34 - Saba ()

|

(1) ಆಕಾಶಗಳಲ್ಲಿರುವುದು ಮತ್ತು ಭೂಮಿಯಲ್ಲಿರುವುದು ಯಾರದೋ ಆ ಅಲ್ಲಾಹುವಿಗೆ ಸ್ತುತಿ. ಪರಲೋಕದಲ್ಲೂ ಅವನಿಗೇ ಸ್ತುತಿ. ಅವನು ಯುಕ್ತಿಪೂರ್ಣನೂ, ಸೂಕ್ಷ್ಮಜ್ಞಾನಿಯೂ ಆಗಿರುವನು.

(2) ಭೂಮಿಯಲ್ಲಿ ಪ್ರವೇಶಿಸುವ, ಅದರಿಂದ ಹೊರಬರುವ, ಆಕಾಶದಿಂದ ಇಳಿಯುವ ಮತ್ತು ಅದರಲ್ಲಿ ಏರಿ ಹೋಗುವ ವಸ್ತುಗಳನ್ನು ಅವನು ಅರಿಯುವನು. ಅವನು ಅಪಾರ ಕರುಣೆಯುಳ್ಳವನೂ, ಅತ್ಯಧಿಕ ಕ್ಷಮಿಸುವವನೂ ಆಗಿರುವನು.

(3) “ಆ ಅಂತ್ಯಘಳಿಗೆಯು ನಮ್ಮ ಬಳಿಗೆ ಬರಲಾರದು” ಎಂದು ಸತ್ಯನಿಷೇಧಿಗಳು ಹೇಳಿದರು. ಹೇಳಿರಿ: “ಅಲ್ಲ, ನನ್ನ ರಬ್‌ನ ಮೇಲಾಣೆ! ಅದು ನಿಮ್ಮ ಬಳಿಗೆ ಬಂದೇ ಬರುವುದು. ಅಗೋಚರ ವಿಷಯಗಳನ್ನು ಅರಿಯುವ (ರಬ್‌). ಆಕಾಶಗಳಲ್ಲಾಗಲಿ, ಭೂಮಿಯಲ್ಲಾಗಲಿ ಒಂದು ಅಣುವಿನ ಗಾತ್ರದಲ್ಲಿರುವ ಅಥವಾ ಅದಕ್ಕಿಂತ ಚಿಕ್ಕದು ಅಥವಾ ದೊಡ್ಡದಾಗಿರುವ ಯಾವುದೂ ಅವನಿಂದ ಮರೆಯಾಗಲಾರದು. ಸ್ಪಷ್ಟವಾದ ಒಂದು ಗ್ರಂಥದಲ್ಲಿ ಒಳಪಡದಿರುವಂತಹ ಯಾವುದೂ ಇಲ್ಲ.

(4) ಅದು ವಿಶ್ವಾಸವಿಟ್ಟವರಿಗೆ ಮತ್ತು ಸತ್ಕರ್ಮಿಗಳಿಗೆ ಅವನು ಪ್ರತಿಫಲವನ್ನು ನೀಡುವ ಸಲುವಾಗಿದೆ. ಅವರಿಗೆ ಪಾಪಮುಕ್ತಿಯೂ ಗೌರವಾನ್ವಿತ ಅನ್ನಾಧಾರವೂ ಇರುವುದು.

(5) (ನಮ್ಮನ್ನು) ಸೋಲಿಸುವ ಸಲುವಾಗಿ ಯಾರು ನಮ್ಮ ದೃಷ್ಟಾಂತಗಳನ್ನು ವಿರೋಧಿಸಲು ಪ್ರಯತ್ನಿಸುವರೋ ಅವರಿಗೆ ಯಾತನಾಮಯವಾದ ಕಠಿಣ ಶಿಕ್ಷೆಯಿದೆ.

(6) ತಮಗೆ ತಮ್ಮ ರಬ್‌ನ ಕಡೆಯಿಂದ ಅವತೀರ್ಣಗೊಂಡಿರುವುದು ಸತ್ಯವಾಗಿದೆ ಮತ್ತು ಅದು ಪ್ರತಾಪಶಾಲಿಯೂ, ಸ್ತುತ್ಯರ್ಹನೂ ಆಗಿರುವ ಅಲ್ಲಾಹುವಿನ ಮಾರ್ಗದೆಡೆಗೆ ಮುನ್ನಡೆಸುತ್ತದೆ ಎಂದು ಜ್ಞಾನ ನೀಡಲ್ಪಟ್ಟವರು ಕಾಣುತ್ತಿರುವರು.

(7) ಸತ್ಯನಿಷೇಧಿಗಳು (ವ್ಯಂಗ್ಯವಾಗಿ) ಹೇಳಿದರು: “ನೀವು ಸಂಪೂರ್ಣವಾಗಿ ಚಿಂದಿಯಾದ ಬಳಿಕವೂ ನಿಮ್ಮನ್ನು ಹೊಸದಾಗಿ ಸೃಷ್ಟಿಸಲಾಗುವುದು ಎಂದು ನಿಮಗೆ ತಿಳಿಸುವ ಒಬ್ಬ ವ್ಯಕ್ತಿಯ ಬಗ್ಗೆ ನಾವು ನಿಮಗೆ ತಿಳಿಸಿಕೊಡಲೇ?”

(8) ಅವನು ಅಲ್ಲಾಹುವಿನ ಮೇಲೆ ಸುಳ್ಳಾರೋಪಿಸಿರುವನೇ? ಅಥವಾ ಅವನಿಗೆ ಬುದ್ಧಿಭ್ರಮಣೆಯೇ? ಅಲ್ಲ, ಪರಲೋಕದಲ್ಲಿ ವಿಶ್ವಾಸವಿಡದವರು ಶಿಕ್ಷೆಯಲ್ಲಿ ಮತ್ತು ವಿದೂರ ಪಥಭ್ರಷ್ಟತೆಯಲ್ಲಿರುವರು.

(9) ಅವರ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿರುವ ಆಕಾಶ ಮತ್ತು ಭೂಮಿಯೆಡೆಗೆ ಅವರು ನೋಡುವುದಿಲ್ಲವೇ? ನಾವು ಇಚ್ಛಿಸಿದರೆ ಅವರನ್ನು ಭೂಮಿಯಲ್ಲಿ ಹುದುಗಿಸುತ್ತಿದ್ದೆವು ಅಥವಾ ಅವರ ಮೇಲೆ ಆಕಾಶದಿಂದ ತುಂಡುಗಳನ್ನು ಬೀಳಿಸುತ್ತಿದ್ದೆವು. ಅಲ್ಲಾಹುವಿನೆಡೆಗೆ (ವಿನಮ್ರತೆಯಿಂದ) ಮರಳುವ ಯಾವುದೇ ದಾಸನಿಗೂ ಖಂಡಿತವಾಗಿಯೂ ಅದರಲ್ಲಿ ದೃಷ್ಟಾಂತವಿದೆ.

(10) ಖಂಡಿತವಾಗಿಯೂ ದಾವೂದ್‍ರಿಗೆ ನಾವು ನಮ್ಮ ಕಡೆಯ ಅನುಗ್ರಹವನ್ನು ದಯಪಾಲಿಸಿದೆವು. (ನಾವು ಆದೇಶಿಸಿದೆವು): “ಓ ಪರ್ವತಗಳೇ! ನೀವು ಅವರೊಂದಿಗೆ (ಸ್ತ್ರೋತೃಗಳನ್ನು) ಹೇಳಿರಿ. ಓ ಹಕ್ಕಿಗಳೇ! ನೀವೂ ಸಹ.(932) ನಾವು ಅವರಿಗೆ ಕಬ್ಬಿಣವನ್ನು ಮೆದುವಾಗಿಸಿಕೊಟ್ಟೆವು.(933)
932. 21:79ರಲ್ಲೂ ಇದರ ಬಗ್ಗೆ ಪರಾಮರ್ಶಿಸಲಾಗಿದೆ. ಪರ್ವತಗಳು ಮತ್ತು ಹಕ್ಕಿಗಳು ಪ್ರವಾದಿ ದಾವೂದ್(ಅ) ರೊಂದಿಗೆ ಸ್ತೋತೃಗೀತೆಗಳನ್ನು ಹಾಡುತ್ತಿದ್ದುದರ ಬಗ್ಗೆಯಿರುವ ವಿವರಣೆಗಳು ಕುರ್‌ಆನ್‍ನಲ್ಲಿಲ್ಲ. ಅಲ್ಲಾಹು ಯಾವುದೇ ವಿಧದ ದೃಷ್ಟಾಂತವನ್ನು ತರಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. 933. ಕಬ್ಬಿಣವು ಗಡುಸಾದ ಗಟ್ಟಿ ಲೋಹವಾಗಿದೆ. ಅದನ್ನು ಕಾಯಿಸಿ ಜನರು ಆಯುಧ ಮತ್ತು ಇತರ ಉಪಕರಣಗಳನ್ನು ನಿರ್ಮಿಸುತ್ತಾರೆ. ಕಬ್ಬಿಣವನ್ನು ಕಾಯಿಸಿ ಮೆದುಗೊಳಿಸುವ ಜ್ಞಾನವು ಅಲ್ಲಾಹು ದಾವೂದ್(ಅ) ರಿಗೆ ನೀಡಿದ ಅನುಗ್ರಹಗಳ ಪೈಕಿ ಪ್ರಮುಖವಾಗಿದೆ. 21:80ರಲ್ಲೂ ಇದರ ಬಗ್ಗೆ ಪರಾಮರ್ಶೆಯಿದೆ.

