(1) ತ್ವಾ-ಸೀನ್-ಮೀಮ್.
(2) ಇವು ಸ್ಪಷ್ಟವಾದ ಗ್ರಂಥದ ಸೂಕ್ತಿಗಳಾಗಿವೆ.
(3) ವಿಶ್ವಾಸವಿಡುವ ಜನರಿಗಾಗಿ ನಾವು ಮೂಸಾ ಮತ್ತು ಫಿರ್‍ಔನ್‍ನ ವೃತ್ತಾಂತದಿಂದ ಸತ್ಯದೊಂದಿಗೆ ತಮಗೆ ಓದಿಕೊಡುವೆವು.
(4) ಖಂಡಿತವಾಗಿಯೂ ಫಿರ್‍ಔನ್ ಭೂಮಿಯಲ್ಲಿ ದರ್ಪ ತೋರಿದನು. ಅವನು ಅಲ್ಲಿನ ನಿವಾಸಿಗಳನ್ನು ವಿಭಿನ್ನ ಪಂಗಡಗಳನ್ನಾಗಿ ಮಾಡಿದನು. ಅವರ ಪೈಕಿ ಒಂದು ಪಂಗಡವನ್ನು ಬಲಹೀನರನ್ನಾಗಿ ಮಾಡಿ, ಅವರ ಗಂಡುಮಕ್ಕಳನ್ನು ಸಾಯಿಸುತ್ತಿದ್ದನು ಮತ್ತು ಅವರ ಸ್ತ್ರೀಯರನ್ನು ಜೀವಂತ ಬಿಡುತ್ತಿದ್ದನು. ಖಂಡಿತವಾಗಿಯೂ ಅವನು ವಿನಾಶಕಾರಿಗಳಲ್ಲಿ ಸೇರಿದವನಾಗಿದ್ದನು.
(5) ಭೂಮಿಯಲ್ಲಿ ಮರ್ದಿತರಾಗಿರುವವರ ಮೇಲೆ ಔದಾರ್ಯ ತೋರಲು, ಅವರನ್ನು ನಾಯಕರನ್ನಾಗಿ ಮಾಡಲು ಮತ್ತು ಅವರನ್ನು (ಭೂಮಿಯ) ಉತ್ತರಾಧಿಕಾರಿಗಳನ್ನಾಗಿ ಮಾಡಲು ನಾವು ಇಚ್ಛಿಸಿದೆವು.
(6) ಅವರಿಗೆ (ಮರ್ದಿತರಿಗೆ) ಭೂಮಿಯಲ್ಲಿ ಅಧಿಕಾರವನ್ನು ನೀಡಲು ಮತ್ತು ಫಿರ್‍ಔನ್, ಹಾಮಾನ್ ಹಾಗೂ ಅವರ ಸೈನ್ಯಗಳು ಅವರ ಬಗ್ಗೆ ಏನನ್ನು ಭಯಪಡುತ್ತಿದ್ದರೋ ಅದನ್ನು ಅವರಿಗೆ ತೋರಿಸಿಕೊಡಲು (ನಾವು ಇಚ್ಛಿಸಿದೆವು).
(7) ಮೂಸಾರ ತಾಯಿಗೆ ನಾವು ಸಂದೇಶವನ್ನು ನೀಡಿದೆವು: “ತಾವು ಅವರಿಗೆ ಮೊಲೆಯುಣಿಸಿರಿ. ಅವರ ವಿಷಯದಲ್ಲಿ ತಾವೇನಾದರೂ ಭಯಪಡುವುದಾದರೆ(823) ಅವರನ್ನು ನದಿಯಲ್ಲಿ ಹಾಕಿರಿ. ತಾವು ಭಯಪಡುವುದಾಗಲಿ ದುಃಖಿಸುವುದಾಗಲಿ ಮಾಡದಿರಿ. ಖಂಡಿತವಾಗಿಯೂ ನಾವು ಅವರನ್ನು ತಮ್ಮ ಬಳಿಗೆ ಮರಳಿ ತರುವೆವು ಮತ್ತು ಅವರನ್ನು ಸಂದೇಶವಾಹಕರಲ್ಲೊಬ್ಬರನ್ನಾಗಿ ಮಾಡುವೆವು”.
823. ಇಸ್ರಾಈಲರಿಗೆ ಹುಟ್ಟುವ ಎಲ್ಲ ಗಂಡುಮಕ್ಕಳನ್ನೂ ಕೊಲ್ಲುವಂತೆ ಫಿರ್‍ಔನ್ ಅಪ್ಪಣೆ ಹೊರಡಿಸಿದ್ದನು. ಅದು ಆ ತಾಯಿಯ ಭಯಕ್ಕೆ ಕಾರಣವಾಗಿತ್ತು.
(8) ತರುವಾಯ ಫಿರ್‍ಔನ್‍ನ ಜನರು ಅವರನ್ನು (ನದಿಯಿಂದ) ಎತ್ತಿಕೊಂಡರು. ಅವರು (ಮೂಸಾ) ಅವರ ಶತ್ರುವಾಗುವ ಸಲುವಾಗಿ ಮತ್ತು ಅವರ ದುಃಖಕ್ಕೆ ಹೇತುವಾಗುವ ಸಲುವಾಗಿ.(824) ಖಂಡಿತವಾಗಿಯೂ ಫಿರ್‍ಔನ್, ಹಾಮಾನ್ ಮತ್ತು ಅವರ ಸೈನ್ಯಗಳು ಪಾಪಿಗಳಾಗಿದ್ದರು.
824. ಅವರು ಮಗುವನ್ನು ಎತ್ತಿಕೊಂಡ ಕಾರಣ ಅವರ ಸ್ಥಿತಿ ಹಾಗಾಯಿತು ಎಂದರ್ಥ.
(9) ಫಿರ್‍ಔನ್‍ನ ಪತ್ನಿ ಹೇಳಿದಳು: “(ಈ ಮಗು) ನನಗೂ, ತಮಗೂ ಕಣ್ಮಣಿಯಾಗಿದೆ. ಆದುದರಿಂದ ಇವನನ್ನು ಸಾಯಿಸದಿರಿ. ನಮಗೆ ಇವನಿಂದ ಉಪಕಾರವಾಗಬಹುದು ಅಥವಾ ನಮಗೆ ಇವನನ್ನು ಒಬ್ಬ ಮಗನನ್ನಾಗಿ ಮಾಡಿಕೊಳ್ಳಬಹುದು”. ಅವರು ವಾಸ್ತವತೆಯನ್ನು ಗ್ರಹಿಸಿರಲಿಲ್ಲ.
(10) ಮೂಸಾರ ತಾಯಿಯ ಹೃದಯವು (ಅನ್ಯ ಚಿಂತೆಗಳಿಂದ) ಮುಕ್ತವಾಗಿ ಬಿಟ್ಟಿತು. ಆಕೆಯ ಹೃದಯವನ್ನು ನಾವು ಅಚಲವಾಗಿ ಬಂಧಿಸದಿರುತ್ತಿದ್ದರೆ ಅವರ (ಮೂಸಾರ) ವಿಚಾರವನ್ನು ಆಕೆ ಬಹಿರಂಗಪಡಿಸಿ ಬಿಡುತ್ತಿದ್ದರು. ಆಕೆ ಸತ್ಯವಿಶ್ವಾಸಿಗಳ ಪೈಕಿ ಸೇರುವ ಸಲುವಾಗಿ (ನಾವು ಹಾಗೆ ಮಾಡಿದೆವು).
(11) ಆಕೆ ಅವರ (ಮೂಸಾರ) ಸಹೋದರಿಯೊಂದಿಗೆ ಹೇಳಿದರು: “ನೀನು ಅವನ ಹಿಂದೆಯೇ ಹೋಗಿ ಅನ್ವೇಷಣೆ ಮಾಡು”. ಹೀಗೆ ಆಕೆ ಅವರನ್ನು ದೂರದಿಂದಲೇ ವೀಕ್ಷಿಸುತ್ತಿದ್ದಳು. ಆದರೆ ಅವರು ಅದನ್ನು ತಿಳಿದಿರಲಿಲ್ಲ.
(12) ಅದಕ್ಕೆ ಮುಂಚೆ ನಾವು ಮೊಲೆಹಾಲುಣಿಸುವ ಸ್ತ್ರೀಯರನ್ನು ಅವರಿಗೆ ಹಾಲುಣಿಸದಂತೆ ತಡೆದಿದ್ದೆವು.(825) ಆಗ ಆಕೆ (ಸಹೋದರಿ) ಹೇಳಿದಳು: “ನಿಮಗೋಸ್ಕರ ಈತನ ಲಾಲನೆ ಪೋಷಣೆ ಮಾಡುವ ಒಂದು ಮನೆಯವರ ಬಗ್ಗೆ ನಾನು ನಿಮಗೆ ತಿಳಿಸಿಕೊಡಲೇ? ಅವರು ಇವನ ಹಿತಾಕಾಂಕ್ಷಿಗಳೂ ಆಗಿರುವರು”.
825. ತಾಯಿಯ ಹಾಲಲ್ಲದೆ ಇತರ ಮಹಿಳೆಯರ ಮೊಲೆಹಾಲನ್ನು ಕುಡಿಯಲು ಆ ಮಗು ಒಪ್ಪದಂತೆ ಅಲ್ಲಾಹು ಮಾಡಿದನು ಎಂದರ್ಥ.
(13) ತರುವಾಯ ಅವರ ತಾಯಿಯ ಕಣ್ಣು ತಂಪಾಗಲು, ಆಕೆ ದುಃಖಿಸದಿರಲು ಮತ್ತು ಅಲ್ಲಾಹುವಿನ ವಾಗ್ದಾನವು ಸತ್ಯವೆಂದು ಆಕೆ ಅರಿತುಕೊಳ್ಳಲು ನಾವು ಅವರನ್ನು ಆಕೆಗೆ ಮರಳಿಕೊಟ್ಟೆವು. ಆದರೆ ಅವರಲ್ಲಿ ಹೆಚ್ಚಿನವರೂ (ವಾಸ್ತವತೆಯನ್ನು) ಗ್ರಹಿಸುವುದಿಲ್ಲ.
(14) ತರುವಾಯ ಅವರು ತಮ್ಮ ಪೂರ್ಣ ಬಲವನ್ನು ಪಡೆದು ಪ್ರೌಢರಾದಾಗ ನಾವು ಅವರಿಗೆ ವಿವೇಕವನ್ನು ಮತ್ತು ಜ್ಞಾನವನ್ನು ನೀಡಿದೆವು. ನಾವು ಸಜ್ಜನರಿಗೆ ಹೀಗೆ ಪ್ರತಿಫಲವನ್ನು ನೀಡುವೆವು.
