31 - Luqman ()

|

(1) ಅಲಿಫ್-ಲಾಮ್-ಮೀಮ್.

(2) ಇವು ಯುಕ್ತಿ ಪೂರ್ಣವಾದ ಗ್ರಂಥದ ಸೂಕ್ತಿಗಳಾಗಿವೆ.

(3) ಸಜ್ಜನರಿಗೆ ಇದು ಮಾರ್ಗದರ್ಶಿಯೂ ಕಾರುಣ್ಯವೂ ಆಗಿದೆ.

(4) ಅಂದರೆ ನಮಾಝನ್ನು ಸಂಸ್ಥಾಪಿಸುವವರು, ಝಕಾತ್ ನೀಡುವವರು ಮತ್ತು ಪರಲೋಕದಲ್ಲಿ ದೃಢವಿಶ್ವಾಸವಿಡುವವರಿಗೆ.

(5) ಅವರು ತಮ್ಮ ರಬ್‌ನ ಕಡೆಯ ಮಾರ್ಗದರ್ಶನದಲ್ಲಿರುವರು. ಯಶಸ್ವಿಯಾದವರು ಅವರೇ ಆಗಿರುವರು.

(6) ಯಾವುದೇ ಜ್ಞಾನವಿಲ್ಲದೆ ಅಲ್ಲಾಹುವಿನ ಮಾರ್ಗದಿಂದ ಜನರನ್ನು ಪಥಭ್ರಷ್ಟಗೊಳಿಸಲು ಮತ್ತು ಅದನ್ನು ಹಾಸ್ಯವಸ್ತುವನ್ನಾಗಿ ಮಾಡಿಕೊಳ್ಳಲು ವಿನೋದ ವಾರ್ತೆಗಳನ್ನು ಖರೀದಿಸುವ ಕೆಲವರು ಜನರಲ್ಲಿರುವರು. ಅಂತಹವರಿಗೆ ಅಪಮಾನಕರವಾದ ಶಿಕ್ಷೆಯಿದೆ.

(7) ಅಂತಹ ಒಬ್ಬನಿಗೆ ನಮ್ಮ ಸೂಕ್ತಿಗಳನ್ನು ಓದಿ ಕೊಡಲಾದರೆ ಅವನು ತನ್ನ ಎರಡೂ ಕಿವಿಗಳಿಗೆ ಮುಚ್ಚಳವನ್ನು ಹಾಕಿದಂತೆ, ಅದನ್ನು ಆಲಿಸಿಯೇ ಇಲ್ಲವೆಂಬಂತೆ ಅಹಂಕಾರಪಡುತ್ತಾ ತಿರುಗಿ ನಡೆಯುವನು. ತಾವು ಅವನಿಗೆ ಯಾತನಾಮಯ ಶಿಕ್ಷೆಯ ಬಗ್ಗೆ ಶುಭವಾರ್ತೆಯನ್ನು ತಿಳಿಸಿರಿ.

(8) ಖಂಡಿತವಾಗಿಯೂ ವಿಶ್ವಾಸವಿಟ್ಟವರು ಮತ್ತು ಸತ್ಕರ್ಮಗಳನ್ನು ಮಾಡುವವರಾರೋ ಅವರಿಗೆ ಸುಖಸಮೃದ್ಧವಾದ ಸ್ವರ್ಗೋದ್ಯಾನಗಳಿವೆ.

(9) ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅದು ಅಲ್ಲಾಹುವಿನ ಸತ್ಯವಾಗ್ದಾನವಾಗಿದೆ. ಅವನು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.

