(1) ಅಲಿಫ್-ಲಾಮ್-ಮೀಮ್.
(2) ಇದು ಗ್ರಂಥ. ಇದರಲ್ಲಿ ಸಂದೇಹವೇ ಇಲ್ಲ. ಭಯಭಕ್ತಿ ಪಾಲಿಸುವವರಿಗೆ ಇದು ಸನ್ಮಾರ್ಗವನ್ನು ತೋರಿಸಿಕೊಡುತ್ತದೆ.
(3) ಅವರು (ಭಯಭಕ್ತಿ ಪಾಲಿಸುವವರು) ಅಗೋಚರ ವಿಷಯಗಳಲ್ಲಿ ವಿಶ್ವಾಸವಿಡುವವರೂ, ನಮಾಝ್ ಸಂಸ್ಥಾಪಿಸುವವರೂ, ನಾವು ಒದಗಿಸಿರುವ ಸಂಪತ್ತಿನಿಂದ ವ್ಯಯಿಸುವವರೂ ಆಗಿರುವರು.
(4) ಅವರು ತಮಗೂ, ತಮಗಿಂತ ಮುಂಚಿನವರಿಗೂ ಅವತೀರ್ಣಗೊಂಡಿರುವುದರಲ್ಲಿ ವಿಶ್ವಾಸವಿಡುವವರೂ, ಪರಲೋಕದಲ್ಲಿ ದೃಢವಿಶ್ವಾಸವಿಡುವವರೂ ಆಗಿರುವರು.
(5) ಅವರು ತಮ್ಮ ರಬ್‌ನ ವತಿಯ ಸನ್ಮಾರ್ಗದಲ್ಲಿರುವರು. ಯಶಸ್ಸು ಗಳಿಸಿದವರು ಅವರೇ ಆಗಿರುವರು.
(6) ಸತ್ಯನಿಷೇಧಿಗಳಿಗೆ ತಾವು ಮುನ್ನೆಚ್ಚರಿಕೆ ನೀಡಿದರೂ, ನೀಡದಿದ್ದರೂ ಅವರ ಪಾಲಿಗೆ ಅದು ಸಮಾನವಾಗಿರುವುದು. ಅವರು ವಿಶ್ವಾಸವಿಡಲಾರರು.
(7) ಅಲ್ಲಾಹು ಅವರ ಹೃದಯಗಳ ಮೇಲೆ ಮತ್ತು ಅವರ ಕಿವಿಗಳ ಮೇಲೆ ಮುದ್ರೆಯೊತ್ತಿರುವನು.(4) ಅವರ ದೃಷ್ಟಿಗಳ ಮೇಲೆ ಒಂದು ಹೊದಿಕೆಯಿರುವುದು. ಅವರಿಗೆ ಭೀಕರ ಶಿಕ್ಷೆಯೂ ಇರುವುದು.
4. ಸತ್ಯವನ್ನು ಗ್ರಹಿಸಲು ಅವರು ಸ್ವಲ್ಪವೂ ಆಸಕ್ತಿ ತೋರಿಸದಿರುವುದರಿಂದ ಅಲ್ಲಾಹು ಅವರ ಹೃದಯ, ಕಣ್ಣು ಮತ್ತು ಕಿವಿಗಳನ್ನು ಮುಚ್ಚಿದ ಸ್ಥಿತಿಯಲ್ಲಿಟ್ಟಿರುವನು.
(8) ‘ನಾವು ಅಲ್ಲಾಹುವಿನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಟ್ಟಿರುವೆವು’ ಎಂದು ಹೇಳುವ ಕೆಲವರು ಜನರಲ್ಲಿರುವರು; ಆದರೆ ಅವರು ವಿಶ್ವಾಸಿಗಳಲ್ಲ.
(9) ಅವರು ಅಲ್ಲಾಹುವನ್ನು ಮತ್ತು ವಿಶ್ವಾಸಿಗಳನ್ನು ವಂಚಿಸಲು ಯತ್ನಿಸುತ್ತಿರುವರು. ಆದರೆ ಅವರು ಸ್ವತಃ ಅವರನ್ನೇ ವಿನಾ ವಂಚಿಸಲಾರರು.(5) ಅವರದನ್ನು ಗ್ರಹಿಸುವುದಿಲ್ಲ.
5. ಜಗತ್ತಿನಲ್ಲಿರುವ ಮನುಷ್ಯರೆಲ್ಲರೂ ವಿಶ್ವಾಸಿಗಳಾದರೂ ಅದರಿಂದ ಅಲ್ಲಾಹುವಿಗೇನೂ ಲಾಭವಿಲ್ಲ. ಇನ್ನು ಮನುಷ್ಯರೆಲ್ಲರೂ ಅವನನ್ನು ನಿಷೇಧಿಸಿದರೂ ಅವನಿಗೇನೂ ನಷ್ಟವಿಲ್ಲ. ಮನುಷ್ಯರು ಏನೇ ವಂಚನೆ ಮಾಡಿದರೂ ಅದರ ಫಲವನ್ನು ಸ್ವತಃ ಅವರೇ ಅನುಭವಿಸುವರು.
(10) ಅವರ ಹೃದಯಗಳಲ್ಲಿ ಒಂದು ರೀತಿಯ ರೋಗವಿದೆ. ಅಲ್ಲಾಹು ಅವರಿಗೆ ರೋಗವನ್ನು ಉಲ್ಬಣಗೊಳಿಸಿರುವನು. ಸುಳ್ಳು ನುಡಿಯುವ ಫಲವಾಗಿ ಅವರಿಗೆ ಯಾತನಾಮಯವಾದ ಶಿಕ್ಷೆಯೂ ಇರುವುದು.
(11) ‘ನೀವು ನಾಡಿನಲ್ಲಿ ಗಲಭೆ ಮಾಡದಿರಿ’ ಎಂದು ಅವರೊಂದಿಗೆ ಹೇಳಲಾದರೆ, ‘ನಾವು ಮಾಡುತ್ತಿರುವುದು ಸುಧಾರಣೆ ಮಾತ್ರವಾಗಿದೆ’ ಎಂದು ಅವರು ಉತ್ತರಿಸುವರು.
(12) ಆದರೆ ವಾಸ್ತವಿಕವಾಗಿ ಗಲಭೆಕೋರರು ಅವರೇ ಆಗಿರುವರು. ಆದರೆ ಅವರದನ್ನು ಗ್ರಹಿಸಲಾರರು.
(13) ‘ಜನರು ವಿಶ್ವಾಸವಿಟ್ಟಂತೆ ನೀವೂ ವಿಶ್ವಾಸವಿಡಿರಿ’ ಎಂದು ಅವರೊಂದಿಗೆ ಹೇಳಲಾದರೆ, ‘ಈ ಮೂರ್ಖರು ವಿಶ್ವಾಸವಿಟ್ಟಂತೆ ನಾವು ವಿಶ್ವಾಸವಿಡುವುದೇ?’ ಎಂದು ಅವರು ಕೇಳುವರು. ಆದರೆ ವಾಸ್ತವಿಕವಾಗಿ ಮೂರ್ಖರು ಅವರೇ ಆಗಿರುವರು. ಆದರೆ ಅವರು ಅದನ್ನು ಅರಿತುಕೊಳ್ಳಲಾರರು.
(14) ವಿಶ್ವಾಸಿಗಳನ್ನು ಭೇಟಿಯಾಗುವಾಗ ಅವರು ಹೇಳುವರು, ‘ನಾವು ವಿಶ್ವಾಸವಿಟ್ಟಿರುವೆವು’. ತಮ್ಮ (ಒಡನಾಡಿಗಳಾದ) ಸೈತಾನರ ಬಳಿ ಒಂಟಿಯಾಗಿರುವಾಗ ಅವರು ಹೇಳುವರು: ‘ನಾವು ನಿಮ್ಮ ಜೊತೆಯಲ್ಲೇ ಇರುವೆವು. ನಾವು (ಅವರನ್ನು) ಕೇವಲ ಗೇಲಿ ಮಾಡುವವರಾಗಿದ್ದೇವೆ’.
(15) ಆದರೆ ಅಲ್ಲಾಹು ಅವರನ್ನು ಗೇಲಿಮಾಡುತ್ತಿರುವನು ಮತ್ತು ಅತಿಕ್ರಮಗಳಲ್ಲಿ ವಿಹರಿಸುವಂತೆ ಅವರನ್ನು ಬಿಟ್ಟುಬಿಟ್ಟಿರುವನು.
(16) ಅವರು ಸನ್ಮಾರ್ಗವನ್ನು ಮಾರಿ ಬದಲಿಗೆ ದುರ್ಮಾರ್ಗವನ್ನು ಖರೀದಿಸಿದವರಾಗಿರುವರು. ಆದರೆ ಅವರ ವ್ಯಾಪಾರವು ಲಾಭಕರವಾಗದು ಮತ್ತು ಅವರು ಗುರಿಯನ್ನೂ ತಲುಪಲಾರರು.
(17) ಅವರನ್ನು ಒಬ್ಬ ವ್ಯಕ್ತಿಯೊಂದಿಗೆ ಹೋಲಿಸಬಹುದು; ಅವನು ಒಂದು ಬೆಂಕಿಯನ್ನು ಉರಿಸಿದನು. ಪರಿಸರವೆಲ್ಲವೂ ಬೆಳಗಿದಾಗ ಅಲ್ಲಾಹು ಆ ಬೆಳಕನ್ನು ನಂದಿಸಿದನು ಮತ್ತು ಏನನ್ನೂ ಕಾಣಲಾಗದಂತಹ ಕತ್ತಲೆಯಲ್ಲಿ (ಪರದಾಡುವಂತೆ) ಅವರನ್ನು ಬಿಟ್ಟನು.
(18) ಅವರು ಕಿವುಡರು, ಮೂಕರು ಮತ್ತು ಕುರುಡರಾಗಿರುವರು. ಆದ್ದರಿಂದ ಅವರು (ಸತ್ಯದೆಡೆಗೆ) ಮರಳಿ ಬರಲಾರರು.
(19) ಅಥವಾ (ಅವರನ್ನು) ಆಕಾಶದಿಂದ ಸುರಿಯುವ ಒಂದು ಜಡಿಮಳೆಗೆ ಹೋಲಿಸಬಹುದು. ಅದರೊಂದಿಗೆ ಕಾರ್ಗತ್ತಲು, ಸಿಡಿಲು ಮತ್ತು ಮಿಂಚುಗಳಿವೆ. ಸಿಡಿಲಿನ ಗರ್ಜನೆಯ ನಿಮಿತ್ತ ಮರಣವನ್ನು ಭಯಪಟ್ಟು ಅವರು ತಮ್ಮ ಬೆರಳುಗಳನ್ನು ಕಿವಿಗಳಲ್ಲಿ ತೂರಿಸುವರು. ಅಲ್ಲಾಹು ಸತ್ಯನಿಷೇಧಿಗಳನ್ನು ಆವರಿಸಿರುವನು.
(20) ಮಿಂಚು ಅವರ ದೃಷ್ಟಿಗಳನ್ನು ಅಪಹರಿಸುವಂತಿರುವುದು. ಅದು (ಮಿಂಚು) ಅವರಿಗೆ ಬೆಳಕು ನೀಡುವಾಗಲೆಲ್ಲ ಅವರು ಆ ಬೆಳಕಿನಲ್ಲಿ ನಡೆಯುವರು. ಕತ್ತಲಾಗುವಾಗ ಅವರು ನಿಂತುಬಿಡುವರು. ಅಲ್ಲಾಹು ಇಚ್ಛಿಸಿದರೆ ಅವನು ಅವರ ಶ್ರವಣವನ್ನು ಮತ್ತು ದೃಷ್ಟಿಯನ್ನು ಪೂರ್ಣವಾಗಿ ನಾಶ ಮಾಡುತ್ತಿದ್ದನು. ಖಂಡಿತವಾಗಿಯೂ ಅಲ್ಲಾಹು ಸಕಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.
(21) ಓ ಮನುಷ್ಯರೇ! ನೀವು ನಿಮ್ಮನ್ನು ಮತ್ತು ನಿಮ್ಮ ಪೂರ್ವಿಕರನ್ನು ಸೃಷ್ಟಿಸಿದ ನಿಮ್ಮ ರಬ್ಬನ್ನು ಆರಾಧಿಸಿರಿ. ನೀವು ಭಯಭಕ್ತಿ ಪಾಲಿಸುವವರಾಗುವ ಸಲುವಾಗಿ.
(22) ನಿಮಗೋಸ್ಕರ ಭೂಮಿಯನ್ನು ಹಾಸನ್ನಾಗಿ ಮತ್ತು ಆಕಾಶವನ್ನು ಮೇಲ್ಛಾವಣಿಯನ್ನಾಗಿ ಮಾಡಿಕೊಟ್ಟಿರುವ, ಹಾಗೂ ಆಕಾಶದಿಂದ ನೀರನ್ನು ಇಳಿಸಿ ತನ್ಮೂಲಕ ನಿಮಗೆ ಭಕ್ಷ್ಯಯೋಗ್ಯ ಫಲಗಳನ್ನು ಉತ್ಪಾದಿಸಿಕೊಟ್ಟಿರುವ (ರಬ್ಬನ್ನು ಆರಾಧಿಸಿರಿ). ಆದ್ದರಿಂದ (ಇವೆಲ್ಲವನ್ನೂ) ಅರಿತವರಾಗಿದ್ದೂ ಸಹ ನೀವು ಅಲ್ಲಾಹುವಿಗೆ ಪ್ರತಿಸ್ಪರ್ಧಿಗಳನ್ನು ಮಾಡದಿರಿ.(6)
6. ಜನನ-ಮರಣಗಳನ್ನು ನೀಡಿ, ತಲೆಮಾರುಗಳ ಮೂಲಕ ಜೀವ ಎಂಬ ವಿಸ್ಮಯವನ್ನು ನೆಲೆನಿಲ್ಲಿಸಿದ, ಆಕಾಶದಲ್ಲಿ ಮತ್ತು ಭೂಮಿಯಲ್ಲಿ ಬದುಕನ್ನು ಸಾಗಿಸಲು ಅಗತ್ಯವಿರುವ ಅದ್ಭುತಕರವಾದ ವ್ಯವಸ್ಥೆಯನ್ನು ಸಜ್ಜುಗೊಳಿಸಿದ ಜಗದೊಡೆಯನನ್ನು ಬಹುತೇಕ ಎಲ್ಲ ಧರ್ಮೀಯರೂ ಅಂಗೀಕರಿಸುತ್ತಾರೆ. ಆದರೆ ಇದನ್ನು ತಿಳಿದೂ ಕೂಡ ಅವರ ಪೈಕಿ ಹೆಚ್ಚಿನವರೂ ಅಲ್ಲಾಹೇತರ ಶಕ್ತಿಗಳನ್ನು ಪೂಜಿಸುವುದರಲ್ಲಿ ಮತ್ತು ಪ್ರಾರ್ಥಿಸುವುದರಲ್ಲಿ ತಲ್ಲೀನರಾಗಿರುವರು. ಇದು ಸೃಷ್ಟಿಕರ್ತನಿಗೆ ಪ್ರತಿಸ್ಪರ್ಧಿಗಳನ್ನು ಮಾಡುವುದಾಗಿದ್ದು, ಇದು ನಿಷಿದ್ಧವೆಂದು ಈ ಸೂಕ್ತಿಯು ಸೂಚಿಸುತ್ತದೆ.
(23) ನಮ್ಮ ದಾಸನಿಗೆ ನಾವು ಅವತೀರ್ಣಗೊಳಿಸಿರುವುದರ (ಕುರ್‌ಆನ್‍ನ) ಕುರಿತು ನೀವು ಸಂದೇಹದಲ್ಲಿದ್ದರೆ ಅದರಂತಿರುವ ಒಂದು ಅಧ್ಯಾಯವನ್ನಾದರೂ ತನ್ನಿರಿ. ಅಲ್ಲಾಹುವಿನ ಹೊರತು ನಿಮಗಿರುವ ಸಹಾಯಕರನ್ನೂ ಆಹ್ವಾನಿಸಿರಿ. ನೀವು ಸತ್ಯಸಂಧರಾಗಿದ್ದರೆ (ಅದನ್ನು ಮಾಡಿ ತೋರಿಸಿರಿ).
(24) ನಿಮಗೆ ಅದನ್ನು ಮಾಡಲು ಸಾಧ್ಯವಾಗದಿದ್ದಲ್ಲಿ -ಅದನ್ನು ಮಾಡಲು ನಿಮಗೆಂದೂ ಸಾಧ್ಯವಾಗದು- ಮನುಷ್ಯರನ್ನು ಮತ್ತು ಕಲ್ಲುಗಳನ್ನು(7) ಇಂಧನವಾಗಿಸಿ ಉರಿಸಲಾಗುವ ನರಕಾಗ್ನಿಯನ್ನು ಭಯಪಡಿರಿ. ಅದನ್ನು ಸತ್ಯನಿಷೇಧಿಗಳಿಗಾಗಿ ಸಿದ್ಧಗೊಳಿಸಲಾಗಿದೆ.
7. ಇಲ್ಲಿ ಉದ್ದೇಶಿಸಲಾಗಿರುವುದು ವಿಶೇಷ ತರಹದ ಕಲ್ಲುಗಳು ಅಥವಾ ಕಲ್ಲುಗಳಿಂದ ನಿರ್ಮಿಸಲಾದ ವಿಗ್ರಹಗಳಾಗಿವೆ ಎಂದು ಕೆಲವು ತಫ್ಸೀರ್‌ಗಳಲ್ಲಿ ಬಂದಿದೆ.
(25) (ಓ ಪ್ರವಾದಿಯವರೇ!) ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರಾರೋ ಅವರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿವೆ ಎಂಬ ಶುಭವಾರ್ತೆಯನ್ನು ತಿಳಿಸಿರಿ. ಅದರ ಒಂದೊಂದು ಫಲವನ್ನು ಅವರಿಗೆ ತಿನ್ನಲು ನೀಡಲಾದಾಗ ಅವರು ಹೇಳುವರು: ‘ಇದು ನಮಗೆ ಮುಂಚೆ ನೀಡಲಾಗಿರುವುದೇ ಆಗಿದೆ!’ ಆದರೆ ಅವರಿಗೆ ಅದನ್ನು ನೀಡಲಾಗಿರುವುದು ಪರಸ್ಪರ ಹೋಲಿಕೆಯಿರುವ ರೀತಿಯಲ್ಲಾಗಿದೆ.(8) ಅವರಿಗೆ ಅಲ್ಲಿ ಪರಿಶುದ್ಧವಾದ ಸಂಗಾತಿಗಳಿರುವರು ಮತ್ತು ಅವರು ಅಲ್ಲಿ ಶಾಶ್ವತವಾಗಿ ವಾಸಿಸುವರು.
8. ಮೇಲ್ನೋಟಕ್ಕೆ ಒಂದೇ ತರಹ ಕಾಣುವುದಾದರೂ ರುಚಿ ಮತ್ತು ಗುಣಮಟ್ಟದಲ್ಲಿ ಅಗಾಧ ವ್ಯತ್ಯಾಸಗಳಿರುವ ಅನೇಕ ಬಗೆಯ ಫಲಗಳನ್ನು ಅವರಿಗೆ ನೀಡಲಾಗುವುದು ಎಂದರ್ಥ.
(26) ಖಂಡಿತವಾಗಿಯೂ ಅಲ್ಲಾಹು ಯಾವುದೇ ವಸ್ತುವನ್ನು ಹೋಲಿಸುವುದರಲ್ಲಿ ನಾಚಿಕೆಪಡಲಾರನು; ಅದೊಂದು ಸೊಳ್ಳೆಯಾಗಿರಲಿ ಅಥವಾ ಅದಕ್ಕಿಂತಲೂ ತುಚ್ಛವಾದ ವಸ್ತುವಾಗಿರಲಿ! ವಿಶ್ವಾಸಿಗಳಿಗೆ ಅದು ತಮ್ಮ ರಬ್‌ನ ವತಿಯ ಸತ್ಯವೆಂದು ಮನದಟ್ಟಾಗುವುದು. ‘ಈ ಹೋಲಿಕೆಯಿಂದ ಅಲ್ಲಾಹು ಇಚ್ಛಿಸುವುದಾದರೂ ಏನು?’ ಎಂದು ಸತ್ಯನಿಷೇಧಿಗಳು ಕೇಳುವರು. ಹೀಗೆ ಈ ಹೋಲಿಕೆಯಿಂದಾಗಿ ಅವನು ಅನೇಕ ಜನರನ್ನು ದಾರಿಗೆಡಿಸುವನು ಮತ್ತು ಅನೇಕ ಜನರನ್ನು ಸನ್ಮಾರ್ಗದಲ್ಲಿ ಸೇರಿಸುವನು. ಇದರ ಮೂಲಕ ಅವನು ಧಿಕ್ಕಾರಿಗಳನ್ನಲ್ಲದೆ ಇನ್ನಾರನ್ನೂ ದಾರಿಗೆಡಿಸಲಾರನು.
(27) ಅವರು ಅಲ್ಲಾಹುವಿನ ಕರಾರನ್ನು, ಅದು ಸುದೃಢಗೊಂಡ ಬಳಿಕವೂ, ಅದಕ್ಕೆ ತದ್ವಿರುದ್ಧವಾಗಿ ವರ್ತಿಸುವವರೂ, ಅಲ್ಲಾಹು ಜೋಡಿಸಬೇಕೆಂದು ಆದೇಶಿಸಿರುವುದನ್ನು(9) ಕಡಿದು ಬೇರ್ಪಡಿಸುವವರೂ, ಭೂಮಿಯಲ್ಲಿ ವಿನಾಶವನ್ನುಂಟು ಮಾಡುವವರೂ ಆಗಿರುವರು. ನಷ್ಟ ಹೊಂದಿದವರು ಅವರೇ ಆಗಿರುವರು.
9. ಕುಟುಂಬ ಸಂಬಂಧ, ಧಾರ್ಮಿಕ ಸಂಬಂಧ, ಮಾನವೀಯತೆ ಇತ್ಯಾದಿಗಳು ಅಲ್ಲಾಹು ಪರಸ್ಪರ ಜೋಡಿಸಲು ಆದೇಶಿಸಿರುವ ಸಂಬಂಧಗಳಾಗಿವೆ.
(28) ನೀವು ಅಲ್ಲಾಹುವನ್ನು ಹೇಗೆ ನಿಷೇಧಿಸುವಿರಿ? ನೀವು ನಿರ್ಜೀವಿಗಳಾಗಿದ್ದಿರಿ. ತರುವಾಯ ಅವನು ನಿಮಗೆ ಜೀವವನ್ನು ನೀಡಿದನು. ತರುವಾಯ ಅವನು ನಿಮ್ಮನ್ನು ಮೃತಪಡಿಸುವನು. ಬಳಿಕ ಪುನಃ ಜೀವವನ್ನು ನೀಡುವನು. ತರುವಾಯ ನಿಮ್ಮನ್ನು ಅವನೆಡೆಗೆ ಮರಳಿಸಲಾಗುವುದು.
(29) ಭೂಮಿಯಲ್ಲಿರುವುದೆಲ್ಲವನ್ನೂ ನಿಮಗೋಸ್ಕರ ಸೃಷ್ಟಿಸಿಕೊಟ್ಟವನು ಅವನಾಗಿರುವನು. ಇದಲ್ಲದೆ ಅವನು ಆಕಾಶದತ್ತ ಏರಿ ಅದನ್ನು ಏಳಾಕಾಶಗಳಾಗಿ ಕ್ರಮೀಕರಿಸಿದನು. ಅವನು ಸಕಲ ವಿಷಯಗಳ ಕುರಿತೂ ಅರಿವುಳ್ಳವನಾಗಿರುವನು.
(30) ‘ನಾನು ಭೂಮಿಯಲ್ಲಿ ಒಬ್ಬ ‘ಖಲೀಫಃ’(10)ನನ್ನು ನಿಯೋಗಿಸಲಿರುವೆನು’ ಎಂದು ತಮ್ಮ ರಬ್ ಮಲಕ್‌ಗಳೊಂದಿಗೆ ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ). ಅವರು ಹೇಳಿದರು: ‘ಅಲ್ಲಿ ವಿನಾಶವನ್ನುಂಟು ಮಾಡುವವರನ್ನು ಮತ್ತು ರಕ್ತ ಹರಿಸುವವರನ್ನು ನೀನು ನಿಯೋಗಿಸುವೆಯಾ? ನಾವು ನಿನ್ನ ಮಹತ್ವವನ್ನು ಕೀರ್ತನೆ ಮಾಡುವವರೂ, ನಿನ್ನ ಪರಿಪಾವನತೆಯನ್ನು ಕೊಂಡಾಡುವವರೂ ಆಗಿರುವೆವು’. ಅವನು (ಅಲ್ಲಾಹು) ಹೇಳಿದನು: ‘ನೀವು ಅರಿಯದಿರುವುದನ್ನು ನಾನು ಅರಿತಿರುವೆನು’.
10.‘ಖಲೀಫಃ’ ಎಂಬ ಪದಕ್ಕೆ ಉತ್ತರಾಧಿಕಾರಿ, ಬದಲಿಗೆ ನಿಲ್ಲುವವನು (alternate), ಪ್ರತಿನಿಧಿ ಮುಂತಾದ ಅರ್ಥಗಳಿವೆ. ಇದು ಆದಮ್‍ರನ್ನು ಮಾತ್ರ ಉದ್ದೇಶಿಸಲಾದ ಏಕವಚನವಾಗಿರಬಹುದು ಅಥವಾ ಸಂಪೂರ್ಣ ಮನುಕುಲವನ್ನು ಉದ್ದೇಶಿಸಲಾದ ಕುಲನಾಮವಾಗಿರಬಹುದು. ಪ್ರತಿಯೊಬ್ಬ ಮನುಷ್ಯನೂ ತನ್ನ ಪೂರ್ವಿಕರ ವಂಶವನ್ನು ಮುಂದುವರಿಸುತ್ತಾ ನಾಗರಿಕತೆಯನ್ನು ಬೆಳೆಸುತ್ತಾನೆ. ಪ್ರತಿಯೊಂದು ತಲೆಮಾರು ಗತ ತಲೆಮಾರಿನ ಸ್ಥಾನವನ್ನು ತುಂಬಿ ಬದುಕಿನ ಕ್ಷೇತ್ರದಲ್ಲಿ ತನ್ನ ಪ್ರಭುತ್ವವನ್ನು ಸ್ಥಾಪಿಸುತ್ತದೆ. ಸರ್ವ ಚರಾಚರಗಳೂ ದೈವಿಕ ನಿಯಮಕ್ಕೆ ಅಥವಾ ಪ್ರಕೃತಿ ನಿಯಮಕ್ಕೆ ವಿಧೇಯವಾಗಿ ವರ್ತಿಸಲು ವಿಧಿಸಲ್ಪಟ್ಟಿರುವಾಗ, ಮನುಷ್ಯನು ಮಾತ್ರ ಒಂದು ಮಿತಿಯವರೆಗೆ ಲೌಕಿಕ ವಸ್ತುಗಳ ಮೇಲೆ ನಿಯಂತ್ರಣ ಹೊಂದಿದವನಾಗಿ ಭೂಮಿಗೆ ಕಳುಹಿಸಲ್ಪಟ್ಟಿರುವನು.
(31) ಅವನು (ಅಲ್ಲಾಹು) ಆದಮ್‍ರಿಗೆ ಹೆಸರುಗಳೆಲ್ಲವನ್ನೂ ಕಲಿಸಿದನು.(11) ತರುವಾಯ ಅವನು ಆ ಹೆಸರಿಟ್ಟವುಗಳನ್ನು ಮಲಕ್‍ಗಳಿಗೆ ತೋರಿಸಿ ಹೇಳಿದನು: ‘ನೀವು ಸತ್ಯಸಂಧರಾಗಿದ್ದರೆ ಇವುಗಳ ಹೆಸರುಗಳನ್ನು ನನಗೆ ತಿಳಿಸಿಕೊಡಿರಿ.’
11. ಒಂದು ವಸ್ತುವಿನ ಹೆಸರು ಅದರ ಬಾಹ್ಯ ಹಾಗೂ ಆಂತರಿಕ ರಚನೆಯನ್ನು ಸೂಚಿಸುತ್ತದೆ. ಹೆಸರು ಮತ್ತು ತಾತ್ಪರ್ಯಗಳು ಪರಸ್ಪರ ಸಂಬಂಧವನ್ನು ಹೊಂದಿವೆ. ಮಾನವನು ಪ್ರತಿಯೊಂದು ವಸ್ತು ಹಾಗೂ ವಾಸ್ತವಿಕತೆಯನ್ನು ಒಂದು ಹೆಸರಿಡುವ ಮೂಲಕ ತನ್ನ ವ್ಯಾವಹಾರಿಕ ಕ್ಷೇತ್ರಕ್ಕೆ ತರುತ್ತಾನೆ. ನಾಮಕರಣ ಮಾಡುವ ಕೌಶಲ್ಯವನ್ನು ಅಲ್ಲಾಹು ಆದಿಮಾನವನಿಗೇ ನೀಡಿದ್ದಾನೆಂದು ಈ ಸೂಕ್ತಿಯು ಸೂಚಿಸುತ್ತದೆ.
(32) ಅವರು ಹೇಳಿದರು: ‘ನಾವು ನಿನ್ನ ಪರಿಪಾವನತೆಯನ್ನು ಕೊಂಡಾಡುವೆವು. ನೀನು ಕಲಿಸಿಕೊಟ್ಟಿರುವವುಗಳಲ್ಲದೆ ಬೇರಾವ ಅರಿವೂ ನಮಗಿಲ್ಲ. ನೀನಂತೂ ಸರ್ವಜ್ಞನೂ ಮಹಾಜ್ಞಾನಿಯೂ ಆಗಿರುವೆ’.
(33) ಅಲ್ಲಾಹು ಹೇಳಿದನು: ‘ಓ ಆದಮ್! ಇವರಿಗೆ ಅವುಗಳ ಹೆಸರುಗಳನ್ನು ತಿಳಿಸಿಕೊಡಿರಿ’. ತರುವಾಯ ಅವರು (ಆದಮ್) ಮಲಕ್‍ಗಳಿಗೆ ಅವುಗಳ ಹೆಸರುಗಳನ್ನು ತಿಳಿಸಿಕೊಟ್ಟಾಗ ಅಲ್ಲಾಹು ಹೇಳಿದನು: ‘ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಅಗೋಚರ ವಿಷಯಗಳನ್ನೂ, ನೀವು ಬಹಿರಂಗಪಡಿಸುವ ಹಾಗೂ ರಹಸ್ಯವಾಗಿಡುವ ಎಲ್ಲವನ್ನೂ ನಾನು ಅರಿತಿರುವೆನೆಂದು ನಾನು ನಿಮ್ಮೊಂದಿಗೆ ಹೇಳಿರಲಿಲ್ಲವೇ?’
(34) ‘ನೀವು ಆದಮ್‍ರಿಗೆ ಸಾಷ್ಟಾಂಗವೆರಗಿರಿ’ ಎಂದು ನಾವು ಮಲಕ್‍ಗಳೊಂದಿಗೆ ಹೇಳಿದ ಸಂದರ್ಭ (ವನ್ನು ಸ್ಮರಿಸಿರಿ). ಅವರು ಸಾಷ್ಟಾಂಗವೆರಗಿದರು; ಇಬ್ಲೀಸ್‍ನ ಹೊರತು. ಅವನು ನಿರಾಕರಿಸಿದನು ಮತ್ತು ಅಹಂಕಾರಪಟ್ಟನು. ಅವನು ಸತ್ಯನಿಷೇಧಿಗಳಲ್ಲಿ ಸೇರಿದವನಾಗಿರುವನು.
(35) ‘ಓ ಆದಮ್! ತಾವು ಮತ್ತು ತಮ್ಮ ಸಂಗಾತಿ ಸ್ವರ್ಗದಲ್ಲಿ ವಾಸಿಸಿರಿ ಮತ್ತು ಅದರಲ್ಲಿ ನೀವಿಚ್ಛಿಸಿದಲ್ಲಿಂದ ಇಬ್ಬರೂ ಯಥೇಷ್ಟವಾಗಿ ತಿನ್ನಿರಿ. ಆದರೆ ಈ ಮರವನ್ನು ನೀವು ಸಮೀಪಿಸದಿರಿ. ಹಾಗೇನಾದರೂ ಆದರೆ ನೀವಿಬ್ಬರೂ ಅಕ್ರಮಿಗಳಾಗಿ ಬಿಡುವಿರಿ’ ಎಂದು ನಾವು ಆದೇಶಿಸಿದೆವು.
(36) ಆದರೆ ಸೈತಾನನು ಅವರನ್ನು ಅದರಿಂದ ವ್ಯತಿ ಚಲನೆಗೊಳಿಸಿದನು(12) ಮತ್ತು ಅವರಿಬ್ಬರೂ ಸವಿಯುತ್ತಿದ್ದವು (ಸುಖಾನುಭೂತಿ)ಗಳಿಂದ ಅವರನ್ನು ಹೊರಗಟ್ಟಿದನು. ನಾವು (ಅವರೊಂದಿಗೆ) ಹೇಳಿದೆವು: ‘ನೀವು ಇಳಿದು ಹೋಗಿರಿ.(13) ನಿಮ್ಮಲ್ಲಿ ಕೆಲವರು ಕೆಲವರಿಗೆ ಶತ್ರುಗಳಾಗಿರುವರು. ಒಂದು ನಿರ್ದಿಷ್ಟ ಕಾಲದವರೆಗೂ ನಿಮಗೆ ಭೂಮಿಯಲ್ಲಿ ವಾಸಸ್ಥಳ ಮತ್ತು ಜೀವನ ಸೌಕರ್ಯಗಳು ಇರುವುವು.’
12. ಆ ಮರವು ಅನಶ್ವರತೆಯನ್ನು ಗಳಿಸಿಕೊಡುತ್ತದೆಯೆಂದು ದುಷ್ಪ್ರೇರಣೆ ನೀಡುವ ಮೂಲಕ ಸೈತಾನನು ಆದಮ್ ದಂಪತಿಗಳನ್ನು ಆಮಿಷಕ್ಕೊಳಗಾಗಿಸಿದನು.
13. ಇದು ಸರಿ-ತಪ್ಪು, ಸತ್ಯ-ಮಿಥ್ಯಗಳನ್ನು ವಿವೇಚನೆಯಿಂದ ಗ್ರಹಿಸಿ ಬದುಕನ್ನು ಸಾಗಿಸಲು ನಿರ್ಬಂಧಿತನಾಗಿರುವ ಮನುಷ್ಯನು ಮೊಟ್ಟಮೊದಲನೆಯದಾಗಿ ಎದುರಿಸಿದ ಪರೀಕ್ಷೆಯಾಗಿತ್ತು. ಹಿತಾಕಾಂಕ್ಷಿಯಾದ ಆಪ್ತಮಿತ್ರನ ವೇಷದಲ್ಲಿ ಬರುವ ಸಾಕ್ಷಾತ್ ಶತ್ರುವಾದ ಸೈತಾನನ ಸಾಮರ್ಥ್ಯವನ್ನು ಅವಿಸ್ಮರಣೀಯವಾದ ಒಂದು ಅನುಭವದ ಮೂಲಕ ಮನುಷ್ಯನು ಇಲ್ಲಿ ಅರಿತುಕೊಳ್ಳುತ್ತಾನೆ.
(37) ತರುವಾಯ ಆದಮ್ ತಮ್ಮ ರಬ್‌ನಿಂದ ಕೆಲವು ವಚನಗಳನ್ನು ಸ್ವೀಕರಿಸಿದರು. (ಆ ವಚನಗಳ ಮೂಲಕ ಪಶ್ಚಾತ್ತಾಪಪಟ್ಟ) ಆದಮ್‍ರಿಗೆ ಅಲ್ಲಾಹು ಪಾಪಮುಕ್ತಿ ದಯಪಾಲಿಸಿದನು. ಅವನು (ಅಲ್ಲಾಹು) ಅತ್ಯಧಿಕ ಪಶ್ಚಾತ್ತಾಪ ಸ್ವೀಕರಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(38) ನಾವು ಹೇಳಿದೆವು: ‘ನೀವೆಲ್ಲರೂ ಇಲ್ಲಿಂದ ಇಳಿದು ಹೋಗಿರಿ. ತರುವಾಯ ನನ್ನ ವತಿಯ ಮಾರ್ಗದರ್ಶನವು ನಿಮ್ಮ ಬಳಿಗೆ ಬರುವಾಗ ಆ ನನ್ನ ಮಾರ್ಗದರ್ಶನವನ್ನು ಯಾರು ಅನುಸರಿಸುವರೋ, ಅವರು ಭಯಪಡಬೇಕಾಗಿಲ್ಲ; ಅವರು ದುಃಖಿಸಬೇಕಾಗಿಯೂ ಇಲ್ಲ’.
(39) ‘ಅವಿಶ್ವಾಸವಿಟ್ಟವರು ಮತ್ತು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರು ಯಾರೋ ಅವರು ನರಕವಾಸಿಗಳಾಗಿರುವರು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು’.
(40) ಓ ಇಸ್ರಾಈಲ್ ಸಂತತಿಗಳೇ!(14) ನಾನು ನಿಮಗೆ ಕರುಣಿಸಿರುವ ನನ್ನ ಅನುಗ್ರಹವನ್ನು ಸ್ಮರಿಸಿರಿ ಮತ್ತು ನನ್ನೊಂದಿಗೆ ಮಾಡಿರುವ ಕರಾರನ್ನು ನೆರವೇರಿಸಿರಿ. ಹಾಗಾದರೆ ನಿಮ್ಮೊಂದಿಗೆ ಮಾಡಿರುವ ಕರಾರನ್ನು ನಾನೂ ನೆರವೇರಿಸುವೆನು. ನೀವು ನನ್ನನ್ನು ಮಾತ್ರ ಭಯಪಡಿರಿ.
14. ‘ಇಸ್ರಾಈಲ್’ ಎಂಬುದು ಪ್ರವಾದಿ ಇಬ್ರಾಹೀಮ್(ಅ) ರವರ ಮೊಮ್ಮಗನಾದ ಯಅ್‌ಕೂಬ್(ಅ) ರವರ ಉಪನಾಮವಾಗಿದೆ. ಅವರ ವಂಶ ಪರಂಪರೆಯನ್ನು ‘ಇಸ್ರಾಈಲರು’ ಎನ್ನಲಾಗುತ್ತದೆ. ಅಲ್ಲಾಹು ಇಸ್ರಾಈಲರಿಗೆ ನೀಡಿದ ಅಪಾರ ಅನುಗ್ರಹಗಳನ್ನು, ಮತ್ತು ಆ ಅನುಗ್ರಹಗಳಿಗೆ ವಿರುದ್ಧವಾಗಿ ಅವರು ನಿಷೇಧಾತ್ಮಕ ಧೋರಣೆಯನ್ನು ಕೈಗೊಂಡಾಗ ಅವರಿಗೆ ನೀಡಲಾದ ಶಿಕ್ಷೆಗಳನ್ನು, ಕುರ್‌ಆನ್ ಹಲವು ಕಡೆಗಳಲ್ಲಿ ಪ್ರಸ್ತಾಪಿಸಿದೆ. ಇಸ್ರಾಈಲರ ಚರಿತ್ರೆಯಲ್ಲಿ ನಮಗೆ ಅನೇಕ ನೀತಿಪಾಠಗಳಿವೆ.
(41) ನಿಮ್ಮ ಬಳಿಯಿರುವ ಗ್ರಂಥಗಳನ್ನು ದೃಢೀಕರಿಸುತ್ತಾ ನಾನು ಅವತೀರ್ಣಗೊಳಿಸಿರುವ ಸಂದೇಶದಲ್ಲಿ (ಕುರ್‌ಆನ್‍ನಲ್ಲಿ) ವಿಶ್ವಾಸವಿಡಿರಿ. ಅದನ್ನು ಮೊಟ್ಟಮೊದಲು ನಿಷೇಧಿಸುವವರು ನೀವಾಗದಿರಿ. ನನ್ನ ಸೂಕ್ತಿಗಳನ್ನು ನೀವು ಅಲ್ಪ ಬೆಲೆಗೆ (ಲೌಕಿಕ ಲಾಭಕ್ಕೆ) ಬದಲಾಗಿ ಮಾರದಿರಿ. ನೀವು ನನ್ನೊಂದಿಗೆ ಮಾತ್ರ ಭಯಭಕ್ತಿಯುಳ್ಳವರಾಗಿರಿ.
(42) ನೀವು ಸತ್ಯವನ್ನು ಮಿಥ್ಯದೊಂದಿಗೆ ಬೆರೆಸದಿರಿ. ಅರಿತವರಾಗಿದ್ದೂ ಸಹ ಸತ್ಯವನ್ನು ಮರೆಮಾಚದಿರಿ.
(43) ನಮಾಝ್ ಸಂಸ್ಥಾಪಿಸಿರಿ, ಝಕಾತ್ ನೀಡಿರಿ ಮತ್ತು (ಅಲ್ಲಾಹುವಿನ ಮುಂದೆ) ತಲೆಬಾಗುವವರೊಂದಿಗೆ ನೀವೂ ತಲೆಬಾಗಿರಿ.
(44) ನೀವು ಜನರಿಗೆ ಒಳಿತನ್ನು ಆದೇಶಿಸಿ, ನಿಮ್ಮ ಸ್ವಂತ ವಿಷಯದಲ್ಲಿ (ಅದನ್ನು) ಮರೆತು ಬಿಡುವುದೇ? ನೀವು ಗ್ರಂಥ ಪಾರಾಯಣ ಮಾಡುತ್ತಿರುವವರಾಗಿದ್ದೂ ಸಹ! ನೀವು ಚಿಂತಿಸುವುದಿಲ್ಲವೇ?
(45) ಸಹನೆ ಮತ್ತು ನಮಾಝ್‍ನ ಮೂಲಕ ನೀವು (ಅಲ್ಲಾಹುವಿನ) ಸಹಾಯವನ್ನು ಬೇಡಿರಿ. ಖಂಡಿತವಾಗಿಯೂ ಅದು (ನಮಾಝ್) ಭಯಭಕ್ತಿಯಿಲ್ಲದವರಿಗೆ ಬಹುದೊಡ್ಡ (ಪ್ರಯಾಸಕರ) ವಿಷಯವಾಗಿದೆ.
(46) ಅವರು (ಭಯಭಕ್ತಿಯುಳ್ಳವರು) ತಾವು ತಮ್ಮರಬ್‌ನೊಂದಿಗೆ ಭೇಟಿಯಾಗಲಿರುವೆವು ಮತ್ತು ಅವನ ಬಳಿಗೇ ಮರಳಿ ಹೋಗಲಿರುವೆವು ಎಂದು ದೃಢವಾಗಿ ವಿಶ್ವಾಸವಿಡುವವರಾಗಿರುವರು.
(47) ಓ ಇಸ್ರಾಈಲ್ ಸಂತತಿಗಳೇ! ನಾನು ನಿಮಗೆ ದಯಪಾಲಿಸಿರುವ ನನ್ನ ಅನುಗ್ರಹವನ್ನು ಮತ್ತು ನಾನು ನಿಮಗೆ ಇತರ ಜನರಿಗಿಂತ ಹೆಚ್ಚು ಶ್ರೇಷ್ಠತೆ ನೀಡಿರುವುದನ್ನು ಸ್ಮರಿಸಿರಿ.
(48) ಒಬ್ಬನು ಇನ್ನೊಬ್ಬನಿಗೆ ಯಾವುದೇ ಉಪಕಾರವನ್ನು ಮಾಡಲಾಗದ, ಯಾವ ವ್ಯಕ್ತಿಯಿಂದಲೂ ಯಾವುದೇ ಶಿಫಾರಸು ಸ್ವೀಕರಿಸಲಾಗದ, ಯಾವ ವ್ಯಕ್ತಿಯಿಂದಲೂ ಯಾವುದೇ ಪ್ರಾಯಶ್ಚಿತ್ತವನ್ನು ಪಡೆಯಲಾಗದ ಮತ್ತು ಅವರಿಗೆ ಯಾವುದೇ ಸಹಾಯವು ದೊರೆಯದ ಒಂದು ದಿನ(15) ವನ್ನು ನೀವು ಭಯಪಡಿರಿ.
15. ಅದು ಪರಲೋಕದಲ್ಲಿ ಅಲ್ಲಾಹು ತೀರ್ಪು ವಿಧಿಸುವ ದಿನವಾಗಿದೆ.
(49) ನಿಮ್ಮ ಗಂಡುಮಕ್ಕಳನ್ನು ದಾರುಣವಾಗಿ ಸಾಯಿಸುತ್ತಲೂ, ನಿಮ್ಮ ಸ್ತ್ರೀಯರನ್ನು ಜೀವಿಸಲು ಬಿಡುತ್ತಲೂ, ನಿಮಗೆ ಕಠೋರ ಹಿಂಸೆಗಳನ್ನು ನೀಡುತ್ತಿದ್ದ ಫಿರ್‍ಔನ್‍ನ ಜನರಿಂದ ನಾವು ನಿಮ್ಮನ್ನು ಪಾರುಮಾಡಿದ ಸಂದರ್ಭ(ವನ್ನು ಸ್ಮರಿಸಿರಿ). ಅದರಲ್ಲಿ ನಿಮ್ಮ ರಬ್‌ನ ವತಿಯ ಮಹಾ ಪರೀಕ್ಷೆಯೊಂದಿತ್ತು.
