(1) ಓ ಮನುಷ್ಯರೇ! ನಿಮ್ಮನ್ನು ಒಂದೇ ಶರೀರದಿಂದ ಸೃಷ್ಟಿಸಿರುವ ಮತ್ತು ಅದರಿಂದಲೇ ಅದರ ಸಂಗಾತಿಯನ್ನು ಸೃಷ್ಟಿಸಿರುವ ಹಾಗೂ ಅವರಿಬ್ಬರಿಂದಲೂ ಅನೇಕ ಪುರುಷರನ್ನೂ ಸ್ತ್ರೀಯರನ್ನೂ ಹಬ್ಬಿಸಿರುವ ನಿಮ್ಮ ರಬ್ಬನ್ನು ಭಯಪಡಿರಿ. ಯಾವ ಅಲ್ಲಾಹುವಿನ ವಿಚಾರದಲ್ಲಿ ನೀವು ಪರಸ್ಪರ ಪ್ರಶ್ನಿಸುತ್ತಿರುವಿರೋ(98) ಅವನನ್ನು ಭಯಪಡಿರಿ ಮತ್ತು ಕುಟುಂಬ ಸಂಬಂಧಗಳನ್ನು (ಕಾಪಾಡಿರಿ). ಖಂಡಿತವಾಗಿಯೂ ಅಲ್ಲಾಹು ನಿಮ್ಮನ್ನು ಸೂಕ್ಷ್ಮವಾಗಿ ವೀಕ್ಷಿಸುವವನಾಗಿರುವನು.
98. ಈ ಸೂಚನೆ ಅಲ್ಲಾಹುವಿನ ಹೆಸರಲ್ಲಿ ಪರಸ್ಪರ ತರ್ಕಿಸುವುದರ ಕುರಿತು, ಅಲ್ಲಾಹುವಿನ ಹೆಸರಿನಲ್ಲಿ ಪರಸ್ಪರ ಹಕ್ಕುವಾದಗಳನ್ನು ಮಂಡಿಸುವುದರ ಕುರಿತು ಅಥವಾ ಅಲ್ಲಾಹುವಿನ ಹೆಸರಿನಲ್ಲಿ ಸಹಾಯಯಾಚನೆ ಮಾಡುವುದರ ಕುರಿತಾಗಿರಬಹುದು.
(2) ಅನಾಥರಿಗೆ ಅವರ ಸೊತ್ತನ್ನು ಕೊಟ್ಟುಬಿಡಿರಿ. ಉತ್ತಮವಾಗಿರುವುದಕ್ಕೆ ಬದಲು ನಿಕೃಷ್ಟವಾಗಿರುವುದನ್ನು ಬದಲಾಯಿಸದಿರಿ. ಅವರ ಸಂಪತ್ತನ್ನು ನಿಮ್ಮ ಸಂಪತ್ತಿನೊಂದಿಗೆ ಸೇರಿಸಿ ತಿನ್ನದಿರಿ. ಖಂಡಿತವಾಗಿಯೂ ಅದೊಂದು ಘೋರ ಪಾಪವಾಗಿದೆ.
(3) ಅನಾಥೆಯರ ವಿಷಯದಲ್ಲಿ(99) ನ್ಯಾಯ ಪಾಲಿಸಲು ಸಾಧ್ಯವಾಗಲಾರದೆಂದು ನೀವು ಭಯಪಡುವುದಾದರೆ (ಇತರ) ಸ್ತ್ರೀಯರ ಪೈಕಿ ನೀವು ಇಷ್ಟಪಡುವ ಇಬ್ಬರು, ಮೂವರು ಅಥವಾ ನಾಲ್ವರನ್ನು ವಿವಾಹವಾಗಿರಿ. ಆದರೆ (ಅವರ ಮಧ್ಯೆ) ನ್ಯಾಯ ಪಾಲಿಸಲು ಸಾಧ್ಯವಿಲ್ಲವೆಂದು ನೀವು ಭಯಪಡುವುದಾದರೆ ಒಬ್ಬಳನ್ನು ಮಾತ್ರ (ವಿವಾಹವಾಗಿರಿ). ಅಥವಾ ನಿಮ್ಮ ಅಧೀನದಲ್ಲಿರುವ ಗುಲಾಮ ಸ್ತ್ರೀಯನ್ನು (ಪತ್ನಿಯನ್ನಾಗಿ ಮಾಡಿಕೊಳ್ಳಿರಿ). ನೀವು ಎಲ್ಲೆ ಮೀರದಿರಲು ಇದು ಅತ್ಯಂತ ಸೂಕ್ತವಾಗಿದೆ.
99. ಅನಾಥೆಯರ ಪೋಷಣೆಯ ಹೊಣೆಯನ್ನು ವಹಿಸಿದವರು ಅವರ ಸಂಪತ್ತು ಮತ್ತು ಸೌಂದರ್ಯದ ಮೇಲೆ ಕಣ್ಣಿಟ್ಟು ಅವರನ್ನು ವಿವಾಹವಾಗುವ ಸಂಪ್ರದಾಯ ಅರಬರ ಮಧ್ಯೆ ರೂಢಿಯಲ್ಲಿತ್ತು. ಆದರೆ ಅವರಲ್ಲಿ ಹೆಚ್ಚಿನವರೂ ಆ ‘ಅನಾಥೆ ಪತ್ನಿ’ಯರೊಂದಿಗೆ ನ್ಯಾಯ ಪಾಲಿಸುತ್ತಿರಲಿಲ್ಲ. ನ್ಯಾಯ ಪಾಲಿಸದ ಯಾವುದೇ ವಿವಾಹ ಸಂಪ್ರದಾಯವೂ ಇಸ್ಲಾಮಿನಲ್ಲಿ ನಿಷಿದ್ಧವಾಗಿದೆ.
(4) ಸ್ತ್ರೀಯರಿಗೆ ಅವರ ವಧುದಕ್ಷಿಣೆಯನ್ನು ಆತ್ಮ ಸಂತೃಪ್ತಿಯೊಂದಿಗೆ ನೀಡಿರಿ. ಇನ್ನು ಅವರು ಉತ್ತಮ ಮನಸ್ಸಿನೊಂದಿಗೆ ಅದರಿಂದ ಏನಾದರೂ ಬಿಟ್ಟುಕೊಡುವುದಾದರೆ ನೀವದನ್ನು ಹೃತ್ಪೂರ್ವಕವಾಗಿ ನಿಶ್ಚಿಂತೆಯಿಂದ ಸೇವಿಸಿರಿ.
(5) ಅಲ್ಲಾಹು ನಿಮ್ಮ ಅಸ್ತಿತ್ವಕ್ಕಿರುವ ಮಾರ್ಗವಾಗಿ ಮಾಡಿರುವ ನಿಮ್ಮ ಸಂಪತ್ತನ್ನು ನೀವು ವಿವೇಕವಿಲ್ಲದವರಿಗೆ ಬಿಟ್ಟುಕೊಡಬಾರದು. ನೀವು ಅವರಿಗೆ ಅದರಿಂದ ಅನ್ನಾಧಾರ ಮತ್ತು ಉಡುಪುಗಳನ್ನು ನೀಡಿರಿ ಹಾಗೂ ಅವರೊಂದಿಗೆ ಶಿಷ್ಟಾಚಾರದ ಮಾತುಗಳನ್ನಾಡಿರಿ.
(6) ನೀವು ಅನಾಥರನ್ನು ಪರೀಕ್ಷಿಸಿರಿ. ಅವರು ವಿವಾಹಪ್ರಾಯವನ್ನು ತಲುಪಿದರೆ ಮತ್ತು ನೀವು ಅವರಲ್ಲಿ ಕರ್ತವ್ಯ ಪ್ರಜ್ಞೆಯನ್ನು ಕಾಣುವುದಾದರೆ ಅವರ ಸಂಪತ್ತನ್ನು ಅವರಿಗೆ ಬಿಟ್ಟುಕೊಡಿರಿ. ಅವರು (ಅನಾಥರು) ಪ್ರೌಢರಾಗುತ್ತಿರುವುದನ್ನು ಗಮನಿಸಿ ಅಮಿತವಾಗಿ ಮತ್ತು ಆತುರದಿಂದ ಅದನ್ನು ತಿಂದು ಮುಗಿಸದಿರಿ. ಇನ್ನು (ಅನಾಥರ ಪೋಷಣೆಯ ಹೊಣೆ ಹೊತ್ತಿರುವ) ಯಾರು ಸಾಮರ್ಥ್ಯವುಳ್ಳವನಾಗಿರುವನೋ ಅವನು (ಅದರಿಂದ ತೆಗೆಯದೆ) ಸಭ್ಯತೆಯನ್ನು ಪ್ರದರ್ಶಿಸಲಿ. ಯಾರು ಬಡವನಾಗಿರುವನೋ ಅವನು ಶಿಷ್ಟಾಚಾರದೊಂದಿಗೆ ಅದರಿಂದ ತಿನ್ನಲಿ. ತರುವಾಯ ಅವರ ಸೊತ್ತನ್ನು ಅವರಿಗೆ ಹಸ್ತಾಂತರಿಸುವಾಗ ನೀವದಕ್ಕೆ ಸಾಕ್ಷಿಯನ್ನು ನಿಲ್ಲಿಸಿರಿ. ಲೆಕ್ಕ ವಿಚಾರಣೆ ಮಾಡುವವನಾಗಿ ಅಲ್ಲಾಹು ಸಾಕು.
(7) ಮಾತಾಪಿತರು ಮತ್ತು ನಿಕಟ ಸಂಬಂಧಿಕರು ಬಿಟ್ಟುಹೋಗಿರುವ ಸಂಪತ್ತಿನಲ್ಲಿ ಪುರುಷರಿಗೆ ಪಾಲಿದೆ. ಮಾತಾಪಿತರು ಮತ್ತು ನಿಕಟ ಸಂಬಂಧಿಕರು ಬಿಟ್ಟುಹೋಗಿರುವ ಸಂಪತ್ತಿನಲ್ಲಿ ಸ್ತ್ರೀಯರಿಗೂ ಪಾಲಿದೆ. (ಆ ಸಂಪತ್ತು) ಕಡಿಮೆಯಿರಲಿ ಅಥವಾ ಹೆಚ್ಚಿರಲಿ. ಅದು ನಿಶ್ಚಯಿಸಲಾದ ಪಾಲಾಗಿದೆ.
(8) (ಸಂಪತ್ತು) ಪಾಲು ಮಾಡುವ ಸಂದರ್ಭದಲ್ಲಿ (ಇತರ) ಸಂಬಂಧಿಕರು, ಅನಾಥರು ಮತ್ತು ಬಡವರು ಉಪಸ್ಥಿತರಿದ್ದರೆ ಅದರಿಂದ ಅವರಿಗೆ ಏನಾದರೂ ಕೊಟ್ಟುಬಿಡಿರಿ ಮತ್ತು ಅವರೊಂದಿಗೆ ಶಿಷ್ಟಾಚಾರದ ಮಾತುಗಳನ್ನಾಡಿರಿ.(100)
100. ವಾರೀಸು ನಿಯಮದ ಪ್ರಕಾರ ಆಸ್ತಿಯಲ್ಲಿ ಹಕ್ಕಿಲ್ಲದ ಕೆಲವು ಸಂಬಂಧಿಕರು -ವಿಶೇಷವಾಗಿ ಅನಾಥರು ಮತ್ತು ನಿರ್ಗತಿಕರು- ಮೃತನ ಬಳಿಕ ನಿರಾಶ್ರಿತರಾಗಬಹುದು. ವಾರೀಸು ನಿಯಮ ಪ್ರಕಾರ ಹಕ್ಕುಳ್ಳವರು ಇಂತಹವರಿಗೆ ಏನಾದರೂ ನೀಡಬೇಕೆಂದು ಈ ಸೂಕ್ತಿಯು ಕಲಿಸುತ್ತದೆ.
(9) ತಮ್ಮ ಹಿಂದೆ ಬಲಹೀನರಾದ ಸಂತತಿಗಳನ್ನು ಬಿಟ್ಟುಹೋದರೆ (ಅವರ ಗತಿಯೇನೆಂದು) ಭಯಪಡುವವರು (ಅದೇ ರೀತಿ ಇತರರ ಮಕ್ಕಳ ವಿಷಯದಲ್ಲಿಯೂ) ಭಯಪಡಲಿ.(101) ಅವರು ಅಲ್ಲಾಹುವನ್ನು ಭಯಪಡಲಿ ಮತ್ತು ಸರಿಯಾದ ಮಾತನ್ನೇ ಆಡಲಿ.
101. ತಾನು ಮೃತಪಟ್ಟರೆ ತನ್ನ ಮಕ್ಕಳು ಅನಾಥರಾಗಿ ಇತರರ ಹಿಂಸೆ ಮತ್ತು ಶೋಷಣೆಗೆ ಬಲಿಯಾಗುವ ದಾರುಣ ಸ್ಥಿತಿಯನ್ನು ಯಾರೂ ಇಷ್ಟಪಡಲಾರರು. ಇನ್ನೊಬ್ಬರ ಅನಾಥ ಮಕ್ಕಳು ತನ್ನ ರಕ್ಷಣೆಯಲ್ಲಿರುವಾಗ ಸ್ವಂತ ಮಕ್ಕಳಿಗೆ ಸಂಭವಿಸಬಹುದಾದ ಈ ಸ್ಥಿತಿಯ ಬಗ್ಗೆ ಆಲೋಚಿಸಿದರೆ ಯಾರನ್ನೇ ಆದರೂ ನ್ಯಾಯದಲ್ಲಿ ದೃಢವಾಗಿ ನಿಲ್ಲಲು ಅದು ಪ್ರೇರೇಪಿಸದಿರದು.
(10) ಖಂಡಿತವಾಗಿಯೂ ಅನಾಥರ ಸೊತ್ತನ್ನು ಅನ್ಯಾಯವಾಗಿ ತಿನ್ನುವವರು ಯಾರೋ ಅವರು ತಮ್ಮ ಉದರಗಳಲ್ಲಿ ತುಂಬಿಸುವುದು ಅಗ್ನಿಯನ್ನೇ ಆಗಿದೆ. ತರುವಾಯ ಅವರನ್ನು ನರಕಾಗ್ನಿಯಲ್ಲಿ ಉರಿಸಲಾಗುವುದು.
(11) ನಿಮ್ಮ ಮಕ್ಕಳ ವಿಷಯದಲ್ಲಿ ಅಲ್ಲಾಹು ನಿಮಗೆ ನಿರ್ದೇಶನವನ್ನು ನೀಡುತ್ತಿರುವನು. ಇಬ್ಬರು ಸ್ತ್ರೀಯರ ಪಾಲು ಒಬ್ಬ ಗಂಡಿಗಿದೆ. ಇನ್ನು ಹೆಣ್ಮಕ್ಕಳು ಇಬ್ಬರಿಗಿಂತಲೂ ಹೆಚ್ಚಿದ್ದರೆ(102) (ಮೃತ ವ್ಯಕ್ತಿ) ಬಿಟ್ಟುಹೋದ ಸೊತ್ತಿನ ಮೂರನೇ ಎರಡು ಭಾಗವು ಅವರಿಗಿದೆ. ಓರ್ವ ಪುತ್ರಿ ಮಾತ್ರವಿರುವುದಾದರೆ ಅವಳಿಗೆ ಅರ್ಧಭಾಗವಿದೆ. ಮೃತ ವ್ಯಕ್ತಿಗೆ ಮಕ್ಕಳಿದ್ದರೆ ಅವನ ಮಾತಾಪಿತರಲ್ಲಿ ಪ್ರತಿಯೊಬ್ಬರಿಗೂ ಅವನು ಬಿಟ್ಟುಹೋದ ಸೊತ್ತಿನ ಆರನೇ ಒಂದು ಭಾಗವಿದೆ. ಇನ್ನು ಅವನಿಗೆ ಮಕ್ಕಳಿರದಿದ್ದರೆ ಮತ್ತು ಮಾತಾಪಿತರು ಅವನ ಉತ್ತರಾಧಿಕಾರಿಗಳಾಗಿದ್ದರೆ ಅವನ ತಾಯಿಗೆ ಮೂರನೇ ಒಂದು ಭಾಗವಿದೆ.(103) ಇನ್ನು ಅವನಿಗೆ ಸಹೋದರರಿದ್ದರೆ ಅವನ ತಾಯಿಗೆ ಆರನೇ ಒಂದು ಭಾಗವಿದೆ.(104) ಮೃತ ವ್ಯಕ್ತಿ ಮಾಡಿರುವ ವಸಿಯ್ಯತ್ ಮತ್ತು ಸಾಲವಿದ್ದರೆ ಅದನ್ನು ಸಂದಾಯ ಮಾಡಿದ ನಂತರ (ವಾಗಿದೆ ಈ ಪಾಲು ಹಂಚಿಕೆ). ನಿಮ್ಮ ತಂದೆಯಂದಿರಲ್ಲಿ ಮತ್ತು ಮಕ್ಕಳಲ್ಲಿ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿರುವವರು ಯಾರೆಂದು ನಿಮಗೆ ತಿಳಿದಿರಲಾರದು. ಇದು ಅಲ್ಲಾಹುವಿನ ವತಿಯಿಂದಿರುವ (ಪಾಲು) ನಿರ್ಣಯವಾಗಿದೆ. ಖಂಡಿತವಾಗಿಯೂ ಅಲ್ಲಾಹು ಎಲ್ಲವನ್ನು ಅರಿಯುವವನೂ ಯುಕ್ತಿಪೂರ್ಣನೂ ಆಗಿರುವನು.
102. ಇಬ್ಬರು ಹೆಣ್ಮಕ್ಕಳಿದ್ದರೂ ಮೂರನೇ ಎರಡು ಭಾಗವು ದೊರೆಯುವುದು. ಪ್ರವಾದಿ(ಸ) ರವರು ಸಅ್‌ದ್ ಇಬ್ನ್ ರಬೀಅ‌್ ರವರ ಇಬ್ಬರು ಹೆಣ್ಮಕ್ಕಳಿಗೆ ಈ ರೀತಿ ಪಾಲು ನೀಡಲು ಆದೇಶಿಸಿದ್ದರು. 103. ಉಳಿದ ಮೂರನೇ ಎರಡು ಭಾಗವು ತಂದೆಗೆ ಸೇರುತ್ತದೆ.
104. ಮೃತ ವ್ಯಕ್ತಿಗೆ ಗಂಡುಮಕ್ಕಳಾಗಲಿ ತಂದೆಯಾಗಲಿ ಇಲ್ಲದಿರುವಾಗ ಮಾತ್ರ ಸಹೋದರನು (ಅಥವಾ ಸಹೋದರರು) ಹಕ್ಕುದಾರರಾಗುತ್ತಾರೆ. ತಾಯಿ ಮತ್ತು ಒಂದಕ್ಕಿಂತ ಹೆಚ್ಚು ಸಹೋದರರು ಮಾತ್ರವಿರುವ ಸಂದರ್ಭದಲ್ಲಿ ಆರನೇ ಒಂದನ್ನು ಕಳೆದು ಉಳಿದಿರುದೆಲ್ಲವೂ ಸಹೋದರರಿಗೆ ಸೇರುತ್ತದೆ. ಓರ್ವ ಸಹೋದರ ಮತ್ತು ತಾಯಿ ಮಾತ್ರ ಹಕ್ಕುದಾರರಾಗಿದ್ದರೆ ತಾಯಿಗೆ ಮೂರನೇ ಒಂದು ಮತ್ತು ಸಹೋದರನಿಗೆ ಮೂರನೇ ಎರಡು ಭಾಗವು ದೊರೆಯುತ್ತದೆ. ತಾಯಿ ಮತ್ತು ಸಹೋದರಿಯರು ಮಾತ್ರ ಹಕ್ಕುದಾರರಾಗಿದ್ದರೂ ತಾಯಿಗೆ ಆರನೇ ಒಂದು ಭಾಗವೇ ದೊರೆಯುತ್ತದೆ.
(12) ನಿಮ್ಮ ಪತ್ನಿಯರಿಗೆ ಸಂತಾನವಿಲ್ಲದಿದ್ದರೆ ಅವರು ಬಿಟ್ಟುಹೋದ ಸೊತ್ತಿನಲ್ಲಿ ಅರ್ಧಭಾಗವು ನಿಮಗಿದೆ. ಇನ್ನು ಅವರಿಗೆ ಸಂತಾನವಿದ್ದರೆ ಅವರು ಬಿಟ್ಟುಹೋಗಿರುವುದರ ನಾಲ್ಕನೇ ಒಂದು ಭಾಗವು ನಿಮಗಿದೆ. ಇದು ಅವರು ಮಾಡುವ ವಸಿಯ್ಯತ್ ಮತ್ತು ಸಾಲವಿದ್ದರೆ ಅದನ್ನು ಕಳೆದ ನಂತರವಾಗಿದೆ. ನಿಮಗೆ ಸಂತಾನವಿಲ್ಲದಿದ್ದರೆ ನೀವು ಬಿಟ್ಟುಹೋದ ಸೊತ್ತಿನಲ್ಲಿ ನಾಲ್ಕನೇ ಒಂದು ಭಾಗವು ಅವರಿಗೆ (ಪತ್ನಿಯರಿಗೆ) ಇದೆ. ಇನ್ನು ನಿಮಗೆ ಸಂತಾನವಿದ್ದರೆ ನೀವು ಬಿಟ್ಟುಹೋಗಿರುವುದರಲ್ಲಿ ಎಂಟನೇ ಒಂದು ಭಾಗವು ಅವರಿಗಿದೆ. ಇದು ನೀವು ಮಾಡುವ ವಸಿಯ್ಯತ್ ಮತ್ತು ಸಾಲವಿದ್ದರೆ ಅದನ್ನು ಕಳೆದ ನಂತರವಾಗಿದೆ. ವಾರೀಸು ಹಕ್ಕು ಪಡೆಯಲಾಗುವ ಗಂಡು ಅಥವಾ ಹೆಣ್ಣು, ತಂದೆ ಹಾಗೂ ಮಕ್ಕಳಿಲ್ಲದ ವ್ಯಕ್ತಿಯಾಗಿದ್ದರೆ ಮತ್ತು ಅವನಿಗೆ (ತಾಯಿಗೆ ಸೇರಿದ) ಓರ್ವ ಸಹೋದರನಾಗಲಿ ಸಹೋದರಿಯಾಗಲಿ ಇರುವುದಾದರೆ ಅವರಲ್ಲಿ (ಆ ಸಹೋದರ ಸಹೋದರಿಯರಲ್ಲಿ) ಪ್ರತಿಯೊಬ್ಬರಿಗೂ ಆರನೇ ಒಂದು ಭಾಗವು ಇದೆ. ಇನ್ನು ಅವರು ಅದಕ್ಕಿಂತಲೂ ಹೆಚ್ಚಿದ್ದರೆ ಅವರು ಮೂರನೇ ಒಂದು ಭಾಗವನ್ನು ಸಮಾನವಾಗಿ ಹಂಚಬೇಕಾಗಿದೆ.(105) ಇದು ಹಾನಿಕರವಲ್ಲದ ವಸಿಯ್ಯತ್ ಮತ್ತು ಸಾಲವಿದ್ದರೆ ಅದನ್ನು ಕಳೆದ ನಂತರವಾಗಿದೆ.(106) ಇದು ಅಲ್ಲಾಹುವಿನ ಕಡೆಯ ನಿರ್ದೇಶನವಾಗಿದೆ. ಅಲ್ಲಾಹು ಸರ್ವಜ್ಞನೂ ಸಹನಾಶೀಲನೂ ಆಗಿರುವನು.
105. ಈ ಸೂಕ್ತಿಯಲ್ಲಿ ಹೇಳಿರುವುದು ತಾಯಿಗೆ ಸೇರಿದ ಸಹೋದರರ ಹಕ್ಕಿನ ಕುರಿತಾಗಿದೆ. ಇತರ ಸಹೋದರರ ಹಕ್ಕಿನ ಕುರಿತು 4:176ರಲ್ಲಿ ವಿವರಿಸಲಾಗಿದೆ. ತಾಯಿಗೆ ಸೇರಿದ ಸಹೋದರರಿಗಿರುವ ವಾರೀಸು ಹಕ್ಕಿನಲ್ಲಿ ಗಂಡಿಗೂ ಹೆಣ್ಣಿಗೂ ಸಮಾನ ಪಾಲಿದೆ. ಅವರಿಗೆ ಹಕ್ಕು ನೀಡಲಾಗಿರುವುದು ತಾಯಿಯ ಪ್ರತಿನಿಧಿಗಳು ಎಂಬ ನೆಲೆಯಲ್ಲಾಗಿದೆ.
106. ವಸಿಯ್ಯತ್‍ನ ಮೂಲಕ ಒಟ್ಟು ಸೊತ್ತಿನ ಮೂರನೇ ಒಂದು ಭಾಗವನ್ನು ಮಾತ್ರ ಯಾರಿಗಾದರೂ ನೀಡಬಹುದು. ಅದಕ್ಕಿಂತ ಹೆಚ್ಚು ನೀಡುವುದು ಹಕ್ಕುದಾರರಿಗೆ ಮಾಡುವ ಅನ್ಯಾಯವಾಗಿದೆ. ಹಕ್ಕುದಾರರೊಂದಿಗಿರುವ ದ್ವೇಷದ ನಿಮಿತ್ತ ಅವರಿಗೆ ತನ್ನ ಸೊತ್ತಿನಿಂದ ತನ್ನ ಮರಣಾನಂತರ ಏನೂ ದೊರೆಯಬಾರದೆಂದು ಭಾವಿಸಿ ಓರ್ವನು ತಾನಿಷ್ಟಪಡುವ ವ್ಯಕ್ತಿಗೆ ಒಂದು ದೊಡ್ಡ ಮೊತ್ತದ ಸಾಲವನ್ನು ಮರಳಿಸಬೇಕಾಗಿದೆ ಎಂದು ದಾಖಲಿಸಿಡುವುದಾಗಲಿ ಉಯಿಲು ಬರೆಯುವುದಾಗಲಿ ಮಾಡುವುದು ಅನ್ಯಾಯವಾಗಿದೆ.
(13) ಇದು ಅಲ್ಲಾಹುವಿನ ನಿಯಮವ್ಯಾಪ್ತಿಗಳಾಗಿವೆ. ಯಾರು ಅಲ್ಲಾಹುವನ್ನು ಮತ್ತು ಅವನ ಸಂದೇಶವಾಹಕರನ್ನು ಅನುಸರಿಸುವನೋ ಅವನನ್ನು ಅಲ್ಲಾಹು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶ ಮಾಡಿಸುವನು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅದು ಮಹಾ ವಿಜಯವಾಗಿದೆ.
(14) ಯಾರು ಅಲ್ಲಾಹುವಿಗೆ ಮತ್ತು ಅವನ ಸಂದೇಶವಾಹಕರಿಗೆ ಅವಿಧೇಯತೆ ತೋರುವನೋ ಮತ್ತು ಅವನ (ನಿಯಮ)ವ್ಯಾಪ್ತಿಗಳನ್ನು ಮೀರುವನೋ ಅವನನ್ನು ಅಲ್ಲಾಹು ನರಕಾಗ್ನಿಗೆ ಪ್ರವೇಶ ಮಾಡಿಸುವನು. ಅವನು ಅದರಲ್ಲಿ ಶಾಶ್ವತವಾಗಿ ವಾಸಿಸುವನು. ಅವನಿಗೆ ಅಪಮಾನಕರವಾದ ಶಿಕ್ಷೆಯಿದೆ.
