32 - As-Sajda ()

|

(1) ಅಲಿಫ್-ಲಾಮ್-ಮೀಮ್.

(2) ಈ ಗ್ರಂಥದ ಅವತೀರ್ಣವು ಸರ್ವಲೋಕಗಳ ರಬ್‌ನ ಕಡೆಯಿಂದಾಗಿದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ.

(3) ಅಥವಾ, ಇದನ್ನು ಅವರು (ಪ್ರವಾದಿಯವರು) ಸ್ವತಃ ರಚಿಸಿದರು ಎಂದು ಅವರು ಹೇಳುತ್ತಿರುವರೇ? ಅಲ್ಲ, ಅದು ತಮ್ಮ ರಬ್‌ನ ಕಡೆಯ ಸತ್ಯವಾಗಿದೆ. ತಮಗಿಂತ ಮೊದಲು ಯಾವುದೇ ಮುನ್ನೆಚ್ಚರಿಕೆಗಾರರು ಬರದಂತಹ(880) ಒಂದು ಜನತೆಗೆ ತಾವು ಎಚ್ಚರಿಕೆ ನೀಡುವ ಸಲುವಾಗಿ. ಅವರು ಸನ್ಮಾರ್ಗದಲ್ಲಿ ಸೇರಲೂಬಹುದು.
880. ಅರಬರ ಕಡೆಗೆ (ಅಥವಾ ಕುರೈಶರೆಡೆಗೆ) ಪ್ರವಾದಿ ಮುಹಮ್ಮದ್(ಸ) ರವರಿಗಿಂತ ಮುಂಚೆ ಪ್ರವಾದಿಗಳನ್ನು ಕಳುಹಿಸಲಾಗಿಲ್ಲವೆಂದು ಈ ಸೂಕ್ತಿ ಮತ್ತು ಸೂರಃ ಯಾಸೀನ್‍ನ 6ನೇ ಸೂಕ್ತಿಯು ಸ್ಪಷ್ಟಪಡಿಸುತ್ತದೆ.

(4) ಆಕಾಶಗಳನ್ನು, ಭೂಮಿಯನ್ನು ಮತ್ತು ಅವುಗಳ ಮಧ್ಯೆಯಿರುವುದನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು ಅಲ್ಲಾಹುವಾಗಿರುವನು. ತರುವಾಯ ಅವನು ಸಿಂಹಾಸನಾರೂಢನಾದನು. ಅವನ ಹೊರತು ನಿಮಗೆ ಯಾವುದೇ ರಕ್ಷಕನಾಗಲಿ, ಶಿಫಾರಸುಗಾರನಾಗಲಿ ಇಲ್ಲ. ಹಾಗಿರುವಾಗ ನೀವು ಆಲೋಚಿಸಿ ಅರ್ಥಮಾಡಿಕೊಳ್ಳುವುದಿಲ್ಲವೇ?

(5) ಅವನು ಆಕಾಶದಿಂದ ಭೂಮಿಯೆಡೆಗೆ ಕಾರ್ಯಗಳನ್ನು ನಿಯಂತ್ರಿಸುವನು.(881) ತರುವಾಯ ಒಂದು ದಿನ ಅದು ಅವನೆಡೆಗೆ ಏರಿಹೋಗುವುದು.(882) ಆ ದಿನದ ವಿಸ್ತಾರವು ನೀವು ಎಣಿಸುವ ವಿಧದಲ್ಲಿರುವ ಸಾವಿರ ವರ್ಷಗಳಾಗಿವೆ.
881. ಆಕಾಶದಿಂದ ಭೂಮಿಯವರೆಗಿನ ಎಲ್ಲ ಕಾರ್ಯಗಳನ್ನೂ ಅಲ್ಲಾಹು ನಿಯಂತ್ರಿಸುತ್ತಿದ್ದಾನೆ ಎಂದೂ ಅರ್ಥೈಸಬಹುದಾಗಿದೆ. 882. ಯಾವುದೇ ವಿಷಯದಲ್ಲೂ ಯಾರಿಗೂ ತೀರ್ಮಾನ ಕೈಗೊಳ್ಳುವ ಅಧಿಕಾರವಿಲ್ಲದ ಮತ್ತು ಎಲ್ಲ ಅಧಿಕಾರಗಳೂ ಅಲ್ಲಾಹುವಿಗೆ ಮಾತ್ರ ಸೀಮಿತವಾಗಿರುವ ನ್ಯಾಯ ತೀರ್ಮಾನದ ದಿನದ ಬಗ್ಗೆ ಇಲ್ಲಿ ಪರಾಮರ್ಶಿಸಲಾಗಿದೆಯೆಂದು ಹೆಚ್ಚಿನ ಕುರ್‌ಆನ್ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ.

