ನಾವು ಯಾರನ್ನೂ ಆ ಹೆಸರನ್ನು ಹೊಂದಿರುವವರನ್ನಾಗಿ ಮಾಡಿಲ್ಲ”.
(8) ಅವರು (ಝಕರಿಯ್ಯಾ) ಹೇಳಿದರು: “ನನ್ನ ಪ್ರಭೂ! ನನಗೊಂದು ಗಂಡುಮಗು ಆಗುವುದಾದರೂ ಹೇಗೆ? ನನ್ನ ಪತ್ನಿ ಬಂಜೆಯಾಗಿರುವಳು. ನಾನಂತೂ ಕಡು ವೃದ್ಧಾಪ್ಯವನ್ನು ತಲುಪಿದವನಾಗಿರುವೆನು”.
(9) ಅವನು (ಅಲ್ಲಾಹು) ಹೇಳಿದನು: “ಹಾಗೆಯೇ ಆಗಿದೆ. ಮುಂಚೆ ತಾವು ಏನೂ ಆಗಿರದಿದ್ದಾಗ ನಾನು ತಮ್ಮನ್ನು ಸೃಷ್ಟಿಸಿರುವೆನು, ನನ್ನ ಮಟ್ಟಿಗೆ ಹೇಳುವುದಾದರೆ ಇದೊಂದು ಕ್ಷುಲ್ಲಕ ವಿಷಯವಾಗಿದೆ ಎಂದು ತಮ್ಮ ರಬ್ ಘೋಷಿಸಿರುವನು”.
(10) ಅವರು (ಝಕರಿಯ್ಯಾ) ಹೇಳಿದರು: “ನನ್ನ ಪ್ರಭೂ! ನನಗೊಂದು ದೃಷ್ಟಾಂತವನ್ನು ಮಾಡಿಕೊಡು”. ಅವನು (ಅಲ್ಲಾಹು) ಹೇಳಿದನು: “ತಮ್ಮಲ್ಲಿ ಯಾವುದೇ ವೈಕಲ್ಯತೆಯಿಲ್ಲದಿದ್ದರೂ(626) ತಾವು ಜನರೊಂದಿಗೆ ಮೂರು (ದಿನ)ರಾತ್ರಿಗಳ ಕಾಲ ಮಾತನಾಡದಿರುವುದು ತಮಗಿರುವ ದೃಷ್ಟಾಂತವಾಗಿದೆ”.
626. ‘ಸವಿಯ್ಯ್’ ಎಂಬ ಪದಕ್ಕೆ ವೈಕಲ್ಯರಹಿತ, ಸಮವಾದ, ಸರಿಯಾದ, ಅನ್ಯೂನ ಎಂಬಿತ್ಯಾದಿ ಅರ್ಥಗಳಿವೆ. ‘ಸವಿಯ್ಯನ್’ ಎಂಬುದು ‘ಮೂರು ರಾತ್ರಿ’ಗಳ ವಿಶೇಷಣವಾಗಿರಬಹುದು ಅಥವಾ ಝಕರಿಯ್ಯಾ(ಅ) ರವರ ವಿಶೇಷಣವಾಗಿರಬಹುದು.
(11) ತರುವಾಯ ಅವರು ಮಿಹ್ರಾಬ್ನಿಂದ ತಮ್ಮ ಜನತೆಯೆಡೆಗೆ ತೆರಳಿ “ನೀವು ಬೆಳಿಗ್ಗೆ ಮತ್ತು ಸಂಜೆ ಅಲ್ಲಾಹುವಿನ ಪರಿಪಾವನತೆಯನ್ನು ಕೊಂಡಾಡಿರಿ” ಎಂದು ಅವರಿಗೆ ಸನ್ನೆ ಮಾಡಿದರು.
(12) “ಓ ಯಹ್ಯಾ!(627) ಗ್ರಂಥವನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ” (ಎಂದು ನಾವು ಹೇಳಿದೆವು). ಬಾಲಕನಾಗಿರುವಾಗಲೇ ನಾವು ಅವರಿಗೆ ಜ್ಞಾನವನ್ನು ನೀಡಿದೆವು.
627. ಯಹ್ಯಾ(ಅ) ರನ್ನು ಕ್ರೈಸ್ತರು ಸ್ನಾನಿಕ ಯೋಹಾನನೆಂದು ಕರೆಯುತ್ತಾರೆ.
(13) ನಮ್ಮ ಕಡೆಯ ಅನುಕಂಪವನ್ನೂ, ಪಾವಿತ್ರ್ಯತೆಯನ್ನೂ (ನೀಡಿದೆವು). ಅವರು ಧರ್ಮನಿಷ್ಠೆಯುಳ್ಳವರಾಗಿದ್ದರು.
(14) ತಮ್ಮ ಮಾತಾಪಿತರಿಗೆ ಒಳಿತನ್ನು ಮಾಡುವವರೂ ಆಗಿದ್ದರು. ಅವರು ನಿಷ್ಠುರರೋ, ಅವಿಧೇಯತೆಯುಳ್ಳವರೋ ಆಗಿರಲಿಲ್ಲ.
(15) ಅವರು ಹುಟ್ಟಿದ ದಿನ, ಮರಣಹೊಂದುವ ದಿನ ಮತ್ತು ಜೀವ ನೀಡಿ ಎಬ್ಬಿಸಲಾಗುವ ದಿನ ಅವರ ಮೇಲೆ ಶಾಂತಿಯಿರುವುದು.
(16) ಗ್ರಂಥದಲ್ಲಿ ಮರ್ಯಮ್ರ ಬಗ್ಗೆ ಪ್ರಸ್ತಾಪಿಸಿರಿ. ಅವರು ತಮ್ಮ ಮನೆಯವರಿಂದ ದೂರವಾಗಿ ಪೂರ್ವ ದಿಕ್ಕಿನಲ್ಲಿರುವ ಒಂದು ಸ್ಥಳಕ್ಕೆ ತೆರಳಿ ತಂಗಿದ ಸಂದರ್ಭ.(628)
628. ಅಲ್ಲಾಹನಿನ ಸ್ಮರಣೆಯಲ್ಲಿ ಮಗ್ನರಾಗುವುದಕ್ಕಾಗಿ ಅವರು ಏಕಾಂತವಾಸವನ್ನು ಆರಿಸಿದರು.
(17) ತರುವಾಯ ಜನರು ಕಾಣದಿರಲೆಂದು ಅವರು ಒಂದು ಅಡ್ಡ ಮರೆಯನ್ನು ಮಾಡಿಕೊಂಡರು. ಆಗ ನಾವು ನಮ್ಮ ಕಡೆಯ ಆತ್ಮವನ್ನು (ಜಿಬ್ರೀಲರನ್ನು)(629) ಅವರ ಬಳಿಗೆ ಕಳುಹಿಸಿದೆವು. ಅವರು (ಜಿಬ್ರೀಲ್) ಮರ್ಯಮ್ರ ಮುಂದೆ ಪೂರ್ಣ ಮನುಷ್ಯ ರೂಪದಲ್ಲಿ ಪ್ರತ್ಯಕ್ಷರಾದರು.