(11) ಪೂರ್ಣ ಗಾತ್ರದ ಕವಚಗಳನ್ನು ನಿರ್ಮಿಸಿರಿ. ಅದರ ಕೊಂಡಿಗಳನ್ನು ಸರಿಯಾದ ಅಳತೆಯಲ್ಲಾಗಿಸಿರಿ. ನೀವೆಲ್ಲರೂ ಸತ್ಕರ್ಮವೆಸಗಿರಿ”(934) ಎಂದು (ನಾವು ಆದೇಶಿಸಿದೆವು). ಖಂಡಿತವಾಗಿಯೂ ನೀವು ಮಾಡುತ್ತಿರುವುದನ್ನು ನಾನು ವೀಕ್ಷಿಸುವವನಾಗಿರುವೆನು.
934. ತಂತ್ರಜ್ಞಾನ ಮತ್ತು ಅದರ ಸಾಧನೆಯು ಅಲ್ಲಾಹುವಿನ ವರದಾನವಾಗಿದೆ. ಸತ್ಕರ್ಮಗಳನ್ನು ನಿರ್ವಹಿಸುವುದರ ಮೂಲಕ ಮನುಷ್ಯರು ಅದಕ್ಕಾಗಿ ಕೃತಜ್ಞತೆ ಸಲ್ಲಿಸಬೇಕಾಗಿದೆ.

(12) ಸುಲೈಮಾನ್‍ರಿಗೆ ನಾವು ಗಾಳಿಯನ್ನು (ಅಧೀನ ಪಡಿಸಿಕೊಟ್ಟೆವು). ಅದರ ಪ್ರಭಾತ ಸಂಚಾರವು ಒಂದು ತಿಂಗಳ ದೂರವಾಗಿದೆ ಮತ್ತು ಅದರ ಸಂಧ್ಯಾ ಸಂಚಾರವು ಒಂದು ತಿಂಗಳ ದೂರವಾಗಿದೆ.(935) ಅವರಿಗೆ ನಾವು ಹಿತ್ತಾಳೆಯ ಒಂದು ಒರತೆಯನ್ನು ಹರಿಸಿಕೊಟ್ಟೆವು.(936) ಅವರ ರಬ್‌ನ ಅಪ್ಪಣೆ ಪ್ರಕಾರ ಅವರ ಮುಂಭಾಗದಲ್ಲಿ ಜಿನ್ನ್‌ಗಳ ಪೈಕಿ ಕೆಲವರು ಕೆಲಸ ಮಾಡುತ್ತಿದ್ದರು. ಅವರಲ್ಲಿ ಯಾರಾದರೂ ನಮ್ಮ ಅಪ್ಪಣೆಗೆ ವಿರುದ್ಧವಾಗಿ ವರ್ತಿಸಿದರೆ ಅವನಿಗೆ ನಾವು ಜ್ವಲಿಸುವ ನರಕಾಗ್ನಿಯ ಶಿಕ್ಷೆಯನ್ನು ಆಸ್ವಾದಿಸುವಂತೆ ಮಾಡುವೆವು.
935. ಪ್ರವಾದಿ ಸುಲೈಮಾನ್(ಅ) ರಿಗೆ ಅವರ ಸಾಮ್ರಾಜ್ಯದ ಅತಿವಿದೂರ ಪ್ರದೇಶಗಳಿಗೆ ದಿನನಿತ್ಯ ಭೇಟಿ ನೀಡುವುದಕ್ಕಾಗಿ ಅಲ್ಲಾಹು ಗಾಳಿಯನ್ನು ವಾಹನವನ್ನಾಗಿ ಮಾಡಿಕೊಟ್ಟಿದ್ದನು. ಗಾಳಿಯನ್ನು ಬಳಸಿ ಅವರು ಸಂಚಾರ ಮಾಡಿದ ವಿಶದ ವಿವರಣೆಗಳು ಕುರ್‌ಆನ್‍ನಲ್ಲಿಲ್ಲ. 936. ಕಾಯಿಸಿದ ಹಿತ್ತಾಳೆಯ ಒಂದು ದೊಡ್ಡ ಸಂಗ್ರಹವನ್ನು ಅಲ್ಲಾಹು ಅವರ ನಿಯಂತ್ರಣಕ್ಕೆ ಕೊಟ್ಟಿದ್ದನು ಎಂದು ಕೆಲವು ವ್ಯಾಖ್ಯಾನಕಾರರು ವ್ಯಾಖ್ಯಾನಿಸಿದ್ದಾರೆ.

(13) ಉನ್ನತ ಸೌಧಗಳು,(937) ಶಿಲ್ಪಗಳು, ಜಲಾಶಯದಂತಿರುವ ಬೋಗುಣಿಗಳು, ನೆಲದಲ್ಲಿ ಅಚಲವಾಗಿ ಸ್ಥಾಪಿಸಲಾಗಿರುವ ಅಡುಗೆ ಪಾತ್ರೆಗಳು ಇತ್ಯಾದಿ ಅವರಿಚ್ಛಿಸುವುದೆಲ್ಲವನ್ನೂ ಅವರು (ಜಿನ್ನ್‌ಗಳು) ಅವರಿಗೆ ನಿರ್ಮಿಸಿದ್ದರು. ಓ ದಾವೂದ್ ಕುಟುಂಬದವರೇ! ನೀವು ಕೃತಜ್ಞತಾಪೂರ್ವಕ ಕಾರ್ಯವೆಸಗಿರಿ. ನನ್ನ ದಾಸರಲ್ಲಿ ಸಂಪೂರ್ಣ ಕೃತಜ್ಞರಾಗಿರುವವರು ತೀರಾ ವಿರಳರಾಗಿ ರುವರು.
937. ‘ಮಹಾರೀಬ್’ ಎಂಬುದಕ್ಕೆ ಉನ್ನತ ಸೌಧಗಳು ಎಂದು ಅರ್ಥ ನೀಡಲಾಗಿದೆ. ಇದನ್ನು ಕೆಲವು ವ್ಯಾಖ್ಯಾನಕಾರರು ಮಸೀದಿಗಳು ಎಂದಿದ್ದಾರೆ. ಕಮಾನುಗಳೆಂದು ಹೇಳಿದವರೂ ಇದ್ದಾರೆ.

(14) ನಾವು ಅವರ ಮೇಲೆ ಮರಣವನ್ನು ವಿಧಿಸಿದಾಗ ಅವರಿಗೆ (ಜಿನ್ನ್‌ಗಳಿಗೆ) ಅವರ ಮರಣದ ಬಗ್ಗೆ ತಿಳಿಸಿದ್ದು ಅವರ ಊರುಗೋಲನ್ನು ತಿನ್ನುತ್ತಿದ್ದ ಗೆದ್ದಲ ಹುಳುಗಳಾಗಿದ್ದವು.(938) ತರುವಾಯ ಅವರು ಬಿದ್ದಾಗ ನಮಗೆ ಅಗೋಚರ ವಿಷಯಗಳು ಅರಿಯುತ್ತಿದ್ದರೆ ಅಪಮಾನಕರವಾದ ಶಿಕ್ಷೆಯಲ್ಲಿ(939) ನಾವು ಕಳೆಯಬೇಕಾಗಿರಲಿಲ್ಲ ಎಂದು ಜಿನ್ನ್‌ಗಳಿಗೆ ಸ್ಪಷ್ಟವಾಯಿತು.
938. ಮನುಷ್ಯರಿಗೆ ಅರಿತಿರದ ಅನೇಕ ವಿಷಯಗಳನ್ನು ಅರಿಯಲು ಮತ್ತು ಮನುಷ್ಯ ಸಾಮರ್ಥ್ಯಕ್ಕೆ ಅತೀತವಾದ ಅನೇಕ ಕಾರ್ಯಗಳನ್ನು ಮಾಡಲು ತಮಗೆ ಸಾಮರ್ಥ್ಯವಿದೆಯೆಂದು ಜಿನ್ನ್‌ಗಳು ಭಾವಿಸಿದ್ದರು. ಅವರನ್ನು ಅಲ್ಲಾಹು ಸುಲೈಮಾನ್‌(ಅ) ರಿಗೆ ಅಧೀನಪಡಿಸಿಕೊಟ್ಟಿದ್ದನು. ಸುಲೈಮಾನ್‌(ಅ) ರವರು ಊರುಗೋಲನ್ನು ಆಶ್ರಯಿಸಿ ನಿಂತು ಕೆಲಸದ ಮೇಲ್ನೋಟ ವಹಿಸುತ್ತಿರುವಾಗಲೇ ಅಲ್ಲಾಹು ಅವರನ್ನು ಮೃತಪಡಿಸಿದನು. ಆದರೆ ಜಿನ್ನ್‌ಗಳು ಅದನ್ನು ಅರಿತಿರಲಿಲ್ಲ. ಸುಲೈಮಾನ್‌(ಅ) ರವರು ನಮ್ಮನ್ನು ಗಮನಿಸುತ್ತಿದ್ದಾರೆಂದು ಭಾವಿಸಿ ಜಿನ್ನ್‌ಗಳು ಅವಿಶ್ರಾಂತವಾಗಿ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳ ಬಳಿಕ ಸುಲೈಮಾನ್‌(ಅ) ರವರ ಊರುಗೋಲನ್ನು ಗೆದ್ದಲು ತಿಂದು ಅವರ ಮೃತದೇಹವು ಬಿದ್ದಾಗಲೇ ಜಿನ್ನ್‌ಗಳು ಅವರ ಮರಣದ ಬಗ್ಗೆ ಅರಿತುಕೊಂಡರು. ಇದು ಬೈತುಲ್ ಮುಕದ್ದಿಸ್‍ನ ಕೆಲಸವು ಸ್ಥಗಿತಗೊಳ್ಳದೆ ನಿರಾತಂಕವಾಗಿ ಮುಂದುವರಿಯಲು ಅಲ್ಲಾಹು ಮಾಡಿದ ಯೋಜನೆಯಾಗಿರಬಹುದು. 939. ನಿರ್ಮಾಣ ಕೆಲಸವನ್ನು ನಿರಂತರವಾಗಿ ಮತ್ತು ಬಲವಂತವಾಗಿ ಮಾಡಬೇಕಾಗಿ ಬಂದುದರಿಂದ ಜಿನ್ನ್‌ಗಳು ಅದನ್ನೊಂದು ಶಿಕ್ಷೆಯೆಂದು ಪರಿಗಣಿಸಿದ್ದರು.

