29 - Al-Ankaboot ()

|

(1) ಅಲಿಫ್-ಲಾಮ್-ಮೀಮ್.

(2) “ನಾವು ವಿಶ್ವಾಸವಿಟ್ಟಿರುವೆವು” ಎಂದು ಹೇಳುವ ಕಾರಣದಿಂದಾಗಿ ತಮ್ಮನ್ನು ಪರೀಕ್ಷೆಗೊಳಪಡಿಸದೆ ಬಿಟ್ಟು ಬಿಡಲಾಗುವುದು ಎಂದು ಜನರು ಭಾವಿಸಿರುವರೇ?(851)
851. ವಿಶ್ವಾಸಿಗಳೆಂದು ಸ್ವಯಂ ಘೋಷಿಸುವವರನ್ನೆಲ್ಲಾ ಸ್ವರ್ಗಪ್ರವೇಶ ಮಾಡಿಸುವುದು ಅಲ್ಲಾಹುವಿನ ನೀತಿಯಲ್ಲ. ಸಕಲ ಆಮಿಷ ಮತ್ತು ಪ್ರಚೋದನೆಗಳನ್ನು ಗೆದ್ದು, ಅಗ್ನಿಪರೀಕ್ಷೆಗಳನ್ನು ಗೆದ್ದು ವಿಶ್ವಾಸವನ್ನು ರುಜುವಾತುಪಡಿಸುವವರಿಗೆ ಮಾತ್ರ ಅಲ್ಲಾಹು ಮೋಕ್ಷವನ್ನು ನೀಡುತ್ತಾನೆ.

(3) ಅವರ ಪೂರ್ವಿಕರನ್ನು ನಾವು ಪರೀಕ್ಷಿಸಿರುವೆವು. ಆಗ ಸತ್ಯ ನುಡಿದವರು ಯಾರೆಂದು ಅಲ್ಲಾಹು ಅರಿಯುವನು. ಸುಳ್ಳು ನುಡಿಯುವವರನ್ನೂ ಅವನು ಅರಿಯುವನು.

(4) ಅಲ್ಲ, ನಮ್ಮನ್ನು ಮೀರಿ ಹೋಗಬಹುದೆಂದು ದುಷ್ಕರ್ಮಿಗಳು ಭಾವಿಸುತ್ತಿರುವರೇ? ಅವರು ತೀರ್ಮಾನಿಸುತ್ತಿರುವುದು ಅತ್ಯಂತ ನಿಕೃಷ್ಟವಾದುದಾಗಿದೆ.

(5) ಯಾರಾದರೂ ಅಲ್ಲಾಹುವಿನೊಂದಿಗಿರುವ ಭೇಟಿಯನ್ನು ಆಶಿಸುವುದಾದರೆ ಖಂಡಿತವಾಗಿಯೂ ಅಲ್ಲಾಹು ನಿಶ್ಚಯಿಸಿದ ಅವಧಿಯು ಬಂದೇ ಬರುವುದು. ಅವನು ಎಲ್ಲವನ್ನು ಆಲಿಸುವವನೂ, ಅರಿಯುವವನೂ ಆಗಿರುವನು.

(6) ಯಾರಾದರೂ (ಅಲ್ಲಾಹುವಿನ ಮಾರ್ಗದಲ್ಲಿ) ಹೋರಾಡುವುದಾದರೆ ಅವನು ಹೋರಾಡುವುದು ಸ್ವತಃ ಅವನ ಒಳಿತಿಗಾಗಿಯೇ ಆಗಿದೆ. ಖಂಡಿತವಾಗಿಯೂ ಅಲ್ಲಾಹು ಸರ್ವಲೋಕದವರಿಂದ ನಿರಪೇಕ್ಷನಾಗಿರುವನು.

(7) ಸತ್ಯವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರಾರೋ ಅವರ ಕೆಡುಕುಗಳನ್ನು ನಾವು ಅವರಿಂದ ಅಳಿಸುವೆವು. ಅವರು ಮಾಡುತ್ತಿದ್ದುದರ ಪೈಕಿ ಅತ್ಯುತ್ತಮವಾಗಿರುವುದಕ್ಕಿರುವ ಪ್ರತಿಫಲವನ್ನು ನಾವು ಅವರಿಗೆ ನೀಡುವೆವು.

(8) ತನ್ನ ಮಾತಾಪಿತರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಲು ನಾವು ಮನುಷ್ಯನಿಗೆ ಉಪದೇಶ ಮಾಡಿರುವೆವು. ನಿನಗೆ ಯಾವುದೇ ಅರಿವಿಲ್ಲದಿರುವುದನ್ನು ನನ್ನೊಂದಿಗೆ ಸಹಭಾಗಿಯನ್ನಾಗಿ ಮಾಡಲು ಅವರು (ಮಾತಾಪಿತರು) ನಿನ್ನನ್ನು ಬಲವಂತಪಡಿಸಿದರೆ ಅವರನ್ನು ಅನುಸರಿಸದಿರು. ನಿಮ್ಮ ಮರಳುವಿಕೆಯು ನನ್ನ ಬಳಿಗಾಗಿದೆ. ಆಗ ನೀವು ಮಾಡಿಕೊಂಡಿರುವುದರ ಬಗ್ಗೆ ನಾನು ನಿಮಗೆ ತಿಳಿಸಿಕೊಡುವೆನು.

(9) ಸತ್ಯವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರನ್ನು ಖಂಡಿತವಾಗಿಯೂ ನಾವು ಸಜ್ಜನರಲ್ಲಿ ಸೇರಿಸುವೆವು.

(10) “ನಾವು ಅಲ್ಲಾಹುವಿನಲ್ಲಿ ವಿಶ್ವಾಸವಿಟ್ಟಿರುವೆವು” ಎಂದು ಹೇಳುವ ಕೆಲವರು ಮನುಷ್ಯರಲ್ಲಿರುವರು. ಆದರೆ ಅಲ್ಲಾಹುವಿನ ಮಾರ್ಗದಲ್ಲಿ ಅವರನ್ನು ಹಿಂಸಿಸಲಾದರೆ ಅವರು ಜನರ ಹಿಂಸೆಯನ್ನು ಅಲ್ಲಾಹುವಿನ ಶಿಕ್ಷೆಯೆಂಬಂತೆ ಪರಿಗಣಿಸುವರು.(852) ತಮ್ಮ ರಬ್‌ನ ಕಡೆಯಿಂದ ಯಾವುದಾದರೂ ಸಹಾಯವು ಬಂದರೆ ಅವರು (ಸತ್ಯವಿಶ್ವಾಸಿಗಳೊಂದಿಗೆ) ಹೇಳುವರು: “ಖಂಡಿತವಾಗಿಯೂ ನಾವು ನಿಮ್ಮೊಂದಿಗಿದ್ದೆವು”. ಸರ್ವಲೋಕದವರ ಹೃದಯಗಳಲ್ಲಿರುವುದರ ಬಗ್ಗೆ ಅಲ್ಲಾಹು ಚೆನ್ನಾಗಿ ಅರಿಯುವವನಲ್ಲವೇ?
852. ಅಲ್ಲಾಹುವಿನ ಶಿಕ್ಷೆಯನ್ನು ಭಯಪಡುವಂತೆ ಜನರ ಹಿಂಸೆಗಳನ್ನು ಭಯಪಡುವ ಹಾಗೂ ಸಂದರ್ಭಕ್ಕನುಸಾರವಾಗಿ ತಮ್ಮ ಬಣ್ಣವನ್ನು ಬದಲಾಯಿಸಿಕೊಳ್ಳುವ ಕಪಟವಿಶ್ವಾಸಿಗಳ ಬಗ್ಗೆ ಇಲ್ಲಿ ಪರಾಮರ್ಶಿಸಲಾಗಿದೆ.

