(1) ಈ ಗ್ರಂಥದ ಅವತೀರ್ಣವು ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿರುವ ಅಲ್ಲಾಹುವಿನ ಕಡೆಯಿಂದಾಗಿದೆ.
(2) ಖಂಡಿತವಾಗಿಯೂ ನಾವು ಈ ಗ್ರಂಥವನ್ನು ತಮಗೆ ಸತ್ಯದೊಂದಿಗೆ ಅವತೀರ್ಣಗೊಳಿಸಿರುವೆವು. ಆದ್ದರಿಂದ ಶರಣಾಗತಿಯನ್ನು ಅಲ್ಲಾಹುವಿಗೆ ನಿಷ್ಕಳಂಕಗೊಳಿಸಿ ಅವನನ್ನು ಆರಾಧಿಸಿರಿ.
(3) ಅರಿಯಿರಿ! ನಿಷ್ಕಳಂಕವಾದ ಶರಣಾಗತಿಯು ಅಲ್ಲಾಹುವಿಗೆ ಮಾತ್ರ ಅರ್ಹವಾದುದಾಗಿದೆ. ಅವನ ಹೊರತು ಅನ್ಯರನ್ನು ರಕ್ಷಕರನ್ನಾಗಿ ಮಾಡಿಕೊಂಡವರು (ಹೇಳುವರು): “ನಮ್ಮನ್ನು ಅಲ್ಲಾಹುವಿನೆಡೆಗೆ ಹತ್ತಿರಗೊಳಿಸುವ ಸಲುವಾಗಿಯೇ ಹೊರತು ನಾವು ಅವರನ್ನು ಆರಾಧಿಸುತ್ತಿಲ್ಲ”. ಅವರು ಯಾವ ವಿಷಯದಲ್ಲಿ ಭಿನ್ನರಾಗಿರುವರೋ ಆ ವಿಷಯದಲ್ಲಿ ಖಂಡಿತವಾಗಿಯೂ ಅಲ್ಲಾಹು ಅವರ ಮಧ್ಯೆ ತೀರ್ಪು ನೀಡುವನು. ಖಂಡಿತವಾಗಿಯೂ ಸುಳ್ಳು ನುಡಿಯುವವನೂ, ಕೃತಘ್ನನೂ ಆಗಿರುವ ಯಾರನ್ನೂ ಅಲ್ಲಾಹು ಸನ್ಮಾರ್ಗಕ್ಕೆ ಸೇರಿಸಲಾರನು.
(4) ಸಂತತಿಯೊಂದನ್ನು ಮಾಡಿಕೊಳ್ಳಬೇಕೆಂದು ಅಲ್ಲಾಹು ಬಯಸಿರುತ್ತಿದ್ದರೆ ಅವನು ಸೃಷ್ಟಿಸುವುದರಿಂದ ಅವನಿಚ್ಛಿಸುವುದನ್ನು ಅವನು ಆರಿಸುತ್ತಿದ್ದನು. ಅವನು ಪರಮಪಾವನನು! ಅವನು ಏಕನೂ, ಸರ್ವಾಧಿಕಾರಿಯೂ ಆಗಿರುವ ಅಲ್ಲಾಹುವಾಗಿರುವನು.
(5) ಅವನು ಆಕಾಶಗಳನ್ನು ಮತ್ತು ಭೂಮಿಯನ್ನು ಸತ್ಯದೊಂದಿಗೆ ಸೃಷ್ಟಿಸಿರುವನು. ರಾತ್ರಿಯನ್ನು ಅವನು ಹಗಲಿನ ಮೇಲೆ ಸುತ್ತಿ ಹೊದಿಸುವನು. ಹಗಲನ್ನು ಅವನು ರಾತ್ರಿಯ ಮೇಲೆ ಸುತ್ತುತ್ತಾ ಹೊದಿಸುವನು. ಸೂರ್ಯ ಮತ್ತು ಚಂದ್ರನನ್ನು ಅವನು ನಿಯಂತ್ರಣಕ್ಕೆ ವಿಧೇಯಗೊಳಿಸಿರುವನು. ಎಲ್ಲವೂ ಒಂದು ನಿಶ್ಚಿತ ಅವಧಿಯವರೆಗೆ ಚಲಿಸುತ್ತಿರುವುವು. ಅರಿಯಿರಿ! ಅವನು ಪ್ರತಾಪಶಾಲಿಯೂ ಅತ್ಯಧಿಕ ಕ್ಷಮಿಸುವವನೂ ಆಗಿರುವನು.
(6) ಅವನು ನಿಮ್ಮನ್ನು ಒಂದೇ ಶರೀರದಿಂದ ಸೃಷ್ಟಿಸಿರುವನು. ತರುವಾಯ ಅದರಿಂದ ಅದರ ಸಂಗಾತಿಯನ್ನು ಮಾಡಿದನು. ಅವನು ನಿಮಗೆ ಜಾನುವಾರುಗಳಲ್ಲಿ ಎಂಟು ಜೋಡಿಗಳನ್ನು ಇಳಿಸಿಕೊಟ್ಟಿರುವನು. ಅವನು ನಿಮ್ಮನ್ನು ನಿಮ್ಮ ಮಾತೆಯರ ಉದರಗಳಲ್ಲಿ ಮೂರು ರೀತಿಯ ಅಂಧಕಾರಗಳೊಳಗೆ ಸೃಷ್ಟಿಯ ಒಂದು ಹಂತದ ಬಳಿಕ ಮತ್ತೊಂದು ಹಂತವಾಗಿ ಸೃಷ್ಟಿಸುವನು.(1041) ನಿಮ್ಮ ರಬ್ ಆದ ಅಲ್ಲಾಹು ಅವನಾಗಿರುವನು. ಆಧಿಪತ್ಯವು ಅವನಿಗಾಗಿದೆ. ಅವನ ಹೊರತು ಅನ್ಯ ಆರಾಧ್ಯರಿಲ್ಲ. ಆದರೂ ನೀವು (ಸತ್ಯದಿಂದ) ತಪ್ಪಿಸಲ್ಪಡುವುದಾದರೂ ಹೇಗೆ?
1041. ಉದರ, ಗರ್ಭಾಶಯ, ಗರ್ಭಾಶಯದೊಳಗಿರುವ ತೆಳುವಾದ ಆವರಣ. ಇವು ಮೂರು ಸೇರಿ ಗರ್ಭದೊಳಗಿರುವ ಶಿಶುವನ್ನು ಅಂಧಕಾರಗಳ ಕೋಣೆಯಲ್ಲಿಡಲಾಗಿದೆ.
(7) ನೀವು ಕೃತಘ್ನತೆ ತೋರುವುದಾದರೆ ಖಂಡಿತವಾಗಿಯೂ ಅಲ್ಲಾಹು ನಿಮ್ಮಿಂದ ನಿರಪೇಕ್ಷನಾಗಿರುವನು. ತನ್ನ ದಾಸರು ಕೃತಘ್ನತೆ ತೋರುವುದನ್ನು ಅವನು ತೃಪ್ತಿಪಡಲಾರನು. ನೀವು ಕೃತಜ್ಞತೆ ಸಲ್ಲಿಸುವುದಾದರೆ ಅವನು ಅದರಿಂದಾಗಿ ನಿಮ್ಮೊಂದಿಗೆ ಸಂತೃಪ್ತನಾಗುವನು. ಪಾಪಭಾರವನ್ನು ಹೊರುವ ಯಾರೂ ಇನ್ನೊಬ್ಬರ ಭಾರವನ್ನು ಹೊರಲಾರರು. ತರುವಾಯ ನಿಮ್ಮ ಮರಳುವಿಕೆಯು ನಿಮ್ಮ ರಬ್‌ನೆಡೆಗಾಗಿದೆ. ನೀವು ಮಾಡುತ್ತಿದ್ದುದರ ಬಗ್ಗೆ ಆಗ ಅವನು ನಿಮಗೆ ತಿಳಿಸಿಕೊಡುವನು. ಖಂಡಿತವಾಗಿಯೂ ಅವನು ಹೃದಯಗಳಲ್ಲಿರುವುದನ್ನು ಅರಿಯುವನು.