(15) ನಿಮ್ಮ ಸ್ತ್ರೀಯರ ಪೈಕಿ ನೀಚಕೃತ್ಯಗಳಲ್ಲಿ ತೊಡಗುವವರು ಯಾರೋ ಅವರಿಗೆ ವಿರುದ್ಧವಾಗಿ ನಿಮ್ಮ ಪೈಕಿ ನಾಲ್ವರನ್ನು ಸಾಕ್ಷಿಗಳಾಗಿ ತನ್ನಿರಿ. ತರುವಾಯ ಅವರು ಸಾಕ್ಷ್ಯವಹಿಸಿದರೆ ಮರಣವು ಅವರನ್ನು ವಶಪಡಿಸುವ ತನಕ ಅಥವಾ ಅಲ್ಲಾಹು ಅವರಿಗೊಂದು ಮಾರ್ಗವನ್ನು ಮಾಡಿಕೊಡುವ ತನಕ ಅವರನ್ನು ನೀವು ಮನೆಗಳಲ್ಲಿ ತಡೆದಿರಿಸಿರಿ.(107)
107. ವ್ಯಭಿಚಾರಕ್ಕಿರುವ ಶಿಕ್ಷೆಯನ್ನು ನೀಡಬೇಕಾದರೆ ಸತ್ಯಸಂಧರಾದ ನಾಲ್ವರು ಅದನ್ನು ಕಂಡಿರಬೇಕು ಮತ್ತು ಅವರು ಸಾಕ್ಷ್ಯವಹಿಸಬೇಕು. ಇಸ್ಲಾಮಿನ ಎಲ್ಲ ನಿಯಮಗಳಂತೆ ಶಿಕ್ಷಾ ನಿಯಮಗಳು ಕೂಡ ಹಂತ ಹಂತವಾಗಿ ಅವತೀರ್ಣಗೊಂಡಿವೆ. ಈ ವಚನ ಅವತೀರ್ಣಗೊಂಡಿರುವುದು 100 ಛಡಿಯೇಟಿನ ಶಿಕ್ಷೆ ನಿಶ್ಚಯಿಸುವುದಕ್ಕೆ ಮುಂಚೆಯಾಗಿದೆ. ‘ಅಲ್ಲಾಹು ಅವರಿಗೊಂದು ಮಾರ್ಗವನ್ನು ಮಾಡಿಕೊಡುವ ತನಕ’ ಎಂಬುದರ ತಾತ್ಪರ್ಯ ನಿಶ್ಚಿತವೂ ಅಂತಿಮವೂ ಆದ ಶಿಕ್ಷಾನಿಯಮವು ಅವತೀರ್ಣಗೊಳ್ಳುವ ತನಕ ಎಂದಾಗಿರಬಹುದು.
(16) ನಿಮ್ಮ ಪೈಕಿ ಆ ನೀಚಕೃತ್ಯವನ್ನು ಮಾಡುವ ಇಬ್ಬರನ್ನೂ ಸತಾಯಿಸಿರಿ.(108) ತರುವಾಯ ಅವರಿಬ್ಬರೂ ಪಶ್ಚಾತ್ತಾಪಪಟ್ಟು ನಡತೆಯನ್ನು ತಿದ್ದಿಕೊಂಡರೆ ಅವರನ್ನು ಬಿಟ್ಟುಬಿಡಿರಿ. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಪಶ್ಚಾತ್ತಾಪವನ್ನು ಸ್ವೀಕರಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
108. ಈ ಸೂಕ್ತಿಯು ವ್ಯಭಿಚಾರದಲ್ಲಿ ನಿರತರಾಗುವ ಸ್ತ್ರೀಪುರುಷರ ಬಗ್ಗೆ ಎಂದು ಹಲವು ಕುರ್‌ಆನ್ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ. ಇದು ಸಲಿಂಗರತಿ ಮಾಡುವ ಪುರುಷರ ಕುರಿತಾಗಿದೆ ಎಂದು ಇನ್ನು ಕೆಲವರ ಅಭಿಪ್ರಾಯ. ವ್ಯಭಿಚಾರಕ್ಕಿರುವ ನಿಶ್ಚಿತ ಶಿಕ್ಷಾನಿಯಮವು ಅವತೀರ್ಣಗೊಂಡದ್ದು ಇದರ ನಂತರವಾಗಿತ್ತು.
(17) ಅಜ್ಞಾನದಿಂದಾಗಿ ಪಾಪವೆಸಗಿ, ಬಳಿಕ ಶೀಘ್ರದಲ್ಲೇ ಪಶ್ಚಾತ್ತಾಪಪಡುವವರ ಪಶ್ಚಾತ್ತಾಪವನ್ನು ಸ್ವೀಕರಿಸುವ ಬಾಧ್ಯತೆಯನ್ನಷ್ಟೇ ಅಲ್ಲಾಹು ವಹಿಸಿಕೊಂಡಿರುವನು. ಅಂಥಹವರ ಪಶ್ಚಾತ್ತಾಪವನ್ನು ಅಲ್ಲಾಹು ಸ್ವೀಕರಿಸುವನು. ಅಲ್ಲಾಹು ಎಲ್ಲವನ್ನು ಅರಿಯುವವನೂ ಯುಕ್ತಿಪೂರ್ಣನೂ ಆಗಿರುವನು.
(18) ಪಶ್ಚಾತ್ತಾಪವೆಂಬುದು ಪಾಪವೆಸಗುತ್ತಾ ಇದ್ದು, ಮರಣಾಸನ್ನವಾಗುವಾಗ ‘ನಾನು ಪಶ್ಚಾತ್ತಾಪಪಟ್ಟಿರುವೆನು’ ಎಂದು ಹೇಳುವವರಿಗೆ ಇರುವಂತದ್ದಲ್ಲ. ಸತ್ಯನಿಷೇಧಿಗಳಾಗಿಯೇ ಮರಣ ಹೊಂದುವವರಿಗೂ ಇರುವಂತದ್ದಲ್ಲ. ಅಂತಹವರಿಗೆ ನಾವು ಯಾತನಾಮಯವಾದ ಶಿಕ್ಷೆಯನ್ನು ಸಿದ್ಧಗೊಳಿಸಿರುವೆವು.
(19) ಓ ಸತ್ಯವಿಶ್ವಾಸಿಗಳೇ! ಸ್ತ್ರೀಯರನ್ನು ಬಲವಂತದಿಂದ ವಾರೀಸು ಸೊತ್ತನ್ನಾಗಿ ಪಡೆಯಲು ನಿಮಗೆ ಅನುಮತಿಯಿಲ್ಲ.(109) ಅವರಿಗೆ (ಪತ್ನಿಯರಿಗೆ) ನೀವು ಕೊಟ್ಟಿರುವುದರಲ್ಲಿ ಒಂದಂಶವನ್ನು ಹಿಂದಕ್ಕೆ ಪಡೆಯುವ ಸಲುವಾಗಿ ನೀವು ಅವರನ್ನು ತಡೆದಿರಿಸದಿರಿ.(110) ಅವರು ಯಾವುದಾದರೂ ಬಹಿರಂಗ ನೀಚಕೃತ್ಯವೆಸಗಿದ ಹೊರತು. ನೀವು ಅವರೊಂದಿಗೆ ಸಭ್ಯವಾಗಿ ವರ್ತಿಸಿರಿ. ನೀವು ಅವರನ್ನು ಅಸಹ್ಯಪಡುತ್ತೀರಿ ಎಂದಾದರೆ ಬಹುಶಃ ನೀವು ಅಸಹ್ಯಪಡುವ ವಸ್ತುವೊಂದರಲ್ಲಿ ಅಲ್ಲಾಹು ಯಥೇಷ್ಟ ಒಳಿತುಗಳನ್ನು ಇಟ್ಟಿರಲೂಬಹುದು.
109. ಅಜ್ಞಾನಕಾಲದಲ್ಲಿ ಅರಬರ ಪೈಕಿ ಯಾರಾದರೂ ಮರಣಹೊಂದಿದರೆ ಅವರ ಸೊತ್ತಿನೊಂದಿಗೆ ಅವರ ಪತ್ನಿಯರನ್ನೂ ಕೂಡ ವಾರೀಸುದಾರರು ಹಂಚಿಕೊಳ್ಳುತ್ತಿದ್ದರು.
110. ಪತ್ನಿಯರನ್ನು ಸತಾಯಿಸುವುದು ಮತ್ತು ಅವರು ವಿವಾಹ ವಿಚ್ಛೇದನೆ ಬೇಡುವಾಗ, ಮಹ್ರನ್ನು ಮರಳಿ ನೀಡಿದರೆ ಮಾತ್ರ ವಿಚ್ಛೇದನೆ ನೀಡುವೆನೆಂದು ಹಟಹಿಡಿಯುವುದು ಮುಂತಾದ ಕೆಟ್ಟ ಸಂಪ್ರದಾಯಗಳನ್ನು ಕುರ್‌ಆನ್ ವಿರೋಧಿಸುತ್ತದೆ.
(20) ಓರ್ವ ಪತ್ನಿಯ ಸ್ಥಾನದಲ್ಲಿ ಇನ್ನೋರ್ವ ಪತ್ನಿಯನ್ನು ಬದಲಾಯಿಸುವುದಾದರೆ ಅವರಲ್ಲಿ ಒಬ್ಬಳಿಗೆ ನೀವು ಸಂಪತ್ತಿನ ರಾಶಿಯನ್ನೇ ಕೊಟ್ಟಿದ್ದರೂ ಅದರಿಂದ ಏನನ್ನೂ ಹಿಂದಕ್ಕೆ ಪಡೆಯದಿರಿ. ಸುಳ್ಳಾರೋಪ ಹೊರಿಸಿ ಮತ್ತು ಸ್ಪಷ್ಟವಾದ ಪಾಪದೊಂದಿಗೆ ನೀವದನ್ನು ಹಿಂದಕ್ಕೆ ಪಡೆಯುವಿರಾ?
(21) ನೀವು ಪರಸ್ಪರ ಒಂದಾಗಿರುವಾಗ ಮತ್ತು ಅವರು ನಿಮ್ಮಿಂದ ಬಲಿಷ್ಠವಾದ ಕರಾರೊಂದನ್ನು ಪಡೆದಿರುವಾಗ ನೀವು ಹೇಗೆ ತಾನೇ ಅದನ್ನು ಹಿಂದಕ್ಕೆ ಪಡೆಯುವಿರಿ?
(22) ನಿಮ್ಮ ತಂದೆಯಂದಿರು ವರಿಸಿದ ಸ್ತ್ರೀಯರನ್ನು ನೀವು ವಿವಾಹವಾಗದಿರಿ. ಈ ಹಿಂದೆ ಗತಿಸಿಹೋಗಿರುವುದರ ಹೊರತು. ಖಂಡಿತವಾಗಿಯೂ ಅದೊಂದು ನೀಚಕೃತ್ಯವೂ ಅಸಹ್ಯ ಪ್ರವೃತ್ತಿಯೂ ಕೆಟ್ಟ ಮಾರ್ಗವೂ ಆಗಿದೆ.
(23) ನಿಮ್ಮ ತಾಯಂದಿರು, ಪುತ್ರಿಯರು, ಸಹೋದರಿಯರು, ಪಿತೃ ಸಹೋದರಿಯರು, ಮಾತೃ ಸಹೋದರಿಯರು, ಸಹೋದರ ಪುತ್ರಿಯರು, ಸಹೋದರಿ ಪುತ್ರಿಯರು, ನಿಮಗೆ ಮೊಲೆಯುಣಿಸಿದ ಸಾಕುತಾಯಂದಿರು, ಸ್ತನಪಾನ ಸಂಬಂಧದ ನಿಮ್ಮ ಸಹೋದರಿಯರು, ನಿಮ್ಮ ಪತ್ನಿಯರ ತಾಯಂದಿರು (ಮುಂತಾದವರನ್ನು ವಿವಾಹವಾಗುವುದು) ನಿಮಗೆ ನಿಷಿದ್ಧಗೊಳಿಸಲಾಗಿದೆ. ನೀವು ಲೈಂಗಿಕ ಸಂಪರ್ಕ ಮಾಡಿರುವ ನಿಮ್ಮ ಪತ್ನಿಯರ ಮಕ್ಕಳಾಗಿ ನಿಮ್ಮ ಪೋಷಣೆಯಲ್ಲಿರುವ ಸಾಕುಪುತ್ರಿಯರನ್ನು (ವಿವಾಹವಾಗುವುದು ನಿಮಗೆ ನಿಷಿದ್ಧಗೊಳಿಸಲಾಗಿದೆ). ಇನ್ನು ನೀವು ಅವರೊಂದಿಗೆ (ಪತ್ನಿಯರೊಂದಿಗೆ) ಲೈಂಗಿಕ ಸಂಪರ್ಕ ಮಾಡಿರದಿದ್ದರೆ (ಅವರ ಮಕ್ಕಳನ್ನು ವಿವಾಹವಾಗುವುದರಲ್ಲಿ) ನಿಮಗೆ ದೋಷವಿಲ್ಲ. ನಿಮ್ಮ ಬೆನ್ನೆಲುಬಿನಿಂದ ಜನಿಸಿದ ಪುತ್ರರ ಪತ್ನಿಯರು ಕೂಡ (ನಿಮಗೆ ನಿಷಿದ್ಧವಾಗಿರುವರು). ಇಬ್ಬರು ಸಹೋದರಿಯರನ್ನು ಏಕಕಾಲದಲ್ಲಿ ಪತ್ನಿಯರನ್ನಾಗಿ ಮಾಡುವುದನ್ನೂ (ನಿಷಿದ್ಧಗೊಳಿಸಲಾಗಿದೆ). ಮುಂಚೆ ಗತಿಸಿಹೋಗಿರುವುದರ ಹೊರತು. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(24) (ಇತರರ) ವೈವಾಹಿಕ ಬಂಧನದಲ್ಲಿರುವ ಸ್ತ್ರೀಯರು ಕೂಡ (ನಿಮಗೆ ನಿಷಿದ್ಧವಾಗಿರುವರು). ನಿಮ್ಮ ಕೈಗಳು ಒಡೆತನದಲ್ಲಿರಿಸಿರುವವರ (ಗುಲಾಮಸ್ತ್ರೀಯರ) ಹೊರತು.(111) ಇದು ನಿಮ್ಮ ಮೇಲಿರುವ ಅಲ್ಲಾಹುವಿನ ನಿಯಮವಾಗಿದೆ. ನೀವು ವೈವಾಹಿಕ ಬದುಕು ಸಾಗಿಸುವ ಉದ್ದೇಶ ಹೊಂದಿದವರೂ, ನೀಚಕೃತ್ಯವನ್ನು ಬಯಸದವರೂ ಆಗಿರುವ ರೀತಿಯಲ್ಲಿ ನಿಮ್ಮ ಸಂಪತ್ತನ್ನು (ಮಹ್ರ್ ಆಗಿ) ನೀಡುವ ಮೂಲಕ ಇವರ ಹೊರತಾಗಿರುವ ಸ್ತ್ರೀಯರೊಂದಿಗೆ (ವಿವಾಹ ಸಂಬಂಧವನ್ನು) ಅರಸುವುದು ನಿಮಗೆ ಧರ್ಮಸಮ್ಮತವಾಗಿದೆ. ತರುವಾಯ ನೀವು ಅವರಿಂದ ಸುಖವನ್ನು ಪಡೆದರೆ ಅವರ ವಧುದಕ್ಷಿಣೆಯನ್ನು ಒಂದು ಬಾಧ್ಯತೆ ಎಂಬ ನೆಲೆಯಲ್ಲಿ ಕೊಟ್ಟುಬಿಡಿರಿ. ಬಾಧ್ಯತೆ (ವಧುದಕ್ಷಿಣೆ) ನಿಶ್ಚಯಿಸಿದ ಬಳಿಕ ನೀವಿಬ್ಬರು ಪರಸ್ಪರ ತೃಪ್ತಿಯೊಂದಿಗೆ ಏನಾದರೂ ವಿನಾಯಿತಿ ತೋರುವುದಾದರೆ ನಿಮ್ಮ ಮೇಲೆ ಯಾವುದೇ ದೋಷವಿಲ್ಲ. ಖಂಡಿತವಾಗಿಯೂ ಅಲ್ಲಾಹು ಎಲ್ಲವನ್ನೂ ಅರಿಯುವವನೂ ಯುಕ್ತಿಪೂರ್ಣನೂ ಆಗಿರುವನು.
111. ಯುದ್ಧದಲ್ಲಿ ಶತ್ರುಗಳ ಪತ್ನಿಯರು ಸೆರೆಯಾಳುಗಳಾಗಿ ಹಿಡಿಯಲ್ಪಟ್ಟರೆ ಮತ್ತು ಅವರು ಮುಸ್ಲಿಮರ ಗುಲಾಮರಾದರೆ ಮುಸ್ಲಿಮರಿಗೆ ಅವರನ್ನು ಪತ್ನಿಯರಾಗಿ ಮಾಡಿಕೊಳ್ಳಬಹುದೆಂದು ಇದರಿಂದ ಮನವರಿಕೆಯಾಗುತ್ತದೆ.
(25) ಸತ್ಯವಿಶ್ವಾಸಿನಿಯರಾದ ಸ್ವತಂತ್ರ ಸ್ತ್ರೀಯರನ್ನು ವಿವಾಹವಾಗಲು ನಿಮ್ಮ ಪೈಕಿ ಯಾರಿಗಾದರೂ ಆರ್ಥಿಕವಾಗಿ ಸಾಧ್ಯವಾಗದಿದ್ದರೆ ನಿಮ್ಮ ಕೈಗಳು ಒಡೆತನದಲ್ಲಿರಿಸಿರುವ ಸತ್ಯವಿಶ್ವಾಸಿನಿಯರಾದ ಗುಲಾಮಸ್ತ್ರೀಯರ ಪೈಕಿ ಯಾರನ್ನಾದರೂ (ಪತ್ನಿಯರನ್ನಾಗಿ ಸ್ವೀಕರಿಸಬಹುದು). ಅಲ್ಲಾಹು ನಿಮ್ಮ ವಿಶ್ವಾಸದ ಬಗ್ಗೆ ಚೆನ್ನಾಗಿ ಅರಿಯುವವನಾಗಿರುವನು. ನಿಮ್ಮಲ್ಲಿ ಕೆಲವರು ಕೆಲವರಿಂದ(112) ಉದ್ಭವಿಸಿದವರಾಗಿರುವಿರಿ. ಅವರನ್ನು (ಆ ಗುಲಾಮ ಸ್ತ್ರೀಯರನ್ನು) ಅವರ ಪೋಷಕರ ಅನುಮತಿಯೊಂದಿಗೆ ವಿವಾಹವಾಗಿರಿ. ಅವರ ವಧುದಕ್ಷಿಣೆಯನ್ನು ಶಿಷ್ಟಾಚಾರಕ್ಕನುಸಾರವಾಗಿ ಅವರಿಗೆ ನೀಡಿರಿ. ಅವರು ನೀಚಕೃತ್ಯದಲ್ಲಿ ಭಾಗಿಯಾಗದವರೂ ಗುಪ್ತಸಂಗಾತಿಗಳನ್ನು ಹೊಂದಿರದವರೂ ಆಗಿರುವ ಸುಶೀಲೆಯರಾಗಿರಬೇಕು. ತರುವಾಯ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಬಳಿಕ ನೀಚಕೃತ್ಯದಲ್ಲಿ ಭಾಗಿಯಾಗುವುದಾದರೆ ಸ್ವತಂತ್ರ ಸ್ತ್ರೀಯರಿಗಿರುವ ಶಿಕ್ಷೆಯ ಅರ್ಧಭಾಗವು ಅವರಿಗಿರುವುದು.(113) ಇದು (ದಾಸಿಯರನ್ನು ವಿವಾಹವಾಗುವ ಅನುಮತಿಯು) ನಿಮ್ಮ ಪೈಕಿ (ವಿವಾಹವಾಗದಿದ್ದರೆ) ಕಷ್ಟವಾಗಬಹುದೆಂದು ಭಯಪಡುವವರಿಗಾಗಿದೆ. ಆದರೆ ನೀವು ಸಹನೆ ವಹಿಸುವುದಾದರೆ ಅದು ನಿಮಗೆ ಅತ್ಯುತ್ತಮವಾಗಿದೆ.(114) ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
112. ಗುಲಾಮಗಿರಿಯು ಮನುಷ್ಯನ ಮೇಲೆ ಹೇರಲಾಗಿರುವ ಪದ್ಧತಿಯಾಗಿದೆ. ಮನುಷ್ಯರೆಂಬ ನೆಲೆಯಲ್ಲಿ ಗುಲಾಮರು ಮತ್ತು ಸ್ವತಂತ್ರರು ಪರಸ್ಪರ ಸಹೋದರರಾಗಿದ್ದಾರೆ.
113. ಗುಲಾಮ ಸ್ತ್ರೀ ತಪ್ಪು ಮಾಡಲು ನಿರ್ಬಂಧಿತಳಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಅವಳಿಗೆ ಶಿಕ್ಷೆಯಲ್ಲಿ ರಿಯಾಯಿತಿ ನೀಡಲಾಗಿರಬಹುದು.
114. ಗುಲಾಮ ಸ್ತ್ರೀಯರೊಂದಿಗಿರುವ ವಿವಾಹವನ್ನು ಕುರ್‌ಆನ್ ಹೆಚ್ಚಾಗಿ ಪ್ರೋತ್ಸಾಹಿಸದಿರುವುದು ಇನ್ನೊಬ್ಬರ ದಾಸ್ಯ ಮಾಡಲು ನಿರ್ಬಂಧಿತಳಾಗಿರುವ ಓರ್ವ ಹೆಣ್ಣಿಗೆ ದಾಂಪತ್ಯ ಜೀವನದ ಹಕ್ಕುಬಾಧ್ಯತೆಗಳನ್ನು ಪೂರ್ಣವಾಗಿ ಈಡೇರಿಸುವುದು ಕಷ್ಟವಾಗುತ್ತದೆ ಎಂಬ ಕಾರಣದಿಂದಾಗಿರಬಹುದು.
(26) ಅಲ್ಲಾಹು ನಿಮಗೆ (ವಿಷಯಗಳನ್ನು) ವಿವರಿಸಿಕೊಡಲು ಮತ್ತು ನಿಮ್ಮ ಪೂರ್ವಿಕರ ಉತ್ತಮ ಕ್ರಮಗಳನ್ನು ನಿಮಗೆ ತೋರಿಸಿಕೊಡಲು ಹಾಗೂ ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಲು ಇಚ್ಛಿಸುತ್ತಿರುವನು.(115) ಅಲ್ಲಾಹು ಎಲ್ಲವನ್ನೂ ಅರಿಯುವವನೂ ಯುಕ್ತಿಪೂರ್ಣನೂ ಆಗಿರುವನು.
115. ಅಲ್ಲಾಹು ತನ್ನ ವಿಧಿ ನಿಷೇಧಗಳ ಮೂಲಕ ಮನುಷ್ಯರಿಗೆ ಭಾರವನ್ನು ಹೊರಿಸುತ್ತಿಲ್ಲ. ಬದಲಾಗಿ ಉತ್ತಮವಾದ ಜೀವನ ಮಾದರಿಯನ್ನು ತೋರಿಸಿ ಬದುಕನ್ನು ಧನ್ಯವಾಗಿಸಲು ಮತ್ತು ಸುಗಮಗೊಳಿಸಲು ನೆರವಾಗುತ್ತಿರುವನು.
(27) ಅಲ್ಲಾಹು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಲು ಇಚ್ಛಿಸುತ್ತಿರುವನು. ಆದರೆ ಸ್ವೇಚ್ಛೆಗಳನ್ನು ಅನುಸರಿಸಿ ಜೀವಿಸುವವರು ನೀವು ಗರಿಷ್ಠ ಪ್ರಮಾಣದಲ್ಲಿ (ಸನ್ಮಾರ್ಗದಿಂದ) ತಪ್ಪಿಹೋಗಬೇಕೆಂದು ಬಯಸುತ್ತಿರುವರು.
(28) ಅಲ್ಲಾಹು ನಿಮಗೆ ಭಾರವನ್ನು ಹಗುರಗೊಳಿಸಲು ಬಯಸುತ್ತಿರುವನು. ಮನುಷ್ಯನನ್ನು ಬಲಹೀನನಾಗಿ ಸೃಷ್ಟಿಸಲಾಗಿದೆ.
(29) ಓ ಸತ್ಯವಿಶ್ವಾಸಿಗಳೇ! ನೀವು ಪರಸ್ಪರ ಸಂತೃಪ್ತಿಯೊಂದಿಗೆ ನಡೆಸುವ ವ್ಯವಹಾರದ ಮೂಲಕವಲ್ಲದೆ ನಿಮ್ಮ ಸಂಪತ್ತುಗಳನ್ನು ನೀವು ಪರಸ್ಪರ ಅನ್ಯಾಯವಾಗಿ ತಿನ್ನದಿರಿ. ನೀವು ನಿಮ್ಮನ್ನೇ ವಧಿಸದಿರಿ.(116) ಖಂಡಿತವಾಗಿಯೂ ಅಲ್ಲಾಹು ನಿಮ್ಮೊಂದಿಗೆ ಅಪಾರ ಕರುಣೆಯುಳ್ಳವನಾಗಿರುವನು.
116. ಸತ್ಯವಿಶ್ವಾಸಿಗಳು ಒಂದೇ ಶರೀರದಂತೆ ಐಕ್ಯದೊಂದಿಗೆ ಬಾಳಬೇಕಾದವರು ಆಗಿದ್ದಾರೆ. ಆದ್ದರಿಂದ ಓರ್ವ ವಿಶ್ವಾಸಿ ತನ್ನ ಸಹೋದರನನ್ನು ಕೊಲ್ಲುವುದು ಸ್ವತಃ ತನ್ನನ್ನೇ ಕೊಲ್ಲುವುದಕ್ಕೆ ಸಮಾನವಾಗಿದೆ. ‘ನೀವು ನಿಮ್ಮನ್ನೇ ವಧಿಸದಿರಿ’ ಎಂದು ಕುರ್‌ಆನ್ ಹೇಳಿರುವುದು ಈ ಅರ್ಥದಲ್ಲಾಗಿದೆ.
(30) ಯಾರು ಅತಿಕ್ರಮವಾಗಿ ಮತ್ತು ಅನ್ಯಾಯವಾಗಿ ಅದನ್ನು ಮಾಡುವನೋ ಅವನನ್ನು ನಾವು ನರಕಾಗ್ನಿಯಲ್ಲಿ ಉರಿಸುವೆವು. ಅದು ಅಲ್ಲಾಹುವಿಗೆ ಅತಿ ಸುಲಭವಾದುದಾಗಿದೆ.
(31) ನಿಮಗೆ ವಿರೋಧಿಸಲಾಗಿರುವ ಮಹಾಪಾಪಗಳನ್ನು ನೀವು ವರ್ಜಿಸುವುದಾದರೆ ನಿಮ್ಮ ಲೋಪ ದೋಷಗಳನ್ನು ನಾವು ನಿಮ್ಮಿಂದ ಅಳಿಸಿಹಾಕುವೆವು ಮತ್ತು ಆದರಣೀಯವಾದ ಒಂದು ಸ್ಥಾನದಲ್ಲಿ ನಾವು ನಿಮ್ಮನ್ನು ಪ್ರವೇಶಗೊಳಿಸುವೆವು.
(32) ಅಲ್ಲಾಹು ನಿಮ್ಮ ಪೈಕಿ ಕೆಲವರಿಗೆ ಇತರ ಕೆಲವರಿಗಿಂತಲೂ ಅಧಿಕವಾಗಿ ನೀಡಿದ ಅನುಗ್ರಹಗಳಿಗಾಗಿ ನೀವು ಹಂಬಲಿಸದಿರಿ.(117) ಪುರುಷರು ಸಂಪಾದಿಸಿರುವುದರ ಪಾಲು ಅವರಿಗಿದೆ. ಸ್ತ್ರೀಯರು ಸಂಪಾದಿಸಿರುವುದರ ಪಾಲು ಅವರಿಗಿದೆ. ಅಲ್ಲಾಹುವಿನೊಂದಿಗೆ ಅವನ ಔದಾರ್ಯದಿಂದ ಬೇಡಿಕೊಳ್ಳಿರಿ. ಖಂಡಿತವಾಗಿಯೂ ಅಲ್ಲಾಹು ಸರ್ವ ವಿಷಯಗಳ ಬಗ್ಗೆಯೂ ಅರಿವುಳ್ಳವನಾಗಿರುವನು.
