(1) ಯಾಸೀನ್.
(2) ತತ್ವಪೂರ್ಣವಾದ ಕುರ್‌ಆನ್‍ನ ಮೇಲಾಣೆ.
(3) ಖಂಡಿತವಾಗಿಯೂ ತಾವು ಸಂದೇಶವಾಹಕರಲ್ಲಿ ಸೇರಿದವರಾಗಿದ್ದೀರಿ.
(4) (ತಾವು) ನೇರವಾದ ಹಾದಿಯಲ್ಲಿದ್ದೀರಿ.
(5) ಇದು (ಕುರ್‌ಆನ್) ಪ್ರತಾಪಶಾಲಿಯೂ ಕರುಣಾನಿಧಿಯೂ ಆಗಿರುವವನಿಂದ ಅವತೀರ್ಣಗೊಂಡಿದೆ.
(6) ತಾವು ಒಂದು ಜನತೆಗೆ ಮುನ್ನೆಚ್ಚರಿಕೆಯನ್ನು ನೀಡುವ ಸಲುವಾಗಿ. ಅವರ ಪೂರ್ವಿಕರಿಗೆ ಮುನ್ನೆಚ್ಚರಿಕೆ ನೀಡಲಾಗಿಲ್ಲ. ಆದುದರಿಂದ ಅವರು ಅಲಕ್ಷ್ಯತೆಯಲ್ಲಿ ರುವರು.(973)
973. ಪ್ರವಾದಿ ಈಸಾ(ಅ) ರವರ ಬಳಿಕ ದೀರ್ಘ ಕಾಲದವರೆಗೆ ಪ್ರವಾದಿಗಳ ನಿಯುಕ್ತಿಯುಂಟಾಗಿರಲಿಲ್ಲ. ಕುರ್‌ಆನ್‍ನ ಪ್ರಥಮ ಅಭಿಸಂಬೋಧಿತರಿಗೆ ಸಂಬಂಧಿಸಿದಂತೆ ಅವರ ನಿಕಟಪೂರ್ವ ಅನೇಕ ತಲೆಮಾರುಗಳು ಯಾವುದೇ ಪ್ರವಾದಿಯ ಮುನ್ನೆಚ್ಚರಿಕೆಯನ್ನೂ ಆಲಿಸದವರಾಗಿದ್ದಾರೆ. ಆದುದರಿಂದಲೇ ಅವರು ಸತ್ಯ ಮತ್ತು ಸನ್ಮಾರ್ಗದ ಬಗ್ಗೆ ಅಲಕ್ಷ್ಯರಾಗಿದ್ದರು.
(7) ಅವರ ಪೈಕಿ ಹೆಚ್ಚಿನವರ ಮೇಲೂ (ಶಿಕ್ಷೆಯ) ವಚನವು ಸತ್ಯವಾಗಿ ಪರಿಣಮಿಸಿದೆ. ಆದುದರಿಂದ ಅವರು ವಿಶ್ವಾಸವಿಡಲಾರರು.
(8) ಅವರ ಕೊರಳುಗಳಲ್ಲಿ ನಾವು ಸಂಕೋಲೆಗಳನ್ನು ಇಟ್ಟಿರುವೆವು. ಅದು (ಅವರ) ಗಲ್ಲಗಳ ತನಕ ತಲುಪಿರುವುದು. ಆದುದರಿಂದ ಅವರು ತಲೆಯೆತ್ತಿಕೊಂಡೇ ಇರುವರು.(974)
974. ಸತ್ಯವನ್ನು ಸ್ವೀಕರಿಸುವುದರಿಂದ ಅವರನ್ನು ತಡೆಯುವಂತಹ ಅನೇಕ ಅಂಶಗಳು ಸೇರಿಕೊಂಡು ಅವರ ಕತ್ತುಗಳಲ್ಲಿ ಭಾರವೇರಿದ ಸಂಕೋಲೆಯೊಂದನ್ನು ಸೃಷ್ಟಿಸಿದೆ. ತಮ್ಮ ಸುತ್ತುಮುತ್ತಲ ದೃಷ್ಟಾಂತಗಳೆಡೆಗೆ ತಿರುಗಿ ನೋಡಲು ಅಥವಾ ತಲೆ ಬಗ್ಗಿಸಿ ಕಣ್ಮುಂದಿರುವ ವಾಸ್ತವಿಕತೆಗಳೆಡೆಗೆ ನೋಡಲು ಸಾಧ್ಯವಾಗದ ರೀತಿಯಲ್ಲಿ ಅವರು ಅವಿಶ್ವಾಸ ಮತ್ತು ಅಧರ್ಮದ ಬಂಧನಕ್ಕೆ ಒಳಗಾಗಿರುವರು.
(9) ನಾವು ಅವರ ಮುಂಭಾಗದಲ್ಲಿ ಒಂದು ತಡೆಯನ್ನು ಮತ್ತು ಅವರ ಹಿಂಭಾಗದಲ್ಲಿ ಒಂದು ತಡೆಯನ್ನು ಇಟ್ಟಿರುವೆವು. ತರುವಾಯ ಅವರನ್ನು ಮುಚ್ಚಿರುವೆವು. ಆದುದರಿಂದ ಅವರಿಗೆ ಕಾಣಲು ಸಾಧ್ಯವಾಗದು.
(10) ತಾವು ಅವರಿಗೆ ಮುನ್ನೆಚ್ಚರಿಕೆ ನೀಡಿದರೂ ಅಥವಾ ಮುನ್ನೆಚ್ಚರಿಕೆ ನೀಡದಿದ್ದರೂ ಅವರ ಮಟ್ಟಿಗೆ ಅದು ಸಮಾನವಾಗಿದೆ. ಅವರು ವಿಶ್ವಾಸವಿಡಲಾರರು.
(11) ತಮ್ಮ ಎಚ್ಚರಿಕೆಯು ಫಲಪ್ರದವಾಗುವುದು ಉಪದೇಶವನ್ನು ಅನುಸರಿಸಿದವನಿಗೆ ಮತ್ತು ಅಗೋಚರ ಸ್ಥಿತಿಯಲ್ಲಿ ಪರಮ ದಯಾಮಯನನ್ನು ಭಯಪಡುವವನಿಗೆ ಮಾತ್ರವಾಗಿದೆ. ಆದುದರಿಂದ ಅವನಿಗೆ ಪಾಪಮುಕ್ತಿ ಮತ್ತು ಗೌರವಾನ್ವಿತ ಪ್ರತಿಫಲವಿದೆಯೆಂಬ ಶುಭವಾರ್ತೆಯನ್ನು ತಿಳಿಸಿರಿ.
(12) ಖಂಡಿತವಾಗಿಯೂ ನಾವು ಮರಣಹೊಂದಿದವರಿಗೆ ಜೀವವನ್ನು ನೀಡುವೆವು. ಅವರು ಮಾಡಿಟ್ಟ ಕರ್ಮಗಳನ್ನು ಮತ್ತು ಅವರ (ಕರ್ಮಗಳ) ಅನಂತರ ಫಲಗಳನ್ನು ನಾವು ದಾಖಲಿಸುವೆವು. ಎಲ್ಲ ವಿಷಯಗಳನ್ನೂ ನಾವು ಸುಸ್ಪಷ್ಟವಾದ ಒಂದು ಗ್ರಂಥದಲ್ಲಿ ನಮೂದಿಸಿರುವೆವು.