(15) ಖಂಡಿತವಾಗಿಯೂ ಸಬಅ್ ದೇಶದವರಿಗೆ ಅವರ ವಾಸಸ್ಥಳದಲ್ಲೇ ಒಂದು ದೃಷ್ಟಾಂತವಿತ್ತು. ಅಂದರೆ ಬಲಭಾಗದಲ್ಲಿ ಮತ್ತು ಎಡಭಾಗದಲ್ಲಿರುವ ಎರಡು ತೋಟಗಳು. “ನಿಮ್ಮ ರಬ್ ದಯಪಾಲಿಸಿರುವ ಅನ್ನಾಧಾರದಿಂದ ತಿನ್ನಿರಿ ಮತ್ತು ಅವನಿಗೆ ಕೃತಜ್ಞತೆ ಸಲ್ಲಿಸಿರಿ. ಉತ್ತಮವಾದ ದೇಶ ಮತ್ತು ಅತ್ಯಧಿಕ ಕ್ಷಮಿಸುವ ರಬ್‌!” (ಎಂದು ಅವರೊಂದಿಗೆ ಹೇಳಲಾಯಿತು.)

(16) ಆದರೆ ಅವರು ವಿಮುಖರಾದರು. ಆಗ ನಾವು ಅಣೆಕಟ್ಟಿನ ಜಲಪ್ರವಾಹವನ್ನು ಅವರೆಡೆಗೆ ಹರಿಸಿದೆವು.(940) ಅವರ ಆ ಎರಡು ತೋಟಗಳಿಗೆ ಬದಲಿಯಾಗಿ ಕಹಿ ಫಲಗಳು, ಪಕ್ಕೆಮರಗಳು ಮತ್ತು ಕೆಲವೊಂದು ಕತ್ತಿಕಾಯಿ ಮರಗಳುಳ್ಳ ಎರಡು ತೋಟಗಳನ್ನು ಅವರಿಗೆ ನೀಡಿದೆವು.(941)
940. ಪ್ರಾಚೀನಕಾಲದಲ್ಲಿ ಯಮನ್‍ನಲ್ಲಿದ್ದ ಮಅ್‌ರಿಬ್ ಅಣೆಕಟ್ಟು ಧ್ವಂಸಗೊಂಡ ಬಗ್ಗೆ ಇಲ್ಲಿ ಪರಾಮರ್ಶಿಸಲಾಗಿದೆ. ಈ ಅಣೆಕಟ್ಟಿನ ಜಲಾಶಯದಿಂದ ನೀರು ಹರಿಯುವ ಕಾಲುವೆಯ ಇಕ್ಕಡೆಗಳಲ್ಲಿದ್ದ ತೋಟಗಳು ಆ ಊರಿನ ಸಂಪತ್ಸಮೃದ್ಧಿಯ ಸಂಕೇತಗಳಾಗಿದ್ದವು. ಹೀಗಿರುವಾಗ ಮಹಾ ಪ್ರಳಯದಿಂದಾಗಿ ಆ ಅಣೆಕಟ್ಟು ಒಡೆದು ಕೃಷಿಗಳು ಸಂಪೂರ್ಣವಾಗಿ ನಾಶವಾದವು. ಕೃಷಿಕ್ಷೇತ್ರದಲ್ಲಿ ತಾವು ಗಳಿಸಿಕೊಂಡಿದ್ದ ಪ್ರಗತಿಯ ಹೆಸರಲ್ಲಿ ದರ್ಪ ಪ್ರದರ್ಶಿಸುತ್ತಿದ್ದ ಸಬಅ್ ದೇಶದವರು ಅಲ್ಲಾಹುವಿನ ಶಿಕ್ಷೆಯ ಮುಂದೆ ಪರಿಪೂರ್ಣ ಅಸಹಾಯಕರಾಗಿದ್ದರು. 941. ಆ ತೋಟಗಳಿದ್ದ ಸ್ಥಳಗಳು ಕಾಡುಮರಗಳು, ಮುಳ್ಳಿನ ಗಿಡಗಳು ಮತ್ತು ನಿರುಪಯುಕ್ತ ಗಿಡಮರಗಳು ಮಾತ್ರ ಬೆಳೆಯುವ ಪ್ರದೇಶವಾಗಿ ಮಾರ್ಪಟ್ಟಿತು.

(17) ಅದು ಅವರು ಕೃತಘ್ನತೆ ತೋರಿದ ಕಾರಣ ನಾವು ಅವರಿಗೆ ನೀಡಿದ ಪ್ರತಿಫಲವಾಗಿದೆ. ಕಡು ಕೃತಘ್ನತೆ ತೋರುವವನ ವಿರುದ್ಧವೇ ಹೊರತು ನಾವು ಶಿಕ್ಷಾಕ್ರಮ ಜರುಗಿಸುವೆವೇ?

(18) ಅವರ (ಸಬಅ್ ದೇಶದವರ) ಮತ್ತು ನಾವು ಅನುಗ್ರಹಿಸಿದ (ಸಿರಿಯಾದ) ಗ್ರಾಮಗಳ ಮಧ್ಯೆ ಪ್ರತ್ಯಕ್ಷವಾಗಿ ಕಾಣುವ ಅನೇಕ ಗ್ರಾಮಗಳನ್ನು ನಾವು ಉಂಟು ಮಾಡಿದೆವು. ಅಲ್ಲಿ ನಾವು ಯಾತ್ರಾ ತಂಗುದಾಣಗಳನ್ನು ನಿರ್ಣಯಿಸಿದೆವು.(942) “ರಾತ್ರಿಗಳಲ್ಲೂ ಹಗಲುಗಳಲ್ಲೂ ಅದರ ಮೂಲಕ ನಿರ್ಭೀತರಾಗಿ ಪ್ರಯಾಣ ಮಾಡಿರಿ” (ಎಂದು ನಾವು ಆದೇಶಿಸಿದೆವು).
942. ಪ್ರಾಚೀನ ಅರೇಬಿಯಾದಲ್ಲಿ ಯಮನ್‍ನಿಂದ ಸಿರಿಯಾದವರೆಗಿದ್ದ ವಾಣಿಜ್ಯ ಹೆದ್ದಾರಿಯು (ಕಾರವನ್ ರೂಟ್) ಅತ್ಯಂತ ಪ್ರಮುಖವಾಗಿತ್ತು. ಯಮನಿನ ಬಂದರುಗಳು ಅರಬ್ ದೇಶಗಳನ್ನು ಪೌರಸ್ತ್ಯದೇಶಗಳೊಂದಿಗೆ ಸಂಪರ್ಕಿಸುತ್ತಿತ್ತು. ಯಮನ್ ಮತ್ತು ಸಿರಿಯಾದ ಮಧ್ಯೆ ಓಯಸಿಸ್‍ಗಳು ಮತ್ತು ಯಾತ್ರಿಕರಿಗೆ ವಿಶ್ರಾಂತಿ ಪಡೆಯಲು ಅನೇಕ ತಂಗುದಾಣಗಳಿದ್ದವು. ಈ ತಂಗುದಾಣಗಳು ಸಣ್ಣ ಸಣ್ಣ ವಾಣಿಜ್ಯ ಪಟ್ಟಣಗಳಾಗಿ ಮಾರ್ಪಟ್ಟಿದ್ದವು. ಇವುಗಳ ಮಧ್ಯೆ ಪರಸ್ಪರ ಹೆಚ್ಚು ಅಂತರವಿಲ್ಲದಿದ್ದುದರಿಂದ ಯಮನ್ ಸಿರಿಯಾ ಹೆದ್ದಾರಿಯು ಅತ್ಯಂತ ಸುರಕ್ಷಿತವಾಗಿತ್ತು. ಯಮನ್ ನಿವಾಸಿಗಳ ವಾಣಿಜ್ಯ ಪ್ರಗತಿಗೆ ಈ ಹೆದ್ದಾರಿಯು ಒಂದು ದೊಡ್ಡ ಕೊಡುಗೆಯನ್ನು ನೀಡಿತ್ತು.