(50) ಕಡಲನ್ನು ಸೀಳಿ ನಾವು ನಿಮ್ಮನ್ನು ರಕ್ಷಿಸಿದ ಮತ್ತು ನೀವು ನೋಡುತ್ತಿರುವಂತೆಯೇ ಫಿರ್‍ಔನ್‍ನ ಜನರನ್ನು ಮುಳುಗಿಸಿದ ಸಂದರ್ಭ(ವನ್ನು ಸ್ಮರಿಸಿರಿ).
(51) ನಾವು ಮೂಸಾರಿಗೆ ನಲ್ವತ್ತು ರಾತ್ರಿಗಳನ್ನು ನಿಗದಿಪಡಿಸಿದ(16) ಮತ್ತು (ಅದಕ್ಕೋಸ್ಕರ) ಅವರು ಹೊರಟು ಹೋದ ಬಳಿಕ ನೀವು ಅನ್ಯಾಯವಾಗಿ ಕರುವೊಂದನ್ನು (ಆರಾಧ್ಯಮೂರ್ತಿಯಾಗಿ) ಮಾಡಿಕೊಂಡ ಸಂದರ್ಭ (ವನ್ನು ಸ್ಮರಿಸಿರಿ).
16. ನಲ್ವತ್ತು ದಿನಗಳೆಂದರೆ ಗ್ರಂಥವನ್ನು ಪಡೆಯುವ ಸಲುವಾಗಿ ಪ್ರವಾದಿ ಮೂಸಾ(ಅ) ರವರು ಸೀನಾ ಪರ್ವತದಲ್ಲಿ ಪ್ರಾರ್ಥನಾ ನಿರತರಾಗಿ ಕಾದಿರಲು ಆದೇಶಿಸಲಾದ ಕಾಲಾವಧಿಯಾಗಿದೆ. ಸಹೋದರರಾದ ಪ್ರವಾದಿ ಹಾರೂನ್(ಅ) ರನ್ನು ಮತ್ತು ಇಸ್ರಾಈಲರನ್ನು ಕೆಳಗೆ ಕಣಿವೆಯಲ್ಲಿ ನಿಲ್ಲಿಸಿ ಅವರು ಪರ್ವತದತ್ತ ತೆರಳಿದ್ದರು. ಆದರೆ ಸ್ವರ್ಣ ನಿರ್ಮಿತ, ಧ್ವನಿ ಹೊರಡಿಸುವ ಕರುವಿನ ವಿಗ್ರಹವನ್ನು ಕಂಡಾಗ ಹಾರೂನ್(ಅ) ರವರ ಎಚ್ಚರಿಕೆಯ ಹೊರತಾಗಿಯೂ ಇಸ್ರಾಈಲರು ಮೂಸಾ(ಅ) ರವರು ಕಲಿಸಿದ ತೌಹೀದನ್ನು ಮರೆತು ಅದನ್ನು ಪೂಜಿಸತೊಡಗಿದರು.
(52) ತರುವಾಯ ಅದರ ಬಳಿಕವೂ ನಾವು ನಿಮ್ಮನ್ನು ಕ್ಷಮಿಸಿದೆವು. ನೀವು ಕೃತಜ್ಞರಾಗುವ ಸಲುವಾಗಿ.
(53) ನೀವು ಸನ್ಮಾರ್ಗ ಪಡೆಯುವ ಸಲುವಾಗಿ ನಾವು ಗ್ರಂಥವನ್ನು ಮತ್ತು ಸತ್ಯಾಸತ್ಯತೆಯನ್ನು ಬೇರ್ಪಡಿಸುವ ಪ್ರಮಾಣವನ್ನು ಮೂಸಾರಿಗೆ ನೀಡಿದ ಸಂದರ್ಭ(ವನ್ನು ಸ್ಮರಿಸಿರಿ).
(54) ‘ಓ ನನ್ನ ಜನರೇ! ಕರುವನ್ನು (ಆರಾಧ್ಯಮೂರ್ತಿಯಾಗಿ) ಮಾಡಿಕೊಳ್ಳುವ ಮೂಲಕ ನೀವು ಸ್ವತಃ ನಿಮ್ಮ ಮೇಲೆಯೇ ಅನ್ಯಾಯವೆಸಗಿರುವಿರಿ. ಆದ್ದರಿಂದ ನೀವು ನಿಮ್ಮ ಸೃಷ್ಟಿಕರ್ತನತ್ತ ಪಶ್ಚಾತ್ತಾಪದೊಂದಿಗೆ ಮರಳಿರಿ ಮತ್ತು (ಪ್ರಾಯಶ್ಚಿತ್ತವಾಗಿ) ನಿಮ್ಮನ್ನೇ ನೀವು ವಧಿಸಿರಿ. ನಿಮ್ಮ ಸೃಷ್ಟಿಕರ್ತನ ಬಳಿ ಅದು ನಿಮಗೆ ಉತ್ತಮವಾಗಿದೆ’ ಎಂದು ಮೂಸಾ ತಮ್ಮ ಜನತೆಯೊಂದಿಗೆ ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ). ತರುವಾಯ ಅಲ್ಲಾಹು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ಅವನು ಅತ್ಯಧಿಕ ಪಶ್ಚಾತ್ತಾಪ ಸ್ವೀಕರಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(55) ‘ಓ ಮೂಸಾ! ಅಲ್ಲಾಹುವನ್ನು ಪ್ರತ್ಯಕ್ಷವಾಗಿ ಕಾಣುವ ತನಕ ತಮ್ಮಲ್ಲಿ ನಾವು ಎಂದೂ ವಿಶ್ವಾಸವಿಡಲಾರೆವು’ ಎಂದು ನೀವು ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ). ಆಗ ನೀವು ನೋಡುತ್ತಿರುವಂತೆಯೇ ಅಗ್ನಿಮಿಂಚು ನಿಮ್ಮನ್ನು ಹಿಡಿದುಬಿಟ್ಟಿತು.
(56) ತರುವಾಯ ನಿಮ್ಮ ಮರಣದ ಬಳಿಕ ನಾವು ನಿಮ್ಮನ್ನು ಎಬ್ಬಿಸಿದೆವು. ನೀವು ಕೃತಜ್ಞರಾಗುವ ಸಲುವಾಗಿ.
(57) ನಾವು ನಿಮಗೆ ಮೋಡದ ನೆರಳನ್ನು ನೀಡಿದೆವು ಮತ್ತು ಮನ್ನ(17) ಹಾಗೂ ಸಲ್ವಾ (ಲಾವಕ್ಕಿ)ವನ್ನು ಇಳಿಸಿ ಕೊಟ್ಟೆವು. ‘ನಾವು ನಿಮಗೆ ಅನ್ನಾಧಾರವಾಗಿ ಒದಗಿಸಿರುವ ವಿಶಿಷ್ಟ ವಸ್ತುಗಳಿಂದ ತಿನ್ನಿರಿ’ (ಎಂದು ನಾವು ಆದೇಶಿಸಿದೆವು). ಅವರು (ಆ ಬಳಿಕವೂ ಕೃತಘ್ನರಾದವರು) ನಮಗೆ ಯಾವುದೇ ಅನ್ಯಾಯವನ್ನು ಮಾಡಿಲ್ಲ. ಆದರೆ ಅವರು ಸ್ವತಃ ಅವರೊಂದಿಗೇ ಅನ್ಯಾಯವೆಸಗುತ್ತಿರುವರು.
17. ‘ಮನ್ನ’ ಎಂದರೆ ಜೇನಿನಂತಹ ದಪ್ಪವಾದ ಒಂದು ಸಿಹಿ ಪದಾರ್ಥವಾಗಿದೆ.
(58) ‘ನೀವು ಈ ಪಟ್ಟಣವನ್ನು ಪ್ರವೇಶಿಸಿರಿ, ಇಲ್ಲಿ ನಿಮಗಿಷ್ಟವಿರುವಲ್ಲಿಂದ ಯಥೇಷ್ಟವಾಗಿ ತಿನ್ನಿರಿ, ತಲೆಬಾಗಿಸಿಕೊಂಡು ದ್ವಾರವನ್ನು ದಾಟಿರಿ ಮತ್ತು ಪಶ್ಚಾತ್ತಾಪ ವಚನವನ್ನು ಹೇಳಿರಿ. ನಾವು ನಿಮ್ಮ ಪಾಪಗಳನ್ನು ಕ್ಷಮಿಸುವೆವು ಮತ್ತು ಸತ್ಕರ್ಮವೆಸಗುವವರಿಗೆ ಹೆಚ್ಚು ಹೆಚ್ಚು ಅನುಗ್ರಹಗಳನ್ನು ನೀಡುವೆವು’ ಎಂದು ನಾವು ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ).
(59) ಆದರೆ ಅಕ್ರಮಿಗಳಾದ ಜನರು ತಮಗೆ ಆದೇಶಿಸಲಾಗಿರುವ ಮಾತಿಗೆ ಬದಲಾಗಿ ಬೇರೊಂದು ಮಾತನ್ನು ಬಳಸಿದರು. ಆದುದರಿಂದ ಅವರು ಧಿಕ್ಕಾರ ತೋರುತ್ತಿದ್ದ ಫಲವಾಗಿ ಆ ಅಕ್ರಮಿಗಳ ಮೇಲೆ ನಾವು ಆಕಾಶದಿಂದ ಶಿಕ್ಷೆಯನ್ನು ಇಳಿಸಿದೆವು.
(60) ಮೂಸಾ ತಮ್ಮ ಜನತೆಗೋಸ್ಕರ ನೀರನ್ನು ಬೇಡಿದ ಸಂದರ್ಭ(ವನ್ನು ಸ್ಮರಿಸಿರಿ). ಆಗ ನಾವು ಹೇಳಿದೆವು: ‘ತಮ್ಮ ಬೆತ್ತದಿಂದ ಬಂಡೆಗಲ್ಲಿನ ಮೇಲೆ ಹೊಡೆಯಿರಿ’. ಆಗ ಅದರಿಂದ ಹನ್ನೆರಡು ಚಿಲುಮೆಗಳು ಚಿಮ್ಮಿದವು. ಜನರ ಪೈಕಿ ಪ್ರತಿಯೊಂದು ಗುಂಪಿನವರೂ(18) ತಾವು ನೀರನ್ನು ಪಡೆಯಬೇಕಾದ ಸ್ಥಳಗಳನ್ನು ಅರಿತುಕೊಂಡರು. ‘ಅಲ್ಲಾಹು ಒದಗಿಸಿದ ಅನ್ನಾಧಾರದಿಂದ ತಿನ್ನಿರಿ ಮತ್ತು ಕುಡಿಯಿರಿ. ಭೂಮಿಯಲ್ಲಿ ಕ್ಷೋಭೆ ಮಾಡುತ್ತಾ ವಿನಾಶಕಾರಿಗಳಾಗದಿರಿ’ (ಎಂದು ನಾವು ಆದೇಶಿಸಿದೆವು).
18. ಇಸ್ರಾಈಲರಲ್ಲಿ ಹನ್ನೆರಡು ಉಪಗೋತ್ರಗಳಿದ್ದವು.
(61) ‘ಓ ಮೂಸಾ! ಒಂದೇ ಬಗೆಯ ಆಹಾರವನ್ನು ಸಹಿಸಿಕೊಂಡಿರಲು ನಮಗೆ ಸಾಧ್ಯವಿಲ್ಲ. ಆದ್ದರಿಂದ ಮಣ್ಣಿನಲ್ಲಿ ಮೊಳಕೆಯೊಡೆದು ಬೆಳೆಯುವಂತಹ ವಿಧದ ಸೊಪ್ಪು, ಸೌತೆ, ಗೋಧಿ, ಹೆಸರು, ಈರುಳ್ಳಿ ಇತ್ಯಾದಿಗಳನ್ನು ನಮಗೆ ಉತ್ಪಾದಿಸಿಕೊಡಲು ತಾವು ತಮ್ಮ ರಬ್‌ನೊಂದಿಗೆ ಪ್ರಾರ್ಥಿಸಿರಿ’ ಎಂದು ನೀವು ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ). ಮೂಸಾ ಹೇಳಿದರು: ‘ಅತ್ಯುತ್ತಮವಾದುದನ್ನು ತೊರೆದು ತೀರಾ ಕೀಳು ಮಟ್ಟದಲ್ಲಿರುವುದನ್ನು ನೀವು ಬದಲಿಯಾಗಿ ಬೇಡುತ್ತಿರುವಿರಾ?(19) ಹಾಗಾದರೆ ನೀವು ಪಟ್ಟಣವೊಂದರಲ್ಲಿ ಇಳಿದುಕೊಳ್ಳಿರಿ. ನೀವು ಬೇಡುವುದೆಲ್ಲವೂ ಅಲ್ಲಿ ನಿಮಗೆ ಸಿಗುವುದು.’ (ಇಂತಹ ಕೆಟ್ಟ ಹಟಮಾರಿತನಗಳಿಂದಾಗಿ) ಅವರ ಮೇಲೆ ಅಪಮಾನ ಮತ್ತು ದಾರಿದ್ರ್ಯವನ್ನು ಹೊದಿಸಲಾಯಿತು ಮತ್ತು ಅವರು ಅಲ್ಲಾಹುವಿನ ಕ್ರೋಧಕ್ಕೆ ಪಾತ್ರರಾದರು. ಇದು ಅವರು ಅಲ್ಲಾಹುವಿನ ದೃಷ್ಟಾಂತಗಳನ್ನು ನಿಷೇಧಿಸಿರುವ ಮತ್ತು ಪ್ರವಾದಿಗಳನ್ನು ಅನ್ಯಾಯವಾಗಿ ಕೊಲೆಗೈದಿರುವ ಫಲವಾಗಿದೆ. ಇದು ಅವರು ಅವಿಧೇಯತೆ ತೋರಿಸಿರುವ ಮತ್ತು ಅತಿಕ್ರಮವೆಸಗಿರುವ ಫಲವೂ ಆಗಿದೆ.
19. ವಾಗ್ದಾನ ಮಾಡಲಾದ ಭೂಮಿಯನ್ನು ಪ್ರವೇಶಿಸುವ ಮುಂಚೆ ಒಂದು ತಾತ್ಕಾಲಿಕ ವಸತಿ ಎಂಬ ನೆಲೆಯಲ್ಲಿ ಸೀನಾ ಕಣಿವೆಯಲ್ಲಿ ವಾಸಿಸುವಂತೆ ಅವರೊಂದಿಗೆ ಆದೇಶಿಸಲಾಗಿತ್ತು. ಅಲ್ಲಿ ಅವರಿಗೆ ಅಲ್ಲಾಹುವಿನ ವರದಾನವಾದ ಮನ್ನ ಮತ್ತು ಸಲ್ವಾಗಳು ಲಭಿಸಿದವು. ಕೃಷಿ ಮಾಡಲು ಅಯೋಗ್ಯವಾಗಿರುವ ಸೀನಾ ಕಣಿವೆಯಲ್ಲಿ ಅವರನ್ನು ವಾಸಿಸುವಂತೆ ಮಾಡಿರುವುದು ಅವರನ್ನು ಪರೀಕ್ಷಿಸುವ ಸಲುವಾಗಿ ಮತ್ತು ಅವರಿಗೆ ತ್ಯಾಗ ಹಾಗೂ ಶಿಸ್ತಿನ ತರಬೇತಿ ನೀಡುವ ಸಲುವಾಗಿತ್ತು. ಕೆಲವು ಮಹತ್ವಪೂರ್ಣ ಗುರಿಗಳನ್ನು ಮುಂದಿಟ್ಟುಕೊಂಡು ಇವೆಲ್ಲವನ್ನು ಮಾಡಿಸಲಾಗಿತ್ತು. ಆದರೆ ಇಸ್ರಾಈಲರಲ್ಲಿ ಹೆಚ್ಚಿನವರೂ ಇತರೆಲ್ಲದ್ದಕ್ಕಿಂತಲೂ ಹೆಚ್ಚಿನ ಆದ್ಯತೆಯನ್ನು ಸುಖಾಡಂಬರದ ಬದುಕಿಗೆ ನೀಡಿದರು.
(62) (ಪ್ರವಾದಿ ಮುಹಮ್ಮದ್‍ರಲ್ಲಿ) ವಿಶ್ವಾಸವಿಟ್ಟವರು, ಯಹೂದ ಧರ್ಮವನ್ನು ಸ್ವೀಕರಿಸಿದವರು, ಕ್ರೈಸ್ತರು, ಸಾಬಿಈಗಳು,(20) ಇವರಲ್ಲಿ ಯಾರೇ ಆಗಿರಲಿ, ಅಲ್ಲಾಹುವಿನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಟ್ಟವರು ಹಾಗೂ ಸತ್ಕರ್ಮವೆಸಗಿದವರು ಯಾರೋ ಅವರಿಗೆ ಅವರ ರಬ್‌ನ ಬಳಿ ಅರ್ಹ ಪ್ರತಿಫಲವಿರುವುದು. ಅವರು ಭಯಪಡಬೇಕಾಗಿಲ್ಲ; ಅವರು ದುಃಖಿಸಬೇಕಾಗಿಯೂ ಬರದು.
20. ಸಾಬಿಈಗಳು ಎಂದರೆ ಪ್ರಾಚೀನ ಅರೇಬಿಯಾದಲ್ಲಿದ್ದ ಒಂದು ಧಾರ್ಮಿಕ ಪಂಗಡವಾಗಿದೆ. ಇವರು ದೇವವಿಶ್ವಾಸಿಗಳಾಗಿದ್ದರೂ ಕೂಡ ಜ್ಯೋತಿಷ್ಯದಲ್ಲಿ ಮತ್ತು ಗ್ರಹಗಳ ಪ್ರಭಾವದಲ್ಲಿ ನಂಬಿಕೆಯುಳ್ಳವರಾಗಿದ್ದರು.
(63) ನಾವು ನಿಮ್ಮಿಂದ ಕರಾರನ್ನು ಪಡೆದುಕೊಂಡ ಮತ್ತು ನಿಮ್ಮ ಮೇಲೆ ಪರ್ವತವನ್ನು ಎತ್ತಿಹಿಡಿದ(21) ಸಂದರ್ಭ(ವನ್ನು ಸ್ಮರಿಸಿರಿ). ‘ನಾವು ನಿಮಗೆ ನೀಡಿರುವುದನ್ನು ಗಂಭೀರವಾಗಿ ತೆಗೆದುಕೊಳ್ಳಿರಿ ಮತ್ತು ಭಯಭಕ್ತಿ ಪಾಲಿಸುವ ಸಲುವಾಗಿ ಅದರಲ್ಲಿ ಆದೇಶಿಸಲಾಗಿರುವುದನ್ನು ಸ್ಮರಿಸುತ್ತಿರಿ’ (ಎಂದು ನಾವು ಆದೇಶಿಸಿದೆವು).
21. ಪರ್ವತವನ್ನು ಅವರ ಮೇಲೆ ಬೀಳಬಹುದಾದ ವಿಧದಲ್ಲಿ ಒಂದು ಕೊಡೆಯಂತೆ ಎತ್ತಿಹಿಡಿದದ್ದಾಗಿ ‘ಸೂರಃ ಅಲ್‍ಅಅ್‌ರಾಫ್’ನಲ್ಲಿ ಹೇಳಲಾಗಿದೆ.
(64) ತರುವಾಯ ಅದರ ಬಳಿಕವೂ ನೀವು ವಿಮುಖರಾದಿರಿ. ಅಲ್ಲಾಹುವಿನ ಔದಾರ್ಯ ಮತ್ತು ದಯೆಯು ನಿಮ್ಮ ಮೇಲಿರದಿರುತ್ತಿದ್ದರೆ ಖಂಡಿತವಾಗಿಯೂ ನೀವು ನಷ್ಟ ಹೊಂದಿದವರಲ್ಲಿ ಸೇರಿದವರಾಗುತ್ತಿದ್ದಿರಿ.
(65) ‘ಸಬ್ತ್’(22) ದಿನದಲ್ಲಿ ನಿಮ್ಮ ಪೈಕಿ ಅತಿಕ್ರಮವೆಸಗಿದವರ ಬಗ್ಗೆ ನೀವು ಅರಿತಿರುವಿರಿ. ಆಗ ನಾವು ಅವರೊಂದಿಗೆ ‘ನೀವು ನಿಂದ್ಯ ಕಪಿಗಳಾಗಿರಿ’ ಎಂದೆವು.
22. ‘ಸಬ್ತ್’ ದಿನ (ಶನಿವಾರ)ದಂದು ಎಲ್ಲ ಲೌಕಿಕ ಕಾರ್ಯಕಲಾಪಗಳನ್ನು ವರ್ಜಿಸಿ ಧಾರ್ಮಿಕ ಕಾರ್ಯಗಳಲ್ಲಿ ಮಗ್ನರಾಗಿರಬೇಕೆಂದು ಇಸ್ರಾಈಲರೊಂದಿಗೆ ಆದೇಶಿಸಲಾಗಿತ್ತು. ಆದರೆ ಆ ಆದೇಶವನ್ನು ಇಸ್ರಾಈಲರು ಉಪಾಯದಿಂದ ಉಲ್ಲಂಘಿಸಿದರು. ಆದ್ದರಿಂದ ಅಲ್ಲಾಹು ಅವರನ್ನು ಶಿಕ್ಷಿಸಿದನು.
(66) ಹೀಗೆ ನಾವದನ್ನು (ಆ ಶಿಕ್ಷೆಯನ್ನು) ಆ ಕಾಲದಲ್ಲಿರುವವರಿಗೂ, ಅದರ ನಂತರದವರಿಗೂ ಒಂದು ನೀತಿಪಾಠವಾಗಿ ಮತ್ತು ಭಯಭಕ್ತಿಯುಳ್ಳವರಿಗೆ ಒಂದು ತತ್ವೋಪದೇಶವಾಗಿ ಮಾಡಿದೆವು.
(67) ‘ಅಲ್ಲಾಹು ನಿಮ್ಮೊಂದಿಗೆ ಒಂದು ಹಸುವನ್ನು ಕೊಯ್ಯಲು ಆದೇಶಿಸುತ್ತಿರುವನು’ ಎಂದು ಮೂಸಾ ತಮ್ಮ ಜನತೆಯೊಂದಿಗೆ ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ). ಅವರು ಹೇಳಿದರು: ‘ತಾವು ನಮ್ಮನ್ನು ಗೇಲಿ ಮಾಡುತ್ತಿರುವಿರಾ?’ ಮೂಸಾ ಹೇಳಿದರು: ‘ಅಜ್ಞಾನಿಗಳಲ್ಲಿ ಸೇರಿದವನಾಗದಿರಲು ನಾನು ಅಲ್ಲಾಹುವಿನೊಂದಿಗೆ ಅಭಯ ಯಾಚಿಸುತ್ತಿರುವೆನು.’
(68) (ಆಗ) ಅವರು ಹೇಳಿದರು: ‘ಅದು (ಹಸು) ಯಾವ ತರಹದ್ದಾಗಿರಬೇಕೆಂದು ನಮಗೆ ವಿವರಿಸಿಕೊಡಲು ತಾವು ತಮ್ಮ ರಬ್‌ನೊಂದಿಗೆ ನಮಗೋಸ್ಕರ ಪ್ರಾರ್ಥಿಸಿರಿ.’ ಮೂಸಾ ಹೇಳಿದರು: ‘ಅದು ಹೆಚ್ಚು ಪ್ರಾಯವಾಗಿರುವುದಾಗಲಿ, ತೀರಾ ಎಳೆಯದಾಗಲಿ ಅಲ್ಲದ ಮಧ್ಯ ವಯಸ್ಸಿನ ಒಂದು ಹಸುವಾಗಿರಬೇಕೆಂದು ಅವನು (ಅಲ್ಲಾಹು) ಹೇಳುತ್ತಿರುವನು. ಆದ್ದರಿಂದ ಆದೇಶಿಸಲಾಗುವ ಪ್ರಕಾರ ನೀವು ಕಾರ್ಯನಿರ್ವಹಿಸಿರಿ’.
(69) ಅವರು ಹೇಳಿದರು: ‘ಅದು ಯಾವ ಬಣ್ಣದ್ದಾಗಿರಬೇಕೆಂದು ನಮಗೆ ವಿವರಿಸಿಕೊಡಲು ತಾವು ತಮ್ಮ ರಬ್‌ನೊಂದಿಗೆ ನಮಗೋಸ್ಕರ ಪ್ರಾರ್ಥಿಸಿರಿ.’ ಮೂಸಾ ಹೇಳಿದರು: ‘ಅದು ನೋಡುಗರಿಗೆ ಸಂತೋಷ ನೀಡುವ ಶುಭ್ರ ಹಳದಿ ಬಣ್ಣದ ಒಂದು ಹಸುವಾಗಿರಬೇಕೆಂದು ಅಲ್ಲಾಹು ಹೇಳುತ್ತಿರುವನು’.
(70) ಅವರು ಹೇಳಿದರು: ‘ಅದು ಯಾವ ತರಹದ್ದಾಗಿರಬೇಕೆಂದು ನಮಗೆ ಸ್ಪಷ್ಟಪಡಿಸಿಕೊಡಲು ತಾವು ತಮ್ಮ ರಬ್‌ನೊಂದಿಗೆ ನಮಗೋಸ್ಕರ ಪ್ರಾರ್ಥಿಸಿರಿ. ಖಂಡಿತವಾಗಿಯೂ ಹಸುಗಳು ಪರಸ್ಪರ ಹೋಲಿಕೆಯುಳ್ಳದ್ದಾಗಿ ನಮಗೆ ಭಾಸವಾಗುತ್ತಿದೆ. ಅಲ್ಲಾಹು ಇಚ್ಛಿಸಿದರೆ ಖಂಡಿತವಾಗಿಯೂ ನಾವು ಅವನ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುವೆವು’.
(71) (ಆಗ) ಮೂಸಾ ಹೇಳಿದರು: ‘ಅದು ನೆಲವನ್ನು ಉಳುವುದಕ್ಕಾಗಲಿ, ಕೃಷಿಯ ನೀರಾವರಿಗಾಗಲಿ ಬಳಸಲಾಗುವಂತದ್ದಲ್ಲದ, ಕಲೆಗಳೇನೂ ಇಲ್ಲದ, ಅಂಗವೈಕಲ್ಯವಿಲ್ಲದ ಒಂದು ಹಸುವಾಗಿರಬೇಕೆಂದು ಅಲ್ಲಾಹು ಹೇಳುತ್ತಿರುವನು’. ಅವರು ಹೇಳಿದರು: ‘ಇದೀಗ ತಾವು ಸರಿಯಾದ ಮಾಹಿತಿಯನ್ನು ಒದಗಿಸಿರುವಿರಿ.’ ತರುವಾಯ ಅವರು ಅದನ್ನು ಕೊಯ್ದರು. ಅದನ್ನು ನಿರ್ವಹಿಸುವುದು ಅವರಿಗೆ ಅಷ್ಟು ಸುಲಭವಾಗಿರಲಿಲ್ಲ.
(72) (ಓ ಇಸ್ರಾಈಲ್ ಸಂತತಿಗಳೇ!), ನೀವೊಬ್ಬ ವ್ಯಕ್ತಿಯನ್ನು ಕೊಲೆಗೈದು ತರುವಾಯ ಪರಸ್ಪರ ಆರೋಪ ಹೊರಿಸುತ್ತಾ ನುಣುಚಿಕೊಂಡ ಸಂದರ್ಭ(ವನ್ನು ಸ್ಮರಿಸಿರಿ). ಆದರೆ ನೀವು ಮರೆಮಾಚುವುದನ್ನು ಖಂಡಿತವಾಗಿಯೂ ಅಲ್ಲಾಹು ಬಹಿರಂಗಪಡಿಸುವವನಾಗಿರುವನು.
(73) ಆಗ ನಾವು ಹೇಳಿದೆವು: ‘ನೀವು ಅದರ (ಹಸುವಿನ) ಒಂದು ಭಾಗದಿಂದ ಆ ಮೃತದೇಹಕ್ಕೆ ಹೊಡೆಯಿರಿ.’(23) ಹೀಗೆ ಅಲ್ಲಾಹು ಮರಣಹೊಂದಿದವರಿಗೆ ಜೀವವನ್ನು ನೀಡುವನು. ನೀವು ಚಿಂತಿಸುವ ಸಲುವಾಗಿ ಅವನು ತನ್ನ ದೃಷ್ಟಾಂತಗಳನ್ನು ನಿಮಗೆ ತೋರಿಸಿಕೊಡುತ್ತಿರುವನು.
23. ಹೀಗೆ ಆ ಕೊಲೆಗೈಯಲಾದ ವ್ಯಕ್ತಿಯ ಮೃತದೇಹಕ್ಕೆ ಹಸುವಿನ ದೇಹದ ಒಂದು ಭಾಗದಿಂದ ಬಡಿದಾಗ ಅಲ್ಲಾಹು ಆ ವ್ಯಕ್ತಿಯನ್ನು ಪುನರ್ಜೀವಗೊಳಿಸಿದನು. ಅಲ್ಲಾಹು ಇದನ್ನು ಅವರಿಗೆ ಒಂದು ದೃಷ್ಟಾಂತವಾಗಿ ತೋರಿಸಿಕೊಟ್ಟಿದ್ದನು. ಅಲ್ಲಾಹುವಿನಿಂದ ಏನನ್ನೂ ಬಚ್ಚಿಡಲು ಸಾಧ್ಯವಿಲ್ಲ ಮತ್ತು ಪುನರುತ್ಥಾನ ಹಾಗೂ ಪರಲೋಕ ಜೀವನ ನಿಷೇಧಿಸಲಾಗದ ಸತ್ಯವಾಗಿದೆ ಎಂದು ಅವರಿಗೆ ಮನದಟ್ಟು ಮಾಡಿಸುವ ಸಲುವಾಗಿ ಅಲ್ಲಾಹು ಹೀಗೆ ಮಾಡಿದ್ದನು.
(74) ತರುವಾಯ ಅದರ ಬಳಿಕವೂ ನಿಮ್ಮ ಹೃದಯಗಳು ಕಠೋರವಾದವು. ಅವುಗಳು ಬಂಡೆಯಂತೆ ಅಥವಾ ಅದಕ್ಕಿಂತಲೂ ಹೆಚ್ಚು ಕಠೋರವಾದವು. ಬಂಡೆಗಳ ಪೈಕಿ ಕೆಲವೊಂದರಿಂದ ನದಿಗಳು ಚಿಮ್ಮಿ ಹರಿಯುವುದಿದೆ. ಕೆಲವು ಹೋಳಾಗಿ ನೀರು ಹೊರಬರುವುದಿದೆ. ಕೆಲವು ಅಲ್ಲಾಹುವಿನ ಭಯದಿಂದ ಕೆಳಗುರುಳಿ ಬೀಳುವುದಿದೆ. ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹು ಕಿಂಚಿತ್ತೂ ಅಲಕ್ಷ್ಯನಲ್ಲ.(24)
24. ಕೆಲವೊಮ್ಮೆ ಬಂಡೆಗಲ್ಲುಗಳಿಂದಲೂ ಮನುಷ್ಯರು ಮತ್ತು ಇತರ ಜೀವರಾಶಿಗಳಿಗೆ ಪ್ರಯೋಜನವುಂಟಾಗಬಹುದು. ಆದರೆ ಕಠೋರವಾದ ಹೃದಯಗಳನ್ನು ಹೊಂದಿರುವವರಿಂದ ಜನರಿಗೆ ಪ್ರಯೋಜನಕರವಾದ ಏನನ್ನೂ ನಿರೀಕ್ಷಿಸಲಾಗದು.
(75) (ಓ ಸತ್ಯವಿಶ್ವಾಸಿಗಳೇ!), ಅವರು (ಯಹೂದರು) ನಿಮ್ಮನ್ನು ನಂಬುವರೆಂದು ನೀವು ಆಶಿಸುತ್ತಿರುವಿರಾ? ಅವರ ಪೈಕಿ ಒಂದು ಗುಂಪು ಅಲ್ಲಾಹುವಿನ ವಚನಗಳನ್ನು ಆಲಿಸಿ, ಸರಿಯಾಗಿ ಮನದಟ್ಟು ಮಾಡಿಕೊಂಡ ನಂತರವೂ ಅದನ್ನು (ವಚನವನ್ನು) ಮನಃಪೂರ್ವಕವಾಗಿ ಸ್ಥಾನಾಂತರ ಮಾಡುತ್ತಿರುವರು.
(76) ವಿಶ್ವಾಸವಿಟ್ಟವರನ್ನು ಭೇಟಿಯಾಗುವಾಗ ಅವರು ‘ನಾವು ವಿಶ್ವಾಸವಿಟ್ಟಿರುವೆವು’ ಎನ್ನುವರು. ಆದರೆ ತಮ್ಮವರನ್ನು ಏಕಾಂತದಲ್ಲಿ ಸಂಧಿಸುವಾಗ ಅವರು (ಪರಸ್ಪರ ಆರೋಪ ಹೊರಿಸುತ್ತಾ) ಹೇಳುವರು: ‘ಅಲ್ಲಾಹು ನಿಮಗೆ ಬಹಿರಂಗಪಡಿಸಿದ ವಿಷಯಗಳನ್ನು, ಅವರದನ್ನು ನಿಮ್ಮ ರಬ್‌ನ ಸನ್ನಿಧಿಯಲ್ಲಿ ನಿಮ್ಮ ವಿರುದ್ಧ ತರ್ಕಿಸುವ ಸಲುವಾಗಿ,(25) ನೀವು ಅವರಿಗೆ ತಿಳಿಸಿಕೊಡುತ್ತಿರುವಿರಾ? ನೀವು ಚಿಂತಿಸುವುದಿಲ್ಲವೇ?’
25. ಜನರು ಸತ್ಯವನ್ನು ಅರಿತುಕೊಂಡರೆ ತಮ್ಮ ಗುಟ್ಟು ಬಹಿರಂಗವಾದೀತು ಎಂಬ ಭಯವು ಗ್ರಂಥಗಳನ್ನು ದುರ್ವ್ಯಾಖ್ಯಾನ ಮಾಡುವವರೆಲ್ಲರಿಗೂ ಇರುವ ಅತಿದೊಡ್ಡ ಸಮಸ್ಯೆಯಾಗಿದೆ. ಕುರ್‌ಆನ್‍ನ ಅರ್ಥವನ್ನು ಭಾಷಾಂತರ ಮಾಡುವುದನ್ನು ವಿರೋಧಿಸುವವರು ಯಾವ ನಿಲುವನ್ನು ತಳೆದಿದ್ದರೋ ಅದೇ ನಿಲುವನ್ನು ಯಹೂದರು ಸಹ ತಳೆದಿದ್ದರು. ಗ್ರಂಥದ ಹುರುಳನ್ನು ಇತರರಿಗೆ ಬಹಿರಂಗಪಡಿಸಿದರೆ ವಿರೋಧಿಗಳ ತರ್ಕಗಳ ಮುಂದೆ ತಾವು ನಿರುತ್ತರರಾಗುವೆವು ಎಂಬುದು ಅವರ ಚಿಂತೆಯಾಗಿತ್ತು.
(77) ಆದರೆ ಅವರು ರಹಸ್ಯವಾಗಿಡುವುದನ್ನು ಮತ್ತು ಬಹಿರಂಗಪಡಿಸುವುದನ್ನು ಅಲ್ಲಾಹು ಅರಿಯುತ್ತಿರುವನೆಂಬುದು ಅವರಿಗೆ ತಿಳಿಯದೇ?
(78) ಅವರಲ್ಲಿ (ಇಸ್ರಾಈಲರಲ್ಲಿ) ಕೆಲವು ಅನಕ್ಷರಸ್ಥರಿರುವರು. ಕೆಲವು ವ್ಯರ್ಥ ನಿರೀಕ್ಷೆಗಳ ವಿನಾ ಗ್ರಂಥದ ಬಗ್ಗೆ ಅವರಿಗೇನೂ ಅರಿವಿಲ್ಲ. ಅವರು ಊಹೆಯನ್ನು ಮಾತ್ರ ಅವಲಂಬಿಸುತ್ತಿರುವರು.
(79) ತಮ್ಮ ಸ್ವಹಸ್ತಗಳಿಂದ ಗ್ರಂಥವನ್ನು ಬರೆದು, ತರುವಾಯ ‘ಇದು ಅಲ್ಲಾಹುವಿನಿಂದಾಗಿದೆ’ ಎಂದು ಹೇಳುವವರಿಗೆ ವಿನಾಶವಿದೆ. ತನ್ಮೂಲಕ ತುಚ್ಛವಾದ ಸಂಪಾದನೆಯನ್ನು ಪಡೆಯುವ ಸಲುವಾಗಿ (ಅವರದನ್ನು ಮಾಡುತ್ತಿರುವರು). ಅವರ ಕೈಗಳು ಬರೆದ ಕಾರಣದಿಂದಲೂ (ತನ್ಮೂಲಕ) ಅವರು ಸಂಪಾದಿಸಿದ ಕಾರಣದಿಂದಲೂ ಅವರಿಗೆ ವಿನಾಶವಿದೆ.
(80) ಅವರು (ಯಹೂದರು) ಹೇಳಿದರು: ‘ಎಣಿಸಲಾದ ದಿನಗಳಲ್ಲಿ ಹೊರತು ನರಕಾಗ್ನಿಯು ನಮ್ಮನ್ನು ಎಂದಿಗೂ ಸ್ಪರ್ಶಿಸಲಾರದು’. (ಓ ಪ್ರವಾದಿಯವರೇ!) ಕೇಳಿರಿ: ‘ನೀವು ಅಲ್ಲಾಹುವಿನಿಂದ ಯಾವುದಾದರೂ ಕರಾರನ್ನು ಪಡೆದಿರುವಿರಾ? ಹಾಗಿದ್ದರೆ ಖಂಡಿತವಾಗಿಯೂ ಅಲ್ಲಾಹು ತನ್ನ ಕರಾರನ್ನು ಉಲ್ಲಂಘಿಸಲಾರನು; ಅಥವಾ ನಿಮಗೆ ಅರಿವಿಲ್ಲದ ವಿಷಯವನ್ನು ನೀವು ಅಲ್ಲಾಹುವಿನ ಬಗ್ಗೆ ಹೇಳುತ್ತಿರುವಿರಾ?’
(81) ಹೌದು! ಯಾರು ದುಷ್ಕರ್ಮವೆಸಗುವನೋ ಮತ್ತು ಅವನ ಪಾಪವು ಅವನನ್ನು ಆವರಿಸಿಕೊಳ್ಳುವುದೋ ಅವರು ನರಕವಾಸಿಗಳಾಗಿರುವರು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
(82) ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರು ಸ್ವರ್ಗವಾಸಿಗಳಾಗಿರುವರು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
(83) ‘ಅಲ್ಲಾಹುವಿನ ಹೊರತು ಯಾರನ್ನೂ ಆರಾಧಿಸದಿರಿ; ಮಾತಾಪಿತರಿಗೆ, ನಿಕಟ ಸಂಬಂಧಿಕರಿಗೆ, ಅನಾಥರಿಗೆ ಮತ್ತು ನಿರ್ಗತಿಕರಿಗೆ ಒಳಿತನ್ನು ಮಾಡಿರಿ; ಜನರೊಂದಿಗೆ ಒಳ್ಳೆಯ ಮಾತನ್ನು ಆಡಿರಿ; ನಮಾಝ್ ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ’ ಎಂದು ನಾವು ಇಸ್ರಾಈಲ್ ಸಂತತಿಗಳಿಂದ ಕರಾರನ್ನು ಪಡೆದ ಸಂದರ್ಭ (ವನ್ನು ಸ್ಮರಿಸಿರಿ). (ಆದರೆ ಓ ಇಸ್ರಾಈಲ್ ಸಂತತಿಗಳೇ!) ತರುವಾಯ ನಿಮ್ಮ ಪೈಕಿ ಕೆಲವರ ಹೊರತು ಉಳಿದವರೆಲ್ಲರೂ ವಿಮುಖರಾಗುತ್ತಾ ಹಿಂದಿರುಗಿ ಹೋದಿರಿ.
(84) ‘ನೀವು ಪರಸ್ಪರ ರಕ್ತವನ್ನು ಹರಿಸಬಾರದು ಮತ್ತು ನಿಮ್ಮವರನ್ನು ಒಕ್ಕಲೆಬ್ಬಿಸಬಾರದು’ ಎಂದು ನಾವು ನಿಮ್ಮಿಂದ ಖಾತ್ರಿಯನ್ನು ಪಡೆದ ಸಂದರ್ಭ(ವನ್ನು ಸ್ಮರಿಸಿರಿ). ತರುವಾಯ ನೀವು ಅದನ್ನು ಒಪ್ಪಿಕೊಂಡಿರಿ. ನೀವು ಅದಕ್ಕೆ ಸಾಕ್ಷಿಗಳೂ ಆಗಿದ್ದಿರಿ.
(85) ಆ ಬಳಿಕವೂ ನೀವು ನಿಮ್ಮವರನ್ನೇ ವಧಿಸುತ್ತಿರುವಿರಿ, ನಿಮ್ಮಲ್ಲೊಂದು ಗುಂಪನ್ನು ಅವರ ಮನೆಗಳಿಂದ ಹೊರಗಟ್ಟುತ್ತಿರುವಿರಿ ಮತ್ತು ಅತ್ಯಂತ ಪಾಪಕರವಾಗಿಯೂ ಅತಿಕ್ರಮವಾಗಿಯೂ ನೀವು ಅವರಿಗೆ ವಿರುದ್ಧವಾಗಿ ಪರಸ್ಪರ ನೆರವಾಗುತ್ತಿರುವಿರಿ. ಅವರು ನಿಮ್ಮ ಬಳಿಗೆ ಯುದ್ಧಕೈದಿಗಳಾಗಿ ಬಂದರೆ ಪರಿಹಾರ ಧನವನ್ನು ನೀಡಿ ಅವರನ್ನು ಸ್ವತಂತ್ರಗೊಳಿಸುತ್ತಿರುವಿರಿ. ವಾಸ್ತವಿಕವಾಗಿ ಅವರನ್ನು ಹೊರಗಟ್ಟುವುದು ನಿಮ್ಮ ಮೇಲೆ ನಿಷಿದ್ಧವಾಗಿತ್ತು. ನೀವು ಗ್ರಂಥದ ಕೆಲವು ಭಾಗಗಳಲ್ಲಿ ವಿಶ್ವಾಸವಿಟ್ಟು ಇತರ ಕೆಲವನ್ನು ತಿರಸ್ಕರಿಸುವುದೇ? ನಿಮ್ಮ ಪೈಕಿ ಹೀಗೆ ಮಾಡುವವರಿಗೆ ಐಹಿಕ ಜೀವನದಲ್ಲಿ ಅಪಮಾನವಲ್ಲದೆ ಬೇರೇನೂ ಸಿಗಲಾರದು. ಪುನರುತ್ಥಾನ ದಿನದಂದು ಅವರನ್ನು ಅತಿಕಠೋರವಾದ ಶಿಕ್ಷೆಯೆಡೆಗೆ ತಳ್ಳಲಾಗುವುದು. ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹು ಕಿಂಚಿತ್ತೂ ಅಲಕ್ಷ್ಯನಲ್ಲ.
(86) ಅವರು ಪರಲೋಕವನ್ನು ಮಾರಿ ಐಹಿಕ ಜೀವನವನ್ನು ಖರೀದಿಸಿದವರಾಗಿರುವರು. ಅವರಿಗೆ ಶಿಕ್ಷೆಯನ್ನು ಹಗುರಗೊಳಿಸಲಾಗದು ಮತ್ತು ಅವರಿಗೆ ಯಾವುದೇ ಸಹಾಯವೂ ದೊರೆಯಲಾರದು.
(87) ನಾವು ಮೂಸಾರಿಗೆ ಗ್ರಂಥವನ್ನು ನೀಡಿದೆವು. ಅವರ ಬಳಿಕ ನಾವು ನಿರಂತರವಾಗಿ ಸಂದೇಶವಾಹಕರನ್ನು ಕಳುಹಿಸಿದೆವು. ಮರ್ಯಮ್‍ರ ಮಗನಾದ ಈಸಾರಿಗೆ ನಾವು ಸ್ಪಷ್ಟವಾದ ದೃಷ್ಟಾಂತಗಳನ್ನು ನೀಡಿದೆವು ಮತ್ತು ಅವರಿಗೆ ನಾವು ಪವಿತ್ರಾತ್ಮನ(26) ಬೆಂಬಲವನ್ನೂ ನೀಡಿದೆವು. ತರುವಾಯ ನಿಮ್ಮ ಮನಸ್ಸಿಗೆ ಅಪ್ರಿಯವಾದ ವಿಷಯಗಳೊಂದಿಗೆ ಯಾವುದೇ ಸಂದೇಶವಾಹಕರು ನಿಮ್ಮ ಬಳಿಗೆ ಬರುವಾಗಲೆಲ್ಲ ನೀವು ಅಹಂಕಾರ ಪಡುವುದು, ಕೆಲವು ಸಂದೇಶವಾಹಕರನ್ನು ತಿರಸ್ಕರಿಸುವುದು ಮತ್ತು ಕೆಲವರನ್ನು ಕೊಂದುಬಿಡುವುದೇ?
