40 - Al-Ghaafir ()

|

(1) ಹಾ-ಮೀಮ್.

(2) ಈ ಗ್ರಂಥದ ಅವತೀರ್ಣವು ಪ್ರತಾಪಶಾಲಿಯೂ ಸರ್ವಜ್ಞನೂ ಆಗಿರುವ ಅಲ್ಲಾಹುವಿನ ಕಡೆಯಿಂದಾಗಿದೆ.

(3) ಅವನು ಪಾಪವನ್ನು ಕ್ಷಮಿಸುವವನೂ, ಪಶ್ಚಾತ್ತಾಪವನ್ನು ಸ್ವೀಕರಿಸುವವನೂ, ಕಠಿಣವಾಗಿ ಶಿಕ್ಷಿಸುವವನೂ, ಅಪಾರ ಸಾಮರ್ಥ್ಯವುಳ್ಳವನೂ ಆಗಿರುವನು. ಅವನ ಹೊರತು ಅನ್ಯ ಆರಾಧ್ಯರಿಲ್ಲ. ಮರಳುವಿಕೆಯು ಅವನೆಡೆಗೇ ಆಗಿದೆ.

(4) ಸತ್ಯನಿಷೇಧಿಗಳ ಹೊರತು ಯಾರೂ ಅಲ್ಲಾಹುವಿನ ದೃಷ್ಟಾಂತಗಳ ಬಗ್ಗೆ ತರ್ಕಿಸಲಾರರು. ಆದುದರಿಂದ ನಾಡುಗಳಲ್ಲಿ ಅವರ ಸ್ವೇಚ್ಛಾ ವಿಹಾರವು ತಮ್ಮನ್ನು ವಂಚಿಸದಿರಲಿ.

(5) ಅವರಿಗಿಂತ ಮುಂಚೆ ನೂಹ್‍ರ ಜನತೆ ಮತ್ತು ಅವರ ನಂತರದ ಪಂಗಡಗಳು (ಸತ್ಯವನ್ನು) ನಿಷೇಧಿಸಿದ್ದರು. ಪ್ರತಿಯೊಂದು ಸಮುದಾಯವೂ ತಮ್ಮ ಸಂದೇಶವಾಹಕರನ್ನು ಹಿಡಿಯಲು ಯತ್ನಿಸಿದ್ದರು. ಸತ್ಯವನ್ನು ಧ್ವಂಸಮಾಡಲು ಅವರು ಅಸತ್ಯದ ಮೂಲಕ ತರ್ಕಿಸಿದರು. ಆದುದರಿಂದ ನಾನು ಅವರನ್ನು ಹಿಡಿದೆನು. ಆಗ ನನ್ನ ಶಿಕ್ಷೆಯು ಹೇಗಿತ್ತು!

(6) ಹೀಗೆ ಸತ್ಯನಿಷೇಧಿಗಳ ಮೇಲೆ ಅವರು ನರಕವಾಸಿಗಳಾಗಿರುವರು ಎಂಬ ತಮ್ಮ ರಬ್‌ನ ವಚನವು ಸತ್ಯವಾಗಿ ಬಿಟ್ಟಿದೆ.

(7) ಸಿಂಹಾಸನವನ್ನು ಹೊರುವವರು ಮತ್ತು ಅದರ ಸುತ್ತಲಲ್ಲಿರುವವರು (ಮಲಕ್‍ಗಳು) ಅವರ ರಬ್‌ನ ಸ್ತುತಿಯೊಂದಿಗೆ ಅವನ ಕೀರ್ತನೆ ಮಾಡುತ್ತಿರುವರು, ಅವನಲ್ಲಿ ವಿಶ್ವಾಸವಿಟ್ಟಿರುವರು ಮತ್ತು ವಿಶ್ವಾಸವಿಟ್ಟವರಿಗಾಗಿ ಹೀಗೆ ಪಾಪಮುಕ್ತಿಯನ್ನು ಬೇಡುತ್ತಿರುವರು: “ನಮ್ಮ ಪ್ರಭೂ! ನಿನ್ನ ಕಾರುಣ್ಯ ಮತ್ತು ಅರಿವು ಸರ್ವ ವಸ್ತುಗಳನ್ನೂ ಒಳಗೊಳ್ಳುವಂತದ್ದಾಗಿದೆ. ಆದುದರಿಂದ ಪಶ್ಚಾತ್ತಾಪಪಡುವವರಿಗೆ ಮತ್ತು ನಿನ್ನ ಮಾರ್ಗವನ್ನು ಹಿಂಬಾಲಿಸುವವರಿಗೆ ಪಾಪಮುಕ್ತಿಯನ್ನು ದಯಪಾಲಿಸು. ಅವರನ್ನು ನರಕ ಶಿಕ್ಷೆಯಿಂದ ಪಾರುಮಾಡು.