(8) ಮನುಷ್ಯನಿಗೆ ಯಾವುದಾದರೂ ಹಾನಿ ತಟ್ಟಿದರೆ ಅವನು ತನ್ನ ರಬ್‌ನೆಡೆಗೆ ವಿನಯತೆಯೊಂದಿಗೆ ಮರಳಿ ಪ್ರಾರ್ಥಿಸುವನು. ತರುವಾಯ ತನ್ನ ಕಡೆಯ ಯಾವುದಾದರೂ ಅನುಗ್ರಹವನ್ನು ಅಲ್ಲಾಹು ಅವನಿಗೆ ದಯಪಾಲಿಸಿದರೆ ಯಾವುದಕ್ಕಾಗಿ ಅವನು ಮುಂಚೆ ಪ್ರಾರ್ಥಿಸಿದ್ದನೋ ಅದನ್ನು ಅವನು ಮರೆತುಬಿಡುವನು. ಅಲ್ಲಾಹುವಿನ ಮಾರ್ಗದಿಂದ (ಜನರನ್ನು) ಪಥಭ್ರಷ್ಟಗೊಳಿಸುವುದಕ್ಕಾಗಿ ಅವನೊಂದಿಗೆ ಪ್ರತಿಸ್ಪರ್ಧಿಗಳನ್ನು ಮಾಡಿಕೊಳ್ಳುವನು. (ಓ ಪ್ರವಾದಿಯವರೇ!) ಹೇಳಿರಿ: “ನಿನ್ನ ಈ ಸತ್ಯನಿಷೇಧದೊಂದಿಗೆ ನೀನು ಸ್ವಲ್ಪ ಕಾಲದವರೆಗೆ ಸುಖವಾಗಿ ಜೀವಿಸು. ಖಂಡಿತವಾಗಿಯೂ ನೀನು ನರಕವಾಸಿಗಳಲ್ಲಿ ಸೇರಿದವನಾಗಿರುವೆ”.
(9) ಅಥವಾ, ಪರಲೋಕದ ಬಗ್ಗೆ ಎಚ್ಚರವಹಿಸಿ ತನ್ನ ರಬ್‌ನ ಕಾರುಣ್ಯವನ್ನು ಆಶಿಸಿ, ಸಾಷ್ಟಾಂಗವೆರಗುತ್ತಾ, ನಿಂತು ನಮಾಝ್ ಮಾಡುತ್ತಾ ರಾತ್ರಿ ವೇಳೆಗಳಲ್ಲಿ ಶರಣಾಗತಿ ಪ್ರಕಟಿಸುವವನೋ (ಉತ್ತಮನು? ಅಥವಾ ಸತ್ಯನಿಷೇಧಿಯೋ)? ಹೇಳಿರಿ: “ಅರಿವುಳ್ಳವರು ಮತ್ತು ಅರಿವಿಲ್ಲದವರು ಸಮಾನರಾಗುವರೇ?” ಬುದ್ಧಿವಂತರು ಮಾತ್ರ ಆಲೋಚಿಸಿ ಅರ್ಥಮಾಡಿಕೊಳ್ಳುವರು.
(10) ಹೇಳಿರಿ: “ಓ ನನ್ನ ವಿಶ್ವಾಸವಿಟ್ಟ ದಾಸರೇ! ನಿಮ್ಮ ರಬ್ಬನ್ನು ಭಯಪಡಿರಿ. ಈ ಐಹಿಕ ಜೀವನದಲ್ಲಿ ಸತ್ಕರ್ಮವೆಸಗಿದವರಿಗೆ ಸತ್ಫಲವಿದೆ. ಅಲ್ಲಾಹುವಿನ ಭೂಮಿಯು ವಿಶಾಲವಾಗಿದೆ. ಖಂಡಿತವಾಗಿಯೂ ತಾಳ್ಮೆ ವಹಿಸುವವರಿಗೆ ಅವರ ಪ್ರತಿಫಲವನ್ನು ಲೆಕ್ಕವಿಲ್ಲದೆ ಪೂರ್ಣವಾಗಿ ನೀಡಲಾಗುವುದು”.
(11) ಹೇಳಿರಿ: “ಶರಣಾಗತಿಯನ್ನು ಅಲ್ಲಾಹುವಿಗೆ ನಿಷ್ಕಳಂಕಗೊಳಿಸಿ ಅವನನ್ನು ಆರಾಧಿಸಬೇಕೆಂದು ಖಂಡಿತವಾಗಿಯೂ ನನ್ನೊಂದಿಗೆ ಆಜ್ಞಾಪಿಸಲಾಗಿದೆ.
(12) ಶರಣಾಗತರಾಗುವವರಲ್ಲಿ ನಾನು ಮೊದಲಿಗನಾಗಬೇಕೆಂದೂ ನನ್ನೊಂದಿಗೆ ಆಜ್ಞಾಪಿಸಲಾಗಿದೆ”.
(13) ಹೇಳಿರಿ: “ನಾನು ನನ್ನ ರಬ್ಬನ್ನು ಧಿಕ್ಕರಿಸುವುದಾದರೆ ಭಯಾನಕವಾದ ದಿನವೊಂದರ ಶಿಕ್ಷೆಯನ್ನು ಖಂಡಿತವಾಗಿಯೂ ನಾನು ಭಯಪಡುವೆನು”.
(14) ಹೇಳಿರಿ: “ಅಲ್ಲಾಹುವಿಗೆ ನನ್ನ ಶರಣಾಗತಿಯನ್ನು ನಿಷ್ಕಳಂಕಗೊಳಿಸುತ್ತಾ ನಾನು ಅವನನ್ನು ಆರಾಧಿಸುವೆನು”.
(15) ಅವನ ಹೊರತು ನೀವಿಚ್ಛಿಸುವುದನ್ನು ನೀವು ಆರಾಧಿಸಿರಿ. ಹೇಳಿರಿ: “ಪುನರುತ್ಥಾನ ದಿನದಂದು ಸ್ವತಃ ತಮಗೂ, ತಮ್ಮ ಜನರಿಗೂ ಯಾರು ನಷ್ಟವನ್ನು ತರುವರೋ ಖಂಡಿತವಾಗಿಯೂ ನಷ್ಟ ಹೊಂದಿದವರು ಅವರೇ ಆಗಿರುವರು. ಸ್ಪಷ್ಟವಾದ ನಷ್ಟವು ಅದೇ ಆಗಿದೆ”.
(16) ಅವರಿಗೆ ಅವರ ಮೇಲ್ಭಾಗದಲ್ಲಿ ಅಗ್ನಿಯ ಮುಚ್ಚಿಗೆಗಳಿರುವುವು. ಅವರ ತಳಭಾಗದಲ್ಲೂ ಮುಚ್ಚಿಗೆಗಳಿರುವುವು. ಅಲ್ಲಾಹು ತನ್ನ ದಾಸರನ್ನು ಭಯಪಡಿಸುತ್ತಿರುವುದು ಅದರ ಬಗ್ಗೆಯಾಗಿದೆ. ಆದುದರಿಂದ ಓ ನನ್ನ ದಾಸರೇ! ನನ್ನನ್ನು ಭಯಪಡಿರಿ.
(17) ಮಿಥ್ಯಾರಾಧ್ಯರನ್ನು -ಅವರನ್ನು ಆರಾಧಿಸುವುದನ್ನು- ವರ್ಜಿಸಿ, ಅಲ್ಲಾಹುವಿನೆಡೆಗೆ ವಿನಯತೆಯೊಂದಿಗೆ ಮರಳಿದವರಾರೋ ಅವರಿಗೆ ಶುಭವಾರ್ತೆಯಿದೆ. ಆದ್ದರಿಂದ ನನ್ನ ದಾಸರಿಗೆ ಶುಭವಾರ್ತೆಯನ್ನು ತಿಳಿಸಿರಿ.
(18) ಅಂದರೆ ಮಾತುಗಳನ್ನು ಕಿವಿಗೊಟ್ಟು ಆಲಿಸುವ ಮತ್ತು ಅದರಲ್ಲಿ ಅತ್ಯುತ್ತಮವಾಗಿರುವುದನ್ನು ಅನುಸರಿಸುವವರಿಗೆ. ಅಲ್ಲಾಹು ಮಾರ್ಗದರ್ಶನ ಮಾಡಿರುವುದು ಅವರಿಗಾಗಿದೆ ಮತ್ತು ಬುದ್ಧಿವಂತರು ಅವರೇ ಆಗಿರುವರು.
(19) ಯಾರಾದರೂ ಒಬ್ಬನ ಮೇಲೆ ಶಿಕ್ಷೆಯ ವಚನವು ಸ್ಥಿರಪಟ್ಟಿದ್ದರೆ (ಅವನಿಗೆ ಸಹಾಯ ಮಾಡಲು ತಮ್ಮಿಂದ ಸಾಧ್ಯವೇ)? ನರಕಾಗ್ನಿಯಲ್ಲಿರುವವನನ್ನು ತಮ್ಮಿಂದ ರಕ್ಷಿಸಲು ಸಾಧ್ಯವೇ?(1042)
1042. ಪ್ರತಿಯೊಬ್ಬರೂ ಸ್ವತಃ ಆರಿಸುವ ವಿಶ್ವಾಸಾಚಾರಗಳು ಅವರವರ ವಿಧಿನಿಯತಿಯನ್ನು ನಿರ್ಣಯಿಸುತ್ತದೆ. ಸತ್ಯನಿಷೇಧ ಮತ್ತು ಧರ್ಮಬಾಹಿರ ಮಾರ್ಗವನ್ನು ಆರಿಸಿದವನ ಮೇಲೆ ಅಲ್ಲಾಹುವಿನ ಶಿಕ್ಷೆ ವಿಧಿತವಾಗುತ್ತದೆ. ಅದರಿಂದ ಅವನನ್ನು ಕಾಪಾಡಲು ಪ್ರವಾದಿಗಳು ಸೇರಿದಂತೆ ಯಾರಿಗೂ ಸಾಧ್ಯವಿಲ್ಲ.
