35 - Faatir ()

|

(1) ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿರುವ ಮತ್ತು ಮಲಕ್‍ಗಳನ್ನು ಎರಡು, ಮೂರು ಹಾಗೂ ನಾಲ್ಕು ರೆಕ್ಕೆಗಳುಳ್ಳ(962) ದೂತರನ್ನಾಗಿ ಕಳುಹಿಸಿರುವ ಅಲ್ಲಾಹುವಿಗೆ ಸ್ತುತಿ. ಸೃಷ್ಟಿಯಲ್ಲಿ ಅವನಿಚ್ಛಿಸುವುದನ್ನು ಅವನು ಅಧಿಕಗೊಳಿಸುವನು.(963) ಖಂಡಿತವಾಗಿಯೂ ಅಲ್ಲಾಹು ಸರ್ವ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.
962. ಮಲಕ್‍ಗಳು ಜಗತ್ತಿನ ವಿವಿಧ ಕಡೆಗಳಿಗೆ ವಿಭಿನ್ನ ಕರ್ತವ್ಯಗಳೊಂದಿಗೆ ಕಳುಹಿಸಲಾಗುವ ಅಲ್ಲಾಹುವಿನ ಸಾಮೀಪ್ಯವನ್ನು ಹೊಂದಿರುವ ಅವನ ದಾಸರಾಗಿದ್ದಾರೆ. ಅವರ ಸತ್ತ್ವಕ್ಕೆ ಸಂಬಂಧಿಸಿದ ವೈಶಿಷ್ಟ್ಯತೆಗಳ ಬಗ್ಗೆ ಕುರ್‌ಆನ್ ಮತ್ತು ಸುನ್ನತ್ ನೀಡುವ ವಿವರಣೆಗಳ ಹೊರತು ಬೇರೆ ಮಾಹಿತಿ ಲಭ್ಯವಿಲ್ಲ. ಆದುದರಿಂದಲೇ ರೆಕ್ಕೆಗಳಿಗೆ ಸಂಬಂಧಿಸಿದ ಜ್ಞಾನವು ನಮ್ಮ ಅರಿವಿಗೆ ಅತೀತವಾಗಿದೆ. 963. ಅಲ್ಲಾಹು ಜಗತ್ತನ್ನು ಹಲವು ಹಂತಗಳಲ್ಲಿ ಸೃಷ್ಟಿಸಿದ್ದಾನೆ. ಭೂಮ್ಯಾಕಾಶಗಳು, ತಾರೆಗಳು ಮತ್ತು ಗ್ರಹೋಪಗ್ರಹಗಳು ವಿಕಾಸಗೊಳ್ಳುವುದಕ್ಕೆ ಮುಂಚೆ ಪದಾರ್ಥವು ಏಕಪಿಂಡವಾಗಿತ್ತೆಂದು 21:30ರಲ್ಲಿ ಹೇಳಲಾಗಿದೆ. ಸಸ್ಯಲತಾದಿ ಜೀವರಾಶಿಗಳನ್ನು ಮತ್ತು ಗೋಚರ ಪ್ರಪಂಚದ ಇತರ ಹಲವು ಪ್ರಮುಖ ಘಟಕಗಳನ್ನು ಅಲ್ಲಾಹು ನಂತರ ಸೃಷ್ಟಿಸಿದನು. ನಮ್ಮ ಊಹೆಗೂ ನಿಲುಕದ ಅನೇಕ ವಿಸ್ಮಯಗಳನ್ನು ಅವನು ಸೃಷ್ಟಿಸುತ್ತಿದ್ದಾನೆ.

(2) ಅಲ್ಲಾಹು ಜನರಿಗೆ ಯಾವುದೇ ಅನುಗ್ರಹವನ್ನು ತೆರೆದುಕೊಡುವುದಾದರೂ ಅದನ್ನು ತಡೆಹಿಡಿಯುವವರು ಯಾರೂ ಇಲ್ಲ. ಅವನು ಏನನ್ನಾದರೂ ತಡೆಹಿಡಿಯುವುದಾದರೆ ಅನಂತರ ಅದನ್ನು ಬಿಟ್ಟುಕೊಡುವವರು ಯಾರೂ ಇಲ್ಲ. ಅವನು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.

(3) ಓ ಜನರೇ! ಅಲ್ಲಾಹು ನಿಮಗೆ ದಯಪಾಲಿಸಿರುವ ಅವನ ಅನುಗ್ರಹವನ್ನು ಸ್ಮರಿಸಿರಿ. ಆಕಾಶದಿಂದಲೂ ಭೂಮಿಯಿಂದಲೂ(964) ನಿಮಗೆ ಅನ್ನಾಧಾರವನ್ನು ಒದಗಿಸಲು ಅಲ್ಲಾಹುವಿನ ಹೊರತು ಬೇರೆ ಸೃಷ್ಟಿಕರ್ತನಿರುವನೇ? ಅವನ ಹೊರತು ಅನ್ಯ ಆರಾಧ್ಯರಿಲ್ಲ. ಆದರೂ ನೀವು ತಪ್ಪಿಸಲ್ಪಡುತ್ತಿರುವುದು ಹೇಗೆ?
964. ಸೂರ್ಯಪ್ರಕಾಶವನ್ನು ಅವಲಂಬಿಸಿ ಬೆಳೆಯುವ ಸಸ್ಯಗಳು ಮತ್ತು ಸಸ್ಯಗಳನ್ನು ತಿಂದು ಬೆಳೆಯುವ ಪ್ರಾಣಿಗಳ ಮಾಂಸವು ನಮ್ಮ ಆಹಾರವಾಗಿದೆ. ಆಕಾಶದಿಂದ ಸಿಗುವ ಸೌರಶಕ್ತಿ, ಮೇಲ್ಭಾಗದಿಂದ ಸುರಿಯುವ ಮಳೆನೀರು ಮತ್ತು ಭೂಮಿಯಲ್ಲಿರುವ ಧಾತುಲವಣಗಳು ಆಹಾರವನ್ನು ತಯಾರಿಸುವಲ್ಲಿ ಸಮಾನ ಪಾತ್ರವನ್ನು ವಹಿಸುತ್ತವೆ.

