30 - Ar-Room ()

|

(1) ಅಲಿಫ್-ಲಾಮ್-ಮೀಮ್.

(2) ರೋಮನ್ನರು ಸೋಲಿಸಲ್ಪಟ್ಟಿರುವರು.(870)
870. ಪ್ರವಾದಿ(ಸ) ರವರ ಕಾಲದಲ್ಲಿ ಮತ್ತು ಅದಕ್ಕಿಂತ ಸ್ವಲ್ಪ ಮುಂಚೆ ಅರೇಬಿಯನ್ ಉಪದ್ವೀಪದ ಕೆಲವು ಪ್ರದೇಶಗಳಲ್ಲಿ ಸಾಮ್ರಾಜ್ಯವನ್ನು ಸ್ಥಾಪಿಸುವುದಕ್ಕೋಸ್ಕರ ಪರ್ಶಿಯನ್ ಮತ್ತು ರೋಮನ್ ಚಕ್ರವರ್ತಿಗಳ ಮಧ್ಯೆ ಯುದ್ಧ ನಡೆಯುತ್ತಿತ್ತು. ಗ್ರಂಥ ನೀಡಲಾದವರು ಎಂಬ ಪರಿಗಣನೆಯೊಂದಿಗೆ ಕ್ರೈಸ್ತರಾದ ರೋಮನ್ನರೊಂದಿಗೆ ಮುಸ್ಲಿಮರಿಗೆ ಒಲವಿತ್ತು. ಬಹುದೇವಾರಾಧಕರಾದ ಅರಬರಿಗೆ ಪರ್ಶಿಯನ್ನರೊಂದಿಗೆ ಒಲವಿತ್ತು. ಹಿಜ್ರಾ 5ನೇ ವರ್ಷದಲ್ಲಿ ಪರ್ಶಿಯನ್ನರು ರೋಮನ್ ಸೈನ್ಯವನ್ನು ಸೋಲಿಸಿದಾಗ ಬಹುದೇವಾರಾಧಕರು ಹಿಗ್ಗಿದರು. ಈ ಘಟನೆಯನ್ನು ಮುಂದಿಟ್ಟು ಮುಸ್ಲಿಮರನ್ನು ಗೇಲಿಮಾಡತೊಡಗಿದರು. ಆ ಸಂದರ್ಭದಲ್ಲಿ ಈ ಸೂಕ್ತಿಗಳು ಅವತೀರ್ಣಗೊಂಡವು. ರೋಮನ್ನರ ಸೋಲು ತಾತ್ಕಾಲಿಕವಾಗಿದೆ ಮತ್ತು ಕೆಲವೇ ವರ್ಷಗಳೊಳಗೆ ಅವರು ಮರಳಿ ಗೆಲ್ಲುವರು ಎಂದು ಅಲ್ಲಾಹು ಘೋಷಿಸಿದನು. ಏಳು ವರ್ಷಗಳ ಬಳಿಕ ಕುರ್‌ಆನ್‍ನ ಭವಿಷ್ಯನುಡಿಯು ಸತ್ಯವಾಯಿತು. ರೋಮನ್ನರು ಯುದ್ಧವನ್ನು ಜಯಿಸಿದ್ದು ಮಾತ್ರವಲ್ಲದೆ ಪರ್ಶಿಯನ್ನರ ಸ್ವಾಧೀನದಲ್ಲಿದ್ದ ಅನೇಕ ಪ್ರದೇಶಗಳಲ್ಲಿ ಅವರು ಆಳ್ವಿಕೆಯನ್ನೂ ಪಡೆದರು.

(3) ಸಮೀಪದ ಪ್ರದೇಶದಲ್ಲಿ. ತಮ್ಮ ಸೋಲಿನ ಬಳಿಕ ಅವರು ಗೆಲುವನ್ನು ಪಡೆಯುವರು.

(4) ಕೆಲವೇ ವರ್ಷಗಳಲ್ಲಿ. ಮುಂದಿನ ಮತ್ತು ಹಿಂದಿನ ಸಂಗತಿಗಳ ನಿಯಂತ್ರಣವು ಅಲ್ಲಾಹುವಿನದ್ದಾಗಿವೆ. ಅಂದು ಸತ್ಯವಿಶ್ವಾಸಿಗಳು ಸಂಭ್ರಮಪಡುವರು.

(5) ಅಲ್ಲಾಹುವಿನ ಸಹಾಯದಿಂದಾಗಿ. ಅಲ್ಲಾಹು ಅವನಿಚ್ಛಿಸುವವರಿಗೆ ಸಹಾಯ ಮಾಡುವನು. ಅವನು ಪ್ರತಾಪಶಾಲಿಯೂ, ಕರುಣಾನಿಧಿಯೂ ಆಗಿರುವನು.

(6) ಇದು ಅಲ್ಲಾಹುವಿನ ವಾಗ್ದಾನವಾಗಿದೆ. ಅಲ್ಲಾಹು ಅವನ ವಾಗ್ದಾನವನ್ನು ಉಲ್ಲಂಘಿಸಲಾರನು. ಆದರೆ ಜನರ ಪೈಕಿ ಹೆಚ್ಚಿನವರೂ ಅರ್ಥಮಾಡಿಕೊಳ್ಳುವುದಿಲ್ಲ.

(7) ಇಹಲೋಕ ಜೀವನದ ಪೈಕಿ ಪ್ರತ್ಯಕ್ಷವಾಗಿರುವುದನ್ನು ಅವರು ಅರಿಯುವರು. ಆದರೆ ಪರಲೋಕದ ಬಗ್ಗೆ ಅವರು ಅಲಕ್ಷ್ಯತೆಯಲ್ಲೇ ಇರುವರು.

