(1) ಜನರಿಗೆ ಅವರ ವಿಚಾರಣೆಯು ಸನ್ನಿಹಿತವಾಗಿದೆ. ಅವರಂತೂ ಅಲಕ್ಷ್ಯರಾಗಿ ವಿಮುಖರಾಗುತ್ತಿರುವರು.
(2) ತಮ್ಮ ರಬ್‌ನ ಕಡೆಯ ಯಾವುದೇ ಹೊಸ ಬೋಧನೆಯು ಅವರೆಡೆಗೆ ಬಂದಾಗಲೆಲ್ಲ ಅವರು ಆಟ ಆಡುವವರಾಗಿಯೇ ವಿನಾ ಆಲಿಸುತ್ತಿರಲಿಲ್ಲ.
(3) ಅವರ ಹೃದಯಗಳು ಅಲಕ್ಷ್ಯವಾಗಿವೆ. ಅಕ್ರಮಿಗಳು ಪರಸ್ಪರ ರಹಸ್ಯವಾಗಿ ಪಿಸುಗುಡುತ್ತಾ ಹೇಳುವರು: “ಇವರು ನಿಮ್ಮಂತಿರುವ ಒಬ್ಬ ಮನುಷ್ಯರಲ್ಲದೆ ಇನ್ನೇನಾದರೂ ಆಗಿರುವರೇ? ನೀವು ದೃಷ್ಟಿಯುಳ್ಳವರಾಗಿದ್ದೂ ಸಹ ಮಾಂತ್ರಿಕತೆಯ ಬಳಿಗೆ ತೆರಳುತ್ತಿದ್ದೀರಾ?”
(4) ಅವರು (ಪ್ರವಾದಿ) ಹೇಳಿದರು: “ಆಕಾಶದಲ್ಲಿ ಮತ್ತು ಭೂಮಿಯಲ್ಲಿ ಹೇಳಲಾಗುವ ಮಾತನ್ನು ನನ್ನ ರಬ್ ಅರಿಯುವನು. ಅವನು ಎಲ್ಲವನ್ನು ಆಲಿಸುವವನೂ ಆಗಿರುವನು”.
(5) ಅಲ್ಲ; ಅವರು ಹೇಳಿದರು: “ಇವು (ಕುರ್‌ಆನ್ ಸೂಕ್ತಿಗಳು) ಹಾಳು ಕನಸುಗಳ ವೃತ್ತಾಂತಗಳಾಗಿವೆ. ಅಲ್ಲ; ಅದು ಅವರು (ಪ್ರವಾದಿ) ಸ್ವತಃ ರಚಿಸಿದ್ದಾಗಿದೆ. ಅಲ್ಲ, ಅವರೊಬ್ಬ ಕವಿಯಾಗಿರುವರು. ಆದರೆ, (ಅವರೇನಾದರೂ ಪ್ರವಾದಿಯಾಗಿದ್ದರೆ) ಪೂರ್ವ ಪ್ರವಾದಿಗಳು ಯಾವ ದೃಷ್ಟಾಂತದೊಂದಿಗೆ ಕಳುಹಿಸಲ್ಪಟ್ಟಿದ್ದರೋ ಅಂತಹ ಒಂದನ್ನು ಇವರೂ ತಂದು ತೋರಿಸಲಿ”.
(6) ಇವರಿಗಿಂತ ಮುಂಚೆ ನಾವು ನಾಶ ಮಾಡಿದ ಯಾವುದೇ ನಾಡಿನವರೂ ವಿಶ್ವಾಸವಿಡಲಿಲ್ಲ. ಹೀಗಿರುವಾಗ ಇವರು ವಿಶ್ವಾಸವಿಡುವರೇ?(670)
670. ಯಾವುದೇ ನಾಡಿಗೂ ಪ್ರವಾದಿಗಳನ್ನು ಕಳುಹಿಸಲಾದಾಗಲೆಲ್ಲ ಅಲ್ಲಿನ ನಿವಾಸಿಗಳ ಪೈಕಿ ಕೆಲವೇ ಮಂದಿ ಮಾತ್ರ ಅವಿರೋಧವಾಗಿ ಸತ್ಯವನ್ನು ಸ್ವೀಕರಿಸಲು ಮುಂದಾಗುತ್ತಿದ್ದರು. ಈ ಕಾರಣದಿಂದ ಆ ಪ್ರದೇಶವು ಅಲ್ಲಾಹುವಿನ ಶಿಕ್ಷೆಗೆ ಗುರಿಯಾಗುತ್ತಿತ್ತು. ಅಲ್ಲಾಹು ಸತ್ಯವಿಶ್ವಾಸಿಗಳನ್ನು ಆ ಶಿಕ್ಷೆಯಿಂದ ರಕ್ಷಿಸುತ್ತಿದ್ದನು.
(7) ತಮಗಿಂತ ಮುಂಚೆ ಮನುಷ್ಯರಾಗಿರುವವರನ್ನೇ ವಿನಾ ಇತರ ಯಾರನ್ನೂ ನಾವು ಪ್ರವಾದಿಯಾಗಿ ಕಳುಹಿಸಿಲ್ಲ. ಅವರಿಗೆ ನಾವು ದಿವ್ಯಸಂದೇಶವನ್ನು ನೀಡುವೆವು. ನಿಮಗೆ ಅರಿವಿಲ್ಲವೆಂದಾದರೆ ಗ್ರಂಥದವರೊಂದಿಗೆ ಕೇಳಿ ನೋಡಿರಿ.
(8) ಅವರನ್ನು (ಪ್ರವಾದಿಗಳನ್ನು) ನಾವು ಆಹಾರ ಸೇವಿಸದ ಶರೀರಗಳನ್ನಾಗಿ ಮಾಡಿಲ್ಲ. ಅವರು ಶಾಶ್ವತರೂ ಆಗಿರಲಿಲ್ಲ.
(9) ತರುವಾಯ ಅವರೊಂದಿಗಿರುವ ವಾಗ್ದಾನದಲ್ಲಿ ನಾವು ಸತ್ಯಸಂಧತೆಯನ್ನು ಪಾಲಿಸಿದೆವು. ಅವರನ್ನು ಮತ್ತು ನಾವಿಚ್ಛಿಸಿದವರನ್ನು ನಾವು ರಕ್ಷಿಸಿದೆವು. ಹದ್ದುಮೀರಿದವರನ್ನು ನಾವು ನಾಶ ಮಾಡಿದೆವು.
(10) ಖಂಡಿತವಾಗಿಯೂ ನಾವು ನಿಮಗೊಂದು ಗ್ರಂಥವನ್ನು ಅವತೀರ್ಣಗೊಳಿಸಿರುವೆವು. ಅದರಲ್ಲಿ ನಿಮಗೆ ಉಪದೇಶವಿದೆ. ಆದರೂ ನೀವು ಚಿಂತಿಸುವುದಿಲ್ಲವೇ?
(11) ಅಕ್ರಮ ನಿರತವಾಗಿದ್ದ ಎಷ್ಟೋ ನಾಡುಗಳನ್ನು ನಾವು ನಾಶ ಮಾಡಿರುವೆವು. ಅದರ ಬಳಿಕ ನಾವು ಬೇರೊಂದು ಜನತೆಯನ್ನು ಬೆಳೆಸಿದೆವು.
(12) ಹೀಗೆ ಅವರಿಗೆ ನಮ್ಮ ಶಿಕ್ಷೆಯ ಅನುಭವವಾದಾಗ ಅಗೋ! ಅವರಲ್ಲಿಂದ ಓಡಿ ಪಾರಾಗಲು ಯತ್ನಿಸುವರು.
(13) (ಅವರೊಂದಿಗೆ ಹೇಳಲಾಯಿತು:) ಓಡದಿರಿ! ನಿಮಗೆ ಒದಗಿಸಲಾದ ಸುಖಾಡಂಬರಗಳೆಡೆಗೆ ಮತ್ತು ನಿಮ್ಮ ಭವನಗಳೆಡೆಗೆ ಮರಳಿರಿ. ನಿಮಗೆ ಯಾವುದಾದರೂ ಮನವಿ ಸಲ್ಲಿಸಲಾಗಲೂಬಹುದು.(671)
671. ನೀವು ಮುಖಂಡರಲ್ಲವೇ? ಮನವಿ ಮತ್ತು ದೂರುಗಳೊಂದಿಗೆ ಅನೇಕ ಮಂದಿ ನಿಮ್ಮನ್ನು ನಿರೀಕ್ಷಿಸುತ್ತಿರಬಹುದು! ನೀವು ಹೀಗೆ ಓಡಿಹೋಗುವುದು ಸರಿಯೇ? ಎಂದು ಅಲ್ಲಾಹು ಅವರನ್ನು ಲೇವಡಿ ಮಾಡುತ್ತಿದ್ದಾನೆ.
(14) ಅವರು ಹೇಳಿದರು: “ಅಯ್ಯೋ! ನಮ್ಮ ದುರದೃಷ್ಟವೇ! ಖಂಡಿತವಾಗಿಯೂ ನಾವು ಅಕ್ರಮಿಗಳಾಗಿರುವೆವು”.
(15) ತರುವಾಯ ಅವರನ್ನು ನಾವು ಕಟಾವು ಮಾಡಿದ ಫಸಲಿನಂತೆ ನಿಶ್ಚಲ ಸ್ಥಿತಿಯಲ್ಲಿಡುವವರೆಗೆ ಅವರ ರೋದನವು ಅದೇ ಆಗಿತ್ತು.
(16) ಆಕಾಶವನ್ನಾಗಲಿ, ಭೂಮಿಯನ್ನಾಗಲಿ ಅಥವಾ ಅವೆರಡರ ಮಧ್ಯೆಯಿರುವುದನ್ನಾಗಲಿ ನಾವು ವಿನೋದಕ್ಕಾಗಿ ಸೃಷ್ಟಿಸಿಲ್ಲ.
(17) ಮನರಂಜನೆ ಉಂಟುಮಾಡುವುದು ನಮ್ಮ ಉದ್ದೇಶವಾಗಿದ್ದರೆ ಅದನ್ನು ನಾವು ನಮ್ಮ ಬಳಿಯಿಂದಲೇ ಉಂಟುಮಾಡುತ್ತಿದ್ದೆವು. (ಆದರೆ) ನಾವು (ಅದನ್ನು) ಮಾಡುವವರಲ್ಲ.(672)
672. ಅಲ್ಲಾಹು ಇಚ್ಛಿಸಿದರೆ ಮನರಂಜನೆಗಳಲ್ಲಿ ಮಗ್ನನಾಗಿರಲು ಅವನಿಗೆ ಸಾಧ್ಯವಿದೆ. ಆದರೆ ಗಹನವಾದ ಉದ್ದೇಶದಿಂದಲೇ ಹೊರತು ಅವನು ಏನನ್ನೂ ಸೃಷ್ಟಿಸಿಲ್ಲ.
