38 - Saad ()

|

(1) ಸ್ವಾದ್. ಉಪದೇಶವನ್ನು ಒಳಗೊಂಡಿರುವ ಕುರ್‌ಆನ್‍ನ ಮೇಲಾಣೆ!

(2) ಆದರೆ ಸತ್ಯನಿಷೇಧಿಗಳು ದುರಭಿಮಾನ ಮತ್ತು ವಿರೋಧದಲ್ಲೇ ಇರುವರು.

(3) ಅವರಿಗಿಂತ ಮುಂಚೆ ನಾವು ಎಷ್ಟೋ ತಲೆಮಾರುಗಳನ್ನು ನಾಶ ಮಾಡಿರುವೆವು. ಆಗ ಅವರು ರೋದಿಸಿದರು. ಆದರೆ ಅದು ಪಾರಾಗುವ ಸಮಯವಾಗಿರಲಿಲ್ಲ.

(4) ಅವರಿಂದಲೇ ಇರುವ ಒಬ್ಬ ಸಂದೇಶವಾಹಕರು ಅವರ ಬಳಿಗೆ ಬಂದಿರುವುದರ ಬಗ್ಗೆ ಅವರು ಆಶ್ಚರ್ಯಪಟ್ಟರು. ಸತ್ಯನಿಷೇಧಿಗಳು ಹೇಳಿದರು: “ಇವರೊಬ್ಬ ಮಾಂತ್ರಿಕ! ಮಿಥ್ಯವಾದಿ!”(1020)
1020. ಮುಹಮ್ಮದ್(ಸ) ರವರು ಹುಟ್ಟಿ ಬೆಳೆದಿದ್ದು ಮಕ್ಕಾನಿವಾಸಿಗಳ ಮಧ್ಯೆಯೇ ಆಗಿತ್ತು. ಅವರ ಸತ್ಯಸಂಧತೆ ಮತ್ತು ಸ್ವಭಾವ ವೈಶಿಷ್ಟ್ಯತೆಯು ಅವರಿಗೆ ಚಿರಪರಿಚಿತವಾಗಿತ್ತು. ಆದರೂ ಅವರು ಪ್ರವಾದಿಯಾಗಿ ಜನರ ಮುಂದೆ ಬಂದಾಗ ಜನರು ಅವರನ್ನು ಮಿಥ್ಯವಾದಿಯನ್ನಾಗಿ ಚಿತ್ರೀಕರಿಸಿದರು.

(5) “ಇವರು ಅನೇಕ ಆರಾಧ್ಯರನ್ನು ಏಕೈಕ ಆರಾಧ್ಯನನ್ನಾಗಿ ಮಾಡಿರುವರೇ? ಖಂಡಿತವಾಗಿಯೂ ಇದೊಂದು ಅದ್ಭುತ ವಿಷಯವಾಗಿದೆ!”

(6) ಅವರ ಪೈಕಿ ಮುಖಂಡರು (ಹೇಳುತ್ತಾ) ಸಾಗಿದರು: “ನೀವು ಮುಂದುವರಿಯಿರಿ! ನಿಮ್ಮ ಆರಾಧ್ಯರ ವಿಷಯದಲ್ಲಿ ತಾಳ್ಮೆಯಿಂದ ಅಚಲರಾಗಿ ನಿಲ್ಲಿರಿ. ಖಂಡಿತವಾಗಿಯೂ ಇದು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿರುವ ಒಂದು ಸಂಗತಿಯೇ ಆಗಿದೆ.(1021)
1021. ಮುಹಮ್ಮದ್(ಸ) ರವರು ನಮ್ಮ ಆರಾಧ್ಯರನ್ನು ವಿಮರ್ಶಿಸುತ್ತಿರುವುದು ನಮ್ಮಿಂದ ಅಧಿಕಾರವನ್ನು ಕಸಿಯುವ ಒಂದು ಪಿತೂರಿಯ ಭಾಗವಾಗಿದೆಯೆಂದು ಮಕ್ಕಾದ ಬಹುದೇವಾರಾಧಕರಲ್ಲಿರುವ ಮುಖಂಡರು ಪ್ರಚಾರ ಮಾಡುತ್ತಿದ್ದರು.

(7) ಕೊನೆಯ ಧರ್ಮದಲ್ಲ್ಲ್ಲಿ(1022) ನಾವು ಇದನ್ನು ಆಲಿಸಿಲ್ಲ. ಇದೊಂದು ಕೃತಕ ಸೃಷ್ಟಿ ಮಾತ್ರವಾಗಿದೆ!
1022. ಕೊನೆಯ ಧರ್ಮ ಎಂಬುದರ ತಾತ್ಪರ್ಯ ಅಂದು ಅಸ್ತಿತ್ವದಲ್ಲಿದ್ದ ಹೊಚ್ಚ ಹೊಸ ಧರ್ಮವಾದ ಕ್ರೈಸ್ತಧರ್ಮವಾಗಿರಬಹುದು. ತ್ರಿಯೇಕತ್ವದಲ್ಲಿ ನೆಲೆನಿಂತಿದ್ದ ಅಂದಿನ ಕ್ರೈಸ್ತಧರ್ಮಕ್ಕೆ ಶುದ್ಧ ಏಕದೇವ ವಿಶ್ವಾಸವು ಅಪರಿಚಿತವಾಗಿತ್ತು. ಕೊನೆಯ ಧರ್ಮ ಎಂಬುದರ ತಾತ್ಪರ್ಯ ಆ ಸತ್ಯನಿಷೇಧಿಗಳ ನಿಕಟಪೂರ್ವ ತಲೆಮಾರು ರೂಢಿ ಮಾಡಿಕೊಂಡಿದ್ದ ಬಹುದೇವಧರ್ಮವೆಂದು ಕೆಲವು ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ.

(8) ನಮ್ಮ ಮಧ್ಯೆ ಉಪದೇಶವು ಅವತೀರ್ಣಗೊಂಡಿರುವುದು ಇವರ ಮೇಲೆಯೇ?”(1023) ಅಲ್ಲ, ಅವರು ನನ್ನ ಉಪದೇಶದ ಬಗ್ಗೆ ಸಂದೇಹದಲ್ಲಿರುವರು. ಅಲ್ಲ, ಅವರು ಈ ತನಕ ನನ್ನ ಶಿಕ್ಷೆಯನ್ನು ಆಸ್ವಾದಿಸಿಲ್ಲ.
1023. ಅಲ್ಲಾಹು ಮುಹಮ್ಮದ್(ಸ) ರನ್ನು ಪ್ರವಾದಿಯಾಗಿ ಕಳುಹಿಸಿದ್ದು ಮತ್ತು ಅವರಿಗೆ ದಿವ್ಯ ಸಂದೇಶವನ್ನು ನೀಡಿದ್ದು ಸ್ಥಾನಮಾನಗಳ ಬಗ್ಗೆ ಅವರು ಹೊಂದಿದ್ದ ದೃಷ್ಟಿಕೋನಕ್ಕೆ ವಿರುದ್ಧವಾಗಿತ್ತು. ತಮ್ಮ ಪೈಕಿ ಉನ್ನತ ಸ್ಥಾನವನ್ನು ಹೊಂದಿರುವ ಯಾವುದಾದರೂ ಮುಖಂಡನು ಆ ಪದವಿಗೆ ಹೆಚ್ಚು ಅರ್ಹನು ಎಂಬುದು ಅವರ ಅಭಿಪ್ರಾಯವಾಗಿತ್ತು.

(9) ಅಥವಾ, ಪ್ರತಾಪಿಯೂ ಮಹಾ ಔದಾರ್ಯವಂತನೂ ಆಗಿರುವ ತಮ್ಮ ರಬ್‌ನ ಕಾರುಣ್ಯದ ಖಜಾನೆಗಳು ಅವರ ಬಳಿಯಿವೆಯೇ?

(10) ಅಥವಾ, ಆಕಾಶಗಳ, ಭೂಮಿಯ ಮತ್ತು ಅವೆರಡರ ಮಧ್ಯೆಯಿರುವವುಗಳ ಆಧಿಪತ್ಯವು ಅವರದ್ದಾಗಿದೆಯೇ? ಹಾಗಿದ್ದರೆ ಆ ಮಾರ್ಗಗಳ ಮೂಲಕ ಅವರು ಏರಿ ಹೋಗಲಿ!.