(8) ಅವರು ಸ್ವತಃ ಅವರ ಬಗ್ಗೆ ಚಿಂತಿಸಿ ನೋಡುವುದಿಲ್ಲವೇ? ಆಕಾಶಗಳನ್ನು ಮತ್ತು ಭೂಮಿಯನ್ನು ಹಾಗೂ ಅವುಗಳ ಮಧ್ಯೆಯಿರುವುದನ್ನು ಅಲ್ಲಾಹು ಸತ್ಯದೊಂದಿಗೆ ಮತ್ತು ನಿಶ್ಚಿತ ಅವಧಿಯೊಂದಿಗೆ ಹೊರತು ಸೃಷ್ಟಿಸಿಲ್ಲ. ಖಂಡಿತವಾಗಿಯೂ ಜನರ ಪೈಕಿ ಹೆಚ್ಚಿನವರೂ ತಮ್ಮ ರಬ್‌ನೊಂದಿಗಿರುವ ಭೇಟಿಯ ಬಗ್ಗೆ ವಿಶ್ವಾಸವಿಲ್ಲದವರಾಗಿರುವರು.

(9) ಅವರು ಭೂಮಿಯಲ್ಲಿ ಸಂಚರಿಸಿ, ತಮಗಿಂತ ಮುಂಚಿನವರ ಪರ್ಯಾವಸಾನವು ಹೇಗಿತ್ತೆಂಬುದನ್ನು ನೋಡುವುದಿಲ್ಲವೇ? ಅವರು ಇವರಿಗಿಂತಲೂ ಹೆಚ್ಚು ಬಲಶಾಲಿಗಳಾಗಿದ್ದರು. ಅವರು ಭೂಮಿಯನ್ನು ಉತ್ತು ಬೇಸಾಯ ಮಾಡಿದರು. ಇವರು ವಸಾಹತು ಸ್ಥಾಪಿಸಿದ್ದಕ್ಕಿಂತಲೂ ಹೆಚ್ಚಾಗಿ ಅವರು ಅದರಲ್ಲಿ ವಸಾಹತು ಸ್ಥಾಪಿಸಿದ್ದರು. ನಮ್ಮ ಸಂದೇಶವಾಹಕರು ಸ್ಪಷ್ಟವಾದ ಪುರಾವೆಗಳೊಂದಿಗೆ ಅವರ ಬಳಿಗೆ ಬಂದರು. ಅಲ್ಲಾಹು ಅವರೊಂದಿಗೆ ಅನ್ಯಾಯವೆಸಗಿರಲಿಲ್ಲ. ಆದರೆ ಅವರು ಸ್ವತಃ ಅವರೊಂದಿಗೇ ಅನ್ಯಾಯವೆಸಗಿದರು.

(10) ತರುವಾಯ, ದುಷ್ಕೃತ್ಯವೆಸಗಿದವರ ಅಂತ್ಯವು ಅತ್ಯಂತ ಹೀನವಾಗಿತ್ತು. ಅದು ಅವರು ಅಲ್ಲಾಹುವಿನ ದೃಷ್ಟಾಂತಗಳನ್ನು ನಿಷೇಧಿಸಿರುವುದರ ಮತ್ತು ಅವುಗಳ ಬಗ್ಗೆ ಅವರು ಅಪಹಾಸ್ಯ ಮಾಡಿರುವುದರ ಫಲವಾಗಿತ್ತು.

(11) ಅಲ್ಲಾಹು ಸೃಷ್ಟಿಯನ್ನು ಆರಂಭಿಸುವನು. ತರುವಾಯ ಅದನ್ನು ಪುನರಾವರ್ತಿಸುವನು. ತರುವಾಯ ನಿಮ್ಮನ್ನು ಅವನೆಡೆಗೆ ಮರಳಿಸಲಾಗುವುದು.

(12) ಅಂತ್ಯಘಳಿಗೆಯು ಸಂಭವಿಸುವ ದಿನದಂದು ಅಪರಾಧಿಗಳು ಹತಾಶರಾಗುವರು.

(13) ಅವರು ಸಹಭಾಗಿಗಳನ್ನಾಗಿ ಮಾಡಿಕೊಂಡವರ ಪೈಕಿ ಅವರಿಗೆ ಶಿಫಾರಸು ಮಾಡುವವರಾಗಿ ಯಾರೂ ಇರಲಾರರು. ಅವರ ಆ ಸಹಭಾಗಿಗಳನ್ನೇ ಅವರು ನಿಷೇಧಿಸುವವರಾಗುವರು.

(14) ಅಂತ್ಯಘಳಿಗೆಯು ಸಂಭವಿಸುವ ದಿನ! ಅಂದು ಅವರು (ಪರಸ್ಪರ) ಬೇರ್ಪಡುವರು.

(15) ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರು ಒಂದು ಉದ್ಯಾನವನದಲ್ಲಿ ಆನಂದ ಪಡುತ್ತಿರುವರು.

(16) ಆದರೆ ಅವಿಶ್ವಾಸವಿಟ್ಟವರು ಮತ್ತು ನಮ್ಮ ದೃಷ್ಟಾಂತಗಳನ್ನು ಹಾಗೂ ಪರಲೋಕದ ಭೇಟಿಯನ್ನು ನಿಷೇಧಿಸಿದವರು ಯಾರೋ ಅವರನ್ನು ಶಿಕ್ಷೆಗಾಗಿ ಹಾಜರುಪಡಿಸಲಾಗುವುದು.

(17) ಆದುದರಿಂದ ನೀವು ಸಂಜೆಯಾಗುವಾಗ ಮತ್ತು ಪ್ರಭಾತವಾಗುವಾಗ ಅಲ್ಲಾಹುವಿನ ಪರಿಪಾವನತೆಯನ್ನು ಕೊಂಡಾಡಿರಿ.