(20) ಆದರೆ, ತಮ್ಮ ರಬ್ಬನ್ನು ಭಯಪಟ್ಟು ಜೀವಿಸುವವರಾರೋ ಅವರಿಗೆ ಮಹಡಿಗಳ ಮೇಲೆ ಮಹಡಿಗಳನ್ನು ನಿರ್ಮಿಸಲಾಗಿರುವ ಬಂಗಲೆಗಳಿರುವುವು. ಅವುಗಳ ತಳಭಾಗದಿಂದ ನದಿಗಳು ಹರಿಯುತ್ತಿರುವುವು. ಅದು ಅಲ್ಲಾಹುವಿನ ವಾಗ್ದಾನವಾಗಿದೆ. ಅಲ್ಲಾಹು ವಾಗ್ದಾನವನ್ನು ಉಲ್ಲಂಘಿಸಲಾರನು.
(21) ತಾವು ಕಂಡಿಲ್ಲವೇ? ಅಲ್ಲಾಹು ಆಕಾಶದಿಂದ (ಮಳೆ)ನೀರನ್ನು ಸುರಿಸಿದನು. ತರುವಾಯ ಅದನ್ನು ಭೂಮಿಯಲ್ಲಿರುವ ತೊರೆಗಳಲ್ಲಿ ನುಸುಳಿಸಿದನು. ತರುವಾಯ ಅದರಿಂದಾಗಿ ವಿವಿಧ ಬಣ್ಣಗಳಿರುವ ಬೆಳೆಯನ್ನು ಅವನು ಉತ್ಪಾದಿಸುವನು. ತರುವಾಯ ಅದು ಒಣಗಿ ಹೋಗುವಾಗ ಅದು ಹಳದಿಯಾಗಿ ಮಾರ್ಪಡುವುದನ್ನು ತಾವು ಕಾಣುವಿರಿ. ತರುವಾಯ ಅವನು ಅದನ್ನು ಒಣಹುಲ್ಲಿನ ಕಡ್ಡಿಗಳನ್ನಾಗಿ ಮಾಡುವನು. ಖಂಡಿತವಾಗಿಯೂ ಬುದ್ಧಿವಂತರಿಗೆ ಅದರಲ್ಲಿ ನೀತಿಪಾಠವಿದೆ.
(22) ಇಸ್ಲಾಮನ್ನು ಸ್ವೀಕರಿಸುಸಲುವಾಗಿ ಯಾರ ಹೃದಯಕ್ಕೆ ಅಲ್ಲಾಹು ವೈಶಾಲ್ಯತೆಯನ್ನು ಕರುಣಿಸುವನೋ, ತರುವಾಯ ಅವನು ತನ್ನ ರಬ್‌ನ ಕಡೆಯ ಪ್ರಕಾಶದಲ್ಲಿರುವನೋ (ಅವನು ಹೃದಯವು ಕಠೋರವಾಗಿ ಬಿಟ್ಟವನಂತೆ ಆಗುವನೇ?) ಆದರೆ ಅಲ್ಲಾಹುವಿನ ಸ್ಮರಣೆಯಿಂದ ದೂರ ಸರಿದು ಹೃದಯಗಳು ಕಠೋರವಾಗಿರುವವರಿಗೆ ನಾಶವಿದೆ. ಅವರು ಸ್ಪಷ್ಟವಾದ ದುರ್ಮಾರ್ಗದಲ್ಲಿರುವರು.
(23) ಅತ್ಯುತ್ತಮವಾದ ವಾರ್ತೆಯನ್ನು ಅವತೀರ್ಣಗೊಳಿಸಿದವನು ಅಲ್ಲಾಹುವಾಗಿರುವನು. ಅಂದರೆ ವಚನಗಳಿಗೆ ಪರಸ್ಪರ ಸಾದೃಶ್ಯತೆಗಳಿರುವ ಮತ್ತು ಪುನರಾವರ್ತಿಸಲಾಗುವ ವಚನಗಳಿರುವ ಒಂದು ಗ್ರಂಥವನ್ನು. ತಮ್ಮ ರಬ್ಬನ್ನು ಭಯಪಡುವವರ ಚರ್ಮಗಳು ಅದರಿಂದಾಗಿ ನಡುಗುವುವು. ತರುವಾಯ ಅವರ ಚರ್ಮಗಳು ಮತ್ತು ಹೃದಯಗಳು ಅಲ್ಲಾಹುವನ್ನು ಸ್ಮರಿಸುವುದಕ್ಕಾಗಿ ವಿನೀತವಾಗುವುವು. ಅದು ಅಲ್ಲಾಹುವಿನ ಮಾರ್ಗದರ್ಶನವಾಗಿದೆ. ಅವನಿಚ್ಛಿಸುವವರನ್ನು ಅವನು ಅದರ ಮೂಲಕ ಸನ್ಮಾರ್ಗಕ್ಕೆ ಸೇರಿಸುವನು. ಅಲ್ಲಾಹು ಯಾರನ್ನಾದರೂ ದಾರಿಗೆಡಿಸುವುದಾದರೆ ಅವನಿಗೆ ದಾರಿ ತೋರಿಸುವವರು ಯಾರೂ ಇಲ್ಲ.
(24) ಹಾಗಾದರೆ ಪುನರುತ್ಥಾನ ದಿನದಂದು ಕಠೋರ ಶಿಕ್ಷೆಯನ್ನು ತನ್ನ ಸ್ವಂತ ಮುಖದ ಮೂಲಕ ಎದುರಿಸಬೇಕಾಗಿ ಬರುವವನು (ಅಂದು ಸುರಕ್ಷಿತನಾಗಿರುವವನಿಗೆ ಸಮಾನನಾಗುವನೇ?) “ನೀವು ಸಂಪಾದಿಸುತ್ತಿದ್ದುದನ್ನು ಆಸ್ವಾದಿಸಿರಿ” ಎಂದು ಅಕ್ರಮಿಗಳೊಂದಿಗೆ ಹೇಳಲಾಗುವುದು.
(25) ಅವರಿಗಿಂತ ಮುಂಚಿನವರೂ ಸತ್ಯವನ್ನು ನಿಷೇಧಿಸಿರುವರು. ಆಗ ಅವರು ಅರಿತಿರದ ದಿಕ್ಕಿನಿಂದ ಶಿಕ್ಷೆಯು ಅವರ ಬಳಿಗೆ ಬಂದಿತು.
(26) ಹೀಗೆ ಅಲ್ಲಾಹು ಅವರಿಗೆ ಐಹಿಕ ಜೀವನದಲ್ಲಿ ಅಪಮಾನವನ್ನು ಆಸ್ವಾದಿಸುವಂತೆ ಮಾಡಿದನು. ಪರಲೋಕ ಶಿಕ್ಷೆಯಂತೂ ಅತಿ ಭಯಾನಕವಾಗಿದೆ. ಅವರು ಅದನ್ನು ಅರ್ಥ ಮಾಡಿಕೊಳ್ಳುತ್ತಿದ್ದರೆ!
(27) ಖಂಡಿತವಾಗಿಯೂ ನಾವು ಈ ಕುರ್‌ಆನ್‍ನಲ್ಲಿ ಜನರಿಗಾಗಿ ಎಲ್ಲ ವಿಧದ ಉಪಮೆಗಳನ್ನು ವಿವರಿಸಿರುವೆವು. ಅವರು ಆಲೋಚಿಸಿ ಅರ್ಥಮಾಡಿಕೊಳ್ಳುವ ಸಲುವಾಗಿ.
(28) ಯಾವುದೇ ವಕ್ರತೆಯಿಲ್ಲದ ಅರಬಿ ಭಾಷೆಯಲ್ಲಿರುವ ಒಂದು ಕುರ್‌ಆನ್. ಅವರು ಭಯಭಕ್ತಿ ಪಾಲಿಸುವ ಸಲುವಾಗಿ.
