(1) ಇದು ನಾವು ಅವತೀರ್ಣಗೊಳಿಸಿರುವ ಮತ್ತು ಶಾಸನವನ್ನಾಗಿ ಮಾಡಿರುವ ಒಂದು ಅಧ್ಯಾಯವಾಗಿದೆ. ನೀವು ಚಿಂತಿಸಿ ಗ್ರಹಿಸುವುದಕ್ಕಾಗಿ ನಾವು ಇದರಲ್ಲಿ ಸ್ಪಷ್ಟವಾದ ದೃಷ್ಟಾಂತಗಳನ್ನು ಅವತೀರ್ಣಗೊಳಿಸಿರುವೆವು.
(2) ವ್ಯಭಿಚಾರಿ ಮತ್ತು ವ್ಯಭಿಚಾರಿಣಿಗಳಲ್ಲಿ ಪ್ರತಿಯೊಬ್ಬರಿಗೂ ನೀವು ನೂರು ಛಡಿಯೇಟುಗಳನ್ನು ಬಾರಿಸಿರಿ.(732) ನೀವು ಅಲ್ಲಾಹುವಿನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರಾಗಿದ್ದರೆ ಅಲ್ಲಾಹುವಿನ ಧರ್ಮದಲ್ಲಿ (ಅದನ್ನು ಜಾರಿಗೊಳಿಸುವ ವಿಷಯದಲ್ಲಿ) ಅವರೊಂದಿಗಿರುವ ಅನುಕಂಪವು ನಿಮ್ಮನ್ನು ಹಿಡಿಯದಿರಲಿ. ಅವರಿಗೆ ಶಿಕ್ಷೆ ನೀಡಲಾಗುವ ಸ್ಥಳದಲ್ಲಿ ಸತ್ಯವಿಶ್ವಾಸಿಗಳ ಪೈಕಿ ಒಂದು ಗುಂಪು ಹಾಜರಿರಲಿ.
732. ವಿವಾಹಿತ (ಅಥವಾ ವಿವಾಹಿತೆ) ವ್ಯಭಿಚಾರ ಮಾಡಿರುವುದು ನಾಲ್ವರು ಸಾಕ್ಷಿಗಳ ಮೂಲಕ ಅಥವಾ ಸ್ವಯಂ ತಪ್ಪೊಪ್ಪಿಗೆಯ ಮೂಲಕ ಸಾಬೀತಾದರೆ ಕಲ್ಲೆಸೆದು ಸಾಯಿಸಬೇಕೆಂಬ ಶಿಕ್ಷೆಯು ಪ್ರವಾದಿ(ಸ) ರವರ ಸಹೀಹ್ ಆದ ಹದೀಸ್‍ಗಳ ಮೂಲಕ ಸಾಬೀತಾಗಿರುವುದರಿಂದ ಈ ಆಯತ್ತಿನ ವಿಧಿಯು ಅವಿವಾಹಿತ ವ್ಯಭಿಚಾರಿಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಕುರ್‌ಆನ್ ವ್ಯಾಖ್ಯಾನಕಾರರು ಸ್ಪಷ್ಟವಾಗಿ ಹೇಳಿದ್ದಾರೆ.
(3) ವ್ಯಭಿಚಾರಿಯು ವ್ಯಭಿಚಾರಿಣಿಯನ್ನು ಅಥವಾ ಬಹುದೇವವಿಶ್ವಾಸಿನಿಯನ್ನು ಹೊರತು ವಿವಾಹವಾಗಲಾರನು. ವ್ಯಭಿಚಾರಿಣಿಯನ್ನು ವ್ಯಭಿಚಾರಿ ಅಥವಾ ಬಹುದೇವವಿಶ್ವಾಸಿಯ ಹೊರತು ವಿವಾಹವಾಗಲಾರರು.(733) ಅದನ್ನು ಸತ್ಯವಿಶ್ವಾಸಿಗಳ ಮೇಲೆ ನಿಷಿದ್ಧಗೊಳಿಸಲಾಗಿದೆ.
733. ಸಾಮಾನ್ಯವಾಗಿ ಸಾತ್ವಿಕರಾಗಿರುವ ಯಾವುದೇ ಪುರುಷನಾಗಲಿ ಸ್ತ್ರೀಯಾಗಲಿ ಅನೈತಿಕ ಸಂಬಂಧ ಹೊಂದಿದವರನ್ನು ಉದ್ದೇಶಪೂರ್ವಕವಾಗಿ ಬಾಳಸಂಗಾತಿಯನ್ನಾಗಿ ಮಾಡಿಕೊಳ್ಳಲಾರರು.
(4) ಸುಶೀಲೆಯರ ಮೇಲೆ (ವ್ಯಭಿಚಾರ) ಆರೋಪ ಮಾಡಿ ತರುವಾಯ ನಾಲ್ಕು ಸಾಕ್ಷಿಗಳನ್ನು ತರದವರಿಗೆ ನೀವು ಎಂಬತ್ತು ಛಡಿಯೇಟುಗಳನ್ನು ಬಾರಿಸಿರಿ. ಅವರ ಸಾಕ್ಷ್ಯವನ್ನು ನೀವು ಎಂದಿಗೂ ಸ್ವೀಕರಿಸದಿರಿ. ಧಿಕ್ಕಾರಿಗಳು ಅವರೇ ಆಗಿರುವರು.
(5) ಆದರೆ ತರುವಾಯ ಪಶ್ಚಾತ್ತಾಪಪಟ್ಟು ಸುಧಾರಿಸಿಕೊಂಡವರ ಹೊರತು. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ, ಅಪಾರ ಕರುಣೆಯುಳ್ಳವನೂ ಆಗಿರುವನು.
(6) ತಮ್ಮ ಪತ್ನಿಯರ ಮೇಲೆ (ವ್ಯಭಿಚಾರ) ಆರೋಪ ಮಾಡುವವರು ಮತ್ತು ಅದಕ್ಕಾಗಿ ಸ್ವತಃ ತಮ್ಮ ಹೊರತು ಇನ್ನಾವ ಸಾಕ್ಷಿಗಳೂ ಇರದವರು ಯಾರೋ ಅವರಲ್ಲಿ ಪ್ರತಿಯೊಬ್ಬರ ಸಾಕ್ಷ್ಯವು “ಖಂಡಿತವಾಗಿಯೂ ತಾನು ಸತ್ಯ ನುಡಿಯುವವರಲ್ಲಿ ಸೇರಿದವನಾಗಿರುವೆನು” ಎಂದು ಅಲ್ಲಾಹುವಿನ ಹೆಸರಲ್ಲಿ ನಾಲ್ಕು ಬಾರಿ ಸಾಕ್ಷ್ಯ ವಹಿಸುವುದಾಗಿದೆ.
(7) ಐದನೆಯದಾಗಿ, ತಾನು ಸುಳ್ಳು ಹೇಳುವವರಲ್ಲಿ ಸೇರಿದವನಾಗಿದ್ದರೆ ಅಲ್ಲಾಹುವಿನ ಶಾಪವು ತನ್ನ ಮೇಲಿರಲಿ ಎಂದು (ಅವನು ಹೇಳಬೇಕಾಗಿದೆ).
(8) “ಖಂಡಿತವಾಗಿಯೂ ಅವನು ಸುಳ್ಳು ನುಡಿಯುವವರಲ್ಲಿ ಸೇರಿದವನಾಗಿರುವನು” ಎಂದು ಅಲ್ಲಾಹುವಿನ ಹೆಸರಲ್ಲಿ ಆಕೆ ನಾಲ್ಕು ಬಾರಿ ಸಾಕ್ಷ್ಯ ವಹಿಸುವುದಾದರೆ ಅದು ಅವಳನ್ನು ಶಿಕ್ಷೆಯಿಂದ ವಿಮುಕ್ತಿಗೊಳಿಸುತ್ತದೆ.
(9) ಐದನೆಯದಾಗಿ, ಅವನು ಸತ್ಯ ಹೇಳುವವರಲ್ಲಿ ಸೇರಿದವನಾಗಿದ್ದರೆ ಅಲ್ಲಾಹುವಿನ ಕ್ರೋಧವು ತನ್ನ ಮೇಲಿರಲಿ ಎಂದು (ಆಕೆ ಹೇಳಬೇಕಾಗಿದೆ).
(10) ನಿಮ್ಮ ಮೇಲೆ ಅಲ್ಲಾಹುವಿನ ಅನುಗ್ರಹ ಮತ್ತು ಕಾರುಣ್ಯವು ಇಲ್ಲದಿರುತ್ತಿದ್ದರೆ ಮತ್ತು ಅಲ್ಲಾಹು ಅತ್ಯಧಿಕ ಪಶ್ಚಾತ್ತಾಪ ಸ್ವೀಕರಿಸುವವನೂ ಯುಕ್ತಿಪೂರ್ಣನೂ ಆಗಿರದಿರುತ್ತಿದ್ದರೆ (ನಿಮ್ಮ ಸ್ಥಿತಿ ಏನಾಗಿರುತ್ತಿತ್ತು)?
(11) ಖಂಡಿತವಾಗಿಯೂ ಆ ಸುಳ್ಳು ಸುದ್ದಿಯನ್ನು(734) ತಂದವರು ನಿಮ್ಮಲ್ಲಿರುವ ಒಂದು ಗುಂಪಿನವರೇ ಆಗಿರುವರು. ಅದು ನಿಮಗೆ ಹಾನಿಕರವೆಂದು ನೀವು ಭಾವಿಸದಿರಿ. ಅಲ್ಲ, ಅದು ನಿಮಗೆ ಒಳಿತಾಗಿದೆ. ಅವರಲ್ಲಿ ಪ್ರತಿಯೊಬ್ಬನಿಗೂ ಅವನು ಸಂಪಾದಿಸಿದ ಪಾಪವಿರುವುದು. ಅವರ ಪೈಕಿ ಅದರ ನಾಯಕತ್ವ ವಹಿಸಿದವನಾರೋ ಅವನಿಗೆ ಘೋರವಾದ ಶಿಕ್ಷೆಯಿದೆ.(735)
734. ಈ ಸೂಕ್ತಿಯಲ್ಲಿ ಪ್ರಸ್ತಾಪಿಸಲಾಗಿರುವುದು ಪ್ರವಾದಿ(ಸ) ರವರ ಪತ್ನಿ ಆಯಿಶಾ(ರ) ರವರ ಮೇಲೆ ವ್ಯಭಿಚಾರಾರೋಪ ಹೊರಿಸಿದ ಕೆಲವರ ಬಗ್ಗೆಯಾಗಿದೆ. 735. ಈ ಅಪಪ್ರಚಾರದ ನಾಯಕತ್ವವನ್ನು ಕಪಟವಿಶ್ವಾಸಿಗಳ ಮುಖಂಡನಾದ ಅಬ್ದುಲ್ಲಾಹ್ ಇಬ್ನ್ ಉಬಯ್ಯ್ ವಹಿಸಿದ್ದನು.
(12) ನೀವು ಅದನ್ನು ಆಲಿಸಿದ ಸಂದರ್ಭದಲ್ಲಿ ಸತ್ಯವಿಶ್ವಾಸಿಗಳು ಮತ್ತು ಸತ್ಯವಿಶ್ವಾಸಿನಿಯರು ತಮ್ಮದೇ ಜನರ ಬಗ್ಗೆ ಸದ್ಭಾವನೆಯನ್ನಿಟ್ಟು(736) “ಇದು ಸ್ಪಷ್ಟವಾದ ಸುಳ್ಳಾರೋಪವಾಗಿದೆ” ಎಂದು ಯಾಕೆ ಹೇಳಲಿಲ್ಲ?
