(1) ತ್ವಾ ಸೀನ್. ಇವು ಕುರ್‌ಆನ್‍ನ ಅಥವಾ ವಿಷಯಗಳನ್ನು ಸ್ಪಷ್ಟಗೊಳಿಸುವ ಗ್ರಂಥದ ಸೂಕ್ತಿಗಳಾಗಿವೆ.
(2) ಸತ್ಯವಿಶ್ವಾಸಿಗಳಿಗೆ ಇದು ಮಾರ್ಗದರ್ಶಿಯೂ, ಶುಭವಾರ್ತೆಯೂ ಆಗಿದೆ.
(3) ಅಂದರೆ ನಮಾಝನ್ನು ಸಂಸ್ಥಾಪಿಸುವ, ಝಕಾತ್ ನೀಡುವ ಮತ್ತು ಪರಲೋಕದಲ್ಲಿ ದೃಢವಿಶ್ವಾಸವಿಡುವವರಿಗೆ.
(4) ಪರಲೋಕದಲ್ಲಿ ವಿಶ್ವಾಸವಿಡದವರಿಗೆ ನಾವು ಅವರ ಕರ್ಮಗಳನ್ನು ಆಕರ್ಷಣೀಯವಾಗಿ ತೋರಿಸಿಕೊಟ್ಟಿರುವೆವು. ಆದುದರಿಂದ ಅವರು ವಿಹರಿಸುತ್ತಿರುವರು.
(5) ಕಠಿಣ ಶಿಕ್ಷೆಯಿರುವುದು ಅವರಿಗಾಗಿದೆ. ಅವರು ಪರಲೋಕದಲ್ಲಿ ಅತ್ಯಧಿಕ ನಷ್ಟ ಹೊಂದಿದವರಾಗುವರು.
(6) ಖಂಡಿತವಾಗಿಯೂ ತಮಗೆ ಕುರ್‌ಆನನ್ನು ನೀಡಲಾಗುತ್ತಿರುವುದು ಯುಕ್ತಿಪೂರ್ಣನೂ ಸರ್ವಜ್ಞನೂ ಆಗಿರುವವನ ಬಳಿಯಿಂದಾಗಿದೆ.
(7) ಮೂಸಾ ತಮ್ಮ ಕುಟುಂಬದೊಂದಿಗೆ ಹೇಳಿದ ಸಂದರ್ಭ: “ಖಂಡಿತವಾಗಿಯೂ ನಾನು ಒಂದು ಬೆಂಕಿಯನ್ನು ಕಂಡಿರುವೆನು.(803) ಅದರ ಬಳಿಯಿಂದ ನಾನು ನಿಮಗೆ ಏನಾದರೂ ಮಾಹಿತಿಯನ್ನು ತರುವೆನು ಅಥವಾ ಅದರಿಂದ ನಿಮಗೆ ಒಂದು ದೀವಟಿಗೆಯನ್ನು ಉರಿಸಿ ತರುವೆನು. ನಿಮಗೆ ಚಳಿ ಕಾಯಿಸಬಹುದು”.
803. ಮೂಸಾ(ಅ) ಮತ್ತು ಅವರ ಕುಟುಂಬವು ಸೀನಾ ಮರುಭೂಮಿಯ ಮೂಲಕ ಹಾದು ಹೋಗುವಾಗ ಈ ಘಟನೆಯು ಜರುಗಿತು.
(8) ತರುವಾಯ ಅವರು ಅದರ ಬಳಿಗೆ ತಲುಪಿದಾಗ “ಬೆಂಕಿಯ ಬಳಿಯಿರುವವರು ಮತ್ತು ಅದರ ಸುತ್ತಲಲ್ಲಿರುವವರು ಅನುಗ್ರಹೀತರಾಗಿರುವರು ಮತ್ತು ಸರ್ವಲೋಕಗಳ ರಬ್ ಆದ ಅಲ್ಲಾಹು ಪರಮಪಾವನನು” ಎಂದು ಕೂಗಿ ಹೇಳಲಾಯಿತು.
(9) “ಓ ಮೂಸಾ! ಖಂಡಿತವಾಗಿಯೂ ನಾನು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವ ಅಲ್ಲಾಹುವಾಗಿರುವೆನು”.
(10) “ತಾವು ತಮ್ಮ ಬೆತ್ತವನ್ನು ಕೆಳಗೆ ಹಾಕಿರಿ”. ಅದೊಂದು ಸರ್ಪವೇನೋ ಎಂಬಂತೆ ಚಲಿಸುವುದನ್ನು ಕಂಡಾಗ ಅವರು ವಿಮುಖರಾಗಿ ಓಡಿದರು. ಅವರು ತಿರುಗಿ ನೋಡಲೂ ಇಲ್ಲ. (ಅಲ್ಲಾಹು ಹೇಳಿದನು:) “ಓ ಮೂಸಾ! ತಾವು ಭಯಪಡದಿರಿ. ಖಂಡಿತವಾಗಿಯೂ ಸಂದೇಶವಾಹಕರು ನನ್ನ ಬಳಿ ಭಯಪಡಬೇಕಾಗಿಲ್ಲ.
(11) ಆದರೆ ಯಾರಾದರೂ ಅಕ್ರಮವೆಸಗಿ, ತರುವಾಯ ಕೆಡುಕಿನ ನಂತರ ಒಳಿತನ್ನು ಬದಲಿಯಾಗಿ ತಂದರೆ ಖಂಡಿತವಾಗಿಯೂ ನಾನು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವೆನು.(804)
804. ಅಪರಾಧಿಗಳಿಗೆ ಭಯಭೀತಿಯೊಂದಿಗೆ ಕಳೆಯಬೇಕಾಗಿ ಬರುವುದು ಎಂಬ ಸೂಚನೆಯು 10ನೇ ಸೂಕ್ತಿಯಲ್ಲಿರುವುದರಿಂದ 11ನೇ ಸೂಕ್ತಿಯಲ್ಲಿ ಕೆಡುಕಿಗೆ ಬದಲಿಯಾಗಿ ಒಳಿತನ್ನು ತಂದವರಿಗೆ ಅಲ್ಲಾಹು ಕ್ಷಮಿಸುವನು ಎಂಬ ವಿಷಯವನ್ನು ವಿಶೇಷವಾಗಿ ಹೇಳಲಾಗಿದೆ. ಪ್ರವಾದಿ ಮೂಸಾ(ಅ) ರವರು ಪ್ರಮಾದವಶಾತ್ ಕಿಬ್ತೀ ಜನಾಂಗದ ಓರ್ವನನ್ನು ವಧಿಸಿದಂತೆ ಪ್ರವಾದಿಗಳಿಗೆ ಸಂಭವಿಸುವ ಕ್ಷುಲ್ಲಕ ಪ್ರಮಾದಗಳನ್ನು ಅಲ್ಲಾಹು ಮನ್ನಿಸುವನು ಎಂಬ ವಿಷಯವನ್ನು 11ನೇ ವಚನದಲ್ಲಿ ಸೂಚಿಸಲಾಗಿದೆಯೆಂದು ಕೆಲವು ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ.
(12) ತಾವು ತಮ್ಮ ಕೈಯನ್ನು ತಮ್ಮ ಅಂಗಿಯ ವಕ್ಷಸ್ಥಳದೊಳಗೆ ತೂರಿಸಿರಿ. ಅದು ಯಾವುದೇ ನ್ಯೂನತೆಯಿಲ್ಲದೆ ಬೆಳ್ಳಗಾಗಿ ಹೊರಬರುವುದು. ಇವು ಫಿರ್‍ಔನ್ ಮತ್ತು ಅವನ ಜನರೆಡೆಗಿರುವ ಒಂಬತ್ತು ದೃಷ್ಟಾಂತಗಳಲ್ಲಿ ಸೇರಿದ್ದಾಗಿವೆ.(805) ಖಂಡಿತವಾಗಿಯೂ ಅವರು ಧಿಕ್ಕಾರಿಗಳಾದ ಜನತೆಯಾಗಿರುವರು”.
805. ಇತರ ದೃಷ್ಟಾಂತಗಳ ಬಗ್ಗೆ 7:130, 7:133 ಸೂಕ್ತಿಗಳಲ್ಲಿ ಹೇಳಲಾಗಿದೆ.
(13) ಅವರ ಬಳಿಗೆ ಕಣ್ತೆರೆಸುವ ವಿಧದಲ್ಲಿರುವ ನಮ್ಮ ದೃಷ್ಟಾಂತಗಳು ಬಂದಾಗ ಅವರು ಹೇಳಿದರು: “ಇದು ಸ್ಪಷ್ಟವಾದ ಮಾಂತ್ರಿಕ ವಿದ್ಯೆಯಾಗಿದೆ”.
(14) ಅವುಗಳ ಬಗ್ಗೆ ಅವರ ಮನಸ್ಸುಗಳು ದೃಢಪ್ರಜ್ಞೆಯನ್ನು ಗಳಿಸಿದ ಬಳಿಕವೂ ಅಕ್ರಮ ಮತ್ತು ಅಹಂಕಾರದ ನಿಮಿತ್ತ ಅವರು ಅದನ್ನು ನಿಷೇಧಿಸಿದರು. ಆಗ ಆ ವಿನಾಶಕಾರಿಗಳ ಅಂತ್ಯವು ಹೇಗಿತ್ತು ಎಂಬುದನ್ನು ನೋಡಿರಿ.