(4) ಅವರು ತಮ್ಮನ್ನು ನಿಷೇಧಿಸುವುದಾದರೆ ತಮಗಿಂತ ಮುಂಚೆಯೂ ಸಂದೇಶವಾಹಕರು ನಿಷೇಧಿಸಲ್ಪಟ್ಟಿರುವರು. ವಿಷಯಗಳೆಲ್ಲವನ್ನೂ ಮರಳಿಸಲಾಗುವುದು ಅಲ್ಲಾಹುವಿನೆಡೆಗಾಗಿದೆ.

(5) ಓ ಮನುಷ್ಯರೇ! ಖಂಡಿತವಾಗಿಯೂ ಅಲ್ಲಾಹುವಿನ ವಾಗ್ದಾನವು ಸತ್ಯವಾಗಿದೆ. ಐಹಿಕಜೀವನವು ನಿಮ್ಮನ್ನು ವಂಚಿಸದಿರಲಿ. ಮಹಾವಂಚಕನಾದ ಸೈತಾನನು ಅಲ್ಲಾಹುವಿನ ವಿಷಯದಲ್ಲಿ ನಿಮ್ಮನ್ನು ವಂಚಿಸದಿರಲಿ.

(6) ಖಂಡಿತವಾಗಿಯೂ ಸೈತಾನನು ನಿಮ್ಮ ಶತ್ರುವಾಗಿರುವನು. ಆದುದರಿಂದ ಅವನನ್ನು ಶತ್ರುವಾಗಿಯೇ ಪರಿಗಣಿಸಿರಿ. ಅವನು ತನ್ನ ಜನರನ್ನು ಆಹ್ವಾನಿಸುತ್ತಿರುವುದು ಅವರು ನರಕವಾಸಿಗಳಲ್ಲಿ ಸೇರಿದವರಾಗಲು ಮಾತ್ರವಾಗಿದೆ.

(7) ಅವಿಶ್ವಾಸವಿಟ್ಟವರಾರೋ ಅವರಿಗೆ ಕಠಿಣ ಶಿಕ್ಷೆಯಿದೆ. ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ ಪಾಪಮುಕ್ತಿಯೂ ಮಹಾ ಪ್ರತಿಫಲವೂ ಇದೆ.

(8) ಆದರೆ ತನ್ನ ದುಷ್ಕರ್ಮಗಳನ್ನು ಆಕರ್ಷಣೀಯಗೊಳಿಸಿ ತೋರಿಸಲಾಗಿ, ಅದನ್ನು ಒಳಿತೆಂದು ಭಾವಿಸಿದವನ ಸ್ಥಿತಿಯೋ? ಅಲ್ಲಾಹು ಅವನಿಚ್ಛಿಸುವವರನ್ನು ಪಥಭ್ರಷ್ಟಗೊಳಿಸುವನು ಮತ್ತು ಅವನಿಚ್ಛಿಸುವವರನ್ನು ಸನ್ಮಾರ್ಗದಲ್ಲಿ ಸೇರಿಸುವನು. ಆದುದರಿಂದ ಅವರ ಬಗ್ಗೆಯಿರುವ ತೀಕ್ಷ್ಣ ದುಃಖದಿಂದಾಗಿ ತಾವು ತಮ್ಮನ್ನೇ ನಾಶ ಮಾಡದಿರಿ. ಖಂಡಿತವಾಗಿಯೂ ಅಲ್ಲಾಹು ಅವರು ಮಾಡುತ್ತಿರುವುದರ ಬಗ್ಗೆ ಅರಿವುಳ್ಳವನಾಗಿರುವನು.

(9) ಮಾರುತಗಳನ್ನು ಕಳುಹಿಸಿದವನು ಅಲ್ಲಾಹುವಾಗಿರುವನು. ತರುವಾಯ ಅವು ಮೋಡಗಳನ್ನು ಕದಡುತ್ತವೆ. ತರುವಾಯ ನಾವು ಆ ಮೋಡವನ್ನು ನಿರ್ಜೀವವಾಗಿರುವ ಪ್ರದೇಶದೆಡೆಗೆ ಸಾಗಿಸಿ, ತನ್ಮೂಲಕ ನಾವು ಭೂಮಿಗೆ ಅದು ನಿರ್ಜೀವವಾದ ಬಳಿಕ ಜೀವವನ್ನು ನೀಡುವೆವು. ಪುನರುತ್ಥಾನವು ಕೂಡ ಹೀಗೆಯೇ ಆಗಿದೆ.

(10) ಯಾರಾದರೂ ಪ್ರತಾಪವನ್ನು ಬಯಸುವುದಾದರೆ ಪ್ರತಾಪವೆಲ್ಲವೂ ಅಲ್ಲಾಹುವಿನ ಅಧೀನದಲ್ಲಿವೆ.(965) ಉತ್ತಮ ವಚನಗಳು ಅವನೆಡೆಗೆ ಏರಿಹೋಗುವುವು. ಅವನು ಸತ್ಕರ್ಮವನ್ನು ಮೇಲೆತ್ತುವನು. ಕೆಟ್ಟ ಸಂಚುಗಳನ್ನು ಹೂಡುವವರಾರೋ ಅವರಿಗೆ ಕಠಿಣ ಶಿಕ್ಷೆಯಿದೆ. ಅವರ ಸಂಚು ಖಂಡಿತವಾಗಿಯೂ ನಾಶವಾಗುವುದು.
965. ಸತ್ಯನಿಷೇಧಿಗಳ ಪ್ರತಾಪ ಮತ್ತು ಐಶ್ವರ್ಯವನ್ನು ಕಂಡು ಅನೇಕ ಮಂದಿ ಮೋಸಹೋಗುತ್ತಾರೆ. ಅವರ ಪರ ವಹಿಸುವುದರಿಂದ ಮತ್ತು ಅವರೊಂದಿಗೆ ಸೇರಿಕೊಳ್ಳುವುದರಿಂದ ಅಂತಸ್ತು ವೃದ್ಧಿಯಾಗುತ್ತದೆಂದು ಕೆಲವರು ಭಾವಿಸುತ್ತಾರೆ. ವಾಸ್ತವಿಕವಾಗಿ ಅದೊಂದು ತಪ್ಪುಕಲ್ಪನೆಯಾಗಿದೆ. ಯಾರಿಗೆ ಯಾವಾಗ ಪ್ರತಾಪ ನೀಡಬೇಕೆಂಬುದನ್ನು ನಿರ್ಧರಿಸುವುದು ಅಲ್ಲಾಹುವಾಗಿದ್ದಾನೆ.