(10) ನೀವು ಕಾಣುವಂತಹ ಯಾವುದೇ ಸ್ಥಂಭಗಳಿಲ್ಲದೆ ಅವನು ಆಕಾಶಗಳನ್ನು ಸೃಷ್ಟಿಸಿರುವನು. ಭೂಮಿಯು ನಿಮ್ಮೊಂದಿಗೆ ಅಲುಗಾಡದಿರಲು ಅವನು ಅದರಲ್ಲಿ ಅಚಲ ಪರ್ವತಗಳನ್ನು ಸ್ಥಾಪಿಸಿರುವನು. ಸರ್ವವಿಧದ ಜೀವಿಗಳನ್ನೂ ಅವನು ಅದರಲ್ಲಿ ಹಬ್ಬಿಸಿರುವನು. ಆಕಾಶದಿಂದ ನಾವು (ಮಳೆ)ನೀರನ್ನು ಸುರಿಸಿದೆವು. ತರುವಾಯ ಅದರಲ್ಲಿ ಉತ್ಕೃಷ್ಟವಾದ ಸರ್ವ (ಸಸ್ಯ) ಜೋಡಿಗಳನ್ನು ನಾವು ಬೆಳೆಸಿದೆವು.

(11) ಇವೆಲ್ಲವೂ ಅಲ್ಲಾಹುವಿನ ಸೃಷ್ಟಿಯಾಗಿವೆ. ಆದರೆ ಅವನಲ್ಲದ ಇತರರು ಏನನ್ನು ಸೃಷ್ಟಿಸಿರುವರು ಎಂಬುದನ್ನು ನನಗೆ ತೋರಿಸಿಕೊಡಿರಿ. ಅಲ್ಲ, ಅಕ್ರಮಿಗಳು ಸ್ಪಷ್ಟವಾದ ಪಥಭ್ರಷ್ಟತೆಯಲ್ಲಿರುವರು.

(12) ನಾವು ಲುಕ್ಮಾನ್‍ರಿಗೆ ತತ್ವಜ್ಞಾನವನ್ನು ದಯಪಾಲಿಸಿದೆವು. “ತಾವು ಅಲ್ಲಾಹುವಿಗೆ ಕೃತಜ್ಞತೆ ಸಲ್ಲಿಸಿರಿ. ಯಾರಾದರೂ ಕೃತಜ್ಞತೆ ಸಲ್ಲಿಸುವುದಾದರೆ ಅವನು ಕೃತಜ್ಞತೆ ಸಲ್ಲಿಸುವುದು ಅವನ ಒಳಿತಿಗೇ ಆಗಿದೆ. ಯಾರಾದರೂ ಕೃತಘ್ನತೆ ತೋರುವುದಾದರೆ ಖಂಡಿತವಾಗಿಯೂ ಅಲ್ಲಾಹು ನಿರಪೇಕ್ಷನೂ ಸ್ತುತ್ಯರ್ಹನೂ ಆಗಿರುವನು” (ಎಂದು ನಾವು ಅವರಿಗೆ ಉಪದೇಶ ಮಾಡಿದೆವು).

(13) ಲುಕ್ಮಾನ್ ತಮ್ಮ ಮಗನಿಗೆ ಉಪದೇಶ ನೀಡುತ್ತಾ ಅವನೊಂದಿಗೆ ಹೇಳಿದ ಸಂದರ್ಭ: “ಓ ನನ್ನ ಮಗನೇ! ನೀನು ಅಲ್ಲಾಹುವಿನೊಂದಿಗೆ ಸಹಭಾಗಿತ್ವ ಮಾಡದಿರು. ಖಂಡಿತವಾಗಿಯೂ ಸಹಭಾಗಿತ್ವ ಮಾಡುವುದು ಘೋರ ಅಕ್ರಮವಾಗಿದೆ”.

(14) ಮಾನವರಿಗೆ ಅವರ ಮಾತಾಪಿತರ ವಿಷಯದಲ್ಲಿ ನಾವು ಉಪದೇಶ ಮಾಡಿರುವೆವು. ಅವನ ತಾಯಿಯು ಬಲಹೀನತೆಯ ಮೇಲೆ ಬಲಹೀನತೆಯನ್ನು ಸಹಿಸಿ ಅವನನ್ನು ಗರ್ಭ ಧರಿಸಿರುವಳು. ಅವನ ಸ್ತನಪಾನವನ್ನು ನಿಲ್ಲಿಸಲಾಗುವುದು ಎರಡು ವರ್ಷದೊಂದಿಗಾಗಿದೆ. ನನಗೂ, ನಿನ್ನ ಮಾತಾಪಿತರಿಗೂ ಕೃತಜ್ಞನಾಗಿರು. (ನಿನ್ನ) ಮರಳುವಿಕೆಯು ನನ್ನ ಬಳಿಗೇ ಆಗಿದೆ.