736. ಪ್ರತಿಯೊಬ್ಬ ಸತ್ಯವಿಶ್ವಾಸಿಯೂ ಇನ್ನೊಬ್ಬ ಸತ್ಯವಿಶ್ವಾಸಿಯ ಬಗ್ಗೆ ಸದ್ಭಾವನೆ ಹೊಂದಿರಬೇಕಾಗಿದೆ.
(13) ಅವರು ಅದಕ್ಕೆ ನಾಲ್ಕು ಸಾಕ್ಷಿಗಳನ್ನೇಕೆ ತರಲಿಲ್ಲ? ಅವರು ಸಾಕ್ಷಿಗಳನ್ನು ತರದಿರುವುದರಿಂದ ಅಲ್ಲಾಹುವಿನ ಬಳಿ ಮಿಥ್ಯವಾದಿಗಳು ಅವರೇ ಆಗಿರುವರು.
(14) ಇಹಲೋಕದಲ್ಲೂ, ಪರಲೋಕದಲ್ಲೂ ನಿಮ್ಮ ಮೇಲೆ ಅಲ್ಲಾಹುವಿನ ಅನುಗ್ರಹ ಮತ್ತು ಕಾರುಣ್ಯವು ಇಲ್ಲದಿರುತ್ತಿದ್ದರೆ ನೀವು ಈ ಮಾತುಕತೆಯಲ್ಲಿ ತೊಡಗಿರುವ ಕಾರಣ ಘೋರ ಶಿಕ್ಷೆಯು ನಿಮ್ಮನ್ನು ಸ್ಪರ್ಶಿಸುತ್ತಿತ್ತು.
(15) ನೀವು ನಿಮ್ಮ ನಾಲಗೆಗಳಿಂದ ಅದನ್ನು ಸ್ವೀಕರಿಸುತ್ತಲೂ, ನಿಮಗೆ ಯಾವುದೇ ಅರಿವಿಲ್ಲದಿರುವುದನ್ನು ನಿಮ್ಮ ಬಾಯಿ ಮೂಲಕ ನೀವು ಉಚ್ಛರಿಸುತ್ತಲೂ ಇದ್ದ ಸಂದರ್ಭ. ನೀವು ಅದನ್ನೊಂದು ಕ್ಷುಲ್ಲಕ ವಿಷಯವೆಂದು ಭಾವಿಸುವಿರಿ. ಆದರೆ ಅಲ್ಲಾಹುವಿನ ಬಳಿ ಅದು ಮಹಾ ವಿಷಯವಾಗಿದೆ.
(16) ನೀವು ಅದನ್ನು ಆಲಿಸಿದ ಸಂದರ್ಭದಲ್ಲಿ “ಇದರ ಬಗ್ಗೆ ಮಾತನಾಡುವುದು ನಮಗೆ ಯುಕ್ತವಾದುದಲ್ಲ. (ಓ ಅಲ್ಲಾಹ್!) ನೀನು ಪರಮಪಾವನನು. ಇದೊಂದು ಮಹಾ ಆರೋಪವಾಗಿದೆ” ಎಂದು ನೀವೇಕೆ ಹೇಳಲಿಲ್ಲ?
(17) ನೀವು ಸತ್ಯವಿಶ್ವಾಸಿಗಳಾಗಿದ್ದರೆ ಇದರಂತಿರುವುದನ್ನು ನೀವೆಂದೂ ಪುನರಾವರ್ತಿಸದಿರುವ ಸಲುವಾಗಿ ಅಲ್ಲಾಹು ನಿಮಗೆ ಉಪದೇಶ ನೀಡುತ್ತಿರುವನು.
(18) ಅಲ್ಲಾಹು ನಿಮಗೆ ದೃಷ್ಟಾಂತಗಳನ್ನು ವಿವರಿಸಿಕೊಡುತ್ತಿರುವನು. ಅಲ್ಲಾಹು ಸರ್ವಜ್ಞನೂ ಯುಕ್ತಿ ಪೂರ್ಣನೂ ಆಗಿರುವನು.
(19) ಖಂಡಿತವಾಗಿಯೂ ಸತ್ಯವಿಶ್ವಾಸಿಗಳ ಮಧ್ಯೆ ನೀಚಕೃತ್ಯವು ಪ್ರಚಾರವಾಗುವುದನ್ನು ಇಷ್ಟಪಡುವವರು ಯಾರೋ ಅವರಿಗೆ ಇಹಲೋಕದಲ್ಲೂ ಪರಲೋಕದಲ್ಲೂ ಯಾತನಾಮಯ ಶಿಕ್ಷೆಯಿದೆ. ಅಲ್ಲಾಹು ಅರಿಯುವನು. ನೀವು ಅರಿಯಲಾರಿರಿ.
(20) ನಿಮ್ಮ ಮೇಲೆ ಅಲ್ಲಾಹುವಿನ ಅನುಗ್ರಹ ಮತ್ತು ಕಾರುಣ್ಯವು ಇಲ್ಲದಿರುತ್ತಿದ್ದರೆ ಮತ್ತು ಅಲ್ಲಾಹು ಅತ್ಯಧಿಕ ದಯೆಯುಳ್ಳವನೂ ಅಪಾರ ಕರುಣೆಯುಳ್ಳವನೂ ಆಗಿರದಿರುತ್ತಿದ್ದರೆ (ನಿಮ್ಮ ಸ್ಥಿತಿ ಏನಾಗಿರುತ್ತಿತ್ತು)?
(21) ಓ ಸತ್ಯವಿಶ್ವಾಸಿಗಳೇ! ನೀವು ಸೈತಾನನ ಹೆಜ್ಜೆಗುರುತುಗಳನ್ನು ಹಿಂಬಾಲಿಸದಿರಿ. ಯಾರಾದರೂ ಸೈತಾನನ ಹೆಜ್ಜೆಗುರುತುಗಳನ್ನು ಹಿಂಬಾಲಿಸುವುದಾದರೆ ಖಂಡಿತವಾಗಿಯೂ ಅವನು (ಸೈತಾನನು) ನೀಚಕೃತ್ಯ ಮತ್ತು ದುರಾಚಾರವನ್ನು ಮಾಡಲು ಆದೇಶಿಸುವನು. ನಿಮ್ಮ ಮೇಲೆ ಅಲ್ಲಾಹುವಿನ ಅನುಗ್ರಹ ಮತ್ತು ಕಾರುಣ್ಯವು ಇಲ್ಲದಿರುತ್ತಿದ್ದರೆ ನಿಮ್ಮ ಪೈಕಿ ಯಾರೂ ಎಂದಿಗೂ ಪರಿಶುದ್ಧತೆಯನ್ನು ಪಡೆಯುತ್ತಿರಲಿಲ್ಲ. ಆದರೆ ಅಲ್ಲಾಹು ಅವನಿಚ್ಛಿಸುವವರಿಗೆ ಪರಿಶುದ್ಧತೆಯನ್ನು ನೀಡುವನು. ಅಲ್ಲಾಹು ಎಲ್ಲವನ್ನು ಆಲಿಸುವವನೂ ಆಗಿರುವನು.
(22) ಕುಟುಂಬ ಸಂಬಂಧಿಕರಿಗೆ, ಬಡವರಿಗೆ ಮತ್ತು ಅಲ್ಲಾಹುವಿನ ಮಾರ್ಗದಲ್ಲಿ ಊರನ್ನು ಬಿಟ್ಟುಬಂದವರಿಗೆ ಏನನ್ನೂ ಕೊಡಲಾರೆವೆಂದು ನಿಮ್ಮ ಪೈಕಿ ಶ್ರೇಷ್ಠತೆ ಮತ್ತು (ಆರ್ಥಿಕ) ಸಾಮರ್ಥ್ಯವಿರುವವರು ಪ್ರತಿಜ್ಞೆ ಮಾಡದಿರಲಿ. ಅವರು ಮನ್ನಿಸಲಿ ಮತ್ತು ಕ್ಷಮಿಸಲಿ.(737) ಅಲ್ಲಾಹು ನಿಮಗೆ ಕ್ಷಮಿಸುವುದನ್ನು ನೀವು ಇಷ್ಟಪಡುವುದಿಲ್ಲವೇ?(738) ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
737. ಆಯಿಶಾ(ರ) ರವರ ತಂದೆ ಅಬೂಬಕ್ರ್ ಸಿದ್ದೀಕ್(ರ) ರವರ ಸಂಬಂಧಿಗಳಲ್ಲಿ ಸೇರಿದ ಮಿಸ್ತಹ್ ಎಂಬವರು ಅಪಪ್ರಚಾರ ಮಾಡಿದವರಲ್ಲಿ ಸೇರಿದ್ದರು. ಇದು ಅಬೂಬಕರ್(ರ) ರಿಗೆ ತಿಳಿದಾಗ ಇನ್ನು ಮುಂದೆ ಅವರಿಗೆ ಯಾವುದೇ ನೆರವನ್ನೂ ನೀಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದರು. ಅದು ಸರಿಯಲ್ಲವೆಂದು ಅಲ್ಲಾಹು ಈ ಸೂಕ್ತಿಯ ಮೂಲಕ ಎಚ್ಚರಿಸುತ್ತಾನೆ. 738. ಅಲ್ಲಾಹು ನಮ್ಮನ್ನು ಕ್ಷಮಿಸಬೇಕೆಂದು ನಾವು ಬಯಸುವುದಾದರೆ ನಮ್ಮ ಸಹಜೀವಿಗಳಿಗೆ ನಾವು ಕ್ಷಮಿಸಬೇಕಾಗಿದೆ.
(23) ಸುಶೀಲೆಯರಾದ ಮತ್ತು (ನೀಚಕೃತ್ಯದ ಬಗ್ಗೆ) ಪರಿವೆಯೂ ಇಲ್ಲದ ಸತ್ಯವಿಶ್ವಾಸಿನಿಯರ ಮೇಲೆ ಸುಳ್ಳಾರೋಪ ಮಾಡುವವರು ಯಾರೋ ಖಂಡಿತವಾಗಿಯೂ ಅವರು ಇಹಲೋಕದಲ್ಲೂ ಪರಲೋಕದಲ್ಲೂ ಶಪಿಸಲ್ಪಟ್ಟಿರುವರು. ಅವರಿಗೆ ಭೀಕರವಾದ ಶಿಕ್ಷೆಯಿರುವುದು.
(24) ಅವರು ಮಾಡುತ್ತಿದ್ದುದರ ಬಗ್ಗೆ ಅವರ ನಾಲಗೆಗಳು, ಕೈಗಳು ಮತ್ತು ಕಾಲುಗಳು ಅವರ ವಿರುದ್ಧ ಸಾಕ್ಷಿ ನುಡಿಯುವ ದಿನದಂದು (ಆ ಶಿಕ್ಷೆಯಿರುವುದು).
(25) ಅಂದು ಅಲ್ಲಾಹು ಅವರಿಗೆ ಅವರ ನಿಜವಾದ ಪ್ರತಿಫಲವನ್ನು ಪೂರ್ಣವಾಗಿ ನೀಡುವನು. ಪ್ರತ್ಯಕ್ಷವಾಗಿರುವ ಪರಮ ಸತ್ಯ ಅಲ್ಲಾಹುವಾಗಿರುವನು ಎಂದು ಅವರು ಅರಿತುಕೊಳ್ಳುವರು.