(18) ಭೂಮ್ಯಾಕಾಶಗಳಲ್ಲಿ ಸ್ತುತಿಯು ಅವನಿಗಾಗಿದೆ. ಸಂಜೆ ಹಾಗೂ ಮಧ್ಯಾಹ್ನಾನಂತರವೂ (ನೀವು ಅವನನ್ನು ಕೊಂಡಾಡಿರಿ).(871)
871. ಹಗಲು ರಾತ್ರಿಗಳ ನಿಶ್ಚಿತ ಸಮಯಗಳಲ್ಲಿ ಅಲ್ಲಾಹುವಿನ ಸ್ತುತಿಸ್ತೋತೃಗಳನ್ನು ಒಳಗೊಂಡಿರುವ ನಮಾಝ್ ನಿರ್ವಹಿಸಲು ಪ್ರಸ್ತುತ 17-18 ಸೂಕ್ತಿಗಳಲ್ಲಿ ಆದೇಶಿಸಲಾಗಿದೆ ಎಂದು ಹೆಚ್ಚಿನ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ. ಸೂರ್ಯಾಸ್ತದ ಬಳಿಕ ನಿರ್ವಹಿಸಲಾಗುವ ಮಗ್ರಿಬ್, ಇಶಾ ನಮಾಝ್‍ಗಳು, ಪ್ರಭಾತದ ವೇಳೆಯಲ್ಲಿ ಫಜ್ರ್ ನಮಾಝ್, ಮಧ್ಯಾಹ್ನಾನಂತರ ನಿರ್ವಹಿಸಲಾಗುವ ಝುಹ್ರ್ ಮತ್ತು ಅಸ್ರ್ ನಮಾಝ್‍ಗಳು.

(19) ಅವನು ನಿರ್ಜೀವಿಯಿಂದ ಜೀವಿಯನ್ನು ಹೊರತರುವನು ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತರುವನು. ಭೂಮಿಯು ನಿರ್ಜೀವವಾದ ಬಳಿಕ ಅದಕ್ಕೆ ಅವನು ಜೀವವನ್ನು ನೀಡುವನು. ಹೀಗೆಯೇ ನಿಮ್ಮನ್ನೂ ಹೊರತರಲಾಗುವುದು.

(20) ಅವನು ನಿಮ್ಮನ್ನು ಮಣ್ಣಿನಿಂದ ಸೃಷ್ಟಿಸಿದನು. ತರುವಾಯ ನೀವು (ಜಗತ್ತಿನಾದ್ಯಂತ) ವ್ಯಾಪಿಸುವ ಮಾನವಕುಲವಾಗಿ ಬಿಟ್ಟಿರಿ. ಇದು ಅವನ ದೃಷ್ಟಾಂತಗಳಲ್ಲಿ ಸೇರಿದ್ದಾಗಿದೆ.

(21) ನೀವು ಸಮಾಧಾನಪೂರ್ವಕ ಒಂದುಗೂಡುವುದಕ್ಕಾಗಿ ನಿಮ್ಮಿಂದಲೇ ನಿಮಗೆ ಜೋಡಿಗಳನ್ನು ಸೃಷ್ಟಿಸಿರುವುದು ಮತ್ತು ನಿಮ್ಮ ಮಧ್ಯೆ ಪ್ರೇಮವನ್ನೂ, ಕರುಣೆಯನ್ನೂ ಹಾಕಿಕೊಟ್ಟಿರುವುದು ಅವನ ದೃಷ್ಟಾಂತಗಳಲ್ಲಿ ಸೇರಿದ್ದಾಗಿದೆ. ಖಂಡಿತವಾಗಿಯೂ ಅದರಲ್ಲಿ ಚಿಂತಿಸುವ ಜನರಿಗೆ ದೃಷ್ಟಾಂತಗಳಿವೆ.

(22) ಭೂಮ್ಯಾಕಾಶಗಳ ಸೃಷ್ಟಿಯೂ, ನಿಮ್ಮ ಭಾಷೆಗಳಲ್ಲಿ ಮತ್ತು ವರ್ಣಗಳಲ್ಲಿರುವ ವ್ಯತ್ಯಾಸವೂ ಅವನ ದೃಷ್ಟಾಂತಗಳಲ್ಲಿ ಸೇರಿದ್ದಾಗಿದೆ. ಖಂಡಿತವಾಗಿಯೂ ಅದರಲ್ಲಿ ಅರಿವುಳ್ಳ ಜನರಿಗೆ ದೃಷ್ಟಾಂತಗಳಿವೆ.

(23) ರಾತ್ರಿಯಲ್ಲೂ ಹಗಲಲ್ಲೂ ನೀವು ನಿದ್ರಿಸುವುದು ಹಾಗೂ ಅವನ ಅನುಗ್ರಹದಿಂದ ನೀವು ಅನ್ನಾಧಾರವನ್ನು ಅರಸುವುದು ಅವನ ದೃಷ್ಟಾಂತಗಳಲ್ಲಿ ಸೇರಿದ್ದಾಗಿದೆ. ಅದರಲ್ಲಿ ಆಲಿಸಿ ಅರ್ಥಮಾಡಿಕೊಳ್ಳುವ ಜನರಿಗೆ ಖಂಡಿತ ದೃಷ್ಟಾಂತಗಳಿವೆ.

(24) ಭಯವನ್ನು ಮತ್ತು ನಿರೀಕ್ಷೆಯನ್ನು ಹುಟ್ಟಿಸುತ್ತಾ ನಿಮಗೆ ಮಿಂಚನ್ನು ತೋರಿಸಿಕೊಡುವುದು ಹಾಗೂ ಆಕಾಶದಿಂದ ಮಳೆಯನ್ನು ಸುರಿಸಿ ತನ್ಮೂಲಕ ಭೂಮಿಗೆ ಅದು ನಿರ್ಜೀವವಾದ ಬಳಿಕ ಜೀವವನ್ನು ನೀಡುವುದು ಅವನ ದೃಷ್ಟಾಂತಗಳಲ್ಲಿ ಸೇರಿದ್ದಾಗಿದೆ. ಖಂಡಿತವಾಗಿಯೂ ಆಲೋಚಿಸುವ ಜನರಿಗೆ ಅದರಲ್ಲಿ ದೃಷ್ಟಾಂತಗಳಿವೆ.