117. ಇತರರ ಸಂಪಾದನೆಯ ಬಗ್ಗೆ ಇರುವ ಅಸೂಯೆ ಮತ್ತು ಅದರಿಂದ ಒಂದು ಭಾಗವನ್ನು ತನ್ನದಾಗಿಸುವ ದುರಾಸೆ ಅನೇಕ ಅತಿಕ್ರಮಗಳಿಗೂ ಆಕ್ರಮಣಗಳಿಗೂ ಪ್ರೇರಣೆ ನೀಡುತ್ತದೆ.
(33) ಮಾತಾಪಿತರು ಮತ್ತು ನಿಕಟ ಸಂಬಂಧಿಕರು ಬಿಟ್ಟುಹೋಗಿರುವ ಸಂಪತ್ತಿನಲ್ಲಿ ಪ್ರತಿಯೊಬ್ಬನಿಗೂ ನಾವು ಹಕ್ಕುದಾರರನ್ನು ನಿಶ್ಚಯಿಸಿರುವೆವು. ನಿಮ್ಮ ಬಲಗೈಗಳು ಸಂಬಂಧ ಸ್ಥಾಪಿಸಿದವರಾರೋ ಅವರಿಗೆ ಅವರ ಪಾಲನ್ನು ನೀಡಿರಿ.(118) ಖಂಡಿತವಾಗಿಯೂ ಅಲ್ಲಾಹು ಸರ್ವ ವಿಷಯಗಳ ಮೇಲೂ ಸಾಕ್ಷಿಯಾಗಿರುವನು.
118. ಪರಸ್ಪರ ಬಲಗೈಗಳನ್ನು ಚಾಚಿ ಹಸ್ತಲಾಘವ ಮಾಡುವ ಮೂಲಕ ಅರಬ್ ಜನರು ಕರಾರುಗಳನ್ನು ದೃಢೀಕರಿಸುತ್ತಿದ್ದರು. ಹೀಗೆ ವಿವಾಹ ಒಪ್ಪಂದ ಮಾಡಿಕೊಂಡವರಿಗೆ (ಪತಿಪತ್ನಿಯರಿಗೆ) ನೀವು ಸಂಪತ್ತಿನಲ್ಲಿ ಹಕ್ಕು ನೀಡಬೇಕೆಂದು ಕೆಲವು ವ್ಯಾಖ್ಯಾನಕಾರರ ಅಭಿಪ್ರಾಯವಾಗಿದೆ. ಸ್ನೇಹ ಸಂಬಂಧದ ಅಥವಾ ಧಾರ್ಮಿಕ ಸಂಬಂಧದ ಬುನಾದಿಯಲ್ಲಿ ಓರ್ವನು ಮತ್ತೋರ್ವನಿಗೆ ತನ್ನ ಸಂಪತ್ತಿನಲ್ಲಿ ಹಕ್ಕು ನೀಡುವೆನೆಂದು ಕರಾರು ಮಾಡುವ ಒಂದು ಸಂಪ್ರದಾಯವಿತ್ತು. ಇಲ್ಲಿ ಪ್ರಸ್ತಾಪಿಸಿರುವುದು ಅದರ ಕುರಿತಾಗಿದೆ ಮತ್ತು ಈ ಹಕ್ಕು ವಾರೀಸು ಹಕ್ಕಿನ ನಿಯಮಗಳು ಅವತೀರ್ಣಗೊಳ್ಳುವುದರೊಂದಿಗೆ ರದ್ದಾಗಿದೆಯೆಂದು ಹೆಚ್ಚಿನ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿರುವರು.
(34) ಅಲ್ಲಾಹು ಮನುಷ್ಯರ ಪೈಕಿ ಒಂದು ವರ್ಗವನ್ನು ಇನ್ನೊಂದು ವರ್ಗದವರಿಗಿಂತ ಹೆಚ್ಚು ಸಾಮರ್ಥ್ಯವುಳ್ಳವರಾಗಿ ಮಾಡಿರುವುದರಿಂದ ಮತ್ತು (ಪುರುಷರು) ತಮ್ಮ ಧನವನ್ನು ವ್ಯಯಿಸುವುದರಿಂದ ಪುರುಷರು ಸ್ತ್ರೀಯರ ಮೇಲೆ ನಿಯಂತ್ರಣಾಧಿಕಾರ ಹೊಂದಿದವರಾಗಿರುವರು. ಆದ್ದರಿಂದ ಉತ್ತಮ ಸ್ತ್ರೀಯರು ಅನುಸರಣಾಶೀಲವುಳ್ಳವರೂ ಅಲ್ಲಾಹು ಸಂರಕ್ಷಿಸಿದ ಪ್ರಕಾರ (ಪುರುಷರ) ಅನುಪಸ್ಥಿತಿಯಲ್ಲಿ (ಸಂರಕ್ಷಿಸಬೇಕಾದುದೆಲ್ಲವನ್ನೂ) ಸಂರಕ್ಷಿಸುವವರೂ ಆಗಿರುವರು. ಧಿಕ್ಕಾರ ತೋರುವರೆಂದು ನೀವು ಭಯಪಡುವ ಸ್ತ್ರೀಯರಿಗೆ ಉಪದೇಶ ನೀಡಿರಿ, ಶಯನಗೃಹದಲ್ಲಿ ಅವರನ್ನು ದೂರವಿರಿಸಿರಿ ಮತ್ತು ಅವರಿಗೆ ಹೊಡೆಯಿರಿ.(119) ತರುವಾಯ ಅವರು ನಿಮ್ಮನ್ನು ಅನುಸರಿಸುವುದಾದರೆ ಅವರಿಗೆ ವಿರುದ್ಧವಾಗಿ ಯಾವ ಮಾರ್ಗವನ್ನೂ ಅರಸದಿರಿ. ಖಂಡಿತವಾಗಿಯೂ ಅಲ್ಲಾಹು ಉನ್ನತನೂ ಮಹಾನನೂ ಆಗಿರುವನು.
119. ಗಾಯವಾಗದಂತೆ ಹಗುರವಾಗಿ ಹೊಡೆಯಬೇಕೆಂದು, ಮುಖಕ್ಕೆ ಹೊಡೆಯಬಾರದೆಂದು ಪ್ರವಾದಿ(ಸ) ರವರ ವಚನಗಳು ಹೇಳುತ್ತವೆ.
(35) ಇನ್ನು ಅವರು (ದಂಪತಿಗಳು) ಪರಸ್ಪರ ಬೇರ್ಪಡುವರೆಂದು ನೀವು ಭಯಪಡುವುದಾದರೆ ಅವನ ಮನೆಯವರಿಂದ ಒಬ್ಬ ಮಧ್ಯಸ್ಥಗಾರನನ್ನೂ, ಅವಳ ಮನೆಯವರಿಂದ ಒಬ್ಬ ಮಧ್ಯಸ್ಥಗಾರನನ್ನೂ ನಿಶ್ಚಯಿಸಿರಿ. ಅವರಿಬ್ಬರೂ ಸಾಮರಸ್ಯವನ್ನು ಬಯಸುವುದಾದರೆ ಅಲ್ಲಾಹು ಅವರ ಮಧ್ಯೆ ಹೊಂದಾಣಿಕೆಯನ್ನುಂಟು ಮಾಡುವನು. ಖಂಡಿತವಾಗಿಯೂ ಅಲ್ಲಾಹು ಸರ್ವಜ್ಞನೂ ಸೂಕ್ಷ್ಮಜ್ಞಾನಿಯೂ ಆಗಿರುವನು.
(36) ನೀವು ಅಲ್ಲಾಹುವನ್ನು ಆರಾಧಿಸಿರಿ. ಅವನೊಂದಿಗೆ ಏನನ್ನೂ ಸಹಭಾಗಿಯನ್ನಾಗಿ ಮಾಡದಿರಿ ಮತ್ತು ಮಾತಾಪಿತರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಿರಿ. ಸಂಬಂಧಿಕರೊಂದಿಗೆ, ಅನಾಥರೊಂದಿಗೆ, ಬಡವರೊಂದಿಗೆ, ಕುಟುಂಬ ಸಂಬಂಧವಿರುವ ನೆರೆಹೊರೆಯವರೊಂದಿಗೆ, ಇತರ ನೆರೆಹೊರೆಯವರೊಂದಿಗೆ, ಸಹವರ್ತಿಗಳೊಂದಿಗೆ, ದಾರಿಹೋಕರೊಂದಿಗೆ ಮತ್ತು ನಿಮ್ಮ ಬಲಗೈಗಳು ಅಧೀನದಲ್ಲಿರಿಸಿದ ಗುಲಾಮರೊಂದಿಗೆ ಸದ್ವರ್ತನೆ ತೋರಿರಿ. ದರ್ಪ ಮತ್ತು ದುರಭಿಮಾನವಿರುವ ಯಾರನ್ನೂ ಅಲ್ಲಾಹು ಮೆಚ್ಚಲಾರನು.
(37) ಜಿಪುಣತೆ ತೋರಿಸುವವರು, ಜಿಪುಣತೆ ತೋರಿಸಲು ಜನರನ್ನು ಪ್ರೇರೇಪಿಸುವವರು ಮತ್ತು ಅಲ್ಲಾಹು ತನ್ನ ಔದಾರ್ಯದಿಂದ ತಮಗೆ ನೀಡಿದ ಅನುಗ್ರಹವನ್ನು ಮರೆಮಾಚುವವರು ಯಾರೋ ಅಂತಹ ಕೃತಘ್ನರಿಗೆ ನಾವು ಅಪಮಾನಕರವಾದ ಶಿಕ್ಷೆಯನ್ನು ಸಿದ್ಧಗೊಳಿಸಿರುವೆವು.
(38) ತೋರಿಕೆಗಾಗಿ ತಮ್ಮ ಸಂಪತ್ತನ್ನು ವ್ಯಯಿಸುವವರು ಮತ್ತು ಅಲ್ಲಾಹುವಿನಲ್ಲಾಗಲಿ ಅಂತ್ಯದಿನದಲ್ಲಾಗಲಿ ವಿಶ್ವಾಸವಿಲ್ಲದವರು ಯಾರೋ (ಅವರು ಸೈತಾನನ ಜೊತೆಗಾರರಾಗಿರುವರು). ಯಾರ ಜೊತೆಗಾರನು ಸೈತಾನನಾಗಿರುವನೋ ಅವನು ಎಷ್ಟು ಕೆಟ್ಟ ಜೊತೆಗಾರನು!
(39) ಅವರು ಅಲ್ಲಾಹುವಿನಲ್ಲಿಯೂ, ಅಂತ್ಯದಿನದಲ್ಲಿಯೂ ವಿಶ್ವಾಸವಿಡುವವರಾಗಿರುತ್ತಿದ್ದರೆ ಮತ್ತು ಅಲ್ಲಾಹು ಅವರಿಗೆ ನೀಡಿದವುಗಳಿಂದ ವ್ಯಯಿಸುವವರಾಗಿರುತ್ತಿದ್ದರೆ ಅವರಿಗಿರುವ ನಷ್ಟವಾದರೂ ಏನು? ಅಲ್ಲಾಹು ಅವರ ಬಗ್ಗೆ ಬಹಳ ಚೆನ್ನಾಗಿ ಅರಿತಿರುವನು.
(40) ಖಂಡಿತವಾಗಿಯೂ ಅಲ್ಲಾಹು ಒಂದು ಅಣುವಿನ ತೂಕದಷ್ಟೂ ಅನ್ಯಾಯವೆಸಗಲಾರನು. ಒಳಿತೇನಾದರೂ ಇರುವುದಾದರೆ ಅವನದನ್ನು ಇಮ್ಮಡಿಗೊಳಿಸಿ ಕೊಡುವನು ಮತ್ತು ತನ್ನ ವತಿಯ ಮಹಾ ಪ್ರತಿಫಲವನ್ನೂ ದಯಪಾಲಿಸುವನು.
(41) ನಾವು ಪ್ರತಿಯೊಂದು ಸಮುದಾಯದಿಂದಲೂ ಒಬ್ಬೊಬ್ಬ ಸಾಕ್ಷಿಯನ್ನು ತರುವಾಗ ಮತ್ತು ಇವರ ಮೇಲೆ ಸಾಕ್ಷಿಯಾಗಿ ತಮ್ಮನ್ನು ತರುವಾಗ ಸ್ಥಿತಿ ಹೇಗಿರಬಹುದು!
(42) ಭೂಮಿಯನ್ನು ತಮ್ಮೊಂದಿಗೆ ಸಮತಟ್ಟಾಗಿಸಲಾಗುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಅವಿಶ್ವಾಸವಿಟ್ಟವರು ಮತ್ತು ಸಂದೇಶವಾಹಕರನ್ನು ಧಿಕ್ಕರಿಸಿದವರು ಅಂದು ಆಶಿಸುವರು. ಯಾವ ವಿಷಯವನ್ನೂ ಅಲ್ಲಾಹುವಿನಿಂದ ಮುಚ್ಚಿಡಲು ಅವರಿಗೆ ಸಾಧ್ಯವಾಗಲಾರದು.
(43) ಓ ಸತ್ಯವಿಶ್ವಾಸಿಗಳೇ! ಪಾನಮತ್ತರಾಗಿರುವ ಸ್ಥಿತಿಯಲ್ಲಿ ನೀವೇನು ಹೇಳುತ್ತಿರುವಿರೆಂಬ ಪ್ರಜ್ಞೆ ನಿಮಗುಂಟಾಗುವ ತನಕ ನೀವು ನಮಾಝನ್ನು ಸಮೀಪಿಸದಿರಿ. ಜನಾಬತ್‍ನಲ್ಲಿರುವಾಗ ನೀವು ಸ್ನಾನ ಮಾಡುವ ತನಕ (ನಮಾಝನ್ನು ಸಮೀಪಿಸದಿರಿ). ಆದರೆ ನೀವು ಹಾದು ಹೋಗುವವರಾಗಿರುವ ಹೊರತು.(120) ನೀವು ರೋಗಪೀಡಿತರಾಗಿದ್ದರೆ ಅಥವಾ ಯಾತ್ರಿಕರಾಗಿದ್ದರೆ ಅಥವಾ ನಿಮ್ಮಲ್ಲೊಬ್ಬನು ಮಲಮೂತ್ರ ವಿಸರ್ಜನೆ ಮಾಡಿ ಬರುವವನೋ, ಸ್ತ್ರೀಯರೊಂದಿಗೆ ಲೈಂಗಿಕ ಸಂಪರ್ಕ ಮಾಡಿದವನೋ(121) ಆಗಿದ್ದರೆ -ತರುವಾಯ (ಶುದ್ಧೀಕರಿಸಲು) ನಿಮಗೆ ನೀರು ಸಿಗದಿದ್ದರೆ- ನೀವು ಶುದ್ಧವಾಗಿರುವ ಭೂಮುಖವನ್ನು ಅರಸಿರಿ.(122) ತರುವಾಯ ಅದರಿಂದ ನಿಮ್ಮ ಮುಖಗಳನ್ನೂ ಕೈಗಳನ್ನೂ ಸವರಿರಿ. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಮನ್ನಿಸುವವನೂ ಕ್ಷಮಿಸುವವನೂ ಆಗಿರುವನು.
120. ‘ಜನಾಬತ್’ ಎಂದರೆ ಲೈಂಗಿಕ ಸಂಪರ್ಕ ಅಥವಾ ವೀರ್ಯಸ್ಖಲನದ ಮೂಲಕ ಉಂಟಾಗುವ ದೊಡ್ಡ ಅಶುದ್ಧಿಯಾಗಿದೆ. ದೊಡ್ಡ ಅಶುದ್ಧಿಯಿರುವ ವ್ಯಕ್ತಿ ನಮಾಝ್‍ನಲ್ಲಿ ಪ್ರವೇಶಿಸುವುದಾಗಲಿ ಮಸೀದಿಯಲ್ಲಿ ತಂಗುವುದಾಗಲಿ ಮಾಡಬಾರದು. ಆದರೆ ಮಸೀದಿಯ ಮೂಲಕ ಹಾದುಹೋಗಬೇಕಾಗಿ ಬಂದರೆ ಹಾದುಹೋಗಬಹುದು.
121. ‘ಲಾಮಸ’ ಎಂಬ ಪದದ ಭಾಷಾರ್ಥವು ಪರಸ್ಪರ ಸ್ಪರ್ಶಿಸಿದರು ಎಂದಾಗಿದೆ. ಇದು ಲೈಂಗಿಕ ಸಂಪರ್ಕಕ್ಕಿರುವ ಒಂದು ಆಲಂಕಾರಿಕ ಪ್ರಯೋಗವಾಗಿದೆ ಎಂದು 2:236-237 ವಚನಗಳಿಂದ ಗ್ರಹಿಸಬಹುದು.
122. ‘ತಯಮ್ಮುಮ್’ ಎಂದರೆ ವುದೂ ಮಾಡಲು ಅಥವಾ ಸ್ನಾನ ಮಾಡಲು ನೀರು ಸಿಗದ ಸಂದರ್ಭದಲ್ಲಿ ಮಾಡುವ ಶುದ್ಧೀಕರಣ ಪ್ರಕ್ರಿಯೆಯಾಗಿದೆ. ಶುದ್ಧವಾಗಿರುವ ನೆಲದ ಮೇಲೆ ಎರಡು ಅಂಗೈಗಳನ್ನು ಬಡಿದು ಅದರಿಂದ ಮುಖ ಮತ್ತು ಕೈಗಳನ್ನು ಸವರುವುದನ್ನು ತಯಮ್ಮುಮ್ ಎನ್ನಲಾಗುತ್ತದೆ.
(44) ಗ್ರಂಥದಿಂದ ಒಂದು ಪಾಲನ್ನು ನೀಡಲಾಗಿರುವವರೆಡೆಗೆ ತಾವು ನೋಡಿಲ್ಲವೇ? ಅವರು ದುರ್ಮಾರ್ಗವನ್ನು ಖರೀದಿಸುವವರೂ ನೀವು ದಾರಿಗೆಡಬೇಕೆಂದು ಆಶಿಸುವವರೂ ಆಗಿರುವರು.
(45) ನಿಮ್ಮ ಶತ್ರುಗಳ ಬಗ್ಗೆ ಅಲ್ಲಾಹು ಚೆನ್ನಾಗಿ ಅರಿತಿರುವನು. ರಕ್ಷಕನಾಗಿ ಅಲ್ಲಾಹು ಸಾಕು. ಸಹಾಯ ಮಾಡುವವನಾಗಿಯೂ ಅಲ್ಲಾಹು ಸಾಕು.
(46) ಯಹೂದರ ಪೈಕಿ ಕೆಲವರಿರುವರು. ಅವರು ವಚನಗಳನ್ನು ಅದರ ಸ್ಥಾನದಿಂದ ಸ್ಥಾನಾಂತರಗೊಳಿಸುತ್ತಿರುವರು. ತಮ್ಮ ನಾಲಗೆಗಳನ್ನು ತಿರುಚುತ್ತಲೂ ಧರ್ಮವನ್ನು ಆಕ್ಷೇಪಿಸುತ್ತಲೂ ಅವರು ‘ಸಮಿಅ್‌ನಾ ವಅಸೈನಾ’ ಮತ್ತು ‘ಇಸ್ಮಅ್ ಗೈರ ಮುಸ್ಮಅ್’ ಮತ್ತು ‘ರಾಇನಾ’ ಎಂದು ಹೇಳುವರು.(123) ‘ಸಮಿಅ್‌ನಾ ವಅತಅ್‌ನಾ’ (ನಾವು ಆಲಿಸಿದೆವು ಮತ್ತು ಅನುಸರಿಸಿದೆವು) ಮತ್ತು ‘ಇಸ್ಮಅ್’ (ಆಲಿಸಿರಿ) ಮತ್ತು ‘ಉನ್‍ಝುರ್‌ನಾ’ (ನಮ್ಮನ್ನು ಪರಿಗಣಿಸಿರಿ) ಎಂದು ಅವರು ಹೇಳಿರುತ್ತಿದ್ದರೆ ಅದು ಅವರ ಪಾಲಿಗೆ ಅತ್ಯುತ್ತಮವೂ ವಕ್ರತೆಯಿಲ್ಲದ್ದೂ ಆಗಿರುತ್ತಿತ್ತು. ಆದರೆ ಅವರ ನಿಷೇಧದ ಕಾರಣದಿಂದಾಗಿ ಅಲ್ಲಾಹು ಅವರನ್ನು ಶಪಿಸಿರುವನು. ಆದ್ದರಿಂದ ಅಲ್ಪವೇ ವಿನಾ ಅವರು ವಿಶ್ವಾಸವಿಡಲಾರರು.
123. ಪ್ರವಾದಿ(ಸ) ರವರು ಏನಾದರೂ ಆದೇಶಿಸಿದರೆ ಸತ್ಯವಿಶ್ವಾಸಿಗಳು ‘ಸಮಿಅ್‌ನಾ ವಅತಅ್‌ನಾ’ (ನಾವು ಆಲಿಸಿದೆವು ಮತ್ತು ಅನುಸರಿಸಿದೆವು) ಎಂದು ಹೇಳುತ್ತಿದ್ದರು. ಆದರೆ ಯಹೂದರು ಇದರಲ್ಲಿ ತಂತ್ರಪೂರ್ವಕವಾಗಿ ಬದಲಾವಣೆಯನ್ನು ತಂದು ‘ಸಮಿಅ್‌ನಾ ವಅಸೈನಾ’ (ನಾವು ಆಲಿಸಿದೆವು ಮತ್ತು ಧಿಕ್ಕರಿಸಿದೆವು) ಎಂದು ಹೇಳುತ್ತಾ ಪ್ರವಾದಿ(ಸ) ರವರನ್ನು ಮತ್ತು ಸತ್ಯವಿಶ್ವಾಸಿಗಳನ್ನು ಗೇಲಿ ಮಾಡುತ್ತಿದ್ದರು. ‘ಇಸ್ಮಅ್ ಗೈರ ಮುಸ್ಮಅ್’ ಎಂಬುದು ದ್ವಂದ್ವಾರ್ಥವುಳ್ಳ ಒಂದು ಪ್ರಾರ್ಥನೆಯಾಗಿದೆ. ಆಲಿಸಿರಿ, ಆಲಿಸಬಾರದ್ದನ್ನು ತಾವು ಆಲಿಸಲು ಹೇತುವುಂಟಾಗದಿರಲಿ ಎಂದೂ, ಆಲಿಸಿರಿ, ತಮಗೆ ಆಲಿಸಲು ಸಾಧ್ಯವಾಗದಿರಲಿ ಎಂದೂ ಅದಕ್ಕೆ ಅರ್ಥವನ್ನು ಕಲ್ಪಿಸಲಾಗುತ್ತದೆ. ‘ರಾಇನಾ’ ಎಂಬ ಪದದ ಬಗ್ಗೆ 2:104ನೇ ಸೂಕ್ತಿಯ ಟಿಪ್ಪಣಿಯಲ್ಲಿ ವಿವರಿಸಲಾಗಿದೆ.
(47) ಓ ಗ್ರಂಥ ನೀಡಲಾದವರೇ! ನಾವು ಕೆಲವು ಮುಖಗಳನ್ನು ಅಳಿಸಿ ಹಾಕಿ ಅವುಗಳನ್ನು ಹಿಂಭಾಗಗಳತ್ತ ತಿರುಗಿಸುವುದಕ್ಕೆ ಮುಂಚಿತವಾಗಿ ಅಥವಾ ಸಬ್ಬತ್‍ನ ಜನರನ್ನು ನಾವು ಶಪಿಸಿದಂತೆ ನಿಮ್ಮನ್ನೂ ಶಪಿಸುವುದಕ್ಕೆ ಮುಂಚಿತವಾಗಿ ನಿಮ್ಮ ಬಳಿಯಿರುವ ಗ್ರಂಥವನ್ನು ದೃಢೀಕರಿಸುತ್ತಾ ನಾವು ಅವತೀರ್ಣಗೊಳಿಸಿರುವುದರಲ್ಲಿ ವಿಶ್ವಾಸವಿಡಿರಿ. ಅಲ್ಲಾಹುವಿನ ಆಜ್ಞೆಯು ಕಾರ್ಯರೂಪಕ್ಕೆ ತರಲಾಗುವಂತದ್ದೇ ಆಗಿದೆ.
(48) ತನ್ನೊಂದಿಗೆ ಸಹಭಾಗಿತ್ವ ಮಾಡಲಾಗುವುದನ್ನು ಅಲ್ಲಾಹು ಎಂದಿಗೂ ಕ್ಷಮಿಸಲಾರನು. ಅದರ ಹೊರತಾಗಿರುವುದನ್ನು ತಾನಿಚ್ಛಿಸುವವರಿಗೆ ಅವನು ಕ್ಷಮಿಸುವನು. ಯಾರು ಅಲ್ಲಾಹುವಿನೊಂದಿಗೆ ಸಹಭಾಗಿತ್ವ ಮಾಡುವನೋ ಖಂಡಿತವಾಗಿಯೂ ಅವನು ಘೋರವಾದ ಒಂದು ಪಾಪವನ್ನು ಹೆಣೆದಿರುವನು.
(49) ಸ್ವತಃ ತಮ್ಮನ್ನು ತಾವೇ ಪರಿಶುದ್ಧರೆಂದು ವಾದಿಸುವವರೆಡೆಗೆ ತಾವು ನೋಡಿಲ್ಲವೇ? ಆದರೆ ಅಲ್ಲಾಹು ತಾನಿಚ್ಛಿಸುವವರನ್ನು ಪರಿಶುದ್ಧಗೊಳಿಸುವನು. ಅವರೊಂದಿಗೆ ಕಿಂಚಿತ್ತೂ ಅನ್ಯಾಯವೆಸಗಲಾಗದು.
(50) ಅವರು ಅಲ್ಲಾಹುವಿನ ಮೇಲೆ ಹೇಗೆ ಸುಳ್ಳು ಹೆಣೆಯುತ್ತಿರುವರೆಂಬುದನ್ನು ನೋಡಿರಿ. ಪ್ರತ್ಯಕ್ಷ ಪಾಪವಾಗಿ ಅದೇ ಸಾಕು.
(51) ಗ್ರಂಥದಿಂದ ಒಂದು ಪಾಲನ್ನು ನೀಡಲಾಗಿರುವವರೆಡೆಗೆ ತಾವು ನೋಡಿಲ್ಲವೇ? ಅವರು ಕ್ಷುದ್ರ ವಿದ್ಯೆಗಳಲ್ಲಿ ಮತ್ತು ಮಿಥ್ಯಾರಾಧ್ಯರಲ್ಲಿ ವಿಶ್ವಾಸವಿಡುತ್ತಿರುವರು. ‘ಇವರು ವಿಶ್ವಾಸಿಗಳಿಗಿಂತಲೂ ಹೆಚ್ಚು ಸನ್ಮಾರ್ಗ ಪಡೆದವರು.’ ಎಂದು ಸತ್ಯನಿಷೇಧಿಗಳ ಬಗ್ಗೆ ಅವರು ಹೇಳುವರು.
(52) ಅಲ್ಲಾಹು ಶಪಿಸಿರುವುದು ಅವರನ್ನೇ ಆಗಿದೆ. ಅಲ್ಲಾಹು ಯಾರನ್ನು ಶಪಿಸಿರುವನೋ ಅವನಿಗೆ ಯಾವ ಸಹಾಯಕನನ್ನೂ ತಾವು ಕಾಣಲಾರಿರಿ.