(26) ನೀಚ ಸ್ತ್ರೀಯರು ನೀಚ ಪುರುಷರಿಗೆ ಮತ್ತು ನೀಚ ಪುರುಷರು ನೀಚ ಸ್ತ್ರೀಯರಿಗಾಗಿರುವರು. ಉತ್ತಮ ಸ್ತ್ರೀಯರು ಉತ್ತಮ ಪುರುಷರಿಗೆ ಮತ್ತು ಉತ್ತಮ ಪುರುಷರು ಉತ್ತಮ ಸ್ತ್ರೀಯರಿಗಾಗಿರುವರು. ಇವರು (ನೀಚರು) ಹೇಳುತ್ತಿರುವುದರಿಂದೆಲ್ಲ ಅವರು (ಉತ್ತಮರು) ನಿರಪರಾಧಿಗಳಾಗಿರುವರು. ಅವರಿಗೆ ಪಾಪಮುಕ್ತಿಯೂ ಗೌರವಾರ್ಹವಾದ ಅನ್ನಾಧಾರವೂ ಇರುವುದು.
(27) ಓ ಸತ್ಯವಿಶ್ವಾಸಿಗಳೇ! ನಿಮ್ಮದಲ್ಲದ ಮನೆಗಳನ್ನು, ಆ ಮನೆಯವರೊಂದಿಗೆ ಅನುಮತಿ ಕೇಳಿ ಅವರಿಗೆ ಸಲಾಮ್ ಹೇಳುವ ತನಕ ನೀವು ಪ್ರವೇಶಿಸದಿರಿ. ಅದು ನಿಮಗೆ ಉತ್ತಮವಾಗಿದೆ.(739) ನೀವು ಚಿಂತಿಸಿ ಗ್ರಹಿಸುವವರಾಗಲೂ ಬಹುದು.
739. ಅನ್ಯರ ಖಾಸಗಿ ಅಥವಾ ಕೌಟುಂಬಿಕ ಬದುಕಿನಲ್ಲಿ ಅನುಚಿತವಾಗಿ ಮಧ್ಯಪ್ರವೇಶಿಸದಿರುವುದು, ಅವರನ್ನು ಸಂಪರ್ಕಿಸುವಾಗ ಸಾಧ್ಯವಾದಷ್ಟು ಗೌರವದಿಂದ ವರ್ತಿಸುವುದು ವ್ಯಕ್ತಿ ಮತ್ತು ಸಮಾಜಕ್ಕೆ ಸಮಾನ ಹಿತವನ್ನು ನೀಡುತ್ತದೆ.
(28) ಅಲ್ಲಿ ನೀವು ಯಾರನ್ನೂ ಕಾಣದಿದ್ದರೆ ನಿಮಗೆ ಅನುಮತಿ ಸಿಗುವ ತನಕ ನೀವು ಅವುಗಳನ್ನು ಪ್ರವೇಶಿಸದಿರಿ. “ಮರಳಿ ಹೋಗಿರಿ” ಎಂದು ನಿಮ್ಮೊಂದಿಗೆ ಹೇಳಲಾದರೆ ಮರಳಿಹೋಗಿರಿ. ಅದು ನಿಮಗೆ ಅತ್ಯಂತ ಪರಿಶುದ್ಧವಾದುದಾಗಿದೆ. ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹು ಅರಿವುಳ್ಳವನಾಗಿರುವನು.
(29) ಜನವಾಸವಿಲ್ಲದ ನಿಮ್ಮ ಯಾವುದಾದರೂ ಬಳಕೆಗಾಗಿರುವಂತಹ ಮನೆಗಳನ್ನು ಪ್ರವೇಶಿಸುವುದರಲ್ಲಿ ನಿಮಗೆ ದೋಷವಿಲ್ಲ.(740) ನೀವು ಬಹಿರಂಗಪಡಿಸುವುದನ್ನೂ, ಮರೆಮಾಚುವುದನ್ನೂ ಅಲ್ಲಾಹು ಅರಿಯುವನು.
740. ಸಾರ್ವಜನಿಕ ಬಳಕೆಗಾಗಿ ನಿರ್ಮಿಸಲಾದ ಕಟ್ಟಡಗಳಿಗೆ ತತ್ಸಂಬಂಧಿ ಅಗತ್ಯಗಳಿಗಾಗಿ ಪ್ರವೇಶಿಸಲು ವಿಶೇಷ ಅನುಮತಿಯ ಅಗತ್ಯವಿಲ್ಲವೆಂದು ಇದರಿಂದ ಗ್ರಹಿಸಬಹುದು. ಜನವಾಸವಿರುವ ಯಾವುದೇ ಮನೆಯನ್ನು ಅನುಮತಿ ವಿನಾಃ ಪ್ರವೇಶಿಸಬಾರದು.
(30) (ಓ ಪ್ರವಾದಿಯವರೇ!) ಸತ್ಯವಿಶ್ವಾಸಿಗಳೊಂದಿಗೆ ಅವರು ತಮ್ಮ ದೃಷ್ಟಿಗಳನ್ನು ತಗ್ಗಿಸುವಂತೆ ಮತ್ತು ತಮ್ಮ ಗುಪ್ತಾಂಗಗಳನ್ನು ಕಾಪಾಡಿಕೊಳ್ಳುವಂತೆ ಹೇಳಿರಿ. ಅದು ಅವರಿಗೆ ಅತ್ಯಂತ ಪರಿಶುದ್ಧವಾದುದಾಗಿದೆ.(741) ಖಂಡಿತವಾಗಿಯೂ ಅವರು ಮಾಡುತ್ತಿರುವುದರ ಬಗ್ಗೆ ಅಲ್ಲಾಹು ಸೂಕ್ಷ್ಮವಾಗಿ ಅರಿಯುವವನಾಗಿರುವನು.
741. ಪರಿಶುದ್ಧ ಬದುಕನ್ನು ಕಾಪಾಡಿಕೊಂಡು ಬರಲು ಅನ್ಯ ಸ್ತ್ರೀಯರೆಡೆಗೆ ನೋಡದಿರುವುದು ಮತ್ತು ಅನೈತಿಕ ಸಂಬಂಧ ಹೊಂದದಿರುವುದು ಅನಿವಾರ್ಯವಾಗಿದೆ.
(31) ಸತ್ಯವಿಶ್ವಾಸಿನಿಯರೊಂದಿಗೆ ಅವರು ತಮ್ಮ ದೃಷ್ಟಿಗಳನ್ನು ತಗ್ಗಿಸುವಂತೆ ಮತ್ತು ತಮ್ಮ ಗುಪ್ತಾಂಗಗಳನ್ನು ಕಾಪಾಡಿಕೊಳ್ಳುವಂತೆ ಹೇಳಿರಿ. ತಮ್ಮ ಸೌಂದರ್ಯದಿಂದ ಪ್ರಕಟವಾದುದರ ಹೊರತು(742) ಬೇರಾವುದನ್ನೂ ಅವರು ಪ್ರದರ್ಶಿಸದಿರಲಿ. ಅವರು ತಮ್ಮ ಶಿರವಸ್ತ್ರಗಳನ್ನು ತಮ್ಮ ಎದೆಗಳ ಮೇಲೆ ಎಳೆದುಕೊಳ್ಳಲಿ. ತಮ್ಮ ಪತಿಯಂದಿರು, ತಮ್ಮ ತಂದೆಯಂದಿರು, ತಮ್ಮ ಪತಿಯ ತಂದೆಯಂದಿರು, ತಮ್ಮ ಪುತ್ರರು, ತಮ್ಮ ಪತಿಯ ಪುತ್ರರು, ತಮ್ಮ ಸಹೋದರರು, ತಮ್ಮ ಸಹೋದರ ಪುತ್ರರು, ತಮ್ಮ ಸಹೋದರಿ ಪುತ್ರರು, ಮುಸ್ಲಿಮ್ ಸ್ತ್ರೀಯರು, ತಮ್ಮ ಬಲಗೈಗಳು ಸ್ವಾಧೀನದಲ್ಲಿಟ್ಟುಕೊಂಡವರು (ಗುಲಾಮರು), ಲೈಂಗಿಕಾಸಕ್ತಿಯುಳ್ಳವರಲ್ಲದ ಪುರುಷ ಸೇವಕರು, ಸ್ತ್ರೀಯರ ಖಾಸಗಿ ಭಾಗಗಳ ಬಗ್ಗೆ ಪರಿವೆಯಿರದ ಮಕ್ಕಳು ಮುಂತಾದವರ ಹೊರತು ಇನ್ನಾರಿಗೂ ಅವರು ತಮ್ಮ ಸೌಂದರ್ಯವನ್ನು ತೋರಿಸದಿರಲಿ. ತಾವು ಮರೆಮಾಚುವ ತಮ್ಮ ಸೌಂದರ್ಯವನ್ನು ಅರಿಯುವಂತೆ ಮಾಡುವ ಸಲುವಾಗಿ ಕಾಲನ್ನು ನೆಲಕ್ಕೆ ಬಡಿಯದಿರಲಿ.(743) ಓ ಸತ್ಯವಿಶ್ವಾಸಿಗಳೇ! ನೀವೆಲ್ಲರೂ ಅಲ್ಲಾಹುವಿನೆಡೆಗೆ ಪಶ್ಚಾತ್ತಾಪಪಟ್ಟು ಮರಳಿರಿ. ನೀವು ಯಶಸ್ವಿಯಾಗಲೂಬಹುದು.
742. ಪ್ರಕಟವಾದುದು ಎಂಬುದರ ಅರ್ಥ ಮುಖ ಮತ್ತು ಮುಂಗೈಗಳಾಗಿವೆಯೆಂದು ವಿದ್ವಾಂಸರ ಪೈಕಿ ಒಂದು ಗುಂಪು ಅಭಿಪ್ರಾಯಪಟ್ಟಿದೆಯಾದರೂ ಅನ್ಯಪುರುಷರ ಮುಂದೆ ಶರೀರವನ್ನು ಸಂಪೂರ್ಣವಾಗಿ ಮುಚ್ಚುವುದು ಸ್ತ್ರೀಯರಿಗೆ ಕಡ್ಡಾಯವಾಗಿದೆಯೆಂಬುದು ಪ್ರಬಲವಾದ ಅಭಿಪ್ರಾಯವಾಗಿದೆ. 743. ಗೆಜ್ಜೆ ಸಪ್ಪಳ ಕೇಳಿಸುವುದಕ್ಕಾಗಿ ಕಾಲನ್ನು ನೆಲಕ್ಕೆ ಬಡಿದು ನಡೆಯುವುದು ಮತ್ತು ಜನರ ಗಮನ ಸೆಳೆಯಲು ಅಥವಾ ಸೌಂದರ್ಯ ಪ್ರದರ್ಶನ ಮಾಡಲು ಸ್ತ್ರೀಯರು ಬಳಸುವ ಯಾವುದೇ ತಂತ್ರಗಳೂ ನಿಷಿದ್ಧವಾಗಿದೆಯೆಂದು ಇದರಿಂದ ಗ್ರಹಿಸಬಹುದು.