(11) ಅಲ್ಲಾಹು ನಿಮ್ಮನ್ನು ಮಣ್ಣಿನಿಂದ, ತರುವಾಯ ವೀರ್ಯದಿಂದ ಸೃಷ್ಟಿಸಿದನು. ತರುವಾಯ ಅವನು ನಿಮ್ಮನ್ನು ಜೋಡಿಗಳನ್ನಾಗಿ ಮಾಡಿದನು. ಅವನ ಅರಿವಿನ ಪ್ರಕಾರವಲ್ಲದೆ ಯಾವುದೇ ಹೆಣ್ಣು ಗರ್ಭ ಧರಿಸುವುದಾಗಲಿ ಹಡೆಯುವುದಾಗಲಿ ಮಾಡಲಾರಳು. ದೀರ್ಘಾಯುಸ್ಸು ನೀಡಲಾದ ಯಾವುದೇ ವ್ಯಕ್ತಿಗೂ ಆಯುಸ್ಸನ್ನು ಹೆಚ್ಚಿಸಲಾಗುವುದಾಗಲಿ ಅಥವಾ ಅವನ ಆಯುಸ್ಸನ್ನು ಕುಗ್ಗಿಸಲಾಗುವುದಾಗಲಿ ಒಂದು ದಾಖಲೆಯಲ್ಲಿರುವ ಪ್ರಕಾರವಲ್ಲದೆ ನಡೆಯಲಾರದು. ಖಂಡಿತವಾಗಿಯೂ ಅದು ಅಲ್ಲಾಹುವಿನ ಮಟ್ಟಿಗೆ ಅತಿಸುಲಭವಾಗಿದೆ.

(12) ಎರಡು ಜಲಾಶಯಗಳು ಸಮಾನವಾಗಲಾರವು. ಒಂದರಲ್ಲಿ ಕುಡಿಯಲು ಸ್ವಾದಿಷ್ಟವಾದ ಮಾಧುರ್ಯವುಳ್ಳ ಶುದ್ಧಜಲವಿದೆ. ಇನ್ನೊಂದರಲ್ಲಿ ಕಹಿಯಾದ ಉಪ್ಪು ನೀರಿದೆ. ಅವೆರಡು ಬಗೆಯ ನೀರಿನಿಂದಲೂ ನೀವು ತಾಜಾ ಮಾಂಸವನ್ನು(966) ತೆಗೆದು ತಿನ್ನುತ್ತಿದ್ದೀರಿ ಮತ್ತು ನೀವು ಧರಿಸುವಂತಹ ಆಭರಣಗಳನ್ನು (ಅದರಿಂದ) ಹೊರ ತೆಗೆಯುತ್ತಿದ್ದೀರಿ.(967) ಹಡಗುಗಳು ಅದರ ಮೂಲಕ ಸೀಳುತ್ತಾ ಸಾಗುವುದನ್ನು ತಾವು ಕಾಣುವಿರಿ. ಇದು ನೀವು ಅಲ್ಲಾಹುವಿನ ಅನುಗ್ರಹದಿಂದ ಅರಸುವ ಸಲುವಾಗಿ ಮತ್ತು ಕೃತಜ್ಞತೆ ಸಲ್ಲಿಸುವ ಸಲುವಾಗಿದೆ.
966. ಸಮುದ್ರಗಳಿಂದ ಮತ್ತು ನದಿಗಳಿಂದ ಲಭ್ಯವಾಗುವ ಮಧುರವಾದ ತಾಜಾ ಮತ್ಸ್ಯ ಆಹಾರಗಳು. 967. ಸಮುದ್ರದಾಳದಿಂದ ಲಭ್ಯವಾಗುವ ಅಮೂಲ್ಯ ಮುತ್ತುರತ್ನಗಳು.

(13) ಅವನು ರಾತ್ರಿಯನ್ನು ಹಗಲಿನಲ್ಲಿ ನುಸುಳಿಸುವನು. ಹಗಲನ್ನು ರಾತ್ರಿಯಲ್ಲಿ ನುಸುಳಿಸುವನು. ಅವನು ಸೂರ್ಯನನ್ನು ಮತ್ತು ಚಂದ್ರನನ್ನು (ತನ್ನ ನಿಯಮಕ್ಕೆ) ವಿಧೇಯಗೊಳಿಸಿರುವನು. ಎಲ್ಲವೂ ಒಂದು ನಿಶ್ಚಿತ ಅವಧಿಯವರೆಗೆ ಚಲಿಸುತ್ತಿರುವುವು. ಅವನಾಗಿರುವನು ನಿಮ್ಮ ರಬ್ ಆದ ಅಲ್ಲಾಹು. ಆಧಿಪತ್ಯವು ಅವನಿಗಾಗಿದೆ. ಅವನ ಹೊರತು ನೀವು ಯಾರೊಂದಿಗೆ ಪ್ರಾರ್ಥಿಸುತ್ತಿರುವಿರೋ ಅವರ ಸ್ವಾಧೀನದಲ್ಲಿ ಖರ್ಜೂರದ ಪೊರೆಯೂ ಇಲ್ಲ.