(6) ಅವನು ಗೋಚರ ಮತ್ತು ಅಗೋಚರಗಳನ್ನು , ಪ್ರತಾಪಶಾಲಿಯೂ, ಕರುಣಾನಿಧಿಯೂ ಆಗಿರುವನು.

(7) ತಾನು ಸೃಷ್ಟಿಸಿದ ಎಲ್ಲ ವಸ್ತುಗಳನ್ನೂ ಅವನು ಉತ್ಕೃಷ್ಟಗೊಳಿಸಿರುವನು. ಅವನು ಮನುಷ್ಯ ಸೃಷ್ಟಿಯನ್ನು ಜೇಡಿಮಣ್ಣಿನಿಂದ ಆರಂಭಿಸಿದನು.

(8) ತರುವಾಯ ಅವನ ಸಂತತಿಯನ್ನು ತುಚ್ಛವಾದ ನೀರಿನ ಸತ್ವದಿಂದ ಉಂಟುಮಾಡಿದನು.

(9) ತರುವಾಯ ಅವನನ್ನು ಸರಿಯಾದ ರೂಪದಲ್ಲಿ ಮಾಡಿ, ತನ್ನ ಕಡೆಯ ಆತ್ಮವನ್ನು ಅವನಲ್ಲಿ ಊದಿದನು. ಅವನು ನಿಮಗೆ ಶ್ರವಣವನ್ನೂ, ದೃಷ್ಟಿಗಳನ್ನೂ, ಹೃದಯಗಳನ್ನೂ ಮಾಡಿಕೊಟ್ಟನು. ನೀವು ಅಲ್ಪವೇ ಕೃತಜ್ಞತೆ ಸಲ್ಲಿಸುವಿರಿ.

(10) ಅವರು (ಸತ್ಯನಿಷೇಧಿಗಳು) ಹೇಳಿದರು: “ನಾವು ಭೂಮಿಯಲ್ಲಿ ಲೀನರಾಗಿ ಕಣ್ಮರೆಯಾದರೂ ನಮ್ಮನ್ನು ಹೊಸದಾಗಿ ಸೃಷ್ಟಿಸಲಾಗುವುದೇ?” ಅಲ್ಲ, ಅವರು ತಮ್ಮ ರಬ್‌ನೊಂದಿಗಿರುವ ಭೇಟಿಯನ್ನು ನಿಷೇಧಿಸಿದವರಾಗಿರುವರು.

(11) (ಓ ಪ್ರವಾದಿಯವರೇ!) ಹೇಳಿರಿ: “ನಿಮ್ಮ ವಿಷಯದಲ್ಲಿ ಹೊಣೆ ವಹಿಸಿಕೊಡಲಾದ ಮರಣದ ಮಲಕ್ ನಿಮ್ಮನ್ನು ಮೃತಪಡಿಸುವರು. ತರುವಾಯ ನಿಮ್ಮನ್ನು ನಿಮ್ಮ ರಬ್‌ನೆಡೆಗೆ ಮರಳಿಸಲಾಗುವುದು”.

