(1) ಸತ್ಯವಿಶ್ವಾಸಿಗಳು ಯಶಸ್ವಿಯಾದರು.
(2) ಅವರು ತಮ್ಮ ನಮಾಝ್‍ನಲ್ಲಿ ಭಕ್ತಿಯಿರುವವರು.
(3) ಅವರು ಅನಗತ್ಯ ವಿಷಯಗಳಿಂದ ವಿಮುಖರಾಗುವವರು.
(4) ಅವರು ಝಕಾತ್ ಕೊಡುವವರು.
(5) ಅವರು ತಮ್ಮ ಗುಪ್ತಾಂಗಗಳನ್ನು ಕಾಪಾಡುವವರು.
(6) ತಮ್ಮ ಮಡದಿಯರೊಂದಿಗೆ ಅಥವಾ ತಮ್ಮ ಅಧೀನದಲ್ಲಿರುವ ಗುಲಾಮಸ್ತ್ರೀಯರೊಂದಿಗೆ ಹೊರತು. ಆಗ ಅವರು ಆಕ್ಷೇಪಾರ್ಹರಲ್ಲ.
(7) ಆದರೆ ಯಾರು ಅದರ ಆಚೆಗಿರುವುದನ್ನು ಬಯಸುವರೋ ಅವರು ಅತಿಕ್ರಮಿಗಳಾಗಿರುವರು.
(8) ಅವರು (ವಿಶ್ವಾಸಿಗಳು) ತಮ್ಮ ಅಮಾನತ್ತುಗಳನ್ನು ಮತ್ತು ಕರಾರುಗಳನ್ನು ಪಾಲಿಸುವವರೂ,
(9) ತಮ್ಮ ನಮಾಝ್‍ಗಳನ್ನು ನಿಖರವಾಗಿ ಕಾಪಾಡಿಕೊಂಡು ಬರುವವರೂ ಆಗಿರುವರು.
(10) ಉತ್ತರಾಧಿಕಾರಿಗಳು ಅವರೇ ಆಗಿರುವರು.
(11) ಉನ್ನತ ಸ್ವರ್ಗವನ್ನು ಉತ್ತರಾಧಿಕಾರವಾಗಿ ಪಡೆಯುವವರು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
(12) ಖಂಡಿತವಾಗಿಯೂ ನಾವು ಮನುಷ್ಯನನ್ನು ಜೇಡಿಮಣ್ಣಿನ ಸತ್ವದಿಂದ ಸೃಷ್ಟಿಸಿದೆವು.
(13) ತರುವಾಯ ನಾವು ಅವನನ್ನು ವೀರ್ಯಕೋಶವನ್ನಾಗಿ ಮಾಡಿ ಭದ್ರವಾದ ಒಂದು ಸ್ಥಳದಲ್ಲಿಟ್ಟೆವು.
(14) ತರುವಾಯ ನಾವು ಆ ವೀರ್ಯಕೋಶವನ್ನು ಹೆಪ್ಪುಗಟ್ಟಿದ ಒಂದು ರಕ್ತಪಿಂಡವನ್ನಾಗಿ ಮಾಡಿದೆವು. ತರುವಾಯ ನಾವು ಆ ರಕ್ತಪಿಂಡವನ್ನು ಒಂದು ಮಾಂಸದ ಮುದ್ದೆಯನ್ನಾಗಿ ಮಾಡಿದೆವು. ತರುವಾಯ ನಾವು ಆ ಮಾಂಸದ ಮುದ್ದೆಯನ್ನು ಮೂಳೆಗಳನ್ನಾಗಿ ಮಾಡಿದೆವು. ತರುವಾಯ ನಾವು ಆ ಮೂಳೆಗಳನ್ನು ಮಾಂಸದಿಂದ ಹೊದಿಸಿದೆವು. ತರುವಾಯ ನಾವು ಅದನ್ನು ಇನ್ನೊಂದು ಸೃಷ್ಟಿಯನ್ನಾಗಿ ಬೆಳೆಸಿದೆವು. ಆದುದರಿಂದ ಅತ್ಯುತ್ತಮ ಸೃಷ್ಟಿಕರ್ತನಾದ ಅಲ್ಲಾಹು ಅನುಗ್ರಹಪೂರ್ಣನಾಗಿರುವನು.
(15) ತರುವಾಯ ಅದರ ಬಳಿಕ ಖಂಡಿತವಾಗಿಯೂ ನೀವು ಮರಣಹೊಂದುವಿರಿ.
(16) ತರುವಾಯ ಪುನರುತ್ಥಾನ ದಿನದಂದು ಖಂಡಿತವಾಗಿಯೂ ನಿಮ್ಮನ್ನು ಎಬ್ಬಿಸಲಾಗುವುದು.
(17) ಖಂಡಿತವಾಗಿಯೂ ನಾವು ನಿಮ್ಮ ಮೇಲೆ ಏಳು ಪಥ (ಆಕಾಶ)ಗಳನ್ನು ಸೃಷ್ಟಿಸಿರುವೆವು. ಸೃಷ್ಟಿಯ ಬಗ್ಗೆ ನಾವೆಂದೂ ಅಲಕ್ಷ್ಯರಾಗಿಲ್ಲ.
(18) ನಾವು ಆಕಾಶದಿಂದ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ನೀರನ್ನು ಸುರಿಸಿ ತರುವಾಯ ಅದನ್ನು ಭೂಮಿಯಲ್ಲಿ ತಂಗುವಂತೆ ಮಾಡಿದೆವು. ಅದನ್ನು ಬತ್ತಿಹೋಗುವಂತೆ ಮಾಡಲು ಖಂಡಿತವಾಗಿಯೂ ನಾವು ಸಾಮರ್ಥ್ಯವುಳ್ಳರಾಗಿರುವೆವು.
(19) ತರುವಾಯ ಅದರಿಂದ (ನೀರಿನಿಂದ) ನಾವು ನಿಮಗೆ ಖರ್ಜೂರ ಮತ್ತು ದ್ರಾಕ್ಷಿ ತೋಟಗಳನ್ನು ಬೆಳೆಸಿಕೊಟ್ಟೆವು. ಅವುಗಳಲ್ಲಿ ನಿಮಗೆ ಹೇರಳ ಫಲಾಹಾರಗಳಿವೆ. ಅವುಗಳಿಂದ ನೀವು ತಿನ್ನುತ್ತಿದ್ದೀರಿ.
(20) ಸೀನಾ ಪರ್ವತದಲ್ಲಿ ಮೊಳೆಕೆಯೊಡೆಯುವ ಒಂದು ಮರವನ್ನೂ(723) (ನಾವು ಸೃಷ್ಟಿಸಿರುವೆವು). ಅದು ಎಣ್ಣೆಯನ್ನೂ, ಆಹಾರ ಸೇವಿಸುವವರಿಗಿರುವ ವ್ಯಂಜನವನ್ನೂ ಉತ್ಪಾದಿಸುತ್ತದೆ.
723. ಇಲ್ಲಿ ಪ್ರಸ್ತಾಪಿಸಲಾಗಿರುವುದು ಓಲೀವ್ ವೃಕ್ಷವನ್ನಾಗಿದೆ. ಓಲೀವ್ ಎಣ್ಣೆಯನ್ನು ವ್ಯಂಜನಗಳಲ್ಲಿ ಬೆರೆಸಲು, ಭಕ್ಷ್ಯ ವಸ್ತುಗಳನ್ನು ಕರಿಯಲು ಮತ್ತು ದೇಹಕ್ಕೆ ಹಚ್ಚಲು ಬಳಸಲಾಗುತ್ತದೆ.