(14) ನೀವು ಅವರೊಂದಿಗೆ ಪ್ರಾರ್ಥಿಸಿದರೆ ಅವರು ನಿಮ್ಮ ಪ್ರಾರ್ಥನೆಯನ್ನು ಆಲಿಸಲಾರರು. ಅವರು ಆಲಿಸಿದರೂ ನಿಮಗೆ ಉತ್ತರವನ್ನು ನೀಡಲಾರರು. ಪುನರುತ್ಥಾನದಿನದಂದು ಅವರು ನಿಮ್ಮ ಸಹಭಾಗಿತ್ವವನ್ನು ನಿಷೇಧಿಸುವರು. ಸೂಕ್ಷ್ಮಜ್ಞಾನಿಯಾದವನಂತೆ (ಅಲ್ಲಾಹುವಿನಂತೆ) ತಮಗೆ ತಿಳಿಸಿಕೊಡುವವರಾರೂ ಇಲ್ಲ.

(15) ಓ ಮನುಷ್ಯರೇ! ನೀವು ಅಲ್ಲಾಹುವನ್ನು ಅವಲಂಬಿಸಿದವರಾಗಿದ್ದೀರಿ. ಅಲ್ಲಾಹು ನಿರಪೇಕ್ಷನೂ, ಸ್ತುತ್ಯರ್ಹನೂ ಆಗಿರುವನು.

(16) ಅವನು ಇಚ್ಛಿಸುವುದಾದರೆ ಅವನು ನಿಮ್ಮನ್ನು ನೀಗಿಸಿ, ಹೊಸದೊಂದು ಸೃಷ್ಟಿಯನ್ನು ತರುವನು.

(17) ಅದು ಅಲ್ಲಾಹುವಿಗೆ ಕಷ್ಟವಾಗಿರುವ ವಿಷಯವಲ್ಲ.

(18) ಪಾಪಭಾರವನ್ನು ಹೊರುವ ಯಾರೂ ಇನ್ನೊಬ್ಬನ ಪಾಪಭಾರವನ್ನು ಹೊರಲಾರನು. ಭಾರದಿಂದಾಗಿ ಕಷ್ಟಪಡುವ ಒಬ್ಬನು ತನ್ನ ಭಾರವನ್ನು ಹೊರಲು (ಯಾರನ್ನಾದರೂ) ಕರೆಯುವುದಾದರೆ ಅದರಿಂದ ಏನನ್ನೂ ವಹಿಸಿಕೊಳ್ಳಲಾಗದು.(968) (ಆತ ಕರೆಯುವುದು) ನಿಕಟ ಸಂಬಂಧಿಕನನ್ನಾದರೂ ಸರಿಯೇ. ತಮ್ಮ ಮುನ್ನೆಚ್ಚರಿಕೆಯು ಫಲ ನೀಡುವುದು ತಮ್ಮ ರಬ್ಬನ್ನು ಅಗೋಚರವಾಗಿ ಭಯಪಡುವವರಿಗೆ ಮತ್ತು ನಮಾಝನ್ನು ಸಂಸ್ಥಾಪಿಸುವವರಿಗೆ ಮಾತ್ರವಾಗಿದೆ. ಯಾರು ಪರಿಶುದ್ಧತೆಯನ್ನು ಪಾಲಿಸುವನೋ ಅವನು ಪರಿಶುದ್ಧತೆಯನ್ನು ಪಾಲಿಸುವುದು ಸ್ವತಃ ಅವನ ಒಳಿತಿಗೇ ಆಗಿದೆ. ಮರಳುವಿಕೆಯು ಅಲ್ಲಾಹುವಿನೆಡೆಗಾಗಿದೆ.
968. ವಿಚಾರಣೆಯ ದಿನದಂದು ಒಬ್ಬ ತಂದೆಗೆ ಮಗನ ಪಾಪಭಾರವನ್ನು ಹೊರಲು ಸಾಧ್ಯವಿಲ್ಲ. ಒಬ್ಬ ಮಗನಿಗೆ ತಂದೆಯ ಪಾಪಭಾರವನ್ನು ಹೊರಲು ಸಾಧ್ಯವಿಲ್ಲ. ದಂಪತಿಗಳಲ್ಲಿ ಒಬ್ಬರಿಗೆ ಇನ್ನೊಬ್ಬರ ಪಾಪಭಾರವನ್ನು ಹೊರಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಅವರವರ ಕರ್ಮಫಲಗಳನ್ನು ಅನುಭವಿಸುವರು.

(19) ಕುರುಡನು ಮತ್ತು ದೃಷ್ಟಿಯುಳ್ಳವನು ಸಮಾನರಾಗಲಾರರು.

(20) ಅಂಧಕಾರಗಳು ಮತ್ತು ಪ್ರಕಾಶವು (ಸಮಾನವಾಗಲಾರದು).

(21) ನೆರಳು ಮತ್ತು ಬಿಸಿಲು (ಸಮಾನವಾಗಲಾರದು).

(22) ಬದುಕಿರುವವರು ಮತ್ತು ಮರಣಹೊಂದಿದವರು ಸಮಾನರಾಗಲಾರರು. ಖಂಡಿತವಾಗಿಯೂ ಅಲ್ಲಾಹು ಅವನಿಚ್ಛಿಸುವವರನ್ನು ಆಲಿಸುವಂತೆ ಮಾಡುವನು. ಗೋರಿಗಳಲ್ಲಿರುವವರನ್ನು ಆಲಿಸುವಂತೆ ಮಾಡಲು ತಮ್ಮಿಂದ ಸಾಧ್ಯವಿಲ್ಲ.

(23) ತಾವು ಮುನ್ನೆಚ್ಚರಿಕೆ ನೀಡುವವರು ಮಾತ್ರವಾಗಿದ್ದೀರಿ.