(11) ಅಲ್ಲಿರುವುದು ಹಲವು ಪಂಗಡಗಳಲ್ಲಿ ಸೇರಿದ ಪರಾಭವಗೊಳ್ಳಲಿರುವ ಒಂದು ಸೈನ್ಯವು ಮಾತ್ರವಾಗಿದೆ.(1024)
1024. ಪ್ರವಾದಿ(ಸ) ರವರ ವಿರುದ್ಧ ಹೋರಾಡಲು ಬಂದಿರುವುದು ಪರಸ್ಪರ ತತ್ವಾದರ್ಶದಲ್ಲಿ ಹೊಂದಾಣಿಕೆಯಿಲ್ಲದ, ಗುರಿಸಾಧನೆಗಾಗಿ ಅಚಂಚಲರಾಗಿ ನಿಂತು ಹೋರಾಡಲು ಸಿದ್ಧರಿಲ್ಲದ, ಸ್ವಾರ್ಥ ಹಿತಾಸಕ್ತಿಗಳನ್ನು ಹೊಂದಿರುವವರು ಒಟ್ಟಾಗಿ ರಚಿಸಿದ, ಪರಾಭವಗೊಳ್ಳಲಿರುವ ಒಂದು ಸೇನೆಯಾಗಿದೆ ಎಂದರ್ಥ.

(12) ಅವರಿಗಿಂತ ಮೊದಲು ನೂಹ್‍ರ ಜನತೆ, ಆದ್ ಸಮುದಾಯ, ಮೊಳೆಗಳ ಒಡೆಯನಾದ ಫಿರ್‍ಔನ್(1025) ಸತ್ಯವನ್ನು ನಿಷೇಧಿಸಿದ್ದರು.
1025. ‘ದುಲ್ ಔತಾದ್’ ಎಂಬ ಪದಕ್ಕೆ ಮೊಳೆಗಳ ಒಡೆಯನು ಅಥವಾ ಮೊಳೆಗಳನ್ನು ಬಡಿದವನು ಎಂದರ್ಥವಿದೆ. ಮೊಳೆಗಳಿಗೆ ಮಾತ್ರವಲ್ಲದೆ ನಾಟಿಬಿಡಲಾಗುವ ಗೂಟಗಳಿಗೂ ಔತಾದ್ ಎನ್ನಲಾಗುತ್ತದೆ. ಯಾರಿಗೂ ಅಲುಗಾಡಿಸಲು ಸಾಧ್ಯವಾಗದ ರೀತಿಯಲ್ಲಿ ಅಧಿಕಾರದ ಕುರ್ಚಿಯನ್ನು ಸುಭದ್ರಗೊಳಿಸಿದವನು ಎಂದು ಕೆಲವು ವ್ಯಾಖ್ಯಾನಕಾರರು ‘ದುಲ್ ಔತಾದ್’ ಎಂಬ ಪದಕ್ಕೆ ವ್ಯಾಖ್ಯಾನ ನೀಡಿದ್ದಾರೆ. ಬಡವರ ಶರೀರಗಳಲ್ಲಿ ಮೊಳೆಗಳನ್ನು ಚುಚ್ಚಿ ಹಿಂಸಿಸುವವನು ಎಂದು ಇತರ ಕೆಲವರು ಇದನ್ನು ವ್ಯಾಖ್ಯಾನಿಸಿದ್ದಾರೆ.

(13) ಸಮೂದ್ ಜನತೆ, ಲೂತ್‍ರ ಜನತೆ ಮತ್ತು ವೃಕ್ಷವನಗಳಲ್ಲಿ ವಾಸಿಸುತ್ತಿದ್ದವರು ಕೂಡ. (ಸತ್ಯಕ್ಕೆ ವಿರುದ್ಧ ಒಗ್ಗಟ್ಟಾಗಿ ನಿಂತ) ಪಂಗಡಗಳು ಅವರೇ ಆಗಿರುವರು.

(14) ಇವರಲ್ಲಿ ಯಾರೂ ಸಂದೇಶವಾಹಕರನ್ನು ನಿಷೇಧಿಸದಿರಲಿಲ್ಲ. ತರುವಾಯ ನನ್ನ ಶಿಕ್ಷೆಯು (ಅವರ ಮೇಲೆ) ಅನಿವಾರ್ಯವಾಯಿತು.

(15) ಇವರು ಒಂದೇ ಒಂದು ಘೋರ ಶಬ್ದದ ಹೊರತು ಇನ್ನೇನನ್ನೂ ಕಾಯುತ್ತಿಲ್ಲ. (ಅದು ಸಂಭವಿಸಿದರೆ ನಂತರ) ಕಿಂಚಿತ್ತೂ ಕಾಲಾವಕಾಶವಿರದು.(1026)
1026. ‘ಫವಾಕ್’ ಎಂಬ ಪದದ ಅರ್ಥ ಎರಡು ಅವಧಿಗಳ ನಡುವಿನ ವಿರಾಮ ಎಂದಾಗಿದೆ. ಇಲ್ಲಿ ಅದನ್ನು ಅಲಂಕಾರಿಕವಾಗಿ ಬಳಸಲಾಗಿದೆ.

(16) ಅವರು ಹೇಳುವರು: “ನಮ್ಮ ಪ್ರಭೂ! ವಿಚಾರಣಾ ದಿನಕ್ಕಿಂತ ಮೊದಲೇ ನಮಗಿರುವ (ಶಿಕ್ಷೆಯ) ಪಾಲನ್ನು ನಮಗೆ ಬೇಗನೇ ನೀಡು”.

(17) (ಓ ಪ್ರವಾದಿಯವರೇ!) ಅವರು ಹೇಳುತ್ತಿರುವುದರ ಬಗ್ಗೆ ತಾವು ತಾಳ್ಮೆ ವಹಿಸಿರಿ. ನಮ್ಮ ಬಲಿಷ್ಠ ದಾಸರಾಗಿದ್ದ ದಾವೂದ್‍ರನ್ನು ಸ್ಮರಿಸಿರಿ. ಖಂಡಿತವಾಗಿಯೂ ಅವರು (ಅಲ್ಲಾಹುವಿನೆಡೆಗೆ) ಅತಿಹೆಚ್ಚು ಪಶ್ಚಾತ್ತಾಪಪಟ್ಟು ಮರಳಿದವರಾಗಿದ್ದರು.

(18) ಸಂಧ್ಯಾ ವೇಳೆಯಲ್ಲೂ, ಸೂರ್ಯೋದಯದ ವೇಳೆಯಲ್ಲೂ ಸ್ತುತಿಕೀರ್ತನೆ ಮಾಡುವ ವಿಧದಲ್ಲಿ ನಾವು ಪರ್ವತಗಳನ್ನು ಅವರೊಂದಿಗೆ ಅಧೀನಪಡಿಸಿದೆವು.(1027)
1027. ದಾವೂದ್(ಅ) ರವರ ಇಂಪಾದ ಕೀರ್ತನೆಯಲ್ಲಿ ಪರ್ವತಗಳೂ ಭಾಗಿಯಾಗುತ್ತಿದ್ದವು ಎಂದರ್ಥ. ಪ್ರಕೃತಿಯು ಅಲ್ಲಾಹುವಿನ ಮಹತ್ವವನ್ನು ಕೊಂಡಾಡುತ್ತಿದೆಯೆಂದು ಕುರ್‌ಆನಿನ ಅನೇಕ ಕಡೆ ಹೇಳಲಾಗಿದೆ.

(19) ಒಟ್ಟುಗೂಡಿಸಲಾದ ವಿಧದಲ್ಲಿರುವ ಹಕ್ಕಿಗಳನ್ನೂ (ನಾವು ಅಧೀನಪಡಿಸಿದೆವು). ಎಲ್ಲವೂ ಅವರೆಡೆಗೆ ಅತ್ಯಂತ ವಿನಯತೆಯೊಂದಿಗೆ ತಿರುಗಿಕೊಂಡಿರುವುವು.