(15) ನಗರವಾಸಿಗಳು ಅಲಕ್ಷ್ಯರಾಗಿದ್ದ ಸಮಯದಲ್ಲಿ ಅವರು ಅಲ್ಲಿಗೆ ಬಂದರು.(826) ಆಗ ಅಲ್ಲಿ ಇಬ್ಬರು ವ್ಯಕ್ತಿಗಳು ಪರಸ್ಪರ ಸೆಣಸಾಡುವುದನ್ನು ಅವರು ಕಂಡರು. ಒಬ್ಬನು ಅವರ ಪಂಗಡದಲ್ಲಿ ಸೇರಿದವನಾಗಿದ್ದನು. ಇನ್ನೊಬ್ಬನು ಅವರ ಶತ್ರುವಿನಲ್ಲಿ ಸೇರಿದವನಾಗಿದ್ದನು. ಆಗ ಅವರ ಪಂಗಡದಲ್ಲಿ ಸೇರಿದವನು ಅವರ ಶತ್ರುವಿನಲ್ಲಿ ಸೇರಿದವನ ವಿರುದ್ಧ ಅವರೊಂದಿಗೆ ಸಹಾಯ ಬೇಡಿದನು. ಆಗ ಮೂಸಾ ಅವನಿಗೆ ಮುಷ್ಠಿ ಬಿಗಿಹಿಡಿದು ಹೊಡೆದರು. ಅದು ಅವನ ಕತೆಯನ್ನು ಮುಗಿಸಿತು. ಅವರು (ಮೂಸಾ) ಹೇಳಿದರು: “ಇದು ಸೈತಾನನ ಕೃತ್ಯದಲ್ಲಿ ಸೇರಿದ್ದಾಗಿದೆ. ಅವನು ಪಥಭ್ರಷ್ಟಗೊಳಿಸುವ ಪ್ರತ್ಯಕ್ಷ ಶತ್ರುವಾಗಿರುವನು”.(827)
826. ಅರಮನೆಯಲ್ಲಿ ಉನ್ನತ ಸ್ಥಾನವನ್ನು ಹೊಂದಿದ್ದ ಮೂಸಾ(ಅ) ಸಾಮಾನ್ಯವಾಗಿ ನಗರದಲ್ಲಿ ಸುತ್ತಾಡುತ್ತಿರಲಿಲ್ಲವೆಂದು ಊಹಿಸಬಹುದಾಗಿದೆ. ಆದುದರಿಂದ ಯಾರೂ ಗಮನಿಸದ ವಿಧದಲ್ಲಿ ಜನರು ಮಧ್ಯಾಹ್ನದ ಹೊತ್ತು ನಿದ್ರಿಸುವ ವೇಳೆಯಲ್ಲೋ ಅಥವಾ ಇತರ ವೇಳೆಯಲ್ಲೋ ಮೂಸಾ(ಅ) ನಗರಕ್ಕೆ ಇಳಿದರು. 827. ತನ್ನ ಜನಾಂಗಕ್ಕೆ ಸೇರಿದವನ ಮೇಲೆ ಆಕ್ರಮಣ ಮಾಡುವುದರಿಂದ ಎದುರಾಳಿಯನ್ನು ತಡೆಯಬೇಕೆಂದಲ್ಲದೆ ಆತನನ್ನು ಹತ್ಯೆ ಮಾಡಬೇಕೆಂದು ಉದ್ದೇಶ ಅವರಿಗಿರಲಿಲ್ಲ. ತಾನೊಬ್ಬ ಕೊಲೆಗಾರನಾಗಿ ಬಿಟ್ಟದ್ದರಲ್ಲಿ ಅವರಿಗೆ ತೀವ್ರ ವಿಷಾದವುಂಟಾಗಿತ್ತು.
(16) ಅವರು (ಮೂಸಾ) ಹೇಳಿದರು: “ನನ್ನ ಪ್ರಭೂ! ಖಂಡಿತವಾಗಿಯೂ ನಾನು ನನ್ನೊಂದಿಗೇ ಅನ್ಯಾಯವೆಸಗಿರುವೆನು. ಆದುದರಿಂದ ನನ್ನನ್ನು ಕ್ಷಮಿಸು”. ಆಗ ಅವನು ಅವರನ್ನು ಕ್ಷಮಿಸಿದನು. ಖಂಡಿತವಾಗಿಯೂ ಅವನು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(17) ಅವರು ಹೇಳಿದರು: “ನನ್ನ ಪ್ರಭೂ! ನೀನು ನನಗೆ ಅನುಗ್ರಹ ನೀಡಿರುವ ನಿಮಿತ್ತ ಇನ್ನೆಂದೂ ನಾನು ಅಕ್ರಮಿಗಳಿಗೆ ಸಹಾಯ ಮಾಡುವವನಾಗಲಾರೆನು”.
(18) ತರುವಾಯ ಅವರು ಪಟ್ಟಣದಲ್ಲಿ ಭಯದಿಂದಲೂ, ಎಚ್ಚರದಿಂದಲೂ ಇದ್ದರು. ಆಗ ಅಗೋ! ನಿನ್ನೆಯ ದಿನ ಅವರೊಂದಿಗೆ ಸಹಾಯ ಬೇಡಿದವನು ಪುನಃ ಅವರನ್ನು ಸಹಾಯಕ್ಕಾಗಿ ಕೂಗುತ್ತಿರುವನು! ಮೂಸಾ ಅವನೊಂದಿಗೆ ಹೇಳಿದರು: “ಖಂಡಿತವಾಗಿಯೂ ನೀನೊಬ್ಬ ಸ್ಪಷ್ಟ ದುರ್ಮಾರ್ಗಿಯಾಗಿರುವೆ”.
(19) ತರುವಾಯ ಅವರು (ಮೂಸಾ) ಅವರಿಬ್ಬರಿಗೂ ಶತ್ರುವಾಗಿರುವವನನ್ನು ಹಿಡಿಯಲು ಬಯಸಿದಾಗ(828) ಅವನು ಹೇಳಿದನು:(829) ಓ ಮೂಸಾ! ನಿನ್ನೆ ಒಬ್ಬನನ್ನು ಹತ್ಯೆ ಮಾಡಿದಂತೆ ನನ್ನನ್ನೂ ಹತ್ಯೆ ಮಾಡಲು ಬಯಸುವಿರಾ? ತಾವು ಭೂಮಿಯಲ್ಲಿ ಒಬ್ಬ ದಬ್ಬಾಳಿಕೆಗಾರನಾಗಲು ಮಾತ್ರ ಬಯಸುತ್ತಿದ್ದೀರಿ. ಸುಧಾರಣೆ ಮಾಡುವವರಲ್ಲಿ ಸೇರಿದವನಾಗಲು ತಾವು ಇಚ್ಛಿಸುತ್ತಿಲ್ಲ”.
828. ಸಹಾಯ ಬೇಡಿದ ಇಸ್ರಾಈಲ್ ವಂಶಜನನ್ನು ಓರ್ವ ಕಿಡಿಗೇಡಿಯೆಂಬ ನೆಲೆಯಲ್ಲಿ ಮೂಸಾ(ಅ) ರವರು ಆಕ್ಷೇಪಿಸಿದರೂ ಸಮಾನ ಶತ್ರುವಿನ ವಿರುದ್ಧ ಅವನಿಗೆ ಸಹಾಯ ಮಾಡಲು ತೀರ್ಮಾನಿಸಿದರು. 829. ಇದನ್ನು ಹೇಳಿದ್ದು ಇಸ್ರಾಈಲ್ ಜನಾಂಗದವನೇ ಆಗಿದ್ದನೆಂದು ಹೆಚ್ಚಿನ ವ್ಯಾಖ್ಯಾನಕಾರರೂ ಅಭಿಪ್ರಾಯಪಡುತ್ತಾರೆ. ಮೂಸಾ(ಅ) ರವರ ಆಕ್ಷೇಪವನ್ನು ಕೇಳಿದಾಗ ಮೂಸಾ(ಅ) ರವರು ತನ್ನನ್ನೇ ಕೊಲ್ಲಲು ಬರುತ್ತಿದ್ದಾರೆಂದು ತಪ್ಪಾಗಿ ಭಾವಿಸಿ ಅವನು ಹೀಗೆ ಹೇಳಿದನೆಂದು ಆ ವ್ಯಾಖ್ಯಾನಕಾರರು ವಿವರಿಸಿದ್ದಾರೆ. ಯಾಕೆಂದರೆ ಹಿಂದಿನ ದಿನ ಹತ್ಯೆ ಮಾಡಿದ ವ್ಯಕ್ತಿ ಮೂಸಾ(ಅ) ಆಗಿದ್ದರೆಂದು ತಿಳಿಯಲು ಆ ಕಿಬ್ತಿಗೆ ಸಾಧ್ಯವಿಲ್ಲವೆಂಬುದನ್ನು ಅವರು ತಮ್ಮ ವಾದಕ್ಕೆ ಪುರಾವೆಯಾಗಿ ಉದ್ಧರಿಸುತ್ತಾರೆ. ಇದು ಕಿಬ್ತಿಯ ಮಾತೆಂದು ಅಭಿಪ್ರಾಯಪಟ್ಟವರೂ ಇದ್ದಾರೆ. ಈ ಸಂಭಾಷಣೆಯ ಮೂಲಕ ಹತ್ಯೆ ಮಾಡಿದ ವ್ಯಕ್ತಿ ಮೂಸಾ(ಅ) ಆಗಿದ್ದರು ಎಂಬ ಸುದ್ದಿ ನಗರದಾದ್ಯಂತ ಹಬ್ಬಿತು.
(20) ಪಟ್ಟಣದ ತುತ್ತತುದಿಯಿಂದ ಒಬ್ಬ ವ್ಯಕ್ತಿ ಓಡಿ ಬಂದು ಹೇಳಿದನು:(830) “ಓ ಮೂಸಾ! ತಮ್ಮನ್ನು ಕೊಲ್ಲಲು ಮುಖಂಡರು ಒಳಸಂಚು ಹೂಡುತ್ತಿರುವರು. ಆದುದರಿಂದ ತಾವು (ಈಜಿಪ್ಟಿನಿಂದ) ಹೊರಟು ಹೋಗಿರಿ. ಖಂಡಿತವಾಗಿಯೂ ನಾನು ತಮ್ಮ ಹಿತಾಕಾಂಕ್ಷಿಗಳಲ್ಲಿ ಸೇರಿದವನಾಗಿರುವೆನು”.
830. ಮೂಸಾ(ಅ) ರವರ ಹಿತಾಕಾಂಕ್ಷಿಯಾಗಿದ್ದ ಈ ವ್ಯಕ್ತಿಯು ಕಿಬ್ತೀ ಜನಾಂಗಕ್ಕೆ ಸೇರಿದವನಾಗಿದ್ದನೆಂದು ಕೆಲವು ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ.
(21) ಹಾಗೆ ಅವರು (ಮೂಸಾ) ಭಯದಿಂದಲೂ, ಎಚ್ಚರದಿಂದಲೂ ಅಲ್ಲಿಂದ ಹೊರಟರು. ಅವರು ಹೇಳಿದರು: “ನನ್ನ ಪ್ರಭೂ! ಅಕ್ರಮಿಗಳಾಗಿರುವ ಜನರಿಂದ ನನ್ನನ್ನು ಪಾರು ಮಾಡು”.
(22) ತರುವಾಯ ಮದ್‍ಯನ್‍ನ ಕಡೆಗೆ ತಿರುಗಿದಾಗ ಅವರು ಹೇಳಿದರು: “ನನ್ನ ರಬ್ ನನ್ನನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಲೂಬಹುದು”.
