22 - Al-Hajj ()

|

(1) ಓ ಜನರೇ! ನಿಮ್ಮ ರಬ್ಬನ್ನು ಭಯಪಡಿರಿ. ಖಂಡಿತವಾಗಿಯೂ ಅಂತ್ಯಘಳಿಗೆಯ ಕಂಪನವು ಭಯಾನಕ ಸಂಗತಿಯಾಗಿದೆ.

(2) ನೀವದನ್ನು ಕಾಣುವ ದಿನದಂದು ಮೊಲೆಯುಣಿಸುವ ಯಾವುದೇ ತಾಯಿಯು ತಾನು ಮೊಲೆಯುಣಿಸುತ್ತಿರುವ ಮಗುವಿನ ಬಗ್ಗೆ ಅಲಕ್ಷ್ಯಳಾಗುವಳು. ಗರ್ಭಿಣಿಯಾಗಿರುವ ಯಾವುದೇ ಹೆಣ್ಣು ತನ್ನ ಗರ್ಭದಲ್ಲಿರುವುದನ್ನು ಹೆತ್ತು ಬಿಡುವಳು ಮತ್ತು ತಾವು ಜನರನ್ನು ಮತ್ತೇರಿದವರನ್ನಾಗಿ ಕಾಣುವಿರಿ. ಆದರೆ (ವಾಸ್ತವವಾಗಿ) ಅವರು ಮತ್ತೇರಿದವರಲ್ಲ.(699) ಆದರೆ ಅಲ್ಲಾಹುವಿನ ಶಿಕ್ಷೆಯು ಕಠೋರವಾಗಿದೆ.
699. ಅವರನ್ನು ಮತ್ತೇರಿದವರನ್ನಾಗಿ ಮಾಡಿರುವುದು ಅಮಲು ಪದಾರ್ಥಗಳಲ್ಲ. ಬದಲಾಗಿ ಅಂತ್ಯದಿನದ ಭಯವಿಹ್ವಲತೆಯಾಗಿದೆ.

(3) ಯಾವುದೇ ಜ್ಞಾನವಿಲ್ಲದೆ ಅಲ್ಲಾಹುವಿನ ಬಗ್ಗೆ ತರ್ಕಿಸುವ ಮತ್ತು ಧಿಕ್ಕಾರಿಗಳಾದ ಸರ್ವ ಸೈತಾನರನ್ನು ಅನುಸರಿಸುವ ಕೆಲವರು ಜನರಲ್ಲಿರುವರು.

(4) ಯಾರಾದರೂ ಅವನನ್ನು (ಸೈತಾನನನ್ನು) ಮಿತ್ರನನ್ನಾಗಿ ಮಾಡುವುದಾದರೆ ಖಂಡಿತವಾಗಿಯೂ ಅವನು ಅವನನ್ನು ದಾರಿತಪ್ಪಿಸುವನು ಮತ್ತು ಜ್ವಲಿಸುವ ನರಕ ಶಿಕ್ಷೆಯೆಡೆಗೆ ಮುನ್ನಡೆಸುವನು ಎಂದು ಅವನ ಬಗ್ಗೆ ಲಿಖಿತಗೊಳಿಸಲಾಗಿದೆ.

(5) ಓ ಜನರೇ! ಪುನರುತ್ಥಾನದ ಬಗ್ಗೆ ನಿಮಗೆ ಸಂದೇಹವಿದ್ದರೆ (ಚಿಂತಿಸಿರಿ). ಖಂಡಿತವಾಗಿಯೂ ನಾವು ನಿಮ್ಮನ್ನು ಮಣ್ಣಿನಿಂದ,(700) ತರುವಾಯ ವೀರ್ಯದಿಂದ, ತರುವಾಯ ರಕ್ತಪಿಂಡದಿಂದ, ತರುವಾಯ ರೂಪ ನೀಡಲ್ಪಟ್ಟಿರುವ ಮತ್ತು ರೂಪ ನೀಡಲ್ಪಡದಿರುವ ಮಾಂಸ ಮುದ್ದೆಯಿಂದ ಸೃಷ್ಟಿಸಿರುವೆವು. ನಾವು ನಿಮಗೆ ವಿವರಿಸಿಕೊಡುವ ಸಲುವಾಗಿ (ಇದನ್ನು ಹೇಳುತ್ತಿರುವೆವು). ನಾವಿಚ್ಛಿಸುವುದನ್ನು ನಿಶ್ಚಿತವಾದ ಒಂದು ಅವಧಿಯ ತನಕ ನಾವು ಗರ್ಭಾಶಯಗಳಲ್ಲಿ ಇರಿಸುವೆವು. ತರುವಾಯ ನಿಮ್ಮನ್ನು ಶಿಶುವಾಗಿ ಹೊರತರುವೆವು. ತರುವಾಯ ನೀವು ನಿಮ್ಮ ಪೂರ್ಣಶಕ್ತಿಯನ್ನು ತಲುಪುವವರೆಗೆ (ಅವನು ನಿಮ್ಮನ್ನು ಪೋಷಿಸುವನು). ನಿಮ್ಮ ಪೈಕಿ (ಬೇಗನೇ) ಮರಣಹೊಂದುವವರಿರುವರು. ಅರಿವು ಪಡೆದ ಬಳಿಕ ಏನನ್ನೂ ಅರಿತಿರದವರಾಗುವಂತೆ ಅತ್ಯಂತ ಬಲಹೀನವಾದ ಪ್ರಾಯದೆಡೆಗೆ ಮರಳಿಸಲಾಗುವವರೂ ನಿಮ್ಮಲ್ಲಿರುವರು. ಭೂಮಿಯು ಒಣಗಿ ನಿರ್ಜೀವವಾಗಿರುವುದನ್ನು ತಾವು ಕಾಣುವಿರಿ. ತರುವಾಯ ನಾವು ಅದರ ಮೇಲೆ (ಮಳೆ)ನೀರನ್ನು ಸುರಿಸಿದರೆ ಅದಕ್ಕೆ ಪುಳಕವುಂಟಾಗಿ ಅದು ಬೆಳವಣಿಗೆ ಹೊಂದುತ್ತದೆ ಮತ್ತು ಸುಂದರವಾದ ಸರ್ವ ಸಸ್ಯಗಳನ್ನೂ ಅದು ಹೊರತರುತ್ತದೆ.
700. ಮೊಟ್ಟಮೊದಲ ಮನುಷ್ಯನನ್ನು ಜೇಡಿ ಮಣ್ಣಿನ ರೂಪದಿಂದ ಸೃಷ್ಟಿಸಲಾಗಿದೆ. ಪ್ರತಿಯೊಬ್ಬ ಮಾನವನ ಶರೀರವೂ ಮಣ್ಣಿನ ಲವಣಾಂಶಗಳನ್ನು ಹೊಂದಿದೆ.

(6) ಅದು ಏಕೆಂದರೆ ಅಲ್ಲಾಹು ಸತ್ಯವಾಗಿರುವನು, ಖಂಡಿತವಾಗಿಯೂ ಅವನು ಮರಣಹೊಂದಿದವರಿಗೆ ಜೀವ ನೀಡುವನು ಮತ್ತು ಅವನು ಸಕಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು ಎಂಬುದರಿಂದಾಗಿದೆ.

(7) ಅಂತ್ಯಘಳಿಗೆಯು ಖಂಡಿತವಾಗಿಯೂ ಬರುವುದು. ಅದರಲ್ಲಿ ಸಂದೇಹವೇ ಇಲ್ಲ. ಗೋರಿಗಳಲ್ಲಿರುವವರನ್ನು ಅಲ್ಲಾಹು ಪುನರುತ್ಥಾನಗೊಳಿಸುವನು.

(8) ಯಾವುದೇ ಜ್ಞಾನವಾಗಲಿ, ಮಾರ್ಗದರ್ಶಿಯಾಗಲಿ, ಬೆಳಕು ಚೆಲ್ಲುವ ಗ್ರಂಥವಾಗಲಿ ಇಲ್ಲದೆ ಅಲ್ಲಾಹುವಿನ ಬಗ್ಗೆ ತರ್ಕಿಸುವವನು ಜನರಲ್ಲಿರುವನು.

(9) ಅಹಂಕಾರದೊಂದಿಗೆ ತಿರುಗುತ್ತಾ ಅಲ್ಲಾಹುವಿನ ಮಾರ್ಗದಿಂದ (ಜನರನ್ನು) ವ್ಯತಿಚಲನಗೊಳಿಸುವ ಸಲುವಾಗಿ (ಅವನು ಹಾಗೆ ಮಾಡುತ್ತಿರುವನು). ಅವನಿಗೆ ಇಹಲೋಕದಲ್ಲಿ ಅಪಮಾನವಿದೆ. ಪುನರುತ್ಥಾನ ದಿನದಂದು ಸುಟ್ಟು ಕರಕಲಾಗಿಸುವ ಶಿಕ್ಷೆಯನ್ನು ನಾವು ಅವನಿಗೆ ಆಸ್ವಾದಿಸುವಂತೆ ಮಾಡುವೆವು.

(10) (ಅವನೊಂದಿಗೆ ಹೇಳಲಾಗುವುದು): “ಇದು ನಿನ್ನ ಕೈಗಳು ಮುಂಗಡವಾಗಿ ಮಾಡಿಟ್ಟಿರುವುದರಿಂದಾಗಿದೆ ಮತ್ತು ಅಲ್ಲಾಹು (ತನ್ನ) ದಾಸರೊಂದಿಗೆ ಕಿಂಚಿತ್ತೂ ಅನ್ಯಾಯವೆಸಗುವವನಲ್ಲ ಎಂಬುದರಿಂದಲೂ ಆಗಿದೆ”.