(19) ಆಗ ಅವರು ಹೇಳಿದರು: “ನಮ್ಮ ಪ್ರಭೂ! ನಮ್ಮ ಯಾತ್ರಾ ತಂಗುದಾಣಗಳ ಮಧ್ಯೆ ಅಂತರವನ್ನುಂಟು ಮಾಡು”.(943) ತರುವಾಯ ಅವರು ಸ್ವತಃ ಅವರೊಂದಿಗೇ ಅಕ್ರಮವೆಸಗಿದರು. ಕೊನೆಗೆ ನಾವು ಅವರನ್ನು ದಂತಕಥೆಗಳನ್ನಾಗಿ ಮಾಡಿದೆವು ಮತ್ತು ಅವರನ್ನು ಸಂಪೂರ್ಣವಾಗಿ ಚಿಂದಿ ಮಾಡಿದೆವು.(944) ತಾಳ್ಮೆ ವಹಿಸುವ ಮತ್ತು ಕೃತಜ್ಞತೆ ಸಲ್ಲಿಸುವ ಪ್ರತಿಯೊಬ್ಬರಿಗೂ ಖಂಡಿತವಾಗಿಯೂ ಅದರಲ್ಲಿ ದೃಷ್ಟಾಂತಗಳಿವೆ.
943. ಜನರ ಹಿತಾಸಕ್ತಿಗಳಿಗಿಂತ ಮತ್ತು ಹೆದ್ದಾರಿಯ ಅಭಿವೃದ್ಧಿಗಿಂತ ಹೆಚ್ಚಾಗಿ ಅವರು ತಮ್ಮ ಸ್ವಾರ್ಥ ಹಿತಾಸಕ್ತಿಗಳಿಗೆ ಆದ್ಯತೆ ನೀಡಿದರು. ಏಡನ್-ಸಿರಿಯಾ ಹೆದ್ದಾರಿಯ ಎಲ್ಲ ವ್ಯಾಪಾರಗಳನ್ನೂ ಸ್ವಾಧೀನಪಡಿಸಲು ಸಬಅ್ ನಿವಾಸಿಗಳು ಬಯಸಿದ್ದರು. ದಾರಿ ಮಧ್ಯೆಯಿರುವ ತಂಗುದಾಣಗಳ ಸಂಖ್ಯೆ ಕುಗ್ಗಿದರೆ ಮತ್ತು ಅವುಗಳ ಮಧ್ಯೆಯಿರುವ ಅಂತರವು ಹೆಚ್ಚಿದರೆ ಸಣ್ಣ ಮಟ್ಟಿನ ವ್ಯಾಪಾರಿಗಳನ್ನು ಬಿಟ್ಟು ಆ ವಾಣಿಜ್ಯ ಹೆದ್ದಾರಿಯನ್ನು ಮತ್ತು ತಂಗುದಾಣಗಳನ್ನು ಸ್ವಾಧೀನಪಡಿಸಬಹುದೆಂದು ಅವರು ಯೋಜನೆ ರೂಪಿಸಿದ್ದರು. 944. ಮಅ್‌ರಿಬ್ ಅಣೆಕಟ್ಟು ಒಡೆಯುವುದರೊಂದಿಗೆ ಯಮನ್‍ನ ಕೃಷಿಕ್ಷೇತ್ರವು ಅವನತಿ ಹೊಂದಿತು. ತಾತ್ಕಾಲಿಕ ಲಾಭವನ್ನು ಮಾತ್ರ ಉದ್ದೇಶಿಸಿ ಅವರು ರೂಪಿಸಿದ ಯೋಜನೆಗಳು ವಾಣಿಜ್ಯ ರಂಗದಲ್ಲಿ ಪ್ರತಿಕೂಲ ಪರಿಣಾಮವನ್ನುಂಟುಮಾಡಿದವು. ಹೀಗೆ ಅರೇಬಿಯಾದ ಯಮನ್ ಪ್ರತಾಪವು ಒಂದು ದಂತಕಥೆಯಾಗಿ ಮಾರ್ಪಟ್ಟಿತು. ಧರ್ಮ ಮತ್ತು ನ್ಯಾಯವನ್ನು ಕಡೆಗಣಿಸಿ ಬದುಕಿದ ಕಾರಣ ಅಲ್ಲಾಹು ಅವರಿಗೆ ನೀಡಿದ ಶಿಕ್ಷೆಯು ಅವರನ್ನು ಚಿಂದಿ ಚಿಂದಿಯಾಗಿಸಿತು.

(20) ಅವರ ಮೇಲಿರುವ ತನ್ನ ಗುಮಾನಿಯು ಸರಿಯಾಗಿತ್ತೆಂದು ಇಬ್ಲೀಸ್ ನಿಜಪಡಿಸಿದನು.(945) ಅವರು ಅವನನ್ನು ಅನುಸರಿಸಿದರು. ಸತ್ಯವಿಶ್ವಾಸಿಗಳಲ್ಲಿ ಸೇರಿದ ಒಂದು ಗುಂಪಿನ ಹೊರತು.
945. ಅವರನ್ನು ಪಥಭ್ರಷ್ಟಗೊಳಿಸಬಹುದೆಂದು ಇಬ್ಲೀಸನಿಗಿದ್ದ ಗುಮಾನಿಯು ಸುಳ್ಳಾಗಲಿಲ್ಲ ಎಂದರ್ಥ.

(21) ಇಬ್ಲೀಸ್‍ಗೆ ಅವರ ಮೇಲೆ ಯಾವುದೇ ಅಧಿಕಾರವಿರಲಿಲ್ಲ. ಇದು ಪರಲೋಕದಲ್ಲಿ ವಿಶ್ವಾಸವಿಡುವವರನ್ನು ಅದರ ಬಗ್ಗೆ ಸಂಶಯ ತಾಳಿರುವವರ ಗುಂಪಿನಿಂದ ನಾವು ಬೇರ್ಪಡಿಸಿ ತಿಳಿಯುಸಲುವಾಗಿ ಮಾತ್ರವಾಗಿದೆ.(946) ತಮ್ಮ ರಬ್ ಪ್ರತಿಯೊಂದು ವಿಷಯವನ್ನೂ ವೀಕ್ಷಿಸುವವನಾಗಿರುವನು.
946. ಮನುಷ್ಯರನ್ನು ದಾರಿತಪ್ಪಿಸುವ ಅಧಿಕಾರವನ್ನು ಅಲ್ಲಾಹು ಇಬ್ಲೀಸನಿಗೆ ನೀಡಿಲ್ಲ. ಮನುಷ್ಯರ ವಿಶ್ವಾಸದಾರ್ಢ್ಯತೆಯನ್ನು ಮತ್ತು ಪ್ರಲೋಭನೆಯನ್ನು ಮೆಟ್ಟಿನಿಲ್ಲುವ ಅವರ ಸಾಮರ್ಥ್ಯವನ್ನು ಪರೀಕ್ಷಿಸಲು ಅಲ್ಲಾಹು ಒಂದು ಅನುವು ಮಾಡಿಕೊಡುತ್ತಾನೆಂದು ಮಾತ್ರ.

(22) ಹೇಳಿರಿ: “ಅಲ್ಲಾಹುವಿನ ಹೊರತು ನೀವು ವಾದಿಸುತ್ತಿರುವ ಎಲ್ಲರನ್ನೂ ಕರೆದು ಪ್ರಾರ್ಥಿಸಿರಿ. ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ಒಂದು ಅಣುವಿನ ತೂಕದಷ್ಟು ಕೂಡ ಅವರು ಸ್ವಾಧೀನಪಡಿಸಲಾರರು. ಅವೆರಡರಲ್ಲಿ ಅವರಿಗೆ ಯಾವುದೇ ಸಹಭಾಗಿತ್ವವೂ ಇಲ್ಲ. ಅವರ ಪೈಕಿ ಅವನಿಗೆ ಸಹಾಯಕರಾಗಿ ಯಾರೂ ಇಲ್ಲ”.

(23) ಅವನು ಯಾರಿಗೆ ಅನುಮತಿ ನೀಡಿರುವನೋ ಅವರಿಗೇ ಹೊರತು ಅವನ ಬಳಿ ಶಿಫಾರಸು ಪ್ರಯೋಜನ ಪಡಲಾರದು.(947) ಕೊನೆಗೆ ಅವರ ಹೃದಯಗಳಿಂದ ಭೀತಿಯು ದೂರವಾದಾಗ ಅವರು ಕೇಳುವರು: “ನಿಮ್ಮ ರಬ್ ಏನು ಹೇಳಿರುವನು?”(948) ಅವರು ಉತ್ತರಿಸುವರು: “ಸತ್ಯವನ್ನು (ಹೇಳಿರುವನು). ಅವನು ಉನ್ನತನೂ ಮಹಾನನೂ ಆಗಿರುವನು”.
947. ಅಲ್ಲಾಹುವಿನ ಬಳಿ ಶಿಫಾರಸು ಪ್ರಯೋಜನಪಡಬೇಕಾದರೆ ಶಿಫಾರಸು ಮಾಡುವವನಿಗೆ ಅದಕ್ಕಿರುವ ಅನುಮತಿಯು ಅಲ್ಲಾಹುವಿನಿಂದ ಸಿಕ್ಕಿರಬೇಕು. ಯಾರ ಬಗ್ಗೆ ಶಿಫಾರಸು ಮಾಡಬೇಕೆಂಬುದು ಕೂಡ ಅಲ್ಲಾಹುವಿನ ಅನುಮತಿಯನ್ನು ಅವಲಂಬಿಸಿದೆ. 948. ವಿಚಾರಣಾ ದಿನದಂದು ಮನುಷ್ಯರು ಮತ್ತು ಮಲಕ್‍ಗಳು ತಮ್ಮ ವಿಷಯದಲ್ಲಿ ಅಲ್ಲಾಹುವಿನ ತೀರ್ಪು ಏನೆಂದು ಅರಿಯದೆ ಭಯಭೀತರಾಗಿರುವರು. ತರುವಾಯ ಕರ್ಮಗಳ ವಿಚಾರಣೆ ನಡೆಸಿ ಸಜ್ಜನರನ್ನು ಸ್ವರ್ಗಕ್ಕೂ, ದುರ್ಜನರನ್ನು ನರಕಕ್ಕೂ ಕಳುಹಿಸಲು ಅಲ್ಲಾಹು ಆಜ್ಞಾಪಿಸುವುದರೊಂದಿಗೆ ಮಲಕ್‍ಗಳಿಗೆ ಮತ್ತು ಸತ್ಯವಿಶ್ವಾಸಿಗಳಿಗೆ ಸಮಾಧಾನವಾಗಲಿದೆ. ಆ ಸಂದರ್ಭದಲ್ಲಿ ಮಲಕ್‍ಗಳು ಪರಸ್ಪರ ಅಥವಾ ಮಲಕ್‍ಗಳು ಮತ್ತು ಸತ್ಯವಿಶ್ವಾಸಿಗಳು ಪರಸ್ಪರ ನಡೆಯುವ ಮಾತುಕತೆಯನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