(32) ನಿಮ್ಮಲ್ಲಿರುವ ಅವಿವಾಹಿತರಿಗೆ(744) ಮತ್ತು ನಿಮ್ಮ ಗುಲಾಮರ ಪೈಕಿ ಹಾಗೂ ಗುಲಾಮಸ್ತ್ರೀಯರ ಪೈಕಿ ಸಜ್ಜನರಾಗಿರುವವರಿಗೆ ನೀವು ವಿವಾಹ ಮಾಡಿಸಿರಿ. ಅವರು ಬಡವರಾಗಿದ್ದರೆ ಅಲ್ಲಾಹು ತನ್ನ ಅನುಗ್ರಹದಿಂದ ಅವರಿಗೆ ಐಶ್ವರ್ಯವನ್ನು ನೀಡುವನು. ಅಲ್ಲಾಹು ವಿಶಾಲ ಸಾಮರ್ಥ್ಯವುಳ್ಳವನೂ, ಸರ್ವಜ್ಞನೂ ಆಗಿರುವನು.
744. ವಿವಾಹಿತರಲ್ಲದ ಸ್ತ್ರೀ-ಪುರುಷರು ಮತ್ತು ವಿವಾಹ ಮುಕ್ತರಾದ ಸ್ತ್ರೀ-ಪುರುಷರು ‘ಅಯಾಮಾ’ ಎಂಬ ಪದದ ವ್ಯಾಪ್ತಿಯಲ್ಲಿ ಸೇರುತ್ತಾರೆ.
(33) ವಿವಾಹವಾಗಲು ಸಾಮರ್ಥ್ಯವಿಲ್ಲದವರು, ಅವರಿಗೆ ಅಲ್ಲಾಹು ತನ್ನ ಅನುಗ್ರಹದಿಂದ ಸ್ವಾವಲಂಬನೆಯನ್ನು ಒದಗಿಸುವ ತನಕ ಚಾರಿತ್ರ್ಯವನ್ನು ಕಾಪಾಡಿಕೊಳ್ಳಲಿ. ನಿಮ್ಮ ಬಲಗೈಗಳು ಸ್ವಾಧೀನದಲ್ಲಿಟ್ಟುಕೊಂಡಿರುವವರ (ಗುಲಾಮರ) ಪೈಕಿ ವಿಮೋಚನಾ ಕರಾರು ಮಾಡಲು ಬಯಸುವರಾರೋ ಅವರಲ್ಲಿ ಒಳಿತಿದೆಯೆಂದು ನೀವು ಅರಿತಿರುವುದಾದರೆ ಅವರೊಂದಿಗೆ ನೀವು ವಿಮೋಚನಾ ಕರಾರು ಮಾಡಿರಿ.(745) ಅಲ್ಲಾಹು ನಿಮಗೆ ನೀಡಿದ ಸಂಪತ್ತಿನಿಂದ ಅವರಿಗೂ ನೀಡಿ ಸಹಾಯ ಮಾಡಿರಿ.(746) ನಿಮ್ಮ ಗುಲಾಮ ಸ್ತ್ರೀಯರು ಸುಶೀಲೆಯರಾಗಿ ಬದುಕಲು ಬಯಸುವುದಾದರೆ ಐಹಿಕ ಲಾಭಗಳನ್ನು ಆಶಿಸಿ ಅವರನ್ನು ವೇಶ್ಯಾವೃತ್ತಿಗೆ ಬಲವಂತಪಡಿಸದಿರಿ.(747) ಯಾರಾದರೂ ಅವರನ್ನು ಬಲವಂತಪಡಿಸುವುದಾದರೆ ಅವರು (ಗುಲಾಮಸ್ತ್ರೀಯರು) ಬಲವಂತದಿಂದಾಗಿ ತಪ್ಪೆಸಗಿದ ನಂತರ ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
745. ಪ್ರವಾದಿ(ಸ) ರವರು ಧರ್ಮಪ್ರಚಾರ ಮಾಡುತ್ತಿದ್ದುದು ಗುಲಾಮ ಪದ್ಧತಿಯು ಅಸ್ತಿತ್ವದಲ್ಲಿದ್ದಂತಹ ಒಂದು ಸಮಾಜದಲ್ಲಾಗಿತ್ತು. ಗುಲಾಮ ಪದ್ಧತಿಯು ಅಲ್ಲಿನ ಸಾಮಾಜಿಕ-ಆರ್ಥಿಕ ಜೀವನದ ಒಂದು ಅವಿಭಾಜ್ಯ ಅಂಗವಾಗಿತ್ತು. ಭಾರೀ ಬೆಲೆಯನ್ನು ತೆತ್ತು ಗುಲಾಮರನ್ನು ಖರೀದಿಸಿದ ಮಾಲಕರಿಗೆ ಯಾವುದೇ ಪರಿಹಾರ ಧನವೂ ಇಲ್ಲದೆ ಅವರನ್ನು ವಿಮೋಚನೆಗೊಳಿಸಲು ಆದೇಶಿಸುವುದು ನ್ಯಾಯವಾಗಲಾರದು. ಯಾಕೆಂದರೆ ಗುಲಾಮರ ಮೂಲಕವಲ್ಲದೆ ಇನ್ನಿತರ ಯಾವುದೇ ಆದಾಯ ಮಾರ್ಗವೂ ಇಲ್ಲದ ಧನಿಕರಲ್ಲದ ಮಾಲಕರೂ ಇದ್ದರು. ಆದುದರಿಂದ ನಿಶ್ಶರ್ಥವಾಗಿ ಗುಲಾಮರನ್ನು ವಿಮೋಚನೆಗೊಳಿಸುವುದು ಮಹಾ ಪುಣ್ಯಕರ್ಮವೆಂದು ಇಸ್ಲಾಂ ಘೋಷಿಸಿತು. ಅದು ಸಾಧ್ಯವಾಗದವರಿಗೆ ಗುಲಾಮರೊಂದಿಗೆ ವಿಮೋಚನಾ ಕರಾರನ್ನು ಮಾಡಿಕೊಳ್ಳುವಂತೆ ಆಹ್ವಾನ ನೀಡಿತು. ಯಜಮಾನನಿಗೆ ಒಂದು ನಿಶ್ಚಿತ ಮೊತ್ತವನ್ನು ಒಮ್ಮೆಲೇ ಅಥವಾ ಹಂತ ಹಂತವಾಗಿ ಪಾವತಿಸುವ ನಿಬಂಧನೆ ಮೇರೆಗೆ ಗುಲಾಮನು ಯಜಮಾನನೊಂದಿಗೆ ಕರಾರು ಮಾಡುತ್ತಾನೆ. ತನ್ಮೂಲಕ ಗುಲಾಮನಿಗೆ ಆರ್ಥಿಕ ಸ್ವಾತಂತ್ರ್ಯವು ಸಿಗುತ್ತದೆ. ತಾನು ಕಷ್ಟಪಟ್ಟು ಸಂಪಾದಿಸಿದ ಆದಾಯದಲ್ಲಿ ಸ್ವಲ್ಪ ಉಳಿಕೆ ಮಾಡಿ ನಿಶ್ಚಿತ ಮೊತ್ತವನ್ನು ಪಾವತಿಸುವ ಮೂಲಕ ಅವನು ಸರ್ವ ರೀತಿಯಲ್ಲೂ ಸ್ವತಂತ್ರನಾಗುತ್ತಾನೆ. ಆದರೆ ವಿಮೋಚನೆಯು ಗುಲಾಮನ ಪಾಲಿಗೆ ಹಿತಕರವಲ್ಲವೆಂದು ಯಜಮಾನನಿಗೆ ಖಾತ್ರಿಯಿದ್ದರೆ ಕರಾರು ಮಾಡಿಕೊಳ್ಳುವಂತೆ ಗುಲಾಮನು ಬೇಡಿಕೆಯಿಟ್ಟರೂ ಅದನ್ನು ತಿರಸ್ಕರಿಸುವ ಹಕ್ಕು ಯಜಮಾನನಿಗೆ ಇದೆಯೆಂದು ಈ ಸೂಕ್ತಿಯು ತಿಳಿಸುತ್ತದೆ. ಗುಲಾಮನು ನಿತ್ಯರೋಗಿಯೋ ವಯೋವೃದ್ಧನೋ ಆಗಿದ್ದರೆ ಸಂರಕ್ಷಣೆಯ ಭರವಸೆಯಿಲ್ಲದ ಸ್ವಾತಂತ್ರ್ಯಕ್ಕಿಂತಲೂ ಗುಲಾಮಗಿರಿಯೇ ಹಿತವಾಗಿದೆ. 746. ವಿಮೋಚನಾ ಕರಾರು ಮಾಡಿಕೊಂಡ ಗುಲಾಮರಿಗೆ ಆರ್ಥಿಕ ನೆರವನ್ನು ನೀಡುವುದು ಮತ್ತು ಗುಲಾಮರನ್ನು ವಿಮೋಚನೆಗೊಳಿಸಲು ಸನ್ನದ್ಧರಾಗದ ಯಜಮಾನರಿಂದ ಗುಲಾಮರನ್ನು ಖರೀದಿಸಿ ವಿಮೋಚನೆಗೊಳಿಸುವುದು ಮಹಾ ಪುಣ್ಯಕರ್ಮಗಳಾಗಿವೆ. ಇದಕ್ಕಾಗಿ ಝಕಾತ್‍ನಿಂದ ಕೂಡ ಒಂದು ಪಾಲನ್ನು ವಿನಿಯೋಗಿಸುವಂತೆ ಕುರ್‌ಆನ್(9:60) ಆದೇಶಿಸುತ್ತದೆ.
747. ಗುಲಾಮ ಸ್ತ್ರೀಯರನ್ನು ವೇಶ್ಯಾವಾಟಿಕೆ ಮಾಡಲು ಬಲವಂತಪಡಿಸಿ ತನ್ಮೂಲಕ ಹಣ ಸಂಪಾದಿಸುವುದು ಅತಿ ನೀಚವಾಗಿದೆ. ತಪ್ಪು ಮಾಡಲು ನಿರ್ಬಂಧಿತರಾಗುವ ಗುಲಾಮ ಸ್ತ್ರೀಯರಿಗೆ –ಅವರ ಹೃದಯವು ದೋಷರಹಿತವಾಗಿದ್ದರೆ- ಅಲ್ಲಾಹು ಖಂಡಿತವಾಗಿಯೂ ಕ್ಷಮಿಸುವನು.
(34) ಖಂಡಿತವಾಗಿಯೂ ನಾವು ನಿಮಗೆ ಸ್ಪಷ್ಟವಾದ ದೃಷ್ಟಾಂತಗಳನ್ನು ಅವತೀರ್ಣಗೊಳಿಸಿರುವೆವು. ನಿಮಗಿಂತ ಮುಂಚೆ ಗತಿಸಿದವರ (ಚರಿತ್ರೆಗಳಿಂದ) ಉದಾಹರಣೆಗಳನ್ನು ಮತ್ತು ಭಯಭಕ್ತಿಪಾಲಿಸುವವರಿಗೆ ಉಪದೇಶವನ್ನು (ಅವತೀರ್ಣಗೊಳಿಸಿರುವೆವು).