(15) ನಾವು ದಾವೂದ್ ಮತ್ತು ಸುಲೈಮಾನ್‍ರಿಗೆ ಜ್ಞಾನವನ್ನು ನೀಡಿದೆವು. “ತನ್ನ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದ ಮಿಕ್ಕವರಿಗಿಂತಲೂ ಅಧಿಕ ಶ್ರೇಷ್ಠತೆಯನ್ನು ನಮಗೆ ನೀಡಿರುವ ಅಲ್ಲಾಹುವಿಗೆ ಸ್ತುತಿ” ಎಂದು ಅವರಿಬ್ಬರೂ ಹೇಳಿದರು.
(16) ಸುಲೈಮಾನ್‍ರು ದಾವೂದ್‍ರ ಉತ್ತರಾಧಿಕಾರಿಯಾದರು. ಅವರು ಹೇಳಿದರು: “ಓ ಜನರೇ! ನಮಗೆ ಹಕ್ಕಿಗಳ ಭಾಷೆಯನ್ನು ಕಲಿಸಲಾಗಿದೆ. ಸರ್ವ ವಿಷಯಗಳಿಂದಲೂ ನಮಗೆ ನೀಡಲಾಗಿದೆ. ಖಂಡಿತವಾಗಿಯೂ ಸ್ಪಷ್ಟವಾದ ಅನುಗ್ರಹವು ಇದೇ ಆಗಿದೆ”.
(17) ಸುಲೈಮಾನ್‍ರಿಗಾಗಿ ಜಿನ್ನ್, ಮನುಷ್ಯರು ಮತ್ತು ಹಕ್ಕಿಗಳಲ್ಲಿ ಸೇರಿದ ಅವರ ಸೈನ್ಯಗಳನ್ನು ಒಟ್ಟುಗೂಡಿಸಲಾಯಿತು. ಅವರು ಕ್ರಮಬದ್ಧವಾಗಿ ನಿಲ್ಲಿಸಲಾಗುತ್ತಿರುವರು.(806)
806. ಪ್ರತಿಯೊಂದು ವಿಭಾಗವನ್ನೂ ಅವರವರ ಸ್ಥಳದಿಂದ ತಪ್ಪಿಹೋಗದಂತೆ ತಡೆದು ನಿಲ್ಲಿಸಲಾಗುವುದು ಎಂದರ್ಥ.
(18) ಹೀಗೆ ಅವರು ಇರುವೆಗಳ ಕಣಿವೆಯ ಮೂಲಕ ಚಲಿಸುತ್ತಿದ್ದಾಗ ಒಂದು ಇರುವೆ ಹೇಳಿತು: “ಓ ಇರುವೆಗಳೇ! ನೀವು ನಿಮ್ಮ ವಸತಿಗಳನ್ನು ಪ್ರವೇಶಿಸಿರಿ. ಸುಲೈಮಾನ್ ಮತ್ತು ಅವರ ಸೈನ್ಯಗಳು ಪ್ರಜ್ಞೆಯಿಲ್ಲದೆ ನಿಮ್ಮನ್ನು ತುಳಿದು ಹಾಕದಿರಲಿ”.(807)
807. ಇರುವೆಯ ಈ ಮಾತು ಅಸಾಮಾನ್ಯ ಘಟನೆಯಾಗಿದೆ. ಇದು ಸುಲೈಮಾನ್(ಅ) ರಿಗೆ ಅಲ್ಲಾಹು ನೀಡಿದ ವಿಶೇಷ ಅನುಗ್ರಹಗಳ ಪೈಕಿ ಸೇರಿದ್ದಾಗಿದೆ.
(19) ಆಗ ಅದರ ಮಾತು ಕೇಳಿ ಅವರು (ಸುಲೈಮಾನ್) ಚೆನ್ನಾಗಿ ಮುಗುಳ್ನಕ್ಕರು. ಅವರು ಹೇಳಿದರು: “ನನ್ನ ಪ್ರಭೂ! ನನಗೂ ನನ್ನ ಮಾತಾಪಿತರಿಗೂ ನೀನು ದಯಪಾಲಿಸಿರುವ ನಿನ್ನ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸಲು ಮತ್ತು ನೀನು ತೃಪ್ತಿಪಡುವ ಸತ್ಕರ್ಮಗಳನ್ನು ಮಾಡಲು ನನಗೆ ಪ್ರೇರಣೆಯನ್ನು ನೀಡು. ನೀನು ನಿನ್ನ ಕಾರುಣ್ಯದಿಂದಾಗಿ ನಿನ್ನ ಸಜ್ಜನ ದಾಸರಲ್ಲಿ ನನ್ನನ್ನೂ ಸೇರಿಸು”.
(20) ಅವರು ಹಕ್ಕಿಗಳನ್ನು ಪರಿಶೋಧಿಸಿದರು. ತರುವಾಯ ಅವರು ಹೇಳಿದರು: “ಏನಾಗಿದೆ? ಹುದ್ ಹುದ್ (ಹೂಪೂ) ಹಕ್ಕಿಯನ್ನು ನಾನು ಕಾಣುತ್ತಿಲ್ಲವಲ್ಲ? ಅಥವಾ ಅದು ಅನುಪಸ್ಥಿತರಾಗಿರುವವರಲ್ಲಿ ಸೇರಿದೆಯೇ?”
(21) ನಾನು ಅದಕ್ಕೆ ಕಠೋರ ಶಿಕ್ಷೆಯನ್ನು ನೀಡುವೆನು ಅಥವಾ ಅದರ ಕತ್ತು ಕೊಯ್ಯುವೆನು. ಅನ್ಯಥಾ ಅದು ನನಗೆ ಸ್ಪಷ್ಟವಾದ ಯಾವುದಾದರೂ ಕಾರಣವನ್ನು ತರಲಿ”.
(22) ಆದರೆ ಅದು ತಲುಪಲು ಹೆಚ್ಚು ತಡವಾಗಲಿಲ್ಲ. ಅದು ಹೇಳಿತು: “ತಾವು ಸೂಕ್ಷ್ಮವಾಗಿ ಅರಿತಿರದ ಒಂದು ವಿಷಯವನ್ನು ನಾನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡಿರುವೆನು. ನಾನು ಸಬಅ್(808)ನಿಂದ ಒಂದು ಖಚಿತ ಮಾಹಿತಿಯೊಂದಿಗೆ ಬಂದಿರುವೆನು.
808. ‘ಸಬಅ್’ ಅಥವಾ ಶೇಬಾ ಎಂಬುದು ಪುರಾತನ ಯಮನ್‍ನ ಒಂದು ನಗರ ಅಥವಾ ಜನಾಂಗವಾಗಿದೆ. ನಂತರ ಅದು ಯಮನಿನ ಅನೇಕ ಪ್ರದೇಶಗಳಲ್ಲಿ ಆಡಳಿತವನ್ನು ಹೊಂದಿದ ಒಂದು ಸಾಮ್ರಾಜ್ಯದ ಹೆಸರಾಗಿ ಮಾರ್ಪಟ್ಟಿತು. ಇಥಿಯೋಪಿಯಾದಲ್ಲೂ ಶೇಬಾ ಸಾಮ್ರಾಜ್ಯದ ಆಡಳಿತವಿತ್ತೆಂದು ಹೇಳಲಾಗುತ್ತದೆ. ಸುಲೈಮಾನ್(ಅ) ರವರ ಕಾಲದಲ್ಲಿ ‘ಬಲ್ಕೀಸ್’ ಎಂಬ ಹೆಸರಿನ ರಾಣಿ ‘ಸಬಅ್’ ಸಾಮ್ರಾಜ್ಯವನ್ನು ಆಳುತ್ತಿದ್ದಳು.
(23) ಅವರನ್ನು ಒಬ್ಬ ಮಹಿಳೆಯು ಆಳುತ್ತಿರುವುದಾಗಿ ನಾನು ಕಂಡಿರುವೆನು. ಆಕೆಗೆ ಎಲ್ಲ ವಿಷಯಗಳಿಂದಲೂ ನೀಡಲಾಗಿದೆ. ಆಕೆಗೊಂದು ಮಹಾ ಸಿಂಹಾಸನವೂ ಇದೆ.
(24) ಆಕೆ ಮತ್ತು ಆಕೆಯ ಜನರು ಅಲ್ಲಾಹುವಿನ ಹೊರತು ಸೂರ್ಯನಿಗೆ ಸಾಷ್ಟಾಂಗವೆರಗುವುದಾಗಿ ನಾನು ಕಂಡಿರುವೆನು. ಸೈತಾನನು ಅವರಿಗೆ ಅವರ ಕೃತ್ಯಗಳನ್ನು ಆಕರ್ಷಣೀಯಗೊಳಿಸಿ ತೋರಿಸಿಕೊಟ್ಟಿರುವನು ಮತ್ತು ಅವರನ್ನು ಸನ್ಮಾರ್ಗದಿಂದ ತಡೆದಿರುವನು. ಆದುದರಿಂದ ಅವರು ಸನ್ಮಾರ್ಗವನ್ನು ಪಡೆಯದಾದರು.
