(1) ಸರಿಯಾಗಿ ಸಾಲುಗಟ್ಟಿ ನಿಲ್ಲುವವರೂ,
(2) ತರುವಾಯ ಬಲಿಷ್ಠವಾಗಿ ತಡೆಯುವವರೂ(997)
997. ‘ಝಾಜಿರಾತ್’ ಎಂಬ ಪದವನ್ನು ಕೆಡುಕುಗಳನ್ನು ಅಥವಾ ದುಷ್ಟಶಕ್ತಿಗಳನ್ನು ತಡೆಯುವವರು, ಮೋಡಗಳನ್ನು ತಡೆದು ಉದ್ದೇಶಿತ ಸ್ಥಳಗಳೆಡೆಗೆ ತಿರುಗಿಸುವವರು ಎಂಬಿತ್ಯಾದಿಯಾಗಿ ವ್ಯಾಖ್ಯಾನಿಸಲಾಗಿದೆ.
(3) ತರುವಾಯ ಸ್ತುತಿಕೀರ್ತನೆ ಮಾಡುವವರೂ ಆಗಿರುವ ಮಲಕ್‍ಗಳ ಮೇಲಾಣೆ!
(4) ಖಂಡಿತವಾಗಿಯೂ ನಿಮ್ಮ ಆರಾಧ್ಯನು ಏಕನಾಗಿರುವನು.
(5) ಆಕಾಶಗಳ, ಭೂಮಿಯ ಮತ್ತು ಅವುಗಳ ಮಧ್ಯೆ ಇರುವವುಗಳ ರಬ್ ಹಾಗೂ ಉದಯ ಸ್ಥಾನಗಳ ರಬ್.
(6) ಖಂಡಿತವಾಗಿಯೂ ಸಮೀಪದ ಆಕಾಶವನ್ನು ನಾವು ನಕ್ಷತ್ರಗಳ ಅಲಂಕಾರದಿಂದ ಅಲಂಕರಿಸಿರುವೆವು.(998)
998. ಬಾನಲೋಕವನ್ನು ಅಲ್ಲಾಹು ಏಳು ಆಕಾಶಗಳನ್ನಾಗಿ ರಚಿಸಿದ್ದಾನೆ. ಯಾವುದೇ ಆಕಾಶದ ಗಡಿಯನ್ನು ಅವನು ತೋರಿಸಿಕೊಟ್ಟಿಲ್ಲ. ನಮ್ಮ ನಗ್ನನೇತ್ರಗಳಿಗೆ ಗೋಚರವಾಗುವ ತಾರೆಗಳು ಒಂದನೇ ಆಕಾಶದ ಭಾಗವೆಂದು ಈ ಸೂಕ್ತಿಯು ಸೂಚಿಸುತ್ತದೆ.
(7) ಧಿಕ್ಕಾರಿಗಳಾಗಿರುವ ಸರ್ವ ಸೈತಾನರಿಂದಲೂ ನಾವು (ಅದನ್ನು) ಸುರಕ್ಷಿತಗೊಳಿಸಿರುವೆವು.
(8) ಅತ್ಯುನ್ನತವಾದ ಸಮೂಹದೆಡೆಗೆ(999) ಕಿವಿಗೊಟ್ಟು ಆಲಿಸಲು ಅವರಿಗೆ (ಸೈತಾನರಿಗೆ) ಸಾಧ್ಯವಾಗದು. ಸರ್ವ ದಿಕ್ಕುಗಳಿಂದಲೂ ಅವರನ್ನು ಎಸೆದು ಓಡಿಸಲಾಗುವುದು.
999. ಅತ್ಯುನ್ನತ ಸಮೂಹ ಎಂದರೆ ಅಲ್ಲಾಹುವಿನ ಸಾಮೀಪ್ಯ ಲಭ್ಯವಾಗಿರುವ ಮಲಕ್‍ಗಳಾಗಿದ್ದಾರೆ. ಅವರ ಮಾತನ್ನು ಆಲಿಸಲು ಅಲ್ಲಾಹು ಸೈತಾನರಿಗೆ ಅನುಮತಿ ನೀಡಲಾರನು.
(9) ಅವರಿಗೆ ಶಾಶ್ವತ ಶಿಕ್ಷೆಯೂ ಇದೆ.
(10) ಆದರೆ, ಯಾರಾದರೂ ಹಠಾತ್ತನೆ ಏನನ್ನಾದರೂ ಕಸಿದರೆ ಚುಚ್ಚಿ ಸಾಗುವ ಒಂದು ಅಗ್ನಿಜ್ವಾಲೆಯು ಅವನನ್ನು ಹಿಂಬಾಲಿಸುವುದು.
(11) ಆದುದರಿಂದ (ಓ ಪ್ರವಾದಿಯವರೇ!) ತಾವು ಅವರೊಂದಿಗೆ (ಸತ್ಯನಿಷೇಧಿಗಳೊಂದಿಗೆ) ಅಭಿಪ್ರಾಯವನ್ನು ಕೇಳಿರಿ: “ಸೃಷ್ಟಿಸಲು ಅತ್ಯಂತ ಕಷ್ಟವಾಗಿರುವುದು ಅವರನ್ನೇ? ಅಥವಾ ನಾವು ಸೃಷ್ಟಿಸಿರುವ ಇತರ ಸೃಷ್ಟಿಗಳನ್ನೇ?” ಖಂಡಿತವಾಗಿಯೂ ನಾವು ಅವರನ್ನು ಸೃಷ್ಟಿಸಿರುವುದು ಜಿಗುಟಾಗಿರುವ ಜೇಡಿಮಣ್ಣಿನಿಂದಾಗಿದೆ.
(12) ಆದರೆ ತಾವು ಆಚ್ಚರಿಪಟ್ಟಿದ್ದೀರಿ ಮತ್ತು ಅವರು ಅಪಹಾಸ್ಯ ಮಾಡುತ್ತಿರುವರು!
(13) ಅವರಿಗೆ ಉಪದೇಶ ನೀಡಲಾದರೆ ಅವರು ಆಲೋಚಿಸುವುದಿಲ್ಲ.
(14) ಅವರು ಯಾವುದೇ ದೃಷ್ಟಾಂತವನ್ನು ಕಂಡರೂ ಅಪಹಾಸ್ಯ ಮಾಡುವರು.
(15) ಅವರು ಹೇಳುವರು: “ಇದೊಂದು ಸ್ಪಷ್ಟವಾದ ಮಾಂತ್ರಿಕತೆ ಮಾತ್ರವಾಗಿದೆ.
(16) ನಾವು ಸತ್ತು ಮಣ್ಣು ಮತ್ತು ಮೂಳೆ ಚೂರುಗಳಾಗಿ ಬಿಟ್ಟ ಬಳಿಕವೂ ನಮ್ಮನ್ನು ಪುನರುತ್ಥಾನಗೊಳಿಸಲಾಗುವುದೇ?
(17) ಮತ್ತು ನಮ್ಮ ಪೂರ್ವಿಕರನ್ನು ಕೂಡ?”
(18) ಹೇಳಿರಿ: “ಹೌದು! (ಅಂದು) ನೀವು ಅಪಮಾನಿತರಾಗಿದ್ದೀರಿ”.
(19) ಅದೊಂದು ಘೋರ ಶಬ್ದ ಮಾತ್ರವಾಗಿರುವುದು. ಆಗ ಅಗೋ! ಅವರು (ಎದ್ದುನಿಂತು) ನೋಡುವರು!
(20) ಅವರು ಹೇಳುವರು: “ಅಯ್ಯೋ! ನಮ್ಮ ದುರದೃಷ್ಟವೇ! ಇದು ಪ್ರತಿಫಲದ ದಿನವಾಗಿದೆ!”
(21) (ಅವರಿಗೆ ಉತ್ತರಿಸಲಾಗುವುದು): “ಇದು ನೀವು ನಿಷೇಧಿಸಿದ ನಿರ್ಣಾಯಕವಾದ ತೀರ್ಪು ನೀಡುವ ದಿನವಾಗಿದೆ”.
(22) (ಅಲ್ಲಾಹು ಆದೇಶಿಸುವನು): “ಅಕ್ರಮಿಗಳನ್ನೂ, ಅವರ ಸಂಗಾತಿಗಳನ್ನೂ ಮತ್ತು ಅವರು ಆರಾಧಿಸುತ್ತಿದ್ದವುಗಳನ್ನೂ ಒಟ್ಟುಗೂಡಿಸಿರಿ.