(20) ನಾವು ಅವರ ಆಧಿಪತ್ಯವನ್ನು ಬಲಪಡಿಸಿದೆವು, ಅವರಿಗೆ ತತ್ವಜ್ಞಾನವನ್ನು ಮತ್ತು ತೀರ್ಪು ನೀಡಲು ಬೇಕಾದ ವಾಕ್ಚಾತುರ್ಯವನ್ನು ನೀಡಿದೆವು.

(21) ತರ್ಕಿಸುವ ಕಕ್ಷಿಗಳು ಪ್ರಾರ್ಥನಾ ಪೀಠದ ಗೋಡೆಯನ್ನು ಏರಿ ಬಂದ ಸಂದರ್ಭದ ವೃತ್ತಾಂತವು ತಮಗೆ ಬಂದಿದೆಯೇ?

(22) ಅವರು ದಾವೂದ್‍ರ ಬಳಿಗೆ ಪ್ರವೇಶಿಸಿದ ಮತ್ತು ಅವರು ಅವರ ಬಗ್ಗೆ ಭಯಭೀತರಾದ ಸಂದರ್ಭ. ಅವರು ಹೇಳಿದರು: “ತಾವು ಭಯಪಡದಿರಿ. ನಾವು ಎದುರಾಳಿಗಳಾಗಿರುವೆವು. ನಮ್ಮಲ್ಲಿ ಒಬ್ಬರು ಇನ್ನೊಬ್ಬರ ವಿರುದ್ಧ ಅನ್ಯಾಯವೆಸಗಿರುವರು. ಆದುದರಿಂದ ತಾವು ನಮ್ಮ ನಡುವೆ ನ್ಯಾಯಬದ್ಧವಾದ ತೀರ್ಪನ್ನು ನೀಡಿರಿ. ತಾವು ಅನ್ಯಾಯವೆಸಗದಿರಿ. ನಮ್ಮನ್ನು ನೇರವಾದ ಮಾರ್ಗದೆಡೆಗೆ ಮುನ್ನಡೆಸಿರಿ.

(23) ಈತ ನನ್ನ ಸಹೋದರ. ಈತನಿಗೆ ತೊಂಬತ್ತೊಂಬತ್ತು ಹೆಣ್ಣಾಡುಗಳಿವೆ. ನನಗಿರುವುದು ಒಂದು ಹೆಣ್ಣಾಡು. ಆಗ ಅವನು ಹೇಳಿದನು: ಅದನ್ನು ನನಗೆ ವಹಿಸಿಕೊಡು. ಸಂಭಾಷಣೆಯಲ್ಲಿ ಅವನು ನನ್ನನ್ನು ಪರಾಭವಗೊಳಿಸಿದನು”.

(24) ಅವರು (ದಾವೂದ್) ಹೇಳಿದರು: “ಅವನ ಹೆಣ್ಣಾಡುಗಳ ಗುಂಪಿಗೆ ನಿನ್ನ ಹೆಣ್ಣಾಡನ್ನೂ ಸೇರಿಸುವಂತೆ ಕೇಳುವ ಮೂಲಕ ಅವನು ನಿನ್ನೊಂದಿಗೆ ಖಂಡಿತವಾಗಿಯೂ ಅನ್ಯಾಯವೆಸಗಿರುವನು. ಖಂಡಿತವಾಗಿಯೂ ಪಾಲುದಾರರ (ಗೆಳೆಯರ) ಪೈಕಿ ಹೆಚ್ಚಿನವರೂ ಪರಸ್ಪರ ಅನ್ಯಾಯವೆಸಗುವರು. ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗುವವರ ಹೊರತು. ಅಂತಹವರು ಇರುವುದು ತೀರಾ ವಿರಳ”. ನಾವು ಅವರನ್ನು ಪರೀಕ್ಷಿಸಿದ್ದಾಗಿದೆಯೆಂದು ದಾವೂದ್‍ರಿಗೆ ಖಾತ್ರಿಯಾಯಿತು. ಆದುದರಿಂದ ಅವರು ತಮ್ಮ ರಬ್‌ನೊಂದಿಗೆ ಪಾಪಮುಕ್ತಿಯನ್ನು ಬೇಡಿದರು ಮತ್ತು ಸಾಷ್ಟಾಂಗ ಬಿದ್ದು ಪಶ್ಚಾತ್ತಾಪಪಟ್ಟು ಮರಳಿದರು.

(25) ಆಗ ನಾವು ಅವರಿಗೆ ಅದನ್ನು ಕ್ಷಮಿಸಿದೆವು. ಖಂಡಿತವಾಗಿಯೂ ಅವರಿಗೆ ನಮ್ಮ ಬಳಿ ಸಾಮೀಪ್ಯವೂ ಮರಳಿ ಬರಲು ಉತ್ತಮವಾದ ಪದವಿಯೂ ಇದೆ.(1028)
1028. ದಾವೂದ್(ಅ) ರವರ ಪ್ರಾರ್ಥನಾ ಪೀಠದ ಗೋಡೆಯನ್ನು ಹತ್ತಿ ಬಂದ ಇಬ್ಬರು ವ್ಯಕ್ತಿಗಳು ಮನುಷ್ಯರೂಪದಲ್ಲಿ ಬಂದ ಇಬ್ಬರು ಮಲಕ್‍ಗಳಾಗಿದ್ದರೆಂದು ಹೆಚ್ಚಿನ ವ್ಯಾಖ್ಯಾನಕಾರರೂ ಅಭಿಪ್ರಾಯಪಟ್ಟಿದ್ದಾರೆ. ಅವರು ಇಂತಹ ಒಂದು ಸಮಸ್ಯೆಯೊಂದಿಗೆ ದಾವೂದ್(ಅ) ರವರ ಬಳಿ ಬಂದಿದ್ದೇಕೆ? ಮಲಕ್‍ಗಳ ಆಗಮನವು ಅವರು ಕೈಗೊಂಡ ಯಾವುದೋ ತೀರ್ಮಾನದಲ್ಲಿರುವ ಪ್ರಮಾದವನ್ನು ಅವರಿಗೆ ತಿಳಿಸಿ ಎಚ್ಚರಿಸುವ ಸಲುವಾಗಿ ಅಲ್ಲಾಹು ಏರ್ಪಡಿಸಿದ ಪರೀಕ್ಷೆಯ ಭಾಗವಾಗಿದೆಯೆಂದು 24ನೇ ಸೂಕ್ತಿಯಿಂದ ಮನದಟ್ಟಾಗುತ್ತದೆ. ಈ ಘಟನೆಗೆ ಸಂಬಂಧಿಸಿದಂತೆ ಹಲವಾರು ವ್ಯಾಖ್ಯಾನಕಾರರು ಅನೇಕ ಕಥೆಗಳನ್ನು ಬರೆದಿರುವರು. ಆದರೆ ಅವುಗಳಿಗೆ ಯಾವುದೇ ಆಧಾರವಿಲ್ಲ. ಅಲ್ಲಾಹುವಿನ ಅನುಗ್ರಹಕ್ಕೆ ಪಾತ್ರರಾದ ಪ್ರವಾದಿಗಳು ಕೂಡ ವಿವಿಧ ಪರೀಕ್ಷೆಗಳಿಗೆ ಗುರಿಯಾಗುವರೆಂದು ಪ್ರವಾದಿ(ಸ) ರವರಿಗೆ ತಿಳಿಸಿಕೊಡಲು ಈ ಚರಿತ್ರೆಯನ್ನು ಅಲ್ಲಾಹು ಇಲ್ಲಿ ಉಲ್ಲೇಖಿಸಿದ್ದಾನೆ.