(13) ಆ ದೇಶದವರ(975) ಒಂದು ಉದಾಹರಣೆಯನ್ನು ಅವರಿಗೆ ತಿಳಿಸಿಕೊಡಿರಿ. ಅಲ್ಲಿಗೆ ಸಂದೇಶವಾಹಕರು ಬಂದ ಸಂದರ್ಭ!
975. ಈ ದೇಶ ಯಾವುದು? ಇಲ್ಲಿಗೆ ಕಳುಹಿಸಲಾದ ಸಂದೇಶವಾಹಕರು ಯಾರು? ಈ ಬಗ್ಗೆ ಕುರ್‌ಆನ್ ಸ್ಪಷ್ಟಪಡಿಸಿಲ್ಲ. ಸಹೀಹಾದ ಹದೀಸಿನಲ್ಲೂ ಬಂದಿಲ್ಲ. ಸಂದೇಶವಾಹಕರ ವಿಷಯದಲ್ಲಿ ಅವರು ಕೈಗೊಂಡ ನಿಲುವು ಮತ್ತು ಅದರ ಅನಂತರ ಫಲಗಳ ಬಗ್ಗೆ ಮಾತ್ರ ಒತ್ತು ನೀಡಿ ಹೇಳಲಾಗಿದೆ.
(14) ನಾವು ಅವರೆಡೆಗೆ ಇಬ್ಬರನ್ನು ಸಂದೇಶವಾಹಕರನ್ನಾಗಿ ಕಳುಹಿಸಿದಾಗ ಅವರಿಬ್ಬರನ್ನೂ ಅವರು ನಿಷೇಧಿಸಿದರು. ಆಗ ಮೂರನೆಯವರ ಮೂಲಕ ನಾವು ಅವರಿಗೆ ಬೆಂಬಲವನ್ನು ನೀಡಿದೆವು. ತರುವಾಯ ಅವರು ಹೇಳಿದರು: “ಖಂಡಿತವಾಗಿಯೂ ನಾವು ನಿಮ್ಮ ಬಳಿಗೆ ಕಳುಹಿಸಲಾಗಿರುವವರಾಗಿರುವೆವು”.
(15) ಅವರು (ಜನರು) ಹೇಳಿದರು: “ನೀವು ನಮ್ಮಂತಿರುವ ಮನುಷ್ಯರು ಮಾತ್ರವಾಗಿದ್ದೀರಿ. ಪರಮ ದಯಾಮಯನು ಏನನ್ನೂ ಅವತೀರ್ಣಗೊಳಿಸಿಲ್ಲ. ಖಂಡಿತವಾಗಿಯೂ ನೀವು ಸುಳ್ಳು ಹೇಳುತ್ತಿದ್ದೀರಿ”.
(16) ಅವರು ಹೇಳಿದರು: “ಖಂಡಿತವಾಗಿಯೂ ನಾವು ನಿಮ್ಮ ಬಳಿಗೆ ಕಳುಹಿಸಲಾದವರೇ ಆಗಿರುವೆವು ಎಂಬುದನ್ನು ನಮ್ಮ ರಬ್ ಅರಿತಿರುವನು.
(17) ಸ್ಪಷ್ಟವಾದ ಬೋಧನೆಯ ಹೊರತು ನಮ್ಮ ಮೇಲೆ ಇನ್ನಾವ ಹೊಣೆಗಾರಿಕೆಯೂ ಇಲ್ಲ”.
(18) ಅವರು (ಜನರು) ಹೇಳಿದರು: “ಖಂಡಿತವಾಗಿಯೂ ನಾವು ನಿಮ್ಮನ್ನೊಂದು ಅಪಶಕುನವಾಗಿ ಕಾಣುತ್ತಿರುವೆವು.(976) ನೀವು (ಇದನ್ನು) ನಿಲ್ಲಿಸದಿದ್ದರೆ ಖಂಡಿತವಾಗಿಯೂ ನಾವು ನಿಮ್ಮನ್ನು ಕಲ್ಲೆಸೆದು ಓಡಿಸುವೆವು. ಖಂಡಿತವಾಗಿಯೂ ನಮ್ಮ ಕಡೆಯ ಯಾತನಾಮಯವಾದ ಶಿಕ್ಷೆಯು ನಿಮ್ಮನ್ನು ಸ್ಪರ್ಶಿಸುವುದು”.
976. ಅಂಧವಿಶ್ವಾಸಿಗಳಾದ ಜನತೆಯೆಡೆಗೆ ಸತ್ಯದ ಸಂದೇಶಗಳೊಂದಿಗೆ ತೆರಳಿದವರನ್ನು ಅಪಶಕುನವೆಂದೇ ಹೆಚ್ಚಿನವರೂ ಭಾವಿಸುತ್ತಾರೆ. ಇವರನ್ನು ತಮ್ಮ ಪಟ್ಟಣದಲ್ಲಿ ಇರಗೊಡಲು ಬಿಟ್ಟರೆ ತಮ್ಮ ಆರಾಧ್ಯರುಗಳ ಶಾಪಕ್ಕೆ ತಾವು ತುತ್ತಾಗಬೇಕಾದೀತು ಎಂದು ಅವರು ಭಯಪಡುತ್ತಾರೆ.
(19) ಅವರು ಹೇಳಿದರು: “ನಿಮ್ಮ ಅಪಶಕುನವು ನಿಮ್ಮ ಬಳಿಯಲ್ಲಿರುವುದಾಗಿದೆ.(977) ನಿಮಗೆ ಉಪದೇಶ ನೀಡಲಾಗುವಾಗ (ನಿಮ್ಮ ನಿಲುವು) ಇದಾಗಿದೆಯೇ? ಆದರೆ, ನೀವು ಮಿತಿಮೀರಿದ ಒಂದು ಜನತೆಯಾಗಿದ್ದೀರಿ”.
977. ನಿಮ್ಮ ಪಥಭ್ರಷ್ಟ ವಿಶ್ವಾಸಗಳು ಮತ್ತು ದುಷ್ಕೃತ್ಯಗಳೇ ನಿಮಗೆ ಆಪತ್ತನ್ನು ಆಹ್ವಾನಿಸುತ್ತವೆ ಎಂದರ್ಥ.
(20) ಪಟ್ಟಣದ ತುತ್ತತುದಿಯಿಂದ ಒಬ್ಬ ವ್ಯಕ್ತಿ ಓಡಿ ಬಂದು ಹೇಳಿದರು: “ಓ ನನ್ನ ಜನರೇ! ನೀವು ಆ ಸಂದೇಶವಾಹಕರನ್ನು ಅನುಸರಿಸಿರಿ.(978)
978. ಪಟ್ಟಣದ ಮುಖಂಡರು ಮತ್ತು ಜನರ ಪೈಕಿ ಹೆಚ್ಚಿನವರೂ ಸಂದೇಶವಾಹಕರನ್ನು ನಿಷೇಧಿಸಿದರು. ಆದರೆ ಬೆರಳೆಣಿಕೆಯ ಕೆಲವು ಜನರು ಅವರಲ್ಲಿ ವಿಶ್ವಾಸವಿಟ್ಟರು. ಅಂತಹವರ ಪೈಕಿ ಒಬ್ಬರು ಜನರನ್ನು ಉದ್ದೇಶಿಸಿ ಸಂದೇಶವಾಹಕರ ಸಂದೇಶದ ಮೂಲತತ್ವದ ಬಗ್ಗೆ ಮಾತನಾಡಿದರು.