(8) ನಮ್ಮ ಪ್ರಭೂ!, ನೀನು ಅವರಿಗೆ ವಾಗ್ದಾನ ಮಾಡಿರುವ ಶಾಶ್ವತವಾಸಕ್ಕಿರುವ ಸ್ವರ್ಗಗಳಲ್ಲಿ ಅವರನ್ನು, ಅವರ ಮಾತಾಪಿತರ, ಪತ್ನಿಯರ ಹಾಗೂ ಸಂತತಿಗಳ ಪೈಕಿ ಸಜ್ಜನರಾಗಿರುವವರನ್ನು ಪ್ರವೇಶ ಮಾಡಿಸು. ಖಂಡಿತವಾಗಿಯೂ ನೀನು ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿರುವೆ.

(9) ಅವರನ್ನು ಕೆಡುಕುಗಳಿಂದ ರಕ್ಷಿಸು. ಆ ದಿನದಂದು ನೀನು ಯಾರನ್ನು ಕೆಡುಕುಗಳಿಂದ ರಕ್ಷಿಸುವೆಯೋ ಅವನೊಂದಿಗೆ ಖಂಡಿತವಾಗಿಯೂ ನೀನು ಕರುಣೆ ತೋರಿರುವೆ. ಮಹಾ ವಿಜಯವು ಅದೇ ಆಗಿದೆ”.

(10) ಖಂಡಿತವಾಗಿಯೂ ಸತ್ಯನಿಷೇಧಿಗಳನ್ನು ಕರೆದು ಹೇಳಲಾಗುವುದು: “ನಿಮ್ಮನ್ನು ವಿಶ್ವಾಸದೆಡೆಗೆ ಆಹ್ವಾನಿಸಲಾದ ಬಳಿಕವೂ ನೀವು ಅವಿಶ್ವಾಸವಿಟ್ಟ ಸಂದರ್ಭ ಅಲ್ಲಾಹುವಿಗೆ (ನಿಮ್ಮ ಮೇಲಿದ್ದ) ಕ್ರೋಧವು ನಿಮಗೆ ಪರಸ್ಪರರಲ್ಲಿರುವ ಕ್ರೋಧಕ್ಕಿಂತಲೂ ಹಿರಿದಾಗಿತ್ತು”.