(12) ಅಪರಾಧಿಗಳು ತಮ್ಮ ರಬ್‌ನ ಬಳಿ ತಲೆತಗ್ಗಿಸಿ, “ನಮ್ಮ ಪ್ರಭೂ! ನಾವು (ಕಣ್ಣಾರೆ) ಕಂಡಿರುವೆವು ಮತ್ತು ಆಲಿಸಿರುವೆವು. ಆದುದರಿಂದ ನಮ್ಮನ್ನು ಮರಳಿ ಕಳುಹಿಸು. ಹಾಗಾದರೆ ನಾವು ಸತ್ಕರ್ಮವೆಸಗುವೆವು. ಖಂಡಿತವಾಗಿಯೂ ಈಗ ನಾವು ದೃಢವಿಶ್ವಾಸವುಳ್ಳವರಾಗಿರುವೆವು” ಎಂದು ಹೇಳುವ ಸಂದರ್ಭವನ್ನು ತಾವು ಕಾಣುವುದಾದರೆ (ಅದೆಂತಹ ದೃಶ್ಯವಾಗಿರುವುದು)!

(13) ನಾವು ಇಚ್ಛಿಸುತ್ತಿದ್ದರೆ ಪ್ರತಿಯೊಬ್ಬ ವ್ಯಕ್ತಿಗೂ ಅವನ ಸನ್ಮಾರ್ಗವನ್ನು ನೀಡುತ್ತಿದ್ದೆವು. ಆದರೆ, “ಜಿನ್ನ್ ಮತ್ತು ಮಾನವರಿಂದ ಖಂಡಿತವಾಗಿಯೂ ನಾನು ನರಕವನ್ನು ತುಂಬುವೆನು” ಎಂಬ ನನ್ನ ಕಡೆಯ ವಚನವು ಸ್ಥಿರೀಕರಣಗೊಂಡಿದೆ.(883)
883. ಕೆಡುಕನ್ನು ಪ್ರಚೋದಿಸುವ ಪ್ರಲೋಭನೆಗಳನ್ನು ಮೆಟ್ಟಿನಿಂತು ಒಳಿತನ್ನು ಆರಿಸುವುದರಿಂದ ಮಹತ್ವವು ಹೆಚ್ಚಾಗುತ್ತದೆ. ಈ ಮಹತ್ವಕ್ಕೆ ತಲುಪಲು ಮಾನವ ಮತ್ತು ಜಿನ್ನ್ ಸಮೂಹಕ್ಕೆ ಅಲ್ಲಾಹು ಸಮಾನ ಅವಕಾಶವನ್ನು ನೀಡಿದ್ದಾನೆ. ಆದರೆ ಪ್ರಜ್ಞಾಪೂರ್ವಕವಾಗಿ ಕೆಡುಕನ್ನು ಆರಿಸುವವರಿಗೆ ಅರ್ಹ ಶಿಕ್ಷೆಯನ್ನು ನೀಡುವುದು ಅಲ್ಲಾಹುವಿನ ನ್ಯಾಯದ ಬೇಡಿಕೆಯಾಗಿದೆ. ಅದಕ್ಕಾಗಿಯೇ ಅವನು ನರಕಾಗ್ನಿಯನ್ನು ಸಿದ್ಧಗೊಳಿಸಿದ್ದಾನೆ.

(14) ಆದುದರಿಂದ ನಿಮ್ಮ ಈ ದಿನದ ಭೇಟಿಯನ್ನು ನೀವು ಮರೆತಿರುವುದರ ಫಲವಾಗಿ ಶಿಕ್ಷೆಯನ್ನು ಆಸ್ವಾದಿಸಿರಿ. ಖಂಡಿತವಾಗಿಯೂ ನಾವು ನಿಮ್ಮನ್ನು ಮರೆತಿರುವೆವು. ನೀವು ಮಾಡುತ್ತಿದ್ದುದರ ಫಲವಾಗಿ ಶಾಶ್ವತ ಶಿಕ್ಷೆಯನ್ನು ಆಸ್ವಾದಿಸಿರಿ.