(24) ಖಂಡಿತವಾಗಿಯೂ ನಾವು ತಮ್ಮನ್ನು ಶುಭವಾರ್ತೆ ತಿಳಿಸುವವರಾಗಿ ಮತ್ತು ಮುನ್ನೆಚ್ಚರಿಕೆ ನೀಡುವವರಾಗಿ ಸತ್ಯದೊಂದಿಗೆ ಕಳುಹಿಸಿರುವೆವು. ಒಬ್ಬ ಮುನ್ನೆಚ್ಚರಿಕೆಗಾರರು ಬಂದು ಹೋಗದ ಸಮುದಾಯವೊಂದೂ ಇಲ್ಲ.

(25) ಅವರು ತಮ್ಮನ್ನು ನಿಷೇಧಿಸುವುದಾದರೆ ಅವರಿಗಿಂತ ಮುಂಚಿನವರೂ ನಿಷೇಧಿಸಿರುವರು. ಸ್ಪಷ್ಟವಾದ ಪುರಾವೆಗಳು, ಆಧಾರ ಪ್ರಮಾಣಗಳು ಮತ್ತು ಪ್ರಕಾಶ ಬೀರುವ ಗ್ರಂಥದೊಂದಿಗೆ ಅವರ ಸಂದೇಶವಾಹಕರು ಅವರ ಬಳಿಗೆ ಬಂದಿದ್ದರು.

(26) ತರುವಾಯ ನಾನು ಸತ್ಯನಿಷೇಧಿಗಳನ್ನು ಹಿಡಿದೆನು. ಆಗ ನನ್ನ ರೋಷವು ಹೇಗಿತ್ತು!

(27) ಅಲ್ಲಾಹು ಆಕಾಶದಿಂದ (ಮಳೆ)ನೀರನ್ನು ಸುರಿಸುವುದನ್ನು ತಾವು ನೋಡುವುದಿಲ್ಲವೇ? ತರುವಾಯ ಅದರಿಂದ ನಾವು ವಿವಿಧ ಬಣ್ಣಗಳನ್ನು ಹೊಂದಿರುವ ಫಲಗಳನ್ನು ಉತ್ಪಾದಿಸಿದೆವು. ಪರ್ವತಗಳಲ್ಲೂ ಬೆಳ್ಳಗಿನ ಮತ್ತು ಕೆಂಪಗಿನ ವರ್ಣವೈವಿಧ್ಯತೆಯಿರುವ ಹಾದಿಗಳಿವೆ.(969) ಕಡುಗಪ್ಪು ಬಣ್ಣದ್ದೂ ಇವೆ.
969. ತಿರುವು ಮುರುವುಗಳಾಗಿ ಸಾಗುವ ಪರ್ವತ ಕಣಿವೆಗಳು ಹಲವು ಕಡೆ ಬಂಡೆಗಳ ವರ್ಣ ವೈವಿಧ್ಯತೆಯಿಂದಾಗಿ ಶೋಭಿಸುತ್ತವೆ.

(28) ಮನುಷ್ಯರಲ್ಲೂ, ಜೀವರಾಶಿಗಳಲ್ಲೂ, ಜಾನುವಾರುಗಳಲ್ಲೂ ಹಾಗೆಯೇ ವಿಭಿನ್ನ ಬಣ್ಣಗಳನ್ನು ಹೊಂದಿರುವವುಗಳಿವೆ.(970) ಅಲ್ಲಾಹುವಿನ ದಾಸರಲ್ಲಿ ಅವನನ್ನು ಭಯಪಡುವವರು ಅರಿವುಳ್ಳವರು ಮಾತ್ರವಾಗಿರುವರು.(971) ಖಂಡಿತವಾಗಿಯೂ ಅಲ್ಲಾಹು ಪ್ರತಾಪಶಾಲಿಯೂ, ಅತ್ಯಧಿಕ ಕ್ಷಮಿಸುವವನೂ ಆಗಿರುವನು.
970. ಪ್ರಕೃತಿಯ ವರ್ಣವಿನ್ಯಾಸವು ವಿಸ್ಮಯಕರವಾದ ಒಂದು ವಿದ್ಯಮಾನವಾಗಿದೆ. ವರ್ಣವೈವಿಧ್ಯತೆಗಳ ಹಿಂದಿರುವ ನಿಗೂಢತೆಗಳ ಪೈಕಿ ಹೆಚ್ಚಿನವುಗಳು ಇನ್ನೂ ಅನಾವರಣಗೊಂಡಿಲ್ಲ. ವರ್ಣಗಳು ಅಲ್ಲಾಹುವಿನ ಸೃಷ್ಟಿ ವೈವಿಧ್ಯತೆಯ ನಿದರ್ಶನವಾಗಿದೆ. 971. ತಮ್ಮನ್ನು ಬುದ್ಧಿಜೀವಿಗಳೆಂದು ಭಾವಿಸುವ ಕೆಲವರಿದ್ದಾರೆ. ಅವರು ಅಲ್ಲಾಹುವಿನ ಭಯದ ಬಗ್ಗೆ ಎಲ್ಲಾ ಕಾಲದಲ್ಲೂ ಪ್ರಚಾರ ಮಾಡುತ್ತಾ ಬಂದಿರುವುದು ಅದು ಮಂದಬುದ್ಧಿಗಳ ಮಾನಸಿಕ ದೌರ್ಬಲ್ಯವೆಂದಾಗಿದೆ. ಈ ನಿಲುವು ತಪ್ಪಾಗಿದೆ ಮತ್ತು ಅರಿವು ಹೊಂದಿರುವ ಜನರೇ ಅಲ್ಲಾಹುವಿನ ಭಯವನ್ನು ಹೊಂದಿರುವರು ಎಂದು ಈ ಸೂಕ್ತಿಯು ಸ್ಪಷ್ಟಪಡಿಸುತ್ತದೆ. ಮಿಥ್ಯಭ್ರಮೆಗಳಿಗೆ ಬಲಿಯಾಗಿ ಧರ್ಮವಿರುದ್ಧ ಅಭಿಯಾನಕ್ಕೆ ನಾಯಕತ್ವ ವಹಿಸಿದ್ದ ಅನೇಕ ಮಂದಿ ತದನಂತರ ವಿಶ್ವಾಸಿಗಳಾಗಿ ಮಾರ್ಪಟ್ಟ ಸಂಭವಗಳು ಪ್ರಜ್ಞಾವಂತರ ಕಣ್ಣು ತೆರೆಸಲು ಪರ್ಯಾಪ್ತವಾಗಿದೆ.