(21) ನಿಮ್ಮಿಂದ ಯಾವುದೇ ಪ್ರತಿಫಲವನ್ನು ಬೇಡದವರನ್ನು ಮತ್ತು ಸನ್ಮಾರ್ಗ ಪಡೆದವರನ್ನು ನೀವು ಅನುಸರಿಸಿರಿ.
(22) ನನ್ನನ್ನು ಯಾರು ಸೃಷ್ಟಿಸಿದನೋ ಮತ್ತು ಯಾರೆಡೆಗೆ ನಿಮ್ಮನ್ನು ಮರಳಿಸಲಾಗುವುದೋ ಅವನನ್ನು ನಾನು ಆರಾಧಿಸದಿರಲು ನನಗಿರುವ ಸಮರ್ಥನೆಯಾದರೂ ಏನು?
(23) ನಾನು ಅವನ ಹೊರತು ಅನ್ಯರನ್ನು ಆರಾಧ್ಯರನ್ನಾಗಿ ಮಾಡಿಕೊಳ್ಳುವುದೇ? ಪರಮ ದಯಾಮಯನು ನನಗೇನಾದರೂ ಹಾನಿಯನ್ನುಂಟುಮಾಡಲು ಇಚ್ಛಿಸಿದರೆ ಅವರ ಶಿಫಾರಸು ನನಗೆ ಕಿಂಚಿತ್ತೂ ಪ್ರಯೋಜನಪಡದು. ಅವರು ನನ್ನ ರಕ್ಷಣೆಯನ್ನೂ ಮಾಡಲಾರರು.
(24) ನಾನೇನಾದರೂ ಹಾಗೆ ಮಾಡಿದರೆ ಖಂಡಿತವಾಗಿಯೂ ನಾನು ಸುಸ್ಪಷ್ಟವಾದ ಪಥಭ್ರಷ್ಟತೆಯಲ್ಲಾಗುವೆನು.
(25) ಖಂಡಿತವಾಗಿಯೂ ನಾನು ನಿಮ್ಮ ರಬ್‌ನಲ್ಲಿ ವಿಶ್ವಾಸವಿಟ್ಟಿರುವೆನು. ಆದುದರಿಂದ ನೀವು ನನ್ನ ಮಾತನ್ನು ಆಲಿಸಿರಿ”.
(26) “ಸ್ವರ್ಗವನ್ನು ಪ್ರವೇಶಿಸಿರಿ” ಎಂದು ಹೇಳಲಾಯಿತು.(979) ಅವರು (ಆ ವ್ಯಕ್ತಿ) ಹೇಳಿದರು: “ನನ್ನ ಜನತೆಯು ಅರಿತಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು!
979. ಆ ಸತ್ಯವಿಶ್ವಾಸಿಯನ್ನು ಆ ಊರಿನ ಜನರು ಕೊಂದರು. ಹುತಾತ್ಮರಾದ ಬಳಿಕ ಅಲ್ಲಾಹು ಆ ವ್ಯಕ್ತಿಗೆ ಸ್ವರ್ಗದ ಬಗ್ಗೆ ಶುಭವಾರ್ತೆ ತಿಳಿಸಿದ್ದನ್ನು ಇಲ್ಲಿ ಹೇಳಲಾಗಿದೆ. ಆ ಸಂದರ್ಭದಲ್ಲೂ ಅವರ ಮನಸ್ಸಿನಲ್ಲಿದ್ದುದು ತಮ್ಮ ಊರಿನ ಜನರು ಸತ್ಯದ ಬಗ್ಗೆ ಪ್ರಜ್ಞಾವಂತರಾಗಲೆಂಬ ಹಂಬಲವಾಗಿತ್ತು.
(27) ನನ್ನ ರಬ್ ನನ್ನನ್ನು ಕ್ಷಮಿಸಿರುವನು ಮತ್ತು ನನ್ನನ್ನು ಗೌರವಾನ್ವಿತರ ಪೈಕಿ ಸೇರಿಸಿರುವನು ಎಂಬುದನ್ನು”.
(28) ಅವರ ಬಳಿಕ ಅವರ ಜನತೆಯ ಮೇಲೆ ನಾವು ಆಕಾಶದಿಂದ ಯಾವುದೇ ಸೈನ್ಯವನ್ನೂ ಇಳಿಸಲಿಲ್ಲ.(980) ನಾವು ಹಾಗೆ ಇಳಿಸುವವರೂ ಅಲ್ಲ.
980. ಸತ್ಯವಿಶ್ವಾಸದೆಡೆಗೆ ಕರೆದ ಸಂದೇಶವಾಹಕರೊಂದಿಗೆ ಕಡು ವಿರೋಧವನ್ನು ಪ್ರಕಟಿಸಿದ ಆ ಜನತೆಯು ಅಲ್ಲಾಹುವಿನ ಶಕ್ತಿಯ ಮುಂದೆ ಸಂಪೂರ್ಣ ತುಚ್ಛರಾಗಿದ್ದರು. ಅವರನ್ನು ದಮನಿಸಲು ಒಂದು ಸೈನ್ಯವನ್ನು ಕಳುಹಿಸಬೇಕಾದ ಅಗತ್ಯವು ಅಲ್ಲಾಹುವಿಗೆ ಇರಲಿಲ್ಲ. ಘೋರವಾದ ಶಬ್ದವೊಂದರ ಮೂಲಕ ಅವರ ಕಥೆಯನ್ನು ಮುಗಿಸಲಾಯಿತು.
(29) ಅದೊಂದು ಘೋರ ಶಬ್ದ ಮಾತ್ರವಾಗಿತ್ತು. ಆಗ ಅಗೋ! ಅವರು ನಿರ್ನಾಮವಾಗಿ ಹೋದರು.
(30) ಆ ದಾಸರ ಸ್ಥಿತಿ ಎಷ್ಟು ಪರಿತಾಪಕರ! ಯಾವುದೇ ಸಂದೇಶವಾಹಕರು ಅವರ ಬಳಿಗೆ ಬಂದಾಗಲೆಲ್ಲ ಅವರು ಅವರನ್ನು ಅಪಹಾಸ್ಯ ಮಾಡದಿರಲಿಲ್ಲ.
(31) ಅವರಿಗಿಂತ ಮುಂಚೆ ಎಷ್ಟು ತಲೆಮಾರುಗಳನ್ನು ನಾವು ನಾಶ ಮಾಡಿರುವೆವು! ಅವರಾರೂ ಇವರ ಬಳಿಗೆ ಮರಳಲಾರರೆಂಬುದನ್ನು ಅವರು ಕಾಣುವುದಿಲ್ಲವೇ?
(32) ಖಂಡಿತವಾಗಿಯೂ ಯಾರನ್ನೂ ಬಿಡದೆ ಅವರೆಲ್ಲರನ್ನೂ ನಮ್ಮ ಮುಂದೆ ಹಾಜರುಪಡಿಸಲಾಗುವುದು.
(33) ನಿರ್ಜೀವವಾಗಿರುವ ಭೂಮಿಯು ಅವರಿಗೊಂದು ದೃಷ್ಟಾಂತವಾಗಿದೆ. ನಾವು ಅದಕ್ಕೆ ಜೀವವನ್ನು ನೀಡಿದೆವು ಮತ್ತು ಅದರಿಂದ ಧಾನ್ಯವನ್ನು ಉತ್ಪಾದಿಸಿದೆವು. ತರುವಾಯ ಅವರು ಅದರಿಂದ ತಿನ್ನುತ್ತಿರುವರು.