(11) ಒಂದು ಅಂಚಿನಲ್ಲಿದ್ದುಕೊಂಡು ಅಲ್ಲಾಹುವನ್ನು ಆರಾಧಿಸುವವನು ಜನರಲ್ಲಿರುವನು. ಅವನಿಗೇನಾದರೂ ಒಳಿತುಂಟಾದರೆ ಅದರಿಂದಾಗಿ ಅವನು ಶಾಂತನಾಗುವನು.(701) ಅವನಿಗೇನಾದರೂ ಪರೀಕ್ಷೆ ಎದುರಾದರೆ ಅವನು ತನ್ನೆಡೆಗೇ ಹೊರಳಿ ಬಿಡುವನು.(702) ಅವನಿಗೆ ಇಹಲೋಕ ಮತ್ತು ಪರಲೋಕವು ನಷ್ಟವಾಗಿದೆ. ಸುಸ್ಪಷ್ಟವಾದ ಇದೇ ಆಗಿದೆ.
701. ಅವನು ಶಾಂತಚಿತ್ತನಾಗಿ ಅಲ್ಲಾಹುವನ್ನು ಆರಾಧಿಸುವನು. 702. ಬಹುದೇವಾರಾಧನೆಯೆಡೆಗೆ ಅಥವಾ ದೇವನಿಷೇಧದೆಡೆಗೆ ಅವನು ಹೊರಳುವನು.

(12) ಅಲ್ಲಾಹುವಿನ ಹೊರತಾಗಿ ತನಗೆ ಹಾನಿಯನ್ನಾಗಲಿ ಲಾಭವನ್ನಾಗಲಿ ಮಾಡದವುಗಳನ್ನು ಅವನು ಕರೆದು ಪ್ರಾರ್ಥಿಸುತ್ತಿರುವನು. ಅತಿವಿದೂರವಾದ ಪಥಭ್ರಷ್ಟತೆಯು ಅದೇ ಆಗಿದೆ.

(13) ಯಾರಿಂದ ಬರುವ ಹಾನಿಯು ಅವನಿಂದ ಬರುವ ಲಾಭಕ್ಕಿಂತಲೂ ಸಮೀಪದಲ್ಲಿದೆಯೋ ಅಂತಹವನನ್ನು ಅವನು ಕರೆದು ಪ್ರಾರ್ಥಿಸುತ್ತಿರುವನು. ಎಷ್ಟೊಂದು ಕೆಟ್ಟ ಸಹಾಯಕನು! ಎಷ್ಟೊಂದು ಕೆಟ್ಟ ಮಿತ್ರನು!(703)
703. ಯಾವ ವ್ಯಕ್ತಿಯು ಮಾಡುವ ಉಪಕಾರಕ್ಕಿಂತಲೂ ಅವನು ಮಾಡುವ ಉಪದ್ರವಗಳು ಹತ್ತಿರವಾಗಿದೆಯೋ ಅವನನ್ನು ಕೆಟ್ಟ ಸಹಾಯಕ, ಕೆಟ್ಟ ಮಿತ್ರ ಎಂದು ಮನುಷ್ಯನು ಪರಲೋಕದಲ್ಲಿ ಕರೆಯುವನು ಎಂದು ಕೂಡ ಈ ಸೂಕ್ತಿಯನ್ನು ಅರ್ಥೈಸಲಾಗುತ್ತದೆ. ‘ಯದ್‍ಊ’ ಎಂಬ ಪದಕ್ಕೆ ಕರೆಯುವನು, ಕರೆದು ಪ್ರಾರ್ಥಿಸುವನು ಇತ್ಯಾದಿ ಅರ್ಥವಿರುವುದರಿಂದ ಈ ವ್ಯಾಖ್ಯಾನ ವ್ಯತ್ಯಾಸವುಂಟಾಗಿದೆ.

(14) ಖಂಡಿತವಾಗಿಯೂ ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರನ್ನು ಅಲ್ಲಾಹು ತಳಭಾಗದಿಂದ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶ ಮಾಡಿಸುವನು. ಖಂಡಿತವಾಗಿಯೂ ಅಲ್ಲಾಹು ಅವನಿಚ್ಛಿಸುವುದನ್ನು ಮಾಡುವನು.

(15) ಅಲ್ಲಾಹು ಅವರಿಗೆ (ಪ್ರವಾದಿಗೆ) ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಸಹಾಯ ಮಾಡಲಾರನೆಂದು ಯಾರಾದರೂ ಭಾವಿಸುವುದಾದರೆ ಅವನು ಆಕಾಶಕ್ಕೆ ಒಂದು ಹಗ್ಗವನ್ನು ಕಟ್ಟಿ (ಪ್ರವಾದಿಯವರಿಗೆ ಸಿಗುತ್ತಿರುವ ಸಹಾಯವನ್ನು) ಕಡಿದು ಹಾಕಲಿ.(704) ತರುವಾಯ ತನ್ನನ್ನು ಕೆರಳಿಸುವ ವಿಷಯವನ್ನು (ಪ್ರವಾದಿಯ ಗೆಲುವನ್ನು) ತನ್ನ ಸಂಚಿನ ಮೂಲಕ ನಿವಾರಿಸಲು ಸಾಧ್ಯವೇ ಎಂದು ಅವನು ನೋಡಲಿ.
704. ಅಲ್ಲಾಹು ತನಗೆಂದಿಗೂ ಸಹಾಯ ಮಾಡಲಾರನು ಎಂದು ಯಾರಾದರೂ ಭಾವಿಸುವುದಾದರೆ ಛಾವಣಿಗೆ ಹಗ್ಗ ಕಟ್ಟಿ ಅವನು ಆತ್ಮಹತ್ಯೆ ಮಾಡಿಕೊಳ್ಳಲಿ ಎಂದು ಕೆಲವರು ಇದನ್ನು ವ್ಯಾಖ್ಯಾನಿಸಿದ್ದಾರೆ.

(16) ಹೀಗೆ ಸ್ಪಷ್ಟವಾದ ದೃಷ್ಟಾಂತಗಳಾಗಿ ನಾವು ಇದನ್ನು (ಗ್ರಂಥವನ್ನು) ಅವತೀರ್ಣಗೊಳಿಸಿರುವೆವು. ಅಲ್ಲಾಹು ಅವನಿಚ್ಛಿಸುವವರನ್ನು ಸನ್ಮಾರ್ಗದೆಡೆಗೆ ಮುನ್ನಡೆ ಸುವನು.

(17) ಸತ್ಯವಿಶ್ವಾಸಿಗಳು, ಯಹೂದಿಗಳು, ಸಾಬಿಈಗಳು, ಕ್ರೈಸ್ತರು, ಮಜೂಸಿಗಳು, ಬಹುದೇವಾರಾಧಕರು, ಮೊದಲಾದವರ ಮಧ್ಯೆ ಪುನರುತ್ಥಾನ ದಿನದಂದು ಖಂಡಿತವಾಗಿಯೂ ಅಲ್ಲಾಹು ತೀರ್ಪು ನೀಡುವನು. ಖಂಡಿತವಾಗಿಯೂ ಅಲ್ಲಾಹು ಸರ್ವ ವಿಷಯಗಳ ಮೇಲೂ ಸಾಕ್ಷಿಯಾಗಿರುವನು.

(18) ಆಕಾಶಗಳಲ್ಲಿರುವವರು, ಭೂಮಿಯಲ್ಲಿರುವವರು, ಸೂರ್ಯ, ಚಂದ್ರ, ತಾರೆಗಳು, ಪರ್ವತಗಳು, ಮರಗಳು, ಜೀವಿಗಳು ಮತ್ತು ಅನೇಕ ಜನರು ಅಲ್ಲಾಹುವಿಗೆ ಸಾಷ್ಟಾಂಗವೆರಗುತ್ತಿರುವರು ಎಂಬುದನ್ನು ತಾವು ಕಾಣುವುದಿಲ್ಲವೇ? (ಇತರ) ಅನೇಕರ ವಿಷಯದಲ್ಲಿ ಶಿಕ್ಷೆಯು ಖಾತ್ರಿಯಾಗಿದೆ. ಅಲ್ಲಾಹು ಯಾರನ್ನಾದರೂ ಅಪಮಾನಿಸುವುದಾದರೆ ಅವನನ್ನು ಗೌರವಿಸುವವರಾರೂ ಇಲ್ಲ. ಖಂಡಿತವಾಗಿಯೂ ಅಲ್ಲಾಹು ಅವನಿಚ್ಛಿಸುವುದನ್ನು ಮಾಡುವನು.

(19) ಈ ಎರಡು ಗುಂಪುಗಳು ಪರಸ್ಪರ ವಿರುದ್ಧವಾಗಿರುವರು. ತಮ್ಮ ರಬ್‌ನ ವಿಷಯದಲ್ಲಿ ಅವರು ತರ್ಕಿಸುತ್ತಿರುವರು. ಅವಿಶ್ವಾಸವಿಟ್ಟವರಾರೋ ಅವರಿಗೆ ಅಗ್ನಿಯ ಉಡುಪುಗಳನ್ನು ಕತ್ತರಿಸಿ ಕೊಡಲಾಗುವುದು. ಅವರ ತಲೆಯ ಮೇಲಿನಿಂದ ಕುದಿಯುವ ನೀರನ್ನು ಸುರಿಯಲಾಗುವುದು.

(20) ಅದರಿಂದಾಗಿ ಅವರ ಉದರಗಳಲ್ಲಿರುವುದು ಮತ್ತು ಅವರ ಚರ್ಮಗಳು ಕರಗಿ ಹೋಗುವುವು.

(21) ಅವರಿಗೆ ಕಬ್ಬಿಣದ ದಂಡಗಳಿರುವುದು.(705)
705. ಲೋಹದ ದಂಡಗಳಿಂದ ಅವರನ್ನು ದಂಡಿಸಲಾಗುವುದು ಎಂದರ್ಥ.