(25) ಆಕಾಶ ಮತ್ತು ಭೂಮಿಯು ಅವನ ಆಜ್ಞೆ ಪ್ರಕಾರ ಅಸ್ತಿತ್ವದಲ್ಲಿರುವುದು ಅವನ ದೃಷ್ಟಾಂತಗಳಲ್ಲಿ ಸೇರಿದ್ದಾಗಿದೆ. ತರುವಾಯ ಅವನು ಭೂಮಿಯಿಂದ ನಿಮ್ಮನ್ನು ಒಂದೇ ಒಂದು ಕರೆಯನ್ನು ಕರೆದರೆ, ಅಗೋ! ನೀವು ಹೊರಬದ್ದೀರಿ.

(26) ಭೂಮ್ಯಾಕಾಶಗಳಲ್ಲಿರುವ ಎಲ್ಲರೂ ಅವನ ಅಧೀನದಲ್ಲಿರುವರು. ಎಲ್ಲರೂ ಅವನಿಗೆ ಶರಣಾಗತರಾಗಿರುವರು.

(27) ಸೃಷ್ಟಿಯನ್ನು ಆರಂಭಿಸುವವನು ಅವನಾಗಿರುವನು. ತರುವಾಯ ಅವನು ಅದನ್ನು ಪುನರಾವರ್ತಿಸುವನು. ಅದು ಅವನ ಮಟ್ಟಿಗೆ ಅತ್ಯಂತ ಸುಲಭವಾಗಿದೆ. ಭೂಮ್ಯಾಕಾಶಗಳಲ್ಲಿ ಉನ್ನತವಾದ ಅವಸ್ಥೆಯಿರುವುದು ಅವನಿಗಾಗಿದೆ. ಅವನು ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿರುವನು.

(28) ಅಲ್ಲಾಹು ನಿಮ್ಮಿಂದಲೇ ನಿಮಗೊಂದು ಉಪಮೆಯನ್ನು ನೀಡುವನು. ನಿಮ್ಮ ಬಲಗೈಗಳು ಅಧೀನ ಪಡಿಸಿರುವ ಗುಲಾಮರಲ್ಲಿ ಯಾರಾದರೂ ನಾವು ನಿಮಗೆ ನೀಡಿದ ಸಂಪತ್ತುಗಳಲ್ಲಿ ನಿಮ್ಮ ಸಹಭಾಗಿಗಳಾಗುವರೇ? ತರುವಾಯ ನೀವು ಪರಸ್ಪರ ಭಯಪಡುವಂತೆ ಅವರನ್ನೂ (ಗುಲಾಮರನ್ನೂ) ನೀವು ಭಯಪಡುವ ರೀತಿಯಲ್ಲಿ ನೀವು ಎರಡೂ ಗುಂಪುಗಳು ಅದರಲ್ಲಿ ಸಮಾನ ಹಕ್ಕುದಾರರಾಗುವರೇ? ಚಿಂತಿಸುವ ಜನರಿಗಾಗಿ ನಾವು ಹೀಗೆ ದೃಷ್ಟಾಂತಗಳನ್ನು ವಿವರಿಸಿಕೊಡುವೆವು.

(29) ಆದರೆ ಅಕ್ರಮವೆಸಗಿದವರು ಯಾವುದೇ ಜ್ಞಾನವೂ ಇಲ್ಲದೆ ತಮ್ಮ ದೇಹೇಚ್ಛೆಗಳನ್ನು ಅನುಸರಿಸಿರುವರು. ಹೀಗಿರುವಾಗ ಅಲ್ಲಾಹು ಪಥಭ್ರಷ್ಟಗೊಳಿಸಿದವರನ್ನು ಸನ್ಮಾರ್ಗದಲ್ಲಿ ಸೇರಿಸುವವರು ಯಾರಿರುವರು? ಅವರಿಗೆ ಸಹಾಯಕರಾಗಿ ಯಾರೂ ಇರಲಾರರು.

(30) ಆದುದರಿಂದ (ಸತ್ಯದಲ್ಲಿ) ನೇರವಾಗಿ ನೆಲೆಗೊಂಡು ತಾವು ತಮ್ಮ ಮುಖವನ್ನು ಧರ್ಮದೆಡೆಗೆ ತಿರುಗಿಸಿರಿ. ಅದು ಅಲ್ಲಾಹು ಮನುಷ್ಯರನ್ನು ಯಾವ ಪ್ರಕೃತಿಯಲ್ಲಿ ಸೃಷ್ಟಿಸಿದನೋ ಆ ಪ್ರಕೃತಿಯಾಗಿದೆ. ಅಲ್ಲಾಹುವಿನ ಸೃಷ್ಟಿ ನಿಯಮಕ್ಕೆ ಯಾವುದೇ ಬದಲಾವಣೆಯಿಲ್ಲ. ಅದೇ ನೇರವಾದ ಧರ್ಮ. ಆದರೆ ಮನುಷ್ಯರ ಪೈಕಿ ಹೆಚ್ಚಿನವರೂ ಅರಿತುಕೊಳ್ಳಲಾರರು.

(31) (ನೀವು) ಅವನೆಡೆಗೆ ತಿರುಗಿದವರಾಗಿರುತ್ತಾ, ಅವನನ್ನು ಭಯಪಡುತ್ತಿರಿ ಮತ್ತು ನಮಾಝ್ ಸಂಸ್ಥಾಪಿಸುತ್ತಿರಿ. ನೀವು ಬಹುದೇವಾರಾಧಕರಲ್ಲಿ ಸೇರಿದವರಾಗದಿರಿ.