(53) ಆಧಿಪತ್ಯದಲ್ಲಿ ಅವರಿಗೇನಾದರೂ ಪಾಲಿದೆಯೇ? ಹಾಗಿರುತ್ತಿದ್ದರೆ ಅವರು ಜನರಿಗೆ ಒಂದು ಅಣುವಿನಷ್ಟೂ ನೀಡುತ್ತಿರಲಿಲ್ಲ.
(54) ಅಲ್ಲಾಹು ತನ್ನ ಔದಾರ್ಯದಿಂದ ಇತರ ಜನರಿಗೆ ನೀಡಿರುವುದರಲ್ಲಿ ಅವರು ಅಸೂಯೆಪಡುತ್ತಿರುವರೇ? ಹಾಗಿದ್ದರೆ ಇಬ್ರಾಹೀಮ್ ಕುಟುಂಬಕ್ಕೆ ನಾವು ಗ್ರಂಥವನ್ನೂ ಜ್ಞಾನವನ್ನೂ ನೀಡಿರುವೆವು. ನಾವು ಅವರಿಗೆ ಮಹಾ ಆಧಿಪತ್ಯವನ್ನೂ ನೀಡಿರುವೆವು.
(55) ಅದರಲ್ಲಿ ವಿಶ್ವಾಸವಿರಿಸಿದ ಒಂದು ಪಂಗಡವು ಅವರಲ್ಲಿದೆ. ಅದರಿಂದ ವಿಮುಖರಾಗಿ ಹೋದ ಪಂಗಡವೂ ಅವರಲ್ಲಿದೆ. (ಅವರಿಗೆ) ಧಗಧಗಿಸುವ ನರಕಾಗ್ನಿಯೇ ಸಾಕು.
(56) ಖಂಡಿತವಾಗಿಯೂ ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರು ಯಾರೋ ಅವರನ್ನು ನಾವು ನರಕಾಗ್ನಿಯಲ್ಲಿ ಹಾಕಿ ಉರಿಸುವೆವು. ಅವರ ಚರ್ಮಗಳು ಸುಟ್ಟು ಕರಟುವಾಗಲೆಲ್ಲ ಅವರು ಶಿಕ್ಷೆಯನ್ನು ಸವಿಯುತ್ತಲೇ ಇರುವ ಸಲುವಾಗಿ ನಾವು ಅವರಿಗೆ ಬೇರೆ ಚರ್ಮಗಳನ್ನು ಬದಲಾಯಿಸಿ ಕೊಡುವೆವು. ಖಂಡಿತವಾಗಿಯೂ ಅಲ್ಲಾಹು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.
(57) ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರನ್ನು ನಾವು ತಳಭಾಗದಿಂದ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶ ಮಾಡಿಸುವೆವು. ಅವರದರಲ್ಲಿ ಎಂದೆಂದಿಗೂ ಶಾಶ್ವತವಾಗಿರುವರು. ಅವರಿಗೆ ಅಲ್ಲಿ ಪರಿಶುದ್ಧರಾದ ಸಂಗಾತಿಗಳಿರುವರು. ನಾವು ಅವರನ್ನು ಶಾಶ್ವತವಾದ ನೆರಳಿನಲ್ಲಿ ಪ್ರವೇಶಗೊಳಿಸುವೆವು.
(58) ನಂಬಿಕೆಯೊಂದಿಗೆ ವಹಿಸಿಕೊಡಲಾದ ಅಮಾನತ್ತುಗಳನ್ನು ಅವುಗಳ ಹಕ್ಕುದಾರರಿಗೆ ಕೊಡಬೇಕೆಂದು ಮತ್ತು ಜನರ ಮಧ್ಯೆ ತೀರ್ಪು ನೀಡುವುದಾದರೆ ನ್ಯಾಯಬದ್ಧವಾಗಿ ತೀರ್ಪು ನೀಡಬೇಕೆಂದು ಅಲ್ಲಾಹು ನಿಮ್ಮೊಂದಿಗೆ ಆಜ್ಞಾಪಿಸುತ್ತಿರುವನು. ಖಂಡಿತವಾಗಿಯೂ ಅಲ್ಲಾಹು ನಿಮಗೆ ನೀಡುವ ಉಪದೇಶವು ಅತ್ಯುತ್ತಮವಾದುದಾಗಿದೆ! ಖಂಡಿತವಾಗಿಯೂ ಅಲ್ಲಾಹು ಎಲ್ಲವನ್ನೂ ಆಲಿಸುವವನೂ ಕಾಣುವವನೂ ಆಗಿರುವನು.
(59) ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವನ್ನು ಅನುಸರಿಸಿರಿ. (ಅವನ) ಸಂದೇಶವಾಹಕರನ್ನೂ ನಿಮ್ಮಿಂದಲೇ ಇರುವ ಕಾರ್ಯನಿರ್ವಾಹಕರನ್ನೂ ಅನುಸರಿಸಿರಿ. ನೀವು ಅಲ್ಲಾಹುವಿನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರಾಗಿದ್ದರೆ ನಿಮ್ಮ ಮಧ್ಯೆ ಯಾವುದೇ ವಿಷಯದಲ್ಲಾದರೂ ಭಿನ್ನಾಭಿಪ್ರಾಯ ತಲೆದೋರಿದರೆ ನೀವದನ್ನು ಅಲ್ಲಾಹುವಿನೆಡೆಗೂ ಸಂದೇಶವಾಹಕರೆಡೆಗೂ ಮರಳಿಸಿರಿ. ಅದು ಅತ್ಯುತ್ತಮವಾದುದೂ ಅತಿಸೂಕ್ತ ಪರ್ಯಾವಸಾನವುಳ್ಳದ್ದೂ ಆಗಿದೆ.
(60) ತಮಗೆ ಅವತೀರ್ಣಗೊಂಡಿರುವುದರಲ್ಲಿ ಮತ್ತು ತಮಗಿಂತ ಮುಂಚೆ ಅವತೀರ್ಣಗೊಂಡಿರುವುದರಲ್ಲಿ ವಿಶ್ವಾಸವಿಟ್ಟಿರುವೆವು ಎಂದು ವಾದಿಸುವವರೆಡೆಗೆ ತಾವು ನೋಡಿಲ್ಲವೇ? ತೀರ್ಪು ಅರಸುತ್ತಾ ಮಿಥ್ಯಾರಾಧ್ಯರ ಬಳಿಗೆ ಹೋಗುವುದನ್ನೇ ಅವರು ಇಚ್ಛಿಸುತ್ತಿರುವರು. ವಾಸ್ತವಿಕವಾಗಿ ಮಿಥ್ಯಾರಾಧ್ಯರನ್ನು ನಿಷೇಧಿಸಬೇಕೆಂದು ಅವರೊಂದಿಗೆ ಆಜ್ಞಾಪಿಸಲಾಗಿತ್ತು. ಸೈತಾನನು ಅವರನ್ನು ವಿದೂರವಾದ ಪಥಭ್ರಷ್ಟತೆಯಲ್ಲಾಗಿಸಲು ಇಚ್ಛಿಸುತ್ತಿರುವನು.
(61) ‘ಅಲ್ಲಾಹು ಅವತೀರ್ಣಗೊಳಿಸಿರುವುದರೆಡೆಗೆ ಮತ್ತು (ಅವನ) ಸಂದೇಶವಾಹಕರೆಡೆಗೆ ಬನ್ನಿರಿ’ ಎಂದು ಅವರೊಂದಿಗೆ ಹೇಳಲಾದರೆ ಆ ಕಪಟವಿಶ್ವಾಸಿಗಳು ತಮ್ಮನ್ನು ತೊರೆದು ವಿಮುಖರಾಗಿ ಹೋಗುವುದನ್ನು ತಾವು ಕಾಣುವಿರಿ.
(62) ಅವರ ಸ್ವಹಸ್ತಗಳು ಮುಂಗಡವಾಗಿ ಮಾಡಿಟ್ಟಿರುವುದರ ಫಲವಾಗಿ ಅವರಿಗೇನಾದರೂ ಆಪತ್ತು ಬಾಧಿಸಿದರೆ, ತರುವಾಯ ಅವರು ತಮ್ಮ ಬಳಿಗೆ ಬಂದು ಅಲ್ಲಾಹುವಿನ ಮೇಲೆ ಆಣೆ ಹಾಕುತ್ತಾ ‘ನಾವು ಒಳಿತು ಮತ್ತು ಸಂಧಾನವನ್ನಲ್ಲದೆ ಬೇರೇನನ್ನೂ ಉದ್ದೇಶಿಸಿರಲಿಲ್ಲ’ ಎಂದು ಹೇಳುವಾಗ ಅವರ ಸ್ಥಿತಿ ಹೇಗಿರಬಹುದು?
(63) ಅಂತಹವರ ಹೃದಯಗಳಲ್ಲಿ ಏನಿದೆಯೆಂದು ಅಲ್ಲಾಹು ಅರಿತಿರುವನು. ಆದ್ದರಿಂದ (ಓ ಪ್ರವಾದಿಯವರೇ!) ಅವರಿಂದ ವಿಮುಖರಾಗಿರಿ. ಅವರಿಗೆ ಉಪದೇಶ ನೀಡಿರಿ ಮತ್ತು ಅವರ ಮನಸ್ಸಿಗೆ ನಾಟುವಂತಹ ಮಾತನ್ನು ಹೇಳಿರಿ.
(64) ಅಲ್ಲಾಹುವಿನ ಅನುಮತಿಯೊಂದಿಗೆ ಅನುಸರಿಸಲ್ಪಡುವುದಕ್ಕಾಗಿಯೇ ವಿನಾ ಯಾವುದೇ ಸಂದೇಶವಾಹಕರನ್ನೂ ನಾವು ಕಳುಹಿಸಿಲ್ಲ. ಅವರು ಸ್ವತಃ ಅವರೊಂದಿಗೇ ಅಕ್ರಮವೆಸಗಿದಾಗ ತಮ್ಮ ಬಳಿಗೆ ಬಂದು, ಅವರು ಅಲ್ಲಾಹುವಿನೊಂದಿಗೆ ಪಾಪಮುಕ್ತಿ ಬೇಡಿದರೆ ಮತ್ತು ಅವರಿಗೋಸ್ಕರ ಸಂದೇಶವಾಹಕರೂ ಪಾಪಮುಕ್ತಿ ಬೇಡಿದರೆ ಅವರು ಅಲ್ಲಾಹುವನ್ನು ಅತ್ಯಧಿಕ ಪಶ್ಚಾತ್ತಾಪ ಸ್ವೀಕರಿಸುವವನಾಗಿಯೂ ಅಪಾರ ಕರುಣೆಯುಳ್ಳವನಾಗಿಯೂ ಕಾಣುತ್ತಿದ್ದರು.
(65) ಇಲ್ಲ, ತಮ್ಮ ರಬ್‌ನ ಮೇಲಾಣೆ! ಅವರು ತಮ್ಮ ಮಧ್ಯೆ ಭಿನ್ನಾಭಿಪ್ರಾಯ ತಲೆದೋರುವ ವಿಷಯದಲ್ಲಿ ತಮ್ಮನ್ನು ತೀರ್ಪುಗಾರನಾಗಿಸಿ, ತಾವು ನೀಡಿದ ತೀರ್ಪಿನ ಬಗ್ಗೆ ತರುವಾಯ ಅವರ ಮನಸ್ಸುಗಳಲ್ಲಿ ಯಾವುದೇ ಕ್ಲೇಶವೂ ಉಂಟಾಗದೆ ಅದನ್ನು ಸಂಪೂರ್ಣವಾಗಿ ಸ್ವೀಕರಿಸಿ ಅನುಸರಿಸುವವರೆಗೂ ಅವರು ವಿಶ್ವಾಸಿಗಳಾಗಲಾರರು.
(66) ‘ನೀವು ನಿಮ್ಮ ಜೀವವನ್ನು ಬಲಿಯರ್ಪಿಸಿರಿ ಅಥವಾ ನಿಮ್ಮ ಮನೆಗಳನ್ನು ಬಿಟ್ಟು ಹೊರಹೋಗಿರಿ’ ಎಂದು ನಾವು ಅವರೊಂದಿಗೆ ಆದೇಶಿಸುತ್ತಿದ್ದರೆ ಅವರ ಪೈಕಿ ಕೆಲವರ ವಿನಾ ಯಾರೂ ಅದನ್ನು ಮಾಡುತ್ತಿರಲಿಲ್ಲ. ಅವರೊಂದಿಗೆ ಉಪದೇಶಿಸಲಾಗುವ ಪ್ರಕಾರ ಅವರು ಮಾಡಿರುತ್ತಿದ್ದರೆ ಅದು ಅವರ ಪಾಲಿಗೆ ಅತ್ಯುತ್ತಮವೂ, ಅವರನ್ನು (ಸನ್ಮಾರ್ಗದಲ್ಲಿ) ಪ್ರಬಲವಾಗಿ ದೃಢಗೊಳಿಸುವಂತದ್ದೂ ಆಗಿರುತ್ತಿತ್ತು.
(67) ಹಾಗಿರುತ್ತಿದ್ದರೆ ನಾವು ಅವರಿಗೆ ನಮ್ಮ ವತಿಯಿಂದ ಮಹಾ ಪ್ರತಿಫಲವನ್ನು ದಯಪಾಲಿಸುತ್ತಿದ್ದೆವು.
(68) ನಾವು ಅವರನ್ನು ನೇರವಾದ ಮಾರ್ಗದೆಡೆಗೆ ಮುನ್ನಡೆಸುತ್ತಿದ್ದೆವು.
(69) ಯಾರು ಅಲ್ಲಾಹುವನ್ನು ಮತ್ತು ಸಂದೇಶವಾಹಕರನ್ನು ಅನುಸರಿಸುವನೋ ಅಂತಹವರು ಅಲ್ಲಾಹು ಅನುಗ್ರಹಿಸಿದ ಪ್ರವಾದಿಗಳು, ಸತ್ಯಸಂಧರು, ಹುತಾತ್ಮರು, ಸಜ್ಜನರು ಮುಂತಾದವರೊಂದಿಗೆ ಸೇರುವರು. ಅವರು ಎಷ್ಟು ಉತ್ತಮ ಸಂಗಾತಿಗಳಾಗಿರುವರು!
(70) ಅದು ಅಲ್ಲಾಹುವಿನ ವತಿಯ ಅನುಗ್ರಹವಾಗಿದೆ. ಎಲ್ಲವನ್ನೂ ಅರಿಯುವವನಾಗಿ ಅಲ್ಲಾಹು ಸಾಕು.
(71) ಓ ಸತ್ಯವಿಶ್ವಾಸಿಗಳೇ! ನೀವು ಎಚ್ಚರವಹಿಸಿರಿ. ಸಣ್ಣ ಗುಂಪುಗಳಾಗಿ ಅಥವಾ ಒಟ್ಟಾಗಿ ನೀವು (ಯುದ್ಧಕ್ಕೆ) ಹೊರಡಿರಿ.
(72) ಖಂಡಿತವಾಗಿಯೂ ನಿಮ್ಮ ಪೈಕಿ ಹೋಗಲು ಮನಸ್ಸಿಲ್ಲದೆ ಹಿಂದೆ ಉಳಿಯುವವನಿರುವನು. ನಿಮಗೇನಾದರೂ ವಿಪತ್ತು ಬಾಧಿಸಿದರೆ ‘ನಾನು ಅವರೊಂದಿಗೆ (ಯುದ್ಧಕ್ಕೆ) ಹಾಜರಾಗದಿರುವ ಕಾರಣದಿಂದ ಅಲ್ಲಾಹು ನನ್ನನ್ನು ಅನುಗ್ರಹಿಸಿರುವನು’ ಎಂದು ಅವನು ಹೇಳುವನು.
(73) ನಿಮಗೆ ಅಲ್ಲಾಹುವಿನ ವತಿಯಿಂದ ಏನಾದರೂ ಅನುಗ್ರಹವು ಲಭಿಸುವುದಾದರೆ ನಿಮ್ಮ ಮತ್ತು ಅವನ ನಡುವೆ ಪರಸ್ಪರ ಯಾವುದೇ ಗೆಳೆತನವೂ ಇರಲಿಲ್ಲವೆಂಬ ಮಟ್ಟಿನಲ್ಲಿ ‘(ಅಯ್ಯೋ) ನಾನು ಅವರ ಜೊತೆಗಿರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು! ಹಾಗಿದ್ದರೆ ನನಗೆ ಮಹಾ ಗೆಲುವನ್ನು ಪಡೆಯಬಹುದಾಗಿತ್ತು!’ ಎಂದು ಅವನು ಹೇಳುವನು.
(74) ಪರಲೋಕ ಜೀವನಕ್ಕಾಗಿ ಇಹಲೋಕ ಜೀವನವನ್ನು ಮಾರಲು ಸಿದ್ಧರಾಗಿರುವವರು ಅಲ್ಲಾಹುವಿನ ಮಾರ್ಗದಲ್ಲಿ ಯುದ್ಧ ಮಾಡಲಿ. ಯಾರಾದರೂ ಅಲ್ಲಾಹುವಿನ ಮಾರ್ಗದಲ್ಲಿ ಯುದ್ಧ ಮಾಡಿ ವಧಿಸಲ್ಪಡುವುದಾದರೆ ಅಥವಾ ಜಯಗಳಿಸುವುದಾದರೆ ನಾವು ಅವನಿಗೆ ಮಹಾ ಪ್ರತಿಫಲವನ್ನು ನೀಡುವೆವು.
(75) ‘ಓ ನಮ್ಮ ರಬ್! ಅಕ್ರಮಿಗಳಾದ ಜನರು ನೆಲೆಸುವ ಈ ನಾಡಿನಿಂದ ನಮ್ಮನ್ನು ವಿಮೋಚನೆಗೊಳಿಸು ಮತ್ತು ನಿನ್ನ ವತಿಯ ಓರ್ವ ರಕ್ಷಕನನ್ನು ಹಾಗೂ ನಿನ್ನ ವತಿಯ ಓರ್ವ ಸಹಾಯಕನನ್ನು ನಮಗೆ ನಿಶ್ಚಯಿಸಿಕೊಡು’ ಎಂದು ಪ್ರಾರ್ಥಿಸುತ್ತಿರುವ ಪೀಡನೆಗೊಳಗಾದ ಪುರುಷರು, ಸ್ತ್ರೀಯರು ಮತ್ತು ಮಕ್ಕಳಿಗಾಗಿ ಅಲ್ಲಾಹುವಿನ ಮಾರ್ಗದಲ್ಲಿ ಯುದ್ಧ ಮಾಡದಿರಲು ನಿಮಗೇನಾಗಿದೆ?
(76) ವಿಶ್ವಾಸಿಗಳು ಅಲ್ಲಾಹುವಿನ ಮಾರ್ಗದಲ್ಲಿ ಯುದ್ಧ ಮಾಡುತ್ತಿರುವರು. ಸತ್ಯನಿಷೇಧಿಗಳು ಮಿಥ್ಯಾರಾಧ್ಯರ ಮಾರ್ಗದಲ್ಲಿ ಯುದ್ಧ ಮಾಡುತ್ತಿರುವರು. ಆದ್ದರಿಂದ ನೀವು ಸೈತಾನನ ಮಿತ್ರರ ವಿರುದ್ಧ ಯುದ್ಧ ಮಾಡಿರಿ. ಖಂಡಿತವಾಗಿಯೂ ಸೈತಾನನ ಕುತಂತ್ರವು ಬಲಹೀನವಾಗಿದೆ.
(77) ‘(ಯುದ್ಧಕ್ಕೆ ಹೋಗದೆ) ನಿಮ್ಮ ಕೈಗಳನ್ನು ತಡೆ ಹಿಡಿಯಿರಿ, ನಮಾಝ್ ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ’ ಎಂದು ಆದೇಶಿಸಲಾದವರೆಡೆಗೆ ತಾವು ನೋಡಿಲ್ಲವೇ? ಅವರ ಮೇಲೆ ಯುದ್ಧವನ್ನು ಕಡ್ಡಾಯಗೊಳಿಸಲಾದಾಗ ಅವರ ಪೈಕಿ ಒಂದು ಪಂಗಡದವರು ಅಲ್ಲಾಹುವನ್ನು ಭಯಪಡುವಂತೆ ಅಥವಾ ಅದಕ್ಕಿಂತಲೂ ಹೆಚ್ಚಾಗಿ ಜನರನ್ನು ಭಯಪಡುತ್ತಿರುವರು! ‘ಓ ನಮ್ಮ ರಬ್! ನಮ್ಮ ಮೇಲೆ ಯುದ್ಧವನ್ನು ಏಕೆ ಕಡ್ಡಾಯಗೊಳಿಸಿದೆ? ಸಮೀಪದ ಒಂದು ಅವಧಿಯವರೆಗಾದರೂ ನಮಗೆ ಕಾಲಾವಕಾಶವನ್ನು ಮುಂದೂಡಬಹುದಾಗಿತ್ತಲ್ಲವೇ?’ ಎಂದು ಅವರು ಹೇಳುವರು. ತಾವು ಹೇಳಿರಿ: ‘ಇಹಲೋಕದ ಸುಖಾನುಭೂತಿಯು ಅತ್ಯಂತ ತುಚ್ಛವಾಗಿದೆ. ಭಯಭಕ್ತಿಯುಳ್ಳವರಿಗೆ ಅತ್ಯುತ್ತಮವಾದುದು ಪರಲೋಕವಾಗಿದೆ. ನಿಮ್ಮೊಂದಿಗೆ ಕಿಂಚಿತ್ತೂ ಅನ್ಯಾಯವೆಸಗಲಾಗದು.’
(78) ನೀವೆಲ್ಲೇ ಇದ್ದರೂ ಮರಣವು ನಿಮ್ಮನ್ನು ವಶಪಡಿಸುವುದು. ನೀವು ಭದ್ರವಾಗಿ ನಿರ್ಮಿಸಲಾಗಿರುವ ಕೋಟೆಯೊಳಗಿದ್ದರೂ ಸರಿ. (ಓ ಪ್ರವಾದಿಯವರೇ!) ಅವರಿಗೇನಾದರೂ ಒಳಿತುಂಟಾದರೆ ‘ಇದು ಅಲ್ಲಾಹುವಿನಿಂದ ದೊರತಿರುವುದಾಗಿದೆ’ ಎಂದು ಹೇಳುವರು. ಅವರಿಗೇನಾದರೂ ಹಾನಿಯುಂಟಾದರೆ ‘ಇದು ತಮ್ಮಿಂದಾಗಿದೆ’ ಎನ್ನುವರು. ತಾವು ಹೇಳಿರಿ: ‘ಎಲ್ಲವೂ ಅಲ್ಲಾಹುವಿನ ವತಿಯಿಂದಾಗಿದೆ.’ ಹಾಗಿರುವಾಗ ಯಾವುದೇ ವಿಷಯವನ್ನೂ ಗ್ರಹಿಸಲು ಸಿದ್ಧರಾಗದ ಈ ಜನರಿಗೇನಾಗಿದೆ?
(79) ಒಳಿತಾಗಿ ತಮಗೆ ಏನು ಲಭಿಸಿದರೂ ಅದು ಅಲ್ಲಾಹುವಿನ ವತಿಯಿಂದಾಗಿದೆ. ತಮಗೆ ಬಾಧಿಸುವ ಯಾವುದೇ ಹಾನಿಯು ಅದು ತಮ್ಮಿಂದಲೇ ಆಗಿದೆ. (ಓ ಪ್ರವಾದಿಯವರೇ!) ತಮ್ಮನ್ನು ನಾವು ಮನುಷ್ಯರೆಡೆಗಿರುವ ಓರ್ವ ಸಂದೇಶವಾಹಕನನ್ನಾಗಿ ಕಳುಹಿಸಿರುವೆವು. (ಅದಕ್ಕೆ) ಸಾಕ್ಷಿಯಾಗಿ ಅಲ್ಲಾಹು ಸಾಕು.
(80) (ಅಲ್ಲಾಹುವಿನ) ಸಂದೇಶವಾಹಕರನ್ನು ಯಾರು ಅನುಸರಿಸುವನೋ ಖಂಡಿತವಾಗಿಯೂ ಅವನು ಅಲ್ಲಾಹುವನ್ನು ಅನುಸರಿಸಿರುವನು. ಯಾರಾದರೂ ವಿಮುಖರಾಗುವುದಾದರೆ ತಮ್ಮನ್ನು ನಾವು ಅವರ ಮೇಲೆ ಕಾವಲುಗಾರನಾಗಿ ನಿಯೋಗಿಸಿಲ್ಲ.
(81) ಅವರು ಹೇಳುವರು: ‘ನಾವು ಅನುಸರಿಸಿರುವೆವು.’ ತರುವಾಯ ಅವರು ತಮ್ಮ ಬಳಿಯಿಂದ ಹೊರಟು ಹೋದರೆ ಅವರಲ್ಲಿ ಒಂದು ಗುಂಪು ತಾವು ಹೇಳುವುದಕ್ಕೆ ವ್ಯತಿರಿಕ್ತವಾಗಿ ರಾತ್ರಿಯಲ್ಲಿ ರಹಸ್ಯ ಮಾತುಕತೆ ನಡೆಸುವರು. ಅವರು ರಾತ್ರಿಯಲ್ಲಿ ಗೂಢಾಲೋಚನೆ ಮಾಡುತ್ತಿರುವುದೆಲ್ಲವನ್ನೂ ಅಲ್ಲಾಹು ದಾಖಲಿಸುತ್ತಿರುವನು. ಆದ್ದರಿಂದ ತಾವು ಅವರಿಂದ ವಿಮುಖರಾಗಿರಿ ಮತ್ತು ಅಲ್ಲಾಹುವಿನ ಮೇಲೆ ಭರವಸೆಯನ್ನಿಡಿರಿ. ಭರವಸೆಯಿಡಲಾಗುವವನಾಗಿ ಅಲ್ಲಾಹು ಸಾಕು.
(82) ಅವರು ಕುರ್‌ಆನ್‍ನ ಕುರಿತು ಚಿಂತಿಸುವುದಿಲ್ಲವೇ? ಅದು ಅಲ್ಲಾಹುವೇತರರಿಂದಾಗಿರುತ್ತಿದ್ದರೆ ಅವರು ಅದರಲ್ಲಿ ಅನೇಕ ವಿರೋಧಾಭಾಸಗಳನ್ನು ಕಾಣುತ್ತಿದ್ದರು.
(83) ಶಾಂತಿ ಅಥವಾ (ಯುದ್ಧ)ಭೀತಿಗೆ ಸಂಬಂಧಿಸಿದ ಯಾವುದಾದರೂ ವಾರ್ತೆಯು ಅವರ ಬಳಿಗೆ ಬಂದರೆ ಅವರದನ್ನು ಪ್ರಚಾರ ಮಾಡುವರು. ತೀರ್ಪು ನೀಡುವ ಸಲುವಾಗಿ ಅವರದನ್ನು ಸಂದೇಶವಾಹಕರೆಡೆಗೆ ಮತ್ತು ಅವರಲ್ಲಿರುವ ಜ್ಞಾನಿಗಳೆಡೆಗೆ ಬಿಟ್ಟು ಬಿಡುತ್ತಿದ್ದರೆ ಅವರ ಪೈಕಿ ಅದನ್ನು ಶೋಧಿಸಿ ಗ್ರಹಿಸಲು ಸಾಮರ್ಥ್ಯವಿರುವವರು ಅದರ ನೈಜತೆಯನ್ನು ಅರಿಯುತ್ತಿದ್ದರು. ನಿಮ್ಮ ಮೇಲೆ ಅಲ್ಲಾಹುವಿನ ಅನುಗ್ರಹ ಮತ್ತು ಕರುಣೆಯು ಇಲ್ಲದಿರುತ್ತಿದ್ದರೆ ನಿಮ್ಮ ಪೈಕಿ ಕೆಲವರ ವಿನಾ ಎಲ್ಲರೂ ಸೈತಾನನನ್ನು ಅನುಸರಿಸುತ್ತಿದ್ದಿರಿ.