(23) ಅವರು ಮದ್‍ಯನ್‍ನಲ್ಲಿರುವ ಜಲಾಶಯದ ಬಳಿಗೆ ಬಂದಾಗ ಅಲ್ಲಿ ಆಡುಗಳಿಗೆ ನೀರುಣಿಸುತ್ತಿರುವ ಒಂದು ಗುಂಪು ಜನರನ್ನು ಅವರು ಕಂಡರು. ಅವರ ಈಚೆ ಬದಿಯಲ್ಲಿ (ತಮ್ಮ ಆಡಿನ ಮಂದೆಯನ್ನು) ತಡೆದು ನಿಲ್ಲಿಸಿರುವ ಇಬ್ಬರು ಮಹಿಳೆಯರನ್ನೂ ಕಂಡರು. ಅವರು ಕೇಳಿದರು: “ನಿಮ್ಮ ವಿಷಯವೇನು?” ಅವರು ಹೇಳಿದರು: “ಕುರುಬರು (ಆಡುಗಳಿಗೆ ನೀರುಣಿಸಿ) ಮರಳಿ ಕೊಂಡೊಯ್ಯುವ ತನಕ ನಮಗೆ ನೀರುಣಿಸಲಾಗದು. ನಮ್ಮ ತಂದೆ ಒಬ್ಬ ವಯೋವೃದ್ಧರಾಗಿರುವರು”.
(24) ಆಗ ಅವರು (ಮೂಸಾ) ಅವರ ಪರವಾಗಿ (ಅವರ ಆಡುಗಳಿಗೆ) ನೀರುಣಿಸಿದರು. ತರುವಾಯ ಅವರು ನೆರಳಿನೆಡೆಗೆ ಸರಿದು ಕುಳಿತು ಪ್ರಾರ್ಥಿಸಿದರು: “ನನ್ನ ಪ್ರಭೂ! ನೀನು ನನಗೆ ದಯಪಾಲಿಸುವ ಯಾವುದೇ ಒಳಿತಿಗೂ ನಾನು ಆವಶ್ಯಕತೆಯುಳ್ಳವನಾಗಿರುವೆನು”.
(25) ಆಗ ಆ ಇಬ್ಬರು ಮಹಿಳೆಯರ ಪೈಕಿ ಒಬ್ಬಳು ಅವರ ಬಳಿಗೆ ನಾಚಿಕೆಯಿಂದ ನಡೆಯುತ್ತಾ ಬಂದು ಹೇಳಿದಳು: “ತಾವು ನಮ್ಮ ಪರವಾಗಿ (ಆಡುಗಳಿಗೆ) ನೀರುಣಿಸಿರುವುದರ ಪ್ರತಿಫಲವನ್ನು ತಮಗೆ ನೀಡುವ ಸಲುವಾಗಿ ನನ್ನ ತಂದೆ(831) ತಮ್ಮನ್ನು ಕರೆಯುತ್ತಿರುವರು”. ತರುವಾಯ ಅವರು (ಮೂಸಾ) ಅವರ ಬಳಿಗೆ ಹೋಗಿ ತನ್ನ ಕಥೆಯನ್ನು ಅವರಿಗೆ ವಿವರಿಸಿಕೊಟ್ಟಾಗ ಅವರು ಹೇಳಿದರು: “ತಾವು ಭಯಪಡದಿರಿ! ಅಕ್ರಮಿಗಳಾದ ಆ ಜನರಿಂದ ತಾವು ಪಾರಾಗಿದ್ದೀರಿ”.
831. ಆ ಯುವತಿಯರ ತಂದೆ ಪ್ರವಾದಿ ಶುಐಬ್(ಅ) ಆಗಿದ್ದರೆಂದು ಕೆಲವು ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ.
(26) ಆ ಇಬ್ಬರು ಮಹಿಳೆಯರಲ್ಲಿ ಒಬ್ಬಳು ಹೇಳಿದಳು: “ಓ ನನ್ನ ತಂದೆಯವರೇ! ಇವರನ್ನು ತಾವು ನೌಕರನನ್ನಾಗಿ ಮಾಡಿಕೊಳ್ಳಿರಿ. ಖಂಡಿತವಾಗಿಯೂ ತಾವು ನೌಕರನನ್ನಾಗಿ ಮಾಡಿಕೊಳ್ಳುವವರಲ್ಲಿ ಬಲಿಷ್ಠನೂ, ಪ್ರಾಮಾಣಿಕನೂ ಆಗಿರುವ ವ್ಯಕ್ತಿ ಅತ್ಯುತ್ತಮನಾಗಿರುವನು”.
(27) ಅವರು (ತಂದೆ) ಹೇಳಿದರು: “ತಾವು ಎಂಟು ವರ್ಷ ನನಗಾಗಿ ನೌಕರಿ ಮಾಡುವಿರಿ ಎಂಬ ನಿಬಂಧನೆಯ ಮೇರೆಗೆ ನನ್ನ ಈ ಇಬ್ಬರು ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ತಮಗೆ ವಿವಾಹ ಮಾಡಿಕೊಡಲು ನಾನು ಇಚ್ಛಿಸುತ್ತಿರುವೆನು. ತಾವು ಹತ್ತು ವರ್ಷ ಪೂರ್ತಿ ಮಾಡುವುದಾದರೆ ಅದು ತಮ್ಮ ಇಚ್ಛೆಗೆ ಬಿಟ್ಟದ್ದಾಗಿದೆ. ತಮ್ಮನ್ನು ಕಷ್ಟಕ್ಕೊಳಪಡಿಸಲು ನಾನು ಇಚ್ಛಿಸುವುದಿಲ್ಲ. ಅಲ್ಲಾಹು ಇಚ್ಛಿಸಿದರೆ ತಾವು ನನ್ನನ್ನು ಸಜ್ಜನರ ಪೈಕಿ ಸೇರಿದವರಾಗಿ ಕಾಣುವಿರಿ”.
(28) ಅವರು (ಮೂಸಾ) ಹೇಳಿದರು: “ಇದು ನನ್ನ ಮತ್ತು ತಮ್ಮ ಮಧ್ಯೆಯಿರುವ ನಿಶ್ಚಯವಾಗಿದೆ. ಇವೆರಡು ಅವಧಿಗಳಲ್ಲಿ ನಾನು ಯಾವುದನ್ನು ಪೂರ್ತಿ ಮಾಡಿದರೂ ತಮಗೆ ನನ್ನ ಮೇಲೆ ದ್ವೇಷ ಉಂಟಾಗಬಾರದು. ನಾವು ಹೇಳುತ್ತಿರುವುದಕ್ಕೆ ಅಲ್ಲಾಹು ಸಾಕ್ಷಿಯಾಗಿರುವನು”.
(29) ಹೀಗೆ ಮೂಸಾ ಆ ಅವಧಿಯನ್ನು ಪೂರ್ತಿ ಮಾಡಿ ತಮ್ಮ ಕುಟುಂಬ ಸಮೇತ ಹೊರಟಾಗ ಪರ್ವತದ ಭಾಗದಿಂದ ಅವರು ಬೆಂಕಿಯನ್ನು ಕಂಡರು. ಅವರು ತಮ್ಮ ಕುಟುಂಬದೊಂದಿಗೆ ಹೇಳಿದರು: “ನೀವು ಇಲ್ಲೇ ನಿಲ್ಲಿರಿ. ನಾನೊಂದು ಬೆಂಕಿಯನ್ನು ಕಂಡಿರುವೆನು. ಅಲ್ಲಿಂದ ಏನಾದರೂ ಮಾಹಿತಿಯನ್ನೋ ಅಥವಾ ಒಂದು ದೀವಟಿಗೆಯನ್ನೋ ನಾನು ನಿಮ್ಮ ಬಳಿಗೆ ತರುವೆನು. ನಿಮಗೆ ಚಳಿಕಾಯಿಸಬಹುದು”.
(30) ತರುವಾಯ ಅವರು ಅದರ ಬಳಿಗೆ ಬಂದಾಗ ಆ ಅನುಗ್ರಹೀತ ಪ್ರದೇಶದಲ್ಲಿರುವ ಕಣಿವೆಯ ಬಲಭಾಗದಿಂದ, ಒಂದು ವೃಕ್ಷದಿಂದ “ಓ ಮೂಸಾ! ಖಂಡಿತವಾಗಿಯೂ ನಾನು ಸರ್ವಲೋಕಗಳ ರಬ್ ಆದ ಅಲ್ಲಾಹುವಾಗಿರುವೆನು” ಎಂದು ಕೂಗಿ ಕರೆಯಲಾಯಿತು.
(31) “ತಾವು ತಮ್ಮ ಬೆತ್ತವನ್ನು ಕೆಳಗೆ ಹಾಕಿರಿ”. ತರುವಾಯ ಅದೊಂದು ಸರ್ಪವೇನೋ ಎಂಬಂತೆ ವಿಲಿವಿಲಿ ಒದ್ದಾಡುವುದನ್ನು ಕಂಡಾಗ ಅವರು (ಮೂಸಾ) ಹಿಂದಕ್ಕೆ ತಿರುಗಿ ಓಡಿದರು. ಅವರು ತಿರುಗಿ ನೋಡಲೂ ಇಲ್ಲ. (ಅಲ್ಲಾಹು ಹೇಳಿದನು:) “ಓ ಮೂಸಾ! ಮುಂದೆ ಬನ್ನಿರಿ! ತಾವು ಭಯಪಡದಿರಿ. ಖಂಡಿತವಾಗಿಯೂ ತಾವು ಸುರಕ್ಷಿತರಾಗಿರುವವರಲ್ಲಿ ಸೇರಿದ್ದೀರಿ.
(32) ತಾವು ತಮ್ಮ ಕೈಯನ್ನು ತಮ್ಮ ಅಂಗಿಯ ವಕ್ಷಸ್ಥಳದೊಳಗೆ ತೂರಿಸಿರಿ. ಅದು ಯಾವುದೇ ಕೇಡೂ ಇಲ್ಲದೆ ಬೆಳ್ಳಗಾಗಿ ಹೊರಬರುವುದು. ತಾವು ಭಯದಿಂದ ಮುಕ್ತಿ ಪಡೆಯುವುದಕ್ಕಾಗಿ ತಮ್ಮ ಪಾರ್ಶ್ವವನ್ನು ದೇಹಕ್ಕೆ ಸೇರಿಸಿ ಹಿಡಿಯಿರಿ.(832) ಇವೆರಡೂ(833) ಫಿರ್‍ಔನ್ ಮತ್ತು ಅವನ ಮುಖಂಡರ ಬಳಿಗೆ ತಮ್ಮ ರಬ್‌ನ ಕಡೆಯಿಂದಿರುವ ಎರಡು ಪುರಾವೆಗಳಾಗಿವೆ. ಖಂಡಿತವಾಗಿಯೂ ಅವರು ಧಿಕ್ಕಾರಿಗಳಾದ ಒಂದು ಜನತೆಯಾಗಿರುವರು”.
832. ಕೈ ಬೆಳ್ಳಗಾಗಿರುವುದನ್ನು ಕಾಣುವಾಗ ಭಯವಾದರೆ ಅಂಗಿಯ ವಕ್ಷಸ್ಥಳದ ಮೂಲಕ ಕೈಯನ್ನು ಕಂಕುಳಕ್ಕೆ ಸೇರಿಸಿ ಹಿಡಿಯಿರಿ. ಆಗ ಅದು ಪೂರ್ವ ಸ್ಥಿತಿಗೆ ಮರಳುವುದು. ಇದು ಈ ಸೂಕ್ತಿಯ ತಾತ್ಪರ್ಯವಾಗಿದೆಯೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಯಾವುದೇ ವಿಷಯದ ಬಗ್ಗೆ ಭಯವುಂಟಾದರೂ ಕೈಯನ್ನು ಕಂಕುಳಕ್ಕೆ ಸೇರಿಸಿ ಹಿಡಿಯುವ ಒಂದು ಸಾಮಾನ್ಯ ಸಲಹೆ ಈ ಸೂಕ್ತಿಯಲ್ಲಿ ಅಡಕವಾಗಿದೆಯೆಂದು ಇತರ ಕೆಲವರು ಅಭಿಪ್ರಾಯಪಟ್ಟಿದ್ದಾರೆ. 833. ಬೆಳ್ಳಗೆ ಹೊಳೆಯುವ ಕೈ ಮತ್ತು ಸರ್ಪವಾಗಿ ಮಾರ್ಪಡುವ ಬೆತ್ತ ಎಂಬ ಎರಡು ದೃಷ್ಟಾಂತಗಳು.