(15) ನಿನಗೆ ಯಾವುದೇ ಜ್ಞಾನವಿಲ್ಲದ ಏನನ್ನಾದರೂ ನನ್ನೊಂದಿಗೆ ಸಹಭಾಗಿಯನ್ನಾಗಿ ಮಾಡುವಂತೆ ಅವರಿಬ್ಬರೂ ನಿನ್ನನ್ನು ಬಲವಂತಪಡಿಸಿದರೆ, ಆಗ ಅವರನ್ನು ಅನುಸರಿಸಬಾರದು. ಐಹಿಕ ಜೀವನದಲ್ಲಿ ಅವರೊಂದಿಗೆ ಉತ್ತಮವಾಗಿ ವರ್ತಿಸು. ನನ್ನೆಡೆಗೆ ಮರಳಿದವರ ಮಾರ್ಗವನ್ನು ಹಿಂಬಾಲಿಸು. ತರುವಾಯ ನಿಮ್ಮ ಮರಳುವಿಕೆಯು ನನ್ನ ಬಳಿಗೇ ಆಗಿದೆ. ನೀವು ಮಾಡುತ್ತಿರುವುದರ ಬಗ್ಗೆ ಆಗ ನಾನು ನಿಮಗೆ ತಿಳಿಸಿಕೊಡುವೆನು.

(16) “ಓ ನನ್ನ ಮಗನೇ! ಖಂಡಿತವಾಗಿಯೂ ಅದು (ಕರ್ಮ) ಒಂದು ಸಾಸಿವೆ ಕಾಳಿನಷ್ಟು ಭಾರವಿರುವುದಾದರೂ, ತರುವಾಯ ಅದು ಬಂಡೆಯೊಳಗೋ, ಅಥವಾ ಆಕಾಶಗಳಲ್ಲೋ, ಅಥವಾ ಭೂಮಿಯಲ್ಲೋ ಇರುವುದಾದರೂ ಅಲ್ಲಾಹು ಅದನ್ನು ತರುವನು. ಖಂಡಿತವಾಗಿಯೂ ಅಲ್ಲಾಹು ಸೂಕ್ಷ್ಮಜ್ಞನೂ ಸೂಕ್ಷ್ಮಜ್ಞಾನಿಯೂ ಆಗಿರುವನು.

(17) ಓ ನನ್ನ ಮಗನೇ! ನಮಾಝನ್ನು ಸಂಸ್ಥಾಪಿಸು, ಸದಾಚಾರವನ್ನು ಆದೇಶಿಸು ಮತ್ತು ದುರಾಚಾರವನ್ನು ವಿರೋಧಿಸು. ನಿನಗೆ ಬಾಧಿಸಿದ ಕಷ್ಟಗಳಲ್ಲಿ ತಾಳ್ಮೆ ವಹಿಸು. ಖಂಡಿತವಾಗಿಯೂ ಅದು ಖಚಿತವಾಗಿ ಆದೇಶಿಸಲಾದ ವಿಷಯಗಳಲ್ಲಿ ಸೇರಿದ್ದಾಗಿದೆ.

(18) ನೀನು (ದರ್ಪದಿಂದ) ನಿನ್ನ ಮುಖವನ್ನು ಜನರೆಡೆಗೆ ತಿರುಗಿಸದಿರು. ಭೂಮಿಯಲ್ಲಿ ಜಂಬದಿಂದ ನಡೆಯದಿರು. ದುರಭಿಮಾನ ಹಾಗೂ ಜಂಬವಿರುವ ಯಾರನ್ನೂ ಅಲ್ಲಾಹು ಇಷ್ಟಪಡಲಾರನು.