(29) ಖಂಡಿತವಾಗಿಯೂ ಅಲ್ಲಾಹುವಿನ ಗ್ರಂಥವನ್ನು ಪಾರಾಯಣ ಮಾಡುವವರು, ನಮಾಝನ್ನು ಸಂಸ್ಥಾಪಿಸುವವರು ಮತ್ತು ನಾವು ನೀಡಿರುವುದರಿಂದ ಗುಪ್ತವಾಗಿಯೂ, ಬಹಿರಂಗವಾಗಿಯೂ ವ್ಯಯಿಸುವವರು ಯಾರೋ ಅವರು ಆಶಿಸುವುದು ಎಂದಿಗೂ ನಷ್ಟ ಹೊಂದದ ಒಂದು ವ್ಯಾಪಾರವನ್ನಾಗಿದೆ.

(30) ಅವನು ಅವರಿಗೆ ಅವರ ಪ್ರತಿಫಲವನ್ನು ಪೂರ್ಣವಾಗಿ ನೀಡುವ ಸಲುವಾಗಿ ಮತ್ತು ಅವನ ಅನುಗ್ರಹದಿಂದ ಅವರಿಗೆ ಅಧಿಕವಾಗಿ ನೀಡುವ ಸಲುವಾಗಿ. ಖಂಡಿತವಾಗಿಯೂ ಅವನು ಅತ್ಯಧಿಕ ಕ್ಷಮಿಸುವವನೂ ಕೃತಜ್ಞನೂ ಆಗಿರುವನು.

(31) ನಾವು ತಮಗೆ ದಿವ್ಯಸಂದೇಶವಾಗಿ ನೀಡಿರುವ ಗ್ರಂಥವು ಸತ್ಯವೇ ಆಗಿದೆ. ಅದರ ಮುಂಚಿನ (ಗ್ರಂಥಗಳನ್ನು) ಅದು ದೃಢೀಕರಿಸುತ್ತದೆ. ಖಂಡಿತವಾಗಿಯೂ ಅಲ್ಲಾಹು ತನ್ನ ದಾಸರ ಬಗ್ಗೆ ಸೂಕ್ಷ್ಮವಾಗಿ ಅರಿಯುವವನೂ, ವೀಕ್ಷಿಸುವವನೂ ಆಗಿರುವನು.

(32) ತರುವಾಯ ನಮ್ಮ ದಾಸರ ಪೈಕಿ ನಾವು ಆರಿಸಿದವರಿಗೆ ಗ್ರಂಥವನ್ನು ಉತ್ತರಾಧಿಕಾರವಾಗಿ ನೀಡಿದೆವು. ಅವರಲ್ಲಿ ಸ್ವತಃ ಅವರೊಂದಿಗೇ ಅಕ್ರಮವೆಸಗಿದವರಿರುವರು. ಮಧ್ಯಮ ನಿಲುವನ್ನು ಹೊಂದಿದವರೂ ಅವರಲ್ಲಿರುವರು. ಅಲ್ಲಾಹುವಿನ ಅಪ್ಪಣೆಯ ಪ್ರಕಾರ ಸತ್ಕರ್ಮಗಳಲ್ಲಿ ಅಗ್ರಪಂಕ್ತಿಯಲ್ಲಿರುವವರೂ ಅವರಲ್ಲಿರುವರು. ಮಹಾ ಅನುಗ್ರಹವು ಅದೇ ಆಗಿದೆ.

(33) ಶಾಶ್ವತ ವಾಸಕ್ಕಿರುವ ಸ್ವರ್ಗೋದ್ಯಾನಗಳನ್ನು ಅವರು ಪ್ರವೇಶಿಸುವರು. ಅಲ್ಲಿ ಅವರಿಗೆ ಬಂಗಾರದ ಬಳೆಗಳನ್ನು ಮತ್ತು ಮುತ್ತುಗಳನ್ನು ತೊಡಿಸಲಾಗುವುದು. ಅಲ್ಲಿ ಅವರ ಉಡುಪು ರೇಷ್ಮೆಯಾಗಿರುವುದು.

(34) ಅವರು ಹೇಳುವರು: “ನಮ್ಮಿಂದ ದುಃಖವನ್ನು ನಿವಾರಿಸಿದ ಅಲ್ಲಾಹುವಿಗೆ ಸ್ತುತಿ. ಖಂಡಿತವಾಗಿಯೂ ನಮ್ಮ ರಬ್ ಅತ್ಯಧಿಕ ಕ್ಷಮಿಸುವವನೂ, ಕೃತಜ್ಞನೂ ಆಗಿರುವನು.

(35) ತನ್ನ ಅನುಗ್ರಹದ ನಿಮಿತ್ತ ಶಾಶ್ವತ ವಾಸಕ್ಕಿರುವ ಈ ಭವನದಲ್ಲಿ ನಮ್ಮನ್ನು ನೆಲೆಗೊಳಿಸಿದವನು ಅವನಾಗಿರುವನು. ಇಲ್ಲಿ ಯಾವುದೇ ತೊಂದರೆಯು ನಮ್ಮನ್ನು ಬಾಧಿಸದು. ಇಲ್ಲಿ ಯಾವುದೇ ದಣಿವು ನಮ್ಮನ್ನು ಸ್ಪರ್ಶಿಸದು.