(33) ಅವರು ಹೇಳಿದರು: “ನನ್ನ ಪ್ರಭೂ! ನಾನು ಅವರಲ್ಲೊಬ್ಬನನ್ನು ಹತ್ಯೆ ಮಾಡಿರುವೆನು. ಆದುದರಿಂದ ಅವರು ನನ್ನನ್ನು ಕೊಂದು ಬಿಡುವರೆಂದು ನಾನು ಭಯಪಡುತ್ತಿರುವೆನು”.
(34) ನನ್ನ ಸಹೋದರ ಹಾರೂನ್ ನನಗಿಂತಲೂ ಸ್ಪಷ್ಟವಾಗಿ ಮಾತನಾಡುವವನಾಗಿರುವನು. ಆದುದರಿಂದ ನನ್ನ ಸತ್ಯತೆಯನ್ನು ಸ್ಥಿರೀಕರಿಸುವ ಒಬ್ಬ ಸಹಾಯಕನಾಗಿ ಅವನನ್ನೂ ನನ್ನೊಂದಿಗೆ ಕಳುಹಿಸು. ಅವರು ನನ್ನನ್ನು ನಿಷೇಧಿಸುವರೆಂದು ಖಂಡಿತವಾಗಿಯೂ ನಾನು ಭಯಪಡುತ್ತಿರುವೆನು”.
(35) ಅವನು ಹೇಳಿದನು: “ತಮ್ಮ ಸಹೋದರನ ಮೂಲಕ ನಾವು ತಮ್ಮ ಕೈಯನ್ನು ಬಲಪಡಿಸುವೆವು ಮತ್ತು ನಿಮಗಿಬ್ಬರಿಗೂ ನಾವು ಒಂದು ಅಧಿಕೃತಶಕ್ತಿಯನ್ನು ನೀಡುವೆವು. ಆದುದರಿಂದ ಅವರು ನಿಮ್ಮ ಬಳಿಗೆ ತಲುಪಲಾರರು. ನಮ್ಮ ದೃಷ್ಟಾಂತಗಳ ನಿಮಿತ್ತ ನೀವು ಮತ್ತು ನಿಮ್ಮನ್ನು ಅನುಸರಿಸುವವರು ವಿಜೇತರಾಗುವರು”.
(36) ತರುವಾಯ ನಮ್ಮ ಸ್ಪಷ್ಟವಾದ ದೃಷ್ಟಾಂತಗಳೊಂದಿಗೆ ಮೂಸಾ ಅವರ ಬಳಿಗೆ ಬಂದಾಗ ಅವರು ಹೇಳಿದರು: “ಇದು ಕೃತಕವಾಗಿ ರಚಿಸಲಾಗಿರುವ ಒಂದು ಮಾಂತ್ರಿಕ ವಿದ್ಯೆಯಲ್ಲದೆ ಇನ್ನೇನೂ ಅಲ್ಲ. ನಮ್ಮ ಪೂರ್ವ ಪಿತಾಮಹರಲ್ಲಿ ಇಂತಹ ಒಂದು ವಿಷಯದ ಬಗ್ಗೆ ನಾವು ಕೇಳಿಯೇ ಇಲ್ಲ”.
(37) ಮೂಸಾ ಹೇಳಿದರು: “ತನ್ನ ಕಡೆಯ ಸನ್ಮಾರ್ಗದೊಂದಿಗೆ ಬಂದವರು ಯಾರು ಮತ್ತು ಈ ಜಗತ್ತಿನ ಪರ್ಯಾವಸಾನವು ಯಾರ ಪಾಲಿಗೆ ಅನುಕೂಲಕರವಾಗಿರುವುದು ಎಂದು ನನ್ನ ರಬ್ ಚೆನ್ನಾಗಿ ಅರಿತಿರುವನು. ಅಕ್ರಮಿಗಳು ಖಂಡಿತವಾಗಿಯೂ ಯಶಸ್ವಿಯಾಗಲಾರರು”.
(38) ಫಿರ್‍ಔನ್ ಹೇಳಿದನು: “ಓ ಮುಖಂಡರೇ! ನಿಮಗೆ ನನ್ನ ಹೊರತು ಅನ್ಯ ಆರಾಧ್ಯರಿರುವುದಾಗಿ ನಾನು ಅರಿತಿಲ್ಲ. ಆದುದರಿಂದ ಓ ಹಾಮಾನ್!(834) ನನಗೆ ಜೇಡಿಮಣ್ಣಿನಿಂದ (ಇಟ್ಟಿಗೆಗಳನ್ನು) ಸುಟ್ಟುಕೊಡು. ತರುವಾಯ ನನಗೊಂದು ಉನ್ನತ ಸೌಧವನ್ನು ನಿರ್ಮಿಸಿಕೊಡು. ನಾನು ಮೂಸಾನ ಆರಾಧ್ಯನೆಡೆಗೆ ಇಣುಕಿ ನೋಡಬೇಕು. ಖಂಡಿತವಾಗಿಯೂ ಅವನು ಸುಳ್ಳು ನುಡಿಯುವವರಲ್ಲಿ ಸೇರಿದವನೆಂದು ನಾನು ಭಾವಿಸುತ್ತಿರುವೆನು”.
834. ಹಾಮಾನ್ ಫಿರ್‍ಔನನ ಮಂತ್ರಿಯಾಗಿದ್ದನು.
(39) ಅವನು ಮತ್ತು ಅವನ ಸೈನ್ಯಗಳು ಭೂಮಿಯಲ್ಲಿ ಅನ್ಯಾಯವಾಗಿ ಅಹಂಕಾರಪಟ್ಟರು ಮತ್ತು ಅವರನ್ನು ನಮ್ಮ ಬಳಿಗೆ ಮರಳಿ ತರಲಾಗುವುದಿಲ್ಲವೆಂದು ಅವರು ಭಾವಿಸಿದರು.
(40) ಆದುದರಿಂದ ನಾವು ಅವನನ್ನೂ, ಅವನ ಸೈನ್ಯವನ್ನೂ ಹಿಡಿದು ಸಮುದ್ರಕ್ಕೆಸೆದೆವು. ಆಗ ಆ ಅಕ್ರಮಿಗಳ ಪರ್ಯಾವಸಾನವು ಹೇಗಿತ್ತೆಂಬುದನ್ನು ನೋಡಿರಿ.
(41) ನಾವು ಅವರನ್ನು ನರಕಾಗ್ನಿಯೆಡೆಗೆ ಆಹ್ವಾನಿಸುವ ನಾಯಕರನ್ನಾಗಿ ಮಾಡಿದೆವು. ಪುನರುತ್ಥಾನದ ದಿನದಂದು ಅವರಿಗೆ ಯಾವುದೇ ಸಹಾಯವನ್ನು ನೀಡಲಾಗದು.
(42) ಈ ಐಹಿಕ ಜೀವನದಲ್ಲಿ ನಾವು ಅವರ ಹಿಂದೆ ಶಾಪವನ್ನು ಕಳುಹಿಸಿರುವೆವು. ಪುನರುತ್ಥಾನದ ದಿನದಂದು ಅವರು ನಿಕೃಷ್ಟರಲ್ಲಿ ಸೇರಿದವರಾಗುವರು.
(43) ಪೂರ್ವ ತಲೆಮಾರುಗಳನ್ನು ನಾಶ ಮಾಡಿದ ಬಳಿಕ ಜನರಿಗೆ ಒಳದೃಷ್ಟಿಯನ್ನು ನೀಡುವ ಪುರಾವೆಗಳಾಗಿ, ಮಾರ್ಗದರ್ಶಿಯಾಗಿ ಮತ್ತು ಕಾರುಣ್ಯವಾಗಿ ನಾವು ಮೂಸಾರಿಗೆ ಗ್ರಂಥವನ್ನು ನೀಡಿದೆವು. ಅವರು ಚಿಂತಿಸಿ ಗ್ರಹಿಸಲೂ ಬಹುದೆಂದು.
(44) (ಓ ಪ್ರವಾದಿಯವರೇ!) ಮೂಸಾರಿಗೆ ನಾವು ಆಜ್ಞೆಯನ್ನು ವಹಿಸಿಕೊಟ್ಟ ಸಮಯದಲ್ಲಿ ಆ ಪಶ್ಚಿಮ ಬೆಟ್ಟದ ಪಾರ್ಶ್ವದಲ್ಲಿ ತಾವಿರಲಿಲ್ಲ. (ಆ ಘಟನೆಗೆ) ಸಾಕ್ಷಿಯಾದವರಲ್ಲೂ ತಾವಿರಲಿಲ್ಲ.
(45) ಆದರೆ (ತರುವಾಯ) ನಾವು ಅನೇಕ ತಲೆಮಾರುಗಳನ್ನು ಬೆಳೆಸಿದೆವು. ಹೀಗೆ ಅವರ ಮೂಲಕ ಯುಗಗಳು ದೀರ್ಘಗೊಂಡವು. ಮದ್‍ಯನ್‍ನವರಿಗೆ ನಮ್ಮ ದೃಷ್ಟಾಂತಗಳನ್ನು ಓದಿಕೊಡುತ್ತಾ ತಾವು ಅವರೊಂದಿಗೆ ವಾಸವಾಗಿರಲಿಲ್ಲ.(835) ಆದರೆ ನಾವು ಸಂದೇಶವಾಹಕರನ್ನು ಕಳುಹಿಸುವವರಾಗಿರುವೆವು.
835. ಪ್ರವಾದಿ ಶುಐಬ್(ಅ) ರವರ ಕಾಲದಲ್ಲಾಗಲಿ, ಮದ್ಯನ್ ನಿವಾಸಿಗಳ ನಡುವೆಯಾಗಲಿ ಬದುಕಿರದ ಪ್ರವಾದಿ ಮುಹಮ್ಮದ್(ಸ) ರವರು ಮದ್ಯನ್‍ನ ಚಾರಿತ್ರಿಕ ಘಟನೆಗಳ ಬಗ್ಗೆ ಅತ್ಯಂತ ಕರಾರುವಾಕ್ಕಾಗಿ ಉದ್ಧರಿಸುತ್ತಿರುವುದು ಅವರಿಗೆ ದಿವ್ಯ ಸಂದೇಶವು ಸಿಗುತ್ತಿದೆಯೆಂಬುದಕ್ಕೆ ಮಹತ್ವದ ಪುರಾವೆಯಾಗಿದೆ. ‘ತಾವು (ಮಕ್ಕಾ ನಿವಾಸಿಗಳಿಗೆ) ನಮ್ಮ ದೃಷ್ಟಾಂತಗಳನ್ನು ಓದಿಕೊಡುವಾಗ ಮದ್ಯನ್ ನಿವಾಸಿಗಳ ಮಧ್ಯೆ ತಾವು ವಾಸಿಸುತ್ತಿರಲಿಲ್ಲ’ ಎಂದು ಕೆಲವರು ಇದನ್ನು ವ್ಯಾಖ್ಯಾನಿಸಿದ್ದಾರೆ.