(21) ಖಂಡಿತವಾಗಿಯೂ ನಿಮಗೆ ಜಾನುವಾರುಗಳಲ್ಲಿ(724) ಒಂದು ನೀತಿಪಾಠವಿದೆ. ಅವುಗಳ ಉದರಗಳಲ್ಲಿರುವುದರಿಂದ ನಾವು ನಿಮಗೆ ಕುಡಿಯಲು ನೀಡುವೆವು. ನಿಮಗೆ ಅವುಗಳಲ್ಲಿ ಯಥೇಷ್ಟ ಪ್ರಯೋಜನಗಳಿವೆ. ಅವುಗಳಿಂದ (ಮಾಂಸವನ್ನು) ನೀವು ತಿನ್ನುತ್ತಿದ್ದೀರಿ.
724. ಆಡು, ಕುರಿ, ಒಂಟೆ, ಹಸು ಇತ್ಯಾದಿಗಳನ್ನು ಸೂಚಿಸಲು ‘ಅನ್‌ಆಮ್’ ಎಂಬ ಪದವನ್ನು ಬಳಸಲಾಗುತ್ತದೆ. ಮನುಷ್ಯರಿಗೆ ಇವುಗಳಿಂದ ಹಾಲು, ಮಾಂಸ, ರೋಮ, ಸವಾರಿ ಮುಂತಾದ ಅನೇಕ ಪ್ರಯೋಜನಗಳಿವೆ.
(22) ಅವುಗಳ ಬೆನ್ನುಗಳಲ್ಲಿ ಮತ್ತು ಹಡಗುಗಳಲ್ಲಿ ನಿಮ್ಮನ್ನು ಹೊತ್ತೊಯ್ಯಲಾಗುತ್ತಿದೆ.
(23) ನಾವು ನೂಹ್‍ರನ್ನು ಅವರ ಜನತೆಯೆಡೆಗೆ ಸಂದೇಶವಾಹಕರಾಗಿ ಕಳುಹಿಸಿದೆವು. ಅವರು ಹೇಳಿದರು: “ಓ ನನ್ನ ಜನರೇ! ನೀವು ಅಲ್ಲಾಹುವನ್ನು ಆರಾಧಿಸಿರಿ. ನಿಮಗೆ ಅವನ ಹೊರತು ಅನ್ಯ ಆರಾಧ್ಯರಿಲ್ಲ. ನೀವು ಭಯಭಕ್ತಿ ಪಾಲಿಸಲಾರಿರೇ?”
(24) ಆಗ ಅವರ ಜನತೆಯಲ್ಲಿದ್ದ ಸತ್ಯನಿಷೇಧಿಗಳಾದ ಮುಖಂಡರು ಹೇಳಿದರು: “ಇವರು ನಿಮ್ಮಂತಿರುವ ಒಬ್ಬ ಮನುಷ್ಯ ಮಾತ್ರವಾಗಿರುವರು. ನಿಮಗಿಂತಲೂ ಹೆಚ್ಚು ಶ್ರೇಷ್ಠತೆಯನ್ನು ಗಳಿಸಲು ಅವರು ಬಯಸುತ್ತಿರುವರು. ಅಲ್ಲಾಹು ಇಚ್ಛಿಸಿದರೆ ಅವನು (ಸಂದೇಶವಾಹಕರನ್ನಾಗಿ) ಮಲಕ್‍ಗಳನ್ನು ಕಳುಹಿಸುತ್ತಿದ್ದನು. ಇದನ್ನು ನಾವು ನಮ್ಮ ಪೂರ್ವಿಕರಿಂದಲೂ ಸಹ ಕೇಳಿರಲಿಲ್ಲ.
(25) ಇವರು ಒಬ್ಬ ಬುದ್ಧಿಭ್ರಮಣೆಯಾದ ವ್ಯಕ್ತಿ ಮಾತ್ರವಾಗಿರುವರು. ಆದುದರಿಂದ ಇವರ ವಿಷಯದಲ್ಲಿ ನೀವು ಸ್ವಲ್ಪ ಕಾಲದವರೆಗೆ ಕಾಯಿರಿ”.
(26) ಅವರು (ನೂಹ್) ಹೇಳಿದರು: “ನನ್ನ ಪ್ರಭೂ! ಇವರು ನನ್ನನ್ನು ನಿಷೇಧಿಸಿರುವುದರಿಂದ ನೀನು ನನಗೆ ಸಹಾಯ ಮಾಡು”.
(27) ಆಗ ನಾವು ಅವರಿಗೆ ದಿವ್ಯಸಂದೇಶವನ್ನು ನೀಡಿದೆವು: ನಮ್ಮ ಕಣ್ಣುಗಳ ಅಡಿಯಲ್ಲಿ ಮತ್ತು ನಮ್ಮ ದಿವ್ಯಸಂದೇಶದ ಪ್ರಕಾರ ತಾವು ಹಡಗನ್ನು ನಿರ್ಮಿಸಿರಿ. ತರುವಾಯ ನಮ್ಮ ಆಜ್ಞೆಯು ಬಂದಾಗ ಮತ್ತು ಒಲೆಯಿಂದ ಒರತೆಯೊಡೆದಾಗ, ಎಲ್ಲ ವಸ್ತುಗಳಿಂದಲೂ ಎರಡು ಜೋಡಿಯನ್ನು ಮತ್ತು ತಮ್ಮ ಕುಟುಂಬವನ್ನು ಅದರಲ್ಲಿ (ಹಡಗಿನಲ್ಲಿ) ಹತ್ತಿಸಿರಿ. ಅವರ ಪೈಕಿ ಯಾರ ಮೇಲೆ (ಶಿಕ್ಷೆಯ) ವಚನವು ಪೂರ್ವಭಾವಿಯಾಗಿ ವಿಧಿಸಲಾಗಿದೆಯೋ ಅವರ ಹೊರತು.(725) ಅಕ್ರಮವೆಸಗಿದವರ ವಿಷಯದಲ್ಲಿ ತಾವು ನನ್ನೊಂದಿಗೆ ಮಾತನಾಡದಿರಿ. ಖಂಡಿತವಾಗಿಯೂ ಅವರು ಮುಳುಗಿಸಲಾಗುವರು.
725. ಅವಿಶ್ವಾಸದಿಂದಾಗಿ ಅಲ್ಲಾಹುವಿನ ಶಿಕ್ಷೆಗೆ ಅರ್ಹರಾದ ಅವರ ಪತ್ನಿ ಮತ್ತು ಮಗನನ್ನು ಹಡಗಿನಲ್ಲಿ ಹತ್ತಿಸಬೇಕಾಗಿಲ್ಲ ಎಂಬುದು ಅಲ್ಲಾಹುವಿನ ಆದೇಶವಾಗಿದೆ.