(22) ಅತಿಯಾದ ಬೇಗುದಿಯಿಂದಾಗಿ ಅದರಿಂದ ಹೊರಹೋಗಲು ಅವರು ಬಯಸುವಾಗಲೆಲ್ಲ ಅವರನ್ನು ಅದರೆಡೆಗೇ ಮರಳಿಸಲಾಗುವುದು. “ಸುಟ್ಟು ಕರಕಲಾಗಿಸುವ ಶಿಕ್ಷೆಯ ರುಚಿಯನ್ನು ಆಸ್ವಾದಿಸಿರಿ” (ಎಂದು ಅವರೊಂದಿಗೆ ಹೇಳಲಾಗುವುದು).

(23) ಖಂಡಿತವಾಗಿಯೂ ಸತ್ಯವಿಶ್ವಾಸವಿಟ್ಟವರು ಮತ್ತು ಸತ್ಕರ್ಮಗೈದವರನ್ನು ಅಲ್ಲಾಹು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶ ಮಾಡಿಸುವನು. ಅಲ್ಲಿ ಅವರಿಗೆ ಸ್ವರ್ಣ ಕಡಗಗಳನ್ನೂ, ಮುತ್ತುಗಳನ್ನೂ ತೊಡಿಸಲಾಗುವುದು. ಅಲ್ಲಿ ಅವರಿಗಿರುವ ಉಡುಪು ರೇಶ್ಮೆಯಾಗಿರುವುದು.

(24) ಅವರಿಗೆ ಮಾರ್ಗದರ್ಶನ ಮಾಡಲಾಗಿರುವುದು ಮಾತುಗಳ ಪೈಕಿ ಉತ್ತಮವಾಗಿರುವುದರ ಕಡೆಗಾಗಿದೆ. ಅವರಿಗೆ ಮಾರ್ಗದರ್ಶನ ಮಾಡಲಾಗಿರುವುದು ಸ್ತುತ್ಯರ್ಹನಾದ ಅಲ್ಲಾಹುವಿನ ಮಾರ್ಗದ ಕಡೆಗಾಗಿದೆ.

(25) ಖಂಡಿತವಾಗಿಯೂ ಅವಿಶ್ವಾಸವಿಟ್ಟವರು ಮತ್ತು ಅಲ್ಲಾಹುವಿನ ಮಾರ್ಗದಿಂದ, -ಸ್ಥಳೀಯರೂ, ಹೊರಗಿನವರೂ ಆಗಿರುವ ಎಲ್ಲ ಜನರಿಗೂ ಸಮಾನ ಹಕ್ಕಿರುವುದಾಗಿ ನಾವು ನಿಶ್ಚಯಿಸಿರುವ ಮಸ್ಜಿದುಲ್ ಹರಾಮ್‍ನಿಂದ- ಜನರನ್ನು ತಡೆಯುವವರಾರೋ ಅವರು (ಎಚ್ಚರವಹಿಸಲಿ). ಅಲ್ಲಿ ಯಾರಾದರೂ ಅನ್ಯಾಯವಾಗಿ ಧರ್ಮಬಾಹಿರವಾದ ಏನನ್ನಾದರೂ ಮಾಡಲು ಬಯಸಿದರೆ ಅವನಿಗೆ ನಾವು ಯಾತನಾಮಯವಾದ ಶಿಕ್ಷೆಯನ್ನು ಆಸ್ವಾದಿಸುವಂತೆ ಮಾಡುವೆವು.

(26) ಇಬ್ರಾಹೀಮ್‌ರಿಗೆ ಆ ಭವನದ (ಕಅ್‌ಬಾಲಯದ) ಸ್ಥಾನವನ್ನು ನಾವು ಅನುಕೂಲಮಾಡಿಕೊಟ್ಟ(706) ಸಂದರ್ಭ. “ನನ್ನೊಂದಿಗೆ ಏನನ್ನೂ ಸಹಭಾಗಿಯನ್ನಾಗಿ ಮಾಡದಿರಿ ಮತ್ತು ತವಾಫ್(ಪ್ರದಕ್ಷಿಣೆ) ಮಾಡುವವರಿಗೆ, ನಿಂತು, ಬಾಗಿ ಮತ್ತು ಸಾಷ್ಟಾಂಗವೆರಗಿ ಪ್ರಾರ್ಥಿಸುವವರಿಗೆ ನನ್ನ ಭವನವನ್ನು ಶುದ್ಧೀಕರಿಸಿರಿ” ಎಂದು (ನಾವು ಅವರಿಗೆ ಆಜ್ಞಾಪಿಸಿದೆವು).
706. ‘ಬವ್ವಅ್‌ನಾ’ ಎಂಬ ಪದಕ್ಕೆ ನಾವು ನಿಶ್ಚಯಿಸಿಕೊಟ್ಟೆವು, ನಾವು ಅನುಕೂಲಮಾಡಿಕೊಟ್ಟೆವು, ನಾವು ವಾಸಸ್ಥಳವನ್ನಾಗಿ ಮಾಡಿಕೊಟ್ಟೆವು ಇತ್ಯಾದಿ ಅರ್ಥ ನೀಡಲಾಗಿದೆ.

(27) (ನಾವು ಅವರೊಂದಿಗೆ ಹೇಳಿದೆವು): “ಹಜ್ಜ್‌ನ ಬಗ್ಗೆ ತಾವು ಜನರಿಗೆ ಘೋಷಣೆ ಮಾಡಿರಿ. ಅವರು ಪಾದಚಾರಿಗಳಾಗಿಯೂ, ವಿದೂರವಾದ ಎಲ್ಲ ಪರ್ವತ ಕಣಿವೆಗಳ ಮೂಲಕವೂ, ಎಲ್ಲ ವಿಧದ ಸಣಕಲು ಒಂಟೆಗಳ ಮೇಲೇರಿಯೂ ತಮ್ಮ ಬಳಿಗೆ ಬರುವರು.

(28) ಅವರಿಗೆ ಪ್ರಯೋಜನಕರವಾಗಿರುವ ಸ್ಥಳಗಳಲ್ಲಿ (707) ಅವರು ಉಪಸ್ಥಿತರಿರುವ ಸಲುವಾಗಿ ಮತ್ತು ಅಲ್ಲಾಹು ಅವರಿಗೆ ನೀಡಿರುವ ಜಾನುವಾರುಗಳನ್ನು ನಿಶ್ಚಿತ ದಿನಗಳಲ್ಲಿ ಅವನ ನಾಮವನ್ನು ಉಚ್ಚರಿಸಿ ಬಲಿ ನೀಡುವ ಸಲುವಾಗಿ. ತರುವಾಯ ಅವುಗಳಿಂದ ನೀವು ತಿನ್ನಿರಿ ಮತ್ತು ನಿರ್ಗತಿಕರಿಗೂ, ಬಡವರಿಗೂ ತಿನ್ನಲು ನೀಡಿರಿ.
707. ಹಜ್ಜ್‌ನಿಂದ ಜನರಿಗೆ ಆಧ್ಯಾತ್ಮಿಕವಾದ ಮತ್ತು ಲೌಕಿಕವಾದ ಅನೇಕ ಪ್ರಯೋಜನಗಳಿವೆ. ಮಹಾನ್ ಪುಣ್ಯಕರ್ಮಗಳ ಮೂಲಕ ಅವರಿಗೆ ಅಲ್ಲಾಹುವಿನ ಸಂಪ್ರೀತಿಯನ್ನು ಗಳಿಸಲು ಸಾಧ್ಯವಾಗುತ್ತದೆ. ವಿವಿಧ ದೇಶ, ವರ್ಣ ಮತ್ತು ಭಾಷೆಯ ಜನರನ್ನು ಪರಿಚಯ ಮಾಡಿಕೊಳ್ಳಲು ಮತ್ತು ಪರಸ್ಪರ ವಿಚಾರ ವಿನಿಮಯ ನಡೆಸಲು ಸಾಧ್ಯವಾಗುತ್ತದೆ. ವಿವಿಧ ದೇಶಗಳ ಯಾತ್ರಾರ್ಥಿಗಳು ತಮ್ಮ ತಮ್ಮ ದೇಶಗಳ ಉತ್ಪನ್ನಗಳೊಂದಿಗೆ ಆಗಮಿಸುವುದರಿಂದ ವಾಣಿಜ್ಯ ಪ್ರಯೋಜನಗಳೂ ಲಭ್ಯವಾಗುತ್ತವೆ.

(29) ತರುವಾಯ ಅವರು ತಮ್ಮ ಕೊಳೆಯನ್ನು ನಿವಾರಿಸಲಿ,(708) ತಮ್ಮ ಹರಕೆಗಳನ್ನು ಸಂದಾಯ ಮಾಡಲಿ ಮತ್ತು ಪ್ರಾಚೀನವಾದ ಆ ಭವನವನ್ನು ಪ್ರದಕ್ಷಿಣೆ ಮಾಡಲಿ.
708. ಕ್ಷೌರ ಮಾಡುವುದು, ಉಗುರು ಕತ್ತರಿಸುವುದು ಇತ್ಯಾದಿಗಳನ್ನು ಕೊಳೆ ನಿವಾರಣೆ ಎನ್ನಲಾಗಿದೆ.