(11) ಸತ್ಯವಿಶ್ವಾಸವಿಟ್ಟವರನ್ನು ಖಂಡಿತವಾಗಿಯೂ ಅಲ್ಲಾಹು ಅರಿಯುವನು. ಕಪಟವಿಶ್ವಾಸಿಗಳನ್ನೂ ಅವನು ಅರಿಯುವನು.

(12) “ನೀವು ನಮ್ಮ ಮಾರ್ಗವನ್ನು ಅನುಸರಿಸಿರಿ. ನಾವು ನಿಮ್ಮ ಪಾಪಗಳನ್ನು ಹೊರುವೆವು” ಎಂದು ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳೊಂದಿಗೆ ಹೇಳಿದರು. ಆದರೆ ಅವರ ಪಾಪಗಳಲ್ಲಿ ಏನನ್ನೂ ಇವರು ಹೊರಲಾರರು. ಖಂಡಿತವಾಗಿಯೂ ಇವರು ಸುಳ್ಳು ಹೇಳುವವರಾಗಿರುವರು.

(13) ಅವರು ತಮ್ಮ ಪಾಪಭಾರಗಳನ್ನು ಮತ್ತು ತಮ್ಮ ಪಾಪಭಾರಗಳೊಂದಿಗೆ ಇತರ ಪಾಪಭಾರಗಳನ್ನೂ ಹೊರಬೇಕಾಗಿ ಬರುವುದು. ಅವರು ಸ್ವತಃ ಹೆಣೆದು ರಚಿಸಿರುವುದರ ಬಗ್ಗೆ ಪುನರುತ್ಥಾನ ದಿನದಂದು ಖಂಡಿತವಾಗಿಯೂ ಅವರೊಂದಿಗೆ ವಿಚಾರಿಸಲಾಗುವುದು.

(14) ನಾವು ನೂಹ್‍ರನ್ನು ಅವರ ಜನತೆಯೆಡೆಗೆ ಕಳುಹಿಸಿದೆವು. ಅವರು ಐವತ್ತು ವರ್ಷಗಳನ್ನು ಹೊರತುಪಡಿಸಿ ಒಂದು ಸಾವಿರ ವರ್ಷಗಳವರೆಗೆ(853) ಅವರ ಮಧ್ಯೆ ಕಳೆದರು. ಹೀಗೆ ಅವರು ಅಕ್ರಮಿಗಳಾಗಿರುವಾಗಲೇ ಪ್ರಳಯವು ಅವರನ್ನು ಹಿಡಿಯಿತು.
853. ನೂಹ್‍ರವರ ಜೀವಿತಾವಧಿ 950 ವರ್ಷಗಳಾಗಿದ್ದವು. ಅಸಾಮಾನ್ಯ ವಿಧದಲ್ಲಿ ದೀರ್ಘವಾದ ಒಂದು ಆಯುಷ್ಕಾಲವನ್ನು ಅವರ ಮಧ್ಯೆ ಸಂದೇಶಪ್ರಚಾರ ಮಾಡುವುದರಲ್ಲೇ ಸಂಪೂರ್ಣವಾಗಿ ವ್ಯಯಿಸಿಯೂ ಸಹ ಕೆಲವು ಜನರು ಮಾತ್ರ ಸತ್ಯವಿಶ್ವಾಸವನ್ನು ಸ್ವೀಕರಿಸಿದ್ದರು.

(15) ತರುವಾಯ ನಾವು ಅವರನ್ನು ಮತ್ತು ಹಡಗಿನಲ್ಲಿರುವವರನ್ನು ರಕ್ಷಿಸಿದೆವು. ಅದನ್ನು ಸರ್ವಲೋಕದವರಿಗೆ ಒಂದು ದೃಷ್ಟಾಂತವನ್ನಾಗಿ ಮಾಡಿದೆವು.

(16) ಇಬ್ರಾಹೀಮ್‌ರನ್ನು ಸಹ (ನಾವು ಕಳುಹಿಸಿದೆವು). ಅವರು ತಮ್ಮ ಜನರೊಂದಿಗೆ ಹೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಆರಾಧಿಸಿರಿ ಮತ್ತು ಅವನನ್ನು ಭಯಪಡಿರಿ. ನೀವು ಅರಿತವರಾಗಿದ್ದರೆ ಅದು ನಿಮಗೆ ಉತ್ತಮವಾಗಿದೆ.

(17) ನೀವು ಅಲ್ಲಾಹುವಿನ ಹೊರತು ಕೆಲವು ವಿಗ್ರಹಗಳನ್ನು ಆರಾಧಿಸುತ್ತಿದ್ದೀರಿ ಮತ್ತು ಸುಳ್ಳನ್ನು ಸೃಷ್ಟಿಸುತ್ತಿದ್ದೀರಿ. ನೀವು ಅಲ್ಲಾಹುವಿನ ಹೊರತು ಯಾರನ್ನು ಆರಾಧಿಸುತ್ತಿರುವಿರೋ ಅವರು ನಿಮ್ಮ ಅನ್ನಾಧಾರವನ್ನು ಸ್ವಾಧೀನದಲ್ಲಿಟ್ಟುಕೊಂಡಿಲ್ಲ.(854) ಆದುದರಿಂದ ನೀವು ಅಲ್ಲಾಹುವಿನ ಬಳಿ ಅನ್ನಾಧಾರವನ್ನು ಅರಸಿರಿ, ಅವನನ್ನು ಆರಾಧಿಸಿರಿ ಮತ್ತು ಅವನಿಗೆ ಕೃತಜ್ಞತೆ ಸಲ್ಲಿಸಿರಿ. ನಿಮ್ಮನ್ನು ಅವನೆಡೆಗೇ ಮರಳಿಸಲಾಗುವುದು”.
854. ನಿಮ್ಮ ಅನ್ನಾಧಾರ ಮಾರ್ಗವು ಆ ಆರಾಧ್ಯರ ಸ್ವಾಧೀನದಲ್ಲಿಲ್ಲ.

(18) ನೀವು ನಿಷೇಧಿಸುವುದಾದರೆ ನಿಮಗಿಂತ ಮುಂಚೆ ಅನೇಕ ಸಮುದಾಯದವರೂ ನಿಷೇಧಿಸಿರುವರು. ಸಂದೇಶವಾಹಕರ ಹೊಣೆಯು ಸ್ಪಷ್ಟವಾದ ಬೋಧನೆ ಮಾತ್ರವಾಗಿದೆ.

(19) ಅಲ್ಲಾಹು ಸೃಷ್ಟಿಯನ್ನು ಹೇಗೆ ಆರಂಭಿಸುವನು ಮತ್ತು ತರುವಾಯ ಅದನ್ನು ಹೇಗೆ ಪುನರಾವರ್ತಿಸುವನು ಎಂಬುದನ್ನು ಅವರು ಕಂಡಿಲ್ಲವೇ? ಖಂಡಿತವಾಗಿಯೂ ಅದು ಅಲ್ಲಾಹುವಿನ ಮಟ್ಟಿಗೆ ಸುಲಭವಾಗಿದೆ.

(20) ಹೇಳಿರಿ: “ನೀವು ಭೂಮಿಯಲ್ಲಿ ಸಂಚರಿಸಿರಿ. ತರುವಾಯ ಅವನು ಸೃಷ್ಟಿಯನ್ನು ಹೇಗೆ ಆರಂಭಿಸಿರುವನು ಎಂಬುದನ್ನು ನೋಡಿರಿ. ನಂತರ ಅಲ್ಲಾಹು ಇನ್ನೊಮ್ಮೆ ಸೃಷ್ಟಿಸುವನು. ಖಂಡಿತವಾಗಿಯೂ ಅಲ್ಲಾಹುವಿಗೆ ಸಕಲ ವಿಷಯಗಳಲ್ಲೂ ಸಾಮರ್ಥ್ಯವಿದೆ”.