(84) ಆದ್ದರಿಂದ (ಓ ಪ್ರವಾದಿಯವರೇ!) ತಾವು ಅಲ್ಲಾಹುವಿನ ಮಾರ್ಗದಲ್ಲಿ ಯುದ್ಧ ಮಾಡಿರಿ. ತಮ್ಮ ಸ್ವಂತ ವಿಷಯವನ್ನೇ ವಿನಾ ತಮ್ಮ ಮೇಲೆ ಹೊರಿಸಲಾಗದು. ಸತ್ಯವಿಶ್ವಾಸಿಗಳನ್ನು ಹುರಿದುಂಬಿಸಿರಿ. ಸತ್ಯನಿಷೇಧಿಗಳ ದಾಳಿಯನ್ನು ಅಲ್ಲಾಹು ತಡೆಗಟ್ಟುವನು. ಅಲ್ಲಾಹು ಅತ್ಯಧಿಕ ಆಕ್ರಮಣಶೀಲನೂ ಅತಿಕಠಿಣವಾಗಿ ಶಿಕ್ಷಿಸುವವನೂ ಆಗಿರುವನು.
(85) ಯಾರು ಒಂದು ಉತ್ತಮವಾದ ಶಿಫಾರಸು ಮಾಡುವನೋ ಆ ಒಳಿತಿನಲ್ಲಿ ಒಂದು ಪಾಲು ಅವನಿಗಿರುವುದು. ಯಾರು ಒಂದು ಕೆಟ್ಟ ಶಿಫಾರಸು ಮಾಡುವನೋ ಆ ಕೆಡುಕಿನಲ್ಲಿ ಒಂದು ಪಾಲು ಅವನಿಗಿರುವುದು. ಅಲ್ಲಾಹು ಎಲ್ಲ ವಿಷಯಗಳಲ್ಲೂ ಮೇಲ್ವಿಚಾರಕನಾಗಿರುವನು.
(86) ನಿಮಗೆ ಅಭಿವಂದನೆ ಸಲ್ಲಿಸಲಾದರೆ ಅದಕ್ಕಿಂತಲೂ ಉತ್ತಮವಾಗಿ (ಅವರಿಗೆ) ಅಭಿವಂದನೆ ಸಲ್ಲಿಸಿರಿ. ಅಥವಾ ಅದನ್ನು ಮರಳಿಸಿರಿ.(124) ಖಂಡಿತವಾಗಿಯೂ ಅಲ್ಲಾಹು ಪ್ರತಿಯೊಂದು ವಿಷಯದ ಬಗ್ಗೆಯೂ ವಿಚಾರಣೆ ಮಾಡುವವನಾಗಿರುವನು.
124. ಅಸ್ಸಲಾಮು ಅಲೈಕುಮ್ (ನಿಮ್ಮ ಮೇಲೆ ಶಾಂತಿಯಿರಲಿ) ಎಂದು ಯಾರಾದರೂ ಹೇಳಿದರೆ ವಅಲೈಕುಮುಸ್ಸಲಾಮ್ ವರಹ್ಮತುಲ್ಲಾಹ್ (ನಿಮ್ಮ ಮೇಲೆ ಶಾಂತಿಯಿರಲಿ - ಅಲ್ಲಾಹುವಿನ ಅನುಗ್ರಹವೂ ಇರಲಿ) ಎಂದು ಮರಳಿಸಬೇಕಾಗಿದೆ. ಸಂಕ್ಷಿಪ್ತವಾಗಿ ವಅಲೈಕುಮುಸ್ಸಲಾಮ್ ಎಂದಾದರೂ ಮರಳಿಸಬೇಕಾಗಿದೆ.
(87) ಅಲ್ಲಾಹು, ಅವನ ಹೊರತು ಅನ್ಯ ಆರಾಧ್ಯರಿಲ್ಲ. ಖಂಡಿತವಾಗಿಯೂ ಅವನು ನಿಮ್ಮೆಲ್ಲರನ್ನೂ ಪುನರುತ್ಥಾನ ದಿನದೆಡೆಗೆ ಒಟ್ಟುಗೂಡಿಸುವನು. ಅದರಲ್ಲಿ ಸಂದೇಹವೇ ಇಲ್ಲ. ಅಲ್ಲಾಹುವಿಗಿಂತಲೂ ಸತ್ಯಸಂಧವಾಗಿ ಮಾಹಿತಿ ನೀಡುವವನು ಇನ್ನಾರಿರುವನು?
(88) ಕಪಟವಿಶ್ವಾಸಿಗಳ ವಿಷಯದಲ್ಲಿ ನೀವೇಕೆ ಎರಡು ಗುಂಪುಗಳಾಗುತ್ತಿರುವಿರಿ? ಅವರು ಸಂಪಾದಿಸಿಟ್ಟಿರುವುದರ (ಕೆಡುಕಿನ) ನಿಮಿತ್ತ ಅಲ್ಲಾಹು ಅವರನ್ನು ಹಿಂದಕ್ಕೆ ತಿರುಗಿಸಿ ಬಿಟ್ಟಿರುವನು. ಅಲ್ಲಾಹು ಯಾರನ್ನು ಪಥಭ್ರಷ್ಟಗೊಳಿಸಿರುವನೋ ಅವರನ್ನು ಸನ್ಮಾರ್ಗಕ್ಕೆ ಸೇರಿಸಲು ನೀವು ಇಚ್ಛಿಸುತ್ತಿರುವಿರಾ? ಅಲ್ಲಾಹು ಯಾರನ್ನಾದರೂ ಪಥಭ್ರಷ್ಟಗೊಳಿಸಿದರೆ ತರುವಾಯ ಅವನಿಗೆ ಯಾವುದೇ ದಾರಿಯನ್ನೂ ತಾವು ಕಾಣಲಾರಿರಿ.
(89) ಅವರು ನಿಷೇಧಿಸಿದಂತೆ ನೀವೂ ನಿಷೇಧಿಸಿ ತರುವಾಯ ನೀವೆಲ್ಲರೂ ಸಮಾನರಾಗಬೇಕೆಂದು ಅವರು ಆಶಿಸುವರು. ಆದ್ದರಿಂದ ಅವರು ಅಲ್ಲಾಹುವಿನ ಮಾರ್ಗದಲ್ಲಿ ತಮ್ಮ ಊರನ್ನು ತೊರೆಯುವ ತನಕ ಅವರ ಪೈಕಿ ಯಾರನ್ನೂ ನೀವು ಮಿತ್ರರನ್ನಾಗಿ ಮಾಡಿಕೊಳ್ಳದಿರಿ. ಅವರೇನಾದರೂ ವಿಮುಖರಾಗುವುದಾದರೆ ಅವರನ್ನು ಹಿಡಿಯಿರಿ ಮತ್ತು ಅವರನ್ನು ಕಂಡಲ್ಲಿ ವಧಿಸಿರಿ. ಅವರ ಪೈಕಿ ಯಾರನ್ನೂ ನೀವು ಮಿತ್ರರನ್ನಾಗಿ ಮತ್ತು ಸಹಾಯಕರನ್ನಾಗಿ ಮಾಡಿಕೊಳ್ಳದಿರಿ.
(90) ಆದರೆ ನಿಮ್ಮೊಂದಿಗೆ ಮೈತ್ರಿಯಲ್ಲಿರುವ ಒಂದು ಜನತೆಯೊಂದಿಗೆ ಸೇರಿಕೊಂಡಿರುವವರ ಹೊರತು. ಅಥವಾ ನಿಮ್ಮ ವಿರುದ್ಧ ಯುದ್ಧ ಮಾಡಲೋ, ಸ್ವತಃ ತಮ್ಮದೇ ಜನರ ವಿರುದ್ಧ ಯುದ್ಧ ಮಾಡಲೋ ಹಿಂಜರಿಕೆಯುಳ್ಳವರಾಗಿ ನಿಮ್ಮ ಬಳಿಗೆ ಬರುವವರ ಹೊರತು. ಅಲ್ಲಾಹು ಇಚ್ಛಿಸುತ್ತಿದ್ದರೆ ಅವನು ನಿಮ್ಮ ಮೇಲೆ ಅವರಿಗೆ ಅಧಿಕಾರವನ್ನು ನೀಡುತ್ತಿದ್ದನು ಮತ್ತು ಅವರು ನಿಮ್ಮ ವಿರುದ್ಧ ಯುದ್ಧವನ್ನೂ ಮಾಡುತ್ತಿದ್ದರು. ಆದರೆ ಅವರು ನಿಮ್ಮ ವಿರುದ್ಧ ಯುದ್ಧ ಮಾಡದೆ ದೂರ ನಿಂತಿದ್ದರೆ ಮತ್ತು ನಿಮ್ಮ ಮುಂದೆ ಶಾಂತಿ ಪ್ರಸ್ತಾಪವನ್ನಿಟ್ಟಿದ್ದರೆ ಅವರಿಗೆ ವಿರುದ್ಧವಾಗಿ ಯಾವುದೇ ಮಾರ್ಗವನ್ನು ಅಲ್ಲಾಹು ನಿಮಗೆ ಅನುಮತಿಸಿಲ್ಲ.
(91) ಇನ್ನೊಂದು ಜನತೆಯನ್ನೂ ನೀವು ಕಾಣುವಿರಿ. ಅವರು ನಿಮ್ಮಿಂದಲೂ ಸ್ವತಃ ಅವರದೇ ಜನರಿಂದಲೂ ಸಮಾನ ಅಂತರದಲ್ಲಿದ್ದುಕೊಂಡು ಸುರಕ್ಷಿತರಾಗಿರಲು ಇಚ್ಛಿಸುವರು.(125) ಕ್ಷೋಭೆಯೆಡೆಗೆ ಅವರನ್ನು ಮರಳಿ ಕರೆಯಲಾಗುವಾಗಲೆಲ್ಲ ಅವರು ಅದರಲ್ಲಿ ತಲೆಕೆಳಗಾಗಿ ಬೀಳುವರು.(126) ಆದರೆ ಅವರು ನಿಮ್ಮನ್ನು ಬಿಟ್ಟು ದೂರ ಸರಿಯದಿದ್ದರೆ, ನಿಮ್ಮ ಮುಂದೆ ಶಾಂತಿ ಪ್ರಸ್ತಾಪವನ್ನಿಡದಿದ್ದರೆ ಮತ್ತು ತಮ್ಮ ಕೈಗಳನ್ನು ತಡೆಹಿಡಿಯದಿದ್ದರೆ ಅವರನ್ನು ಹಿಡಿಯಿರಿ ಮತ್ತು ಕಂಡಲ್ಲಿ ವಧಿಸಿರಿ. ಅಂತಹವರ ವಿರುದ್ಧ ನಾವು ನಿಮಗೆ ಸ್ಪಷ್ಟವಾದ ಅಧಿಕಾರವನ್ನು ನೀಡಿರುವೆವು.
125. ಮುಸ್ಲಿಮರೊಂದಿಗೆ ಸಹಾನುಭೂತಿಯಿಲ್ಲದಿದ್ದರೂ ಮುಸ್ಲಿಮರೊಂದಿಗೆ ವಿರೋಧ ಕಟ್ಟಿಕೊಳ್ಳಲು ಅವರು ಬಯಸುವುದಿಲ್ಲ. ಮುಸ್ಲಿಮರೊಂದಿಗೆ ಸಹಾನುಭೂತಿ ತೋರಿಸಿದರೆ ಎದುರು ಪಂಗಡದ ಶತ್ರುತ್ವ ಮತ್ತು ಆಕ್ರಮಣವನ್ನು ಎದುರಿಸಬೇಕಾದೀತು ಎಂಬ ಭಯವೂ ಅವರಿಗಿದೆ.
126. ಮುಸ್ಲಿಮರ ಕಡೆಗೆ ವಾಲಿಕೊಂಡಂತೆ ನಟಿಸುತ್ತಿದ್ದರೂ ಕೂಡ ಶತ್ರುಗಳು ಕ್ಷೋಭೆಯನ್ನು ಸೃಷ್ಟಿಸುವಾಗ ಇವರೂ ಅದರಲ್ಲಿ ಪಾಳ್ಗೊಳ್ಳುತ್ತಿದ್ದರು.
(92) ಪ್ರಮಾದವಶಾತ್ ಸಂಭವಿಸುವುದರ ವಿನಾ ಒಬ್ಬ ವಿಶ್ವಾಸಿಯನ್ನು ಕೊಲ್ಲುವುದು ಇನ್ನೊಬ್ಬ ವಿಶ್ವಾಸಿಗೆ ಯುಕ್ತವಲ್ಲ. ಒಬ್ಬ ವಿಶ್ವಾಸಿಯನ್ನು ಯಾರಾದರೂ ಪ್ರಮಾದವಶಾತ್ ಕೊಂದರೆ (ಪ್ರಾಯಶ್ಚಿತ್ತವಾಗಿ) ವಿಶ್ವಾಸಿಯಾಗಿರುವ ಓರ್ವ ಗುಲಾಮನನ್ನು ವಿಮೋಚನೆಗೊಳಿಸಬೇಕಾಗಿದೆ ಮತ್ತು ಅವನ (ವಧಿಸಲಾದವನ) ಹಕ್ಕುದಾರರಿಗೆ ರಕ್ತ ಪರಿಹಾರವನ್ನು ಕೊಡಬೇಕಾಗಿದೆ. ಅವರು (ಆ ಹಕ್ಕುದಾರರು) ಅದನ್ನು ಉದಾರವಾಗಿ ಬಿಟ್ಟು ಕೊಡುವುದರ ಹೊರತು. ಇನ್ನು ಅವನು (ವಧಿಸಲಾದವನು) ನಿಮ್ಮೊಂದಿಗೆ ಶತ್ರುತ್ವ ಹೊಂದಿರುವ ಜನರೊಂದಿಗೆ ಸೇರಿದವನೂ ಸತ್ಯವಿಶ್ವಾಸಿಯೂ ಆಗಿದ್ದರೆ, ಸತ್ಯವಿಶ್ವಾಸಿಯಾದ ಓರ್ವ ಗುಲಾಮನನ್ನು ವಿಮೋಚನೆಗೊಳಿಸಬೇಕಾಗಿದೆ. ಇನ್ನು ಅವನು (ವಧಿಸಲಾದವನು) ನಿಮ್ಮೊಂದಿಗೆ ಮೈತ್ರಿಯಲ್ಲಿರುವ ಒಂದು ಜನತೆಗೆ ಸೇರಿದವನಾಗಿದ್ದರೆ ಅವನ ಹಕ್ಕುದಾರರಿಗೆ ರಕ್ತಪರಿಹಾರವನ್ನು ಕೊಡಬೇಕಾಗಿದೆ ಮತ್ತು ವಿಶ್ವಾಸಿಯಾದ ಓರ್ವ ಗುಲಾಮನನ್ನು ವಿಮೋಚನೆಗೊಳಿಸಬೇಕಾಗಿದೆ. ಯಾರಿಗಾದರೂ ಅದು ಸಾಧ್ಯವಾಗುವುದಿಲ್ಲವೆಂದಾದರೆ ಅವನು ನಿರಂತರವಾಗಿ ಎರಡು ತಿಂಗಳು ಉಪವಾಸವನ್ನು ಆಚರಿಸಬೇಕಾಗಿದೆ. ಇದು ಅಲ್ಲಾಹು ನಿಶ್ಚಯಿಸಿದ ಪಶ್ಚಾತ್ತಾಪ (ಮಾರ್ಗ)ವಾಗಿದೆ. ಅಲ್ಲಾಹು ಎಲ್ಲವನ್ನೂ ಅರಿಯುವವನೂ ಯುಕ್ತಿಪೂರ್ಣನೂ ಆಗಿರುವನು.
(93) ಒಬ್ಬ ಸತ್ಯವಿಶ್ವಾಸಿಯನ್ನು ಯಾರಾದರೂ ಉದ್ದೇಶಪೂರ್ವಕವಾಗಿ ವಧಿಸಿದರೆ ಅವನಿಗಿರುವ ಪ್ರತಿಫಲವು ನರಕಾಗ್ನಿಯಾಗಿದೆ. ಅವನು ಅದರಲ್ಲಿ ಶಾಶ್ವತವಾಗಿ ವಾಸಿಸುವನು. ಅಲ್ಲಾಹು ಅವನ ಮೇಲೆ ಕ್ರೋಧಗೊಂಡಿರುವನು ಮತ್ತು ಅವನನ್ನು ಶಪಿಸಿರುವನು. ಅವನಿಗೋಸ್ಕರ ಅಲ್ಲಾಹು ಕಠಿಣವಾದ ಶಿಕ್ಷೆಯನ್ನು ಸಿದ್ಧಗೊಳಿಸಿರುವನು.
(94) ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವಿನ ಮಾರ್ಗದಲ್ಲಿ ಯುದ್ಧಕ್ಕೆ ಹೊರಟರೆ (ಶತ್ರು ಮತ್ತು ಮಿತ್ರ ಯಾರೆಂದು) ಸ್ಪಷ್ಟವಾಗಿ ಅರಿತುಕೊಳ್ಳಿರಿ. ನಿಮಗೆ ಸಲಾಮ್ ಹೇಳಿದವನೊಂದಿಗೆ ನೀನು ವಿಶ್ವಾಸಿಯಲ್ಲ ಎಂದು ನೀವು ಹೇಳದಿರಿ. ಇಹಲೋಕ ಜೀವನದ ಲಾಭವನ್ನು(127) ಆಶಿಸುತ್ತಾ (ನೀವು ಆ ರೀತಿ ಹೇಳುತ್ತಿರುವಿರಿ). ಆದರೆ ನಿಮಗೆ ಗಳಿಸಬಹುದಾದ ಯಥೇಷ್ಟ ಸಂಪತ್ತು ಅಲ್ಲಾಹುವಿನ ಬಳಿಯಿದೆ. ಇದಕ್ಕಿಂತ ಮುಂಚೆ ನೀವು ಕೂಡ ಹೀಗೆಯೇ (ಅವಿಶ್ವಾಸದಲ್ಲಿ) ಇದ್ದವರಾಗಿದ್ದಿರಿ!(128) ತರುವಾಯ ಅಲ್ಲಾಹು ನಿಮ್ಮನ್ನು ಅನುಗ್ರಹಿಸಿದನು. ಆದ್ದರಿಂದ ನೀವು (ವಸ್ತುಸ್ಥಿತಿಯನ್ನು) ಸ್ಪಷ್ಟವಾಗಿ ಅರಿತುಕೊಳ್ಳಿರಿ. ಖಂಡಿತವಾಗಿಯೂ ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹು ಸೂಕ್ಷ್ಮವಾಗಿ ಅರಿಯುವವನಾಗಿರುವನು.
127. ರಣರಂಗದಲ್ಲಿ ಓರ್ವ ವ್ಯಕ್ತಿಯನ್ನು ಕೊಂದರೆ ಅವನ ಆಯುಧಗಳು, ಯುದ್ಧ ಕವಚ ಮತ್ತು ಅವನ ಬಳಿಯಿರುವ ಇತರ ವಸ್ತುಗಳು ಕೊಂದ ಯೋಧನ ಹಕ್ಕಾಗಿರುತ್ತದೆ. ಈ ಗಳಿಕೆಯ ಮೇಲೆ ಕಣ್ಣಿಟ್ಟು ಕೊಲ್ಲಲು ಅರ್ಹರಲ್ಲದ ಯಾರನ್ನೂ ಕೊಲ್ಲಬಾರದು.
128. ಗತ ನಿಮಿಷದವರೆಗೆ ನಿಮ್ಮ ಶತ್ರುವಾಗಿದ್ದ ಓರ್ವ ವ್ಯಕ್ತಿ ತನ್ನ ಶತ್ರುತ್ವವನ್ನು ತೊರೆದು ಸಲಾಮ್ ಹೇಳುತ್ತಾ ಮುಂದೆ ಬಂದರೆ ನೀವು ಅವನನ್ನು ಅಪಾರ್ಥ ಮಾಡಿಕೊಳ್ಳಬಾರದು. ಅವನ ಸನ್ಮನಸ್ಸನ್ನು ತುಚ್ಛೀಕರಿಸಲೂ ಬಾರದು. ನೀವು ಕೂಡಾ ಅವಿಶ್ವಾಸದಿಂದ ವಿಶ್ವಾಸದೆಡೆಗೆ ಬಂದವರೇ ಆಗಿರುವಿರಿ.
(95) ನ್ಯಾಯಸಮ್ಮತವಾದ ಯಾವುದೇ ಅಡ್ಡಿಯಿಲ್ಲದೆ (ಯುದ್ಧಕ್ಕೆ ಹೋಗದೆ ಮನೆಯಲ್ಲೇ) ಕುಳಿತಿರುವ ವಿಶ್ವಾಸಿಗಳು ಮತ್ತು ತಮ್ಮ ಸಂಪತ್ತು ಹಾಗೂ ಶರೀರಗಳಿಂದ ಅಲ್ಲಾಹುವಿನ ಮಾರ್ಗದಲ್ಲಿ ಹೋರಾಡುವವರು ಸಮಾನರಾಗಲಾರರು. ತಮ್ಮ ಸಂಪತ್ತು ಮತ್ತು ಶರೀರಗಳಿಂದ ಹೋರಾಡುವವರನ್ನು (ಮನೆಯಲ್ಲೇ) ಕುಳಿತುಕೊಳ್ಳುವವರಿಗಿಂತ ಅಲ್ಲಾಹು ಪದವಿಯಲ್ಲಿ ಉನ್ನತೀಕರಿಸಿರುವನು. ಎಲ್ಲರಿಗೂ ಅಲ್ಲಾಹು ಉತ್ತಮವಾದ ಪ್ರತಿಫಲವನ್ನು ವಾಗ್ದಾನ ಮಾಡಿರುವನು.(129) ಆದರೆ ಮನೆಯಲ್ಲೇ ಕುಳಿತುಕೊಳ್ಳುವವರಿಗಿಂತಲೂ ಹೋರಾಡುವವರಿಗೆ ಮಹಾ ಪ್ರತಿ ಫಲವನ್ನು ನೀಡಿ ಅಲ್ಲಾಹು ಅವರನ್ನು ಶ್ರೇಷ್ಠಗೊಳಿಸಿರುವನು.
129. ಎಲ್ಲರೂ ಎಂಬ ವಾಕ್ಯದ ಉದ್ದೇಶ ಸಂಪತ್ತಿನಿಂದ ಮತ್ತು ಶರೀರದಿಂದ ಯುದ್ಧ ಮಾಡುವವರು ಮತ್ತು ನ್ಯಾಯಬದ್ಧ ಕಾರಣದಿಂದಾಗಿ ಯುದ್ಧದಲ್ಲಿ ಭಾಗವಹಿಸಲು ಸಾಧ್ಯವಾಗದವರು ಎಂದಾಗಿದೆ. ಆದರೆ ಎಲ್ಲರೂ ಯುದ್ಧದಲ್ಲಿ ಭಾಗವಹಿಸಬೇಕಾದುದು ಅನಿವಾರ್ಯವಾಗುವ ಸಂದರ್ಭದಲ್ಲಿ ನ್ಯಾಯಬದ್ಧ ಕಾರಣವಿಲ್ಲದೆ ಯುದ್ಧದಿಂದ ಹಿಂಜರಿಯುವವರಿಗೆ ಅಲ್ಲಾಹುವಿನಿಂದ ಪ್ರತಿಫಲವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಸೂರಃ ತೌಬಾದಲ್ಲಿ ಈ ವಿಷಯವನ್ನು ಹೇಳಲಾಗಿದೆ.
(96) ಅವನ ವತಿಯ ಹಲವು ಪದವಿಗಳು, ಪಾಪಮುಕ್ತಿ ಮತ್ತು ಕಾರುಣ್ಯವು (ಅವರಿಗಿದೆ). ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(97) (ಅವಿಶ್ವಾಸಿಗಳ ನಡುವೆಯೇ ಜೀವಿಸುತ್ತಾ)(130) ಸ್ವತಃ ತಮ್ಮ ಮೇಲೆಯೇ ಅನ್ಯಾಯವೆಸಗಿದವರನ್ನು ಮೃತ ಪಡಿಸುವಾಗ ಮಲಕ್‍ಗಳು ಅವರೊಂದಿಗೆ ‘ನೀವು ಯಾವ ಸ್ಥಿತಿಯಲ್ಲಿದ್ದಿರಿ?’ ಎಂದು ಕೇಳುವರು. ‘ನಾವು ನಾಡಿನಲ್ಲಿ ಮರ್ದಿತರಾಗಿದ್ದೆವು.’ ಎಂದು ಅವರು ಹೇಳುವರು. ಆಗ (ಮಲಕ್‍ಗಳು) ‘ನಿಮಗೆ ನಿಮ್ಮ ಊರನ್ನು ಬಿಟ್ಟು ಎಲ್ಲಾದರೂ ಹೋಗಬಹುದಾದ ರೀತಿಯಲ್ಲಿ ಅಲ್ಲಾಹುವಿನ ಭೂಮಿ ವಿಶಾಲವಾಗಿರಲಿಲ್ಲವೇ?’ ಎಂದು ಕೇಳುವರು. ಅಂತಹವರ ವಾಸಸ್ಥಳವು ನರಕವಾಗಿದೆ. ಆ ಸ್ಥಳವು ಎಷ್ಟು ನಿಕೃಷ್ಟವಾದುದು!
130. ಪ್ರವಾದಿ(ಸ) ರವರು ಮತ್ತು ಸಹಾಬಿಗಳು ಮಕ್ಕಾದಲ್ಲಿದ್ದಾಗ ನಾವು ಇಸ್ಲಾಮ್ ಸ್ವೀಕರಿಸಿದ್ದೇವೆ ಎಂದು ಹೇಳಿ ತರುವಾಯ ಪ್ರವಾದಿ(ಸ) ರವರು ಮತ್ತು ಅನುಯಾಯಿಗಳು ಮದೀನಕ್ಕೆ ಹಿಜ್ರಾ ಹೋದಾಗ ಅವರೊಂದಿಗೆ ಹೋಗದೆ ಮಕ್ಕಾದಲ್ಲಿಯೇ ನೆಲೆಸಿದ ಕೆಲವರಿದ್ದರು. ಬದ್ರ್ ಯುದ್ಧದಲ್ಲಿ ಇವರು ಶತ್ರುಗಳೊಂದಿಗೆ ಸೇರಿದರು ಮತ್ತು ಯುದ್ಧದಲ್ಲಿ ಕೊಲ್ಲಲ್ಪಟ್ಟರು. ಇವರ ವಿಷಯದಲ್ಲಿ ಈ ಸೂಕ್ತಿ ಅವತೀರ್ಣಗೊಂಡಿತು. ಪ್ರವಾದಿ(ಸ) ರವರ ಹಿಜ್ರಾ ಮತ್ತು ಮಕ್ಕಾ ವಿಜಯದ ನಡುವಿನ ಕಾಲಘಟ್ಟದಲ್ಲಿ ಯಾರು ಎಲ್ಲೇ ಇಸ್ಲಾಮ್ ಸ್ವೀಕರಿಸಿದರೂ ಅವರು ತಮ್ಮ ಊರನ್ನು ತ್ಯಜಿಸಿ ಮದೀನಕ್ಕೆ ಬಂದು ಮುಸ್ಲಿಮ್ ಸಮುದಾಯದೊಂದಿಗೆ ಸೇರಬೇಕೆಂಬುದು ಕಡ್ಡಾಯ ನಿಯಮವಾಗಿತ್ತು.