(25) ಅವರು ಭೂಮ್ಯಾಕಾಶಗಳಲ್ಲಿ ಅಗೋಚರವಾಗಿರುವುದನ್ನು ಹೊರತರುವವನೂ, ನೀವು ಮರೆಮಾಚುವುದನ್ನು ಹಾಗೂ ಬಹಿರಂಗಪಡಿಸುವುದನ್ನು ಆಗಿರುವ ಅಲ್ಲಾಹುವಿಗೆ ಸಾಷ್ಟಾಂಗವೆರಗದಿರುವುದಕ್ಕಾಗಿ (ಸೈತಾನನು ಹಾಗೆ ಮಾಡಿರುವನು).
(26) ಮಹಾ ಸಿಂಹಾಸನದ ಒಡೆಯನಾಗಿರುವ ಅಲ್ಲಾಹುವಿನ ಹೊರತು ಅನ್ಯ ಆರಾಧ್ಯರಿಲ್ಲ”.
(27) ಅವರು ಹೇಳಿದರು: “ನೀನು ಹೇಳಿದ್ದು ಸತ್ಯವೋ ಅಥವಾ ನೀನು ಸುಳ್ಳು ನುಡಿಯುವವರಲ್ಲಿ ಸೇರಿದವನಾಗಿರುವೆಯೋ ಎಂದು ನಾವು ನೋಡುವೆವು.
(28) ನನ್ನ ಈ ಓಲೆಯೊಂದಿಗೆ ತೆರಳಿ ಅದನ್ನು ಅವರ ಮುಂದೆ ಹಾಕಿಬಿಡು. ತರುವಾಯ ಅವರಿಂದ ಸರಿದು ನಿಂತು ಅವರು ಯಾವ ಉತ್ತರವನ್ನು ನೀಡುವರೆಂದು ನೋಡು”.
(29) ಆಕೆ ಹೇಳಿದಳು: “ಓ ಮುಖಂಡರೇ! ಇಗೋ! ನನಗೆ ಒಂದು ಆದರಣೀಯ ಓಲೆಯನ್ನು(809) ಹಾಕಿಬಿಡಲಾಗಿದೆ.
809. ಅರಸರು ಮತ್ತಿತರರು ಬರೆಯುವ ರೀತಿಯಲ್ಲಿ ಸುಂದರವಾಗಿ ಬರೆದು ಕವರಿನೊಳಗಿಟ್ಟು ಮುದ್ರೆ ಹಾಕಲಾದ ಓಲೆ ಎಂದಾಗಿರಬಹುದು.
(30) ಅದು ಸುಲೈಮಾನ್‍ರ ಕಡೆಯಿಂದಾಗಿದೆ. ಅದರಲ್ಲಿ “ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹುವಿನ ನಾಮದಿಂದ.
(31) ನೀವು ಅಹಂಕಾರಪಡದೆ ನನ್ನ ಬಳಿಗೆ ಶರಣಾಗತರಾಗಿ ಬನ್ನಿರಿ” ಎಂದಿದೆ”.
(32) ಆಕೆ ಹೇಳಿದಳು: “ಓ ಮುಖಂಡರೇ! ನನ್ನ ಈ ವಿಷಯದಲ್ಲಿ ನೀವು ನನಗೆ ಸಲಹೆ ನೀಡಿರಿ. ನೀವು ನನ್ನ ಬಳಿ ಉಪಸ್ಥಿತರಾಗಿರದ ಹೊರತು ನಾನು ಯಾವುದೇ ವಿಷಯವನ್ನೂ ಖಚಿತವಾಗಿ ತೀರ್ಮಾನಿಸುವವಳಲ್ಲ”.
(33) ಅವರು ಹೇಳಿದರು: “ನಾವು ಮಹಾ ಬಲಿಷ್ಠರೂ ಮಹಾ ಯುದ್ಧ ಸಾಮರ್ಥ್ಯವುಳ್ಳವರೂ ಆಗಿರುವೆವು. ಅಧಿಕಾರವಿರುವುದು ತಮ್ಮಲ್ಲಾಗಿದೆ. ಆದುದರಿಂದ ಏನು ಆಜ್ಞಾಪಿಸಬೇಕೆಂದು ತಾವು ಆಲೋಚಿಸಿರಿ”.
(34) ಆಕೆ ಹೇಳಿದಳು: “ಖಂಡಿತವಾಗಿಯೂ ಅರಸರು ಒಂದು ನಾಡನ್ನು ಪ್ರವೇಶಿಸಿದರೆ ಅದನ್ನು ನಾಶ ಮಾಡುವರು ಮತ್ತು ಅಲ್ಲಿನ ಘನತೆಯುಳ್ಳವರನ್ನು ನಿಂದಿತರನ್ನಾಗಿ ಮಾಡುವರು. ಅವರು ಹೀಗೆಯೇ ಮಾಡುವರು.
(35) ನಾನು ಅವರಿಗೆ ಒಂದು ಉಡುಗೊರೆಯನ್ನು ಕಳುಹಿಸಿ, ದೂತರು ಯಾವ ಸುದ್ದಿಯೊಂದಿಗೆ ಮರಳುವರು ಎಂದು ನೋಡುವೆನು”.
(36) ತರುವಾಯ ಅವನು (ದೂತನು) ಸುಲೈಮಾನ್‍ರ ಬಳಿಗೆ ಬಂದಾಗ ಅವರು ಹೇಳಿದರು: “ನೀವು ನನಗೆ ಸಂಪತ್ತನ್ನು ನೀಡಿ ಸಹಾಯ ಮಾಡುತ್ತಿದ್ದೀರಾ? ಆದರೆ ಅಲ್ಲಾಹು ನನಗೆ ಏನನ್ನು ನೀಡಿರುವನೋ ಅದು ಅವನು ನಿಮಗೆ ನೀಡಿರುವುದಕ್ಕಿಂತಲೂ ಶ್ರೇಷ್ಠವಾಗಿದೆ. ಆದರೆ ನೀವು ನಿಮ್ಮ ಉಡುಗೊರೆಯ ಬಗ್ಗೆ ಬೀಗುತ್ತಿದ್ದೀರಿ.
(37) ತಾವು ಅವರ ಬಳಿಗೆ ಮರಳಿ ಹೋಗಿರಿ. ಖಂಡಿತವಾಗಿಯೂ ಅವರಿಗೆ ಎದುರಿಸಲಾಗದ ಸೈನ್ಯಗಳೊಂದಿಗೆ ನಾವು ಅವರ ಬಳಿಗೆ ತೆರಳುವೆವು. ನಿಂದಿತರೂ, ಅಪಮಾನಿತರೂ ಆಗಿರುವ ಸ್ಥಿತಿಯಲ್ಲಿ ನಾವು ಅವರನ್ನು ಅಲ್ಲಿಂದ ಹೊರದಬ್ಬುವೆವು”.
(38) ಸುಲೈಮಾನ್ ಹೇಳಿದರು: “ಓ ಮುಖಂಡರೇ! ಅವರು ಶರಣಾಗತರಾಗಿ ನನ್ನ ಬಳಿಗೆ ಬರುವ ಮೊದಲು ನಿಮ್ಮಲ್ಲಿ ಯಾರು ಆಕೆಯ ಸಿಂಹಾಸನವನ್ನು ನನ್ನ ಬಳಿಗೆ ತರುವಿರಿ?”
(39) ಜಿನ್ನ್‌ಗಳಲ್ಲಿದ್ದ ಒಬ್ಬ ಬಲಶಾಲಿ ಹೇಳಿದನು: “ತಾವು ತಮ್ಮ ಈ ಸ್ಥಾನದಿಂದ ಎದ್ದೇಳುವ ಮೊದಲೇ ಅದನ್ನು ನಾನು ತಮ್ಮ ಬಳಿಗೆ ತರುವೆನು. ಖಂಡಿತವಾಗಿಯೂ ನಾನು ಅದರಲ್ಲಿ ಬಲಿಷ್ಠನೂ ವಿಶ್ವಾಸಯೋಗ್ಯನೂ ಆಗಿರುವೆನು”.