(21) ಅವನಿಚ್ಛಿಸುವವರನ್ನು ಅವನು ಶಿಕ್ಷಿಸುತ್ತಾನೆ ಮತ್ತು ಅವನಿಚ್ಛಿಸುವವರಿಗೆ ಅವನು ಕರುಣೆ ತೋರುವನು. ನಿಮ್ಮನ್ನು ಅವನೆಡೆಗೇ ಮರಳಿಸಲಾಗುವುದು.

(22) ಭೂಮಿಯಲ್ಲಾಗಲಿ, ಆಕಾಶದಲ್ಲಾಗಲಿ (ಅವನನ್ನು) ಸೋಲಿಸಲು ನಿಮ್ಮಿಂದಾಗದು. ಅಲ್ಲಾಹುವಿನ ಹೊರತು ನಿಮಗೆ ಯಾವುದೇ ರಕ್ಷಕನಾಗಲಿ, ಸಹಾಯಕನಾಗಲಿ ಇಲ್ಲ.

(23) ಅಲ್ಲಾಹುವಿನ ದೃಷ್ಟಾಂತಗಳಲ್ಲಿ ಮತ್ತು ಅವನೊಂದಿಗಿರುವ ಭೇಟಿಯಲ್ಲಿ ಅವಿಶ್ವಾಸವಿಟ್ಟವರು ಯಾರೋ ಅವರು ನನ್ನ ಕಾರುಣ್ಯದ ಬಗ್ಗೆ ನಿರಾಶರಾಗಿರುವರು.(855) ಅವರಿಗೆ ಯಾತನಾಮಯವಾದ ಶಿಕ್ಷೆಯಿದೆ.
855. ಅಲ್ಲಾಹುವಿನ ಕಾರುಣ್ಯದ ಬಗ್ಗೆಯಿರುವ ನಿರೀಕ್ಷೆಯು ನಮ್ಮನ್ನು ಮುನ್ನಡೆಸಬೇಕು. ಅಲ್ಲಾಹುವಿನ ಕಾರುಣ್ಯದ ಬಗ್ಗೆ ನೀವು ನಿರಾಶರಾಗಬಾರದು ಎಂದು ಅಲ್ಲಾಹು ನಮ್ಮನ್ನು 39:53ರಲ್ಲಿ ಎಚ್ಚರಿಸಿದ್ದಾನೆ.

(24) “ನೀವು ಅವನನ್ನು ಕೊಂದುಹಾಕಿರಿ ಅಥವಾ ಸುಟ್ಟು ಹಾಕಿರಿ” ಎಂದು ಹೇಳುವುದರ ಹೊರತು ಅವರ (ಇಬ್ರಾಹೀಮ್‌ರ) ಜನತೆಯು ಬೇರಾವ ಉತ್ತರವನ್ನೂ ನೀಡಲಿಲ್ಲ. ಆದರೆ ಅಲ್ಲಾಹು ಅವರನ್ನು ಅಗ್ನಿಯಿಂದ ರಕ್ಷಿಸಿದನು. ವಿಶ್ವಾಸವಿಡುವ ಜನರಿಗೆ ಖಂಡಿತವಾಗಿಯೂ ಅದರಲ್ಲಿ ದೃಷ್ಟಾಂತಗಳಿವೆ.

(25) ಅವರು ಹೇಳಿದರು: “ನೀವು ಅಲ್ಲಾಹುವಿನ ಹೊರತು ವಿಗ್ರಹಗಳನ್ನು (ಆರಾಧ್ಯರನ್ನಾಗಿ) ಮಾಡಿಕೊಂಡಿರುವುದು ಐಹಿಕ ಜೀವನದಲ್ಲಿ ನೀವು ಪರಸ್ಪರ ಹೊಂದಿರುವ ಸ್ನೇಹಸಂಬಂಧದ ಹೆಸರಿನಲ್ಲಿ ಮಾತ್ರವಾಗಿದೆ.(856) ತರುವಾಯ ಪುನರುತ್ಥಾನದ ದಿನದಂದು ನಿಮ್ಮಲ್ಲಿ ಕೆಲವರು ಇತರ ಕೆಲವರನ್ನು ನಿಷೇಧಿಸುವರು ಮತ್ತು ಕೆಲವರು ಇತರ ಕೆಲವರನ್ನು ಶಪಿಸುವರು. ನರಕಾಗ್ನಿಯು ನಿಮ್ಮ ವಾಸಸ್ಥಳವಾಗಿದೆ. ನಿಮಗೆ ಸಹಾಯಕರಾಗಿ ಯಾರೂ ಇರಲಾರರು”.
856. ಬಹುದೇವಾರಾಧಕರು ಪರಸ್ಪರ ತಮ್ಮಲ್ಲಿ ಹಾಗೂ ಅಧರ್ಮಿಗಳು ಪರಸ್ಪರ ತಮ್ಮಲ್ಲಿ ಲೌಕಿಕ ಹಿತಾಸಕ್ತಿಗಳ ತಳಹದಿಯಲ್ಲಿ ಬಲಿಷ್ಠ ಸ್ನೇಹ ಸಂಬಂಧವನ್ನು ಹೊಂದಿರುವುದನ್ನು ಕಾಣಬಹುದು. ಹೆಚ್ಚಿನ ಸಂದರ್ಭಗಳಲ್ಲೂ ಅಂತಹ ಸ್ನೇಹ ಸಂಬಂಧಗಳು ಏಕದೇವವಿಶ್ವಾಸವನ್ನು ಸ್ವೀಕರಿಸುವುದರಿಂದ ಅವರನ್ನು ತಡೆಯುತ್ತದೆ. ಆದರೆ ಪರಲೋಕಕ್ಕೆ ತಲುಪುವಾಗ ಆ ಸಂಬಂಧಗಳು ಮುರಿದು ಬೀಳಲಿವೆ.

(26) ಆಗ ಲೂತ್(857) ಅವರಲ್ಲಿ ವಿಶ್ವಾಸವಿಟ್ಟರು. ಅವರು (ಇಬ್ರಾಹೀಮ್) ಹೇಳಿದರು: “ಖಂಡಿತವಾಗಿಯೂ ನಾನು ಊರು ಬಿಟ್ಟು ನನ್ನ ರಬ್‌ನೆಡೆಗೆ ತೆರಳುವೆನು.(858) ಅವನು ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿರುವನು”.
857. ಲೂತ್(ಅ) ರವರು ಪ್ರವಾದಿ ಇಬ್ರಾಹೀಮ್(ಅ) ರವರ ಸಹೋದರ ಪುತ್ರರಾಗಿದ್ದಾರೆ. 858. ಇಬ್ರಾಹೀಮ್(ಅ) ಮತ್ತು ಲೂತ್(ಅ) ರವರ ಸ್ವದೇಶವು ಇರಾಕ್ ಆಗಿದೆ. ಅಲ್ಲಿಂದ ಅವರು ಪ್ಯಾಲಸ್ತೀನಿಗೆ ವಲಸೆ ಹೋದರು. ಲೂತ್(ಅ) ರವರು ಸದೂಮ್ (ಸೊದೋಮ್) ಪ್ರದೇಶದಲ್ಲಿ ವಾಸಿಸಿದರು.

(27) ನಾವು ಅವರಿಗೆ ಇಸ್‍ಹಾಕ್‍ರನ್ನು (ಮಗನಾಗಿ) ಮತ್ತು ಯಅ್‌ಕೂಬ್‍ರನ್ನು (ಮೊಮ್ಮಗನಾಗಿ) ದಯಪಾಲಿಸಿದೆವು. ಅವರ ಸಂತತಿಗಳಲ್ಲಿ ನಾವು ಪ್ರವಾದಿತ್ವವನ್ನು ಮತ್ತು ಗ್ರಂಥವನ್ನು ನೀಡಿದೆವು. ಇಹಲೋಕದಲ್ಲಿ ನಾವು ಅವರಿಗೆ ಪ್ರತಿಫಲವನ್ನು ನೀಡಿರುವೆವು. ಪರಲೋಕದಲ್ಲಿ ಖಂಡಿತವಾಗಿಯೂ ಅವರು ಸಜ್ಜನರಲ್ಲಿ ಸೇರಿದವರಾಗಿರುವರು.