26. ‘ಪವಿತ್ರಾತ್ಮ’ ಎಂಬ ಪದದ ತಾತ್ಪರ್ಯ ಪ್ರವಾದಿಗಳಿಗೆ ಅಲ್ಲಾಹನ ಸಂದೇಶವನ್ನು ತಲುಪಿಸಿಕೊಡುವ ಜಿಬ್ರೀಲ್ ಎಂಬ ಮಲಕ್ ಆಗಿರುವರೆಂದು ಹೆಚ್ಚಿನ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿರುವರು.
(88) ಅವರು ಹೇಳಿದರು: ‘ನಮ್ಮ ಹೃದಯಗಳು ಮುಚ್ಚಲ್ಪಟ್ಟಿವೆ’. ಅಲ್ಲ; ಅವರ ನಿಷೇಧದಿಂದಾಗಿ ಅಲ್ಲಾಹು ಅವರನ್ನು ಶಪಿಸಿರುವನು. ಆದ್ದರಿಂದ ಅವರು ಅತ್ಯಲ್ಪವೇ ವಿಶ್ವಾಸವಿಡುವರು.
(89) ಅವರ ವಶದಲ್ಲಿರುವ ಗ್ರಂಥವನ್ನು ದೃಢೀಕರಿಸುವ ಒಂದು ಗ್ರಂಥವು (ಕುರ್‌ಆನ್) ಅಲ್ಲಾಹುವಿನ ವತಿಯಿಂದ ಅವರ ಬಳಿ ಬಂದಾಗ (ಅವರದನ್ನು ತಿರಸ್ಕರಿಸಿದರು). ಮುಂಚೆ ಅವರು (ಅಂತಹ ಒಂದು ಗ್ರಂಥದೊಂದಿಗೆ ಬರುವ ಪ್ರವಾದಿಯ ಮುಖಾಂತರ) ಅವಿಶ್ವಾಸಿಗಳ ವಿರುದ್ಧ (ಅಲ್ಲಾಹುವಿನೊಂದಿಗೆ) ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದರು. ಅವರಿಗೆ ಸುಪರಿಚಿತವಾದ ಆ ಸಂದೇಶವು ಬಂದಾಗ ಅವರದನ್ನು ನಿಷೇಧಿಸಿದರು. ಆದ್ದರಿಂದ ಆ ನಿಷೇಧಿಗಳ ಮೇಲೆ ಅಲ್ಲಾಹುವಿನ ಶಾಪವಿರಲಿ.
(90) ಅಲ್ಲಾಹು ತನ್ನ ದಾಸರ ಪೈಕಿ ತಾನಿಚ್ಛಿಸುವವರ ಮೇಲೆ ಅವನ ಅನುಗ್ರಹವನ್ನು ಇಳಿಸಿಕೊಡುವನು ಎಂಬ ವಿದ್ವೇಷದ ನಿಮಿತ್ತ, ಅಲ್ಲಾಹು ಅವತೀರ್ಣಗೊಳಿಸಿದ ಸಂದೇಶವನ್ನು ನಿಷೇಧಿಸುವ ಮೂಲಕ ಅವರು ತಮ್ಮ ಆತ್ಮಗಳನ್ನು ಮಾರಿ ಪಡೆದ ಬೆಲೆಯು ಎಷ್ಟು ನಿಕೃಷ್ಟವಾದುದು! ಅದರಿಂದಾಗಿ ಅವರು ಕ್ರೋಧದ ಮೇಲೆ ಕ್ರೋಧಕ್ಕೆ ಪಾತ್ರರಾದರು. ಸತ್ಯನಿಷೇಧಿಗಳಿಗೆ ಅಪಮಾನಕರವಾದ ಶಿಕ್ಷೆಯಿರುವುದು.
(91) ‘ಅಲ್ಲಾಹು ಅವತೀರ್ಣಗೊಳಿಸಿರುವುದರಲ್ಲಿ (ಕುರ್‌ಆನ್‍ನಲ್ಲಿ) ವಿಶ್ವಾಸವಿಡಿರಿ’ ಎಂದು ಅವರೊಂದಿಗೆ ಹೇಳಲಾದರೆ, ‘ನಮಗೆ ಅವತೀರ್ಣಗೊಂಡಿರುವ ಸಂದೇಶದಲ್ಲಿ ನಾವು ವಿಶ್ವಾಸವಿಡುವೆವು’ ಎಂದು ಅವರು ಹೇಳುವರು. ಅದರಾಚೆಗಿರುವುದನ್ನು ಅವರು ನಿಷೇಧಿಸುತ್ತಿರುವರು. ವಸ್ತುತಃ ಅದು (ಕುರ್‌ಆನ್) ಅವರ ಬಳಿಯಿರುವ ಗ್ರಂಥವನ್ನು ದೃಢೀಕರಿಸುವ ಸತ್ಯಸಂದೇಶವಾಗಿದೆ. (ಓ ಪ್ರವಾದಿಯವರೇ!) ತಾವು ಹೇಳಿರಿ: ‘ನೀವು ವಿಶ್ವಾಸಿಗಳಾಗಿದ್ದರೆ ಹಿಂದೆ ನೀವು ಅಲ್ಲಾಹುವಿನ ಪ್ರವಾದಿಗಳನ್ನು ಏಕೆ ವಧಿಸುತ್ತಿದ್ದಿರಿ?’
(92) ಸ್ಪಷ್ಟವಾದ ಪುರಾವೆಗಳೊಂದಿಗೆ ಮೂಸಾ ನಿಮ್ಮ ಬಳಿಗೆ ಬಂದಿದ್ದರು. ತರುವಾಯ ಅದರ ಬಳಿಕ ನೀವು ಅಕ್ರಮಿಗಳಾಗಿರುತ್ತಾ ಕರುವನ್ನು (ಆರಾಧ್ಯಮೂರ್ತಿಯಾಗಿ) ಮಾಡಿಕೊಂಡಿರಿ.
(93) ನಾವು ನಿಮ್ಮಿಂದ ಕರಾರನ್ನು ಪಡೆದ ಮತ್ತು ನಿಮ್ಮ ಮೇಲೆ ಪರ್ವತವನ್ನು ಎತ್ತಿಹಿಡಿದ ಸಂದರ್ಭ(ವನ್ನು ಸ್ಮರಿಸಿರಿ). ‘ನಾವು ನಿಮಗೆ ನೀಡಿದ ಸಂದೇಶವನ್ನು ಬಿಗಿಯಾಗಿ ಹಿಡಿಯಿರಿ ಮತ್ತು (ನಮ್ಮ ಆದೇಶಗಳನ್ನು) ಕಿವಿಗೊಟ್ಟು ಆಲಿಸಿರಿ’ (ಎಂದು ನಾವು ಆದೇಶಿಸಿದೆವು). ಆಗ ಅವರು ಹೇಳಿದರು: ‘ನಾವು ಆಲಿಸಿರುವೆವು ಮತ್ತು ಧಿಕ್ಕರಿಸಿರುವೆವು.’ ಅವರ ನಿಷೇಧಾತ್ಮಕ ಧೋರಣೆಯ ಫಲವಾಗಿ ಕರುವಿನೊಂದಿಗಿರುವ ಭಕ್ತಿಯು ಅವರ ಹೃದಯಗಳಲ್ಲಿ ಲೀನವಾಗಿಬಿಟ್ಟಿದೆ. (ಓ ಪ್ರವಾದಿಯವರೇ!) ತಾವು ಹೇಳಿರಿ: ‘ನೀವು ವಿಶ್ವಾಸಿಗಳಾಗಿದ್ದರೆ ಆ ವಿಶ್ವಾಸವು ನಿಮ್ಮೊಂದಿಗೆ ಆದೇಶಿಸುವ ವಿಷಯವು ಎಷ್ಟು ನಿಕೃಷ್ಟವಾದುದು!’
(94) (ಓ ಪ್ರವಾದಿಯವರೇ!) ಹೇಳಿರಿ: ‘ಪರಲೋಕ ಭವನವು ಅಲ್ಲಾಹುವಿನ ಬಳಿ ಇತರ ಯಾರಿಗೂ ಲಭ್ಯವಾಗದೆ ಕೇವಲ ನಿಮಗೋಸ್ಕರ ಮಾತ್ರ ಇರುವುದಾಗಿದ್ದರೆ ನೀವು ಮರಣವನ್ನು ಹಂಬಲಿಸಿರಿ. ನೀವು ಸತ್ಯಸಂಧರಾಗಿದ್ದರೆ.’
(95) ಆದರೆ ಅವರ ಕೈಗಳು ಈಗಾಗಲೇ ಮಾಡಿಟ್ಟಿರುವ (ದುಷ್ಕರ್ಮಗಳ) ನಿಮಿತ್ತ ಅವರೆಂದೂ ಮರಣವನ್ನು ಆಶಿಸಲಾರರು. ಅಲ್ಲಾಹು ಅಕ್ರಮಿಗಳ ಬಗ್ಗೆ ಸೂಕ್ಷ್ಮಜ್ಞಾನವುಳ್ಳವನಾಗಿರುವನು.
(96) ಖಂಡಿತವಾಗಿಯೂ ಜನರ ಪೈಕಿ ಐಹಿಕ ಜೀವನದೊಂದಿಗೆ ಬಹುದೇವ ವಿಶ್ವಾಸಿಗಳಿಗಿಂತಲೂ ಹೆಚ್ಚು ಅತ್ಯಾಸೆಯುಳ್ಳವರಾಗಿ ತಾವು ಅವರನ್ನು (ಯಹೂದರನ್ನು) ಕಾಣುವಿರಿ. ಅವರಲ್ಲಿ ಪ್ರತಿಯೊಬ್ಬನೂ ತನಗೆ ಸಾವಿರ ವರ್ಷ ಆಯುಸ್ಸು ಸಿಗುತ್ತಿದ್ದರೆ ಎಂದು ಹಂಬಲಿಸುವನು. ಒಬ್ಬನಿಗೆ ದೀರ್ಘಾಯುಸ್ಸು ಸಿಗುವುದು ಎಂದರೆ ಅದು ಅವನನ್ನು ಶಿಕ್ಷೆಯಿಂದ ವಿಮುಕ್ತಿಗೊಳಿಸುವ ಸಂಗತಿಯಲ್ಲ. ಅವರು ಮಾಡುತ್ತಿರುವುದನ್ನು ಅಲ್ಲಾಹು ಸೂಕ್ಷ್ಮವಾಗಿ ವೀಕ್ಷಿಸುವವನಾಗಿರುವನು.
(97) (ಓ ಪ್ರವಾದಿಯವರೇ!) ಹೇಳಿರಿ: ‘(ಕುರ್‌ಆನನ್ನು ತಲುಪಿಸಿಕೊಡುವ) ಜಿಬ್ರೀಲ್ (ಎಂಬ ಮಲಕ್)ನೊಂದಿಗೆ ಯಾರಿಗಾದರೂ ಶತ್ರುತ್ವವಿರುವುದಾದರೆ ಆತ ಅದನ್ನು ತಮ್ಮ ಹೃದಯದಲ್ಲಿ ಅವತೀರ್ಣಗೊಳಿಸಿದ್ದು ಅಲ್ಲಾಹುವಿನ ಆದೇಶ ಪ್ರಕಾರ ಮಾತ್ರವಾಗಿದೆ. ಪೂರ್ವಗ್ರಂಥಗಳನ್ನು ದೃಢೀಕರಿಸುವ ಸಲುವಾಗಿ ಮತ್ತು ವಿಶ್ವಾಸಿಗಳಿಗೆ ಮಾರ್ಗದರ್ಶನವೂ ಶುಭವಾರ್ತೆಯೂ ಆಗಿ (ಇದನ್ನು ಅವತೀರ್ಣಗೊಳಿಸಲಾಗಿದೆ).’
(98) ಯಾರಿಗಾದರೂ ಅಲ್ಲಾಹುವಿನೊಂದಿಗೆ, ಅವನ ಮಲಕ್‍ಗಳೊಂದಿಗೆ, ಅವನ ಸಂದೇಶವಾಹಕರೊಂದಿಗೆ, ಜಿಬ್ರೀಲ್‌ನೊಂದಿಗೆ ಮತ್ತು ಮೀಕಾಈಲ್‌ನೊಂದಿಗೆ ಶತ್ರುತ್ವವಿರುವುದಾದರೆ ಖಂಡಿತವಾಗಿಯೂ ಅಲ್ಲಾಹು ಆಅವಿಶ್ವಾಸಿಗಳ ಶತ್ರುವಾಗಿರುವನು.
(99) ಖಂಡಿತವಾಗಿಯೂ ನಾವು ತಮಗೆ ಸ್ಪಷ್ಟವಾದ ದೃಷ್ಟಾಂತಗಳನ್ನು ಅವತೀರ್ಣಗೊಳಿಸಿರುವೆವು. ಧಿಕ್ಕಾರಿಗಳಲ್ಲದೆ ಯಾರೂ ಅವುಗಳನ್ನು ನಿಷೇಧಿಸಲಾರರು.
(100) ಅವರು (ಯಹೂದರು) ಯಾವುದೇ ಕರಾರು ಮಾಡಿಕೊಂಡಾಗಲೂ ಅವರ ಪೈಕಿ ಒಂದು ಗುಂಪು ಅದನ್ನು ಎಸೆದು ಬಿಡುವುದೇ? ಮಾತ್ರವಲ್ಲ, ಅವರಲ್ಲಿ ಹೆಚ್ಚಿನವರಿಗೂ ವಿಶ್ವಾಸವೇ ಇಲ್ಲ.
(101) ಅವರಲ್ಲಿರುವ ಗ್ರಂಥವನ್ನು ದೃಢೀಕರಿಸುತ್ತಾ ಅಲ್ಲಾಹುವಿನ ಬಳಿಯಿಂದ ಒಬ್ಬ ಸಂದೇಶವಾಹಕರು ಅವರ ಬಳಿ ಬಂದಾಗ ಗ್ರಂಥ ನೀಡಲಾದವರ ಪೈಕಿ ಒಂದು ಗುಂಪು ಅಲ್ಲಾಹುವಿನ ಗ್ರಂಥವನ್ನು ಯಾವುದೇ ಅರಿವಿಲ್ಲ ದವರಂತೆ ತಮ್ಮ ಬೆನ್ನ ಹಿಂದಕ್ಕೆ ಎಸೆದುಬಿಟ್ಟರು.
(102) ಸುಲೈಮಾನ್‍ರ ರಾಜ್ಯಭಾರದ (ರಹಸ್ಯವೆಂಬ) ಹೆಸರಲ್ಲಿ ಸೈತಾನರು ಪ್ರಚಾರ ಮಾಡಿರುವುದನ್ನು ಅವರು (ಇಸ್ರಾಈಲರು) ಅನುಸರಿಸಿದರು. ಸುಲೈಮಾನ್‍ರು ಅವಿಶ್ವಾಸ ತಾಳಿರಲಿಲ್ಲ. ಆದರೆ ಜನರಿಗೆ ಮಾಂತ್ರಿಕ ವಿದ್ಯೆಯನ್ನು ಕಲಿಸಿಕೊಡುವ ಮೂಲಕ ಸೈತಾನರು ಅವಿಶ್ವಾಸ ತಾಳಿದರು. ಬಾಬಿಲೋನಿಯಾದಲ್ಲಿ ಹಾರೂತ್ ಮತ್ತು ಮಾರೂತ್ ಎಂಬ ಎರಡು ಮಲಕ್‍ಗಳಿಗೆ(27) ಲಭ್ಯವಾದವುಗಳ (ಬಗ್ಗೆ ಸೈತಾನರು ಕಲ್ಪಿಸಿ ಹೇಳುತ್ತಿದ್ದವುಗಳನ್ನೂ ಅವರು ಅನುಸರಿಸಿದರು). ಆದರೆ ಹಾರೂತ್ ಮತ್ತು ಮಾರೂತ್ ಯಾರಿಗೆ ಕಲಿಸುವಾಗಲೂ ‘ನಮ್ಮದು ಕೇವಲ ಒಂದು ಪರೀಕ್ಷೆ ಮಾತ್ರವಾಗಿದೆ, ಆದ್ದರಿಂದ (ಇದನ್ನು ಬಳಸಿ) ಅವಿಶ್ವಾಸಿಯಾಗದಿರು’ ಎಂದು ಹೇಳದೇ ಕಲಿಸಿಕೊಡುತ್ತಿರಲಿಲ್ಲ. ಹೀಗೆ ಪತಿಪತ್ನಿಯರ ಮಧ್ಯೆ ಒಡಕು ಮೂಡಿಸುವ ತಂತ್ರಗಳನ್ನು ಜನರು ಅವರಿಂದ ಕಲಿತುಕೊಳ್ಳುತ್ತಿದ್ದರು. ಆದರೆ ಅಲ್ಲಾಹುವಿನ ಅನುಮತಿಯ ವಿನಾ ಅದರಿಂದ ಯಾರಿಗೂ ಯಾವುದೇ ಹಾನಿಯನ್ನು ಮಾಡಲು ಅವರಿಗೆ ಸಾಧ್ಯವಾಗದು. ಸ್ವತಃ ಅವರಿಗೇ ಹಾನಿಯನ್ನುಂಟು ಮಾಡುವ ಮತ್ತು ಯಾವುದೇ ಪ್ರಯೋಜನವನ್ನೂ ನೀಡದ ವಿದ್ಯೆಯನ್ನು ಅವರು ಕಲಿಯುತ್ತಿರುವರು. ಅದನ್ನು (ಆ ವಿದ್ಯೆಯನ್ನು) ಯಾರು ಗಳಿಸಿದನೋ ಅವನಿಗೆ ಪರಲೋಕದಲ್ಲಿ ಯಾವುದೇ ಪಾಲೂ ಇಲ್ಲವೆಂದು ಅವರು ಚೆನ್ನಾಗಿ ಅರಿತುಕೊಂಡಿದ್ದರು. ಸ್ವತಃ ತಮ್ಮನ್ನು ಮಾರಿ ಅವರು ಪಡೆದ ಬೆಲೆಯು ಎಷ್ಟು ನಿಕೃಷ್ಟವಾದುದು! ಅವರಿಗೆ ತಿಳುವಳಿಕೆಯಿರುತ್ತಿದ್ದರೆ!
27. ಈ ಸೂಕ್ತಿಯಲ್ಲಿ ‘ಮಲಕೈನ್’ ಮತ್ತು ‘ಮಲಿಕೈನ್’ ಎಂಬ ‘ಕಿರಾಅತ್’ (ಪಾರಾಯಣ ವ್ಯತ್ಯಾಸ) ಇದೆ. ‘ಮಲಕೈನ್’ ಎಂಬ ಪದಕ್ಕೆ ಇಬ್ಬರು ಮಲಕ್‍ಗಳು ಎಂಬ ಭಾಷಿಕ ಅರ್ಥವನ್ನೇ ಕೆಲವು ವ್ಯಾಖ್ಯಾನಕಾರರು ನೀಡಿದ್ದಾರೆ. ಇತರ ಕೆಲವರ ಪ್ರಕಾರ ‘ಮಲಕೈನ್’ ಎಂದರೆ ಮಲಕ್‍ಗಳಂತೆ ಮಾನವಾತೀತ ಪದವಿಯನ್ನು ನೀಡಿ ಜನರಿಂದ ಗೌರವಿಸಲಾದ ಇಬ್ಬರು ವ್ಯಕ್ತಿಗಳು ಎಂದಾಗಿದೆ. ‘ಮಲಿಕೈನ್’ ಎಂಬುದರ ಅರ್ಥ ಇಬ್ಬರು ರಾಜಂದಿರು ಎಂದಾಗಿದೆ. ಕೆಲವು ಮಾಂತ್ರಿಕ ವಿದ್ಯೆಗಳು ಹಾರೂತ್ ಮತ್ತು ಮಾರೂತ್‍ರ ಬಳಿಯಿತ್ತೆಂದು ಈ ಸೂಕ್ತಿಯಿಂದ ಸ್ಪಷ್ಟವಾಗುತ್ತದೆ. ಅಲ್ಲಾಹು ಇಚ್ಛಿಸಿದ ಜನರಿಗೆ ಸಿಹ್ರ್ (ಮಾಟ) ತಗಲುತ್ತದೆ. ಆದರೆ ಸಿಹ್ರ್‌ಗೆ ಸಿಹ್ರ್‌ನ ಮೂಲಕ ಚಿಕಿತ್ಸೆ ಮಾಡಲು ಅನುಮತಿಯಿಲ್ಲ. ಕುರ್‌ಆನಿನ ಮೂಲಕ ಅಥವಾ ದೃಢಪಟ್ಟ ಹದೀಸ್‍ಗಳಲ್ಲಿ ಬಂದ ಪ್ರಾರ್ಥನೆಗಳ ಮೂಲಕ ಚಿಕಿತ್ಸೆ ಮಾಡಬಹುದಾಗಿದೆ. ‘ಸಿಹ್ರ್’ ಎಂಬ ಪದದ ವ್ಯಾಪ್ತಿಯಲ್ಲಿ ಬರುವ ಮಾಟ, ವಾಮಾಚಾರ, ಮಂತ್ರವಾದ ಇತ್ಯಾದಿಗಳೆಲ್ಲವೂ ನಿಷಿದ್ಧವಾಗಿವೆ.
(103) ಅವರು ವಿಶ್ವಾಸವಿಟ್ಟವರೂ, ಭಯಭಕ್ತಿ ಪಾಲಿಸಿದವರೂ ಆಗಿರುತ್ತಿದ್ದರೆ ಅಲ್ಲಾಹುವಿನಿಂದ ಸಿಗುವ ಪ್ರತಿಫಲವು ಎಷ್ಟೋ ಉತ್ತಮವಾಗಿರುತ್ತಿತ್ತು! ಅವರದನ್ನು ಅರಿತಿರುತ್ತಿದ್ದರೆ!
(104) ಓ ಸತ್ಯವಿಶ್ವಾಸಿಗಳೇ! ನೀವು (ಪ್ರವಾದಿಯೊಂದಿಗೆ) ‘ರಾಇನಾ’(28) ಎಂದು ಹೇಳದಿರಿ. ಬದಲಿಗೆ ‘ಉನ್‍ಝುರ್‌ನಾ’ ಎಂದು ಹೇಳಿರಿ ಮತ್ತು ಕಿವಿಗೊಟ್ಟು ಆಲಿಸಿರಿ. ಸತ್ಯನಿಷೇಧಿಗಳಿಗೆ ಯಾತನಾಮಯವಾದ ಶಿಕ್ಷೆಯಿದೆ.
28. ‘ರಾಇನಾ’ ಎಂಬ ಅರಬಿ ಪದದ ಅರ್ಥ ‘ನಮ್ಮನ್ನು ಪರಿಗಣಿಸಿರಿ’ ಎಂದಾಗಿದೆ. ಪ್ರವಾದಿ(ಸ) ರವರೊಂದಿಗಿನ ಸಂಭಾಷಣೆಯಲ್ಲಿ ಸಹಾಬಿಗಳು ಕೆಲವೊಮ್ಮೆ ಈ ಪದವನ್ನು ಬಳಸುತ್ತಿದ್ದರು. ಆದರೆ ಯಹೂದರ ಭಾಷೆಯಲ್ಲಿ ‘ರಾಇನಾ’ ಎಂಬುದು ಒಂದು ಅಸಭ್ಯಪದವಾಗಿದೆ. ಪ್ರವಾದಿ(ಸ) ರವರನ್ನು ಅವಹೇಳನ ಮಾಡುವುದಕ್ಕಾಗಿ ದ್ವಂದ್ವಾರ್ಥವಿರುವ ಈ ಪದವನ್ನು ಅವರು ಬಳಸುತ್ತಿದ್ದರು. ಆದ್ದರಿಂದ ಕುರ್‌ಆನ್ ಆ ಪದವನ್ನು ನಿರೋಧಿಸಿ ಅದರ ಬದಲಿಗೆ ‘ನಮ್ಮ ಕಡೆಗೆ ಗಮನ ಹರಿಸಿರಿ’ ಎಂಬ ಅರ್ಥವನ್ನು ಹೊಂದಿರುವ ‘ಉನ್‍ಝುರ್‌ನಾ’ ಎಂಬ ಪದವನ್ನು ಬಳಸುವಂತೆ ಸೂಚಿಸಿತು. ವಿಶ್ವಾಸಿಗಳು ಪರಸ್ಪರ ಹೊಂದಿರುವ ಐಕ್ಯತೆಗೆ ಮಾರಕವಾಗುವಂತಹ ಒಂದು ಪದಪ್ರಯೋಗ ಕೂಡ ಬರದಂತೆ ಎಚ್ಚರವಹಿಸಬೇಕೆಂಬ ಸೂಚನೆಯು ಇದರಲ್ಲಿದೆ.
(105) ನಿಮ್ಮ ರಬ್‌ನಿಂದ ಏನಾದರೂ ಒಳಿತು ನಿಮ್ಮ ಮೇಲೆ ಇಳಿಸಲಾಗುವುದನ್ನು ಗ್ರಂಥದವರಲ್ಲಿ ಮತ್ತು ಬಹುದೇವಾರಾಧಕರಲ್ಲಿ ಸೇರಿದ ಸತ್ಯನಿಷೇಧಿಗಳು ಸ್ವಲ್ಪವೂ ಇಷ್ಟಪಡಲಾರರು. ಅಲ್ಲಾಹು ತನ್ನ ದಯೆಯಿಂದ ತಾನಿಚ್ಛಿಸುವವರನ್ನು ವಿಶೇಷವಾಗಿ ಅನುಗ್ರಹಿಸುವನು. ಅಲ್ಲಾಹು ಮಹಾ ಅನುಗ್ರಹದ ಒಡೆಯನಾಗಿರುವನು.
(106) ನಾವು ಯಾವುದಾದರೂ ‘ಆಯತ್ತ’ನ್ನು ರದ್ದುಗೊಳಿಸುವುದಾದರೆ(29) ಅಥವಾ ವಿಸ್ಮೃತಿಗೊಳಿಸುವುದಾದರೆ ಅದರ ಬದಲಿಗೆ ಅದಕ್ಕಿಂತಲೂ ಉತ್ತಮವಾಗಿರುವುದನ್ನು ಅಥವಾ ಅದಕ್ಕೆ ಸಮಾನವಾಗಿರುವುದನ್ನು ತರುವೆವು. ಅಲ್ಲಾಹು ಸಕಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನೆಂಬುದು ತಮಗೆ ತಿಳಿಯದೇ?
29. ಸೃಷ್ಟಿಗಳ ಮನೋವೃತ್ತಿ, ಸ್ವಭಾವ ಮತ್ತು ಕಾರ್ಯವೈಖರಿಗಳನ್ನು ಸೂಕ್ಷ್ಮವಾಗಿ ಅರಿಯುವವನು ಅಲ್ಲಾಹುವಾಗಿರುವನು. ತನ್ನ ಇಚ್ಛೆಯಂತೆ ಅವನು ತನ್ನ ವಿಧಿನಿಷೇಧಗಳನ್ನು ಬದಲಾವಣೆಗೊಳಿಸುವುದನ್ನು ಅಥವಾ ರದ್ದುಗೊಳಿಸುವುದನ್ನು ಮಾಡುತ್ತಾನೆ. ಅಲ್ಲಾಹುವಿನ ಯಾವುದೇ ನಿರ್ಧಾರವೂ ಸೂಕ್ಷ್ಮವಾಗಿ ಚಿಂತಿಸಿದರೆ ಸೃಷ್ಟಿಗಳಿಗೆ ಹಿತಕರವೇ ಹೊರತು ಹಾನಿಕರವಲ್ಲವೆಂದು ತಿಳಿದು ಬರುತ್ತದೆ.
(107) ಆಕಾಶಗಳ ಮತ್ತು ಭೂಮಿಯ ಆಧಿಪತ್ಯವು ಅಲ್ಲಾಹುವಿಗೆ ಮಾತ್ರವಿರುವುದಾಗಿದೆ ಮತ್ತು ಅಲ್ಲಾಹುವಿನ ಹೊರತು ನಿಮಗೆ ಅನ್ಯ ರಕ್ಷಕನಾಗಲಿ, ಸಹಾಯಕನಾಗಲಿ ಇಲ್ಲವೆಂಬುದು ತಮಗೆ ತಿಳಿಯದೇ?
(108) ಮುಂಚೆ ಮೂಸಾರೊಂದಿಗೆ ಪ್ರಶ್ನಿಸಲಾದಂತಹ ಪ್ರಶ್ನೆಗಳನ್ನು(30) ನಿಮ್ಮ ಸಂದೇಶವಾಹಕರೊಂದಿಗೂ ಪ್ರಶ್ನಿಸಲು ನೀವು ಇಚ್ಛಿಸುತ್ತಿರುವಿರಾ? ಯಾರು ಸತ್ಯವಿಶ್ವಾಸಕ್ಕೆ ಬದಲಿಯಾಗಿ ಅವಿಶ್ವಾಸವನ್ನು ಪಡೆಯುತ್ತಾನೋ ಅವನು ಖಂಡಿತವಾಗಿಯೂ ಸತ್ಯಮಾರ್ಗದಿಂದ ಪಥಭ್ರಷ್ಟನಾಗಿರುವನು.
30. ‘ನಮಗೆ ಅಲ್ಲಾಹುವನ್ನು ಪ್ರತ್ಯಕ್ಷವಾಗಿ ತೋರಿಸಿಕೊಡು’ ಎಂದು ಯಹೂದರು ಪ್ರವಾದಿ ಮೂಸಾ(ಅ) ರೊಂದಿಗೆ ಅಪೇಕ್ಷಿಸಿದ್ದರು. ಇಂತಹ ಧಿಕ್ಕಾರದ ಪ್ರಶ್ನೆಗಳೆಡೆಗೆ ಇಲ್ಲಿ ಸೂಚನೆ ನೀಡಲಾಗಿದೆ.
(109) ನೀವು ಸತ್ಯವಿಶ್ವಾಸ ಸ್ವೀಕರಿಸಿದ ಬಳಿಕ ನಿಮ್ಮನ್ನು ಅವಿಶ್ವಾಸಿಗಳನ್ನಾಗಿ ಬದಲಾಯಿಸಬೇಕೆಂದು ಗ್ರಂಥದವರ ಪೈಕಿ ಹೆಚ್ಚಿನವರೂ ಆಶಿಸುವರು. (ಅವರು ಆ ನಿಲುವನ್ನು ಹೊಂದಿರುವುದು) ಸತ್ಯವು ಸ್ಪಷ್ಟವಾಗಿ ಮನದಟ್ಟಾದ ಬಳಿಕವೂ ಸ್ವಾರ್ಥಪೂರಿತ ಅಸೂಯೆಯ ನಿಮಿತ್ತವಾಗಿದೆ. ಆದ್ದರಿಂದ (ಅವರ ವಿಷಯದಲ್ಲಿ) ಅಲ್ಲಾಹು ತನ್ನ ಆಜ್ಞೆಯನ್ನು ತರುವವರೆಗೆ ನೀವು ಕ್ಷಮಿಸಿರಿ ಮತ್ತು ಮನ್ನಿಸಿರಿ. ಖಂಡಿತವಾಗಿಯೂ ಅಲ್ಲಾಹು ಸಕಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.
(110) ನೀವು ನಮಾಝ್ ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ. ನೀವು ನಿಮ್ಮ ಸ್ವಹಿತಕ್ಕಾಗಿ ಉತ್ತಮವಾದ ಯಾವುದೇ ಕಾರ್ಯವನ್ನು ಪೂರ್ವಭಾವಿಯಾಗಿ ಮಾಡಿಟ್ಟರೂ ಅದರ ಪ್ರತಿಫಲವನ್ನು ಅಲ್ಲಾಹುವಿನ ಬಳಿ ಕಾಣುವಿರಿ. ಅಲ್ಲಾಹು ನೀವು ಮಾಡುತ್ತಿರುವುದನ್ನೆಲ್ಲಾ ವೀಕ್ಷಿಸುವವನಾಗಿರುವನು.
(111) ‘ಯಹೂದರೋ ಕ್ರೈಸ್ತರೋ ಆಗದ ಹೊರತು ಯಾರೂ ಸ್ವರ್ಗವನ್ನು ಪ್ರವೇಶಿಸಲಾರರು’ ಎಂದು ಅವರು ಹೇಳುತ್ತಿರುವರು. ಅವೆಲ್ಲವೂ ಅವರ ವ್ಯರ್ಥ ವ್ಯಾಮೋಹಗಳಾಗಿವೆ. (ಓ ಪ್ರವಾದಿಯವರೇ!) ಹೇಳಿರಿ: ‘ನೀವು ಸತ್ಯಸಂಧರಾಗಿದ್ದರೆ (ಅದರ ಬಗ್ಗೆ ನಿಮಗೆ ಲಭ್ಯವಾಗಿರುವ) ಪುರಾವೆಯನ್ನು ತನ್ನಿರಿ.’
(112) ಹೌದು! ಯಾರು ಸತ್ಕರ್ಮಿಯಾಗಿರುತ್ತಾ ಸ್ವತಃ ತನ್ನನ್ನು ಅಲ್ಲಾಹುವಿಗೆ ಸಮರ್ಪಿಸಿರುವನೋ ಅವನ ಪ್ರತಿಫಲವು ಅವನಿಗೆ ಅವನ ರಬ್‌ನ ಬಳಿಯಿರುವುದು. ಅಂತಹವರಿಗೆ ಯಾವುದೇ ಭಯವೂ ಇರಲಾರದು. ಅವರು ದುಃಖಿಸಬೇಕಾಗಿಯೂ ಬರದು.
(113) ‘ಕ್ರೈಸ್ತರಿಗೆ ಯಾವ ಬುನಾದಿಯೂ ಇಲ್ಲ’ ಎಂದು ಯಹೂದರು ಹೇಳಿದರು. ‘ಯಹೂದರಿಗೆ ಯಾವ ಬುನಾದಿಯೂ ಇಲ್ಲ’ ಎಂದು ಕ್ರೈಸ್ತರು ಹೇಳಿದರು. ಅವರಂತೂ ಗ್ರಂಥವನ್ನು ಪಾರಾಯಣ ಮಾಡುವವರಾಗಿರುವರು. ಅವರು ಹೇಳಿದಂತೆಯೇ ಅರಿವಿಲ್ಲದ ಕೆಲವರೂ ಹೇಳಿರುವರು. ಅವರು ಯಾವೆಲ್ಲ ವಿಷಯಗಳ ಕುರಿತು ಭಿನ್ನಾಭಿಪ್ರಾಯ ತಾಳಿರುವರೋ ಅವೆಲ್ಲವುಗಳ ಕುರಿತು ಅಲ್ಲಾಹು ಪುನರುತ್ಥಾನ ದಿನದಂದು ಅವರ ನಡುವೆ ತೀರ್ಪು ವಿಧಿಸಲಿರುವನು.
(114) ಅಲ್ಲಾಹುವಿನ ಮಸೀದಿಗಳಲ್ಲಿ ಅವನ ನಾಮವು ಸ್ಮರಿಸಲಾಗುವುದನ್ನು ಅಡ್ಡಿಪಡಿಸುವವನಿಗಿಂತಲೂ, ಮತ್ತು ಅವುಗಳ (ಮಸೀದಿಗಳ) ನಾಶಕ್ಕಾಗಿ ಪರಿಶ್ರಮಿಸುವವನಿಗಿಂತಲೂ ದೊಡ್ಡ ಅಕ್ರಮಿ ಯಾರಿರುವನು?(31) ಭಯಭೀತರಾಗಿಯೇ ವಿನಾ ಆ ಮಸೀದಿಗಳನ್ನು ಪ್ರವೇಶಿಸುವುದು ಅವರಿಗೆ ಯುಕ್ತವಾದುದಲ್ಲ. ಅವರಿಗೆ ಇಹಲೋಕದಲ್ಲಿ ಅಪಮಾನವಿದೆ. ಪರಲೋಕದಲ್ಲಂತೂ ಅವರಿಗೆ ಕಠೋರವಾದ ಶಿಕ್ಷೆಯಿದೆ.
31. ಮಸೀದಿಯು ಅಲ್ಲಾಹುವಿನ ನಾಮವನ್ನು ಸ್ತುತಿಸುವುದಕ್ಕಿರುವ ಅವನ ಭವನವಾಗಿದೆ. ಆದರೆ ಇಂದು ಹಲವು ಕಡೆಗಳಲ್ಲೂ ಮಸೀದಿಗಳನ್ನು ಮೂಢನಂಬಿಕೆಗಳ ಪ್ರಚಾರ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಇದೊಂದು ಮಹಾಪಾಪವಾಗಿದೆ.
(115) ಪೂರ್ವ ಮತ್ತು ಪಶ್ಚಿಮವು ಅಲ್ಲಾಹುವಿನದ್ದಾಗಿವೆ. ಆದ್ದರಿಂದ ನೀವು ಎತ್ತ ತಿರುಗಿ ಪ್ರಾರ್ಥಿಸಿದರೂ ಅಲ್ಲಿ ಅಲ್ಲಾಹುವಿನ ಮುಖವಿದೆ. ಖಂಡಿತವಾಗಿಯೂ ಅಲ್ಲಾಹು ಅಪಾರ ಸಾಮರ್ಥ್ಯವುಳ್ಳವನೂ, ಸರ್ವಜ್ಞನೂ ಆಗಿರುವನು.
(116) ‘ಅಲ್ಲಾಹು ಸಂತತಿಯನ್ನು ಮಾಡಿಕೊಂಡಿರುವನು’ ಎಂದು ಅವರು ಹೇಳುವರು. ಅವನು ಪರಮಪಾವನನು! ಹಾಗಲ್ಲ; ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನದ್ದಾಗಿವೆ. ಎಲ್ಲರೂ ಅವನಿಗೆ ಶರಣಾದವರಾಗಿರುವರು.
(117) ಯಾವುದೇ ಪೂರ್ವ ಮಾದರಿಯೂ ಇಲ್ಲದೆ ಆಕಾಶಗಳನ್ನು ಮತ್ತು ಭೂಮಿಯನ್ನು ನಿರ್ಮಿಸಿದವನು. ಅವನೊಂದು ವಿಷಯವನ್ನು ತೀರ್ಮಾನಿಸಿದರೆ ಅದರೊಂದಿಗೆ ‘ಉಂಟಾಗು’ ಎಂದು ಮಾತ್ರ ಹೇಳುವನು; ತಕ್ಷಣ ಅದುಂಟಾಗುವುದು!
(118) ಅರಿವಿಲ್ಲದವರು ಹೇಳಿದರು: ‘ಅಲ್ಲಾಹು ನಮ್ಮೊಂದಿಗೆ ಏಕೆ (ನೇರವಾಗಿ) ಮಾತನಾಡುವುದಿಲ್ಲ? ಅಥವಾ ನಮಗೆ (ಮನದಟ್ಟಾಗುವಂತಹ) ಒಂದು ದೃಷ್ಟಾಂತವೇಕೆ ಬರುವುದಿಲ್ಲ?’ ಹೀಗೆ ಇವರು ಹೇಳಿದಂತೆಯೇ ಇವರ ಪೂರ್ವಿಕರೂ ಹೇಳಿರುವರು. ಇವರ ಮತ್ತು ಅವರ ಹೃದಯಗಳು ಪರಸ್ಪರ ಹೋಲಿಕೆಯಿರುವುದಾಗಿವೆ. ದೃಢವಾಗಿ ವಿಶ್ವಾಸವಿಡುವ ಜನರಿಗೆ ನಾವು ದೃಷ್ಟಾಂತಗಳನ್ನು ಸ್ಪಷ್ಟಪಡಿಸಿಕೊಟ್ಟಿರುವೆವು.
(119) ಖಂಡಿತವಾಗಿಯೂ ನಾವು ತಮ್ಮನ್ನು ಶುಭವಾರ್ತೆ ತಿಳಿಸುವವರಾಗಿ ಮತ್ತು ಮುನ್ನೆಚ್ಚರಿಕೆ ನೀಡುವವರಾಗಿ ಸತ್ಯದೊಂದಿಗೆ ಕಳುಹಿಸಿರುವೆವು. ನರಕವಾಸಿಗಳ ಬಗ್ಗೆ ತಮ್ಮೊಂದಿಗೆ ಪ್ರಶ್ನಿಸಲಾಗದು.
(120) ತಾವು ಅವರ ಮಾರ್ಗವನ್ನು ಅನುಸರಿಸುವ ತನಕ ಯಹೂದರಾಗಲಿ, ಕ್ರೈಸ್ತರಾಗಲಿ ಎಂದಿಗೂ ತಮ್ಮ ಬಗ್ಗೆ ಸಂತೃಪ್ತರಾಗಲಾರರು. ಹೇಳಿರಿ: ‘ಅಲ್ಲಾಹುವಿನ ಮಾರ್ಗದರ್ಶನವೇ ನೈಜ ಮಾರ್ಗದರ್ಶನವಾಗಿದೆ.’ ತಮಗೆ ಅರಿವು ಸಿಕ್ಕಿದ ಬಳಿಕ ತಾವೇನಾದರೂ ಅವರ ದೇಹೇಚ್ಛೆಗಳನ್ನು ಅನುಸರಿಸುವುದಾದರೆ ತಮ್ಮನ್ನು ಅಲ್ಲಾಹುವಿನಿಂದ ರಕ್ಷಿಸಲು ಮತ್ತು ತಮಗೆ ಸಹಾಯ ಮಾಡಲು ಯಾರೂ ಇರಲಾರರು.
(121) ನಾವು ಯಾರಿಗೆ ಗ್ರಂಥವನ್ನು ನೀಡಿರುವೆವೋ ಅವರು ಅದನ್ನು ಪಾರಾಯಣ ಮಾಡಬೇಕಾದ ರೀತಿಯಲ್ಲೇ ಪಾರಾಯಣ ಮಾಡುತ್ತಿರುವರು. ಅವರು ಅದರಲ್ಲಿ ವಿಶ್ವಾಸವಿಡುತ್ತಿರುವರು. ಆದರೆ ಯಾರು ಅದರಲ್ಲಿ ಅವಿಶ್ವಾಸವಿಡುವರೋ ಅವರೇ ನಷ್ಟ ಹೊಂದಿದವರಾಗಿರುವರು.
(122) ಓ ಇಸ್ರಾಈಲ್ ಸಂತತಿಗಳೇ! ನಾನು ನಿಮಗೆ ದಯಪಾಲಿಸಿರುವ ನನ್ನ ಅನುಗ್ರಹವನ್ನು ಮತ್ತು ನಾನು ನಿಮ್ಮನ್ನು ಇತರ ಜನರಿಗಿಂತ ಹೆಚ್ಚು ಶ್ರೇಷ್ಠತೆ ನೀಡಿರುವುದನ್ನು ನೀವು ಸ್ಮರಿಸಿರಿ.
(123) ಒಬ್ಬನು ಇನ್ನೊಬ್ಬನಿಗೆ ಯಾವುದೇ ಉಪಕಾರವನ್ನು ಮಾಡಲಾಗದ, ಯಾವ ವ್ಯಕ್ತಿಯಿಂದಲೂ ಯಾವುದೇ ಪ್ರಾಯಶ್ಚಿತ್ತವನ್ನು ಪಡೆಯದ, ಯಾವ ವ್ಯಕ್ತಿಗೂ ಯಾವುದೇ ಶಿಫಾರಸು ಪ್ರಯೋಜನಕರವಾಗದ, ಅವರಿಗೆ ಯಾವುದೇ ಸಹಾಯವೂ ದೊರೆಯದ ಒಂದು ದಿನವನ್ನು ನೀವು ಭಯಪಡಿರಿ.
(124) ಇಬ್ರಾಹೀಮ್‍ರನ್ನು ಅವರ ರಬ್ ಕೆಲವು ಆಜ್ಞೆಗಳ ಮೂಲಕ ಪರೀಕ್ಷಿಸಿದ ಮತ್ತು ಅವರು ಅದನ್ನು ನೆರವೇರಿಸಿದ ಸಂದರ್ಭ(ವನ್ನು ಸ್ಮರಿಸಿರಿ). (ಆಗ) ಅಲ್ಲಾಹು ಅವರೊಂದಿಗೆ ಹೇಳಿದನು: ‘ನಾನು ತಮ್ಮನ್ನು ಮಾನವರಿಗೆ ನಾಯಕನಾಗಿ ಮಾಡುವೆನು’. ಇಬ್ರಾಹೀಮ್ ಹೇಳಿದರು: ‘ನನ್ನ ಸಂತತಿಗಳಲ್ಲಿ ಸೇರಿದವರನ್ನೂ (ನಾಯಕರಾಗಿ ಮಾಡು)’. ಅಲ್ಲಾಹು ಹೇಳಿದನು: ‘(ಸರಿ, ಆದರೆ) ನನ್ನ ಈ ನಿರ್ಧಾರವು ಅಕ್ರಮಿಗಳಿಗೆ ಅನ್ವಯವಾಗಲಾರದು’.