(30) ಅದನ್ನು (ಅರ್ಥಮಾಡಿಕೊಳ್ಳಿರಿ). ಅಲ್ಲಾಹು ಪವಿತ್ರಗೊಳಿಸಿರುವ ವಸ್ತುಗಳನ್ನು ಯಾರಾದರೂ ಗೌರವಿಸುವುದಾದರೆ ಅದು ಅವನಿಗೆ ಅವನ ರಬ್‌ನ ಬಳಿ ಒಳಿತಾಗಿದೆ. ನಿಮಗೆ ಓದಿಕೊಡಲಾಗುವುದಕ್ಕೆ ಹೊರತಾಗಿರುವ ಜಾನುವಾರುಗಳನ್ನು ನಿಮಗೆ ಧರ್ಮಸಮ್ಮತಗೊಳಿಸಲಾಗಿದೆ.(709) ಆದುದರಿಂದ ವಿಗ್ರಹಗಳೆಂಬ ಮಾಲಿನ್ಯದಿಂದ ನೀವು ದೂರಸರಿಯಿರಿ ಮತ್ತು ಮಿಥ್ಯಮಾತುಗಳಿಂದಲೂ ದೂರಸರಿಯಿರಿ.
709. ಯಾವುದನ್ನೆಲ್ಲಾ ತಿನ್ನಬಾರದೆಂದು ಸೂರಃ ಅಲ್‍ಮಾಇದಃದಲ್ಲಿ ಹೇಳಲಾಗಿದೆ.

(31) (ನೀವು) ಋಜುಮನಸ್ಕರಾಗಿ ಅಲ್ಲಾಹುವಿನೆಡೆಗೆ ತಿರುಗಿರಿ ಮತ್ತು ಅವನೊಂದಿಗೆ ಸಹಭಾಗಿತ್ವ ಮಾಡುವವರಾಗದಿರಿ. ಯಾರು ಅಲ್ಲಾಹುವಿನೊಂದಿಗೆ ಸಹಭಾಗಿತ್ವ ಮಾಡುವನೋ ಅವನು ಆಕಾಶದಿಂದ ಕೆಳಕ್ಕೆ ಬಿದ್ದವನಂತಿರುವನು. ತರುವಾಯ ಹಕ್ಕಿಗಳು ಅವನನ್ನು ಕಸಿದುಕೊಂಡು ಹೋಗುವುವು. ಅಥವಾ ಗಾಳಿಯು ಅವನನ್ನು ವಿದೂರ ಸ್ಥಳಕ್ಕೆ ಕೊಂಡೊಯ್ಯುವುದು.

(32) ಅದನ್ನು (ಅರ್ಥಮಾಡಿಕೊಳ್ಳಿರಿ). ಯಾರಾದರೂ ಅಲ್ಲಾಹುವಿನ ಧರ್ಮಲಾಂಛನಗಳನ್ನು ಗೌರವಿಸುವುದಾದರೆ ಖಂಡಿತವಾಗಿಯೂ ಅದು ಹೃದಯಗಳಲ್ಲಿರುವ ಭಯಭಕ್ತಿಯಿಂದಾಗಿದೆ.

(33) ಅವುಗಳಲ್ಲಿ ನಿಮಗೆ ಒಂದು ನಿಶ್ಚಿತ ಅವಧಿಯ ತನಕ ಪ್ರಯೋಜನಗಳಿವೆ. ತರುವಾಯ ಅವುಗಳನ್ನು ಬಲಿ ನೀಡಬೇಕಾದ ಸ್ಥಳವು ಆ ಪ್ರಾಚೀನ ಭವನ (ಕಅ್‌ಬಾ)ದಲ್ಲಾಗಿದೆ.

(34) ನಾವು ಪ್ರತಿಯೊಂದು ಸಮುದಾಯಕ್ಕೂ ಒಂದು ಆರಾಧನಾ ಕ್ರಮವನ್ನು(710) ನಿಶ್ಚಯಿಸಿರುವೆವು. ಅಲ್ಲಾಹು ಅವರಿಗೆ ಅನ್ನಾಧಾರವಾಗಿ ನೀಡಿದ ಜಾನುವಾರುಗಳನ್ನು ಅವನ ನಾಮವನ್ನು ಉಚ್ಚರಿಸಿ ಅವರು ಬಲಿ ನೀಡುವ ಸಲುವಾಗಿ. ನಿಮ್ಮ ಆರಾಧ್ಯನು ಏಕಮೇವ ಆರಾಧ್ಯನಾಗಿರುವನು. ಆದುದರಿಂದ ಅವನಿಗೆ ಮಾತ್ರ ಶರಣಾಗಿರಿ. (ಓ ಪ್ರವಾದಿಯವರೇ!) ವಿನಯವಂತರಿಗೆ ಶುಭವಾರ್ತೆಯನ್ನು ತಿಳಿಸಿರಿ.
710. ‘ಮನ್‍ಸಕ್’ ಎಂಬ ಪದಕ್ಕೆ ಆರಾಧನಾ ಕರ್ಮ, ಬಲಿಕರ್ಮ ಎಂಬ ಅರ್ಥಗಳಿವೆ.

(35) ಅವರು ಅಲ್ಲಾಹುವಿನ ಬಗ್ಗೆ ಪ್ರಸ್ತಾಪಿಸಲಾದರೆ ಹೃದಯಗಳು ನಡುಗುವವರೂ, ತಮಗೆ ಬಾಧಿಸಿದ ಆಪತ್ತನ್ನು ತಾಳ್ಮೆಯೊಂದಿಗೆ ಎದುರಿಸುವವರೂ, ನಮಾಝನ್ನು ಸಂಸ್ಥಾಪಿಸುವವರೂ, ನಾವು ನೀಡಿದವುಗಳಿಂದ ವ್ಯಯಿಸುವವರೂ ಆಗಿರುವರು.

(36) ಬಲಿ ಒಂಟೆಗಳನ್ನು ನಾವು ನಿಮಗಾಗಿ ಅಲ್ಲಾಹುವಿನ ಲಾಂಛನಗಳಲ್ಲಿ ಸೇರಿಸಿರುವೆವು. ನಿಮಗೆ ಅದರಲ್ಲಿ ಒಳಿತಿದೆ.(711) ಆದುದರಿಂದ ಅವುಗಳನ್ನು ನೀವು ಸಾಲಾಗಿ ನಿಲ್ಲಿಸಿ ಅವುಗಳ ಮೇಲೆ ಅಲ್ಲಾಹುವಿನ ನಾಮವನ್ನು ಉಚ್ಚರಿಸಿ(ಬಲಿ ನೀಡಿ)ರಿ. ತರುವಾಯ ಅವುಗಳು ತಮ್ಮ ಪಾರ್ಶ್ವಗಳ ಮೇಲೆ ಬಿದ್ದರೆ ನೀವು ಅವುಗಳಿಂದ ತಿನ್ನಿರಿ ಮತ್ತು (ಕೈಚಾಚದೆ) ಸಂತೃಪ್ತನಾಗುವವನಿಗೂ, ಅಗತ್ಯವನ್ನು ಮುಂದಿಟ್ಟು ಕೈಚಾಚುವವನಿಗೂ ತಿನ್ನಲು ನೀಡಿರಿ. ಹೀಗೆ ನೀವು ಕೃತಜ್ಞರಾಗುವ ಸಲುವಾಗಿ ಅವುಗಳನ್ನು ನಾವು ನಿಮಗೆ ಅಧೀನಪಡಿಸಿಕೊಟ್ಟಿರುವೆವು.
711. ಬಲಿ ನೀಡುವವರೆಗೆ ಅವುಗಳನ್ನು ಸವಾರಿ ಮತ್ತಿತರ ಉಪಯೋಗಗಳಿಗಾಗಿ ಬಳಸಬಹುದು. ಬಲಿಯ ಮೂಲಕ ಆಧ್ಯಾತ್ಮಿಕ ಲಾಭಗಳನ್ನು ಪಡೆಯಬಹುದು.

(37) ಖಂಡಿತವಾಗಿಯೂ ಅವುಗಳ ಮಾಂಸವಾಗಲಿ, ರಕ್ತವಾಗಲಿ ಅಲ್ಲಾಹುವನ್ನು ತಲುಪಲಾರದು. ಆದರೆ ನಿಮ್ಮ ಭಯಭಕ್ತಿಯು ಅವನನ್ನು ತಲುಪುವುದು. ಅಲ್ಲಾಹು ನಿಮಗೆ ಮಾರ್ಗದರ್ಶನ ಮಾಡಿರುವುದರಿಂದ ನೀವು ಅವನ ಮಹತ್ವವನ್ನು ಕೊಂಡಾಡಲು ಹೀಗೆ ಅವನು ಅವುಗಳನ್ನು ನಿಮಗೆ ಅಧೀನಪಡಿಸಿಕೊಟ್ಟಿರುವನು. (ಓ ಪ್ರವಾದಿಯವರೇ!) ಸತ್ಕರ್ಮಿಗಳಿಗೆ ಶುಭವಾರ್ತೆ ನೀಡಿರಿ.

(38) ಖಂಡಿತವಾಗಿಯೂ ಅಲ್ಲಾಹು ಸತ್ಯವಿಶ್ವಾಸಿಗಳಿಗಾಗಿ ಪ್ರತಿರೋಧ ಒಡ್ಡುವನು. ಕೃತಘ್ನನಾಗಿರುವ ಯಾವುದೇ ವಂಚಕನನ್ನೂ ಖಂಡಿತವಾಗಿಯೂ ಅಲ್ಲಾಹು ಮೆಚ್ಚಲಾರನು.

(39) ಯುದ್ಧಕ್ಕೆ ಬಲಿಯಾಗುವವರಿಗೆ, ಅವರು ಮರ್ದಿತರಾಗಿರುವುದರಿಂದ (ತಿರುಗೇಟು ನೀಡಲು) ಅನುಮತಿ ನೀಡಲಾಗಿದೆ.(712) ಖಂಡಿತವಾಗಿಯೂ ಅವರಿಗೆ ನೆರವು ನೀಡಲು ಅಲ್ಲಾಹು ಸಮರ್ಥನಾಗಿರುವನು.
712. ಶತ್ರುಗಳು ಎಷ್ಟೇ ಹಿಂಸೆ ನೀಡಿದರೂ ತಾಳ್ಮೆ ವಹಿಸಬೇಕೆಂದು ಆರಂಭಕಾಲದಲ್ಲಿ ಸತ್ಯವಿಶ್ವಾಸಿಗಳಿಗೆ ಆದೇಶಿಸಲಾಗಿತ್ತು. ಈ ಸೂಕ್ತಿಯ ಮೂಲಕ ತಿರುಗೇಟು ನೀಡಲು ಸತ್ಯವಿಶ್ವಾಸಿಗಳಿಗೆ ಅನುಮತಿ ನೀಡಲಾಯಿತು.