(28) ಲೂತ್‍ರನ್ನೂ (ನಾವು ಸಂದೇಶವಾಹಕರಾಗಿ ಕಳುಹಿಸಿದೆವು). ಅವರು ತಮ್ಮ ಜನತೆಯೊಂದಿಗೆ ಹೇಳಿದ ಸಂದರ್ಭ: “ಖಂಡಿತವಾಗಿಯೂ ನೀವು ಮಾಡುತ್ತಿರುವುದು ನೀಚಕೃತ್ಯವಾಗಿದೆ. ನಿಮಗಿಂತ ಮುಂಚೆ ಸರ್ವಲೋಕದವರ ಪೈಕಿ ಯಾರೂ ಅದನ್ನು ಮಾಡಿರಲಿಲ್ಲ.

(29) ನೀವು ಕಾಮಶಮನಕ್ಕಾಗಿ ಪುರುಷರ ಬಳಿಗೆ ತೆರಳುತ್ತಲೂ, (ನೈಸರ್ಗಿಕವಾದ) ಮಾರ್ಗವನ್ನು ಉಲ್ಲಂಘಿಸುತ್ತಲೂ(859) ನಿಮ್ಮ ಸಭೆಗಳಲ್ಲಿ ನಿಷಿದ್ಧಕೃತ್ಯವನ್ನು ಮಾಡುತ್ತಲೂ ಇರುವುದೇ?” ಆಗ ಅವರ ಜನತೆಯ ಉತ್ತರವು “ತಾವು ಸತ್ಯಸಂಧರಲ್ಲಿ ಸೇರಿದವರಾಗಿದ್ದರೆ ಅಲ್ಲಾಹುವಿನ ಶಿಕ್ಷೆಯನ್ನು ನಮ್ಮ ಬಳಿಗೆ ತನ್ನಿರಿ” ಎಂದು ಹೇಳಿರುವುದರ ಹೊರತು ಇನ್ನೇನೂ ಆಗಿರಲಿಲ್ಲ.
859. ‘ತಕ್ತಊನ ಸ್ಸಬೀಲ’ ಎಂಬುದನ್ನು ನೀವು ದರೋಡೆ ಮಾಡುತ್ತೀರಿ ಅಥವಾ ನೀವು ದಾರಿಯನ್ನು ತಡೆಯುತ್ತೀರಿ ಎಂದು ಕೂಡ ವ್ಯಾಖ್ಯಾನಿಸಲಾಗಿದೆ.

(30) ಅವರು (ಲೂತ್) ಹೇಳಿದರು: “ನನ್ನ ಪ್ರಭೂ! ವಿನಾಶಕಾರಿಗಳಾಗಿರುವ ಈ ಜನತೆಯ ವಿರುದ್ಧ ನನಗೆ ಸಹಾಯ ಮಾಡು”.

(31) ನಮ್ಮ ದೂತರು ಶುಭವಾರ್ತೆಯೊಂದಿಗೆ ಇಬ್ರಾಹೀಮ್‌ರ ಬಳಿಗೆ ಬಂದಾಗ ಅವರು ಹೇಳಿದರು: “ಖಂಡಿತವಾಗಿಯೂ ನಾವು ಈ ಊರಿನವರನ್ನು ನಾಶ ಮಾಡುವೆವು. ಖಂಡಿತವಾಗಿಯೂ ಈ ಊರಿನವರು ಅಕ್ರಮಿಗಳಾಗಿರುವರು”.

(32) ಅವರು (ಇಬ್ರಾಹೀಮ್) ಹೇಳಿದರು: “ಅಲ್ಲಿ ಲೂತ್ ಇದ್ದಾರಲ್ಲವೇ!” ಅವರು (ದೂತರು) ಹೇಳಿದರು: “ಅಲ್ಲಿರುವವರ ಬಗ್ಗೆ ನಾವು ಚೆನ್ನಾಗಿ ಅರಿತಿರುವೆವು. ಅವರನ್ನು ಮತ್ತು ಅವರ ಕುಟುಂಬವನ್ನು ಖಂಡಿತವಾಗಿಯೂ ನಾವು ರಕ್ಷಿಸುವೆವು. ಅವರ ಪತ್ನಿಯ ಹೊರತು. ಆಕೆ ಶಿಕ್ಷೆಗೊಳಗಾಗುವವರಲ್ಲಿ ಸೇರಿದವಳಾಗುವಳು”.

(33) ನಮ್ಮ ದೂತರು ಲೂತ್‍ರ ಬಳಿಗೆ ಬಂದಾಗ ಅವರ ಬಗ್ಗೆ ಅವರು ದುಃಖಿತರಾದರು ಮತ್ತು ಅವರ ಬಗ್ಗೆ ಅವರಿಗೆ ಮನಪ್ರಯಾಸವುಂಟಾಯಿತು.(860) ಅವರು ಹೇಳಿದರು: “ತಾವು ಭಯಪಡುವುದೋ ದುಃಖಿಸುವುದೋ ಮಾಡದಿರಿ. ನಾವು ತಮ್ಮನ್ನೂ ತಮ್ಮ ಕುಟುಂಬವನ್ನೂ ಖಂಡಿತವಾಗಿಯೂ ರಕ್ಷಿಸುವೆವು. ತಮ್ಮ ಪತ್ನಿಯ ಹೊರತು. ಆಕೆ ಶಿಕ್ಷೆಗೊಳಗಾಗುವವರಲ್ಲಿ ಸೇರುವಳು.
860. ಅವರು ಆ ದೂತರನ್ನು ತಮ್ಮ ಲೈಂಗಿಕ ವಿಕಾರಕ್ಕೆ ಬಳಸುವರೋ ಎಂದು ಅವರು ಭಯಪಟ್ಟರು.

(34) ಈ ಊರಿನವರ ಮೇಲೆ ಅವರು ಮಾಡುತ್ತಿದ್ದ ಧರ್ಮಬಾಹಿರ ಕೃತ್ಯದ ಫಲವಾಗಿ ನಾವು ಆಕಾಶದಿಂದ ಒಂದು ಶಿಕ್ಷೆಯನ್ನು ಇಳಿಸುವೆವು”.

(35) ಖಂಡಿತವಾಗಿಯೂ ಚಿಂತಿಸುವ ಜನರಿಗೆ ನಾವು ಅದರಲ್ಲಿ ಸ್ಪಷ್ಟವಾದ ದೃಷ್ಟಾಂತವನ್ನು ಉಳಿಸಿರುವೆವು.

(36) ಮದ್‍ಯನ್‍ನವರ ಬಳಿಗೆ ಅವರ ಸಹೋದರರಾದ ಶುಐಬ್‍ರನ್ನು (ನಾವು ಕಳುಹಿಸಿದೆವು). ಅವರು ಹೇಳಿದರು: “ಓ ನನ್ನ ಜನರೇ! ನೀವು ಅಲ್ಲಾಹನನ್ನು ಆರಾಧಿಸಿರಿ ಮತ್ತು ಅಂತ್ಯದಿನವನ್ನು ನಿರೀಕ್ಷಿಸಿರಿ. ನೀವು ವಿನಾಶಕಾರಿಗಳಾಗಿ ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡದಿರಿ”.

(37) ಆದರೆ ಅವರು ಶುಐಬ್‍ರನ್ನು ನಿಷೇಧಿಸಿದರು. ಆದುದರಿಂದ ಭೂಕಂಪನವು ಅವರನ್ನು ಹಿಡಿಯಿತು. ಆಗ ಅವರು ತಮ್ಮ ಮನೆಗಳಲ್ಲಿ ಅಧೋಮುಖಿಗಳಾಗಿ ಬಿದ್ದರು.