(28) ತರುವಾಯ ತಾವು ಮತ್ತು ತಮ್ಮ ಜೊತೆಗಿರುವವರು ಹಡಗಿನಲ್ಲಿ ಏರಿದಾಗ ಹೇಳಿರಿ: “ಅಕ್ರಮಿಗಳಾದ ಜನರಿಂದ ನಮ್ಮನ್ನು ಪಾರುಮಾಡಿದ ಅಲ್ಲಾಹುವಿಗೆ ಸ್ತುತಿ”.
(29) ಹೇಳಿರಿ: “ನನ್ನ ಪ್ರಭೂ! ನನ್ನನ್ನು ಅನುಗ್ರಹೀತವಾದ ಒಂದು ತಾಣದಲ್ಲಿ ಇಳಿಸು. ಇಳಿಸುವವರಲ್ಲಿ ನೀನು ಅತ್ಯುತ್ತಮನಾಗಿರುವೆ”.
(30) ಖಂಡಿತವಾಗಿಯೂ ಅದರಲ್ಲಿ (ಜಲಪ್ರಳಯದಲ್ಲಿ) ಅನೇಕ ದೃಷ್ಟಾಂತಗಳಿವೆ. ಖಂಡಿತವಾಗಿಯೂ ನಾವು ಪರೀಕ್ಷಿಸುವವರಾಗಿರುವೆವು.
(31) ತರುವಾಯ ಅವರ ಬಳಿಕ ನಾವು ಬೇರೊಂದು ತಲೆಮಾರನ್ನು ಬೆಳೆಸಿದೆವು.
(32) ತರುವಾಯ ಅವರಿಂದಲೇ ಇರುವ ಒಬ್ಬ ಸಂದೇಶವಾಹಕರನ್ನು ನಾವು ಅವರೆಡೆಗೆ ಕಳುಹಿಸಿದೆವು. (ಸಂದೇಶವಾಹಕರು ಹೇಳಿದರು): “ನೀವು ಅಲ್ಲಾಹುವನ್ನು ಆರಾಧಿಸಿರಿ. ನಿಮಗೆ ಅವನ ಹೊರತು ಅನ್ಯ ಆರಾಧ್ಯರಿಲ್ಲ. ನೀವು ಭಯಭಕ್ತಿ ಪಾಲಿಸಲಾರಿರೇ?
(33) ಅವರ ಜನತೆಯಲ್ಲಿದ್ದ ಅವಿಶ್ವಾಸಿಗಳೂ, ಪರಲೋಕದ ಭೇಟಿಯನ್ನು ನಿರಾಕರಿಸಿದವರೂ, ಐಹಿಕ ಜೀವನದಲ್ಲಿ ನಾವು ಸುಖಭೋಗಗಳನ್ನು ನೀಡಿದವರೂ ಆಗಿರುವ ಮುಖಂಡರು ಹೇಳಿದರು: “ಇವರು ನಿಮ್ಮಂತಿರುವ ಒಬ್ಬ ಮನುಷ್ಯ ಮಾತ್ರವಾಗಿರುವರು. ನೀವು ತಿನ್ನುವುದನ್ನೇ ಇವರೂ ತಿನ್ನುತ್ತಿರುವರು. ನೀವು ಕುಡಿಯುವುದನ್ನೇ ಇವರೂ ಕುಡಿಯುತ್ತಿರುವರು.
(34) ನೀವು ನಿಮ್ಮಂತಿರುವ ಒಬ್ಬ ಮನುಷ್ಯನನ್ನು ಅನುಸರಿಸುವುದಾದರೆ ಖಂಡಿತವಾಗಿಯೂ ನೀವು ನಷ್ಟ ಹೊಂದಿದವರಾಗುವಿರಿ.
(35) ನೀವು ಮೃತಪಟ್ಟು ಮಣ್ಣು ಮತ್ತು ಮೂಳೆಗಳಾಗಿ ಹೋದ ಬಳಿಕವೂ ನಿಮ್ಮನ್ನು (ಪುನಃ ಜೀವ ನೀಡಿ) ಹೊರತರಲಾಗುವುದೆಂದು ಅವರು ನಿಮಗೆ ವಾಗ್ದಾನ ಮಾಡುತ್ತಿರುವರೇ?
(36) ನಿಮಗೆ ಮಾಡಲಾಗುತ್ತಿರುವ ಆ ವಾಗ್ದಾನವು ಬಹುದೂರದಲ್ಲಿದೆ! ಬಹುದೂರದಲ್ಲಿದೆ!
(37) ನಮ್ಮ ಈ ಐಹಿಕ ಜೀವನದ ಹೊರತು ಇನ್ನೇನೂ ಇಲ್ಲ. ನಾವು ಮರಣಹೊಂದುವೆವು ಮತ್ತು ಹುಟ್ಟಿ ಬರುವೆವು. ನಾವು ಪುನರುತ್ಥಾನಗೊಳಿಸಲಾಗುವವರಲ್ಲ.
(38) ಇವರು (ಸಂದೇಶವಾಹಕರು) ಅಲ್ಲಾಹುವಿನ ಮೇಲೆ ಸುಳ್ಳನ್ನು ಹೆಣೆದಿರುವ ಒಬ್ಬ ಮನುಷ್ಯ ಮಾತ್ರವಾಗಿರುವರು. ನಾವು ಅವರಲ್ಲಿ ವಿಶ್ವಾಸವಿಡಲಾರೆವು”.
(39) ಅವರು (ಸಂದೇಶವಾಹಕರು) ಹೇಳಿದರು: “ನನ್ನ ಪ್ರಭೂ! ಇವರು ನನ್ನನ್ನು ನಿಷೇಧಿಸಿರುವ ಕಾರಣ ನೀನು ನನಗೆ ಸಹಾಯ ಮಾಡು”.
(40) ಅವನು (ಅಲ್ಲಾಹು) ಹೇಳಿದನು: “ಶೀಘ್ರದಲ್ಲೇ ಅವರು ವಿಷಾದಿಸುವವರಾಗಿ ಬಿಡುವರು”.
(41) ತರುವಾಯ ಒಂದು ಘೋರ ಶಬ್ದವು ನ್ಯಾಯ ಬದ್ಧವಾಗಿ ಅವರನ್ನು ಹಿಡಿದುಕೊಂಡಿತು. ನಾವು ಅವರನ್ನು ಕಸಕಡ್ಡಿಗಳನ್ನಾಗಿ ಮಾಡಿದೆವು. ಅಕ್ರಮಿಗಳಾದ ಜನರು (ಅಲ್ಲಾಹುವಿನ ಕರುಣೆಯಿಂದ) ದೂರವಾಗಲಿ!
(42) ತರುವಾಯ ಅವರ ಬಳಿಕ ನಾವು ಬೇರೆ ತಲೆಮಾರುಗಳನ್ನು ಬೆಳೆಸಿದೆವು.
(43) ಯಾವುದೇ ಸಮುದಾಯವೂ ಅದರ ಅವಧಿಯನ್ನು ದಾಟಿ ಮುಂದೆ ಹೋಗಲಾರದು. ಅದನ್ನು ಹಿಂದಕ್ಕೆ ತಳ್ಳಲೂ ಅವರಿಂದಾಗದು.