(40) ಗ್ರಂಥದಿಂದ ಜ್ಞಾನವನ್ನು(810) ಕರಗತ ಮಾಡಿದ ವ್ಯಕ್ತಿ ಹೇಳಿದರು: “ತಮ್ಮ ದೃಷ್ಟಿ ತಮ್ಮೆಡೆಗೆ ಮರುಳುವುದಕ್ಕೆ ಮುಂಚೆಯೇ ನಾನು ಅದನ್ನು ತಮ್ಮ ಬಳಿಗೆ ತರುವೆನು”. ತರುವಾಯ ಅದು (ಸಿಂಹಾಸನ) ತನ್ನ ಬಳಿ ಇರುವುದಾಗಿ ಕಂಡಾಗ ಅವರು (ಸುಲೈಮಾನ್) ಹೇಳಿದರು: “ಇದು ನನ್ನ ರಬ್ ನನಗೆ ದಯಪಾಲಿಸಿದ ಅನುಗ್ರಹದಲ್ಲಿ ಸೇರಿದ್ದಾಗಿದೆ. ನಾನು ಕೃತಜ್ಞತೆ ಸಲ್ಲಿಸುವೆನೋ ಅಥವಾ ಕೃತಘ್ನನಾಗುವೆನೋ ಎಂದು ಪರೀಕ್ಷಿಸುವ ಸಲುವಾಗಿ. ಯಾರಾದರೂ ಕೃತಜ್ಞತೆ ಸಲ್ಲಿಸಿದರೆ ಖಂಡಿತವಾಗಿಯೂ ಅವನು ಕೃತಜ್ಞತೆ ಸಲ್ಲಿಸುವುದು ಸ್ವತಃ ಅವನಿಗೇ ಆಗಿದೆ. ಯಾರಾದರೂ ಕೃತಘ್ನರಾಗುವುದಾದರೆ ಖಂಡಿತವಾಗಿಯೂ ನನ್ನ ರಬ್ ನಿರಪೇಕ್ಷನೂ ಗೌರವಾನ್ವಿತನೂ ಆಗಿರುವನು”.
810. ‘ಗ್ರಂಥದಿಂದ ಜ್ಞಾನವನ್ನು ಕರಗತ ಮಾಡಿಕೊಂಡಿರುವ ವ್ಯಕ್ತಿ’ ಎಂದು ಯಾರ ಬಗ್ಗೆ ಹೇಳಲಾಗಿದೆ ಎಂಬ ಬಗ್ಗೆ ವ್ಯಾಖ್ಯಾನಕಾರರಲ್ಲಿ ಭಿನ್ನಾಭಿಪ್ರಾಯವಿದೆ. ಆ ವ್ಯಕ್ತಿ ಮಲಕ್ ಜಿಬ್ರೀಲ್, ಆಸಫ್ ಇಬ್ನ್ ಬರ್ಕಿಯಾ ಎಂಬ ಹೆಸರಿನ ಓರ್ವ ಇಸ್ರಾಈಲೀ ವಿದ್ವಾಂಸ, ಅಥವಾ ಸ್ವತಃ ಪ್ರವಾದಿ ಸುಲೈಮಾನ್(ಅ) ರವರೇ ಆಗಿರುವರು ಎಂಬಿತ್ಯಾದಿ ವಿಭಿನ್ನ ಅಭಿಪ್ರಾಯಗಳಿವೆ. ಯಾರೇ ಆಗಿದ್ದರೂ ಇಲ್ಲಿ ಸಂಭವಿಸಿರುವುದು ಸುಲೈಮಾನ್‍ರವರ ಮುಅ್‌ಜಿಝತ್ ಆಗಿದೆ.
(41) ಅವರು ಹೇಳಿದರು: “ಆಕೆಗೆ ಗುರುತಿಸಲಾಗದ ರೀತಿಯಲ್ಲಿ ಆಕೆಯ ಸಿಂಹಾಸನವನ್ನು ಬದಲಾಯಿಸಿರಿ. ಆಕೆ ಸತ್ಯವನ್ನು ಅರ್ಥಮಾಡಿಕೊಳ್ಳುವಳೋ ಅಥವಾ ಸತ್ಯವನ್ನು ಅರ್ಥಮಾಡಿಕೊಳ್ಳಲಾಗದವರಲ್ಲಿ ಸೇರಿದವಳಾಗುವಳೋ ಎಂಬುದನ್ನು ನೋಡೋಣ”.
(42) ತರುವಾಯ ಆಕೆ ಬಂದಾಗ (ಆಕೆಯೊಂದಿಗೆ) ಕೇಳಲಾಯಿತು: “ತಮ್ಮ ಸಿಂಹಾಸನವು ಇದರಂತಿದೆಯೇ?” ಆಕೆ ಹೇಳಿದಳು: “ಇದು ಅದೇ ಎಂಬಂತೆ ಕಾಣುತ್ತದೆ. ನಮಗೆ ಇದಕ್ಕಿಂತ ಮೊದಲೇ ಜ್ಞಾನ ನೀಡಲಾಗಿದೆ ಮತ್ತು ನಾವು ಮುಸ್ಲಿಮರಾಗಿರುವೆವು”.(811)
811. ‘ನಮಗೆ ಇದಕ್ಕಿಂತ ಮೊದಲೇ..’ ಎಂಬಲ್ಲಿಂದ ತೊಡಗುವ ವಾಕ್ಯವು ಬಲ್ಕೀಸ್‍ರದ್ದಾಗಿದೆ ಅಥವಾ ಸುಲೈಮಾನ್(ಅ) ರವರದ್ದಾಗಿದೆ ಎಂಬ ವಿಭಿನ್ನ ಅಭಿಪ್ರಾಯಗಳಿವೆ.
(43) ಆಕೆ ಅಲ್ಲಾಹುವಿನ ಹೊರತು ಆರಾಧಿಸುತ್ತಿದ್ದ ವಸ್ತುಗಳು ಆಕೆಯನ್ನು ತಡೆದಿತ್ತು.(812) ಖಂಡಿತವಾಗಿಯೂ ಆಕೆ ಸತ್ಯನಿಷೇಧಿಗಳಾದ ಜನತೆಯಲ್ಲಿ ಸೇರಿದವಳಾಗಿದ್ದಳು.
812. ಅಲ್ಲಾಹು ಆಕೆಯನ್ನು ತಡೆದನು ಎಂದು ಕೆಲವರು ವ್ಯಾಖ್ಯಾನಿಸಿದ್ದಾರೆ. ಅಲ್ಲಾಹುವಿನ ಹೊರತಾಗಿ ಆಕೆ ಆರಾಧಿಸುತ್ತಿದ್ದವುಗಳಿಂದ ಪ್ರವಾದಿ ಸುಲೈಮಾನ್(ಅ) ರು ಆಕೆಯನ್ನು ತಡೆದರು ಎಂದು ಕೂಡ ವ್ಯಾಖ್ಯಾನಿಸಲಾಗಿದೆ. ಸರ್ವನಾಮಗಳನ್ನು ನಿರ್ಧರಿಸುವಲ್ಲಿ ಉಂಟಾಗುವ ವ್ಯತ್ಯಾಸವೇ ಈ ವಿಭಿನ್ನ ವ್ಯಾಖ್ಯಾನಗಳಿಗೆ ಕಾರಣ.
(44) “ಅರಮನೆಯನ್ನು ಪ್ರವೇಶಿಸಿರಿ” ಎಂದು ಆಕೆಯೊಂದಿಗೆ ಹೇಳಲಾಯಿತು. ಆದರೆ ಆಕೆ ಅದನ್ನು ಕಂಡಾಗ ಅದನ್ನು ಕೊಳವೆಂದು ಭಾವಿಸಿ ತನ್ನ ಕಣಕಾಲುಗಳಿಂದ ವಸ್ತ್ರವನ್ನು ಮೇಲೆತ್ತಿದಳು. ಅವರು ಹೇಳಿದರು: “ಇದು ಸ್ಫಟಿಕ ತುಂಡುಗಳನ್ನು ಹಾಸಿ ಹೊಳೆಯುವಂತೆ ಮಾಡಿರುವ ಅರಮನೆಯಾಗಿದೆ”. ಆಕೆ ಹೇಳಿದಳು: “ನನ್ನ ಪ್ರಭೂ! ನಾನು ಸ್ವತಃ ನನ್ನೊಂದಿಗೇ ಅನ್ಯಾಯವೆಸಗಿರುವೆನು. ನಾನು ಸುಲೈಮಾನ್‍ರೊಂದಿಗೆ ಸರ್ವಲೋಕಗಳ ರಬ್ ಆದ ಅಲ್ಲಾಹುವಿಗೆ ಶರಣಾಗತಳಾಗಿರುವೆನು”.
(45) “ನೀವು ಅಲ್ಲಾಹುವನ್ನು (ಮಾತ್ರ) ಆರಾಧಿಸಿರಿ” ಎಂಬ ಸಂದೇಶದೊಂದಿಗೆ ಸಮೂದ್ ಜನಾಂಗಕ್ಕೆ ಅವರ ಸಹೋದರರಾದ ಸ್ವಾಲಿಹ್‍ರನ್ನು ನಾವು ಕಳುಹಿಸಿದೆವು. ಆಗ ಅವರು ಪರಸ್ಪರ ತರ್ಕಿಸುವ ಎರಡು ಗುಂಪುಗಳಾಗಿ ಮಾರ್ಪಟ್ಟರು.