(24) ಕೇಳಿರಿ: “ಆಕಾಶಗಳಿಂದ ಮತ್ತು ಭೂಮಿಯಿಂದ ನಿಮಗೆ ಅನ್ನಾಧಾರವನ್ನು ಒದಗಿಸುವವನಾರು?” ಹೇಳಿರಿ: “ಅಲ್ಲಾಹುವಾಗಿರುವನು. ಖಂಡಿತವಾಗಿಯೂ ಸನ್ಮಾರ್ಗದಲ್ಲಿರುವವರು ಅಥವಾ ಸ್ಪಷ್ಟವಾದ ದುರ್ಮಾಗದಲ್ಲಿರುವವರು ಒಂದೋ ನಾವು ಅಥವಾ ನೀವಾಗಿದ್ದೀರಿ”.

(25) ಹೇಳಿರಿ: “ನಾವು ಮಾಡಿರುವ ಪಾಪಗಳ ಬಗ್ಗೆ ನಿಮ್ಮೊಂದಿಗೆ ಪ್ರಶ್ನಿಸಲಾಗದು. ನೀವು ಮಾಡುತ್ತಿರುವುದರ ಬಗ್ಗೆ ನಮ್ಮೊಂದಿಗೂ ಪ್ರಶ್ನಿಸಲಾಗದು”.

(26) ಹೇಳಿರಿ: “ನಮ್ಮ ರಬ್ ನಮ್ಮನ್ನು ಪರಸ್ಪರ ಒಟ್ಟುಗೂಡಿಸುವನು. ತರುವಾಯ ನಮ್ಮ ಮಧ್ಯೆ ಅವನು ಸತ್ಯದೊಂದಿಗೆ ತೀರ್ಪು ನೀಡುವನು. ಅವನು ಸರ್ವಜ್ಞನಾಗಿರುವ ತೀರ್ಪುಗಾರನಾಗಿರುವನು”.

(27) ಹೇಳಿರಿ: “ನೀವು ಅವನೊಂದಿಗೆ (ಅಲ್ಲಾಹುವಿನೊಂದಿಗೆ) ಸಹಭಾಗಿಗಳನ್ನಾಗಿ ಸೇರಿಸಿರುವವರನ್ನು ನನಗೊಮ್ಮೆ ತೋರಿಸಿಕೊಡಿರಿ. ಇಲ್ಲ! (ಅಂತಹ ಯಾವುದೇ ಸಹಭಾಗಿಯೂ ಇಲ್ಲ!) ಆದರೆ ಅವನು ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿರುವ ಅಲ್ಲಾಹುವಾಗಿರುವನು”.

(28) ನಾವು ತಮ್ಮನ್ನು ಸಂಪೂರ್ಣ ಮನುಷ್ಯರೆಡೆಗೆ ಶುಭವಾರ್ತೆ ತಿಳಿಸುವವರಾಗಿ ಮತ್ತು ಮುನ್ನೆಚ್ಚರಿಕೆ ನೀಡುವವರಾಗಿಯೇ ಕಳುಹಿಸಿರುವೆವು. ಆದರೆ ಜನರ ಪೈಕಿ ಹೆಚ್ಚಿನವರೂ ಅರಿಯುವುದಿಲ್ಲ.

(29) “ನೀವು ಸತ್ಯವಂತರಾಗಿದ್ದರೆ ಈ ಎಚ್ಚರಿಕೆಯು ಯಾವಾಗ (ನಿಜವಾಗಲಿದೆ) ಎಂದು ಅವರು ಕೇಳುವರು.

(30) ಹೇಳಿರಿ: “ನಿಮಗೆ ಒಂದು ನಿಶ್ಚಿತ ದಿನವಿದೆ. ಅದನ್ನು ಬಿಟ್ಟು ಒಂದು ಕ್ಷಣವೂ ಹಿಂದಕ್ಕೆ ಹೋಗಲು ಅಥವಾ ಮುಂದಕ್ಕೆ ಹೋಗಲು ನಿಮ್ಮಿಂದಾಗದು”.

(31) “ನಾವು ಈ ಕುರ್‌ಆನ್‍ನಲ್ಲಾಗಲಿ ಅಥವಾ ಇದಕ್ಕಿಂತ ಮುಂಚಿನ ಗ್ರಂಥಗಳಲ್ಲಾಗಲಿ ಎಂದೂ ವಿಶ್ವಾಸವಿಡಲಾರೆವು” ಎಂದು ಸತ್ಯನಿಷೇಧಿಗಳು ಹೇಳಿದರು. (ಓ ಪ್ರವಾದಿಯವರೇ!) ಈ ಅಕ್ರಮಿಗಳನ್ನು ತಮ್ಮ ರಬ್‌ನ ಬಳಿ ನಿಲ್ಲಿಸಲಾಗುವ ಸಂದರ್ಭವನ್ನು ತಾವು ಕಾಣುತ್ತಿದ್ದರೆ! ಅವರಲ್ಲಿ ಪ್ರತಿಯೊಂದು ಗುಂಪೂ ಇನ್ನೊಂದು ಗುಂಪಿನ ಮೇಲೆ ಆರೋಪ ಹೊರಿಸುವರು. ಬಲಹೀನರೆಂದು ಗಣಿಸಲಾದವರು ಅಹಂಕಾರಪಟ್ಟವರೊಂದಿಗೆ ಹೇಳುವರು: “ನೀವು ಇಲ್ಲದಿರುತ್ತಿದ್ದರೆ ನಾವು ವಿಶ್ವಾಸಿಗಳಾಗಿರುತ್ತಿದ್ದೆವು”.(949)
949. ನಾವು ನಿಮ್ಮ ಪ್ರಭಾವಕ್ಕೊಳಗಾಗಿರುವುದರಿಂದಲೇ ನಮಗೆ ಸತ್ಯವನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ ಎಂದರ್ಥ.

(32) ಅಹಂಕಾರಪಟ್ಟವರು ಬಲಹೀನರೆಂದು ಗಣಿಸಲಾದವರೊಂದಿಗೆ ಹೇಳುವರು: “ಮಾರ್ಗದರ್ಶನವು ನಿಮ್ಮ ಬಳಿಗೆ ಬಂದ ಬಳಿಕ ನಾವು ನಿಮ್ಮನ್ನು ಅದರಿಂದ ತಡೆದಿರುವೆವೇ? ಅಲ್ಲ. ನೀವು ಅಪರಾಧಿಗಳೇ ಆಗಿದ್ದಿರಿ”.(950)
950. ಸತ್ಯಾನ್ವೇಷಣಾ ತ್ವರೆಯನ್ನು ಹೊಂದಿರುವ ಯಾವುದೇ ವ್ಯಕ್ತಿಯನ್ನೂ ಬಲವಂತವಾಗಿ ಸತ್ಯದಿಂದ ವಿಮುಖಗೊಳಿಸಲು ಸಾಧ್ಯವಿಲ್ಲ ಮತ್ತು ಸತ್ಯವು ಬಂದ ಬಳಿಕವೂ ನೀವು ಉದ್ದೇಶಪೂರ್ವಕವಾಗಿ ದುರ್ಮಾರ್ಗದಲ್ಲೇ ಉಳಿದಿರುವುದಕ್ಕೆ ನಾವು ಜವಾಬ್ದಾರರಲ್ಲ ಎಂದಾಗಿದೆ ಅವರು ನೀಡುವ ಉತ್ತರ.