(32) (ಅಂದರೆ) ತಮ್ಮ ಧರ್ಮವನ್ನು ಒಡೆದು ಹಲವು ಪಂಗಡಗಳಾಗಿ ಹೋದವರಲ್ಲಿ (ಸೇರಿದವರಾಗದಿರಿ). ಪ್ರತಿಯೊಂದು ಪಂಗಡವೂ ತಮ್ಮ ವಶವಿರುವುದರಲ್ಲಿ ಹರ್ಷಿತರಾಗಿರುವರು.

(33) ಜನರಿಗೆ ಯಾವುದಾದರೂ ಹಾನಿಯು ಬಾಧಿಸಿದರೆ ಅವರು ತಮ್ಮ ರಬ್‌ನೆಡೆಗೆ ತಿರುಗಿ ಅವನಲ್ಲಿ ಪ್ರಾರ್ಥಿಸುವರು. ತರುವಾಯ ಅವನು ತನ್ನ ಕಡೆಯ ಕಾರುಣ್ಯದ ರುಚಿಯನ್ನು ಅವರಿಗೆ ನೀಡಿದರೆ ಅವರಲ್ಲೊಂದು ಗುಂಪು ತಮ್ಮ ರಬ್‌ನೊಂದಿಗೆ ಸಹಭಾಗಿತ್ವವನ್ನು ಮಾಡುವರು.

(34) ನಾವು ಅವರಿಗೆ ದಯಪಾಲಿಸಿರುವುದರಲ್ಲಿ ಅವರು ಕೃತಘ್ನತೆಯನ್ನು ತೋರುತ್ತಿರುವರು. ಆದುದರಿಂದ ನೀವು ಸುಖವನ್ನು ಅನುಭವಿಸಿರಿ. ತರುವಾಯ ನೀವು ಅರ್ಥಮಾಡಿಕೊಳ್ಳುವಿರಿ.

(35) ಅಥವಾ, ಅವರು (ಅಲ್ಲಾಹುವಿನೊಂದಿಗೆ) ಸಹಭಾಗಿತ್ವ ಮಾಡುತ್ತಿರುವುದಕ್ಕೆ ಪೂರಕವಾಗಿ ಅವರೊಂದಿಗೆ ಮಾತನಾಡುವ ಯಾವುದಾದರೂ ಆಧಾರ ಪ್ರಮಾಣವನ್ನು ನಾವು ಅವರಿಗೆ ಇಳಿಸಿಕೊಟ್ಟಿರುವೆವೇ?

(36) ನಾವು ಜನರಿಗೆ ಕಾರುಣ್ಯದ ರುಚಿಯನ್ನು ನೀಡಿದರೆ ಅವರು ಅದರಲ್ಲಿ ಸಂಭ್ರಮಪಡುವರು. ಅವರ ಕೈಗಳು ಈಗಾಗಲೇ ಮಾಡಿಟ್ಟಿರುವುದರ ಫಲವಾಗಿ ಅವರಿಗೆ ಕೇಡು ಬಾಧಿಸಿದರೆ ಅಗೋ! ಅವರು ಹತಾಶರಾಗುವರು.

(37) ಅಲ್ಲಾಹು ಅವನಿಚ್ಛಿಸುವವರಿಗೆ ಅನ್ನಾಧಾರವನ್ನು ವಿಶಾಲಗೊಳಿಸುವನು ಮತ್ತು (ಅವನಿಚ್ಛಿಸುವವರಿಗೆ) ಸಂಕುಚಿತಗೊಳಿಸುವನು ಎಂಬುದನ್ನು ಅವರು ಕಂಡಿಲ್ಲವೇ? ಖಂಡಿತವಾಗಿಯೂ ವಿಶ್ವಾಸವಿಡುವ ಜನರಿಗೆ ಅದರಲ್ಲಿ ದೃಷ್ಟಾಂತಗಳಿವೆ.

(38) ಆದುದರಿಂದ ತಾವು ಕುಟುಂಬ ಸಂಬಂಧಿಗೆ ಅವನ ಹಕ್ಕನ್ನು ನೀಡಿರಿ. ನಿರ್ಗತಿಕನಿಗೂ, ದಾರಿಹೋಕನಿಗೂ (ಅವರ ಹಕ್ಕನ್ನು ನೀಡಿರಿ). ಅಲ್ಲಾಹುವಿನ ಸಂತೃಪ್ತಿಯನ್ನು ಬಯಸುವವರಿಗೆ ಅದು ಉತ್ತಮವಾಗಿದೆ. ಯಶಸ್ವಿಯಾದವರು ಅವರೇ ಆಗಿರುವರು.

(39) ಜನರ ಸಂಪತ್ತುಗಳಿಂದ ಬೆಳವಣಿಗೆ ಹೊಂದಲು ನೀವು ಏನನ್ನಾದರೂ ಬಡ್ಡಿಗೆ(872) ನೀಡುವುದಾದರೆ ಅದು ಅಲ್ಲಾಹುವಿನ ಬಳಿ ಬೆಳವಣಿಗೆ ಹೊಂದಲಾರದು. ಆದರೆ ಅಲ್ಲಾಹುವಿನ ಸಂತೃಪ್ತಿಯನ್ನು ಉದ್ದೇಶಿಸಿ ನೀವು ಏನನ್ನಾದರೂ ಝಕಾತ್ ಆಗಿ ನೀಡುವುದಾದರೆ ಇಮ್ಮಡಿ ಸಂಪಾದಿಸುವವರು ಅವರೇ ಆಗಿರುವರು.
872. ‘ರಿಬಾ’ ಎಂದರೆ ವರ್ಧನೆ ಎಂದರ್ಥ. ಕೊಟ್ಟದ್ದಕ್ಕಿಂತ ಹೆಚ್ಚು ಸಿಗಬೇಕೆಂಬ ಉದ್ದೇಶದೊಂದಿಗೆ ನೀಡುವ ಸಾಲ, ದಾನ ಅಥವಾ ಉಡುಗೊರೆಗಳೆಲ್ಲವೂ ‘ರಿಬಾ’ ಎಂಬ ಪದದ ವ್ಯಾಪ್ತಿಯಲ್ಲಿ ಸೇರುತ್ತದೆಯೆಂದು ಅನೇಕ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ.