(36) ಅವಿಶ್ವಾಸವಿಟ್ಟವರಾರೋ ಅವರಿಗೆ ನರಕಾಗ್ನಿಯಿದೆ. ಅವರ ಮೇಲೆ (ಮರಣವನ್ನು) ವಿಧಿಸಲಾಗದು. ಹಾಗಿದ್ದರೆ ಅವರಿಗೆ ಮರಣಹೊಂದಬಹುದಾಗಿತ್ತು. ಅದರ ಶಿಕ್ಷೆಯಿಂದ ಅವರಿಗೆ ಸ್ವಲ್ಪವೂ ರಿಯಾಯಿತಿ ನೀಡಲಾಗದು. ಸರ್ವ ಕೃತಘ್ನರಿಗೂ ನಾವು ಹೀಗೆ ಪತಿಫಲವನ್ನು ನೀಡುವೆವು.

(37) ಅಲ್ಲಿ ಅವರು ರೋದಿಸುವರು. “ನಮ್ಮ ಪ್ರಭೂ! ನಮ್ಮನ್ನು ಹೊರಗೆ ಬಿಡು. (ಮುಂಚೆ) ಮಾಡುತ್ತಿದ್ದುದಕ್ಕಿಂತ ಭಿನ್ನವಾಗಿ ನಾವು ಸತ್ಕರ್ಮವನ್ನು ಮಾಡುವೆವು”. (ಆಗ ನಾವು ಹೇಳುವೆವು): “ಚಿಂತಿಸುವವನಿಗೆ ಚಿಂತಿಸಲು ಬೇಕಾದಷ್ಟು ಆಯುಸ್ಸನ್ನು ನಾವು ನಿಮಗೆ ನೀಡಲಿಲ್ಲವೇ? ಮುನ್ನೆಚ್ಚರಿಕೆಗಾರರು ನಿಮ್ಮ ಬಳಿಗೆ ಬಂದಿದ್ದರು. ಆದುದರಿಂದ ನೀವು ಅನುಭವಿಸಿರಿ. ಅಕ್ರಮಿಗಳಿಗೆ ಸಹಾಯಕರಾಗಿ ಯಾರೂ ಇರಲಾರರು.

(38) ಖಂಡಿತವಾಗಿಯೂ ಅಲ್ಲಾಹು ಆಕಾಶಗಳಲ್ಲಿರುವ ಮತ್ತು ಭೂಮಿಯಲ್ಲಿರುವ ಅಗೋಚರ ವಿಷಯಗಳನ್ನು ಅರಿಯುವವನಾಗಿರುವನು. ಖಂಡಿತವಾಗಿಯೂ ಅವನು ಹೃದಯಗಳಲ್ಲಿರುವುದನ್ನು ಅರಿಯುವವನಾಗಿರುವನು.

(39) ನಿಮ್ಮನ್ನು ಭೂಮಿಯಲ್ಲಿ ಪ್ರತಿನಿಧಿಗಳನ್ನಾಗಿ ಮಾಡಿದವನು ಅವನಾಗಿರುವನು. ಆದುದರಿಂದ ಯಾರಾದರೂ ಅವಿಶ್ವಾಸವಿಡುವುದಾದರೆ ಅವನ ಅವಿಶ್ವಾಸದ ದೋಷವು ಅವನಿಗೇ ಆಗಿದೆ. ಅವಿಶ್ವಾಸಿಗಳಿಗೆ ಅವರ ಅವಿಶ್ವಾಸವು ಅವರ ರಬ್‌ನ ಬಳಿ ಕ್ರೋಧವನ್ನಲ್ಲದೆ ಇನ್ನೇನನ್ನೂ ಹೆಚ್ಚಿಸಿಕೊಡಲಾರದು. ಅವಿಶ್ವಾಸಿಗಳಿಗೆ ಅವರ ಅವಿಶ್ವಾಸವು ನಷ್ಟವನ್ನಲ್ಲದೆ ಇನ್ನೇನನ್ನೂ ಹೆಚ್ಚಿಸಿಕೊಡಲಾರದು.

(40) ಹೇಳಿರಿ: “ಅಲ್ಲಾಹುವಿನ ಹೊರತು ನೀವು ಕರೆದು ಪ್ರಾರ್ಥಿಸುತ್ತಿರುವ ನಿಮ್ಮ ಸಹಭಾಗಿಗಳ ಬಗ್ಗೆ ನೀವು ಚಿಂತಿಸಿದ್ದೀರಾ? ಅವರು ಭೂಮಿಯಲ್ಲಿ ಏನನ್ನು ಸೃಷ್ಟಿಸಿರುವರೆಂದು ನನಗೆ ತೋರಿಸಿಕೊಡಿ. ಅಥವಾ ಅವರಿಗೆ ಆಕಾಶಗಳಲ್ಲಿ ಯಾವುದಾದರೂ ಸಹಭಾಗಿತ್ವವಿದೆಯೇ? ಅಥವಾ ನಾವು ಅವರಿಗೆ ಯಾವುದಾದರೂ ಗ್ರಂಥವನ್ನು ನೀಡಿ ಅವರು ಅದರಲ್ಲಿರುವ ಪುರಾವೆಗೆ ಅನುಗುಣವಾಗಿ ನೆಲೆಗೊಳ್ಳುತ್ತಿರುವರೇ? ಅಲ್ಲ, ಅಕ್ರಮಿಗಳು ಪರಸ್ಪರ ವಾಗ್ದಾನ ಮಾಡುತ್ತಿರುವುದು ವಂಚನೆಯನ್ನು ಮಾತ್ರವಾಗಿದೆ.