(34) ನಾವು ಅದರಲ್ಲಿ ಖರ್ಜೂರಗಳ ಮತ್ತು ದ್ರಾಕ್ಷಿಗಳ ತೋಟಗಳನ್ನು ಮಾಡಿದೆವು. ನಾವು ಅದರಲ್ಲಿ ತೊರೆಗಳನ್ನೂ ಹರಿಸಿದೆವು.
(35) ಅದರ ಫಲಗಳಿಂದ ಅವರು ತಿನ್ನುವ ಸಲುವಾಗಿ. ಅದನ್ನು ನಿರ್ಮಿಸಿದ್ದು ಅವರ ಕೈಗಳಲ್ಲ. ಆದರೂ ಅವರು ಕೃತಜ್ಞತೆ ಸಲ್ಲಿಸಲಾರರೇ?
(36) ಭೂಮಿ ಉತ್ಪಾದಿಸುವ ಸಸ್ಯಗಳಲ್ಲಿ, ಅವರ ಸ್ವಂತ ವರ್ಗಗಳಲ್ಲಿ ಮತ್ತು ಅವರು ಅರಿತಿರದ ವಸ್ತುಗಳಲ್ಲಿ ಸೇರಿದ ಎಲ್ಲ ಜೋಡಿಗಳನ್ನು ಸೃಷ್ಟಿಸಿದವನು ಎಷ್ಟು ಪರಿಪಾವನನು!(981)
981. ಭೌತಿಕ ಜಗತ್ತಿನಲ್ಲುಂಟಾಗುವ ಸರ್ವ ವಿಕಾಸಗಳಲ್ಲೂ ಜೋಡಿಗಳು ಅಥವಾ ಅವಳಿಗಳು ನಿರ್ವಹಿಸುವ ಪಾತ್ರವು ಅನುಪಮವಾಗಿದೆ. ಜೋಡಿಗಳಿಂದಾಗಿ ನಡೆಯುವ ಬೆಳವಣಿಗೆಯು ಜೈವಸಸ್ಯಲೋಕದಲ್ಲಿ ಅತ್ಯಂತ ಪ್ರಕಟವಾಗಿದೆ. ಸೂಕ್ಷ್ಮ ವಿಶ್ಲೇಷಣೆಯ ಮೂಲಕ ಪದಾರ್ಥಗಳ ಅನೇಕ ರಚನೆಗಳಲ್ಲಿ ಜೋಡಿಗಳಿಗಿರುವ ನಿರ್ಣಾಯಕ ಸ್ಥಾನವನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.
(37) ರಾತ್ರಿಯು ಅವರಿಗೊಂದು ದೃಷ್ಟಾಂತವಾಗಿದೆ. ನಾವು ಅದರಿಂದ ಹಗಲನ್ನು ಕಳಚಿ ತೆಗೆಯುವೆವು.(982) ಆಗ ಅಗೋ! ಅವರು ಇರುಳಲ್ಲಿರುವರು.
982. ಸಮಯದ ಒಂದು ನಿಗದಿತ ಅವಧಿಯು ಹಗಲಾಗಿ ಮಾರ್ಪಡುವುದು ಸೂರ್ಯ ಪ್ರಕಾಶದಿಂದಾಗಿದೆ. ಹಗಲು ಅಥವಾ ಅದರ ಪ್ರತೀಕವಾದ ಸೂರ್ಯ ಪ್ರಕಾಶವು ಇಲ್ಲದಾಗುವಾಗ ರಾತ್ರಿಯಾಗುತ್ತದೆ. ರಾತ್ರಿಯ ಅಥವಾ ಇರುಳಿನ ಋಣಾತ್ಮಕತೆಯನ್ನು ಪ್ರಸ್ತುತ ಸೂಕ್ತಿಯು ಸೂಚಿಸುತ್ತದೆ.
(38) ಸೂರ್ಯನು ಅದರ ನಿಶ್ಚಿತ ಸ್ಥಾನದೆಡೆಗೆ ಚಲಿಸುತ್ತಿರುವನು. ಅದು ಪ್ರತಾಪಶಾಲಿಯೂ, ಸರ್ವಜ್ಞನೂ ಆಗಿರುವ ಅಲ್ಲಾಹುವಿನ ನಿರ್ಣಯವಾಗಿದೆ.
(39) ನಾವು ಚಂದ್ರನಿಗೆ ಕೆಲವು ಹಂತಗಳನ್ನು ನಿರ್ಣಯಿಸಿರುವೆವು. ತರುವಾಯ ಅದು ಹಳೆಯ ಖರ್ಜೂರದ ಗೊನೆಯ ಬಾಗಿದ ದಿಂಡಿನಂತಾಗುವುದು.
(40) ಸೂರ್ಯನಿಗೆ ಚಂದ್ರನನ್ನು ತಲುಪಲು ಸಾಧ್ಯವಾಗದು. ರಾತ್ರಿಯು ಹಗಲನ್ನು ದಾಟಿಹೋಗದು. ಎಲ್ಲವೂ (ನಿಶ್ಚಿತವಾದ) ಕಕ್ಷೆಯಲ್ಲೇ ಈಜುತ್ತಿರುವುವು.
(41) ನಾವು ಅವರ ಸಂತತಿಗಳನ್ನು ಭಾರ ತುಂಬಿದ ಹಡಗಿನಲ್ಲಿ ಹೊತ್ತು ಸಾಗಿಸಿರುವುದು ಅವರಿಗೊಂದು ದೃಷ್ಟಾಂತವಾಗಿದೆ.(983)
983. ಕೆಲವು ವ್ಯಾಖ್ಯಾನಕಾರರ ಅಭಿಪ್ರಾಯ ಪ್ರಕಾರ ಈ ವಚನದಲ್ಲಿ ಉದ್ದೇಶಿಸಿರುವುದು ಸಮುದ್ರಾಂತರ ಪ್ರದೇಶಗಳಿಗೆ ಮನುಷ್ಯರನ್ನು ತಲುಪಿಸುವುದಕ್ಕಾಗಿ ಅಲ್ಲಾಹು ಸೃಷ್ಟಿಸಿಕೊಟ್ಟ ಹಡಗು ಮುಂತಾದ ಯಾತ್ರಾ ಸೌಕರ್ಯಗಳ ಬಗ್ಗೆಯಾಗಿದೆ. ನೂಹ್(ಅ) ರವರ ಕಾಲದಲ್ಲಿ ಸಂಭವಿಸಿದ ಪ್ರಳಯದಲ್ಲಿ ನಾಶವಾಗದ ಸತ್ಯವಿಶ್ವಾಸಿಗಳನ್ನು (ಅವರ ಮೂಲಕ ಅವರ ಸಂತತಿಗಳನ್ನೂ) ಹಡಗಿನಲ್ಲೇರಿಸಿ ಅಲ್ಲಾಹು ಕಾಪಾಡಿದ ಘಟನೆಯ ಬಗ್ಗೆಯಾಗಿದೆ ಇಲ್ಲಿ ಪ್ರಸ್ತಾಪಿಸಿರುವುದು ಎಂದು ಇತರ ಕೆಲವು ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ.
(42) ಅವರು ವಾಹನವಾಗಿ ಬಳಸುವ ಇತರ ವಸ್ತುಗಳನ್ನೂ ನಾವು ಅವರಿಗಾಗಿ ಸೃಷ್ಟಿಸಿರುವೆವು.