(18) ಆದರೆ ನಾವು ಸತ್ಯವನ್ನು ಅಸತ್ಯದ ಮೇಲೆ ಎಸೆಯುವೆವು. ಆಗ ಅದು ಅಸತ್ಯವನ್ನು ನಾಶ ಮಾಡುವುದು. ಅದರೊಂದಿಗೆ ಅಸತ್ಯವು ಅಳಿದುಹೋಗುವುದು. ನೀವು (ಅಲ್ಲಾಹುವಿನ ಮೇಲೆ ಸುಳ್ಳುಸುಳ್ಳಾಗಿ) ಆರೋಪಿಸುವುದರ ನಿಮಿತ್ತ ನಿಮಗೆ ವಿನಾಶವು ಕಾದಿದೆ.
(19) ಭೂಮ್ಯಾಕಾಶಗಳಲ್ಲಿರುವವರೆಲ್ಲರೂ ಅವನಿಗೆ ಸೇರಿದವರಾಗಿರುವರು. ಅವನ ಬಳಿಯಿರುವವರು (ಮಲಕ್‍ಗಳು) ಅವನನ್ನು ಆರಾಧಿಸುವುದನ್ನು ಬಿಟ್ಟು ಅಹಂಕಾರಪಡಲಾರರು. ಅವರಿಗೆ ದಣಿವೂ ಆಗಲಾರದು.
(20) ಅವರು ರಾತ್ರಿ ಹಗಲು (ಅಲ್ಲಾಹುವಿನ ಪರಿಪಾವನತೆಯನ್ನು) ಕೊಂಡಾಡುತ್ತಿರುವರು. ಅವರಿಗೆ ಸುಸ್ತಾಗಲಾರದು.
(21) (ಮರಣಹೊಂದಿದವರಿಗೆ) ಜೀವ ನೀಡುವ ಸಾಮರ್ಥ್ಯವಿರುವ ಯಾವುದಾದರೂ ಆರಾಧ್ಯರನ್ನು ಅವರು ಭೂಮಿಯಿಂದಲೇ ಪಡೆದಿರುವರೇ?
(22) ಅವುಗಳಲ್ಲಿ (ಆಕಾಶ ಭೂಮಿಗಳಲ್ಲಿ) ಅಲ್ಲಾಹುವಿನ ಹೊರತು ಬೇರೆ ಆರಾಧ್ಯರಿರುತ್ತಿದ್ದರೆ ಅವೆರಡೂ ಸರ್ವನಾಶವಾಗಿ ಬಿಡುತ್ತಿದ್ದವು.(673) ಅವರು ವರ್ಣಿಸುವುದರಿಂದೆಲ್ಲ ಸಿಂಹಾಸನದ ಒಡೆಯನಾದ ಅಲ್ಲಾಹು ಎಷ್ಟೋ ಪರಿಪಾವನನಾಗಿರುವನು.
673. ಪ್ರಪಂಚದ ಆಡಳಿತದಲ್ಲಿ ಒಂದಕ್ಕಿಂತ ಹೆಚ್ಚು ಶಕ್ತಿಗಳಿಗೆ ಪಾಲಿರುತ್ತಿದ್ದರೆ ಅವರ ಹಿತಾಸಕ್ತಿಗಳು ಪರಸ್ಪರ ಸಂಘರ್ಷಕ್ಕೊಳಗಾಗಿ ಅದು ಪ್ರಪಂಚದ ಸರ್ವನಾಶಕ್ಕೆ ಕಾರಣವಾಗುತ್ತಿತ್ತು.
(23) ಅವನೇನು ಮಾಡುವನೋ ಅದರ ಬಗ್ಗೆ ಅವನೊಂದಿಗೆ ಪ್ರಶ್ನಿಸಲಾಗದು. ಆದರೆ ಅವರನ್ನು ಪ್ರಶ್ನಿಸಲಾಗುವುದು.
(24) ಅವರು ಅವನ (ಅಲ್ಲಾಹುವಿನ) ಹೊರತು ಅನ್ಯ ಆರಾಧ್ಯರನ್ನು ಮಾಡಿಕೊಂಡಿರುವರೇ? ಹೇಳಿರಿ: “(ಅದಕ್ಕಿರುವ) ನಿಮ್ಮ ಪುರಾವೆಯನ್ನು ತನ್ನಿರಿ”. ಇದು ನನ್ನ ಜೊತೆಗಿರುವವರಿಗೂ, ನನಗಿಂತ ಮುಂಚಿನವರಿಗೂ ಇರುವ ಉಪದೇಶವಾಗಿದೆ.(674) ಆದರೆ ಅವರಲ್ಲಿ ಹೆಚ್ಚಿನವರೂ ಸತ್ಯವನ್ನು ಅರಿತುಕೊಳ್ಳಲಾರರು. ಆದುದರಿಂದ ಅವರು ವಿಮುಖರಾಗುತ್ತಿರುವರು.
674. ಎಲ್ಲ ಸಮುದಾಯಗಳಿಗೂ ನೀಡಲಾದ ದಿವ್ಯ ಸಂದೇಶವು ಮೂಲಭೂತವಾಗಿ ಏಕರೂಪದಲ್ಲಿತ್ತು.
(25) “ನನ್ನ ಹೊರತು ಅನ್ಯ ಆರಾಧ್ಯರಿಲ್ಲ. ಆದುದರಿಂದ ನನ್ನನ್ನು ಆರಾಧಿಸಿರಿ” ಎಂಬ ದಿವ್ಯಸಂದೇಶವನ್ನು ನೀಡಿಯೇ ಹೊರತು ತಮಗಿಂತ ಮುಂಚೆ ಯಾವುದೇ ಸಂದೇಶವಾಹಕರನ್ನೂ ನಾವು ಕಳುಹಿಸಿಲ್ಲ.
(26) ಅವರು ಹೇಳಿದರು: “ಪರಮ ದಯಾಮಯನು ಸಂತತಿಯನ್ನು ಮಾಡಿಕೊಂಡಿರುವನು”. ಅವನು ಪರಮ ಪಾವನನು. ಅವರು (ಮಲಕ್‍ಗಳು) ಅವನ ಗೌರವಾನ್ವಿತ ದಾಸರು ಮಾತ್ರವಾಗಿರುವರು.
(27) ಅವನು ಮಾತನಾಡುವುದಕ್ಕೆ ಮುಂಚಿತವಾಗಿ ಅವರು ಮಾತನಾಡಲಾರರು. ಅವರು ಅವನ ಆಜ್ಞಾನುಸಾರ ಕಾರ್ಯನಿರ್ವಹಿಸುವರು.(675)
675. ಮಲಕ್‍ಗಳು ಅಲ್ಲಾಹುವಿನ ಹೆಣ್ಣುಮಕ್ಕಳೆಂದು ಹೇಳುವವರ ವಾದವನ್ನು ಈ ಸೂಕ್ತಿಯು ಖಂಡಿಸುತ್ತದೆ.
(28) ಅವರ ಮುಂದಿರುವುದನ್ನೂ, ಹಿಂದಿರುವುದನ್ನೂ ಅವನು ಅರಿಯುವನು. ಅವನು ತೃಪ್ತಿಪಟ್ಟವರಿಗೇ ಹೊರತು ಅವರು ಶಿಫಾರಸು ಮಾಡಲಾರರು. ಅವರು ಅವನ ಭಯದಿಂದ ನಡುಗುತ್ತಿರುವರು.
(29) “ಅವನಲ್ಲದೆ (ಅಲ್ಲಾಹುವಲ್ಲದೆ) ನಾನೂ ಆರಾಧ್ಯನಾಗಿರುವೆನು” ಎಂದು ಅವರಲ್ಲಿ ಯಾರಾದರೂ ಹೇಳುವುದಾದರೆ ಅವನಿಗೆ ನಾವು ನರಕಾಗ್ನಿಯನ್ನು ಪ್ರತಿಫಲವಾಗಿ ನೀಡುವೆವು. ಅಕ್ರಮಿಗಳಿಗೆ ನಾವು ಹೀಗೆಯೇ ಪ್ರತಿಫಲ ನೀಡುವೆವು.
(30) ಆಕಾಶಗಳು ಮತ್ತು ಭೂಮಿಯು ಪರಸ್ಪರ ಅಂಟಿಕೊಂಡಿತ್ತು(676) ಮತ್ತು ತರುವಾಯ ನಾವು ಅವುಗಳನ್ನು ಬೇರ್ಪಡಿಸಿದೆವು ಎಂದು ಸತ್ಯನಿಷೇಧಿಗಳು ಕಾಣುವುದಿಲ್ಲವೇ? ಜೀವವಿರುವ ಎಲ್ಲ ವಸ್ತುಗಳನ್ನೂ ನಾವು ನೀರಿನಿಂದ ಉಂಟುಮಾಡಿರುವೆವು.(677) ಆದರೂ ಅವರು ವಿಶ್ವಾಸವಿಡುವುದಿಲ್ಲವೇ?