(23) ಅಲ್ಲಾಹುವಿನ ಹೊರತು. ತರುವಾಯ ಅವರನ್ನು ನರಕಾಗ್ನಿಯ ದಾರಿಯೆಡೆಗೆ ಸಾಗಿಸಿರಿ”.
(24) ಅವರನ್ನು ತಡೆದುನಿಲ್ಲಿಸಿರಿ! ಅವರೊಂದಿಗೆ ಪ್ರಶ್ನಿಸಬೇಕಾಗಿದೆ.
(25) “ನಿಮಗೇನಾಗಿದೆ? ನೀವು ಪರಸ್ಪರ ಸಹಾಯ ಮಾಡುವುದಿಲ್ಲವೇ?” ಎಂದು.
(26) ಅಲ್ಲ, ಅಂದು ಅವರು ಶರಣಾಗತರಾಗಿರುವರು.
(27) ಅವರಲ್ಲಿ ಕೆಲವರು ಇತರ ಕೆಲವರೆಡೆಗೆ ತಿರುಗಿ ಪರಸ್ಪರ ಪ್ರಶ್ನಿಸುವರು.
(28) ಅವರು ಹೇಳುವರು: “ಖಂಡಿತವಾಗಿಯೂ ನೀವು ನಮ್ಮ ಬಳಿಗೆ ರಟ್ಟೆ ಬಲದೊಂದಿಗೆ ಬಂದು (ನಮ್ಮನ್ನು ಸತ್ಯದಿಂದ ವಿಮುಖಗೊಳಿಸಿದಿರಿ)”.
(29) ಅವರು ಉತ್ತರಿಸುವರು: “ಅಲ್ಲ, ನೀವೇ ವಿಶ್ವಾಸಿಗಳಾಗಲಿಲ್ಲ.(1000)
1000. ವಿಶ್ವಾಸ ಮತ್ತು ಸತ್ಯನಿಷೇಧವನ್ನು ಯಾರ ಮೇಲೂ ಬಲಾತ್ಕಾರವಾಗಿ ಹೇರಲು ಯಾರಿಗೂ ಸಾಧ್ಯವಿಲ್ಲ. ಬಹಿರಂಗವಾಗಿ ವಿಶ್ವಾಸ ಪ್ರಕಟನೆ ಮಾಡುವುದನ್ನು ಮತ್ತು ಅದಕ್ಕನುಸಾರವಾಗಿ ಬಹಿರಂಗವಾಗಿ ಕರ್ಮವೆಸಗುವುದನ್ನು ಮಾತ್ರ ಓರ್ವ ಸ್ವೇಚ್ಛಾಧಿಪತಿಗೆ ಗರಿಷ್ಠವಾಗಿ ತಡೆಯಲು ಸಾಧ್ಯ. ಆದುದರಿಂದ ಬಲವಂತಕ್ಕೊಳಗಾಗಿ ನಾವು ಅವಿಶ್ವಾಸಿಗಳಾದೆವೆಂದು ಯಾರಾದರೂ ವಾದಿಸುವುದಾದರೆ ಅದೊಂದು ನಿರರ್ಥಕ ವಾದವಾಗಿದೆ.
(30) ನಿಮ್ಮ ಮೇಲೆ ನಮಗೆ ಯಾವುದೇ ಅಧಿಕಾರವಿರಲಿಲ್ಲ. ಬದಲಾಗಿ ನೀವು ಅತಿಕ್ರಮಿಗಳಾದ ಒಂದು ಜನತೆಯಾಗಿದ್ದಿರಿ.
(31) ಆದುದರಿಂದ ನಮ್ಮ ಮೇಲೆ ನಮ್ಮ ರಬ್‌ನ ವಚನವು(1001) ಸತ್ಯವಾಗಿ ಬಿಟ್ಟಿತು. ಖಂಡಿತವಾಗಿಯೂ ನಾವು (ಶಿಕ್ಷೆಯನ್ನು) ಅನುಭವಿಸುವವರಾಗುವೆವು.
1001. ಇದು ದುರ್ಮಾರ್ಗವನ್ನು ಸ್ವತಃ ಆರಿಸಿದವರು –ಅವರು ಬಲಶಾಲಿಗಳಾಗಿದ್ದರೂ ಬಲಹೀನರಾಗಿದ್ದರೂ- ಶಿಕ್ಷಾರ್ಹರಾಗಿದ್ದಾರೆಂಬ ಅಲ್ಲಾಹುವಿನ ಘೋಷಣೆಯಾಗಿರಬಹುದು.
(32) ಹೀಗೆ ನಾವು ನಿಮ್ಮನ್ನು ಪಥಭ್ರಷ್ಟರನ್ನಾಗಿ ಮಾಡಿದೆವು. (ಯಾಕೆಂದರೆ) ಖಂಡಿತವಾಗಿಯೂ ನಾವು ಪಥಭ್ರಷ್ಟರಾಗಿದ್ದೆವು”.(1002)
1002. ನೀವು ನಿಮ್ಮ ವಿವೇಕವನ್ನು ಬಳಸಿ ಸನ್ಮಾರ್ಗವನ್ನು ಕಂಡುಕೊಳ್ಳಲು ಯತ್ನಿಸದೆ ನಮ್ಮ ದುರ್ಮಾರ್ಗವನ್ನು ಅನುಸರಿಸಿ ಪಥಭ್ರಷ್ಟರಾದಿರಿ ಎಂದರ್ಥ.
(33) ಆದುದರಿಂದ ಖಂಡಿತವಾಗಿಯೂ ಆ ದಿನದಂದು ಅವರು (ಎರಡೂ ಗುಂಪುಗಳು) ಶಿಕ್ಷೆಯಲ್ಲಿ ಪಾಲುದಾರರಾಗಿರುವರು.(1003)
1003. ದಾರಿಗೆಡಿಸಿದವರು ಮತ್ತು ದಾರಿಗೆಟ್ಟವರು ಶಿಕ್ಷೆಯಲ್ಲಿ ಪಾಲುದಾರರಾಗಿದ್ದಾರೆ ಎಂಬುದರಿಂದ ಅವರಿಬ್ಬರಿಗೂ ಸಮಾನ ಶಿಕ್ಷೆಯನ್ನು ನೀಡಲಾಗುವುದು ಎಂದರ್ಥವಲ್ಲ. ಸ್ವತಃ ದಾರಿಗೆಟ್ಟು ಇತರರನ್ನೂ ದಾರಿಗೆಡಿಸಿದವರಿಗೆ ಇನ್ನೂ ಕಠಿಣವಾದ ಶಿಕ್ಷೆಯನ್ನು ನೀಡಲಾಗುವುದು.
(34) ಖಂಡಿತವಾಗಿಯೂ ನಾವು ಅಪರಾಧಿಗಳೊಂದಿಗೆ ಹೀಗೆಯೇ ವರ್ತಿಸುವೆವು.
(35) “ಅಲ್ಲಾಹುವಿನ ಹೊರತು ಅನ್ಯ ಆರಾಧ್ಯರಿಲ್ಲ” ಎಂದು ಅವರೊಂದಿಗೆ ಹೇಳಲಾದರೆ ಅವರು ಅಹಂಕಾರ ಪಡುವರು.
(36) “ಹುಚ್ಚನಾದ ಒಬ್ಬ ಕವಿಗಾಗಿ ನಾವು ನಮ್ಮ ಆರಾಧ್ಯರನ್ನು ವರ್ಜಿಸುವುದೇ?” ಎಂದು ಅವರು ಕೇಳುವರು.
(37) ಅಲ್ಲ, ಅವರು ಸತ್ಯದೊಂದಿಗೆ ಬಂದಿರುವರು ಮತ್ತು (ಮುಂಚಿನ) ಪ್ರವಾದಿಗಳನ್ನು ದೃಢೀಕರಿಸಿರುವರು.
(38) ಖಂಡಿತವಾಗಿಯೂ ನೀವು ಯಾತನಾಮಯ ಶಿಕ್ಷೆಯನ್ನು ಆಸ್ವಾದಿಸಬೇಕಾದವರೇ ಆಗಿದ್ದೀರಿ.
(39) ನೀವು ಮಾಡಿರುವುದಕ್ಕೆ ಮಾತ್ರ ನಿಮಗೆ ಪ್ರತಿಫಲ ನೀಡಲಾಗುವುದು.
(40) ಅಲ್ಲಾಹುವಿನ ನಿಷ್ಕಳಂಕರಾದ ದಾಸರು ಇದರಿಂದ ಹೊರತಾಗಿರುವರು.
(41) ಅವರಿಗೆ ಅರಿಯಲ್ಪಟ್ಟ ಅನ್ನಾಧಾರವಿರುವುದು.