(43) ನಾವು ಇಚ್ಛಿಸಿದರೆ ನಾವು ಅವರನ್ನು ಮುಳುಗಿಸುವೆವು. ಆಗ ಅವರಿಗೆ ಸಹಾಯಕರಾಗಿ ಯಾರೂ ಇರಲಾರರು. ಅವರು ರಕ್ಷಣೆಯನ್ನೂ ಪಡೆಯಲಾರರು.
(44) ನಮ್ಮ ಕಡೆಯ ಕಾರುಣ್ಯ ಮತ್ತು ಒಂದು ನಿಶ್ಚಿತ ಕಾಲದವರೆಗಿರುವ ಸುಖಸೌಕರ್ಯಗಳಾಗಿ (ನಾವು ಅವರಿಗೆ ನೀಡುವುದರ) ಹೊರತು.
(45) “ನಿಮ್ಮ ಮುಂದೆ ಬರಲಿರುವ ಮತ್ತು ನಿಮ್ಮ ಹಿಂದೆ ಗತಿಸಿಹೋಗಿರುವ ಶಿಕ್ಷೆಯ ಬಗ್ಗೆ ಭಯಪಡಿರಿ.(984) ನಿಮಗೆ ಕಾರುಣ್ಯವು ಲಭ್ಯವಾಗಬಹುದು” ಎಂದು ಅವರೊಂದಿಗೆ ಹೇಳಲಾದರೆ (ಅವರದನ್ನು ನಿರ್ಲಕ್ಷಿಸುವರು).
984. ಸತ್ಯನಿಷೇಧಿ ಮತ್ತು ಧಿಕ್ಕಾರಿಗಳಾದ ಪೂರ್ವಿಕರ ಮೇಲೆರಗಿದ ಶಿಕ್ಷೆ ಮತ್ತು ಮರಣಾನಂತರ ಬರಲಿರುವ ಪರಲೋಕ ಶಿಕ್ಷೆಯ ಬಗ್ಗೆ ಭಯಪಡಿರಿ ಎಂಬುದೇ ಅವರು ಸದಾ ಕಡೆಗಣಿಸುತ್ತಿದ್ದ ಉಪದೇಶವಾಗಿತ್ತು.
(46) ಅವರ ರಬ್‌ನ ಕಡೆಯ ದೃಷ್ಟಾಂತಗಳ ಪೈಕಿ ಯಾವುದೇ ದೃಷ್ಟಾಂತವು ಅವರ ಬಳಿಗೆ ಬಂದರೂ ಅವರು ಅದರಿಂದ ವಿಮುಖರಾಗದೇ ಇರುತ್ತಿರಲಿಲ್ಲ.
(47) “ನಿಮಗೆ ಅಲ್ಲಾಹು ನೀಡಿರುವುದರಿಂದ ಖರ್ಚು ಮಾಡಿರಿ” ಎಂದು ಅವರೊಂದಿಗೆ ಹೇಳಲಾದರೆ ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳೊಂದಿಗೆ ಹೇಳುವರು: “ಅಲ್ಲಾಹು ಇಚ್ಛಿಸಿದ್ದರೆ ಸ್ವತಃ ಅವನೇ ಆಹಾರ ನೀಡುವಂತಹ ಜನರಿಗೆ ನಾವು ಆಹಾರ ನೀಡುವುದೇ?(985) ನೀವು ಸ್ಪಷ್ಟವಾದ ಪಥಭ್ರಷ್ಟತೆಯಲ್ಲೇ ಇದ್ದೀರಿ”.
985. ಇದು ಸತ್ಯನಿಷೇಧಿಗಳಾದ ಜಿಪುಣರು ತಮ್ಮ ಹಿತವನ್ನು ಕಾಪಾಡುವುದಕ್ಕಾಗಿ ಮುಂದಿಡುವ ಒಂದು ಕುತರ್ಕವಾಗಿದೆ. ಓರ್ವನು ಹಸಿವಿನಿಂದ ಇರಬೇಕೆಂಬುದು ಅಲ್ಲಾಹುವಿನ ವಿಧಿಯೆಂದಾದರೆ ಅವನಿಗೆ ಆಹಾರವನ್ನು ಒದಗಿಸುವುದು ಆ ವಿಧಿಗೆ ವಿರುದ್ಧವಲ್ಲವೇ? ಎಂಬುದು ಅವರ ತರ್ಕವಾಗಿತ್ತು. ಅಲ್ಲಾಹುವಿನ ವಿಧಿ ಏನೆಂದು ತೀರ್ಮಾನಿಸಬೇಕಾದುದು ಮನುಷ್ಯರಲ್ಲ. ಪ್ರವಾದಿಗಳ ಮೂಲಕ ಅಲ್ಲಾಹು ನೀಡಿದ ಮಾರ್ಗನಿರ್ದೇಶನಗಳನ್ನು ಅನುಸರಿಸುವುದು ಮಾತ್ರ ಮನುಷ್ಯರ ಕರ್ತವ್ಯವಾಗಿದೆ.
(48) ಅವರು ಕೇಳುವರು: “ನೀವು ಸತ್ಯಸಂಧರಾಗಿದ್ದರೆ ಈ ವಾಗ್ದಾನವು ಸತ್ಯವಾಗುವುದು ಯಾವಾಗ?”(986)
986. ಅಂತ್ಯದಿನದ ಬಗ್ಗೆ ಮತ್ತು ಅಲ್ಲಾಹುವಿನ ಶಿಕ್ಷೆಯ ಬಗ್ಗೆ ಅವನು ನೀಡಿದ ಎಚ್ಚರಿಕೆಯು ಸತ್ಯವಾಗುವುದನ್ನು ಕಾಣಲು ಅವರು ಆತುರಪಡುತ್ತಿದ್ದರು.
(49) ಅವರು ಕಾಯುತ್ತಿರುವುದು ಒಂದೇ ಒಂದು ಘೋರ ಶಬ್ದವನ್ನು ಮಾತ್ರವಾಗಿದೆ.(987) ಅವರು ಪರಸ್ಪರ ತರ್ಕಿಸುತ್ತಿರುವಾಗಲೇ ಅದು ಅವರನ್ನು ಹಿಡಿಯುವುದು.
987. ಲೋಕಾಂತ್ಯದ ಘೋಷಣೆಯಾಗಿರುವ ಭಯಾನಕ ಶಬ್ದ ಅಥವಾ ಕಹಳೆಯಲ್ಲಿ ಪ್ರಥಮ ಬಾರಿಗೆ ಊದುವಾಗ ಹೊರಡುವ ಧ್ವನಿ.
(50) ಆಗ ಯಾವುದೇ ವಸಿಯ್ಯತ್ ಮಾಡಲೂ ಅವರಿಗೆ ಸಾಧ್ಯವಾಗದು. ತಮ್ಮ ಕುಟುಂಬದೆಡೆಗೆ ಮರಳಲೂ ಅವರಿಗೆ ಸಾಧ್ಯವಾಗದು.
(51) ಕಹಳೆಯಲ್ಲಿ ಊದಲಾಗುವುದು.(988) ಆಗ ಅಗೋ! ಅವರು ಗೋರಿಗಳಿಂದ ತಮ್ಮ ರಬ್‌ನೆಡೆಗೆ ಧಾವಿಸುವರು.