(11) ಅವರು ಹೇಳುವರು: “ನಮ್ಮ ಪ್ರಭೂ! ನೀನು ನಮ್ಮನ್ನು ಎರಡು ಬಾರಿ ಮೃತಪಡಿಸಿರುವೆ ಮತ್ತು ನಮಗೆ ಎರಡು ಬಾರಿ ಜೀವವನ್ನು ನೀಡಿರುವೆ.(1053) ನಾವು ನಮ್ಮ ಪಾಪಗಳನ್ನು ಒಪ್ಪಿಕೊಂಡಿರುವೆವು. ಆದುದರಿಂದ ಹೊರಹೋಗಲು ಯಾವುದಾದರೂ ದಾರಿಯಿದೆಯೇ?”
1053. ಭೂಮಿಯಲ್ಲಿರುವ ನಿರ್ಜೀವ ಧಾತುಲವಣಗಳಿಂದಲೇ ಜೀವ ಮತ್ತು ಜೀವಿಗಳು ರೂಪುಗೊಳ್ಳುತ್ತವೆ. ಯಾವುದೇ ಜೀವಿಯೂ ಜೀವದ ಒಂದು ಸ್ಫುರಣವಾಗಿ ರೂಪುಗೊಳ್ಳುವುದಕ್ಕೆ ಮೊದಲು ನಿರ್ಜೀವ ವಸ್ತು ಮಾತ್ರವಾಗಿರುತ್ತದೆ. ಹಾಗೆಯೇ ಯಾವುದೇ ಜೀವಿಯೂ ಮರಣದೊಂದಿಗೆ ನಿರ್ಜೀವಾವಸ್ಥೆಗೆ ಮರಳುತ್ತದೆ. ಆ ನಿರ್ಜೀವಾವಸ್ಥೆಯಿಂದ ಅಲ್ಲಾಹು ಮನುಷ್ಯನನ್ನು ಪುನರುತ್ಥಾನಗೊಳಿಸುತ್ತಾನೆ. ಹೀಗೆ ಜೀವ ಮತ್ತು ನಿರ್ಜೀವ ಸ್ಥಿತಿಯಲ್ಲಿ ಎರಡೆರಡು ಹಂತಗಳು ಮನುಷ್ಯನಿಗಿವೆ.

(12) ಇದು ಅಲ್ಲಾಹುವಿನೊಂದಿಗೆ ಮಾತ್ರ ಪ್ರಾರ್ಥಿಸಲಾದರೆ ನೀವು ನಿಷೇಧಿಸುತ್ತಿದ್ದಿರಿ, ಆದರೆ ಅವನೊಂದಿಗೆ ಸಹಭಾಗಿತ್ವ ಮಾಡಲಾದರೆ ನೀವು ವಿಶ್ವಾಸವಿಡುತ್ತಿದ್ದಿರಿ ಎಂಬುದರಿಂದಾಗಿದೆ. ಆದರೆ (ಇಂದು) ತೀರ್ಪು ನೀಡುವ ಅಧಿಕಾರವು ಅತ್ಯುನ್ನತನೂ ಮಹಾನನೂ ಆಗಿರುವ ಅಲ್ಲಾಹುವಿಗಾಗಿದೆ.

(13) ಅವನು ತನ್ನ ದೃಷ್ಟಾಂತಗಳನ್ನು ನಿಮಗೆ ತೋರಿಸಿಕೊಡುವನು. ಅವನು ನಿಮಗೆ ಆಕಾಶದಿಂದ ಅನ್ನಾಧಾರವನ್ನು ಇಳಿಸಿಕೊಡುವನು. (ಅವನೆಡೆಗೆ) ಮರಳುವವರು ಮಾತ್ರ ಚಿಂತಿಸಿ ಗ್ರಹಿಸುವರು.

(14) ಆದುದರಿಂದ ಶರಣಾಗತಿಯನ್ನು ಅಲ್ಲಾಹುವಿಗೆ ನಿಷ್ಕಳಂಕಗೊಳಿಸಿ ಅವನೊಂದಿಗೆ ಪ್ರಾರ್ಥಿಸಿರಿ. ಸತ್ಯನಿಷೇಧಿಗಳು ಅಸಹ್ಯಪಟ್ಟರೂ ಸಹ.

(15) ಅವನು ಪದವಿಗಳಲ್ಲಿ ಉನ್ನತನಾಗಿರುವನು ಮತ್ತು ಸಿಂಹಾಸನದ ಅಧಿಪತಿಯಾಗಿರುವನು. ಅವನು ತನ್ನ ದಾಸರ ಪೈಕಿ ತಾನಿಚ್ಛಿಸುವವರಿಗೆ ತನ್ನ ಸಂದೇಶವಾದ ಸ್ಫೂರ್ತಿಯನ್ನು ನೀಡುವನು. (ಮನುಷ್ಯರು) ಪರಸ್ಪರ ಭೇಟಿಯಾಗುವ ದಿನದ ಬಗ್ಗೆ ಎಚ್ಚರಿಕೆ ನೀಡುವ ಸಲುವಾಗಿ.