676. ‘ರತ್ಕ್’ ಎಂಬ ಪದಕ್ಕೆ ಅಂಟಿಕೊಂಡಿರುವುದು ಎಂದರ್ಥ ನೀಡಲಾಗಿದೆ. ಮುಚ್ಚಿಕೊಂಡಿರುವುದು ಎಂಬರ್ಥವನ್ನು ಕೆಲವರು ನೀಡಿದ್ದಾರೆ. ಇದರ ಪ್ರಕಾರ ಆಯತ್ತಿನ ಅರ್ಥ: ಆಕಾಶ ಮತ್ತು ಭೂಮಿ ಮುಚ್ಚಿದ ಸ್ಥಿತಿಯಲ್ಲಾಗಿದ್ದವು ಮತ್ತು ತರುವಾಯ ನಾವು ಅವುಗಳನ್ನು ಬೇರ್ಪಡಿಸಿರುವುದನ್ನು ಸತ್ಯನಿಷೇಧಿಗಳು ಕಾಣುವುದಿಲ್ಲವೇ? ಎಂದಾಗುತ್ತದೆ. ವಾತಾವರಣ ಮತ್ತು ಭೂಮಿಯು ಒಣಗಿಹೋದ ಬಳಿಕ ಮಳೆಯನ್ನು ಸುರಿಸಿ ಪ್ರಕೃತಿಯನ್ನು ಪ್ರತ್ಯುತ್ಪಾದನೆಗಾಗಿ ತೆರೆದಿಡುವುದನ್ನು ಪ್ರಸ್ತುತ ಸೂಕ್ತಿಯು ಸೂಚಿಸುತ್ತದೆ ಎಂದು ಪೂರ್ವಿಕ ವ್ಯಾಖ್ಯಾನಕಾರರು ಹೇಳಿದ್ದಾರೆ. ಆಕಾಶಗಳು ಮತ್ತು ಭೂಮಿಯು ರಚನೆಗೊಳ್ಳುವುದಕ್ಕೆ ಮುಂಚೆ ಆದಿಪಿಂಡವು ಏಕ ಪದಾರ್ಥವಾಗಿ ಅಸ್ತಿತ್ವದಲ್ಲಿತ್ತು. ತರುವಾಯ ಒಂದು ಮಹಾ ಆಸ್ಫೋಟದ ಮೂಲಕ ಅವು ಪರಸ್ಪರ ಬೇರ್ಪಟ್ಟು ಇಂದಿನ ಸ್ಥಿತಿಯನ್ನು ತಲುಪಿದವು ಎಂದು ಆಧುನಿಕ ವಿಜ್ಞಾನವು ಹೇಳುತ್ತದೆ. ‘ರತ್ಕ್’ ಎಂಬ ಪದಕ್ಕೆ ಭಾಷಿಕವಾಗಿ ಹೆಚ್ಚು ಹೊಂದಾಣಿಕೆಯಿರುವ ಅರ್ಥವು ಅಂಟಿಕೊಂಡಿರುವುದು ಎಂದಾಗಿದೆ. ಇತ್ತೀಚಿನ ಕುರ್‌ಆನ್ ವ್ಯಾಖ್ಯಾನಕಾರರೆಲ್ಲರೂ ಈ ಅರ್ಥವನ್ನು ಸ್ವೀಕಾರ ಮಾಡಿದ್ದಾರೆ. ತನ್ನಿಮಿತ್ತ ಈ ಸೂಕ್ತಿಯು ಪ್ರಪಂಚೋತ್ಪತ್ತಿಯ ಬಗ್ಗೆಯಿರುವ ಆಧುನಿಕ ದೃಷ್ಟಿಕೋನದೊಂದಿಗೆ ಹೊಂದಿಕೆಯಾಗುತ್ತದೆ. ಕುರ್‌ಆನ್ ಅವತೀರ್ಣಕಾಲದಲ್ಲಿ ಜಗತ್ತಿಗೆ ಅಜ್ಞಾತವಾಗಿದ್ದ ಭೌತಿಕ ಸತ್ಯದ ಬಗ್ಗೆ ಪ್ರಸ್ತಾಪಿಸುವ ಈ ಸೂಕ್ತಿಯು ಕುರ್‌ಆನಿನ ದೈವಿಕತೆಗೆ ಸಾಕ್ಷಿ ವಹಿಸುತ್ತದೆ. 677. ಪ್ರತಿಯೊಂದು ಜೀವಕೋಶದ ಮುಖ್ಯ ಘಟಕವು ನೀರಾಗಿದೆ. ನೀರಿಲ್ಲದೆ ಜೀವವು ಅಸ್ತಿತ್ವದಲ್ಲಿರಲಾರದು.
(31) ಭೂಮಿಯು ಅವರೊಂದಿಗೆ ಅಲುಗಾಡದಿರಲು ಅದರಲ್ಲಿ ನಾವು ನಾಟಿನಿಂತಿರುವ ಪರ್ವತಗಳನ್ನು ಉಂಟು ಮಾಡಿದೆವು.(678) ಅವರು ದಾರಿ ಕಾಣುವ ಸಲುವಾಗಿ ಅವುಗಳಲ್ಲಿ (ಪರ್ವತಗಳಲ್ಲಿ) ನಾವು ವಿಶಾಲವಾದ ಹಾದಿಗಳನ್ನು ಮಾಡಿಕೊಟ್ಟೆವು.
678. ಭೂಕಂಪನಗಳನ್ನು ಕಡಿಮೆಗೊಳಿಸುವಲ್ಲಿ ಪರ್ವತಗಳು ವಹಿಸುವ ಪಾತ್ರದೆಡೆಗೆ ಭೂಗರ್ಭ ಶಾಸ್ತ್ರದ ಆಧುನಿಕ ಸಂಶೋಧನೆಗಳು ಸೂಚನೆ ನೀಡುತ್ತವೆ.
(32) ಆಕಾಶವನ್ನು ನಾವು ಸುರಕ್ಷಿತ ಮೇಲ್ಛಾವಣಿಯನ್ನಾಗಿ ಮಾಡಿದೆವು.(679) ಅವರು ಅದರ (ಆಕಾಶದ) ದೃಷ್ಟಾಂತಗಳಿಂದ ವಿಮುಖರಾಗಿರುವರು.
679. ಬಾಹ್ಯಾಕಾಶದಿಂದ ಬೀಳುತ್ತಿರುವ ಉಲ್ಕೆಗಳಿಂದ ಮತ್ತು ಮಾರಕವಾದ ಕಾಸ್ಮಿಕ್ ಕಿರಣಗಳಿಂದ ವಾಯುಮಂಡಲವು ಭೂಮಿಯನ್ನು ರಕ್ಷಿಸುತ್ತದೆ. ಭೂಮಿಯ ವಾಯುಮಂಡಲವು ನಮ್ಮ ಮೇಲೆ ಸುಭದ್ರವಾಗಿರುವ ಒಂದು ಮೇಲ್ಛಾವಣಿಯಂತೆ ವರ್ತಿಸುತ್ತದೆ. ಇದನ್ನೇ ಇಲ್ಲಿ ಸುರಕ್ಷಿತ ಮೇಲ್ಛಾವಣಿ ಎನ್ನಲಾಗಿರಬಹುದು.
(33) ರಾತ್ರಿ, ಹಗಲು, ಸೂರ್ಯ ಮತ್ತು ಚಂದ್ರರನ್ನು ಸೃಷ್ಟಿಸಿದವನು ಅವನಾಗಿರುವನು. ಎಲ್ಲವೂ ಒಂದು ನಿಶ್ಚಿತ ಕಕ್ಷೆಯಲ್ಲಿ ಈಜುತ್ತಿರುವುವು.
(34) (ಓ ಪ್ರವಾದಿಯವರೇ!) ತಮಗಿಂತ ಮುಂಚೆ ಯಾವುದೇ ಮನುಷ್ಯನಿಗೂ ನಾವು ಶಾಶ್ವತತೆಯನ್ನು ನೀಡಿಲ್ಲ. ಹೀಗಿರುವಾಗ ತಾವು ಮರಣಹೊಂದಿದರೆ ಅವರು ಶಾಶ್ವತರಾಗಿ ಉಳಿಯುವರೇ?
(35) ಪ್ರತಿಯೊಂದು ಶರೀರವೂ ಮರಣವನ್ನು ಆಸ್ವಾದಿಸಲಿದೆ. ನಾವು ಕೆಡುಕು ಮತ್ತು ಒಳಿತುಗಳನ್ನು ಪರೀಕ್ಷೆಯನ್ನಾಗಿ ಮಾಡಿ ನಿಮ್ಮನ್ನು ಪರೀಕ್ಷಿಸುವೆವು.(680) ನಿಮ್ಮನ್ನು ನಮ್ಮ ಕಡೆಗೇ ಮರಳಿಸಲಾಗುವುದು.
680. ಲಾಭ ನಷ್ಟಗಳುಂಟಾಗುವಾಗ ಮನುಷ್ಯನ ಪ್ರತಿಕ್ರಿಯೆಯು ಇಸ್ಲಾಮಿಗೆ ಪೂರಕವಾಗಿರುವುದೋ ಅಥವಾ ವಿರುದ್ಧವಾಗಿರುವುದೋ ಎಂದು ಅಲ್ಲಾಹು ಪ್ರತಿಯೊಬ್ಬರನ್ನೂ ಪರೀಕ್ಷಿಸುವನು.
(36) ಸತ್ಯನಿಷೇಧಿಗಳು ತಮ್ಮನ್ನು ಕಂಡಾಗ “ನಿಮ್ಮ ಆರಾಧ್ಯರನ್ನು ದೂಷಿಸಿ ಮಾತನಾಡುವವರು ಇವರೇ ಏನು?” ಎನ್ನುತ್ತಾ ತಮ್ಮನ್ನು ಕೇವಲ ಹಾಸ್ಯವಸ್ತುವನ್ನಾಗಿ ಮಾಡುವರು. ಅವರಂತೂ ಪರಮ ದಯಾಮಯನ ಉಪದೇಶದಲ್ಲಿ ಅವಿಶ್ವಾಸವಿಟ್ಟವರಾಗಿರುವರು.
(37) ಮನುಷ್ಯನು ಆತುರಪಡುವವನಾಗಿಯೇ ಸೃಷ್ಟಿಸಲಾಗಿರುವನು. ನನ್ನ ದೃಷ್ಟಾಂತಗಳನ್ನು ನಾನು ನಿಮಗೆ ತರುವಾಯ ತೋರಿಸಿಕೊಡುವೆನು. ಆದುದರಿಂದ ನೀವು ನನ್ನೊಂದಿಗೆ ಆತುರಪಡದಿರಿ.
(38) “ನೀವು ಸತ್ಯವಂತರಾಗಿದ್ದರೆ ಈ ವಾಗ್ದಾನವು ಯಾವಾಗ (ನೆರವೇರಲಿರುವುದು)?” ಎಂದು ಅವರು ಕೇಳುವರು.
(39) ಅವರಿಗೆ ತಮ್ಮ ಮುಖಗಳಿಂದಲೂ, ಬೆನ್ನುಗಳಿಂದಲೂ ನರಕಾಗ್ನಿಯನ್ನು ತಡೆಯಲು ಸಾಧ್ಯವಾಗದ ಮತ್ತು ಅವರಿಗೆ ಯಾವುದೇ ಸಹಾಯವೂ ಸಿಗದ ಒಂದು ಸಮಯದ ಬಗ್ಗೆ ಆ ಸತ್ಯನಿಷೇಧಿಗಳು ಅರಿತುಕೊಂಡಿದ್ದರೆ!
(40) ಅಲ್ಲ; ಅದು (ಅಂತ್ಯಘಳಿಗೆ) ಅವರೆಡೆಗೆ ಹಠಾತ್ತನೆ ಬರಲಿದೆ. ಆಗ ಅದು ಅವರನ್ನು ದಿಗ್ಭ್ರಾಂತಿಗೊಳಿಸಲಿದೆ. ಅದನ್ನು ತಡೆಯಲು ಅವರಿಗೆ ಸಾಧ್ಯವಾಗದು. ಅವರಿಗೆ ಕಾಲಾವಕಾಶವನ್ನೂ ನೀಡಲಾಗದು.