988. ಎಲ್ಲವೂ ನಾಶವಾದ ಬಳಿಕ ಪುನರುತ್ಥಾನದ ಘೋಷಣೆಯಾದ ಕಹಳೆ ಧ್ವನಿಯನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. 53ನೆ ಸೂಕ್ತಿಯಲ್ಲಿ ಹೇಳಲಾದ ಘೋರ ಶಬ್ದವೂ ಇದೇ ಆಗಿದೆ.
(52) ಅವರು ಹೇಳುವರು: “ಅಯ್ಯೋ! ನಮ್ಮ ದುರದೃಷ್ಟವೇ! ನಮ್ಮನ್ನು ನಮ್ಮ ನಿದ್ದೆಯಿಂದ ಎಬ್ಬಿಸಿದವರಾರು? ಇದು ಪರಮ ದಯಾಮಯನು ವಾಗ್ದಾನ ಮಾಡಿರುವುದಾಗಿದೆ. ಸಂದೇಶವಾಹಕರು ಸತ್ಯವನ್ನೇ ಹೇಳಿರುವರು”.
(53) ಅದು ಒಂದೇ ಒಂದು ಘೋರ ಶಬ್ದ ಮಾತ್ರವಾಗಿರುವುದು. ಆಗ ಅಗೋ! ಅವರೆಲ್ಲರನ್ನೂ ನಮ್ಮ ಬಳಿ ಹಾಜರುಪಡಿಸಲಾಗುವುದು.
(54) ಆ ದಿನದಂದು ಯಾರೊಂದಿಗೂ ಸ್ವಲ್ಪವೂ ಅನ್ಯಾಯವೆಸಗಲಾಗದು. ನೀವು ಮಾಡಿಕೊಂಡಿರುವುದಕ್ಕೇ ಹೊರತು ನಿಮಗೆ ಪ್ರತಿಫಲವನ್ನೂ ನೀಡಲಾಗದು.
(55) ಖಂಡಿತವಾಗಿಯೂ ಸ್ವರ್ಗವಾಸಿಗಳು ಅಂದು ಕೆಲಸದಲ್ಲಿ ಮಗ್ನರಾಗಿ ಸುಖವಾಗಿರುವರು.
(56) ಅವರು ಮತ್ತು ಅವರ ಸಂಗಾತಿಗಳು ನೆರಳುಗಳಲ್ಲಿ ಮಂಚಗಳ ಮೇಲೆ ಒರಗಿ ಕುಳಿತಿರುವರು.
(57) ಅಲ್ಲಿ ಅವರಿಗೆ ವಿವಿಧ ಫಲಗಳಿವೆ. ಅವರಿಗೆ ಅವರು ಬೇಡುವುದೆಲ್ಲವೂ ಇವೆ.
(58) ಶಾಂತಿ! ಇದು ಅವರಿಗೆ ಕರುಣಾನಿಧಿಯಾದ ರಬ್‌ನ ಕಡೆಯ ಅಭಿವಂದನೆಯಾಗಿದೆ.
(59) “ಓ ಅಪರಾಧಿಗಳೇ! ನೀವಿಂದು ಬೇರ್ಪಟ್ಟು ನಿಲ್ಲಿರಿ” (ಎಂದು ಘೋಷಿಸಲಾಗುವುದು).
(60) “ಓ ಆದಮ್ ಸಂತತಿಗಳೇ! ನೀವು ಸೈತಾನನನ್ನು ಆರಾಧಿಸದಿರಿ.(989) ಖಂಡಿತವಾಗಿಯೂ ಅವನು ನಿಮ್ಮ ಪ್ರತ್ಯಕ್ಷ ಶತ್ರುವಾಗಿರುವನು” ಎಂದು ನಾನು ನಿಮಗೆ ಉಪದೇಶ ಮಾಡಿರಲಿಲ್ಲವೇ?
989. ಜಗದೊಡೆಯನನ್ನು ಮಾತ್ರ ಆರಾಧಿಸುವುದರಿಂದ ಜನರನ್ನು ವ್ಯತಿಚಲನೆಗೊಳಿಸುವತ್ತ ಸೈತಾನನು ತನ್ನ ಗಮನವನ್ನು ಕೇಂದ್ರೀಕರಿಸಿದ್ದಾನೆ. ಮನುಷ್ಯರ ಪೈಕಿ ಕೆಲವರು ಸೈತಾನರನ್ನೇ ಆರಾಧಿಸುತ್ತಾರೆ. ಹೆಚ್ಚಿನವರೂ ಆರಾಧಿಸುತ್ತಿರುವುದು ಸೈತಾನನು ನಿರ್ದೇಶಿಸಿ ಕೊಡುವ ಮಿಥ್ಯಾರಾಧ್ಯರನ್ನಾಗಿದೆ. ಸೈತಾನನನ್ನು ಸಂತೃಪ್ತಗೊಳಿಸುವ ಮತ್ತು ಸೈತಾನನ ಗುರಿಯನ್ನು ಸಫಲೀಕರಿಸುವ ಎಲ್ಲ ಆರಾಧನೆಗಳೂ ಒಂದರ್ಥದಲ್ಲಿ ಅವನಿಗಿರುವ ಆರಾಧನೆಯೇ ಆಗಿದೆ.
(61) ನನ್ನನ್ನು ಆರಾಧಿಸಿರಿ. ನೇರವಾದ ಮಾರ್ಗವು ಇದೇ ಆಗಿದೆ.
(62) ಖಂಡಿತವಾಗಿಯೂ ನಿಮ್ಮ ಪೈಕಿ ಅನೇಕ ಸಂಘಗಳನ್ನು ಅವನು (ಸೈತಾನನು) ಪಥಭ್ರಷ್ಟಗೊಳಿಸಿರುವನು. ಆದರೂ ನೀವು ಚಿಂತಿಸಿ ಅರ್ಥಮಾಡಿಕೊಳ್ಳಲಾರಿರೇ?
(63) ಇದು ನಿಮಗೆ ಮುನ್ನೆಚ್ಚರಿಕೆ ನೀಡಲಾಗಿರುವ ನರಕವಾಗಿದೆ!
(64) ನೀವು ಅವಿಶ್ವಾಸವಿಟ್ಟ ಫಲವಾಗಿ ಅದರಲ್ಲಿ ಉರಿದುಕೊಳ್ಳಿರಿ.
(65) ಆ ದಿನದಂದು ನಾವು ಅವರ ಬಾಯಿಗಳಿಗೆ ಮುದ್ರೆ ಹಾಕುವೆವು, ಅವರ ಕೈಗಳು ನಮ್ಮೊಂದಿಗೆ ಮಾತನಾಡುವುವು ಮತ್ತು ಅವರು ಮಾಡಿಕೊಂಡಿರುವುದಕ್ಕೆ ಅವರ ಕಾಲುಗಳು ಸಾಕ್ಷಿವಹಿಸುವುವು.
(66) ನಾವು ಇಚ್ಛಿಸುತ್ತಿದ್ದರೆ ಅವರ ಕಣ್ಣುಗಳನ್ನು ನಾವು ಅಳಿಸಿಬಿಡುತ್ತಿದ್ದೆವು.(990) ಆದರೂ ಮಾರ್ಗದಲ್ಲಿ ಮುನ್ನಡೆಯಲು ಅವರು ಶ್ರಮಿಸುವರು. ಆದರೆ ಅವರಿಗೆ ಕಾಣಲು ಸಾಧ್ಯವಾಗುವುದಾದರೂ ಹೇಗೆ?