(46) ನಾವು (ಮೂಸಾರನ್ನು) ಕರೆದ ಸಂದರ್ಭದಲ್ಲಿ ತಾವು ಆ ಪರ್ವತದ ಪಾರ್ಶ್ವದಲ್ಲಿರಲಿಲ್ಲ. ಆದರೆ ತಮ್ಮ ರಬ್‌ನ ಕಡೆಯ ಕಾರುಣ್ಯದಿಂದ (ಇವೆಲ್ಲವನ್ನೂ ತಮಗೆ ತಿಳಿಸಿಕೊಡಲಾಗುತ್ತಿದೆ). ತಮಗಿಂತ ಮುಂಚೆ ಯಾವುದೇ ಮುನ್ನೆಚ್ಚರಿಕೆಗಾರರೂ ಬರದಂತಹ ಒಂದು ಜನತೆಗೆ(836) ತಾವು ಮುನ್ನೆಚ್ಚರಿಕೆ ನೀಡುವ ಸಲುವಾಗಿ. ಅವರು ಚಿಂತಿಸಿ ಗ್ರಹಿಸಲೂಬಹುದು.
836. ಹೆಚ್ಚಿನ ವ್ಯಾಖ್ಯಾನಕಾರರು ನೀಡಿದ ಅರ್ಥವನ್ನೇ ಅನುವಾದದಲ್ಲಿ ನೀಡಲಾಗಿದೆ. ಇದರ ಪ್ರಕಾರ ಈ ಮೊದಲು ಯಾವುದೇ ಮುನ್ನೆಚ್ಚರಿಕೆಗಾರನನ್ನೂ ಕಳುಹಿಸಿರದ ಅರಬ್ ಜನತೆಗೆ ಎಚ್ಚರಿಕೆ ನೀಡುವುದಕ್ಕೋಸ್ಕರ ಮುಹಮ್ಮದ್(ಸ) ರನ್ನು ಕಳುಹಿಸಲಾಗಿದೆ ಎಂಬರ್ಥ ಬರುತ್ತದೆ. ಇನ್ನು ಕೆಲವರು ‘ಮುಂಚೆ ಅವರಿಗೆ ಎಚ್ಚರಿಕೆ ನೀಡಲ್ಪಟ್ಟ ಅದೇ ವಿಚಾರದ ಬಗ್ಗೆ ತಾವು ಅವರಿಗೆ ಎಚ್ಚರಿಕೆ ನೀಡುವ ಸಲುವಾಗಿ’ ಎಂದೂ ಅರ್ಥ ನೀಡಿದ್ದಾರೆ. ‘ಮಾ’ ಎಂಬ ಪದವನ್ನು ಎರಡೂ ರೀತಿಯಲ್ಲಿ ಬಳಸಲಾಗುವುದೇ ಇದಕ್ಕೆ ಕಾರಣ.
(47) ಅವರ ಕೈಗಳು ಪೂರ್ವಭಾವಿಯಾಗಿ ಮಾಡಿಟ್ಟಿರುವುದರ ಫಲವಾಗಿ ಅವರಿಗೇನಾದರೂ ವಿಪತ್ತು ಬಾಧಿಸಿದರೆ “ನಮ್ಮ ಪ್ರಭೂ! ನಮ್ಮ ಬಳಿಗೆ ಒಬ್ಬ ಸಂದೇಶವಾಹಕರನ್ನೇಕೆ ಕಳುಹಿಸಲಿಲ್ಲ, ಹಾಗಿರುತ್ತಿದ್ದರೆ ನಾವು ನಿನ್ನ ವಚನಗಳನ್ನು ಅನುಸರಿಸುತ್ತಿದ್ದೆವು ಮತ್ತು ಸತ್ಯವಿಶ್ವಾಸಿಗಳೊಂದಿಗೆ ಸೇರಿದವರಾಗುತ್ತಿದ್ದೆವು” ಎಂದು ಅವರು ಹೇಳಲಾರರು ಎಂದಿರುತ್ತಿದ್ದರೆ (ನಾವು ತಮ್ಮನ್ನು ಸಂದೇಶವಾಹಕರನ್ನಾಗಿ ಕಳುಹಿಸುತ್ತಿರಲಿಲ್ಲ).(837)
837. ನೈಜ ವಿಶ್ವಾಸಾಚಾರಗಳ ಬಗ್ಗೆ ತಿಳುವಳಿಕೆ ಕೊಡಲು ಯಾರೂ ಬರದಿರುವುದರಿಂದ ನಾವು ಸತ್ಯವಿಶ್ವಾಸಿ ಮತ್ತು ಸಜ್ಜನರಾಗದೆ ಶಿಕ್ಷಾರ್ಹರಾದೆವು ಎಂದು ಆಪಾದನೆ ಮಾಡಲು ಯಾರಿಗೂ ಅವಕಾಶ ಸಿಗಬಾರದೆಂದು ಅಲ್ಲಾಹು ಸಂದೇಶವಾಹಕರನ್ನು ಕಳುಹಿಸಿದನು ಎಂದರ್ಥ.
(48) ಆದರೆ ನಮ್ಮ ಕಡೆಯ ಸತ್ಯವು (ಪ್ರವಾದಿಯವರ ಮೂಲಕ) ಅವರ ಬಳಿಗೆ ಬಂದಾಗ ಅವರು ಹೇಳಿದರು: “ಮೂಸಾರಿಗೆ ನೀಡಲಾಗಿರುವಂತಹ ದೃಷ್ಟಾಂತಗಳನ್ನು ಇವರಿಗೇಕೆ ನೀಡಲಾಗಿಲ್ಲ?” ಆದರೆ ಮುಂಚೆ ಮೂಸಾರಿಗೆ ನೀಡಲಾಗಿರುವುದನ್ನು ಅವರು ನಿಷೇಧಿಸಿಲ್ಲವೇ? ಅವರು ಹೇಳಿದರು: “ಇವು ಪರಸ್ಪರ ಬೆಂಬಲ ನೀಡುವ ಎರಡು ಮಾಂತ್ರಿಕ ವಿದ್ಯೆಗಳಾಗಿವೆ”. ಅವರು ಹೇಳಿದರು: “ನಾವು ಇವೆಲ್ಲವನ್ನೂ ನಿಷೇಧಿಸಿದವರಾಗಿರುವೆವು”.
(49) (ಓ ಪ್ರವಾದಿಯವರೇ!) ಹೇಳಿರಿ: “ನೀವು ಅವೆರಡಕ್ಕಿಂತಲೂ ಹೆಚ್ಚು ಸನ್ಮಾರ್ಗವನ್ನು ತೋರಿಸುವ ಒಂದು ಗ್ರಂಥವನ್ನು ಅಲ್ಲಾಹುವಿನ ಬಳಿಯಿಂದ ತನ್ನಿರಿ. ಅದನ್ನು ನಾನು ಅನುಸರಿಸುವೆನು. ನೀವು ಸತ್ಯವಂತರಾಗಿದ್ದರೆ”.
(50) ಅವರು ತಮಗೆ ಉತ್ತರ ನೀಡದಿದ್ದರೆ ಅವರು ಅನುಸರಿಸುತ್ತಿರುವುದು ಅವರ ದೇಹೇಚ್ಛೆಗಳನ್ನು ಮಾತ್ರವಾಗಿದೆ ಎಂಬುದನ್ನು ಅರಿತುಕೊಳ್ಳಿರಿ. ಅಲ್ಲಾಹುವಿನ ಕಡೆಯ ಯಾವುದೇ ಮಾರ್ಗದರ್ಶನವೂ ಇಲ್ಲದೆ ದೇಹೇಚ್ಛೆಯನ್ನು ಅನುಸರಿಸಿದವನಿಗಿಂತ ದಾರಿಗೆಟ್ಟವನು ಇನ್ನಾರಿರುವನು? ಅಕ್ರಮಿಗಳಾಗಿರುವ ಜನರನ್ನು ಅಲ್ಲಾಹು ಖಂಡಿತವಾಗಿಯೂ ಸನ್ಮಾರ್ಗದಲ್ಲಿ ಸೇರಿಸಲಾರನು.
(51) ಅವರು ಆಲೋಚಿಸಿ ಅರ್ಥಮಾಡಿಕೊಳ್ಳುವುದಕ್ಕಾಗಿ ನಾವು ಅವರಿಗೆ ನಿರಂತರವಾಗಿ ವಚನವನ್ನು ತಲುಪಿಸುತ್ತಿದ್ದೆವು.(838)
838. ಪವಿತ್ರ ಕುರ್‌ಆನ್ ಅವತೀರ್ಣಗೊಳ್ಳಲು ಆರಂಭಿಸಿದಂದಿನಿಂದ ತೊಡಗಿ ವಚನಗಳು ಅವತೀರ್ಣಗೊಳ್ಳುತ್ತಲೇ ಇದ್ದವು. ವಿವಿಧ ಭಾಗಗಳ ಅವತೀರ್ಣದ ಮಧ್ಯೆ ದೀರ್ಘಕಾಲದ ಅಂತರವೇನೂ ಇರುತ್ತಿರಲಿಲ್ಲ.
(52) ಇದಕ್ಕೆ ಮುಂಚೆ ನಾವು ಯಾರಿಗೆ ಗ್ರಂಥವನ್ನು ನೀಡಿರುವೆವೋ ಅವರು ಇದರಲ್ಲಿ ವಿಶ್ವಾಸವಿಡುವರು.
(53) ಇದನ್ನು ಅವರಿಗೆ ಓದಿಕೊಡಲಾಗುವಾಗ ಅವರು ಹೇಳುವರು: “ನಾವು ಇದರಲ್ಲಿ ವಿಶ್ವಾಸವಿಟ್ಟಿರುವೆವು. ಖಂಡಿತವಾಗಿಯೂ ಇದು ನಮ್ಮ ರಬ್‌ನ ಕಡೆಯ ಸತ್ಯವಾಗಿದೆ. ಖಂಡಿತವಾಗಿಯೂ ನಾವು ಇದಕ್ಕಿಂತ ಮುಂಚೆಯೇ ಶರಣಾಗತರಾಗಿರುವೆವು”.
(54) ಅವರು ತಾಳ್ಮೆ ವಹಿಸಿರುವ ಫಲವಾಗಿ ಅವರಿಗೆ ಅವರ ಪ್ರತಿಫಲವನ್ನು ಇಮ್ಮಡಿಯಾಗಿ ನೀಡಲಾಗುವುದು. ಅವರು ಒಳಿತಿನ ಮೂಲಕ ಕೆಡುಕನ್ನು ತಡೆಯುವರು ಮತ್ತು ನಾವು ಅವರಿಗೆ ನೀಡಿದವುಗಳಿಂದ ವ್ಯಯಿಸುವರು.
(55) ವ್ಯರ್ಥ ಮಾತುಗಳನ್ನು ಆಲಿಸಿದರೆ ಅವರು ಅದರಿಂದ ವಿಮುಖರಾಗುವರು. ಅವರು ಹೇಳುವರು: “ನಮಗೆ ನಮ್ಮ ಕರ್ಮಗಳು ಮತ್ತು ನಿಮಗೆ ನಿಮ್ಮ ಕರ್ಮಗಳು. ನಿಮಗೆ ಸಲಾಮ್. ನಮಗೆ ಮೂರ್ಖರ ಅಗತ್ಯವಿಲ್ಲ”.