(46) ಅವರು (ಸ್ವಾಲಿಹ್) ಹೇಳಿದರು: “ಓ ನನ್ನ ಜನರೇ! ನೀವು ಒಳಿತಿಗಿಂತ ಮುಂಚೆ ಕೆಡುಕಿಗಾಗಿ ಏಕೆ ಆತುರಪಡುತ್ತಿದ್ದೀರಿ? ನಿಮಗೆ ಅಲ್ಲಾಹುವಿನಲ್ಲಿ ಪಾಪಮುಕ್ತಿಯನ್ನು ಬೇಡಬಾರದೇ? ಅದರಿಂದಾಗಿ ನಿಮಗೆ ಕರುಣೆ ಲಭ್ಯವಾಗಲೂಬಹುದು”.
(47) ಅವರು ಹೇಳಿದರು: “ತಾವು ಮತ್ತು ತಮ್ಮ ಜೊತೆಯಲ್ಲಿರುವವರಿಂದಾಗಿ ನಾವು ಅಪಶಕುನಕ್ಕೊಳಗಾಗಿರುವೆವು”.(813) ಅವರು ಹೇಳಿದರು: “ನಿಮ್ಮ ಶಕುನವು ಅಲ್ಲಾಹುವಿನ ಬಳಿ ದಾಖಲಿಸಲ್ಪಟ್ಟದ್ದಾಗಿದೆ. ಅಲ್ಲ, ನೀವು (ಅಲ್ಲಾಹುವಿನ) ಪರೀಕ್ಷೆಗೆ ತುತ್ತಾಗುವ ಒಂದು ಸಮುದಾಯವಾಗಿದ್ದೀರಿ”.
813. ಪ್ರವಾದಿಗಳು ಅಥವಾ ಸಂದೇಶ ಪ್ರಚಾರಕರು ಒಂದು ಪ್ರದೇಶದಲ್ಲಿ ತಮ್ಮ ಬೋಧನೆಯನ್ನು ಆರಂಭಿಸಿದಾಗ ಅಲ್ಲೇನಾದರೂ ಆಪತ್ತುಗಳೋ ಅನರ್ಥಗಳೋ ಜರುಗಿದರೆ ಅವೆಲ್ಲವೂ ಪ್ರವಾದಿಗಳ ಅಪಶಕುನವೆಂದು ಪ್ರಚಾರಮಾಡಲು ಸತ್ಯನಿಷೇಧಿಗಳು ಸ್ವಲ್ಪವೂ ಹಿಂಜರಿಯುತ್ತಿರಲಿಲ್ಲ. ಪ್ರತಿಯೊಬ್ಬರಿಗೂ ಒದಗುವ ಸೌಭಾಗ್ಯ ಮತ್ತು ದೌರ್ಭಾಗ್ಯಗಳು ಅಲ್ಲಾಹುವಿನ ನಿರ್ಣಯ ಪ್ರಕಾರವೇ ಅವರಿಗೆ ವಿಧಿಸಲ್ಪಟ್ಟದ್ದಾಗಿದೆ ಎಂಬ ವಾಸ್ತವವನ್ನು ಸರ್ವ ಸತ್ಯನಿಷೇಧಿಗಳೂ ವಿಸ್ಮರಿಸುತ್ತಾರೆ.
(48) ಭೂಮಿಯಲ್ಲಿ ಕ್ಷೋಭೆಯನ್ನುಂಟುಮಾಡುತ್ತಿದ್ದ ಮತ್ತು ಯಾವುದೇ ಸುಧಾರಣೆಯನ್ನು ಮಾಡದ ಒಂಬತ್ತು ಜನರು ಆ ಪಟ್ಟಣದಲ್ಲಿದ್ದರು.
(49) “ನಾವು ರಾತ್ರಿ ವೇಳೆಯಲ್ಲಿ ಅವರನ್ನು (ಸ್ವಾಲಿಹ್) ಮತ್ತು ಅವರ ಜನರನ್ನು ಕೊಲ್ಲೋಣ. ತರುವಾಯ ಅವರ ಹಕ್ಕುದಾರನೊಂದಿಗೆ, ತಮ್ಮ ಜನರ ವಿನಾಶಕ್ಕೆ ನಾವು ಸಾಕ್ಷ್ಯವಹಿಸಿಲ್ಲ, ಖಂಡಿತವಾಗಿಯೂ ನಾವು ಸತ್ಯವನ್ನೇ ನುಡಿಯುವವರಾಗಿರುವೆವು ಎಂದು ಹೇಳೋಣವೆಂದು ನೀವು ಅಲ್ಲಾಹುವಿನ ಮೇಲೆ ಪರಸ್ಪರ ಪ್ರಮಾಣ ಮಾಡಿ ಹೇಳಿರಿ” ಎಂದು ಅವರು ಪರಸ್ಪರ ಹೇಳಿದರು.
(50) ಅವರು ತಂತ್ರವನ್ನು ಹೂಡಿದರು. ಅವರು ಗ್ರಹಿಸದ ರೀತಿಯಲ್ಲಿ ನಾವೂ ತಂತ್ರ ಹೂಡಿದೆವು.
(51) ತರುವಾಯ ಅವರ ತಂತ್ರದ ಪರ್ಯಾವಸಾನವು ಹೇಗಿತ್ತು ಎಂಬುದನ್ನು ನೋಡಿರಿ. ನಾವು ಅವರನ್ನು ಮತ್ತು ಅವರ ಜನತೆಯನ್ನು ಸಂಪೂರ್ಣವಾಗಿ ನಾಶ ಮಾಡಿದೆವು.
(52) ಹೀಗೆ ಅವರು ಅಕ್ರಮವೆಸಗಿದ ಫಲವಾಗಿ ಅವರ ಮನೆಗಳು (ಶೂನ್ಯವಾಗಿ) ಕುಸಿದು ಬಿದ್ದಿವೆ. ಖಂಡಿತವಾಗಿಯೂ ಅರ್ಥ ಮಾಡಿಕೊಳ್ಳುವ ಜನರಿಗೆ ಅದರಲ್ಲಿ ದೃಷ್ಟಾಂತವಿದೆ.
(53) ವಿಶ್ವಾಸವಿಟ್ಟವರನ್ನು ಮತ್ತು ಭಯಭಕ್ತಿ ಪಾಲಿಸಿದವರನ್ನು ನಾವು ರಕ್ಷಿಸಿದೆವು.
(54) ಲೂತ್‍ರನ್ನು (ಸ್ಮರಿಸಿರಿ). ಅವರು ತಮ್ಮ ಜನತೆಯೊಂದಿಗೆ ಹೇಳಿದ ಸಂದರ್ಭ: “ನೀವು ಕಣ್ಣಾರೆ ಕಾಣುತ್ತಲೇ ನೀಚಕೃತ್ಯವನ್ನು ಮಾಡುತ್ತಿದ್ದೀರಾ?
(55) ನೀವು ಕಾಮಶಮನಕ್ಕಾಗಿ ಸ್ತ್ರೀಯರನ್ನು ಬಿಟ್ಟು ಪುರುಷರ ಬಳಿಗೆ ತೆರಳುವುದೇ? ಅಲ್ಲ, ನೀವು ಅಜ್ಞಾನಿಗಳಾಗಿರುವ ಒಂದು ಜನತೆಯಾಗಿದ್ದೀರಿ.
(56) ಅವರ ಜನತೆಯ ಉತ್ತರವು “ಲೂತ್‍ರ ಅನುಯಾಯಿಗಳನ್ನು ನಿಮ್ಮ ಊರಿನಿಂದ ಹೊರಹಾಕಿರಿ. ಅವರು ಶುಚಿತ್ವ ಪಾಲಿಸುವ ಕೆಲವು ಜನರಾಗಿರುವರು” ಎಂದು ಹೇಳುವುದರ ಹೊರತು ಇನ್ನೇನೂ ಆಗಿರಲಿಲ್ಲ.
(57) ಆಗ ನಾವು ಅವರನ್ನು ಮತ್ತು ಅವರ ಕುಟುಂಬವನ್ನು ರಕ್ಷಿಸಿದೆವು; ಅವರ ಪತ್ನಿಯ ಹೊರತು. ಹಿಂದೆ ಉಳಿದವರಲ್ಲಿ ನಾವು ಆಕೆಯನ್ನೂ ಎಣಿಸಿದೆವು.
(58) ನಾವು ಅವರ ಮೇಲೆ ಒಂದು ವಿಧದ ಮಳೆಯನ್ನು ಸುರಿಸಿದೆವು. ಮುನ್ನೆಚ್ಚರಿಕೆ ನೀಡಲಾದವರಿಗೆ ಲಭ್ಯವಾದ ಆ ಮಳೆಯು ಎಷ್ಟು ನಿಕೃಷ್ಟವಾದುದು!
(59) (ಓ ಪ್ರವಾದಿಯವರೇ!) ಹೇಳಿರಿ: “ಅಲ್ಲಾಹುವಿಗೆ ಸ್ತುತಿ. ಅವನು ಆರಿಸಿದ ಅವನ ದಾಸರ ಮೇಲೆ ಶಾಂತಿಯಿರಲಿ. ಅಲ್ಲಾಹು ಉತ್ತಮನೋ ಅಥವಾ ಅವರು (ಅವನೊಂದಿಗೆ) ಸಹಭಾಗಿಯನ್ನಾಗಿ ಮಾಡಿದವರೋ?