990. ನಾವು ಅಲ್ಲಾಹುವನ್ನು ನಿಷೇಧಿಸುವವರಾಗಿದ್ದೂ ಅಲ್ಲಾಹು ನಮ್ಮನ್ನೇಕೆ ಶಿಕ್ಷಿಸುವುದಿಲ್ಲವೆಂದು ಕೆಲವರು ಕೇಳುತ್ತಾರೆ. ಮನುಷ್ಯನನ್ನು ಸ್ತಬ್ಧಗೊಳಿಸುವಂತಹ ಶಿಕ್ಷೆಗಳನ್ನು ಇಹಲೋಕದಲ್ಲಿಯೇ ನೀಡಲು ಅಲ್ಲಾಹುವಿಗೆ ಸಾಧ್ಯವಿದೆ. ಆದರೆ ಐಹಿಕ ಜೀವನದಲ್ಲಿ ಒಂದು ಹಂತದ ವರೆಗೆ ಸ್ವತಂತ್ರವಾಗಿ ಕಾರ್ಯಾಚರಿಸುವ ಸ್ವಾತಂತ್ರ್ಯವನ್ನು ಸಜ್ಜನರಿಗೂ, ದುರ್ಜನರಿಗೂ ನೀಡುವುದು ಅಲ್ಲಾಹುವಿನ ಕ್ರಮವಾಗಿದೆ.
(67) ನಾವು ಇಚ್ಛಿಸುತ್ತಿದ್ದರೆ ಅವರು ನಿಂತ ಸ್ಥಳದಲ್ಲಿಯೇ ನಾವು ಅವರನ್ನು ರೂಪಾಂತರಗೊಳಿಸುತ್ತಿದ್ದೆವು. ಆಗ ಅವರಿಗೆ ಮುಂದಕ್ಕೆ ಸಾಗಲು ಸಾಧ್ಯವಾಗದು. ಅವರಿಗೆ ಹಿಂದಕ್ಕೆ ಮರಳಲೂ ಸಾಧ್ಯವಾಗದು.
(68) ಯಾರಿಗೆ ನಾವು ದೀರ್ಘಾಯುಸ್ಸನ್ನು ನೀಡುವೆವೋ ಅವನ ಪ್ರಕೃತಿಯನ್ನು ನಾವು ತಿರುವುಮುರುವುಗೊಳಿಸುವೆವು. ಆದರೂ ಅವರು ಚಿಂತಿಸಲಾರರೇ?(991)
991. ಜ್ಞಾನ ಮತ್ತು ಸಾಮರ್ಥ್ಯದ ಉತ್ತುಂಗಕ್ಕೆ ತಲುಪಿರುವ ಮನುಷ್ಯನು ತನ್ನ ಭೂತ ಮತ್ತು ಭವಿಷ್ಯವನ್ನು ಮರೆತು ಧಿಕ್ಕಾರಿಯಾಗಿ ಮೆರೆಯುತ್ತಾನೆ. ಅಲ್ಲಾಹು ಅವನನ್ನು ಬೆಳೆಸಿದ್ದು ಯಾವುದೇ ಜ್ಞಾನವೂ ಇಲ್ಲದ ಸ್ಥಿತಿಯಿಂದಾಗಿದೆ. ಜ್ಞಾನ ಮತ್ತು ವಿವೇಕವು ಕಳೆದುಹೋಗುವ ವೃದ್ಧಾಪ್ಯದ ಸ್ಥಿತಿಗೆ ಖಂಡಿತವಾಗಿಯೂ ಅಲ್ಲಾಹು ಅವನನ್ನು ಮರಳಿ ಕೊಂಡೊಯ್ಯುವನು. ಇದನ್ನು ಚಿಂತಿಸುತ್ತಾ ಮನುಷ್ಯನು ತನ್ನ ಮೇಲೆ ಅಲ್ಲಾಹುವಿಗಿರುವ ನಿಯಂತ್ರಣಾಧಿಕಾರದ ಬಗ್ಗೆ ಸದಾ ಪ್ರಜ್ಞಾವಂತನಾಗಿರಬೇಕಾಗಿದೆ.
(69) ನಾವು ಅವರಿಗೆ (ಪ್ರವಾದಿಯವರಿಗೆ) ಕವಿತೆಯನ್ನು ಕಲಿಸಿಕೊಟ್ಟಿಲ್ಲ. ಅದು ಅವರಿಗೆ ಯುಕ್ತವಾದುದೂ ಅಲ್ಲ. ಇದೊಂದು ಉಪದೇಶ ಮತ್ತು ವಿಷಯಗಳನ್ನು ಸ್ಪಷ್ಟಗೊಳಿಸುವ(992) ಕುರ್‌ಆನ್ ಮಾತ್ರವಾಗಿದೆ.
992. ಕವನವು ರಸಿಕನಿಗೆ ಸಂವೇದನೆಯನ್ನು ನೀಡುತ್ತದೆ. ಭಾವೋದ್ರೇಕವೇ ಅದರ ಜೀವಾಳ. ಮುಹಮ್ಮದ್(ಸ) ರವರನ್ನು ಒಂದು ಕವಿಯಾಗಿ ಮತ್ತು ಕುರ್‌ಆನನ್ನು ಒಂದು ಕಾವ್ಯವಾಗಿ ಕಾಣುವ ವಿಮರ್ಶಕರು ಕುರ್‌ಆನಿನ ವಿಶೇಷತೆಗಳನ್ನು ಗ್ರಹಿಸುವುದಿಲ್ಲ. ಕುರ್‌ಆನ್ ಮನುಷ್ಯನ ಭಾವೋದ್ರೇಕಗಳನ್ನು ಕೆರಳಿಸುವುದಿಲ್ಲ. ಬದಲಾಗಿ ಅದು ಅವನನ್ನು ಪ್ರಜ್ಞಾವಂತನನ್ನಾಗಿಸುತ್ತದೆ. ಅದು ವಿಚಾರಶೀಲರಾದ ಜನರಿಗೆ ಓದಿ ಅರ್ಥಮಾಡಿಕೊಳ್ಳುವುದಕ್ಕಿರುವ ಗ್ರಂಥವಾಗಿದೆ. ಕುರ್‌ಆನ್ ಎಂದರೆ ಪಾರಾಯಣ ಅಥವಾ ಪಾರಾಯಣ ಮಾಡಲಾಗುವಂತದ್ದು ಎಂದಾಗಿದೆ.
(70) ಬದುಕಿರುವವರಿಗೆ ಮುನ್ನೆಚ್ಚರಿಕೆ ನೀಡುವ ಸಲುವಾಗಿ ಮತ್ತು ಸತ್ಯನಿಷೇಧಿಗಳ ಮೇಲೆ (ಶಿಕ್ಷೆಯ) ವಚನವು ಸತ್ಯವಾಗುವ ಸಲುವಾಗಿ.(993)
993. ಸ್ಪಷ್ಟ ಪುರಾವೆಯು ಸಿಕ್ಕಿದ ಬಳಿಕ ಸತ್ಯನಿಷೇಧಿಗಳಿಗೆ ನೆಪಗಳನ್ನು ಹೇಳುವ ಅವಕಾಶವಿರದು.