629. ಜಿಬ್ರೀಲ್(ಅ) ಎಂಬ ಮಲಕ್ನ ಬಗ್ಗೆ ಕುರ್ಆನ್ ಅನೇಕ ಕಡೆ ‘ರೂಹ್’ (ಆತ್ಮ), ‘ರೂಹುಲ್ ಕುದ್ಸ್’ (ಪವಿತ್ರಾತ್ಮ) ಎಂಬ ನಾಮಗಳನ್ನು ಬಳಸಿದೆ.
(18) ಅವರು (ಮರ್ಯಮ್) ಹೇಳಿದರು: “ಖಂಡಿತವಾಗಿಯೂ ನಾನು ನಿನ್ನಿಂದ ಪರಮ ದಯಾಮಯನಲ್ಲಿ ಅಭಯವನ್ನು ಯಾಚಿಸುತ್ತಿರುವೆನು. ನೀನು ಧರ್ಮನಿಷ್ಠನಾಗಿದ್ದರೆ (ನನ್ನನ್ನು ಬಿಟ್ಟು ತೊಲಗು)”.(630)
630. ಪ್ರತ್ಯಕ್ಷವಾದದ್ದು ಓರ್ವ ಮಲಕ್ ಆಗಿರುವರು ಎಂಬುದನ್ನು ತಿಳಿಯದೆ ಅವರು ಆ ರೀತಿ ಹೇಳಿದ್ದರು.
(19) ಅವರು (ಜಿಬ್ರೀಲ್) ಹೇಳಿದರು: “ನಾನು ಪರಿಶುದ್ಧನಾಗಿರುವ ಒಂದು ಗಂಡುಮಗುವನ್ನು ತಮಗೆ ದಾನವಾಗಿ ನೀಡಲು ತಮ್ಮ ರಬ್ನ ಬಳಿಯಿಂದ ಬಂದಿರುವ ದೂತನು ಮಾತ್ರವಾಗಿರುವೆನು”.
(20) ಅವರು (ಮರ್ಯಮ್) ಹೇಳಿದರು: “ನನಗೆ ಗಂಡು ಮಗು ಆಗುವುದಾದರೂ ಹೇಗೆ? ಯಾವುದೇ ಮನುಷ್ಯನೂ ನನ್ನನ್ನು ಸ್ಪರ್ಶಿಸಿಲ್ಲ. ನಾನು ಶೀಲಗೆಟ್ಟವಳೂ ಅಲ್ಲ”.
(21) ಅವರು (ಜಿಬ್ರೀಲ್) ಹೇಳಿದರು: “(ಸಂಗತಿ) ಹಾಗೆಯೇ ಆಗಿದೆ. ಆದರೆ ತನ್ನ ಮಟ್ಟಿಗೆ ಹೇಳುವುದಾದರೆ ಅದೊಂದು ಕ್ಷುಲ್ಲಕ ವಿಷಯವಾಗಿದೆಯೆಂದು ತಮ್ಮ ರಬ್ ಹೇಳಿರುವನು”. ಅವನನ್ನು (ಆ ಮಗುವನ್ನು) ಮನುಷ್ಯರಿಗೆ ಒಂದು ದೃಷ್ಟಾಂತವನ್ನಾಗಿ ಮಾಡಲು ಮತ್ತು ನಮ್ಮ ಕಡೆಯ ಕರುಣೆಯನ್ನಾಗಿ ಮಾಡಲು (ನಾವು ಇಚ್ಛಿಸುತ್ತಿರುವೆವು). ಇದು ತೀರ್ಮಾನಿಸಲಾಗಿರುವ ಒಂದು ವಿಷಯವಾಗಿದೆ.
(22) ತರುವಾಯ ಅವರು (ಮರ್ಯಮ್) ಆ ಮಗುವಿನ ಗರ್ಭಧರಿಸಿ, ತರುವಾಯ ಅದರೊಂದಿಗೆ ವಿದೂರ ಸ್ಥಳವೊಂದರಲ್ಲಿ ವಾಸಿಸತೊಡಗಿದರು.
(23) ತರುವಾಯ ಹೆರಿಗೆ ನೋವು ಅವರನ್ನು ಖರ್ಜೂರದ ಮರವೊಂದರ ಬಳಿಗೆ ತಲುಪಿಸಿತು.(631) ಅವರು ಹೇಳಿದರು: “ನಾನು ಇದಕ್ಕಿಂತ ಮುಂಚೆಯೇ ಮೃತಪಟ್ಟು ಸಂಪೂರ್ಣ ಮರೆಯಲ್ಪಟ್ಟವಳಾಗಿ ಬಿಡುತ್ತಿದ್ದರೆ ಎಷ್ಟು ಚೆನ್ನಾಗಿತ್ತು!”
631. ಹೆರಿಗೆ ನೋವುಂಟಾದಾಗ ಮರಕ್ಕೆ ಒರಗಿ ಕುಳಿತು ವಿಶ್ರಾಂತಿ ಪಡೆಯಲಿಕ್ಕಾಗಿ ಅವರು ಅಲ್ಲಿಗೆ ಹೋಗಿರಬಹುದು.
(24) ತಕ್ಷಣ ಅವರ ತಳಭಾಗದಿಂದ (ಒಬ್ಬನು) ಅವರನ್ನು ಕೂಗಿ ಹೇಳಿದನು: “ತಾವು ವ್ಯಥೆಪಡದಿರಿ! ಖಂಡಿತವಾಗಿಯೂ ತಮ್ಮ ರಬ್ ತಮ್ಮ ತಳಭಾಗದಿಂದ ಒಂದು ತೊರೆಯನ್ನು(632) ಮಾಡಿಕೊಟ್ಟಿರುವನು.
632. ‘ಸರಿಯ್ಯ್’ ಎಂಬ ಪದವನ್ನು ತೊರೆ ಎಂದು ಭಾಷಾಂತರಿಸಲಾಗಿದೆ. ಆ ಪದಕ್ಕೆ ಮಹಾನ್ ಎಂದೂ ಅರ್ಥವಿದೆ. ಆ ಅರ್ಥದಂತೆ ಈ ವಾಕ್ಯದ ಭಾಷಾಂತರವು ‘ನಿನ್ನ ರಬ್ ನಿನ್ನ ಕೆಳಗೆ ಓರ್ವ ಮಹಾನ್ (ಪುತ್ರ)ನನ್ನು ಉಂಟು ಮಾಡಿರುವನು’ ಎಂದಾಗುತ್ತದೆ. ಕೂಗಿ ಹೇಳಿದ್ದು ಮಲಕ್ ಆಗಿತ್ತೇ ಅಥವಾ ನವಜಾತ ಶಿಶುವಾದ ಈಸಾ(ಅ) ರವರಾಗಿದ್ದರೇ ಎಂಬ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಅಲ್ಲಾಹು ನೀಡಿದ ಅಸಾಧಾರಣ ಸಾಮರ್ಥ್ಯದಿಂದ ಪ್ರವಾದಿ ಈಸಾ(ಅ) ರವರು ತೊಟ್ಟಿಲಲ್ಲಿರುವಾಗಲೇ ಮಾತನಾಡಿದ್ದಾಗಿ 30ನೇ ಸೂಕ್ತಿಯಲ್ಲಿ ಹೇಳಲಾಗಿದೆ.