(42) ವಿವಿಧ ಬಗೆಯ ಫಲಗಳು! ಅವರು ಗೌರವಿಸಲ್ಪಡುವರು.
(43) ಸೌಭಾಗ್ಯ ತುಂಬಿದ ಸ್ವರ್ಗೋದ್ಯಾನಗಳಲ್ಲಿ.
(44) ಅವರು ಮಂಚಗಳಲ್ಲಿ ಪರಸ್ಪರ ಅಭಿಮುಖಿಗಳಾಗಿ ಕುಳಿತಿರುವರು.
(45) ಒಂದು ರೀತಿಯ ಒರತೆ ನೀರು ತುಂಬಿದ ಲೋಟಗಳನ್ನು ಅವರ ಸುತ್ತಲೂ ತರಲಾಗುವುದು.
(46) ಬೆಳ್ಳಗಿರುವ ಮತ್ತು ಕುಡಿಯುವವರಿಗೆ ಮಾಧುರ್ಯವುಳ್ಳ ಪಾನೀಯ.
(47) ಅದರಲ್ಲಿ ಯಾವುದೇ ದುಷ್ಪರಿಣಾಮವಿಲ್ಲ. ಅದರಿಂದಾಗಿ ಅವರಿಗೆ ನಶೆಯೂ ಉಂಟಾಗಲಾರದು.(1004)
1004. ಲೌಕಿಕ ಪಾನೀಯಗಳಲ್ಲಿ ಅನೇಕ ಪಾನೀಯಗಳು ದುಷ್ಪರಿಣಾಮವನ್ನುಂಟುಮಾಡುತ್ತವೆ. ಅವುಗಳಲ್ಲಿ ಕೆಲವು ನಶೆ ಮತ್ತು ಬುದ್ಧಿಭ್ರಮಣೆಯನ್ನು ಉಂಟುಮಾಡುತ್ತವೆ. ಆದರೆ ಸ್ವರ್ಗೀಯ ಪಾನೀಯಗಳು ಇದಕ್ಕಿಂತ ಭಿನ್ನವಾಗಿವೆ. ಅವು ಯಾವುದೇ ದುಷ್ಪರಿಣಾಮವನ್ನೂ ಬೀರುವುದಿಲ್ಲ.
(48) ದೃಷ್ಟಿಯನ್ನು ನಿಯಂತ್ರಿಸುವ(1005) ಮತ್ತು ವಿಶಾಲ ಕಣ್ಣುಗಳುಳ್ಳ ಸ್ತ್ರೀಯರು ಅವರ ಬಳಿಯಿರುವರು.
1005. ದೃಷ್ಟಿ ನಿಯಂತ್ರಿಸುವವರು ಎಂದರೆ ಅನ್ಯ ಪುರುಷರನ್ನು ನೋಡದ ಪತಿವ್ರತೆಯರು ಎಂದರ್ಥ.
(49) ಅವರು ಜೋಪಾನವಾಗಿಡಲಾದ ಮೊಟ್ಟೆಗಳಂತಿರುವರು.(1006)
1006. ಬೆಳ್ಳಗಿನ ಸುಂದರಿಯರ ಮುಖವನ್ನು ಅರಬಿಗಳು ಸಾಮಾನ್ಯವಾಗಿ ಶುಚಿಯಾಗಿ ಮತ್ತು ಜೋಪಾನವಾಗಿ ಸಂರಕ್ಷಿಸಲಾಗುವ ಉಷ್ಟ್ರಪಕ್ಷಿಯ ಮೊಟ್ಟೆಗಳೊಂದಿಗೆ ಹೋಲಿಸುತ್ತಿದ್ದರು.
(50) ಸ್ವರ್ಗವಾಸಿಗಳ ಪೈಕಿ ಕೆಲವರು ಇತರ ಕೆಲವರಿಗೆ ಅಭಿಮುಖವಾಗಿ ಪರಸ್ಪರ ಕೇಳುವರು.
(51) ಅವರ ಪೈಕಿ ಒಬ್ಬ ವಕ್ತಾರ ಹೇಳುವನು: “ಖಂಡಿತವಾಗಿಯೂ ನನಗೊಬ್ಬ ಗೆಳೆಯನಿದ್ದನು.
(52) ಅವನು ಹೇಳುತ್ತಿದ್ದನು: ಖಂಡಿತವಾಗಿಯೂ ನೀನು (ಪರಲೋಕದಲ್ಲಿ) ವಿಶ್ವಾಸವಿಡುವವರ ಪೈಕಿ ಸೇರಿದವನಾಗಿರುವೆಯಾ?
(53) ನಾವು ಸತ್ತು ಮಣ್ಣು ಮತ್ತು ಮೂಳೆಗಳಾಗಿ ಹೋದ ಬಳಿಕವೂ ನಮಗೆ ನಮ್ಮ ಕರ್ಮಫಲಗಳನ್ನು ನೀಡಲಾಗುವುದೇ?”
(54) (ಬಳಿಕ ತನ್ನ ಬಳಿಯಿರುವವರೊಂದಿಗೆ) ಅವನು ಹೇಳುವನು: “ನೀವು (ಆ ಗೆಳೆಯನನ್ನು) ಇಣುಕಿ ನೋಡಲು ಬಯಸುವಿರಾ?”
(55) ಆಗ ಅವನು ಇಣುಕಿ ನೋಡುವನು. ಆಗ ಅವನು ಅವನನ್ನು ನರಕಾಗ್ನಿಯ ಮಧ್ಯೆ ಕಾಣುವನು.
(56) ಅವನು (ಗೆಳೆಯನೊಂದಿಗೆ) ಹೇಳುವನು: “ಅಲ್ಲಾಹುವಿನ ಮೇಲಾಣೆ! ಖಂಡಿತವಾಗಿಯೂ ನೀನು ನನ್ನನ್ನು ನಾಶ ಮಾಡುತ್ತಿದ್ದೆ.
(57) ನನ್ನ ರಬ್‌ನ ಕೃಪೆಯಿಲ್ಲದಿರುತ್ತಿದ್ದರೆ (ನರಕಾಗ್ನಿಯಲ್ಲಿ) ಹಾಜರುಪಡಿಸಲಾಗುವವರ ಪೈಕಿ ನಾನೂ ಸೇರಿರುತ್ತಿದ್ದೆ”.
(58) (ಸ್ವರ್ಗವಾಸಿಗಳು ಹೇಳುವರು): “ಇನ್ನು ನಾವು ಮರಣಹೊಂದಲಾರೆವು.
(59) ನಮ್ಮ ಮೊದಲ ಮರಣದ ಹೊರತು. ಇನ್ನು ನಾವು ಶಿಕ್ಷಿಸಲ್ಪಡಲಾರೆವು.
(60) ಖಂಡಿತವಾಗಿಯೂ ಮಹಾಭಾಗ್ಯವು ಇದೇ ಆಗಿದೆ.
(61) ಕರ್ಮವೆಸಗುವವರು ಇದರಂತಿರುವುದಕ್ಕಾಗಿ ಕರ್ಮವೆಸಗಲಿ”.
(62) ಉತ್ತಮ ಆತಿಥ್ಯವು ಇದಾಗಿದೆಯೇ? ಅಥವಾ ಝಕ್ಕೂಮ್ ಮರವೇ?(1007)
1007. ‘ಝಕ್ಕೂಮ್’ ಮರದ ಕಾಯಿ ಅತ್ಯಂತ ಅಸಹ್ಯ ಕಹಿಯನ್ನು ಹೊಂದಿದೆ. ಅದನ್ನು ನರಕವಾಸಿಗಳಿಗೆ ಆಹಾರವಾಗಿ ನೀಡಲಾಗುವುದು.
(63) ಖಂಡಿತವಾಗಿಯೂ ನಾವು ಅಕ್ರಮಿಗಳಿಗೆ ಅದನ್ನು ಒಂದು ಪರೀಕ್ಷೆಯನ್ನಾಗಿ ಮಾಡಿರುವೆವು.(1008)
1008. ‘ಧಗಧಗನೆ ಉರಿಯುವ ನರಕಾಗ್ನಿಯಲ್ಲಿ ಮರ ಬೆಳೆಯುತ್ತದೆಯೇ?’ ಎಂದಾಗಿರಬಹುದು ಸತ್ಯನಿಷೇಧಿಗಳ ಪ್ರಶ್ನೆ! ಅಲ್ಲಾಹುವಿಗೆ ಯಾವುದೇ ವಸ್ತುವನ್ನೂ ಯಾವುದೇ ವಿಧದಲ್ಲೂ ಸೃಷ್ಟಿಸಲು ಸಾಧ್ಯವಿದೆಯೆಂಬ ವಾಸ್ತವತೆಯಲ್ಲಿ ಯಾರೆಲ್ಲ ವಿಶ್ವಾಸವಿಡುತ್ತಾರೆಂದು ಪರೀಕ್ಷಿಸುವುದಕ್ಕಾಗಿಯೇ ಅಲ್ಲಾಹು ಝಕ್ಕೂಮ್ ಮರವನ್ನು ಪ್ರಸ್ತಾಪಿಸಿದ್ದಾನೆ.