(41) ತಮಗಿಂತ ಮುಂಚೆ ಅನೇಕ ಸಂದೇಶವಾಹಕರು ಅಪಹಾಸ್ಯಕ್ಕೊಳಗಾಗಿರುವರು. ತರುವಾಯ ಅವರನ್ನು ಅಪಹಾಸ್ಯ ಮಾಡಿ ತಿರಸ್ಕರಿಸಿದವರನ್ನು ಅವರು ಅಪಹಾಸ್ಯ ಮಾಡುತ್ತಿದ್ದ (ಶಿಕ್ಷೆಯು) ಆವರಿಸಿಬಿಟ್ಟಿತು.
(42) (ಓ ಪ್ರವಾದಿಯವರೇ!) ಕೇಳಿರಿ: “ಪರಮ ದಯಾಮಯನಿಂದ ನಿಮ್ಮನ್ನು ರಾತ್ರಿ ಮತ್ತು ಹಗಲು ರಕ್ಷಣೆ ಮಾಡುವವರು ಯಾರು?” ಅಲ್ಲ; ಅವರು ತಮ್ಮ ರಬ್‌ನ ಉಪದೇಶದಿಂದ ವಿಮುಖರಾಗಿರುವರು.
(43) ಅಥವಾ, ಅವರನ್ನು ರಕ್ಷಿಸಲು ನಮ್ಮ ಹೊರತು ಅನ್ಯ ಆರಾಧ್ಯರು ಅವರಿಗಿರುವರೇ? ಸ್ವತಃ ತಮಗೇ ಸಹಾಯ ಮಾಡಲು ಅವರಿಗೆ (ಆ ಆರಾಧ್ಯರಿಗೆ) ಸಾಧ್ಯವಾಗದು. ನಮ್ಮ ಕಡೆಯಿಂದಲೂ ಅವರಿಗೆ ಬೆಂಬಲ ಸಿಗಲಾರದು.
(44) ಅಲ್ಲ; ಅವರಿಗೂ ಅವರ ಪೂರ್ವಿಕರಿಗೂ ನಾವು ಅನುಕೂಲತೆಯನ್ನು ನೀಡಿದೆವು. ಹೀಗೆ ಅವರು ದೀರ್ಘಕಾಲ ಬಾಳಿ ಬದುಕಿದರು. ನಾವು ಭೂಮಿಯನ್ನು ಅದರ ಅಂಚುಗಳಿಂದ ಕುಗ್ಗಿಸುತ್ತಿರುವುದನ್ನು ಅವರು ಕಾಣುವುದಿಲ್ಲವೇ?(681) ಹೀಗಿದ್ದೂ ಅವರು ವಿಜೇತರಾಗುವರೇ?
681. ಸತ್ಯನಿಷೇಧಿಗಳ ಭೂಪ್ರದೇಶಗಳು ಸತ್ಯವಿಶ್ವಾಸಿಗಳ ವಶಕ್ಕೊಳಗಾಗುವುದರ ಸೂಚನೆಯಾಗಿರಬಹುದು.
(45) (ಓ ಪ್ರವಾದಿಯವರೇ!) ಹೇಳಿರಿ: “ನಾನು ನಿಮಗೆ ಎಚ್ಚರಿಕೆ ನೀಡುತ್ತಿರುವುದು ದಿವ್ಯ ಸಂದೇಶದ ಪ್ರಕಾರ ಮಾತ್ರವಾಗಿದೆ”. ಎಚ್ಚರಿಕೆ ನೀಡಲಾಗುವಾಗ ಕಿವುಡರು ಆ ಕರೆಯನ್ನು ಕೇಳಲಾರರು.
(46) ತಮ್ಮ ರಬ್‌ನ ಶಿಕ್ಷೆಯಿಂದ ಒಂದು ಹಗುರ ವಾದ ಗಾಳಿಯು ಅವರನ್ನು ಸ್ಪರ್ಶಿಸುವುದಾದರೆ ಖಂಡಿತವಾಗಿಯೂ ಅವರು ಹೇಳುವರು: “ಅಯ್ಯೋ! ನಮ್ಮ ದುರದೃಷ್ಟವೇ! ಖಂಡಿತವಾಗಿಯೂ ನಾವು ಅಕ್ರಮಿಗಳಾಗಿ ಬಿಟ್ಟಿರುವೆವು”.
(47) ಪುನರುತ್ಥಾನ ದಿನದಂದು ನಾವು ನ್ಯಾಯ ಬದ್ಧವಾದ ತಕ್ಕಡಿಗಳನ್ನು(682) ಸ್ಥಾಪಿಸುವೆವು. ಆಗ ಯಾರೊಂದಿಗೂ ಕಿಂಚಿತ್ತೂ ಅಕ್ರಮವೆಸಗಲಾಗದು. ಅದು (ಕರ್ಮವು) ಒಂದು ಸಾಸಿವೆ ಕಾಳಿನಷ್ಟು ತೂಕವಿರುವುದಾದರೂ ನಾವು ಅದನ್ನು ತರುವೆವು. ವಿಚಾರಣೆ ಮಾಡುವವರಾಗಿ ನಾವು ಸಾಕು.
682. ಕರ್ಮವನ್ನು ಕರಾರುವಾಕ್ಕಾಗಿ ತೂಕ ಮಾಡುವ ತಕ್ಕಡಿಗಳು.
(48) ನಾವು ಮೂಸಾ ಮತ್ತು ಹಾರೂನ್‍ಗೆ ಸತ್ಯಾಸತ್ಯ ವಿವೇಚನೆಗಿರುವ ಆಧಾರಪ್ರಮಾಣವನ್ನು, ಪ್ರಕಾಶವನ್ನು ಮತ್ತು ಭಯಭಕ್ತಿ ಪಾಲಿಸುವವರಿಗಿರುವ ಉಪದೇಶವನ್ನು ನೀಡಿದೆವು.
(49) ತಮ್ಮ ರಬ್ಬನ್ನು ಅಗೋಚರವಾಗಿ ಭಯಪಡುವವರೂ, ಅಂತ್ಯದಿನದ ಬಗ್ಗೆ ಭಯಭೀತರೂ ಆಗಿರುವವರಿಗೆ (ಇರುವ ಉಪದೇಶ).
(50) ಇದು (ಕುರ್‌ಆನ್) ನಾವು ಅವತೀರ್ಣಗೊಳಿಸಿದ ಅನುಗ್ರಹಪೂರ್ಣವಾದ ಒಂದು ಉಪದೇಶವಾಗಿದೆ. ಹೀಗಿದ್ದೂ ನೀವು ಅದನ್ನು ನಿಷೇಧಿಸುತ್ತಿದ್ದೀರಾ?
(51) ಮುಂಚೆ ನಾವು ಇಬ್ರಾಹೀಮ್‌ರಿಗೆ ಅವರ ಸನ್ಮಾರ್ಗವನ್ನು ನೀಡಿದ್ದೆವು. ನಾವು ಅವರ ಬಗ್ಗೆ ಅರಿವುಳ್ಳವರಾಗಿದ್ದೆವು.
(52) ಅವರು ತಮ್ಮ ತಂದೆಯೊಂದಿಗೆ ಮತ್ತು ತಮ್ಮ ಜನತೆಯೊಂದಿಗೆ “ನೀವು ಪೂಜಿಸುತ್ತಿರುವ ಈ ವಿಗ್ರಹಗಳು ಏನು?” ಎಂದು ಕೇಳಿದ ಸಂದರ್ಭ.
(53) ಅವರು ಹೇಳಿದರು: “ನಮ್ಮ ಪೂರ್ವಿಕರು ಇವುಗಳನ್ನು ಆರಾಧಿಸುತ್ತಿರುವುದಾಗಿ ನಾವು ಕಂಡಿರುವೆವು”.
(54) ಅವರು (ಇಬ್ರಾಹೀಮ್) ಹೇಳಿದರು: “ಖಂಡಿತವಾಗಿಯೂ ನೀವು ಮತ್ತು ನಿಮ್ಮ ಪೂರ್ವಿಕರು ಸ್ಪಷ್ಟವಾದ ದುರ್ಮಾರ್ಗದಲ್ಲಿದ್ದೀರಿ”.
(55) ಅವರು ಕೇಳಿದರು: “ತಾವು ನಮ್ಮ ಬಳಿಗೆ ಸತ್ಯದೊಂದಿಗೆ ಬಂದಿದ್ದೀರಾ? ಅಥವಾ ತಾವು ತಮಾಷೆ ಮಾಡುವವರಲ್ಲಿ ಸೇರಿದವರಾಗಿದ್ದೀರಾ?”
(56) ಅವರು (ಇಬ್ರಾಹೀಮ್) ಹೇಳಿದರು: “ಅಲ್ಲ, ನಿಮ್ಮ ರಬ್ ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದ ಅವುಗಳ ರಬ್ ಆಗಿರುವನು. ಅದಕ್ಕೆ ಸಾಕ್ಷಿಯಾಗಿರುವವರಲ್ಲಿ ನಾನೂ ಸೇರಿರುವೆನು.
(57) ಅಲ್ಲಾಹುವಿನ ಮೇಲಾಣೆ! ನೀವು ಮರಳಿಹೋದ ಬಳಿಕ ಖಂಡಿತವಾಗಿಯೂ ನಾನು ನಿಮ್ಮ ವಿಗ್ರಹಗಳ ಮೇಲೆ ಒಂದು ತಂತ್ರವನ್ನು ರೂಪಿಸುವೆನು”.(683)
683. ಅವರೆಲ್ಲರೂ ಉತ್ಸವದಲ್ಲಿ ಪಾಲ್ಗೊಳ್ಳಲು ಹೊರಟಾಗ ಅವರ ವಿಗ್ರಹಗಳನ್ನು ಧ್ವಂಸ ಮಾಡುವ ತಂತ್ರವನ್ನು ರೂಪಿಸಿದರು.
(58) ತರುವಾಯ ಅವರು (ಇಬ್ರಾಹೀಮ್) ಅವುಗಳನ್ನು ನುಚ್ಚುನೂರು ಮಾಡಿದರು. ಅವುಗಳ ಪೈಕಿ ದೊಡ್ಡದೊಂದನ್ನು ಬಿಟ್ಟು. ಅವರು (ವಿಷಯವನ್ನರಿಯಲು) ಅದರ ಬಳಿಗೆ ಮರಳಿಬರುವ ಸಲುವಾಗಿ.
(59) ಅವರು ಹೇಳಿದರು: “ನಮ್ಮ ಆರಾಧ್ಯರಿಗೆ ಇದನ್ನು ಮಾಡಿದವರಾರು? ಖಂಡಿತವಾಗಿಯೂ ಅವನು ಅಕ್ರಮಿಗಳಲ್ಲಿ ಸೇರಿದವನಾಗಿರುವನು”.