(41) ಖಂಡಿತವಾಗಿಯೂ ಅಲ್ಲಾಹು ಆಕಾಶಗಳನ್ನು ಮತ್ತು ಭೂಮಿಯನ್ನು (ಅದರ ಸ್ಥಾನದಿಂದ) ಜಾರಿ ಹೋಗದಂತೆ ಹಿಡಿದಿರುವನು. ಅವೇನಾದರೂ ಜಾರಿ ಹೋದರೆ ಅವನ ಹೊರತು ಯಾರಿಗೂ ಅವುಗಳನ್ನು ಹಿಡಿದು ನಿಲ್ಲಿಸಲು ಸಾಧ್ಯವಾಗದು. ಖಂಡಿತವಾಗಿಯೂ ಅವನು ಸಹನಾಶೀಲನೂ, ಅತ್ಯಧಿಕ ಕ್ಷಮಿಸುವವನೂ ಆಗಿರುವನು.

(42) ತಮ್ಮ ಬಳಿಗೆ ಒಬ್ಬ ಮುನ್ನೆಚ್ಚರಿಕೆಗಾರನು ಬರುವುದಾದರೆ ತಾವು ಇತರ ಯಾವುದೇ ಸಮುದಾಯಕ್ಕಿಂತಲೂ ಹೆಚ್ಚು ಸನ್ಮಾರ್ಗವನ್ನು ಪಡೆದವರಾಗುವೆವು ಎಂದು ಅವರಿಗೆ ಆಣೆಯಿಡಲು ಸಾಧ್ಯವಾಗುವಷ್ಟರ ಮಟ್ಟಿಗೆ ಅಲ್ಲಾಹುವಿನ ಮೇಲೆ ಆಣೆಯಿಟ್ಟು ಅವರು ಹೇಳಿದ್ದರು. ಆದರೆ ಒಬ್ಬ ಮುನ್ನೆಚ್ಚರಿಕೆಗಾರನು ಅವರ ಬಳಿಗೆ ಬಂದಾಗ ಅದು ಅವರಿಗೆ ಹೆಚ್ಚಿಸಿಕೊಟ್ಟಿರುವುದು ವಿಕರ್ಷಣೆಯನ್ನು ಮಾತ್ರವಾಗಿತ್ತು.

(43) ಅದು ಅವರು ಭೂಮಿಯಲ್ಲಿ ಅಹಂಕಾರಪಟ್ಟಿದ್ದರಿಂದ ಮತ್ತು ಕೆಟ್ಟ ಸಂಚು ಹೂಡಿದ್ದರಿಂದಾಗಿದೆ. ಕೆಟ್ಟ ಸಂಚು (ಅದರ ಫಲವು) ಅದನ್ನು ಹೂಡಿದವರ ಮೇಲೆಯೇ ಎರಗುವುದು. ಹಾಗಾದರೆ ಪೂರ್ವಿಕರ ಮೇಲೆ ಜರುಗಿಸಲಾದ ಕ್ರಮಗಳ ವಿನಾ(972) ಅವರು ಇನ್ನೇನನ್ನು ಕಾಯುತ್ತಿರುವರು? ಅಲ್ಲಾಹುವಿನ ಕ್ರಮದಲ್ಲಿ ತಾವು ಯಾವುದೇ ಬದಲಾವಣೆಯನ್ನೂ ಕಾಣಲಾರಿರಿ. ಅಲ್ಲಾಹುವಿನ ಕ್ರಮದಲ್ಲಿ ಯಾವುದೇ ಮಾರ್ಪಾಡನ್ನೂ ತಾವು ಕಾಣಲಾರಿರಿ.
972. ಅಲ್ಲಾಹುವಿನ ಕ್ರಮ ಎಂದರೆ ಪೂರ್ವ ಪ್ರವಾದಿಗಳ ವಿರೋಧಿಗಳಿಗೆ ಅಲ್ಲಾಹು ನೀಡಿದ ಕಠಿಣ ಶಿಕ್ಷೆಯಾಗಿದೆ.

(44) ಅವರು ಭೂಮಿಯಲ್ಲಿ ಸಂಚರಿಸಿ ತಮ್ಮ ಪೂರ್ವಿಕರ ಪರ್ಯಾವಸಾನವು ಹೇಗಿತ್ತೆಂಬುದನ್ನು ನೋಡಿಲ್ಲವೇ? ಅವರು ಇವರಿಗಿಂತಲೂ ಅಪಾರ ಶಕ್ತಿಯುಳ್ಳವರಾಗಿದ್ದರು. ಆಕಾಶಗಳಲ್ಲಿರುವ ಅಥವಾ ಭೂಮಿಯಲ್ಲಿರುವ ಯಾವುದರಿಂದಲೂ ಅಲ್ಲಾಹುವನ್ನು ಸೋಲಿಸಲಾಗದು. ಖಂಡಿತವಾಗಿಯೂ ಅವನು ಸರ್ವಜ್ಞನೂ, ಸರ್ವಶಕ್ತನೂ ಆಗಿರುವನು.

(45) ಅಲ್ಲಾಹು ಮನುಷ್ಯರನ್ನು ಅವರು ಮಾಡಿದ ಕರ್ಮಗಳ ನಿಮಿತ್ತ (ತಕ್ಷಣ) ಹಿಡಿದು ಶಿಕ್ಷಿಸುವುದಾದರೆ ಭೂಮುಖದ ಮೇಲೆ ಯಾವುದೇ ಜೀವಿಯನ್ನೂ ಅವನು ಬಿಟ್ಟುಬಿಡುತ್ತಿರಲಿಲ್ಲ. ಆದರೆ ಒಂದು ನಿಶ್ಚಿತ ಅವಧಿಯವರೆಗೆ ಅವನು ಅವರಿಗೆ ಕಾಲಾವಕಾಶವನ್ನು ನೀಡುವನು. ತರುವಾಯ ಅವರ ಅವಧಿಯು ಬಂದರೆ (ಅವರಿಗೆ ಪಾರಾಗಲು ಸಾಧ್ಯವಾಗದು). ಯಾಕೆಂದರೆ ಖಂಡಿತವಾಗಿಯೂ ಅಲ್ಲಾಹು ತನ್ನ ದಾಸರನ್ನು ವೀಕ್ಷಿಸುತ್ತಿರುವನು.