(26) (ಅಲ್ಲಾಹು ಹೇಳಿದನು): “ಓ ದಾವೂದ್! ಖಂಡಿತವಾಗಿಯೂ ತಮ್ಮನ್ನು ನಾವು ಭೂಮಿಯಲ್ಲಿ ಒಬ್ಬ ಪ್ರತಿನಿಧಿಯನ್ನಾಗಿ ಮಾಡಿರುವೆವು. ಆದುದರಿಂದ ತಾವು ಜನರ ಮಧ್ಯೆ ನ್ಯಾಯಬದ್ಧವಾದ ತೀರ್ಪನ್ನು ನೀಡಿರಿ. ತಾವು ದೇಹೇಚ್ಛೆಯನ್ನು ಅನುಸರಿಸದಿರಿ. ಯಾಕೆಂದರೆ ಅದು ತಮ್ಮನ್ನು ಅಲ್ಲಾಹುವಿನ ಮಾರ್ಗದಿಂದ ಭ್ರಷ್ಟಗೊಳಿಸುವುದು. ಅಲ್ಲಾಹುವಿನ ಮಾರ್ಗದಿಂದ ಭ್ರಷ್ಟರಾಗುವವರು ಯಾರೋ ಅವರು ವಿಚಾರಣಾ ದಿನವನ್ನು ಮರೆತಿರುವ ಫಲವಾಗಿ ಖಂಡಿತವಾಗಿಯೂ ಅವರಿಗೆ ಕಠಿಣವಾದ ಶಿಕ್ಷೆಯಿದೆ.

(27) ನಾವು ಆಕಾಶವನ್ನು, ಭೂಮಿಯನ್ನು ಮತ್ತು ಅವೆರಡರ ಮಧ್ಯೆಯಿರುವವುಗಳನ್ನು ವ್ಯರ್ಥವಾಗಿ ಸೃಷ್ಟಿಸಿಲ್ಲ. ಅದು ಸತ್ಯನಿಷೇಧಿಗಳ ಊಹೆಯಾಗಿದೆ. ಆದುದರಿಂದ ಸತ್ಯನಿಷೇಧಿಗಳಿಗೆ ನರಕ ಶಿಕ್ಷೆಯಿಂದಾಗಿ ಮಹಾ ನಾಶವಿದೆ.

(28) ಅಥವಾ, ವಿಶ್ವಾಸವಿಟ್ಟವರನ್ನು ಮತ್ತು ಸತ್ಕರ್ಮವೆಸಗಿದವರನ್ನು ನಾವು ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡುವವರಂತೆ ಮಾಡುವೆವೇ? ಅಥವಾ ಧರ್ಮನಿಷ್ಠೆಯುಳ್ಳವರನ್ನು ನಾವು ದುಷ್ಟರಂತೆ ಮಾಡುವೆವೇ?

(29) ಇದು ನಾವು ತಮಗೆ ಅವತೀರ್ಣಗೊಳಿಸಿರುವ ಅನುಗ್ರಹೀತ ಗ್ರಂಥವಾಗಿದೆ. ಇದರಲ್ಲಿರುವ ದೃಷ್ಟಾಂತಗಳ ಬಗ್ಗೆ ಅವರು ಚಿಂತಿಸುವ ಸಲುವಾಗಿ ಮತ್ತು ಬುದ್ಧಿವಂತರು ಅದರಿಂದ ಪ್ರಜ್ಞಾವಂತರಾಗುವ ಸಲುವಾಗಿ.

(30) ನಾವು ದಾವೂದ್‍ರಿಗೆ ಸುಲೈಮಾನ್‍ರನ್ನು (ಪುತ್ರನಾಗಿ) ಕರುಣಿಸಿದೆವು. ಅತ್ಯುತ್ತಮ ದಾಸರು! ಖಂಡಿತವಾಗಿಯೂ ಅವರು (ಅಲ್ಲಾಹುವಿನೆಡೆಗೆ) ಅತ್ಯಧಿಕವಾಗಿ ಪಶ್ಚಾತ್ತಾಪಪಟ್ಟು ಮರಳುವವರಾಗಿರುವರು.

(31) ನೆಗೆಯಲು ಸಿದ್ಧವಾಗಿ ನಿಂತಿರುವ ವಿಶಿಷ್ಟ ಕುದುರೆಗಳನ್ನು ಸಂಧ್ಯಾವೇಳೆಯಲ್ಲಿ ಅವರ ಮುಂದೆ ಪ್ರದರ್ಶಿಸಲಾದ ಸಂದರ್ಭ!

(32) ಆಗ ಅವರು ಹೇಳಿದರು: “ನಾನು ಐಶ್ವರ್ಯವನ್ನು ಪ್ರೀತಿಸಿರುವುದು ನನ್ನ ರಬ್‌ನ ಸ್ಮರಣೆಯ ತಳಹದಿಯಲ್ಲಾಗಿದೆ.(1029) ತರುವಾಯ ಕುದುರೆಗಳು ಪರದೆಯ ಹಿಂದೆ ಮರೆಯಾದವು.(1030)
1029. ಉತ್ತಮ ತಳಿಯ ಕುದುರೆಗಳು ಸೇರಿದಂತೆ ಸಂಪತ್ತನ್ನು ನಾನು ಪ್ರೀತಿಸುವುದು ಭೌತಿಕ ಜೀವನದೊಂದಿಗಿರುವ ಆಸಕ್ತಿಯಿಂದಲ್ಲ, ಬದಲಾಗಿ ಅಲ್ಲಾಹುವಿನ ಸ್ಮರಣೆಯನ್ನು ನೆಲೆನಿಲ್ಲಿಸುವ ಮತ್ತು ಅವನ ಮಾರ್ಗದಲ್ಲಿ ಹೋರಾಟ ನಡೆಸಲಿಕ್ಕಿರುವ ಕಾರಣ ಎಂಬ ನೆಲೆಯಲ್ಲಾಗಿದೆ ಎಂದರ್ಥ. “ನನ್ನ ರಬ್‌ನ ಸ್ಮರಣೆಯನ್ನು ಕೈಬಿಟ್ಟು ಸಂಪತ್ತಿನ ಪ್ರೀತಿಯಲ್ಲಿ ನಾನು ಮುಳುಗಿಹೋದೆ” ಎಂದೂ ಅರ್ಥ ನೀಡಲಾಗಿದೆ. ಆಹ್ಲಾದದೊಂದಿಗೆ ಕುದುರೆಗಳನ್ನು ವೀಕ್ಷಿಸುವ ಸಂದರ್ಭ ಸಾಯಂಕಾಲ ಪ್ರಾರ್ಥನೆಯನ್ನು ಮರೆತುಬಿಟ್ಟ ದುಃಖವನ್ನು ಪ್ರಕಟಿಸುವ ಸಲುವಾಗಿ ಸುಲೈಮಾನ್ ಈ ರೀತಿ ಹೇಳಿದರು ಎಂಬುದು ಇದರ ವಿವರಣೆಯಾಗಿದೆ. 1030. ‘ತವಾರತ್ ಬಿಲ್ ಹಿಜಾಬ್’ ಅಂದರೆ ಅದು (ಸೂರ್ಯ) ಪರದೆಯ ಹಿಂದೆ ಸರಿದು ಮರೆಯಾದನು (ಅಸ್ತಮಿಸಿದನು) ಎಂದೂ ಅರ್ಥ ನೀಡಲಾಗಿದೆ.

(33) (ಆಗ ಅವರು ಹೇಳಿದರು): “ನೀವು ಅವುಗಳನ್ನು ನನ್ನ ಬಳಿಗೆ ಮರಳಿ ತನ್ನಿರಿ. ತರುವಾಯ ಅವರು (ಅವುಗಳ) ಕಣಕಾಲು ಮತ್ತು ಕತ್ತುಗಳನ್ನು ಸವರಲು ಆರಂಭಿಸಿದರು.(1031)
1031. ‘ತ್ವಫಿಕ ಮಸ್‍ಹನ್’ ಎಂದರೆ ಸವರಲಾರಂಭಿಸಿದನು ಎಂದರ್ಥ. ಕಡಿಯಲಾರಂಭಿಸಿದನು ಎಂಬ ಅರ್ಥದಲ್ಲಿರುವ ಒಂದು ಅಲಂಕಾರಿಕ ಪ್ರಯೋಗವಾಗಿದೆ ಅದೆಂದು ಕೆಲವರು ಅರ್ಥ ನೀಡಿದ್ದಾರೆ. ಕುದುರೆಗಳ ವೀಕ್ಷಣೆಯು ಅವರ ಪ್ರಾರ್ಥನೆಗೆ ಅಡ್ಡಿಯುಂಟಾದುದರಿಂದ ಮನಪ್ರಯಾಸವುಂಟಾಗಿ ಅವರು ಅವುಗಳನ್ನು ಕೊಂದು ಹಾಕಿದರೆಂದು ಈ ಅರ್ಥ ನೀಡಿದವರು ಹೇಳುತ್ತಾರೆ. ಆದರೆ ಇದಕ್ಕೆ ಸ್ಪಷ್ಟ ಆಧಾರಗಳನ್ನು ಅವರು ಉದ್ಧರಿಸಿಲ್ಲ.