(40) ನಿಮ್ಮನ್ನು ಸೃಷ್ಟಿಸಿದವನು ಅಲ್ಲಾಹುವಾಗಿರುವನು. ತರುವಾಯ ಅವನು ನಿಮಗೆ ಅನ್ನಾಧಾರವನ್ನು ಒದಗಿಸಿದನು. ತರುವಾಯ ಅವನು ನಿಮ್ಮನ್ನು ಮೃತಪಡಿಸುವನು. ತರುವಾಯ ಅವನು ನಿಮಗೆ ಜೀವವನ್ನು ನೀಡುವನು. ಇವುಗಳ ಪೈಕಿ ಯಾವುದಾದರೂ ಒಂದನ್ನು ಮಾಡುವವರು ನಿಮ್ಮ ಸಹಭಾಗಿಗಳ ಪೈಕಿ ಯಾರಾದರೂ ಇರುವರೇ? ಅವನು ಪರಮಪಾವನನು. ಅವರು ಸಹಭಾಗಿತ್ವ ಮಾಡುವುದರಿಂದೆಲ್ಲ ಅವನು ಅತೀತನಾಗಿರುವನು.

(41) ಜನರ ಕೈಗಳು ಮಾಡಿರುವ ಕೃತ್ಯದ ನಿಮಿತ್ತ ನೆಲದಲ್ಲೂ, ಕಡಲಲ್ಲೂ ಕ್ಷೋಭೆಯು ಪ್ರತ್ಯಕ್ಷವಾಗಿದೆ. ಅದು ಅವರು ಮಾಡಿರುವುದರ ಪೈಕಿ ಕೆಲವೊಂದರ ಫಲವನ್ನು ಅವರು ಆಸ್ವಾದಿಸುವಂತೆ ಮಾಡುವ ಸಲುವಾಗಿದೆ. ಅವರೊಂದು ವೇಳೆ ಮರಳಲೂಬಹುದು.

(42) (ಓ ಪ್ರವಾದಿಯವರೇ!) ಹೇಳಿರಿ: “ನೀವು ಭೂಮಿಯಲ್ಲಿ ಸಂಚರಿಸಿ ಮುಂಚೆ ಗತಿಸಿದವರ ಅಂತ್ಯವು ಹೇಗಿತ್ತೆಂಬುದನ್ನು ನೋಡಿರಿ. ಅವರಲ್ಲಿ ಹೆಚ್ಚಿನವರೂ ಬಹುದೇವಾರಾಧಕರಾಗಿದ್ದರು”.

(43) ಆದುದರಿಂದ ಯಾರಿಗೂ ತಡೆಯಲು ಸಾಧ್ಯವಾಗದ ಒಂದು ದಿನವು ಅಲ್ಲಾಹುವಿನ ಕಡೆಯಿಂದ ಬರುವ ಮುನ್ನ ತಾವು ತಮ್ಮ ಮುಖವನ್ನು ನೇರವಾದ ಧರ್ಮದೆಡೆಗೆ ತಿರುಗಿಸಿರಿ. ಅಂದು ಜನರು (ಎರಡು ವಿಭಾಗಗಳಾಗಿ) ಬೇರ್ಪಡುವರು.

(44) ಯಾರಾದರೂ ಕೃತಘ್ನತೆ ತೋರಿದರೆ ಅವನ ಕೃತಘ್ನತೆಯ ಕೆಡುಕು ಅವನಿಗೇ ಆಗಿದೆ. ಯಾರಾದರೂ ಸತ್ಕರ್ಮವೆಸಗಿದರೆ ಅವರು ಸ್ವತಃ ಅವರಿಗೇ ಸೌಕರ್ಯವನ್ನು ಸಿದ್ಧಗೊಳಿಸುತ್ತಿರುವರು.

(45) ವಿಶ್ವಾಸವಿಟ್ಟವರಿಗೆ ಮತ್ತು ಸತ್ಕರ್ಮವೆಸಗಿದವರಿಗೆ ಅಲ್ಲಾಹು ತನ್ನ ಅನುಗ್ರಹದಿಂದ ಪ್ರತಿಫಲವನ್ನು ನೀಡುವ ಸಲುವಾಗಿ. ಸತ್ಯನಿಷೇಧಿಗಳನ್ನು ಅವನು ಮೆಚ್ಚಲಾರನು.

(46) ಅವನು (ಮಳೆಯ ಬಗ್ಗೆ) ಶುಭವಾರ್ತೆಯಾಗಿ, ತನ್ನ ಕಾರುಣ್ಯದ ರುಚಿಯನ್ನು ನಿಮಗೆ ನೀಡುವುದಕ್ಕಾಗಿ, ತನ್ನ ಆಜ್ಞೆ ಪ್ರಕಾರ ಹಡಗು ಸಂಚರಿಸುವುದಕ್ಕಾಗಿ, ಅವನ ಅನುಗ್ರಹದಿಂದ ನೀವು ಅನ್ನಾಧಾರವನ್ನು ಅರಸುವುದಕ್ಕಾಗಿ ಹಾಗೂ ನೀವು ಕೃತಜ್ಞತೆ ಸಲ್ಲಿಸುವುದಕ್ಕಾಗಿ ಮಾರುತಗಳನ್ನು ಕಳುಹಿಸುತ್ತಿರುವುದು ಅವನ ದೃಷ್ಟಾಂತಗಳಲ್ಲಿ ಸೇರಿದ್ದಾಗಿದೆ.