(25) ಖರ್ಜೂರದ ಮರವನ್ನು ತಾವು ತಮ್ಮೆಡೆಗೆ ಎಳೆದು ಅಲುಗಾಡಿಸಿರಿ. ಆಗ ಅದು ತಮಗೆ ಹಣ್ಣಾದ ಖರ್ಜೂರವನ್ನು ಬೀಳಿಸುವುದು.
(26) ತರುವಾಯ ತಾವು ತಿನ್ನಿರಿ, ಕುಡಿಯಿರಿ ಮತ್ತು ಕಣ್ಮನ ತಣಿಸಿರಿ. ಜನರ ಪೈಕಿ ಯಾರನ್ನಾದರೂ ಕಂಡರೆ “ಪರಮದಯಾಮಯನಿಗಾಗಿ ನಾನೊಂದು ಉಪವಾಸವನ್ನು ಹರಕೆ ಹೊತ್ತಿರುವೆನು. ಆದುದರಿಂದ ಇಂದು ನಾನು ಯಾರೊಂದಿಗೂ ಮಾತನಾಡಲಾರೆನು” ಎಂದು ಹೇಳಿರಿ.
(27) ತರುವಾಯ ಅವರು ಅವರನ್ನು (ಮಗುವನ್ನು) ಹೊತ್ತು ತಮ್ಮ ಜನತೆಯ ಬಳಿಗೆ ಬಂದರು. ಅವರು ಹೇಳಿದರು: “ಓ ಮರ್ಯಮ್! ಖಂಡಿತವಾಗಿಯೂ ತಾವು ಆಕ್ಷೇಪಾರ್ಹವಾದ ಒಂದು ಕೃತ್ಯವನ್ನು ಮಾಡಿದ್ದೀರಿ.
(28) ಓ ಹಾರೂನರ ಸಹೋದರೀ!(633) ತಮ್ಮ ತಂದೆ ಒಬ್ಬ ಕೆಟ್ಟ ಮನುಷ್ಯನಾಗಿರಲಿಲ್ಲ ಮತ್ತು ತಮ್ಮ ತಾಯಿ ಒಬ್ಬ ಶೀಲಗೆಟ್ಟವಳಾಗಿರಲಿಲ್ಲ”.
633. ಹಾರೂನ್ ಎಂಬುದರ ಉದ್ದೇಶ ಮೂಸಾ(ಅ) ರ ಸಹೋದರ ಹಾರೂನ್ ಅಲ್ಲ. ಅವರು ಸಜ್ಜನರಾಗಿರುವ ಇನ್ನೊಬ್ಬರಾಗಿದ್ದಾರೆ. ಆರಾಧನೆಯಲ್ಲಿ ಮರ್ಯಮ್ರವರಿಗೆ ಅವರೊಂದಿಗೆ ಬಹಳ ಹೋಲಿಕೆಯಿತ್ತು.
(29) ಆಗ ಅವರು ಮಗುವಿನೆಡೆಗೆ ಸಂಜ್ಞೆ ಮಾಡಿದರು. ಅವರು (ಜನರು) ಕೇಳಿದರು: “ತೊಟ್ಟಿಲಲ್ಲಿ ಮಗುವಾಗಿರುವವನೊಂದಿಗೆ ನಾವು ಮಾತನಾಡುವುದು ಹೇಗೆ?”
(30) ಮಗು (ಈಸಾ) ಹೇಳಿತು: “ನಾನು ಅಲ್ಲಾಹುವಿನ ದಾಸನಾಗಿರುವೆನು. ಅವನು ನನಗೆ ಗ್ರಂಥವನ್ನು ನೀಡಿರುವನು ಮತ್ತು ನನ್ನನ್ನು ಪ್ರವಾದಿಯನ್ನಾಗಿ ಮಾಡಿರುವನು.
(31) ನಾನು ಎಲ್ಲೇ ಇದ್ದರೂ ಅವನು ನನ್ನನ್ನು ಅನುಗ್ರಹೀತನನ್ನಾಗಿ ಮಾಡಿರುವನು. ನಾನು ಬದುಕಿರುವವರೆಗೂ ನಮಾಝ್ ಮಾಡಲು ಮತ್ತು ಝಕಾತ್ ನೀಡಲು ಅವನು ನನ್ನೊಂದಿಗೆ ಆಜ್ಞಾಪಿಸಿರುವನು.
(32) ನನ್ನ ತಾಯಿಯೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸುವವನಾಗಿ (ಅವನು ನನ್ನನ್ನು ಮಾಡಿರುವನು). ಅವನು ನನ್ನನ್ನು ನಿಷ್ಠುರನೋ, ಭಾಗ್ಯಹೀನನೋ ಆಗಿ ಮಾಡಿಲ್ಲ.
(33) ನಾನು ಹುಟ್ಟಿದ ದಿನ, ಮರಣಹೊಂದುವ ದಿನ ಮತ್ತು ಜೀವ ನೀಡಿ ಎಬ್ಬಿಸಲ್ಪಡುವ ದಿನ ನನ್ನ ಮೇಲೆ ಶಾಂತಿಯಿರುವುದು”.
(34) ಅವರೇ ಮರ್ಯಮ್ರ ಮಗನಾದ ಈಸಾ.(634) ಯಾವ ವಿಷಯದಲ್ಲಿ ಅವರು ತರ್ಕಿಸುತ್ತಿರುವರೋ ಅದರ ಬಗ್ಗೆಯಿರುವ ನೈಜ ಮಾತು ಇದಾಗಿದೆ.
634. ಯೇಸು ಅಥವಾ ಜೀಸಸ್ ಎಂಬುದರ ಅರಬಿ ರೂಪವಾಗಿದೆ ‘ಈಸಾ’. ‘ಯಸೂಅ್’ ಎಂದೂ ಹೇಳಲಾಗುತ್ತದೆ. ಮಸೀಹ ಎಂಬುದರ ಅರಬಿ ರೂಪವಾಗಿದೆ ಮಸೀಹ್.
(35) ಸಂತತಿಯೊಂದನ್ನು ಮಾಡಿಕೊಳ್ಳುವುದು ಅಲ್ಲಾಹುವಿಗೆ ಯುಕ್ತವಾದುದಲ್ಲ.(635) ಅವನು ಪರಮ ಪಾವನನು. ಅವನು ಯಾವುದೇ ವಿಷಯವನ್ನು ತೀರ್ಮಾನಿಸಿದರೆ ಅದರೊಂದಿಗೆ ಅವನು ಹೇಳುವುದು “ಉಂಟಾಗು” ಎಂದು ಮಾತ್ರವಾಗಿರುವುದು. ತಕ್ಷಣ ಅದುಂಟಾಗುವುದು!
635. ಯೇಸುಕ್ರಿಸ್ತರು ದೇವಪುತ್ರನೆಂಬುದು ಸಂತ ಪೌಲನು ಸ್ವಯಂ ನಿರ್ಮಿಸಿದ ವಾದವಾಗಿದೆ.
(36) (ಈಸಾ ಹೇಳಿದರು): “ಖಂಡಿತವಾಗಿಯೂ ಅಲ್ಲಾಹು ನನ್ನ ಮತ್ತು ನಿಮ್ಮ ರಬ್ ಆಗಿರುವನು. ಆದ್ದರಿಂದ ನೀವು ಅವನನ್ನು (ಮಾತ್ರ) ಆರಾಧಿಸಿರಿ. ನೇರವಾದ ಮಾರ್ಗವು ಇದೇ ಆಗಿದೆ”.