(15) ನಮ್ಮ ದೃಷ್ಟಾಂತಗಳ ಮೂಲಕ ಬೋಧಿಸಲಾದರೆ ಸಾಷ್ಟಾಂಗವೆರಗುತ್ತಾ ಬೀಳುವವರು ಮತ್ತು ತಮ್ಮ ರಬ್ಬನ್ನು ಸ್ತುತಿಸುತ್ತಾ ಕೊಂಡಾಡುವವರು ಮಾತ್ರ ನಮ್ಮ ದೃಷ್ಟಾಂತಗಳಲ್ಲಿ ವಿಶ್ವಾಸವಿಡುವರು. ಅವರು ಅಹಂಕಾರ ಪಡಲಾರರು.

(16) ಭಯ ಮತ್ತು ನಿರೀಕ್ಷೆಯೊಂದಿಗೆ ತಮ್ಮ ರಬ್‌ನಲ್ಲಿ ಪ್ರಾರ್ಥಿಸುವವರಾಗಿ ಅವರ ಪಾರ್ಶ್ವಗಳು ಅವರ ಶಯನ ಸ್ಥಳಗಳನ್ನು ಬಿಟ್ಟಗಲುವುವು.(884) ನಾವು ಅವರಿಗೆ ಒದಗಿಸಿರುವುದರಿಂದ ಅವರು ವ್ಯಯಿಸುವರು.
884. ಜಗತ್ತು ನಿದ್ದೆಯಲ್ಲಿ ಮುಳುಗಿರುವಾಗ ಅವರು ಶಯ್ಯೆಗಳನ್ನು ಬಿಟ್ಟು ಪ್ರಾರ್ಥನಾ ಮಗ್ನರಾಗಿ ರಾತ್ರಿ ಕಳೆಯುವರು ಎಂದರ್ಥ.

(17) ಅವರು ಮಾಡಿರುವುದಕ್ಕಿರುವ ಪ್ರತಿಫಲವಾಗಿ ಅವರಿಗೆ ಕಣ್ಣು ತಂಪಾಗಿಸುವ ಏನನ್ನೆಲ್ಲ ಗೋಪ್ಯವಾಗಿಡಲಾಗಿದೆ ಎಂಬುದನ್ನು ಯಾವ ವ್ಯಕ್ತಿಯೂ ಅರಿತಿರಲಾರನು.

(18) ಹೀಗಿರುವಾಗ ವಿಶ್ವಾಸಿಯಾಗಿರುವವನು ಧಿಕ್ಕಾರಿಯಾಗಿರುವವನಂತಿರುವನೇ? ಅವರು ಸಮಾನರಾಗಲಾರರು.

(19) ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ -ಅವರು ಮಾಡಿರುವುದಕ್ಕಿರುವ ಸತ್ಕಾರವಾಗಿ- ವಾಸಿಸಲು ಸ್ವರ್ಗೋದ್ಯಾನಗಳಿರುವುವು.

(20) ಆದರೆ ಧಿಕ್ಕಾರ ತೋರಿದವರು ಯಾರೋ ಅವರ ವಾಸಸ್ಥಳವು ನರಕಾಗ್ನಿಯಾಗಿದೆ. ಅವರು ಅದರಿಂದ ಹೊರಬರಲು ಯತ್ನಿಸುವಾಗಲೆಲ್ಲ ಅವರನ್ನು ಅದಕ್ಕೇ ಮರಳಿ ಕಳುಹಿಸಲಾಗುವುದು. “ನೀವು ನಿಷೇಧಿಸುತ್ತಿದ್ದ ಆ ನರಕ ಶಿಕ್ಷೆಯನ್ನು ಆಸ್ವಾದಿಸಿರಿ” ಎಂದು ಅವರೊಂದಿಗೆ ಹೇಳಲಾಗುವುದು.

(21) ಆ ಮಹಾ ಶಿಕ್ಷೆಯಲ್ಲದೆ (ಐಹಿಕವಾದ) ಕೆಲವು ಸಣ್ಣ ಮಟ್ಟಿನ ಶಿಕ್ಷೆಯನ್ನೂ ನಾವು ಅವರಿಗೆ ಆಸ್ವಾದಿಸುವಂತೆ ಮಾಡುವೆವು. ಒಂದು ವೇಳೆ ಅವರು ಮರಳಲೂ ಬಹುದು.