(60) ಅಥವಾ, ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು ಮತ್ತು ಆಕಾಶದಿಂದ ನಿಮಗೆ ನೀರನ್ನು ಸುರಿಸಿ ದವನು (ಉತ್ತಮನೋ?) (ಅಥವಾ ಅವರ ಆರಾಧ್ಯರೋ?) ತರುವಾಯ ಅದರ ಮೂಲಕ ಸುಂದರವಾದ ಕೆಲವು ತೋಟಗಳನ್ನು ನಾವು ಬೆಳೆಸಿದೆವು. ಅವುಗಳಲ್ಲಿರುವ ಮರಗಳನ್ನು ಬೆಳೆಸಲು ನಿಮಗೆ ಸಾಧ್ಯವಾಗುತ್ತಿರಲಿಲ್ಲ. ಅಲ್ಲಾಹುವಿನೊಂದಿಗೆ ಅನ್ಯ ಆರಾಧ್ಯರಿರುವರೇ? ಅಲ್ಲ, ಅವರು ವ್ಯತಿಚಲಿಸುವ ಒಂದು ಜನತೆಯಾಗಿರುವರು.
(61) ಅಥವಾ, ಭೂಮಿಯನ್ನು ವಾಸಯೋಗ್ಯವನ್ನಾಗಿ ಮಾಡಿದವನು, ಅದರ ನಡುವೆ ನದಿಗಳನ್ನು ಹರಿಸಿದವನು, ಅದಕ್ಕೆ ಅಚಲತೆಯನ್ನು ನೀಡುವ ಪರ್ವತಗಳನ್ನು ನಿರ್ಮಿಸಿದವನು ಮತ್ತು ಎರಡು ರೀತಿಯ ಜಲಾಶಯಗಳ ಮಧ್ಯೆ ಒಂದು ತಡೆಯನ್ನು ನಿರ್ಮಿಸಿದವನು (ಉತ್ತಮನೋ?)(814) (ಅಥವಾ ಅವರ ಆರಾಧ್ಯರೋ?) ಅಲ್ಲಾಹುವಿನೊಂದಿಗೆ ಅನ್ಯ ಆರಾಧ್ಯರಿರುವರೇ? ಅಲ್ಲ, ಅವರಲ್ಲಿ ಹೆಚ್ಚಿನವರೂ ಅರಿಯಲಾರರು.
814. 25:53 ನೋಡಿರಿ.
(62) ಅಥವಾ ಕಷ್ಟದಲ್ಲಿರುವವನು ಪ್ರಾರ್ಥಿಸಿದಾಗ ಅವನಿಗೆ ಉತ್ತರ ನೀಡುವವನು, ಕಷ್ಟವನ್ನು ನಿವಾರಿಸುವವನು ಮತ್ತು ನಿಮ್ಮನ್ನು ಭೂಮಿಯಲ್ಲಿ ಪ್ರತಿನಿಧಿಗಳನ್ನಾಗಿ ಮಾಡುವವನು (ಉತ್ತಮನೋ?) (ಅಥವಾ ಅವರ ಆರಾಧ್ಯರೋ?) ಅಲ್ಲಾಹುವಿನೊಂದಿಗೆ ಅನ್ಯ ಆರಾಧ್ಯರಿರುವರೇ? ನೀವು ಅಲ್ಪವೇ ಅರ್ಥಮಾಡಿಕೊಳ್ಳುವಿರಿ.
(63) ಅಥವಾ ನೆಲ ಮತ್ತು ಸಮುದ್ರದ ಅಂಧಕಾರಗಳಲ್ಲಿ ನಿಮಗೆ ದಾರಿ ತೋರಿಸುವವನು ಮತ್ತು ತನ್ನ ಕಾರುಣ್ಯದ ಮುಂದೆ ಶುಭವಾರ್ತೆಯಾಗಿ ಮಾರುತಗಳನ್ನು ಕಳುಹಿಸುವವನು (ಉತ್ತಮನೋ?) (ಅಥವಾ ಅವರ ಆರಾಧ್ಯರೋ?) ಅಲ್ಲಾಹುವಿನೊಂದಿಗೆ ಅನ್ಯ ಆರಾಧ್ಯರಿರುವರೇ? ಅವರು ಸಹಭಾಗಿತ್ವ ಮಾಡುವುದರಿಂದೆಲ್ಲ ಅಲ್ಲಾಹು ಅತ್ಯುನ್ನತನಾಗಿರುವನು.
(64) ಅಥವಾ, ಸೃಷ್ಟಿಯನ್ನು ಆರಂಭಿಸಿ ತರುವಾಯ ಅದನ್ನು ಪುನರಾವರ್ತಿಸುವವನು ಮತ್ತು ಆಕಾಶದಿಂದ ಹಾಗೂ ಭೂಮಿಯಿಂದ ನಿಮಗೆ ಅನ್ನಾಧಾರಗಳನ್ನು ಒದಗಿಸುವವನು (ಉತ್ತಮನೋ?) (ಅಥವಾ ಅವರ ಆರಾಧ್ಯರೋ?) ಅಲ್ಲಾಹುವಿನೊಂದಿಗೆ ಅನ್ಯ ಆರಾಧ್ಯರಿರುವರೇ? (ಓ ಪ್ರವಾದಿಯವರೇ!) ಹೇಳಿರಿ: “ನೀವು ಸತ್ಯವಂತರಾಗಿದ್ದರೆ ನಿಮ್ಮಲ್ಲಿರುವ ಪುರಾವೆಯನ್ನು ತನ್ನಿರಿ”.
(65) (ಓ ಪ್ರವಾದಿಯವರೇ!) ಹೇಳಿರಿ: “ಅಲ್ಲಾಹುವಿನ ಹೊರತು ಭೂಮ್ಯಾಕಾಶಗಳಲ್ಲಿರುವವರಾರೂ ಅಗೋಚರ ಜ್ಞಾನವನ್ನು ಅರಿಯಲಾರರು. ತಮ್ಮನ್ನು ಯಾವಾಗ ಪುನರುತ್ಥಾನಗೊಳಿಸಲಾಗುವುದು ಎಂಬುದನ್ನೂ ಅವರು ಅರಿಯಲಾರರು”.
(66) ಅಲ್ಲ, ಅವರ ಅರಿವು ಪರಲೋಕಕ್ಕೆ ತಲುಪಿ ನಿಂತಿದೆ.(815) ಅಲ್ಲ, ಅವರು ಅದರ ಬಗ್ಗೆ ಸಂದೇಹದಲ್ಲಿರುವರು. ಅಲ್ಲ, ಅವರು ಅದರ ಬಗ್ಗೆ ಅಂಧರಾಗಿರುವರು.
815. ‘ಇದ್ದಾರಕ’ ಎಂಬ ಪದಕ್ಕೆ ತಲುಪಿತು, ಮುಗಿಯಿತು, ಪೂರ್ತಿಗೊಂಡಿತು ಇತ್ಯಾದಿ ಅರ್ಥಗಳಿವೆ. ‘ಪರಲೋಕದ ವಿಷಯದಲ್ಲಿ ಅವರ ತಿಳುವಳಿಕೆಯು ಅಪರ್ಯಾಪ್ತವಾಗಿದೆ’. ಅಥವಾ, ‘ಅವರ ತಿಳುವಳಿಕೆಯು ಪರಿಪೂರ್ಣವಾಗಿ ಪರಲೋಕದ ನಿರಾಕರಣೆಗೆ ತಲುಪಿದೆ’ ಎಂಬ ಇತರ ವ್ಯಾಖ್ಯಾನಗಳು ಇದಕ್ಕಿವೆ.
(67) ಅವಿಶ್ವಾಸಿಗಳು ಹೇಳಿದರು: “ನಾವು ಮತ್ತು ನಮ್ಮ ಪೂರ್ವಿಕರು ಮಣ್ಣಾಗಿ ಹೋದ ಬಳಿಕ ನಮ್ಮನ್ನು (ಗೋರಿಗಳಿಂದ) ಹೊರತರಲಾಗುವುದೇ?
(68) ನಮ್ಮೊಂದಿಗೂ, ಮುಂಚೆ ನಮ್ಮ ಪೂರ್ವಿಕರೊಂದಿಗೂ ಹೀಗೆಯೇ ವಾಗ್ದಾನ ಮಾಡಲಾಗಿತ್ತು. ಇವು ಪೂರ್ವಿಕರ ಪುರಾಣಗಳು ಮಾತ್ರವಾಗಿವೆ”.
(69) (ಓ ಪ್ರವಾದಿಯವರೇ!) ಹೇಳಿರಿ: “ನೀವು ಭೂಮಿಯಲ್ಲಿ ಸಂಚರಿಸಿ ಅಪರಾಧಿಗಳ ಪರ್ಯಾವಸಾನವು ಹೇಗಿತ್ತೆಂಬುದನ್ನು ನೋಡಿರಿ”.
(70) ತಾವು ಅವರ ಬಗ್ಗೆ ದುಃಖಿಸದಿರಿ. ಅವರು ಹೂಡುತ್ತಿರುವ ಕುತಂತ್ರಗಳ ಬಗ್ಗೆ ತಾವು ಕಳವಳಪಡದಿರಿ.