(64) ಅದು ನರಕಾಗ್ನಿಯ ತಳಭಾಗದಿಂದ ಹೊರ ಹೊಮ್ಮುವ ಒಂದು ಮರವಾಗಿದೆ.
(65) ಅದರ ಗೊನೆಗಳು ಸೈತಾನರ ತಲೆಗಳಂತಿರುವುವು.
(66) ಖಂಡಿತವಾಗಿಯೂ ಅವರು ಅದರಿಂದ ತಿನ್ನುವರು ಮತ್ತು ಹೊಟ್ಟೆ ತುಂಬಿಸಿಕೊಳ್ಳುವರು.
(67) ತರುವಾಯ ಅವರಿಗೆ ಅದರ ಮೇಲೆ ಕುದಿಯುವ ಪಾನೀಯದ ಒಂದು ಮಿಶ್ರಣವಿರುವುದು.
(68) ತರುವಾಯ ಅವರ ಮರಳುವಿಕೆಯು ಖಂಡಿತವಾಗಿಯೂ ನರಕಾಗ್ನಿಯೆಡೆಗೇ ಆಗಿರುವುದು.
(69) ಖಂಡಿತವಾಗಿಯೂ ಅವರು ತಮ್ಮ ಪೂರ್ವಿಕರನ್ನು ಪಥಭ್ರಷ್ಟರನ್ನಾಗಿ ಕಂಡಿರುವರು.
(70) ಹಾಗೆ ಇವರು ಅವರ (ಪೂರ್ವಿಕರ) ಹೆಜ್ಜೆ ಗುರುತುಗಳ ಮೂಲಕ ಧಾವಂತದಿಂದ ಸಾಗುತ್ತಿರುವರು.
(71) ಇವರಿಗಿಂತ ಮುಂಚಿನ ಪೂರ್ವಿಕರ ಪೈಕಿ ಹೆಚ್ಚಿನವರೂ ಪಥಭ್ರಷ್ಟರಾಗಿದ್ದರು.
(72) ನಾವು ಅವರಿಗೆ ಮುನ್ನೆಚ್ಚರಿಕೆಗಾರರನ್ನು ಕಳುಹಿಸಿದ್ದೆವು.
(73) ಮುನ್ನೆಚ್ಚರಿಕೆ ನೀಡಲಾದವರ ಅಂತ್ಯ ಹೇಗಿತ್ತೆಂಬುದನ್ನು ನೋಡಿರಿ.
(74) ಅಲ್ಲಾಹುವಿನ ನಿಷ್ಕಳಂಕರಾದ ದಾಸರ ಹೊರತು.
(75) ನೂಹ್ ನಮ್ಮನ್ನು ಕರೆದು ಪ್ರಾರ್ಥಿಸಿದ್ದರು. ಆಗ ಉತ್ತರಿಸಿದವನು ಎಷ್ಟು ಉತ್ತಮನು!
(76) ಅವರನ್ನು ಮತ್ತು ಅವರ ಜನರನ್ನು ನಾವು ಮಹಾ ದುರಂತದಿಂದ ಪಾರು ಮಾಡಿದೆವು.
(77) ಅವರ ಸಂತತಿಗಳನ್ನು ನಾವು (ಭೂಮಿಯಲ್ಲಿ) ಅಸ್ತಿತ್ವದಲ್ಲಿರುವವರನ್ನಾಗಿ ಮಾಡಿದೆವು.
(78) ನಂತರದ ತಲೆಮಾರುಗಳಲ್ಲಿ ಅವರ ಕೀರ್ತಿಯನ್ನು ಉಳಿಸಿದೆವು.
(79) ಸರ್ವಲೋಕದವರ ಪೈಕಿ ನೂಹ್‍ರ ಮೇಲೆ ಶಾಂತಿಯಿರಲಿ!
(80) ಖಂಡಿತವಾಗಿಯೂ ನಾವು ಸಜ್ಜನರಿಗೆ ಹೀಗೆ ಪ್ರತಿಫಲವನ್ನು ನೀಡುವೆವು.
(81) ಖಂಡಿತವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದವರಾಗಿದ್ದರು.
(82) ತರುವಾಯ ನಾವು ಇತರರನ್ನು ಮುಳುಗಿಸಿದೆವು.
(83) ಖಂಡಿತವಾಗಿಯೂ ಇಬ್ರಾಹೀಮ್ ಅವರ ಗುಂಪಿನಲ್ಲಿ ಸೇರಿದವರಾಗಿರುವರು.
(84) ಅವರು ತಮ್ಮ ರಬ್‌ನ ಬಳಿಗೆ ನಿಷ್ಕಳಂಕ ಹೃದಯದೊಂದಿಗೆ ಬಂದ ಸಂದರ್ಭ!
(85) ಅವರು ತಮ್ಮ ತಂದೆಯೊಂದಿಗೂ, ಜನತೆಯೊಂದಿಗೂ ಹೇಳಿದ ಸಂದರ್ಭ: “ನೀವು ಏನನ್ನು ಆರಾಧಿಸುತ್ತಿದ್ದೀರಿ?
(86) ನೀವು ಅಲ್ಲಾಹುವಿನ ಹೊರತು ಮಿಥ್ಯಾರಾಧ್ಯರನ್ನು ಬಯಸುತ್ತಿದ್ದೀರಾ?
(87) ಹಾಗಾದರೆ ಸರ್ವಲೋಕಗಳ ರಬ್‌ನ ಬಗ್ಗೆ ನಿಮ್ಮ ಭಾವನೆಯೇನು?”
(88) ತರುವಾಯ ಅವರು ನಕ್ಷತ್ರಗಳೆಡೆಗೆ ಒಂದು ನೋಟವನ್ನು ಬೀರಿದರು.(1009)
1009. ಊರ ಜನರು ಉತ್ಸವಕ್ಕೆ ತೆರಳಲು ಸಿದ್ಧರಾದ ಸಂದರ್ಭದಲ್ಲಿ ಇಬ್ರಾಹೀಮ್(ಅ) ರವರು 85-87 ಸೂಕ್ತಿಗಳಲ್ಲಿರುವ ಪ್ರಶ್ನೆಗಳನ್ನು ಅವರೊಂದಿಗೆ ಕೇಳುತ್ತಾರೆ. ತಾರಾಫಲದಲ್ಲಿ ನಂಬಿಕೆಯಿಟ್ಟಿರುವ ಜನತೆಗೆ ವಿಷಯವನ್ನು ಮನದಟ್ಟು ಮಾಡಿಕೊಡಲು ತರುವಾಯ ಅವರು ನಕ್ಷತ್ರವನ್ನು ನೋಡಿ ನಾನು ಅಸ್ವಸ್ಥನಾಗಿರುವೆ ಎಂದು ಹೇಳಿರಬಹುದು. ಬಹುದೇವವಿಶ್ವಾಸದಿಂದ ತನ್ನ ಜನತೆಯನ್ನು ವಿಮೋಚಿಸಲು ಸಾಧ್ಯವಾಗದೇ ಇದ್ದುದರಲ್ಲಿ ಉಂಟಾದ ಮನಪ್ರಯಾಸವನ್ನು ಉದ್ದೇಶಿಸಿರಲೂಬಹುದು. ಊರಜನರು ಉತ್ಸವಕ್ಕೆ ತೆರಳಿದಾಗ ಅವರೊಂದಿಗೆ ತೆರಳದೆ ಊರಿನಲ್ಲಿಯೇ ಉಳಿಯುವುದಕ್ಕಾಗಿ ಅಸ್ವಸ್ಥನಾಗಿರುವೆನು ಎಂಬ ನೆಪವನ್ನು ಅವರು ಹೇಳಿದ್ದರು. ಊರಜನರ ಅನುಪಸ್ಥಿತಿಯಲ್ಲಿ ವಿಗ್ರಹಗಳನ್ನು ಧ್ವಂಸಗೊಳಿಸಬೇಕೆಂದು ಅವರು ಉಪಾಯ ಹೂಡಿದ್ದರು.