(22) ತನ್ನ ರಬ್‌ನ ದೃಷ್ಟಾಂತಗಳ ಬಗ್ಗೆ ಬೋಧಿಸಲಾದ ಬಳಿಕ ಅವುಗಳಿಂದ ವಿಮುಖನಾದವನಿಗಿಂತಲೂ ದೊಡ್ಡ ಅಕ್ರಮಿ ಯಾರಿರುವನು? ಖಂಡಿತವಾಗಿಯೂ ಅಂತಹ ಅಪರಾಧಿಗಳ ಮೇಲೆ ನಾವು ಶಿಕ್ಷಾಕ್ರಮವನ್ನು ಜರುಗಿಸುವೆವು.

(23) ಖಂಡಿತವಾಗಿಯೂ ನಾವು ಮೂಸಾರಿಗೆ ಗ್ರಂಥವನ್ನು ನೀಡಿರುವೆವು. ಆದುದರಿಂದ ಅದನ್ನು ಸಂಧಿಸುವ ವಿಷಯದಲ್ಲಿ ತಾವು ಅನುಮಾನಪಡದಿರಿ.(885) ನಾವು ಅದನ್ನು ಇಸ್ರಾಈಲ್ ಸಂತತಿಗಳಿಗೆ ಮಾರ್ಗದರ್ಶಿಯನ್ನಾಗಿ ಮಾಡಿದೆವು.
885. ‘ಲಿಕಾಇಹೀ’ ಎಂಬ ಪದದಲ್ಲಿರುವ ‘ಹೀ’ ಎಂಬ ಸರ್ವನಾಮಕ್ಕೆ ಅದನ್ನು ಅಥವಾ ಅವನನ್ನು ಎಂಬ ಅರ್ಥಗಳಿವೆ. ಆದುದರಿಂದ ಈ ಸೂಕ್ತಿಯನ್ನು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ. ‘ಮೂಸಾರಿಗೆ ನಾವು ಗ್ರಂಥವನ್ನು ನೀಡಿದಂತೆಯೇ ತಮಗೂ ನೀಡುತ್ತಿದ್ದೇವೆ. ಆದುದರಿಂದ ದಿವ್ಯ ಸಂದೇಶವು ತಮ್ಮ ಬಳಿಗೆ ಬರುವಾಗ ಅದರ ಬಗ್ಗೆ ತಮಗೆ ಅನುಮಾನವುಂಟಾಗದಿರಲಿ’ ಎಂಬುದು ಒಂದು ವ್ಯಾಖ್ಯಾನವಾಗಿದೆ. ಇನ್ನೊಂದು ವ್ಯಾಖ್ಯಾನದ ಪ್ರಕಾರ ‘ಅವರನ್ನು (ಮೂಸಾರನ್ನು) ಸಂಧಿಸುವ ಬಗ್ಗೆ ತಮಗೆ ಅನುಮಾನವುಂಟಾಗದಿರಲಿ’ ಎಂದಾಗಿದೆ. ಮಿಅïರಾಜ್‍ನ ರಾತ್ರಿ ಪ್ರವಾದಿರವರು ಮೂಸಾರವರನ್ನು ಸಂಧಿಸಿರುವುದನ್ನು ಪ್ರಸ್ತಾಪಿಸುವ ಹದೀಸನ್ನು ಇದಕ್ಕೆ ಆಧಾರವಾಗಿ ಸೂಚಿಸಲಾಗುತ್ತದೆ. ‘ಅವರಿಗೆ (ಮೂಸಾರಿಗೆ) ದಿವ್ಯಸಂದೇಶ ಲಭ್ಯವಾಗಿರುವುದರ ಬಗ್ಗೆ ತಮಗೆ ಅನುಮಾನವುಂಟಾಗದಿರಲಿ’ ಎಂದೂ ಇದನ್ನು ವ್ಯಾಖ್ಯಾನಿಸಲಾಗಿದೆ.