(35) ಅಲ್ಲಾಹು ಭೂಮ್ಯಾಕಾಶಗಳ ಪ್ರಕಾಶವಾಗಿರುವನು. ಅವನ ಪ್ರಕಾಶದ ಉಪಮೆಯು (ಗೋಡೆಯಲ್ಲಿ ದೀಪವನ್ನಿಡಲು ನಿರ್ಮಿಸಲಾದ) ಒಂದು ಮಾಡದಂತಿದೆ.(748) ಅದರಲ್ಲೊಂದು ದೀಪವಿದೆ. ದೀಪವು ಒಂದು ಗಾಜಿನ ಒಳಗಿದೆ. ಗಾಜು ಜ್ವಲಿಸುವ ಒಂದು ನಕ್ಷತ್ರದಂತಿದೆ. ಪೂರ್ವ ದಿಕ್ಕಿನದ್ದಾಗಲಿ ಅಥವಾ ಪಶ್ಚಿಮ ದಿಕ್ಕಿನದ್ದಾಗಲಿ ಅಲ್ಲದ ಅನುಗ್ರಹೀತವಾದ ಒಂದು ಓಲಿವ್ ಮರದಿಂದ(749) ಅದಕ್ಕೆ (ದೀಪಕ್ಕೆ) ಇಂಧನವನ್ನು ಹೊಯ್ಯಲಾಗುತ್ತಿದೆ. ಅದರ ಎಣ್ಣೆಯನ್ನು ಬೆಂಕಿಯು ಸ್ಪರ್ಶಿಸದಿದ್ದರೂ ಅದು ಮಿನುಗುವಂತಿದೆ. ಪ್ರಕಾಶದ ಮೇಲೆ ಪ್ರಕಾಶ.(750) ಅಲ್ಲಾಹು ಅವನಿಚ್ಛಿಸುವವರನ್ನು ತನ್ನ ಪ್ರಕಾಶದೆಡೆಗೆ ಮುನ್ನಡೆಸುವನು. ಅಲ್ಲಾಹು ಜನರಿಗಾಗಿ ಉಪಮೆಗಳನ್ನು ವಿವರಿಸುವನು. ಅಲ್ಲಾಹು ಸರ್ವ ವಿಷಯಗಳ ಬಗ್ಗೆ ಅರಿವುಳ್ಳವನಾಗಿರುವನು.
748. ದೀಪವನ್ನಿಡಲು ಗೋಡೆಯಲ್ಲಿ ಅರ್ಧವೃತ್ತಾಕಾರದಲ್ಲಿ ಕೊರೆಯುವ ರಂಧ್ರಕ್ಕೆ ‘ಮಿಶ್ಕಾತ್’ ಎನ್ನಲಾಗುತ್ತದೆ. ದೀಪವು ಗಾಳಿಗೆ ಆರಿ ಹೋಗದಿರಲು ಮತ್ತು ಬೆಳಕು ಒಂದು ನಿಶ್ಚಿತ ದಿಕ್ಕಿಗೆ ಕೇಂದ್ರೀಕೃತವಾಗಲು ಅದು ಸಹಕರಿಸುತ್ತದೆ. 749. ಬೆಟ್ಟದ ಪೂರ್ವ ಭಾಗದಲ್ಲಿರುವ ಮರಕ್ಕೆ ಮಧ್ಯಾಹ್ನದ ನಂತರ ಸೂರ್ಯನು ಬೆಟ್ಟದ ಪಶ್ಚಿಮ ಭಾಗಕ್ಕೆ ಸರಿಯುವಾಗ ಬಿಸಿಲು ಸಿಗುವುದಿಲ್ಲ. ಬೆಟ್ಟದ ಪಶ್ಚಿಮ ಭಾಗದಲ್ಲಿರುವ ಮರಕ್ಕೆ ಪೂರ್ವಾಹ್ನ ಅನೇಕ ತಾಸುಗಳವೆರೆಗೆ ಬಿಸಿಲು ಸಿಗುವುದಿಲ್ಲ. ಇವೆರಡೂ ಅಲ್ಲದ ಅಂದರೆ ಹಗಲು ಪೂರ್ಣವಾಗಿ ಬಿಸಿಲು ಸಿಗುವ ಓಲಿವ್ ಮರವನ್ನು ಇಲ್ಲಿ ಉದ್ದೇಶಿಸಲಾಗಿದೆಯೆಂದು ಅನೇಕ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ. ಹಗಲು ಪೂರ್ಣವಾಗಿ ಬಿಸಿಲನ್ನು ಪಡೆದು ಬೆಳೆಯುವ ಓಲಿವ್ ವೃಕ್ಷದ ಎಣ್ಣೆ ಹೆಚ್ಚು ಶುಭ್ರವಾಗಿರುತ್ತದೆ.
750. ಎಣ್ಣೆಯ ಶುಭ್ರತೆ, ಗಾಜಿನ ಹೊಳಪು, ದೀಪವನ್ನಿಡುವ ರಂಧ್ರದ ಆಕೃತಿ ಇವೆಲ್ಲವೂ ಸೇರಿ ಬೆಳಕನ್ನು ಪರಮಾವಧಿ ಶುಭ್ರವಾಗಿಸುತ್ತವೆ. ಶುದ್ಧ ಪ್ರಕೃತಿಯಿಂದ ದೊರೆಯು ಶುಭ್ರ ಪ್ರಕಾಶ. ಇದು ಸಂಪೂರ್ಣ ಜಗತ್ತಿಗೆ ಪ್ರಕಾಶವನ್ನು ನೀಡಿದ ದಿವ್ಯಪ್ರಭೆಯ ಅತ್ಯಂತ ಸರಳ ಪ್ರತೀಕವಾಗಿದೆ.
(36) (ಆ ಪ್ರಕಾಶವಿರುವುದು) ಉನ್ನತವಾಗಲು ಮತ್ತು ತನ್ನ ನಾಮವು ಸ್ಮರಿಸುವಂತಾಗಲು ಅಲ್ಲಾಹು ಅಪ್ಪಣೆ ನೀಡಿರುವ ಕೆಲವು ಭವನಗಳಲ್ಲಾಗಿದೆ.(751) ಪ್ರಭಾತಗಳಲ್ಲೂ ಮುಸ್ಸಂಜೆಗಳಲ್ಲೂ ಅವುಗಳಲ್ಲಿ ಅವನ ಮಹತ್ವವನ್ನು ಕೊಂಡಾಡುತ್ತಿರುವರು.
751. ಇಲ್ಲಿ ಉದ್ದೇಶಿಸಿರುವುದು ಅಲ್ಲಾಹುವಿನ ಭವನಗಳಾದ ಮಸೀದಿಗಳನ್ನಾಗಿದೆ. ದಿವ್ಯಪ್ರಭೆಯು -ಸನ್ಮಾರ್ಗದ ಬೆಳಕು- ಅಲ್ಲಿಂದ ಸದಾ ಹರಡುತ್ತಲೇ ಇರುತ್ತದೆ. ದೈನಂದಿನ ಚಟುವಟಿಕೆಗಳ ನಡುವೆಯೂ ಸತ್ಯವಿಶ್ವಾಸಿಗಳು ಆ ಭವನಗಳನ್ನು ಸಂದರ್ಶಿಸಲು ಹಾಗೂ ತಮ್ಮ ಹೃದಯಗಳನ್ನು ಚೈತನ್ಯಪೂರ್ಣಗೊಳಿಸಲು ಸಮಯವನ್ನು ಮೀಸಲಿಡುತ್ತಾರೆ.
(37) ಕೆಲವು ಪುರುಷರು. ಅಲ್ಲಾಹುವನ್ನು ಸ್ಮರಿಸುವುದರಿಂದ, ನಮಾಝ್ ಸಂಸ್ಥಾಪಿಸುವುದರಿಂದ ಮತ್ತು ಝಕಾತ್ ನೀಡುವುದರಿಂದ ವ್ಯಾಪಾರವಾಗಲಿ, ಕ್ರಯ ವಿಕ್ರಯವಾಗಲಿ ಅವರ ಗಮನವನ್ನು ಬೇರೆಡೆಗೆ ಸೆಳೆಯಲಾರದು. ಹೃದಯಗಳು ಮತ್ತು ಕಣ್ಣುಗಳು ಉರುಳುವ ಒಂದು ದಿನವನ್ನು ಅವರು ಭಯಪಡುತ್ತಿರುವರು.
(38) ಅಲ್ಲಾಹು ಅವರ ಕರ್ಮಗಳಿಗಾಗಿ ಅವರಿಗೆ ಅತ್ಯುತ್ತಮ ಪ್ರತಿಫಲವನ್ನು ನೀಡುವ ಸಲುವಾಗಿ ಮತ್ತು ಅವನ ಅನುಗ್ರಹದಿಂದ ಅವರಿಗೆ ಹೆಚ್ಚುವರಿಯಾಗಿ ನೀಡುವ ಸಲುವಾಗಿ. ಅಲ್ಲಾಹು ಅವನಿಚ್ಛಿಸುವವರಿಗೆ ಲೆಕ್ಕವಿಲ್ಲದೆ ದಯಪಾಲಿಸುವನು.
(39) ಅವಿಶ್ವಾಸಿಗಳಾರೋ, ಅವರ ಕರ್ಮಗಳು ಮರುಭೂಮಿಯಲ್ಲಿರುವ ಮರೀಚಿಕೆಯಂತಾಗಿದೆ. ಬಾಯಾರಿದವನು ಅದನ್ನು ನೀರೆಂದು ಭಾವಿಸುವನು. ಕೊನೆಗೆ ಅವನು ಅದರ ಬಳಿಗೆ ಬಂದಾಗ ಅಲ್ಲಿ ಏನನ್ನೂ ಕಾಣಲಾರನು. ಆದರೆ ಅವನು ತನ್ನ ಬಳಿ ಅಲ್ಲಾಹುವನ್ನು ಕಾಣುವನು.(752) ಆಗ (ಅಲ್ಲಾಹು) ಅವನಿಗೆ ಅವನ ಲೆಕ್ಕವನ್ನು ಪೂರ್ಣವಾಗಿ ತೀರಿಸಿಕೊಡುವನು. ಅಲ್ಲಾಹು ಅತಿವೇಗವಾಗಿ ವಿಚಾರಣೆ ಮಾಡುವವನಾಗಿರುವನು.
752. ಪರಲೋಕಕ್ಕೆ ತಲುಪಿದಾಗ ತಾವು ಜೀವನದ ಯಶಸ್ಸಿಗೆ ಮಾನದಂಡವೆಂದು ಭಾವಿಸಿದ ಕರ್ಮಗಳೆಲ್ಲವೂ ಸಂಪೂರ್ಣ ನಿಷ್ಫಲವಾಗಿರುವುದಾಗಿ ನಾಸ್ತಿಕರು ಮತ್ತು ಬಹುದೇವಾರಾಧಕರು ಕಾಣುವರು. ಆದರೆ ಅಲ್ಲಾಹುವಿನ ವಿಚಾರಣೆ ಮತ್ತು ಅವನ ಶಿಕ್ಷೆಯು ಸಂದೇಶವಾಹಕರು ಮುನ್ನೆಚ್ಚರಿಕೆ ನೀಡಿದಂತೆಯೇ ಸತ್ಯವೆಂದು ಅವರು ಅಲ್ಲಿ ಕಾಣುವರು.