(19) ನಿನ್ನ ನಡೆಯಲ್ಲಿ ನೀನು ಮಿತತ್ವವನ್ನು ಪಾಲಿಸು. ನಿನ್ನ ಧ್ವನಿಯನ್ನು ತಗ್ಗಿಸು. ಖಂಡಿತವಾಗಿಯೂ ಧ್ವನಿಗಳಲ್ಲಿ ಅಸಹ್ಯವಾಗಿರುವುದು ಕತ್ತೆಯ ಧ್ವನಿಯಾಗಿದೆ.

(20) ಆಕಾಶಗಳಲ್ಲಿರುವುದನ್ನು ಮತ್ತು ಭೂಮಿಯಲ್ಲಿರುವುದನ್ನು ಅಲ್ಲಾಹು ನಿಮಗೆ ಅಧೀನಪಡಿಸಿಕೊಟ್ಟಿರುವನು ಎಂಬುದನ್ನು ನೀವು ಕಂಡಿಲ್ಲವೇ? ಗೋಚರ ಮತ್ತು ಅಗೋಚರವಾಗಿರುವ ತನ್ನ ಅನುಗ್ರಹಗಳನ್ನು ಅವನು ನಿಮಗೆ ನೆರವೇರಿಸಿಕೊಟ್ಟಿರುವನು. ಯಾವುದೇ ಅರಿವೋ, ಮಾರ್ಗದರ್ಶನವೋ, ಪ್ರಕಾಶ ಬೀರುವ ಗ್ರಂಥವೋ ಇಲ್ಲದೆ ಅಲ್ಲಾಹುವಿನ ಬಗ್ಗೆ ತರ್ಕಿಸುವವರು ಜನರಲ್ಲಿರುವರು.

(21) “ಅಲ್ಲಾಹು ಅವತೀರ್ಣಗೊಳಿಸಿರುವುದನ್ನು ಅನುಸರಿಸಿರಿ” ಎಂದು ಅವರೊಂದಿಗೆ ಹೇಳಲಾದರೆ “ಇಲ್ಲ, ನಾವು ನಮ್ಮ ಪೂರ್ವಿಕರನ್ನು ಯಾವುದರಲ್ಲಿ ನೆಲೆಗೊಳ್ಳುವುದಾಗಿ ಕಂಡಿರುವೆವೋ ಅದನ್ನೇ ಅನುಸರಿಸುವೆವು” ಎಂದು ಅವರು ಹೇಳುವರು. ಸೈತಾನನು ಅವರನ್ನು ಜ್ವಲಿಸುವ ನರಕಾಗ್ನಿಯೆಡೆಗೆ ಆಹ್ವಾನಿಸುತ್ತಿದ್ದರೂ (ಅವರು ಅದನ್ನೇ ಅನುಸರಿಸುವರೇ?)

(22) ಯಾರು ಸತ್ಕರ್ಮಿಯಾಗಿದ್ದು ತನ್ನ ಮುಖವನ್ನು ಅಲ್ಲಾಹುವಿಗೆ ಶರಣಾಗಿಸುವನೋ ಅವನು ಬಲಿಷ್ಠವಾದ ಹಗ್ಗವನ್ನು ಹಿಡಿದಿರುವನು. ಸಕಲ ವಿಷಯಗಳ ಪರ್ಯಾವಸಾನವು ಅಲ್ಲಾಹುವಿನೆಡೆಗೇ ಆಗಿದೆ.

(23) ಯಾರಾದರೂ ಅವಿಶ್ವಾಸವಿಟ್ಟರೆ ಅವನ ಅವಿಶ್ವಾಸವು ತಮ್ಮನ್ನು ದುಃಖಕ್ಕೊಳಪಡಿಸದಿರಲಿ. ಅವರ ಮರಳುವಿಕೆಯು ನಮ್ಮೆಡೆಗೇ ಆಗಿದೆ. ಅವರು ಮಾಡುತ್ತಿರುವುದರ ಬಗ್ಗೆ ಆಗ ನಾವು ಅವರಿಗೆ ತಿಳಿಸಿಕೊಡುವೆವು. ಖಂಡಿತವಾಗಿಯೂ ಅಲ್ಲಾಹು ಹೃದಯಗಳಲ್ಲಿರುವುದರ ಬಗ್ಗೆ ಅರಿವುಳ್ಳವನಾಗಿರುವನು.