(60) ಕೆಲವರು ಹೇಳಿದರು: “ಇಬ್ರಾಹೀಮ್ ಎಂದು ಕರೆಯಲಾಗುವ ಒಬ್ಬ ಯುವಕ ಅವುಗಳ ಬಗ್ಗೆ ಪ್ರಸ್ತಾಪ ಮಾಡುವುದನ್ನು ನಾವು ಕೇಳಿರುವೆವು”.
(61) ಅವರು ಹೇಳಿದರು: “ಹಾಗಾದರೆ ಅವರನ್ನು ನೀವು ಜನರ ಕಣ್ಣಮುಂದೆ ತನ್ನಿರಿ. ಅವರು ಸಾಕ್ಷಿಗಳಾಗಲೂ ಬಹುದು”.
(62) ಅವರು ಕೇಳಿದರು: “ಓ ಇಬ್ರಾಹೀಮ್! ನಮ್ಮ ಆರಾಧ್ಯರಿಗೆ ಇದನ್ನು ಮಾಡಿದವರು ತಾವೇ ಏನು?”
(63) ಅವರು (ಇಬ್ರಾಹೀಮ್) ಹೇಳಿದರು: “ಅಲ್ಲ; ಅದನ್ನು ಮಾಡಿರುವುದು ಅವುಗಳಲ್ಲಿ ದೊಡ್ಡದಾಗಿರುವ ಇದಾಗಿರುವುದು. ಅವುಗಳಿಗೆ ಮಾತನಾಡಲು ಸಾಧ್ಯವೆಂದಾದರೆ ಅವುಗಳೊಂದಿಗೆ ಕೇಳಿ ನೋಡಿರಿ”.
(64) ಆಗ ಅವರು ಸ್ವತಃ ಅವರೆಡೆಗೆ ತಿರುಗಿದರು ಮತ್ತು (ಪರಸ್ಪರ) ಹೇಳಿದರು: “ಖಂಡಿತವಾಗಿಯೂ ಅಕ್ರಮಿಗಳು ನೀವೇ ಆಗಿದ್ದೀರಿ”.
(65) ತರುವಾಯ ಅವರು ತಮ್ಮ ಪೂರ್ವಸ್ಥಿತಿಗೆ ಮರಳಿ (ಹೇಳಿದರು): “ಇವು (ವಿಗ್ರಹಗಳು) ಮಾತನಾಡುವುದಿಲ್ಲವೆಂದು ತಮಗೆ ಗೊತ್ತಿಲ್ಲವೇ?”(684)
684. ಅವರಿಗೆ ತಮ್ಮ ತಪ್ಪಿನ ಅರಿವಾದರೂ ಅದನ್ನು ತೋರ್ಪಡಿಸದೆ ಇಬ್ರಾಹೀಮರೊಂದಿಗೆ ತರ್ಕಿಸಲು ಮುಂದಾದರು.
(66) ಅವರು (ಇಬ್ರಾಹೀಮ್) ಹೇಳಿದರು: “ಹಾಗಾದರೆ ಅಲ್ಲಾಹುವಿನ ಹೊರತು ನಿಮಗೆ ಯಾವುದೇ ಲಾಭವನ್ನಾಗಲಿ, ಹಾನಿಯನ್ನಾಗಲಿ ಮಾಡದ ವಸ್ತುಗಳನ್ನು ನೀವು ಆರಾಧಿಸುತ್ತಿದ್ದೀರಾ?
(67) ನಿಮ್ಮ ಮತ್ತು ಅಲ್ಲಾಹುವಿನ ಹೊರತು ನೀವು ಆರಾಧಿಸುತ್ತಿರುವವರ ಸ್ಥಿತಿ ಅಪಹಾಸ್ಯಕರವಾಗಿದೆ! ನೀವು ಆಲೋಚಿಸುವುದಿಲ್ಲವೇ?”
(68) ಅವರು ಹೇಳಿದರು: “ನೀವೇನಾದರೂ ಮಾಡುವುದಾದರೆ ಈತನನ್ನು ಸುಟ್ಟುಹಾಕಿರಿ ಮತ್ತು ನಿಮ್ಮ ಆರಾಧ್ಯರಿಗೆ ಸಹಾಯ ಮಾಡಿರಿ”.
(69) ನಾವು ಹೇಳಿದೆವು: “ಓ ಬೆಂಕಿಯೇ! ನೀನು ಇಬ್ರಾಹೀಮ್‌ರಿಗೆ ತಂಪು ಮತ್ತು ಸುರಕ್ಷೆಯಾಗಿ ಮಾರ್ಪಡು”.
(70) ಅವರು ಅವರ ಮೇಲೆ ತಂತ್ರ ಹೂಡಲು ಬಯಸಿದರು. ಆದರೆ ನಾವು ಅವರನ್ನು ತೀರಾ ನಷ್ಟಹೊಂದಿದವರನ್ನಾಗಿ ಮಾಡಿದೆವು.
(71) ಸರ್ವಲೋಕದವರಿಗಾಗಿ ನಾವು ಅನುಗ್ರಹೀತಗೊಳಿಸಿದ ಭೂಮಿಯೆಡೆಗೆ ಅವರನ್ನು ಮತ್ತು ಲೂತ್‍ರನ್ನು ನಾವು ರಕ್ಷಿಸಿದೆವು.
(72) ನಾವು ಅವರಿಗೆ ಇಸ್‍ಹಾಕ್‍ರನ್ನು ಮತ್ತು ಹೆಚ್ಚುವರಿಯಾಗಿ ಯಅ್‌ಕೂಬ್(ಮೊಮ್ಮಗ)ರನ್ನು ದಯಪಾಲಿಸಿದೆವು. ಅವರೆಲ್ಲರನ್ನೂ ನಾವು ಸಜ್ಜನರನ್ನಾಗಿ ಮಾಡಿದೆವು.
(73) ನಾವು ಅವರನ್ನು ನಮ್ಮ ಆಜ್ಞೆಯ ಪ್ರಕಾರ ಮಾರ್ಗದರ್ಶನ ಮಾಡುವ ನಾಯಕರನ್ನಾಗಿ ಮಾಡಿದೆವು. ಸತ್ಕರ್ಮಗಳನ್ನು ಮಾಡಲು, ನಮಾಝ್ ಸಂಸ್ಥಾಪಿಸಲು ಮತ್ತು ಝಕಾತ್ ನೀಡಲು ನಾವು ಅವರಿಗೆ ದಿವ್ಯಸಂದೇಶವನ್ನು ನೀಡಿದೆವು. ಅವರು ನಮ್ಮನ್ನು ಆರಾಧಿಸುವವರಾಗಿದ್ದರು.
(74) ಲೂತ್‍ರಿಗೆ ನಾವು ನ್ಯಾಯತೀರ್ಮಾನಾಧಿಕಾರವನ್ನು ಮತ್ತು ಜ್ಞಾನವನ್ನು ದಯಪಾಲಿಸಿದೆವು. ದುಷ್ಕೃತ್ಯಗಳಲ್ಲಿ ಮಗ್ನರಾಗಿದ್ದವರ ನಾಡಿನಿಂದ ನಾವು ಅವರನ್ನು ರಕ್ಷಿಸಿದೆವು. ಖಂಡಿತವಾಗಿಯೂ ಅವರು (ಆ ನಾಡಿನವರು) ಧಿಕ್ಕಾರಿಗಳಾಗಿರುವ ಒಂದು ದುಷ್ಟ ಜನತೆಯಾಗಿದ್ದರು.
(75) ನಾವು ಅವರನ್ನು (ಲೂತ್‍ರನ್ನು) ನಮ್ಮ ಕಾರುಣ್ಯದಲ್ಲಿ ಸೇರಿಸಿದೆವು. ಖಂಡಿತವಾಗಿಯೂ ಅವರು ಸಜ್ಜನರಲ್ಲಿ ಸೇರಿದವರಾಗಿದ್ದರು.
(76) ನೂಹ್‍ರನ್ನು (ಸ್ಮರಿಸಿರಿ). ಅವರು ಇದಕ್ಕೆ ಮುಂಚೆ ಕರೆದು ಪ್ರಾರ್ಥಿಸಿದ ಸಂದರ್ಭ. ಆಗ ನಾವು ಅವರ ಕರೆಗೆ ಉತ್ತರಿಸಿದೆವು. ತರುವಾಯ ನಾವು ಅವರನ್ನು ಮತ್ತು ಅವರ ಕುಟುಂಬವನ್ನು ಮಹಾ ಸಂಕಟದಿಂದ ಪಾರು ಮಾಡಿದೆವು.
(77) ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದ ಜನತೆಯಿಂದ ನಾವು ಅವರಿಗೆ (ನೂಹ್‍ರಿಗೆ) ರಕ್ಷಣೆಯನ್ನು ಒದಗಿಸಿದೆವು. ಖಂಡಿತವಾಗಿಯೂ ಅವರೊಂದು ಕೆಟ್ಟ ಜನತೆಯಾಗಿದ್ದರು. ಆದುದರಿಂದ ನಾವು ಅವರೆಲ್ಲರನ್ನೂ ಮುಳುಗಿಸಿದೆವು.
(78) ದಾವೂದ್‍ರನ್ನೂ (ಅವರ ಪುತ್ರ) ಸುಲೈಮಾನ್‌ರನ್ನೂ (ಸ್ಮರಿಸಿರಿ). ಒಂದು ಜನತೆಯ ಮೇಕೆಗಳು ಹೊಲಕ್ಕೆ ನುಸುಳಿ ಮೇಯ್ದ ವಿಷಯದಲ್ಲಿ ಅವರಿಬ್ಬರೂ ತೀರ್ಪು ನೀಡುತ್ತಿದ್ದ ಸಂದರ್ಭ. ಅವರ ತೀರ್ಪಿಗೆ ನಾವು ಸಾಕ್ಷಿಗಳಾಗಿದ್ದೆವು.
(79) ಸುಲೈಮಾನ್‍ರು (ಪ್ರಕರಣವನ್ನು) ಗ್ರಹಿಸಿಕೊಳ್ಳುವಂತೆ ನಾವು ಮಾಡಿದೆವು.(685) ಅವರಿಬ್ಬರಿಗೂ ನಾವು ನ್ಯಾಯ ತೀರ್ಮಾನಾಧಿಕಾರವನ್ನು ಮತ್ತು ಜ್ಞಾನವನ್ನು ನೀಡಿದೆವು. ದಾವೂದ್‍ರೊಂದಿಗೆ ಸ್ತುತಿಕೀರ್ತನೆ ಮಾಡುವುದಕ್ಕಾಗಿ ಪರ್ವತಗಳನ್ನೂ, ಪಕ್ಷಿಗಳನ್ನೂ ನಾವು ಅಧೀನಪಡಿಸಿಕೊಟ್ಟೆವು.(686) (ಅದನ್ನೆಲ್ಲಾ) ಮಾಡಿದವರು ನಾವಾಗಿದ್ದೆವು.