(40) ಅಥವಾ (ಅವರ ಕರ್ಮಗಳ ಉದಾಹರಣೆಯು) ಸಮುದ್ರದಾಳದಲ್ಲಿರುವ ಅಂಧಕಾರಗಳಂತಿದೆ. ಅಲೆಗಳು ಅದನ್ನು (ಕಡಲನ್ನು) ಮುಚ್ಚುತ್ತವೆ. ಅದರ ಮೇಲೆಯೂ ಅಲೆಗಳು. ಅದರ ಮೇಲೆ ಕಾರ್ಮೋಡಗಳು. ಒಂದರ ಮೇಲೆ ಒಂದರಂತಿರುವ ಅನೇಕ ಅಂಧಕಾರಗಳು. ಅವನು ತನ್ನ ಕೈಯನ್ನು ಹೊರ ಚಾಚಿದರೆ ಅದನ್ನೂ ಅವನು ಕಾಣಲಾರನು. ಅಲ್ಲಾಹು ಯಾರಿಗೆ ಪ್ರಕಾಶವನ್ನು ನೀಡಲಿಲ್ಲವೋ ಅವನಿಗೆ ಪ್ರಕಾಶವೇ ಇಲ್ಲ.(753)
753. ಸತ್ಯವಿಶ್ವಾಸ ಮತ್ತು ಸನ್ಮಾರ್ಗದ ಬೆಳಕು ಸಿಗದವರು ಕತ್ತಲಲ್ಲಿ ಪರದಾಡುವವರಾಗಿದ್ದಾರೆ. ಲೌಕಿಕ ಜೀವನದ ಪ್ರಭೆ ಅವರಿಗೆ ಎಷ್ಟು ಸಿಕ್ಕರೂ ಸರಿಯೇ.
(41) ಆಕಾಶಗಳಲ್ಲಿರುವವರು, ಭೂಮಿಯಲ್ಲಿರುವವರು ಮತ್ತು ರೆಕ್ಕೆಯನ್ನು ಹರಡಿಕೊಂಡಿರುವ ಹಕ್ಕಿಗಳು ಅಲ್ಲಾಹುವಿನ ಕೀರ್ತನೆ ಮಾಡುವುದನ್ನು ತಾವು ಕಂಡಿಲ್ಲವೇ? ಪ್ರತಿಯೊಬ್ಬರಿಗೂ ಅವರ ಪ್ರಾರ್ಥನೆ ಮತ್ತು ಕೀರ್ತನೆ ಹೇಗೆಂಬ ಅರಿವಿದೆ.(754) ಅವರು ಮಾಡುತ್ತಿರುವುದರ ಬಗ್ಗೆ ಅಲ್ಲಾಹು ಅರಿವುಳ್ಳವನಾಗಿರುವನು.
754. ‘ಪ್ರತಿಯೊಬ್ಬರ ಪ್ರಾರ್ಥನೆ ಮತ್ತು ಕೀರ್ತನೆಯನ್ನು ಅಲ್ಲಾಹು ಅರಿತಿರುವನು’ ಎಂದೂ ಸಹ ವ್ಯಾಖ್ಯಾನಿಸಲಾಗಿದೆ.
(42) ಭೂಮ್ಯಾಕಾಶಗಳ ಆಧಿಪತ್ಯವು ಅಲ್ಲಾಹುವಿನದ್ದಾಗಿದೆ. ಮರಳುವಿಕೆಯು ಅಲ್ಲಾಹುವಿನೆಡೆಗಾಗಿದೆ.
(43) ಅಲ್ಲಾಹು ಮೋಡಗಳನ್ನು ತಳ್ಳುತ್ತಾ, ತರುವಾಯ ಅವು ಪರಸ್ಪರ ಬೆಸೆಯುವಂತೆ ಮಾಡಿ, ತರುವಾಯ ಅವನು ಅದನ್ನು ಒಂದರ ಮೇಲೊಂದರಂತೆ ಪದರ ಪದರವಾಗಿ ರಾಶಿ ಮಾಡುವುದನ್ನು ತಾವು ಕಂಡಿಲ್ಲವೇ? ಆಗ ಅದರ ನಡುವಿನಿಂದ ಮಳೆನೀರು ಹೊರಬರುವುದನ್ನು ತಾವು ಕಾಣುವಿರಿ. ಆಕಾಶದಿಂದ –ಅಲ್ಲಿರುವ ಬೆಟ್ಟಗಳಂತಹ ಮೋಡಗಳ ರಾಶಿಗಳಿಂದ- ಅವನು ಆಲಿಕಲ್ಲುಗಳನ್ನು ಇಳಿಸುವನು. ತರುವಾಯ ಅವನಿಚ್ಛಿಸುವವರಿಗೆ ಅದನ್ನು ತಗುಲಿಸುವನು. ಅವನಿಚ್ಛಿಸುವವರಿಂದ ಅದನ್ನು ತಿರುಗಿಸಿ ಬಿಡುವನು. ಅದರ ಮಿಂಚಿನ ಹೊಳಪು ದೃಷ್ಟಿಗಳನ್ನು ಕಿತ್ತುಕೊಳ್ಳುವಂತಿದೆ.
(44) ಅಲ್ಲಾಹು ರಾತ್ರಿ ಮತ್ತು ಹಗಲನ್ನು ಬದಲಾವಣೆಗೊಳಿಸುತ್ತಿರುವನು. ಖಂಡಿತವಾಗಿಯೂ ದೃಷ್ಟಿಯುಳ್ಳವರಿಗೆ ಅದರಲ್ಲಿ ಒಂದು ನೀತಿಪಾಠವಿದೆ.
(45) ಅಲ್ಲಾಹು ಸರ್ವ ಜೀವರಾಶಿಗಳನ್ನೂ ನೀರಿನಿಂದ ಸೃಷ್ಟಿಸಿರುವನು. ಅವುಗಳಲ್ಲಿ ಉದರದ ಮೇಲೆ ತೆವಳುತ್ತಾ ಚಲಿಸುವವುಗಳಿವೆ. ಅವುಗಳಲ್ಲಿ ಎರಡು ಕಾಲುಗಳ ಮೇಲೆ ಚಲಿಸುವವುಗಳಿವೆ. ಅವುಗಳಲ್ಲಿ ನಾಲ್ಕು ಕಾಲುಗಳಲ್ಲಿ ಚಲಿಸುವವುಗಳಿವೆ. ಅಲ್ಲಾಹು ಅವನಿಚ್ಛಿಸುವುದನ್ನು ಸೃಷ್ಟಿಸುವನು. ಖಂಡಿತವಾಗಿಯೂ ಅಲ್ಲಾಹು ಸರ್ವ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.
(46) (ವಾಸ್ತವವನ್ನು) ಸ್ಪಷ್ಟಗೊಳಿಸುವ ದೃಷ್ಟಾಂತಗಳನ್ನು ನಾವು ಅವತೀರ್ಣಗೊಳಿಸಿರುವೆವು. ಅಲ್ಲಾಹು ಅವನಿಚ್ಛಿಸುವವರನ್ನು ನೇರವಾದ ಮಾರ್ಗದೆಡೆಗೆ ಮುನ್ನಡೆಸುವನು.
(47) ನಾವು ಅಲ್ಲಾಹುವಿನಲ್ಲೂ, ಸಂದೇಶವಾಹಕರಲ್ಲೂ ವಿಶ್ವಾಸವಿಟ್ಟಿರುವೆವು ಮತ್ತು ಅನುಸರಿಸುತ್ತಿರುವೆವು ಎಂದು ಅವರು ಹೇಳುವರು. ತರುವಾಯ ಅದರ ಬಳಿಕವೂ ಅವರ ಪೈಕಿ ಒಂದು ಗುಂಪು ವಿಮುಖರಾಗುತ್ತಾರೆ. ಅಂತಹವರು ವಿಶ್ವಾಸಿಗಳೇ ಅಲ್ಲ.
(48) (ಪ್ರವಾದಿಯವರು) ಅವರ ಮಧ್ಯೆ ತೀರ್ಪು ನೀಡುವ ಸಲುವಾಗಿ ಅವರನ್ನು ಅಲ್ಲಾಹುವಿನೆಡೆಗೆ ಮತ್ತು ಸಂದೇಶವಾಹಕರೆಡೆಗೆ ಕರೆಯಲಾದರೆ ಅವರ ಪೈಕಿ ಒಂದು ಗುಂಪು ತಿರುಗಿ ನಡೆಯುವರು.
(49) ಸತ್ಯವು ಅವರ ಪರವಾಗಿದ್ದರೆ ಅವರು ಅವರೆಡೆಗೆ (ಪ್ರವಾದಿಯೆಡೆಗೆ) ವಿನಮ್ರರಾಗಿ ಬರುವರು.
(50) ಅವರ ಹೃದಯಗಳಲ್ಲಿ ಯಾವುದಾದರೂ ರೋಗವಿದೆಯೇ? ಅಥವಾ ಅವರಿಗೆ ಅನುಮಾನವಿದೆಯೇ? ಅಥವಾ ಅಲ್ಲಾಹು ಮತ್ತು ಅವನ ಸಂದೇಶವಾಹಕರು ಅವರೊಂದಿಗೆ ಅನ್ಯಾಯವೆಸಗುವರೆಂದು ಅವರು ಭಯಪಡುತ್ತಿರುವರೇ? ಅಲ್ಲ. ಅಕ್ರಮಿಗಳು ಅವರೇ ಆಗಿರುವರು.
(51) (ಪ್ರವಾದಿಯವರು) ತಮ್ಮ ಮಧ್ಯೆ ತೀರ್ಪು ನೀಡುವ ಸಲುವಾಗಿ ಸತ್ಯವಿಶ್ವಾಸಿಗಳನ್ನು ಅಲ್ಲಾಹುವಿನೆಡೆಗೆ ಮತ್ತು ಸಂದೇಶವಾಹಕರೆಡೆಗೆ ಕರೆಯಲಾದರೆ ಅವರ ಮಾತು “ನಾವು ಆಲಿಸಿರುವೆವು ಮತ್ತು ಅನುಸರಿಸಿರುವೆವು” ಎಂದು ಮಾತ್ರವಾಗಿರುವುದು. ಯಶಸ್ವಿಯಾದವರು ಅವರೇ ಆಗಿರುವರು.
(52) ಯಾರು ಅಲ್ಲಾಹುವನ್ನು ಮತ್ತು ಸಂದೇಶವಾಹಕರನ್ನು ಅನುಸರಿಸುವನೋ, ಅಲ್ಲಾಹುವನ್ನು ಭಯಪಟ್ಟು, ಅವನ ಬಗ್ಗೆ ಎಚ್ಚರವಾಗಿರುವನೋ, ಜಯಗಳಿಸಿದವರು ಅವರೇ ಆಗಿರುವರು.
(53) ತಾವು ಅವರೊಂದಿಗೆ ಆಜ್ಞಾಪಿಸಿದರೆ ಅವರು ಖಂಡಿತವಾಗಿಯೂ ಹೊರಟು ಬರುವರೆಂದು ಅಲ್ಲಾಹುವಿನ ಮೇಲೆ ಅವರಿಗೆ ಪ್ರಮಾಣ ಮಾಡಲು ಸಾಧ್ಯವಾಗುವ ವಿಧಗಳಲ್ಲೆಲ್ಲ ಪ್ರಮಾಣ ಮಾಡಿ ಅವರು ಹೇಳಿದರು. ತಾವು ಹೇಳಿರಿ: “ನೀವು ಪ್ರಮಾಣ ಮಾಡಬೇಡಿರಿ. ನೈಜವಾದ ಅನುಸರಣೆಯನ್ನು ಪಾಲಿಸಿರಿ. ಖಂಡಿತವಾಗಿಯೂ ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹು ಸೂಕ್ಷ್ಮವಾಗಿ ಅರಿಯುವವನಾಗಿರುವನು”.