(34) ಸುಲೈಮಾನ್‍ರನ್ನು ನಾವು ಪರೀಕ್ಷಿಸಿದೆವು. ನಾವು ಅವರ ಸಿಂಹಾಸನದ ಮೇಲೆ ಒಂದು (ಮೃತ)ದೇಹವನ್ನು ಹಾಕಿದೆವು.(1032) ತರುವಾಯ ಅವರು ವಿನಮ್ರತೆಯಿಂದ ಮರಳಿದರು.
1032. ಈ ಸೂಕ್ತಿಗೆ ವಿಭಿನ್ನ ವ್ಯಾಖ್ಯಾನಗಳನ್ನು ನೀಡಲಾಗಿದೆ. ಪ್ರಬಲವಾದ ಆಧಾರಗಳ ಅಭಾವದಿಂದಾಗಿ ಅವುಗಳ ಸರಿತಪ್ಪುಗಳನ್ನು ನಿರ್ಣಯಿಸಲು ಸಾಧ್ಯವಿಲ್ಲ. ಇಲ್ಲಿ ಪ್ರತಿಪಾದಿಸಲಾದ ವಿಷಯವು ಆಡಳಿತ ನಿರ್ವಹಣೆಗೆ ಸಂಬಂಧಿಸಿದ್ದಾಗಿರುವುದರಿಂದ ಆ ವಿಷಯದಲ್ಲಿ ಅವರಿಗೆ ಉಂಟಾದ ಯಾವುದೋ ಪರಾಭವದ ಬಗ್ಗೆ ಇಲ್ಲಿ ಪರೀಕ್ಷೆಯೆಂದು ಹೇಳಿರಬಹುದು. ತರುವಾಯ ಅವರು ಪಶ್ಚಾತ್ತಾಪಪಟ್ಟು ಮರಳಿದಾಗ ಅಲ್ಲಾಹು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನೆಂದು ಮುಂದಿನ ಸೂಕ್ತಿಗಳು ಸ್ಪಷ್ಟಪಡಿಸುತ್ತವೆ.

(35) ಅವರು ಹೇಳಿದರು: “ನನ್ನ ಪ್ರಭೂ! ನನ್ನನ್ನು ಕ್ಷಮಿಸು. ನನ್ನ ಬಳಿಕ ಯಾರಿಗೂ ಸೂಕ್ತವಲ್ಲದಂತಹ ಒಂದು ರಾಜ್ಯಭಾರವನ್ನು(1033) ನನಗೆ ಕರುಣಿಸು. ಖಂಡಿತವಾಗಿಯೂ ನೀನು ಉದಾರ ದಾನಿಯಾಗಿರುವೆ”.
1033. ಅಲ್ಲಾಹು ಸುಲೈಮಾನ್‍ರವರಿಗೆ ಅಧೀನಪಡಿಸಿಕೊಟ್ಟ ಶಕ್ತಿ ಸಾಮರ್ಥ್ಯಗಳನ್ನು ಇತರ ಯಾವುದೇ ಆಡಳಿತಗಾರನಿಗೆ ಅಧೀನಪಡಿಸಿಕೊಟ್ಟಿಲ್ಲ.

(36) ಆದುದರಿಂದ ನಾವು ಅವರಿಗೆ ಗಾಳಿಯನ್ನು ಅಧೀನಪಡಿಸಿಕೊಟ್ಟೆವು. ಅದು ಅವರ ಆಜ್ಞೆ ಪ್ರಕಾರ ಅವರು ನಿರ್ದೇಶಿಸುವ ಕಡೆಗೆ ಸೌಮ್ಯವಾಗಿ ಚಲಿಸುತ್ತಿರುವುದು.

(37) ಕಟ್ಟಡ ನಿರ್ಮಾಣ ನಿಪುಣರಾಗಿರುವ ಮತ್ತು ಮುಳುಗುವೀರರಾಗಿರುವ ಸರ್ವ ಸೈತಾನರನ್ನು (ಅವರಿಗೆ ಅಧೀನಪಡಿಸಿಕೊಟ್ಟೆವು).

(38) ಸಂಕೋಲೆಗಳಲ್ಲಿ ಬಂಧಿಸಲಾಗಿರುವ ಇತರ ಕೆಲವು (ಸೈತಾನರನ್ನೂ ಅಧೀನಪಡಿಸಿದೆವು).

(39) “ಇದು ನಮ್ಮ ಉಡುಗೊರೆಯಾಗಿದೆ. ಆದುದರಿಂದ ತಾವು ಔದಾರ್ಯ ತೋರಿಸಿರಿ ಅಥವಾ ಸ್ವಾಧೀನದಲ್ಲಿಟ್ಟು ಕೊಳ್ಳಿರಿ. ಲೆಕ್ಕ ಪರಿಶೋಧನೆಯು ಇರಲಾರದು”(1034) (ಎಂದು ನಾವು ಸುಲೈಮಾನ್‍ರೊಂದಿಗೆ ಹೇಳಿದೆವು).
1034. ಅಲ್ಲಾಹು ಅವರಿಗೆ ದಯಪಾಲಿಸಿದ ಅನುಗ್ರಹಗಳನ್ನು ಸ್ವಾಧೀನದಲ್ಲಿಟ್ಟುಕೊಳ್ಳಲು ಅಥವಾ ಇತರರಿಗೆ ಉದಾರವಾಗಿ ನೀಡಲು ಅಲ್ಲಾಹು ಅವರಿಗೆ ಸ್ವಾತಂತ್ರ್ಯವನ್ನು ನೀಡಿದ್ದಾನೆ. ಅಲ್ಲಾಹು ಅವರಿಗೆ ಅಧೀನಪಡಿಸಿಕೊಟ್ಟವರನ್ನು ತನ್ನ ನಿಯಂತ್ರಣದಲ್ಲೇ ಇಡಬೇಕೋ ಅಥವಾ ಬಿಡುಗಡೆ ಮಾಡಬೇಕೋ ಎಂದು ತೀರ್ಮಾನಿಸುವ ಅಧಿಕಾರವನ್ನೂ ಅಲ್ಲಾಹು ಅವರಿಗೆ ನೀಡಿದ್ದಾನೆ. ಅದರ ಬಗ್ಗೆ ಅವರೊಂದಿಗೆ ವಿಚಾರಣೆ ನಡೆಸಲಾಗದು ಎಂದು ಅಲ್ಲಾಹು ಭರವಸೆ ನೀಡಿದ್ದಾನೆ.

(40) ಖಂಡಿತವಾಗಿಯೂ ಅವರಿಗೆ ನಮ್ಮ ಬಳಿ ಸಾಮೀಪ್ಯವಿದೆ. ಮರಳಿ ಬರಲು ಉತ್ತಮ ಸ್ಥಾನವೂ ಇದೆ.