(38) ಆದ್ ಮತ್ತು ಸಮೂದ್ ಜನಾಂಗಗಳನ್ನೂ (ನಾವು ನಾಶ ಮಾಡಿದೆವು). ಅವರ ವಾಸಸ್ಥಳಗಳಿಂದ ಖಂಡಿತವಾಗಿಯೂ ನಿಮಗೆ ಅದು ಸ್ಪಷ್ಟವಾಗಿ ತಿಳಿದು ಬಂದಿದೆ. ಸೈತಾನನು ಅವರಿಗೆ ಅವರ ಕರ್ಮಗಳನ್ನು ಆಕರ್ಷಣೀಯಗೊಳಿಸಿ ತೋರಿಸಿದನು ಮತ್ತು ಅವರನ್ನು ಸರಿಯಾದ ಮಾರ್ಗದಿಂದ ತಡೆದನು. (ವಾಸ್ತವವಾಗಿ) ಅವರು ನೋಡಿ ತಿಳಿಯುವ ಸಾಮರ್ಥ್ಯವುಳ್ಳವರಾಗಿದ್ದರು.

(39) ಕಾರೂನ್‍ನನ್ನೂ, ಫಿರ್‍ಔನ್‍ನನ್ನೂ, ಹಾಮಾನ್‌ನನ್ನೂ (ನಾವು ನಾಶ ಮಾಡಿದೆವು). ಮೂಸಾ ಅವರೆಡೆಗೆ ಸ್ಪಷ್ಟವಾದ ಪುರಾವೆಗಳೊಂದಿಗೆ ಬಂದಿದ್ದರು. ಆಗ ಅವರು ಭೂಮಿಯಲ್ಲಿ ಅಹಂಕಾರದಿಂದ ಮೆರೆದರು. ಅವರಿಗೆ (ನಮ್ಮನ್ನು) ಮೀರಿ ಹೋಗಲು ಸಾಧ್ಯವಾಗಲಿಲ್ಲ.

(40) ಹೀಗೆ ಪ್ರತಿಯೊಬ್ಬರನ್ನೂ ನಾವು ಅವರವರ ಪಾಪಕ್ಕಾಗಿ ಹಿಡಿದೆವು. ಅವರಲ್ಲಿ ಕೆಲವರ ವಿರುದ್ಧ ನಾವು ಕಲ್ಲುಗಳ ಬಿರುಗಾಳಿಯನ್ನು ಕಳುಹಿಸಿದೆವು. ಅವರಲ್ಲಿ ಕೆಲವರನ್ನು ಘೋರ ಶಬ್ದವು ಹಿಡಿಯಿತು. ಅವರಲ್ಲಿ ಕೆಲವರನ್ನು ಭೂಮಿಯು ನುಂಗುವಂತೆ ನಾವು ಮಾಡಿದೆವು. ಅವರಲ್ಲಿ ಕೆಲವರನ್ನು ನಾವು ಮುಳುಗಿಸಿದೆವು. ಅಲ್ಲಾಹು ಅವರೊಂದಿಗೆ ಅನ್ಯಾಯವೆಸಗಿರಲಿಲ್ಲ. ಆದರೆ ಅವರು ಸ್ವತಃ ಅವರೊಂದಿಗೇ ಅನ್ಯಾಯವೆಸಗಿದರು.

(41) ಅಲ್ಲಾಹುವಿನ ಹೊರತು ಅನ್ಯರನ್ನು ರಕ್ಷಕರನ್ನಾಗಿ ಮಾಡಿಕೊಂಡವರ ಉಪಮೆಯು ಜೇಡನಂತಿದೆ. ಅದೊಂದು ಮನೆಯನ್ನು ಮಾಡಿಕೊಂಡಿತು. ಖಂಡಿತವಾಗಿಯೂ ಮನೆಗಳ ಪೈಕಿ ಅತ್ಯಂತ ಬಲಹೀನವಾಗಿರುವುದು ಜೇಡನ ಮನೆಯಾಗಿದೆ. ಅವರು ಅರ್ಥ ಮಾಡಿಕೊಳ್ಳುವವರಾಗಿದ್ದರೆ!

(42) ತನ್ನ ಹೊರತು ಅವರು ಕರೆದು ಪ್ರಾರ್ಥಿಸುತ್ತಿರುವ ಯಾವುದೇ ವಸ್ತುವನ್ನೂ ಖಂಡಿತವಾಗಿಯೂ ಅಲ್ಲಾಹು ಅರಿಯುವನು. ಅವನು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.

(43) ನಾವು ಆ ಉಪಮೆಗಳನ್ನು ಜನರಿಗಾಗಿ ವಿವರಿಸಿಕೊಡುತ್ತಿರುವೆವು. ಅರಿವುಳ್ಳವರ ಹೊರತು ಯಾರೂ ಅವುಗಳನ್ನು ಆಲೋಚಿಸಿ ಅರ್ಥಮಾಡಿಕೊಳ್ಳಲಾರರು.

(44) ಅಲ್ಲಾಹು ಆಕಾಶಗಳನ್ನು ಮತ್ತು ಭೂಮಿಯನ್ನು ಸತ್ಯದೊಂದಿಗೆ ಸೃಷ್ಟಿಸಿದನು. ಖಂಡಿತವಾಗಿಯೂ ಅದರಲ್ಲಿ ಸತ್ಯವಿಶ್ವಾಸಿಗಳಿಗೆ ದೃಷ್ಟಾಂತವಿದೆ.

(45) (ಓ ಪ್ರವಾದಿಯವರೇ!) ಗ್ರಂಥದಿಂದ ತಮಗೆ ದಿವ್ಯಸಂದೇಶ ನೀಡಲಾಗಿರುವುದನ್ನು ತಾವು ಓದಿಕೊಡಿರಿ ಮತ್ತು ನಮಾಝನ್ನು ಸಂಸ್ಥಾಪಿಸಿರಿ. ಖಂಡಿತವಾಗಿಯೂ ನಮಾಝ್ ನೀಚಕೃತ್ಯಗಳಿಂದಲೂ, ದುಷ್ಕರ್ಮಗಳಿಂದಲೂ ತಡೆಯುತ್ತದೆ.(861) ಅಲ್ಲಾಹುವಿನ ಸ್ಮರಣೆಯು ಅತಿಮಹತ್ವ ವುಳ್ಳದ್ದಾಗಿದೆ. ನೀವು ಏನು ಮಾಡುತ್ತಿರುವಿರೋ ಅದನ್ನು ಅಲ್ಲಾಹು ಅರಿಯುತ್ತಿರುವನು.
861. ನಮಾಝ್ ಅಲ್ಲಾಹುವಿನೊಂದಿಗಿರುವ ಪ್ರಾರ್ಥನೆಯಾಗಿದೆ. ಅದು ಅವನೊಂದಿಗಿರುವ ಪ್ರತಿಜ್ಞೆಯನ್ನು ಮತ್ತು ವಿನಮ್ರತೆಯನ್ನು ಒಳಗೊಂಡಿದೆ. ಅದನ್ನು ಕ್ರಮಪ್ರಕಾರ ನಿರ್ವಹಿಸುವವನು ಕೆಟ್ಟ ಆಲೋಚನೆಗಳಿಂದ ಮತ್ತು ದುಷ್ಕರ್ಮಗಳಿಂದ ಮುಕ್ತಿ ಪಡೆಯುವನು. ಅಥವಾ ನಮಾಝಿನ ಮೂಲಕ ನಿರ್ಮಲಗೊಂಡ ಮನಸ್ಸು ಅವನನ್ನು ಅವುಗಳಿಂದ ತಡೆಯುವುದು.