(29) ಅಲ್ಲಾಹು ಒಬ್ಬ ವ್ಯಕ್ತಿಯನ್ನು ಉಪಮೆಯಾಗಿ ತೋರಿಸಿರುವನು. ಪರಸ್ಪರ ಜಗಳವಾಡುವ ಕೆಲವು ಪಾಲುದಾರರು ಅವನ ಯಜಮಾನರಾಗಿರುವರು. ಒಬ್ಬನೇ ಯಜಮಾನನಿಗೆ ಮಾತ್ರ ಶರಣಾಗಬೇಕಾದ ಇನ್ನೊಬ್ಬನನ್ನೂ (ಉಪಮೆಯಾಗಿ ತೋರಿಸಿರುವನು). ಉಪಮೆಯಲ್ಲಿ ಇವರಿಬ್ಬರೂ ಸಮಾನರಾಗುವರೇ? ಅಲ್ಲಾಹುವಿಗೆ ಸ್ತುತಿ! ಆದರೆ ಅವರಲ್ಲಿ ಹೆಚ್ಚಿನವರೂ ಅರಿತುಕೊಳ್ಳುವುದಿಲ್ಲ.(1043)
1043. ಪರಸ್ಪರ ಜಗಳವಾಡುವ ಯಜಮಾನರ ಆಜ್ಞಾಪಾಲನೆ ಮಾಡುತ್ತಾ ಬದುಕಬೇಕಾದ ಗುಲಾಮನನ್ನು ಅಲ್ಲಾಹು ಬಹುದೇವ ವಿಶ್ವಾಸಿಯೊಂದಿಗೆ ಹೋಲಿಸುತ್ತಾನೆ. ಅಂತಹ ಒಬ್ಬ ಗುಲಾಮನು ಪರಸ್ಪರ ವಿರುದ್ಧವಾದ ಆಜ್ಞೆಗಳನ್ನು ಪಾಲಿಸಬೇಕಾಗಿ ಬರುತ್ತದೆ. ಎಲ್ಲ ಯಜಮಾನರನ್ನೂ ಪೂರ್ಣವಾಗಿ ತೃಪ್ತಿಪಡಿಸಲು ಅವನಿಂದ ಸಾಧ್ಯವಿಲ್ಲ. ಯಾವೆಲ್ಲ ಆರಾಧ್ಯರನ್ನು ಹೇಗೆಲ್ಲ ತೃಪ್ತಿಪಡಿಸಬಹುದು, ಯಾವಾಗ ಯಾವೆಲ್ಲ ಆರಾಧ್ಯರು ಕೋಪಿಸಿಕೊಳ್ಳುವರು ಎಂಬುದನ್ನು ಅರಿಯಲಾಗದ ಬಹುದೇವವಿಶ್ವಾಸಿಯ ಸ್ಥಿತಿಯು ಹೀಗೆಯೇ ಆಗಿದೆ. ಆದರೆ ಒಬ್ಬನೇ ಯಜಮಾನನ ಸೇವೆ ಮಾಡಲು ಬಾಧ್ಯಸ್ತನಾಗಿರುವ ಗುಲಾಮನಂತೆಯೇ ಜಗದೊಡೆಯನನ್ನು ಮಾತ್ರ ಆರಾಧಿಸುವ, ಅವನಿಗೆ ಮಾತ್ರ ಪರಮವಾದ ಶರಣಾಗತಿಯನ್ನು ಪ್ರಕಟಿಸುವ ಏಕದೇವ ವಿಶ್ವಾಸಿಯು ಅನಿಶ್ಚಿತತೆಯಿಂದ ಮುಕ್ತನಾಗಿರುತ್ತಾನೆ.
(30) ಖಂಡಿತವಾಗಿಯೂ ತಾವು ಮರಣಹೊಂದುವಿರಿ ಮತ್ತು ಅವರೂ ಮರಣಹೊಂದುವರು.
(31) ತರುವಾಯ ಪುನರುತ್ಥಾನದಿನದಂದು ನೀವು ನಿಮ್ಮ ರಬ್‌ನ ಬಳಿ ತರ್ಕಿಸುವಿರಿ.
(32) ಅಲ್ಲಾಹುವಿನ ಮೇಲೆ ಸುಳ್ಳು ಹೇಳಿದವನಿಗಿಂತ ಮತ್ತು ಸತ್ಯವು ತನ್ನ ಬಳಿಗೆ ಬಂದಾಗ ಅದನ್ನು ನಿಷೇಧಿಸಿದವನಿಗಿಂತ ದೊಡ್ಡ ಅಕ್ರಮಿ ಯಾರಿರುವನು? ನರಕಾಗ್ನಿಯು ಸತ್ಯನಿಷೇಧಿಗಳ ವಾಸಸ್ಥಳವಲ್ಲವೇ?
(33) ಯಾರು ಸತ್ಯದೊಂದಿಗೆ ಬಂದಿರುವರೋ ಹಾಗೂ ಅದರಲ್ಲಿ ವಿಶ್ವಾಸವಿಟ್ಟಿರುವರೋ ಅವರೇ ಭಯಭಕ್ತಿ ಪಾಲಿಸುವವರಾಗಿರುವರು.
(34) ಅವರು ಇಚ್ಛಿಸುವುದೆಲ್ಲವೂ ಅವರಿಗೆ ಅವರ ರಬ್‌ನ ಬಳಿಯಿರುವುದು. ಅದು ಸಜ್ಜನರಿಗಿರುವ ಪ್ರತಿಫಲವಾಗಿದೆ.
(35) ಅವರು ಮಾಡಿರುವುದರಲ್ಲಿ ಅತಿಕೆಟ್ಟದಾಗಿರುವುದನ್ನೂ ಅಲ್ಲಾಹು ಅವರಿಂದ ಅಳಿಸಿಹಾಕುವನು. ಅವರು ಮಾಡಿರುವುದರಲ್ಲಿ ಅತ್ಯುತ್ತಮವಾಗಿರುವುದಕ್ಕೆ ಅನುಗುಣವಾಗಿ ಅವನು ಅವರಿಗೆ ಪ್ರತಿಫಲವನ್ನು ನೀಡುವನು.
(36) ಅಲ್ಲಾಹು ಅವನ ದಾಸನಿಗೆ ಸಾಕಾಗಲಾರನೇ?(1044) ಅವನ ಹೊರತಾಗಿರುವವರ ಬಗ್ಗೆ ಅವರು ತಮ್ಮನ್ನು ಹೆದರಿಸುತ್ತಿರುವರು. ಅಲ್ಲಾಹು ಯಾರನ್ನಾದರೂ ಪಥಭ್ರಷ್ಟಗೊಳಿಸಿದರೆ ಅವನಿಗೆ ಮಾರ್ಗದರ್ಶನ ಮಾಡಲು ಯಾರೂ ಇರಲಾರರು.
1044. ಒಬ್ಬ ಸತ್ಯವಿಶ್ವಾಸಿಯ ಧ್ಯೇಯವಾಕ್ಯವು ತನಗೆ ಅಲ್ಲಾಹು ಮಾತ್ರ ಸಾಕು ಎಂದಾಗಿರಬೇಕಾಗಿದೆ. ಅಲ್ಲಾಹುವೇತರರೊಂದಿಗೆ ಪ್ರಾರ್ಥಿಸುವುದು ಮತ್ತು ಅವರಿಂದ ಅಲೌಕಿಕವಾದ ಸಹಾಯವನ್ನು ನಿರೀಕ್ಷಿಸುವುದು ಸತ್ಯವಿಶ್ವಾಸಕ್ಕೆ ವಿರುದ್ಧವಾಗಿದೆ. ಅಲ್ಲಾಹುವಿನೊಂದಿಗಿರುವಂತೆ ಅಥವಾ ಅದಕ್ಕಿಂತಲೂ ಹೆಚ್ಚು ವಿಧೇಯತೆಯನ್ನು ಭೌತಿಕ ಶಕ್ತಿಗಳೊಂದಿಗೆ ತೋರುವುದು ಒಬ್ಬ ಸತ್ಯವಿಶ್ವಾಸಿಗೆ ಯುಕ್ತವಾದುದಲ್ಲ.
(37) ಅಲ್ಲಾಹು ಯಾರನ್ನಾದರೂ ಸನ್ಮಾರ್ಗದಲ್ಲಿ ಸೇರಿಸಿದರೆ ಅವನನ್ನು ಪಥಭ್ರಷ್ಟಗೊಳಿಸುವವರಾರೂ ಇರಲಾರರು. ಅಲ್ಲಾಹು ಪ್ರತಾಪಶಾಲಿ ಮತ್ತು ಶಿಕ್ಷಾಕ್ರಮ ಕೈಗೊಳ್ಳುವವನಲ್ಲವೇ?