(47) ನಾವು ತಮಗಿಂತ ಮುಂಚೆ ಅನೇಕ ಪ್ರವಾದಿಗಳನ್ನು ಅವರ ಜನತೆಯೆಡೆಗೆ ಕಳುಹಿಸಿರುವೆವು. ತರುವಾಯ ಸ್ಪಷ್ಟವಾದ ಪುರಾವೆಗಳೊಂದಿಗೆ ಅವರು (ಪ್ರವಾದಿಗಳು) ಅವರ ಬಳಿಗೆ ಬಂದರು. ಆಗ ಅಪರಾಧವೆಸಗಿದವರ ಮೇಲೆ ನಾವು ಶಿಕ್ಷಾಕ್ರಮವನ್ನು ಜರುಗಿಸಿದೆವು. ವಿಶ್ವಾಸಿಗಳಿಗೆ ಸಹಾಯ ಮಾಡುವುದು ನಮ್ಮ ಬಾಧ್ಯತೆಯಾಗಿದೆ.

(48) ಮಾರುತಗಳನ್ನು ಕಳುಹಿಸುವವನು ಅಲ್ಲಾಹುವಾಗಿರುವನು. ತರುವಾಯ ಅವು ಮೋಡಗಳನ್ನು ಅಲುಗಾಡಿಸುವುದು. ತರುವಾಯ ಅಲ್ಲಾಹು ಅವನಿಚ್ಛಿಸುವ ಪ್ರಕಾರ ಅದನ್ನು ಆಕಾಶದಲ್ಲಿ ಹರಡುವನು. ತರುವಾಯ ಅದನ್ನು ಅನೇಕ ತುಣುಕುಗಳನ್ನಾಗಿ ಮಾಡುವನು. ಆಗ ಅದರ ಎಡೆಯಿಂದ ಮಳೆಹನಿಯು ಹೊರಬರುವುದನ್ನು ತಾವು ಕಾಣುವಿರಿ. ತರುವಾಯ ಅವನು ತನ್ನ ದಾಸರ ಪೈಕಿ ಅವನಿಚ್ಛಿಸುವವರ ಮೇಲೆ ಅದನ್ನು ಸುರಿಸಿದಾಗ ಅಗೋ! ಅವರು ಸಂತುಷ್ಟರಾಗುವರು.

(49) ಇದಕ್ಕೆ ಮುನ್ನ -ಆ ಮಳೆಯು ಅವರ ಮೇಲೆ ಸುರಿಯುವುದಕ್ಕೆ ಮುನ್ನ- ಖಂಡಿತವಾಗಿಯೂ ಅವರು ಹತಾಶರಾಗಿದ್ದರು.

(50) ಆದುದರಿಂದ ಅಲ್ಲಾಹುವಿನ ಕಾರುಣ್ಯದ ಫಲಗಳನ್ನು ನೋಡಿರಿ. ಭೂಮಿಯು ನಿರ್ಜೀವವಾದ ಬಳಿಕ ಅವನು ಅದಕ್ಕೆ ಹೇಗೆ ಜೀವವನ್ನು ನೀಡುವನು? ಅದನ್ನು ಮಾಡುವವನು ಖಂಡಿತವಾಗಿಯೂ ಮರಣಹೊಂದಿದವರಿಗೆ ಜೀವವನ್ನು ನೀಡುವನು. ಅವನು ಸಕಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.

(51) ನಾವು ಇನ್ನೊಂದು ಮಾರುತವನ್ನು ಕಳುಹಿಸಿ, ಅದು (ಕೃಷಿ) ಹಳದಿ ವರ್ಣ ಬಾಧಿಸಿದ್ದಾಗಿ ಅವರು ಕಂಡರೆ ಆ ಬಳಿಕವೂ ಅವರು ಕೃತಘ್ನತೆ ತೋರುವವರೇ ಆಗಿರುವರು.(873)
873. ಅಲ್ಲಾಹು ಸಂಪತ್ತನ್ನು ನೀಡಿದಾಗ ಕೃತಜ್ಞತೆ ಸಲ್ಲಿಸಲು ಮತ್ತು ಅಲ್ಲಾಹು ಕೆಡುಕುಗಳ ಮೂಲಕ ಪರೀಕ್ಷಿಸಿದಾಗ ತಾಳ್ಮೆ ವಹಿಸಲು ಸಿದ್ಧರಾಗದೆ ಹೆಚ್ಚಿನವರೂ ಲಾಭ-ನಷ್ಟಗಳ ಬಗ್ಗೆ ಕೃತಘ್ನತಾ ಭಾವದೊಂದಿಗೆ ಪ್ರತಿಕ್ರಿಯಿಸುತ್ತಾರೆ.

(52) ಮರಣಹೊಂದಿದವರಿಗೆ(874) ಆಲಿಸುವಂತೆ ಮಾಡಲು ತಮಗೆ ಖಂಡಿತ ಸಾಧ್ಯವಾಗದು. ಕಿವುಡರು ಬೆನ್ನು ತೋರಿಸಿ ತಿರುಗಿ ನಡೆದರೆ ಅವರಿಗೆ ಕರೆಯನ್ನು ಆಲಿಸುವಂತೆ ಮಾಡಲೂ ತಮಗೆ ಸಾಧ್ಯವಾಗದು.
874. ಸತ್ಯದ ಚೈತನ್ಯವನ್ನು ಹೀರದೆ, ಮನಸ್ಸು ನಿರ್ಜೀವವಾಗಿರುವವರನ್ನು ಉದ್ದೇಶಿಸಿ ಇಲ್ಲಿ ‘ಮೌತಾ’ (ಮರಣ ಹೊಂದಿದವರು) ಎಂಬ ಪದವನ್ನು ಬಳಸಲಾಗಿದೆ.