(56) ಖಂಡಿತವಾಗಿಯೂ ತಾವು ಇಷ್ಟಪಡುವವರನ್ನು ಸನ್ಮಾರ್ಗದಲ್ಲಿ ಸೇರಿಸಲು ತಮಗೆ ಸಾಧ್ಯವಾಗಲಾರದು. ಆದರೆ ಅಲ್ಲಾಹು ಅವನಿಚ್ಛಿಸುವವರನ್ನು ಸನ್ಮಾರ್ಗದಲ್ಲಿ ಸೇರಿಸುವನು. ಸನ್ಮಾರ್ಗ ಪಡೆದವರ ಬಗ್ಗೆ ಅವನು ಚೆನ್ನಾಗಿ ಅರಿತಿರುವನು.(839)
839. ಚಿಕ್ಕಂದಿನಿಂದಲೇ ಪ್ರವಾದಿ(ಸ) ರಿಗೆ ನೆರವು ನೀಡುತ್ತಿದ್ದ ಪಿತೃ ಸಹೋದರ ಅಬೂತಾಲಿಬ್‍ರನ್ನು ಸತ್ಯವಿಶ್ವಾಸಿಯನ್ನಾಗಿ ಕಾಣಬೇಕೆಂಬ ಅದಮ್ಯ ಹಂಬಲವು ಪ್ರವಾದಿರವರಿಗಿತ್ತು. ಅಬೂತಾಲಿಬ್ ಮರಣಾಸನ್ನರಾದ ವೇಳೆಯಲ್ಲೂ ಪ್ರವಾದಿ(ಸ) ರವರು ಅವರೊಂದಿಗೆ ಸತ್ಯವಿಶ್ವಾಸವನ್ನು ಘೋಷಿಸಲು ವಿನಂತಿಸುತ್ತಲೇ ಇದ್ದರು. ಆದರೆ ಬಹುದೇವವಿಶ್ವಾಸವನ್ನು ತಿರಸ್ಕರಿಸಲು ಅವರು ಹಿಂಜರಿದರು ಮತ್ತು ಅವಿಶ್ವಾಸಿಯಾಗಿಯೇ ಮೃತಪಟ್ಟರು. ಈ ಸಂದರ್ಭದಲ್ಲೇ ಈ ಕುರ್‌ಆನ್ ಸೂಕ್ತಿಯು ಅವತೀರ್ಣಗೊಂಡಿತೆಂದು ಹೆಚ್ಚಿನ ಕುರ್‌ಆನ್ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ.
(57) “ನಾವೇನಾದರೂ ತಮ್ಮೊಂದಿಗೆ ಸನ್ಮಾರ್ಗವನ್ನು ಹಿಂಬಾಲಿಸಿದರೆ ನಮ್ಮ ಊರಿನಿಂದ ನಾವು ಕಿತ್ತೊಗೆಯಲಾಗುವೆವು” ಎಂದು ಅವರು ಹೇಳಿದರು.(840) ಆದರೆ ನಾವು ಅವರಿಗೆ ನಿರ್ಭೀತವಾದ ಒಂದು ಪವಿತ್ರ ಸ್ಥಳವನ್ನು ಅಧೀನಪಡಿಸಿಕೊಡಲಿಲ್ಲವೇ? ಸರ್ವ ವಿಧ ಫಲಗಳನ್ನು ಅಲ್ಲಿಗೆ ಸಂಗ್ರಹಿಸಿ ತರಲಾಗುತ್ತದೆ. ಅದು ನಮ್ಮ ಕಡೆಯ ಅನ್ನಾಧಾರವಾಗಿದೆ. ಆದರೆ ಅವರಲ್ಲಿ ಹೆಚ್ಚಿನವರೂ (ವಿಷಯವನ್ನು) ಅರ್ಥಮಾಡಿಕೊಳ್ಳಲಾರರು.(841)
840. ಇಸ್ಲಾಮಿಗೆ ಅಧಿಕಾರ ಸಿಕ್ಕಿದರೆ ಕುರೈಶಿಗಳಿಗೆ ಮಕ್ಕಾದಲ್ಲಿರುವ ಆಧಿಪತ್ಯವು ನಷ್ಟವಾಗಲಿದೆ ಎಂದು ಅವರ ಪೈಕಿ ಕೆಲವರಿಗೆ ಭಯವಿತ್ತು. 841. ಮಕ್ಕಾ ನಿವಾಸಿಗಳು ಸವಿಯುತ್ತಿರುವ ಸಕಲ ಸೌಭಾಗ್ಯಗಳೂ ಅಲ್ಲಾಹು ದಯಪಾಲಿಸಿದ್ದಾಗಿದೆ. ಅವನ ಮೇಲೆ ವಿಶ್ವಾಸವಿಟ್ಟು ಅವನಿಗೆ ಕೃತಜ್ಞತೆಯನ್ನು ಸಲ್ಲಿಸಿದರೆ ಅವನು ತನ್ನ ಅನುಗ್ರಹಗಳನ್ನು ಹೆಚ್ಚಿಸಿಕೊಡುವನು. ಆದರೆ ಅಲ್ಲಾಹುವಿನ ಕಾರ್ಯ ವೈಖರಿಯನ್ನು ಅರ್ಥಮಾಡಿಕೊಳ್ಳದೆ ಅವರು ಅನಗತ್ಯವಾಗಿ ಆತಂಕಪಡುತ್ತಿದ್ದಾರೆ.
(58) ಜೀವನಾಡಂಬರಗಳಲ್ಲಿ ಮೈಮರೆತು ಅಹಂಕಾರಪಟ್ಟ ಎಷ್ಟೋ ನಾಡುಗಳನ್ನು ನಾವು ನಾಶಮಾಡಿರುವೆವು. ಅಗೋ ಅವರ ವಾಸಸ್ಥಳಗಳು! ಅವರ ಬಳಿಕ ಅಪೂರ್ವವಾಗಿಯೇ ಹೊರತು ಅಲ್ಲಿ ಜನವಾಸವುಂಟಾಗಿಲ್ಲ. (ಅವುಗಳ) ಹಕ್ಕುದಾರರು ನಾವೇ ಆಗಿರುವೆವು.
(59) ತಮ್ಮ ರಬ್ ಆ ನಾಡುಗಳನ್ನು, ಅವುಗಳ ಕೇಂದ್ರದಲ್ಲಿ ನಮ್ಮ ದೃಷ್ಟಾಂತಗಳನ್ನು ಜನರಿಗೆ ಓದಿಕೊಡುವ ಒಬ್ಬ ಸಂದೇಶವಾಹಕರನ್ನು ಕಳುಹಿಸುವ ತನಕ ನಾಶ ಮಾಡಲಾರನು. ನಾಡಿನ ನಿವಾಸಿಗಳು ಅಕ್ರಮಿಗಳಾಗಿರುವಾಗಲೇ ಹೊರತು ನಾವು ನಾಡುಗಳನ್ನು ನಾಶ ಮಾಡಲಾರೆವು.
(60) ನಿಮಗೇನಾದರೂ ನೀಡಲಾಗಿದ್ದರೆ ಅದು ಐಹಿಕ ಜೀವನದ ಆಡಂಬರ ಮತ್ತು ಅದರ ಅಲಂಕಾರ ಮಾತ್ರವಾಗಿದೆ. ಅಲ್ಲಾಹುವಿನ ಬಳಿಯಿರುವುದು ಅತ್ಯುತ್ತಮವೂ ಬಾಕಿಯುಳಿಯುವಂತದ್ದೂ ಆಗಿದೆ. ನೀವು ಚಿಂತಿಸುವುದಿಲ್ಲವೇ?
(61) ಯಾರಿಗೆ ನಾವು ಉತ್ತಮವಾದ ವಾಗ್ದಾನವನ್ನು ನೀಡಿ ತರುವಾಯ ಅವನು ಅದನ್ನು (ನೆರವೇರಿಸಿರುವುದಾಗಿ) ಕಾಣುವನೋ, ಅಂತಹವನು, ಯಾರಿಗೆ ನಾವು ಐಹಿಕ ಜೀವನದ ಸುಖಾಡಂಬರವನ್ನು ನೀಡಿ ತರುವಾಯ ಅವನು ಪುನರುತ್ಥಾನದ ದಿನದಂದು (ಶಿಕ್ಷೆಗೆ) ಹಾಜರುಗೊಳಿಸಲಾಗುವನೋ ಅವನಂತಾಗುವನೇ?(842)
842. ಪರಲೋಕ ಪ್ರತಿಫಲದ ಬಗ್ಗೆಯಿರುವ ಅಲ್ಲಾಹುವಿನ ವಾಗ್ದಾನದ ಮೇಲೆ ವಿಶ್ವಾಸವಿಟ್ಟವನಿಗೆ ಶಾಶ್ವತ ಶಿಕ್ಷೆಯಿಂದ ಮುಕ್ತಿ ಪಡೆಯಬಹುದು. ಇಹಲೋಕದಲ್ಲಿ ಸಂತೃಪ್ತ ಬದುಕನ್ನು ಸಾಗಿಸಬಹುದು. ಇಹಲೋಕದ ಸುಖಲೋಲುಪತೆಯಲ್ಲಿ ಮೈಮರೆತು ಸತ್ಯನಿಷೇಧ ಮತ್ತು ಅಧರ್ಮವನ್ನು ನೆಚ್ಚಿಕೊಂಡವನಿಗೆ ಅಂತಹ ಒಂದು ಸ್ಥಿತಿಯು ಎಂದಿಗೂ ಲಭ್ಯವಾಗದು.
(62) ಅವನು (ಅಲ್ಲಾಹು) ಅವರನ್ನು ಕರೆಯುವ ಮತ್ತು “ನನ್ನ ಸಹಭಾಗಿಗಳೆಂದು ನೀವು ವಾದಿಸುತ್ತಿದ್ದವರು ಎಲ್ಲಿರುವರು?” ಎಂದು ಕೇಳುವ ದಿನ!
(63) (ಶಿಕ್ಷೆಯ) ವಚನವು ಯಾರ ಮೇಲೆ ಖಾತ್ರಿಯಾಗಿರುವುದೋ ಅವರು (ಅಂದು) ಹೇಳುವರು: “ನಮ್ಮ ಪ್ರಭೂ! ನಾವು ದಾರಿತಪ್ಪಿಸಿದ್ದು ಇವರನ್ನಾಗಿದೆ. ನಾವು ದಾರಿ ತಪ್ಪಿದಂತೆಯೇ ಇವರನ್ನೂ ನಾವು ದಾರಿತಪ್ಪಿಸಿದೆವು. ನಿನ್ನ ಮುಂದೆ ನಾವು ನಮ್ಮ ಹೊಣೆಯಿಂದ ಮುಕ್ತರಾಗಿರುವೆವು. ಅವರು ಆರಾಧಿಸುತ್ತಿದ್ದುದು ನಮ್ಮನ್ನಲ್ಲ”.(843)
843. ಅವರು ಜನರಿಗೆ ಹಲವಾರು ದೇವಪರಿಕಲ್ಪನೆಗಳನ್ನು ಮತ್ತು ಪೂಜಾಸಂಪ್ರದಾಯಗಳನ್ನು ಆಕರ್ಷಣೀಯಗೊಳಿಸಿ ತೋರಿಸಿಕೊಡುತ್ತಿದ್ದರು. ಜನರು ತಮ್ಮನ್ನು ಆರಾಧಿಸಬೇಕೆಂದು ಅವರು ಬೇಡಿಕೆಯಿಡಲಿಲ್ಲ. ಅವರು ಆರಾಧಿಸಲ್ಪಡಲೂ ಇಲ್ಲ.