(24) ನಾವು ಅವರಿಗೆ ಕ್ಷಣಿಕ ಸುಖವನ್ನು ನೀಡುವೆವು. ತರುವಾಯ ಕಠೋರ ಶಿಕ್ಷೆಯೆಡೆಗೆ ಅವರನ್ನು ತಳ್ಳಿಬಿಡುವೆವು.

(25) “ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು ಯಾರು?” ಎಂದು ತಾವು ಅವರೊಂದಿಗೆ ಕೇಳಿದರೆ ಖಂಡಿತವಾಗಿಯೂ ಅವರು “ಅಲ್ಲಾಹು” ಎನ್ನುವರು. ಹೇಳಿರಿ: “ಅಲ್ಲಾಹುವಿಗೆ ಸ್ತುತಿ”. ಆದರೆ ಅವರಲ್ಲಿ ಹೆಚ್ಚಿನವರೂ ಅರ್ಥಮಾಡಿಕೊಳ್ಳಲಾರರು.

(26) ಭೂಮ್ಯಾಕಾಶಗಳಲ್ಲಿರುವುದು ಅಲ್ಲಾಹುವಿನದ್ದಾಗಿವೆ. ಖಂಡಿತವಾಗಿಯೂ ಅಲ್ಲಾಹು ನಿರಪೇಕ್ಷನೂ ಸ್ತುತ್ಯರ್ಹನೂ ಆಗಿರುವನು.

(27) ಭೂಮಿಯಲ್ಲಿರುವ ಮರಗಳೆಲ್ಲವೂ ಲೇಖನಿಗಳಾಗಿ, ಸಮುದ್ರವು ಶಾಯಿಯಾಗಿ, ಅದರ ನಂತರ ಏಳು ಸಮುದ್ರಗಳು ಅದನ್ನು ಪುಷ್ಠೀಕರಿಸಿದರೂ ಅಲ್ಲಾಹುವಿನ ವಚನಗಳು ಬರೆದು ಮುಗಿಯಲಾರವು. ಖಂಡಿತವಾಗಿಯೂ ಅಲ್ಲಾಹು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.

(28) ನಿಮ್ಮನ್ನು ಸೃಷ್ಟಿಸುವುದು ಮತ್ತು ಪುನರುತ್ಥಾನ ಗೊಳಿಸುವುದು ಒಬ್ಬ ವ್ಯಕ್ತಿಯನ್ನು (ಸೃಷ್ಟಿಸುವಂತೆ ಮತ್ತು ಪುನರುತ್ಥಾನಗೊಳಿಸುವಂತೆ) ಮಾತ್ರವಾಗಿದೆ.(877) ಖಂಡಿತವಾಗಿಯೂ ಅಲ್ಲಾಹು ಎಲ್ಲವನ್ನು ಆಲಿಸುವವನೂ ವೀಕ್ಷಿಸುವವನೂ ಆಗಿರುವನು.
877. ಕೋಟ್ಯಾನುಕೋಟಿ ಮನುಷ್ಯರನ್ನು ಅಲ್ಲಾಹು ಒಮ್ಮೆಲೆ ಪುನರುತ್ಥಾನಗೊಳಿಸುವುದು ಹೇಗೆಂದು ಸಂಶಯಪಡುವ ಕೆಲವರಿದ್ದಾರೆ. ಆದರೆ ಅಲ್ಲಾಹುವಿನ ಮಟ್ಟಿಗೆ ಒಬ್ಬನನ್ನು ಸೃಷ್ಟಿಸುವುದು ಮತ್ತು ಕೋಟ್ಯಾನುಕೋಟಿ ಜನರನ್ನು ಸೃಷ್ಟಿಸುವುದು ಒಂದೇ ರೀತಿ ಪ್ರಯಾಸರಹಿತ ವಿಷಯವಾಗಿದೆ.