(16) ಅದು ಅವರು ಬಯಲಿಗೆ ಬರುವ ದಿನವಾಗಿದೆ. ಅವರಿಗೆ ಸಂಬಂಧಿಸಿದ ಯಾವುದೇ ವಿಷಯವೂ ಅಲ್ಲಾಹುವಿಂದ ಮರೆಯಾಗಿರಲಾರದು. ಇಂದು ರಾಜಾಧಿಕಾರವು ಯಾರಿಗೆ? ಏಕನೂ ಸರ್ವಾಧಿಕಾರಿಯೂ ಆಗಿರುವ ಅಲ್ಲಾಹುವಿಗೆ.

(17) ಈ ದಿನದಂದು ಪ್ರತಿಯೊಬ್ಬ ವ್ಯಕ್ತಿಗೂ ಅವನು ಸಂಪಾದಿಸಿರುವುದರ ಪ್ರತಿಫಲವನ್ನು ನೀಡಲಾಗುವುದು. ಈ ದಿನದಂದು ಯಾವುದೇ ಅನ್ಯಾಯವಿಲ್ಲ. ಖಂಡಿತವಾಗಿಯೂ ಅಲ್ಲಾಹು ಅತಿವೇಗವಾಗಿ ವಿಚಾರಣೆ ಮಾಡುವವನಾಗಿರುವನು.

(18) ಆಸನ್ನವಾದ ಆ ಘಟನೆಯ ದಿನದ ಬಗ್ಗೆ ತಾವು ಅವರಿಗೆ ಮುನ್ನೆಚ್ಚರಿಕೆ ನೀಡಿರಿ. ಅಂದರೆ ಹೃದಯಗಳು ಗಂಟಲ ಬಳಿ ತಲುಪುವ ಮತ್ತು ಅವರು ಉಸಿರು ಬಿಗಿ ಹಿಡಿಯುವ ಸಂದರ್ಭ. ಅಕ್ರಮಿಗಳಿಗೆ ಆಪ್ತಮಿತ್ರನಾಗಿ ಮತ್ತು ಸ್ವೀಕಾರಯೋಗ್ಯ ಶಿಫಾರಸುಗಾರನಾಗಿ ಯಾರೂ ಇಲ್ಲ.

(19) ಕಣ್ಣುಗಳ ವಂಚನೆಯ ನೋಟಗಳನ್ನು ಮತ್ತು ಹೃದಯಗಳು ಮರೆಮಾಚುವುದನ್ನು ಅವನು (ಅಲ್ಲಾಹು) ಅರಿಯುವನು.

(20) ಅಲ್ಲಾಹು ಸತ್ಯದೊಂದಿಗೆ ತೀರ್ಪು ನೀಡುವನು. ಅವನ ಹೊರತು ಅವರು ಕರೆದು ಪ್ರಾರ್ಥಿಸುವವರು ಯಾವುದರಲ್ಲಿಯೂ ತೀರ್ಪು ನೀಡಲಾರರು. ಖಂಡಿತವಾಗಿಯೂ ಅಲ್ಲಾಹು ಎಲ್ಲವನ್ನು ಆಲಿಸುವವನೂ ಕಾಣುವವನೂ ಆಗಿರುವನು.

(21) ಇವರು ಭೂಮಿಯಲ್ಲಿ ಸಂಚರಿಸಿ ಇವರಿಗಿಂತ ಮುಂಚಿನವರ ಪರ್ಯವಸಾನವು ಹೇಗಿತ್ತೆಂಬುದನ್ನು ನೋಡಲಾರರೇ? ಅವರು ಶಕ್ತಿಯಲ್ಲಿ ಮತ್ತು ಭೂಮಿಯಲ್ಲಿ (ಬಾಕಿಯುಳಿಸಿದ) ಸ್ಮಾರಕಗಳ ಮೂಲಕ ಇವರಿಗಿಂತ ಹೆಚ್ಚು ಬಲಿಷ್ಠರಾಗಿದ್ದರು. ತರುವಾಯ ಅವರ ಪಾಪಗಳ ನಿಮಿತ್ತ ಅಲ್ಲಾಹು ಅವರನ್ನು ಹಿಡಿದನು. ಅಲ್ಲಾಹುವಿನ ಶಿಕ್ಷೆಯಿಂದ ಅವರಿಗೆ ರಕ್ಷಣೆ ನೀಡುವವರಾರೂ ಇರಲಿಲ್ಲ.