(64) “ನೀವು ನಿಮ್ಮ ಸಹಭಾಗಿಗಳನ್ನು ಕರೆಯಿರಿ” ಎಂದು (ಬಹುದೇವಾರಾಧಕರೊಂದಿಗೆ) ಹೇಳಲಾಗುವುದು. ಆಗ ಇವರು ಅವರನ್ನು ಕರೆಯುವರು. ಆದರೆ ಅವರು (ಸಹಭಾಗಿಗಳು) ಇವರಿಗೆ ಉತ್ತರ ನೀಡಲಾರರು. ಇವರು ಶಿಕ್ಷೆಯನ್ನು ಕಣ್ಣಾರೆ ಕಾಣುವರು. ಇವರು ಸನ್ಮಾರ್ಗವನ್ನು ಪಡೆದಿರುತ್ತಿದ್ದರೆ!
(65) ಅವನು (ಅಲ್ಲಾಹು) ಅವರನ್ನು ಕರೆದು “ಸಂದೇಶವಾಹಕರಿಗೆ ನೀವು ನೀಡಿದ ಉತ್ತರವೇನು?” ಎಂದು ಪ್ರಶ್ನಿಸುವ ದಿನ!
(66) ಅಂದು ಅವರಿಗೆ ಮಾಹಿತಿಗಳು ಅಸ್ಪಷ್ಟವಾಗಿ ಬಿಡುವುದು. ಆಗ ಅವರು ಪರಸ್ಪರ ಕೇಳಿ ತಿಳಿಯಲಾರರು.
(67) ಆದರೆ ಯಾರು ಪಶ್ಚಾತ್ತಾಪಪಟ್ಟು, ವಿಶ್ವಾಸಿಯಾಗಿ ಮಾರ್ಪಟ್ಟು, ಸತ್ಕರ್ಮವೆಸಗುವನೋ ಅವನು ಯಶಸ್ವಿಯಾದವರಲ್ಲಿ ಸೇರುವನು.
(68) ತಮ್ಮ ರಬ್ ಅವನಿಚ್ಛಿಸುವುದನ್ನು ಸೃಷ್ಟಿಸುವನು ಮತ್ತು (ಅವನಿಚ್ಚಿಸುವುದನ್ನು) ಆರಿಸುವನು. ಆದರೆ ಅವರಿಗೆ ಆಯ್ಕೆ ಮಾಡುವ ಅರ್ಹತೆಯಿಲ್ಲ. ಅಲ್ಲಾಹು ಪರಮ ಪಾವನನು. ಅವರು ಸಹಭಾಗಿತ್ವ ಮಾಡುವುದರಿಂದೆಲ್ಲ ಅವನು ಅತ್ಯುನ್ನತನಾಗಿರುವನು.
(69) ಅವರ ಹೃದಯಗಳು ಮರೆಮಾಚುವುದನ್ನೂ, ಅವರು ಬಹಿರಂಗಪಡಿಸುವುದನ್ನೂ ತಮ್ಮ ರಬ್ ಅರಿಯುವನು.
(70) ಅವನಾಗಿರುವನು ಅಲ್ಲಾಹು! ಅವನ ಹೊರತು ಅನ್ಯ ಆರಾಧ್ಯರಿಲ್ಲ. ಇಹಲೋಕದಲ್ಲೂ ಪರಲೋಕದಲ್ಲೂ ಅವನಿಗೆ ಸ್ತುತಿ. ಆಜ್ಞಾಧಿಕಾರವು ಅವನದ್ದಾಗಿದೆ. ನಿಮ್ಮನ್ನು ಅವನೆಡೆಗೆ ಮರಳಿಸಲಾಗುವುದು.
(71) (ಓ ಪ್ರವಾದಿಯವರೇ!) ಹೇಳಿರಿ: “ನೀವು ಆಲೋಚಿಸಿದ್ದೀರಾ? ಪುನರುತ್ಥಾನದ ದಿನದವರೆಗೆ ಅಲ್ಲಾಹು ನಿಮ್ಮ ಮೇಲೆ ರಾತ್ರಿಯನ್ನು ಶಾಶ್ವತಗೊಳಿಸಿರುತ್ತಿದ್ದರೆ ಅಲ್ಲಾಹುವಿನ ಹೊರತು ಯಾವ ಆರಾಧ್ಯನು ನಿಮಗೆ ಬೆಳಕನ್ನು ತಂದುಕೊಡುವನು? ಆದರೂ ನೀವು ಆಲಿಸಲಾರಿರೇ?”
(72) ಹೇಳಿರಿ: “ನೀವು ಆಲೋಚಿಸಿದ್ದೀರಾ! ಪುನರುತ್ಥಾನದ ದಿನದವರೆಗೆ ಅಲ್ಲಾಹು ನಿಮ್ಮ ಮೇಲೆ ಹಗಲನ್ನು ಶಾಶ್ವತಗೊಳಿಸಿರುತ್ತಿದ್ದರೆ ಅಲ್ಲಾಹುವಿನ ಹೊರತು ಯಾವ ಆರಾಧ್ಯನು ನಿಮಗೆ ವಿಶ್ರಾಂತಿ ಪಡೆಯಲು ಒಂದು ರಾತ್ರಿಯನ್ನು ತಂದುಕೊಡುವನು? ಆದರೂ ನೀವು ನೋಡಿ ಅರ್ಥಮಾಡಿಕೊಳ್ಳಲಾರಿರೇ?
(73) ರಾತ್ರಿಯಲ್ಲಿ ವಿಶ್ರಾಂತಿ ಪಡೆಯುವುದಕ್ಕಾಗಿ ಮತ್ತು (ಹಗಲಿನಲ್ಲಿ) ಅವನ ಅನುಗ್ರಹದಿಂದ ನೀವು ಅರಸುವುದಕ್ಕಾಗಿ ಹಾಗೂ ನೀವು ಕೃತಜ್ಞತೆ ಸಲ್ಲಿಸುವುದಕ್ಕಾಗಿ ಅವನು ತನ್ನ ಕಾರುಣ್ಯದಿಂದ ನಿಮಗೆ ರಾತ್ರಿಯನ್ನೂ ಹಗಲನ್ನೂ ಮಾಡಿಕೊಟ್ಟಿರುವನು.
(74) ಅವನು ಅವರನ್ನು ಕರೆಯುವ ಮತ್ತು “ನನ್ನ ಸಹಭಾಗಿಗಳೆಂದು ನೀವು ವಾದಿಸುತ್ತಿದ್ದವರು ಎಲ್ಲಿರುವರು?” ಎಂದು ಕೇಳುವ ದಿನ!
(75) ನಾವು (ಅಂದು) ಪ್ರತಿಯೊಂದು ಸಮುದಾಯದಿಂದಲೂ ಒಬ್ಬೊಬ್ಬ ಸಾಕ್ಷಿಯನ್ನು(844) ಹೊರತರುವೆವು. ತರುವಾಯ (ಆ ಸಮುದಾಯಗಳೊಂದಿಗೆ) “ನಿಮ್ಮ ಪುರಾವೆಯನ್ನು ತನ್ನಿರಿ” ಎಂದು ಹೇಳುವೆವು. ಆಗ ಸತ್ಯವು ಅಲ್ಲಾಹುವಿಗಾಗಿದೆಯೆಂದು ಅವರು ಅರಿತುಕೊಳ್ಳುವರು. ಅವರು ಹೆಣೆದು ರಚಿಸಿರುವುದೆಲ್ಲವೂ ಅವರಿಂದ ಅಪ್ರತ್ಯಕ್ಷವಾಗುವುವು.
844. ಅಲ್ಲಾಹು ಪ್ರತಿಯೊಂದು ಜನಸಮೂಹದೆಡೆಗೂ ಕಳುಹಿಸಿದ ಪ್ರವಾದಿಗಳನ್ನು ಪರಲೋಕದಲ್ಲಿ ಅವರ ಮೇಲೆ ಸಾಕ್ಷಿಗಳಾಗಿ ಹಾಜರುಗೊಳಿಸುವನು.
(76) ಖಂಡಿತವಾಗಿಯೂ ಕಾರೂನ್ ಮೂಸಾರ ಜನತೆಯಲ್ಲಿ ಸೇರಿದವನಾಗಿದ್ದನು.(845) ತರುವಾಯ ಅವನು ಅವರ ಮೇಲೆ ಅತಿಕ್ರಮವೆಸಗಿದನು. ಅವನ ಖಜಾನೆಗಳು(846) ಬಲಿಷ್ಠರಾದ ಒಂದು ಗುಂಪು ಜನರಿಗೂ ಕೂಡ ಭಾರವಾಗುವಷ್ಟು ನಿಧಿಗಳನ್ನು ನಾವು ಅವನಿಗೆ ನೀಡಿದ್ದೆವು. ಅವನೊಂದಿಗೆ ಅವನ ಜನರು ಹೇಳಿದ ಸಂದರ್ಭ: “ನೀನು ಹರ್ಷದಿಂದ ಬೀಗದಿರು. ಖಂಡಿತವಾಗಿಯೂ ಹರ್ಷದಿಂದ ಬೀಗುವವರನ್ನು ಅಲ್ಲಾಹು ಮೆಚ್ಚಲಾರನು.
845. ಕಾರೂನ್ ಇಸ್ರಾಈಲ್ ಜನಾಂಗದಲ್ಲಿ ಸೇರಿದವನಾಗಿದ್ದನು. ಪ್ರವಾದಿ ಮೂಸಾ(ಅ) ರವರ ಪಿತೃ ಸಹೋದರ ಪುತ್ರನಾಗಿದ್ದನೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. 846. ‘ಮಫಾತಿಹ್’ ಎಂಬ ಪದಕ್ಕೆ ಖಜಾನೆಗಳು, ಕೀಲಿಕೈಗಳು ಇತ್ಯಾದಿ ಅರ್ಥಗಳಿವೆ.
(77) ಅಲ್ಲಾಹು ನಿನಗೆ ನೀಡಿರುವುದರಿಂದ ಪರಲೋಕದ ಯಶಸ್ಸನ್ನು ಅರಸು. ಐಹಿಕ ಜೀವನದಲ್ಲಿ ನಿನಗಿರುವ ಪಾಲನ್ನು ಮರೆಯದಿರು.(847) ಅಲ್ಲಾಹು ನಿನಗೆ ಒಳಿತನ್ನು ಮಾಡಿದಂತೆ ನೀನು ಜನರಿಗೂ ಒಳಿತನ್ನು ಮಾಡು. ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡದಿರು. ಕ್ಷೋಭೆಯನ್ನುಂಟು ಮಾಡುವವರನ್ನು ಖಂಡಿತವಾಗಿಯೂ ಅಲ್ಲಾಹು ಇಷ್ಟಪಡಲಾರನು”.