(33) ಬಲಹೀನರೆಂದು ಗಣಿಸಲಾದವರು ಅಹಂಕಾರಪಟ್ಟವರೊಂದಿಗೆ ಹೇಳುವರು: “ಅಲ್ಲ, ಇದು ನಾವು ಅಲ್ಲಾಹುವಿನಲ್ಲಿ ಅವಿಶ್ವಾಸವಿಡಲು ಮತ್ತು ಅವನೊಂದಿಗೆ ಪ್ರತಿಸ್ಪರ್ಧಿಗಳನ್ನು ಸ್ಥಾಪಿಸಲು ನೀವು ನಮ್ಮೊಂದಿಗೆ ಆದೇಶಿಸುತ್ತಿದ್ದ ಸಂದರ್ಭಗಳಲ್ಲಿ (ನೀವು) ರಾತ್ರಿ ಹಗಲು ನಡೆಸುತ್ತಿದ್ದ ಕುತಂತ್ರದ ಫಲವಾಗಿದೆ”. ಶಿಕ್ಷೆಯನ್ನು ಕಾಣುವಾಗ ಅವರು ವಿಷಾದವನ್ನು ಮನಸ್ಸಿನಲ್ಲಿ ಬಚ್ಚಿಡುವರು. ನಾವು ಸತ್ಯನಿಷೇಧಿಗಳ ಕೊರಳುಗಳಲ್ಲಿ ಸಂಕೋಲೆಗಳನ್ನು ಇಡುವೆವು. ಅವರು ಮಾಡಿರುವುದರ ಪ್ರತಿಫಲವನ್ನೇ ವಿನಾ ಇನ್ನೇನನ್ನಾದರೂ ಅವರಿಗೆ ನೀಡಲಾಗುವುದೇ?(951)
951. ಬಲಶಾಲಿಯೋ ಬಲಹೀನನೋ ಎಂಬ ವ್ಯತ್ಯಾಸವಿಲ್ಲದೆ ಪ್ರತಿಯೊಬ್ಬರೂ ಪ್ರಜ್ಞಾಪೂರ್ವಕವಾಗಿ ಮಾಡಿದ ಕರ್ಮಗಳಿಗೆ ಅಲ್ಲಾಹು ತಕ್ಕುದಾದ ಪ್ರತಿಫಲವನ್ನು ನೀಡುವನು.

(34) ನಾವು ಯಾವುದೇ ನಾಡಿಗೂ ಒಬ್ಬ ಮುನ್ನೆಚ್ಚರಿಕೆಗಾರನನ್ನು ಕಳುಹಿಸಿದಾಗಲೆಲ್ಲ “ಯಾವುದರೊಂದಿಗೆ ನಿಮ್ಮನ್ನು ಕಳುಹಿಸಲಾಗಿದೆಯೋ ಅದನ್ನು ನಾವು ನಿಷೇಧಿಸಿರುವೆವು” ಎಂದು ಅಲ್ಲಿನ ಸುಖಲೋಲುಪರು ಹೇಳದಿರಲಿಲ್ಲ.

(35) ಅವರು ಹೇಳಿದರು: “ನಾವು ಅತ್ಯಧಿಕ ಸಂಪತ್ತು ಮತ್ತು ಸಂತತಿಯನ್ನು ಹೊಂದಿದವರಾಗಿರುವೆವು. ನಾವು ಶಿಕ್ಷೆಗೊಳಗಾಗಲಾರೆವು”.

(36) ಹೇಳಿರಿ: “ಖಂಡಿತವಾಗಿಯೂ ನನ್ನ ರಬ್ ಅವನಿಚ್ಛಿಸುವವರಿಗೆ ಅನ್ನಾಧಾರವನ್ನು ವಿಶಾಲಗೊಳಿಸುವನು ಮತ್ತು (ಅವನಿಚ್ಛಿಸುವವರಿಗೆ) ಅದನ್ನು ಸಂಕುಚಿತಗೊಳಿಸುವನು.(952) ಆದರೆ ಜನರಲ್ಲಿ ಹೆಚ್ಚಿನವರೂ ಅರಿಯುವುದಿಲ್ಲ.
952. ಅಲ್ಲಾಹು ಇಹಲೋಕದಲ್ಲಿ ಸಮೃದ್ಧಿಯನ್ನು ನೀಡುವುದು ಕರ್ಮಗಳ ಆಧಾರದಲ್ಲಲ್ಲ. ಅವನು ಕೆಲವೊಮ್ಮೆ ಸಜ್ಜನರಿಗೆ ಕಡುಬಡತನವನ್ನು ನೀಡಬಹುದು. ದುರ್ಜನರಿಗೆ ಕೆಲವೊಮ್ಮೆ ಐಶ್ವರ್ಯವನ್ನು ನೀಡಬಹುದು. ಅಲ್ಲಾಹು ಕೆಲವರಿಗೆ ಐಶ್ವರ್ಯವನ್ನು ನೀಡಿದ್ದಾನೆಂಬ ಕಾರಣದಿಂದ ಅವರು ಶಿಕ್ಷೆಯಿಂದ ಮುಕ್ತರೆಂದು ಯಾರೂ ಭಾವಿಸಬೇಕಾಗಿಲ್ಲ.

(37) ನಿಮ್ಮ ಸಂಪತ್ತಾಗಲಿ ಸಂತತಿಯಾಗಲಿ ನಿಮಗೆ ನಮ್ಮ ಬಳಿ ಸಾಮೀಪ್ಯವನ್ನು ಗಳಿಸಿಕೊಡದು. ಸತ್ಯವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರ ಹೊರತು. ಅವರಿಗೆ ಅವರು ಮಾಡಿರುವುದರ ಫಲವಾಗಿ ಇಮ್ಮಡಿ ಪ್ರತಿಫಲವಿದೆ. ಅವರು ಉನ್ನತ ಸೌಧಗಳಲ್ಲಿ ನಿರ್ಭೀತರಾಗಿ ವಾಸಿಸುವರು.

(38) (ನಮ್ಮನ್ನು) ಸೋಲಿಸುವುದಕ್ಕಾಗಿ ನಮ್ಮ ದೃಷ್ಟಾಂತಗಳನ್ನು ವಿರೋಧಿಸಲು ಯತ್ನಿಸುವವರಾರೋ ಅವರು ಶಿಕ್ಷೆಯಲ್ಲಿ ಹಾಜರುಪಡಿಸಲಾಗುವರು.

(39) ಹೇಳಿರಿ: “ಖಂಡಿತವಾಗಿಯೂ ನನ್ನ ರಬ್ ತನ್ನ ದಾಸರ ಪೈಕಿ ತಾನಿಚ್ಛಿಸುವವರಿಗೆ ಅನ್ನಾಧಾರವನ್ನು ವಿಶಾಲಗೊಳಿಸುವನು ಮತ್ತು ತಾನಿಚ್ಛಿಸುವವರಿಗೆ ಸಂಕುಚಿತಗೊಳಿಸುವನು. ನೀವು ಏನೇ ವ್ಯಯಿಸಿದರೂ ಅದಕ್ಕೆ ಅವನು ಬದಲಿಯಾಗಿ ನೀಡುವನು. ಅನ್ನಾಧಾರ ಒದಗಿಸುವವರಲ್ಲಿ ಅವನು ಅತ್ಯುತ್ತಮನಾಗಿರುವನು”.

(40) ಅವನು ಅವರೆಲ್ಲರನ್ನೂ ಒಟ್ಟುಗೂಡಿಸುವ ದಿನ! ತರುವಾಯ ಅವನು ಮಲಕ್‍ಗಳೊಂದಿಗೆ ಕೇಳುವನು: “ಇವರು ಆರಾಧಿಸುತ್ತಿದ್ದುದು ನಿಮ್ಮನ್ನಾಗಿತ್ತೇ?”

(41) ಅವರು ಹೇಳುವರು: “ನೀನು ಪರಮ ಪಾವನನು! ನಮ್ಮ ರಕ್ಷಕನು ನೀನೇ ಹೊರತು ಅವರಲ್ಲ. ಆದರೆ ಅವರು ಆರಾಧಿಸುತ್ತಿದ್ದುದು ಜಿನ್ನ್‌ಗಳನ್ನಾಗಿತ್ತು.(953) ಅವರಲ್ಲಿ ಹೆಚ್ಚಿನವರೂ ಅವರ (ಜಿನ್ನ್‌ಗಳ) ಮೇಲೆ ವಿಶ್ವಾಸವಿಟ್ಟವರಾಗಿದ್ದರು”.
953. ಮಲಕ್‍ಗಳನ್ನು ದೇವದೇವತೆಯರೆಂದು ಪರಿಕಲ್ಪಿಸಿ ಆರಾಧಿಸುವ ಸಂಪ್ರದಾಯವು ಅನೇಕ ಜನಸಮುದಾಯಗಳಲ್ಲಿ ರೂಢಿಯಲ್ಲಿತ್ತು. ಅವರ ಹೆಸರಲ್ಲಿ ಸ್ಥಾಪಿಸಲಾಗುವ ಪ್ರತಿಷ್ಠಾಪನೆಗಳ ಮುಂದೆ ಇಂತಹ ಆರಾಧನೆಗಳು ನಡೆಯುತ್ತಿದ್ದವು. ಇದು ಮಲಕ್‍ಗಳ ಒಪ್ಪಿಗೆಯಿಂದ ಜರುಗುತ್ತಿರಲಿಲ್ಲ. ಆ ಪ್ರತಿಷ್ಠಾಪನೆಗಳ ಬಳಿ ಮಲಕ್‍ಗಳು ಉಪಸ್ಥಿತರಾಗುತ್ತಿರಲಿಲ್ಲ. ಬದಲಾಗಿ ಸೈತಾನರ (ಜಿನ್ನ್‍ಗಳ) ದುಷ್ಪ್ರೇರಣೆ ಮತ್ತು ಉಪಸ್ಥಿತಿಯು ಅಲ್ಲಿತ್ತು. ಒಟ್ಟಿನಲ್ಲಿ ಅಲ್ಲಿ ಜರಗುತ್ತಿದ್ದುದು ಸೈತಾನರ ಆರಾಧನೆಯಾಗಿತ್ತು. ಮಲಕ್‍ಗಳು ಇಲ್ಲಿ ಹೇಳುತ್ತಿರುವುದು ಈ ವಿಷಯವನ್ನಾಗಿದೆ. ಜನರು ತನ್ನ ಆರಾಧನೆ ಮಾಡುವುದನ್ನು ಯಾರಾದರೂ ಇಷ್ಟಪಡುವುದಾದರೆ ಮಾತ್ರ ಅವನು ‘ಮಅ್‌ಬೂದ್’ (ಆರಾಧ್ಯ) ಎಂಬ ನೆಲೆಯಲ್ಲಿ ಅಲ್ಲಾಹುವಿನ ಶಿಕ್ಷೆಗೆ ಅರ್ಹನಾಗುತ್ತಾನೆ. ಪ್ರವಾದಿ ಈಸಾ(ಅ) ಮುಂತಾದ ಮಹಾತ್ಮರು ಹಾಗೂ ಮಲಕ್‍ಗಳನ್ನು ಆರಾಧಿಸಲಾಗುತ್ತಿರುವುದು ಅವರ ಅರಿವು ಅಥವಾ ಒಪ್ಪಿಗೆಯಿಂದಲ್ಲ. ಆದುದರಿಂದ ಅವರು ನಿರಪರಾಧಿಗಳಾಗಿದ್ದಾರೆ. ಮಲಕ್‍ಗಳ ಉತ್ತರದಲ್ಲಿ ಈ ನಿರಪರಾಧಿತನದ ಬಗ್ಗೆ ಸೂಚನೆಯಿದೆ.