(40) “ನಮ್ಮ ರಬ್ ಅಲ್ಲಾಹುವಾಗಿರುವನು” ಎಂದು ಹೇಳಿರುವ ಕಾರಣಕ್ಕಾಗಿ ಮಾತ್ರ ಅವರನ್ನು ಅನ್ಯಾಯವಾಗಿ ಅವರ ಮನೆಗಳಿಂದ ಹೊರಗಟ್ಟಲಾಗಿದೆ. ಜನರ ಪೈಕಿ ಕೆಲವರನ್ನು ಇತರ ಕೆಲವರ ಮೂಲಕ ಅಲ್ಲಾಹು ತಡೆಯೊಡ್ಡದಿರುತ್ತಿದ್ದರೆ ಅನೇಕ ಸನ್ಯಾಸಿಪೀಠಗಳು, ಕ್ರೈಸ್ತ ಚರ್ಚುಗಳು, ಯಹೂದ ಮಂದಿರಗಳು ಮತ್ತು ಅಲ್ಲಾಹುವಿನ ನಾಮವನ್ನು ಹೇರಳವಾಗಿ ಉಚ್ಚರಿಸಲ್ಪಡುವ ಮಸೀದಿಗಳು ಧ್ವಂಸವಾಗುತ್ತಿದ್ದವು!(713) ತನಗೆ ಸಹಾಯ ಮಾಡುವವರಿಗೆ ಖಂಡಿತವಾಗಿಯೂ ಅಲ್ಲಾಹು ಸಹಾಯ ಮಾಡುವನು. ಖಂಡಿತವಾಗಿಯೂ ಅಲ್ಲಾಹು ಬಲಿಷ್ಠನೂ, ಪ್ರತಾಪಶಾಲಿಯೂ ಆಗಿರುವನು.
713. ಲಂಗುಲಗಾಮಿಲ್ಲದ ಧಿಕ್ಕಾರದೊಂದಿಗೆ ಹತ್ಯಾಕಾಂಡವನ್ನು ಮುಂದುವರಿಸಲು ಯಾವುದೇ ಜನತೆಗೂ ಅಲ್ಲಾಹು ಅವಕಾಶ ನೀಡಲಾರನು. ಒಂದು ಗುಂಪಿನ ಆಕ್ರಮಣಕ್ಕೆ ಬೇರೊಂದು ಗುಂಪಿನಿಂದ ತಡೆಯೊಡ್ಡುವ ಮೂಲಕ ಅಲ್ಲಾಹು ಭೂಮಿಯಲ್ಲಿ ಬಲ ಸಮತೋಲನವನ್ನು ಕಾಯ್ದುಕೊಳ್ಳುತ್ತಾನೆ. ಆರಾಧನಾಲಯಗಳು ಮತ್ತು ಆರಾಧನಾಮಗ್ನರಾಗಿರುವ ಸಾತ್ವಿಕರು ತನ್ಮೂಲಕ ನಿರ್ನಾಮದಿಂದ ಸಂರಕ್ಷಣೆ ಪಡೆಯುತ್ತಾರೆ.

(41) ನಾವು ಅವರಿಗೆ (ಮರ್ದಿತರಿಗೆ) ಭೂಮಿಯಲ್ಲಿ ಅಧಿಕಾರವನ್ನು ನೀಡಿದರೆ ಅವರು ನಮಾಝ್ ಸಂಸ್ಥಾಪಿಸುವರು, ಝಕಾತ್ ನೀಡುವರು, ಸದಾಚಾರವನ್ನು ಆದೇಶಿಸುವರು ಮತ್ತು ದುರಾಚಾರವನ್ನು ವಿರೋಧಿಸುವರು. ಕಾರ್ಯಗಳ ಪರ್ಯಾವಸಾನವು ಅಲ್ಲಾಹುವಿಗಾಗಿದೆ.

(42) (ಓ ಪ್ರವಾದಿಯವರೇ!) ಅವರು ತಮ್ಮನ್ನು ತಿರಸ್ಕರಿಸುವುದಾದರೆ ಅವರಿಗಿಂತ ಮುಂಚೆ ನೂಹ್‍ರ ಜನತೆ, ಆದ್ ಮತ್ತು ಸಮೂದ್ (ಪ್ರವಾದಿಗಳನ್ನು) ತಿರಸ್ಕರಿಸಿದ್ದರು.

(43) ಇಬ್ರಾಹೀಮ್‌ರ ಜನತೆ ಮತ್ತು ಲೂತ್‍ರ ಜನತೆ ಕೂಡ (ತಿರಸ್ಕರಿಸಿದ್ದರು).

(44) ಮದ್‍ಯನ್ ನಿವಾಸಿಗಳೂ (ತಿರಸ್ಕರಿಸಿದ್ದರು). ಮೂಸಾ ಕೂಡ ತಿರಸ್ಕರಿಸಲ್ಪಟ್ಟಿರುವರು. ಆದರೆ ನಾನು ಸತ್ಯನಿಷೇಧಿಗಳಿಗೆ ಸಮಯವನ್ನು ವಿಸ್ತರಿಸಿಕೊಟ್ಟೆನು. ತರುವಾಯ ಅವರನ್ನು ಶಿಕ್ಷಿಸಿದೆನು. ಆಗ ನನ್ನ ಶಿಕ್ಷೆಯು ಹೇಗಿತ್ತು!

(45) ಎಷ್ಟೋ ನಾಡುಗಳನ್ನು ಅವುಗಳ ನಿವಾಸಿಗಳು ಅಕ್ರಮದಲ್ಲಿ ನಿರತರಾದಾಗ ನಾವು ನಾಶ ಮಾಡಿರುವೆವು. ಅವು ತಮ್ಮ ಮೇಲ್ಛಾವಣಿಗಳೊಂದಿಗೆ ಕುಸಿದು ಬಿದ್ದವು. ಪಾಳುಬಿದ್ದ ಎಷ್ಟೊಂದು ಬಾವಿಗಳು! ಎತ್ತರಿಸಿ ಕಟ್ಟಲಾದ ಎಷ್ಟೊಂದು ಕೋಟೆಗಳು!

(46) ಅವರು ಭೂಮಿಯಲ್ಲಿ ಸಂಚರಿಸುವುದಿಲ್ಲವೇ? ಹಾಗಾದರೆ ಚಿಂತಿಸಿ ಗ್ರಹಿಸುವ ಹೃದಯಗಳು ಅಥವಾ ಆಲಿಸಿ ತಿಳಿಯುವ ಕಿವಿಗಳು ಅವರಿಗಿರುತ್ತಿದ್ದವು. ಖಂಡಿತವಾಗಿಯೂ ಕುರುಡಾಗುವುದು ಕಣ್ಣುಗಳಿಗಲ್ಲ, ಆದರೆ ಕುರುಡಾಗುವುದು ಎದೆಗಳೊಳಗಿರುವ ಹೃದಯಗಳಾಗಿವೆ.(714)
714. ಬದುಕಿಗೆ ಸತ್ಯದ ಪ್ರಕಾಶವು ಪ್ರವೇಶಿಸಲು ಕಣ್ಣಿನ ಅಂಧತೆಯು ಎಂದೂ ತಡೆಯೊಡ್ಡಲಾರದು. ಆದರೆ ಹೃದಯವು ಕುರುಡಾದರೆ ಅಸತ್ಯದ ಅಂಧಕಾರವು ಬದುಕಿನಾದ್ಯಂತ ಪಸರಿಸುತ್ತದೆ.

(47) (ಓ ಪ್ರವಾದಿಯವರೇ!) ಅವರು ತಮ್ಮೊಂದಿಗೆ ಶಿಕ್ಷೆಗಾಗಿ ಆತುರಪಡುತ್ತಿರುವರು. ಆದರೆ ಅಲ್ಲಾಹು ತನ್ನ ವಾಗ್ದಾನವನ್ನು ಎಂದಿಗೂ ಉಲ್ಲಂಘಿಸಲಾರನು. ಖಂಡಿತವಾಗಿಯೂ ತಮ್ಮ ರಬ್‌ನ ಬಳಿ ಒಂದು ದಿನವೆಂದರೆ ನೀವು ಎಣಿಸುವ ಸಾವಿರ ವರ್ಷಗಳಂತಾಗಿವೆ.(715)
715. ಸೂರ್ಯ ಅಸಂಖ್ಯ ಕೋಟಿ ನಕ್ಷತ್ರಗಳ ಪೈಕಿ ಒಂದಾಗಿದೆ. ಒಂದು ದಿನವೆಂದರೆ ಅದು ಸೌರವ್ಯೂಹದ ಗ್ರಹಗಳಲ್ಲೊಂದಾದ ಭೂಮಿಯಲ್ಲಿ, ಸೂರ್ಯ ಮತ್ತು ಭೂಮಿ ಪರಸ್ಪರ ಹೊಂದಿರುವ ನಂಟಿನ ಆಧಾರದಲ್ಲಿ ನಿರ್ಣಯಿಸಲಾಗುವ ಒಂದು ಅವಧಿಯಾಗಿದೆ. ಒಂದು ಸಂಗತಿಯು ಸನ್ನಿಹಿತವಾಗಿದೆ ಎಂದರೆ ಮನುಷ್ಯನ ಮಟ್ಟಿಗೆ ಅದು ಒಂದೋ ಎರಡೋ ದಿನಗಳಲ್ಲಿ ಸಂಭವಿಸುವಂತದ್ದಾಗಿರಬಹುದು. ಆದರೆ ಆದಿ ಮತ್ತು ಅಂತ್ಯವಿಲ್ಲದ ಅಲ್ಲಾಹುವಿನ ಮಟ್ಟಿಗೆ ಕಾಲವೆಂದರೆ ಅದು ಗ್ರಹ ನಕ್ಷತ್ರಗಳ ಪರಿಮಿತಿಯಲ್ಲಿ ಸೀಮಿತವಾಗಿರುವುದಲ್ಲ. ಅವನ ಮಟ್ಟಿಗೆ ಒಂದು ದಿನವೆಂದರೆ ಅದು ಸಹಸ್ರಾರು ವರ್ಷಗಳಷ್ಟು ದೀರ್ಘವಾಗಿರುವ ಒಂದು ಯುಗವಾಗಿರಬಹುದು.