(44) ತರುವಾಯ ನಾವು ನಮ್ಮ ಸಂದೇಶವಾಹಕರನ್ನು ನಿರಂತರವಾಗಿ ಕಳುಹಿಸಿದೆವು. ಪ್ರತಿಯೊಂದು ಸಮುದಾಯದೆಡೆಗೂ ಅವರ ಸಂದೇಶವಾಹಕರು ಬಂದಾಗಲೆಲ್ಲ ಅವರು ಅವರನ್ನು ನಿಷೇಧಿಸಿದರು. ಆಗ ನಾವು ಅವರನ್ನು ಒಂದರ ಹಿಂದೆ ಒಂದಾಗಿ ನಾಶ ಮಾಡಿದೆವು ಮತ್ತು ಅವರನ್ನು ನಿರೂಪಣೆಗಳನ್ನಾಗಿ ಮಾಡಿದೆವು. ವಿಶ್ವಾಸವಿಡದ ಜನರು (ಅಲ್ಲಾಹುವಿನ ಕರುಣೆಯಿಂದ) ದೂರವಾಗಲಿ!
(45) ತರುವಾಯ ಮೂಸಾ ಮತ್ತು ಅವರ ಸಹೋದರರಾದ ಹಾರೂನ್‍ರನ್ನು ನಾವು ನಮ್ಮ ದೃಷ್ಟಾಂತಗಳೊಂದಿಗೆ ಮತ್ತು ಸ್ಪಷ್ಟವಾದ ಆಧಾರಪ್ರಮಾಣಗಳೊಂದಿಗೆ ಕಳುಹಿಸಿದೆವು.
(46) ಫಿರ್‍ಔನ್ ಮತ್ತು ಅವನ ಮುಖಂಡರೆಡೆಗೆ. ಆಗ ಅವರು ಅಹಂಕಾರಪಟ್ಟರು. ಅವರು ದುರಹಂಕಾರಿಗಳಾದ ಒಂದು ಜನತೆಯಾಗಿದ್ದರು.
(47) ಅವರು ಹೇಳಿದರು: “ನಮ್ಮಂತಿರುವ ಇಬ್ಬರು ಮನುಷ್ಯರಲ್ಲಿ ನಾವು ವಿಶ್ವಾಸವಿಡುವುದೇ? ಅದೂ ಅವರ ಜನತೆಯು ನಮಗೆ ವಿಧೇಯರಾಗಿರುವಾಗ!”
(48) ತರುವಾಯ ಅವರಿಬ್ಬರನ್ನೂ ಅವರು ನಿಷೇಧಿಸಿದರು. ತನ್ನಿಮಿತ್ತ ಅವರು ನಾಶವಾದವರಲ್ಲಿ ಸೇರಿದವರಾದರು.
(49) ಅವರು (ಜನರು) ಸನ್ಮಾರ್ಗವನ್ನು ಪಡೆಯಲೆಂದು ನಾವು ಮೂಸಾರಿಗೆ ಗ್ರಂಥವನ್ನು ನೀಡಿದೆವು.
(50) ಮರ್ಯಮ್‍ರ ಪುತ್ರರನ್ನು ಮತ್ತು ಅವರ ತಾಯಿಯನ್ನು (ಮರ್ಯಮ್‍ರನ್ನು) ನಾವು ಒಂದು ದೃಷ್ಟಾಂತವನ್ನಾಗಿ ಮಾಡಿದೆವು. ವಾಸಯೋಗ್ಯವಾಗಿರುವ ಮತ್ತು ನೀರಿನ ಚಿಲುಮೆಯಿರುವಂತಹ ಒಂದು ಎತ್ತರದ ಪ್ರದೇಶದಲ್ಲಿ ನಾವು ಅವರಿಬ್ಬರಿಗೂ ಆಶ್ರಯವನ್ನು ಒದಗಿಸಿದೆವು.
(51) ಓ ಸಂದೇಶವಾಹಕರೇ! ಉತ್ತಮವಾದ ವಸ್ತುಗಳಿಂದ ತಿನ್ನಿರಿ ಮತ್ತು ಸತ್ಕರ್ಮವೆಸಗಿರಿ. ಖಂಡಿತವಾಗಿಯೂ ನೀವು ಮಾಡುತ್ತಿರುವುದರ ಬಗ್ಗೆ ನಾನು ಅರಿವುಳ್ಳವನಾಗಿರುವೆನು.
(52) ಖಂಡಿತವಾಗಿಯೂ ಇದು ನಿಮ್ಮ ಸಮುದಾಯವಾಗಿದೆ. ಏಕೈಕ ಸಮುದಾಯ. ನಾನು ನಿಮ್ಮ ರಬ್ ಆಗಿರುವೆನು. ಆದುದರಿಂದ ನೀವು ನನ್ನನ್ನು ಭಯಪಟ್ಟು ಜೀವಿಸಿರಿ.
(53) ಆದರೆ ಅವರು ಗುಂಪುಗಳಾಗಿ ವಿಭಜನೆಗೊಂಡು ತಮ್ಮ ವಿಷಯದಲ್ಲಿ ಪರಸ್ಪರ ಭಿನ್ನಮತ ತಾಳಿದರು. ಪ್ರತಿಯೊಂದು ಪಂಗಡವೂ ತಮ್ಮ ಬಳಿಯಿರುವುದರಲ್ಲಿ ಸಂತೃಪ್ತರಾಗುತ್ತಿರುವರು.
(54) ಆದುದರಿಂದ (ಓ ಪ್ರವಾದಿಯವರೇ!) ಒಂದು ಅವಧಿಯವರೆಗೆ ತಾವು ಅವರನ್ನು ಅವರ ದಾರಿಗೇಡಿನಲ್ಲಿಯೇ ಬಿಟ್ಟುಬಿಡಿರಿ.
(55) ಅವರೇನು ಭಾವಿಸುತ್ತಿರುವರು? ಸಂಪತ್ತು ಮತ್ತು ಸಂತತಿಗಳನ್ನು ನೀಡಿ ನಾವು ಅವರಿಗೆ ನೆರವು ನೀಡುತ್ತಿರುವುದು.
(56) ನಾವು ಅವರಿಗೆ ಒಳಿತುಗಳನ್ನು ಕರುಣಿಸಲು ಆತುರಪಡುತ್ತಿರುವೆವು ಎಂದೇ?(726) ಅಲ್ಲ, ಅವರು (ವಾಸ್ತವತೆಯನ್ನು) ಗ್ರಹಿಸುವುದಿಲ್ಲ.
726. ಸಂತತಿ ಮತ್ತು ಸಂಪತ್ತಿನಲ್ಲಿ ಸಮೃದ್ಧಿ ನೀಡಲಾದವರನ್ನು ಅಲ್ಲಾಹು ಪ್ರೀತಿಸಿರುವುದರಿಂದಲೇ ಅವರಿಗೆ ಸಮೃದ್ಧಿ ನೀಡಿದ್ದಾನೆ ಎಂದು ಭಾವಿಸಬಾರದು. ಸಮೃದ್ಧಿ ಎಂಬುದು ಕೇವಲ ಒಂದು ಪರೀಕ್ಷೆಯಾಗಿದೆ. ಒಳಿತು ಮತ್ತು ಕೆಡುಕುಗಳ ಮೂಲಕ ಅಲ್ಲಾಹು ಮನುಷ್ಯನನ್ನು ಪರೀಕ್ಷಿಸುತ್ತಾನೆಂದು ಕುರ್‌ಆನ್ ಸ್ಪಷ್ಟವಾಗಿ ಹೇಳಿದೆ.