(37) ತರುವಾಯ ಅವರ ನಡುವಿನಿಂದ ಗುಂಪುಗಳು ಭಿನ್ನಮತ ಹೊಂದಿದವು.(636) ಅವಿಶ್ವಾಸಿಗಳಿಗೆ ಭಯಾನಕವಾದ ದಿನವೊಂದರ ಸಾನಿಧ್ಯದಿಂದಾಗಿ ಮಹಾವಿನಾಶವಿದೆ.
636. ಇಸ್ರಾಈಲರಲ್ಲಿ ಒಂದು ಗುಂಪು ಪ್ರವಾದಿ ಈಸಾ(ಅ) ರಲ್ಲಿ ವಿಶ್ವಾಸವಿಟ್ಟರು. ಅವರೇ ಕ್ರೈಸ್ತರು. ಇನ್ನೊಂದು ಗುಂಪು ಯಹೂದ ಧರ್ಮದಲ್ಲೇ ಉಳಿಯಿತು. ತರುವಾಯ ಕ್ರೈಸ್ತರು ಅನೇಕ ಗುಂಪುಗಳಾಗಿ ವಿಭಜನೆ ಹೊಂದಿದರು.
(38) ಅವರು ನಮ್ಮ ಬಳಿಗೆ ಬರುವ ದಿನದಂದು ಅವರಿಗೆ ಎಂತಹ ಶ್ರವಣ ಮತ್ತು ದೃಷ್ಟಿಯಿರುವುದು!(637) ಆದರೆ ಇಂದು ಆ ಅಕ್ರಮಿಗಳು ಸ್ಪಷ್ಟವಾದ ಪಥಭ್ರಷ್ಟತೆಯಲ್ಲಿರುವರು.
637. ಇಹಲೋಕದಲ್ಲಿ ಸತ್ಯವನ್ನು ಅರಿತುಕೊಳ್ಳಲು ಅಥವಾ ಗ್ರಹಿಸಿಕೊಳ್ಳಲು ಸಿದ್ಧರಾಗದವರು ಪರಲೋಕಕ್ಕೆ ತಲುಪಿದಾಗ ಸತ್ಯವನ್ನು ಅತ್ಯಂತ ಸ್ಪಷ್ಟವಾಗಿ ಅರಿತುಕೊಳ್ಳುವರು. ತಾವು ಕಾಣುತ್ತಿರುವುದು ಮತ್ತು ಕೇಳುತ್ತಿರುವುದು ಏನೆಂದು ಅವರಿಗೆ ಸಂಶಯಾತೀತವಾಗಿ ಸ್ಪಷ್ಟವಾಗುವುದು. ಆದರೆ ಅದರಿಂದ ಅವರಿಗೆ ಯಾವುದೇ ಪ್ರಯೋಜನವೂ ಇರಲಾರದು.
(39) ನಷ್ಟಪ್ರಜ್ಞೆಯ ದಿನದ ಬಗ್ಗೆ ಅಥವಾ ವಿಷಯವು (ಅಂತಿಮವಾಗಿ) ತೀರ್ಮಾನಿಸಲಾಗುವ ಸಂದರ್ಭದ ಬಗ್ಗೆ ತಾವು ಅವರಿಗೆ ಮುನ್ನೆಚ್ಚರಿಕೆಯನ್ನು ನೀಡಿರಿ. ಅವರು ಅಲಕ್ಷ್ಯತೆಯಲ್ಲಿರುವರು. ಅವರು ವಿಶ್ವಾಸವಿಡುವುದಿಲ್ಲ.
(40) ಖಂಡಿತವಾಗಿಯೂ ಭೂಮಿಯ ಮತ್ತು ಅದರಲ್ಲಿರುವವರ ಉತ್ತರಾಧಿಕಾರಿಗಳು ನಾವಾಗಿರುವೆವು. ಅವರನ್ನು ನಮ್ಮೆಡೆಗೇ ಮರಳಿಸಲಾಗುವುದು.
(41) ಗ್ರಂಥದಲ್ಲಿ ಇಬ್ರಾಹೀಮ್ರ ಬಗ್ಗೆ ಪ್ರಸ್ತಾಪಿಸಿರಿ. ಖಂಡಿತವಾಗಿಯೂ ಅವರು ಸತ್ಯಸಂಧರೂ ಪ್ರವಾದಿಯೂ ಆಗಿದ್ದರು.
(42) ಅವರು ತಮ್ಮ ತಂದೆಯೊಂದಿಗೆ ಹೇಳಿದ ಸಂದರ್ಭ: “ಓ ನನ್ನ ತಂದೆಯವರೇ! ಆಲಿಸುವುದಾಗಲಿ, ನೋಡುವುದಾಗಲಿ ಮತ್ತು ತಮಗೆ ಯಾವುದೇ ಉಪಕಾರವನ್ನಾಗಲಿ ಮಾಡದವುಗಳನ್ನು ತಾವೇಕೆ ಆರಾಧಿಸುತ್ತಿದ್ದೀರಿ?
(43) ಓ ನನ್ನ ತಂದೆಯವರೇ! ಖಂಡಿತವಾಗಿಯೂ ತಮ್ಮ ಬಳಿಗೆ ಬರದಂತಹ ಜ್ಞಾನವು ನನ್ನ ಬಳಿಗೆ ಬಂದಿದೆ. ಆದುದರಿಂದ ತಾವು ನನ್ನನ್ನು ಅನುಸರಿಸಿರಿ. ನಾನು ತಮಗೆ ಸರಿಯಾದ ಮಾರ್ಗವನ್ನು ತೋರಿಸಿಕೊಡುವೆನು.
(44) ಓ ನನ್ನ ತಂದೆಯವರೇ! ತಾವು ಸೈತಾನನನ್ನು ಆರಾಧಿಸದಿರಿ. ಖಂಡಿತವಾಗಿಯೂ ಸೈತಾನನು ಪರಮ ದಯಾಮಯನನ್ನು ಧಿಕ್ಕರಿಸಿದವನಾಗಿರುವನು.
(45) ಓ ನನ್ನ ತಂದೆಯವರೇ! ಖಂಡಿತವಾಗಿಯೂ ಪರಮದಯಾಮಯನ ಕಡೆಯ ಯಾವುದಾದರೂ ಶಿಕ್ಷೆಯು ತಮ್ಮನ್ನು ಸ್ಪರ್ಶಿಸಬಹುದೆಂದು ನಾನು ಭಯಪಡುತ್ತಿರುವೆನು. ಆಗ ತಾವು ಸೈತಾನನ ಮಿತ್ರನಾಗಿ ಬಿಡುವಿರಿ”.
(46) ಅವನು ಹೇಳಿದನು: “ಓ ಇಬ್ರಾಹೀಮ್! ನೀನು ನನ್ನ ಆರಾಧ್ಯರನ್ನು ನಿರಾಕರಿಸುತ್ತಿರುವೆಯಾ? ನೀನು (ಇದನ್ನು) ನಿಲ್ಲಿಸದಿದ್ದರೆ ಖಂಡಿತವಾಗಿಯೂ ನಾನು ನಿನ್ನನ್ನು ಕಲ್ಲೆಸೆದು ಓಡಿಸುವೆನು. ದೀರ್ಘಕಾಲದ ತನಕ ನೀನು ನನ್ನಿಂದ ದೂರ ಹೋಗು”.