(41) ನಮ್ಮ ದಾಸರಾದ ಅಯ್ಯೂಬ್‍ರನ್ನು ಸ್ಮರಿಸಿರಿ. “ಸೈತಾನನು ನನಗೆ ಅಶಕ್ತತೆ ಮತ್ತು ಹಿಂಸೆಯನ್ನು ತಗುಲಿಸಿರುವನು”(1035) ಎಂದು ಅವರು ತಮ್ಮ ರಬ್ಬನ್ನು ಕರೆದು ಹೇಳಿದ ಸಂದರ್ಭ.
1035. ರೋಗ ಮತ್ತು ಕಷ್ಟಕಾರ್ಪಣ್ಯಗಳ ಮೂಲಕ ಅಯ್ಯೂಬ್(ಅ) ರವರನ್ನು ಪರೀಕ್ಷಿಸಲಾಯಿತು. ಅವರು ಎಲ್ಲವನ್ನೂ ತಾಳ್ಮೆಯಿಂದ ಸಹಿಸಿದರು. ಇದರ ಬಗ್ಗೆ ಅವರು ಅಲ್ಲಾಹುವಿನೊಂದಿಗೆ ತಮ್ಮ ದುಃಖವನ್ನು ತೋಡಿಕೊಂಡಿದ್ದರು.

(42) (ನಾವು ಹೇಳಿದೆವು): “ತಾವು ತಮ್ಮ ಕಾಲಿನಿಂದ ತುಳಿಯಿರಿ. ಅಗೋ! ತಂಪಾದ ಸ್ನಾನದ ನೀರು ಮತ್ತು ಕುಡಿಯುವ ನೀರು!”(1036)
1036. ಅಲ್ಲಾಹು ಹರಿಸಿಕೊಟ್ಟ ತೊರೆಯಿಂದ ಕುಡಿದಾಗ ಮತ್ತು ಸ್ನಾನಮಾಡಿದಾಗ ಅವರಿಗೆ ರೋಗಮುಕ್ತಿ ದೊರಕಿತು ಮತ್ತು ನವಚೈತನ್ಯವು ಲಭ್ಯವಾಯಿತು.

(43) ನಾವು ಅವರಿಗೆ ಅವರ ಕುಟುಂಬವನ್ನು ಮತ್ತು ಅವರೊಂದಿಗೆ ಅಷ್ಟೇ ಸಂಖ್ಯೆಯ ಇತರರನ್ನೂ ಕರುಣಿಸಿದೆವು. ನಮ್ಮ ಕಡೆಯ ಕಾರುಣ್ಯವಾಗಿ ಮತ್ತು ಬುದ್ಧಿವಂತರಿಗೆ ಒಂದು ಉಪದೇಶವಾಗಿ.

(44) “ತಾವು ಒಂದು ಹಿಡಿ ಹುಲ್ಲನ್ನು ತಮ್ಮ ಕೈಯಲ್ಲಿ ಹಿಡಿಯಿರಿ. ತರುವಾಯ ಅದರಿಂದ ಬಡಿಯಿರಿ. ತಮ್ಮ ಶಪಥವನ್ನು ಉಲ್ಲಂಘಿಸದಿರಿ”.(1037) ಖಂಡಿತವಾಗಿಯೂ ನಾವು ಅವರನ್ನು ತಾಳ್ಮೆ ವಹಿಸುವವರಾಗಿ ಕಂಡೆವು. ಎಷ್ಟು ಉತ್ತಮ ದಾಸರು! ಖಂಡಿತವಾಗಿಯೂ ಅವರು (ಅಲ್ಲಾಹುವಿನೆಡೆಗೆ) ಅತ್ಯಧಿಕವಾಗಿ ಪಶ್ಚಾತ್ತಾಪಪಟ್ಟು ಮರಳುವವರಾಗಿದ್ದರು.
1037. ಅಯ್ಯೂಬ್(ಅ) ರವರು ರೋಗಪೀಡಿತರಾದಾಗ ಅವರ ವಿರೋಧಿಯಾಗಿ ಮಾರ್ಪಟ್ಟ ಅವರ ಪತ್ನಿ ಅವರನ್ನು ಅಸಭ್ಯವಾಗಿ ನಿಂದಿಸಿ ಅಲ್ಲಾಹುವನ್ನು ನಿಷೇಧಿಸಿದ್ದರು. ಆಗ ಆಕೆಗೆ ನೂರು ಛಡಿಯೇಟು ನೀಡುವೆನೆಂದು ಅಯ್ಯೂಬ್(ಅ) ಶಪಥ ಮಾಡಿದ್ದರು. (ಆದರೆ ಆಕೆ ವಿಶ್ವಾಸಿನಿಯಾದ ನಂತರ) ಆ ಶಪಥವನ್ನು ಉಲ್ಲಂಘಿಸದಿರುವುದಕ್ಕಾಗಿ ನೂರು ಹುಲ್ಲುಗಳನ್ನು ಹೊಂದಿರುವ ಒಂದು ಕಟ್ಟಿನಿಂದ ಆಕೆಯನ್ನು ಒಮ್ಮೆ ಹೊಡೆಯಬೇಕೆಂದು ಅಲ್ಲಾಹು ಆದೇಶಿಸಿದನೆಂದು ಕೆಲವು ವ್ಯಾಖ್ಯಾನಕಾರರು ಈ ಸೂಕ್ತಿಗೆ ವಿಶದೀಕರಣ ನೀಡಿದ್ದಾರೆ.

(45) ಬಲಿಷ್ಠರೂ, ದೂರದೃಷ್ಟಿಯುಳ್ಳವರೂ ಆಗಿದ್ದ ಇಬ್ರಾಹೀಮ್, ಇಸ್‍ಹಾಕ್, ಯಅ್‌ಕೂಬ್ ಎಂಬ ನಮ್ಮ ದಾಸರನ್ನು ಸ್ಮರಿಸಿರಿ.

(46) ನಿಷ್ಕಳಂಕವಾದ ಒಂದು ವಿಚಾರದಿಂದಾಗಿ ನಾವು ಅವರನ್ನು ಉತ್ಕೃಷ್ಟಗೊಳಿಸಿದೆವು. ಅದು ಪರಲೋಕ ಸ್ಮರಣೆಯಾಗಿದೆ.

(47) ಖಂಡಿತವಾಗಿಯೂ ಅವರು ನಮ್ಮ ಬಳಿ ಆರಿಸಲಾಗಿರುವ ಅತ್ಯುತ್ತಮರಲ್ಲಿ ಸೇರಿದವರಾಗಿರುವರು.

(48) ಇಸ್ಮಾಈಲ್, ಅಲ್‍ಯಸಅ್, ಮತ್ತು ದುಲ್‍ಕಿಫ್ಲ್‌ರನ್ನು ಸ್ಮರಿಸಿರಿ. ಅವರೆಲ್ಲರೂ ಅತ್ಯುತ್ತಮರಲ್ಲಿ ಸೇರಿದವರಾಗಿರುವರು.

(49) ಇದೊಂದು ಉಪದೇಶವಾಗಿದೆ. ಖಂಡಿತವಾಗಿಯೂ ಭಯಭಕ್ತಿ ಪಾಲಿಸುವವರಿಗೆ ಮರಳಿ ಹೋಗಲು ಉತ್ತಮವಾದ ಸ್ಥಾನವಿದೆ.

(50) ಅವರಿಗಾಗಿ ದ್ವಾರಗಳು ತೆರೆದಿಟ್ಟಿರುವ ಶಾಶ್ವತ ವಾಸಕ್ಕಿರುವ ಸ್ವರ್ಗೋದ್ಯಾನಗಳು.

(51) ಅಲ್ಲಿ ಅವರು ಒರಗಿ ಕುಳಿತು ವಿಶ್ರಾಂತಿ ಪಡೆಯುತ್ತಾ ಸಮೃದ್ಧವಾಗಿರುವ ಫಲಗಳಿಗಾಗಿ ಮತ್ತು ಪಾನೀಯಗಳಿಗಾಗಿ ಬೇಡಿಕೆಯಿಡುತ್ತಿರುವರು.

(52) ಅವರ ಬಳಿ ದೃಷ್ಟಿಗಳನ್ನು ನಿಯಂತ್ರಿಸುವ(1038) ಸಮವಯಸ್ಕರಾದ ಸ್ತ್ರೀಯರಿರುವರು.
1038. ತನ್ನ ಸಂಗಾತಿಯ ಹೊರತು ಇತರ ಯಾರ ಮೇಲೂ ದೃಷ್ಟಿ ಹಾಯಿಸದ ಪತಿವ್ರತೆಯರು ಎಂದರ್ಥ.