685. ಮೇಕೆಗಳ ಮಾಲಕರು ಹೊಲದ ಮಾಲಕರಿಗೆ ಹೇಗೆ ಪರಿಹಾರವನ್ನು ನೀಡಬೇಕೆಂಬುದನ್ನು ಪ್ರವಾದಿ ಸುಲೈಮಾನ್(ಅ) ರವರು ಗ್ರಹಿಸುವಂತೆ ಅಲ್ಲಾಹು ಮಾಡಿದನು. ವ್ಯಾಖ್ಯಾನಕಾರರ ಪ್ರಕಾರ ಆಗ ಸುಲೈಮಾನ್(ಅ) ರಿಗೆ ಕೇವಲ ಹನ್ನೊಂದು ವರ್ಷ ಪ್ರಾಯ. ತಂದೆಯ ತೀರ್ಪಿಗಿಂತಲೂ ಮಗನ ತೀರ್ಪು ಹೆಚ್ಚು ಸಮರ್ಪಕವಾಗಿದ್ದುದರಿಂದ ತರುವಾಯ ತಂದೆ ಮಗನ ತೀರ್ಪನ್ನು ಅಂಗೀಕರಿಸಿದರು. 686. ಪರ್ವತಗಳನ್ನು ಮತ್ತು ಹಕ್ಕಿಗಳನ್ನು ಪ್ರವಾದಿ ದಾವೂದ್(ಅ) ರಿಗೆ ಅಧೀನಪಡಿಸಿಕೊಟ್ಟಿರುವುದರ ವಿಶದಾಂಶವು ನಮಗೆ ಅಜ್ಞಾತವಾಗಿದೆ. ಅಲ್ಲಾಹುವಿಗೆ ಸಕಲ ವಿಷಯಗಳಲ್ಲೂ ಸಾಮರ್ಥ್ಯವಿದೆ. ಪ್ರವಾದಿ ದಾವೂದ್(ಅ) ರವರ ಇಂಪಾದ ಕೀರ್ತನಾ ಧ್ವನಿಯು ಮೃಗಪಕ್ಷಿಗಳಲ್ಲಿ ಹಾಗೂ ನಿರ್ಜೀವ ವಸ್ತುಗಳಲ್ಲಿ ಸಂಚಲನವನ್ನುಂಟು ಮಾಡಲು ಪರ್ಯಾಪ್ತವಾಗಿತ್ತು. ಝಬೂರ್ ಅಥವಾ ಕೀರ್ತನೆಗಳು ಅವರಿಗೆ ನೀಡಲಾದ ದಿವ್ಯಸಂದೇಶವಾಗಿತ್ತು.
(80) ಯುದ್ಧಾಪಾಯಗಳಿಂದ ನಿಮಗೆ ರಕ್ಷಣೆ ಒದಗಿಸುವ ಸಲುವಾಗಿ ನಿಮಗೋಸ್ಕರ ಯುದ್ಧಕವಚ ನಿರ್ಮಿಸುವುದನ್ನು ನಾವು ಅವರಿಗೆ (ದಾವೂದ್‍ರಿಗೆ) ಕಲಿಸಿಕೊಟ್ಟೆವು. ಹೀಗಿದ್ದೂ ನೀವು ಕೃತಜ್ಞರೇ?
(81) ಬಲವಾಗಿ ಬೀಸುವ ಗಾಳಿಯನ್ನು ನಾವು ಸುಲೈಮಾನ್‍ರಿಗೆ (ಅಧೀನಪಡಿಸಿಕೊಟ್ಟೆವು). ನಾವು ಅನುಗ್ರಹೀತಗೊಳಿಸಿರುವ ಭೂಪ್ರದೇಶಕ್ಕೆ ಅದು ಅವರ ಆಜ್ಞೆ ಪ್ರಕಾರ ಚಲಿಸುತ್ತಿತ್ತು. ನಾವು ಸಕಲ ವಿಷಯಗಳ ಬಗ್ಗೆಯೂ ಅರಿವುಳ್ಳವರಾಗಿರುವೆವು.
(82) ಸೈತಾನರ ಪೈಕಿ ಅವರಿಗಾಗಿ (ಸಮುದ್ರದಲ್ಲಿ) ಮುಳುಗುವ ಕೆಲವರನ್ನು (ನಾವು ಅಧೀನಪಡಿಸಿಕೊಟ್ಟೆವು). ಇದಲ್ಲದೆ ಇನ್ನಿತರ ಕೆಲವು ಕೆಲಸಗಳನ್ನೂ ಅವರು ಮಾಡುತ್ತಿದ್ದರು.(687) ನಾವು ಅವರ ಸಂರಕ್ಷಕರಾಗಿದ್ದೆವು.
687. ಇಲ್ಲಿ ಪ್ರಸ್ತಾಪಿಸಲಾಗಿರುವುದು ಪ್ರವಾದಿ ಸುಲೈಮಾನ್(ಅ) ರಿಗೆ ಅಲ್ಲಾಹು ವಿಶೇಷವಾಗಿ ಕರುಣಿಸಿದ ಎರಡು ಅನುಗ್ರಹಗಳ ಬಗ್ಗೆಯಾಗಿದೆ. ಅವರು ಗಾಳಿಯನ್ನು ಯಾವುದಕ್ಕೆಲ್ಲ ಬಳಸುತ್ತಿದ್ದರೆಂಬುದಕ್ಕೆ ಸ್ಪಷ್ಟವಾದ ಪುರಾವೆಗಳಿಲ್ಲ. ಸಮುದ್ರ ಯಾತ್ರೆಯು ಅದರಲ್ಲಿ ಸೇರಿದ ಒಂದು ಪ್ರಮುಖ ಅಂಗವಾಗಿರಬಹುದು. ಮನುಷ್ಯರಿಗೆ ಅಪಾಯಕರವಾಗಿರುವ ಮುಳುಗುವ ಕೆಲಸಕ್ಕೆ, ನಿರ್ಮಾಣ ಕೆಲಸಕ್ಕೆ ಹಾಗೂ ಇನ್ನಿತರ ಕೆಲಸಕಾರ್ಯಗಳಿಗೆ ಅವರು ಜಿನ್ನ್‌ಗಳನ್ನು ಬಳಸುತ್ತಿದ್ದರೆಂದು ಈ ಸೂಕ್ತಿ ಮತ್ತು ಸೂರಃ ಸಬಅ್‌ನ 12-13 ಸೂಕ್ತಿಗಳು ಸ್ಪಷ್ಟಪಡಿಸುತ್ತವೆ.
(83) ಅಯ್ಯೂಬ್‍ರನ್ನು (ಸ್ಮರಿಸಿರಿ). ಅವರು ತಮ್ಮ ರಬ್ಬನ್ನು ಕರೆದು ಪ್ರಾರ್ಥಿಸಿದ ಸಂದರ್ಭ. “ಖಂಡಿತವಾಗಿಯೂ ನನಗೆ ಸಂಕಷ್ಟ ಬಾಧಿಸಿದೆ. ನೀನು ಕರುಣೆ ತೋರುವವರಲ್ಲೇ ಅತ್ಯಧಿಕ ಕರುಣೆ ತೋರುವವನಾಗಿರುವೆ”.
(84) ಆಗ ನಾವು ಅವರ ಕರೆಗೆ ಉತ್ತರಿಸಿದೆವು ಮತ್ತು ಅವರಲ್ಲಿದ್ದ ಸಂಕಷ್ಟವನ್ನು ನಿವಾರಿಸಿದೆವು. ಅವರಿಗೆ ಅವರ ಕುಟುಂಬವನ್ನೂ ಅವರ ಜೊತೆಗೆ ಅವರಷ್ಟೇ ಇತರರನ್ನೂ ನಮ್ಮ ಕಡೆಯ ಒಂದು ಕಾರುಣ್ಯವಾಗಿ ಮತ್ತು ಆರಾಧಕರಿಗಿರುವ ಒಂದು ಸ್ಮರಣೆಯಾಗಿ ದಯಪಾಲಿಸಿದೆವು.(688)
688. ಮೃತಪಟ್ಟ ಅವರ ಮಕ್ಕಳ ಬದಲು ಅಲ್ಲಾಹು ಅವರಿಗೆ ಹೆಚ್ಚು ಮಕ್ಕಳನ್ನು ದಯಪಾಲಿಸಿದನು ಮತ್ತು ಅವರಿಂದ ದೂರಸರಿದ ಸಂಬಂಧಿಕರನ್ನು ಅವರೆಡೆಗೆ ನಿಕಟಗೊಳಿಸಿದನು. ಮೃತಪಟ್ಟ ಅವರ ಮಕ್ಕಳನ್ನೇ ಅಲ್ಲಾಹು ಅವರಿಗಾಗಿ ಬದುಕಿಸಿದನು ಎಂದು ಅನೇಕ ವ್ಯಾಖ್ಯಾನಕಾರರು ಹೇಳಿದ್ದಾರೆ. ಪ್ರವಾದಿ ಅಯ್ಯೂಬ್‍ರವರ ತಾಳ್ಮೆಯನ್ನು ಅಲ್ಲಾಹು ಪರೀಕ್ಷಿಸುತ್ತಿದ್ದನು. ರೋಗ, ಆರ್ಥಿಕ ನಷ್ಟ, ಸಂತತಿಗಳ ಕ್ಷಯ ಇತ್ಯಾದಿಗಳಾವುದೂ ಅವರ ತಾಳ್ಮೆಯನ್ನು ಕುಂದಿಸಲಿಲ್ಲ. ಅವರ ಅಪಾರ ತಾಳ್ಮೆಗೆ ಅಲ್ಲಾಹು ತಕ್ಕ ಪ್ರತಿಫಲವನ್ನೇ ನೀಡಿದನು.
(85) ಇಸ್ಮಾಈಲ್‍ರನ್ನು, ಇದ್ರೀಸ್‍ರನ್ನು ಮತ್ತು ದುಲ್ ಕಿಫ್ಲ್‍ರನ್ನು (ಸ್ಮರಿಸಿರಿ). ಅವರೆಲ್ಲರೂ ತಾಳ್ಮೆಯುಳ್ಳವರಲ್ಲಿ ಸೇರಿದವರಾಗಿದ್ದರು.
(86) ನಾವು ಅವರನ್ನು ನಮ್ಮ ಕಾರುಣ್ಯದಲ್ಲಿ ಸೇರಿಸಿದೆವು. ಖಂಡಿತವಾಗಿಯೂ ಅವರು ಸಜ್ಜನರಲ್ಲಿ ಸೇರಿದವರಾಗಿರುವರು.