(125) ನಾವು ಆ ಭವನವನ್ನು (ಕಅ್‌ಬಾವನ್ನು) ಜನರು ಸಮ್ಮಿಲನಗೊಳ್ಳುವ ಸ್ಥಳವಾಗಿಯೂ, ಒಂದು ಸುರಕ್ಷಿತ ಕೇಂದ್ರವಾಗಿಯೂ ಮಾಡಿದ ಸಂದರ್ಭ(ವನ್ನು ಸ್ಮರಿಸಿರಿ). ಇಬ್ರಾಹೀಮ್ ನಿಂತು ಪ್ರಾರ್ಥಿಸಿದ ಸ್ಥಳವನ್ನು ನೀವು (ನಮಾಝ್‍ನ) ಸ್ಥಳವಾಗಿ ಮಾಡಿಕೊಳ್ಳಿರಿ. ‘ಪ್ರದಕ್ಷಿಣೆ ಮಾಡುವರಿಗೂ, ಇಅ್‌ತಿಕಾಫ್ ನಿರ್ವಹಿಸುವವರಿಗೂ, ತಲೆಬಾಗುತ್ತಾ ಮತ್ತು ಸಾಷ್ಟಾಂಗವೆರಗುತ್ತಾ ನಮಾಝ್ ಮಾಡುವವರಿಗೂ ನನ್ನ ಭವನವನ್ನು ನೀವಿಬ್ಬರೂ ಸ್ವಚ್ಛಗೊಳಿಸಿರಿ’ ಎಂದು ನಾವು ಇಬ್ರಾಹೀಮ್ ಮತ್ತು ಇಸ್ಮಾಈಲ್‍ರಿಗೆ ಆಜ್ಞೆಯಿತ್ತೆವು.
(126) ‘ಓ ನನ್ನ ರಬ್! ನೀನು ಇದನ್ನೊಂದು ನಿರ್ಭೀತ ಪಟ್ಟಣವನ್ನಾಗಿ ಮಾಡು ಮತ್ತು ಇಲ್ಲಿನ ನಿವಾಸಿಗಳ ಪೈಕಿ ಅಲ್ಲಾಹುವಿನಲ್ಲಿ ಹಾಗೂ ಅಂತ್ಯದಿನದಲ್ಲಿ ವಿಶ್ವಾಸವಿಡುವವರಿಗೆ ಹಣ್ಣುಹಂಪಲುಗಳ ಆಹಾರವನ್ನು ನೀಡು’ ಎಂದು ಇಬಾಹ್ರೀಮ್ ಪ್ರಾರ್ಥಿಸಿದ ಸಂದರ್ಭ(ವನ್ನು ಸ್ಮರಿಸಿರಿ). ಅಲ್ಲಾಹು ಹೇಳಿದನು: ‘ನಾನು ಅವಿಶ್ವಾಸಿಗೂ (ಆಹಾರ ನೀಡುವೆನು), ನಾನು ಅವನಿಗೆ ಅಲ್ಪಕಾಲದ ಸುಖವನ್ನು ಮಾತ್ರ ನೀಡುವೆನು. ತರುವಾಯ ನರಕ ಶಿಕ್ಷೆಯನ್ನು ಸವಿಯುವಂತೆ ನಾನು ಅವನನ್ನು ನಿರ್ಬಂಧಿಸುವೆನು. (ಅವನು) ತಲುಪುವ ಆ ಸ್ಥಳವು ಅತ್ಯಂತ ನಿಕೃಷ್ಟವಾದುದಾಗಿದೆ!’
(127) ಇಬ್ರಾಹೀಮ್ ಮತ್ತು ಇಸ್ಮಾಈಲ್ ಜೊತೆಯಾಗಿ ಆ ಭವನದ (ಕಅ್‌ಬಾದ) ಅಡಿಪಾಯವನ್ನು ಎತ್ತರಿಸುತ್ತಿದ್ದ ಸಂದರ್ಭ(ವನ್ನು ಸ್ಮರಿಸಿರಿ). (ಅವರಿಬ್ಬರೂ ಪ್ರಾರ್ಥಿಸಿ ದರು): ‘ಓ ನಮ್ಮ ರಬ್! ನಮ್ಮಿಂದ ಇದನ್ನು ಸ್ವೀಕರಿಸು. ಖಂಡಿತವಾಗಿಯೂ ನೀನು ಎಲ್ಲವನ್ನು ಆಲಿಸುವವನೂ ಅರಿಯುವವನೂ ಆಗಿರುವೆ’.
(128) ‘ಓ ನಮ್ಮ ರಬ್! ನಮ್ಮಿಬ್ಬರನ್ನೂ ನಿನಗೆ ಸಂಪೂರ್ಣ ಶರಣಾದವರಾಗಿ ಮಾಡು, ನಿನಗೆ ಸಂಪೂರ್ಣ ಶರಣಾದ ಒಂದು ಸಮುದಾಯವನ್ನು ನಮ್ಮ ಸಂತತಿಗಳಲ್ಲಿಯೂ ಮಾಡು, ನಮಗೆ ನಮ್ಮ ಆರಾಧನಾ ಕ್ರಮಗಳನ್ನು ತೋರಿಸಿಕೊಡು ಮತ್ತು ನಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸು. ಖಂಡಿತವಾಗಿಯೂ ನೀನು ಅತ್ಯಧಿಕ ಪಶ್ಚಾತ್ತಾಪ ಸ್ವೀಕರಿಸುವವನೂ, ಅಪಾರ ಕರುಣೆಯುಳ್ಳವನೂ ಆಗಿರುವೆ’.
(129) ‘ಓ ನಮ್ಮ ರಬ್! ಅವರಿಗೆ (ನಮ್ಮ ಸಂತತಿಗಳಿಗೆ) ನಿನ್ನ ದೃಷ್ಟಾಂತಗಳನ್ನು ಓದಿಕೊಡುವ, ಗ್ರಂಥವನ್ನು ಮತ್ತು ಜ್ಞಾನವನ್ನು ಕಲಿಸಿಕೊಡುವ ಮತ್ತು ಅವರನ್ನು ಶುದ್ಧೀಕರಿಸುವ ಓರ್ವ ಸಂದೇಶವಾಹಕರನ್ನು ಅವರಿಂದಲೇ ಕಳುಹಿಸಿಕೊಡು. ಖಂಡಿತವಾಗಿಯೂ ನೀನು ಪ್ರತಾಪಶಾಲಿಯೂ ಮಹಾಜ್ಞಾನಿಯೂ ಆಗಿರುವೆ’.
(130) ಸ್ವತಃ ತನ್ನನ್ನೇ ಮೂರ್ಖನನ್ನಾಗಿ ಮಾಡಿಕೊಂಡವನ ಹೊರತು ಇಬ್ರಾಹೀಮ್‍ರ ಮಾರ್ಗದಿಂದ ವಿಮುಖನಾಗುವವನು ಯಾರಿರುವನು? ನಾವು ಅವರನ್ನು (ಇಬ್ರಾಹೀಮ್‍ರನ್ನು) ಇಹಲೋಕದಲ್ಲಿ ವಿಶೇಷವಾಗಿ ಆರಿಸಿರುವೆವು. ಪರಲೋಕದಲ್ಲಿ ಅವರು ಸಜ್ಜನರಲ್ಲೇ ಸೇರಿದವರಾಗಿರುವರು.
(131) ಅವರೊಂದಿಗೆ ಅವರ ರಬ್ ‘ಶರಣಾಗು’ ಎಂದಾಗ ‘ಸರ್ವಲೋಕಗಳ ರಬ್‌ಗೆ ನಾನು ಸಂಪೂರ್ಣ ಶರಣಾಗಿರುವೆನು’ ಎಂದು ಅವರು ಹೇಳಿದರು.
(132) ಇಬ್ರಾಹೀಮ್ ಮತ್ತು ಯಅ್‌ಕೂಬ್ ತಮ್ಮ ಸಂತತಿಗಳಿಗೆ ಇದನ್ನು (ಶರಣಾಗತಿಯನ್ನು) ಉಪದೇಶಿಸಿದರು. ‘ಓ ನನ್ನ ಮಕ್ಕಳೇ! ಈ ಧರ್ಮವನ್ನು ಅಲ್ಲಾಹು ನಿಮಗೆ ವಿಶೇಷವಾಗಿ ಆರಿಸಿಕೊಟ್ಟಿರುವನು. ಆದ್ದರಿಂದ ಅಲ್ಲಾಹುವಿಗೆ ಸಂಪೂರ್ಣ ಶರಣಾದವರಾಗಿ (ಮುಸ್ಲಿಮರಾಗಿ) ವಿನಾ ನೀವು ಮರಣ ಹೊಂದುವಂತಾಗದಿರಲಿ.’ (ಎಂದು ಅವರಿಬ್ಬರೂ ಉಪದೇಶಿಸಿದ್ದರು.)
(133) ‘ನನ್ನ ಬಳಿಕ ನೀವು ಯಾರನ್ನು ಆರಾಧಿಸುವಿರಿ’ ಎಂದು ಮರಣಾಸನ್ನ ವೇಳೆಯಲ್ಲಿ ಯಅ್‌ಕೂಬ್ ತಮ್ಮ ಮಕ್ಕಳೊಂದಿಗೆ ಪ್ರಶ್ನಿಸಿದಾಗ ನೀವು ಅಲ್ಲಿ ಉಪಸ್ಥಿತರಿದ್ದಿರಾ? ಅವರು ಹೇಳಿದರು: ‘ತಮ್ಮ ಆರಾಧ್ಯನೂ ತಮ್ಮ ಪಿತಾಮಹರಾದ ಇಬ್ರಾಹೀಮ್, ಇಸ್‌ಹಾಕ್ ಮತ್ತು ಇಸ್ಮಾಈಲರ ಆರಾಧ್ಯನೂ ಆಗಿರುವ ಏಕೈಕ ಆರಾಧ್ಯನನ್ನು ಮಾತ್ರ ನಾವು ಆರಾಧಿಸುವೆವು. ನಾವು ಅವನಿಗೆ ಸಂಪೂರ್ಣ ಶರಣಾಗಿ ಜೀವಿಸುವೆವು’.
(134) ಅದು ಗತಿಸಿಹೋದ ಒಂದು ಸಮುದಾಯವಾಗಿದೆ. ಅವರು ಸಂಪಾದಿಸಿರುವುದರ ಫಲ ಅವರಿಗೂ, ನೀವು ಸಂಪಾದಿಸಿರುವುದರ ಫಲ ನಿಮಗೂ ಇದೆ. ಅವರೇನು ಮಾಡುತ್ತಿದ್ದರೋ ಅದರ ಬಗ್ಗೆ ನಿಮ್ಮೊಂದಿಗೆ ಪ್ರಶ್ನಿಸಲಾಗದು.
(135) ‘ನೀವು ಯಹೂದರೋ ಕ್ರೈಸ್ತರೋ ಆದರೆ ಮಾತ್ರ ಸನ್ಮಾರ್ಗ ಪಡೆದವರಾಗುವಿರಿ’ ಎಂದು ಅವರು ಹೇಳುವರು. ಹೇಳಿರಿ: ‘ಅಲ್ಲ; (ನಾವು ಅನುಸರಿಸಬೇಕಾದುದು) ಶುದ್ಧಮನಸ್ಕರಾಗಿರುವ ಇಬ್ರಾಹೀಮ್‍ರ ಮಾರ್ಗವನ್ನಾಗಿದೆ. ಅವರು ಬಹುದೇವಾರಾಧಕರ ಪೈಕಿ ಸೇರಿದವರಾಗಿರಲಿಲ್ಲ.’
(136) ಹೇಳಿರಿ: ‘ಅಲ್ಲಾಹುವಿನಲ್ಲಿ, ಅವನಿಂದ ನಮಗೆ ಅವತೀರ್ಣಗೊಳಿಸಲಾಗಿರುವುದರಲ್ಲಿ, ಇಬ್ರಾಹೀಮ್‌ರಿಗೆ, ಇಸ್ಮಾಈಲ್‍ರಿಗೆ, ಇಸ್‍ಹಾಕ್‍ರಿಗೆ, ಯಅ್‌ಕೂಬ್‍ರಿಗೆ ಮತ್ತು ಯಅ್‌ಕೂಬ್‍ರ ಸಂತತಿಗೆ ಅವತೀರ್ಣಗೊಳಿಸಲಾಗಿರುವುದರಲ್ಲಿ, ಮೂಸಾ ಮತ್ತು ಈಸಾರಿಗೆ ನೀಡಲಾಗಿರುವುದರಲ್ಲಿ, ಸರ್ವ ಪ್ರವಾದಿಗಳಿಗೆ ಅವರ ರಬ್‌ನಿಂದ ನೀಡಲಾಗಿರುವುದರಲ್ಲಿ (ಸಂದೇಶದಲ್ಲಿ) ನಾವು ವಿಶ್ವಾಸವಿಟ್ಟಿರುವೆವು. ಅವರ ಪೈಕಿ ಯಾರ ಮಧ್ಯೆಯೂ ನಾವು ತಾರತಮ್ಯ ಮಾಡಲಾರೆವು. ನಾವು ಅವನಿಗೆ (ಅಲ್ಲಾಹುವಿಗೆ) ಸಂಪೂರ್ಣ ಶರಣಾದವರಾಗಿರುವೆವು.’
(137) ನೀವು ವಿಶ್ವಾಸವಿಟ್ಟಿರುವಂತೆಯೇ ಅವರೂ ವಿಶ್ವಾಸವಿಟ್ಟರೆ ಅವರು ಸನ್ಮಾರ್ಗ ಪಡೆದವರಾದರು. ಅವರು ವಿಮುಖರಾದರೆ ಅವರು ಧೋರಣೆಯು ಕೇವಲ ವರ್ಗವಿರೋಧ ಮಾತ್ರವಾಗಿದೆ. ಅವರಿಂದ ತಮ್ಮನ್ನು ರಕ್ಷಿಸಲು ತಮಗೆ ಅಲ್ಲಾಹು ಸಾಕು. ಅವನು ಎಲ್ಲವನ್ನು ಆಲಿಸುವವನೂ ಅರಿಯುವವನೂ ಆಗಿರುವನು.
(138) ‘ಅಲ್ಲಾಹು ನೀಡಿದ ಬಣ್ಣವಾಗಿದೆ (ನಮ್ಮದು). ಅಲ್ಲಾಹುವಿಗಿಂತ ಉತ್ತಮವಾಗಿ ಬಣ್ಣವನ್ನು ನೀಡುವವನು ಯಾರಿರುವನು? ನಾವು ಅವನನ್ನೇ ಆರಾಧಿಸುತ್ತಿರುವೆವು’.
(139) (ಓ ಪ್ರವಾದಿಯವರೇ!) ಹೇಳಿರಿ: ‘ಅಲ್ಲಾಹು ನಮ್ಮ ಮತ್ತು ನಿಮ್ಮ ರಬ್ ಆಗಿರುವಾಗ ಅವನ ವಿಷಯದಲ್ಲಿ ನೀವು ನಮ್ಮೊಂದಿಗೆ ತರ್ಕಿಸುತ್ತಿರುವಿರಾ? ನಮಗೆ ನಮ್ಮ ಕರ್ಮ(ಫಲ)ಗಳು; ನಿಮಗೆ ನಿಮ್ಮ ಕರ್ಮ(ಫಲ)ಗಳು ಇರುವುವು. ನಾವು ಅವನೊಂದಿಗೆ ನಿಷ್ಕಳಂಕತೆಯುಳ್ಳವರಾಗಿರುವೆವು.’
(140) ಇಬ್ರಾಹೀಮ್, ಇಸ್ಮಾಈಲ್, ಇಸ್‍ಹಾಕ್, ಯಅ್‌ಕೂಬ್ ಮತ್ತು ಯಅ್‌ಕೂಬ್‍ರ ಸಂತತಿಗಳೆಲ್ಲರೂ ಯಹೂದರೋ ಕ್ರೈಸ್ತರೋ ಆಗಿದ್ದರೆಂದು ನೀವು ಹೇಳುತ್ತಿರುವಿರಾ? (ಓ ಪ್ರವಾದಿಯವರೇ!) ತಾವು ಕೇಳಿರಿ: ‘ಹೆಚ್ಚಿನ ಅರಿವಿರುವುದು ನಿಮಗೋ ಅಥವಾ ಅಲ್ಲಾಹುವಿಗೋ?’ ಅಲ್ಲಾಹುವಿನಿಂದ ದೊರೆತ ಸಾಕ್ಷ್ಯವು ತನ್ನ ಬಳಿಯಿದ್ದೂ ಅದನ್ನು ಮರೆಮಾಚಿದವನಿಗಿಂತ ದೊಡ್ಡ ಅಕ್ರಮಿ ಯಾರಿರುವನು? ನೀವು ಮಾಡುತ್ತಿರುವುದರ ಕುರಿತು ಅಲ್ಲಾಹು ಅಲಕ್ಷ್ಯನಲ್ಲ.
(141) ಅದು ಗತಿಸಿಹೋದ ಒಂದು ಸಮುದಾಯವಾಗಿದೆ. ಅವರು ಸಂಪಾದಿಸಿರುವುದರ ಫಲ ಅವರಿಗೆ. ನೀವು ಸಂಪಾದಿಸಿರುವುದರ ಫಲ ನಿಮಗೆ. ಅವರೇನು ಮಾಡುತ್ತಿದ್ದರೋ ಅದರ ಬಗ್ಗೆ ನಿಮ್ಮೊಂದಿಗೆ ಪ್ರಶ್ನಿಸಲಾಗದು.
(142) ‘ಇವರು ಇದುವರೆಗೆ (ಪ್ರಾರ್ಥನಾ ವೇಳೆಯಲ್ಲಿ) ಅಭಿಮುಖವಾಗಿ ನಿಂತ ದಿಕ್ಕಿನಿಂದ ಇವರನ್ನು ತಿರುಗಿಸಿದ್ದಾದರೂ ಏನು?’ ಎಂದು ಜನರ ಪೈಕಿ ತಿಳಿಗೇಡಿಗಳು ಕೇಳುವರು.(32) (ಓ ಪ್ರವಾದಿಯವರೇ!) ಹೇಳಿರಿ: ‘ಪೂರ್ವ ಮತ್ತು ಪಶ್ಚಿಮವು ಅಲ್ಲಾಹುವಿನದ್ದಾಗಿವೆ. ತಾನಿಚ್ಚಿಸುವವರನ್ನು ಅವನು ನೇರ ಮಾರ್ಗದೆಡೆಗೆ ಮುನ್ನಡೆಸುವನು’.
32. ಆರಂಭ ಕಾಲದಲ್ಲಿ ಬೈತುಲ್ ಮುಕದ್ದಿಸ್ ಅಥವಾ ಮಸ್ಜಿದುಲ್ ಅಕ್ಸಾದತ್ತ ತಿರುಗಿ ನಮಾಝ್ ನಿರ್ವಹಿಸುವಂತೆ ಮುಸ್ಲಿಮರಿಗೆ ಆಜ್ಞೆ ನೀಡಲಾಗಿತ್ತು. ಮದೀನಾ ಜೀವನದ ದ್ವಿತೀಯ ವರ್ಷದಲ್ಲಿ ಕಅ್‌ಬಾದತ್ತ ತಿರುಗಿ ನಮಾಝ್ ನಿರ್ವಹಿಸಲು ಅಲ್ಲಾಹುವಿನ ಆಜ್ಞೆ ಲಭಿಸಿತು.
(143) ಹೀಗೆ ನಾವು ನಿಮ್ಮನ್ನು ಒಂದು ಮಧ್ಯಮ ಸಮುದಾಯವನ್ನಾಗಿ ಮಾಡಿದೆವು; ನೀವು ಜನರ ಮೇಲೆ ಸಾಕ್ಷಿಗಳಾಗುವ ಸಲುವಾಗಿ ಮತ್ತು ಸಂದೇಶವಾಹಕರು ನಿಮ್ಮ ಮೇಲೆ ಸಾಕ್ಷಿಯಾಗುವ ಸಲುವಾಗಿ. ತಾವು ಇದುವರೆಗೆ ತಿರುಗಿ ನಿಂತಿದ್ದ ದಿಕ್ಕನ್ನು ನಾವು ಕಿಬ್ಲಾ ಆಗಿ ಮಾಡಿರುವುದು ಸಂದೇಶವಾಹಕರನ್ನು ಅನುಸರಿಸುವವರು ಯಾರು ಮತ್ತು ವಿಮುಖರಾಗುವವರು ಯಾರು ಎಂದು ಅರಿಯುವ ಸಲುವಾಗಿ ಮಾತ್ರವಾಗಿತ್ತು. ಅಲ್ಲಾಹು ಸತ್ಯಮಾರ್ಗಕ್ಕೆ ಸೇರಿಸಿದವರ ಹೊರತು ಇತರೆಲ್ಲರಿಗೂ ಅದು (ಕಿಬ್ಲಾ ಬದಲಾವಣೆಯು) ಒಂದು ಮಹಾ ಸಮಸ್ಯೆಯೇ ಆಗಿರುವುದು. ಅಲ್ಲಾಹು ನಿಮ್ಮ ವಿಶ್ವಾಸವನ್ನು ವ್ಯರ್ಥಗೊಳಿಸಲಾರನು. ಖಂಡಿತವಾಗಿಯೂ ಅಲ್ಲಾಹು ಮನುಷ್ಯರೊಂದಿಗೆ ಅತ್ಯಧಿಕ ದಯೆಯುಳ್ಳವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(144) (ಓ ಪ್ರವಾದಿಯವರೇ!) ತಮ್ಮ ಮುಖವು ಆಕಾಶದೆಡೆಗೆ ತಿರುಗುತ್ತಿರುವುದನ್ನು ನಾವು ಕಾಣುತ್ತಿರುವೆವು. ಆದ್ದರಿಂದ ತಾವು ಇಷ್ಟಪಡುವಂತಹ ಕಿಬ್ಲಾದೆಡೆಗೆ ಖಂಡಿತವಾಗಿಯೂ ನಾವು ತಮ್ಮನ್ನು ತಿರುಗಿಸುವೆವು. ಆದ್ದರಿಂದ ತಾವು ಇನ್ನು ಮುಂದೆ ತಮ್ಮ ಮುಖವನ್ನು ಮಸ್ಜಿದುಲ್ ಹರಾಮ್‍ನೆಡೆಗೆ ತಿರುಗಿಸಿರಿ. (ಓ ವಿಶ್ವಾಸಿಗಳೇ!) ನೀವು ಎಲ್ಲಿದ್ದರೂ ನಿಮ್ಮ ಮುಖಗಳನ್ನು ಅದರೆಡೆಗೆ ತಿರುಗಿಸಿರಿ. ಗ್ರಂಥ ನೀಡಲಾದವರಿಗೆ ಇದು ಅವರ ರಬ್‌ನ ವತಿಯ ಸತ್ಯವೆಂದು ಚೆನ್ನಾಗಿ ತಿಳಿದಿದೆ. ಅವರು ಮಾಡುತ್ತಿರುವುದರ ಬಗ್ಗೆ ಅಲ್ಲಾಹು ಕಿಂಚಿತ್ತೂ ಅಲಕ್ಷ್ಯನಲ್ಲ.
(145) ತಾವು ಗ್ರಂಥ ನೀಡಲಾದವರ ಬಳಿಗೆ ಸರ್ವವಿಧ ದೃಷ್ಟಾಂತಗಳನ್ನು ತಂದರೂ ಅವರು ತಮ್ಮ ಕಿಬ್ಲಾವನ್ನು ಅನುಸರಿಸಲಾರರು. ಅವರ ಕಿಬ್ಲಾವನ್ನು ತಾವೂ ಅನುಸರಿಸಲಾರಿರಿ. ಅವರ ಪೈಕಿ ಒಂದು ಗುಂಪು ಮತ್ತೊಂದು ಗುಂಪಿನ ಕಿಬ್ಲಾವನ್ನು ಅನುಸರಿಸಲಾರರು. ಸ್ಪಷ್ಟವಾದ ಅರಿವು ತಮ್ಮ ಬಳಿಗೆ ಬಂದ ಬಳಿಕವೂ ತಾವೇನಾದರೂ ಅವರ ಇಚ್ಚೆಗಳನ್ನು ಅನುಸರಿಸುವುದಾದರೆ ಖಂಡಿತವಾಗಿಯೂ ತಾವು ಅತಿಕ್ರಮಿಗಳ ಪೈಕಿ ಸೇರಿದವರಾಗುವಿರಿ.
(146) ನಾವು ಯಾರಿಗೆ ಗ್ರಂಥವನ್ನು ನೀಡಿರುವೆವೋ ಅವರು ತಮ್ಮ ಮಕ್ಕಳನ್ನು ಗುರುತಿಸುವಂತೆಯೇ ಅವರನ್ನು (ಪ್ರವಾದಿಯನ್ನು) ಗುರುತಿಸುವರು. ಖಂಡಿತವಾಗಿಯೂ ಅವರ ಪೈಕಿ ಒಂದು ಪಂಗಡವು ಅರಿತಿರುತ್ತಲೇ ಸತ್ಯವನ್ನು ಬಚ್ಚಿಡುತ್ತಿರುವರು.
(147) (ಓ ಪ್ರವಾದಿಯವರೇ! ಈ ಸಂದೇಶವು) ತಮ್ಮ ರಬ್‌ನ ವತಿಯ ಸತ್ಯವಾಗಿದೆ. ಆದ್ದರಿಂದ ತಾವು ಸಂದೇಹಪಡುವವರ ಪೈಕಿ ಎಂದಿಗೂ ಸೇರದಿರಿ.
(148) ಪ್ರತಿಯೊಂದು ಸಮುದಾಯಕ್ಕೂ (ಪ್ರಾರ್ಥನಾ ವೇಳೆಯಲ್ಲಿ) ಅವರು ತಿರುಗಿ ನಿಲ್ಲುವ ಒಂದು ದಿಕ್ಕಿದೆ.(33) ಆದ್ದರಿಂದ ನೀವು ಸತ್ಕರ್ಮಗಳೆಡೆಗೆ ಮುನ್ನುಗ್ಗಿರಿ. ನೀವು ಎಲ್ಲೇ ಇದ್ದರೂ ಅಲ್ಲಾಹು ನಿಮ್ಮನ್ನೆಲ್ಲ ಒಟ್ಟುಗೂಡಿಸಿ ಕರೆತರುವನು. ಖಂಡಿತವಾಗಿಯೂ ಅಲ್ಲಾಹು ಸಕಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.
33. ಪ್ರತಿಯೊಂದು ಸಮುದಾಯಕ್ಕೂ ಅವರ ಪ್ರಾರ್ಥನೆಗಳಿಗೆ ಏಕೀಭಾವ ನೀಡುವ ಸಲುವಾಗಿ ಒಂದು ಕಿಬ್ಲಾ ನಿಶ್ಚಯಿಸಲಾಗಿರುತ್ತದೆ. ಕಿಬ್ಲಾ ನಿಶ್ಚಯಿಸುವುದರಲ್ಲಿ ಪರಿಗಣಿಸಬೇಕಾದ ಅಂಶಗಳ ಬಗ್ಗೆ ವಿಭಿನ್ನ ದೃಷ್ಟಿಕೋನಗಳಿರಲೂಬಹುದು. ಆದರೆ ಅಂತಹ ಭಿನ್ನಮತಗಳನ್ನು ಮರೆತು ಸತ್ಯವಿಶ್ವಾಸಿಗಳು ಸಂಪೂರ್ಣವಾಗಿ ಅಲ್ಲಾಹುವಿನ ತೀರ್ಮಾನವನ್ನು ಅಂಗೀಕರಿಸಬೇಕಾಗಿದೆ. ಕಿಬ್ಲಾದ ವಿಷಯವು ಸೇರಿದಂತೆ ಯಾವುದೇ ವಿಷಯದಲ್ಲೂ ಅಲ್ಲಾಹುವಿನ ಆಜ್ಞೆಗಳನ್ನು ಪೂರ್ಣವಾಗಿ ಅನುಸರಿಸುವುದರಲ್ಲೇ ಜನರಿಗೆ ಹಿತವಿದೆ.
(149) ತಾವು ಯಾವ ಕಡೆಯಿಂದ ಹೊರಟರೂ (ಪ್ರಾರ್ಥನಾ ವೇಳೆಯಲ್ಲಿ) ತಮ್ಮ ಮುಖವನ್ನು ಮಸ್ಜಿದುಲ್ ಹರಾಮ್‍ನೆಡೆಗೆ ತಿರುಗಿಸಿರಿ. ಖಂಡಿತವಾಗಿಯೂ ಅದು ತಮ್ಮ ರಬ್‌ನ ವತಿಯ ಸತ್ಯ(ವಾದ ನಿರ್ದೇಶನ)ವಾಗಿದೆ. ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹು ಅಲಕ್ಷ್ಯನಲ್ಲ.
(150) ತಾವು ಯಾವ ಕಡೆಯಿಂದ ಹೊರಟರೂ ತಮ್ಮ ಮುಖವನ್ನು ಮಸ್ಜಿದುಲ್ ಹರಾಮ್‍ನೆಡೆಗೆ ತಿರುಗಿಸಿರಿ. (ಓ ವಿಶ್ವಾಸಿಗಳೇ!) ನೀವು ಎಲ್ಲೇ ಇದ್ದರೂ ನಿಮ್ಮ ಮುಖಗಳನ್ನು ಅದರೆಡೆಗೆ ತಿರುಗಿಸಿರಿ. ಇದು ನಿಮ್ಮ ವಿರುದ್ಧ ಜನರಿಗೆ ಯಾವುದೇ ಸಮರ್ಥನೆಯೂ ಇಲ್ಲದಾಗುವ ಸಲುವಾಗಿದೆ; ಅವರ ಪೈಕಿ ಕೆಲವು ಅಕ್ರಮಿಗಳು (ತರ್ಕಿಸಬಹುದು) ಎಂಬುದರ ಹೊರತು. ಆದರೆ ನೀವು ಅವರನ್ನು ಭಯಪಡದಿರಿ; ನನ್ನನ್ನು ಭಯಪಡಿರಿ. ಇವೆಲ್ಲವೂ ನಾನು ನಿಮಗೆ ನನ್ನ ಅನುಗ್ರಹವನ್ನು ಪೂರ್ಣಗೊಳಿಸುವ ಸಲುವಾಗಿ ಮತ್ತು ನೀವು ಸನ್ಮಾರ್ಗ ಪಡೆಯುವ ಸಲುವಾಗಿದೆ.
(151) ನಮ್ಮ ದೃಷ್ಟಾಂತಗಳನ್ನು ನಿಮಗೆ ಓದಿಕೊಡುವ, ನಿಮ್ಮನ್ನು ಶುದ್ಧೀಕರಿಸುವ, ನಿಮಗೆ ಗ್ರಂಥವನ್ನು ಮತ್ತು ಜ್ಞಾನವನ್ನು ಕಲಿಸುವ ಮತ್ತು ನಿಮಗೆ ಅರಿವಿಲ್ಲದಂತಹ ವಿಷಯಗಳನ್ನು ಕಲಿಸಿಕೊಡುವ ಓರ್ವ ಸಂದೇಶವಾಹಕರನ್ನು ನಾವು ನಿಮ್ಮಿಂದಲೇ ನಿಮ್ಮೆಡೆಗೆ ಕಳುಹಿಸಿ (ತನ್ಮೂಲಕ ನಿಮಗೆ ಅನುಗ್ರಹ ನೀಡಿ)ದಂತೆಯೇ ಆಗಿದೆ.
(152) ಆದ್ದರಿಂದ ನೀವು ನನ್ನನ್ನು ಸ್ಮರಿಸಿರಿ; ನಾನೂ ನಿಮ್ಮನ್ನು ಸ್ಮರಿಸುವೆನು. ನನಗೆ ಕೃತಜ್ಞತೆ ಸಲ್ಲಿಸಿರಿ ಮತ್ತು ನನ್ನೊಂದಿಗೆ ಕೃತಘ್ನತೆ ತೋರದಿರಿ.
(153) ಓ ಸತ್ಯವಿಶ್ವಾಸಿಗಳೇ! ನೀವು ಸಹನೆ ಹಾಗೂ ನಮಾಝ್‍ನ ಮೂಲಕ (ಅಲ್ಲಾಹುವಿನಲ್ಲಿ) ಸಹಾಯ ಯಾಚಿಸಿರಿ. ಖಂಡಿತವಾಗಿಯೂ ಅಲ್ಲಾಹು ಸಹನಾಶೀಲರೊಂದಿಗಿರುವನು.
(154) ನೀವು ಅಲ್ಲಾಹುವಿನ ಮಾರ್ಗದಲ್ಲಿ ವಧಿಸಲ್ಪಟ್ಟವರ ಕುರಿತು ‘ಮೃತಪಟ್ಟವರು’ ಎಂದು ಹೇಳದಿರಿ. ಅವರು ಜೀವಂತವಾಗಿರುವರು; ಆದರೆ, ನೀವು (ಅದರ ಕುರಿತು) ಗ್ರಹಿಸಲಾರಿರಿ.(34)
34. ಮರಣಾನಂತರ ಜೀವನದಲ್ಲಿ ನಂಬಿಕೆಯಿಲ್ಲದವನಿಗೆ ಹುತಾತ್ಮತೆಯ ಮಹತ್ವವನ್ನು ಗ್ರಹಿಸಲಾಗದು. ಭೌತಿಕ ದೃಷ್ಟಿಕೋನದಲ್ಲಿ ವೀಕ್ಷಿಸುವುದಾದರೆ ಒಬ್ಬ ಹುತಾತ್ಮನು ತನ್ನ ಜೀವನವನ್ನು ಸ್ವತಃ ನಾಶಪಡಿಸಿದವನಾಗಿರುವನು. ಆದರೆ ಅಲ್ಲಾಹುವಿನ ಮಾರ್ಗದಲ್ಲಿ ಹುತಾತ್ಮನಾದವನು ಶಾಶ್ವತ ಜೀವನವನ್ನು ಪಡೆದವನಾಗಿರುವನೆಂದು ಕುರ್‌ಆನ್ ನಮಗೆ ಮನದಟ್ಟು ಮಾಡಿಕೊಡುತ್ತದೆ.
(155) ಕೆಲವೊಂದು ಭಯ, ಹಸಿವು, ಸೊತ್ತುನಾಶ, ಪ್ರಾಣಹಾನಿ, ಫಲಗಳ ನಾಶ ಇತ್ಯಾದಿಗಳ ಮೂಲಕ ನಾವು ನಿಮ್ಮನ್ನು ಖಂಡಿತವಾಗಿಯೂ ಪರೀಕ್ಷಿಸುವೆವು. (ಇಂತಹ ಸಂದರ್ಭಗಳಲ್ಲಿ) ತಾಳ್ಮೆ ವಹಿಸುವವರಿಗೆ ಶುಭವಾರ್ತೆಯನ್ನು ತಿಳಿಸಿರಿ.
(156) ತಮಗೆ ಯಾವುದಾದರೂ ವಿಪತ್ತು ಬಾಧಿಸಿದರೆ ಅವರು (ಆ ಸಹನಾಶೀಲರು) ಹೇಳುವರು: ‘ಖಂಡಿತವಾಗಿಯೂ ನಾವು ಅಲ್ಲಾಹುವಿನ ಅಧೀನದಲ್ಲಿರುವೆವು ಮತ್ತು ಅವನೆಡೆಗೇ ಮರಳುವವರಾಗಿರುವೆವು.’
(157) ಅವರ ಮೇಲೆ ಅವರ ರಬ್‌ನ ವತಿಯ ಅನುಗ್ರಹಗಳು ಮತ್ತು ದಯೆಯಿದೆ. ಸನ್ಮಾರ್ಗ ಪಡೆದವರು ಅವರೇ ಆಗಿರುವರು.
(158) ಖಂಡಿತವಾಗಿಯೂ ‘ಸಫಾ’ ಮತ್ತು ‘ಮರ್ವಾ’ ಅಲ್ಲಾಹು ನಿಶ್ಚಯಿಸಿದ ಧರ್ಮಲಾಂಛನಗಳಲ್ಲಿ ಸೇರಿದ್ದಾಗಿವೆ. ಕಅ್‌ಬಾಲಯಕ್ಕೆ ತೆರಳಿ ಹಜ್ ಅಥವಾ ಉಮ್ರಾ ನಿರ್ವಹಿಸುವ ಯಾರ ಮೇಲೂ ಅವುಗಳ ಮೂಲಕ ಪ್ರದಕ್ಷಿಣೆ ಮಾಡುವುದರಲ್ಲಿ ಯಾವುದೇ ದೋಷವಿಲ್ಲ.(35) ಯಾರಾದರೂ ಸ್ವಇಚ್ಛೆಯಿಂದ ಸತ್ಕರ್ಮವೆಸಗುವುದಾದರೆ ಖಂಡಿತವಾಗಿಯೂ ಅಲ್ಲಾಹು ಕೃತಜ್ಞನೂ, ಸರ್ವಜ್ಞನೂ ಆಗಿರುವನು.
35. ಪ್ರವಾದಿ ಮುಹಮ್ಮದ್(ಸ) ರವರಿಗಿಂತ ಮುಂಚೆ ಅರಬರು ಸಫಾ ಹಾಗೂ ಮರ್ವಾಗಳಲ್ಲಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದರು. ಸಫಾ-ಮರ್ವಾಗಳಿಗೆ ವಿಗ್ರಹಾರಾಧನೆಯೊಂದಿಗಿರುವ ಈ ಸಂಬಂಧದ ನಿಮಿತ್ತ ಅವುಗಳ ಮಧ್ಯೆ ಪ್ರದಕ್ಷಿಣೆ ಮಾಡಲು ಮುಸ್ಲಿಮರಿಗೆ ಮಾನಸಿಕ ಪ್ರಯಾಸ ತಲೆದೋರುತ್ತಿತ್ತು. ಹಜ್ಜ್ ಮತ್ತು ಉಮ್ರಾಗಳ ಒಂದು ಅಂಗವಾಗಿರುವ ಸಫಾ- ಮರ್ವಾಗಳ ಪ್ರದಕ್ಷಿಣೆಗೆ ವಿಗ್ರಹಾರಾಧನೆಯೊಂದಿಗೆ ಯಾವುದೇ ಸಂಬಂಧವಿಲ್ಲ, ಅವು ಅಲ್ಲಾಹುವಿನ ಧರ್ಮದ ಲಾಂಛನಗಳಲ್ಲಿ ಸೇರಿದ್ದಾಗಿವೆ ಹಾಗೂ ಅವುಗಳನ್ನು ಪ್ರದಕ್ಷಿಣೆ ಮಾಡಲು ಮನಪ್ರಯಾಸವುಂಟಾಗಬೇಕಾದ ಅಗತ್ಯವಿಲ್ಲ ಎಂದು ಈ ಸೂಕ್ತಿಯು ನಮಗೆ ಮನವರಿಕೆ ಮಾಡುತ್ತದೆ. ಉಮ್ರಾವನ್ನು ಪ್ರತ್ಯೇಕವಾಗಿಯೂ, ಹಜ್ಜ್‍ನೊಂದಿಗೆ ಸೇರಿಸಿಯೂ ನಿರ್ವಹಿಸಬಹುದಾಗಿದೆ.
(159) ನಾವು ಅವತೀರ್ಣಗೊಳಿಸಿದ ಪುರಾವೆಗಳನ್ನು ಮತ್ತು ಮಾರ್ಗದರ್ಶನವನ್ನು, ಗ್ರಂಥದ ಮೂಲಕ ನಾವು ಜನರಿಗೆ ವಿವರಿಸಿಕೊಟ್ಟ ಬಳಿಕವೂ ಬಚ್ಚಿಡುವವರು ಯಾರೋ ಅವರನ್ನು ಅಲ್ಲಾಹು ಶಪಿಸುವನು ಮತ್ತು ಶಪಿಸುವವರೆಲ್ಲರೂ ಅವರನ್ನು ಶಪಿಸುವರು.
(160) ಆದರೆ ಪಶ್ಚಾತ್ತಾಪಪಟ್ಟವರು, ತಮ್ಮ ಸ್ಥಿತಿಯನ್ನು ಸುಧಾರಣೆಗೊಳಿಸಿದವರು ಮತ್ತು (ಸತ್ಯವನ್ನು ಜನರಿಗೆ) ವಿವರಿಸಿಕೊಡುವವರು ಇದರಿಂದ ಹೊರತಾಗಿರುವರು. ಅಂತಹವರ ಪಶ್ಚಾತ್ತಾಪವನ್ನು ನಾನು ಸ್ವೀಕರಿಸುವೆನು. ನಾನು ಅತ್ಯಧಿಕ ಪಶ್ಚಾತ್ತಾಪ ಸ್ವೀಕರಿಸುವವನೂ, ಅಪಾರ ಕರುಣೆಯುಳ್ಳವನೂ ಆಗಿರುವೆನು.
(161) ಸತ್ಯವನ್ನು ನಿಷೇಧಿಸುವವರು ಮತ್ತು ಸತ್ಯನಿಷೇಧಿಗಳಾಗಿಯೇ ಮರಣ ಹೊಂದುವವರಾರೋ ಅವರ ಮೇಲೆ ಅಲ್ಲಾಹುವಿನ, ಮಲಕ್‍ಗಳ ಮತ್ತು ಮನುಷ್ಯರೆಲ್ಲರ ಶಾಪವಿರುವುದು.
(162) ಅವರು ಅದನ್ನು ಶಾಶ್ವತವಾಗಿ ಅನುಭವಿಸುವರು. ಅವರಿಗೆ ಶಿಕ್ಷೆಯನ್ನು ಹಗುರಗೊಳಿಸಲಾಗದು ಮತ್ತು ಅವರಿಗೆ ಕಾಲಾವಕಾಶವನ್ನೂ ನೀಡಲಾಗದು.
(163) ನಿಮ್ಮ ಆರಾಧ್ಯನು ಏಕಮೇವ ಆರಾಧ್ಯನಾಗಿರುವನು. ಅವನ ಹೊರತು ಅನ್ಯ ಆರಾಧ್ಯರೇ ಇಲ್ಲ. ಅವನು ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವನು.
(164) ಖಂಡಿತವಾಗಿಯೂ(36) ಆಕಾಶಗಳ ಮತ್ತು ಭೂಮಿಯ ಸೃಷ್ಟಿಯಲ್ಲಿ, ರಾತ್ರಿ ಮತ್ತು ಹಗಲುಗಳ ಬದಲಾವಣೆಯಲ್ಲಿ, ಜನರಿಗೆ ಉಪಯುಕ್ತವಾದ ವಸ್ತುಗಳೊಂದಿಗೆ ಸಮುದ್ರದ ಮೂಲಕ ಚಲಿಸುವ ಹಡಗಿನಲ್ಲಿ, ಅಲ್ಲಾಹು ಆಕಾಶದಿಂದ ಮಳೆನೀರನ್ನು ಇಳಿಸಿ ತನ್ಮೂಲಕ ನಿರ್ಜೀವವಾಗಿರುವ ಭೂಮಿಗೆ ಜೀವ ನೀಡುವುದರಲ್ಲಿ, ಭೂಮುಖದಲ್ಲಿ ಸರ್ವವಿಧ ಜೀವರಾಶಿಗಳನ್ನು ಹಬ್ಬಿಸಿರುವುದರಲ್ಲಿ, ಗಾಳಿಯ ಗತಿಕ್ರಮದಲ್ಲಿ ಮತ್ತು ಆಕಾಶಗಳ ಹಾಗೂ ಭೂಮಿಯ ನಡುವೆ ನಿಯಂತ್ರಿಸಲಾಗುವ ಮೋಡಗಳ ಚಲನೆಯಲ್ಲಿ ಚಿಂತಿಸುವ ಜನರಿಗೆ ಅನೇಕ ದೃಷ್ಟಾಂತಗಳಿವೆ.
36. ಇಸ್ಲಾಮ್ ಮಾನವನ ಬುದ್ಧಿಯೊಂದಿಗೆ ಮಾತನಾಡುತ್ತದೆ. ಜಗತ್ತಿನಲ್ಲಿರುವ ಚಿಕ್ಕ ಮತ್ತು ದೊಡ್ಡದಾಗಿರುವ ಸರ್ವ ವಸ್ತುಗಳನ್ನೂ ಆವರಿಸಿಕೊಂಡಿರುವ ಅದ್ಭುತವಾದ ವ್ಯವಸ್ಥೆಗಳನ್ನು ಎತ್ತಿ ತೋರಿಸುತ್ತಾ ಪ್ರಪಂಚದೊಡೆಯನ ಅನಿಷೇಧ್ಯವಾದ ಅಸ್ತಿತ್ವದ ಬಗ್ಗೆಯಿರುವ ಸ್ಪಷ್ಟ ಪರಿಜ್ಞಾನದೆಡೆಗೆ ಕುರ್‌ಆನ್ ಮಾನವರನ್ನು ಮುನ್ನಡೆಸುತ್ತದೆ.