(89) ತರುವಾಯ ಹೇಳಿದರು: “ಖಂಡಿತವಾಗಿಯೂ ನಾನು ಅಸ್ವಸ್ಥನಾಗಿರುವೆನು”.
(90) ಆಗ ಅವರು ಅವರನ್ನು (ಇಬ್ರಾಹೀಮ್‌ರನ್ನು) ಬಿಟ್ಟು ವಿಮುಖರಾಗಿ ಹೋದರು.
(91) ತರುವಾಯ ಅವರು (ಇಬ್ರಾಹೀಮ್) ಅವರ ಆರಾಧ್ಯರೆಡೆಗೆ ತಿರುಗಿ ಹೇಳಿದರು: “ನೀವು ತಿನ್ನುವುದಿಲ್ಲವೇ?
(92) ನಿಮಗೇನಾಗಿದೆ? ನೀವು ಮಾತನಾಡುತ್ತಿಲ್ಲವಲ್ಲ”.
(93) ತರುವಾಯ ಅವರು ಅವುಗಳೆಡೆಗೆ ತಿರುಗಿ ಬಲಗೈಯಿಂದ ಅವುಗಳಿಗೆ ಬಲವಾಗಿ ಬಾರಿಸಿದರು.
(94) ತರುವಾಯ ಅವರು ಅವರೆಡೆಗೆ ಓಡಿ ಬಂದರು.
(95) ಅವರು (ಇಬ್ರಾಹೀಮ್) ಹೇಳಿದರು: “ನೀವೇ ಸ್ವತಃ ಕಡೆದು ನಿರ್ಮಿಸಿದವುಗಳನ್ನು ನೀವು ಆರಾಧಿಸುತ್ತಿದ್ದೀರಾ?
(96) ನಿಮ್ಮನ್ನು ಮತ್ತು ನೀವು ನಿರ್ಮಿಸುತ್ತಿರುವುದನ್ನು ಸೃಷ್ಟಿಸಿದವನು ಅಲ್ಲಾಹುವಲ್ಲವೇ?”
(97) ಅವರು (ಪರಸ್ಪರ) ಹೇಳಿದರು: “ನೀವು ಅವರಿಗೆ (ಇಬ್ರಾಹೀಮ್‍ಗೆ) ಒಂದು ಅಗ್ನಿಕುಂಡವನ್ನು ನಿರ್ಮಿಸಿರಿ. ತರುವಾಯ ಅವರನ್ನು ಜ್ವಲಿಸುವ ಅಗ್ನಿಗೆಸೆಯಿರಿ”.
(98) ಅವರ (ಇಬ್ರಾಹೀಮರ) ವಿಷಯದಲ್ಲಿ ಅವರೊಂದು ತಂತ್ರವನ್ನು ಹೂಡಲು ಬಯಸಿದರು. ಆದರೆ ನಾವು ಅವರನ್ನು ಅತ್ಯಂತ ಅಧಮರನ್ನಾಗಿ ಮಾಡಿದೆವು.
(99) ಅವರು ಹೇಳಿದರು: “ಖಂಡಿತವಾಗಿಯೂ ನಾನು ನನ್ನ ರಬ್‌ನೆಡೆಗೆ ತೆರಳುವೆನು. ಅವನು ನನಗೆ ದಾರಿ ತೋರಿಸುವನು.
(100) ನನ್ನ ಪ್ರಭೂ! ಸಜ್ಜನರಲ್ಲಿ ಸೇರಿದವನನ್ನು ನನಗೆ (ಪುತ್ರನನ್ನಾಗಿ) ಕರುಣಿಸು”.
(101) ಆಗ ನಾವು ಅವರಿಗೆ ಸಹನಾಶೀಲ ಹುಡುಗನ ಬಗ್ಗೆ ಶುಭವಾರ್ತೆಯನ್ನು ತಿಳಿಸಿದೆವು.
(102) ತರುವಾಯ ಅವನು (ಬಾಲಕನು) ಅವರೊಂದಿಗೆ ಪರಿಶ್ರಮಿಸುವ ಪ್ರಾಯಕ್ಕೆ ತಲುಪಿದಾಗ ಅವರು (ಇಬ್ರಾಹೀಮ್) ಹೇಳಿದರು: “ಓ ನನ್ನ ಮಗನೇ! ನಾನು ನಿನ್ನ ಕತ್ತನ್ನು ಕೊಯ್ಯಬೇಕೆಂದು ಕನಸು ಕಂಡಿರುವೆನು.(1010) ಆದುದರಿಂದ ನೋಡು! ನಿನ್ನ ಅಭಿಪ್ರಾಯವೇನು?” ಅವನು ಹೇಳಿದನು: “ಓ ನನ್ನ ತಂದೆಯವರೇ! ತಮಗೆ ಆಜ್ಞಾಪಿಸಲಾಗಿರುವುದನ್ನು ತಾವು ನಿರ್ವಹಿಸಿರಿ. ಅಲ್ಲಾಹು ಇಚ್ಛಿಸಿದರೆ ಖಂಡಿತವಾಗಿಯೂ ತಾವು ನನ್ನನ್ನು ತಾಳ್ಮೆ ವಹಿಸುವವರ ಪೈಕಿ ಸೇರಿದವನಾಗಿ ಕಾಣುವಿರಿ”.
1010. ಇಬ್ರಾಹೀಮ್(ಅ) ರವರ ಮಕ್ಕಳ ಪೈಕಿ ಯಾರನ್ನು ಬಲಿ ನೀಡಲು ಆದೇಶಿಸಲಾಯಿತು? ಇಸ್ಮಾಈಲ್(ಅ) ರನ್ನೋ ಅಥವಾ ಇಸ್‍ಹಾಕ್(ಅ) ರನ್ನೋ? ಯಹೂದ-ಕ್ರೈಸ್ತ ವಿದ್ವಾಂಸರ ಪ್ರಕಾರ ಅದು ಇಸ್‍ಹಾಕ್(ಅ) ರನ್ನಾಗಿದೆ. ಮುಸ್ಲಿಮ್ ವಿದ್ವಾಂಸರ ಪೈಕಿ ಒಂದು ಗುಂಪು ಇದೇ ಅಭಿಪ್ರಾಯವನ್ನು ಹೊಂದಿದೆ. ಆದರೆ ಈ ಅಧ್ಯಾಯದಲ್ಲಿ ಬಲಿಯ ಬಗ್ಗೆಯಿರುವ ಪರಾಮರ್ಶೆಗಳು ಮುಗಿದ ಬಳಿಕ ಇಸ್‍ಹಾಕ್(ಅ) ರ ಬಗ್ಗೆ ವಿಶೇಷ ಪ್ರಸ್ತಾಪವಿರುವುದರಿಂದ ಈ ಅಭಿಪ್ರಾಯವು ಸರಿಯಾಗಿರುವ ಸಾಧ್ಯತೆ ವಿರಳವಾಗಿದೆ. ಪೂರ್ವಿಕ ಮತ್ತು ಆಧುನಿಕ ಮುಸ್ಲಿಮ್ ವಿದ್ವಾಂಸರ ಪೈಕಿ ಹೆಚ್ಚಿನವರೂ ಬಲಿಯರ್ಪಿಸಲು ಆದೇಶಿಸಲಾಗಿದ್ದು ಇಸ್ಮಾಈಲ್(ಅ) ರನ್ನಾಗಿದೆ ಎಂಬ ಅಭಿಪ್ರಾಯವನ್ನು ಹೊಂದಿದ್ದಾರೆ.
(103) ತರುವಾಯ ಅವರಿಬ್ಬರೂ (ಆಜ್ಞೆಗೆ) ಶರಣಾದಾಗ ಮತ್ತು ಅವರನ್ನು (ಮಗನನ್ನು) ಹಣೆಯ ಮೇಲೆ ಹೊರಳಿಸಿ ಮಲಗಿಸಲಾದಾಗ.
(104) ನಾವು ಅವರನ್ನು ಕರೆದು ಹೇಳಿದೆವು: “ಓ ಇಬ್ರಾಹೀಮ್!
(105) ಖಂಡಿತವಾಗಿಯೂ ತಾವು ಕನಸನ್ನು ನಿಜಪಡಿಸಿದ್ದೀರಿ. ಖಂಡಿತವಾಗಿಯೂ ನಾವು ಸಜ್ಜನರಿಗೆ ಹೀಗೆ ಪ್ರತಿಫಲವನ್ನು ನೀಡುವೆವು.
(106) ಖಂಡಿತವಾಗಿಯೂ ಇದೊಂದು ಸ್ಪಷ್ಟವಾದ ಪರೀಕ್ಷೆಯೇ ಆಗಿತ್ತು”.