(87) ದುನ್ನೂನ್‍ರನ್ನು(689) (ಸ್ಮರಿಸಿರಿ). ಅವರು ಕುಪಿತರಾಗಿ ಹೊರಟುಹೋದ ಸಂದರ್ಭ.(690) ನಾವು ಅವರನ್ನು ಯಾವತ್ತೂ ಕಷ್ಟಕ್ಕೆ ಸಿಲುಕಿಸಲಾರೆವು ಎಂದು ಅವರು ಭಾವಿಸಿದ್ದರು. ತರುವಾಯ ಅಂಧಕಾರಗಳ ಒಳಗಿನಿಂದ(691) ಅವರು ಕೂಗಿ ಕರೆದರು: “ನಿನ್ನ ಹೊರತು ಅನ್ಯ ಆರಾಧ್ಯರಿಲ್ಲ. ನೀನು ಪರಮ ಪಾವನನು! ಖಂಡಿತವಾಗಿಯೂ ನಾನು ಅಕ್ರಮಿಗಳಲ್ಲಿ ಸೇರಿದವನಾಗಿರುವೆನು”.
689. ‘ದುನ್ನೂನ್’ ಎಂಬ ಪದದ ಅರ್ಥವು ಮೀನಿನವನು ಎಂದಾಗಿದೆ. ಇದು ಮೀನಿನ ಹೊಟ್ಟೆಯಲ್ಲಿ ಸಿಲುಕಿ ಅಲ್ಲಾಹುವಿನ ನೆರವಿನಿಂದ ಪಾರಾದ ಯೂನುಸ್(ಅ) ರವರ ಉಪನಾಮವಾಗಿದೆ. 690. ಅಸ್ಸೀರಿಯಾದ ರಾಜಧಾನಿಯಾಗಿದ್ದ ನೀನೆವಾ ನಗರಕ್ಕೆ ಯೂನುಸ್(ಅ) ರವರು ಪ್ರವಾದಿಯಾಗಿ ಕಳುಹಿಸಲ್ಪಟ್ಟಿದ್ದರು. ಜನರು ತನ್ನ ಉಪದೇಶಕ್ಕೆ ಕಿವಿಗೊಡದಿರುವುದನ್ನು ಕಂಡು ರೋಸಿ ಹೋದ ಯೂನುಸ್(ಅ) ಊರು ಬಿಟ್ಟರು.
691. ಇರುಳು, ಸಮುದ್ರ ಮತ್ತು ಮೀನಿನ ಹೊಟ್ಟೆ ಮೊದಲಾದ ಮೂರು ಕತ್ತಲೆಗಳನ್ನು ಸೇರಿಸಿ ಅಂಧಕಾರಗಳು ಎಂಬ ಬಹುವಚನವನ್ನು ಬಳಸಲಾಗಿರಬಹುದು.
(88) ಆಗ ನಾವು ಅವರ ಕರೆಗೆ ಉತ್ತರಿಸಿದೆವು ಮತ್ತು ಅವರನ್ನು ಸಂಕಟದಿಂದ ಪಾರು ಮಾಡಿದೆವು. ನಾವು ಹೀಗೆ ಸತ್ಯವಿಶ್ವಾಸಿಗಳನ್ನು ಪಾರು ಮಾಡುವೆವು.
(89) ಝಕರಿಯ್ಯಾರನ್ನು (ಸ್ಮರಿಸಿರಿ). ಅವರು ತಮ್ಮ ರಬ್ಬನ್ನು ಕರೆದು ಪ್ರಾರ್ಥಿಸಿದ ಸಂದರ್ಭ: “ನನ್ನ ಪ್ರಭೂ! ನನ್ನನ್ನು (ಉತ್ತರಾಧಿಕಾರಿಗಳಿಲ್ಲದೆ) ಒಂಟಿಯಾಗಿ ಬಿಡದಿರು. ವಾರಸುದಾರರಲ್ಲಿ ನೀನೇ ಅತ್ಯುತ್ತಮನಾಗಿರುವೆ”.
(90) ಆಗ ನಾವು ಅವರ ಕರೆಗೆ ಉತ್ತರಿಸಿದೆವು. ಅವರಿಗೆ ಯಹ್ಯಾ (ಎಂಬ ಮಗ)ನನ್ನು ದಯಪಾಲಿಸಿದೆವು. ಅವರ ಪತ್ನಿಯನ್ನು (ಗರ್ಭಧಾರಣೆಗೆ) ಯೋಗ್ಯಳನ್ನಾಗಿಸಿದೆವು. ಖಂಡಿತವಾಗಿಯೂ ಇವರು (ಪ್ರವಾದಿಗಳು) ಸತ್ಕರ್ಮಗಳೆಡೆಗೆ ಧಾವಂತದಿಂದ ಮುನ್ನುಗ್ಗುವವರೂ, ನಿರೀಕ್ಷೆ ಮತ್ತು ಭಯದಿಂದ ನಮ್ಮೊಂದಿಗೆ ಪ್ರಾರ್ಥಿಸುವವರೂ ಆಗಿದ್ದರು. ಅವರು ನಮ್ಮೊಂದಿಗೆ ವಿಧೇಯತೆಯುಳ್ಳವರಾಗಿದ್ದರು.
(91) ತನ್ನ ಗುಪ್ತಾಂಗವನ್ನು ಸಂರಕ್ಷಿಸಿದಾಕೆಯನ್ನು (ಮರ್ಯಮ್‍ರನ್ನು ಸ್ಮರಿಸಿರಿ). ನಮ್ಮ ಕಡೆಯ ಆತ್ಮದಿಂದ ನಾವು ಆಕೆಗೆ ಊದಿದೆವು. ಆಕೆಯನ್ನೂ, ಆಕೆಯ ಮಗನನ್ನೂ ನಾವು ಸರ್ವಲೋಕದವರಿಗೆ ದೃಷ್ಟಾಂತವನ್ನಾಗಿ ಮಾಡಿದೆವು.
(92) (ಓ ಮನುಷ್ಯರೇ!) ಖಂಡಿತವಾಗಿಯೂ ಇದು ನಿಮ್ಮ ಸಮುದಾಯವಾಗಿದೆ. ಏಕೈಕ ಸಮುದಾಯ! ನಾನು ನಿಮ್ಮ ರಬ್ ಆಗಿರುವೆನು.(692) ಆದುದರಿಂದ ನೀವು ನನ್ನನ್ನು ಆರಾಧಿಸಿರಿ.
692. ಏಕೈಕ ಮನುಕುಲ ಮತ್ತು ಏಕೈಕ ಆರಾಧ್ಯ ಎಂಬ ಮಹಾನ್ ವಿಚಾರಧಾರೆಯೆಡೆಗೆ ಪ್ರವಾದಿಗಳೆಲ್ಲರೂ ಜನರನ್ನು ಆಹ್ವಾನಿಸಿದ್ದರು.
(93) ಆದರೆ ಅವರ ಮಧ್ಯೆ ಅವರು ತಮ್ಮ ಕಾರ್ಯವನ್ನು ನುಚ್ಚುನೂರು ಮಾಡಿದರು. ಎಲ್ಲರೂ ನಮ್ಮೆಡೆಗೇ ಮರಳಿ ಬರುವವರಾಗಿರುವರು.
(94) ಯಾರಾದರೂ ಸತ್ಯವಿಶ್ವಾಸಿಯಾಗಿರುತ್ತಾ ಸತ್ಕರ್ಮಗಳಲ್ಲಿ ಏನನ್ನಾದರೂ ಮಾಡಿದರೆ ಅವನ ಪರಿಶ್ರಮದ ಫಲವನ್ನು (ಅವನಿಗೆ) ನಿಷೇಧಿಸಲ್ಪಡದು. ಖಂಡಿತವಾಗಿಯೂ ನಾವು ಅದನ್ನು ಬರೆದಿಡುವೆವು.
(95) ನಾವು ನಾಶ ಮಾಡಿದ ಯಾವುದೇ ನಾಡಿನ ಮಟ್ಟಿಗೆ ಹೇಳುವುದಾದರೆ ಅದರ ನಿವಾಸಿಗಳು (ಭೂಮಿಗೆ) ಮರಳಿ ಬರಲಾರರೆಂಬುದು ಅಸಂಭವ್ಯವಾಗಿದೆ.(693)
693. ಭೌತಿಕ ನಾಶದೊಂದಿಗೆ ಅವರಿಗಿರುವ ಶಿಕ್ಷೆಯು ಕೊನೆಗೊಳ್ಳುವುದಿಲ್ಲ. ಶಾಶ್ವತ ಶಿಕ್ಷೆಯನ್ನು ಆಸ್ವಾದಿಸುವುದಕ್ಕಾಗಿ ಅವರನ್ನು ಮರಳಿ ಕರೆಯಲಾಗುವುದು. ಇತರ ಕೆಲವು ವ್ಯಾಖ್ಯಾನಗಳನ್ನೂ ಈ ಸೂಕ್ತಿಗೆ ನೀಡಲಾಗಿದೆ.
(96) ಕೊನೆಗೆ ಯಅ್‌ಜೂಜ್ ಮತ್ತು ಮಅ್‌ಜೂಜ್‌ಗಳನ್ನು ತೆರೆದುಬಿಡುವಾಗ(694) ಮತ್ತು ಅವರು ಎಲ್ಲ ದಿಬ್ಬಗಳಿಂದಲೂ ಇಳಿದು ಬರುವಾಗ.
694. ಯಅ್‌ಜೂಜ್ ಮತ್ತು ಮಅ್‌ಜೂಜ್‍ಗೆ ಭೂಮಿಯಾದ್ಯಂತ ಕ್ಷೋಭೆ ಹರಡಲು ಸಾಧ್ಯವಿದೆ ಎಂಬುದು ಲೋಕಾಂತ್ಯವು ಹೆಚ್ಚು ದೂರವಿಲ್ಲ ಎಂಬುದಕ್ಕಿರುವ ಸೂಚನೆಯಾಗಿದೆಯೆಂದು ಇದರಿಂದ ಗ್ರಹಿಸಬಹುದು.
(97) ಆ ಸತ್ಯ ವಾಗ್ದಾನವು ಆಗತವಾಗುವಾಗ ಸತ್ಯನಿಷೇಧಿಗಳ ಕಣ್ಣುಗಳು ಎವೆಯಿಕ್ಕದೆ ನಿಶ್ಚಲವಾಗಿರುವುವು. “ಅಯ್ಯೋ! ನಮ್ಮ ದುರದೃಷ್ಟವೇ! ಇದರ ಬಗ್ಗೆ ನಾವು ಅಲಕ್ಷ್ಯರಾಗಿದ್ದೆವು. ಅಲ್ಲ, ನಾವು ಅಕ್ರಮಿಗಳಾಗಿದ್ದೆವು” (ಎಂದು ಅವರು ಹೇಳುವರು).