(38) “ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು ಯಾರು?” ಎಂದು ತಾವು ಅವರೊಂದಿಗೆ ಕೇಳಿದರೆ ಖಂಡಿತವಾಗಿಯೂ ಅವರು “ಅಲ್ಲಾಹು”(1045)ಎನ್ನುವರು. ಹೇಳಿರಿ: “ಹಾಗಾದರೆ ಅಲ್ಲಾಹುವಿನ ಹೊರತು ನೀವು ಕರೆದು ಪ್ರಾರ್ಥಿಸುತ್ತಿರುವವುಗಳ ಬಗ್ಗೆ ನೀವು ಆಲೋಚಿಸಿದ್ದೀರಾ? ಅಲ್ಲಾಹು ನನಗೆ ಏನಾದರೂ ಹಾನಿಯನ್ನು ಬಯಸಿದರೆ ಅವನ ಹಾನಿಯನ್ನು ನಿವಾರಿಸಲು ಅವುಗಳಿಗೆ ಸಾಧ್ಯವೇ? ಅಥವಾ ಅವನು ನನಗೆ ಏನಾದರೂ ಅನುಗ್ರಹವನ್ನು ನೀಡಲು ಬಯಸಿದರೆ ಅವನ ಅನುಗ್ರಹವನ್ನು ತಡೆಗಟ್ಟಲು ಅವುಗಳಿಗೆ ಸಾಧ್ಯವೇ?” ಹೇಳಿರಿ: “ನನಗೆ ಅಲ್ಲಾಹು ಸಾಕು. ಭರವಸೆಯನ್ನಿಡುವವರು ಅವನ ಮೇಲೆಯೇ ಭರವಸೆಯನ್ನಿಡಲಿ”.
1045. ಜಗತ್ತಿನಲ್ಲಿರುವ ಬಹುದೇವಾರಾಧಕರ ಪೈಕಿ ಹೆಚ್ಚಿನವರೂ ಸೃಷ್ಟಿಕರ್ತನ ಏಕತ್ವವನ್ನು ಅಂಗೀಕರಿಸುತ್ತಾರೆ. ಕುರ್‌ಆನ್ ಅವತೀರ್ಣ ಕಾಲದಲ್ಲಿ ಅರೇಬಿಯಾದಲ್ಲಿದ್ದ ಬಹುದೇವಾರಾಧಕರ ಸ್ಥಿತಿಯೂ ಇದ್ದಕ್ಕಿಂತ ಭಿನ್ನವಾಗಿರಲಿಲ್ಲ. ಸರ್ವಲೋಕಗಳ ಪರಿಪಾಲಕ ಎಂಬ ಸ್ಥಾನವನ್ನು ಅವರು ಅಲ್ಲಾಹುವಿನ ಹೊರತು ಇತರ ಯಾರಿಗೂ ನೀಡಿರಲಿಲ್ಲ. ಆದರೆ ಲಾಭವನ್ನು ತರುವ ಮತ್ತು ಹಾನಿಯನ್ನು ತಡೆಯುವ ಶಕ್ತಿಯಿರುವವರೆಂದು ಪರಿಕಲ್ಪಿಸಿ ಅವರು ಅನೇಕ ಆರಾಧ್ಯರನ್ನು ಆರಾಧಿಸುತ್ತಿದ್ದರು ಮತ್ತು ಅವರೊಂದಿಗೆ ಪ್ರಾರ್ಥಿಸುತ್ತಿದ್ದರು. ಅವರು ಮಾಡುತ್ತಿದ್ದ ಶಿರ್ಕ್ ಅಥವಾ ಬಹುದೇವಾರಾಧನೆಯು ಇದಾಗಿತ್ತು.
(39) ಹೇಳಿರಿ: “ಓ ನನ್ನ ಜನರೇ! ನಿಮ್ಮ ನಿಲುವಿಗೆ ಅನುಗುಣವಾಗಿ ನೀವು ಕರ್ಮವೆಸಗಿರಿ. ನಾನೂ ಕರ್ಮವೆಸಗುವೆನು. ನಂತರ ನೀವು ಅರಿತುಕೊಳ್ಳುವಿರಿ.
(40) ಅಪಮಾನಕರವಾದ ಶಿಕ್ಷೆಯು ಬರುವುದು ಮತ್ತು ಶಾಶ್ವತ ಶಿಕ್ಷೆಯು ಇಳಿಯುವುದು ಯಾರ ಮೇಲೆಂದು”.
(41) ಖಂಡಿತವಾಗಿಯೂ ನಾವು ಮನುಷ್ಯರಿಗಾಗಿರುವ ಗ್ರಂಥವನ್ನು ತಮ್ಮ ಮೇಲೆ ಸತ್ಯದೊಂದಿಗೆ ಅವತೀರ್ಣಗೊಳಿಸಿರುವೆವು. ಆದುದರಿಂದ ಯಾರಾದರೂ ಸನ್ಮಾರ್ಗವನ್ನು ಪಡೆದರೆ ಅದು ಅವನ ಒಳಿತಿಗೇ ಆಗಿದೆ. ಯಾರಾದರೂ ಪಥಭ್ರಷ್ಟನಾಗುವುದಾದರೆ ಅವನು ಪಥಭ್ರಷ್ಟನಾಗುವುದರ ಪಾಪವು ಅವನಿಗೇ ಆಗಿದೆ. ತಾವು ಅವರ ಮೇಲಿರುವ ಕಾರ್ಯನಿರ್ವಾಹಕರಲ್ಲ.
(42) ಅಲ್ಲಾಹು ಆತ್ಮಗಳನ್ನು ಅವುಗಳ ಮರಣ ವೇಳೆಯಲ್ಲಿ ಪೂರ್ಣವಾಗಿ ವಹಿಸಿಕೊಳ್ಳುವನು. ಮೃತಪಡದವುಗಳನ್ನು (ಮರಣವನ್ನು ವಿಧಿಸಲ್ಪಡದವುಗಳನ್ನು) ಅವುಗಳ ನಿದ್ರಾವೇಳೆಯಲ್ಲಿ (ವಹಿಸಿಕೊಳ್ಳುವನು). ತರುವಾಯ ಯಾವೆಲ್ಲ ಆತ್ಮಗಳ ಮೇಲೆ ಅವನು ಮರಣವನ್ನು ವಿಧಿಸಿರುವನೋ ಅವುಗಳನ್ನು ಅವನು ಹಿಡಿದಿಟ್ಟುಕೊಳ್ಳುವನು. ಉಳಿದವುಗಳನ್ನು ಒಂದು ನಿಶ್ಚಿತ ಅವಧಿಯವರೆಗೆ ಅವನು ಬಿಟ್ಟುಬಿಡುವನು. ಖಂಡಿತ ವಾಗಿಯೂ ಚಿಂತಿಸುವ ಜನರಿಗೆ ಇದರಲ್ಲಿ ದೃಷ್ಟಾಂತಗಳಿವೆ.
(43) ಅಥವಾ, ಅವರು ಅಲ್ಲಾಹುವಿನ ಹೊರತಾದವರನ್ನು ಶಿಫಾರಸುಗಾರರನ್ನಾಗಿ ಮಾಡಿಕೊಂಡಿರುವರೇ? ಹೇಳಿರಿ: “ಅವರು (ಶಿಫಾರಸುಗಾರರು) ಏನನ್ನೂ ಅಧೀನದಲ್ಲಿರಿಸಿಕೊಳ್ಳದವರಾಗಿದ್ದರೂ, ಚಿಂತಿಸದವರಾಗಿದ್ದರೂ (ನೀವು ಅವರನ್ನು ಶಿಫಾರಸುಗಾರರನ್ನಾಗಿ ಮಾಡುವಿರಾ)?
(44) ಹೇಳಿರಿ: “ಶಿಫಾರಸು ಸಂಪೂರ್ಣವಾಗಿ ಅಲ್ಲಾಹುವಿಗಿರುವುದಾಗಿದೆ.(1046) ಭೂಮ್ಯಾಕಾಶಗಳ ಆಧಿಪತ್ಯವು ಅವನಿಗಾಗಿದೆ. ತರುವಾಯ ನಿಮ್ಮನ್ನು ಮರಳಿಸಲಾಗುವುದು ಅವನೆಡೆಗೇ ಆಗಿದೆ”.
1046. ಯಾರು ಮಾಡುವ ಶಿಫಾರಸನ್ನು ಸ್ವೀಕರಿಸಬೇಕು ಮತ್ತು ಯಾರಿಗಾಗಿ ಮಾಡುವ ಶಿಫಾರಸನ್ನು ಸ್ವೀಕರಿಸಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವಿರುವುದು ಕೇವಲ ಅಲ್ಲಾಹುವಿಗೆ ಮಾತ್ರವಾಗಿದೆ. ಸೃಷ್ಟಿಗಳ ಇಷ್ಟಾನಿಷ್ಟಗಳಿಗೆ ಈ ವಿಷಯದಲ್ಲಿ ಯಾವುದೇ ಪ್ರಭಾವ ಬೀರಲೂ ಸಾಧ್ಯವಿಲ್ಲ.