(53) ವಿಚಾರಣೆಯ ದಿನಕ್ಕಾಗಿ ನಿಮಗೆ ವಾಗ್ದಾನ ಮಾಡಲಾಗಿರುವುದು ಇದನ್ನೇ ಆಗಿದೆ.

(54) ಖಂಡಿತವಾಗಿಯೂ ಇದು ನಾವು ಒದಗಿಸುವ ಅನ್ನಾಧಾರವಾಗಿದೆ. ಅದು ಮುಗಿದು ಹೋಗದು.

(55) ಇದಾಗಿದೆ (ಅವರ ಸ್ಥಿತಿ!) ಖಂಡಿತವಾಗಿಯೂ ಧಿಕ್ಕಾರಿಗಳಿಗೆ ಮರಳಿ ಹೋಗಲು ಕೆಟ್ಟ ಸ್ಥಳವಿದೆ.

(56) ಅದು ನರಕಾಗ್ನಿಯಾಗಿದೆ! ಅವರು ಅದರಲ್ಲಿ ಉರಿಯುವರು. ಅದು ನಿಕೃಷ್ಟ ವಾಸಸ್ಥಳವಾಗಿದೆ.

(57) ಇದಾಗಿದೆ (ಅವರ ಸ್ಥಿತಿ!) ಆದುದರಿಂದ ಅವರು ಅದನ್ನು ಆಸ್ವಾದಿಸಲಿ. ಕುದಿಯುವ ನೀರು ಮತ್ತು ಅತಿ ತಂಪು ನೀರು!

(58) ಇದೇ ರೂಪದಲ್ಲಿರುವ ಅನೇಕ ವಿಧದ ಶಿಕ್ಷೆಗಳು!

(59) (ಮೊಟ್ಟಮೊದಲನೆಯದಾಗಿ ನರಕಾಗ್ನಿಯನ್ನು ತಲುಪಿದವರೊಂದಿಗೆ ಅಲ್ಲಾಹು ಹೇಳುವನು): “ಇದು ನಿಮ್ಮೊಂದಿಗೆ ಪ್ರವೇಶಿಸುವ ಒಂದು ಗುಂಪಾಗಿದೆ”. (ಆಗ ಅವರು ಹೇಳುವರು): “ಅವರಿಗೆ ಸ್ವಾಗತವಿಲ್ಲ. ಖಂಡಿತವಾಗಿಯೂ ಅವರು ನರಕಾಗ್ನಿಯಲ್ಲಿ ಉರಿಯುವವರಾಗಿರುವರು”.

(60) ಅವರು (ಪ್ರವೇಶಿಸುವ ಗುಂಪಿನವರು) ಹೇಳುವರು: “ಅಲ್ಲ, ಸ್ವಾಗತವಿಲ್ಲದಿರುವುದು ನಿಮಗೇ ಆಗಿದೆ. ಇದನ್ನು ನಮಗೆ ತಂದಿಟ್ಟವರು ನೀವೇ ಆಗಿದ್ದೀರಿ.” ಆ ವಾಸಸ್ಥಳವು ಎಷ್ಟು ನಿಕೃಷ್ಟವಾದುದು!

(61) ಅವರು ಹೇಳುವರು: “ನಮ್ಮ ಪ್ರಭೂ! ಇದನ್ನು (ಶಿಕ್ಷೆಯನ್ನು) ನಮಗೆ ತಂದಿಟ್ಟವರಾರೋ ಅವರಿಗೆ ನರಕಾಗ್ನಿಯಲ್ಲಿ ಇಮ್ಮಡಿ ಶಿಕ್ಷೆಯನ್ನು ಹೆಚ್ಚಿಸಿ ಕೊಡು”.

(62) ಅವರು ಹೇಳುವರು: “ನಮಗೇನಾಗಿದೆ? ನಾವು ದುರ್ಜನರೆಂದು ಪರಿಗಣಿಸಿದ್ದ ಅನೇಕ ಮಂದಿಯನ್ನು ನಾವು ಕಾಣುತ್ತಿಲ್ಲವಲ್ಲ?(1039)
1039. ನಾವು ಸತ್ಯಧರ್ಮದಲ್ಲಿರುವವರೆಂದು ಹೇಳುವವರು ಮತ್ತು ನೈಜ ವಿಶ್ವಾಸಿಗಳನ್ನು ಧರ್ಮಭ್ರಷ್ಟರೆಂದು ಸಾರುವವರು ನರಕಕ್ಕೆ ತಲುಪಿದಾಗ ಅವರಿಗೆ ಉಂಟಾಗುವ ತಳಮಳವನ್ನು ಅಲ್ಲಾಹು ಇಲ್ಲಿ ಚಿತ್ರೀಕರಿಸುತ್ತಿದ್ದಾನೆ. ದಾರಿಗೆಟ್ಟವರು ಮತ್ತು ನರಕವಾಸಿಗಳೆಂದು ಅವರು ಹೇಳುತ್ತಿದ್ದ ಜನರನ್ನು ನರಕದಲ್ಲಿ ಕಾಣದಿರುವುದು ಅವರಿಗೆ ಹತಾಶೆಯನ್ನುಂಟು ಮಾಡುತ್ತದೆ. ಆ ‘ದಾರಿಗೆಟ್ಟ’ವರಿಗೆ ಅಲ್ಲಾಹು ಸ್ವರ್ಗವನ್ನು ನೀಡುವನೆಂದು ತಮ್ಮನ್ನು ‘ಸತ್ಯವಾದಿ’ಗಳೆಂದು ಕರೆದ ಈ ಜನರು ಊಹಿಸಿಯೂ ಇರಲಿಲ್ಲ.

(63) ನಾವು ಅವರನ್ನು (ಪ್ರಮಾದವಶಾತ್) ಅಪಹಾಸ್ಯ ಮಾಡಿರುವೆವೇ? ಅಥವಾ ದೃಷ್ಟಿಗಳು ಅವರಿಂದ ಜಾರಿಹೋಯಿತೇ?

(64) ನರಕವಾಸಿಗಳು ಪರಸ್ಪರ ಮಾಡುವ ಈ ತರ್ಕವು ಖಂಡಿತವಾಗಿಯೂ ಅದೊಂದು ಸತ್ಯವಾಗಿದೆ.

(65) (ಓ ಪ್ರವಾದಿಯವರೇ!) ಹೇಳಿರಿ: “ನಾನೊಬ್ಬ ಮುನ್ನೆಚ್ಚರಿಕೆಗಾರನು ಮಾತ್ರವಾಗಿರುವೆನು. ಏಕನೂ, ಸರ್ವಾಧಿಕಾರಿಯೂ ಆಗಿರುವ ಅಲ್ಲಾಹುವಿನ ಹೊರತು ಅನ್ಯ ಆರಾಧ್ಯರಿಲ್ಲ”.

(66) ಅವನು ಆಕಾಶಗಳ, ಭೂಮಿಯ ಮತ್ತು ಅವೆರಡರ ಮಧ್ಯೆಯಿರುವವುಗಳ ರಬ್ ಆಗಿರುವನು. ಅವನು ಪ್ರತಾಪಶಾಲಿಯೂ, ಅತ್ಯಧಿಕ ಕ್ಷಮಿಸುವವನೂ ಆಗಿರುವನು.

(67) ಹೇಳಿರಿ: “ಇದೊಂದು ಗಂಭೀರ ವಾರ್ತೆಯಾಗಿದೆ.

(68) ನೀವು ಅದನ್ನು ಕಡೆಗಣಿಸುತ್ತಿದ್ದೀರಿ.