(57) ಖಂಡಿತವಾಗಿಯೂ ತಮ್ಮ ರಬ್‌ನ ಭಯದಿಂದಾಗಿ ನಡುಗುವವರು,
(58) ತಮ್ಮ ರಬ್‌ನ ದೃಷ್ಟಾಂತಗಳಲ್ಲಿ ವಿಶ್ವಾಸವಿಡುವವರು,
(59) ತಮ್ಮ ರಬ್‌ನೊಂದಿಗೆ ಸಹಭಾಗಿತ್ವ ಮಾಡದವರು
(60) ಮತ್ತು ತಾವು ತಮ್ಮ ರಬ್‌ನೆಡೆಗೆ ಮರಳಬೇಕಾದವರಾಗಿರುವೆವು ಎಂದು ಹೃದಯಗಳಲ್ಲಿ ಭಯವಿಟ್ಟುಕೊಂಡು ತಾವು ದಾನ ಮಾಡುವುದೆಲ್ಲವನ್ನೂ ದಾನ ಮಾಡುವವರು.
(61) ಅವರು ಒಳಿತುಗಳಲ್ಲಿ ಧಾವಂತದಿಂದ ಮುನ್ನುಗ್ಗುವವರಾಗಿರುವರು. ಅವುಗಳಲ್ಲಿ ಮುಂಚೂಣಿಯಲ್ಲಿರುವವರೂ ಅವರಾಗಿರುವರು.
(62) ಯಾವುದೇ ವ್ಯಕ್ತಿಗೂ ಅವನ ಸಾಮರ್ಥ್ಯಕ್ಕೆ ಮಿಗಿಲಾಗಿರುವುದನ್ನು ನಾವು ನಿರ್ಬಂಧಗೊಳಿಸಲಾರೆವು. ಸತ್ಯವನ್ನು ಬಿಚ್ಚಿಹೇಳುವ ಒಂದು ದಾಖಲೆಯು ನಮ್ಮ ಬಳಿಯಿದೆ. ಅವರೊಂದಿಗೆ ಅನ್ಯಾಯವೆಸಗಲಾಗದು.
(63) ಆದರೆ, ಅವರ ಹೃದಯಗಳು ಈ ವಿಷಯದ ಬಗ್ಗೆ ಅಲಕ್ಷ್ಯವಾಗಿವೆ. ಇದರ ಹೊರತಾಗಿರುವ ಕೆಲವು ಕರ್ಮಗಳು ಅವರಿಗಿದೆ. ಅವರು ಅದನ್ನು ಮಾಡುತ್ತಲಿರುವರು.
(64) ಕೊನೆಗೆ ಅವರ ಪೈಕಿ ಸುಖಲೋಲುಪರನ್ನು ನಾವು ಶಿಕ್ಷೆಯ ಮೂಲಕ ಹಿಡಿದುಕೊಂಡಾಗ ಅಗೋ! ಅವರು ರೋದಿಸುತ್ತಿರುವರು.
(65) (ನಾವು ಹೇಳುವೆವು): “ಇಂದು ನೀವು ರೋದಿಸಬೇಕಾಗಿಲ್ಲ. ಖಂಡಿತವಾಗಿಯೂ ನಿಮಗೆ ನಮ್ಮ ಕಡೆಯ ಸಹಾಯವು ದೊರೆಯಲಾರದು.
(66) ನನ್ನ ವಚನಗಳನ್ನು ನಿಮಗೆ ಓದಿಕೊಡಲಾಗುತ್ತಿತ್ತು. ಆಗ ನೀವು ವಿಮುಖರಾಗುತ್ತಿದ್ದಿರಿ.(727)
727. ಪವಿತ್ರ ಕಅ್‌ಬಾಲಯದ ಪರಿಪಾಲಕರು ಎಂಬ ನೆಲೆಯಲ್ಲಿ ತಮಗೆ ಅಲ್ಲಾಹುವಿನ ಬಳಿ ಅತ್ಯುನ್ನತ ಸ್ಥಾನವಿದೆಯೆಂದು ಕುರೈಶಿಗಳು ವಾದಿಸುತ್ತಿದ್ದರು.
(67) ಅಹಂಕಾರಪಡುತ್ತಾ. ಒಂದು ರಾತ್ರಿ ಕಥೆಯೋ ಎಂಬಂತೆ ನೀವು ಅದರ (ಕುರ್‌ಆನ್‍ನ) ಬಗ್ಗೆ ಅಸಂಬದ್ಧವಾಗಿ ಮಾತನಾಡುತ್ತಿದ್ದಿರಿ.
(68) ಈ ಮಾತಿನ (ಕುರ್‌ಆನಿನ) ಬಗ್ಗೆ ಅವರು ಆಲೋಚಿಸಲಾರರೇ? ಅಥವಾ, ಅವರ ಬಳಿಗೆ ಬಂದಿರುವುದು ಅವರ ಪೂರ್ವಿಕರ ಬಳಿಗೆ ಬರದಂತಹ ಒಂದು ವಿಷಯವಾಗಿದೆಯೇ?(728)
728. ಗ್ರಂಥ, ಪ್ರವಾದಿಗಳ ನಿಯೋಗ ಮೊದಲಾದವುಗಳು ಅರಬರಿಗೆ ಸುಪರಿಚಿತವಾದ ಸಂಗತಿಯಾಗಿತ್ತು.
(69) ಅಥವಾ ಅವರಿಗೆ ಅವರ ಸಂದೇಶವಾಹಕರ ಪರಿಚಯವಿಲ್ಲದಿರುವುದರಿಂದ ಅವರು ಅವರನ್ನು ನಿಷೇಧಿಸುತ್ತಿರುವರೇ?(729)
729. ಪ್ರವಾದಿ(ಸ) ರವರ ಪ್ರಾಮಾಣಿಕತೆ ಮತ್ತು ಸತ್ಯಸಂಧತೆಯು ಅವರಿಗೆ ಚಿರಪರಿಚಿತವಾಗಿತ್ತು.
(70) ಅಥವಾ, ಅವರಲ್ಲಿ ಬುದ್ಧಿಭ್ರಮಣೆಯಿದೆಯೆಂದು ಅವರು ಹೇಳುತ್ತಿರುವರೇ? ಅಲ್ಲ, ಅವರು (ಪ್ರವಾದಿಯವರು) ಅವರ ಬಳಿಗೆ ಬಂದಿರುವುದು ಸತ್ಯದೊಂದಿಗಾಗಿದೆ. ಆದರೆ ಅವರ ಪೈಕಿ ಹೆಚ್ಚಿನವರೂ ಸತ್ಯವನ್ನು ದ್ವೇಷಿಸುವವರಾಗಿರುವರು.
(71) ಸತ್ಯವು ಅವರ ದೇಹೇಚ್ಛೆಗಳನ್ನು ಅನುಸರಿಸುತ್ತಿದ್ದರೆ ಆಕಾಶಗಳು, ಭೂಮಿ ಮತ್ತು ಅವುಗಳಲ್ಲಿರುವವರೆಲ್ಲರೂ ನಾಶವಾಗುತ್ತಿದ್ದರು. ಅಲ್ಲ, ನಾವು ಅವರ ಬಳಿಗೆ ಬಂದಿರುವುದು ಅವರಿಗಿರುವ ಉಪದೇಶದೊಂದಿಗಾಗಿದೆ. ಆದರೆ ಅವರು ತಮಗಿರುವ ಉಪದೇಶದಿಂದ ವಿಮುಖರಾಗಿರುವರು.