(45) ಅಲ್ಲಾಹುವಿನ ಬಗ್ಗೆ ಮಾತ್ರ ಪ್ರಸ್ತಾಪಿಸಲಾದಾಗ ಪರಲೋಕದಲ್ಲಿ ವಿಶ್ವಾಸವಿಲ್ಲದವರ ಹೃದಯಗಳಿಗೆ ಜಿಗುಪ್ಸೆಯುಂಟಾಗುತ್ತದೆ.(1047) ಅಲ್ಲಾಹುವಿನ ಹೊರತಾದವರ ಬಗ್ಗೆ ಪ್ರಸ್ತಾಪಿಸಲಾದರೆ ಅಗೋ! ಅವರು ಸಂತೋಷಪಡುವರು.
1047. ತಾವು ಏಕದೇವವಿಶ್ವಾಸಿಗಳೆಂದು ವಾದಿಸುವವರ ಪೈಕಿ ಹೆಚ್ಚಿನವರೂ ಅಲ್ಲಾಹುವಿನೊಂದಿಗೆ ಮಾತ್ರ ಪ್ರಾರ್ಥಿಸಬೇಕೆಂದು ಹೇಳುವಾಗ ಕೋಪೋದ್ರಿಕ್ತರಾಗುತ್ತಾರೆ.
(46) ಹೇಳಿರಿ: “ಓ ಅಲ್ಲಾಹ್! ಭೂಮ್ಯಾಕಾಶಗಳ ಸೃಷ್ಟಿಕರ್ತನೇ! ಅಗೋಚರ ಮತ್ತು ಗೋಚರಗಳನ್ನು ಅರಿಯುವವನೇ! ನಿನ್ನ ದಾಸರ ಮಧ್ಯೆ ಅವರು ಭಿನ್ನಮತ ಹೊಂದಿರುವ ವಿಷಯದಲ್ಲಿ ತೀರ್ಪು ನೀಡುವವನು ನೀನೇ ಆಗಿರುವೆ”.
(47) ಒಂದು ವೇಳೆ ಅಕ್ರಮಿಗಳ ಸ್ವಾಧೀನದಲ್ಲಿ ಭೂಮಿಯಲ್ಲಿರುವುದೆಲ್ಲವೂ ಮತ್ತು ಅದರೊಂದಿಗೆ ಅದರಷ್ಟೇ ಬೇರೆಯೂ ಇರುವುದಾದರೂ ಪುನರುತ್ಥಾನ ದಿನದ ಕಠೋರ ಶಿಕ್ಷೆಯಿಂದ ಪಾರಾಗಲು ಅವರು ಅವೆಲ್ಲವನ್ನೂ ಪ್ರಾಯಶ್ಚಿತ್ತವಾಗಿ ನೀಡುತ್ತಿದ್ದರು. ಅವರು ಭಾವಿಸಿರದಂತಹ ಅನೇಕ ವಿಷಯಗಳು ಅಲ್ಲಾಹುವಿಂದ ಅವರಿಗೆ ಬಹಿರಂಗವಾಗುವುವು.
(48) ಅವರು ಮಾಡಿಟ್ಟಿರುವುದರ ದುಷ್ಪರಿಣಾಮಗಳು ಅವರಿಗೆ ಬಹಿರಂಗವಾಗುವುವು. ಯಾವುದರ ಬಗ್ಗೆ ಅವರು ಅಪಹಾಸ್ಯ ಮಾಡುತ್ತಿದ್ದರೋ ಅದು ಅವರನ್ನು ಆವರಿಸಿಕೊಳ್ಳುವುದು.
(49) ಮನುಷ್ಯನಿಗೆ ಹಾನಿಯೇನಾದರೂ ತಟ್ಟಿದರೆ ಅವನು ನಮ್ಮೊಂದಿಗೆ ಪ್ರಾರ್ಥಿಸುವನು. ತರುವಾಯ ನಾವು ಅವನಿಗೆ ನಮ್ಮ ಕಡೆಯ ಯಾವುದಾದರೂ ಅನುಗ್ರಹವನ್ನು ದಯಪಾಲಿಸಿದರೆ, ಅವನು ಹೇಳುವನು: “ನನಗೆ ಇದನ್ನು ನೀಡಲಾಗಿರುವುದು ಜ್ಞಾನದ ಆಧಾರದಲ್ಲಿ ಮಾತ್ರವಾಗಿದೆ.(1048) ಆದರೆ ಅದೊಂದು ಪರೀಕ್ಷೆಯಾಗಿದೆ.(1049) ಆದರೆ ಅವರಲ್ಲಿ ಹೆಚ್ಚಿನವರೂ ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ.
1048. ಈ ಅನುಗ್ರಹಕ್ಕೆ ತಾನು ಅರ್ಹನೆಂದು ಅಲ್ಲಾಹು ಅರಿತುಕೊಂಡಿರುವುದರಿಂದಲೇ ಅವನದನ್ನು ನೀಡಿದ್ದಾನೆ ಎಂಬುದು ಅವನ ತರ್ಕವಾಗಿದೆ. ನನಗೆ ಸಿಕ್ಕಿರುವ ಈ ಲಾಭವು ನನ್ನ ಸಾಮರ್ಥ್ಯದ ಫಲವಾಗಿದೆ ಎಂದೂ ಇದನ್ನು ಅರ್ಥೈಸಿಕೊಳ್ಳಬಹುದಾಗಿದೆ. 1049. ಲಾಭ ನಷ್ಟಗಳ ಬಗ್ಗೆ ಮನುಷ್ಯರ ಪ್ರತಿಕ್ರಿಯೆ ಹೇಗಿರುತ್ತದೆಂದು ನೋಡುವುದಕ್ಕಾಗಿ ಅನುಗ್ರಹಗಳನ್ನು ಮತ್ತು ನಷ್ಟಗಳನ್ನು ನೀಡಿ ಅಲ್ಲಾಹು ಅವರನ್ನು ಪರೀಕ್ಷಿಸುತ್ತಾನೆ.
(50) ಇವರಿಗಿಂತ ಮುಂಚಿನವರೂ ಹೀಗೆಯೇ ಹೇಳಿದ್ದರು. ಆದರೆ ಅವರು ಸಂಪಾದಿಸಿರುವುದು ಅವರಿಗೆ ಯಾವುದೇ ಪ್ರಯೋಜನವನ್ನೂ ಮಾಡಲಿಲ್ಲ.
(51) ಅವರು ಮಾಡಿಟ್ಟಿರುವುದರ ದುಷ್ಪರಿಣಾಮಗಳು ಅವರನ್ನು ಬಾಧಿಸಿದವು. ಇವರ ಪೈಕಿ ಅಕ್ರಮವೆಸಗಿದವರಿಗೂ ಅವರು ಮಾಡಿಟ್ಟಿರುವುದರ ದುಷ್ಪರಿಣಾಮಗಳು ಬಾಧಿಸುವುವು. ಅವರಿಗೆ (ನಮ್ಮನ್ನು) ಸೋಲಿಸಲಾಗದು.
(52) ಅಲ್ಲಾಹು ಅವನಿಚ್ಛಿಸುವವರಿಗೆ ಅನ್ನಾಧಾರವನ್ನು ವಿಶಾಲಗೊಳಿಸುವನು ಮತ್ತು ಅವನಿಚ್ಛಿಸುವವರಿಗೆ ಅದನ್ನು ಸಂಕುಚಿತಗೊಳಿಸುವನು ಎಂಬುದನ್ನು ಅವರು ಅರ್ಥಮಾಡಿಕೊಂಡಿಲ್ಲವೇ? ಖಂಡಿತವಾಗಿಯೂ ವಿಶ್ವಾಸವಿಡುವ ಜನರಿಗೆ ಇದರಲ್ಲಿ ದೃಷ್ಟಾಂತಗಳಿವೆ.
(53) ಹೇಳಿರಿ: “ಸ್ವತಃ ತಮ್ಮ ಮೇಲೆಯೇ ಅತಿಕ್ರಮವೆಸಗಿರುವ ಓ ನನ್ನ ದಾಸರೇ! ಅಲ್ಲಾಹುವಿನ ಕಾರುಣ್ಯದ ಬಗ್ಗೆ ನೀವು ನಿರಾಶರಾಗದಿರಿ. ಖಂಡಿತವಾಗಿಯೂ ಅಲ್ಲಾಹು ಪಾಪಗಳೆಲ್ಲವನ್ನೂ ಕ್ಷಮಿಸುತ್ತಾನೆ. ಖಂಡಿತವಾಗಿಯೂ ಅವನು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು”.
(54) ನಿಮ್ಮ ಬಳಿಗೆ ಶಿಕ್ಷೆಯು ಬರುವುದಕ್ಕೆ ಮುಂಚಿತವಾಗಿ ನೀವು ನಿಮ್ಮ ರಬ್‌ನೆಡೆಗೆ ವಿನಮ್ರತೆಯಿಂದ ಮರಳಿರಿ ಮತ್ತು ಅವನಿಗೆ ಶರಣಾಗಿರಿ. ತರುವಾಯ (ಅದು ಬಂದ ಬಳಿಕ) ನಿಮಗೆ ಸಹಾಯವು ಲಭ್ಯವಾಗದು.