(107) ಅವರ (ಮಗನ) ಬದಲಿಗೆ ಬಲಿ ನೀಡುವುದಕ್ಕಾಗಿ ಮಹಾ ಬಲಿಮೃಗವೊಂದನ್ನು ನಾವು ನೀಡಿದೆವು.
(108) ನಂತರದವರಲ್ಲಿ ಅವರ (ಇಬ್ರಾಹೀಮ್‌ರ) ಕೀರ್ತಿಯನ್ನು ನಾವು ಉಳಿಸಿದೆವು.
(109) ಇಬ್ರಾಹೀಮ್‌ರ ಮೇಲೆ ಶಾಂತಿಯಿರಲಿ!
(110) ನಾವು ಸಜ್ಜನರಿಗೆ ಹೀಗೆ ಪ್ರತಿಫಲವನ್ನು ನೀಡುವೆವು.
(111) ಖಂಡಿತವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದವರಾಗಿರುವರು.
(112) ನಾವು ಅವರಿಗೆ ಇಸ್‍ಹಾಕ್ ಎಂಬ ಪುತ್ರನ ಜನನದ ಬಗ್ಗೆಯೂ ಶುಭವಾರ್ತೆಯನ್ನು ತಿಳಿಸಿದೆವು.(1011) ಸಜ್ಜನರಲ್ಲಿ ಸೇರಿದ ಒಬ್ಬ ಪ್ರವಾದಿಯೆಂಬ ನೆಲೆಯಲ್ಲಿ.
1011. ಇಸ್‍ಹಾಕ್(ಅ) ಹುಟ್ಟಿದಾಗ ಇಬ್ರಾಹೀಮ್(ಅ) ರವರ ವಯಸ್ಸು 100 ಆಗಿತ್ತು ಮತ್ತು ಇಸ್ಮಾಈಲ್(ಅ) ಹುಟ್ಟಿದಾಗ 86 ಆಗಿತ್ತು ಎಂದು ಬೈಬಲ್‍ನ ಆದಿಕಾಂಡದಲ್ಲಿ ಹೇಳಲಾಗಿದೆ.
(113) ನಾವು ಅವರಿಗೂ, ಇಸ್‍ಹಾಕ್‍ರಿಗೂ ಅನುಗ್ರಹ ನೀಡಿದೆವು. ಅವರಿಬ್ಬರ ಸಂತತಿಗಳಲ್ಲಿ ಸಜ್ಜನರಿರುವರು. ಸ್ವತಃ ತಮ್ಮೊಂದಿಗೇ ಸ್ಪಷ್ಟವಾದ ಅಕ್ರಮವೆಸಗುವವರೂ ಇರುವರು.
(114) ಖಂಡಿತವಾಗಿಯೂ ನಾವು ಮೂಸಾ ಮತ್ತು ಹಾರೂನ್‍ರಿಗೆ ಔದಾರ್ಯ ತೋರಿರುವೆವು.
(115) ಅವರಿಬ್ಬರನ್ನು ಮತ್ತು ಅವರ ಜನತೆಯನ್ನು ನಾವು ಮಹಾ ದುರಂತದಿಂದ ರಕ್ಷಿಸಿದೆವು.
(116) ನಾವು ಅವರಿಗೆ ಸಹಾಯವನ್ನೂ ಮಾಡಿದೆವು. ಆಗ ಅವರೇ ವಿಜಯಿಗಳಾದರು.
(117) ಅವರಿಬ್ಬರಿಗೂ ನಾವು (ವಿಷಯಗಳನ್ನು) ಸ್ಪಷ್ಟಪಡಿಸುವ ಗ್ರಂಥವನ್ನು ನೀಡಿದೆವು.
(118) ಮತ್ತು ಅವರಿಬ್ಬರನ್ನೂ ನಾವು ನೇರ ಮಾರ್ಗದೆಡೆಗೆ ಮುನ್ನಡೆಸಿದೆವು.
(119) ನಂತರದ ತಲೆಮಾರುಗಳಲ್ಲಿ ಅವರ ಕೀರ್ತಿಯನ್ನು ನಾವು ಉಳಿಸಿದೆವು.
(120) ಮೂಸಾ ಮತ್ತು ಹಾರೂನ್‍ರ ಮೇಲೆ ಶಾಂತಿಯಿರಲಿ!
(121) ಖಂಡಿತವಾಗಿಯೂ ನಾವು ಸಜ್ಜನರಿಗೆ ಹೀಗೆ ಪ್ರತಿಫಲವನ್ನು ನೀಡುವೆವು.
(122) ಖಂಡಿತವಾಗಿಯೂ ಅವರಿಬ್ಬರೂ ನಮ್ಮ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದವರಾಗಿರುವರು.
(123) ಖಂಡಿತವಾಗಿಯೂ ಇಲ್ಯಾಸ್ ಪ್ರವಾದಿಗಳಲ್ಲಿ ಒಬ್ಬರಾಗಿರುವರು.
(124) ಅವರು ತಮ್ಮ ಜನತೆಯೊಂದಿಗೆ ಹೇಳಿದ ಸಂದರ್ಭ: “ನೀವು ಭಯಭಕ್ತಿ ಪಾಲಿಸಲಾರಿರೇ?”
(125) ನೀವು ಬಅ್‌ಲನ್ನು(1012) ಕರೆದು ಪ್ರಾರ್ಥಿಸುತ್ತಾ ಅತ್ಯುತ್ತಮ ಸೃಷ್ಟಿಕರ್ತನನ್ನು ತೊರೆಯುವಿರಾ?
1012. ‘ಬಅ್‌ಲ್’ ಸಿರಿಯನ್ನರ ಸೂರ್ಯದೇವನಾಗಿದ್ದನು.
(126) ಅಂದರೆ ನಿಮ್ಮ ಮತ್ತು ನಿಮ್ಮ ಪೂರ್ವಿಕರ ರಬ್ ಆದ ಅಲ್ಲಾಹುವನ್ನು?
(127) ಆಗ ಅವರು ಅವರನ್ನು ನಿಷೇಧಿಸಿದರು. ಆದುದರಿಂದ ಖಂಡಿತವಾಗಿಯೂ ಅವರನ್ನು (ಶಿಕ್ಷೆಗೆ) ಹಾಜರುಪಡಿಸಲಾಗುವುದು.
(128) ಅಲ್ಲಾಹುವಿನ ನಿಷ್ಕಳಂಕರಾದ ದಾಸರ ಹೊರತು.
(129) ನಂತರದ ತಲೆಮಾರುಗಳಲ್ಲಿ ನಾವು ಅವರ ಕೀರ್ತಿಯನ್ನು ಉಳಿಸಿದೆವು.
(130) ಇಲ್ಯಾಸ್‍ರ ಮೇಲೆ ಶಾಂತಿಯಿರಲಿ!
(131) ಖಂಡಿತವಾಗಿಯೂ ನಾವು ಸಜ್ಜನರಿಗೆ ಹೀಗೆ ಪ್ರತಿಫಲವನ್ನು ನೀಡುವೆವು.
(132) ಖಂಡಿತವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದವರಾಗಿರುವರು.
(133) ಖಂಡಿತವಾಗಿಯೂ ಲೂತ್ ಸಂದೇಶವಾಹಕರಲ್ಲಿ ಸೇರಿದವರಾಗಿರುವರು.
(134) ಅವರನ್ನು ಮತ್ತು ಅವರ ಕುಟುಂಬವನ್ನು ನಾವು ಸಂಪೂರ್ಣವಾಗಿ ರಕ್ಷಿಸಿದ ಸಂದರ್ಭ!
(135) ಹಿಂಜರಿದು ನಿಂತವರಲ್ಲಿ ಸೇರಿದ ಒಬ್ಬ ವೃದ್ಧೆಯ ಹೊರತು.
(136) ತರುವಾಯ ಇತರರನ್ನು ನಾವು ನಾಶ ಮಾಡಿದೆವು.
(137) ಖಂಡಿತವಾಗಿಯೂ ನೀವು ಬೆಳಗ್ಗೆ ಅವರ ಬಳಿಯಿಂದ ಹಾದುಹೋಗುತ್ತಿದ್ದೀರಿ.(1013)
1013. ಲೂತ್(ಅ) ರವರ ಜನತೆಯು ವಾಸವಾಗಿದ್ದ ನಾಶಗ್ರಸ್ತ ಊರು ಸಿರಿಯಾದೆಡೆಗೆ ತೆರಳುವ ಅರಬ್ ವ್ಯಾಪಾರ ತಂಡಗಳು ಸಂಚರಿಸುತ್ತಿದ್ದ ಹಾದಿಯಲ್ಲಾಗಿತ್ತು.