(98) ಆದರೆ ಯಾವ ಉಪಾಯವನ್ನು ಹೂಡಲು ಸಾಧ್ಯವಾಗದೆ, ಯಾವ ರಕ್ಷಾಮಾರ್ಗವನ್ನೂ ಕಾಣಲಾಗದೆ ದಬ್ಬಾಳಿಕೆಗೀಡಾಗಿ ಬದುಕುತ್ತಿರುವ ಪುರುಷರು, ಸ್ತ್ರೀಯರು ಮತ್ತು ಮಕ್ಕಳು ಇದರಿಂದ ಹೊರತಾಗಿರುವರು.
(99) ಅಂತಹವರನ್ನು ಅಲ್ಲಾಹು ಮನ್ನಿಸಲೂ ಬಹುದು. ಅಲ್ಲಾಹು ಅತ್ಯಂತ ಮನ್ನಿಸುವವನೂ ಅತ್ಯಧಿಕ ಕ್ಷಮಿಸುವವನೂ ಆಗಿರುವನು.
(100) ಯಾರು ಅಲ್ಲಾಹುವಿನ ಮಾರ್ಗದಲ್ಲಿ ತನ್ನ ಊರನ್ನು ತ್ಯಜಿಸುತ್ತಾನೋ ಅವನು ಭೂಮಿಯಲ್ಲಿ ಅನೇಕ ಅಭಯಸ್ಥಾನಗಳನ್ನೂ, ಜೀವನ ವೈಶಾಲ್ಯತೆಗಳನ್ನೂ ಕಾಣುವನು. ಯಾರಾದರೂ ತನ್ನ ಮನೆಯಿಂದ ಅಲ್ಲಾಹುವಿನೆಡೆಗೆ ಮತ್ತು ಅವನ ಸಂದೇಶವಾಹಕರೆಡೆಗೆ ವಲಸೆ ಹೊರಟು, ತರುವಾಯ (ದಾರಿ ಮಧ್ಯೆ) ಮರಣವು ಅವನನ್ನು ವಶಪಡಿಸಿದರೆ ಅವನಿಗಿರುವ ಪ್ರತಿಫಲವು ಅಲ್ಲಾಹುವಿನ ಬಳಿ ಖಾತ್ರಿಯಾಗಿ ಬಿಟ್ಟಿತು. ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(101) ನೀವು ಭೂಮಿಯಲ್ಲಿ ಯಾತ್ರೆ ಮಾಡುವಾಗ ಸತ್ಯನಿಷೇಧಿಗಳು ನಿಮಗೆ ತೊಂದರೆಯನ್ನುಂಟುಮಾಡುವರು ಎಂದು ನೀವು ಭಯಪಡುವುದಾದರೆ ನಮಾಝನ್ನು ಸಂಕ್ಷಿಪ್ತಗೊಳಿಸಿ ನಿರ್ವಹಿಸುವುದರಲ್ಲಿ ನಿಮಗೆ ದೋಷವಿಲ್ಲ. ಖಂಡಿತವಾಗಿಯೂ ಸತ್ಯನಿಷೇಧಿಗಳು ನಿಮ್ಮ ಪ್ರತ್ಯಕ್ಷ ಶತ್ರುಗಳಾಗಿರುವರು.
(102) (ಓ ಪ್ರವಾದಿಯವರೇ!) ತಾವು ಅವರ ಜೊತೆಗಿರುವಾಗ ಮತ್ತು ಅವರಿಗೆ ನಾಯಕತ್ವ ನೀಡುತ್ತಾ ನಮಾಝ್ ನಿರ್ವಹಿಸುತ್ತಿರುವಾಗ ಅವರ ಪೈಕಿ ಒಂದು ಗುಂಪು ತಮ್ಮ ಜೊತೆಗೆ ನಿಲ್ಲಲಿ. ಅವರು ತಮ್ಮ ಆಯುಧಗಳನ್ನು ಹಿಡಿದು ಕೊಂಡಿರಲಿ. ಅವರು ಸುಜೂದ್ ಮಾಡಿದ ನಂತರ ತಮ್ಮ ಹಿಂಭಾಗಕ್ಕೆ ಸರಿದು ನಿಂತು ನಮಾಝ್ ನಿರ್ವಹಿಸದ ಇನ್ನೊಂದು ಗುಂಪು ಬಂದು ತಮ್ಮೊಂದಿಗೆ ನಮಾಝ್ ನಿರ್ವಹಿಸಲಿ. ಅವರು ಎಚ್ಚರ ವಹಿಸುತ್ತಿರಲಿ ಮತ್ತು ತಮ್ಮ ಆಯುಧಗಳನ್ನು ಹಿಡಿದುಕೊಂಡಿರಲಿ. ನೀವು ನಿಮ್ಮ ಆಯುಧಗಳ ಬಗ್ಗೆ ಮತ್ತು ನಿಮ್ಮ ಸಾಮಗ್ರಿಗಳ ಬಗ್ಗೆ ಅಲಕ್ಷ್ಯರಾದರೆ ನಿಮ್ಮ ಮೇಲೆ ಒಮ್ಮೆಲೆ ಮುಗಿಬಿದ್ದು ದಾಳಿ ಮಾಡಬಹುದೆಂದು ಸತ್ಯನಿಷೇಧಿಗಳು ಆಶಿಸುವರು. ಆದರೆ ಮಳೆಯ ನಿಮಿತ್ತ ನಿಮಗೆ ಕಿರಿಕಿರಿಯುಂಟಾದರೆ ಅಥವಾ ನೀವು ರೋಗಪೀಡಿತರಾದರೆ ನಿಮ್ಮ ಆಯುಧಗಳನ್ನು ಕೆಳಗಿಡುವುದರಲ್ಲಿ ದೋಷವಿಲ್ಲ. ಆದರೆ ನೀವು ಎಚ್ಚರವಹಿಸುತ್ತಿರಿ. ಖಂಡಿತವಾಗಿಯೂ ಅಲ್ಲಾಹು ಸತ್ಯನಿಷೇಧಿಗಳಿಗೆ ಅಪಮಾನಕರವಾದ ಶಿಕ್ಷೆಯನ್ನು ಸಿದ್ಧಗೊಳಿಸಿರುವನು.
(103) ನೀವು ನಮಾಝ್ ನಿರ್ವಹಿಸಿದ ಬಳಿಕ ನಿಂತುಕೊಂಡು, ಕುಳಿತುಕೊಂಡು ಮತ್ತು ಮಲಗಿಕೊಂಡು ಅಲ್ಲಾಹುವನ್ನು ಸ್ಮರಿಸಿರಿ. ಶಾಂತಿಯ ಸಂದರ್ಭದಲ್ಲಿ ನೀವು ನಮಾಝನ್ನು ಕ್ರಮಪ್ರಕಾರ ಸಂಸ್ಥಾಪಿಸಿರಿ. ಖಂಡಿತವಾಗಿಯೂ ನಮಾಝ್ ಸತ್ಯವಿಶ್ವಾಸಿಗಳ ಮೇಲೆ ಸಮಯ ನಿಶ್ಚಯಿಸಲಾದ ಒಂದು ಕಡ್ಡಾಯ ಕರ್ಮವಾಗಿದೆ.
(104) ಶತ್ರು ಸಮೂಹವನ್ನು ಅರಸುವುದರಲ್ಲಿ ನೀವು ಬಲಹೀನರಾಗದಿರಿ. ನೀವು ನೋವು ಅನುಭವಿಸುತ್ತಿರುವಿರಿ ಎಂದಾದರೆ ನೀವು ನೋವು ಅನುಭವಿಸುತ್ತಿರುವಂತೆಯೇ ಅವರೂ ನೋವು ಅನುಭವಿಸುತ್ತಿರುವರು.(131) ಅವರಿಗೆ ನಿರೀಕ್ಷಿಸಲಿಕ್ಕಿಲ್ಲದ್ದನ್ನು (ಅನುಗ್ರಹವನ್ನು) ನೀವು ಅಲ್ಲಾಹುವಿನಿಂದ ನಿರೀಕ್ಷಿಸುತ್ತಿರುವಿರಿ. ಅಲ್ಲಾಹು ಎಲ್ಲವನ್ನು ಅರಿಯುವವನೂ ಯುಕ್ತಿಪೂರ್ಣನೂ ಆಗಿರುವನು.
131. ಗಾಯ, ಕಷ್ಟನಷ್ಟ ಇತ್ಯಾದಿಗಳುಂಟಾಗಬಹುದೆಂದು ಭಾವಿಸಿ ನೀವು ಪ್ರತ್ಯಾಕ್ರಮಣ ಮಾಡಲು ಹಿಂಜರಿಯದಿರಿ. ನಿಮ್ಮಂತೆಯೇ ಶತ್ರುಗಳೂ ಕೂಡ ಇವೆಲ್ಲವನ್ನೂ ಅನುಭವಿಸುತ್ತಿರುವರು.
(105) ಅಲ್ಲಾಹು ತಮಗೆ ತೋರಿಸಿಕೊಟ್ಟ ಪ್ರಕಾರ ತಾವು ಜನರ ಮಧ್ಯೆ ತೀರ್ಪು ನೀಡುವ ಸಲುವಾಗಿ ನಾವು ತಮಗೆ ಗ್ರಂಥವನ್ನು ಸತ್ಯದೊಂದಿಗೆ ಅವತೀರ್ಣಗೊಳಿಸಿರುವೆವು. ತಾವು ವಂಚಕರಿಗಾಗಿ ವಾದಿಸುವವರಾಗದಿರಿ.
(106) ಅಲ್ಲಾಹುವಿನೊಂದಿಗೆ ಪಾಪಮುಕ್ತಿ ಬೇಡಿರಿ. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(107) ಆತ್ಮವಂಚನೆ ಮಾಡುವವರಿಗಾಗಿ ತಾವು ತರ್ಕಿಸದಿರಿ. ಮಹಾ ವಂಚಕನೂ ಪಾಪಿಯೂ ಆಗಿರುವ ಯಾರನ್ನೂ ಅಲ್ಲಾಹು ಮೆಚ್ಚಲಾರನು.
(108) ಅವರು ಜನರಿಂದ (ವಾಸ್ತವಿಕತೆಗಳನ್ನು) ಮರೆಮಾಚುತ್ತಿರುವರು. ಆದರೆ ಅಲ್ಲಾಹುವಿನಿಂದ (ಏನನ್ನೂ) ಮರೆಮಾಚಲು ಅವರಿಗೆ ಸಾಧ್ಯವಾಗದು. ಅಲ್ಲಾಹು ಮೆಚ್ಚದ ಮಾತುಗಳೊಂದಿಗೆ ಅವರು ರಾತ್ರಿಯಲ್ಲಿ ಗೂಢಾಲೋಚನೆ ನಡೆಸುತ್ತಿರುವಾಗ ಅವನು ಅವರೊಂದಿಗೇ ಇರುವನು. ಅವರು ಮಾಡುತ್ತಿರುವುದನ್ನೆಲ್ಲ ಅಲ್ಲಾಹು ಪೂರ್ಣವಾಗಿ ಅರಿಯುವವನಾಗಿರುವನು.
(109) ಓ ಜನರೇ! ಐಹಿಕ ಜೀವನದಲ್ಲಿ ನೀವು ಅವರಿಗಾಗಿ ತರ್ಕಿಸಿರುವಿರಿ. ಆದರೆ ಪುನರುತ್ಥಾನದ ದಿನಂದು ಅವರಿಗಾಗಿ ಅಲ್ಲಾಹುವಿನೊಂದಿಗೆ ತರ್ಕಿಸುವವನು ಯಾರಿರುವನು? ಅಥವಾ ಅವರ ಕಾರ್ಯವನ್ನು ವಹಿಸಿಕೊಳ್ಳುವವನು ಯಾರಿರುವನು?
(110) ಯಾರಾದರೂ ಒಂದು ಪಾಪವನ್ನು ಮಾಡಿದರೆ ಅಥವಾ ಸ್ವತಃ ತನ್ನ ಮೇಲೆಯೇ ಅತಿಕ್ರಮವೆಸಗಿದರೆ ತರುವಾಯ ಅವನು ಅಲ್ಲಾಹುವಿನೊಂದಿಗೆ ಪಾಪಮುಕ್ತಿ ಬೇಡುವುದಾದರೆ ಅಲ್ಲಾಹುವನ್ನು ಅತ್ಯಧಿಕ ಕ್ಷಮಿಸುವವನಾಗಿಯೂ ಕರುಣಾನಿಧಿಯಾಗಿಯೂ ಕಾಣುವನು.
(111) ಯಾರು ಪಾಪವನ್ನು ಗಳಿಸುವನೋ ಅವನದನ್ನು ಗಳಿಸುವುದು ಸ್ವತಃ ತನಗೆ ದೋಷಕರವಾಗಿಯೇ ಆಗಿದೆ. ಅಲ್ಲಾಹು ಸರ್ವಜ್ಞನೂ ಯುಕ್ತಿಪೂರ್ಣನೂ ಆಗಿರುವನು.
(112) ಯಾರಾದರೂ ಒಂದು ದೋಷವನ್ನು ಅಥವಾ ಪಾಪವನ್ನು ಮಾಡಿ ತರುವಾಯ ಅದನ್ನು ಒಬ್ಬ ನಿರಪರಾಧಿಯ ಮೇಲೆ ಹೊರಿಸಿದರೆ ಖಂಡಿತವಾಗಿಯೂ ಅವನು ಒಂದು ಸುಳ್ಳಾರೋಪವನ್ನೂ ಪ್ರತ್ಯಕ್ಷವಾದ ಒಂದು ಪಾಪವನ್ನೂ ವಹಿಸುವವನಾಗಿರುವನು.
(113) ತಮ್ಮ ಮೇಲೆ ಅಲ್ಲಾಹುವಿನ ಅನುಗ್ರಹ ಮತ್ತು ಕಾರುಣ್ಯ ಇಲ್ಲದಿರುತ್ತಿದ್ದರೆ ಅವರ ಪೈಕಿ ಒಂದು ಗುಂಪು ತಮ್ಮನ್ನು ಪಥಭ್ರಷ್ಟಗೊಳಿಸಲು ಸಿದ್ಧರಾಗಿಬಿಡುತ್ತಿದ್ದರು. ಆದರೆ ಅವರು ಪಥಭ್ರಷ್ಟಗೊಳಿಸುತ್ತಿರುವುದು ಸ್ವತಃ ತಮ್ಮನ್ನೇ ಆಗಿದೆ. ಅವರು ತಮಗೆ ಯಾವುದೇ ಹಾನಿಯನ್ನೂ ಮಾಡಲಾರರು. ಅಲ್ಲಾಹು ತಮಗೆ ಗ್ರಂಥವನ್ನೂ ಜ್ಞಾನವನ್ನೂ ಅವತೀರ್ಣಗೊಳಿಸಿರುವನು ಮತ್ತು ತಮಗೆ ಅರಿವಿಲ್ಲದಿರುವುದನ್ನು ಕಲಿಸಿರುವನು. ತಮ್ಮ ಮೇಲಿರುವ ಅಲ್ಲಾಹುವಿನ ಅನುಗ್ರಹವು ಅತ್ಯಂತ ಮಹತ್ತರವಾದುದಾಗಿದೆ.
(114) ಏನಾದರೂ ದಾನಧರ್ಮ ಮಾಡಲು, ಸದಾಚಾರವನ್ನು ಮಾಡಲು ಅಥವಾ ಜನರ ಮಧ್ಯೆ ಸಂಧಾನ ಮಾಡಲು ಅದೇಶಿಸುವವರ ಮಾತುಗಳ ಹೊರತು ಅವರ ಗೂಢಾಲೋಚನೆಗಳ ಪೈಕಿ ಹೆಚ್ಚಿನವುಗಳಲ್ಲಿಯೂ ಯಾವುದೇ ಒಳಿತಿಲ್ಲ. ಯಾರು ಅಲ್ಲಾಹುವಿನ ಸಂತೃಪ್ತಿಯನ್ನು ಅರಸುತ್ತಾ ಅದನ್ನು ಮಾಡುತ್ತಾನೋ ಅವನಿಗೆ ನಾವು ಮಹಾ ಪ್ರತಿಫಲವನ್ನು ನೀಡುವೆವು.
(115) ತನಗೆ ಸನ್ಮಾರ್ಗವು ಸ್ಪಷ್ಟವಾದ ಬಳಿಕ ಯಾರು ಸಂದೇಶವಾಹಕರಿಗೆ ವಿರುದ್ಧವಾಗಿ ನಡೆಯುವನೋ ಮತ್ತು ಸತ್ಯವಿಶ್ವಾಸಿಗಳದ್ದಲ್ಲದ ಮಾರ್ಗವನ್ನು ಅನುಸರಿಸುವನೋ ಅವನು ತಿರುಗಿದ ಮಾರ್ಗಕ್ಕೆ ನಾವು ಅವನನ್ನು ತಿರುಗಿಸುವೆವು ಮತ್ತು ನರಕಾಗ್ನಿಯಲ್ಲಿ ಉರಿಸುವೆವು. ಆ ವಾಸಸ್ಥಳ ಎಷ್ಟು ನಿಕೃಷ್ಟವಾದುದು!
(116) ತನ್ನೊಂದಿಗೆ ಸಹಭಾಗಿತ್ವ ಮಾಡಲಾಗುವುದನ್ನು ಅಲ್ಲಾಹು ಖಂಡಿತವಾಗಿಯೂ ಕ್ಷಮಿಸಲಾರನು. ಅದರ ಹೊರತಾಗಿರುವುದನ್ನು ತಾನಿಚ್ಛಿಸುವವರಿಗೆ ಕ್ಷಮಿಸುವನು. ಯಾರು ಅಲ್ಲಾಹುವಿನೊಂದಿಗೆ ಸಹಭಾಗಿತ್ವ ಮಾಡುವನೋ ಅವನು ವಿದೂರವಾದ ಪಥಭ್ರಷ್ಟತೆಯಲ್ಲಿರುವನು.
(117) ಅಲ್ಲಾಹುವಿನ ಹೊರತು ಅವರು ಕರೆದು ಪ್ರಾರ್ಥಿಸುತ್ತಿರುವುದು ಕೆಲವು ದೇವತೆಗಳನ್ನೇ ವಿನಾ ಇನ್ನೇನಲ್ಲ. (ವಾಸ್ತವಿಕವಾಗಿ) ಅವರು ಕರೆದು ಪ್ರಾರ್ಥಿಸುತ್ತಿರುವುದು ಧಿಕ್ಕಾರಿಯಾದ ಸೈತಾನನನ್ನು ಮಾತ್ರವಾಗಿದೆ.
(118) ಅಲ್ಲಾಹು ಅವನನ್ನು (ಸೈತಾನನನ್ನು) ಶಪಿಸಿರುವನು. ಅವನು (ಅಲ್ಲಾಹುವಿನೊಂದಿಗೆ) ಹೇಳಿದನು: ‘ನಿನ್ನ ದಾಸರ ಪೈಕಿ (ನನಗಿರುವ) ಒಂದು ನಿಶ್ಚಿತ ಪಾಲನ್ನು ನಾನು ಪಡೆದೇ ತೀರುವೆನು.
(119) ಖಂಡಿತವಾಗಿಯೂ ನಾನು ಅವರನ್ನು ದಾರಿಗೆಡಿಸುವೆನು ಮತ್ತು ಅವರಲ್ಲಿ ಮಿಥ್ಯ ವ್ಯಾಮೋಹಗಳನ್ನು ಹುಟ್ಟಿಸುವೆನು. ಖಂಡಿತವಾಗಿಯೂ ನಾನು ಅವರೊಂದಿಗೆ ಆದೇಶಿಸುವೆನು. ಆಗ ಅವರು ಜಾನುವಾರುಗಳ ಕಿವಿಗಳನ್ನು ಹರಿಯುವರು.(132) ಖಂಡಿತವಾಗಿಯೂ ನಾನು ಅವರೊಂದಿಗೆ ಆದೇಶಿಸುವೆನು. ಆಗ ಅವರು ಅಲ್ಲಾಹುವಿನ ಸೃಷ್ಟಿ (ಪ್ರಕೃತಿ)ಯನ್ನು ಬದಲಾಯಿಸುವರು.’(133) ಯಾರು ಅಲ್ಲಾಹುವಿನ ಹೊರತು ಸೈತಾನನನ್ನು ರಕ್ಷಕನನ್ನಾಗಿ ಮಾಡಿಕೊಳ್ಳುವನೋ ಖಂಡಿತವಾಗಿಯೂ ಅವನು ಸ್ಪಷ್ಟವಾದ ನಷ್ಟಕ್ಕೊಳಗಾಗಿರುವನು.
132. ಕೆಲವು ಆರಾಧ್ಯರಿಗೆ ಹರಕೆಯಾಗಿ ಸಲ್ಲಿಸಲ್ಪಟ್ಟ ಒಂಟೆಗಳನ್ನು ಗುರುತಿಸಲು ಅರಬರು ಅವುಗಳ ಕಿವಿಗಳನ್ನು ಕತ್ತರಿಸುತ್ತಿದ್ದರು.
133. ಅಲ್ಲಾಹು ಸರ್ವ ವಸ್ತುವನ್ನೂ ಸಂತುಲಿತ ಪ್ರಕೃತಿಯೊಂದಿಗೆ ಸೃಷ್ಟಿಸಿರುವನು. ಮಾನವ ಜೀವನವು ಕೂಡ ಈ ಪ್ರಕೃತಿನಿಯಮಗಳಿಗೆ ಒಳಪಟ್ಟಿದೆ. ಪ್ರಕೃತಿ ನಿಯಮಗಳಿಗೆ ವಿರುದ್ಧವಾದ ಯಾವುದೇ ಪ್ರವೃತ್ತಿಯೂ ದುಷ್ಪರಿಣಾಮಗಳನ್ನು ಉಂಟುಮಾಡುತ್ತವೆಯಾದ್ದರಿಂದ ಅದು ನಿಷಿದ್ಧವಾಗಿವೆ. ಪ್ರಕೃತಿ ವಿರುದ್ಧ ಲೈಂಗಿಕತೆ ಮತ್ತು ಸ್ವಚ್ಛಂದ ಲೈಂಗಿಕತೆಗಳಿಂದ ಉಂಟಾಗುವ ದುಷ್ಪರಿಣಾಮಗಳು ಇಂದು ನಿಷೇಧಿಸಲಾಗದ ಸತ್ಯವಾಗಿ ದೃಢಪಟ್ಟಿವೆ.
(120) ಅವನು (ಸೈತಾನನು) ಅವರಿಗೆ ವಾಗ್ದಾನ ಮಾಡು ವನು ಮತ್ತು ಅವರಲ್ಲಿ ಮಿಥ್ಯ ವ್ಯಾಮೋಹಗಳನ್ನು ಹುಟ್ಟಿಸುವನು.ಅವರಿಗೆ ಸೈತಾನನು ವಾಗ್ದಾನ ಮಾಡುವುದು ವಂಚನೆಯ ವಿನಾ ಇನ್ನೇನೂ ಆಗಿರಲಾರದು.
(121) ಅಂತಹವರ ವಾಸಸ್ಥಳವು ನರಕಾಗ್ನಿಯಾಗಿದೆ. ಅದರಿಂದ ಪಾರಾಗಲು ಅವರು ಯಾವುದೇ ದಾರಿಯನ್ನೂ ಕಾಣಲಾರರು.
(122) ಆದರೆ ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರನ್ನು ನಾವು ತಳಭಾಗದಿಂದ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶ ಮಾಡಿಸುವೆವು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಇದು ಅಲ್ಲಾಹುವಿನ ಸತ್ಯ ವಾಗ್ದಾನವಾಗಿದೆ. ಅಲ್ಲಾಹುವಿಗಿಂತಲೂ ಸತ್ಯಸಂಧವಾಗಿ ಮಾತನಾಡುವವನು ಇನ್ನಾರಿರುವನು?
(123) ವಾಸ್ತವಿಕತೆಯು ನಿಮ್ಮ ಬಯಕೆಗಳಿಗೆ ಅನುಸಾರವಾಗಿಯಲ್ಲ. ಗ್ರಂಥದವರ ಬಯಕೆಗಳಿಗೆ ಅನುಸಾರವಾಗಿಯೂ ಅಲ್ಲ. ಪಾಪವನ್ನು ಯಾರೇ ಮಾಡಿದರೂ ಅದಕ್ಕಿರುವ ಪ್ರತಿಫಲವನ್ನು ಅವನಿಗೆ ನೀಡಲಾಗುವುದು. ಅಲ್ಲಾಹುವಿನ ಹೊರತು ಯಾವುದೇ ರಕ್ಷಕನನ್ನೋ ಸಹಾಯಕನನ್ನೋ ಅವನು ಕಾಣಲಾರನು.
(124) ಗಂಡಾಗಲಿ ಹೆಣ್ಣಾಗಲಿ ಯಾರು ಸತ್ಯವಿಶ್ವಾಸಿಯಾಗಿದ್ದು ಸತ್ಕರ್ಮವೆಸಗುತ್ತಾನೋ ಅಂತಹವರು ಸ್ವರ್ಗವನ್ನು ಪ್ರವೇಶಿಸುವರು. ಅವರೊಂದಿಗೆ ಕಿಂಚಿತ್ತೂ ಅನ್ಯಾಯವೆಸಗಲಾಗದು.
(125) ಸಾತ್ವಿಕನಾಗಿರುತ್ತಾ ಯಾರು ತನ್ನ ಮುಖವನ್ನು ಅಲ್ಲಾಹುವಿಗೆ ಶರಣಾಗಿಸುವನೋ ಮತ್ತು ಸತ್ಯಮಾರ್ಗದಲ್ಲಿ ದೃಢವಾಗಿ ನೆಲೆನಿಂತು ಇಬ್ರಾಹೀಮ್‍ರ ಮಾರ್ಗವನ್ನು ಅನುಸರಿಸುವನೋ ಅವನಿಗಿಂತಲೂ ಉತ್ತಮ ಧರ್ಮಿನಿಷ್ಠೆಯುಳ್ಳವನು ಇನ್ನಾರಿರುವನು? ಅಲ್ಲಾಹು ಇಬ್ರಾಹೀಮ್‍ರನ್ನು ಆಪ್ತಮಿತ್ರರನ್ನಾಗಿ ಮಾಡಿಕೊಂಡಿರುವನು.(134)
134. ಒಬ್ಬ ವ್ಯಕ್ತಿ ತನ್ನನ್ನು ತಾನೇ ಅಲ್ಲಾಹುವಿನ ಇಚ್ಛೆಗೆ ಶರಣಾಗಿಸುವುದನ್ನು ಇಸ್ಲಾಮ್ ಎನ್ನಲಾಗುತ್ತದೆ. ಧರ್ಮದ ತಿರುಳು ಇದುವೇ ಆಗಿದೆ. ಅಲ್ಲಾಹು ಇಬ್ರಾಹೀಮ್(ಅ) ರವರನ್ನು ಆಪ್ತಮಿತ್ರರನ್ನಾಗಿ ಮಾಡಿರುವುದು ಶರಣಾಗತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಕಾರಣದಿಂದಾಗಿದೆ. ನಾವು ಇಬ್ರಾಹೀಮ್(ಅ) ರವರ ವಂಶದವರೆಂದು ಹಕ್ಕು ಮಂಡಿಸುವ ಎಲ್ಲರೂ ಅವರ ಮಾದರಿಯನ್ನು ಅನುಸರಿಸಬೇಕಾಗಿದೆ.
(126) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹುವಿನದ್ದಾಗಿವೆ. ಅಲ್ಲಾಹು ಸಕಲ ವಿಷಯಗಳ ಬಗ್ಗೆ ಪೂರ್ಣವಾಗಿ ಅರಿಯುವವನಾಗಿರುವನು.