(29) ಅಲ್ಲಾಹು ರಾತ್ರಿಯನ್ನು ಹಗಲಿನಲ್ಲಿ ನುಸುಳಿಸುವನು ಮತ್ತು ಹಗಲನ್ನು ರಾತ್ರಿಯಲ್ಲಿ ನುಸುಳಿಸುವನು ಎಂಬುದನ್ನು ತಾವು ಕಂಡಿಲ್ಲವೇ? ಅವನು ಸೂರ್ಯನನ್ನು ಮತ್ತು ಚಂದ್ರನನ್ನು ಅಧೀನಪಡಿಸಿರುವನು. ಎಲ್ಲವೂ ಒಂದು ನಿಶ್ಚಿತ ಅವಧಿಯವರೆಗೆ ಚಲಿಸುತ್ತಿರುವುವು. ನೀವು ಮಾಡುತ್ತಿರುವ ಎಲ್ಲದರ ಬಗ್ಗೆ ಅಲ್ಲಾಹು ಸೂಕ್ಷ್ಮವಾಗಿ ಅರಿಯುವವನಾಗಿರುವನೆಂದು (ತಾವು ಆಲೋಚಿಸಿಲ್ಲವೇ)?

(30) ಅದು ಯಾಕೆಂದರೆ ಸತ್ಯವಾಗಿರುವವನು ಅಲ್ಲಾಹು ಮಾತ್ರವಾಗಿರುವನು. ಅವನ ಹೊರತು ಅವರು ಕರೆದು ಪ್ರಾರ್ಥಿಸುವವುಗಳೆಲ್ಲವೂ ಮಿಥ್ಯೆಯಾಗಿವೆ. ಖಂಡಿತವಾಗಿಯೂ ಅಲ್ಲಾಹು ಅತ್ಯುನ್ನತನೂ, ಮಹಾನನೂ ಆಗಿರುವನು.

(31) ಸಮುದ್ರದಲ್ಲಿ ಹಡಗುಗಳು ಸಂಚರಿಸುವುದು ಅಲ್ಲಾಹುವಿನ ಅನುಗ್ರಹದಿಂದಾಗಿದೆ ಎಂಬುದನ್ನು ತಾವು ನೋಡಿಲ್ಲವೇ? ಅದು ಅವನ ದೃಷ್ಟಾಂತಗಳಲ್ಲಿ ಕೆಲವನ್ನು ನಿಮಗೆ ತೋರಿಸಿಕೊಡುವ ಸಲುವಾಗಿದೆ. ಖಂಡಿತವಾಗಿಯೂ ತಾಳ್ಮೆ ವಹಿಸುವವರೂ, ಕೃತಜ್ಞತೆ ಸಲ್ಲಿಸುವವರೂ ಆಗಿರುವ ಎಲ್ಲರಿಗೂ ಅದರಲ್ಲಿ ದೃಷ್ಟಾಂತಗಳಿವೆ.

(32) ಬೆಟ್ಟದಂತಹ(878) ಅಲೆಗಳು ಅವರನ್ನು ಆವರಿಸಿದಾಗ ಶರಣಾಗತಿಯನ್ನು ಅಲ್ಲಾಹುವಿಗೆ ಮಾತ್ರ ಸೀಮಿತಗೊಳಿಸಿ ಅವರು ಅವನೊಂದಿಗೆ ಪ್ರಾರ್ಥಿಸುವರು. ಆದರೆ ಅವನು ಅವರನ್ನು ರಕ್ಷಿಸಿ ದಡಕ್ಕೆ ತಲುಪಿಸಿದರೆ ಅವರ ಪೈಕಿ ಕೆಲವರು (ಮಾತ್ರ) ಶಿಷ್ಟಾಚಾರ ಪಾಲಿಸುವರು. ಮಹಾವಂಚಕರು ಮತ್ತು ಕೃತಘ್ನರಾಗಿರುವವರ ಹೊರತು ಇನ್ನಾರೂ ನಮ್ಮ ದೃಷ್ಟಾಂತಗಳನ್ನು ನಿಷೇಧಿಸಲಾರರು.
878. ‘ಝುಲಲ್’ ಎಂಬ ಪದಕ್ಕೆ ಬೆಟ್ಟಗಳು, ಮೋಡಗಳು ಇತ್ಯಾದಿ ಅರ್ಥಗಳನ್ನು ನೀಡಲಾಗಿದೆ.