(72) ಅಥವಾ, ತಾವು ಅವರೊಂದಿಗೆ ಏನಾದರೂ ಪ್ರತಿಫಲವನ್ನು ಬೇಡುತ್ತಿದ್ದೀರಾ? ಆದರೆ ತಮ್ಮ ರಬ್‌ನ ಕಡೆಯ ಪ್ರತಿಫಲವು ಅತ್ಯುತ್ತಮವಾಗಿದೆ. ಅವನು ಜೀವನಾಧಾರ ಒದಗಿಸುವವರಲ್ಲೇ ಅತ್ಯುತ್ತಮನಾಗಿರುವನು.
(73) ಖಂಡಿತವಾಗಿಯೂ ತಾವು ಅವರನ್ನು ನೇರವಾದ ಮಾರ್ಗದೆಡೆಗೆ ಕರೆಯುತ್ತಿದ್ದೀರಿ.
(74) ಪರಲೋಕದಲ್ಲಿ ವಿಶ್ವಾಸವಿಡದವರು ಯಾರೋ ಅವರು ಆ ಮಾರ್ಗದಿಂದ ಭ್ರಂಶರಾಗಿರುವರು.
(75) ನಾವು ಅವರ ಮೇಲೆ ದಯೆ ತೋರಿಸಿ ಅವರ ಕಷ್ಟವನ್ನು ನಿವಾರಿಸಿದ್ದರೆ ಅವರು ಅಂಧವಾಗಿ ವಿಹರಿಸುತ್ತಾ ತಮ್ಮ ಅತಿಕ್ರಮದಲ್ಲಿ ಹಟತೊಟ್ಟು ನಿಲ್ಲುವರು.
(76) ನಾವು ಅವರನ್ನು ಶಿಕ್ಷೆಯ ಮೂಲಕ ಹಿಡಿದುಕೊಂಡೆವು. ಆದರೂ ಅವರು ತಮ್ಮ ರಬ್‌ಗೆ ಶರಣಾಗುವುದನ್ನೋ ವಿನಮ್ರರಾಗುವುದನ್ನೋ ಮಾಡಲಿಲ್ಲ.
(77) ಕೊನೆಗೆ ನಾವು ಅವರಿಗಾಗಿ ಕಠೋರ ಶಿಕ್ಷೆಯ ಒಂದು ಬಾಗಿಲನ್ನು ತೆರೆದಾಗ ಅಗೋ! ಅವರು ಅದರಲ್ಲಿ ನಿರಾಶರಾಗಿ ಕಳೆಯುವರು.
(78) ನಿಮಗೆ ಶ್ರವಣ, ದೃಷ್ಟಿಗಳು ಮತ್ತು ಹೃದಯಗಳನ್ನು ಮಾಡಿಕೊಟ್ಟವನು ಅವನಾಗಿರುವನು. ನೀವು ಅಲ್ಪ ಮಾತ್ರ ಕೃತಜ್ಞತೆ ಸಲ್ಲಿಸುತ್ತಿದ್ದೀರಿ.
(79) ನಿಮ್ಮನ್ನು ಭೂಮಿಯಲ್ಲಿ ಸೃಷ್ಟಿಸಿ ಹಬ್ಬಿಸಿದವನು ಅವನಾಗಿರುವನು. ನಿಮ್ಮನ್ನು ಒಟ್ಟುಗೂಡಿಸಲಾಗುವುದೂ ಅವನೆಡೆಗಾಗಿದೆ.
(80) ಜೀವ ನೀಡುವವನು ಮತ್ತು ಮರಣ ನೀಡುವವನು ಅವನಾಗಿರುವನು. ರಾತ್ರಿ ಹಗಲುಗಳ ಬದಲಾವಣೆಯು ಅವನ ನಿಯಂತ್ರಣದಲ್ಲಿವೆ. ನೀವು ಆಲೋಚಿಸುವುದಿಲ್ಲವೇ?
(81) ಅಲ್ಲ, ಪೂರ್ವಿಕರು ಹೇಳಿದಂತೆಯೇ ಇವರೂ ಹೇಳಿರುವರು.
(82) ಅವರು ಹೇಳಿದರು: “ನಾವು ಮೃತಪಟ್ಟು ಮಣ್ಣು ಮತ್ತು ಮೂಳೆಗಳಾಗಿ ಬಿಟ್ಟರೆ ನಮ್ಮನ್ನು ಪುನರುತ್ಥಾನಗೊಳಿಸಲಾಗುವುದೇ?
(83) ನಮಗೂ, ಮುಂಚೆ ನಮ್ಮ ಪೂರ್ವಿಕರಿಗೂ ಇದೇ ವಾಗ್ದಾನವನ್ನು ನೀಡಲಾಗಿದೆ. ಇದು ಪೂರ್ವಿಕರ ಪುರಾಣಗಳು ಮಾತ್ರವಾಗಿವೆ”.
(84) (ಓ ಪ್ರವಾದಿಯವರೇ!) ಕೇಳಿರಿ: “ಭೂಮಿ ಮತ್ತು ಅದರಲ್ಲಿರುವುದು ಯಾರಿಗೆ ಸೇರಿದ್ದಾಗಿದೆ? ನೀವು ಅರಿತಿದ್ದರೆ (ಹೇಳಿರಿ)”.
(85) ಅವರು ಹೇಳುವರು: “(ಅದು) ಅಲ್ಲಾಹುವಿನದ್ದಾಗಿದೆ”. ತಾವು ಹೇಳಿರಿ: “ಆದರೂ ನೀವು ಚಿಂತಿಸಿ ಗ್ರಹಿಸುವುದಿಲ್ಲವೇ?”
(86) ಕೇಳಿರಿ: “ಸಪ್ತಗಗನಗಳ ರಬ್ ಮತ್ತು ಮಹಾ ಸಿಂಹಾಸನದ ರಬ್ ಯಾರು?”
(87) ಅವರು ಹೇಳುವರು: “(ಪ್ರಭುತ್ವವು) ಅಲ್ಲಾಹುವಿನದ್ದಾಗಿದೆ”. ತಾವು ಹೇಳಿರಿ: “ಆದರೂ ನೀವು ಭಯಭಕ್ತಿ ಪಾಲಿಸಲಾರಿರೇ?”
(88) ಕೇಳಿರಿ: “ಸರ್ವ ವಸ್ತುಗಳ ಆಧಿಪತ್ಯವು ಯಾರ ಕೈಯ್ಯಲ್ಲಿದೆ? ಅವನು ಅಭಯವನ್ನು ನೀಡುವನು ಮತ್ತು ಅವನಿಗೆ ವಿರುದ್ಧವಾಗಿ (ಯಾರಿಗೂ) ಅಭಯ ನೀಡಲು ಸಾಧ್ಯವಾಗದು. ನಿಮಗೆ ತಿಳಿದಿದ್ದರೆ (ಹೇಳಿರಿ)”.