(138) ಮತ್ತು ರಾತ್ರಿ ಕೂಡ. ಆದರೂ ನೀವು ಚಿಂತಿಸುವುದಿಲ್ಲವೇ?
(139) ಖಂಡಿತವಾಗಿಯೂ ಯೂನುಸ್ ಸಂದೇಶವಾಹಕರಲ್ಲಿ ಸೇರಿದವರಾಗಿರುವರು.
(140) ಅವರು ಭಾರ ತುಂಬಿದ ಹಡಗಿನೆಡೆಗೆ ಪಲಾಯನ ಮಾಡಿದ(1014) ಸಂದರ್ಭ!
1014. ಯೂನುಸ್(ಅ) ರವರನ್ನು ಪ್ರವಾದಿಯಾಗಿ ಕಳುಹಿಸಲಾಗಿದ್ದು ನೀನೆವಾ ಪಟ್ಟಣಕ್ಕಾಗಿತ್ತು. ಅವರು ನಿರಂತರವಾಗಿ ಉಪದೇಶ ಮಾಡಿದರೂ ಜನರಾರೂ ವಿಶ್ವಾಸವಿಡಲಿಲ್ಲ. ಇದರಿಂದ ಬೇಸತ್ತು ಅವರು ಆ ಸ್ಥಳವನ್ನು ತೊರೆದು ಹೋದರು. ಅಲ್ಲಾಹುವಿನ ಆದೇಶ ಲಭ್ಯವಾಗದೆ ಮತ್ತು ಜನರಿಗೆ ತಿಳಿಸದೆ ಅವರು ಹೋಗಿದ್ದರು. ಆದುದರಿಂದಲೇ ಪಲಾಯನ ಮಾಡಿದರು ಎಂಬ ಪದವನ್ನು ಬಳಸಲಾಗಿದೆ.
(141) ತರುವಾಯ ಅವರು (ಹಡಗಿನಲ್ಲಿದ್ದ ಪ್ರಯಾಣಿಕರೊಂದಿಗೆ) ಚೀಟಿಯೆತ್ತುವುದರಲ್ಲಿ ಪಾಲ್ಗೊಂಡರು.(1015) ಆಗ ಅವರು ಪರಾಭವಗೊಂಡವರಲ್ಲಿ ಸೇರಿದವರಾದರು.
1015. ಅವರು ಏರಿದ ಹಡಗು ಪ್ರತಿಕೂಲ ಹವೆಯಿಂದಾಗಿ ಮುಳುಗುವಂತಾದಾಗ ಯಾರೋ ಅನಿಷ್ಟ ವ್ಯಕ್ತಿ ಹತ್ತಿದ್ದರಿಂದಲೇ ಹೀಗಾಯಿತೆಂದು ಹಡಗಿನ ಕೆಲಸಗಾರರು ಭಾವಿಸಿದರು. ಅನಿಷ್ಟ ವ್ಯಕ್ತಿಯನ್ನು ಹುಡುಕುವುದಕ್ಕಾಗಿ ಅವರು ಚೀಟಿಯೆತ್ತಲು ತೀರ್ಮಾನಿಸಿದರು. ಯೂನುಸ್(ಅ) ರಿಗೆ ಅದರಲ್ಲಿ ಭಾಗಿಯಾಗಬೇಕಾಗಿ ಬಂತು. ದುರದೃಷ್ಟವಶಾತ್ ಹಡಗಿನಿಂದ ಹೊರಗೆಸೆಯಬೇಕಾದ ವ್ಯಕ್ತಿಯ ಹೆಸರು ಯೂನುಸ್(ಅ) ರದ್ದೇ ಆಗಿತ್ತು. ಹಾಗೆ ಅವರನ್ನು ಹಡಗಿನಿಂದ ಹೊರಗೆಸೆಯಲಾಯಿತು.
(142) ತರುವಾಯ ಅವರು ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದಾಗ ದೊಡ್ಡ ಮೀನೊಂದು ಅವರನ್ನು ನುಂಗಿತು.
(143) ಆದರೆ ಅವರು ಅಲ್ಲಾಹುವಿನ ಪರಿಪಾವನತೆಯನ್ನು ಕೊಂಡಾಡುವವರಲ್ಲಿ ಸೇರಿಲ್ಲದಿರುತ್ತಿದ್ದರೆ.
(144) ಜನರನ್ನು ಪುನರುತ್ಥಾನಗೊಳಿಸಲಾಗುವ ದಿನದವರೆಗೂ ಅವರು ಅದರ ಉದರದಲ್ಲೇ ತಂಗಿರುತ್ತಿದ್ದರು!
(145) ತರುವಾಯ ಅಸ್ವಸ್ಥರಾಗಿರುವ ಸ್ಥಿತಿಯಲ್ಲಿ ನಾವು ಅವರನ್ನು ಬಯಲು ಪ್ರದೇಶಕ್ಕೆ ಎಸೆದೆವು.(1016)
1016. ಅಲ್ಲಾಹುವಿನ ವಿಶೇಷ ಸಂರಕ್ಷಣೆಯ ನಿಮಿತ್ತ ಮೀನಿನ ಹೊಟ್ಟೆಯಿಂದ ಅವರನ್ನು ಬಯಲು ತೀರ ಪ್ರದೇಶಕ್ಕೆ ಹೊರತಳ್ಳಲಾಯಿತು.
(146) ನಾವು ಅವರ ಮೇಲೆ ಯಕ್‍ತೀನ್ ಮರವನ್ನು ಬೆಳೆಸಿದೆವು.(1017)
1017. ಆಯಾಸ ಮತ್ತು ಅನಾರೋಗ್ಯದೊಂದಿಗೆ ಹೊರಬಂದ ಯೂನುಸ್(ಅ) ರಿಗೆ ವಿಶ್ರಾಂತಿ ಪಡೆಯಲು ನೆರಳು ಮತ್ತು ಆರೋಗ್ಯವನ್ನು ಮರಳಿ ಪಡೆಯಲು ಪೌಷ್ಟಿಕ ಆಹಾರದ ಅಗತ್ಯವಿತ್ತು. ಅದಕ್ಕಾಗಿ ಅಲ್ಲಾಹು ‘ಯಕ್‍ತೀನ್’ ಎಂಬ ಮರವನ್ನು ಬೆಳೆಸಿದನು. ಅದು ಕುಂಬಳಕಾಯಿ, ಸೋರೆ ಮೊದಲಾದವುಗಳಂತೆ ಬಳ್ಳಿ ಬಿಟ್ಟು ಚಪ್ಪರದಂತೆ ಹರಡಿಕೊಳ್ಳುವ ಒಂದು ವಿಧ ತರಕಾರಿಯಾಗಿದೆ.
(147) ನಾವು ಅವರನ್ನು ಒಂದು ಲಕ್ಷ ಅಥವಾ ಅದಕ್ಕಿಂತಲೂ ಹೆಚ್ಚು ಸಂಖ್ಯೆಯ ಜನರೆಡೆಗೆ ಕಳುಹಿಸಿದೆವು.
(148) ಅವರು ವಿಶ್ವಾಸವಿಟ್ಟರು. ತನ್ನಿಮಿತ್ತ ನಾವು ಅವರಿಗೆ ದೀರ್ಘಕಾಲದ ತನಕ ಸುಖಸೌಕರ್ಯಗಳನ್ನು ಒದಗಿಸಿದೆವು.
(149) (ಓ ಪ್ರವಾದಿಯವರೇ!) ಅವರೊಂದಿಗೆ ಅಭಿಪ್ರಾಯ ಕೇಳಿರಿ: ತಮ್ಮ ರಬ್‌ಗೆ ಹೆಣ್ಣು ಮಕ್ಕಳು ಮತ್ತು ಅವರಿಗೆ ಗಂಡುಮಕ್ಕಳೇ?
(150) ಅಥವಾ ನಾವು ಮಲಕ್‍ಗಳನ್ನು ಹೆಣ್ಣಾಗಿ ಸೃಷ್ಟಿಸಿರುವುದನ್ನು ಅವರು ಕಣ್ಣಾರೆ ಕಂಡಿರುವರೇ?
(151) ಅರಿಯಿರಿ! ಅವರು ಹೇಳುತ್ತಿರುವುದು ಖಂಡಿತವಾಗಿಯೂ ಅವರ ಸುಳ್ಳಾರೋಪಗಳ ಪೈಕಿ ಸೇರಿದ್ದಾಗಿದೆ.