(165) ಅಲ್ಲಾಹುವೇತರರನ್ನು ಅವನಿಗೆ ಪ್ರತಿಸ್ಪರ್ಧಿಗಳಾಗಿ ಮಾಡುವ ಕೆಲವು ಜನರಿರುವರು. ಅಲ್ಲಾಹುವನ್ನು ಪ್ರೀತಿಸುವಂತೆಯೇ ಅವರು ಅವರನ್ನೂ (ಅಲ್ಲಾಹುವೇತರರನ್ನೂ) ಪ್ರೀತಿಸುವರು. ಆದರೆ ಸತ್ಯವಿಶ್ವಾಸಿಗಳು ಅಲ್ಲಾಹುವಿನಲ್ಲಿ ಗಾಢವಾದ ಪ್ರೀತಿಯನ್ನು ಹೊಂದಿರುವರು. ಅಕ್ರಮಿಗಳು ಪರಲೋಕ ಶಿಕ್ಷೆಯನ್ನು ಕಣ್ಣಾರೆ ಕಾಣುವ ಸಂದರ್ಭ, ಶಕ್ತಿಸಾಮರ್ಥ್ಯವೆಲ್ಲವೂ ಸಂಪೂರ್ಣವಾಗಿ ಅಲ್ಲಾಹುವಿಗೇ ಆಗಿದೆ ಮತ್ತು ಖಂಡಿತವಾಗಿಯೂ ಅಲ್ಲಾಹು ಕಠೋರವಾಗಿ ಶಿಕ್ಷಿಸುವವನಾಗಿರುವನು ಎಂಬು ದನ್ನು ಕಾಣುತ್ತಿದ್ದರೆ (ಎಷ್ಟು ಒಳಿತಾಗಿರುತ್ತಿತ್ತು!)
(166) ಅನುಸರಿಸಲ್ಪಟ್ಟವರು (ನಾಯಕರು) ಅನುಸರಿಸಿದವರನ್ನು (ಅನುಯಾಯಿಗಳನ್ನು) ಬಿಟ್ಟು ದೂರ ಸರಿಯುವ ಮತ್ತು ಅವರು ಶಿಕ್ಷೆಯನ್ನು ಕಣ್ಣಾರೆ ಕಾಣುವ ಹಾಗೂ ಅವರು ಪರಸ್ಪರ ಹೊಂದಿರುವ ಸಂಬಂಧಗಳು ಮುರಿದು ಬೀಳುವ ಸಂದರ್ಭ!
(167) ಅನುಸರಿಸಿದವರು (ಅನುಯಾಯಿಗಳು) ಹೇಳುವರು: ‘ನಮಗೆ (ಇಹಲೋಕದೆಡೆಗೆ) ಮರಳುವ ಒಂದು ಅವಕಾಶವು ಲಭ್ಯವಾಗುತ್ತಿದ್ದರೆ ಅವರು ನಮ್ಮನ್ನು ಬಿಟ್ಟು ದೂರ ಸರಿದಂತೆ ನಾವೂ ಅವರನ್ನು ಬಿಟ್ಟು ದೂರ ಸರಿಯುವೆವು’. ಹೀಗೆ ಅವರ ಕರ್ಮಗಳೆಲ್ಲವೂ ಅವರ ವಿಷಾದಕ್ಕೆ ಹೇತುವಾಗಿ ಪರಿಣಮಿಸುವುದನ್ನು ಅಲ್ಲಾಹು ಅವರಿಗೆ ತೋರಿಸಿಕೊಡುವನು. ನರಕಾಗ್ನಿಯಿಂದ ಹೊರಹೋಗಲು ಅವರಿಗೆ ಖಂಡಿತ ಸಾಧ್ಯವಾಗದು.
(168) ಓ ಜನರೇ! ಭೂಮಿಯಲ್ಲಿರುವುದರ ಪೈಕಿ ಧರ್ಮಸಮ್ಮತವಾಗಿರುವ ಮತ್ತು ಉತ್ತಮವಾಗಿರುವ ಆಹಾರಗಳನ್ನು ತಿನ್ನಿರಿ. ಸೈತಾನನ ಹೆಜ್ಜೆ ಗುರುತುಗಳನ್ನು ಹಿಂಬಾಲಿಸದಿರಿ. ಖಂಡಿತವಾಗಿಯೂ ಅವನು ನಿಮ್ಮ ಬಹಿರಂಗ ಶತ್ರುವಾಗಿರುವನು.
(169) ದುಷ್ಕೃತ್ಯ ಮತ್ತು ನೀಚಕೃತ್ಯದಲ್ಲಿ ತಲ್ಲೀನರಾಗಲು ಹಾಗೂ ಅಲ್ಲಾಹುವಿನ ಬಗ್ಗೆ ನಿಮಗೆ ಅರಿವಿಲ್ಲದಿರುವುದನ್ನು ಹೇಳಲು ಅವನು ನಿಮ್ಮೊಂದಿಗೆ ಆಜ್ಞಾಪಿಸುವನು.
(170) ‘ಅಲ್ಲಾಹು ಅವತೀರ್ಣಗೊಳಿಸಿರುವುದನ್ನು ಅನುಸರಿಸಿರಿ’ ಎಂದು ಅವರೊಂದಿಗೆ ಹೇಳಲಾದರೆ ‘ಇಲ್ಲ, ನಮ್ಮ ಪೂರ್ವಿಕರು ಯಾವುದನ್ನು ಅನುಸರಿಸುವುದಾಗಿ ನಾವು ಕಂಡಿರುವೆವೋ ಅದನ್ನೇ ನಾವು ಅನುಸರಿಸುವೆವು’ ಎಂದು ಅವರು ಹೇಳುವರು. ಅವರ ಪೂರ್ವಿಕರು ಏನನ್ನೂ ಚಿಂತಿಸದವರು ಮತ್ತು ಸನ್ಮಾರ್ಗ ಪಡೆಯದವರಾಗಿದ್ದರೂ ಕೂಡ (ಇವರು ಅವರನ್ನು ಅನುಸರಿಸುವರೇ?)
(171) ಸತ್ಯನಿಷೇಧಿಗಳ ಉಪಮೆಯು ಕರೆ ಮತ್ತು ಕೂಗನ್ನು ಬಿಟ್ಟು ಬೇರೇನನ್ನೂ ಕೇಳದ ಪ್ರಾಣಿಯೊಂದಿಗೆ ಕಿರುಚುವವನಂತಿದೆ. ಅವರು ಕಿವುಡರು, ಮೂಕರು ಮತ್ತು ಅಂಧರಾಗಿರುವರು. ಆದ್ದರಿಂದ ಅವರು (ಏನನ್ನೂ) ಚಿಂತಿಸಿ ಗ್ರಹಿಸಲಾರರು.
(172) ಓ ಸತ್ಯವಿಶ್ವಾಸಿಗಳೇ! ನಾವು ನಿಮಗೆ ನೀಡಿರು ವವುಗಳ ಪೈಕಿ ಉತ್ತಮವಾದುದನ್ನು ತಿನ್ನಿರಿ ಮತ್ತು ಅಲ್ಲಾಹುವಿಗೆ ಕೃತಜ್ಞತೆ ಸಲ್ಲಿಸಿರಿ; ನೀವು ಅವನನ್ನು ಮಾತ್ರ ಆರಾಧಿಸುವವರಾಗಿದ್ದರೆ.
(173) ಅವನು ನಿಮಗೆ ನಿಷಿದ್ಧಗೊಳಿಸಿರುವುದು ಶವ, ರಕ್ತ, ಹಂದಿ ಮಾಂಸ ಮತ್ತು ಅಲ್ಲಾಹುವೇತರರಿಗಾಗಿ ಘೋಷಿಸ (ಕೊಯ್ಯ)ಲಾಗಿರುವುದನ್ನು(37) ಮಾತ್ರವಾಗಿದೆ. ಆದರೆ ಯಾರಾದರೂ (ನಿಷಿದ್ಧವಾಗಿರುವುದನ್ನು ತಿನ್ನಲು) ನಿರ್ಬಂಧಿತನಾದರೆ ಅವನ ಮೇಲೆ ದೋಷವಿಲ್ಲ. (ಆದರೆ) ಅವನು ನಿಯಮೋಲ್ಲಂಘನೆಗೆ ದಾಷ್ಟ್ರ್ಯ ತೋರದವನೂ (ಅನಿವಾರ್ಯತೆಯ) ಮಿತಿಯನ್ನು ಮೀರದವನೂ ಆಗಿರಬೇಕು. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
37. ಅಲ್ಲಾಹುವೇತರರ ಸಂಪ್ರೀತಿಯನ್ನು ಬಯಸಿ ಅವರಿಗೆ ಹರಕೆಯಾಗಿ ಘೋಷಿಸಲಾದ ಮತ್ತು ಅವರ ಹೆಸರಲ್ಲಿ ಬಲಿ ನೀಡಲಾದ ಮೃಗಗಳ ಮಾಂಸವನ್ನು ತಿನ್ನಬಾರದೆಂದು ಈ ಸೂಕ್ತಿಯು ನಮಗೆ ಮನವರಿಕೆ ಮಾಡಿಕೊಡುತ್ತದೆ.
(174) ಅಲ್ಲಾಹು ಅವತೀರ್ಣಗೊಳಿಸಿದ ಗ್ರಂಥದಲ್ಲಿರುವ ವಿಷಯಗಳನ್ನು ಮರೆಮಾಚುವವರು ಮತ್ತು ಅದಕ್ಕೆ ಪ್ರತಿಯಾಗಿ ತುಚ್ಚ ಲಾಭವನ್ನು ಗಳಿಸುವವರಾರೋ ಅವರು ತಮ್ಮ ಉದರಗಳಲ್ಲಿ ತುಂಬಿಸುವುದು ನರಕಾಗ್ನಿಯನ್ನೇ ವಿನಾ ಇನ್ನೇನನ್ನೂ ಅಲ್ಲ. ಪುನರುತ್ಥಾನ ದಿನದಂದು ಅಲ್ಲಾಹು ಅವರೊಂದಿಗೆ ಮಾತನಾಡಲಾರನು ಮತ್ತು ಅವರನ್ನು (ಪಾಪಗಳಿಂದ) ಶುದ್ಧೀಕರಿಸಲಾರನು. ಅವರಿಗೆ ಯಾತನಾಮಯವಾದ ಶಿಕ್ಷೆಯಿರುವುದು.
(175) ಅವರು ಸನ್ಮಾರ್ಗಕ್ಕೆ ಬದಲಾಗಿ ದುರ್ಮಾರ್ಗವನ್ನು ಹಾಗೂ ಪಾಪಮುಕ್ತಿಗೆ ಬದಲಾಗಿ ಶಿಕ್ಷೆಯನ್ನು ಖರೀದಿಸಿದವರಾಗಿರುವರು. ನರಕ ಶಿಕ್ಷೆಯನ್ನು ತಾಳಿಕೊಳ್ಳುವುದರಲ್ಲಿ ಅವರಿಗಿರುವ ತಾಳ್ಮೆಯೆಂತಹುದು!
(176) ಅದೇಕೆಂದರೆ ಅಲ್ಲಾಹು ಗ್ರಂಥವನ್ನು ಸತ್ಯದೊಂದಿಗೆ ಅವತೀರ್ಣಗೊಳಿಸಿರುವನು ಎಂಬುದರಿಂದಾಗಿದೆ. ಗ್ರಂಥದ ವಿಷಯದಲ್ಲಿ ಭಿನ್ನರಾಗಿರುವವರಾರೋ ಖಂಡಿತವಾಗಿಯೂ ಅವರು (ಸತ್ಯದಿಂದ) ದೂರವಾದ ವಿರೋಧದಲ್ಲಿರುವರು.(38)
38. ಗ್ರಂಥ ನೀಡಲಾದ ಯಹೂದ ಮತ್ತು ಕ್ರೈಸ್ತರ ಬಗ್ಗೆ ಹೇಳುವುದಾದರೆ ಅವರ ಸಮಸ್ಯೆಯು ಸನ್ಮಾರ್ಗವು ಸ್ಪಷ್ಟವಾಗದಿರುವುದಲ್ಲ. ಬದಲಾಗಿ ಅವರ ಪುರೋಹಿತರಿಗೆ ಪ್ರವಾದಿ(ಸ) ರವರ ಮೇಲೆ, ಕುರ್‌ಆನ್‍ನ ಮೇಲೆ ಮತ್ತು ಸತ್ಯವಿಶ್ವಾಸಿಗಳ ಮೇಲಿರುವ ಅಸೂಯೆ ಮತ್ತು ಅವರ ಸ್ವಾರ್ಥ ಹಿತಾಸಕ್ತಿಗಳೇ ಅವರನ್ನು ಸತ್ಯದಿಂದ ದೂರಗೊಳಿಸಿದ್ದವು.
(177) ನೀವು ನಿಮ್ಮ ಮುಖಗಳನ್ನು ಪೂರ್ವದೆಡೆಗೆ ಅಥವಾ ಪಶ್ಚಿಮದೆಡೆಗೆ ತಿರುಗಿಸುವುದಲ್ಲ ಪುಣ್ಯ.(39) ಆದರೆ ಅಲ್ಲಾಹುವಿನಲ್ಲಿ, ಅಂತ್ಯದಿನದಲ್ಲಿ, ಮಲಕ್‍ಗಳಲ್ಲಿ, ಗ್ರಂಥದಲ್ಲಿ ಮತ್ತು ಪ್ರವಾದಿಗಳಲ್ಲಿ ವಿಶ್ವಾಸವಿಡುವವನು, ಸಂಪತ್ತಿನ ಮೇಲೆ ಪ್ರೀತಿಯಿದ್ದೂ ಅದನ್ನು ಸಂಬಂಧಿಕರಿಗೆ, ಅನಾಥರಿಗೆ, ನಿರ್ಗತಿಕರಿಗೆ, ದಾರಿಹೋಕನಿಗೆ, ಯಾಚಿಸಿ ಬರುವವರಿಗೆ ಮತ್ತು ಗುಲಾಮ ವಿಮೋಚನೆಗೆ ವ್ಯಯಿಸುವವನು, ನಮಾಝನ್ನು ಸಂಸ್ಥಾಪಿಸುವವನು, ಝಕಾತ್ ನೀಡುವವನು, ಕರಾರು ಮಾಡಿದರೆ ಅದನ್ನು ನೆರವೇರಿಸುವವನು ಮತ್ತು ದಾರಿದ್ರ್ಯ, ಸಂಕಷ್ಟ ಹಾಗೂ ಯುದ್ಧದ ಸಂದರ್ಭಗಳಲ್ಲಿ ತಾಳ್ಮೆ ವಹಿಸುವವರು ಯಾರೋ ಅವರೇ ಪುಣ್ಯವಂತರು. ಸತ್ಯವನ್ನು ಪಾಲಿಸಿದವರು ಅವರೇ ಆಗಿರುವರು ಮತ್ತು ಭಯಭಕ್ತಿಯುಳ್ಳವರೂ ಅವರೇ ಆಗಿರುವರು.
39. ಇದು ಬೈತುಲ್ ಮುಕದ್ದಿಸ್‍ನ ಬದಲಿಗೆ ಕಅ್‌ಬಾವನ್ನು ಕಿಬ್ಲಾ ಆಗಿ ಮಾಡಿರುವುದನ್ನು ತೀಕ್ಷ್ಣವಾಗಿ ವಿಮರ್ಶಿಸಿದ ಯಹೂದ ಕ್ರೈಸ್ತರಿಗೆ ನೀಡಿದ ಉತ್ತರವಾಗಿದೆ.
(178) ಓ ಸತ್ಯವಿಶ್ವಾಸಿಗಳೇ! ಕೊಲೆಗೀಡಾದವರ ವಿಷಯದಲ್ಲಿ ಸಮಾನ ಶಿಕ್ಷೆ ಜಾರಿಗೊಳಿಸುವುದನ್ನು ನಿಮ್ಮ ಮೇಲೆ ವಿಧಿಸಲಾಗಿದೆ. ಸ್ವತಂತ್ರನಿಗೆ ಪ್ರತಿಯಾಗಿ ಸ್ವತಂತ್ರ, ಗುಲಾಮನಿಗೆ ಪ್ರತಿಯಾಗಿ ಗುಲಾಮ ಮತ್ತು ಹೆಣ್ಣಿಗೆ ಪ್ರತಿಯಾಗಿ ಹೆಣ್ಣು (ವಧಿಸಲ್ಪಡಲಿ). ಇನ್ನು ಅವನಿಗೆ (ಕೊಲೆಗಾರನಿಗೆ) ಅವನ ಸಹೋದರನ ವತಿಯಿಂದ ಏನಾದರೂ ರಿಯಾಯಿತಿ ಸಿಗುವುದಾದರೆ ಅವನು ಶಿಷ್ಟಾಚಾರವನ್ನು ಪಾಲಿಸಲಿ ಮತ್ತು ಉತ್ತಮ ರೀತಿಯಲ್ಲಿ (ರಕ್ತ ಪರಿಹಾರವನ್ನು) ನೀಡಲಿ.(40) ಅದು ನಿಮ್ಮ ರಬ್‌ನ ವತಿಯ ರಿಯಾಯಿತಿಯೂ, ಕರುಣೆಯೂ ಆಗಿದೆ. ಇನ್ನು ಯಾರಾದರೂ ಅದರ ಬಳಿಕವೂ ಅತಿಕ್ರಮವೆಸಗಿದರೆ ಅವನಿಗೆ ಯಾತನಾಮಯವಾದ ಶಿಕ್ಷೆಯಿದೆ.
40. ಕೊಲೆಪಾತಕಿಗೆ ಕ್ಷಮಾದಾನ ನೀಡಲು ಮತ್ತು ಪ್ರತೀಕಾರದ ಬದಲು ರಕ್ತ ಪರಿಹಾರವನ್ನು ಪಡೆಯಲು ಕೊಲೆಗೀಡಾದವನ ನಿಕಟ ಸಂಬಂಧಿಕರಿಗೆ ಇಸ್ಲಾಮ್ ಅನುಮತಿ ನೀಡಿದೆ. ಕೊಲೆಪಾತಕಿಯ ಕಡೆಯವರು ಇದನ್ನೊಂದು ಬಲಹೀನತೆಯಾಗಿ ಪರಿಗಣಿಸಬಾರದು. ಸಾಧ್ಯವಾದಷ್ಟು ಬೇಗನೇ ಅವರು ನ್ಯಾಯಬದ್ಧವಾದ ರಕ್ತ ಪರಿಹಾರವನ್ನು ನೀಡಬೇಕು.
(179) ಓ ಬುದ್ಧಿವಂತರೇ! ಸಮಾನ ಶಿಕ್ಷೆಯನ್ನು ಜಾರಿಗೊಳಿಸುವುದರಲ್ಲಿ ನಿಮ್ಮ ಜೀವನದ ಅಸ್ತಿತ್ವವಿದೆ.(41) (ಈ ನಿಯಮ ನಿರ್ದೇಶನಗಳಿರುವುದು) ನೀವು ಭಯಭಕ್ತಿ ಪಾಲಿಸುವ ಸಲುವಾಗಿದೆ.
41. ಮರಣದಂಡನೆಯನ್ನು ಕ್ರೂರವೆಂದು ವಾದಿಸಿ ಅದನ್ನು ವಿರೋಧಿಸುವವರ ನಿಲುವು ತಪ್ಪೆಂದು ಕುರ್‌ಆನ್ ಸ್ಪಷ್ಟಪಡಿಸುತ್ತದೆ. ಪ್ರಾಣ, ಸೊತ್ತು ಮತ್ತು ಘನತೆಗೆ ಬೆದರಿಕೆಯೊಡ್ಡುವ ಸಮಾಜಘಾತಕರಿಗೆ ಮಾದರೀಯೋಗ್ಯ ಶಿಕ್ಷೆ ನೀಡದ ಹೊರತು ಜನರಿಗೆ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಿಲ್ಲವೆಂದು ಅನುಭವಗಳು ಸಾಬೀತುಪಡಿಸಿವೆ.
(180) ನಿಮ್ಮಲ್ಲಿ ಯಾರಾದರೂ ಮರಣಾಸನ್ನನಾಗುವ ವೇಳೆ ಸೊತ್ತನ್ನು ಬಿಟ್ಟಗಲುವುದಾದರೆ ಮಾತಾಪಿತರಿಗೆ ಮತ್ತು ನಿಕಟ ಸಂಬಂಧಿಕರಿಗೆ ನ್ಯಾಯಬದ್ಧವಾಗಿ ವಸಿಯ್ಯತ್ ಮಾಡುವುದನ್ನು ನಿಮ್ಮ ಮೇಲೆ ಕಡ್ಡಾಯವಾಗಿ ವಿಧಿಸಲಾಗಿದೆ.(42) ಇದು ಭಯಭಕ್ತಿ ಪಾಲಿಸುವವರ ಮೇಲಿರುವ ಒಂದು ಹೊಣೆಯಾಗಿದೆ.
42. ಪ್ರತಿಯೊಬ್ಬ ಹಕ್ಕುದಾರನಿಗೆ ಇರುವ ಪಾಲನ್ನು ನಿಖರವಾಗಿ ನಿಗದಿಗೊಳಿಸಲಾದ ವಾರೀಸು ನಿಯಮವನ್ನೊಳಗೊಂಡ ಸೂಕ್ತಿಗಳು ಅವತೀರ್ಣಗೊಳ್ಳುವ ಮೊದಲು ವಸಿಯ್ಯತನ್ನು (ಉಯಿಲನ್ನು) ಕಡ್ಡಾಯಗೊಳಿಸಿದ ಈ ಸೂಕ್ತಿಯು ಅವತೀರ್ಣಗೊಂಡಿತ್ತು. ಹೆತ್ತವರಿಗೂ, ನಿಕಟ ಸಂಬಂಧಿಕರಿಗೂ ಪಾಲನ್ನು ನಿಯಮಬದ್ಧವಾಗಿ ನಿರ್ಣಯಿಸಲಾಗಿರುವುದರಿಂದ ಇನ್ನು ಅವರಿಗಾಗಿ ವಸಿಯ್ಯತ್ ಮಾಡಬೇಕಾದ ಅಗತ್ಯವಿಲ್ಲವೆಂದು ಹೆಚ್ಚಿನ ವಿದ್ವಾಂಸರು ಅಭಿಪ್ರಾಯಪಟ್ಟಿರುವರು. ‘ಉತ್ತರಾಧಿಕಾರಿಗೆ ವಸಿಯ್ಯತ್ ಇಲ್ಲ’ ಎಂಬ ಪ್ರವಾದಿ ವಚನವು ಈ ಅಭಿಪ್ರಾಯವನ್ನು ಬೆಂಬಲಿಸುತ್ತದೆ. ನಿಕಟ ಸಂಬಂಧಿಕರಲ್ಲಿ ಕೆಲವರು ಕಷ್ಟ ಅನುಭವಿಸುವವರೂ, ಇನ್ನು ಕೆಲವರು ಸಂಪನ್ನರೂ ಆಗಿರುವ ಸಂದರ್ಭದಲ್ಲಿ, ಹೆತ್ತವರು ಮುಸ್ಲಿಮೇತರರಾಗಿರುವ ಸಂದರ್ಭದಲ್ಲಿ, ಮತ್ತು ನಿಯಮಬದ್ಧವಾಗಿ ಹಕ್ಕುದಾರರಲ್ಲದ ನಿಕಟ ಸಂಬಂಧಿಕರಿರುವ ಸಂದರ್ಭದಲ್ಲಿ ವಸಿಯ್ಯತ್ತಿನ ವಿಧಿ (ಒಟ್ಟು ಸೊತ್ತಿನ ಮೂರರಲ್ಲಿ ಒಂದಂಶವನ್ನು ದಾಟಬಾರದು ಎಂಬ ನಿಯಮದೊಂದಿಗೆ) ಪ್ರಸಕ್ತ ಜಾರಿಯಲ್ಲಿದೆಯೆಂದು ಸೂಕ್ಷ್ಮ ವೀಕ್ಷಕರಾದ ವಿದ್ವಾಂಸರು ಅಭಿಪ್ರಾಯ ಪಟ್ಟಿರುವರು.
(181) ಅದನ್ನು (ವಸಿಯ್ಯತ್ತನ್ನು) ಆಲಿಸಿದ ಬಳಿಕ ಯಾರಾದರೂ ಅದನ್ನು ಬದಲಾಯಿಸಿದರೆ ಅದರ ಪಾಪವು ಬದಲಾಯಿಸುವವರ ಮೇಲೆ ಮಾತ್ರವಾಗಿದೆ. ಖಂಡಿತವಾಗಿಯೂ ಅಲ್ಲಾಹು ಎಲ್ಲವನ್ನು ಆಲಿಸುವವನೂ ಅರಿಯುವವನೂ ಆಗಿರುವನು.
(182) ವಸಿಯ್ಯತ್ ಮಾಡಿದವನ ವತಿಯಿಂದ ಯಾವುದಾದರೂ ಅನ್ಯಾಯ ಅಥವಾ ಪಾಪವು ಜರಗಿರು ವುದಾಗಿ ಯಾರಾದರೂ ಭಯಪಟ್ಟು ಅವರ (ಸಂಬಂಧಿತ ಕಕ್ಷಿಗಳ) ಮಧ್ಯೆ ಸಂಧಾನ ಮಾಡುವುದಾದರೆ ಅದರಲ್ಲಿ ದೋಷವಿಲ್ಲ. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(183) ಓ ಸತ್ಯವಿಶ್ವಾಸಿಗಳೇ! ನಿಮಗಿಂತ ಮುಂಚಿನವರ ಮೇಲೆ ವಿಧಿಸಲಾದಂತೆ ನಿಮ್ಮ ಮೇಲೂ ಉಪವಾಸ ಆಚರಿಸುವುದನ್ನು ಕಡ್ಡಾಯವಾಗಿ ವಿಧಿಸಲಾಗಿದೆ. ನೀವು ಭಯಭಕ್ತಿ ಪಾಲಿಸುವ ಸಲುವಾಗಿ.
(184) ಎಣಿಸಲಾದ ಕೆಲವು ದಿನಗಳಲ್ಲಿ ಮಾತ್ರವಾಗಿದೆ. ನಿಮ್ಮ ಪೈಕಿ ಯಾರಾದರೂ ರೋಗಿಯಾಗಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಅವನು ಇತರ ದಿನಗಳಲ್ಲಿ ಆ ಸಂಖ್ಯೆಯಷ್ಟು (ಉಪವಾಸವನ್ನು ಆಚರಿಸಲಿ). (ಬಹಳ ಕಷ್ಟದಿಂದ ಮಾತ್ರ) ಅದು ಸಾಧ್ಯವಾಗುವವರು(43) (ಅದರ ಬದಲಿಗೆ) ಒಬ್ಬ ಬಡವನಿಗಿರುವ ಆಹಾರವನ್ನು ಪ್ರಾಯಶ್ಚಿತ್ತವಾಗಿ ನೀಡಲಿ. ಯಾರಾದರೂ ಸ್ವಇಚ್ಛೆಯಿಂದ ಒಳಿತನ್ನು ಮಾಡುವುದಾದರೆ ಅದು ಅವನ ಪಾಲಿಗೆ ಒಳ್ಳೆಯದೇ ಆಗಿದೆ.(44) ನೀವು ಅರಿತವರಾಗಿದ್ದರೆ ಉಪವಾಸ ಆಚರಿಸುವುದೇ ನಿಮಗೆ ಅತ್ಯುತ್ತಮವಾಗಿದೆ.
43. ಈ ಸೂಕ್ತಿಯಲ್ಲಿ ಬಲಹೀನರು, ನಿತ್ಯರೋಗಿಗಳು, ವಯೋವೃದ್ಧರು ಮುಂತಾದವರನ್ನು ಉದ್ದೇಶಿಸಲಾಗಿದೆ ಎಂದು ಹಲವು ವ್ಯಾಖ್ಯಾನಕಾರರು ಅಭಿಪ್ರಾಯಪಡುತ್ತಾರೆ.
44. ಒಬ್ಬ ಬಡವನ ಆಹಾರಕ್ಕಿಂತ ಹೆಚ್ಚಾಗಿ ಯಾರಾದರೂ ದಾನ ಮಾಡಿದರೆ ಅದು ಅವನ ಪಾಲಿಗೆ ಉತ್ತಮವೇ ಆಗಿದೆ ಎಂದರ್ಥ.
(185) ಜನರಿಗೆ ಮಾರ್ಗದರ್ಶಿಯಾಗಿಯೂ, ಸನ್ಮಾರ್ಗವನ್ನು ತೋರಿಸಿಕೊಡುವ ಮತ್ತು ಸತ್ಯಾಸತ್ಯತೆಗಳನ್ನು ಬೇರ್ಪಡಿಸುವ ಸುಸ್ಪಷ್ಟ ಆಧಾರಪ್ರಮಾಣವಾಗಿಯೂ, ಕುರ್‌ಆನ್ ಅವತೀರ್ಣಗೊಂಡ ತಿಂಗಳಾಗಿದೆ ರಮದಾನ್. ಆದ್ದರಿಂದ ನಿಮ್ಮ ಪೈಕಿ ಯಾರಾದರೂ ಆ ತಿಂಗಳಲ್ಲಿ ಉಪಸ್ಥಿತರಿದ್ದರೆ ಅವನು ಅದರಲ್ಲಿ ಉಪವಾಸವನ್ನು ಆಚರಿಸಲಿ. ಯಾರಾದರೂ ರೋಗಿಯಾಗಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ, ಅವನು ಇತರ ದಿನಗಳಲ್ಲಿ ಆ ಸಂಖ್ಯೆಯಷ್ಟು (ಉಪವಾಸವನ್ನು ಆಚರಿಸಲಿ). ಅಲ್ಲಾಹು ನಿಮಗೆ ನಿರಾಳತೆಯನ್ನು ಬಯಸುತ್ತಿರುವನು. ನಿಮಗೆ ಪ್ರಯಾಸವನ್ನುಂಟು ಮಾಡಲು ಅವನು ಬಯಸುವುದಿಲ್ಲ. ನೀವು ಆ ಸಂಖ್ಯೆಯನ್ನು ಪೂರ್ತಿಗೊಳಿಸುವ ಸಲುವಾಗಿಯೂ, ಅಲ್ಲಾಹು ನಿಮಗೆ ಸನ್ಮಾರ್ಗವನ್ನು ತೋರಿಸಿಕೊಟ್ಟ ಕಾರಣ ನೀವು ಅವನ ಮಹತ್ವವನ್ನು ಕೊಂಡಾಡುವ ಸಲುವಾಗಿಯೂ ಮತ್ತು ನೀವು ಅವನಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿಯೂ (ಈ ರೀತಿ ಆಜ್ಞಾಪಿಸಲಾಗಿದೆ).
(186) ನನ್ನ ದಾಸರು ತಮ್ಮೊಂದಿಗೆ ನನ್ನ ಬಗ್ಗೆ ಕೇಳಿದರೆ ಖಂಡಿತವಾಗಿಯೂ ನಾನು (ಅವರಿಗೆ ಅತಿ) ನಿಕಟವಾಗಿರುವೆನು (ಎಂದು ಹೇಳಿರಿ). ಪ್ರಾರ್ಥಿಸುವವನು ನನ್ನನ್ನು ಕರೆದು ಪ್ರಾರ್ಥಿಸಿದರೆ ನಾನು ಆ ಪ್ರಾರ್ಥನೆಗೆ ಉತ್ತರವನ್ನು ನೀಡುವೆನು.(45) ಆದ್ದರಿಂದ ಅವರು ನನ್ನ ಕರೆಗೆ ಓಗೊಡಲಿ ಮತ್ತು ನನ್ನಲ್ಲಿ ವಿಶ್ವಾಸವಿಡಲಿ. ಅವರು ಸನ್ಮಾರ್ಗ ಪಡೆದವರಾಗಲೂ ಬಹುದು.
45. ಪ್ರಾರ್ಥನೆಯಲ್ಲಿ ಅಲ್ಲಾಹು ಮತ್ತು ಮಾನವರ ನಡುವೆ ಯಾವುದೇ ಮಧ್ಯವರ್ತಿಯ ಅಗತ್ಯವಿಲ್ಲವೆಂದು ಈ ಸೂಕ್ತಿಯು ಸ್ಪಷ್ಟಪಡಿಸುತ್ತದೆ.
(187) ಉಪವಾಸದ ರಾತ್ರಿಯಲ್ಲಿ ನಿಮ್ಮ ಪತ್ನಿಯರೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ನಿಮಗೆ ಅನುಮತಿಸಲಾಗಿದೆ. ಅವರು ನಿಮಗೊಂದು ಉಡುಪಾಗಿರುವರು ಮತ್ತು ನೀವು ಅವರಿಗೊಂದು ಉಡುಪಾಗಿರುವಿರಿ. (ಲೈಂಗಿಕ ಸಂಪರ್ಕ ನಿಷಿದ್ಧವೆಂದು ಭಾವಿಸಿ) ನೀವು ಆತ್ಮವಂಚನೆ ಮಾಡುತ್ತಿರುವಿರಿ ಎಂಬುದನ್ನು ಅಲ್ಲಾಹು ಅರಿತಿರುವನು. ಆದ್ದರಿಂದ ಅವನು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಿರುವನು ಮತ್ತು ನಿಮ್ಮನ್ನು ಕ್ಷಮಿಸಿರುವನು. ಆದ್ದರಿಂದ ಇನ್ನು ಮುಂದೆ ನೀವು ಅವರೊಂದಿಗೆ ಲೈಂಗಿಕ ಸಂಪರ್ಕವನ್ನು ಮಾಡಿರಿ ಮತ್ತು (ದಾಂಪತ್ಯ ಜೀವನದಲ್ಲಿ) ಅಲ್ಲಾಹು ನಿಮಗೆ ವಿಧಿಸಿರುವುದನ್ನು ಅರಸಿರಿ. ಕಪ್ಪು ನೂಲಿನಿಂದ ಪ್ರಭಾತದ ಬಿಳಿಯ ನೂಲು ನಿಮಗೆ ಸ್ಪಷ್ಟವಾಗುವವರೆಗೆ ತಿನ್ನಿರಿ ಮತ್ತು ಕುಡಿಯಿರಿ. ತರುವಾಯ ರಾತ್ರಿಯಾಗುವ ತನಕ ಉಪವಾಸವನ್ನು ಪೂರ್ತಿಗೊಳಿಸಿರಿ. ಆದರೆ ನೀವು ಮಸೀದಿಗಳಲ್ಲಿ ಇಅ್‌ತಿಕಾಫ್ ನಿರ್ವಹಿಸುತ್ತಿರುವಾಗ ಅವರೊಂದಿಗೆ (ಪತ್ನಿಯರೊಂದಿಗೆ) ಲೈಂಗಿಕ ಸಂಪರ್ಕ ಮಾಡದಿರಿ. ಇವು ಅಲ್ಲಾಹುವಿನ ಸೀಮೆಗಳಾಗಿವೆ. ಆದ್ದರಿಂದ ನೀವು ಇವುಗಳನ್ನು ಉಲ್ಲಂಘಿಸುವ ಸಲುವಾಗಿ ಸಮೀಪಿಸದಿರಿ. ಜನರು ಭಯಭಕ್ತಿ ಪಾಲಿಸುವ ಸಲುವಾಗಿ ಅಲ್ಲಾಹು ಹೀಗೆ ತನ್ನ ದೃಷ್ಟಾಂತಗಳನ್ನು ಅವರಿಗೆ ವಿವರಿಸಿಕೊಡುವನು.
(188) ನೀವು ಪರಸ್ಪರರ ಸಂಪತ್ತನ್ನು ಅನ್ಯಾಯವಾಗಿ ತಿನ್ನದಿರಿ. ನೀವು ತಿಳಿದವರಾಗಿದ್ದೂ ಸಹ ಜನರ ಸಂಪತ್ತಿನಿಂದ ಏನನ್ನಾದರೂ ಧರ್ಮಬಾಹಿರವಾಗಿ ಗಳಿಸಿ ತಿನ್ನುವ ಸಲುವಾಗಿ ಅದರೊಂದಿಗೆ ನ್ಯಾಯಾಧೀಶರ ಬಳಿ ತೆರಳುವುದನ್ನೂ ಮಾಡದಿರಿ.(46)
46. ಇಸ್ಲಾಮ್ ಅನುಮತಿಸಿದ ಕ್ರಯ-ವಿಕ್ರಯಗಳ ಮೂಲಕವಲ್ಲದೆ ಒಬ್ಬ ಮುಸ್ಲಿಮನು ಯಾರ ಸೊತ್ತನ್ನೂ ಕಬಳಿಸಬಾರದು. ಅಧಿಕಾರಿಗಳಿಗೆ ಲಂಚ ನೀಡಿ ಅಥವಾ ನ್ಯಾಯಾಧೀಶರ ಬಳಿ ಸುಳ್ಳುಸಾಕ್ಷ್ಯ ಹೇಳಿ ಅನ್ಯರ ಧನವನ್ನು ಅನ್ಯಾಯವಾಗಿ ಸ್ವಾಧೀನಪಡಿಸುವುದು ಅತಿಹೀನವಾದ ಪಾಪವಾಗಿದೆ.
(189) (ಓ ಪ್ರವಾದಿಯವರೇ!) ಅವರು ತಮ್ಮೊಂದಿಗೆ ಚಂದ್ರಕಲೆಗಳ ಬಗ್ಗೆ ಕೇಳುತ್ತಿರುವರು. ಹೇಳಿರಿ: ‘ಅದು ಜನರ ಅಗತ್ಯಗಳಿಗೆ, ಹಜ್ ಯಾತ್ರೆಗೆ ಮತ್ತು ಕಾಲನಿರ್ಣಯ ಮಾಡುವುದಕ್ಕಿರುವ ಉಪಾಧಿಗಳಾಗಿವೆ’. ಪುಣ್ಯವಿರುವುದು ನೀವು ಮನೆಗಳನ್ನು ಹಿಂಭಾಗದಿಂದ ಪ್ರವೇಶಿಸುವುದರಲ್ಲಲ್ಲ. ಆದರೆ ಭಯಭಕ್ತಿ ಪಾಲಿಸುವವನಾರೋ ಅವನೇ ಪುಣ್ಯವಂತನು. ನೀವು ಮನೆಗಳನ್ನು ಅವುಗಳ ಬಾಗಿಲುಗಳಿಂದ ಪ್ರವೇಶಿಸಿರಿ.(47) ಮೋಕ್ಷ ಪಡೆಯುವ ಸಲುವಾಗಿ ನೀವು ಅಲ್ಲಾಹುವನ್ನು ಭಯಪಡಿರಿ.
47. ಪಾಪ ಮತ್ತು ದುಷ್ಕೃತ್ಯಗಳನ್ನೆಸಗಿದವರು ಮುಂಬಾಗಿಲುಗಳ ಮೂಲಕ ತಮ್ಮ ಮನೆಗಳನ್ನು ಪ್ರವೇಶಿಸಬಾರದೆಂಬ ಸಂಪ್ರದಾಯವು ಅಜ್ಞಾನ ಕಾಲದ ಅರಬರ ಮಧ್ಯೆ ಚಾಲ್ತಿಯಲ್ಲಿತ್ತು. ಅದರ ನಿರರ್ಥಕತೆಯನ್ನು ಇಲ್ಲಿ ಎತ್ತಿ ತೋರಿಸಲಾಗಿದೆ.
(190) ನಿಮ್ಮೊಂದಿಗೆ ಯುದ್ಧ ಮಾಡುವವರೊಂದಿಗೆ ಅಲ್ಲಾಹುವಿನ ಮಾರ್ಗದಲ್ಲಿ ನೀವೂ ಯುದ್ಧ ಮಾಡಿರಿ. ಆದರೆ ಹದ್ದು ಮೀರದಿರಿ. ಖಂಡಿತವಾಗಿಯೂ ಹದ್ದು ಮೀರುವವರನ್ನು ಅಲ್ಲಾಹು ಮೆಚ್ಚಲಾರನು.
(191) ನೀವು ಅವರನ್ನು ಕಂಡಲ್ಲಿ ವಧಿಸಿರಿ. ಅವರು ನಿಮ್ಮನ್ನು ಹೊರಗಟ್ಟಿದ ಸ್ಥಳದಿಂದ ನೀವೂ ಅವರನ್ನು ಹೊರಗಟ್ಟಿರಿ. (ಯಾಕೆಂದರೆ ಅವರು ಮಾಡುತ್ತಿರುವ) ಕ್ಷೋಭೆಯು ಕೊಲೆಗಿಂತಲೂ ಗುರುತರವಾಗಿದೆ. ಮಸ್ಜಿದುಲ್ ಹರಾಮ್‍ನ ಬಳಿ ಅವರು ನಿಮ್ಮೊಂದಿಗೆ ಯುದ್ಧ ಮಾಡುವ ತನಕ ನೀವು ಅವರೊಂದಿಗೆ ಅಲ್ಲಿ ಯುದ್ಧ ಮಾಡದಿರಿ. ಇನ್ನು ಅವರು ನಿಮ್ಮೊಂದಿಗೆ (ಅಲ್ಲೇ) ಯುದ್ಧ ಮಾಡುವುದಾದರೆ ನೀವು ಅವರನ್ನು ವಧಿಸಿರಿ. ಸತ್ಯನಿಷೇಧಿಗಳಿಗೆ ಹೀಗೆ ಪ್ರತಿಫಲವನ್ನು ನೀಡಲಾಗುವುದು.
(192) ಇನ್ನು ಅವರೇನಾದರೂ (ಪಶ್ಚಾತ್ತಾಪಪಟ್ಟು, ಯುದ್ಧವನ್ನು) ಸ್ಥಗಿತಗೊಳಿಸುವುದಾದರೆ ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(193) ಕ್ಷೋಭೆಯು ಇಲ್ಲದಾಗುವ ತನಕ ಮತ್ತು ಧರ್ಮವು ಅಲ್ಲಾಹುವಿಗಾಗುವ ತನಕ ನೀವು ಅವರೊಂದಿಗೆ ಯುದ್ಧ ಮಾಡಿರಿ. ಆದರೆ ಅವರೇನಾದರೂ (ಯುದ್ಧವನ್ನು) ನಿಲ್ಲಿಸಿದರೆ (ಅವರ ಪೈಕಿ) ಅಕ್ರಮಿಗಳ ವಿರುದ್ಧವೇ ಹೊರತು ಯಾವುದೇ ಆಕ್ರಮಣವೂ ಉಂಟಾಗಕೂಡದು.
(194) ನಿಷಿದ್ಧ ತಿಂಗಳ (ಯುದ್ಧಕ್ಕೆ)(48) ನಿಷಿದ್ಧ ತಿಂಗಳಲ್ಲೇ (ಪ್ರತಿದಾಳಿ ಮಾಡಿರಿ). ನಿಷಿದ್ಧವಾಗಿರುವ ಇತರ ವಿಷಯಗಳನ್ನು ಉಲ್ಲಂಘಿಸುವಾಗಲೂ (ಅದೇ ರೀತಿ) ಪ್ರತಿಕ್ರಿಯಿಸಿರಿ. ಹೀಗೆ ನಿಮ್ಮ ಮೇಲೆ ಯಾರು ಅತಿಕ್ರಮವೆಸಗಿದರೂ, ಅವನು ನಿಮ್ಮ ಮೇಲೆ ಅತಿಕ್ರಮವೆಸಗಿದ ರೀತಿಯಲ್ಲೇ ನೀವೂ ಅವನ ಮೇಲೆ ‘ಅತಿಕ್ರಮ’ವೆಸಗಿರಿ. ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು ಅಲ್ಲಾಹು ಭಯಭಕ್ತಿ ಪಾಲಿಸುವವರ ಜೊತೆಗಿರುವನೆಂಬುದನ್ನು ಅರಿತುಕೊಳ್ಳಿರಿ.
48. ರಜಬ್, ದುಲ್‍ಕಅ್‌ದಃ, ದುಲ್‍ಹಿಜ್ಜಃ ಮತ್ತು ಮುಹರ್ರಮ್ ಎಂಬೀ ನಾಲ್ಕು ತಿಂಗಳುಗಳು ಯುದ್ಧ ನಿಷೇಧಿತ ತಿಂಗಳುಗಳಾಗಿವೆ. ಈ ತಿಂಗಳುಗಳಲ್ಲಿ ಯುದ್ಧವನ್ನು ಆರಂಭಿಸುವುದು ಪಾಪವಾಗಿದೆ. ಆದರೆ ಪ್ರತಿರೋಧಿಸುವುದು ಪಾಪವಲ್ಲ.