(48) ಅಕ್ರಮ ನಿರತವಾಗಿದ್ದ ಎಷ್ಟೋ ನಾಡುಗಳಿಗೆ ನಾನು ಕಾಲಾವಕಾಶವನ್ನು ವಿಸ್ತರಿಸಿಕೊಟ್ಟೆನು. ತರುವಾಯ ಅವರನ್ನು ಹಿಡಿದೆನು. (ಎಲ್ಲದರ) ಮರಳುವಿಕೆಯು ನನ್ನ ಬಳಿಗಾಗಿದೆ.

(49) (ಓ ಪ್ರವಾದಿಯವರೇ!) ಹೇಳಿರಿ: “ಓ ಜನರೇ! ನಾನು ನಿಮ್ಮೆಡೆಗಿರುವ ಒಬ್ಬ ಸ್ಪಷ್ಟ ಮುನ್ನೆಚ್ಚರಿಕೆ ನೀಡುವವನು ಮಾತ್ರವಾಗಿರುವೆನು”.

(50) ಆದರೆ ವಿಶ್ವಾಸವಿಟ್ಟು ಸತ್ಕರ್ಮವೆಸಗುವವರಾರೋ ಅವರಿಗೆ ಪಾಪಮುಕ್ತಿಯೂ, ಗೌರವಾನ್ವಿತ ಅನ್ನಾಧಾರವೂ ಇರುವುದು.

(51) (ನಮ್ಮನ್ನು) ಸೋಲಿಸಬಹುದೆಂದು ಭಾವಿಸಿ ನಮ್ಮ ದೃಷ್ಟಾಂತಗಳನ್ನು ವಿಕೃತಗೊಳಿಸಲು ಯತ್ನಿಸುವವರಾರೋ ಅವರು ನರಕವಾಸಿಗಳಾಗಿರುವರು.

(52) ತಮಗಿಂತ ಮೊದಲು ನಾವು ಯಾವುದೇ ಸಂದೇಶವಾಹಕರನ್ನಾಗಲಿ, ಪ್ರವಾದಿಯನ್ನಾಗಲಿ ಕಳುಹಿಸಿರಲಿಲ್ಲ, ಅವರು ಓದಿಕೊಡುವಾಗ ಆ ಓದಿಕೊಡುವ ವಿಷಯದಲ್ಲಿ ಸೈತಾನನು (ತನ್ನ ದುರ್ಬೋಧನೆಯನ್ನು) ಹಾಕದಿರದ ಹೊರತು.(716) ಆದರೆ ಸೈತಾನನು ಹಾಕಿರುವುದನ್ನು ಅಲ್ಲಾಹು ಅಳಿಸುವನು. ತರುವಾಯ ಅಲ್ಲಾಹು ತನ್ನ ಸೂಕ್ತಿಗಳನ್ನು ಪ್ರಬಲಗೊಳಿಸುವನು. ಅಲ್ಲಾಹು ಎಲ್ಲವನ್ನು ಯುಕ್ತಿಪೂರ್ಣನೂ ಆಗಿರುವನು.
716. ಯಾವುದೇ ಪ್ರವಾದಿಯೂ ಅಲ್ಲಾಹುವಿನ ವಚನಗಳನ್ನು ಜನರಿಗೆ ಓದಿಕೊಡುವಾಗ ಅದರಲ್ಲಿ ಆಶಯಗೊಂದಲವನ್ನುಂಟು ಮಾಡಲು ಸೈತಾನನು ಪರಿಶ್ರಮಿಸುತ್ತಿದ್ದನು. ಒಮ್ಮೆ ಅವೆಲ್ಲವೂ ಬುದ್ಧಿಭ್ರಮಣೆಯಾದವನ ಊಹೆಗಳಾಗಿವೆ ಎಂದು, ಇನ್ನೊಮ್ಮೆ ಅವೆಲ್ಲವೂ ಪುರಾಣಗಳೆಂದು, ಮತ್ತೊಮ್ಮೆ ಯಾರಿಂದಲೋ ಕಲಿತ ವಿದ್ಯೆಯೆಂದು, ಮಗದೊಮ್ಮೆ ಮಾಂತ್ರಿಕ ವಿದ್ಯೆಯೆಂದೂ ಸೈತಾನನು ಜನರಿಂದ ಹೇಳಿಸುತ್ತಿದ್ದನು.

(53) ಸೈತಾನನು ಹಾಕಿಕೊಡುವ ವಿಷಯವನ್ನು ಹೃದಯಗಳಲ್ಲಿ ರೋಗವಿರುವವರಿಗೆ ಮತ್ತು ಹೃದಯಗಳು ಕಠೋರವಾಗಿರುವವರಿಗೆ ಒಂದು ಪರೀಕ್ಷೆಯನ್ನಾಗಿ ಮಾಡುವ ಸಲುವಾಗಿ. ಖಂಡಿತವಾಗಿಯೂ ಅಕ್ರಮಿಗಳು (ಸತ್ಯದಿಂದ) ವಿದೂರವಾದ ವಿರೋಧದಲ್ಲಿರುವರು.

(54) ಜ್ಞಾನ ನೀಡಲಾದವರು ಇದು ತಮ್ಮ ರಬ್‌ನ ಕಡೆಯ ಸತ್ಯವಾಗಿದೆಯೆಂದು ಅರಿತು ಇದರಲ್ಲಿ ವಿಶ್ವಾಸವಿಡುವುದಕ್ಕಾಗಿಯೂ, ತರುವಾಯ ಅವರ ಹೃದಯಗಳು ಇದಕ್ಕೆ ಶರಣಾಗುವುದಕ್ಕಾಗಿಯೂ (ಅದು ಕಾರಣವಾಗುವುದು). ಖಂಡಿತವಾಗಿಯೂ ಅಲ್ಲಾಹು ಸತ್ಯವಿಶ್ವಾಸಿಗಳನ್ನು ನೇರವಾದ ಮಾರ್ಗದೆಡೆಗೆ ಮುನ್ನಡೆಸುವವನಾಗಿರುವನು.

(55) ಅಂತ್ಯದಿನವು ಅವರ ಬಳಿಗೆ ಅನಿರೀಕ್ಷಿತವಾಗಿ ಬರುವ ತನಕ ಅಥವಾ ವಿನಾಶಕಾರಿ ದಿನವೊಂದರ ಶಿಕ್ಷೆಯು ಅವರ ಬಳಿಗೆ ಬರುವ ತನಕ ಆ ಸತ್ಯನಿಷೇಧಿಗಳು ಇದರ (ಸತ್ಯದ) ಬಗ್ಗೆ ಸಂದೇಹಪಡುತ್ತಲೇ ಇರುವರು.

(56) ಅಂದು ಆಧಿಪತ್ಯವು ಅಲ್ಲಾಹುವಿಗಾಗಿರುವುದು. ಅವನು ಅವರ ಮಧ್ಯೆ ತೀರ್ಪು ನೀಡುವನು. ಆದುದರಿಂದ ವಿಶ್ವಾಸವಿಟ್ಟವರು ಮತ್ತು ಸತ್ಕರ್ಮಗೈದವರಾರೋ ಅವರು ಸುಖಾನುಭೂತಿಯ ಸ್ವರ್ಗೋದ್ಯಾನಗಳಲ್ಲಿರುವರು.

(57) ಅವಿಶ್ವಾಸವಿಟ್ಟವರು ಮತ್ತು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರಾರೋ ಅವರಿಗೆ ಅವಮಾನಕರ ಶಿಕ್ಷೆಯಿದೆ.

(58) ಅಲ್ಲಾಹುವಿನ ಮಾರ್ಗದಲ್ಲಿ ವಲಸೆ ಹೋದವರು, ತರುವಾಯ ವಧಿಸಲ್ಪಟ್ಟವರು ಅಥವಾ ಮರಣ ಹೊಂದಿದವರು(717) ಯಾರೋ ಖಂಡಿತವಾಗಿಯೂ ಅಲ್ಲಾಹು ಅವರಿಗೆ ಉತ್ತಮವಾದ ಅನ್ನಾಧಾರವನ್ನು ಒದಗಿಸುವನು. ಖಂಡಿತವಾಗಿಯೂ ಅನ್ನಾಧಾರ ಒದಗಿಸುವವರಲ್ಲಿ ಅಲ್ಲಾಹು ಅತ್ಯುತ್ತಮನಾಗಿರುವನು.
717. ಅಲ್ಲಾಹುವಿನ ಮಾರ್ಗದಲ್ಲಿ ತ್ಯಾಗ ಮಾಡಿದವರು ರಣರಂಗದಲ್ಲಿ ವಧಿಸಲ್ಪಟ್ಟರೂ, ಯುದ್ಧದಲ್ಲಿ ಗೆಲುವು ಪಡೆದು ಸಹಜ ಮರಣವನ್ನಪ್ಪಿದರೂ ಅವರು ಅಲ್ಲಾಹುವಿನ ಅನುಗ್ರಹಕ್ಕೆ ಪಾತ್ರರಾಗುವರು.