(152) ಅಲ್ಲಾಹು ಸಂತತಿಗೆ ಜನ್ಮ ನೀಡಿರುವನೆಂದು. ಖಂಡಿತವಾಗಿಯೂ ಅವರು ಸುಳ್ಳು ನುಡಿಯುವವರಾಗಿರುವರು.
(153) ಗಂಡುಮಕ್ಕಳಿಗೆ ಮಿಗಿಲಾಗಿ ಅವನು ಹೆಣ್ಮಕ್ಕಳನ್ನು ಆರಿಸಿರುವನೇ?
(154) ನಿಮಗೇನಾಗಿದೆ? ನೀವು ಹೇಗೆ ತೀರ್ಪು ನೀಡುತ್ತಿದ್ದೀರಿ?
(155) ನೀವು ಚಿಂತಿಸಲಾರಿರೇ?
(156) ಅಥವಾ, ಸ್ಪಷ್ಟವಾದ ಯಾವುದಾದರೂ ಆಧಾರಪ್ರಮಾಣವು ನಿಮಗೆ ಸಿಕ್ಕಿದೆಯೇ?
(157) ಹಾಗಿದ್ದರೆ ನೀವು ನಿಮ್ಮ ದಾಖಲೆಯನ್ನು ತನ್ನಿರಿ. ನೀವು ಸತ್ಯಸಂಧರಾಗಿದ್ದರೆ!
(158) ಅವರು ಅವನ (ಅಲ್ಲಾಹುವಿನ) ಮತ್ತು ಜಿನ್ನ್‌ಗಳ ಮಧ್ಯೆ ಕುಟುಂಬ ಸಂಬಂಧವನ್ನು ಸ್ಥಾಪಿಸಿದ್ದರು.(1018) ಆದರೆ ತಮ್ಮನ್ನು ಖಂಡಿತವಾಗಿಯೂ ಶಿಕ್ಷೆಗೆ ಹಾಜರುಪಡಿಸಲಾಗುವುದೆಂದು ಜಿನ್ನ್‌ಗಳು ಅರಿತಿರುವರು.
1018. ಅನೇಕ ನಾಗರಿಕತೆಗಳಲ್ಲಿ ಜಿನ್ನ್‍ಗಳನ್ನು ದೇವರೆಂದು ಪೂಜಿಸುವ ಜನರಿದ್ದರು.
(159) ಅವರು ಸುಳ್ಳು ಸುಳ್ಳಾಗಿ ಆರೋಪಿಸುತ್ತಿರುವುದರಿಂದೆಲ್ಲ ಅಲ್ಲಾಹು ಪರಮ ಪಾವನನಾಗಿರುವನು.
(160) ಆದರೆ ಅಲ್ಲಾಹುವಿನ ನಿಷ್ಕಳಂಕರಾದ ದಾಸರು (ಇದರಿಂದೆಲ್ಲ) ಹೊರತಾಗಿರುವರು.(1019)
1019. ಅಲ್ಲಾಹುವಿನ ನಿಷ್ಕಳಂಕ ದಾಸರು ಅವನ ಬಗ್ಗೆ ಅವನ ಮಹತ್ವಕ್ಕೆ ಯೋಗ್ಯವಲ್ಲದ ಏನನ್ನೂ ಹೇಳಲಾರರು.
(161) ಖಂಡಿತವಾಗಿಯೂ ನಿಮಗಾಗಲಿ, ನೀವು ಏನನ್ನು ಆರಾಧಿಸುತ್ತಿರುವಿರೋ ಅವುಗಳಿಗಾಗಲಿ.
(162) ಅವನ (ಅಲ್ಲಾಹುವಿನ) ವಿರುದ್ಧ (ಯಾರನ್ನೂ) ಕ್ಷೋಭೆಗೊಳಪಡಿಸಲು ಸಾಧ್ಯವಾಗದು.
(163) ನರಕಾಗ್ನಿಯಲ್ಲಿ ಉರಿದು ಹೋಗುವವನ ಹೊರತು.
(164) (ಮಲಕ್‍ಗಳು ಹೇಳುವರು): ನಿಶ್ಚಿತ ಸ್ಥಾನವುಳ್ಳವರಾಗಿಯೇ ಹೊರತು ನಮ್ಮ ಪೈಕಿ ಯಾರೂ ಇಲ್ಲ.
(165) ಖಂಡಿತವಾಗಿಯೂ ಸಾಲುಗಟ್ಟಿ ನಿಲ್ಲುವವರು ನಾವೇ ಆಗಿರುವೆವು.
(166) ಖಂಡಿತವಾಗಿಯೂ (ಅಲ್ಲಾಹುವಿನ) ಪರಿಪಾವನತೆಯನ್ನು ಕೊಂಡಾಡುವವರು ನಾವೇ ಆಗಿರುವೆವು.
(167) ಖಂಡಿತವಾಗಿಯೂ ಅವರು (ಸತ್ಯನಿಷೇಧಿಗಳು) ಹೇಳುತ್ತಿದ್ದರು:
(168) “ಪೂರ್ವಿಕರಿಂದ ಸಿಕ್ಕಿದ ಯಾವುದಾದರೂ ಉಪದೇಶವು ನಮ್ಮ ಬಳಿಯಿರುತ್ತಿದ್ದರೆ.
(169) ನಾವು ಅಲ್ಲಾಹುವಿನ ನಿಷ್ಕಳಂಕ ದಾಸರಾಗಿಯೇ ತೀರುತ್ತಿದ್ದೆವು”.
(170) ಆದರೂ ಅವರು ಇದರಲ್ಲಿ (ಈ ಗ್ರಂಥದಲ್ಲಿ) ಅವಿಶ್ವಾಸವಿಟ್ಟರು. ಆದುದರಿಂದ ತರುವಾಯ ಅವರು (ವಾಸ್ತವವನ್ನು) ಅರಿತುಕೊಳ್ಳುವರು.
(171) ಸಂದೇಶವಾಹಕರಾಗಿ ಕಳುಹಿಸಲಾಗಿರುವ ನಮ್ಮ ದಾಸರೊಂದಿಗೆ ನಮ್ಮ ವಚನವು ಮುಂಚೆಯೇ ಉಂಟಾಗಿತ್ತು.
(172) (ಅಂದರೆ) ಖಂಡಿತವಾಗಿಯೂ ಸಹಾಯ ಮಾಡಲ್ಪಡುವವರು ಅವರೇ ಆಗಿರುವರು.
(173) ಖಂಡಿತವಾಗಿಯೂ ನಮ್ಮ ಸೈನ್ಯವೇ ವಿಜೇತರಾಗುವರು ಎಂದು.
(174) ಆದುದರಿಂದ ಒಂದು ಅವಧಿಯವರೆಗೆ ತಾವು ಅವರಿಂದ ವಿಮುಖರಾಗಿರಿ.
(175) ಅವರನ್ನು ವೀಕ್ಷಿಸುತ್ತಿರಿ. ತರುವಾಯ ಅವರೇ ಕಂಡುಕೊಳ್ಳುವರು.
(176) ಅವರು ನಮ್ಮ ಶಿಕ್ಷೆಯ ಬಗ್ಗೆ ಆತುರಪಡುತ್ತಿರುವರೇ?
(177) ಆದರೆ ಅದು ಅವರ ಅಂಗಳದಲ್ಲಿ ಇಳಿದರೆ ಮುನ್ನೆಚ್ಚರಿಕೆ ನೀಡಲಾದವರ ಪ್ರಭಾತವು ಎಷ್ಟು ನಿಕೃಷ್ಟವಾಗಿರುವುದು!
(178) (ಆದುದರಿಂದ) ಒಂದು ಅವಧಿಯವರೆಗೆ ತಾವು ಅವರಿಂದ ವಿಮುಖರಾಗಿರಿ.
(179) ಅವರನ್ನು ವೀಕ್ಷಿಸುತ್ತಿರಿ. ತರುವಾಯ ಅವರೇ ಕಂಡುಕೊಳ್ಳುವರು.
(180) ಪ್ರತಾಪದ ಒಡೆಯನಾಗಿರುವ ತಮ್ಮ ರಬ್ ಅವರು ಸುಳ್ಳು ಸುಳ್ಳಾಗಿ ಆರೋಪಿಸುವುದರಿಂದೆಲ್ಲ ಪರಮ ಪಾವನನಾಗಿರುವನು!
(181) ಸಂದೇಶವಾಹಕರ ಮೇಲೆ ಶಾಂತಿಯಿರಲಿ!
(182) ಸರ್ವಲೋಕಗಳ ರಬ್ ಆದ ಅಲ್ಲಾಹುವಿಗೆ ಸ್ತುತಿ.