(195) ನೀವು ಅಲ್ಲಾಹುವಿನ ಮಾರ್ಗದಲ್ಲಿ ವ್ಯಯಿಸಿರಿ. (ಜಿಪುಣತನ ಮತ್ತು ಉದಾಸೀನತೆಯ ಮೂಲಕ) ನಿಮ್ಮ ಕೈಗಳನ್ನು ನೀವೇ ವಿನಾಶದೆಡೆಗೆ ತಳ್ಳದಿರಿ. ನೀವು ಒಳಿತನ್ನು ಮಾಡಿರಿ. ಖಂಡಿತವಾಗಿಯೂ ಒಳಿತು ಮಾಡುವವರನ್ನು ಅಲ್ಲಾಹು ಪ್ರೀತಿಸುವನು.
(196) ನೀವು ಅಲ್ಲಾಹುವಿಗಾಗಿ ‘ಹಜ್ಜ್’ ಮತ್ತು ‘ಉಮ್ರಾ’ಗಳನ್ನು ಪೂರ್ಣವಾಗಿ ನಿರ್ವಹಿಸಿರಿ. ನಿಮಗೆ (ಹಜ್ಜ್ ನಿರ್ವಹಿಸುವುದರಿಂದ) ತಡೆಯುಂಟು ಮಾಡಲಾದರೆ ನಿಮಗೆ ಸಾಧ್ಯವಾಗುವ ಒಂದು ಬಲಿಮೃಗವನ್ನು (ಬಲಿ ನೀಡಿರಿ). ಬಲಿಮೃಗವು ತಲುಪಬೇಕಾದ ಸ್ಥಳವನ್ನು ತಲುಪುವ ತನಕ(49) ನೀವು ತಲೆಗೂದಲು ಬೋಳಿಸದಿರಿ. ನಿಮ್ಮ ಪೈಕಿ ಯಾರಾದರೂ ರೋಗಿಯಾಗಿದ್ದರೆ ಅಥವಾ ಅವನ ತಲೆಯಲ್ಲಿ ಏನಾದರೂ ಕಾಯಿಲೆಯಿದ್ದರೆ ಅವನು (ತಲೆಗೂದಲು ಬೋಳಿಸುವುದಕ್ಕೆ) ಪ್ರಾಯಶ್ಚಿತ್ತವಾಗಿ ಉಪವಾಸ ಅಥವಾ ದಾನಧರ್ಮ ಅಥವಾ ಬಲಿಕರ್ಮ ನಿರ್ವಹಿಸಿದರೆ ಸಾಕು. ಇನ್ನು ನೀವು ಭಯಮುಕ್ತ ಸ್ಥಿತಿಯಲ್ಲಿದ್ದರೆ ಮತ್ತು ನಿಮ್ಮಲ್ಲಿ ಯಾರಾದರೂ ಉಮ್ರಾ ನಿರ್ವಹಿಸಿ ಹಜ್ಜ್ ತನಕ ವಿಶ್ರಾಂತಿ ಪಡೆಯುವುದಾದರೆ(50) ಸಾಧ್ಯವಾಗುವ ಒಂದು ಬಲಿಮೃಗವನ್ನು ಅವನು (ಹಜ್ಜ್ ಕರ್ಮಗಳ ಮಧ್ಯೆ ಬಲಿ ನೀಡಲಿ). ಇನ್ನು ಯಾರಿಗಾದರೂ ಅದು ಸಿಗದಿದ್ದಲ್ಲಿ ಹಜ್ಜ್‌ನ ಮಧ್ಯೆ ಮೂರು ದಿನ ಮತ್ತು ನೀವು (ಊರಿಗೆ) ಮರಳಿದ ಬಳಿಕ ಏಳು ದಿನ ಸೇರಿ ಒಟ್ಟು ಹತ್ತು ದಿನ ಉಪವಾಸ ಆಚರಿಸಲಿ. ಈ ನಿಯಮವು ಕುಟುಂಬ ಸಮೇತ ಮಸ್ಜಿದುಲ್ ಹರಾಮ್‍ನಲ್ಲಿ ವಾಸಿಸದವರಿಗಾಗಿದೆ. ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು ಅಲ್ಲಾಹು ಕಠೋರವಾಗಿ ಶಿಕ್ಷಿಸುವವನಾಗಿರುವನೆಂಬುದನ್ನು ಅರಿತುಕೊಳ್ಳಿರಿ.
49. ಸಾಮಾನ್ಯವಾಗಿ ಬಲಿಕರ್ಮವನ್ನು ನಿರ್ವಹಿಸಬೇಕಾದುದು ಮಕ್ಕಾದಲ್ಲಾಗಿದೆ. ದಾರಿಮಧ್ಯೆ ಎಲ್ಲಾದರೂ ತಡೆಯುಂಟಾದರೆ ಅಲ್ಲೇ ಬಲಿಕರ್ಮ ನಡೆಸಬಹುದು. ಹಾಜಿಗಳು ಬಲಿಕರ್ಮ ನಿರ್ವಹಿಸಿದ ನಂತರವೇ ತಲೆಗೂದಲನ್ನು ಬೋಳಿಸಿ ಇಹ್ರಾಮ್‍ನಿಂದ ಮುಕ್ತವಾಗುವುದು ಉತ್ತಮವಾಗಿದೆ.
50. ಹಜ್ಜ್ ಮತ್ತು ಉಮ್ರಾ ಜೊತೆಯಾಗಿ ನಿರ್ವಹಿಸುವುದಕ್ಕೆ ಮೂರು ರೂಪಗಳಿವೆ. ಅವುಗಳಲ್ಲೊಂದು ‘ತಮತ್ತುಅ್’. ಶವ್ವಾಲ್, ದುಲ್‍ಕಅ್‌ದಃ, ದುಲ್‍ಹಿಜ್ಜ ಎಂಬೀ ತಿಂಗಳುಗಳಲ್ಲಿ ಮೊದಲು ಉಮ್ರಾ ನಿರ್ವಹಿಸಿ, ನಂತರ ಇಹ್ರಾಮ್‍ನಿಂದ ಮುಕ್ತರಾಗಿ ವಿಶ್ರಾಂತಿಯಲ್ಲಿದ್ದು ಬಳಿಕ ಅದೇ ವರ್ಷ, ಅದೇ ಯಾತ್ರೆಯಲ್ಲಿ ಹಜ್ಜ್ ಕರ್ಮಕ್ಕಾಗಿ ಇಹ್ರಾಮ್ ಪ್ರವೇಶಿಸುವ ರೂಪಕ್ಕೆ ‘ತಮತ್ತುಅ್’ ಎನ್ನಲಾಗುತ್ತದೆ.
(197) ಹಜ್ಜ್‌ನ ಕಾಲವು ಅರಿಯಲ್ಪಟ್ಟ ತಿಂಗಳುಗಳಾಗಿವೆ. ಯಾರಾದರೂ ಆ ತಿಂಗಳುಗಳಲ್ಲಿ ಹಜ್ಜ್ ಕರ್ಮವನ್ನು ಪ್ರವೇಶಿಸಿದರೆ ತರುವಾಯ ಹಜ್ಜ್‌ನ ವೇಳೆಯಲ್ಲಿ ಲೈಂಗಿಕ ಸಂಪರ್ಕವಾಗಲಿ, ದುಷ್ಕೃತ್ಯವಾಗಲಿ, ಕುತರ್ಕವಾಗಲಿ ಮಾಡದಿರಲಿ. ನೀವು ಏನೇ ಸತ್ಕರ್ಮ ನಿರ್ವಹಿಸಿದರೂ ಅದನ್ನು ಅಲ್ಲಾಹು ಅರಿಯುವನು. ನೀವು (ಹಜ್ಜ್‌ಗೆ ಹೊರಡುವಾಗ) ಯಾತ್ರಾ ಸಿದ್ಧತೆಗಳನ್ನು ಸಜ್ಜುಗೊಳಿಸಿರಿ. ಆದರೆ ಯಾತ್ರಾ ಸಿದ್ಧತೆಗಳಲ್ಲಿ ಅತ್ಯುತ್ತಮವಾದುದು ಭಯಭಕ್ತಿಯಾಗಿದೆ. ಓ ಬುದ್ಧಿವಂತರೇ! ನನ್ನನ್ನು ಭಯಪಟ್ಟು ಜೀವಿಸಿರಿ.
(198) (ಹಜ್ಜ್‌ನ ವೇಳೆಯಲ್ಲಿ) ನೀವು ನಿಮ್ಮ ರಬ್‌ನ ವತಿಯ ಯಾವುದೇ ಐಹಿಕ ಅನುಗ್ರಹವನ್ನು ಅರಸುವುದರಲ್ಲಿ ಯಾವುದೇ ದೋಷವಿಲ್ಲ. ನೀವು ಅರಫಾತ್‍ನಿಂದ ಹೊರಟು ಬಂದರೆ ಮಶ್‍ಅರುಲ್ ಹರಾಮ್‍ನ ಬಳಿ ಅಲ್ಲಾಹುವನ್ನು ಸ್ಮರಿಸಿರಿ. ಅವನು ನಿಮಗೆ ಮಾರ್ಗದರ್ಶನ ನೀಡಿದಂತೆ ನೀವು ಅವನನ್ನು ಸ್ಮರಿಸಿರಿ. ಖಂಡಿತವಾಗಿಯೂ ಇದಕ್ಕಿಂತ ಮುಂಚೆ ನೀವು ಪಥಭ್ರಷ್ಟರಲ್ಲಿ ಸೇರಿದವರಾಗಿದ್ದಿರಿ.
(199) ತರುವಾಯ ಜನರು (ಯಾತ್ರಾರ್ಥಿಗಳು) ಎಲ್ಲಿಂದ ಹೊರಡುತ್ತಾರೋ ಅಲ್ಲಿಂದಲೇ ನೀವೂ ಹೊರಡಿರಿ. ಅಲ್ಲಾಹುವಿನೊಂದಿಗೆ ಪಾಪಮುಕ್ತಿಯನ್ನು ಬೇಡಿರಿ. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(200) ನೀವು ಹಜ್ಜ್ ಕರ್ಮಗಳನ್ನು ನಿರ್ವಹಿಸಿದರೆ ನಿಮ್ಮ ಪೂರ್ವಜರನ್ನು ಸ್ಮರಿಸುವ ರೀತಿಯಲ್ಲಿ ಅಥವಾ ಅದಕ್ಕಿಂತಲೂ ಹೆಚ್ಚಾಗಿ ನೀವು ಅಲ್ಲಾಹುವನ್ನು ಸ್ಮರಿಸಿರಿ. ಜನರ ಪೈಕಿ ‘ಓ ನಮ್ಮ ರಬ್! ನಮಗೆ ಇಹಲೋಕದಲ್ಲಿ (ಅನುಗ್ರಹವನ್ನು) ದಯಪಾಲಿಸು’ ಎಂದು ಹೇಳುವ ಕೆಲವರಿರುವರು. ಅಂತಹವರಿಗೆ ಪರಲೋಕದಲ್ಲಿ ಯಾವ ಪಾಲೂ ಇರಲಾರದು.
(201) ‘ಓ ನಮ್ಮ ರಬ್! ನಮಗೆ ಇಹಲೋಕದಲ್ಲಿ ಒಳಿತನ್ನು ದಯಪಾಲಿಸು ಮತ್ತು ಪರಲೋಕದಲ್ಲೂ ಒಳಿತನ್ನು ದಯಪಾಲಿಸು ಮತ್ತು ನಮ್ಮನ್ನು ನರಕ ಶಿಕ್ಷೆಯಿಂದ ಪಾರುಮಾಡು’ ಎಂದು ಹೇಳುವ ಕೆಲವರೂ ಅವರಲ್ಲಿರುವರು.
(202) ಅವರು ಸಂಪಾದಿಸಿರುವುದಕ್ಕೆ ಪ್ರತಿಫಲವಾಗಿ ಅವರಿಗೆ ಬಹುದೊಡ್ಡ ಪಾಲಿರುವುದು. ಅಲ್ಲಾಹು ಶೀಘ್ರವಾಗಿ ವಿಚಾರಣೆ ಮಾಡುವವನಾಗಿರುವನು.
(203) ಎಣಿಸಲಾದ ದಿನಗಳಲ್ಲಿ ನೀವು ಅಲ್ಲಾಹುವನ್ನು ಸ್ಮರಿಸಿರಿ.(51) (ಅವುಗಳ ಪೈಕಿ) ಎರಡೇ ದಿನಗಳಲ್ಲಿ ಯಾರಾದರೂ ಆತುರದಿಂದ ಮರಳಿದರೆ ಅವನ ಮೇಲೆ ದೋಷವಿಲ್ಲ. ಯಾರಾದರೂ (ಒಂದು ದಿನ ಹೆಚ್ಚು) ವಿಳಂಬ ಮಾಡಿದರೆ ಅವನ ಮೇಲೂ ದೋಷವಿಲ್ಲ. ಭಯಭಕ್ತಿ ಪಾಲಿಸುವವನಿಗೆ (ಅದೇ ಉತ್ತಮವಾಗಿದೆ). ನೀವು ಅಲ್ಲಾಹುವನ್ನು ಭಯಪಡಿರಿ. ಅವನ ಕಡೆಗೇ ನೀವು ಒಟ್ಟುಗೂಡಿಸಲಾಗುವಿರಿ ಎಂಬುದನ್ನು ಅರಿತುಕೊಳ್ಳಿರಿ.
51. ಎಣಿಸಲಾದ ದಿನಗಳು ಎಂದರೆ ಈದುಲ್ ಅದ್‍ಹಾದ ನಂತರದ ಮೂರು ದಿನಗಳಾಗಿವೆ. ಈ ದಿನಗಳಲ್ಲಿ ಹಜ್ಜ್ ಯಾತ್ರಿಕರು ‘ಮಿನಾ’ದಲ್ಲಿ ತಂಗಿ ‘ಜಮ್ರಾ’ಗಳಿಗೆ ಕಲ್ಲೆಸೆದು, ತಕ್ಬೀರ್ ಹೇಳುತ್ತಾ ಅಲ್ಲಾಹುವಿನ ಮಹತ್ವವನ್ನು ಕೊಂಡಾಡುತ್ತಿರುತ್ತಾರೆ. ಮಿನಾದ ತಂಗುವಿಕೆಯನ್ನು ಎರಡು ದಿನಗಳಿಗೆ ಸಂಕ್ಷಿಪ್ತಗೊಳಿಸಿದರೂ ಅಡ್ಡಿಯಿಲ್ಲ.
(204) ಜನರ ಪೈಕಿ ಕೆಲವರಿರುವರು, ಐಹಿಕ ಜೀವನದ ವಿಷಯದಲ್ಲಿ ಅವನ ಮಾತು ತಮಗೆ ಆಕರ್ಷಕವಾಗಿ ಕಾಣುವುದು. ತನ್ನ ಹೃದಯ ಪರಿಶುದ್ಧತೆಗೆ ಅವನು ಅಲ್ಲಾಹುವನ್ನು ಸಾಕ್ಷಿಯಾಗಿಸುವನು. ವಾಸ್ತವಿಕವಾಗಿ ಅವನು (ಸತ್ಯದ) ಕಡುವೈರಿಯಾಗಿರುವನು.
(205) ಅವನು ಮರಳಿ ಹೋಗುವಾಗ ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡಲು, ಬೆಳೆ ನಾಶಪಡಿಸಲು ಮತ್ತು ಪ್ರಾಣಹಾನಿಗೈಯ್ಯಲು ಶ್ರಮಿಸುವನು. ಅಲ್ಲಾಹು ವಿನಾಶವನ್ನು ಇಷ್ಟಪಡಲಾರನು.
(206) ‘ಅಲ್ಲಾಹುವನ್ನು ಭಯಪಡು’ ಎಂದು ಅವನೊಂದಿಗೆ ಹೇಳಲಾದರೆ ದರ್ಪವು ಅವನನ್ನು ಪಾಪ ಕೃತ್ಯಗಳಲ್ಲಿ ಹಿಡಿದಿಟ್ಟುಕೊಳ್ಳುವುದು. ಅವನಿಗೆ ನರಕಾಗ್ನಿಯೇ ಸಾಕು. ಆ ವಾಸಸ್ಥಳ ಎಷ್ಟು ನಿಕೃಷ್ಟವಾದುದು!
(207) ಅಲ್ಲಾಹುವಿನ ಸಂತೃಪ್ತಿಯನ್ನು ಅರಸುತ್ತಾ ತನ್ನ ಶರೀರವನ್ನೇ ಮಾರಿಕೊಳ್ಳುವಂತಹವನೂ ಜನರ ಪೈಕಿ ಇರುವನು. ಅಲ್ಲಾಹು ತನ್ನ ದಾಸರೊಂದಿಗೆ ಅತ್ಯಧಿಕ ದಯೆಯುಳ್ಳವನಾಗಿರುವನು.
(208) ಓ ಸತ್ಯವಿಶ್ವಾಸಿಗಳೇ! ನೀವು ಸಂಪೂರ್ಣವಾಗಿ ಶರಣಾಗತಿಯಲ್ಲಿ ಪ್ರವೇಶಿಸಿರಿ.(52) ಸೈತಾನನ ಹೆಜ್ಜೆ ಗುರುತುಗಳನ್ನು ಅನುಸರಿಸದಿರಿ. ಖಂಡಿತವಾಗಿಯೂ ಅವನು ನಿಮ್ಮ ಬಹಿರಂಗ ಶತ್ರುವಾಗಿರುವನು.
52. ಅಲ್ಲಾಹುವಿನ ಆಜ್ಞೆಗಳು ನಮ್ಮ ಯಾವುದೇ ಸ್ವಾರ್ಥ ಹಿತಾಸಕ್ತಿಗಳಿಗೆ ವಿರುದ್ಧವಾಗಿದ್ದರೂ ಸಹ ನಾವು ಅವನ ಆಜ್ಞೆಗಳಿಗೆ ಶರಣಾಗಬೇಕಾಗಿದೆ. ಜೀವನದ ಯಾವುದೇ ರಂಗದಲ್ಲೂ ಅವನಿಗೆ ಶರಣಾಗುವುದರಿಂದ ನಾವು ಸ್ವಲ್ಪವೂ ಹಿಂದೆ ಸರಿಯಕೂಡದು.
(209) ಸುವ್ಯಕ್ತ ಪುರಾವೆಗಳು ನಿಮ್ಮ ಬಳಿಗೆ ಬಂದ ಬಳಿಕವೂ ನೀವು ಜಾರಿಹೋಗುವುದಾದರೆ ಖಂಡಿತವಾಗಿಯೂ ಅಲ್ಲಾಹು ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿರುವನೆಂಬುದನ್ನು ಅರಿತುಕೊಳ್ಳಿರಿ.
(210) ಅವರು ಕಾಯುತ್ತಿರುವುದು ಅಲ್ಲಾಹು ಮತ್ತು ಮಲಕ್‍ಗಳು ಮೋಡಗಳ ನೆರಳುಗಳಲ್ಲಿ ಅವರ ಬಳಿಗೆ ಬರುವುದನ್ನು ಮತ್ತು ವಿಷಯವು ತೀರ್ಮಾನಿಸಲಾಗುವುದನ್ನು ಮಾತ್ರವೇನು? ವಿಷಯಗಳೆಲ್ಲವನ್ನೂ ಮರಳಿಸಲಾಗುವುದು ಅಲ್ಲಾಹುವಿನ ಬಳಿಗೇ ಆಗಿದೆ.
(211) ನಾವು ಇಸ್ರಾಈಲ್ ಸಂತತಿಗಳಿಗೆ ಸುಸ್ಪಷ್ಟವಾದ ಎಷ್ಟು ದೃಷ್ಟಾಂತಗಳನ್ನು ನೀಡಿರುವೆವೆಂದು ಅವರೊಂದಿಗೆ ಕೇಳಿ ನೋಡಿರಿ. ಅಲ್ಲಾಹುವಿನ ಅನುಗ್ರಹವು ತನ್ನ ಬಳಿಗೆ ಬಂದ ಬಳಿಕವೂ ಯಾರಾದರೂ ಅದಕ್ಕೆ ವ್ಯತಿರಿಕ್ತವಾಗಿ ವರ್ತಿಸುವುದಾದರೆ ಖಂಡಿತವಾಗಿಯೂ ಅಲ್ಲಾಹು ಕಠೋರವಾಗಿ ಶಿಕ್ಷಿಸುವವನಾಗಿರುವನು.
(212) ಸತ್ಯನಿಷೇಧಿಗಳಿಗೆ ಐಹಿಕ ಜೀವನವನ್ನು ಅಲಂಕರಿಸಿಕೊಡಲಾಗಿದೆ. ಅವರು ಸತ್ಯವಿಶ್ವಾಸಿಗಳನ್ನು ಗೇಲಿ ಮಾಡುವರು. ಆದರೆ ಭಯಭಕ್ತಿ ಪಾಲಿಸುವವರು ಪುನರುತ್ಥಾನ ದಿನದಂದು ಅವರಿಗಿಂತ ಮೇಲಿರುವರು. ಅಲ್ಲಾಹು ತಾನಿಚ್ಛಿಸಿದವರಿಗೆ ಲೆಕ್ಕವಿಲ್ಲದೆ ಕರುಣಿಸುವನು.
(213) ಮಾನವರು ಒಂದೇ ಸಮುದಾಯವಾಗಿದ್ದರು. ತರುವಾಯ (ಅವರು ಭಿನ್ನರಾದಾಗ ವಿಶ್ವಾಸಿಗಳಿಗೆ) ಶುಭವಾರ್ತೆ ತಿಳಿಸಲು ಮತ್ತು (ನಿಷೇಧಿಗಳಿಗೆ) ಎಚ್ಚರಿಕೆ ನೀಡಲು ಅಲ್ಲಾಹು ಪ್ರವಾದಿಗಳನ್ನು ಕಳುಹಿಸಿದನು. ಅವರು (ಜನರು) ಭಿನ್ನಾಭಿಪ್ರಾಯ ತಾಳಿದ ವಿಷಯದಲ್ಲಿ ತೀರ್ಪು ನೀಡುವ ಸಲುವಾಗಿ ಅವರ ಜೊತೆಗೆ ಗ್ರಂಥ ವನ್ನು ಸತ್ಯದೊಂದಿಗೆ ಅವತೀರ್ಣಗೊಳಿಸಿದನು. ಆದರೆ ಸುವ್ಯಕ್ತ ಪುರಾವೆಗಳು ತಮ್ಮ ಬಳಿಗೆ ಬಂದ ಬಳಿಕವೂ ಗ್ರಂಥ ನೀಡಲಾದವರು ಅದರಲ್ಲಿ (ಗ್ರಂಥದ ವಿಷಯದಲ್ಲಿ) ಭಿನ್ನಮತ ತಾಳಿರುವುದು ಅವರು ಪರಸ್ಪರ ಹೊಂದಿದ್ದ ವಿದ್ವೇಷದ ಕಾರಣದಿಂದಾಗಿತ್ತೇ ವಿನಾ ಇನ್ನಾವುದರಿಂದಲೂ ಆಗಿರಲಿಲ್ಲ. ಆಗ ಯಾವ ಸತ್ಯದಿಂದ ಅವರು ಭಿನ್ನರಾದರೋ ಆ ಸತ್ಯದೆಡೆಗೆ ಅಲ್ಲಾಹು ತನ್ನ ಅನುಮತಿ ಪ್ರಕಾರ ಸತ್ಯವಿಶ್ವಾಸಿಗಳನ್ನು ಮುನ್ನಡೆಸಿದನು. ಅಲ್ಲಾಹು ತಾನಿಚ್ಛಿಸುವವರನ್ನು ನೇರ ಮಾರ್ಗದೆಡೆಗೆ ಮುನ್ನಡೆಸುವನು.
(214) ನಿಮಗಿಂತ ಮುಂಚೆ ಗತಿಸಿ ಹೋದವರಿಗೆ (ವಿಶ್ವಾಸಿಗಳಿಗೆ) ಬಂದಂತಹ ಪರೀಕ್ಷೆಗಳು ನಿಮಗೂ ಬಾರದೆ ಸ್ವರ್ಗವನ್ನು ಪ್ರವೇಶಿಸಬಹುದೆಂದು ನೀವು ಭಾವಿಸಿರುವಿರಾ? ದಾರಿದ್ರ್ಯ ಮತ್ತು ಪ್ರಯಾಸಗಳು ಅವರನ್ನು ಸ್ಪರ್ಶಿಸಿದ್ದವು. ಅಲ್ಲಾಹುವಿನ ನೆರವು ಯಾವಾಗ ಬರುವುದೆಂದು ಅವರ ಪೈಕಿ ಸಂದೇಶವಾಹಕರು ಮತ್ತು ಅವರೊಂದಿಗಿದ್ದ ಸತ್ಯವಿಶ್ವಾಸಿಗಳು ಕೇಳುವಷ್ಟರ ಮಟ್ಟಿಗೆ ಅವರನ್ನು ನಡುಗಿಸಲಾಯಿತು. ಅರಿತುಕೊಳ್ಳಿರಿ! ಅಲ್ಲಾಹುವಿನ ಸಹಾಯವು ಸಮೀಪದಲ್ಲೇ ಇರುವುದು.
(215) (ಓ ಪ್ರವಾದಿಯವರೇ!) ತಾವು ಏನನ್ನು ವ್ಯಯಿಸಬೇಕೆಂದು ಅವರು ತಮ್ಮೊಂದಿಗೆ ಕೇಳುತ್ತಿರುವರು. ತಾವು ಹೇಳಿರಿ: ‘ನೀವು ಉತ್ತಮವಾಗಿರುವ ಏನನ್ನೇ ವ್ಯಯಿಸಿದರೂ ಅದನ್ನು ಮಾತಾಪಿತರಿಗಾಗಿ, ನಿಕಟ ಸಂಬಂಧಿಕರಿಗಾಗಿ, ಅನಾಥರಿಗಾಗಿ, ನಿರ್ಗತಿಕರಿಗಾಗಿ ಮತ್ತು ದಾರಿಹೋಕನಿಗಾಗಿ ವ್ಯಯಿಸಿರಿ. ನೀವು ಉತ್ತಮವಾಗಿರುವ ಏನೇ ಮಾಡಿದರೂ ಖಂಡಿತವಾಗಿಯೂ ಅಲ್ಲಾಹು ಅದನ್ನು ಅರಿಯುವವನಾಗಿರುವನು’.
(216) ಯುದ್ಧ ಮಾಡುವುದನ್ನು ನಿಮ್ಮ ಮೇಲೆ ಕಡ್ಡಾಯವಾಗಿ ವಿಧಿಸಲಾಗಿದೆ. ಅದಂತೂ ನಿಮಗೆ ಅಪ್ತಿಯವಾಗಿದೆ. ಆದರೆ ನೀವೊಂದು ವಿಷಯವನ್ನು ಅಸಹ್ಯಪಡುವಾಗ (ವಾಸ್ತವಿಕವಾಗಿ) ಅದು ನಿಮಗೆ ಒಳಿತಾಗಿರಲೂಬಹುದು. ನೀವೊಂದು ವಿಷಯವನ್ನು ಇಷ್ಟಪಡುವಾಗ (ವಾಸ್ತವಿಕವಾಗಿ) ಅದು ನಿಮಗೆ ಹಾನಿಕರವಾಗಿರಲೂಬಹುದು. ಅಲ್ಲಾಹು ಅರಿಯುವನು; ನೀವು ಅರಿಯಲಾರಿರಿ.
(217) ನಿಷಿದ್ಧ ತಿಂಗಳಲ್ಲಿ ಯುದ್ಧ ಮಾಡುವುದರ ಬಗ್ಗೆ ಅವರು ತಮ್ಮೊಂದಿಗೆ ಕೇಳುತ್ತಿರುವರು. ತಾವು ಹೇಳಿರಿ: ‘ಆ ತಿಂಗಳಲ್ಲಿ ಯುದ್ಧ ಮಾಡುವುದು ಮಹಾ ಅಪರಾಧವಾಗಿದೆ’. ಆದರೆ ಅಲ್ಲಾಹುವಿನ ಮಾರ್ಗದಿಂದ (ಜನರನ್ನು) ತಡೆಯುವುದು, ಅವನಲ್ಲಿ ಅವಿಶ್ವಾಸವಿಡುವುದು, ಮಸ್ಜಿದುಲ್ ಹರಾಮ್‍ನಿಂದ (ಜನರನ್ನು) ತಡೆಯುವುದು ಮತ್ತು ಅದರ ಹಕ್ಕುದಾರರನ್ನು ಅಲ್ಲಿಂದ ಹೊರಗಟ್ಟುವುದು ಅಲ್ಲಾಹುವಿನ ಬಳಿ ಅದಕ್ಕಿಂತಲೂ ಘೋರ (ಅಪರಾಧ)ವಾಗಿದೆ. ಕ್ಷೋಭೆಯು ಕೊಲೆಗಿಂತಲೂ ಗುರುತರವಾಗಿದೆ. ಅವರಿಗೆ ಸಾಧ್ಯವಾಗುವುದಾದರೆ ನಿಮ್ಮನ್ನು ನಿಮ್ಮ ಧರ್ಮದಿಂದ ವಿಮುಖಗೊಳಿಸುವವರೆಗೂ ಅವರು ನಿಮ್ಮೊಂದಿಗೆ ಯುದ್ಧ ಮಾಡುತ್ತಲೇ ಇರುವರು. ನಿಮ್ಮ ಪೈಕಿ ಯಾರಾದರೂ ತನ್ನ ಧರ್ಮದಿಂದ ಹೊರಬಂದು ತರುವಾಯ ಸತ್ಯನಿಷೇಧಿಯಾಗಿ ಮರಣ ಹೊಂದುವುದಾದರೆ, ಅಂತಹವರ ಕರ್ಮಗಳು ಇಹಲೋಕದಲ್ಲೂ ಪರಲೋಕದಲ್ಲೂ ನಿಷ್ಫಲವಾದವು. ನರಕವಾಸಿಗಳು ಅವರೇ ಆಗಿರುವರು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
(218) ವಿಶ್ವಾಸವಿಟ್ಟವರು, ಸ್ವಂತ ಊರನ್ನು ಬಿಟ್ಟು ಬಂದವರು ಮತ್ತು ಅಲ್ಲಾಹುವಿನ ಮಾರ್ಗದಲ್ಲಿ ಹೋರಾಟ ಮಾಡಿದವರಾರೋ ಅವರು ಅಲ್ಲಾಹುವಿನ ದಯೆಯನ್ನು ಆಶಿಸುವವರಾಗಿರುವರು. ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(219) (ಓ ಪ್ರವಾದಿಯವರೇ!) ಅವರು ತಮ್ಮೊಂದಿಗೆ ಮದ್ಯ ಮತ್ತು ಜೂಜಾಟದ ಬಗ್ಗೆ ಕೇಳುತ್ತಿರುವರು. ಹೇಳಿರಿ: ‘ಅವೆರಡರಲ್ಲೂ ಘೋರ ಪಾಪವಿದೆ ಮತ್ತು ಜನರಿಗೆ ಕೆಲವು ಪ್ರಯೋಜನಗಳೂ ಇವೆ. ಆದರೆ ಅವುಗಳಲ್ಲಿರುವ ಪಾಪವು ಪ್ರಯೋಜನಕ್ಕಿಂತಲೂ ಹಿರಿದಾಗಿದೆ’. ತಾವು ಏನನ್ನು ವ್ಯಯಿಸಬೇಕೆಂದು ಅವರು ತಮ್ಮೊಂದಿಗೆ ಕೇಳುತ್ತಿರುವರು. ಹೇಳಿರಿ: ‘(ಅಗತ್ಯಗಳನ್ನು ಪೂರೈಸಿದ ಬಳಿಕ) ಮಿಕ್ಕಿದ್ದು’. ಹೀಗೆ ನೀವು ಚಿಂತಿ ಸುವ ಸಲುವಾಗಿ ಅಲ್ಲಾಹು ನಿಮಗೆ ದೃಷ್ಟಾಂತಗಳನ್ನು ವಿವರಿಸಿಕೊಡುತ್ತಿರುವನು.
(220) ಇಹಲೋಕ ಮತ್ತು ಪರಲೋಕದ ಬಗ್ಗೆ (ನೀವು ಚಿಂತಿಸುವ ಸಲುವಾಗಿ). ಅನಾಥರ ಬಗ್ಗೆಯೂ ಅವರು ತಮ್ಮೊಂದಿಗೆ ಕೇಳುತ್ತಿರುವರು. ಹೇಳಿರಿ: ‘ಅವರ ಸುಧಾರಣೆಗಾಗಿ ಮಾಡುವ ಯಾವುದೇ ಕಾರ್ಯವೂ ಒಳ್ಳೆಯದೇ ಆಗಿದೆ. ನೀವು ಅವರೊಂದಿಗೆ ಜೊತೆಯಾಗಿ ಬಾಳುವುದಾದರೆ (ಅದರಲ್ಲಿ ದೋಷವಿಲ್ಲ). ಅವರು ನಿಮ್ಮ ಸಹೋದರರಾಗಿರುವರು!’ ವಿನಾಶಕಾರಿಯನ್ನು ಮತ್ತು ಸುಧಾರಣೆ ಮಾಡುವವನನ್ನು ಅಲ್ಲಾಹು ಬೇರ್ಪಡಿಸಿ ತಿಳಿಯುವನು. ಅಲ್ಲಾಹು ಇಚ್ಛಿಸುತ್ತಿದ್ದರೆ ಅವನು ನಿಮ್ಮನ್ನು ಕಷ್ಟಕ್ಕೊಳಪಡಿಸುತ್ತಿದ್ದನು. ಖಂಡಿತವಾಗಿಯೂ ಅಲ್ಲಾಹು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.
(221) ಬಹುದೇವವಿಶ್ವಾಸಿನಿಯರು ವಿಶ್ವಾಸವಿಡುವ ತನಕ ನೀವು ಅವರನ್ನು ವರಿಸದಿರಿ. ಸತ್ಯವಿಶ್ವಾಸಿನಿಯಾದ ಓರ್ವ ಗುಲಾಮಸ್ತ್ರೀ ಬಹುದೇವವಿಶ್ವಾಸಿನಿಗಿಂತಲೂ ಉತ್ತಮಳಾಗಿರುವಳು. ಆಕೆ ನಿಮಗೆ ಆಕರ್ಷಕವಾಗಿ ಕಂಡರೂ ಸರಿ! ಬಹುದೇವವಿಶ್ವಾಸಿಗಳು ವಿಶ್ವಾಸವಿಡುವ ತನಕ ಅವರಿಗೆ ನೀವು ವಿವಾಹ ಮಾಡಿಕೊಡದಿರಿ. ಸತ್ಯವಿಶ್ವಾಸಿಯಾದ ಓರ್ವ ಗುಲಾಮನು ಬಹುದೇವವಿಶ್ವಾಸಿಗಿಂತಲೂ ಉತ್ತಮನಾಗಿರುವನು. ಆತ ನಿಮಗೆ ಆಕರ್ಷಕವಾಗಿ ಕಂಡರೂ ಸರಿ! ಅವರು ನರಕದೆಡೆಗೆ ಆಹ್ವಾನಿಸುತ್ತಿರುವರು. ಆದರೆ ಅಲ್ಲಾಹು ತನ್ನ ಅನುಮತಿ ಪ್ರಕಾರ ಸ್ವರ್ಗದೆಡೆಗೆ ಮತ್ತು ಪಾಪಮುಕ್ತಿಯೆಡೆಗೆ ಆಹ್ವಾನಿಸುತ್ತಿರುವನು. ಜನರು ಚಿಂತಿಸಿ ಗ್ರಹಿಸುವುದಕ್ಕಾಗಿ ಅವನು ತನ್ನ ದೃಷ್ಟಾಂತಗಳನ್ನು ಅವರಿಗೆ ವಿವರಿಸಿಕೊಡುತ್ತಿರುವನು.
(222) ಅವರು ತಮ್ಮೊಂದಿಗೆ ಋತುಸ್ರಾವದ ಬಗ್ಗೆ ಕೇಳುತ್ತಿರುವರು. ಹೇಳಿರಿ: ‘ಅದೊಂದು ಮಾಲಿನ್ಯವಾಗಿದೆ. ಆದ್ದರಿಂದ ಋತುಸ್ರಾವ ಕಾಲದಲ್ಲಿ ನೀವು ಸ್ತ್ರೀಯರಿಂದ ದೂರವಿರಿ. ಅವರು ಶುದ್ಧವಾಗುವವರೆಗೂ ನೀವು ಅವರನ್ನು ಸಮೀಪಿಸದಿರಿ. ಆದರೆ ಅವರು ಶುದ್ಧಿಯಾದರೆ ಅಲ್ಲಾಹು ನಿಮ್ಮೊಂದಿಗೆ ಆಜ್ಞಾಪಿಸಿದ ರೀತಿಯಲ್ಲಿ ನೀವು ಅವರ ಬಳಿಗೆ ತೆರಳಿರಿ’. ಖಂಡಿತವಾಗಿಯೂ ಅಲ್ಲಾಹು ಪಶ್ಚಾತ್ತಾಪಪಟ್ಟು ಮರಳುವವರನ್ನು ಪ್ರೀತಿಸುವನು ಮತ್ತು ಶುಚಿತ್ವ ಪಾಲಿಸುವವರನ್ನೂ ಪ್ರೀತಿಸುವನು.
(223) ನಿಮ್ಮ ಪತ್ನಿಯರು ನಿಮ್ಮ ಹೊಲವಾಗಿರುವರು. ಆದ್ದರಿಂದ ನೀವು ಇಚ್ಛಿಸುವ ರೀತಿಯಲ್ಲಿ ನೀವು ನಿಮ್ಮ ಹೊಲದೆಡೆಗೆ ತೆರಳಿರಿ. ನಿಮ್ಮ ಸ್ವಂತಕ್ಕೆ ಬೇಕಾದುದನ್ನು ನೀವು ಮುಂಗಡವಾಗಿ ಮಾಡಿಟ್ಟುಕೊಳ್ಳಿರಿ.(53) ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು ನೀವು ಅವನನ್ನು ಭೇಟಿಯಾಗಲಿರುವಿರಿ ಎಂಬುದನ್ನು ಅರಿತುಕೊಳ್ಳಿರಿ. ಸತ್ಯವಿಶ್ವಾಸಿಗಳಿಗೆ ಶುಭವಾರ್ತೆ ತಿಳಿಸಿರಿ.
53. ಇಲ್ಲಿ ಸೂಚಿಸಿರುವುದು ಭವಿಷ್ಯದಲ್ಲಿ ಮತ್ತು ಪರಲೋಕ ಜೀವನದಲ್ಲಿ ಪ್ರಯೋಜನಕರವಾಗುವ ರೀತಿಯಲ್ಲಿ ಸಂತತಿಯನ್ನು ಧರ್ಮನಿಷ್ಠೆಯೊಂದಿಗೆ ಬೆಳೆಸಬೇಕಾದ ಅಗತ್ಯದ ಬಗ್ಗೆಯಾಗಿರಬಹುದು.
(224) ನೀವು ಅಲ್ಲಾಹುವಿನ ಹೆಸರಲ್ಲಿ ಶಪಥ ಮಾಡಿರುವಿರಿ ಎಂಬ ಕಾರಣದಿಂದಾಗಿ ಸತ್ಕಾರ್ಯವನ್ನು ಮಾಡಲು, ಭಯಭಕ್ತಿ ಪಾಲಿಸಲು ಮತ್ತು ಜನರ ಮಧ್ಯೆ ಸಂಧಾನ ಮಾಡಲು ನೀವು ಅವನನ್ನು ಒಂದು ಅಡ್ಡಿಯನ್ನಾಗಿ ಮಾಡಿಕೊಳ್ಳದಿರಿ.(54) ಅಲ್ಲಾಹು ಎಲ್ಲವನ್ನು ಆಲಿಸುವವನೂ ಅರಿಯುವವನೂ ಆಗಿರುವನು.
54. ಯಾವುದೇ ವಿಷಯದ ಕುರಿತು ಹೇಳುವಾಗಲೂ ‘ಅಲ್ಲಾಹನಾಣೆ, ನಾನದನ್ನು ಮಾಡುವೆನು ಅಥವಾ ಅಲ್ಲಾಹನಾಣೆ, ನಾನದನ್ನು ಮಾಡಲಾರೆನು’ ಎಂದು ಆಣೆ ಹಾಕಿ ಹೇಳುವುದು ಅರಬರ ಒಂದು ಸ್ವಭಾವವಾಗಿತ್ತು. ಆಣೆ ಹಾಕಿ ಹೇಳಿದ ಒಂದು ವಿಷಯವನ್ನು ಉಲ್ಲಂಘಿಸಬಾರದು. ಉಲ್ಲಂಘಿಸಿದರೆ ಪ್ರಾಯಶ್ಚಿತ್ತ ನೀಡಬೇಕು. ಹೀಗಾಗಿ ಯಾವುದೇ ಒಂದು ಕಾರ್ಯವು ಅದು ಉತ್ತಮವಾಗಿದ್ದರೂ ಅದನ್ನು ಮಾಡುವುದಿಲ್ಲವೆಂದು ಎಂದಾದರೂ ಆಣೆ ಹಾಕಿದ್ದರೆ ಎಂದಿಗೂ ಆ ಕಾರ್ಯವನ್ನು ಮಾಡದಿರುವಂತಹ ಒಂದು ನಿಲುವನ್ನು ಅವರು ಹೊಂದಿದ್ದರು. ಈ ನಿಲುವು ಸರಿಯಲ್ಲ ಮತ್ತು ಶಪಥವು ಸತ್ಕಾರ್ಯಗಳಿಗೆ ತಡೆಯಾಗಕೂಡದು ಎಂದು ಕುರ್‌ಆನ್ ಎಚ್ಚರಿಸುತ್ತದೆ.
(225) (ಮನಃಪೂರ್ವಕವಲ್ಲದ) ಅರ್ಥಶೂನ್ಯ ಪ್ರತಿಜ್ಞಾ ಮಾತುಗಳ ಕಾರಣಕ್ಕಾಗಿ ಅಲ್ಲಾಹು ನಿಮ್ಮನ್ನು ಶಿಕ್ಷಿಸಲಾರನು. ಆದರೆ ನೀವು ಮನಃಪೂರ್ವಕ ಮಾಡಿರುವುದಕ್ಕಾಗಿ ಅವನು ನಿಮ್ಮನ್ನು ಶಿಕ್ಷಿಸುವನು. ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಸಹನಾಶೀಲನೂ ಆಗಿರುವನು.
(226) ತಮ್ಮ ಪತ್ನಿಯರೊಂದಿಗೆ (ಲೈಂಗಿಕ ಸಂಪರ್ಕ ಮಾಡುವುದಿಲ್ಲವೆಂದು) ಶಪಥ ಮಾಡಿ ದೂರ ಉಳಿಯುವವರಿಗೆ (ಅಂತಿಮ ನಿರ್ಧಾರಕ್ಕಾಗಿ) ನಾಲ್ಕು ತಿಂಗಳ ಕಾಲ ಕಾಯಬಹುದು. ಅದರ ಮಧ್ಯೆ ಅವರು (ಶಪಥವನ್ನು ಮುರಿದು ದಾಂಪತ್ಯದೆಡೆಗೆ) ಮರಳುವುದಾದರೆ ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(227) ಇನ್ನು ಅವರು ವಿವಾಹ ವಿಚ್ಛೇದನೆ ಮಾಡಬೇಕೆಂದು ತೀರ್ಮಾನಿಸುವುದಾದರೆ, ಖಂಡಿತವಾಗಿಯೂ ಅಲ್ಲಾಹು ಎಲ್ಲವನ್ನು ಆಲಿಸುವವನೂ ಅರಿಯುವವನೂ ಆಗಿರುವನು.
(228) ವಿಚ್ಛೇದಿತ ಸ್ತ್ರೀಯರು ತಮ್ಮ ವಿಷಯದಲ್ಲಿ ಮೂರು ಋತುಸ್ರಾವ ಕಾಲಗಳವರೆಗೆ ಕಾದಿರಲಿ. ಅವರು ಅಲ್ಲಾಹುವಿನಲ್ಲೂ ಅಂತ್ಯದಿನದಲ್ಲೂ ವಿಶ್ವಾಸವಿಡುವವರಾಗಿದ್ದರೆ ತಮ್ಮ ಗರ್ಭಗಳಲ್ಲಿ ಅಲ್ಲಾಹು ಸೃಷ್ಟಿಸಿರುವುದನ್ನು ಮರೆಮಾಚಲು ಅವರಿಗೆ ಅನುಮತಿಯಿಲ್ಲ. ಅವರು (ಪತಿಯಂದಿರು) ನಿಲುವನ್ನು ಉತ್ತಮಗೊಳಿಸಲು ಇಚ್ಛಿಸುವುದಾದರೆ ಅದರೊಳಗೆ (ಪ್ರಸ್ತುತ ಅವಧಿಯೊಳಗೆ) ಅವರನ್ನು ಮರಳಿ ಪಡೆಯಲು ಅವರ ಪತಿಯಂದಿರು ಹೆಚ್ಚು ಅರ್ಹತೆಯುಳ್ಳವರಾಗಿರುವರು. ಸ್ತ್ರೀಯರಿಗೆ (ಪತಿಯಂದಿರೊಂದಿಗೆ) ಬಾಧ್ಯತೆಗಳಿರುವಂತೆ ಅವರಿಗೆ ಸಿಗಬೇಕಾದ ನ್ಯಾಯೋಚಿತ ಹಕ್ಕುಗಳೂ ಇವೆ. ಆದರೆ ಪುರುಷರಿಗೆ ಅವರಿಗಿಂತ ಹೆಚ್ಚಿನ ಒಂದು ಪದವಿಯಿದೆ. ಅಲ್ಲಾಹು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.