(22) ಅದೇಕೆಂದರೆ ಅವರಿಗಿರುವ ಸಂದೇಶವಾಹಕರು ಸ್ಪಷ್ಟವಾದ ಪುರಾವೆಗಳೊಂದಿಗೆ ಅವರ ಬಳಿಗೆ ತೆರಳುತ್ತಿದ್ದರು. ಆದರೆ ಅವರು ನಿಷೇಧಿಸಿದರು. ಆಗ ಅಲ್ಲಾಹು ಅವರನ್ನು ಹಿಡಿದನು. ಖಂಡಿತವಾಗಿಯೂ ಅವನು ಬಲಿಷ್ಠನೂ ಕಠಿಣವಾಗಿ ಶಿಕ್ಷಿಸುವವನೂ ಆಗಿರುವನು.

(23) ಖಂಡಿತವಾಗಿಯೂ ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳೊಂದಿಗೆ ಮತ್ತು ಸ್ಪಷ್ಟವಾದ ಆಧಾರಪ್ರಮಾಣದೊಂದಿಗೆ ಕಳುಹಿಸಿದ್ದೆವು.

(24) ಫಿರ್‍ಔನ್, ಹಾಮಾನ್ ಮತ್ತು ಕಾರೂನ್‍ರ ಬಳಿಗೆ. ಆದರೆ ಅವರು “ಮಾಂತ್ರಿಕ! ಮಿಥ್ಯವಾದಿ!” ಎಂದು ಹೇಳಿದರು.

(25) ನಮ್ಮ ಕಡೆಯ ಸತ್ಯದೊಂದಿಗೆ ಮೂಸಾ ಅವರ ಬಳಿಗೆ ಬಂದಾಗ ಅವರು ಹೇಳಿದರು: “ಇವನೊಂದಿಗೆ ವಿಶ್ವಾಸವಿಟ್ಟವರ ಗಂಡುಮಕ್ಕಳನ್ನು ಕೊಂದು ಹಾಕಿರಿ ಮತ್ತು ಅವರ ಸ್ತ್ರೀಯರನ್ನು ಜೀವಂತ ಬಿಡಿರಿ”. (ಆದರೆ) ಸತ್ಯನಿಷೇಧಿಗಳ ಕುತಂತ್ರವು ದಾರಿಗೇಡಿನಲ್ಲೇ ಕೊನೆಗೊಳ್ಳುವುದು.

(26) ಫಿರ್‍ಔನ್ ಹೇಳಿದನು: “ನನ್ನನ್ನು ಬಿಡಿರಿ! ನಾನು ಮೂಸಾನನ್ನು ಕೊಲ್ಲುವೆನು. ಅವನು ಅವನ ರಬ್ಬನ್ನು ಕರೆದು ಪ್ರಾರ್ಥಿಸಲಿ! ಅವನು ನಿಮ್ಮ ಧರ್ಮವನ್ನು ಬದಲಾವಣೆಗೊಳಿಸುವನು ಅಥವಾ ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡುವನು ಎಂದು ಖಂಡಿತವಾಗಿಯೂ ನಾನು ಭಯಪಡುತ್ತಿರುವೆನು”.

(27) ಮೂಸಾ ಹೇಳಿದರು: “ವಿಚಾರಣಾ ದಿನದಲ್ಲಿ ವಿಶ್ವಾಸವಿಡದ ಸರ್ವ ಅಹಂಕಾರಿಗಳಿಂದಲೂ ನನ್ನ ರಬ್ ನಿಮ್ಮ ರಬ್ ಆಗಿರುವವನೊಂದಿಗೆ ನಾನು ಅಭಯವನ್ನು ಯಾಚಿಸುತ್ತಿರುವೆನು”.