(89) ಅವರು ಹೇಳುವರು: “(ಅವೆಲ್ಲವೂ) ಅಲ್ಲಾಹುವಿಗಿರುವುದಾಗಿವೆ”. ತಾವು ಹೇಳಿರಿ: ಹೀಗಿದ್ದೂ ನೀವು ಮಾಯಾಜಾಲದಲ್ಲಿ ಸಿಲುಕಿ ಬಿಡುವುದಾದರೂ ಹೇಗೆ?”
(90) ಅಲ್ಲ, ನಾವು ಅವರ ಬಳಿಗೆ ಸತ್ಯದೊಂದಿಗೆ ಬಂದಿರುವೆವು. ಆದರೆ ಅವರು ಮಿಥ್ಯವಾದಿಗಳಾಗಿರುವರು.
(91) ಅಲ್ಲಾಹು ಯಾವುದೇ ಸಂತತಿಯನ್ನೂ ಮಾಡಿಕೊಂಡಿಲ್ಲ. ಅವನ ಜೊತೆಗೆ ಬೇರೆ ಆರಾಧ್ಯನೂ ಇಲ್ಲ. ಇರುತ್ತಿದ್ದರೆ ಪ್ರತಿಯೊಬ್ಬ ಆರಾಧ್ಯನೂ ತಾನು ಸೃಷ್ಟಿಸಿರುವುದರೊಂದಿಗೆ ಹೊರಟುಹೋಗುತ್ತಿದ್ದನು. ಅವರ ಪೈಕಿ ಕೆಲವರು ಕೆಲವರ ಮೇಲೆ ಪ್ರಭುತ್ವ ಸಾಧಿಸಲು ಹವಣಿಸುತ್ತಿದ್ದರು. ಅವರು ಸುಳ್ಳು ಸುಳ್ಳಾಗಿ ಆರೋಪಿಸುವುದರಿಂದೆಲ್ಲ ಅಲ್ಲಾಹು ಪರಮ ಪಾವನನಾಗಿರುವನು.
(92) ಅವನು ಅಗೋಚರವನ್ನೂ ಗೋಚರವನ್ನೂ ಅರಿಯುವವನಾಗಿರುವನು. ಅವರು ಸಹಭಾಗಿತ್ವ ಮಾಡುವುದರಿಂದೆಲ್ಲ ಅವನು ಅತ್ಯುನ್ನತನಾಗಿರುವನು.
(93) (ಓ ಪ್ರವಾದಿಯವರೇ!) ಹೇಳಿರಿ: “ನನ್ನ ಪ್ರಭೂ! ಇವರಿಗೆ ಮುನ್ನೆಚ್ಚರಿಕೆ ನೀಡಲಾಗುವ ಶಿಕ್ಷೆಯನ್ನು ನೀನು ನನಗೆ ತೋರಿಸಿಕೊಡುವುದಾದರೆ,
(94) ನನ್ನ ಪ್ರಭೂ! ನೀನು ನನ್ನನ್ನು ಅಕ್ರಮಿಗಳಾದ ಜನರಲ್ಲಿ ಸೇರಿಸದಿರು”.
(95) ನಾವು ಅವರಿಗೆ ಮುನ್ನೆಚ್ಚರಿಕೆ ನೀಡುವ ಶಿಕ್ಷೆಯನ್ನು ತಮಗೆ ತೋರಿಸಿಕೊಡಲು ಖಂಡಿತವಾಗಿಯೂ ನಾವು ಸಾಮರ್ಥ್ಯವುಳ್ಳವರಾಗಿರುವೆವು.
(96) ಅತ್ಯುತ್ತಮವಾಗಿರುವುದರ ಮೂಲಕ ತಾವು ಕೆಡುಕನ್ನು ತಡೆಗಟ್ಟಿರಿ. ಅವರು ಸುಳ್ಳು ಸುಳ್ಳಾಗಿ ಆರೋಪಿಸುವುದರ ಬಗ್ಗೆ ನಾವು ಚೆನ್ನಾಗಿ ಅರಿತಿರುವೆವು.
(97) ಹೇಳಿರಿ: “ನನ್ನ ಪ್ರಭೂ! ಸೈತಾನರ ದುರ್ಬೋಧನೆಗಳಿಂದ ನಾನು ನಿನ್ನಲ್ಲಿ ಅಭಯ ಯಾಚಿಸುತ್ತಿರುವೆನು.
(98) ನನ್ನ ಪ್ರಭೂ! ಅವರು (ಸೈತಾನರು) ನನ್ನ ಬಳಿ ಉಪಸ್ಥಿತರಾಗುವುದರಿಂದಲೂ ನಾನು ನಿನ್ನಲ್ಲಿ ಅಭಯ ಯಾಚಿಸುತ್ತಿರುವೆನು”.
(99) ಕೊನೆಗೆ ಅವರಲ್ಲೊಬ್ಬನಿಗೆ ಮರಣವು ಆಸನ್ನವಾಗುವಾಗ ಅವನು ಹೇಳುವನು: “ನನ್ನ ಪ್ರಭೂ! ನನ್ನನ್ನು (ಐಹಿಕ ಜೀವನಕ್ಕೆ) ಮರಳಿಸು.
(100) ನಾನು ತೊರೆದಿರುವುದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವುದಕ್ಕಾಗಿ”. ಎಂದಿಗೂ ಇಲ್ಲ! ಅದೊಂದು ಮಾತು ಮಾತ್ರವಾಗಿದೆ. ಅವನು ಅದನ್ನು ಹೇಳುತ್ತಲಿರುವನು. ಅವರನ್ನು ಪುನರುತ್ಥಾನಗೊಳಿಸಲಾಗುವ ದಿನದವರೆಗೂ ಅವರ ಹಿಂದೆ ಒಂದು ಪರದೆಯಿರುವುದು.(730)
730. ಪುನಃ ಐಹಿಕ ಜೀವನದೆಡೆಗೆ ಮರಳಲಾಗದ ವಿಧದಲ್ಲಿ ಮರಣದ ಪರದೆಯ ಹಿಂದೆ ಅವರು ಮರೆಯಾಗಿ ಬಿಡುವರು.
(101) ಕಹಳೆಯಲ್ಲಿ ಊದಲ್ಪಟ್ಟರೆ ಅಂದು ಅವರ ಮಧ್ಯೆ ಯಾವುದೇ ಕುಟುಂಬ ಸಂಬಂಧಗಳು ಇರಲಾರವು. ಅವರು ಪರಸ್ಪರ ವಿಚಾರಿಸಲಾರರು.(731)
731. ಪುನರುತ್ಥಾನ ದಿನದಂದು ಪ್ರತಿಯೊಬ್ಬರೂ ತಮ್ಮ ತಮ್ಮ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿರುವರು. ಇತರರ ಬಗ್ಗೆ ಯೋಚಿಸಲು ಅವರು ಮುಂದಾಗಲಾರರು.
(102) ಆಗ ಯಾರ (ಸತ್ಕರ್ಮಗಳ) ತಕ್ಕಡಿಗಳು ಭಾರವಾಗುವುದೋ ಅವರು ಯಶಸ್ವಿಯಾದವರಾಗಿರುವರು.