(53) ಅಂಧರಾಗಿರುವವರನ್ನು ಅವರ ದಾರಿಗೇಡಿನಿಂದ ಸನ್ಮಾರ್ಗದೆಡೆಗೆ ಸಾಗಿಸಲು ತಮಗೆ ಸಾಧ್ಯವಾಗದು. ನಮ್ಮ ದೃಷ್ಟಾಂತಗಳಲ್ಲಿ ವಿಶ್ವಾಸವಿಡುವವರು ಮತ್ತು ಆ ಬಳಿಕ ಶರಣಾಗತರಾಗಿ ಬದುಕುವವರಿಗೆ ಹೊರತು ಇತರರಿಗೆ ಆಲಿಸುವಂತೆ ಮಾಡಲು ತಮಗೆ ಸಾಧ್ಯವಾಗದು.

(54) ನಿಮ್ಮನ್ನು ಬಲಹೀನತೆಯ ಸ್ಥಿತಿಯಲ್ಲಿ ಸೃಷ್ಟಿಸಿದವನು ಅಲ್ಲಾಹುವಾಗಿರುವನು. ತರುವಾಯ ಬಲಹೀನತೆಯ ನಂತರ ಅವನು ಬಲವನ್ನು ನೀಡಿದನು. ತರುವಾಯ ಬಲವನ್ನು ನೀಡಿದ ನಂತರ ಪುನಃ ಅವನು ಬಲಹೀನತೆಯನ್ನು ಮತ್ತು ನೆರೆತ ಕೂದಲನ್ನು ನೀಡಿದನು. ಅವನಿಚ್ಛಿಸುವುದನ್ನು ಅವನು ಸೃಷ್ಟಿಸುವನು. ಅವನು ಸರ್ವಜ್ಞನೂ, ಸರ್ವಶಕ್ತನೂ ಆಗಿರುವನು.

(55) ಅಂತ್ಯಘಳಿಗೆಯು ಸಂಭವಿಸುವ ದಿನದಂದು ತಾವು (ಭೂಲೋಕದಲ್ಲಿ) ಒಂದು ತಾಸಿನವರೆಗೆ ಹೊರತು ತಂಗಿಲ್ಲವೆಂದು ಅಪರಾಧಿಗಳು ಪ್ರಮಾಣ ಮಾಡಿ ಹೇಳುವರು. ಹೀಗೆಯೇ ಅವರು ಸತ್ಯದಿಂದ ಸರಿಸಲ್ಪಟ್ಟಿರುವರು.

(56) ಜ್ಞಾನ ಮತ್ತು ವಿಶ್ವಾಸವನ್ನು ನೀಡಲಾದವರು ಹೇಳುವರು: “ಅಲ್ಲಾಹುವಿನ ದಾಖಲೆಯಲ್ಲಿರುವ ಪ್ರಕಾರ ಪುನರುತ್ಥಾನ ದಿನದವರೆಗೆ ನೀವು ತಂಗಿದ್ದೀರಿ. ಇಗೋ ಇದೇ ಪುನರುತ್ಥಾನ ದಿನ! ಆದರೆ ನೀವು (ಇದರ ಬಗ್ಗೆ) ಅರ್ಥಮಾಡಿಕೊಂಡಿರಲಿಲ್ಲ.

(57) ಆದುದರಿಂದ ಅಕ್ರಮವೆಸಗಿದವರಿಗೆ ಆ ದಿನದಂದು ಅವರ ನೆಪಗಳು ಯಾವುದೇ ಪ್ರಯೋಜನವನ್ನೂ ನೀಡಲಾರವು. ಅವರೊಂದಿಗೆ ಪಶ್ಚಾತ್ತಾಪಪಡುವಂತೆಯೂ ಕೇಳಿಕೊಳ್ಳಲಾಗದು.(875)
875. ಪಶ್ಚಾತ್ತಾಪಪಡಬೇಕಾದುದು ಇಹಲೋಕದಲ್ಲಾಗಿದೆ. ಪರಲೋಕದಲ್ಲಿ ಪಶ್ಚಾತ್ತಾಪಪಡಲು ಅಥವಾ ಪಾಪಮುಕ್ತಿ ಬೇಡಲು ಅವಕಾಶ ನೀಡಲಾಗದು.

(58) ನಾವು ಈ ಕುರ್‌ಆನ್‍ನಲ್ಲಿ ಜನರಿಗೋಸ್ಕರ ಎಲ್ಲ ವಿಧದ ಉದಾಹರಣೆಗಳನ್ನೂ ವಿವರಿಸಿರುವೆವು. ತಾವು ಯಾವುದಾದರೂ ದೃಷ್ಟಾಂತದೊಂದಿಗೆ ಅವರ ಬಳಿ ತೆರಳಿದರೆ ಸತ್ಯನಿಷೇಧಿಗಳು ಹೇಳುವರು: “ನೀವು ಅಸತ್ಯವಾದಿಗಳೇ ಆಗಿದ್ದೀರಿ”.

(59) ಹೀಗೆ ಅಲ್ಲಾಹು (ವಿಷಯವನ್ನು) ಅರ್ಥಮಾಡಿಕೊಳ್ಳದವರ ಹೃದಯಗಳಿಗೆ ಮುದ್ರೆಯನ್ನೊತ್ತುವನು.

(60) ಆದುದರಿಂದ ತಾವು ತಾಳ್ಮೆವಹಿಸಿರಿ. ಖಂಡಿತ ವಾಗಿಯೂ ಅಲ್ಲಾಹುವಿನ ವಾಗ್ದಾನವು ಸತ್ಯವಾಗಿದೆ. ದೃಢವಿಶ್ವಾಸವಿಲ್ಲದ ಜನರು ತಮ್ಮನ್ನು ವಿಚಲಿತಗೊಳಿಸದಿರಲಿ.(876)
876. ಅವಿಶ್ವಾಸಿಗಳ ಟೀಕೆಗಳು ಅಥವಾ ಅಪಹಾಸ್ಯಗಳು ತಮ್ಮನ್ನು ದೃಢ ನಿರ್ಧಾರದಿಂದ ವಿಚಲಿತಗೊಳಿಸದಿರಲಿ ಎಂದರ್ಥ.