(28) ಫಿರ್‍ಔನ್‍ನ ಜನರಲ್ಲಿ ಸೇರಿದ, ತನ್ನ ವಿಶ್ವಾಸವನ್ನು ಮರೆಮಾಚಿದ್ದ ಸತ್ಯವಿಶ್ವಾಸಿ ವ್ಯಕ್ತಿಯೊಬ್ಬರು ಹೇಳಿದರು: “ನನ್ನ ರಬ್ ಅಲ್ಲಾಹು ಎಂದು ಹೇಳುವ ಕಾರಣಕ್ಕಾಗಿ ನೀವು ಒಬ್ಬ ಮನುಷ್ಯನನ್ನು ಕೊಲ್ಲುವುದೇ? ಅವರು ನಿಮ್ಮ ಬಳಿಗೆ ನಿಮ್ಮ ರಬ್‌ನ ಕಡೆಯ ಸ್ಪಷ್ಟ ಪುರಾವೆಗಳನ್ನು ತಂದಿರುವರು. ಅವರು ಸುಳ್ಳು ನುಡಿಯುವವರಾದರೆ ಸುಳ್ಳು ನುಡಿಯುವುದರ ಪಾಪವು ಅವರಿಗೇ ಆಗಿದೆ. ಅವರು ಸತ್ಯವನ್ನು ನುಡಿಯುವವರಾದರೆ ಅವರು ನಿಮಗೆ ಎಚ್ಚರಿಕೆ ನೀಡುವ ಕೆಲವು ಸಂಗತಿಗಳು (ಶಿಕ್ಷೆಗಳು) ಖಂಡಿತವಾಗಿಯೂ ನಿಮ್ಮನ್ನು ಬಾಧಿಸುವುದು. ಅತಿಕ್ರಮಿ ಮತ್ತು ಮಿಥ್ಯವಾದಿಯಾಗಿರುವ ಯಾರನ್ನೂ ಅಲ್ಲಾಹು ಖಂಡಿತವಾಗಿಯೂ ಸನ್ಮಾರ್ಗಕ್ಕೆ ಸೇರಿಸಲಾರನು.

(29) ಓ ನನ್ನ ಜನರೇ! ಭೂಮಿಯಲ್ಲಿ ಪ್ರಾಬಲ್ಯವನ್ನು ಪಡೆದಿರುವ ಕಾರಣ ಇಂದು ಆಧಿಪತ್ಯವು ನಿಮ್ಮದಾಗಿದೆ. ಆದರೆ ಅಲ್ಲಾಹುವಿನ ಶಿಕ್ಷೆ ನಮ್ಮ ಬಳಿಗೆ ಬಂದರೆ ಅದರಿಂದ ನಮಗೆ ಸಹಾಯ ಮಾಡುವವರು ಯಾರಿರುವರು?” ಫಿರ್‍ಔನ್ ಹೇಳಿದನು: “ನನಗೆ (ಸರಿಯೆಂದು) ಕಾಣುವ ಮಾರ್ಗವನ್ನು ಮಾತ್ರ ನಾನು ನಿಮಗೆ ತೋರಿಸಿ ಕೊಡುವೆನು. ಸರಿಯಾದ ಮಾರ್ಗದೆಡೆಗೇ ಹೊರತು ನಾನು ನಿಮ್ಮನ್ನು ಮುನ್ನಡೆಸಲಾರೆನು”.

(30) ವಿಶ್ವಾಸಿಯಾದ ಆ ವ್ಯಕ್ತಿ ಹೇಳಿದರು: “ಓ ನನ್ನ ಜನರೇ! ಆ ಗುಂಪುಗಳ ದಿನದಂತಹ(1054) ಒಂದನ್ನು ಖಂಡಿತವಾಗಿಯೂ ನಾನು ನಿಮ್ಮ ಬಗ್ಗೆಯೂ ಭಯಪಡುವೆನು.
1054. ಅಂದರೆ ಅಲ್ಲಾಹನಿನ ವಿರುದ್ಧ ಮಹಾ ಅಕ್ರಮವೆಸಗಿದ ಗುಂಪುಗಳನ್ನು ಅಲ್ಲಾಹು ಶಿಕ್ಷಿಸಿದ ದಿನ.