(55) ನೀವು ಭಾವಿಸಿರದ ರೀತಿಯಲ್ಲಿ ನಿಮ್ಮ ಬಳಿಗೆ ಶಿಕ್ಷೆಯು ಹಠಾತ್ತನೆ ಬರುವುದಕ್ಕೆ ಮುಂಚಿತವಾಗಿ ನೀವು ನಿಮ್ಮ ರಬ್‌ನಿಂದ ನಿಮಗೆ ಅವತೀರ್ಣಗೊಂಡಿರುವುದರ ಪೈಕಿ ಅತ್ಯುತ್ತಮವಾಗಿರುವುದನ್ನು ಅನುಸರಿಸಿರಿ.
(56) “ಅಯ್ಯೋ! ನನ್ನ ದುರದೃಷ್ಟವೇ! ಅಲ್ಲಾಹುವಿನ ಭಾಗದಲ್ಲಿ ನಾನು ಮಾಡಬೇಕಾಗಿರುವುದರಲ್ಲಿ ಲೋಪವೆಸಗಿಬಿಟ್ಟೆನಲ್ಲ! ಖಂಡಿತವಾಗಿಯೂ ನಾನು ಅಪಹಾಸ್ಯ ಮಾಡುವವರಲ್ಲಿ ಸೇರಿಬಿಟ್ಟೆನಲ್ಲ!” ಎಂದು ಯಾರಾದರೂ ಹೇಳಬಹುದು ಎಂಬುದರಿಂದ.
(57) ಅಥವಾ “ಅಲ್ಲಾಹು ನನ್ನನ್ನು ಸನ್ಮಾರ್ಗದಲ್ಲಿ ಸೇರಿಸಿರುತ್ತಿದ್ದರೆ ನಾನು ಭಯಭಕ್ತಿ ಪಾಲಿಸುವವರಲ್ಲಿ ಸೇರಿರುತ್ತಿದ್ದೆ” ಎಂದು ಹೇಳಬಹುದು ಎಂಬುದರಿಂದ.
(58) ಅಥವಾ ಶಿಕ್ಷೆಯನ್ನು ಕಣ್ಣಾರೆ ಕಾಣುವ ಸಂದರ್ಭದಲ್ಲಿ, “ಮರಳಿ ಹೋಗುವ ಒಂದು ಅವಕಾಶ ನನಗಿರುತ್ತಿದ್ದರೆ ನಾನು ಸಜ್ಜನರ ಪೈಕಿ ಸೇರುತ್ತಿದ್ದೆ” ಎಂದು ಹೇಳಬಹುದು ಎಂಬುದರಿಂದ.
(59) ಹೌದು! ಖಂಡಿತವಾಗಿಯೂ ನನ್ನ ದೃಷ್ಟಾಂತಗಳು ನಿನ್ನ ಬಳಿಗೆ ಬಂದಿವೆ. ಆದರೆ ನೀನು ಅವುಗಳನ್ನು ನಿಷೇಧಿಸಿದೆ ಮತ್ತು ಅಹಂಕಾರಪಟ್ಟೆ. ನೀನು ಸತ್ಯನಿಷೇಧಿಗಳಲ್ಲಿ ಸೇರಿದವನಾದೆ.(1050)
1050. ಇದು ಶಿಕ್ಷೆಯನ್ನು ಕಣ್ಣಾರೆ ಕಾಣುವಾಗ ಸತ್ಯನಿಷೇಧಿ ಪ್ರಕಟಿಸುವ ವಿಷಾದಕ್ಕೆ ಅಲ್ಲಾಹುವಿನ ಪ್ರತಿಕ್ರಿಯೆಯಾಗಿದೆ.
(60) ಅಲ್ಲಾಹುವಿನ ಮೇಲೆ ಸುಳ್ಳಾರೋಪ ಮಾಡಿದವರ ಮುಖಗಳು ಪುನರುತ್ಥಾನ ದಿನದಂದು ಕರ್‍ರಗಾಗಿರುವುದನ್ನು ತಾವು ಕಾಣುವಿರಿ. ನರಕಾಗ್ನಿಯಲ್ಲಿ ಅಹಂಕಾರಿಗಳಿಗೆ ವಾಸಸ್ಥಳವಿರಲಾರದೇ?
(61) ಅಲ್ಲಾಹು ಭಯಭಕ್ತಿ ಪಾಲಿಸುವವರನ್ನು ರಕ್ಷಿಸಿ ಅವರಿಗಿರುವ ಸುರಕ್ಷಿತ ಸ್ಥಳಕ್ಕೆ ತಲುಪಿಸುವನು. ಶಿಕ್ಷೆಯು ಅವರನ್ನು ಸ್ಪರ್ಶಿಸಲಾರದು. ಅವರು ದುಃಖಿಸಬೇಕಾಗಿಯೂ ಬರದು.
(62) ಅಲ್ಲಾಹು ಎಲ್ಲ ವಸ್ತುಗಳ ಸೃಷ್ಟಿಕರ್ತನಾಗಿರುವನು. ಅವನು ಎಲ್ಲ ವಸ್ತುಗಳ ಮೇಲೂ ಕಾರ್ಯನಿರ್ವಾಹಕನಾಗಿರುವನು.
(63) ಭೂಮ್ಯಾಕಾಶಗಳ ಕೀಲಿಕೈಗಳಿರುವುದು ಅವನ ಅಧೀನದಲ್ಲಾಗಿದೆ. ಅಲ್ಲಾಹುವಿನ ದೃಷ್ಟಾಂತಗಳನ್ನು ನಿಷೇಧಿಸಿದವರಾರೋ ಅವರೇ ನಷ್ಟ ಹೊಂದಿದವರಾಗಿರುವರು.
(64) (ಓ ಪ್ರವಾದಿಯವರೇ!) ಹೇಳಿರಿ: “ಓ ಅಜ್ಞಾನಿಗಳೇ! ನಾನು ಅಲ್ಲಾಹುವೇತರರನ್ನು ಆರಾಧಿಸಬೇಕೆಂದು ನೀವು ನನ್ನೊಂದಿಗೆ ಆದೇಶಿಸುತ್ತಿದ್ದೀರಾ?”
(65) ತಾವೇನಾದರೂ (ಅಲ್ಲಾಹುವಿನೊಂದಿಗೆ) ಸಹಭಾಗಿತ್ವ ಮಾಡಿದರೆ ಖಂಡಿತವಾಗಿಯೂ ತಮ್ಮ ಕರ್ಮಗಳು ನಿಷ್ಫಲವಾಗುವುದು ಮತ್ತು ಖಂಡಿತವಾಗಿಯೂ ತಾವು ನಷ್ಟ ಹೊಂದಿದವರಲ್ಲಿ ಸೇರಿದವರಾಗುವಿರಿ ಎಂದು ತಮಗೂ ತಮಗಿಂತ ಮುಂಚಿನವರಿಗೂ ದಿವ್ಯ ಸಂದೇಶ ನೀಡಲಾಗಿದೆ.
(66) ಅಲ್ಲ, ತಾವು ಅಲ್ಲಾಹುವನ್ನು ಮಾತ್ರ ಆರಾಧಿಸಿರಿ ಮತ್ತು ಕೃತಜ್ಞತೆ ಸಲ್ಲಿಸುವವರೊಂದಿಗೆ ಸೇರಿದವರಾಗಿರಿ.
(67) ಅಲ್ಲಾಹುವನ್ನು ಗಣನೆ ಮಾಡಬೇಕಾದ ರೀತಿಯಲ್ಲಿ ಅವರು ಗಣನೆ ಮಾಡಲಿಲ್ಲ. ಪುನರುತ್ಥಾನ ದಿನದಂದು ಭೂಮಿಯು ಸಂಪೂರ್ಣವಾಗಿ ಅವನ ಒಂದು ಹಿಡಿತದಲ್ಲಿರುವುದು ಮತ್ತು ಆಕಾಶಗಳು ಅವನ ಬಲಗೈಯಲ್ಲಿ ಸುರುಳಿಯಾಗಿ ಹಿಡಿಯಲ್ಪಟ್ಟಿರುವುವು. ಅವನು ಪರಮಪಾವನನು. ಅವರು ಸಹಾಭಾಗಿತ್ವ ಮಾಡುವುದರಿಂದೆಲ್ಲ ಅವನು ಅತೀತನಾಗಿರುವನು.