(103) ಯಾರ (ಸತ್ಕರ್ಮಗಳ) ತಕ್ಕಡಿಗಳು ಹಗುರವಾಗುವುದೋ ಅವರು ಸ್ವತಃ ಅವರನ್ನೇ ನಷ್ಟಕ್ಕೊಳಪಡಿಸಿದವರಾಗಿರುವರು. ಅವರು ನರಕಾಗ್ನಿಯಲ್ಲಿ ಶಾಶ್ವತವಾಗಿ ವಾಸಿಸುವರು.
(104) ನರಕಾಗ್ನಿಯು ಅವರ ಮುಖಗಳನ್ನು ಸುಟ್ಟು ಕರಕಲಾಗಿಸುವುದು. ಅವರು ಅದರಲ್ಲಿ ಹಲ್ಲುಕಿರಿಯುತ್ತಿರುವರು.
(105) (ಅವರೊಂದಿಗೆ ಹೇಳಲಾಗುವುದು): “ನನ್ನ ದೃಷ್ಟಾಂತಗಳನ್ನು ನಿಮಗೆ ಓದಿಕೊಡಲಾಗಿರಲಿಲ್ಲವೇ? ಆಗ ನೀವದನ್ನು ನಿಷೇಧಿಸುತ್ತಿದ್ದಿರಿ”.
(106) ಅವರು ಹೇಳುವರು: “ನಮ್ಮ ಪ್ರಭೂ! ನಮ್ಮ ದೌರ್ಭಾಗ್ಯವು ನಮ್ಮನ್ನು ಸೋಲಿಸಿದೆ. ನಾವು ಪಥಭ್ರಷ್ಟರಾದ ಜನತೆಯಾಗಿರುವೆವು.
(107) ನಮ್ಮ ಪ್ರಭೂ! ನಮ್ಮನ್ನು ಇದರಿಂದ ಹೊರ ತೆಗೆದುಬಿಡು. ನಾವು ಪುನಃ (ಕೆಟ್ಟ ದಾರಿಗೆ) ಮರಳುವುದಾದರೆ ಖಂಡಿತವಾಗಿಯೂ ನಾವು ಅಕ್ರಮಿಗಳಾಗಿರುವೆವು”.
(108) ಅವನು (ಅಲ್ಲಾಹು) ಹೇಳುವನು: “ನೀವು ಅದರಲ್ಲೇ ನಿಕೃಷ್ಟರಾಗಿ ತಂಗಿರಿ. ನೀವು ನನ್ನೊಂದಿಗೆ ಮಾತನಾಡಬಾರದು”.
(109) ಖಂಡಿತವಾಗಿಯೂ ನನ್ನ ದಾಸರ ಪೈಕಿ ಒಂದು ಗುಂಪು ಜನರು ಹೀಗೆನ್ನುತ್ತಿದ್ದರು: “ನಮ್ಮ ಪ್ರಭೂ! ನಾವು ವಿಶ್ವಾಸವಿಟ್ಟಿರುವೆವು. ಆದುದರಿಂದ ನಮ್ಮನ್ನು ಕ್ಷಮಿಸು ಮತ್ತು ನಮ್ಮ ಮೇಲೆ ದಯೆ ತೋರು. ನೀನು ದಯೆ ತೋರುವವರಲ್ಲಿ ಅತ್ಯುತ್ತಮನಾಗಿರುವೆ”.
(110) ಆಗ ನೀವು ಅವರನ್ನು ಗೇಲಿ ಮಾಡಿದಿರಿ. ಕೊನೆಗೆ ನಿಮಗೆ ನನ್ನ ಬಗ್ಗೆಯಿರಬೇಕಾದ ನೆನಪು ಮಾಸಿ ಹೋಗಲು ಅವರೊಂದು ಹೇತುವಾಗಿಬಿಟ್ಟರು. ನೀವು ಅವರನ್ನು ಅಣಕಿಸಿ ನಗುತ್ತಿದ್ದಿರಿ.
(111) ಅವರು ತಾಳ್ಮೆ ವಹಿಸಿದ ಕಾರಣ ಅವರಿಗೆ ನಾನು ಇಂದು ಪ್ರತಿಫಲವನ್ನು ನೀಡಿರುವೆನು. ಜಯಗಳಿಸಿದವರು ಅವರೇ ಆಗಿರುವರು.
(112) ಅವನು (ಅಲ್ಲಾಹು) ಕೇಳುವನು: “ನೀವು ಭೂಮಿಯಲ್ಲಿ ಎಷ್ಟು ವರ್ಷಗಳವರೆಗೆ ತಂಗಿದ್ದಿರಿ?”
(113) ಅವರು ಹೇಳುವರು: “ನಾವು ಒಂದು ದಿನ ಅಥವಾ ದಿನವೊಂದರ ಅಲ್ಪಸಮಯದಷ್ಟು ಮಾತ್ರ ತಂಗಿದ್ದೆವು. ಎಣಿಕೆ ಮಾಡಿದವರನ್ನು ನೀನು ಕೇಳಿ ನೋಡು”.
(114) ಅವನು ಹೇಳುವನು: “ನೀವು ಅಲ್ಪ ಸಮಯ ಮಾತ್ರ ತಂಗಿದ್ದಿರಿ. ನೀವು ಅರಿತವರಾಗಿದ್ದರೆ (ಎಷ್ಟು ಚೆನ್ನಾಗಿರುತ್ತಿತ್ತು!)”
(115) ನಾವು ನಿಮ್ಮನ್ನು ಉದ್ದೇಶರಹಿತವಾಗಿ ಸೃಷ್ಟಿಸಿರುವೆವು ಮತ್ತು ನೀವು ನಮ್ಮ ಬಳಿಗೆ ಮರಳಿ ಬರಲಾರಿರಿ ಎಂದೂ ನೀವು ಭಾವಿಸಿದ್ದೀರಾ?
(116) ನೈಜ ಅಧಿಪತಿಯಾಗಿರುವ ಅಲ್ಲಾಹು ಪರಮೋನ್ನತನಾಗಿರುವನು. ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನು ಗೌರವಾನ್ವಿತ ಸಿಂಹಾಸನದ ಒಡೆಯನಾಗಿರುವನು.
(117) ಯಾರಾದರೂ ಅಲ್ಲಾಹನೊಂದಿಗೆ ಇತರ ಆರಾಧ್ಯರನ್ನು ಕರೆದು ಪ್ರಾರ್ಥಿಸುವುದಾದರೆ -ಹಾಗೆ ಪ್ರಾರ್ಥಿಸಲು ಅವನ ಬಳಿ ಯಾವುದೇ ಆಧಾರವೂ ಇಲ್ಲ- ಅವನ ವಿಚಾರಣೆಯು ಅವನ ರಬ್‌ನ ಬಳಿಯಲ್ಲಾಗಿದೆ. ಖಂಡಿತವಾಗಿಯೂ ಸತ್ಯನಿಷೇಧಿಗಳು ಯಶಸ್ವಿಯಾಗಲಾರರು.
(118) (ಓ ಪ್ರವಾದಿಯವರೇ!) ಹೇಳಿರಿ: “ನನ್ನ ಪ್ರಭೂ! ನನ್ನನ್ನು ಕ್ಷಮಿಸು ಮತ್ತು ನನಗೆ ದಯೆ ತೋರು. ದಯೆ ತೋರುವವರಲ್ಲಿ ನೀನು ಅತ್ಯುತ್ತಮನಾಗಿರುವೆ”.