(54) ಹೇಳಿರಿ: “ನೀವು ಅಲ್ಲಾಹುವನ್ನು ಅನುಸರಿಸಿರಿ ಮತ್ತು ಸಂದೇಶವಾಹಕರನ್ನು ಅನುಸರಿಸಿರಿ”. ನೀವು ವಿಮುಖರಾಗುವುದಾದರೆ ಅವರ (ಪ್ರವಾದಿಯವರ) ಹೊಣೆಯು ಅವರಿಗೆ ವಹಿಸಿಕೊಡಲಾದ ವಿಷಯದಲ್ಲಿ ಮಾತ್ರವಾಗಿದೆ. ನಿಮ್ಮ ಹೊಣೆಯು ನಿಮಗೆ ವಹಿಸಿಕೊಡಲಾದ ವಿಷಯಗಳಲ್ಲಾಗಿದೆ. ನೀವು ಅವರನ್ನು ಅನುಸರಿಸುವುದಾದರೆ ನೀವು ಸನ್ಮಾರ್ಗವನ್ನು ಪಡೆಯುವಿರಿ. ಸಂದೇಶವಾಹಕರ ಹೊಣೆಯು (ಸಂದೇಶವನ್ನು) ಸ್ಪಷ್ಟವಾಗಿ ತಲುಪಿಸಿಕೊಡುವುದು ಮಾತ್ರವಾಗಿದೆ.
(55) ನಿಮ್ಮ ಪೈಕಿ ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರೊಂದಿಗೆ, ಅಲ್ಲಾಹು ಅವರಿಗಿಂತ ಮುಂಚಿನವರಿಗೆ ಭೂಮಿಯಲ್ಲಿ ಪ್ರಾತಿನಿಧ್ಯವನ್ನು ನೀಡಿದಂತೆ ಖಂಡಿತವಾಗಿಯೂ ಅವನು ಅವರಿಗೂ ಪ್ರಾತಿನಿಧ್ಯವನ್ನು ನೀಡುವನು, ಅವನು ಅವರಿಗೆ ಸಂತೃಪ್ತಿಯಿಂದ ನೀಡಿದ ಅವರ ಧರ್ಮದ ವಿಷಯದಲ್ಲಿ ಅವನು ಅವರಿಗೆ ಅಧಿಕಾರವನ್ನು ನೀಡುವನು ಮತ್ತು ಅವರಿಗುಂಟಾದ ಭಯಭೀತಿಯ ಬಳಿಕ ಅವನು ಅವರಿಗೆ ನಿರ್ಭೀತಿಯನ್ನು ಬದಲಿಸಿಕೊಡುವನು ಎಂದು ವಾಗ್ದಾನ ಮಾಡಿರುವನು. ಅವರು ನನ್ನನ್ನು (ಮಾತ್ರ) ಆರಾಧಿಸುವರು ಮತ್ತು ನನ್ನೊಂದಿಗೆ ಏನನ್ನೂ ಸಹಭಾಗಿಯನ್ನಾಗಿ ಮಾಡಲಾರರು.(755) ಯಾರಾದರೂ ಅದರ ಬಳಿಕವೂ ಕೃತಘ್ನತೆ ತೋರಿದರೆ ಅವರೇ ಧಿಕ್ಕಾರಿಗಳಾಗಿರುವರು.
755. ಪರಲೋಕ ಯಶಸ್ಸಿಗೆಂಬಂತೆ ಐಹಿಕ ಜೀವನದಲ್ಲಿ ಅಲ್ಲಾಹು ನೀಡುವ ಗೆಲುವು ಮತ್ತು ಅಧಿಕಾರಕ್ಕೆ ಅವನು ಶರ್ತವಾಗಿಟ್ಟಿರುವುದು ಶಿರ್ಕ್‍ನಿಂದ ಮುಕ್ತವಾದ ಏಕದೇವವಿಶ್ವಾಸ ಮತ್ತು ಅಲ್ಲಾಹು ಆದೇಶಿಸುವ ಸತ್ಕರ್ಮಗಳನ್ನು ಮಾಡುವುದನ್ನಾಗಿವೆ.
(56) ನೀವು ನಮಾಝನ್ನು ಸಂಸ್ಥಾಪಿಸಿರಿ, ಝಕಾತ್ ನೀಡಿರಿ ಮತ್ತು ಸಂದೇಶವಾಹಕರನ್ನು ಅನುಸರಿಸಿರಿ. ನಿಮಗೆ ಕರುಣೆ ಸಿಗಲೂಬಹುದು.
(57) ಸತ್ಯನಿಷೇಧಿಗಳು ಭೂಮಿಯಲ್ಲಿ (ಅಲ್ಲಾಹುವನ್ನು) ಸೋಲಿಸುವವರೆಂದು ತಾವು ಭಾವಿಸದಿರಿ. ಅವರ ವಾಸಸ್ಥಳವು ನರಕವಾಗಿದೆ. ತಲುಪಲಿರುವ ಆ ಸ್ಥಳವು ಅತ್ಯಂತ ನಿಕೃಷ್ಟವಾಗಿದೆ.
(58) ಓ ಸತ್ಯವಿಶ್ವಾಸಿಗಳೇ! ನಿಮ್ಮ ಬಲಗೈಗಳು ಸ್ವಾಧೀನದಲ್ಲಿಟ್ಟುಕೊಂಡಿರುವವರು (ಗುಲಾಮರು) ಮತ್ತು ನಿಮ್ಮ ಪೈಕಿ ಹರೆಯವನ್ನು ತಲುಪಿರದವರು ಮೂರು ಸಂದರ್ಭಗಳಲ್ಲಿ ನಿಮ್ಮೊಂದಿಗೆ (ಪ್ರವೇಶಕ್ಕೆ) ಅನುಮತಿಯನ್ನು ಬೇಡಲಿ.(756) ಪ್ರಭಾತ ನಮಾಝ್‍ಗೆ ಮುಂಚೆ, ಮಧ್ಯಾಹ್ನದ ವೇಳೆ (ಮಲಗುಸಲುವಾಗಿ) ನೀವು ನಿಮ್ಮ ಉಡುಪುಗಳನ್ನು ಕಳಚಿಟ್ಟಾಗ ಮತ್ತು ಇಶಾ ನಮಾಝ್‍ನ ಬಳಿಕ. ಇವು ನಿಮ್ಮ ಮೂರು ಖಾಸಗಿ ಸಮಯಗಳಾಗಿವೆ. ಈ ಸಮಯಗಳ ಬಳಿಕ ನಿಮಗಾಗಲಿ ಅವರಿಗಾಗಲಿ (ಬೆರೆತು ಬದುಕುವುದರಲ್ಲಿ) ಯಾವುದೇ ದೋಷವಿಲ್ಲ. ಅವರು ನಿಮ್ಮ ಸುತ್ತಲೂ ಚಲಿಸುತ್ತಿರುವವರಾಗಿರುವರು. ನೀವು ಪರಸ್ಪರ ಬೆರೆತು ಬದುಕುವವರಾಗಿದ್ದೀರಿ. ಹೀಗೆ ಅಲ್ಲಾಹು ನಿಮಗೆ ದೃಷ್ಟಾಂತಗಳನ್ನು ವಿವರಿಸಿಕೊಡುವನು. ಅಲ್ಲಾಹು ಸರ್ವಜ್ಞನೂ ಯುಕ್ತಿಪೂರ್ಣನೂ ಆಗಿರುವನು.
756. ಇತರರ ಮನೆಗಳಿಗೆ ಅನುಮತಿ ವಿನಾ ಪ್ರವೇಶಿಸಬಾರದೆಂದು 27ನೇ ಸೂಕ್ತಿಯಲ್ಲಿ ಹೇಳಲಾಗಿದೆ. ಆದರೆ ಓರ್ವ ವ್ಯಕ್ತಿಯೊಂದಿಗೆ ಅತ್ಯಂತ ನಿಕಟರಾಗಿರುವ ಮಕ್ಕಳು, ಸೇವಕರು ಮುಂತಾದವರು ಅವನ ಖಾಸಗಿ ಸಮಯದಲ್ಲಿ –ಗುಪ್ತಾಂಗಗಳು ಗೋಚರಿಸುವ ಸಾಧ್ಯತೆಗಳಿರುವ ಸಂದರ್ಭಗಳಲ್ಲಿ- ಅವನ ಅನುಮತಿ ಸಿಕ್ಕಿದ ಬಳಿಕವೇ ಅವನ ಕೋಣೆಯನ್ನು ಪ್ರವೇಶಿಸಬೇಕೆಂದು ಈ ಸೂಕ್ತಿಯು ಆದೇಶಿಸುತ್ತದೆ.
(59) ನಿಮ್ಮಲ್ಲಿ ಸೇರಿದ ಮಕ್ಕಳು ಹರೆಯವನ್ನು ತಲುಪಿದರೆ ಅವರಿಗಿಂತ ಮುಂಚಿನವರು ಅನುಮತಿ ಬೇಡಿದಂತೆ ಅವರೂ ಅನುಮತಿ ಬೇಡಲಿ.(757) ಹೀಗೆ ಅಲ್ಲಾಹು ನಿಮಗೆ ಅವನ ದೃಷ್ಟಾಂತಗಳನ್ನು ವಿವರಿಸಿಕೊಡುತ್ತಿರುವನು. ಅಲ್ಲಾಹು ಸರ್ವಜ್ಞನೂ ಯುಕ್ತಿಪೂರ್ಣನೂ ಆಗಿರುವನು.
757. ಮಕ್ಕಳು ಹರೆಯವನ್ನು ತಲುಪಿದರೆ ಮಾತಾಪಿತರ ಮತ್ತು ನಿಕಟ ಸಂಬಂಧಿಕರ ಬಳಿಗೆ ಕೂಡ ಸಮ್ಮತಿ ಪಡೆದೇ ಪ್ರವೇಶಿಸಬೇಕು ಎಂದು ಈ ಸೂಕ್ತಿಯು ತಿಳಿಸುತ್ತದೆ. ಅದು ಯಾವುದೇ ಸಮಯದಲ್ಲಾದರೂ ಸರಿ.
(60) ವೈವಾಹಿಕ ಬದುಕನ್ನು ಆಶಿಸದ ವೃದ್ಧೆಯರ(758) ಮಟ್ಟಿಗೆ ಸೌಂದರ್ಯವನ್ನು ಪ್ರದರ್ಶಿಸದವರಾಗಿರುತ್ತಾ ತಮ್ಮ ಮೇಲುಡುಪನ್ನು ಕಳಚಿಡುವುದರಲ್ಲಿ ಅವರಿಗೆ ದೋಷವಿಲ್ಲ. ಆದರೆ ಗೌರವವನ್ನು ಕಾಪಾಡಿಕೊಳ್ಳುವುದು ಅವರಿಗೆ ಅತ್ಯುತ್ತಮವಾದುದಾಗಿದೆ.(759) ಅಲ್ಲಾಹು ಎಲ್ಲವನ್ನು ಆಲಿಸುವವನೂ ಆಗಿರುವನು.