(47) ಇಬ್ರಾಹೀಮ್ ಹೇಳಿದರು: “ತಮಗೆ ಸಲಾಮ್! ತಮಗಾಗಿ ನಾನು ನನ್ನ ರಬ್ನೊಂದಿಗೆ ಪಾಪಮುಕ್ತಿಯನ್ನು ಬೇಡುವೆನು.(638) ಖಂಡಿತವಾಗಿಯೂ ಅವನು ನನ್ನೊಂದಿಗೆ ದಯೆಯುಳ್ಳವನಾಗಿರುವನು.
638. ತಂದೆಯ ಮನಪರಿವರ್ತನೆಗೊಳ್ಳುವುದನ್ನು ಆಶಿಸಿ ಅವರು ಹೀಗೆ ವಾಗ್ದಾನ ಮಾಡಿದ್ದರು. ಆದರೆ ತಂದೆ ಸೈತಾನನ ಮಿತ್ರನಾಗಿರುವರು ಮತ್ತು ಎಂದಿಗೂ ಸನ್ಮಾರ್ಗವನ್ನು ಸ್ವೀಕರಿಸಲಾರರು ಎಂದು ಖಾತ್ರಿಯಾದಾಗ ತಂದೆಯನ್ನು ಸತ್ಯಮಾರ್ಗದೆಡೆಗೆ ಆಹ್ವಾನಿಸುವ ಪ್ರಯತ್ನವನ್ನು ಅವರು ಕೈಬಿಟ್ಟರು. ನೋಡಿ: 9:114
(48) ನಾನು ನಿಮ್ಮನ್ನು ಮತ್ತು ಅಲ್ಲಾಹುವಿನ ಹೊರತು ನೀವು ಪ್ರಾರ್ಥಿಸುವವುಗಳನ್ನು ಬಿಟ್ಟುಬಿಡುವೆನು. ನಾನು ನನ್ನ ರಬ್ನೊಂದಿಗೆ ಪ್ರಾರ್ಥಿಸುವೆನು. ನನ್ನ ರಬ್ನೊಂದಿಗೆ ಪ್ರಾರ್ಥಿಸುವುದರಿಂದಾಗಿ ನಾನೆಂದೂ ಭಾಗ್ಯಹೀನನಾಗಿ ಬಿಡಲಾರೆನು”.
(49) ತರುವಾಯ ಅವರು (ಇಬ್ರಾಹೀಮ್) ಅವರನ್ನೂ, ಅಲ್ಲಾಹುವಿನ ಹೊರತು ಅವರು ಆರಾಧಿಸುವವುಗಳನ್ನೂ ಬಿಟ್ಟು ತೆರಳಿದಾಗ ನಾವು ಅವರಿಗೆ ಇಸ್ಹಾಕ್ (ಮಗ) ಮತ್ತು ಯಅ್ಕೂಬ್ (ಮೊಮ್ಮಗ)ರನ್ನು ದಯಪಾಲಿಸಿದೆವು. ಅವರೆಲ್ಲರನ್ನೂ ನಾವು ಪ್ರವಾದಿಗಳನ್ನಾಗಿ ಮಾಡಿದೆವು.
(50) ನಾವು ಅವರಿಗೆ ನಮ್ಮ ಕಾರುಣ್ಯದಿಂದ ದಯಪಾಲಿಸಿದೆವು ಮತ್ತು ಅವರಿಗೆ ಉನ್ನತವಾದ ಕೀರ್ತಿಯನ್ನು ಕರುಣಿಸಿದೆವು.
(51) ಗ್ರಂಥದಲ್ಲಿ ಮೂಸಾರ ಬಗ್ಗೆ ಪ್ರಸ್ತಾಪಿಸಿರಿ. ಖಂಡಿತವಾಗಿಯೂ ಅವರು ನಿಷ್ಕಳಂಕರಾಗಿದ್ದರು. ಅವರು ಸಂದೇಶವಾಹಕರೂ, ಪ್ರವಾದಿಯೂ ಆಗಿದ್ದರು.
(52) ಪರ್ವತದ ಬಲಭಾಗದಿಂದ ನಾವು ಅವರನ್ನು ಕರೆದೆವು ಮತ್ತು ಗುಪ್ತ ಸಂಭಾಷಣೆಗಾಗಿ ನಾವು ಅವರನ್ನು ಹತ್ತಿರಗೊಳಿಸಿದೆವು.
(53) ನಮ್ಮ ಕರುಣೆಯಿಂದಾಗಿ ನಾವು ಅವರಿಗೆ ಅವರ ಸಹೋದರರಾದ ಹಾರೂನ್ರನ್ನು ಒಬ್ಬ ಪ್ರವಾದಿಯನ್ನಾಗಿ ದಯಪಾಲಿಸಿದೆವು.
(54) ಗ್ರಂಥದಲ್ಲಿ ಇಸ್ಮಾಈಲ್ರ ಬಗ್ಗೆ ಪ್ರಸ್ತಾಪಿಸಿರಿ. ಖಂಡಿತವಾಗಿಯೂ ಅವನು ವಾಗ್ದಾನ ಪಾಲಕರಾಗಿದ್ದರು. ಅವರು ಸಂದೇಶವಾಹಕರೂ, ಪ್ರವಾದಿಯೂ ಆಗಿದ್ದರು.
(55) ಅವರು ತಮ್ಮ ಜನರಿಗೆ ನಮಾಝ್ ಮಾಡಲು ಮತ್ತು ಝಕಾತ್ ನೀಡಲು ಆಜ್ಞಾಪಿಸುತ್ತಿದ್ದರು. ಅವರು ತಮ್ಮ ರಬ್ನ ಬಳಿ ಸಂತೃಪ್ತಿ ಗಳಿಸಿದವರಾಗಿದ್ದರು.
(56) ಗ್ರಂಥದಲ್ಲಿ ಇದ್ರೀಸ್ರ ಬಗ್ಗೆ ಪ್ರಸ್ತಾಪಿಸಿರಿ. ಖಂಡಿತವಾಗಿಯೂ ಅವರು ಸತ್ಯಸಂಧರೂ ಪ್ರವಾದಿಯೂ ಆಗಿದ್ದರು.
(57) ನಾವು ಅವರನ್ನು ಉನ್ನತ ಪದವಿಗೆ ಏರಿಸಿದೆವು.
(58) ಅವರು ಅಲ್ಲಾಹು ಅನುಗ್ರಹ ನೀಡಿದ ಪ್ರವಾದಿಗಳಾಗಿರುವರು. ಅವರು ಆದಮ್ರ ಸಂತತಿಯಲ್ಲಿ ಸೇರಿದವರಾಗಿರುವರು, ನೂಹ್ರೊಂದಿಗೆ ನಾವು ಹಡಗಿನಲ್ಲಿ ಹತ್ತಿಸಿದವರಲ್ಲಿ ಸೇರಿದವರಾಗಿರುವರು ಮತ್ತು ಇಬ್ರಾಹೀಮ್ ಹಾಗೂ ಇಸ್ರಾಈಲ್ರ ಸಂತತಿಗಳಲ್ಲಿ ಸೇರಿದವರಾಗಿರುವರು. ನಾವು ಸನ್ಮಾರ್ಗದಲ್ಲಿ ಸೇರಿಸಿ ವಿಶೇಷವಾಗಿ ಆರಿಸಿದವರಲ್ಲೂ ಸೇರಿದವರಾಗಿರುವರು. ಅವರಿಗೆ ಪರಮ ದಯಾಮಯನ ಸೂಕ್ತಿಗಳನ್ನು ಓದಿ ಕೊಡಲಾದರೆ ಅವರು ಸಾಷ್ಟಾಂಗವೆರಗುವವರೂ ಅಳುವವರೂ ಆಗಿ ಬೀಳುವರು.