(46) ಗ್ರಂಥದವರೊಂದಿಗೆ ಅತ್ಯುತ್ತಮವಾದ ವಿಧದಲ್ಲೇ ಹೊರತು ಸಂವಾದ ಮಾಡದಿರಿ; ಅವರ ಪೈಕಿ ಅಕ್ರಮ ವೆಸಗಿದವರೊಂದಿಗಲ್ಲದೆ. (ಅವರೊಂದಿಗೆ) ಹೇಳಿರಿ: ನಮಗೆ ಅವತೀರ್ಣಗೊಂಡಿರುವುದರಲ್ಲಿ ಮತ್ತು ನಿಮಗೆ ಅವತೀರ್ಣಗೊಂಡಿರುವುದರಲ್ಲಿ ನಾವು ವಿಶ್ವಾಸವಿಟ್ಟಿರುವೆವು. ನಮ್ಮ ಆರಾಧ್ಯನು ಮತ್ತು ನಿಮ್ಮ ಆರಾಧ್ಯನು ಒಬ್ಬನೇ ಆಗಿರುವನು. ನಾವು ಅವನಿಗೆ ಶರಣಾಗತರಾಗಿರುವೆವು.

(47) ಹೀಗೆ ನಾವು ತಮಗೂ ಗ್ರಂಥವನ್ನು ಅವತೀರ್ಣಗೊಳಿಸಿದೆವು. ನಾವು (ಮುಂಚೆ) ಯಾರಿಗೆ ಗ್ರಂಥವನ್ನು ನೀಡಿರುವೆವೋ ಅವರು ಇದರಲ್ಲಿ ವಿಶ್ವಾಸವಿಡುವರು. ಇವರ ಪೈಕಿಯೂ(862) ಅದರಲ್ಲಿ ವಿಶ್ವಾಸವಿಡುವವರು ಇರುವರು. ನಮ್ಮ ದೃಷ್ಟಾಂತಗಳನ್ನು ಅವಿಶ್ವಾಸಿಗಳ ಹೊರತು ಇನ್ನಾರೂ ನಿಷೇಧಿಸಲಾರರು.
862. ‘ಇವರ ಪೈಕಿ’ ಎಂಬುದರ ಉದ್ದೇಶವು ಮಕ್ಕಾದಲ್ಲಿದ್ದ ಬಹುದೇವಾರಾಧಕರಾಗಿದ್ದಾರೆ.

(48) ಇದಕ್ಕೆ ಮುಂಚೆ ತಾವು ಯಾವುದಾದರೂ ಗ್ರಂಥವನ್ನು ಪಾರಾಯಣ ಮಾಡುವುದೋ, ತಮ್ಮ ಬಲಗೈಯಿಂದ ಅದನ್ನು ಬರೆಯುವುದೋ ಮಾಡಿರಲಿಲ್ಲ. ಹಾಗಿರುತ್ತಿದ್ದರೆ ಈ ಸತ್ಯನಿಷೇಧಿಗಳಿಗೆ ಅನುಮಾನಪಡಬಹುದಾಗಿತ್ತು.(863)
863. ಪ್ರವಾದಿ(ಸ) ರವರು ಅನಕ್ಷರಸ್ತರಾಗಿದ್ದರು. ಅವರೆಂದೂ ಓದು-ಬರಹವನ್ನು ಕಲಿತವರಾಗಿರಲಿಲ್ಲ. ಈ ವಾಸ್ತವತೆಯು ಅವರ ನಿಕಟವರ್ತಿಗಳೆಲ್ಲರಿಗೂ ತಿಳಿದಿತ್ತು. ಅನಕ್ಷರಸ್ಥ ವ್ಯಕ್ತಿಯೊಬ್ಬರು ಅತ್ಯುನ್ನತ ಮಟ್ಟದಲ್ಲಿರುವ ಒಂದು ಗ್ರಂಥವನ್ನು ರಚಿಸುವುದು ಅಸಾಧ್ಯವೆಂಬುದು ಸಾಮಾನ್ಯ ಜ್ಞಾನವಿರುವ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದರೆ ಅವರಿಗೆ ಓದು-ಬರಹ ತಿಳಿದಿರುತ್ತಿದ್ದರೆ ಕುರ್‌ಆನ್ ಅವರ ಸ್ವಂತ ಕೃತಿಯಾಗಿದೆಯೆಂದು ಸಂದೇಹಪಡಲು ವಿರೋಧಿಗಳಿಗೆ ನ್ಯಾಯೋಚಿತ ಕಾರಣವಿರುತ್ತಿತ್ತು.

(49) ಆದರೆ ಜ್ಞಾನ ನೀಡಲಾದವರ ಹೃದಯಗಳಲ್ಲಿ ಅದು ಸುಸ್ಪಷ್ಟವಾದ ದೃಷ್ಟಾಂತಗಳಾಗಿವೆ. ನಮ್ಮ ದೃಷ್ಟಾಂತಗಳನ್ನು ಅಕ್ರಮಿಗಳ ಹೊರತು ಇನ್ನಾರೂ ನಿಷೇಧಿಸಲಾರರು.

(50) ಅವರು (ಸತ್ಯನಿಷೇಧಿಗಳು) ಹೇಳಿದರು: “ಇವರಿಗೆ ಇವರ ರಬ್‌ನಿಂದ ದೃಷ್ಟಾಂತಗಳೇಕೆ ಇಳಿಸಿಕೊಡಲಾಗುವುದಿಲ್ಲ?” ಹೇಳಿರಿ: “ದೃಷ್ಟಾಂತಗಳಿರುವುದು ಅಲ್ಲಾಹುವಿನ ಬಳಿ ಮಾತ್ರವಾಗಿವೆ. ನಾನು ಸ್ಪಷ್ಟವಾದ ಒಬ್ಬ ಮುನ್ನೆಚ್ಚರಿಕೆಗಾರನು ಮಾತ್ರವಾಗಿರುವೆನು”.

(51) ನಾವು ತಮಗೆ ಗ್ರಂಥವನ್ನು ಅವತೀರ್ಣಗೊಳಿಸಿರುವೆವು ಎಂಬುದೇ ಅವರಿಗೆ (ದೃಷ್ಟಾಂತವಾಗಿ) ಸಾಕಾಗುವುದಿಲ್ಲವೇ? ಅದನ್ನು ಅವರಿಗೆ ಓದಿಕೊಡಲಾಗುತ್ತಿದೆ. ವಿಶ್ವಾಸವಿಡುವ ಜನರಿಗೆ ಖಂಡಿತವಾಗಿಯೂ ಅದರಲ್ಲಿ ಅನುಗ್ರಹ ಮತ್ತು ಉಪದೇಶವಿದೆ.

(52) (ಓ ಪ್ರವಾದಿಯವರೇ!) ಹೇಳಿರಿ: “ನನ್ನ ಮತ್ತು ನಿಮ್ಮ ಮಧ್ಯೆ ಸಾಕ್ಷಿಯಾಗಿ ಅಲ್ಲಾಹು ಸಾಕು. ಭೂಮ್ಯಾಕಾಶಗಳಲ್ಲಿರುವುದನ್ನು ಅವನು ಅರಿಯುವನು. ಅಸತ್ಯದಲ್ಲಿ ವಿಶ್ವಾಸವಿಟ್ಟವರು ಮತ್ತು ಅಲ್ಲಾಹುವಿನಲ್ಲಿ ಅವಿಶ್ವಾಸವಿಟ್ಟವರು ಯಾರೋ ಅವರೇ ನಷ್ಟಹೊಂದಿದವರಾಗಿರುವರು”.