(59) ಖಂಡಿತವಾಗಿಯೂ ಅವರು ಸಂತೃಪ್ತರಾಗುವ ಒಂದು ಸ್ಥಳಕ್ಕೆ ಅಲ್ಲಾಹು ಅವರನ್ನು ಪ್ರವೇಶ ಮಾಡಿಸುವನು. ಖಂಡಿತವಾಗಿಯೂ ಅಲ್ಲಾಹು ಸರ್ವಜ್ಞನೂ, ಸಹನಾಶೀಲನೂ ಆಗಿರುವನು.

(60) ಅದು (ಹಾಗೆಯೇ ಆಗಿದೆ). ತನಗೆ ನೀಡಲಾದ ಶಿಕ್ಷೆಗೆ ಸಮಾನವಾದ ಶಿಕ್ಷೆಯ ಮೂಲಕ ಯಾರಾದರೂ ಪ್ರತೀಕಾರ ಕೈಗೊಂಡರೆ, ತರುವಾಯ ಅವನ ಮೇಲೆ ಅತಿಕ್ರಮವೆಸಗಲಾದರೆ(718) ಖಂಡಿತವಾಗಿಯೂ ಅಲ್ಲಾಹು ಅವನಿಗೆ ಸಹಾಯ ಮಾಡುವನು. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಮನ್ನಿಸುವವನೂ ಕ್ಷಮಿಸುವವನೂ ಆಗಿರುವನು.
718. ಮುಸ್ಲಿಮರ ಕಡೆಯಿಂದ ಯಾವುದೇ ಸಂದರ್ಭದಲ್ಲೂ ಅತಿಕ್ರಮವೋ ದಾಳಿಯೋ ಉಂಟಾಗಕೂಡದು. ಆದರೆ ಮುಸ್ಲಿಮರು ಆಕ್ರಮಣಕ್ಕೊಳಗಾದರೆ ಸಮಾನ ಪ್ರಮಾಣದಲ್ಲಿ ಪ್ರತ್ಯಾಕ್ರಮಣ ಮಾಡಲು ಅವರಿಗೆ ಅನುಮತಿಯಿದೆ. ಪುನಃ ಮುಸ್ಲಿಮರು ಆಕ್ರಮಣಕ್ಕೊಳಗಾದರೆ ಅವರಿಗೆ ಅಲ್ಲಾಹು ಸಹಾಯದ ಭರವಸೆಯನ್ನು ನೀಡುತ್ತಾನೆ.

(61) ಅದು ಏಕೆಂದರೆ ಅಲ್ಲಾಹು ರಾತ್ರಿಯನ್ನು ಹಗಲಿನಲ್ಲಿ ಪ್ರವೇಶ ಮಾಡಿಸುವವನು ಮತ್ತು ಹಗಲನ್ನು ರಾತ್ರಿಯಲ್ಲಿ ಪ್ರವೇಶ ಮಾಡಿಸುವವನು ಮತ್ತು ಅಲ್ಲಾಹು ಎಲ್ಲವನ್ನು ಆಲಿಸುವವನೂ, ವೀಕ್ಷಿಸುವವನೂ ಆಗಿರುವನು ಎಂಬುದರಿಂದಾಗಿದೆ.

(62) ಅದು ಏಕೆಂದರೆ ಅಲ್ಲಾಹು ಸತ್ಯವಾಗಿರುವನು,(719) ಅವನ ಹೊರತು ಅವರು ಏನನ್ನು ಕರೆದು ಪ್ರಾರ್ಥಿಸುತ್ತಿರುವರೋ ಅದು ಮಿಥ್ಯೆಯಾಗಿದೆ ಮತ್ತು ಅಲ್ಲಾಹು ಅತ್ಯುನ್ನತನೂ ಮಹಾನನೂ ಆಗಿರುವನು ಎಂಬುದರಿಂದಾಗಿದೆ.
719. ಅಲ್ಲಾಹುವಿನ ಅಸ್ತಿತ್ವವು ಶಾಶ್ವತವಾದ ಸತ್ಯವಾಗಿದೆ. ಇತರೆಲ್ಲರ ಅಸ್ತಿತ್ವವು ಕ್ಷಣಿಕವೂ ನಶ್ವರವೂ ಆಗಿದೆ.

(63) ಅಲ್ಲಾಹು ಆಕಾಶದಿಂದ (ಮಳೆ)ನೀರನ್ನು ಸುರಿಸಿ, ತರುವಾಯ ಭೂಮಿಯು ಅದರಿಂದಾಗಿ ಹಸಿರಾಗುವುದನ್ನು ತಾವು ಕಾಣುವುದಿಲ್ಲವೇ? ಖಂಡಿತವಾಗಿಯೂ ಅಲ್ಲಾಹು ಅತ್ಯಂತ ಸೂಕ್ಷ್ಮಜ್ಞನೂ ಸೂಕ್ಷ್ಮಜ್ಞಾನಿಯೂ ಆಗಿರುವನು.

(64) ಭೂಮ್ಯಾಕಾಶಗಳಲ್ಲಿ ಇರುವುದೆಲ್ಲವೂ ಅವನದ್ದಾಗಿವೆ. ಖಂಡಿತವಾಗಿಯೂ ಅಲ್ಲಾಹು ನಿರಪೇಕ್ಷನೂ ಸ್ತುತ್ಯರ್ಹನೂ ಆಗಿರುವನು.

(65) ಅಲ್ಲಾಹು ನಿಮಗೆ ಭೂಮಿಯಲ್ಲಿರುವುದನ್ನು ಅಧೀನಪಡಿಸಿಕೊಟ್ಟಿರುವನು ಎಂಬುದನ್ನು ತಾವು ಕಾಣುವುದಿಲ್ಲವೇ? ಅವನ ಆಜ್ಞೆಯಂತೆ ಸಮುದ್ರದ ಮೂಲಕ ಸಂಚರಿಸುವ ಹಡಗನ್ನೂ (ಅವನು ಅಧೀನಪಡಿಸಿಕೊಟ್ಟಿರುವನು). ತನ್ನ ಅಪ್ಪಣೆಯ ವಿನಾ ಭೂಮಿಯ ಮೇಲೆ ಬೀಳದಂತೆ ಅವನು ಆಕಾಶವನ್ನು ಆಧರಿಸಿ ಹಿಡಿದಿರುವನು.(720) ಖಂಡಿತವಾಗಿಯೂ ಅಲ್ಲಾಹು ಜನರೊಂದಿಗೆ ಅತ್ಯಧಿಕ ದಯೆಯುಳ್ಳವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
720. ಆಕಾಶಕಾಯಗಳು ಬಾಹ್ಯಾಕಾಶದಲ್ಲಿ ಅಲಕ್ಷ್ಯವಾಗಿ ಚಲಿಸುವುದಾದರೆ ಅವು ಪರಸ್ಪರ ಢಿಕ್ಕಿ ಹೊಡೆದು ನಿರ್ನಾಮವಾಗುತ್ತಿದ್ದವು. ಕಟ್ಟುನಿಟ್ಟಾದ ಪ್ರಕೃತಿ ನಿಯಮಗಳು ಅವುಗಳ ಪರಿಭ್ರಮಣದ ಪುನರಾವರ್ತನ ಕ್ರಿಯೆಯನ್ನು ಮತ್ತು ವೇಗವನ್ನು ನಿಯಂತ್ರಿಸುವುದರಿಂದಲೇ ಅವು ವ್ಯವಸ್ಥಾಪಿತವಾಗಿ ಚಲಿಸುತ್ತಿವೆ. ಅಲ್ಲಾಹು ಈ ನಿಯಮಗಳನ್ನು ಬದಲಾಯಿಸಲು ಇಚ್ಛಿಸುವಾಗ ಎಲ್ಲವೂ ನುಚ್ಚುನೂರಾಗಿ ಸಂಪೂರ್ಣ ನಾಶವು ಸಂಭವಿಸಲಿದೆ. ಈ ಸೂಕ್ತಿಯಲ್ಲಿರುವ ‘ಸಮಾಅ್’ ಎಂಬ ಪದದ ತಾತ್ಪರ್ಯವು ಮೋಡವೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

(66) ನಿಮಗೆ ಜೀವ ನೀಡಿದವನು ಅವನಾಗಿರುವನು. ತರುವಾಯ ಅವನು ನಿಮ್ಮನ್ನು ಮೃತಪಡಿಸುವನು. ತರುವಾಯ ಅವನು ನಿಮಗೆ ಜೀವ ನೀಡುವನು. ಖಂಡಿತವಾಗಿಯೂ ಮನುಷ್ಯನು ಅತ್ಯಂತ ಕೃತಘ್ನನಾಗಿರುವನು.

(67) ನಾವು ಪ್ರತಿಯೊಂದು ಸಮುದಾಯಕ್ಕೂ ಒಂದು ಆರಾಧನಾ ಕ್ರಮವನ್ನು ನಿಶ್ಚಯಿಸಿರುವೆವು. ಅವರು ಅದನ್ನೇ ಪಾಲಿಸಿಕೊಂಡು ಬಂದಿರುವರು. ಆದುದರಿಂದ ಈ ವಿಷಯದಲ್ಲಿ ಅವರು ತಮ್ಮೊಂದಿಗೆ ತರ್ಕಿಸದಿರಲಿ. ತಾವು ತಮ್ಮ ರಬ್‌ನೆಡೆಗೆ ಆಹ್ವಾನಿಸಿರಿ. ಖಂಡಿತವಾಗಿಯೂ ತಾವು ನೇರವಾದ ಸನ್ಮಾರ್ಗದಲ್ಲಿದ್ದೀರಿ.