(59) ಅವರ ನಂತರ ಅವರ ಸ್ಥಾನದಲ್ಲಿ ಬೇರೊಂದು ತಲೆಮಾರು ಬಂದಿತು. ಅವರು ನಮಾಝನ್ನು ಹಾಳು ಮಾಡಿದರು ಮತ್ತು ದೇಹೇಚ್ಛೆಗಳನ್ನು ಅನುಸರಿಸಿದರು. ಅದರಿಂದಾಗಿ ಅವರು ದುರ್ಮಾರ್ಗದ ಫಲವನ್ನು ಕಾಣುವರು.
(60) ಆದರೆ ಪಶ್ಚಾತ್ತಾಪಪಟ್ಟವರು, ವಿಶ್ವಾಸವಿಟ್ಟವರು ಹಾಗೂ ಸತ್ಕರ್ಮಗೈದವರು ಇದರಿಂದ ಹೊರತಾಗಿರುವರು. ಅವರು ಸ್ವರ್ಗವನ್ನು ಪ್ರವೇಶಿಸುವರು. ಅವರೊಂದಿಗೆ ಸ್ವಲ್ಪವೂ ಅನ್ಯಾಯವೆಸಗಲಾಗದು.
(61) ಪರಮ ದಯಾಮಯನು ತನ್ನ ದಾಸರಿಗೆ ಅಗೋಚರವಾಗಿ ವಾಗ್ದಾನ ಮಾಡಿರುವ ಶಾಶ್ವತ ವಾಸಕ್ಕಿರುವ ಸ್ವರ್ಗೋದ್ಯಾನಗಳನ್ನು (ಅವರು ಪ್ರವೇಶಿಸುವರು). ಖಂಡಿತವಾಗಿಯೂ ಅವನ ವಾಗ್ದಾನವು ಜಾರಿಗೆ ಬರುವಂತದ್ದೇ ಆಗಿದೆ.
(62) ಸಲಾಮ್ ಎಂಬ ಮಾತನ್ನಲ್ಲದೆ ನಿರರ್ಥಕವಾದ ಯಾವುದನ್ನೂ ಅವರು ಅಲ್ಲಿ ಆಲಿಸಲಾರರು. ಅಲ್ಲಿ ಅವರಿಗೆ ಅವರ ಆಹಾರವನ್ನು ಪ್ರಭಾತದಲ್ಲೂ ಮುಸ್ಸಂಜೆಯಲ್ಲೂ ಒದಗಿಸಲಾಗುತ್ತಿರುವುದು.
(63) ನಮ್ಮ ದಾಸರಲ್ಲಿ ಯಾರು ಭಯಭಕ್ತಿ ಪಾಲಿಸುವವರಾಗಿದ್ದರೋ ಅವರಿಗೆ ನಾವು ಉತ್ತರಾಧಿಕಾರವಾಗಿ ನೀಡುವ ಸ್ವರ್ಗವಾಗಿದೆ ಅದು.
(64) (ಪ್ರವಾದಿಯೊಂದಿಗೆ ಜಿಬ್ರೀಲ್ ಹೇಳಿದರು): “ತಮ್ಮ ರಬ್ನ ಆಜ್ಞೆಯೊಂದಿಗೇ ಹೊರತು ನಾವು ಇಳಿಯಲಾರೆವು. ನಮ್ಮ ಮುಂಭಾಗದಲ್ಲಿ, ಹಿಂಭಾಗದಲ್ಲಿ ಮತ್ತು ಅವೆರಡರ ಮಧ್ಯೆಯಿರುವುದೆಲ್ಲವೂ ಅವನದ್ದಾಗಿವೆ. ತಮ್ಮ ರಬ್ ಮರೆತುಬಿಡುವವನಲ್ಲ”.
(65) ಅವನು ಆಕಾಶಗಳ, ಭೂಮಿಯ ಮತ್ತು ಅವೆರಡರ ಮಧ್ಯೆಯಿರುವವುಗಳ ರಬ್ ಆಗಿರುವನು. ಆದುದರಿಂದ ಅವನನ್ನು (ಮಾತ್ರ) ಆರಾಧಿಸಿರಿ ಮತ್ತು ಅವನ ಆರಾಧನೆಯಲ್ಲಿ ತಾವು ತಾಳ್ಮೆಯಿಂದ ಅಚಲರಾಗಿ ನಿಲ್ಲಿರಿ. ಅವನಿಗೆ ಸರಿಸಮಾನರಾಗಿರುವ ಯಾರನ್ನಾದರೂ ತಾವು ಅರಿತಿದ್ದೀರಾ?
(66) ಮನುಷ್ಯನು ಹೇಳುವನು: “ನಾನು ಮರಣ ಹೊಂದಿದ ಬಳಿಕ ನನ್ನನ್ನು ಪುನಃ ಜೀವ ನೀಡಿ ಹೊರತರಲಾಗುವುದೇ?”
(67) ಆದರೆ ತಾನು ಏನೂ ಆಗಿರದಿದ್ದ ಒಂದು ಸ್ಥಿತಿಯಲ್ಲಿದ್ದಾಗ ನಾವು ಅವನನ್ನು ಮೊದಲನೆಯ ಬಾರಿಗೆ ಸೃಷ್ಟಿಸಿರುವುದನ್ನು ಮನುಷ್ಯನು ಸ್ಮರಿಸಲಾರನೇ?
(68) ತಮ್ಮ ರಬ್ನ ಮೇಲಾಣೆ! ನಾವು ಅವರನ್ನೂ, ಸೈತಾನರನ್ನೂ ಖಂಡಿತವಾಗಿಯೂ ಒಟ್ಟುಗೂಡಿಸುವೆವು. ತರುವಾಯ ಮೊಣಕಾಲೂರಿದ ಸ್ಥಿತಿಯಲ್ಲಿ ಖಂಡಿತವಾಗಿಯೂ ನಾವು ಅವರನ್ನು ನರಕದ ಸುತ್ತಲೂ ಹಾಜರುಪಡಿಸುವೆವು.
(69) ತರುವಾಯ ಪ್ರತಿಯೊಂದು ಗುಂಪಿನಿಂದಲೂ ಪರಮ ದಯಾಮಯನೊಂದಿಗೆ ಕಡು ಧಿಕ್ಕಾರ ತೋರಿಸಿದವರನ್ನು ನಾವು ಬೇರ್ಪಡಿಸಿ ನಿಲ್ಲಿಸುವೆವು.