(71) ಅವರು ಹೇಳುವರು: “ಈ ವಾಗ್ದಾನವು ಜಾರಿಯಾಗುವುದು ಯಾವಾಗ? ನೀವು ಸತ್ಯವಂತರಾಗಿದ್ದರೆ (ಹೇಳಿರಿ)”.
(72) ಹೇಳಿರಿ: “ನೀವು ಆತುರಪಡುತ್ತಿರುವ ವಿಷಯಗಳಲ್ಲಿ ಕೆಲವು ಒಂದು ವೇಳೆ ನಿಮ್ಮ ಹಿಂದೆಯೇ ಇರಲೂ ಬಹುದು”.
(73) ಖಂಡಿತವಾಗಿಯೂ ತಮ್ಮ ರಬ್ ಮನುಷ್ಯರೊಂದಿಗೆ ಔದಾರ್ಯವುಳ್ಳವನಾಗಿರುವನು. ಆದರೆ ಅವರಲ್ಲಿ ಹೆಚ್ಚಿನವರೂ ಕೃತಜ್ಞತೆ ಸಲ್ಲಿಸುವುದಿಲ್ಲ.
(74) ಅವರ ಹೃದಯಗಳು ಮರೆಮಾಚುವುದನ್ನೂ, ಅವರು ಬಹಿರಂಗಪಡಿಸುವುದನ್ನೂ ತಮ್ಮ ರಬ್ ಅರಿಯುವನು.
(75) ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಅಗೋಚರವಾಗಿರುವ ಯಾವುದೂ ಇರಲಾರದು; ಸ್ಪಷ್ಟವಾದ ಒಂದು ದಾಖಲೆಯಲ್ಲಿ ದಾಖಲಿಸಲಾಗಿರುವ ಹೊರತು.
(76) ಇಸ್ರಾಈಲ್ ಸಂತತಿಗಳು ಭಿನ್ನಾಭಿಪ್ರಾಯ ಹೊಂದುತ್ತಿರುವ ಹೆಚ್ಚಿನ ವಿಷಯಗಳನ್ನೂ ಈ ಕುರ್‌ಆನ್ ಅವರಿಗೆ ವಿವರಿಸಿಕೊಡುತ್ತಿದೆ.
(77) ಖಂಡಿತವಾಗಿಯೂ ಇದು ಸತ್ಯವಿಶ್ವಾಸಿಗಳಿಗೆ ಮಾರ್ಗದರ್ಶಿ ಮತ್ತು ಕಾರುಣ್ಯವಾಗಿದೆ.
(78) ಖಂಡಿತವಾಗಿಯೂ ತಮ್ಮ ರಬ್ ತನ್ನ ವಿಧಿಯ ಮೂಲಕ ಅವರ ಮಧ್ಯೆ ತೀರ್ಪು ನೀಡುವನು. ಅವನು ಪ್ರತಾಪಶಾಲಿಯೂ ಸರ್ವಜ್ಞನೂ ಆಗಿರುವನು.
(79) ಆದುದರಿಂದ ತಾವು ಅಲ್ಲಾಹುವಿನ ಮೇಲೆ ಭರವಸೆಯನ್ನಿಡಿರಿ. ಖಂಡಿತವಾಗಿಯೂ ತಾವು ಸ್ಪಷ್ಟವಾದ ಸತ್ಯದಲ್ಲಿದ್ದೀರಿ.
(80) ಮರಣಹೊಂದಿದವರನ್ನು(816) ಆಲಿಸುವಂತೆ ಮಾಡಲು ಖಂಡಿತವಾಗಿಯೂ ತಮಗೆ ಸಾಧ್ಯವಾಗದು.(817) ಕಿವುಡರು ಬೆನ್ನು ತೋರಿಸಿ ವಿಮುಖರಾದರೆ ಅವರಿಗೆ ಕರೆಯನ್ನು ಆಲಿಸುವಂತೆ ಮಾಡಲು ತಮಗೆ ಸಾಧ್ಯವಾಗದು.
816. ಇಲ್ಲಿ ಮೃತರು ಎಂದು ಪ್ರಸ್ತಾಪಿಸಲಾಗಿರುವುದು ಹೃದಯದಿಂದ ಸತ್ಯಾನ್ವೇಷಣಾ ತ್ವರೆಯು ಕಳೆದುಹೋದವರ ಬಗ್ಗೆಯಾಗಿದೆ. ವಿಷಯವನ್ನು ಆಲಿಸಿ ಅರ್ಥಮಾಡಿಕೊಳ್ಳಲು ಸಿದ್ಧರಾಗದವರನ್ನು ಮೃತರೊಂದಿಗೆ ಹೋಲಿಸಲಾಗಿರುವುದರಿಂದ ಮೃತರು ಸರ್ವಥಾ ಆಲಿಸಲು ಅಶಕ್ತರೆಂದು ಸ್ಪಷ್ಟವಾಗುತ್ತದೆ. 817. ಸತ್ಯವನ್ನು ಅವರ ಗಮನಕ್ಕೆ ತರಲು ತಮಗೆ ಸಾಧ್ಯವಾಗಲಾರದು ಎಂದರ್ಥ.
(81) ಕುರುಡರನ್ನು(818) ಅವರ ದುರ್ಮಾರ್ಗದಿಂದ ಸನ್ಮಾರ್ಗಕ್ಕೆ ತರಲು ತಮಗೆ ಸಾಧ್ಯವಾಗದು. ನಮ್ಮ ದೃಷ್ಟಾಂತಗಳಲ್ಲಿ ವಿಶ್ವಾಸವಿಡುವವರಿಗೆ ಮತ್ತು ತನ್ಮೂಲಕ ಶರಣಾಗುವವರಿಗೆ ಹೊರತು ಇನ್ನಾರಿಗೂ ಆಲಿಸುವಂತೆ ಮಾಡಲು ತಮಗೆ ಸಾಧ್ಯವಾಗದು.
818. ಈ ವಚನಗಳಲ್ಲಿ ಕಿವುಡರು, ಅಂಧರು ಎಂಬ ಪದಗಳನ್ನು ಅನುಕ್ರಮವಾಗಿ ಸತ್ಯವನ್ನು ಆಲಿಸಿ ಅರ್ಥ ಮಾಡಿಕೊಳ್ಳದವರು, ನೋಡಿ ತಿಳಿಯದವರು ಎಂಬ ಅರ್ಥಗಳಲ್ಲಿ ಬಳಸಲಾಗಿದೆ.
(82) ಆ ವಚನವು ಅವರ ಮೇಲೆ ಸಂಭವಿಸಿದರೆ(819) ನಾವು ಅವರಿಗಾಗಿ ಭೂಮಿಯಿಂದ ಒಂದು ಜೀವಿಯನ್ನು ಹೊರತರುವೆವು.(820) ಮನುಷ್ಯರು ನಮ್ಮ ದೃಷ್ಟಾಂತಗಳಲ್ಲಿ ದೃಢವಿಶ್ವಾಸವಿಡದವರಾಗಿರುವರು ಎಂದು ಅದು ಅವರೊಂದಿಗೆ ಮಾತನಾಡುವುದು.
819. ‘ಆ ವಚನವು ಅವರ ಮೇಲೆ ಸಂಭವಿಸಿದರೆ’ ಎಂಬುದನ್ನು ಅಂತ್ಯದಿನವು ಸನ್ನಿಹಿತವಾಗುವುದು ಎಂದು ವ್ಯಾಖ್ಯಾನಕಾರರು ವ್ಯಾಖ್ಯಾನಿಸಿದ್ದಾರೆ. ‘ಆ ವಚನ’ ಎಂಬುದು ಅಂತ್ಯದಿನದ ಬಗ್ಗೆ ಅಲ್ಲಾಹುವಿನ ಘೋಷಣೆಯಾಗಿದೆ. 820. ಅಂತ್ಯದಿನವು ಸನ್ನಿಹಿತವಾಗಿದೆ ಎಂದು ತಿಳಿದುಕೊಳ್ಳಲು ನೆರವಾಗುವ ಹಲವು ಸಂಗತಿಗಳು ಸಂಭವಿಸುವುದು. ಅವುಗಳ ಪೈಕಿ ಒಂದು ‘ದಾಬ್ಬತುಲ್ ಅರ್ದ್’. ಅಂದರೆ ಭೂಮಿಯಿಂದ ಎಬ್ಬಿಸಲಾಗುವ ಅದ್ಭುತ ಜೀವಿ. ಈ ಜೀವಿಯ ಬಗ್ಗೆಯಿರುವ ವಿವರಣೆಗಳಲ್ಲಿ ವ್ಯಾಖ್ಯಾನಕಾರರಿಗೆ ಒಮ್ಮತವಿಲ್ಲ.