758. ‘ಕವಾಇದ್’ ಎಂಬ ಪದಕ್ಕೆ ವೃದ್ಧೆಯರು ಎಂದು ಅರ್ಥ ನೀಡಲಾಗಿದೆ. ಇನ್ನಷ್ಟು ಸೂಕ್ಷ್ಮವಾಗಿ ಹೇಳುವುದಾದರೆ ಮುಟ್ಟು ನಿಂತುಹೋದ ಸ್ತ್ರೀಯರು ಅಥವಾ ಗರ್ಭಧಾರಣೆಯ ಸಾಧ್ಯತೆಯಿಲ್ಲದ ಸ್ತ್ರೀಯರು ಎಂದಾಗಿದೆ. 759. ವೃದ್ಧಾಪ್ಯದಲ್ಲೂ ಸಭ್ಯವಾದ ವಸ್ತ್ರಧಾರಣೆಯು ಸ್ತ್ರೀಯರ ಗೌರವವನ್ನು ಹೆಚ್ಚಿಸುತ್ತದೆ.
(61) ಕುರುಡನ ಮೇಲೆ ದೋಷವಿಲ್ಲ, ಕುಂಟನ ಮೇಲೂ ದೋಷವಿಲ್ಲ, ರೋಗಿಯ ಮೇಲೂ ದೋಷವಿಲ್ಲ.(760) ನೀವು ನಿಮ್ಮ ಮನೆಗಳಲ್ಲಿ, ನಿಮ್ಮ ತಂದೆಯಂದಿರ ಮನೆಗಳಲ್ಲಿ, ನಿಮ್ಮ ತಾಯಂದಿರ ಮನೆಗಳಲ್ಲಿ, ನಿಮ್ಮ ಸಹೋದರರ ಮನೆಗಳಲ್ಲಿ, ನಿಮ್ಮ ಸಹೋದರಿಯರ ಮನೆಗಳಲ್ಲಿ, ನಿಮ್ಮ ಪಿತೃಸಹೋದರರ ಮನೆಗಳಲ್ಲಿ, ನಿಮ್ಮ ಪಿತೃಸಹೋದರಿಯರ ಮನೆಗಳಲ್ಲಿ, ನಿಮ್ಮ ಮಾತೃ ಸಹೋದರರ ಮನೆಗಳಲ್ಲಿ, ನಿಮ್ಮ ಮಾತೃ ಸಹೋದರಿಯರ ಮನೆಗಳಲ್ಲಿ, ಕೀಲಿಕೈಗಳು ನಿಮ್ಮ ವಶದಲ್ಲಿರುವ ಮನೆಗಳಲ್ಲಿ(761) ಅಥವಾ ನಿಮ್ಮ ಸ್ನೇಹಿತರ ಮನೆಗಳಲ್ಲಿ ಆಹಾರ ಸೇವಿಸುವುದರಲ್ಲಿ ನಿಮ್ಮ ಮೇಲೆ ದೋಷವಿಲ್ಲ. ನೀವು ಜೊತೆಯಾಗಿ ಸೇವಿಸುವುದರಲ್ಲಿ ಅಥವಾ ಬೇರೆ ಬೇರೆಯಾಗಿ ಸೇವಿಸುವುದರಲ್ಲೂ ನಿಮ್ಮ ಮೇಲೆ ದೋಷವಿಲ್ಲ. ಆದರೆ ನೀವು ಯಾವುದೇ ಮನೆಯನ್ನು ಪ್ರವೇಶಿಸುವಾಗಲೂ ಅಲ್ಲಾಹುವಿನ ಕಡೆಯ ಅನುಗ್ರಹೀತವೂ ಪಾವನವೂ ಆಗಿರುವ ಒಂದು ಅಭಿವಂದನೆಯೆಂಬ ನೆಲೆಯಲ್ಲಿ ಪರಸ್ಪರ ಸಲಾಮ್ ಹೇಳಿರಿ. ಹೀಗೆ ನೀವು ಚಿಂತಿಸಿ ಗ್ರಹಿಸುಸಲುವಾಗಿ ಅಲ್ಲಾಹು ನಿಮಗೆ ದೃಷ್ಟಾಂತಗಳನ್ನು ವಿವರಿಸಿಕೊಡುತ್ತಿರುವನು.
760. ಅಂಗವಿಕಲರನ್ನು ಮನೆಗೆ ಕರೆದೊಯ್ದು ಆಹಾರ ನೀಡುವ ವಿಷಯದಲ್ಲಿ ಮನೆಯವರಿಗೆ ಇರುವ ಮತ್ತು ಇತರರೊಂದಿಗೆ ಆಹಾರ ಸೇವಿಸುವ ವಿಷಯದಲ್ಲಿ ಅಂಗವಿಕಲರಿಗೆ ಇರುವ ಪ್ರಯಾಸವನ್ನು ನಿವಾರಿಸುವುದೇ ಈ ಆಯತ್ತಿನ ಉದ್ದೇಶವೆಂದು ಅನೇಕ ವ್ಯಾಖ್ಯಾನಕಾರರು ಹೇಳಿದ್ದಾರೆ. ಸಹಭೋಜನದ ವಿಷಯದಲ್ಲಿ ಇನ್ನಿತರ ಅನೇಕ ತಪ್ಪುಕಲ್ಪನೆಗಳು ಅರಬರ ಮಧ್ಯೆ ರೂಢಿಯಲ್ಲಿತ್ತು. 761. ಒಂದು ಮನೆಯ ಕಾರ್ಯ ನಿರ್ವಹಣಾಧಿಕಾರವನ್ನು ವಹಿಸಲ್ಪಟ್ಟ ವ್ಯಕ್ತಿಗೆ ಆ ಮನೆಯವರೊಂದಿಗೆ ಅಲ್ಲಿ ಆಹಾರ ಸೇವಿಸುವುದಕ್ಕೆ ವಿರೋಧವಿಲ್ಲ.
(62) ಸತ್ಯವಿಶ್ವಾಸಿಗಳೆಂದರೆ ಅವರು ಅಲ್ಲಾಹುವಿನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಟ್ಟವರು ಮಾತ್ರವಾಗಿರುವರು. ಯಾವುದಾದರೂ ಸಾರ್ವಜನಿಕ ವಿಷಯದಲ್ಲಿ ಅವರು ಸಂದೇಶವಾಹಕರೊಂದಿಗೆ ಪಾಲ್ಗೊಂಡರೆ ಅವರಲ್ಲಿ ಅನುಮತಿ ಬೇಡದೆ ಅವರು ನಿರ್ಗಮಿಸಲಾರರು. ತಮ್ಮೊಂದಿಗೆ ಅನುಮತಿ ಬೇಡುವವರಾರೋ ಖಂಡಿತವಾಗಿಯೂ ಅವರು ಅಲ್ಲಾಹುವಿನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಟ್ಟವರಾಗಿರುವರು. ತರುವಾಯ ಅವರು ತಮ್ಮ ಯಾವುದಾದರೂ ಅಗತ್ಯಗಳಿಗಾಗಿ (ನಿರ್ಗಮಿಸಲು) ತಮ್ಮೊಂದಿಗೆ ಅನುಮತಿ ಬೇಡಿದರೆ ಅವರ ಪೈಕಿ ತಾವಿಚ್ಛಿಸುವವರಿಗೆ ತಾವು ಅನುಮತಿ ನೀಡಿರಿ ಮತ್ತು ಅವರಿಗೋಸ್ಕರ ಅಲ್ಲಾಹುವಿನೊಂದಿಗೆ ಪಾಪಮುಕ್ತಿಯನ್ನು ಬೇಡಿರಿ. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(63) ನೀವು ಸಂದೇಶವಾಹಕರ ಕರೆಯನ್ನು ನಿಮ್ಮ ಮಧ್ಯೆ, ನಿಮ್ಮಲ್ಲಿ ಕೆಲವರು ಇತರ ಕೆಲವರನ್ನು ಕರೆಯುವಂತೆ ಮಾಡಿಕೊಳ್ಳದಿರಿ.(762) (ಇತರರನ್ನು) ಮರೆಯಾಗಿ ಹಿಡಿದು ನಿಮ್ಮ ಗುಂಪಿನಿಂದ ಜಾರಿಹೋಗುವವರ ಬಗ್ಗೆ ಅಲ್ಲಾಹು ಅರಿಯುತ್ತಾನೆ. ಆದುದರಿಂದ ಪ್ರವಾದಿಯವರ ಆಜ್ಞೆಗೆ ವಿರೋಧವಾಗಿ ಸಾಗುವವರು ತಮಗೇನಾದರೂ ಆಪತ್ತು ತಗಲುವುದರ ಬಗ್ಗೆ ಅಥವಾ ಯಾತನಾಮಯ ಶಿಕ್ಷೆ ತಗಲುವುದರ ಬಗ್ಗೆ ಭಯಪಡಲಿ.
762. ಪ್ರವಾದಿ(ಸ) ರವರು ನಿಮ್ಮನ್ನು ಯಾವುದಾದರೊಂದು ವಿಷಯಕ್ಕಾಗಿ ಕರೆದರೆ ಅದು ನಿಮ್ಮ ಪೈಕಿ ಒಬ್ಬರು ಇನ್ನೊಬ್ಬರನ್ನು ಕರೆಯುವಂತಾಗಿದೆಯೆಂದು ನೀವು ಪರಿಗಣಿಸಬಾರದು. ಪ್ರವಾದಿ(ಸ) ರವರ ಕರೆಗೆ ನಿಷ್ಕಳಂಕವಾಗಿ ಉತ್ತರಿಸಿದರೆ ಮಾತ್ರ ನೀವು ನೈಜ ಸತ್ಯವಿಶ್ವಾಸಿಗಳಾಗುವಿರಿ. ಪ್ರವಾದಿ(ಸ) ರವರನ್ನು ನೀವು ಕರೆಯುವುದು ನೀವು ಪರಸ್ಪರ ಒಬ್ಬರನ್ನೊಬ್ಬರು ಕರೆದಂತಾಗಿರಬಾರದು ಎಂದು ಕೆಲವು ವ್ಯಾಖ್ಯಾನಕಾರರು ಅರ್ಥ ನೀಡಿದ್ದಾರೆ. ಅರ್ಥಾತ್ ಯಾ ಮುಹಮ್ಮದ್ ಎಂದು ಕರೆಯಬಾರದು. ಯಾ ರಸೂಲಲ್ಲಾಹ್, ಯಾ ನಬಿಯ್ಯಲ್ಲಾಹ್ ಎಂದು ಗೌರವಾದರದೊಂದಿಗೆ ಕರೆಯಬೇಕು. ‘ಮರೆಯಾಗಿ ಹಿಡಿದು....’ ಎಂಬ ವಾಕ್ಯದೊಂದಿಗೆ ಹೆಚ್ಚು ಹೊಂದಿಕೊಳ್ಳುವುದು ಮೊದಲನೇ ವ್ಯಾಖ್ಯಾನವಾಗಿದೆ.
(64) ಅರಿಯಿರಿ! ಖಂಡಿತವಾಗಿಯೂ ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹುವಿನದ್ದಾಗಿವೆ. ನೀವು ಯಾವ ಸ್ಥಿತಿಯಲ್ಲಿರುವಿರೆಂದು ಅವನು ಅರಿತಿರುವನು. ಅವರನ್ನು ಅವನೆಡೆಗೆ ಮರಳಿ ತರಲಾಗುವ ದಿನವನ್ನೂ ಅವನು ಅರಿತಿರುವನು. ಆಗ ಅವರು ಮಾಡಿಕೊಂಡಿರುವುದರ ಬಗ್ಗೆ ಅವನು ಅವರಿಗೆ ತಿಳಿಸಿಕೊಡುವನು. ಅಲ್ಲಾಹು ಸರ್ವ ವಿಷಯಗಳ ಬಗ್ಗೆ ಅರಿವುಳ್ಳವನಾಗಿರುವನು.