(70) ತರುವಾಯ ಅದರಲ್ಲಿ (ನರಕದಲ್ಲಿ) ಉರಿಯಲು ಅವರ ಪೈಕಿ ಹೆಚ್ಚು ಅರ್ಹರಾಗಿರುವವರು ಯಾರೆಂಬ ಬಗ್ಗೆ ನಾವು ಚೆನ್ನಾಗಿ ಅರಿತಿರುವೆವು.
(71) ಅದರ (ನರಕಾಗ್ನಿಯ) ಬಳಿಗೆ ಬರದಂತಹ ಯಾರೂ ನಿಮ್ಮಲ್ಲಿರಲಾರರು. ಅದು ತಮ್ಮ ರಬ್ನ ಖಚಿತವಾದ ಹಾಗೂ ಜಾರಿಗೊಳ್ಳುವ ಒಂದು ತೀರ್ಮಾನವಾಗಿದೆ.
(72) ತರುವಾಯ ನಾವು ಭಯಭಕ್ತಿ ಪಾಲಿಸಿದವರನ್ನು ರಕ್ಷಿಸುವೆವು ಮತ್ತು ಅಕ್ರಮಿಗಳನ್ನು ಮೊಣಕಾಲೂರಿದವರಾಗಿ ಅದರಲ್ಲಿ ಬಿಟ್ಟುಬಿಡುವೆವು.(639)
639. ಸತ್ಯವಿಶ್ವಾಸಿಗಳನ್ನು ಮತ್ತು ಸತ್ಯನಿಷೇಧಿಗಳನ್ನು ಅಲ್ಲಾಹು ನರಕದ ಮುಂದೆ ಹಾಜರುಪಡಿಸುವನು ಮತ್ತು ತದನಂತರ ಧರ್ಮನಿಷ್ಠೆಯುಳ್ಳ ಸತ್ಯವಿಶ್ವಾಸಿಗಳನ್ನು ರಕ್ಷಿಸುವನು ಹಾಗೂ ಸತ್ಯನಿಷೇಧಿಗಳನ್ನು ನರಕಕ್ಕೆ ತಳ್ಳುವನೆಂದು ಇದರಿಂದ ಗ್ರಹಿಸಬಹುದು.
(73) ನಮ್ಮ ಸ್ಪಷ್ಟ ದೃಷ್ಟಾಂತಗಳನ್ನು ಅವರಿಗೆ ಓದಿಕೊಡಲಾದರೆ ಅವಿಶ್ವಾಸಿಗಳು ವಿಶ್ವಾಸಿಗಳೊಂದಿಗೆ ಹೇಳುವರು: “ಈ ಎರಡು ಗುಂಪುಗಳಲ್ಲಿ ಅತ್ಯುತ್ತಮ ಪದವಿಯಿರುವವರು ಮತ್ತು ಅತ್ಯುತ್ತಮ ಜನಬಲವುಳ್ಳವರು ಯಾರು?”(640)
640. ಇದು ಶ್ರೀಮಂತರು, ಸುಖಲೋಲುಪರು ಮತ್ತು ಜನಬಲವುಳ್ಳವರೇ ಭಾಗ್ಯವಂತರೆಂದು ಭಾವಿಸುವ ಸತ್ಯನಿಷೇಧಿಗಳು ಲೇವಡಿಯೊಂದಿಗೆ ಕೇಳುವ ಪ್ರಶ್ನೆಯಾಗಿದೆ.
(74) ಸರಕು ಸಾಮಗ್ರಿಗಳಲ್ಲಿ ಮತ್ತು ಬಾಹ್ಯರೂಪದಲ್ಲಿ ಅತ್ಯುತ್ತಮರಾಗಿದ್ದ ಎಷ್ಟೊಂದು ತಲೆಮಾರುಗಳನ್ನು ನಾವು ಅವರಿಗಿಂತ ಮುಂಚೆ ನಾಶ ಮಾಡಿರುವೆವು!
(75) (ಓ ಪ್ರವಾದಿಯವರೇ!) ಹೇಳಿರಿ: “ಯಾರಾದರೂ ಪಥಭ್ರಷ್ಟನಾಗಿಬಿಟ್ಟರೆ ಪರಮ ದಯಾಮಯನು ಅವನಿಗೆ ಕಾಲಾವಧಿಯವನ್ನು ದೀರ್ಘೀಕರಿಸಿಕೊಡುವನು”. ಕೊನೆಗೆ ತಮಗೆ ಮುನ್ನೆಚ್ಚರಿಕೆ ನೀಡಲಾಗುವ ಸಂಗತಿಯನ್ನು ಅಂದರೆ ಒಂದೋ ಶಿಕ್ಷೆಯನ್ನು ಅಥವಾ ಅಂತ್ಯಘಳಿಗೆಯನ್ನು ಅವರು ಕಾಣುವರು. ಆಗ ಅತಿನಿಕೃಷ್ಟ ಸ್ಥಾನವಿರುವವರು ಯಾರು ಮತ್ತು ಅತಿ ದುರ್ಬಲ ಸೈನ್ಯವು ಯಾರದೆಂದು ಅವರು ಅರಿತುಕೊಳ್ಳುವರು.
(76) ಸನ್ಮಾರ್ಗ ಪಡೆದವರಿಗೆ ಅಲ್ಲಾಹು ಸನ್ಮಾರ್ಗ ನಿಷ್ಠೆಯನ್ನು ಹೆಚ್ಚಿಸಿಕೊಡುವನು. ಆದರೆ ನೆಲೆನಿಲ್ಲುವ ಸತ್ಕರ್ಮಗಳು ತಮ್ಮ ರಬ್ನ ಬಳಿ ಅತ್ಯುತ್ತಮವಾದ ಪ್ರತಿಫಲವನ್ನು ನೀಡುವಂತದ್ದೂ ಅತ್ಯುತ್ತಮವಾದ ಪರಿಣಾಮವಿರುವಂತದ್ದೂ ಆಗಿವೆ.
(77) ಆದರೆ ನಮ್ಮ ದೃಷ್ಟಾಂತಗಳಲ್ಲಿ ಅವಿಶ್ವಾಸವಿಟ್ಟು “ಖಂಡಿತವಾಗಿಯೂ ನನಗೆ ಸಂಪತ್ತು ಮತ್ತು ಸಂತತಿಯನ್ನು ನೀಡಲಾಗುವುದು” ಎಂದು ಹೇಳಿದವನನ್ನು ತಾವು ಕಂಡಿದ್ದೀರಾ?
(78) ಅವನು ಅಗೋಚರ ಜ್ಞಾನವನ್ನು ಅರಿತಿರುವನೇ? ಅಥವಾ ಪರಮ ದಯಾಮಯನ ಬಳಿ ಅವನು ಯಾವುದಾದರೂ ಕರಾರನ್ನು ಮಾಡಿರುವನೇ?
(79) ಇಲ್ಲ, ಅವನು ಹೇಳುವುದನ್ನು ನಾವು ದಾಖಲಿಸುವೆವು ಮತ್ತು ಅವನಿಗೆ ನಾವು ಶಿಕ್ಷೆಯನ್ನು ಹೆಚ್ಚಿಸುತ್ತಲೇ ಇರುವೆವು.