(42) ಆದುದರಿಂದ ಅಂದು ನಿಮಗೆ ಪರಸ್ಪರ ಲಾಭವನ್ನಾಗಲಿ ಹಾನಿಯನ್ನಾಗಲಿ ಮಾಡಲು ಸಾಧ್ಯವಾಗದು. “ನೀವು ನಿಷೇಧಿಸುತ್ತಿದ್ದ ನರಕ ಶಿಕ್ಷೆಯನ್ನು ಆಸ್ವಾದಿಸಿರಿ” ಎಂದು ನಾವು ಅಕ್ರಮವೆಸಗಿದವರೊಂದಿಗೆ ಹೇಳುವೆವು.

(43) ನಮ್ಮ ಸೂಕ್ತಿಗಳನ್ನು ಅವರಿಗೆ ಸ್ಪಷ್ಟವಾಗಿ ಓದಿಕೊಡಲಾದರೆ ಅವರು ಜನರೊಂದಿಗೆ ಹೇಳುವರು: “ಇವರು ನಿಮ್ಮ ಪೂರ್ವಿಕರು ಏನನ್ನು ಆರಾಧಿಸುತ್ತಿದ್ದರೋ ಅದರಿಂದ ನಿಮ್ಮನ್ನು ತಡೆಯಲಿಚ್ಛಿಸುವ ವ್ಯಕ್ತಿ ಮಾತ್ರವಾಗಿರುವರು”. ಅವರು ಹೇಳಿದರು: “ಇದು ಹೆಣೆದು ರಚಿಸಲಾದ ಕಟ್ಟುಕಥೆ ಮಾತ್ರವಾಗಿದೆ”. ಸತ್ಯವು ತಮ್ಮ ಬಳಿಗೆ ಬಂದಾಗ ಅದರ ಬಗ್ಗೆ ಸತ್ಯನಿಷೇಧಿಗಳು ಹೇಳಿದರು: “ಇದು ಸ್ಪಷ್ಟವಾದ ಮಾಂತ್ರಿಕತೆ ಮಾತ್ರವಾಗಿದೆ”.

(44) ಅವರು ಅಧ್ಯಯನ ಮಾಡುವಂತಹ ಯಾವುದೇ ಗ್ರಂಥಗಳನ್ನೂ ನಾವು ಅವರಿಗೆ ನೀಡಿರಲಿಲ್ಲ. ತಮಗಿಂತ ಮುಂಚೆ ಅವರೆಡೆಗೆ ಯಾವುದೇ ಮುನ್ನೆಚ್ಚರಿಕೆಗಾರನನ್ನೂ ನಾವು ಕಳುಹಿಸಿರಲಿಲ್ಲ.(954)
954. ನಾವು ಅನುಸರಿಸುತ್ತಿರುವುದು ಪೂರ್ವಿಕರ ಧರ್ಮವನ್ನಾಗಿದೆ. ಅದು ಪ್ರಮಾದಮುಕ್ತವಾಗಿದೆಯೆಂದು ಮಕ್ಕಾದ ಬಹುದೇವಾರಾಧಕರು ವಾದಿಸುತ್ತಿದ್ದರು. ಆದರೆ ಅವರು ತಮ್ಮ ಮಾದರೀ ಪುರುಷರೆಂದು ಭಾವಿಸಿದ್ದ ಅವರ ಪೂರ್ವಿಕರ ಕಡೆಗೆ ಯಾವುದೇ ಪ್ರವಾದಿಯನ್ನೂ ಕಳುಹಿಸಲಾಗಿರಲಿಲ್ಲ. ಯಾವುದೇ ಗ್ರಂಥವನ್ನೂ ಅವತೀರ್ಣಗೊಳಿಸಲಾಗಿರಲಿಲ್ಲ. ಹೀಗಿರುವಾಗ ಅವರ ವಿಶ್ವಾಸಾಚಾರಗಳು ವಿಶ್ವಾಸಯೋಗ್ಯವಾಗಿರುವುದಾದರೂ ಹೇಗೆ?

(45) ಇವರಿಗಿಂತ ಮುಂಚಿನವರೂ ನಿಷೇಧಿಸಿದ್ದರು. ಅವರಿಗೆ ನಾವು ದಯಪಾಲಿಸಿರುವ ಹತ್ತರಲ್ಲಿ ಒಂದಂಶವನ್ನೂ ಇವರು ಪಡೆದಿಲ್ಲ.(955) ಆದರೆ ಅವರು ನಮ್ಮ ಸಂದೇಶವಾಹಕರನ್ನು ನಿಷೇಧಿಸಿದರು. ಆಗ ನನ್ನ ರೋಷವು ಹೇಗಿತ್ತು!
955. ಅರೇಬಿಯಾದ ಬಹುದೇವಾರಾಧಕರಿಗೆ ಅಲ್ಲಾಹು ನೀಡಿದ ಜೀವನಾನುಕೂಲತೆಗಳಿಗಿಂತ ಎಷ್ಟೋ ಪಟ್ಟು ಅಧಿಕವಾಗಿರುವುದನ್ನು ಈಜಿಪ್ಟ್ ಮತ್ತು ಯಮನ್ ನಿವಾಸಿಗಳಾದ ಪೂರ್ವಿಕರಿಗೆ ನೀಡಲಾಗಿತ್ತು. ಅಲ್ಲಾಹುವಿನ ಸಂದೇಶವಾಹಕರನ್ನು ನಿಷೇಧಿಸಿದಾಗಲೆಲ್ಲ ಅವರೆಲ್ಲರೂ ಅಲ್ಲಾಹುವಿನ ಶಿಕ್ಷೆಗೆ ಪಾತ್ರರಾಗಿದ್ದರು.

(46) ಹೇಳಿರಿ: “ನಾನು ನಿಮಗೆ ಒಂದು ವಿಷಯವನ್ನು ಮಾತ್ರ ಉಪದೇಶ ಮಾಡುವೆನು. ನೀವು ಅಲ್ಲಾಹುವಿಗೋಸ್ಕರ ಇಬ್ಬಿಬ್ಬರಾಗಿ ಅಥವಾ ಒಂಟಿಯಾಗಿ ನಿಲ್ಲಿರಿ. ತರುವಾಯ ಆಲೋಚಿಸಿರಿ.(956) ನಿಮ್ಮ ಒಡನಾಡಿಗೆ (ಪ್ರವಾದಿಯವರಿಗೆ) ಯಾವುದೇ ಬುದ್ಧಿಭ್ರಮಣೆಯಿಲ್ಲ. ಅವರು ಭಯಾನಕವಾದ ಶಿಕ್ಷೆಯ ಮುಂದೆ ನಿಮಗೆ ಮುನ್ನೆಚ್ಚರಿಕೆ ನೀಡುವ ಒಬ್ಬ ವ್ಯಕ್ತಿ ಮಾತ್ರವಾಗಿರುವರು”.
956. ಜನರಲ್ಲಿ ಹೆಚ್ಚಿನವರೂ ಪ್ರವಾದಿ(ಸ) ರವರ ವ್ಯಕ್ತಿತ್ವವನ್ನು ಸರಿಯಾಗಿ ಬೆಲೆಕಟ್ಟುವುದಾಗಲಿ ಅಥವಾ ಅವರು ಬೋಧಿಸುತ್ತಿದ್ದ ವಿಷಯಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವುದಾಗಲಿ ಮಾಡದೆ ಅವರನ್ನು ಅಂಧವಾಗಿ ವಿರೋಧಿಸುವ ಜನರೊಂದಿಗೆ ಯಾವುದೇ ವಿವೇಚನೆಯೂ ಇಲ್ಲದೆ ಸೇರಿಕೊಂಡವರಾಗಿದ್ದಾರೆ. ಅವರು ಅದರಿಂದ ಹೊರಬಂದು ಒಂಟಿಯಾಗಿ ಅಥವಾ ಇಬ್ಬಿಬ್ಬರಾಗಿ ಅಲ್ಲಾಹುವನ್ನು ಸಾಕ್ಷಿಯಾಗಿಸಿ ಗಂಭೀರವಾಗಿ ಅಲೋಚಿಸಲಿ ಎಂದು ಅವರಿಗೆ ಕರೆ ನೀಡುವಂತೆ ಅಲ್ಲಾಹು ಇಲ್ಲಿ ಆದೇಶಿಸುತ್ತಿದ್ದಾನೆ.