(69) ಅತ್ಯುನ್ನತ ಸಮೂಹವು ವಾಗ್ವಾದ ನಡೆಸಿದ ಸಂದರ್ಭದ ಬಗ್ಗೆ ನನಗೆ ಯಾವುದೇ ಅರಿವಿರಲಿಲ್ಲ.(1040)
1040. ಅತ್ಯುನ್ನತ ಸಮೂಹ ಎಂಬುದರ ಉದ್ದೇಶ ಅಲ್ಲಾಹುವಿನ ಸಾಮೀಪ್ಯ ಪಡೆದ ಮಲಕ್‍ಗಳಾಗಿದ್ದಾರೆ. ಭೂಮಿಯಲ್ಲಿ ಮನುಷ್ಯನನ್ನು ಖಲೀಫ (ಪ್ರತಿನಿಧಿ)ನನ್ನಾಗಿ ಮಾಡುವ ಅಲ್ಲಾಹುವಿನ ತೀರ್ಮಾನದ ಬಗ್ಗೆ ಮಲಕ್‍ಗಳು ಸಂದೇಹಪಟ್ಟ ವಿಷಯವನ್ನು ಇಲ್ಲಿ ಸೂಚಿಸಿರಬಹುದು. ಅನಕ್ಷರಸ್ಥರಾಗಿದ್ದ ಮುಹಮ್ಮದ್(ಸ) ರಿಗೆ ದಿವ್ಯ ಸಂದೇಶದ ಮೂಲಕವಲ್ಲದೆ ಇಂತಹ ಅಗೋಚರ ವಿಷಯಗಳ ಬಗ್ಗೆ ಅರಿಯಲು ಸಾಧ್ಯವಿರಲಿಲ್ಲ.

(70) ನನಗೆ ದಿವ್ಯ ಸಂದೇಶ ನೀಡಲಾಗುತ್ತಿರುವುದು ನಾನೊಬ್ಬ ಸ್ಪಷ್ಟ ಮುನ್ನೆಚ್ಚರಿಕೆಗಾರನಾಗುವುದಕ್ಕಾಗಿ ಮಾತ್ರ ವಾಗಿದೆ”.

(71) ತಮ್ಮ ರಬ್ ಮಲಕ್‍ಗಳೊಂದಿಗೆ ಹೇಳಿದ ಸಂದರ್ಭ: “ಖಂಡಿತವಾಗಿಯೂ ನಾನು ಜೇಡಿ ಮಣ್ಣಿನಿಂದ ಒಬ್ಬ ಮನುಷ್ಯನನ್ನು ಸೃಷ್ಟಿಸುವೆನು.

(72) ತರುವಾಯ ನಾನು ಅವನನ್ನು ರೂಪುಗೊಳಿಸಿ, ನನ್ನ ಕಡೆಯ ಆತ್ಮದಿಂದ ಅವನಿಗೆ ಊದಿದರೆ ನೀವು ಅವನಿಗೆ ಸಾಷ್ಟಾಂಗ ಮಾಡುತ್ತಾ ಬೀಳಿರಿ”.

(73) ಆಗ ಮಲಕ್‍ಗಳೆಲ್ಲರೂ ಒಟ್ಟಾಗಿ ಸಾಷ್ಟಾಂಗವೆರಗಿದರು.

(74) ಇಬ್ಲೀಸನ ಹೊರತು. ಅವನು ಅಹಂಕಾರ ಪಟ್ಟನು ಮತ್ತು ಸತ್ಯನಿಷೇಧಿಗಳ ಪೈಕಿ ಸೇರಿದವನಾದನು.

(75) ಅವನು ಹೇಳಿದನು: “ಓ ಇಬ್ಲೀಸ್! ನನ್ನ ಕೈಯಿಂದ ನಾನು ಸೃಷ್ಟಿಸಿದ್ದಕ್ಕೆ ಸಾಷ್ಟಾಂಗವೆರಗಲು ನಿನ್ನನ್ನು ಅಡ್ಡಿಪಡಿಸಿದ್ದು ಏನು? ನೀನು ಅಹಂಕಾರಪಟ್ಟೆಯಾ? ಅಥವಾ ನೀನು ಜಂಬಪಡುವವರಲ್ಲಿ ಸೇರಿದವನಾದೆಯಾ?”

(76) ಅವನು (ಇಬ್ಲೀಸ್) ಹೇಳಿದನು: “ನಾನು ಅವನಿಗಿಂತ (ಮನುಷ್ಯನಿಗಿಂತ) ಶ್ರೇಷ್ಠನಾಗಿರುವೆನು. ನೀನು ನನ್ನನ್ನು ಅಗ್ನಿಯಿಂದ ಸೃಷ್ಟಿಸಿರುವೆ. ಅವನನ್ನು ನೀನು ಜೇಡಿಮಣ್ಣಿನಿಂದ ಸೃಷ್ಟಿಸಿರುವೆ”.

(77) ಅವನು ಹೇಳಿದನು: “ಇಲ್ಲಿಂದ ಹೊರಟು ಹೋಗು. ಖಂಡಿತವಾಗಿಯೂ ನೀನು ಬಹಿಷ್ಕೃತನಾಗಿರುವೆ”.

(78) ಖಂಡಿತವಾಗಿಯೂ ವಿಚಾರಣೆಯ ದಿನದ ತನಕ ನನ್ನ ಶಾಪವು ನಿನ್ನ ಮೇಲಿರುವುದು”.

(79) ಅವನು (ಇಬ್ಲೀಸ್) ಹೇಳಿದನು: “ನನ್ನ ಪ್ರಭೂ! ಅವರನ್ನು ಪುನರುತ್ಥಾನಗೊಳಿಸಲಾಗುವ ದಿನದವರೆಗೆ ನನಗೆ ಕಾಲಾವಕಾಶವನ್ನು ನೀಡು”.

(80) ಅವನು ಹೇಳಿದನು: “ಖಂಡಿತವಾಗಿಯೂ ನೀನು ಕಾಲಾವಕಾಶ ನೀಡಲಾದವರಲ್ಲಿ ಸೇರಿದವನಾಗಿರುವೆ.

(81) ನಿಶ್ಚಿತವಾದ ಆ ಸಮಯವು ಬರುವ ದಿನದ ತನಕ”.

(82) ಅವನು (ಇಬ್ಲೀಸ್) ಹೇಳಿದನು: “ನಿನ್ನ ಪ್ರತಾಪದ ಮೇಲಾಣೆ! ಖಂಡಿತವಾಗಿಯೂ ನಾನು ಅವರೆಲ್ಲರನ್ನೂ ಪಥಭ್ರಷ್ಟಗೊಳಿಸುವೆನು.

(83) ಅವರಲ್ಲಿ ಸೇರಿದ ನಿನ್ನ ನಿಷ್ಕಳಂಕ ದಾಸರ ಹೊರತು”.

(84) ಅವನು (ಅಲ್ಲಾಹು) ಹೇಳಿದನು: “ಸತ್ಯವು ಇದೇ ಆಗಿದೆ. -ನಾನು ಸತ್ಯವನ್ನೇ ಹೇಳುತ್ತಿರುವೆನು.

(85) ಖಂಡಿತವಾಗಿಯೂ ನಿನ್ನನ್ನು ಮತ್ತು ಅವರ ಪೈಕಿ ನಿನ್ನನ್ನು ಅನುಸರಿಸಿದವರೆಲ್ಲರನ್ನೂ ಸೇರಿಸಿ ನಾನು ನರಕಾಗ್ನಿಯನ್ನು ತುಂಬಿಸುವೆನು”.

(86) (ಓ ಪ್ರವಾದಿಯವರೇ!) ಹೇಳಿರಿ: “ಇದಕ್ಕಾಗಿ ನಾನು ನಿಮ್ಮೊಂದಿಗೆ ಯಾವುದೇ ಪ್ರತಿಫಲವನ್ನೂ ಬೇಡುವುದಿಲ್ಲ. ನಾನು ಹೆಣೆದು ನಿರ್ಮಿಸುವವರ ಪೈಕಿ ಸೇರಿದವನೂ ಅಲ್ಲ”.

(87) ಇದು ಸರ್ವಲೋಕದವರಿಗಿರುವ ಒಂದು ಉಪದೇಶ ಮಾತ್ರವಾಗಿದೆ.

(88) ಒಂದು ಕಾಲಾವಧಿಯ ಬಳಿಕ ಖಂಡಿತವಾಗಿಯೂ ನೀವು ಇದರ ವೃತ್ತಾಂತವನ್ನು ಅರ್ಥ ಮಾಡಿಕೊಳ್ಳುವಿರಿ.