847. ಇದನ್ನು ಎರಡು ರೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ. ಒಂದು: ಇಹಲೋಕ ಜೀವನದಲ್ಲಿ ನಿನಗೆ ಅನುಮತಿಸಲ್ಪಟ್ಟ ಪಾಲಿದೆ. ಅದನ್ನು ನೀನು ಮರೆಯಬಾರದು. ಎರಡು: ಇಹಲೋಕದ ಗಳಿಕೆಗಳೆಲ್ಲವೂ ನಶ್ವರ. ಅದು ನಷ್ಟವಾಗುತ್ತದೆ. ಆದರೆ ಅದರಿಂದ ನಿನಗೆ ಶಾಶ್ವತ ಹಕ್ಕಿರುವ ಒಂದು ಪಾಲನ್ನು ಸಂಪಾದಿಸಬಹುದಾಗಿದೆ. ಅದು ನಿನ್ನ ದಾನಧರ್ಮಗಳ ಮತ್ತು ಸತ್ಕರ್ಮಗಳ ಫಲವಾಗಿದೆ. ಅದನ್ನು ನೀನು ಮರೆಯಬಾರದು.
(78) ಅವನು ಹೇಳಿದನು: “ಇದು ನನಗೆ ಲಭ್ಯವಾಗಿರುವುದು ನನ್ನ ವಶದಲ್ಲಿರುವ ಅರಿವಿನಿಂದಲೇ ಆಗಿದೆ.” ಆದರೆ ಅವನಿಗಿಂತಲೂ ಹೆಚ್ಚು ಶಕ್ತರಾದ ಮತ್ತು ಹೆಚ್ಚು ಜನಬಲವಿದ್ದ ಅನೇಕ ತಲೆಮಾರುಗಳನ್ನು ಅವನಿಗಿಂತ ಮುಂಚೆ ಅಲ್ಲಾಹು ನಾಶ ಮಾಡಿರುವುದನ್ನು ಅವನು ಅರ್ಥಮಾಡಿಕೊಂಡಿಲ್ಲವೇ? ಪಾಪಿಗಳೊಂದಿಗೆ ಅವರ ಪಾಪಗಳ ಬಗ್ಗೆ ಕೇಳಲಾಗದು.(848)
848. ಅಪರಾಧಿಗಳೊಂದಿಗೆ ಅವರ ಅಪರಾಧದ ಬಗ್ಗೆ ಕೇಳಿ ತಿಳಿಯಬೇಕಾದ ಅಗತ್ಯವು ಅಲ್ಲಾಹುವಿಗಿಲ್ಲ. ಅವರು ತಮ್ಮ ಅಪರಾಧಗಳನ್ನು ಒಪ್ಪಿಕೊಳ್ಳದಿದ್ದರೂ ಅವರ ಅಪರಾಧಕ್ಕಿರುವ ನಿಖರವಾದ ಅರ್ಹ ಪ್ರತಿಫಲವನ್ನು ಅವನು ನೀಡುವನು.
(79) ತರುವಾಯ ಅವನು ಜನರೆಡೆಗೆ ವೈಭವದೊಂದಿಗೆ ಹೊರಟು ಬಂದನು. ಐಹಿಕ ಜೀವನವನ್ನು ಗುರಿಯನ್ನಾಗಿ ಮಾಡಿಕೊಂಡವರು ಅದನ್ನು ಕಂಡು ಹೇಳಿದರು: “ಕಾರೂನ್‍ಗೆ ನೀಡಲಾಗಿರುವುದನ್ನು ನಮಗೂ ನೀಡಲಾಗಿರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು! ಖಂಡಿತವಾಗಿಯೂ ಅವನು ಮಹಾ ಭಾಗ್ಯವಂತನಾಗಿರುವನು”.
(80) ಜ್ಞಾನ ನೀಡಲ್ಪಟ್ಟವರು ಹೇಳಿದರು: “ನಿಮಗೆ ವಿನಾಶ ಕಾದಿದೆ! ವಿಶ್ವಾಸವಿಟ್ಟವರಿಗೆ ಮತ್ತು ಸತ್ಕರ್ಮವೆಸಗಿದವರಿಗೆ ಅಲ್ಲಾಹನ ಪ್ರತಿಫಲವು ಅತ್ಯುತ್ತಮವಾಗಿದೆ. ಅದು ತಾಳ್ಮೆ ವಹಿಸುವವರಿಗಲ್ಲದೆ ನೀಡಲ್ಪಡದು.
(81) ತರುವಾಯ ನಾವು ಅವನನ್ನೂ, ಅವನ ಭವನವನ್ನೂ ಭೂಮಿಯಲ್ಲಿ ಹುದುಗಿಸಿದೆವು. ಆಗ ಅಲ್ಲಾಹುವಿನ ಹೊರತು ಅವನಿಗೆ ಸಹಾಯ ಮಾಡುವ ಯಾವುದೇ ಗುಂಪೂ ಅವನಿಗಿರಲಿಲ್ಲ. ಸ್ವತಃ ರಕ್ಷಣೆ ಪಡೆದವರಲ್ಲಿ ಸೇರಲೂ ಅವನಿಂದಾಗಲಿಲ್ಲ.
(82) ನಿನ್ನೆ ಅವನ ಸ್ಥಾನವನ್ನು ಹಂಬಲಿಸಿದವರು (ಇಂದು) ಹೀಗೆನ್ನತೊಡಗಿದರು: “ಅಯ್ಯೋ! ಅಲ್ಲಾಹು ಅವನ ದಾಸರ ಪೈಕಿ ಅವನಿಚ್ಛಿಸುವವರಿಗೆ ಅನ್ನಾಧಾರವನ್ನು ವಿಶಾಲಗೊಳಿಸುವನು ಮತ್ತು (ಅವನಿಚ್ಛಿಸುವವರಿಗೆ ಅದನ್ನು) ಸಂಕುಚಿತಗೊಳಿಸುವನು. ಅಲ್ಲಾಹು ನಮ್ಮ ಮೇಲೆ ಔದಾರ್ಯ ತೋರದಿರುತ್ತಿದ್ದರೆ ನಮ್ಮನ್ನೂ ಭೂಮಿ ನುಂಗುವಂತೆ ಅವನು ಮಾಡುತ್ತಿದ್ದನು. ಅಯ್ಯೋ! ಸತ್ಯನಿಷೇಧಿಗಳು ಯಶಸ್ವಿಯಾಗಲಾರರು.
(83) ಭೂಮಿಯಲ್ಲಿ ಔನ್ನತ್ಯವನ್ನಾಗಲಿ, ಕ್ಷೋಭೆಯನ್ನಾಗಲಿ ಬಯಸದವರಿಗೆ ನಾವು ಆ ಪಾರಲೌಕಿಕ ಭವನವನ್ನು ನಿಶ್ಚಯಿಸಿಕೊಡುವೆವು. ಅಂತ್ಯಫಲವು ಭಯಭಕ್ತಿ ಪಾಲಿಸುವವರಿಗೆ ಅನುಕೂಲಕರವಾಗಿರುವುದು.
(84) ಯಾರು ಒಳಿತನ್ನು ತರುವನೋ ಅವನಿಗೆ ಅದಕ್ಕಿಂತಲೂ ಉತ್ತಮವಾದುದು ಸಿಗುವುದು. ಯಾರಾದರೂ ಕೆಡುಕನ್ನು ತರುವುದಾದರೆ ಕೆಡುಕು ಮಾಡುವವರಿಗೆ ಅವರು ಮಾಡಿಕೊಂಡಿರುವುದರ ಪ್ರತಿಫಲವನ್ನಲ್ಲದೆ ಬೇರೇನೂ ನೀಡಲಾಗದು.
(85) ಖಂಡಿತವಾಗಿಯೂ ತಮಗೆ ಈ ಕುರ್‌ಆನನ್ನು ಶಾಸನವನ್ನಾಗಿ ನೀಡಿರುವವನು ಮರಳಬೇಕಾದ ಸ್ಥಳಕ್ಕೇ ತಮ್ಮನ್ನು ಮರಳಿಸುವನು.(849) ಹೇಳಿರಿ: “ಸನ್ಮಾರ್ಗದೊಂದಿಗೆ ಬಂದವರು ಯಾರು ಮತ್ತು ಸ್ಪಷ್ಟವಾದ ದುರ್ಮಾರ್ಗದಲ್ಲಿರುವವರು ಯಾರು ಎಂದು ನನ್ನ ರಬ್ ಚೆನ್ನಾಗಿ ಅರಿತಿರುವನು”.
849. ಅಲ್ಲಾಹು ಪ್ರವಾದಿ(ಸ) ರವರನ್ನು ಮಕ್ಕಃವನ್ನು ಗೆದ್ದು ಅದಕ್ಕೆ ಮರಳುವಂತೆ ಮಾಡುವನು ಎಂಬ ವಾಗ್ದಾನವು ಈ ಸೂಕ್ತಿಯಲ್ಲಿ ಅಡಕವಾಗಿದೆಯೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲಾಹು ಪ್ರವಾದಿ(ಸ) ರವರನ್ನು ಪರಲೋಕದಲ್ಲಿ ಉನ್ನತ ಪದವಿಗೇರಿಸುವನು ಎಂಬ ಸೂಚನೆಯು ಈ ಸೂಕ್ತಿಯಲ್ಲಿದೆಯೆಂದು ಅಭಿಪ್ರಾಯಪಟ್ಟವರೂ ಇದ್ದಾರೆ.
(86) ತಮಗೆ ಗ್ರಂಥವು ನೀಡಲಾಗುವುದೆಂದು ತಾವು ಆಶಿಸಿರಲಿಲ್ಲ. ಆದರೆ ತಮ್ಮ ರಬ್‌ನ ಕಡೆಯ ಕಾರುಣ್ಯದಿಂದಾಗಿ (ಅದನ್ನು ನೀಡಲಾಗಿದೆ). ಆದುದರಿಂದ ತಾವು ಸತ್ಯನಿಷೇಧಿಗಳಿಗೆ ಸಹಾಯಕರಾಗದಿರಿ.
(87) ಅಲ್ಲಾಹುವಿನ ಸೂಕ್ತಿಗಳು ತಮಗೆ ಅವತೀರ್ಣಗೊಂಡ ಬಳಿಕ ಅವರು ತಮ್ಮನ್ನು ಅದರಿಂದ ತಡೆಯದಿರಲಿ.(850) ತಾವು ತಮ್ಮ ರಬ್‌ನೆಡೆಗೆ ಕರೆಯಿರಿ. ತಾವು ಬಹುದೇವಾರಾಧಕರಲ್ಲಿ ಸೇರಿದವರಾಗದಿರಿ.
850. ಅಲ್ಲಾಹುವಿನ ವಚನಗಳನ್ನು ಬೋಧಿಸುವುದರಿಂದ ತಮ್ಮನ್ನು ಹಿಂಜರಿಯುವಂತೆ ಮಾಡಲು ಅವರೆಲ್ಲರೂ ಯತ್ನಿಸಿದರೂ ತಾವು ಹಿಂಜರಿಯಬಾರದು ಎಂದರ್ಥ.
(88) ಅಲ್ಲಾಹುವಿನೊಂದಿಗೆ ಅನ್ಯ ಆರಾಧ್ಯರನ್ನು ಕರೆದು ಪ್ರಾರ್ಥಿಸದಿರಿ. ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನ ಮುಖದ ಹೊರತು ಎಲ್ಲ ವಸ್ತುಗಳೂ ನಾಶವಾಗುವುವು. ಆಜ್ಞಾಧಿಕಾರವು ಅವನಿಗಿರುವುದಾಗಿದೆ. ನಿಮ್ಮನ್ನು ಅವನೆಡೆಗೇ ಮರಳಿಸಲಾಗುವುದು.