(127) ಸ್ತ್ರೀಯರ ವಿಷಯದಲ್ಲಿ ಅವರು ತಮ್ಮೊಂದಿಗೆ ವಿಧಿಯನ್ನು ಕೇಳುತ್ತಿರುವರು. ತಾವು ಹೇಳಿರಿ: ‘ಅವರ ವಿಷಯದಲ್ಲಿ ಅಲ್ಲಾಹು ನಿಮಗೆ ವಿಧಿ ನೀಡುತ್ತಿರುವನು. ಸ್ತ್ರೀಯರಿಗೆ ನಿಶ್ಚಯಿಸಲಾದ ಹಕ್ಕನ್ನು ನೀಡದೆ, ನೀವು ವಿವಾಹವಾಗಲು ಆಶಿಸುವ ಅನಾಥೆಯರ ವಿಷಯದಲ್ಲಿ ನಿಮಗೆ ಈ ಗ್ರಂಥದಲ್ಲಿ ಓದಿಕೊಡಲಾಗುತ್ತಿರುವುದನ್ನು ಮತ್ತು ಬಲಹೀನರಾದ ಮಕ್ಕಳ ವಿಷಯದಲ್ಲಿ (ಓದಿಕೊಡಲಾಗುತ್ತಿರುವುದನ್ನು ಗಮನಕೊಟ್ಟು ಆಲಿಸಿರಿ). ಅನಾಥರೊಂದಿಗೆ ನೀವು ನ್ಯಾಯೋಚಿತವಾಗಿ ವರ್ತಿಸಬೇಕೆಂಬ ಆದೇಶವನ್ನೂ (ಗಮನಿಸಿರಿ). ನೀವು ಮಾಡುವ ಯಾವುದೇ ಸತ್ಕಾರ್ಯವನ್ನೂ ಅಲ್ಲಾಹು (ಸಂಪೂರ್ಣ ವಾಗಿ) ಅರಿಯುವವನಾಗಿರುವನು.
(128) ಓರ್ವ ಸ್ತ್ರೀ ತನ್ನ ಪತಿಯಿಂದ ವಿರಸವನ್ನೋ ತಿರಸ್ಕಾರವನ್ನೋ ಭಯಪಡುವುದಾದರೆ ಅವರು ಪರಸ್ಪರ ಇತ್ಯರ್ಥ ಮಾಡಿಕೊಳ್ಳುವುದರಲ್ಲಿ ಅವರಿಗೆ ದೋಷವಿಲ್ಲ. ಇತ್ಯರ್ಥ ಮಾಡುವುದು ಹೆಚ್ಚು ಉತ್ತಮವಾಗಿದೆ. ಜಿಪುಣತನವು ಮನಸ್ಸುಗಳನ್ನು ಬಿಟ್ಟುಹೋಗುವಂತದ್ದಲ್ಲ. ನೀವು ಉತ್ತಮ ರೀತಿಯಲ್ಲಿ ವರ್ತಿಸುತ್ತಲೂ ಭಯಭಕ್ತಿ ಪಾಲಿಸುತ್ತಲೂ ಇರುವುದಾದರೆ ಖಂಡಿತವಾಗಿಯೂ ಅಲ್ಲಾಹು ನೀವು ಮಾಡುತ್ತಿರುವುದನ್ನೆಲ್ಲ ಸೂಕ್ಷ್ಮವಾಗಿ ಅರಿಯುವವನಾಗಿರುವನು.
(129) ನೀವು ಎಷ್ಟೇ ಹಾತೊರೆದರೂ ಪತ್ನಿಯರ ಮಧ್ಯೆ ಸಮಾನ ನ್ಯಾಯ ಪಾಲಿಸಲು ನಿಮಗೆಂದೂ ಸಾಧ್ಯವಾಗಲಾರದು. ಆದ್ದರಿಂದ ನೀವು (ಒಬ್ಬಳೆಡೆಗೆ) ಸಂಪೂರ್ಣವಾಗಿ ವಾಲಿಕೊಂಡು ಇನ್ನೊಬ್ಬಳನ್ನು ತೂಗಾಡುತ್ತಿರುವವಳಂತೆ ಬಿಟ್ಟು ಬಿಡದಿರಿ. ನೀವು (ನಡತೆಯನ್ನು) ಸುಧಾರಿಸುವುದಾದರೆ ಮತ್ತು ಭಯಭಕ್ತಿ ಪಾಲಿಸುವುದಾದರೆ ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(130) ಇನ್ನು ಅವರಿಬ್ಬರೂ ಬೇರ್ಪಡುವುದಾದರೆ ಅಲ್ಲಾಹು ತನ್ನ ವಿಶಾಲವಾದ ಸಾಮರ್ಥ್ಯದಿಂದ ಅವರಲ್ಲಿ ಪ್ರತಿಯೊಬ್ಬರಿಗೂ ಸ್ವಾವಲಂಬನೆಯನ್ನು ನೀಡುವನು. ಅಲ್ಲಾಹು ಅಪಾರ ಸಾಮರ್ಥ್ಯವುಳ್ಳವನೂ ಯುಕ್ತಿಪೂರ್ಣನೂ ಆಗಿರುವನು.
(131) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹುವಿನದ್ದಾಗಿವೆ. ನೀವು ಅಲ್ಲಾಹುವನ್ನು ಭಯಪಡಬೇಕೆಂದು ನಿಮಗಿಂತ ಮುಂಚೆ ಗ್ರಂಥ ನೀಡಲಾದವರೊಂದಿಗೂ ನಿಮ್ಮೊಂದಿಗೂ ನಾವು ವಸಿಯ್ಯತ್ ಮಾಡಿರುವೆವು. ನೀವು ಅವಿಶ್ವಾಸವಿಡುವುದಾದರೆ (ಅಲ್ಲಾಹುವಿಗೆ ಯಾವುದೇ ನಷ್ಟವಿಲ್ಲ, ಯಾಕೆಂದರೆ) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹುವಿನದ್ದಾಗಿವೆ. ಅಲ್ಲಾಹು ನಿರಪೇಕ್ಷನೂ ಸ್ತುತ್ಯರ್ಹನೂ ಆಗಿರುವನು.
(132) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹುವಿನದ್ದಾಗಿವೆ. ಕಾರ್ಯನಿರ್ವಾಹಕನಾಗಿ ಅಲ್ಲಾಹು ಸಾಕು.
(133) ಓ ಜನರೇ! ತಾನಿಚ್ಛಿಸುವುದಾದರೆ ಅವನು ನಿಮ್ಮನ್ನು ಅಳಿಸಿಹಾಕಿ ಬೇರೊಂದು ಜನತೆಯನ್ನು ತರುವನು. ಅಲ್ಲಾಹು ಅದರಲ್ಲಿ ಸಾಮರ್ಥ್ಯವುಳ್ಳವನಾಗಿರುವನು.
(134) ಯಾರಾದರೂ ಇಹಲೋಕದ ಪ್ರತಿಫಲವನ್ನು ಬಯಸುವುದಾದರೆ ಇಹಲೋಕದ ಪ್ರತಿಫಲ ಮತ್ತು ಪರಲೋಕದ ಪ್ರತಿಫಲವಿರುವುದು ಅಲ್ಲಾಹುವಿನ ಬಳಿಯಲ್ಲಾಗಿದೆ (ಎಂಬುದನ್ನು ಅವನು ಅರಿತಿರಲಿ). ಅಲ್ಲಾಹು ಎಲ್ಲವನ್ನೂ ಆಲಿಸುವವನೂ ವೀಕ್ಷಿಸುವವನೂ ಆಗಿರುವನು.
(135) ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವಿಗೋಸ್ಕರ ಸಾಕ್ಷ್ಯವಹಿಸುವವರಾಗಿರುತ್ತಾ ದೃಢವಾಗಿ ನಿಂತು ನ್ಯಾಯ ಪಾಲಿಸುವವರಾಗಿರಿ. ಅದು ಸ್ವತಃ ನಿಮಗೆ ಅಥವಾ ನಿಮ್ಮ ಮಾತಾಪಿತರಿಗೆ ಅಥವಾ ನಿಕಟ ಸಂಬಂಧಿಕರಿಗೆ ವಿರುದ್ಧವಾಗಿದ್ದರೂ ಸರಿ. (ನ್ಯಾಯಬೇಡುವವನು) ಧನಿಕನಾಗಿರಲಿ ಬಡವನಾಗಿರಲಿ ಅವರಿಬ್ಬರೊಂದಿಗೂ ಹೆಚ್ಚು ನಿಕಟನಾಗಿರುವವನು ಅಲ್ಲಾಹುವಾಗಿರುವನು. ಆದ್ದರಿಂದ ನೀವು ನ್ಯಾಯ ಪಾಲಿಸದೆ ದೇಹೇಚ್ಛೆಗಳನ್ನು ಅನುಸರಿಸದಿರಿ. ನೀವು ತಿರುಚುವುದಾಗಲಿ ಹಿಂದೆ ಸರಿಯುವುದಾಗಲಿ ಮಾಡಿದರೆ ಖಂಡಿತವಾಗಿಯೂ ನೀವು ಮಾಡುತ್ತಿರುವುದೆಲ್ಲವನ್ನೂ ಅಲ್ಲಾಹು ಸೂಕ್ಷ್ಮವಾಗಿ ಅರಿಯುವವನಾಗಿರುವನು.
(136) ಓ ಸತ್ಯವಿಶ್ವಾಸಿಗಳೇ! ಅಲ್ಲಾಹುವಿನಲ್ಲಿಯೂ, ಅವನ ಸಂದೇಶವಾಹಕರಲ್ಲಿಯೂ, ಅವನ ಸಂದೇಶವಾಹಕರಿಗೆ ಅವನು ಅವತೀರ್ಣಗೊಳಿಸಿದ ಗ್ರಂಥದಲ್ಲಿಯೂ ಮತ್ತು ಅವರಿಗಿಂತ ಮುಂಚೆ ಅವತೀರ್ಣಗೊಳಿಸಿದ ಗ್ರಂಥದಲ್ಲಿಯೂ ವಿಶ್ವಾಸವಿಡಿರಿ. ಯಾರು ಅಲ್ಲಾಹುವಿನಲ್ಲಿ, ಅವನ ಮಲಕ್‍ಗಳಲ್ಲಿ, ಅವನ ಗ್ರಂಥಗಳಲ್ಲಿ, ಅವನ ಸಂದೇಶವಾಹಕರಲ್ಲಿ ಮತ್ತು ಅಂತ್ಯದಿನದಲ್ಲಿ ಅವಿಶ್ವಾಸವಿಡುತ್ತಾನೋ ಖಂಡಿತವಾಗಿಯೂ ಅವನು ವಿದೂರವಾದ ಪಥಭ್ರಷ್ಟತೆಯಲ್ಲಿರುವನು.
(137) (ಒಮ್ಮೆ) ವಿಶ್ವಾಸವಿಡುವುದು, ತರುವಾಯ ಅವಿಶ್ವಾಸವಿಡುವುದು, ತರುವಾಯ ಪುನಃ ವಿಶ್ವಾಸವಿಡುವುದು, ತರುವಾಯ ಪುನಃ ಅವಿಶ್ವಾಸವಿಡುವುದು, ಬಳಿಕ ಯಾರು ಅವಿಶ್ವಾಸವನ್ನು ಹೆಚ್ಚು ಹೆಚ್ಚಾಗಿಸುತ್ತಾರೋ ಅವರಿಗೆ ಅಲ್ಲಾಹು ಎಂದೂ ಕ್ಷಮಿಸಲಾರನು ಮತ್ತು ಅವರನ್ನು ಎಂದೂ ಸನ್ಮಾರ್ಗದೆಡೆಗೆ ಮುನ್ನಡೆಸಲಾರನು.
(138) ಕಪಟ ವಿಶ್ವಾಸಿಗಳಿಗೆ ಯಾತನಾಮಯವಾದ ಶಿಕ್ಷೆಯಿದೆಯೆಂಬ ಶುಭವಾರ್ತೆಯನ್ನು ತಿಳಿಸಿರಿ.
(139) ಸತ್ಯವಿಶ್ವಾಸಿಗಳನ್ನು ಬಿಟ್ಟು ಸತ್ಯನಿಷೇಧಿಗಳನ್ನು ಆಪ್ತಮಿತ್ರರನ್ನಾಗಿ ಮಾಡಿಕೊಳ್ಳುವವರಾರೋ ಅವರು ಅವರ (ಸತ್ಯನಿಷೇಧಿಗಳ) ಬಳಿ ಪ್ರತಾಪವನ್ನು ಅರಸುತ್ತಿರುವರೇ? ಆದರೆ ಖಂಡಿತವಾಗಿಯೂ ಪ್ರತಾಪವು ಸಂಪೂರ್ಣವಾಗಿ ಅಲ್ಲಾಹುವಿನ ಅಧೀನದಲ್ಲಿದೆ.
(140) ಅಲ್ಲಾಹುವಿನ ಸೂಕ್ತಿಗಳು ನಿಷೇಧಿಸಲ್ಪಡುವುದನ್ನಾಗಲಿ ಅಪಹಾಸ್ಯಕ್ಕೊಳಗಾಗುವುದನ್ನಾಗಲಿ ನೀವು ಆಲಿಸಿದರೆ ಅಂತಹವರು ಬೇರಾವುದಾದರೂ ವಿಚಾರದಲ್ಲಿ ಪ್ರವೇಶಿಸುವ ತನಕ ನೀವು ಅವರೊಂದಿಗೆ ಕೂರದಿರಿ, ನೀವೇನಾದರೂ ಕೂರುವುದಾದರೆ ನೀವು ಕೂಡ ಅವರಂತೆಯೇ ಆಗುವಿರಿ ಎಂದು ಈ ಗ್ರಂಥದಲ್ಲಿ ಅಲ್ಲಾಹು ನಿಮಗೆ ಅವತೀರ್ಣಗೊಳಿಸಿರುವನು.(135) ಖಂಡಿತವಾಗಿಯೂ ಅಲ್ಲಾಹು ಕಪಟವಿಶ್ವಾಸಿಗಳನ್ನು ಮತ್ತು ಅವಿಶ್ವಾಸಿಗಳನ್ನು ಒಟ್ಟಾಗಿ ನರಕಾಗ್ನಿಯಲ್ಲಿ ಒಟ್ಟುಗೂಡಿಸುವನು.
135. ಈ ಸೂಕ್ತಿ ಅವತೀರ್ಣಗೊಂಡದ್ದು ಮದೀನದಲ್ಲಾಗಿದೆ. ಮಕ್ಕಾದಲ್ಲಿ ಅವತೀರ್ಣಗೊಂಡ ಸೂರಃ ಅಲ್‍ಅನ್‌ಆಮ್‍ನ 68ನೇ ಸೂಕ್ತಿಯಲ್ಲಿಯೂ ಈ ವಿಷಯದ ಕುರಿತು ಎಚ್ಚರಿಕೆಯಿದೆ.
(141) ನಿಮ್ಮ ಸ್ಥಿತಿಗತಿಗಳನ್ನು ಅವರು (ಕಪಟವಿಶ್ವಾಸಿಗಳು) ಸೂಕ್ಷ್ಮವಾಗಿ ಗಮನಿಸುತ್ತಿರುವರು. ನಿಮಗೆ ಅಲ್ಲಾಹುವಿನ ವತಿಯಿಂದ ಯಾವುದಾದರೂ ಗೆಲುವು ಪ್ರಾಪ್ತವಾದರೆ ‘ನಾವು ನಿಮ್ಮೊಂದಿಗಿರಲಿಲ್ಲವೇ?’ ಎಂದು ಅವರು ಹೇಳುವರು. ಅವಿಶ್ವಾಸಿಗಳಿಗೇನಾದರೂ ಲಾಭವುಂಟಾದರೆ ‘ನಿಮ್ಮ ಮೇಲೆ ನಾವು ಗೆಲುವಿನ ಸಾಧ್ಯತೆಯನ್ನು ಗಳಿಸಿಯೂ ವಿಶ್ವಾಸಿಗಳಿಂದ ನಿಮ್ಮನ್ನು ರಕ್ಷಿಸಲಿಲ್ಲವೇ?’ ಎನ್ನುವರು. ಆದರೆ ಪುನರುತ್ಥಾನ ದಿನದಂದು ಅಲ್ಲಾಹು ನಿಮ್ಮ ಮಧ್ಯೆ ತೀರ್ಪು ನೀಡುವನು. ಅಲ್ಲಾಹು ಸತ್ಯವಿಶ್ವಾಸಿಗಳಿಗೆ ವಿರುದ್ಧವಾಗಿ ಸತ್ಯನಿಷೇಧಿಗಳಿಗೆ ಎಂದಿಗೂ ಮಾರ್ಗವನ್ನು ತೆರೆದುಕೊಡಲಾರನು.
(142) ಖಂಡಿತವಾಗಿಯೂ ಕಪಟವಿಶ್ವಾಸಿಗಳು ಅಲ್ಲಾಹುವನ್ನು ವಂಚಿಸುತ್ತಿರುವರು. ಆದರೆ ವಾಸ್ತವಿಕವಾಗಿ ಅಲ್ಲಾಹು ಅವರನ್ನು ವಂಚಿಸುತ್ತಿರುವನು.(136) ಅವರು ನಮಾಝ್‍ಗಾಗಿ ನಿಂತರೆ ಉದಾಸೀನರಾಗಿ ಮತ್ತು ಜನರಿಗೆ ತೋರಿಸುವ ಸಲುವಾಗಿ ನಿಲ್ಲುವರು. ಅಲ್ಪವೇ ವಿನಾ ಅವರು ಅಲ್ಲಾಹುವನ್ನು ಸ್ಮರಿಸಲಾರರು.
136. ಅಲ್ಲಾಹುವನ್ನು ವಂಚಿಸಬಹುದೆಂಬ ಭಾವನೆಯಲ್ಲಿ ಅವರು ಮಾಡುವ ಯಾವುದೇ ಕಾರ್ಯವೂ ಸ್ವತಃ ಅವರಿಗೇ ದೋಷವನ್ನು ತರುತ್ತದೆ. ಹೀಗೆ ಅವರಿಗೆ ಅರಿವಿಲ್ಲದೆಯೇ ಅವರು ಆತ್ಮವಂಚನೆ ಮಾಡುವ ಅವಸ್ಥೆಯನ್ನು ಅಲ್ಲಾಹು ಅವರಿಗೆ ಉಂಟುಮಾಡುತ್ತಾನೆ. ಇದು ಅಲ್ಲಾಹು ಅವರನ್ನು ವಂಚಿಸುತ್ತಿರುವನು ಎಂಬುದರ ತಾತ್ಪರ್ಯವಾಗಿದೆ.
(143) ಅವರು ಆ ಗುಂಪಿಗೋ ಈ ಗುಂಪಿಗೋ ಸೇರದೆ ಅದರ ಮಧ್ಯದಲ್ಲಿ ತೊಳಲಾಡುತ್ತಿರುವರು. ಅಲ್ಲಾಹು ಯಾರನ್ನಾದರೂ ದಾರಿಗೆಡಿಸಿದರೆ ತರುವಾಯ ಅವನಿಗೆ ಯಾವುದೇ ಮಾರ್ಗವನ್ನೂ ತಾವು ಕಾಣಲಾರಿರಿ.
(144) ಓ ಸತ್ಯವಿಶ್ವಾಸಿಗಳೇ! ನೀವು ಸತ್ಯವಿಶ್ವಾಸಿಗಳನ್ನಲ್ಲದೆ ಸತ್ಯನಿಷೇಧಿಗಳನ್ನು ಆಪ್ತಮಿತ್ರರನ್ನಾಗಿ ಮಾಡಿಕೊಳ್ಳದಿರಿ. ನಿಮ್ಮ ವಿರುದ್ಧ ಅಲ್ಲಾಹುವಿಗೆ ಸ್ಪಷ್ಟ ಪುರಾವೆಯನ್ನು ಮಾಡಿಕೊಡಲು ನೀವು ಇಚ್ಛಿಸುತ್ತಿರುವಿರಾ?
(145) ಖಂಡಿತವಾಗಿಯೂ ಕಪಟ ವಿಶ್ವಾಸಿಗಳು ನರಕದ ಅತ್ಯಂತ ತಳಮಟ್ಟದಲ್ಲಿರುವರು. ಅವರಿಗೆ ಯಾವುದೇ ಸಹಾಯಕನನ್ನೂ ತಾವು ಕಾಣಲಾರಿರಿ.
(146) ಆದರೆ ಪಶ್ಚಾತ್ತಾಪಪಟ್ಟು ಮರಳಿದವರು, ತಮ್ಮ ನಿಲುವನ್ನು ಉತ್ತಮಗೊಳಿಸಿದವರು, ಅಲ್ಲಾಹುವನ್ನು ಬಿಗಿಯಾಗಿ ಹಿಡಿದುಕೊಂಡವರು ಮತ್ತು ತಮ್ಮ ಧರ್ಮವನ್ನು ಅಲ್ಲಾಹುವಿಗೋಸ್ಕರ ನಿಷ್ಕಳಂಕಗೊಳಿಸಿದವರ ಹೊರತು. ಅವರು ಸತ್ಯವಿಶ್ವಾಸಿಗಳ ಜೊತೆಯಲ್ಲಿರುವವರಾಗಿರುವರು. ಸತ್ಯವಿಶ್ವಾಸಿಗಳಿಗೆ ಅಲ್ಲಾಹು ಮಹಾ ಪ್ರತಿಫಲವನ್ನು ನೀಡುವನು.
(147) ನೀವು ಕೃತಜ್ಞತೆ ಸಲ್ಲಿಸಿದರೆ ಮತ್ತು ವಿಶ್ವಾಸವಿಟ್ಟರೆ ನಿಮ್ಮನ್ನು ಶಿಕ್ಷಿಸಿ ಅಲ್ಲಾಹು ಮಾಡುವುದಾದರೂ ಏನು? ಅಲ್ಲಾಹು ಕೃತಜ್ಞನೂ ಸರ್ವಜ್ಞನೂ ಆಗಿರುವನು.
(148) ಕೆಟ್ಟ ಪದಗಳನ್ನು ಬಹಿರಂಗವಾಗಿ ಬಳಸುವುದನ್ನು ಅಲ್ಲಾಹು ಮೆಚ್ಚಲಾರನು; ಆದರೆ ಅನ್ಯಾಯಕ್ಕೊಳಗಾದವನ ಹೊರತು.(137) ಅಲ್ಲಾಹು ಎಲ್ಲವನ್ನು ಆಲಿಸುವವನೂ ಅರಿಯುವವನೂ ಆಗಿರುವನು.
137. ದೂಷಣೆಗೊಳಗಾದವನು ಅದಕ್ಕೆ ಸಮಾನವಾದ ಭಾಷೆಯಲ್ಲಿ ಮರಳಿ ದೂಷಿಸಬಹುದು. ಹಿಂಸೆಗೊಳಗಾದವನು ಹಿಂಸಿದವನನ್ನು ದೂಷಿಸಬಹುದು. ಕೆಟ್ಟ ಪದಗಳನ್ನು ಬಹಿರಂಗವಾಗಿ ಹೇಳುವುದಕ್ಕಿರುವ ನಿಷೇಧವು ಹಿಂಸೆಗೊಳಗಾದವರಿಗೆ ಅನ್ವಯಿಸುವುದಿಲ್ಲ.
(149) ನೀವು ಒಂದು ಸತ್ಕರ್ಮವನ್ನು ಬಹಿರಂಗವಾಗಿ ಅಥವಾ ರಹಸ್ಯವಾಗಿ ಮಾಡುವುದಾದರೆ ಅಥವಾ ಒಂದು ದುಷ್ಕರ್ಮವನ್ನು ಮನ್ನಿಸುವುದಾದರೆ ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಸರ್ವಶಕ್ತನೂ ಆಗಿರುವನು.
(150) ಅಲ್ಲಾಹುವಿನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ಅವಿಶ್ವಾಸವಿಟ್ಟವರು, ಅಲ್ಲಾಹು ಮತ್ತು ಅವನ ಸಂದೇಶವಾಹಕರ ಮಧ್ಯೆ (ವಿಶ್ವಾಸದಲ್ಲಿ) ವ್ಯತ್ಯಾಸ ಕಲ್ಪಿಸಲು ಬಯಸುವವರು ಮತ್ತು ‘ನಾವು ಕೆಲವರಲ್ಲಿ ವಿಶ್ವಾಸವಿಡುವೆವು ಮತ್ತು ಕೆಲವರನ್ನು ನಿಷೇಧಿಸುವೆವು’ ಎಂದು ಹೇಳುವವರು,(138) ತನ್ನಿಮಿತ್ತ ಅವುಗಳ ಮಧ್ಯೆ (ವಿಶ್ವಾಸ ಮತ್ತು ಅವಿಶ್ವಾಸದ ಮಧ್ಯೆ) ಭಿನ್ನ ಮಾರ್ಗವೊಂದನ್ನು ಸ್ವೀಕರಿಸಲು ಬಯಸುವವರು ಯಾರೋ,
138. ಅಲ್ಲಾಹುವಿನಲ್ಲಿ ವಿಶ್ವಾಸವಿಟ್ಟಿದ್ದೇವೆ ಎನ್ನುವವರ ಪೈಕಿ ಕೆಲವರು ಪ್ರವಾದಿಗಳನ್ನು ನಿಷೇಧಿಸುತ್ತಾರೆ. ಹಾಗೆಯೇ ಕೆಲವು ಪ್ರವಾದಿಗಳಲ್ಲಿ ವಿಶ್ವಾಸವಿಡುವವರು ಇತರ ಕೆಲವು ಪ್ರವಾದಿಗಳನ್ನು ನಿಷೇಧಿಸುತ್ತಾರೆ.
(151) ಸತ್ಯವಾಗಿಯೂ ಅವಿಶ್ವಾಸಿಗಳು ಅವರೇ ಆಗಿರುವರು. ಅವಿಶ್ವಾಸಿಗಳಿಗೆ ನಾವು ನಿಂದನೀಯ ಶಿಕ್ಷೆಯನ್ನು ಸಿದ್ಧಗೊಳಿಸಿರುವೆವು.
(152) ಅಲ್ಲಾಹುವಿನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡುವವರು ಮತ್ತು ಅವರ ಪೈಕಿ ಯಾರ ನಡುವೆಯೂ ವ್ಯತ್ಯಾಸ ಕಲ್ಪಿಸದವರು ಯಾರೋ ಅವರಿಗೆ ಅಲ್ಲಾಹು ಅರ್ಹ ಪ್ರತಿಫಲವನ್ನು ನೀಡುವನು. ಅಲ್ಲಾಹು ಅತ್ಯಧಿಕವಾಗಿ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(153) ತಾವು ಅವರಿಗೆ ಆಕಾಶದಿಂದ ಒಂದು ಗ್ರಂಥವನ್ನು ಇಳಿಸಿಕೊಡಬೇಕೆಂದು ಗ್ರಂಥದವರು ತಮ್ಮೊಂದಿಗೆ ಕೇಳುತ್ತಿರುವರು. ಆದರೆ ಅದಕ್ಕಿಂತಲೂ ಗುರುತರವಾದುದನ್ನು ಅವರು ಮೂಸಾರೊಂದಿಗೆ ಕೇಳಿದ್ದರು. (ಅಂದರೆ) ‘ಅಲ್ಲಾಹುವನ್ನು ನಮಗೆ ಬಹಿರಂಗವಾಗಿ ತೋರಿಸಿಕೊಡಿರಿ’ ಎಂದವರು ಹೇಳಿದ್ದರು. ಆಗ ಅವರ ಅಕ್ರಮದ ನಿಮಿತ್ತ ಅಗ್ನಿಮಿಂಚು ಅವರನ್ನು ಹಿಡಿದುಬಿಟ್ಟಿತು. ತರುವಾಯ ಅವರ ಬಳಿಗೆ ಸ್ಪಷ್ಟವಾದ ಪುರಾವೆಗಳು ಬಂದ ಬಳಿಕವೂ ಅವರು ಕರುವನ್ನು (ಆರಾಧ್ಯವನ್ನಾಗಿ) ಮಾಡಿಕೊಂಡರು. (ಆದರೂ) ನಾವು ಅದನ್ನು ಕ್ಷಮಿಸಿದೆವು. ಮೂಸಾರಿಗೆ ನಾವು ಸ್ಪಷ್ಟವಾದ ಆಧಾರಪ್ರಮಾಣವನ್ನು ನೀಡಿರುವೆವು.