(229) (ಹಿಂದಕ್ಕೆ ಪಡೆಯಲು ಅನುಮತಿಯಿರುವ) ವಿವಾಹ ವಿಚ್ಛೇದನೆಯು ಎರಡು ಬಾರಿ ಮಾತ್ರವಾಗಿದೆ. ತರುವಾಯ ಒಂದೋ ಶಿಷ್ಟಾಚಾರದೊಂದಿಗೆ ಬಳಿಯಿರಿಸಿಕೊಳ್ಳುವುದನ್ನು ಅಥವಾ ಉತ್ತಮ ರೀತಿಯಲ್ಲಿ ಬಿಡುಗಡೆಗೊಳಿಸುವುದನ್ನು ಮಾಡಬೇಕಾಗಿದೆ. ನೀವು ಅವರಿಗೆ (ಪತ್ನಿಯರಿಗೆ) ಕೊಟ್ಟಿರುವುದರಿಂದ ಏನನ್ನೂ ಮರಳಿ ಪಡೆಯಲು ನಿಮಗೆ ಅನುಮತಿಯಿಲ್ಲ; ಅಲ್ಲಾಹುವಿನ ನಿಯಮವ್ಯಾಪ್ತಿಗಳನ್ನು ಪಾಲಿಸಲು ಸಾಧ್ಯವಾಗುವುದಿಲ್ಲವೆಂದು ಅವರಿಬ್ಬರಿಗೂ ಭಯವುಂಟಾಗುವ ಹೊರತು. ಅವರಿಗೆ (ದಂಪತಿಗಳಿಗೆ) ಅಲ್ಲಾಹುವಿನ ನಿಯಮವ್ಯಾಪ್ತಿಗಳನ್ನು ಪಾಲಿಸಲು ಸಾಧ್ಯವಾಗಲಾರದೆಂದು ನಿಮಗೆ ಭಯವುಂಟಾದರೆ ಅವಳು ಏನಾದರೂ ಬಿಟ್ಟು ಕೊಟ್ಟು ಸ್ವತಃ ವಿಚ್ಛೇದನೆ ಪಡೆಯುವುದರಲ್ಲಿ ಅವರಿಬ್ಬರಿಗೂ ದೋಷವಿಲ್ಲ. ಇವು ಅಲ್ಲಾಹುವಿನ ನಿಯಮವ್ಯಾಪ್ತಿಗಳಾಗಿವೆ. ಆದ್ದರಿಂದ ನೀವು ಇವುಗಳನ್ನು ಉಲ್ಲಂಘಿಸದಿರಿ. ಅಲ್ಲಾಹುವಿನ ನಿಯಮಗಳನ್ನು ಉಲ್ಲಂಘಿಸುವವರಾರೋ ಅವರೇ ಅಕ್ರಮಿಗಳಾಗಿರುವರು.
(230) ಇನ್ನು (ಮೂರನೇ ಬಾರಿಯೂ) ಅವನು ಅವಳನ್ನು ವಿಚ್ಛೇದಿಸುವುದಾದರೆ ತದನಂತರ ಅವಳು ಬೇರೊಬ್ಬ ಪತಿಯನ್ನು ವರಿಸುವ ತನಕ ಅವನಿಗೆ ಧರ್ಮ ಸಮ್ಮತವಾಗಲಾರಳು. ತರುವಾಯ ಅವನೂ ಅವಳನ್ನು ವಿಚ್ಛೇದಿಸಿದರೆ ಮತ್ತು ಅಲ್ಲಾಹುವಿನ ನಿಯಮವ್ಯಾಪ್ತಿಗಳನ್ನು ಪಾಲಿಸುವೆವೆಂದು ಇವರಿಬ್ಬರೂ ಭಾವಿಸುವುದಾದರೆ (ಹಳೆಯ ದಾಂಪತ್ಯದೆಡೆಗೆ) ಮರಳಿ ಹೋಗುವುದರಲ್ಲಿ ಇವರಿಬ್ಬರಿಗೂ ದೋಷವಿಲ್ಲ. ಇವು ಅಲ್ಲಾಹುವಿನ ನಿಯಮವ್ಯಾಪ್ತಿಗಳಾಗಿವೆ. ಅರಿತುಕೊಳ್ಳುವ ಜನರಿಗಾಗಿ ಅಲ್ಲಾಹು ಇವುಗಳನ್ನು ವಿವರಿಸಿಕೊಡುತ್ತಿರುವನು.
(231) ನೀವು ಸ್ತ್ರೀಯರನ್ನು ವಿಚ್ಛೇದನೆ ಮಾಡಿ, ಅವರು ತಮ್ಮ ಅವಧಿ ತಲುಪಿದರೆ ಒಂದೋ ಅವರನ್ನು ಶಿಷ್ಟಾಚಾರದೊಂದಿಗೆ ಬಳಿಯಿರಿಸಿಕೊಳ್ಳಿರಿ ಅಥವಾ ಅವರನ್ನು ಶಿಷ್ಟಾಚಾರದೊಂದಿಗೆ ಬಿಡುಗಡೆಗೊಳಿಸಿರಿ. ಸತಾಯಿಸುವ ಸಲುವಾಗಿ ನೀವು ಅವರನ್ನು ಅನ್ಯಾಯವಾಗಿ ವಶದಲ್ಲಿಟ್ಟು ಕೊಳ್ಳದಿರಿ. ಯಾರಾದರೂ ಹಾಗೆ ಮಾಡಿದರೆ ಅವನು ಸ್ವತಃ ತನ್ನ ಮೇಲೆಯೇ ಅಕ್ರಮವೆಸಗಿರುವನು. ನೀವು ಅಲ್ಲಾಹುವಿನ ವಚನಗಳನ್ನು ಗೇಲಿ ಮಾಡದಿರಿ. ಅಲ್ಲಾಹು ನಿಮಗೆ ದಯಪಾಲಿಸಿರುವ ಅನುಗ್ರಹವನ್ನು ಸ್ಮರಿಸಿರಿ. ನಿಮಗೆ ಸದುಪದೇಶ ನೀಡುತ್ತಾ ಅವನು ಅವತೀರ್ಣಗೊಳಿಸಿದ ಗ್ರಂಥ ಮತ್ತು ಜ್ಞಾನವನ್ನು ಸ್ಮರಿಸಿರಿ. ಅಲ್ಲಾಹುವನ್ನು ಭಯಪಡಿರಿ. ಅಲ್ಲಾಹು ಸರ್ವ ವಿಷಯಗಳ ಕುರಿತೂ ಅರಿವುಳ್ಳವನಾಗಿರುವನೆಂಬುದನ್ನು ಅರಿತುಕೊಳ್ಳಿರಿ.
(232) ನೀವು ಸ್ತ್ರೀಯರನ್ನು ವಿಚ್ಛೇದನೆ ಮಾಡಿ, ಅವರು ತಮ್ಮ ಅವಧಿ ತಲುಪಿದರೆ, ಅವರು ತಮ್ಮ ಪತಿಯಂದಿರನ್ನು ವಿವಾಹವಾಗುವುದಕ್ಕೆ ನೀವು ಅಡ್ಡಿಯನ್ನುಂಟು ಮಾಡದಿರಿ; ಶಿಷ್ಟಾಚಾರದೊಂದಿಗೆ ಅವರು ಪರಸ್ಪರ ಸಂತೃಪ್ತರಾಗಿದ್ದರೆ. ಅದು ನಿಮ್ಮ ಪೈಕಿ ಅಲ್ಲಾಹುವಿನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರಿಗಿರುವ ಉಪದೇಶವಾಗಿದೆ. ಅದು ನಿಮಗೆ ಅತ್ಯಂತ ಸಭ್ಯವೂ, ಅತ್ಯಧಿಕ ಪರಿಶುದ್ಧವೂ ಆಗಿದೆ. ಅಲ್ಲಾಹು ಅರಿಯುವನು; ನೀವು ಅರಿಯಲಾರಿರಿ.
(233) ತಾಯಂದಿರು ತಮ್ಮ ಶಿಶುಗಳಿಗೆ ಎರಡು ವರ್ಷ ಪೂರ್ತಿಯಾಗಿ ಮೊಲೆಯುಣಿಸಲಿ. ಇದು (ಶಿಶುವಿನ) ಸ್ತನಪಾನವನ್ನು ಪೂರ್ತಿಗೊಳಿಸಲು ಇಚ್ಛಿಸುವವರಿಗಾಗಿದೆ. ಅವರಿಗೆ (ಮೊಲೆಯುಣಿಸುವ ತಾಯಂದಿರಿಗೆ) ಶಿಷ್ಟಾಚಾರಕ್ಕನುಗುಣವಾಗಿ ಆಹಾರ ಮತ್ತು ಉಡುಪುಗಳನ್ನು ಒದಗಿಸಬೇಕಾದುದು ಶಿಶುವಿನ ತಂದೆಯಾಗಿರುವವನ ಕರ್ತವ್ಯವಾಗಿದೆ. ಆದರೆ ಯಾವುದೇ ವ್ಯಕ್ತಿಯೊಂದಿಗೂ ಅವನ ಸಾಮರ್ಥ್ಯಕ್ಕೆ ಮಿಗಿಲಾಗಿರುವುದನ್ನು ನೀಡಲು ಒತ್ತಾಯಿಸಲ್ಪಡಬಾರದು. ಯಾವುದೇ ತಾಯಿಯೂ ತನ್ನ ಶಿಶುವಿನಿಂದಾಗಿ ಸತಾಯಿಸಲ್ಪಡದಿರಲಿ. ಹಾಗೆಯೇ ಯಾವುದೇ ತಂದೆಯೂ ತನ್ನ ಶಿಶುವಿನಿಂದಾಗಿ ಸತಾಯಿಸಲ್ಪಡದಿರಲಿ. (ತಂದೆಯ ಅನುಪಸ್ಥಿತಿಯಲ್ಲಿ ಅವನ) ಹಕ್ಕುದಾರರಿಗೆ (ಶಿಶುವಿನ ವಿಷಯದಲ್ಲಿ) ಅಂತಹುದೇ ಬಾಧ್ಯತೆಗಳಿವೆ. ಇನ್ನು ಅವರಿಬ್ಬರೂ ಪರಸ್ಪರ ಸಮಾಲೋಚನೆಯೊಂದಿಗೆ ಹಾಗೂ ಸಂತೃಪ್ತಿಯೊಂದಿಗೆ (ಶಿಶುವಿನ) ಸ್ತನಪಾನವನ್ನು ಸ್ಥಗಿತಗೊಳಿಸಲು ಇಚ್ಛಿಸಿದರೆ ಅವರ ಮೇಲೆ ದೋಷವಿಲ್ಲ. ನಿಮ್ಮ ಶಿಶುಗಳಿಗೆ (ಇತರ ಯಾರಿಂದಲಾದರೂ) ಮೊಲೆಯುಣಿಸಲು ನೀವು ಇಚ್ಛಿಸುವುದಾದರೆ ಮತ್ತು (ಆ ಸಾಕುತಾಯಂದಿರಿಗೆ) ನೀಡಬೇಕಾದುದನ್ನು ನೀವು ಶಿಷ್ಟಾಚಾರದೊಂದಿಗೆ ನೀಡುವುದಾದರೆ ಅದರಲ್ಲೂ ನಿಮಗೆ ದೋಷವಿಲ್ಲ. ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು ನೀವು ಮಾಡುತ್ತಿರುವುದನ್ನೆಲ್ಲ ಅಲ್ಲಾಹು ನೋಡುತ್ತಿರುವನೆಂಬುದನ್ನು ಅರಿತುಕೊಳ್ಳಿರಿ.
(234) ನಿಮ್ಮಲ್ಲಿ ಯಾರಾದರೂ ತಮ್ಮ ಪತ್ನಿಯರನ್ನು ಬಿಟ್ಟಗಲಿ ಮರಣ ಹೊಂದುವುದಾದರೆ ಅವರು (ಪತ್ನಿಯರು) ತಮ್ಮ ವಿಷಯದಲ್ಲಿ ನಾಲ್ಕು ತಿಂಗಳು ಮತ್ತು ಹತ್ತು ದಿನ ಕಾಯಬೇಕಾಗಿದೆ. ಆ ಬಳಿಕ ಅವರ ಅವಧಿಯು ತಲುಪಿದರೆ ಅವರು ತಮ್ಮ ವಿಷಯದಲ್ಲಿ ಶಿಷ್ಟಾಚಾರದೊಂದಿಗೆ ಏನಾದರೂ ಮಾಡುವುದಾದರೆ ಅದರಲ್ಲಿ ನಿಮಗೆ ದೋಷವಿಲ್ಲ. ನೀವು ಮಾಡುತ್ತಿರುವುದೆಲ್ಲವನ್ನೂ ಅಲ್ಲಾಹು ಸೂಕ್ಷ್ಮವಾಗಿ ಅರಿಯುತ್ತಿರುವನು.
(235) (ಇದ್ದಃದ ಅವಧಿಯಲ್ಲಿ) ಆ ಸ್ತ್ರೀಯರೊಂದಿಗಿನ ವಿವಾಹ ಪ್ರಸ್ತಾಪವನ್ನು ನೀವು ಸೂಚ್ಯವಾಗಿ ತಿಳಿಸುವುದರಲ್ಲಿ ಅಥವಾ ಮನಸ್ಸಿನೊಳಗೆ ಬಚ್ಚಿಡುವುದರಲ್ಲಿ ನಿಮಗೆ ದೋಷವಿಲ್ಲ. ನೀವು ಅವರನ್ನು ಸ್ಮರಿಸುತ್ತಿರುವಿರಿ ಎಂಬುದನ್ನು ಅಲ್ಲಾಹು ಅರಿತಿರುವನು. ಆದರೆ ನೀವು ಅವರೊಂದಿಗೆ ಗೌರವಾನ್ವಿತ ಮಾತುಗಳನ್ನಾಡುವುದರ ವಿನಾ ಗುಪ್ತವಾಗಿ ಯಾವುದೇ ನಿಶ್ಚಯವನ್ನೂ ಮಾಡದಿರಿ. ನಿಯಮಾನುಸೃತವಾಗಿರುವ ಅವಧಿ (ಇದ್ದಃ) ಪೂರ್ತಿಯಾಗುವವರೆಗೆ ನೀವು (ವಿಚ್ಛೇದಿತೆಯರೊಂದಿಗೆ) ವಿವಾಹ ಕರಾರನ್ನು ಸ್ಥಾಪಿಸಲು ನಿರ್ಧರಿಸದಿರಿ. ನಿಮ್ಮ ಮನಸ್ಸುಗಳಲ್ಲಿರುವುದನ್ನು ಅಲ್ಲಾಹು ಅರಿಯುವನೆಂಬುದನ್ನು ನೀವು ಅರಿತುಕೊಳ್ಳಿರಿ ಮತ್ತು ಅವನನ್ನು ಭಯಪಡಿರಿ. ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಸಹನಾಶೀಲನೂ ಆಗಿರುವನೆಂಬುದನ್ನು ಅರಿತುಕೊಳ್ಳಿರಿ.
(236) ನೀವು ಪತ್ನಿಯರನ್ನು ಸ್ಪರ್ಶಿಸುವ ಮೊದಲೇ ಅಥವಾ ಅವರ ವಧುದಕ್ಷಿಣೆಯನ್ನು ನಿಶ್ಚಯಿಸುವ ಮೊದಲೇ ಅವರೊಂದಿಗಿರುವ ಸಂಬಂಧವನ್ನು ನೀವು ಕಡಿದರೆ (ಮಹ್ರ್ ನೀಡದಿರುವುದಕ್ಕಾಗಿ) ನಿಮ್ಮ ಮೇಲೆ ದೋಷವಿಲ್ಲ. ಆದರೆ ನೀವು ಅವರಿಗೆ ಶಿಷ್ಟಾಚಾರದನ್ವಯ -ಸಾಮರ್ಥ್ಯವುಳ್ಳವನು ತನ್ನ ಸಾಮರ್ಥ್ಯಕ್ಕನುಸಾರವಾಗಿ ಮತ್ತು ಇಕ್ಕಟ್ಟಿನಲ್ಲಿರುವವನು ತನ್ನ ಸ್ಥಿತಿಗನುಸಾರವಾಗಿ- ಜೀವನಾಂಶವಾಗಿ ಏನಾದರೂ ನೀಡಲಿ. ಇದು ಸತ್ಕರ್ಮಿಗಳ ಮೇಲಿರುವ ಬಾಧ್ಯತೆಯಾಗಿದೆ.
(237) ಇನ್ನು ನೀವು ಅವರನ್ನು (ಪತ್ನಿಯರನ್ನು) ಸ್ಪರ್ಶಿಸುವ ಮೊದಲೇ ವಿಚ್ಛೇದಿಸಿದರೆ ಮತ್ತು ಅವರಿಗೆ ವಧುದಕ್ಷಿಣೆಯನ್ನು ಈ ಮೊದಲೇ ನಿಶ್ಚಯಿಸಿಬಿಟ್ಟಿದ್ದರೆ, ನಿಶ್ಚಯಿಸಿರುವುದರ ಅರ್ಧಾಂಶವನ್ನು (ಕೊಡಬೇಕಾಗಿದೆ). ಅವರು (ಪತ್ನಿಯರು) ವಿನಾಯಿತಿ ತೋರಿಸಿದ ಹೊರತು. ಅಥವಾ ವಿವಾಹ ಒಪ್ಪಂದವು ಯಾರ ಕೈಯಲ್ಲಿದೆಯೋ ಅವನು (ಪತಿ) (ಮಹ್ರ್ ಪೂರ್ತಿಯಾಗಿ ನೀಡಿ) ವಿನಾಯಿತಿ ತೋರಿಸಿದ ಹೊರತು. (ಓ ಪತಿಯಂದಿರೇ!) ನೀವು ವಿನಾಯಿತಿ ತೋರಿಸುವುದು ಧರ್ಮನಿಷ್ಠೆಗೆ ಹೆಚ್ಚು ನಿಕಟವಾಗಿದೆ. ನೀವು ಪರಸ್ಪರ ಹೊಂದಿರುವ ಔದಾರ್ಯವನ್ನು ಮರೆಯದಿರಿ. ಖಂಡಿತವಾಗಿಯೂ ನೀವು ಮಾಡುತ್ತಿರುವುದನ್ನು ಅಲ್ಲಾಹು ವೀಕ್ಷಿಸುವವನಾಗಿರುವನು.
(238) ನೀವು ನಮಾಝ್‍ಗಳನ್ನು ಸೂಕ್ಷ್ಮತೆಯೊಂದಿಗೆ ನಿರ್ವಹಿಸಿರಿ. ವಿಶೇಷವಾಗಿ ಉತ್ಕೃಷ್ಟವಾದ ನಮಾಝ್.(55) ನೀವು ಅಲ್ಲಾಹುವಿನ ಮುಂದೆ ಭಯಭಕ್ತಿಯುಳ್ಳವರಾಗಿ ನಿಂತು ನಮಾಝ್ ನಿರ್ವಹಿಸಿರಿ.
55. ಪ್ರಬಲ ಅಭಿಪ್ರಾಯ ಪ್ರಕಾರ ‘ಸ್ವಲಾತುಲ್ ವುಸ್ತಾ’ ಎಂದರೆ ಅಸ್ರ್ ನಮಾಝ್.
(239) ನೀವು (ಶತ್ರುಗಳ ದಾಳಿಯನ್ನು) ಭಯಪಟ್ಟರೆ ನಡೆಯುತ್ತಾ ಅಥವಾ ವಾಹನಗಳಲ್ಲಿ (ನಮಾಝ್ ನಿರ್ವಹಿಸಬಹುದು). ನೀವು ನಿರ್ಭೀತ ಸ್ಥಿತಿಯಲ್ಲಾದರೆ ನೀವು ಅರಿಯದಿರುವುದನ್ನು ಅಲ್ಲಾಹು ನಿಮಗೆ ಕಲಿಸಿಕೊಟ್ಟಿರುವ ರೀತಿಯಲ್ಲಿ ನೀವು ಅವನನ್ನು ಸ್ಮರಿಸಿರಿ.
(240) ನಿಮ್ಮ ಪೈಕಿ ಪತ್ನಿಯರನ್ನು ಬಿಟ್ಟಗಲಿ ಮರಣ ಹೊಂದುವವರು ತಮ್ಮ ಪತ್ನಿಯರಿಗೆ ಒಂದು ವರ್ಷದ ತನಕ (ಮನೆಯಿಂದ) ಹೊರಕಳಿಸದೆ ಜೀವನಾಂಶವನ್ನು ನೀಡಲು ವಸಿಯ್ಯತ್ ಮಾಡಬೇಕಾಗಿದೆ. ಇನ್ನು ಅವರು (ಸ್ವತಃ) ಹೊರಹೋದರೆ ತಮ್ಮ ವಿಷಯದಲ್ಲಿ ಶಿಷ್ಟಾಚಾರದ ಪ್ರಕಾರ ಅವರು ಏನು ಮಾಡುತ್ತಾರೋ ಅದರಲ್ಲಿ ನಿಮಗೆ ದೋಷವಿಲ್ಲ. ಅಲ್ಲಾಹು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.
(241) ವಿಚ್ಛೇದಿತೆಯರಿಗೆ ನ್ಯಾಯಬದ್ಧವಾಗಿ ಏನಾದರೂ ಜೀವನಾಂಶವನ್ನು ನೀಡಬೇಕಾಗಿದೆ. ಇದು ಭಯಭಕ್ತಿ ಪಾಲಿಸುವವರ ಬಾಧ್ಯತೆಯಾಗಿದೆ.
(242) ನೀವು ಚಿಂತಿಸಿ ಗ್ರಹಿಸುವುದಕ್ಕಾಗಿ ಹೀಗೆ ಅಲ್ಲಾಹು ತನ್ನ ದೃಷ್ಟಾಂತಗಳನ್ನು ನಿಮಗೆ ವಿವರಿಸಿಕೊಡುತ್ತಿರುವನು.
(243) ಸಾವಿರಾರು ಜನರಿದ್ದೂ ಸಹ ಮೃತ್ಯುಭಯದಿಂದ ತಮ್ಮ ಮನೆಗಳನ್ನು ತೊರೆದು ಹೊರಹೋದ ಒಂದು ಜನತೆಯ ಬಗ್ಗೆ ತಾವು ಅರಿತಿಲ್ಲವೇ? ಆಗ ಅಲ್ಲಾಹು ಅವರೊಂದಿಗೆ ಹೇಳಿದನು: ‘ನೀವು ಮರಣ ಹೊಂದಿರಿ’. ತರುವಾಯ ಅವನು ಅವರಿಗೆ ಜೀವವನ್ನು ನೀಡಿದನು. ಖಂಡಿತವಾಗಿಯೂ ಅಲ್ಲಾಹು ಜನರ ಮೇಲೆ ಔದಾರ್ಯವುಳ್ಳವನಾಗಿರುವನು. ಆದರೆ ಜನರಲ್ಲಿ ಹೆಚ್ಚಿನವರೂ ಕೃತಜ್ಞತೆ ಸಲ್ಲಿಸುವುದಿಲ್ಲ.
(244) ನೀವು ಅಲ್ಲಾಹುವಿನ ಮಾರ್ಗದಲ್ಲಿ ಯುದ್ಧ ಮಾಡಿರಿ ಮತ್ತು ಅಲ್ಲಾಹು ಎಲ್ಲವನ್ನು ಆಲಿಸುವವನೂ ಅರಿಯುವವನೂ ಆಗಿರುವನೆಂಬುದನ್ನು ಅರಿತುಕೊಳ್ಳಿರಿ.
(245) ಅಲ್ಲಾಹುವಿಗೆ ಉತ್ತಮ ಸಾಲ ನೀಡುವವನು ಯಾರಿರುವನು? ಹಾಗಾದರೆ ಅಲ್ಲಾಹು ಅದನ್ನು ಅವನಿಗೆ ಅನೇಕ ದುಪ್ಪಟ್ಟುಗಳಾಗಿ ಹೆಚ್ಚಿಸಿಕೊಡುವನು. (ಸಂಪತ್ತನ್ನು) ಹಿಡಿದಿಟ್ಟುಕೊಳ್ಳುವುದು ಮತ್ತು ವೃದ್ಧಿಪಡಿಸುವುದು ಅಲ್ಲಾಹುವಾಗಿರುವನು. ನಿಮ್ಮನ್ನು ಅವನೆಡೆಗೇ ಮರಳಿಸಲಾಗುವುದು.
(246) ಮೂಸಾರವರ ಕಾಲಾನಂತರದ ಕೆಲವು ಇಸ್ರಾಈಲೀ ಮುಖಂಡರು ತಮ್ಮ ಪ್ರವಾದಿಯೊಂದಿಗೆ(56) ‘ನಮಗೊಬ್ಬ ರಾಜನನ್ನು ನಿಯೋಗಿಸಿರಿ. (ಅವನ ನಾಯಕತ್ವದಲ್ಲಿ) ನಾವು ಅಲ್ಲಾಹುವಿನ ಮಾರ್ಗದಲ್ಲಿ ಯುದ್ಧ ಮಾಡುವೆವು’ ಎಂದು ಹೇಳಿದ ಸಂದರ್ಭವನ್ನು ತಾವು ಅರಿತಿಲ್ಲವೇ? ಅವರು (ಪ್ರವಾದಿ) ಕೇಳಿದರು: ‘ನಿಮಗೆ ಯುದ್ಧ ಮಾಡಲು ಆಜ್ಞೆ ಬಂದಾಗ ನೀವು ಯುದ್ಧ ಮಾಡದಿರುವಿರಾ?’ ಅವರು ಹೇಳಿದರು: ‘ನಮ್ಮ ವಾಸಸ್ಥಳಗಳಿಂದ ಮತ್ತು ಸಂತತಿಗಳಿಂದ ನಮ್ಮನ್ನು ಹೊರಹಾಕಲಾಗಿರುವಾಗ ಅಲ್ಲಾಹುವಿನ ಮಾರ್ಗದಲ್ಲಿ ನಾವು ಯುದ್ಧ ಮಾಡದಿರುವುದಾದರೂ ಹೇಗೆ?’ ಆದರೆ ಅವರಿಗೆ ಯುದ್ಧ ಮಾಡಲು ಆಜ್ಞಾಪಿಸಲಾದಾಗ ಅವರ ಪೈಕಿ ಕೆಲವರ ಹೊರತು (ಉಳಿದವರೆಲ್ಲರೂ) ಹಿಂದೆ ಸರಿದರು. ಅಲ್ಲಾಹು ಅಕ್ರಮಿಗಳ ಬಗ್ಗೆ (ಚೆನ್ನಾಗಿ) ಅರಿಯುವವನಾಗಿರುವನು.
56. ಅವರು ಈ ಬೇಡಿಕೆಯನ್ನು ಮುಂದಿಟ್ಟದ್ದು ಪ್ರವಾದಿ ಸಮುವೇಲರೊಂದಿಗಾಗಿತ್ತು ಎಂದು ಇಬ್ನ್ ಕಸೀರ್ ಉದ್ಧರಿಸಿದ್ದಾರೆ.
(247) ಅವರೊಂದಿಗೆ ಅವರ ಪ್ರವಾದಿ ಹೇಳಿದರು: ‘ಅಲ್ಲಾಹು ನಿಮಗೆ ರಾಜನಾಗಿ ತಾಲೂತ್‍ರನ್ನು ಕಳುಹಿಸಿರುವನು’. ಅವರು ಹೇಳಿದರು: ‘ಅವರು ನಮ್ಮ ರಾಜನಾಗುವುದಾದರೂ ಹೇಗೆ? ರಾಜಾಧಿಕಾರಕ್ಕೆ ಅವರಿಗಿಂತಲೂ ಹೆಚ್ಚು ಅರ್ಹತೆಯಿರುವುದು ನಮಗಾಗಿದೆ. ಅವರಿಗೆ ಆರ್ಥಿಕ ಸಮೃದ್ಧಿಯನ್ನೂ ಸಹ ದಯಪಾಲಿಸಲಾಗಿಲ್ಲ!’ ಅವರು (ಪ್ರವಾದಿ) ಹೇಳಿದರು: ‘ಅಲ್ಲಾಹು ನಿಮಗಿಂತಲೂ ಉತ್ಕೃಷ್ಟರನ್ನಾಗಿ ಅವರನ್ನು ಆರಿಸಿರುವನು ಮತ್ತು ಅವರಿಗೆ ಅಪಾರ ಜ್ಞಾನವನ್ನು ಹಾಗೂ ದೈಹಿಕ ಬಲವನ್ನು ನೀಡಿರುವನು. ಅಲ್ಲಾಹು ತಾನಿಚ್ಛಿಸಿದವರಿಗೆ ಅವನ ವತಿಯ ಆಧಿಪತ್ಯವನ್ನು ನೀಡುವನು. ಅಲ್ಲಾಹು ಅಪಾರ ಸಾಮರ್ಥ್ಯವುಳ್ಳವನೂ ಎಲ್ಲವನ್ನು ಅರಿಯುವವನೂ ಆಗಿರುವನು’.
(248) ಅವರೊಂದಿಗೆ ಅವರ ಪ್ರವಾದಿ ಹೇಳಿದರು: ‘ಆ ಪೆಟ್ಟಿಗೆ ನಿಮ್ಮ ಬಳಿಗೆ ತಲುಪುವುದು ತಾಲೂತ್‍ರ ರಾಜಾಳ್ವಿಕೆಗಿರುವ ಪುರಾವೆಯಾಗಿದೆ. ಅದರಲ್ಲಿ ನಿಮ್ಮ ರಬ್‌ನ ವತಿಯ ಮನಃಶಾಂತಿ ಮತ್ತು ಮೂಸಾ ಹಾಗೂ ಹಾರೂನ್‍ರ ಕುಟುಂಬಗಳು ಬಿಟ್ಟು ಹೋಗಿರುವ ಅವಶೇಷಗಳಿವೆ.(57) ಅದನ್ನು ಮಲಕ್‍ಗಳು ಹೊತ್ತು ತರುವರು. ನೀವು ಸತ್ಯವಿಶ್ವಾಸಿಗಳಾಗಿದ್ದರೆ ನಿಸ್ಸಂದೇಹವಾಗಿಯೂ ನಿಮಗೆ ಅದರಲ್ಲಿ ಮಹಾ ದೃಷ್ಟಾಂತವಿದೆ’.
57. ಅಲ್ಲಾಹನ ಸಂದೇಶಗಳನ್ನು ದಾಖಲಿಸಿದ ಹಲಗೆ ತುಂಡುಗಳು, ಪ್ರವಾದಿ ಮೂಸಾ(ಅ) ರವರ ಬೆತ್ತ ಹಾಗೂ ಉಡುಪುಗಳು ಮತ್ತು ತೌರಾತ್‍ನ ಕೆಲವು ಭಾಗಗಳು ಆ ಪೆಟ್ಟಿಗೆಯಲ್ಲಿದ್ದವು.
(249) ತರುವಾಯ ಸೈನ್ಯದೊಂದಿಗೆ ಹೊರಟಾಗ ತಾಲೂತ್ ಹೇಳಿದರು: ‘ಅಲ್ಲಾಹು ಒಂದು ನದಿಯ ಮೂಲಕ ನಿಮ್ಮನ್ನು ಪರೀಕ್ಷಿಸುವನು. ಯಾರು ಅದರಿಂದ ಕುಡಿದನೋ ಅವನು ನನ್ನ ಪೈಕಿ ಸೇರಿದವನಲ್ಲ ಮತ್ತು ಯಾರು ಅದರ ರುಚಿ ನೋಡಲಿಲ್ಲವೋ ಅವನು ನನ್ನ ಪೈಕಿ ಸೇರಿದವನಾಗಿರುವನು; ಆದರೆ ತನ್ನ ಕೈಯಿಂದ ಒಂದು ಬೊಗಸೆ ಮಾತ್ರಬಾಚಿದವನ ಹೊರತು.’ ಆದರೆ ಅವರ ಪೈಕಿ ಕೆಲವರ ಹೊರತು (ಉಳಿದವರೆಲ್ಲರೂ) ಅದರಿಂದ ಕುಡಿದರು. ಹೀಗೆ ತಾಲೂತ್ ಮತ್ತು ಅವರ ಜೊತೆಗಿರುವ ವಿಶ್ವಾಸಿಗಳು ಆ ನದಿಯನ್ನು ದಾಟಿದಾಗ ಅವರು ಹೇಳಿದರು: ‘ಜಾಲೂತ್ (ಗೋಲಿಯತ್) ಮತ್ತು ಅವನ ಸೈನ್ಯವನ್ನು ಎದುರಿಸುವ ಧೈರ್ಯ ಇಂದು ನಮಗಿಲ್ಲ’. ತಾವು ಅಲ್ಲಾಹುವನ್ನು ಭೇಟಿಯಾಗಲಿರುವೆವು ಎಂಬ ದೃಢವಿಶ್ವಾಸ ಹೊಂದಿದವರು ಹೇಳಿದರು: ‘ಎಷ್ಟು ಚಿಕ್ಕ ಚಿಕ್ಕ ಸೈನ್ಯಗಳು ಅಲ್ಲಾಹುವಿನ ಅನುಮತಿಯೊಂದಿಗೆ ದೊಡ್ಡ ದೊಡ್ಡ ಸೈನ್ಯಗಳನ್ನು ಸೋಲಿಸಿವೆ! ಅಲ್ಲಾಹು ತಾಳ್ಮೆ ವಹಿಸುವವರ ಜೊತೆಗಿರುವನು’.
(250) ತರುವಾಯ ಅವರು ಜಾಲೂತ್ ಮತ್ತು ಅವನ ಸೈನ್ಯದ ವಿರುದ್ಧ ಹೋರಾಟಕ್ಕಿಳಿದಾಗ ಪ್ರಾರ್ಥಿಸಿದರು: ‘ಓ ನಮ್ಮ ರಬ್! ನಮ್ಮ ಮೇಲೆ ಸಹನೆಯನ್ನು ಸುರಿಸು, ನಮ್ಮ ಪಾದಗಳನ್ನು ಅಚಲಗೊಳಿಸು ಮತ್ತು ಸತ್ಯನಿಷೇಧಿಗಳಾದ ಜನರ ವಿರುದ್ಧ ನಮಗೆ ನೆರವನ್ನು ನೀಡು’.
(251) ತರುವಾಯ ಅವರು ಅಲ್ಲಾಹುವಿನ ಅನುಮತಿಯೊಂದಿಗೆ ಅವರನ್ನು (ಶತ್ರುಗಳನ್ನು) ಸೋಲಿಸಿದರು. ದಾವೂದ್ ಜಾಲೂತ್‍ನನ್ನು ವಧಿಸಿದರು. ಅಲ್ಲಾಹು ಅವರಿಗೆ (ದಾವೂದ್‍ರಿಗೆ) ಆಧಿಪತ್ಯ ಮತ್ತು ಜ್ಞಾನವನ್ನು ನೀಡಿದನು ಹಾಗೂ ಅವನಿಚ್ಛಿಸಿದ ಹಲವನ್ನೂ ಕಲಿಸಿದನು. ಅಲ್ಲಾಹು ಮನುಷ್ಯರ ಪೈಕಿ ಕೆಲವರ ಮೂಲಕ ಕೆಲವರಿಗೆ ಪ್ರತಿರೋಧ ಒಡ್ಡದಿರುತ್ತಿದ್ದರೆ ಭೂಲೋಕವು ಕ್ಷೋಭೆಗೊಳಗಾಗುತ್ತಿತ್ತು. ಆದರೆ ಅಲ್ಲಾಹು ಸರ್ವಲೋಕದವರೊಂದಿಗೆ ಅತ್ಯಂತ ಔದಾರ್ಯವುಳ್ಳವನಾಗಿರುವನು.
(252) ಇವೆಲ್ಲವೂ ಅಲ್ಲಾಹುವಿನ ದೃಷ್ಟಾಂತಗಳಾಗಿವೆ. ಇದನ್ನು ನಾವು ತಮಗೆ ಸತ್ಯದೊಂದಿಗೆ ಓದಿಕೊಡುತ್ತಿರುವೆವು. ಖಂಡಿತವಾಗಿಯೂ ತಾವು ಸಂದೇಶವಾಹಕರ ಪೈಕಿ ಸೇರಿದವರಾಗಿರುವಿರಿ.
(253) ನಾವು ಆ ಸಂದೇಶವಾಹಕರ ಪೈಕಿ ಕೆಲವರಿಗೆ ಇತರ ಕೆಲವರಿಗಿಂತ ಶ್ರೇಷ್ಠತೆಯನ್ನು ನೀಡಿರುವೆವು. ಅವರ ಪೈಕಿ ಅಲ್ಲಾಹು (ನೇರವಾಗಿ) ಸಂಭಾಷಣೆ ಮಾಡಿದವರಿರುವರು.(58) ಅವರ ಪೈಕಿ ಕೆಲವರನ್ನು ಅವನು ಹಲವು ಪದವಿಗಳಿಗೇರಿಸಿರುವನು. ಮರ್ಯಮ್‍ರ ಪುತ್ರ ಈಸಾರಿಗೆ ನಾವು ಸುವ್ಯಕ್ತ ದೃಷ್ಟಾಂತಗಳನ್ನು ನೀಡಿರುವೆವು ಮತ್ತು ಪವಿತ್ರಾತ್ಮನ ಮೂಲಕ ಅವರಿಗೆ ನಾವು ಬೆಂಬಲವನ್ನೂ ನೀಡಿರುವೆವು. ಅಲ್ಲಾಹು ಇಚ್ಛಿಸುತ್ತಿದ್ದರೆ ಸ್ಪಷ್ಟವಾದ ಪುರಾವೆಗಳು ತಮ್ಮ ಬಳಿಗೆ ಬಂದ ಬಳಿಕವೂ ಅವರ (ಸಂದೇಶವಾಹಕರ) ಅನುಯಾಯಿಗಳು (ಪರಸ್ಪರ) ಕಾದಾಡುತ್ತಿರಲಿಲ್ಲ. ಆದರೆ ಅವರು ಭಿನ್ನರಾದರು. ಅವರ ಪೈಕಿ ವಿಶ್ವಾಸವಿಟ್ಟವರೂ ನಿಷೇಧಿಸಿದವರೂ ಉಂಟಾದರು. ಅಲ್ಲಾಹು ಇಚ್ಛಿಸುತ್ತಿದ್ದರೆ ಅವರು (ಪರಸ್ಪರ) ಕಾದಾಡುತ್ತಿರಲಿಲ್ಲ. ಆದರೆ ಅಲ್ಲಾಹು ತಾನಿಚ್ಛಿಸುವುದನ್ನು ಮಾಡುವನು.
58. ಇಹಲೋಕದಲ್ಲಿ ಅಲ್ಲಾಹು ನೇರವಾಗಿ ಸಂಭಾಷಣೆ ಮಾಡಿರುವುದು ಪ್ರವಾದಿ ಮೂಸಾ(ಅ) ರವರೊಂದಿಗೆ ಮಾತ್ರವಾಗಿದೆ.
(254) ಓ ಸತ್ಯವಿಶ್ವಾಸಿಗಳೇ! ಕ್ರಯ-ವಿಕ್ರಯವಾಗಲಿ, ಗೆಳೆತನವಾಗಲಿ, ಶಿಫಾರಸಾಗಲಿ ಪ್ರಯೋಜನವಾಗದ ಒಂದು ದಿನವು ಬರುವುದಕ್ಕೆ ಮುಂಚಿತವಾಗಿ ನಾವು ನಿಮಗೆ ನೀಡಿರುವುದರಿಂದ ವ್ಯಯಿಸಿರಿ. ಸತ್ಯನಿಷೇಧಿಗಳಾರೋ ಅವರೇ ಅಕ್ರಮಿಗಳಾಗಿರುವರು.
(255) ಅಲ್ಲಾಹು! ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನು ಎಂದೆಂದಿಗೂ ಜೀವಿಸಿರುವವನೂ ಎಲ್ಲವನ್ನೂ ನಿಯಂತ್ರಿಸುವವನೂ ಆಗಿರುವನು. ತೂಕಡಿಕೆಯಾಗಲಿ, ನಿದ್ರೆಯಾಗಲಿ ಅವನನ್ನು ಬಾಧಿಸದು. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನದ್ದಾಗಿವೆ. ಅವನ ಅನುಮತಿಯ ವಿನಾ ಅವನ ಬಳಿ ಶಿಫಾರಸು ಮಾಡುವವನು ಯಾರಿರುವನು? ಅವರ ಮುಂದಿರುವುದನ್ನೂ, ಅವರ ಹಿಂದಿರುವುದನ್ನೂ ಅವನು ಅರಿಯುತ್ತಾನೆ. ಅವನ ಜ್ಞಾನದಿಂದ ಅವನು ಇಚ್ಛಿಸಿರುವುದನ್ನಲ್ಲದೆ (ಬೇರೇನನ್ನೂ) ಸೂಕ್ಷ್ಮವಾಗಿ ಅರಿಯಲು ಅವರಿಗೆ ಸಾಧ್ಯವಿಲ್ಲ. ಅವನ ಕುರ್ಸೀ(59) ಆಕಾಶಗಳನ್ನು ಮತ್ತು ಭೂಮಿಯನ್ನು ಆವರಿಸಿಕೊಂಡಿದೆ. ಅವುಗಳ ಸಂರಕ್ಷಣೆಯು ಅವನಿಗೆ ಕಿಂಚಿತ್ತೂ ಭಾರವಿರುವುದಲ್ಲ. ಅವನು ಉನ್ನತನೂ, ಮಹಾನನೂ ಆಗಿರುವನು.
59. ‘ಕುರ್ಸೀ’ ಎಂಬ ಪದಕ್ಕೆ ಪಾದಸ್ಥಾನ (موضع القدمين), ಅರ್ಶ್ (ಸಿಂಹಾಸನ) ಮೊದಲಾದ ವ್ಯಾಖ್ಯಾನಗಳು ಬಂದಿವೆ. ಪುರಾವೆಗಳ ಬೆಂಬಲವಿರುವುದು ಮೊದಲನೆಯ ವ್ಯಾಖ್ಯಾನಕ್ಕಾಗಿದೆ. ಅಲ್ಲಾಹುವಿನ ಎಲ್ಲ ಸಿಫತ್ (ವಿಶೇಷಣ)ಗಳಲ್ಲೂ ಅವು ಕುರ್‌ಆನ್ ಮತ್ತು ಸಹೀಹಾದ ಹದೀಸ್‍ಗಳಲ್ಲಿ ಹೇಗೆ ಬಂದಿವೆಯೋ ಅದೇ ರೀತಿಯಲ್ಲಿ ವಿಶ್ವಾಸವಿಡಬೇಕಾಗಿದೆ ಮತ್ತು ಅವುಗಳನ್ನು ವ್ಯಾಖ್ಯಾನಮುಕ್ತಗೊಳಿಸಬೇಕಾಗಿದೆ.
(256) ಧರ್ಮದ ವಿಷಯದಲ್ಲಿ ಯಾವುದೇ ಬಲಾತ್ಕಾರವಿಲ್ಲ. ಸನ್ಮಾರ್ಗವು ದುರ್ಮಾರ್ಗದಿಂದ ಸ್ಪಷ್ಟವಾಗಿ ಬೇರ್ಪಟ್ಟು ನಿಂತಿದೆ. ಆದ್ದರಿಂದ ಯಾರು ತಾಗೂತ (ಮಿಥ್ಯಾರಾಧ್ಯರ)ನ್ನು ನಿಷೇಧಿಸಿ ಅಲ್ಲಾಹುವಿನಲ್ಲಿ ವಿಶ್ವಾಸವಿಡುವನೋ ಅವನು ಅತ್ಯಂತ ಬಲಿಷ್ಠವಾದ ಹಗ್ಗವನ್ನು ಹಿಡಿದಿರುವನು. ಅದೆಂದೂ ಕಡಿದು ಹೋಗಲಾರದು. ಅಲ್ಲಾಹು (ಎಲ್ಲವನ್ನು) ಆಲಿಸುವವನೂ ಅರಿಯುವವನೂ ಆಗಿರುವನು.