(68) ಕಹಳೆಯಲ್ಲಿ ಊದಲಾಗುವಾಗ ಆಕಾಶಗಳಲ್ಲಿರುವವರು ಮತ್ತು ಭೂಮಿಯಲ್ಲಿರುವವರು ನಿಶ್ಚಲರಾಗುವರು. ಅಲ್ಲಾಹು ಇಚ್ಛಿಸಿದವರ ಹೊರತು. ತರುವಾಯ ಅದರಲ್ಲಿ (ಕಹಳೆಯಲ್ಲಿ) ಇನ್ನೊಮ್ಮೆ ಊದಲಾಗುವಾಗ ಅಗೋ! ಅವರು ಎದ್ದು ನಿಂತು ನೋಡುತ್ತಿರುವರು.
(69) ಭೂಮಿಯು ಅದರ ರಬ್‌ನ ಪ್ರಭೆಯಿಂದಾಗಿ ಬೆಳಗುವುದು.(1051) (ಕರ್ಮಗಳ) ದಾಖಲೆಯನ್ನು ಇಡಲಾಗುವುದು, ಪ್ರವಾದಿಗಳನ್ನು ಹಾಗೂ ಸಾಕ್ಷಿಗಳನ್ನು(1052) ತರಲಾಗುವುದು. ತರುವಾಯ ಜನರ ಮಧ್ಯೆ ನ್ಯಾಯಬದ್ಧವಾಗಿ ತೀರ್ಪು ನೀಡಲಾಗುವುದು. ಅವರೊಂದಿಗೆ ಅನ್ಯಾಯವೆಸಗಲಾಗದು.
1051. ಭೂಮಿಯ ಇಂದಿನ ಸ್ಥಿತಿಗೆ ಅಂತ್ಯದಿನದಂದು ಬದಲಾವಣೆ ತರಲಾಗುವುದೆಂದು 14:48ರಲ್ಲಿ ಹೇಳಲಾಗಿದೆ. ಅದರ ನಂತರ ಉಂಟಾಗುವ ಸ್ಥಿತಿಯನ್ನು ಇಲ್ಲಿ ವಿವರಿಸಲಾಗಿದೆ. 1052. ಇಲ್ಲಿ ಹೇಳಲಾದ ಸಾಕ್ಷಿಗಳು ಎಂಬ ಪದದ ತಾತ್ಪರ್ಯ ಪ್ರವಾದಿಗಳು ಸತ್ಯಸಂದೇಶವನ್ನು ಜನರಿಗೆ ತಲುಪಿಸಿಕೊಟ್ಟಿದ್ದಾರೆ ಎಂಬುದಕ್ಕೆ ಸಾಕ್ಷಿಗಳಾಗಿ ಹಾಜರುಪಡಿಸಲಾಗುವ ಸಜ್ಜನರಾದ ಸತ್ಯವಿಶ್ವಾಸಿಗಳಾಗಿರಬಹುದು.
(70) ಪ್ರತಿಯೊಬ್ಬ ವ್ಯಕ್ತಿಗೂ ಅವನು ಮಾಡಿದ ಕರ್ಮಗಳ (ಪ್ರತಿಫಲವನ್ನು) ಪೂರ್ಣವಾಗಿ ನೀಡಲಾಗುವುದು. ಅವರು ಮಾಡುತ್ತಿರುವುದರ ಬಗ್ಗೆ ಅವನು ಚೆನ್ನಾಗಿ ಅರಿಯುವವನಾಗಿರುವನು.
(71) ಸತ್ಯನಿಷೇಧಿಗಳನ್ನು ಗುಂಪು ಗುಂಪಾಗಿ ನರಕಾಗ್ನಿಯೆಡೆಗೆ ಸಾಗಿಸಲಾಗುವುದು. ಹಾಗೆ ಅವರು ಅದರ ಸಮೀಪಕ್ಕೆ ಬಂದಾಗ ಅದರ ಬಾಗಿಲುಗಳನ್ನು ತೆರೆಯಲಾಗುವುದು. “ನಿಮಗೆ ನಿಮ್ಮ ರಬ್‌ನ ದೃಷ್ಟಾಂತಗಳನ್ನು ಓದಿಕೊಡುತ್ತಲೂ, ನಿಮ್ಮ ಈ ದಿನವನ್ನು ನೀವು ಭೇಟಿಯಾಗಲಿದ್ದೀರಿ ಎಂದು ನಿಮಗೆ ಎಚ್ಚರಿಕೆ ನೀಡುತ್ತಲೂ, ನಿಮ್ಮವರೇ ಆಗಿರುವ ಸಂದೇಶವಾಹಕರು ನಿಮ್ಮ ಬಳಿಗೆ ಬಂದಿರಲಿಲ್ಲವೇ?” ಎಂದು ಅದರ (ನರಕಾಗ್ನಿಯ) ಕಾವಲುಗಾರರು ಅವರೊಂದಿಗೆ ಕೇಳುವರು. ಅವರು ಹೇಳುವರು: “ಹೌದು! ಆದರೆ ಸತ್ಯನಿಷೇಧಿಗಳ ಮೇಲೆ ಶಿಕ್ಷೆಯ ವಚನವು ಸತ್ಯವಾಗಿ ಬಿಟ್ಟಿದೆ”.
(72) (ಅವರೊಂದಿಗೆ) ಹೇಳಲಾಗುವುದು: “ನೀವು ನರಕಾಗ್ನಿಯ ದ್ವಾರಗಳ ಮೂಲಕ ಪ್ರವೇಶಿಸಿರಿ. ನೀವು ಅದರಲ್ಲಿ ಶಾಶ್ವತವಾಗಿ ವಾಸಿಸುವಿರಿ. ಅಹಂಕಾರಿಗಳ ವಾಸಸ್ಥಳವು ಎಷ್ಟು ನಿಕೃಷ್ಟವಾದುದು!”
(73) ತಮ್ಮ ರಬ್ಬನ್ನು ಭಯಪಟ್ಟು ಬದುಕಿದವರನ್ನು ಗುಂಪು ಗುಂಪಾಗಿ ಸ್ವರ್ಗದೆಡೆಗೆ ಕೊಂಡೊಯ್ಯಲಾಗುವುದು. ಹಾಗೆ ಅವರು ಅದರ ಸಮೀಪಕ್ಕೆ ಬಂದಾಗ ಅದರ ಬಾಗಿಲುಗಳನ್ನು ತೆರೆಯಲಾಗುವುದು. “ನಿಮ್ಮ ಮೇಲೆ ಶಾಂತಿಯಿರಲಿ! ನೀವು ಪರಿಶುದ್ಧರಾಗಿದ್ದೀರಿ. ಆದುದರಿಂದ ಶಾಶ್ವತವಾಸಿಗಳಾಗಿ ಇದನ್ನು ಪ್ರವೇಶಿಸಿರಿ” ಎಂದು ಅದರ ಕಾವಲುಗಾರರು ಅವರೊಂದಿಗೆ ಹೇಳುವರು.
(74) ಅವರು ಹೇಳುವರು: “ನಮ್ಮೊಂದಿಗಿರುವ ತನ್ನ ವಾಗ್ದಾನದಲ್ಲಿ ಸತ್ಯಸಂಧತೆಯನ್ನು ಪಾಲಿಸಿರುವ ಮತ್ತು ಸ್ವರ್ಗದಲ್ಲಿ ನಾವಿಚ್ಛಿಸುವ ಕಡೆ ವಾಸಿಸಬಹುದಾದ ರೀತಿಯಲ್ಲಿ ಈ (ಸ್ವರ್ಗ)ಭೂಮಿಗೆ ನಮ್ಮನ್ನು ಉತ್ತರಾಧಿಕಾರಿಗಳನ್ನಾಗಿ ಮಾಡಿರುವ ಅಲ್ಲಾಹುವಿಗೆ ಸ್ತುತಿ. ಕರ್ಮವೆಸಗಿದವರಿಗಿರುವ ಪ್ರತಿಫಲವು ಎಷ್ಟು ವಿಶಿಷ್ಟವಾದುದು!
(75) ಮಲಕ್‍ಗಳು ತಮ್ಮ ರಬ್‌ನ ಸ್ತುತಿಯೊಂದಿಗೆ ಅವನ ಕೀರ್ತನೆಯನ್ನು ಮಾಡುತ್ತಾ ಸಿಂಹಾಸನದ ಸುತ್ತಲೂ ಆವರಿಸಿಕೊಳ್ಳುತ್ತಿರುವುದಾಗಿ ತಾವು ಕಾಣುವಿರಿ. ಅವರ ಮಧ್ಯೆ ನ್ಯಾಯಬದ್ಧವಾದ ತೀರ್ಪನ್ನು ನೀಡಲಾಗುವುದು. “ಸರ್ವಲೋಕಗಳ ರಬ್ ಆಗಿರುವ ಅಲ್ಲಾಹುವಿಗೆ ಸ್ತುತಿ” ಎಂದು ಹೇಳಲಾಗುವುದು.