(154) ಅವರೊಂದಿಗೆ ಕರಾರು ಪಡೆಯುವ ಸಲುವಾಗಿ ನಾವು ಅವರ ಮೇಲೆ ಪರ್ವತವನ್ನು ಎತ್ತಿಹಿಡಿದೆವು. ‘(ಪಟ್ಟಣದ) ದ್ವಾರವನ್ನು ತಲೆಬಾಗುತ್ತಾ ಪ್ರವೇಶಿಸಿರಿ’ ಎಂದು ನಾವು ಅವರೊಂದಿಗೆ ಹೇಳಿದೆವು. ‘ನೀವು ಸಬ್ಬತ್ ದಿನದಂದು ಅತಿಕ್ರಮವೆಸಗದಿರಿ’ ಎಂದೂ ನಾವು ಅವರೊಂದಿಗೆ ಹೇಳಿದೆವು. ನಾವು ಅವರಿಂದ ಸುದೃಢವಾದ ಒಂದು ಕರಾರನ್ನು ಪಡೆದಿರುವೆವು.
(155) ತರುವಾಯ ಅವರು ಕರಾರನ್ನು ಉಲ್ಲಂಘಿಸಿರುವುದರಿಂದಲೂ, ಅಲ್ಲಾಹುವಿನ ದೃಷ್ಟಾಂತಗಳನ್ನು ನಿಷೇಧಿಸಿರುವುದರಿಂದಲೂ, ಅನ್ಯಾಯವಾಗಿ ಪ್ರವಾದಿಗಳನ್ನು ವಧಿಸಿರುವುದರಿಂದಲೂ ಮತ್ತು ತಮ್ಮ ಹೃದಯಗಳು ಮುಚ್ಚಿಹೋಗಿವೆಯೆಂದು ಹೇಳಿರುವುದರಿಂದಲೂ (ಅವರು ಶಪಿಸಲ್ಪಟ್ಟಿರುವರು). ಮಾತ್ರವಲ್ಲ, ಅವರ ಸತ್ಯನಿಷೇಧದ ನಿಮಿತ್ತ ಅಲ್ಲಾಹು ಆ ಹೃದಯಗಳ ಮೇಲೆ ಮುದ್ರೆಯೊತ್ತಿರುವನು. ಆದ್ದರಿಂದ ಅವರು ಅಲ್ಪವೇ ವಿನಾ ವಿಶ್ವಾಸವಿಡಲಾರರು.
(156) ಅವರ ಸತ್ಯನಿಷೇಧದ ನಿಮಿತ್ತ ಮತ್ತು ಮರ್ಯಮ್‍ರ ಮೇಲೆ ಅವರು ಘೋರವಾದ ಅಪವಾದವನ್ನು ಹೊರಿಸಿದ ನಿಮಿತ್ತವೂ (ಅವರು ಶಪಿಸಲ್ಪಟ್ಟಿರುವರು)(139)
139. ಈಸಾ(ಅ) ರವರು ವೇಶ್ಯಾಸಂತತಿ ಮತ್ತು ಮರ್ಯಮ್ ವೇಶ್ಯೆಯಾಗಿದ್ದಾರೆ ಎಂದು ಯಹೂದರು ಆರೋಪಿಸಿದ್ದರು. ಈಸಾ(ಅ) ರವರು ತೊಟ್ಟಿಲಲ್ಲಿ ಮಲಗಿರುವ ಶಿಶುವಾಗಿರುವಾಗಲೇ ಅವರ ಮೂಲಕ ಅಲ್ಲಾಹು ಈ ಆರೋಪಕ್ಕೆ ಉತ್ತರವಿತ್ತಿದ್ದಾನೆ.
(157) ಅಲ್ಲಾಹುವಿನ ಸಂದೇಶವಾಹಕರಾದ ಮರ್ಯಮ್‍ರ ಪುತ್ರ ಮಸೀಹ ಈಸಾರನ್ನು ನಾವು ಕೊಂದಿರುವೆವು ಎಂದು ಅವರು ಹೇಳಿದ ನಿಮಿತ್ತವೂ (ಅವರು ಶಪಿಸಲ್ಪಟ್ಟಿರುವರು). ವಾಸ್ತವಿಕವಾಗಿ ಅವರು ಅವರನ್ನು ಕೊಂದಿಲ್ಲ ಮತ್ತು ಶಿಲುಬೆಗೇರಿಸಿಯೂ ಇಲ್ಲ. ಆದರೆ ಅವರಿಗೆ (ವಾಸ್ತವಿಕತೆಯನ್ನು) ಗುರುತಿಸಲು ಸಾಧ್ಯವಾಗದೆ ಹೋಯಿತು.(140) ಖಂಡಿತವಾಗಿಯೂ ಅವರ (ಈಸಾರ) ವಿಷಯದಲ್ಲಿ ಭಿನ್ನರಾದವರು ಯಾರೋ ಅವರು ಅದರ ಬಗ್ಗೆ ಸಂದೇಹದಲ್ಲಿಯೇ ಇರುವರು. ಊಹಾಪೋಹಗಳನ್ನು ಅನುಸರಿಸುವುದರ ಹೊರತು ಅದರ ಬಗ್ಗೆ ಅವರಿಗೆ ಯಾವುದೇ ಅರಿವೂ ಇಲ್ಲ. ಖಂಡಿತವಾಗಿಯೂ ಅವರು ಅವರನ್ನು ಕೊಂದಿಲ್ಲ.
140. ಈಸಾ(ಅ) ರವರು (ಯೇಸುಕ್ರಿಸ್ತರು) ಶಿಲುಬೆಗೇರಿಸಲ್ಪಟ್ಟಿಲ್ಲ, ಅವರು ಅಲ್ಲಾಹುವಿನೆಡೆಗೆ ಎತ್ತಲ್ಪಟ್ಟಿರುವರೆಂದು ಕುರ್‌ಆನ್ ನಿಖರವಾಗಿ ಹೇಳಿದೆ. ಆದರೆ ಶಿಲುಬೆ ಘಟನೆಯ ಕುರಿತು ಹೆಚ್ಚಿನ ಮಾಹಿತಿಗಳು ಕುರ್‌ಆನ್‍ನಲ್ಲಾಗಲಿ ಬೈಬಲ್‍ನಲ್ಲಾಗಲಿ ಕಂಡುಬರುವುದಿಲ್ಲ. ಕೆಲವು ಗ್ರಂಥಗಳಲ್ಲಿ ಕಾಣುವ ಮಾಹಿತಿಗಳ ಪೈಕಿ ಹೆಚ್ಚಿನವುಗಳೂ ಯಾವುದೇ ಆಧಾರವನ್ನು ಹೊಂದಿಲ್ಲ.
(158) ಆದರೆ ಅಲ್ಲಾಹು ಅವರನ್ನು ತನ್ನೆಡೆಗೆ ಎತ್ತಿಕೊಂಡಿರುವನು. ಅಲ್ಲಾಹು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.
(159) ಗ್ರಂಥದವರ ಪೈಕಿ ಯಾರೂ ಕೂಡ ಅವರ (ಈಸಾರ) ಮರಣಕ್ಕೆ ಮುಂಚಿತವಾಗಿ ಅವರಲ್ಲಿ ವಿಶ್ವಾಸವಿಡದೆ ಇರಲಾರರು.(141) ಪುನರುತ್ಥಾನ ದಿನದಂದು ಅವರು ಅವರಿಗೆ ವಿರುದ್ಧವಾಗಿ ಸಾಕ್ಷಿಯಾಗುವರು.
141. ಈ ಸೂಕ್ತಿಗೆ ಎರಡು ರೀತಿಯ ವ್ಯಾಖ್ಯಾನಗಳನ್ನು ನೀಡಲಾಗಿದೆ: 1. ಗ್ರಂಥದವರ ಪೈಕಿ ಯಾರೂ ಈಸಾ(ಅ) ರವರ ಮರಣಕ್ಕೆ ಮುಂಚಿತವಾಗಿ ಅವರಲ್ಲಿ ವಿಶ್ವಾಸವಿಡದಿರಲಾರನು. 2. ಗ್ರಂಥದವರ ಪೈಕಿ ಒಬ್ಬನೂ ಕೂಡ ತನ್ನ ಮರಣಕ್ಕೆ ಮುಂಚಿತವಾಗಿ ಈಸಾ(ಅ) ರವರಲ್ಲಿ ವಿಶ್ವಾಸವಿಡದಿರಲಾರನು. ಮೊದಲನೆಯದರ ವಿವರಣೆಯು ಹೀಗಿದೆ: ಈಸಾ(ಅ) ರವರು ಮತ್ತೊಮ್ಮೆ ಭೂಮಿಗಿಳಿದು ಬಂದು ಇಲ್ಲಿ ಮರಣಹೊಂದುವುದಕ್ಕೆ ಮುಂಚಿತವಾಗಿ ಆ ಕಾಲದಲ್ಲಿ ಬದುಕಿರುವ ಗ್ರಂಥದವರ ಪೈಕಿ ಯಾರೂ ಅವರಲ್ಲಿ ವಿಶ್ವಾಸವಿಡದಿರಲಾರನು. ಎರಡನೆಯದರ ವಿವರಣೆಯು ಹೀಗಿದೆ: ಗ್ರಂಥದವರ ಪೈಕಿ ಒಬ್ಬನೂ ತನ್ನ ಮರಣಕ್ಕೆ ಮುಂಚಿತವಾಗಿ –ಮರಣಾಸನ್ನ ವೇಳೆಯಲ್ಲಿಯಾದರೂ– ಈಸಾ(ಅ) ರವರಲ್ಲಿ ವಿಶ್ವಾಸವಿಡದಿರಲಾರನು.
(160) ಯಹೂದರಾಗಿರುವವರ ಅಕ್ರಮದ ನಿಮಿತ್ತ ಮತ್ತು ಅಲ್ಲಾಹುವಿನ ಮಾರ್ಗದಿಂದ ಅವರು ಜನರನ್ನು ಹೇರಳವಾಗಿ ತಡೆಗಟ್ಟಿದ ನಿಮಿತ್ತ ಅವರಿಗೆ ಅನುಮತಿಸಲಾಗಿರುವ ಅನೇಕ ಉತ್ತಮ ವಸ್ತುಗಳನ್ನು ನಾವು ಅವರಿಗೆ ನಿಷಿದ್ಧಗೊಳಿಸಿದೆವು.
(161) ಬಡ್ಡಿಯನ್ನು ಅವರಿಗೆ ವಿರೋಧಿಸಲಾಗಿದ್ದೂ ಅವರು ಅದನ್ನು ಪಡೆದ ನಿಮಿತ್ತವೂ, ಜನರ ಸಂಪತ್ತನ್ನು ಅವರು ಅನ್ಯಾಯವಾಗಿ ತಿಂದ ನಿಮಿತ್ತವೂ (ಅವರಿಗೆ ಅವುಗಳನ್ನು ನಿಷಿದ್ಧಗೊಳಿಸಲಾಯಿತು). ಅವರಲ್ಲಿರುವ ಸತ್ಯನಿಷೇಧಿಗಳಿಗೆ ನಾವು ಯಾತನಾಮಯ ಶಿಕ್ಷೆಯನ್ನು ಸಿದ್ಧಗೊಳಿಸಿರುವೆವು.
(162) ಆದರೆ ಅವರ ಪೈಕಿ ದೃಢಜ್ಞಾನವಿರುವವರು ಮತ್ತು ಸತ್ಯವಿಶ್ವಾಸಿಗಳಾಗಿರುವವರು ತಮಗೆ ಅವತೀರ್ಣಗೊಂಡಿರುವುದರಲ್ಲಿ ಮತ್ತು ತಮಗಿಂತ ಮುಂಚೆ ಅವತೀರ್ಣಗೊಂಡಿರುವುದರಲ್ಲಿ ವಿಶ್ವಾಸವಿಡುತ್ತಿರುವರು. ಅವರು ನಮಾಝ್ ಸಂಸ್ಥಾಪಿಸುವವರೂ, ಝಕಾತ್ ನೀಡುವವರೂ, ಅಲ್ಲಾಹುವಿನಲ್ಲಿ ಹಾಗೂ ಅಂತ್ಯದಿನದಲ್ಲಿ ವಿಶ್ವಾಸವಿಡುವವರೂ ಆಗಿರುವರು. ಅಂತಹವರಿಗೆ ನಾವು ಮಹಾ ಪ್ರತಿಫಲವನ್ನು ದಯಪಾಲಿಸುವೆವು.
(163) (ಓ ಪ್ರವಾದಿಯವರೇ!) ನೂಹ್ ಮತ್ತು ಅವರ ನಂತರದ ಪ್ರವಾದಿಗಳಿಗೆ ನಾವು ದಿವ್ಯಸಂದೇಶ ನೀಡಿರುವಂತೆ ತಮಗೂ ನಾವು ದಿವ್ಯಸಂದೇಶ ನೀಡಿರುವೆವು. ಇಬ್ರಾಹೀಮ್, ಇಸ್ಮಾಈಲ್, ಇಸ್‍ಹಾಕ್, ಯಅ್‌ಕೂಬ್, ಯಅ್‌ಕೂಬ್ ಸಂತತಿಗಳು, ಈಸಾ, ಅಯ್ಯೂಬ್, ಯೂನುಸ್, ಹಾರೂನ್, ಸುಲೈಮಾನ್ ಮುಂತಾದವರಿಗೂ ನಾವು ದಿವ್ಯಸಂದೇಶ ನೀಡಿರುವೆವು. ದಾವೂದ್‍ರಿಗೆ ನಾವು ಝಬೂರನ್ನು ನೀಡಿರುವೆವು.
(164) ನಾವು ಈಗಾಗಲೇ ತಮಗೆ ತಿಳಿಸಿಕೊಟ್ಟಿರುವ ಸಂದೇಶವಾಹಕರನ್ನು ಮತ್ತು ನಾವು ತಮಗೆ ತಿಳಿಸಿ ಕೊಟ್ಟಿರದಂತಹ ಸಂದೇಶವಾಹಕರನ್ನು (ನಾವು ಕಳುಹಿಸಿರುವೆವು). ಅಲ್ಲಾಹು ಮೂಸಾರೊಂದಿಗೆ ನೇರವಾಗಿ ಮಾತನಾಡಿರುವನು.
(165) ಶುಭವಾರ್ತೆ ತಿಳಿಸುವ ಮತ್ತು ಮುನ್ನೆಚ್ಚರಿಕೆ ನೀಡುವ ಸಂದೇಶವಾಹಕರು. ಸಂದೇಶವಾಹಕರ ನಿಯೋಗಾನಂತರ ಅಲ್ಲಾಹುವಿಗೆ ವಿರುದ್ಧವಾಗಿ ಜನರಿಗೆ ಯಾವುದೇ ಪುರಾವೆಯೂ ಇಲ್ಲದಿರುವ ಸಲುವಾಗಿ. ಅಲ್ಲಾಹು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.
(166) ಆದರೆ ಅಲ್ಲಾಹು ತಮಗೆ ಏನನ್ನು ಅವತೀರ್ಣಗೊಳಿಸಿರುವನೋ ಅದರ ಕುರಿತು ಸ್ವತಃ ಅವನೇ ಸಾಕ್ಷ್ಯ ವಹಿಸುವನು. ಅವನು ಅದನ್ನು ಅವತೀರ್ಣಗೊಳಿಸಿರುವುದು ಅವನ ಅರಿವಿನೊಂದಿಗೇ ಆಗಿದೆ. ಮಲಕ್‍ಗಳೂ (ಅದಕ್ಕೆ) ಸಾಕ್ಷ್ಯ ವಹಿಸುವರು. ಸಾಕ್ಷಿಯಾಗಿ ಅಲ್ಲಾಹು ಸಾಕು.
(167) ಅವಿಶ್ವಾಸವಿಟ್ಟವರು ಮತ್ತು ಅಲ್ಲಾಹುವಿನ ಮಾರ್ಗದಿಂದ (ಜನರನ್ನು) ತಡೆಯುವವರು ಯಾರೋ ಖಂಡಿತವಾಗಿಯೂ ಅವರು ವಿದೂರವಾದ ಪಥಭ್ರಷ್ಟತೆಯಲ್ಲಿರುವರು.
(168) ಅವಿಶ್ವಾಸವಿಟ್ಟವರು ಮತ್ತು ಅಕ್ರಮವೆಸಗಿದವರು ಯಾರೋ ಅವರನ್ನು ಅಲ್ಲಾಹು ಎಂದಿಗೂ ಕ್ಷಮಿಸಲಾರನು. ಅವರಿಗೆ ಮಾರ್ಗವನ್ನೂ ತೋರಿಸಿಕೊಡಲಾರನು.
(169) ನರಕದ ಮಾರ್ಗವನ್ನು ಬಿಟ್ಟು. ಅವರು ಅದರಲ್ಲಿ ಎಂದೆಂದಿಗೂ ಶಾಶ್ವತರಾಗಿ ವಾಸಿಸುವರು. ಅಲ್ಲಾಹುವಿಗೆ ಅದು ಬಹಳ ಸುಲಭವಾದ ವಿಷಯವಾಗಿದೆ.
(170) ಓ ಜನರೇ! ನಿಮ್ಮ ರಬ್‌ನ ವತಿಯ ಸತ್ಯದೊಂದಿಗೆ ಸಂದೇಶವಾಹಕರು ನಿಮ್ಮ ಬಳಿಗೆ ಬಂದಿರುವರು. ಆದ್ದರಿಂದ ನಿಮ್ಮ ಒಳಿತಿಗಾಗಿ ನೀವು ವಿಶ್ವಾಸವಿಡಿರಿ. ನೀವು ನಿಷೇಧಿಸುವುದಾದರೆ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹುವಿನದ್ದಾಗಿವೆ. ಅಲ್ಲಾಹು ಎಲ್ಲವನ್ನು ಅರಿಯುವವನೂ ಯುಕ್ತಿಪೂರ್ಣನೂ ಆಗಿರುವನು.
(171) ಓ ಗ್ರಂಥದವರೇ! ನೀವು ಧರ್ಮದ ವಿಷಯದಲ್ಲಿ ಹದ್ದುಮೀರದಿರಿ. ಅಲ್ಲಾಹುವಿನ ಹೆಸರಲ್ಲಿ ಸತ್ಯವನ್ನೇ ಹೊರತು ಬೇರೇನನ್ನೂ ಹೇಳದಿರಿ. ಮರ್ಯಮ್‍ರ ಮಗನಾದ ಮಸೀಹ ಈಸಾ ಅಲ್ಲಾಹುವಿನ ಸಂದೇಶವಾಹಕರೂ, ಮರ್ಯಮ್‍ರಿಗೆ ಅವನು ಹಾಕಿಕೊಟ್ಟ ಅವನ ವಚನವೂ ಅವನಿಂದಿರುವ ಒಂದು ಆತ್ಮವೂ ಮಾತ್ರವಾಗಿರುವರು. ಆದ್ದರಿಂದ ನೀವು ಅಲ್ಲಾಹುವಿನಲ್ಲಿಯೂ ಅವನ ಸಂದೇಶವಾಹಕರಲ್ಲಿಯೂ ವಿಶ್ವಾಸವಿಡಿರಿ. ‘ತ್ರಿಯೇಕತ್ವ’ ಎಂದು ಹೇಳದಿರಿ.(142) ನಿಮ್ಮ ಒಳಿತಿಗಾಗಿ ನೀವು (ಹಾಗೆ ಹೇಳುವುದನ್ನು) ನಿಲ್ಲಿಸಿರಿ. ಅಲ್ಲಾಹು ಏಕಮೇವ ಆರಾಧ್ಯನು ಮಾತ್ರವಾಗಿರುವನು. ತನಗೊಂದು ಸಂತತಿಯುಂಟಾಗುವುದು ಎಂಬುದರಿಂದ ಅವನು ಪರಮಪಾವನನಾಗಿರುವನು. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನದ್ದಾಗಿದೆ. ಕಾರ್ಯನಿರ್ವಾಹಕನಾಗಿ ಅಲ್ಲಾಹು ಸಾಕು.
142. ತ್ರಿಯೇಕತ್ವ ಎಂಬುದು ಪ್ರವಾದಿ ಈಸಾ(ಅ) ರವರ ನಂತರ ಕ್ರೈಸ್ತ ಸಭೆಯು ಹೆಣೆದ ಒಂದು ವಿಚಿತ್ರ ದೇವಪರಿಕಲ್ಪನೆಯಾಗಿದೆ. ಅವರ ಪ್ರಕಾರ ತ್ರಿಯೇಕತ್ವ ಎಂದರೆ ತಂದೆ, ಮಗ ಮತ್ತು ಪವಿತ್ರಾತ್ಮ ಎಂಬ ಮೂರು ರೂಪಗಳಿರುವ ಒಂದೇ ದೇವರು ಎಂದಾಗಿದೆ.
(172) ಅಲ್ಲಾಹುವಿನ ದಾಸನಾಗಿರುವುದರಲ್ಲಿ ಮಸೀಹರು ಎಂದೂ ತಿರಸ್ಕಾರ ಭಾವನೆಯನ್ನು ತೋರಲಾರರು. (ಅಲ್ಲಾಹುವಿನ) ಸಾಮೀಪ್ಯವನ್ನು ಗಳಿಸಿದ ಮಲಕ್‍ಗಳೂ (ತೋರಲಾರರು). ಯಾರು ಅವನನ್ನು (ಅಲ್ಲಾಹುವನ್ನು) ಆರಾಧಿಸುವುದರಲ್ಲಿ ತಿರಸ್ಕಾರ ಭಾವನೆಯನ್ನು ತೋರುವನೋ ಮತ್ತು ದುರಹಂಕಾರಪಡುವನೋ ಅವರೆಲ್ಲರನ್ನೂ ಅವನು ತನ್ನ ಬಳಿಗೆ ಒಟ್ಟುಗೂಡಿಸುವನು.
(173) ವಿಶ್ವಾಸವಿಟ್ಟವರು ಮತ್ತು ಸತ್ಕರ್ಮಗೈದವರು ಯಾರೋ ಅವರ ಪ್ರತಿಫಲವನ್ನು ಅವನು ಅವರಿಗೆ ಪೂರ್ಣವಾಗಿ ನೀಡುವನು ಮತ್ತು ತನ್ನ ಅನುಗ್ರಹದಿಂದ ಅವರಿಗೆ ಹೆಚ್ಚುವರಿಯಾಗಿ ದಯಪಾಲಿಸುವನು. ಆದರೆ ತಿರಸ್ಕಾರ ಭಾವನೆಯನ್ನು ತೋರುವವರು ಮತ್ತು ದುರಹಂಕಾರ ಪಡುವವರು ಯಾರೋ ಅವರಿಗೆ ಅವನು ಯಾತನಾಮಯವಾದ ಶಿಕ್ಷೆಯನ್ನು ನೀಡುವನು. ಅವರು ಅಲ್ಲಾಹುವಿನ ಹೊರತು ಯಾವುದೇ ರಕ್ಷಕನನ್ನಾಗಲಿ ಸಹಾಯಕನನ್ನಾಗಲಿ ಕಾಣಲಾರರು.
(174) ಓ ಮನುಷ್ಯರೇ! ಖಂಡಿತವಾಗಿಯೂ ನಿಮಗೆ ನಿಮ್ಮ ರಬ್‌ನ ವತಿಯಿಂದ ಸ್ಪಷ್ಟವಾದ ಪುರಾವೆಯು ಬಂದಿರುತ್ತದೆ. ನಾವು ನಿಮಗೆ ಸ್ಪಷ್ಟವಾದ ಒಂದು ಪ್ರಕಾಶವನ್ನೂ ಇಳಿಸಿಕೊಟ್ಟಿರುವೆವು.
(175) ಆದ್ದರಿಂದ ಯಾರು ಅಲ್ಲಾಹುವಿನಲ್ಲಿ ವಿಶ್ವಾಸವಿಡುವನೋ ಮತ್ತು ಅವನನ್ನು ಬಿಗಿಯಾಗಿ ಹಿಡಿದುಕೊಳ್ಳುವನೋ ಅವರನ್ನು ಅವನು ತನ್ನ ಕಾರುಣ್ಯದಲ್ಲಿ ಮತ್ತು ಅನುಗ್ರಹದಲ್ಲಿ ಪ್ರವೇಶ ಮಾಡಿಸುವನು. ಅವರನ್ನು ಅವನು ನೇರಮಾರ್ಗದಲ್ಲಿ ತನ್ನೆಡೆಗೆ ಮುನ್ನಡೆಸುವನು.
(176) (ಓ ಪ್ರವಾದಿಯವರೇ!) ಅವರು ತಮ್ಮೊಂದಿಗೆ ಧರ್ಮವಿಧಿಯನ್ನು ಕೇಳುತ್ತಿರುವರು. ತಾವು ಹೇಳಿರಿ: ‘ಕಲಾಲಃ’ದ(143) ಬಗ್ಗೆ ಅಲ್ಲಾಹು ನಿಮಗೆ ಧರ್ಮವಿಧಿಯನ್ನು ನೀಡುತ್ತಿರುವನು. ಅಂದರೆ ಮಕ್ಕಳಿಲ್ಲದ ಓರ್ವ ವ್ಯಕ್ತಿ ಮರಣಹೊಂದಿದರೆ ಮತ್ತು ಅವನಿಗೆ ಓರ್ವ ಸಹೋದರಿಯಿದ್ದರೆ ಅವನು ಬಿಟ್ಟು ಹೋದ ಸಂಪತ್ತಿನ ಅರ್ಧಭಾಗ ಅವಳಿಗಾಗಿದೆ. ಇನ್ನು (ಸಹೋದರಿ ಮೃತಪಡುವುದಾದರೆ) ಮತ್ತು ಅವಳಿಗೆ ಮಕ್ಕಳಿಲ್ಲದಿದ್ದರೆ ಸಹೋದರನು ಅವಳ (ಪೂರ್ಣ) ಹಕ್ಕುದಾರನಾಗುವನು. ಇನ್ನು ಇಬ್ಬರು ಸಹೋದರಿಯರಿದ್ದರೆ ಅವನು (ಸಹೋದರನು) ಬಿಟ್ಟು ಹೋದ ಸಂಪತ್ತಿನ ಮೂರನೇ ಎರಡು ಭಾಗವು ಅವರಿಗಾಗಿದೆ. ಇನ್ನು ಸಹೋದರರು ಮತ್ತು ಸಹೋದರಿಯರಿದ್ದರೆ ಇಬ್ಬರು ಸ್ತ್ರೀಯರಿಗೆ ಸಿಗುವ ಪಾಲು ಓರ್ವ ಪುರುಷನಿಗಿದೆ. ನೀವು ಪಥಭ್ರಷ್ಟರಾಗದಿರಲು ಅಲ್ಲಾಹು ನಿಮಗೆ ವಿಷಯಗಳನ್ನು ವಿವರಿಸಿಕೊಡುತ್ತಿರುವನು. ಅಲ್ಲಾಹು ಸರ್ವ ವಿಷಯಗಳ ಬಗ್ಗೆ ಅರಿವುಳ್ಳವನಾಗಿರುವನು.
143. ತಂದೆಯಾಗಲಿ, ಮಕ್ಕಳಾಗಲಿ ಇಲ್ಲದ ವ್ಯಕ್ತಿಯ ಉತ್ತರಾಧಿಕಾರ ಸಮಸ್ಯೆಯನ್ನು `ಕಲಾಲಃ’ ಎನ್ನಲಾಗುತ್ತದೆ.