(53) ಅವರು ಶಿಕ್ಷೆಗಾಗಿ ತಮ್ಮಲ್ಲಿ ಆತುರಪಡುತ್ತಿರುವರು. ನಿಶ್ಚಿತವಾದ ಅವಧಿಯೊಂದು ಇಲ್ಲದಿರುತ್ತಿದ್ದರೆ ಶಿಕ್ಷೆಯು ಅವರ ಬಳಿಗೆ ಬಂದು ಬಿಡುತ್ತಿತ್ತು. ಖಂಡಿತವಾಗಿಯೂ ಅವರು ಗ್ರಹಿಸದಿರುವಾಗಲೇ ಹಠಾತ್ತನೆ ಅದು ಅವರ ಬಳಿಗೆ ಬಂದೇ ಬರುವುದು.

(54) ಶಿಕ್ಷೆಗಾಗಿ ಅವರು ತಮ್ಮಲ್ಲಿ ಆತುರಪಡುತ್ತಿರುವರು.(864) ಖಂಡಿತವಾಗಿಯೂ ನರಕಾಗ್ನಿಯು ಸತ್ಯನಿಷೇಧಿಗಳನ್ನು ಆವರಿಸಿಕೊಂಡಿದೆ.
864. ಪ್ರವಾದಿ(ಸ) ರವರು ಸತ್ಯನಿಷೇಧಿಗಳಿಗೆ ಎರಡು ವಿಧದ ಶಿಕ್ಷೆಯ ಬಗ್ಗೆ ಎಚ್ಚರಿಕೆ ನೀಡಿದ್ದರು. ಒಂದು: ಇಹಲೋಕದಲ್ಲೇ ಅವರು ಎದುರಿಸಬೇಕಾಗಿ ಬರುವ ಆಪತ್ತು, ಸೋಲು ಮತ್ತು ದುರವಸ್ಥೆ. ಎರಡು: ಶಾಶ್ವತವಾದ ನರಕ ಶಿಕ್ಷೆ. ಇವೆರಡಕ್ಕೂ ನಿಶ್ಚಿತ ಅವಧಿಯಿದೆ. ಬದ್ರ್‌ನಿಂದ ತೊಡಗಿ ಮಕ್ಕಾ ವಿಜಯದವರೆಗೆ ನಡೆದ ಘಟನಾವಳಿಗಳ ಮೂಲಕ ಅಲ್ಲಾಹು ಇಹಲೋಕದಲ್ಲಿ ತಮಗೆ ವಿಧಿಸಿದ್ದೇನೆಂದು ಸತ್ಯನಿಷೇಧಿಗಳು ಅರಿತುಕೊಂಡರು. ಪರಲೋಕ ಶಿಕ್ಷೆಯ ಅವಧಿ ತಲುಪುವಾಗ ಅವರು ಖಂಡಿತವಾಗಿಯೂ ಅದನ್ನು ಅನುಭವಿಸುವರು.

(55) ಅವರ ಮೇಲ್ಭಾಗದಿಂದಲೂ, ಅವರ ಕಾಲುಗಳ ಅಡಿಭಾಗದಿಂದಲೂ ಶಿಕ್ಷೆಯು ಅವರನ್ನು ಮುಚ್ಚಿಕೊಳ್ಳುವ ದಿನ! (ಅಂದು) ಅವನು (ಅಲ್ಲಾಹು) ಹೇಳುವನು: “ನೀವು ಮಾಡಿಕೊಂಡಿರುವುದರ ಫಲವನ್ನು ಆಸ್ವಾದಿಸಿರಿ”.

(56) ವಿಶ್ವಾಸಿಗಳಾಗಿರುವ ಓ ನನ್ನ ದಾಸರೇ! ಖಂಡಿತವಾಗಿಯೂ ನನ್ನ ಭೂಮಿಯು ವಿಶಾಲವಾಗಿದೆ. ಆದ್ದರಿಂದ ನೀವು ನನ್ನನ್ನು ಮಾತ್ರ ಆರಾಧಿಸಿರಿ.

(57) ಪ್ರತಿಯೊಂದು ಶರೀರವೂ ಮರಣದ ರುಚಿಯನ್ನು ಆಸ್ವಾದಿಸಲಿದೆ. ತರುವಾಯ ನಿಮ್ಮನ್ನು ನಮ್ಮ ಬಳಿಗೇ ಮರಳಿಸಲಾಗುವುದು.

(58) ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರಾರೋ ಅವರಿಗೆ ನಾವು ಸ್ವರ್ಗದಲ್ಲಿ, ತಳಭಾಗದಿಂದ ನದಿಗಳು ಹರಿಯುವ ಉನ್ನತ ಸೌಧಗಳಲ್ಲಿ ವಾಸಸ್ಥಳವನ್ನು ಮಾಡಿಕೊಡುವೆವು. ಅದರಲ್ಲಿ ಅವರು ಶಾಶ್ವತವಾಗಿ ವಾಸಿಸುವರು. ಸತ್ಕರ್ಮವೆಸಗುವವರಿಗಿರುವ ಪ್ರತಿಫಲವು ಎಷ್ಟು ಉತ್ತಮವಾದುದು!

(59) ಅವರು ತಾಳ್ಮೆ ವಹಿಸುವವರೂ ತಮ್ಮ ರಬ್‌ನ ಮೇಲೆ ಭರವಸೆಯನ್ನಿಡುವವರೂ ಆಗಿರುವರು.

(60) ಸ್ವಂತ ಅನ್ನಾಧಾರದ ಹೊಣೆಯನ್ನು ವಹಿಸಿಕೊಂಡಿರದ ಎಷ್ಟೊಂದು ಜೀವಿಗಳಿವೆ!(865) ಅವುಗಳಿಗೂ, ನಿಮಗೂ ಅನ್ನಾಧಾರವನ್ನು ಒದಗಿಸುವವನು ಅಲ್ಲಾಹುವಾಗಿರುವನು. ಅವನು ಎಲ್ಲವನ್ನು ಆಲಿಸುವವನೂ, ಅರಿಯುವವನೂ ಆಗಿರುವನು.
865. ಕಠಿಣ ಪರಿಶ್ರಮಗೈದು ಅನ್ನಾಧಾರವನ್ನು ಗಳಿಸಲು ಸಾಧ್ಯವಾಗದ ಮತ್ತು ಶತ್ರುವನ್ನು ಎದುರಿಸಿ ಸೋಲಿಸಲು ಸಾಧ್ಯವಾಗದ ಎಷ್ಟೋ ಜೀವರಾಶಿಗಳಿಗೆ ಅಲ್ಲಾಹು ಅನ್ನಾಧಾರವನ್ನು ಮತ್ತು ಸಂರಕ್ಷಣೆಯನ್ನು ಒದಗಿಸುತ್ತಿರುವನು.

(61) “ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು ಮತ್ತು ಸೂರ್ಯ-ಚಂದ್ರರನ್ನು ಅಧೀನಪಡಿಸಿದವನು ಯಾರು?” ಎಂದು ತಾವು ಅವರೊಂದಿಗೆ (ಬಹು ದೇವಾರಾಧಕರೊಂದಿಗೆ) ಪ್ರಶ್ನಿಸಿದರೆ ಅವರು ಖಂಡಿತವಾಗಿಯೂ “ಅಲ್ಲಾಹು” ಎನ್ನುವರು. ಹಾಗಾದರೆ ಅವರು (ಸತ್ಯದಿಂದ) ತಪ್ಪಿಸಲ್ಪಡುತ್ತಿರುವುದಾದರೂ ಹೇಗೆ?

(62) ಅಲ್ಲಾಹು ತನ್ನ ದಾಸರ ಪೈಕಿ ತಾನಿಚ್ಛಿಸುವವರಿಗೆ ಅನ್ನಾಧಾರವನ್ನು ವಿಶಾಲಗೊಳಿಸುವನು ಮತ್ತು ತಾನಿಚ್ಛಿ ಸುವವರಿಗೆ ಅದನ್ನು ಸಂಕುಚಿತಗೊಳಿಸುವನು. ಖಂಡಿತವಾಗಿಯೂ ಅಲ್ಲಾಹು ಸಕಲ ವಿಷಯಗಳ ಬಗ್ಗೆ ಅರಿವುಳ್ಳವನಾಗಿರುವನು.