(83) ನಾವು ಪ್ರತಿಯೊಂದು ಸಮುದಾಯದಿಂದಲೂ ನಮ್ಮ ದೃಷ್ಟಾಂತಗಳನ್ನು ನಿಷೇಧಿಸುವ ಒಂದು ಗುಂಪನ್ನು ಒಟ್ಟುಗೂಡಿಸುವ ಹಾಗೂ ತರುವಾಯ ಅವರನ್ನು ಸಾಲು ಸಾಲಾಗಿ ನಿಲ್ಲಿಸಲಾಗುವ ದಿನ!
(84) ಕೊನೆಗೆ ಅವರು ಬಂದಾಗ ಅವನು (ಅಲ್ಲಾಹು) ಹೇಳುವನು: “ನನ್ನ ದೃಷ್ಟಾಂತಗಳ ಬಗ್ಗೆ ಸ್ವಲ್ಪವೂ ಅರ್ಥಮಾಡಿಕೊಳ್ಳದೆ ನೀವು ಅವುಗಳನ್ನು ನಿಷೇಧಿಸಿದಿರಾ? ಅಥವಾ ನೀವು ಮಾಡುತ್ತಿದ್ದುದಾದರೂ ಏನು?”
(85) ಅವರು ಅಕ್ರಮವೆಸಗಿದ ಕಾರಣದಿಂದಾಗಿ (ಶಿಕ್ಷೆಯ) ವಚನವು ಅವರ ಮೇಲೆ ಸಂಭವಿಸಿತು. ಆಗ ಅವರು (ಏನನ್ನೂ) ಮಾತನಾಡಲಾರರು.
(86) ನಾವು ಅವರಿಗೆ ರಾತ್ರಿಯನ್ನು ನೆಮ್ಮದಿ ಪಡೆಯಲಿಕ್ಕಿರುವುದಾಗಿ ಮತ್ತು ಹಗಲನ್ನು ಪ್ರಕಾಶವುಳ್ಳದ್ದಾಗಿ ಮಾಡಿರುವುದನ್ನು ಅವರು ಕಂಡಿಲ್ಲವೇ? ವಿಶ್ವಾಸವಿಡುವ ಜನರಿಗೆ ಖಂಡಿತವಾಗಿಯೂ ಅದರಲ್ಲಿ ದೃಷ್ಟಾಂತಗಳಿವೆ.
(87) ಕಹಳೆಯಲ್ಲಿ ಊದಲಾಗುವ ದಿನ! ಆಗ ಆಕಾಶಗಳಲ್ಲಿರುವವರು ಮತ್ತು ಭೂಮಿಯಲ್ಲಿರುವವರು ಭಯ ವಿಹ್ವಲರಾಗುವರು; ಅಲ್ಲಾಹು ಇಚ್ಛಿಸಿದವರ ಹೊರತು. ಎಲ್ಲರೂ ವಿನಮ್ರರಾಗಿ ಅವನ ಬಳಿಗೆ ಬರುವರು.
(88) ಪರ್ವತಗಳನ್ನು ತಾವು ಕಾಣುವಾಗ ಅವು ಅಚಲವಾಗಿ ನಿಂತಿರುವುದೆಂದು ತಾವು ಭಾವಿಸುವಿರಿ. ಆದರೆ ಅವು ಮೋಡಗಳು ಚಲಿಸುವಂತೆ ಚಲಿಸುವುವು.(821) ಅದು ಎಲ್ಲವನ್ನೂ ಕರಾರುವಾಕ್ಕುಗೊಳಿಸಿದ ಅಲ್ಲಾಹುವಿನ ಕ್ರಿಯೆಯಾಗಿದೆ.(822) ಖಂಡಿತವಾಗಿಯೂ ನೀವು ಮಾಡುತ್ತಿರುವುದರ ಬಗ್ಗೆ ಅವನು ಸೂಕ್ಷ್ಮವಾಗಿ ಅರಿಯುವವನಾಗಿರುವನು.
821. ಅಂತ್ಯದಿನದಂದು ಪರ್ವತಗಳು ನುಚ್ಚುನೂರಾಗುವುವು ಮತ್ತು ಅದರ ಧೂಳು ಮೋಡಗಳಂತೆ ಹರಡುವುವು ಎಂದರ್ಥ. ತಾವು ನಿಶ್ಚಲವೆಂದು ಭಾವಿಸುವ ಪರ್ವತಗಳು ಹಾಗೂ ನಿಶ್ಚಲವೆಂದು ಭಾವಿಸುವ ಭೂಮಿಯು ವಾಸ್ತವಿಕವಾಗಿ ಅತಿವೇಗದಲ್ಲಿ ಚಲಿಸುತ್ತಿವೆ ಎಂಬ ವಿಷಯವನ್ನು ಪ್ರಸ್ತುತ ಸೂಕ್ತಿಯು ಸೂಚಿಸುತ್ತದೆಂದು ಕೆಲವು ಆಧುನಿಕ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ.822. ಅರ್ಥಾತ್ ಎಲ್ಲವನ್ನೂ ಅನ್ಯೂನವಾಗಿ ಸೃಷ್ಟಿಸಿರುವ ಅಲ್ಲಾಹು ಖಂಡಿತವಾಗಿಯೂ ಎಲ್ಲವನ್ನೂ ನಾಶ ಮಾಡುವನು ಎಂದಾಗಿದೆ. ಇನ್ನೊಂದು ವ್ಯಾಖ್ಯಾನವು ಭೂಮಿಯ ಪರಿಭ್ರಮಣವು ಎಲ್ಲವನ್ನೂ ಅನ್ಯೂನವಾಗಿ ಸೃಷ್ಟಿಸಿದ ಅಲ್ಲಾಹುವಿನ ಸೃಷ್ಟಿವೈಭವದ ನಿದರ್ಶನವಾಗಿದೆ ಎಂದಾಗಿದೆ.
(89) ಯಾರಾದರೂ ಒಳಿತಿನೊಂದಿಗೆ ಬಂದರೆ (ಅಂದು) ಅವನಿಗೆ ಅದಕ್ಕಿಂತಲೂ ಉತ್ತಮವಾಗಿರುವುದು ಸಿಗುವುದು. ಅಂದು ಭಯವಿಹ್ವಲತೆಯಿಂದ ಅವರು ಸುರಕ್ಷಿತರಾಗಿರುವರು.
(90) ಯಾರಾದರೂ ಕೆಡುಕಿನೊಂದಿಗೆ ಬಂದರೆ ಅವರು ಮುಖಗಳು ಕೆಳಗಾಗಿ ನರಕಾಗ್ನಿಯಲ್ಲಿ ಬೀಳುವರು. “ನೀವು ಮಾಡಿರುವುದಕ್ಕಲ್ಲದೆ ನಿಮಗೆ ಪ್ರತಿಫಲವನ್ನು ನೀಡಲಾಗುವುದೇ?”
(91) (ಹೇಳಿರಿ): “ನನ್ನೊಂದಿಗೆ ಆಜ್ಞಾಪಿಸಲಾಗಿರುವುದು ಈ ಪಟ್ಟಣವನ್ನು ಪವಿತ್ರಗೊಳಿಸಿದ ಇದರ ರಬ್ಬನ್ನು ಆರಾಧಿಸಬೇಕೆಂದು ಮಾತ್ರವಾಗಿದೆ. ಎಲ್ಲ ವಸ್ತುಗಳೂ ಅವನದ್ದಾಗಿವೆ. ನಾನು ಶರಣಾದವರ ಪೈಕಿ ಸೇರಿದವನಾಗಬೇಕೆಂದು ನನ್ನೊಂದಿಗೆ ಆಜ್ಞಾಪಿಸಲಾಗಿದೆ.
(92) ಕುರ್‌ಆನನ್ನು ಓದಿಕೊಡುವಂತೆಯೂ (ನನ್ನೊಂದಿಗೆ ಆಜ್ಞಾಪಿಸಲಾಗಿದೆ). ಆದುದರಿಂದ ಯಾರಾದರೂ ಸನ್ಮಾರ್ಗದಲ್ಲಾದರೆ ಅವನು ಸನ್ಮಾರ್ಗದಲ್ಲಾಗುವುದು ಅವನ ಸ್ವಹಿತಕ್ಕೇ ಆಗಿದೆ. ಯಾರಾದರೂ ದಾರಿತಪ್ಪಿದರೆ ತಾವು ಹೇಳಿರಿ: “ನಾನು ಮುನ್ನೆಚ್ಚರಿಕೆಗಾರರಲ್ಲಿ ಸೇರಿದ ಒಬ್ಬನು ಮಾತ್ರವಾಗಿರುವೆನು”.
(93) ಹೇಳಿರಿ: “ಅಲ್ಲಾಹುವಿಗೆ ಸ್ತುತಿ. ಅವನು ತನ್ನ ದೃಷ್ಟಾಂತಗಳನ್ನು ನಿಮಗೆ ತೋರಿಸಿಕೊಡುವನು. ಆಗ ನೀವು ಅದನ್ನು ಅರಿತುಕೊಳ್ಳುವಿರಿ”. ನೀವು ಮಾಡುತ್ತಿರುವ ಯಾವುದರ ಬಗ್ಗೆಯೂ ತಮ್ಮ ರಬ್ ಅಲಕ್ಷ್ಯನಲ್ಲ.