(257) ಅಲ್ಲಾಹು ಸತ್ಯವಿಶ್ವಾಸಿಗಳ ರಕ್ಷಕನಾಗಿರುವನು. ಅವನು ಅವರನ್ನು ಅಂಧಕಾರಗಳಿಂದ ಪ್ರಕಾಶದೆಡೆಗೆ ಹೊರತರುವನು. ಆದರೆ ಸತ್ಯನಿಷೇಧಿಗಳ ರಕ್ಷಕರು ತಾಗೂತ್ (ಮಿಥ್ಯಾರಾಧ್ಯರು)ಗಳಾಗಿರುವರು. ಅವರು (ಮಿಥ್ಯಾರಾಧ್ಯರು) ಅವರನ್ನು ಪ್ರಕಾಶದಿಂದ ಅಂಧಕಾರಗಳೆಡೆಗೆ ಕೊಂಡೊಯ್ಯುವರು. ಅವರು ನರಕವಾಸಿಗಳಾಗಿರುವರು. ಅವರದರಲ್ಲಿ ಶಾಶ್ವತವಾಗಿ ವಾಸಿಸುವರು.
(258) ಇಬ್ರಾಹೀಮ್‍ರೊಂದಿಗೆ ಅವರ ರಬ್‌ನ ವಿಷಯದಲ್ಲಿ ತರ್ಕಿಸಿದವನ ಬಗ್ಗೆ ತಾವು ಅರಿತಿಲ್ಲವೇ?(60) (ಅವನು ತರ್ಕಿಸಲು ಮುಂದಾಗಿರುವುದು) ಅಲ್ಲಾಹು ಅವನಿಗೆ ಆಧಿಪತ್ಯವನ್ನು ನೀಡಿರುವ ಕಾರಣದಿಂದಾಗಿದೆ. ‘ನನ್ನ ರಬ್ ಜೀವ ಮತ್ತು ಮರಣವನ್ನು ನೀಡುವವನಾಗಿರುವನು’ ಎಂದು ಇಬ್ರಾಹೀಮ್ ಹೇಳಿದಾಗ ‘ನಾನೂ ಜೀವ ಮತ್ತು ಮರಣವನ್ನು ನೀಡುವೆನು’ ಎಂದು ಅವನು ಹೇಳಿದನು. ಇಬ್ರಾಹೀಮ್ ಹೇಳಿದರು: ‘ಅಲ್ಲಾಹು ಸೂರ್ಯನನ್ನು ಪೂರ್ವದಿಕ್ಕಿನಿಂದ ತರುತ್ತಾನೆ. ನೀನು ಅದನ್ನು ಪಶ್ಚಿಮದಿಂದ ತನ್ನಿರಿ’. ಆಗ ಆ ಸತ್ಯನಿಷೇಧಿಯು ನಿರುತ್ತರನಾದನು. ಅಕ್ರಮಿಗಳಾದ ಜನರನ್ನು ಅಲ್ಲಾಹು ಸನ್ಮಾರ್ಗಕ್ಕೆ ಸೇರಿಸಲಾರನು.
60. ಇಲ್ಲಿ ಪ್ರಸ್ತಾಪಿಸಲಾಗಿರುವುದು ಪ್ರವಾದಿ ಇಬ್ರಾಹೀಮ್(ಅ) ರವರ ಕಾಲದಲ್ಲಿ ಇರಾಕನ್ನು ಆಳುತ್ತಿದ್ದ ನಮ್ರೂದ್ ಎಂಬ ದೇವನಿಷೇಧಿ ಸ್ವೇಚ್ಛಾಧಿಪತಿಯ ಬಗ್ಗೆಯಾಗಿದೆ. (ಇಬ್ನ್ ಕಸೀರ್)
(259) ಅಥವಾ ಮೇಲ್ಛಾವಣಿಗಳೊಂದಿಗೆ ಕುಸಿದುಬಿದ್ದಿರುವ(61) ಒಂದು ಪಟ್ಟಣದ ಮೂಲಕ ಸಂಚರಿಸುತ್ತಿದ್ದ ಒಬ್ಬನಂತೆ. ಆ ವ್ಯಕ್ತಿ ಹೇಳಿದರು: ‘ನಿರ್ಜೀವವಾದ ಬಳಿಕ ಅಲ್ಲಾಹು ಇದನ್ನು ಜೀವಂತವಾಗಿಸುವುದಾದರೂ ಹೇಗೆ?’ ಆಗ ಅಲ್ಲಾಹು ಅವರನ್ನು ನೂರು ವರ್ಷಗಳ ಕಾಲ ನಿರ್ಜೀವ ಸ್ಥಿತಿಯಲ್ಲಿಟ್ಟನು. ಆಮೇಲೆ ಅವರನ್ನು ಪುನರ್ಜೀವಗೊಳಿಸಿ ಕೇಳಿದನು: ‘ತಾವು ಎಷ್ಟು ವರ್ಷ (ನಿರ್ಜೀವ ಸ್ಥಿತಿಯಲ್ಲಿ) ಕಳೆದಿರುವಿರಿ?’ ‘ಒಂದು ದಿನ ಅಥವಾ ಒಂದು ದಿನದ ಸ್ವಲ್ಪ ಭಾಗ (ಕಳೆದಿರುವೆನು)’ ಎಂದು ಅವರು ಉತ್ತರಿಸಿ ದರು. ಅವನು (ಅಲ್ಲಾಹು) ಹೇಳಿದನು: ‘ಅಲ್ಲ, ತಾವು ನೂರು ವರ್ಷ ಕಳೆದಿರುವಿರಿ, ತಮ್ಮ ಆಹಾರ-ಪಾನೀಯಗಳತ್ತ ನೋಡಿರಿ, ಅವು ಬದಲಾಗಿಲ್ಲ. ತಮ್ಮ ಕತ್ತೆಯೆಡೆಗೆ ನೋಡಿರಿ (ಅದು ಹೇಗಿದೆಯೆಂದು?) ತಮ್ಮನ್ನು ಜನರಿಗೊಂದು ದೃಷ್ಟಾಂತವಾಗಿ ಮಾಡುವ ಸಲುವಾಗಿ ನಾವಿದನ್ನು ಮಾಡಿದೆವು. ನಾವು ಆ ಮೂಳೆಗಳನ್ನು ಹೇಗೆ ಜೋಡಿಸುವೆವು ಮತ್ತು ಅವುಗಳಿಗೆ ಹೇಗೆ ಮಾಂಸವನ್ನು ಹೊದಿಯುವೆವು ಎಂದು ನೋಡಿರಿ’. ಹೀಗೆ ಅವರಿಗೆ ವಿಷಯವು ಸ್ಪಷ್ಟವಾದಾಗ ಅವರು ಹೇಳಿದರು: ‘ಖಂಡಿತವಾಗಿಯೂ ಅಲ್ಲಾಹು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನೆಂದು ನಾನು ಅರಿತುಕೊಂಡಿರುವೆನು’.
61. ಹೆಚ್ಚಿನ ವ್ಯಾಖ್ಯಾನಕಾರರ ಅಭಿಪ್ರಾಯ ಪ್ರಕಾರ ಪ್ರಸ್ತುತ ವ್ಯಕ್ತಿ ಉಝೈರ್(ಅ) ಆಗಿದ್ದರು ಮತ್ತು ಆ ಪಟ್ಟಣ ಪ್ಯಾಲಸ್ತೀನ್ ಆಗಿತ್ತು.
(260) ‘ಓ ನನ್ನ ರಬ್! ನೀನು ಮರಣ ಹೊಂದಿದವರನ್ನು ಜೀವಂತಗೊಳಿಸುವುದು ಹೇಗೆ ಎಂಬುದನ್ನು ನನಗೆ ತೋರಿಸಿಕೊಡು’ ಎಂದು ಇಬ್ರಾಹೀಮ್ ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ). ಅಲ್ಲಾಹು ಕೇಳಿದನು: ‘ತಾವು ವಿಶ್ವಾಸವಿಟ್ಟಿಲ್ಲವೇ?’ ಅವರು ಹೇಳಿದರು: ‘ವಿಶ್ವಾಸವಿಟ್ಟಿರುವೆನು, ಆದರೂ ನನ್ನ ಮನಸ್ಸಿಗೆ ಶಾಂತಿ ದೊರೆಯಲೆಂದಾಗಿದೆ’. ಅಲ್ಲಾಹು ಹೇಳಿದನು: ‘ಹಾಗಾದರೆ ತಾವು ನಾಲ್ಕು ಹಕ್ಕಿಗಳನ್ನು ಹಿಡಿದು ಅವುಗಳನ್ನು ತಮಗೆ ಹತ್ತಿರವಾಗಿಸಿರಿ.’(62) ತರುವಾಯ (ಅವುಗಳನ್ನು ತುಂಡು ತುಂಡಾಗಿಸಿ) ಅವುಗಳ ಪ್ರತಿಯೊಂದು ಭಾಗವನ್ನು ಒಂದೊಂದು ಬೆಟ್ಟದ ಮೇಲಿಡಿರಿ. ಬಳಿಕ ಅವುಗಳನ್ನು ಕೂಗಿ ಕರೆಯಿರಿ. ಅವು ತಕ್ಷಣ ತಮ್ಮ ಬಳಿಗೆ ಓಡಿ ಬರುವುವು. ಅಲ್ಲಾಹು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನೆಂಬುದನ್ನು ತಾವು ಅರಿತುಕೊಳ್ಳಿರಿ.’
62. ಹಕ್ಕಿಗಳನ್ನು ಹತ್ತಿರವಾಗಿಸಲು ಸೂಚಿಸಿದ್ದು ಅವುಗಳನ್ನು ಸೂಕ್ಷ್ಮವಾಗಿ ಬೇರ್ಪಡಿಸಿ ತಿಳಿಯುವ ಸಲುವಾಗಿದೆ.
(261) ಅಲ್ಲಾಹುವಿನ ಮಾರ್ಗದಲ್ಲಿ ತಮ್ಮ ಸಂಪತ್ತನ್ನು ವ್ಯಯಿಸುವವರನ್ನು ಒಂದು ಧಾನ್ಯಕ್ಕೆ ಹೋಲಿಸಬಹುದು. ಅದು ಏಳು ತೆನೆಗಳನ್ನು ಉತ್ಪಾದಿಸಿತು. ಪ್ರತಿಯೊಂದು ತೆನೆಯಲ್ಲೂ ನೂರು ಧಾನ್ಯಗಳಿವೆ. ಅಲ್ಲಾಹು ತಾನಿಚ್ಛಿಸುವವರಿಗೆ ಇಮ್ಮಡಿಯಾಗಿ ಕೊಡುವನು. ಅಲ್ಲಾಹು ಅಪಾರ ಸಾಮರ್ಥ್ಯವುಳ್ಳವನೂ, (ಎಲ್ಲವನ್ನೂ) ಅರಿಯುವವನೂ ಆಗಿರುವನು.
(262) ಅಲ್ಲಾಹುವಿನ ಮಾರ್ಗದಲ್ಲಿ ತಮ್ಮ ಸಂಪತ್ತನ್ನು ವ್ಯಯಿಸುವವರು, ತರುವಾಯ ಅದರ ಹಿಂದೆಯೇ ತಾವು ಖರ್ಚು ಮಾಡಿರುವುದನ್ನು ಎತ್ತಿಹೇಳುವುದಾಗಲಿ ಕಿರುಕುಳಕೊಡುವುದಾಗಲಿ ಮಾಡದವರು ಯಾರೋ ಅವರಿಗೆ ಅವರ ರಬ್‌ನ ಬಳಿಯಲ್ಲಿ ಅರ್ಹ ಪ್ರತಿಫಲವಿದೆ. ಅವರು ಏನನ್ನೂ ಭಯಪಡಬೇಕಾಗಿಲ್ಲ ಮತ್ತು ಅವರು ದುಃಖಿಸಬೇಕಾಗಿಯೂ ಬರದು.
(263) ಕೊಟ್ಟದ್ದರ ಹಿಂದೆಯೇ ಮನ ನೋಯಿಸುವ ದಾನಧರ್ಮಕ್ಕಿಂತಲೂ ಸಭ್ಯವಾದ ಮಾತು ಮತ್ತು ಕ್ಷಮೆಯು ಉತ್ತಮವಾಗಿದೆ. ಅಲ್ಲಾಹು ಸ್ವಯಂ ಪರ್ಯಾಪ್ತನೂ, ಸಹನಾಶೀಲನೂ ಆಗಿರುವನು.
(264) ಓ ಸತ್ಯವಿಶ್ವಾಸಿಗಳೇ! (ಕೊಟ್ಟದ್ದನ್ನು) ಎತ್ತಿಹೇಳುತ್ತಲೂ, ಕಿರುಕುಳಕೊಡುತ್ತಲೂ ನೀವು ನಿಮ್ಮ ದಾನಧರ್ಮಗಳನ್ನು ನಿಷ್ಫಲಗೊಳಿಸದಿರಿ. ಅಲ್ಲಾಹುವಿನಲ್ಲಿ ಮತ್ತು ಪರಲೋಕದಲ್ಲಿ ವಿಶ್ವಾಸವಿಡದೆ ಜನರಿಗೆ ತೋರಿಸುವ ಸಲುವಾಗಿ ತಮ್ಮ ಸಂಪತ್ತನ್ನು ವ್ಯಯಿಸುವವನಂತೆ ನೀವಾಗದಿರಿ. ಮೇಲ್ಭಾಗದಲ್ಲಿ ಸ್ವಲ್ಪ ಮಣ್ಣಿರುವ ಒಂದು ನುಣುಪಾದ ಬಂಡೆಯೊಂದಿಗೆ ಅವನನ್ನು ಹೋಲಿಸಬಹುದು. ಆ ಬಂಡೆಯ ಮೇಲೆ ಜಡಿಮಳೆಯೊಂದು ಸುರಿಯಿತು. ಆ ಮಳೆಯು ಅದನ್ನು ಬೋಳು ಬಂಡೆಯಾಗಿ ಪರಿವರ್ತಿಸಿತು. ಅವರು ಪರಿಶ್ರಮಿಸಿರುವ ಯಾವುದೇ ಪ್ರತಿಫಲವನ್ನು ಗಳಿಸಲೂ ಅವರಿಗೆ ಸಾಧ್ಯವಾಗದು. ಸತ್ಯನಿಷೇಧಿಗಳಾದ ಜನರನ್ನು ಅಲ್ಲಾಹು ಸನ್ಮಾರ್ಗಕ್ಕೆ ಸೇರಿಸಲಾರನು.
(265) ಅಲ್ಲಾಹುವಿನ ಸಂತೃಪ್ತಿಯನ್ನು ಅರಸುತ್ತಾ ತಮ್ಮ ಮನಸ್ಸುಗಳಲ್ಲಿ (ಸತ್ಯವಿಶ್ವಾಸವನ್ನು) ಸುಧೃಢಗೊಳಿಸಿ ಸಂಪತ್ತನ್ನು ವ್ಯಯಿಸುವವನ ಉದಾಹರಣೆಯು ಎತ್ತರ ಪ್ರದೇಶದಲ್ಲಿರುವ ಒಂದು ತೋಟದಂತಿದೆ. ಅದರ ಮೇಲೆ ಜಡಿಮಳೆಯೊಂದು ಸುರಿದಾಗ ಅದು ತನ್ನ ಫಲವನ್ನು ದ್ವಿಗುಣಗೊಳಿಸಿತು. ಇನ್ನು ಜಡಿಮಳೆಯು ಸುರಿಯದಿದ್ದರೂ ಒಂದು ತುಂತುರು ಮಳೆ ಅದಕ್ಕೆ ಸಾಕಾಗುವುದು. ಅಲ್ಲಾಹು ನೀವು ಮಾಡುತ್ತಿರುವವುಗಳನ್ನು ವೀಕ್ಷಿಸುವವನಾಗಿರುವನು.
(266) ನಿಮ್ಮಲ್ಲೊಬ್ಬನಿಗೆ ಖರ್ಜೂರದ ಮರಗಳು ಮತ್ತು ದ್ರಾಕ್ಷಿ ಬಳ್ಳಿಗಳಿರುವ ಒಂದು ತೋಟವಿದೆಯೆಂದು ಭಾವಿಸಿರಿ. ಅವುಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿವೆ. ಅದರಲ್ಲಿ ಅವನಿಗೆ ಎಲ್ಲ ವಿಧದ ಫಲವರ್ಗಗಳಿವೆ. ಅವನಿಗೆ ವೃದ್ಧಾಪ್ಯವೂ ಬಾಧಿಸಿದೆ. ಬಲಹೀನರಾದ ಹಲವು ಮಕ್ಕಳೂ ಅವನಿಗಿದ್ದಾರೆ. ಹೀಗಿರುವಾಗ ಅಗ್ನಿಯನ್ನು ಹೊಂದಿರುವ ಒಂದು ಚಂಡಮಾರುತವು ಆ ತೋಟಕ್ಕೆ ತಗುಲಿ ಅದು ಸುಟ್ಟುಹೋಗುತ್ತದೆ.(63) ಇಂತಹ ಒಂದು ಸ್ಥಿತಿಯನ್ನು ಹೊಂದಲು ನಿಮ್ಮ ಪೈಕಿ ಯಾರಾದರೂ ಆಶಿಸುವರೇ? ನೀವು ಚಿಂತಿಸಿ ಗ್ರಹಿಸುವುದಕ್ಕಾಗಿ ಹೀಗೆ ಅಲ್ಲಾಹು ನಿಮಗೆ ದೃಷ್ಟಾಂತಗಳನ್ನು ವಿವರಿಸಿಕೊಡುತ್ತಿರುವನು.
63. ತೋರಿಕೆಗಾಗಿ ಕೊಡುವ ಮತ್ತು ಕೊಟ್ಟದ್ದನ್ನು ಎತ್ತಿ ಹೇಳುವ ದುರ್ಗುಣವು ಒಂದು ಅಗ್ನಿ ಮಾರುತದಂತೆ ದಾನಧರ್ಮಗಳ ಫಲವನ್ನು ಸುಟ್ಟುಹಾಕುತ್ತದೆ.
(267) ಓ ಸತ್ಯವಿಶ್ವಾಸಿಗಳೇ! ನೀವು ಸಂಪಾದಿಸಿದ ಉತ್ತಮ ವಸ್ತುಗಳಿಂದ ಮತ್ತು ನಾವು ನಿಮಗೆ ಭೂಮಿಯಿಂದ ಉತ್ಪಾದಿಸಿಕೊಟ್ಟಿರುವುದರಿಂದ ನೀವು ವ್ಯಯಿಸಿರಿ. ಕಣ್ಣುಮುಚ್ಚಿಕೊಂಡೇ ವಿನಾ ನೀವು ಸ್ವೀಕರಿಸದಂತಹ ಕೆಟ್ಟ ವಸ್ತುಗಳನ್ನು (ದಾನ ಧರ್ಮಗಳಾಗಿ) ವ್ಯಯಿಸಲು ತೆಗೆದಿರಿಸದಿರಿ. ಅಲ್ಲಾಹು ಸ್ವಯಂ ಪರ್ಯಾಪ್ತನೂ ಸ್ತುತ್ಯರ್ಹನೂ ಆಗಿರುವನೆಂಬುದನ್ನು ಅರಿತುಕೊಳ್ಳಿರಿ.
(268) ಸೈತಾನನು ನಿಮಗೆ ಬಡತನದ ಕುರಿತು ಭಯಪಡಿಸುವನು ಮತ್ತು ನಿಮ್ಮನ್ನು ನೀಚಕೃತ್ಯಗಳಿಗೆ ಪ್ರೇರೇಪಿಸುವನು. ಆದರೆ ಅಲ್ಲಾಹು ನಿಮ್ಮೊಂದಿಗೆ ತನ್ನ ವತಿಯ ಪಾಪಮುಕ್ತಿ ಮತ್ತು ಔದಾರ್ಯವನ್ನು ವಾಗ್ದಾನ ಮಾಡುತ್ತಿರುವನು. ಅಲ್ಲಾಹು ಅಪಾರ ಸಾಮರ್ಥ್ಯವುಳ್ಳವನೂ (ಎಲ್ಲವನ್ನು) ಅರಿಯುವವನೂ ಆಗಿರುವನು.
(269) ಅವನು ತಾನಿಚ್ಛಿಸುವವರಿಗೆ (ನೈಜ) ಜ್ಞಾನವನ್ನು ನೀಡುವನು. ಯಾರಿಗೆ (ನೈಜ) ಜ್ಞಾನ ನೀಡಲಾಗಿದೆಯೋ ಅವನಿಗೆ (ತನ್ಮೂಲಕ) ಅತ್ಯಧಿಕ ಒಳಿತುಗಳನ್ನು ನೀಡಲಾಗಿದೆ. ಆದರೆ ಬುದ್ಧಿವಂತರು ಮಾತ್ರ ಚಿಂತಿಸಿ ಗ್ರಹಿಸುವರು.
(270) ನೀವೇನೇ ವ್ಯಯಿಸಿದರೂ ಮತ್ತು ಏನೇ ಹರಕೆ ಹೊತ್ತರೂ ಖಂಡಿತವಾಗಿಯೂ ಅಲ್ಲಾಹು ಅದನ್ನು ಅರಿಯುವನು. ಅಕ್ರಮಿಗಳಿಗೆ(64) ಸಹಾಯಕರಾಗಿ ಯಾರೂ ಇರಲಾರರು.
64. ಜಿಪುಣತೆ, ಸ್ವಾರ್ಥ ಹಾಗೂ ದುರ್ವ್ಯಯಗಳೆಲ್ಲವೂ ಅಕ್ರಮವಾಗಿವೆಯೆಂದು ಈ ಸೂಕ್ತಿಯು ಸೂಚಿಸುತ್ತದೆ.
(271) ನೀವು ಬಹಿರಂಗವಾಗಿ ದಾನಧರ್ಮ ಮಾಡುವುದಾದರೆ ಅದು ಒಳ್ಳೆಯದೇ ಆಗಿದೆ. ಆದರೆ ನೀವು ಅದನ್ನು ಗೋಪ್ಯವಾಗಿಡುವುದಾದರೆ ಮತ್ತು ಬಡವರಿಗೆ ನೀಡುವುದಾದರೆ(65) ಅದು ನಿಮ್ಮ ಪಾಲಿಗೆ ಅತ್ಯುತ್ತಮವಾಗಿದೆ. ನಿಮ್ಮ ಕೆಡುಕುಗಳ ಪೈಕಿ ಹಲವನ್ನು ಅದು ಅಳಿಸಿಹಾಕುವುದು. ಅಲ್ಲಾಹು ನೀವು ಮಾಡುತ್ತಿರುವುದರ ಬಗ್ಗೆ ಸೂಕ್ಷ್ಮವಾಗಿ ಅರಿಯುವವನಾಗಿರುವನು.
65. ಬಹಿರಂಗವಾಗಿ ದಾನಧರ್ಮ ಮಾಡುವಾಗ ಹೆಚ್ಚಿನ ಸಂದರ್ಭಗಳಲ್ಲಿ ಕೊಡುವವನಿಗೆ ಅಹಂಭಾವವೂ, ಪಡೆಯುವವನಿಗೆ ಕೀಳರಿಮೆಯೂ ಉಂಟಾಗುತ್ತದೆ. ಸ್ವಾಭಿಮಾನವಿರುವವರಾರೂ ಬಹಿರಂಗ ದಾನವನ್ನು ಸ್ವೀಕರಿಸಲು ಮುಂದೆ ಬರಲಾರರು. ನೈಜ ಹಕ್ಕುದಾರರನ್ನು ಹುಡುಕಿ ಗುಪ್ತವಾಗಿ ನೀಡುವ ದಾನವು ಕೊಡುವವನಿಗೆ ಮತ್ತು ಪಡೆಯುವವನಿಗೆ ಸಮಾನವಾದ ಸಂತೃಪ್ತಿ ಮತ್ತು ಗೌರವವನ್ನು ನೀಡುತ್ತದೆ.
(272) ಅವರನ್ನು ಸನ್ಮಾರ್ಗಕ್ಕೆ ಸೇರಿಸುವ ಹೊಣೆ ತಮ್ಮ ಮೇಲಿಲ್ಲ. ಆದರೆ ಅಲ್ಲಾಹು ಅವನಿಚ್ಛಿಸುವವರನ್ನು ಸನ್ಮಾರ್ಗಕ್ಕೆ ಸೇರಿಸುವನು. ನೀವು ಉತ್ತಮವಾಗಿರುವ ಏನನ್ನು ವ್ಯಯಿಸಿದರೂ ಅದು ನಿಮ್ಮ ಒಳಿತಿಗೇ ಆಗಿದೆ. ನೀವು ವ್ಯಯಿಸುವುದು ಅಲ್ಲಾಹುವಿನ ಸಂತೃಪ್ತಿಯನ್ನು ಅರಸಿಕೊಂಡು ಮಾತ್ರವಾಗಿರಬೇಕಾಗಿದೆ. ನೀವು ಉತ್ತಮವಾಗಿರುವ ಏನನ್ನು ವ್ಯಯಿಸಿದರೂ ಅದರ ಪ್ರತಿಫಲವನ್ನು ನಿಮಗೆ ಪೂರ್ಣವಾಗಿ ನೀಡಲಾಗುವುದು. ನಿಮ್ಮೊಂದಿಗೆ ಕಿಂಚಿತ್ತೂ ಅನ್ಯಾಯವೆಸಗಲಾಗದು.
(273) ಭೂಮಿಯಲ್ಲಿ ಸಂಚರಿಸಿ ಜೀವನಾಧಾರಗಳನ್ನು ಅರಸಲು ಸಾಧ್ಯವಿಲ್ಲದ ವಿಧದಲ್ಲಿ ಅಲ್ಲಾಹುವಿನ ಮಾರ್ಗದಲ್ಲಿ ಮಗ್ನರಾಗಿರುವ ಬಡವರಿಗಾಗಿ (ವ್ಯಯಿಸಿರಿ). (ಅವರ) ಸಭ್ಯತೆಯನ್ನು ಕಂಡು (ಅವರ ಬಗ್ಗೆ) ಅರಿವಿಲ್ಲದವನು ಅವರನ್ನು ಧನಿಕರೆಂದು ಭಾವಿಸುವನು. ಆದರೆ ಅವರ ಲಕ್ಷಣದಿಂದ ತಮಗೆ ಅವರನ್ನು ಗುರುತಿಸಬಹುದು. ಅವರು ಜನರೊಂದಿಗೆ ಕಾಡಿಬೇಡುವವರಲ್ಲ. ನೀವು ಉತ್ತಮವಾಗಿರುವ ಏನನ್ನು ಖರ್ಚು ಮಾಡಿದರೂ ಖಂಡಿತವಾಗಿಯೂ ಅಲ್ಲಾಹು ಅದನ್ನು ಅರಿಯುವವನಾಗಿರುವನು.
(274) ಹಗಲು ಮತ್ತು ರಾತ್ರಿ ಗೋಪ್ಯವಾಗಿ ಮತ್ತು ಬಹಿರಂಗವಾಗಿ ತಮ್ಮ ಸಂಪತ್ತನ್ನು ವ್ಯಯಿಸುವವರಿಗೆ ಅವರ ರಬ್‌ನ ಬಳಿ ಅರ್ಹ ಪ್ರತಿಫಲವಿದೆ. ಅವರು ಏನನ್ನೂ ಭಯಪಡಬೇಕಾಗಿಲ್ಲ ಮತ್ತು ಅವರು ದುಃಖಿಸಬೇಕಾಗಿಯೂ ಬರದು.
(275) ಬಡ್ಡಿ ತಿನ್ನುವವರು ಸೈತಾನನ ಬಾಧೆಯಿಂದ ಮಗುಚಿ ಬಿದ್ದವನು ಎದ್ದೇಳುವಂತೆಯೇ ವಿನಾ ಎದ್ದೇಳಲಾರರು.(66) ಅದು ‘ವ್ಯಾಪಾರವು ಬಡ್ಡಿಯಂತೆಯೇ ಆಗಿದೆ’ ಎಂದು ಅವರು ಹೇಳಿರುವುದರ ಫಲವಾಗಿದೆ. ಆದರೆ ಅಲ್ಲಾಹು ವ್ಯಾಪಾರವನ್ನು ಧರ್ಮಸಮ್ಮತಗೊಳಿಸಿರುವನು ಮತ್ತು ಬಡ್ಡಿಯನ್ನು ನಿಷಿದ್ಧಗೊಳಿಸಿರುವನು. ಆದ್ದರಿಂದ ತನ್ನ ರಬ್‌ನ ಉಪದೇಶವು ತಲುಪಿದ ಬಳಿಕ (ಅದನ್ನು ಅನುಸರಿಸಿ) ಯಾರಾದರೂ (ಬಡ್ಡಿಯನ್ನು) ಸ್ಥಗಿತಗೊಳಿಸಿದರೆ ಅವನು ಮುಂಚೆ ಪಡೆದದ್ದು ಅವನಿಗಿರುವುದೇ ಆಗಿದೆ. ಅವನ ವಿಷಯವು ಅಲ್ಲಾಹುವಿನ ತೀರ್ಮಾನಕ್ಕೆ ಬಿಟ್ಟದ್ದಾಗಿದೆ. ಇನ್ನು ಯಾರಾದರೂ (ಪುನಃ ಬಡ್ಡಿ ವ್ಯವಹಾರದತ್ತ) ಮರಳುವುದಾದರೆ ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
66. ಬಡ್ಡಿ ವ್ಯವಹಾರ ಮಾಡುವವರಿಗೆ ಪುನರುತ್ಥಾನ ದಿನದಂದು ಅಲ್ಲಾಹು ತಂದೊಡ್ಡುವ ಸ್ಥಿತಿಯನ್ನು ಈ ಉದಾಹರಣೆಯ ಮೂಲಕ ಸೂಚಿಸಲಾಗಿದೆಯೆಂದು ಅನೇಕ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿರುವರು.
(276) ಅಲ್ಲಾಹು ಬಡ್ಡಿಯನ್ನು ಅಳಿಸುವನು ಮತ್ತು ದಾನ ಧರ್ಮಗಳನ್ನು ಪೋಷಿಸುವನು. ಕೃತಘ್ನನಾದ ಯಾವ ಪಾಪಿಯನ್ನೂ ಅಲ್ಲಾಹು ಇಷ್ಟಪಡಲಾರನು.
(277) ವಿಶ್ವಾಸವಿಡುವವರು, ಸತ್ಕರ್ಮಗೈಯುವವರು, ನಮಾಝ್ ಸಂಸ್ಥಾಪಿಸುವವರು ಮತ್ತು ಝಕಾತ್ ನೀಡುವವರು ಯಾರೋ ಅವರಿಗೆ ಖಂಡಿತವಾಗಿಯೂ ಅವರ ರಬ್‌ನ ಬಳಿ ಅರ್ಹ ಪ್ರತಿಫಲವಿದೆ. ಅವರು ಏನನ್ನೂ ಭಯಪಡಬೇಕಾಗಿಲ್ಲ ಮತ್ತು ಅವರು ದುಃಖಿಸಬೇಕಾಗಿಯೂ ಬರದು.
(278) ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು ಬಡ್ಡಿಯ ಪೈಕಿ ಬರಲು ಬಾಕಿಯಿರುವುದನ್ನು ಬಿಟ್ಟು ಬಿಡಿರಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ!
(279) ನೀವು ಹಾಗೆ ಮಾಡುವುದಿಲ್ಲವೆಂದಾದರೆ ಅಲ್ಲಾಹು ಮತ್ತು ಅವನ ಸಂದೇಶವಾಹಕರ ಕಡೆಯಿಂದ (ನಿಮ್ಮ ಮೇಲಿರುವ) ಯುದ್ಧ ಘೋಷಣೆಯ ಬಗ್ಗೆ ಅರಿತುಕೊಳ್ಳಿರಿ. ನೀವು ಪಶ್ಚಾತ್ತಾಪಪಟ್ಟು ಮರಳುವುದಾದರೆ ನಿಮ್ಮ ಬಂಡವಾಳವು ನಿಮಗೆ ಸಿಗುವುದು. ನೀವು ಅನ್ಯಾಯವೆಸಗದಿರಿ ಮತ್ತು ನಿಮಗೂ ಅನ್ಯಾಯವಾಗದಿರಲಿ.
(280) ಇನ್ನು (ಸಾಲಗಾರರ ಪೈಕಿ) ಯಾರಾದರೂ ಇಕ್ಕಟ್ಟಿನಲ್ಲಿದ್ದರೆ (ಅವನಿಗೆ) ನಿರಾಳತೆ ದೊರೆಯುವ ತನಕ ಸಮಯಾವಕಾಶವನ್ನು ನೀಡಿರಿ. ನೀವು ಅರಿವುಳ್ಳವರಾಗಿದ್ದರೆ ದಾನವಾಗಿ (ಬಿಟ್ಟು) ಬಿಡುವುದು ನಿಮಗೆ ಹೆಚ್ಚು ಉತ್ತಮವಾಗಿದೆ.
(281) ನಿಮ್ಮನ್ನು ಅಲ್ಲಾಹುವಿನೆಡೆಗೆ ಮರಳಿಸಲಾಗುವ ಒಂದು ದಿನವನ್ನು ನೀವು ಭಯಪಡಿರಿ. ತರುವಾಯ ಪ್ರತಿಯೊಬ್ಬನಿಗೂ ಅವನು ಮಾಡಿರುವುದರ ಪ್ರತಿಫಲವನ್ನು ಪೂರ್ಣವಾಗಿ ನೀಡಲಾಗುವುದು. ಅವರೊಂದಿಗೆ (ಕಿಂಚಿತ್ತೂ) ಅನ್ಯಾಯವೆಸಗಲಾಗದು.
(282) ಓ ಸತ್ಯವಿಶ್ವಾಸಿಗಳೇ! ಒಂದು ನಿಶ್ಚಿತಾವಧಿ ನಿಶ್ಚಯಿಸಿ ನೀವು ಪರಸ್ಪರ ಸಾಲ ವ್ಯವಹಾರ ಮಾಡಿದರೆ ಅದನ್ನು ಬರೆದಿಟ್ಟುಕೊಳ್ಳಿರಿ. ಒಬ್ಬ ಬರಹಗಾರನು ನಿಮ್ಮ ಮಧ್ಯೆ ನ್ಯಾಯಬದ್ಧವಾಗಿ ಅದನ್ನು ಬರೆದಿಡಲಿ. ಯಾವುದೇ ಬರಹಗಾರನೂ ಅವನಿಗೆ ಅಲ್ಲಾಹು ಕಲಿಸಿಕೊಟ್ಟಿರುವ ಪ್ರಕಾರ ಬರೆಯಲು ನಿರಾಕರಿಸದಿರಲಿ. ಅವನು ಅದನ್ನು ಬರೆದಿಡಲಿ ಮತ್ತು ಸಾಲಗಾರನು (ಬರೆದಿಡಬೇಕಾದ ವಾಕ್ಯವನ್ನು) ಹೇಳಿ ಬರೆಯಿಸಲಿ. ಅವನು ತನ್ನ ರಬ್ ಆದ ಅಲ್ಲಾಹುವನ್ನು ಭಯಪಡಲಿ ಮತ್ತು (ಬಾಧ್ಯತೆಯಿಂದ) ಏನನ್ನೂ ಕಡಿತಗೊಳಿಸದಿರಲಿ. ಇನ್ನು ಸಾಲಗಾರನು ವಿವೇಚನೆಯಿಲ್ಲದವನೋ ಬಲಹೀನನೋ ಆಗಿದ್ದರೆ ಅಥವಾ ವಾಕ್ಯ ಹೇಳಿ ಬರೆಯಿಸಲು ಅಸಮರ್ಥನಾಗಿದ್ದರೆ, ಅವನಿಗಾಗಿ ಅವನ ಪೋಷಕರು ನ್ಯಾಯಬದ್ಧವಾಗಿ (ವಾಕ್ಯವನ್ನು) ಹೇಳಿ ಬರೆಯಿಸಲಿ. ನಿಮ್ಮ ಪೈಕಿ ಇಬ್ಬರು ಪುರುಷರನ್ನು ಸಾಕ್ಷಿ ನಿಲ್ಲಿಸಿರಿ. ಇನ್ನು ಇಬ್ಬರೂ ಪುರುಷರಲ್ಲದಿದ್ದರೆ ನೀವು ಇಷ್ಟಪಡುವ ಸಾಕ್ಷಿಗಳ ಪೈಕಿ ಒಬ್ಬ ಪುರುಷ ಮತ್ತು ಇಬ್ಬರು ಸ್ತ್ರೀಯರು ಸಾಕು. ಅವರ ಪೈಕಿ ಒಬ್ಬಳಿಗೆ ಪ್ರಮಾದವುಂಟಾದರೆ ಇನ್ನೊಬ್ಬಳು ಆಕೆಯನ್ನು ನೆನಪಿಸುವ ಸಲುವಾಗಿ. (ಸಾಕ್ಷ್ಯಕ್ಕಾಗಿ) ಆಹ್ವಾನಿಸಲಾದಾಗ ಸಾಕ್ಷಿಗಳು ನಿರಾಕರಿಸದಿರಲಿ. ವ್ಯವಹಾರವು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಅದರ ಅವಧಿ ತೋರಿಸಿ ಅದನ್ನು ಬರೆದಿಡಲು ಉದಾಸೀನ ಮಾಡದಿರಿ. ಇದು ಅಲ್ಲಾಹುವಿನ ಬಳಿ ಅತ್ಯಂತ ನ್ಯಾಯಬದ್ಧವೂ, ಸಾಕ್ಷ್ಯಕ್ಕೆ ಹೆಚ್ಚು ಬಲ ನೀಡುವಂತದ್ದೂ ಆಗಿದೆ. ನಿಮಗೆ ಅನುಮಾನವುಂಟಾಗದಿರಲು ಹೆಚ್ಚು ಸೂಕ್ತವೂ ಆಗಿದೆ. ಆದರೆ ನೀವು ಪರಸ್ಪರ ನಡೆಸುವ ನಗದು ವ್ಯವಹಾರಗಳು ಇದರಿಂದ ಹೊರತಾಗಿವೆ. ಅದನ್ನು ಬರೆದಿಡದಿದ್ದರೆ ನಿಮಗೆ ದೋಷವಿಲ್ಲ. ಆದರೆ ನೀವು ಪರಸ್ಪರ ಕ್ರಯ-ವಿಕ್ರಯ ಮಾಡುವಾಗ ಸಾಕ್ಷಿ ನಿಲ್ಲಿಸಿರಿ. ಬರಹಗಾರನಾಗಲಿ, ಸಾಕ್ಷಿಯಾಗಲಿ ಸತಾಯಿಸಲ್ಪಡಬಾರದು. ನೀವು ಹಾಗೆ ಮಾಡಿದರೆ ಅದು ನಿಮ್ಮ ಧಿಕ್ಕಾರವಾಗುವುದು. ನೀವು ಅಲ್ಲಾಹುವನ್ನು ಭಯಪಡಿರಿ. ಅಲ್ಲಾಹು ನಿಮಗೆ ಕಲಿಸಿಕೊಡುತ್ತಿರುವನು. ಅಲ್ಲಾಹು ಸರ್ವ ವಿಷಯಗಳ ಬಗ್ಗೆಯೂ ಅರಿವುಳ್ಳವನಾಗಿರುವನು.
(283) ನೀವು ಯಾತ್ರೆಯಲ್ಲಿದ್ದು ಒಬ್ಬ ಬರಹಗಾರನು ನಿಮಗೆ ಸಿಗದಿದ್ದರೆ, ಅಡವು ವಸ್ತುಗಳನ್ನು ವಶಕ್ಕೆ ಒಪ್ಪಿಸಿರಿ. ನಿಮ್ಮ ಪೈಕಿ ಒಬ್ಬನು ಇನ್ನೊಬ್ಬನಿಗೆ ವಿಶ್ವಾಸದ ಮೇಲೆ ಏನಾದರೂ ಒಪ್ಪಿಸಿದರೆ ನಂಬಿಕೆಗೆ ಪಾತ್ರನಾದವನು ತನ್ನ ಪ್ರಾಮಾಣಿಕತೆಯನ್ನು ಈಡೇರಿಸಲಿ ಮತ್ತು ತನ್ನ ರಬ್ ಆದ ಅಲ್ಲಾಹುವನ್ನು ಭಯಪಡಲಿ. ನೀವು ಸಾಕ್ಷ್ಯವನ್ನು ಬಚ್ಚಿಡದಿರಿ. ಯಾರು ಅದನ್ನು ಬಚ್ಚಿಡುವನೋ ಅವನ ಹೃದಯವು ಪಾಪಭರಿತವಾಗಿದೆ. ಅಲ್ಲಾಹು ನೀವು ಮಾಡುತ್ತಿರುವುದೆಲ್ಲವನ್ನೂ ಅರಿಯುವವನಾಗಿರುವನು.
(284) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹುವಿನದ್ದಾಗಿವೆ. ನೀವು ನಿಮ್ಮ ಮನಸ್ಸುಗಳಲ್ಲಿರುವುದನ್ನು ಬಹಿರಂಗಗೊಳಿಸಿದರೂ ಅಥವಾ ಮರೆಮಾಚಿದರೂ ಅಲ್ಲಾಹು ಅದರ ಕುರಿತು ನಿಮ್ಮನ್ನು ವಿಚಾರಣೆ ಮಾಡುವನು. ತರುವಾಯ ತಾನಿಚ್ಛಿಸುವವರಿಗೆ ಅವನು ಕ್ಷಮಿಸುವನು ಮತ್ತು ತಾನಿಚ್ಛಿಸುವವರನ್ನು ಶಿಕ್ಷಿಸುವನು. ಅಲ್ಲಾಹು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರು ವನು.
(285) ತಮ್ಮ ರಬ್‌ನ ವತಿಯಿಂದ ತಮಗೆ ಅವತೀರ್ಣಗೊಳಿಸಲಾಗಿರುವುದರಲ್ಲಿ ಸಂದೇಶವಾಹಕರು ವಿಶ್ವಾಸವಿಟ್ಟಿರುವರು. (ತರುವಾಯ) ಸತ್ಯವಿಶ್ವಾಸಿಗಳು ಸಹ ವಿಶ್ವಾಸವಿಟ್ಟಿರುವರು. ಅವರೆಲ್ಲರೂ ಅಲ್ಲಾಹುವಿನಲ್ಲಿ, ಅವನ ಮಲಕ್‍ಗಳಲ್ಲಿ, ಅವನ ಗ್ರಂಥಗಳಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಟ್ಟಿರುವರು. ‘ಅವನ ಸಂದೇಶವಾಹಕರ ಪೈಕಿ ಯಾರ ನಡುವೆಯೂ ನಾವು ವ್ಯತ್ಯಾಸ ಕಲ್ಪಿಸಲಾರೆವು’ (ಎಂಬುದು ಅವರ ನಿಲುವಾಗಿದೆ). ‘ನಾವು ಆಲಿಸಿರುವೆವು ಮತ್ತು ಅನುಸರಿಸಿರುವೆವು, ನಮ್ಮ ಪ್ರಭೂ! ನಮಗೆ ಪಾಪಮುಕ್ತಿಯನ್ನು ದಯಪಾಲಿಸು, (ನಮ್ಮ) ಮರಳುವಿಕೆಯು ನಿನ್ನ ಬಳಿಗೇ ಆಗಿರುವುದು’ ಎಂದು ಅವರು ಹೇಳುವರು.
(286) ಅಲ್ಲಾಹು ಯಾರನ್ನೂ ಅವನ ಸಾಮರ್ಥ್ಯಕ್ಕೆ ಮೀರಿರುವುದನ್ನು ಮಾಡಲು ಬಲವಂತಪಡಿಸಲಾರನು. ಅವನು ಸಂಪಾದಿಸಿರುವುದರ ಪ್ರತಿಫಲವು ಸ್ವತಃ ಅವನಿಗೇ ಆಗಿದೆ. ಅವನು ಸಂಪಾದಿಸಿರುವುದರ ದುಷ್ಫಲವು ಸ್ವತಃ ಅವನ ಮೇಲೆಯೇ ಆಗಿದೆ. ‘ಓ ನಮ್ಮ ರಬ್! ನಾವು ಮರೆತರೆ ಅಥವಾ ಪ್ರಮಾದವೆಸಗಿದರೆ ನಮ್ಮನ್ನು ಶಿಕ್ಷಿಸದಿರು. ಓ ನಮ್ಮ ರಬ್! ನಮ್ಮ ಪೂರ್ವಿಕರ ಮೇಲೆ ನೀನು ಹೊರಿಸಿದಂತಹ ಭಾರವನ್ನು ನಮ್ಮ ಮೇಲೆ ಹೊರಿಸದಿರು. ಓ ನಮ್ಮ ರಬ್! ನಮಗೆ ಸಾಮರ್ಥ್ಯವಿಲ್ಲದಿರುವುದನ್ನು ನಮ್ಮ ಮೇಲೆ ಹೊರಿಸದಿರು. ನಮ್ಮನ್ನು ಕ್ಷಮಿಸು, ನಮ್ಮನ್ನು ಮನ್ನಿಸು ಮತ್ತು ನಮ್ಮೊಂದಿಗೆ ದಯೆ ತೋರು. ನೀನು ನಮ್ಮ ರಕ್ಷಕನಾಗಿರುವೆ. ಆದ್ದರಿಂದ ಸತ್ಯನಿಷೇಧಿಗಳಾದ ಜನರ ವಿರುದ್ಧ ನಮಗೆ ಸಹಾಯವನ್ನು ನೀಡು’.