(71) ನಮ್ಮ ಕೈಗಳು ನಿರ್ಮಿಸಿರುವವುಗಳಲ್ಲಿ ಸೇರಿದ ಜಾನುವಾರುಗಳನ್ನು ನಾವು ಅವರಿಗಾಗಿ ಸೃಷ್ಟಿಸಿರುವೆವು ಎಂಬುದನ್ನು ಅವರು ಕಂಡಿಲ್ಲವೇ? ತರುವಾಯ ಅವರು ಅವುಗಳ ಯಜಮಾನರಾಗಿರುವರು.
(72) ನಾವು ಅವುಗಳನ್ನು ಅವರಿಗೆ ಅಧೀನಪಡಿಸಿಕೊಟ್ಟಿರುವೆವು. ಅವುಗಳಲ್ಲಿ ಕೆಲವು ಅವರ ವಾಹನಗಳಾಗಿವೆ. ಅವುಗಳಿಂದ ಅವರು (ಮಾಂಸವನ್ನು) ತಿನ್ನುತ್ತಿರುವರು.
(73) ಅವರಿಗೆ ಅವುಗಳಲ್ಲಿ ಅನೇಕ ಪ್ರಯೋಜನಗಳಿವೆ. (ಮಾತ್ರವಲ್ಲದೆ) ಪಾನೀಯವೂ ಇದೆ.(994) ಆದರೂ ಅವರು ಕೃತಜ್ಞತೆ ಸಲ್ಲಿಸಲಾರರೇ?
994. ಹಾಲು ಮತ್ತು ಹಾಲಿನಿಂದ ಅಥವಾ ಹಾಲನ್ನು ಸೇರಿಸಿ ತಯಾರಿಸಲಾಗುವ ಪಾನೀಯಗಳು.
(74) ಅವರು ತಮಗೆ ಸಹಾಯ ಸಿಗುಸಲುವಾಗಿ ಅಲ್ಲಾಹುವಿನ ಹೊರತು ಅನೇಕ ಆರಾಧ್ಯರನ್ನು ಮಾಡಿಕೊಂಡಿರುವರು.
(75) ಅವರಿಗೆ ಸಹಾಯ ಮಾಡಲು ಅವರಿಗೆ (ಆ ಆರಾಧ್ಯರಿಗೆ) ಸಾಧ್ಯವಾಗದು. ಅವರು ಅವರಿಗಾಗಿ (ಆರಾಧ್ಯರಿಗಾಗಿ) ಸಜ್ಜೀಕರಿಸಲಾದ ಸೈನ್ಯವಾಗಿರುವರು.
(76) ಆದುದರಿಂದ ಅವರ ಮಾತು ತಮ್ಮನ್ನು ದುಃಖಕ್ಕೊಳಗಾಗಿಸದಿರಲಿ. ಅವರು ಮರೆಮಾಚುವುದನ್ನು ಮತ್ತು ಬಹಿರಂಗಪಡಿಸುವುದನ್ನು ಖಂಡಿತವಾಗಿಯೂ ನಾವು ಅರಿಯುವೆವು.
(77) ನಾವು ಮನುಷ್ಯನನ್ನು ಒಂದು ವೀರ್ಯಕೋಶದಿಂದ ಸೃಷ್ಟಿಸಿರುವೆವು ಎಂಬುದನ್ನು ಅವನು ಕಂಡಿಲ್ಲವೇ? ಆದರೂ ಅವನು ಒಬ್ಬ ಸ್ಪಷ್ಟವಾದ ಎದುರಾಳಿಯಾಗಿರುವನು.
(78) ಅವನು ನಮಗೊಂದು ಉಪಮೆಯನ್ನು ನೀಡಿರುವನು(995) ಮತ್ತು ತನ್ನ ಸೃಷ್ಟಿಯನ್ನೇ ಮರೆತಿರುವನು. ಅವನು ಹೇಳಿದನು: “ಕೊಳೆತ ಮೂಳೆಗಳಿಗೆ ಜೀವ ನೀಡುವವನಾರು?”
995. ಕೊಳೆತ ಮೂಳೆಗಳನ್ನು ಪುನಃ ಜೋಡಿಸಿ ಮನುಷ್ಯನನ್ನು ಪುನರ್‍ನಿರ್ಮಿಸಲು ಯಾರಿಗೆ ಸಾಧ್ಯವೆಂದು ಕೇಳುವವರು ಸರ್ವಶಕ್ತನಾದ ಅಲ್ಲಾಹುವನ್ನು ಅಸಹಾಯಕರೂ, ಬಲಹೀನರೂ ಆಗಿರುವ ಮನುಷ್ಯರೊಂದಿಗೆ ಹೋಲಿಸುತ್ತಿದ್ದಾರೆ. ಅಸಮರ್ಥರಾದ ಸೃಷ್ಟಿಗಳ ಬಗ್ಗೆಯಿರುವ ಅದೇ ದೃಷ್ಟಿಕೋನವನ್ನು ಅವರು ಅಲ್ಲಾಹುವಿನ ಬಗ್ಗೆಯೂ ಹೊಂದಿದ್ದಾರೆ.
(79) ಹೇಳಿರಿ: “ಅದನ್ನು ಮೊದಲ ಬಾರಿ ಸೃಷ್ಟಿಸಿದವನೇ ಅದಕ್ಕೆ ಜೀವವನ್ನು ನೀಡುವನು. ಅವನು ಸಕಲ ಸೃಷ್ಟಿಗಳ ಬಗ್ಗೆ ಅರಿವುಳ್ಳವನಾಗಿರುವನು”.
(80) ನಿಮಗೆ ಹಸಿ ಮರದಿಂದ ಬೆಂಕಿಯನ್ನು ನಿರ್ಮಿಸಿ ಕೊಡುವವನು ಅವನಾಗಿರುವನು.(996) ಆಗ ಅಗೋ! ನೀವು ಅದರಿಂದ ಉರಿಸುತ್ತಿದ್ದೀರಿ.
996. ಮರದ ತುಂಡುಗಳನ್ನು ಒಂದಕ್ಕೊಂದು ಉಜ್ಜಿ ಆದಿಮಾನವರು ಬೆಂಕಿಯುರಿಸುತ್ತಿದ್ದರು.
(81) ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು ಅವರಂತಿರುವವರನ್ನು ಸೃಷ್ಟಿಸಲು ಸಾಮರ್ಥ್ಯವುಳ್ಳವನಲ್ಲವೇ? ಹೌದು! ಅವನು ಎಲ್ಲವನ್ನೂ ಸೃಷ್ಟಿಸುವವನು ಮತ್ತು ಎಲ್ಲವನ್ನೂ ಅರಿಯುವವನಾಗಿರುವನು.
(82) ಅವನು ಯಾವುದೇ ವಸ್ತುವನ್ನು ಬಯಸಿದರೆ, ಅವನ ಆಜ್ಞೆಯು ಅದರೊಂದಿಗೆ “ಉಂಟಾಗು” ಎಂದು ಹೇಳುವುದು ಮಾತ್ರವಾಗಿದೆ. ತಕ್ಷಣ ಅದು ಉಂಟಾಗುವುದು!
(83) ಎಲ್ಲ ವಸ್ತುಗಳ ಆಧಿಪತ್ಯವು ಯಾರ ಕೈಯ್ಯಲ್ಲಿದೆಯೋ ಮತ್ತು ಯಾರೆಡೆಗೆ ನಿಮ್ಮನ್ನು ಮರಳಿಸಲಾಗುವುದೋ ಅವನು ಪರಮ ಪಾವನನಾಗಿರುವನು!