(24) ಅವರು ತಾಳ್ಮೆ ವಹಿಸಿದಾಗ ಮತ್ತು ನಮ್ಮ ದೃಷ್ಟಾಂತಗಳಲ್ಲಿ ದೃಢವಾಗಿ ವಿಶ್ವಾಸವಿಟ್ಟವರಾದಾಗ ಅವರ ಪೈಕಿ ನಮ್ಮ ಆಜ್ಞೆಯನ್ನು ಅನುಸರಿಸಿ ಮಾರ್ಗದರ್ಶನ ಮಾಡುವ ನಾಯಕರನ್ನು ನಾವು ಉಂಟುಮಾಡಿದೆವು.

(25) ಅವರು ಭಿನ್ನಮತ ಹೊಂದಿರುವ ವಿಷಯಗಳಲ್ಲಿ ಖಂಡಿತವಾಗಿಯೂ ತಮ್ಮ ರಬ್ ಪುನರುತ್ಥಾನ ದಿನದಂದು ಅವರ ಮಧ್ಯೆ ತೀರ್ಪು ನೀಡುವನು.

(26) ಇವರಿಗಿಂತ ಮುಂಚೆ ಎಷ್ಟೋ ತಲೆಮಾರುಗಳನ್ನು ನಾವು ನಾಶ ಮಾಡಿರುವೆವು ಎಂಬ ವಾಸ್ತವಿಕತೆಯು ಇವರಿಗೆ ಸನ್ಮಾರ್ಗವನ್ನು ತೋರಿಸಿಕೊಡಲಿಲ್ಲವೇ? ಅವರ ವಾಸಸ್ಥಳಗಳ ಮೂಲಕ ಇವರು ಹಾದು ಹೋಗುತ್ತಿರುವರು! ಖಂಡಿತವಾಗಿಯೂ ಅದರಲ್ಲಿ ದೃಷ್ಟಾಂತಗಳಿವೆ. ಆದರೂ ಇವರು ಆಲಿಸಿ ಅರ್ಥ ಮಾಡಿಕೊಳ್ಳಲಾರರೇ?

(27) ನಾವು ಬರಡು ಭೂಮಿಗೆ ನೀರನ್ನು ಹರಿಸಿ ತನ್ಮೂಲಕ ಅವರ ಜಾನುವಾರುಗಳು ಮತ್ತು ಅವರು ತಿನ್ನುವಂತಹ ಕೃಷಿಯನ್ನು ನಾವು ಉತ್ಪಾದಿಸುತ್ತಿರುವೆವು ಎಂಬುದನ್ನು ಅವರು ನೋಡಿಲ್ಲವೇ? ಆದರೂ ಅವರು ನೋಡಿ ಅರ್ಥ ಮಾಡಿಕೊಳ್ಳಲಾರರೇ?

(28) ಅವರು ಹೇಳುವರು: “ಈ ತೀರ್ಪು ಯಾವಾಗ? ನೀವು ಸತ್ಯಸಂಧರಾಗಿದ್ದರೆ (ಹೇಳಿರಿ)!”

(29) (ಓ ಪ್ರವಾದಿಯವರೇ!) ಹೇಳಿರಿ: “ಅವಿಶ್ವಾಸಿಗಳಾಗಿರುವ ಜನರು ಆ ತೀರ್ಪಿನ ದಿನದಂದು ವಿಶ್ವಾಸ ತಾಳುವುದರಿಂದ ಅವರಿಗೆ ಯಾವುದೇ ಪ್ರಯೋಜನವೂ ಇರಲಾರದು. ಅವರಿಗೆ ಕಾಲಾವಕಾಶವನ್ನೂ ನೀಡಲಾಗದು.

(30) ಆದುದರಿಂದ ತಾವು ಅವರಿಂದ ವಿಮುಖರಾಗಿರಿ ಮತ್ತು ಕಾಯುತ್ತಿರಿ. ಖಂಡಿತವಾಗಿಯೂ ಅವರೂ ಕಾಯುತ್ತಿರುವರು.