(33) ಓ ಜನರೇ! ನೀವು ನಿಮ್ಮ ರಬ್ಬನ್ನು ಭಯಪಡಿರಿ. ಯಾವುದೇ ತಂದೆಯೂ ತನ್ನ ಸಂತತಿಗೆ ಉಪಕಾರ ಮಾಡದ ಮತ್ತು ಯಾವುದೇ ಸಂತತಿಯೂ ತಮ್ಮ ತಂದೆಗೆ ಪ್ರಯೋಜನ ಮಾಡದ ಒಂದು ದಿನವನ್ನು ಭಯಪಡಿರಿ. ಖಂಡಿತವಾಗಿಯೂ ಅಲ್ಲಾಹುವಿನ ವಾಗ್ದಾನವು ಸತ್ಯವಾಗಿದೆ. ಆದುದರಿಂದ ಐಹಿಕ ಜೀವನವು ನಿಮ್ಮನ್ನು ವಂಚಿಸದಿರಲಿ. ಮಹಾ ವಂಚಕನಾದ ಸೈತಾನನು ಅಲ್ಲಾಹುವಿನ ವಿಷಯದಲ್ಲಿ ನಿಮ್ಮನ್ನು ವಂಚಿಸದಿರಲಿ.

(34) ಅಂತ್ಯಘಳಿಗೆಯ ಜ್ಞಾನವಿರುವುದು ಖಂಡಿತವಾಗಿಯೂ ಅಲ್ಲಾಹುವಿನ ಬಳಿಯಲ್ಲಾಗಿದೆ. ಅವನು ಮಳೆಯನ್ನು ಸುರಿಸುವನು. ಅವನು ಗರ್ಭಾಶಯಗಳಲ್ಲಿರುವುದನ್ನು ಅರಿಯುವನು.(879) ತಾನು ನಾಳೆ ಏನು ಮಾಡುವೆನೆಂದು ಯಾರೂ ಅರಿಯಲಾರರು. ತಾನು ಯಾವ ಪ್ರದೇಶದಲ್ಲಿ ಮೃತಪಡುವೆನೆಂದು ಯಾರೂ ಅರಿಯಲಾರರು. ಖಂಡಿತವಾಗಿಯೂ ಅಲ್ಲಾಹು ಸರ್ವಜ್ಞನೂ, ಸೂಕ್ಷ್ಮಜ್ಞಾನಿಯೂ ಆಗಿರುವನು.
879. ಎಲ್ಲಿ, ಯಾವಾಗ, ಯಾವ ಪ್ರಮಾಣದಲ್ಲಿ ಮಳೆ ಲಭ್ಯವಾಗಲಿದೆಯೆಂಬುದನ್ನು ಅಲ್ಲಾಹುವಿನ ಹೊರತು ಬೇರೆ ಯಾರಿಗೂ ಕರಾರುವಾಕ್ಕಾಗಿ ತಿಳಿಯಲು ಸಾಧ್ಯವಿಲ್ಲ. ಹಾಗೆಯೇ ಗರ್ಭಾಶಯದಲ್ಲಿ ರೂಪುಗೊಳ್ಳುವ ಶಿಶುವಿಗೆ ಸಂಬಂಧಿಸಿದ ಪೂರ್ಣ ಮಾಹಿತಿಗಳನ್ನು ಅರಿತಿರುವವನು ಅಲ್ಲಾಹು ಮಾತ್ರವಾಗಿರುವನು.