(98) ಖಂಡಿತವಾಗಿಯೂ ನೀವು ಮತ್ತು ಅಲ್ಲಾಹುವಿನ ಹೊರತು ನೀವು ಆರಾಧಿಸುವವುಗಳು ನರಕಾಗ್ನಿಯ ಇಂಧನವಾಗುವಿರಿ. ಖಂಡಿತವಾಗಿಯೂ ನೀವು ಅದಕ್ಕೆ ಬಂದು ಸೇದ್ದೀರಿ.
(99) ಇವರು ಆರಾಧ್ಯರಾಗಿರುತ್ತಿದ್ದರೆ ಇವರದಕ್ಕೆ (ನರಕಾಗ್ನಿಗೆ) ಬಂದು ಸೇರುತ್ತಿರಲಿಲ್ಲ. ಅವರೆಲ್ಲರೂ ಅದರಲ್ಲಿ ಶಾಶ್ವತವಾಗಿ ವಾಸಿಸುವರು.
(100) ಅವರಿಗೆ ಅಲ್ಲಿ ದೀರ್ಘವಾದ ನಿಟ್ಟುಸಿರುಗಳಿರುವುವು. ಅದರಲ್ಲಿ ಅವರು (ಏನನ್ನೂ) ಆಲಿಸಲಾರರು.(695)
695. ಇನ್ನೊಬ್ಬರ ಆಕ್ರಂದನವನ್ನು ಆಲಿಸಲಾಗದ ರೀತಿಯಲ್ಲಿ ಪ್ರತಿಯೊಬ್ಬರೂ ಭಯವಿಹ್ವಲರೂ, ವಿಭ್ರಾಂತರೂ ಆಗಿರುವರು.
(101) ಖಂಡಿತವಾಗಿಯೂ ಈಗಾಗಲೇ ನಮ್ಮ ಕಡೆಯಿಂದ ಯಾರಿಗೆ ಒಳಿತು ಸಿಕ್ಕಿದೆಯೋ ಅವರು ಅದರಿಂದ (ನರಕಾಗ್ನಿಯಿಂದ) ದೂರಸರಿಸಲಾಗುವರು.(696)
696. ಅಲ್ಲಾಹುವಿನ ಹೊರತಾಗಿ ಆರಾಧಿಸಲ್ಪಡುವ ಆರಾಧ್ಯರು ನರಕದ ಇಂಧನವಾಗುವರು ಎಂದು ಇಲ್ಲಿ ಹೇಳಲಾಗಿದೆ. ಆದರೆ ಪ್ರವಾದಿ ಈಸಾ, ಉಝೈರ್, ಮಲಕ್‍ಗಳು ಮತ್ತು ಇತರ ಪ್ರವಾದಿಗಳು ಹಾಗೂ ಸತ್ಯವಿಶ್ವಾಸಿಗಳು ಇದರಿಂದ ಹೊರತಾಗಿದ್ದಾರೆ. ಯಾಕೆಂದರೆ ಅವರ ಅರಿವಿಗೆ ಬಾರದೆ ಮತ್ತು ಅವರ ಅಂಗೀಕಾರವಿಲ್ಲದೆ ಅವರನ್ನು ಆರಾಧಿಸಲಾಗುತ್ತಿದೆ.
(102) ಅದರ ಕೃಶವಾದ ಸದ್ದನ್ನೂ ಅವರು ಕೇಳಲಾರರು. ತಮ್ಮ ಮನಸ್ಸುಗಳು ಹಂಬಲಿಸುವ ಸುಖಾಂಡಂಬರಗಳಲ್ಲಿ ಅವರು ಶಾಶ್ವತವಾಗಿ ವಾಸಿಸುವರು.
(103) ಆ ಮಹಾ ಭೀತಿಯು ಅವರಿಗೆ ದುಃಖವನ್ನುಂಟು ಮಾಡದು. ಇದು ನಿಮಗೆ ವಾಗ್ದಾನ ಮಾಡಲಾದ ನಿಮ್ಮ ದಿನವಾಗಿದೆ ಎನ್ನುತ್ತಾ ಮಲಕ್‍ಗಳು ಅವರನ್ನು ಸ್ವಾಗತಿಸುವರು.
(104) ಗ್ರಂಥಗಳ ಹಾಳೆಗಳನ್ನು ಸುರುಳಿಯಾಗಿ ಸುತ್ತುವಂತೆ ನಾವು ಆಕಾಶವನ್ನು ಸುತ್ತುವ ದಿನ. ಸೃಷ್ಟಿಯನ್ನು ಮೊದಲ ಬಾರಿಗೆ ಆರಂಭಿಸಿದಂತೆ ನಾವದನ್ನು ಪುನರಾವರ್ತಿಸುವೆವು. ಅದು ನಮ್ಮ ಮೇಲಿನ ಹೊಣೆಯಾಗಿರುವ ಒಂದು ವಾಗ್ದಾನವಾಗಿದೆ. ಖಂಡಿತವಾಗಿಯೂ ನಾವು (ಅದನ್ನು) ಜಾರಿಗೆ ತಂದೇ ತರುವೆವು.
(105) ಖಂಡಿತವಾಗಿಯೂ ಸಜ್ಜನರಾಗಿರುವ ನನ್ನ ದಾಸರು ಭೂಮಿಯ ಉತ್ತರಾಧಿಕಾರಿಗಳಾಗುವರು ಎಂದು ಉಪದೇಶದ ನಂತರ ನಾವು ಝಬೂರ್‌ನಲ್ಲಿ ದಾಖಲಿಸಿರುವೆವು.(697)
697. ಇಲ್ಲಿ ‘ದಿಕ್ರ್’ ಎಂಬುದರ ತಾತ್ಪರ್ಯದ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಅದು ಅಲ್ಲಾಹುವಿನ ಬಳಿಯಿರುವ ಮೂಲಗ್ರಂಥವೆಂದು ಹೇಳಲಾಗುತ್ತಿದೆ. ತೌರಾತ್ ಎಂದೂ ಹೇಳಲಾಗುತ್ತಿದೆ. ಅದೇ ರೀತಿ ಇಲ್ಲಿ ಹೇಳಲಾದ ಝಬೂರ್ ದಾವೂದ್(ಅ) ರಿಗೆ ನೀಡಲಾದ ಗ್ರಂಥವೆಂದು ಹೇಳಲಾಗುತ್ತದೆ. ಅದು ಕೇವಲ ಒಂದು ಗ್ರಂಥವೆಂದೂ ಹೇಳಲಾಗುತ್ತದೆ.
(106) ಖಂಡಿತವಾಗಿಯೂ ಆರಾಧನಾ ಮಗ್ನರಾಗಿರುವವರಿಗೆ ಇದರಲ್ಲಿ ಒಂದು ಸಂದೇಶವಿದೆ.
(107) ಸರ್ವಲೋಕದವರಿಗೆ ಒಂದು ಕಾರುಣ್ಯವಾಗಿಯಲ್ಲದೆ ನಾವು ತಮ್ಮನ್ನು ಕಳುಹಿಸಿಲ್ಲ.
(108) ಹೇಳಿರಿ: “ನಿಮ್ಮ ಆರಾಧ್ಯನು ಏಕಮೇವ ಆರಾಧ್ಯನಾಗಿರುವನೆಂದು ನನಗೆ ದಿವ್ಯಸಂದೇಶ ನೀಡಲಾಗುತ್ತಿದೆ. ಆದುದರಿಂದ ನೀವು ಮುಸ್ಲಿಮರಾಗುವಿರಾ?”
(109) ಅವರೇನಾದರೂ ವಿಮುಖರಾದರೆ ಹೇಳಿರಿ: “ನಾನು ನಿಮ್ಮೊಂದಿಗೆ ಘೋಷಿಸಿರುವುದು ಸಮಾನ ವಿಧದಲ್ಲಾಗಿದೆ.(698) ನಿಮಗೆ ವಾಗ್ದಾನ ಮಾಡಲಾಗಿರುವ ಸಂಗತಿಯು ಹತ್ತಿರದಲ್ಲಿದೆಯೋ ಅಥವಾ ವಿದೂರದಲ್ಲಿದೆಯೋ ಎಂದು ನನಗೆ ತಿಳಿಯದು.
698. ‘ಅಲಾ ಸವಾಇನ್’ ಎಂಬುದಕ್ಕೆ ಸಮಾನವಾಗಿ, ಸರಿಯಾದ ವಿಧದಲ್ಲಿ ಎಂದು ಅರ್ಥ ನೀಡಬಹುದು. ಅಂದರೆ ವಿಶ್ವಾಸಕ್ಕೆ ಸಂಬಂಧಿಸಿದ ವಿಷಯಗಳು, ವಿಧಿನಿಷೇಧಗಳು, ಯುದ್ಧಗಳು, ಶಾಂತಿಸಂಧಾನಗಳು ಇತ್ಯಾದಿಗಳ ಬಗ್ಗೆ ನಾನು ನಿಮ್ಮೊಂದಿಗೆ ಆದೇಶಿಸಿರುವುದು ಸರಿಯಾದ ವಿಧದಲ್ಲಾಗಿದೆ ಅಥವಾ ಎಲ್ಲರಿಗೂ ಸಮಾನವಾಗಿ ಬಾಧಕವಾಗುವ ರೀತಿಯಲ್ಲಾಗಿದೆ ಎಂದರ್ಥ.
(110) ಖಂಡಿತವಾಗಿಯೂ ಮಾತಿನ ಪೈಕಿ ಬಹಿರಂಗವಾಗಿರುವುದನ್ನು ಅವನು ಅರಿಯುವನು. ನೀವು ಬಚ್ಚಿಡುವುದನ್ನೂ ಅವನು ಅರಿಯುವನು.
(111) ನನಗೆ ತಿಳಿಯದು! ಅದು ನಿಮಗೆ ಒಂದು ಪರೀಕ್ಷೆಯಾಗಿರಲೂಬಹುದು ಮತ್ತು ತಾತ್ಕಾಲಿಕವಾಗಿರುವ ಸುಖಾಡಂಬರವಾಗಿರಲೂಬಹುದು”.
(112) ಅವರು (ಪ್ರವಾದಿ) ಹೇಳಿದರು: “ನನ್ನ ಪ್ರಭೂ! ಸತ್ಯದೊಂದಿಗೆ ತೀರ್ಪು ನೀಡು. ನಮ್ಮ ರಬ್ ಪರಮ ದಯಾಮಯನೂ, ನೀವು ವರ್ಣಿಸುತ್ತಿರುವುದರ ವಿರುದ್ಧ ಸಹಾಯ ಬೇಡಲಾಗುವವನೂ ಆಗಿರುವನು”.