(47) ಹೇಳಿರಿ: “ನಾನು ನಿಮ್ಮೊಂದಿಗೆ ಯಾವುದಾದರೂ ಪ್ರತಿಫಲವನ್ನು ಬೇಡಿದ್ದರೆ ಅದು ನಿಮಗೋಸ್ಕರವೇ ಆಗಿದೆ.(957) ನನಗಿರುವ ಪ್ರತಿಫಲವು ಅಲ್ಲಾಹುವಿಂದ ಮಾತ್ರವಾಗಿದೆ. ಅವನು ಸರ್ವ ವಿಷಯಗಳ ಮೇಲೂ ಸಾಕ್ಷಿಯಾಗಿರುವನು.
957. ನಾನು ನಿಮ್ಮೊಂದಿಗೆ ಲೌಕಿಕವಾದ ಯಾವುದೇ ಪ್ರತಿಫಲವನ್ನೂ ಬೇಡುವುದಿಲ್ಲ. ಆದರೆ ನಾನು ನಿಮ್ಮೊಂದಿಗೆ ಒಂದನ್ನು ಮಾತ್ರ ಬೇಡುತ್ತಿದ್ದೇನೆ. ಅದೇನೆಂದರೆ ನೀವು ಸನ್ಮಾರ್ಗವನ್ನು ಸ್ವೀಕರಿಸಬೇಕು. ಅದರ ಪ್ರತಿಫಲ ಕೂಡ ನಿಮಗೇ ಆಗಿದೆ.

(48) ಖಂಡಿತವಾಗಿಯೂ ನನ್ನ ರಬ್ ಸತ್ಯವನ್ನು ಹಾಕಿಕೊಡುವನು. (ಅವನು) ಅಗೋಚರ ವಿಷಯಗಳನ್ನು ಚೆನ್ನಾಗಿ ಅರಿಯುವವನಾಗಿರುವನು”.

(49) ಹೇಳಿರಿ: “ಸತ್ಯವು ಬಂದಿದೆ. ಅಸತ್ಯವು (ಯಾವುದನ್ನೂ) ಆರಂಭಿಸಲಾರದು ಮತ್ತು ಅದು (ಯಾವುದನ್ನೂ) ಪುನಃಸ್ಥಾಪಿಸದು”.

(50) ಹೇಳಿರಿ: “ನಾನು ದಾರಿಗೆಟ್ಟಿರುವುದಾದರೆ ನಾನು ದಾರಿಗೆಟ್ಟಿರುವ ಪಾಪವು ನನಗೇ ಆಗಿದೆ. ನಾನೇನಾದರೂ ಸನ್ಮಾರ್ಗವನ್ನು ಪಡೆದೆನೆಂದಾದರೆ ಅದು ನನ್ನ ರಬ್ ನನಗೆ ನೀಡುತ್ತಿರುವ ದಿವ್ಯಸಂದೇಶದ ಫಲವಾಗಿದೆ. ಖಂಡಿತವಾಗಿಯೂ ಅವನು ಆಲಿಸುವವನೂ, ಅತಿನಿಕಟನೂ ಆಗಿರುವನು”.

(51) ಅವರು (ಸತ್ಯನಿಷೇಧಿಗಳು) ಭಯಭೀತರಾಗುವ ಸಂದರ್ಭವನ್ನು ತಾವು ಕಾಣುತ್ತಿದ್ದರೆ!(958) ಆದರೆ ಅವರು (ಹಿಡಿತದಿಂದ) ಪಾರಾಗಲಾರರು. ಸಮೀಪ ಸ್ಥಳದಿಂದಲೇ ಅವರನ್ನು ಹಿಡಿಯಲಾಗುವುದು.
958. ಸತ್ಯವಿಶ್ವಾಸಿಗಳ ದಿಗ್ವಿಜಯವನ್ನು ಕಾಣುವಾಗ ಉಂಟಾಗುವ ಭಯಭೀತಿಯನ್ನು ಇಲ್ಲಿ ಸೂಚಿಸಿರಬಹುದು. ಮರಣಾಸನ್ನವಾಗುವಾಗ ಉಂಟಾಗುವ ಭಯಭೀತಿಯನ್ನಾಗಿದೆ ಇಲ್ಲಿ ಉದ್ದೇಶಿಸಿದ್ದು ಎಂದು ಕೆಲವು ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ.

(52) “ನಾವು ಇದರಲ್ಲಿ ವಿಶ್ವಾಸವಿಟ್ಟಿರುವೆವು” ಎಂದು ಅವರು ಹೇಳುವರು. ಆದರೆ ವಿದೂರ ಸ್ಥಳದಿಂದ (ಆ ವಿಶ್ವಾಸವನ್ನು) ಗಳಿಸಿಕೊಳ್ಳಲು ಅವರಿಗೆ ಹೇಗೆ ತಾನೇ ಸಾಧ್ಯ?(959)
959. ಸತ್ಯನಿಷೇಧದಲ್ಲಿ ಅಚಲರಾಗಿ ನಿಂತು, ಸತ್ಯವಿಶ್ವಾಸದಿಂದ ಬಹುದೂರ ಸಾಗಿದ ಸತ್ಯನಿಷೇಧಿಗಳಿಗೆ ಆಪತ್ತು ಕಣ್ಮುಂದೆ ಕಾಣುವಾಗ ನಾವು ವಿಶ್ವಾಸವಿಟ್ಟಿದ್ದೇವೆ ಎಂದು ಹೇಳುವುದರಿಂದ ವಿಶ್ವಾಸದ ಮಹತ್ವವನ್ನು ಗಳಿಸಲು ಸಾಧ್ಯವಾಗಲಾರದು. ವಿಚಾರಣಾ ದಿನದಂದು ಸತ್ಯವು ಸಂಶಯಾತೀತವಾಗಿ ಶ್ರುತಪಟ್ಟ ಬಳಿಕ ವಿಶ್ವಾಸ ಘೋಷಣೆ ಮಾಡುವುದರ ನಿರರ್ಥಕತೆಯನ್ನು ಈ ಸೂಕ್ತಿಯಲ್ಲಿ ಸೂಚಿಸಲಾಗಿದೆಯೆಂದು ಕೆಲವು ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ.

(53) ಮುಂಚೆ ಅವರು ಅದರಲ್ಲಿ ಅವಿಶ್ವಾಸವಿಟ್ಟಿದ್ದರು. ಅವರು ವಿದೂರ ಸ್ಥಳದಿಂದ ನೇರವಾಗಿ ಅರಿಯದೆ ಆರೋಪವನ್ನು ಹೊರಿಸುತ್ತಿದ್ದರು.(960)
960. ಪ್ರವಾದಿ(ಸ) ರವರ ವ್ಯಕ್ತಿತ್ವವನ್ನು ನೇರವಾಗಿ ತಿಳಿದುಕೊಳ್ಳಬಯಸದೆ ಶತ್ರುಗಳು ಅವರ ವಿರುದ್ಧ ಕೆಲವು ಆರೋಪಗಳನ್ನು ಹೊರಿಸಿದ್ದರು. ಅವರ ಗೋಚರ ಅರಿವಿಗೆ ಅತೀತವಾಗಿರುವ ಪರಲೋಕದ ಬಗ್ಗೆ ಹೇಳಲಾದಾಗ ಅವರು ಪ್ರವಾದಿ(ಸ) ರವರನ್ನು ಅಪಹಾಸ್ಯ ಮಾಡಿದರು.

(54) ಮುಂಚೆ ಅವರ ಪಂಗಡದವರೊಂದಿಗೆ ಮಾಡಲಾದಂತೆಯೇ ಅವರ ಮತ್ತು ಅವರ ಬಯಕೆಗಳ ಮಧ್ಯೆ ತಡೆ ಹಾಕಲಾಯಿತು.(961) ಖಂಡಿತವಾಗಿಯೂ ಅವರು ಅವಿಶ್ವಾಸ ಹುಟ್ಟಿಸುವಂತಹ ಸಂಶಯದಲ್ಲಿದ್ದರು.
961. ಸತ್ಯವಿಶ್ವಾಸವನ್ನು ಮತ್ತು ಸತ್ಯವಿಶ್ವಾಸಿಗಳನ್ನು ನಿರ್ಮೂಲನ ಮಾಡಬೇಕೆಂದು ಇವರ ಪೂರ್ವಿಕರಂತೆಯೇ ಇವರು ಕೂಡ ಬಯಸಿದ್ದರು. ಆದರೆ ಅವರ ಬಯಕೆಯ ಈಡೇರಿಕೆಗೆ ಅಲ್ಲಾಹು ನಿರಂತರ ಅಡ್ಡಿಪಡಿಸುತ್ತಿದ್ದಾನೆ.