(80) ಅವನು ಹೇಳುತ್ತಿರುವವುಗಳಿಗೆ (ಸಂಪತ್ತು ಮತ್ತು ಸಂತತಿಗಳಿಗೆ) ಉತ್ತರಾಧಿಕಾರಿಗಳು ನಾವಾಗಿರುವೆವು. ಅವನು ನಮ್ಮ ಬಳಿಗೆ ಒಂಟಿಯಾಗಿಯೇ ಬರುವನು.
(81) ಅವರು ಅಲ್ಲಾಹುವಿನ ಹೊರತು ಅನ್ಯ ಆರಾಧ್ಯರನ್ನು ಮಾಡಿಕೊಂಡಿರುವರು, ಅವರು ಇವರಿಗೆ ಬೆಂಬಲವಾಗುವ ಸಲುವಾಗಿ!
(82) ಇಲ್ಲ, ಇವರು ಮಾಡಿರುವ ಆರಾಧನೆಯನ್ನು ಅವರು ನಿಷೇಧಿಸುವರು ಮತ್ತು ಅವರು ಇವರ ವಿರೋಧಿಗಳಾಗಿ ಬಿಡುವರು.
(83) ಸತ್ಯನಿಷೇಧಿಗಳ ಬಳಿಗೆ, ಅವರನ್ನು ತೀವ್ರ ಪ್ರಚೋದನೆಗೊಳಪಡಿಸಲು ನಾವು ಸೈತಾನರನ್ನು ಕಳುಹಿಸಿರುವುದನ್ನು ತಾವು ಕಂಡಿಲ್ಲವೇ?
(84) ಆದುದರಿಂದ ಅವರ ವಿಷಯದಲ್ಲಿ ತಾವು ಆತುರಪಡದಿರಿ. ನಾವು ಅವರಿಗಾಗಿ (ದಿನಗಳನ್ನು) ಎಣಿಸುವುದನ್ನು ಮಾತ್ರ ಮಾಡುತ್ತಿರುವೆವು!
(85) ಭಯಭಕ್ತಿಯುಳ್ಳವರನ್ನು ನಾವು ಗಣ್ಯ ಅತಿಥಿಗಳನ್ನಾಗಿ ಪರಮ ದಯಾಮಯನೆಡೆಗೆ ಒಟ್ಟುಗೂಡಿಸುವ ದಿನ!
(86) ಅಪರಾಧಿಗಳನ್ನು ನಾವು ಬಾಯಾರಿದವರನ್ನಾಗಿ ನರಕದೆಡೆಗೆ ಸಾಗಿಸುವೆವು.
(87) (ಅಂದು) ಪರಮ ದಯಾಮಯನೊಂದಿಗೆ ಕರಾರು ಮಾಡಿರುವವನ ಹೊರತು ಯಾರಿಗೂ ಶಿಫಾರಸು ಮಾಡುವ ಅಧಿಕಾರವಿರದು.(641)
641. ಏಕದೇವವಿಶ್ವಾಸಿಗಳಾಗಿ ಜೀವಿಸುವೆವು ಎಂಬುದು ಮನುಷ್ಯರು ಅಲ್ಲಾಹನಿನೊಂದಿಗೆ ಮಾಡಿಕೊಂಡಿರುವ ಕರಾರಾಗಿದೆ.
(88) ಪರಮ ದಯಾಮಯನು ಒಂದು ಸಂತತಿಯನ್ನು ಮಾಡಿಕೊಂಡಿರುವನೆಂದು ಅವರು ಹೇಳಿರುವರು.
(89) (ಓ ಜನರೇ!) ನೀವು ಮಾಡಿರುವುದು ಖಂಡಿತವಾಗಿಯೂ ಒಂದು ಗುರುತರವಾದ ಕೃತ್ಯವಾಗಿದೆ.
(90) ಅದರಿಂದಾಗಿ ಆಕಾಶಗಳು ಒಡೆದು ಛಿದ್ರವಾಗಿ, ಭೂಮಿಯು ಬಿರುಕು ಬಿಟ್ಟು, ಪರ್ವತಗಳು ನುಚ್ಚುನೂರಾಗಿ ಬೀಳುವಂತಾಗುವುದು.
(91) ಪರಮ ದಯಾಮಯನಿಗೆ ಸಂತತಿಯಿದೆಯೆಂದು ಅವರು ವಾದಿಸಿದ ಕಾರಣದಿಂದಾಗಿ.
(92) ಸಂತತಿಯನ್ನು ಮಾಡಿಕೊಳ್ಳುವುದು ಪರಮ ದಯಾಮಯನಿಗೆ ಯುಕ್ತವಾದುದಲ್ಲ.
(93) ಭೂಮ್ಯಾಕಾಶಗಳಲ್ಲಿರುವ ಯಾವುದೇ ವ್ಯಕ್ತಿಯೂ ಪರಮ ದಯಾಮಯನ ಬಳಿಗೆ ಒಬ್ಬ ದಾಸನಾಗಿಯೇ ಹೊರತು ಬರಲಾರನು.
(94) ಖಂಡಿತವಾಗಿಯೂ ಅವನು ಅವರನ್ನು ನಿಖರವಾಗಿ ಎಣಿಸಿರುವನು.
(95) ಪುನರುತ್ಥಾನ ದಿನದಂದು ಅವರೆಲ್ಲರೂ ಅವನ ಬಳಿಗೆ ಒಂಟಿಯಾಗಿಯೇ ಬರುವರು.
(96) ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ ಪರಮ ದಯಾಮಯನು ಖಂಡಿತವಾಗಿಯೂ ಪ್ರೀತಿ ಸಿಗುವಂತೆ ಮಾಡುವನು.(642)
642. ಸತ್ಯವಿಶ್ವಾಸಿಗಳಾದ ಸತ್ಕರ್ಮಿಗಳಿಗೆ ಮಲಕ್ಗಳ ಮತ್ತು ಸಜ್ಜನರ ಪ್ರೀತಿ ಸಿಗುವಂತೆ ಅಲ್ಲಾಹು ಮಾಡುವನು.
(97) ನಾವು ಇದನ್ನು (ಕುರ್ಆನನ್ನು) ತಮ್ಮ ಭಾಷೆಯಲ್ಲಿ ಸರಳಗೊಳಿಸಿಕೊಟ್ಟಿರುವುದು ತಾವು ಇದರ ಮೂಲಕ ಭಯಭಕ್ತಿ ಪಾಲಿಸುವವರಿಗೆ ಶುಭವಾರ್ತೆಯನ್ನು ನೀಡುವ ಸಲುವಾಗಿ ಮತ್ತು ಹಟಮಾರಿಗಳಾದ ಜನರಿಗೆ ಇದರ ಮೂಲಕ ಎಚ್ಚರಿಕೆಯನ್ನು ನೀಡುವ ಸಲುವಾಗಿ ಮಾತ್ರವಾಗಿದೆ.
(98) ಅವರಿಗಿಂತ ಮುಂಚೆ ನಾವು ಎಷ್ಟೋ ತಲೆಮಾರುಗಳನ್ನು ನಾಶ ಮಾಡಿರುವೆವು. ಅವರಲ್ಲಿ ಯಾರನ್ನಾದರೂ ತಾವು ಕಾಣುತ್ತಿದ್ದೀರಾ? ಅಥವಾ ಅವರ ಮೆಲುದನಿಯನ್ನಾದರೂ ಆಲಿಸುತ್ತಿದ್ದೀರಾ?