(63) “ಆಕಾಶದಿಂದ (ಮಳೆ)ನೀರನ್ನು ಸುರಿಸಿ ತನ್ಮೂಲಕ ನಿರ್ಜೀವವಾಗಿರುವ ಭೂಮಿಗೆ ಜೀವವನ್ನು ನೀಡಿದವನು ಯಾರು?” ಎಂದು ತಾವು ಅವರೊಂದಿಗೆ ಕೇಳಿದರೆ ಅವರು ಖಂಡಿತವಾಗಿಯೂ “ಅಲ್ಲಾಹು” ಎನ್ನುವರು. ಹೇಳಿರಿ: “ಅಲ್ಲಾಹುವಿಗೆ ಸ್ತುತಿ. ಆದರೆ ಅವರ ಪೈಕಿ ಹೆಚ್ಚಿನವರೂ ಆಲೋಚಿಸುವುದಿಲ್ಲ”.(866)
866. ಬಹುದೇವಾರಾಧಕರ ಪೈಕಿ ಹೆಚ್ಚಿನವರೂ ಎಲ್ಲ ಕಾಲಗಳಲ್ಲೂ ಸೃಷ್ಟಿಕರ್ತನು ಮತ್ತು ಪರಿಪಾಲಕನು ಏಕಮೇವ ರಬ್ ಆಗಿರುವನು ಎಂಬ ವಿಶ್ವಾಸವನ್ನು ಹೊಂದಿದವರಾಗಿದ್ದರು. ಆದರೂ ಈ ವಿಶ್ವಾಸದ ಬೇಡಿಕೆಗೆ ವಿರುದ್ಧವಾಗಿ ಅವರು ಯಾವುದೇ ಅರ್ಹತೆಯಿಲ್ಲದವರನ್ನು ಆರಾಧಿಸುತ್ತಲೂ, ಪ್ರಾರ್ಥಿಸುತ್ತಲೂ ಇರುವರು.

(64) ಈ ಐಹಿಕ ಜೀವನವು ಕೇವಲ ವಿನೋದ ಮತ್ತು ಮನೋರಂಜನೆಯ ಹೊರತು ಇನ್ನೇನೂ ಅಲ್ಲ. ಖಂಡಿತವಾಗಿಯೂ ಪರಲೋಕ ಜೀವನವೇ ನಿಜವಾದ ಜೀವನ. ಅವರು ಅರ್ಥಮಾಡಿಕೊಳ್ಳುತ್ತಿದ್ದರೆ!

(65) ಆದರೆ ಅವರು (ಬಹುದೇವಾರಾಧಕರು) ಹಡಗಿನಲ್ಲಿ ಏರಿದರೆ ಶರಣಾಗತಿಯನ್ನು ಅಲ್ಲಾಹುವಿಗೆ ನಿಷ್ಕಳಂಕಗೊಳಿಸಿ ಅವನೊಂದಿಗೆ ಪ್ರಾರ್ಥಿಸುವರು. ತರುವಾಯ ಅವನು ಅವರನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸಿದರೆ ಅಗೋ! ಅವರು (ಅವನೊಂದಿಗೆ) ಸಹಭಾಗಿತ್ವವನ್ನು ಮಾಡುವರು.

(66) ನಾವು ಅವರಿಗೆ ದಯಪಾಲಿಸಿರುವುದರಲ್ಲಿ ಅವರು ಕೃತಘ್ನತೆಯನ್ನು ತೋರಿದವರೂ, ಸುಖವನ್ನು ಅನುಭವಿಸುವವರೂ ಆಗಿಬಿಟ್ಟರು. ಆದರೆ ತರುವಾಯ ಅವರು ಅರ್ಥಮಾಡಿಕೊಳ್ಳುವರು.

(67) ನಾವು ನಿರ್ಭೀತವಾದ ಒಂದು ಪವಿತ್ರ ಸ್ಥಳವನ್ನು ನಿರ್ಮಿಸಿರುವೆವು ಎಂಬುದನ್ನು ಅವರು ನೋಡಿಲ್ಲವೇ?(867) ಅವರ ಸುತ್ತಮುತ್ತಲುಗಳಿಂದ ಜನರನ್ನು ಕಸಿಯಲಾಗುತ್ತಿದೆ. ಆದರೂ ಅವರು ಅಸತ್ಯದಲ್ಲಿ ವಿಶ್ವಾಸವಿಟ್ಟು ಅಲ್ಲಾಹುವಿನ ಅನುಗ್ರಹಕ್ಕೆ ಕೃತಘ್ನತೆ ತೋರುತ್ತಿರುವರೇ?
867. ಪವಿತ್ರ ಕಅ್‌ಬಾ ಮತ್ತು ಅದರ ಪರಿಸರವನ್ನು ಅಲ್ಲಾಹು ಪವಿತ್ರ ಸ್ಥಳವನ್ನಾಗಿ ಮಾಡಿರುವನು. ಅಲ್ಲಿ ಅಕ್ರಮ ಅಥವಾ ಆಕ್ರಮಣ ಮಾಡುವುದು ಮಹಾ ಅಪರಾಧವಾಗಿದೆ. ಬಹುದೇವಾರಾಧಕರು ಕೂಡ ಈ ಪಾವಿತ್ರ್ಯತೆಯನ್ನು ಅಂಗೀಕರಿಸಿದ್ದರು ಮತ್ತು ಹರಮ್‍ಗೆ ಮತ್ತು ಹರಮ್‍ನಲ್ಲಿರುವವರಿಗೆ ಪೂರ್ಣ ಸುರಕ್ಷಿತತೆಯ ಖಾತ್ರಿಯನ್ನು ನೀಡಿದ್ದರು.

(68) ಅಲ್ಲಾಹುವಿನ ಮೇಲೆ ಸುಳ್ಳನ್ನು ಹೆಣೆದವನಿಗಿಂತ ಮತ್ತು ಸತ್ಯವು ಬಂದಾಗ ಅದನ್ನು ನಿಷೇಧಿಸಿದವನಿಗಿಂತ ದೊಡ್ಡ ಅಕ್ರಮಿ ಇನ್ನಾರಿರುವನು? ಸತ್ಯನಿಷೇಧಿಗಳಿಗೆ ನರಕಾಗ್ನಿಯಲ್ಲಿ ವಾಸಸ್ಥಳವಿರಲಾರದೇ?(868)
868. ಸತ್ಯನಿಷೇಧಿಗಳ ವಾಸಸ್ಥಳವು ನರಕದಲ್ಲಿಯಲ್ಲವೇ? ಎಂದು ಅರ್ಥೈಸಿಕೊಳ್ಳಬಹುದು.

(69) ನಮ್ಮ ಮಾರ್ಗದಲ್ಲಿ ಹೋರಾಟ ಮಾಡುವವರಾರೋ ಅವರನ್ನು ಖಂಡಿತವಾಗಿಯೂ ನಾವು ನಮ್ಮ ಮಾರ್ಗಗಳೆಡೆಗೆ ಮುನ್ನಡೆಸುವೆವು.(869) ಖಂಡಿತವಾಗಿಯೂ ಅಲ್ಲಾಹು ಸತ್ಕರ್ಮಿಗಳ ಜೊತೆಗಿರುವನು.
869. ಅವರು ಯಾವುದೇ ಕಾರ್ಯದಲ್ಲಿ ತೊಡಗಿದರೂ ಅಲ್ಲಾಹು ಇಷ್ಟಪಡುವ ಮಾರ್ಗದೆಡೆಗೆ ಅವನು ಅವರನ್ನು ಮುನ್ನಡೆಸುವನು ಎಂದರ್ಥ.