(68) ಅವರು ತಮ್ಮೊಂದಿಗೆ ತರ್ಕಿಸುವುದಾದರೆ ತಾವು ಹೇಳಿರಿ: “ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹು ಚೆನ್ನಾಗಿ ಅರಿತಿರುವನು.

(69) ನೀವು ಭಿನ್ನಾಭಿಪ್ರಾಯ ಹೊಂದಿರುವ ವಿಷಯದಲ್ಲಿ ಪುನರುತ್ಥಾನ ದಿನದಂದು ಅಲ್ಲಾಹು ನಿಮ್ಮ ಮಧ್ಯೆ ತೀರ್ಪು ನೀಡುವನು”.

(70) ಆಕಾಶದಲ್ಲಿ ಮತ್ತು ಭೂಮಿಯಲ್ಲಿರುವುದನ್ನು ಅಲ್ಲಾಹು ಅರಿಯುತ್ತಾನೆಂದು ತಮಗೆ ತಿಳಿದಿಲ್ಲವೇ? ಖಂಡಿತವಾಗಿಯೂ ಅದೊಂದು ದಾಖಲೆಯಲ್ಲಿದೆ.(721) ಖಂಡಿತವಾಗಿಯೂ ಅದು ಅಲ್ಲಾಹುವಿಗೆ ಸರಳವಾದ ವಿಷಯವಾಗಿದೆ.
721. ಪ್ರತಿಯೊಂದು ಸಂಗತಿಯೂ ಸಂಭವಿಸುವುದು ಅಲ್ಲಾಹುವಿನ ದಾಖಲೆಯಲ್ಲಿ ಲಿಖಿತಗೊಳಿಸಲಾದ ಪ್ರಕಾರವೇ ಆಗಿದೆ.

(71) ಅಲ್ಲಾಹು ಯಾವುದೇ ಆಧಾರ ಪ್ರಮಾಣವನ್ನು ಇಳಿಸದ ಮತ್ತು ಅವರಿಗೆ ಯಾವುದೇ ಅರಿವಿಲ್ಲದ ವಸ್ತುಗಳನ್ನು ಅವರು ಅಲ್ಲಾಹುವಿನ ಹೊರತು ಆರಾಧಿಸುತ್ತಿರುವರು. ಅಕ್ರಮಿಗಳಿಗೆ ಸಹಾಯಕರಾಗಿ ಯಾರೂ ಇರಲಾರರು.

(72) ನಮ್ಮ ಸ್ಪಷ್ಟವಾದ ದೃಷ್ಟಾಂತಗಳನ್ನು ಅವರಿಗೆ ಓದಿಕೊಡಲಾದರೆ ಅವಿಶ್ವಾಸಿಗಳ ಮುಖಗಳಲ್ಲಿ ಅಸಮ್ಮತಿ (ಪ್ರಕಟವಾಗುವುದನ್ನು) ತಾವು ಕಾಣುವಿರಿ. ಅವರಿಗೆ ನಮ್ಮ ದೃಷ್ಟಾಂತಗಳನ್ನು ಓದಿಕೊಡುವವರ ಮೇಲೆ ಹಲ್ಲೆ ಮಾಡಲು ಅವರು ಮುಂದಾಗುವರು. ಹೇಳಿರಿ: “ಅದಕ್ಕಿಂತಲೂ ನಿಕೃಷ್ಟವಾದ ವಿಷಯವನ್ನು ನಾನು ನಿಮಗೆ ತಿಳಿಸಿಕೊಡಲೇ? ನರಕಾಗ್ನಿ! ಅಲ್ಲಾಹು ಅದನ್ನು ಸತ್ಯನಿಷೇಧಿಗಳಿಗೆ ವಾಗ್ದಾನ ಮಾಡಿರುವನು. ತಲುಪಲಿರುವ ಆ ಸ್ಥಳವು ಎಷ್ಟು ನಿಕೃಷ್ಟವಾದುದು!”

(73) ಓ ಜನರೇ! ಒಂದು ಉದಾಹರಣೆಯನ್ನು ನೀಡಲಾಗುತ್ತದೆ. ಅದನ್ನು ಕಿವಿಗೊಟ್ಟು ಕೇಳಿರಿ. ಖಂಡಿತವಾಗಿಯೂ ನೀವು ಅಲ್ಲಾಹುವಿನ ಹೊರತು ಕರೆದು ಪ್ರಾರ್ಥಿಸುವವರು ಒಂದು ನೊಣವನ್ನೂ ಸೃಷ್ಟಿಸಲಾರರು. ಅದಕ್ಕಾಗಿ ಅವರೆಲ್ಲರೂ ಒಟ್ಟುಗೂಡಿದರೂ ಸಹ! ನೊಣವು ಅವರಿಂದ ಏನನ್ನಾದರೂ ಕಸಿದುಕೊಂಡು ಹೋದರೆ ಅದರಿಂದ ಅದನ್ನು ಮರಳಿಪಡೆಯಲು ಅವರಿಗೆ ಸಾಧ್ಯವಾಗದು. ಪ್ರಾರ್ಥಿಸುವವನೂ ಪ್ರಾರ್ಥಿಸಲ್ಪಡುವವನೂ ಬಲಹೀನರಾಗಿರುವರು!

(74) ಅಲ್ಲಾಹುವನ್ನು ಗಣನೆ ಮಾಡಬೇಕಾದ ರೀತಿಯಲ್ಲಿ ಅವರು ಗಣನೆ ಮಾಡಲಿಲ್ಲ. ಖಂಡಿತವಾಗಿಯೂ ಅಲ್ಲಾಹು ಬಲಿಷ್ಠನೂ ಪ್ರತಾಪಶಾಲಿಯೂ ಆಗಿರುವನು.

(75) ಅಲ್ಲಾಹು ಮಲಕ್‍ಗಳಿಂದಲೂ, ಮನುಷ್ಯರಿಂದಲೂ ಸಂದೇಶವಾಹಕರನ್ನು ಆರಿಸುವನು.(722) ಖಂಡಿತವಾಗಿಯೂ ಅಲ್ಲಾಹು ಎಲ್ಲವನ್ನು ಆಲಿಸುವವನೂ, ಕಾಣುವವನೂ ಆಗಿರುವನು.
722. ಮಾನವರಿಗೆ ಸತ್ಯಸಂದೇಶವನ್ನು ತಲುಪಿಸಲು ಮಾನವರನ್ನೇ ಸಂದೇಶವಾಹಕರನ್ನಾಗಿ ಕಳುಹಿಸಲಾಗುತ್ತದೆ. ಪ್ರವಾದಿಗಳಿಗೆ ದಿವ್ಯಸಂದೇಶವನ್ನು ತಲುಪಿಸಲು ಮಲಕ್‍ಗಳನ್ನು ದೂತರನ್ನಾಗಿ ಕಳುಹಿಸಲಾಗುತ್ತದೆ.

(76) ಅವರ ಮುಂದಿರುವುದನ್ನೂ ಹಿಂದಿರುವುದನ್ನೂ ಅವನು ಅರಿಯುವನು. ಎಲ್ಲ ವಿಷಯಗಳೂ ಮರಳುವುದು ಅಲ್ಲಾಹುವಿನ ಬಳಿಗಾಗಿದೆ.

(77) ಓ ಸತ್ಯವಿಶ್ವಾಸಿಗಳೇ! ನೀವು ತಲೆಬಾಗಿರಿ, ಸಾಷ್ಟಾಂಗವೆರಗಿರಿ, ನಿಮ್ಮ ರಬ್ಬನ್ನು ಆರಾಧಿಸಿರಿ ಹಾಗೂ ಸತ್ಕರ್ಮಗಳನ್ನು ಮಾಡಿರಿ. ನೀವು ಯಶಸ್ವಿಯಾಗಲೂಬಹುದು.

(78) ಅಲ್ಲಾಹುವಿನ ಮಾರ್ಗದಲ್ಲಿ ಹೋರಾಡಬೇಕಾದ ರೀತಿಯಲ್ಲೇ ಹೋರಾಡಿರಿ. ಅವನು ನಿಮ್ಮನ್ನು ಉತ್ಕೃಷ್ಟರನ್ನಾಗಿ ಆರಿಸಿರುವನು. ಧರ್ಮದ ವಿಷಯದಲ್ಲಿ ಅವನು ನಿಮ್ಮ ಮೇಲೆ ಯಾವುದೇ ಕಷ್ಟವನ್ನೂ ಹೇರಿಲ್ಲ. ಅದು ನಿಮ್ಮ ಪಿತಾಮಹರಾದ ಇಬ್ರಾಹೀಮ್‌ರ ಮಾರ್ಗವಾಗಿದೆ. ಮುಂಚೆ (ಅಂದರೆ ಪೂರ್ವಗ್ರಂಥಗಳಲ್ಲಿ) ಮತ್ತು ಇದರಲ್ಲಿ (ಕುರ್‌ಆನಿನಲ್ಲಿ) ಅವನು (ಅಲ್ಲಾಹು) ನಿಮಗೆ ಮುಸ್ಲಿಮರೆಂದು ಹೆಸರಿಟ್ಟಿರುವನು. ಇದು ಸಂದೇಶವಾಹಕರು ನಿಮಗೆ ಸಾಕ್ಷಿಯಾಗುವ ಸಲುವಾಗಿಯೂ ನೀವು ಜನರಿಗೆ ಸಾಕ್ಷಿಗಳಾಗುವ ಸಲುವಾಗಿಯೂ ಆಗಿದೆ. ಆದುದರಿಂದ ನೀವು ನಮಾಝನ್ನು ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ. ಅಲ್ಲಾಹುವನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ. ಅವನು ನಿಮ್ಮ ರಕ್ಷಕನಾಗಿರುವನು. ಎಷ್ಟು ಉತ್ತಮ ರಕ್ಷಕನು! ಎಷ್ಟು ಉತ್ತಮ ಸಹಾಯಕನು!