(31) ಅಂದರೆ ನೂಹ್‍ರ ಜನತೆಯ, ಆದ್, ಸಮೂದ್ ಮತ್ತು ಅವರ ನಂತರದವರ ಅನುಭವಕ್ಕೆ ಸಮಾನವಾಗಿರುವುದನ್ನು. ದಾಸರೊಂದಿಗೆ ಯಾವುದೇ ಅಕ್ರಮವನ್ನು ತೋರಲು ಅಲ್ಲಾಹು ಇಚ್ಛಿಸಲಾರನು.

(32) ಓ ನನ್ನ ಜನರೇ! (ನೀವು) ಪರಸ್ಪರ ಮೊರೆಯಿಟ್ಟು ರೋದಿಸುವ ದಿನವನ್ನು ನಾನು ನಿಮ್ಮ ಬಗ್ಗೆ ಖಂಡಿತವಾಗಿಯೂ ಭಯಪಡುವೆನು.

(33) ಅಂದರೆ ನೀವು ಹಿಮ್ಮುಖವಾಗಿ ತಿರುಗಿ ಓಡುವ ದಿನ! ಅಲ್ಲಾಹುವಿನ ಶಿಕ್ಷೆಯಿಂದ ರಕ್ಷಣೆ ನೀಡುವವರಾರೂ ಇರಲಾರರು. ಅಲ್ಲಾಹು ಯಾರನ್ನಾದರೂ ಪಥಭ್ರಷ್ಟಗೊಳಿಸಿದರೆ ತರುವಾಯ ಅವನಿಗೆ ಸನ್ಮಾರ್ಗವನ್ನು ತೋರಿಸುವವರು ಯಾರೂ ಇಲ್ಲ.

(34) ಇದಕ್ಕಿಂತ ಮುಂಚೆ ಸ್ಪಷ್ಟವಾದ ಪುರಾವೆಗಳೊಂದಿಗೆ ಯೂಸುಫ್ ನಿಮ್ಮ ಬಳಿಗೆ ಬಂದಿದ್ದರು. ಆಗ ಅವರು ನಿಮ್ಮ ಬಳಿಗೆ ಏನನ್ನು ತಂದಿದ್ದರೋ ಅದರ ಬಗ್ಗೆ ನೀವು ಸಂದೇಹದಲ್ಲೇ ಇದ್ದಿರಿ. ಕೊನೆಗೆ ಅವರು ಮರಣಹೊಂದಿದಾಗ “ಇವರ ಬಳಿಕ ಅಲ್ಲಾಹು ಬೇರೊಬ್ಬ ಸಂದೇಶವಾಹಕರನ್ನು ಕಳುಹಿಸಲಾರನು” ಎಂದು ನೀವು ಹೇಳಿದಿರಿ.(1055) ಅತಿಕ್ರಮಿಯೂ, ಸಂಶಯಗ್ರಸ್ಥರೂ ಆಗಿರುವವರನ್ನು ಅಲ್ಲಾಹು ಹೀಗೆ ಪಥಭ್ರಷ್ಟಗೊಳಿಸುವನು.
1055. ಭೀಕರವಾದ ಬರಗಾಲವನ್ನು ಹಿಮ್ಮೆಟ್ಟಿಸಲು ಈಜಿಪ್ಟಿನ ಜನರಿಗೆ ಪ್ರವಾದಿ ಯೂಸುಫ್(ಅ) ರವರು ನೆರವಾದರು. ಆದರೂ ಅವರ ಪೈಕಿ ಹೆಚ್ಚಿನವರೂ ಯೂಸುಫ್(ಅ) ರವರ ಪ್ರವಾದಿತ್ವದಲ್ಲಿ ವಿಶ್ವಾಸವಿಡಲಿಲ್ಲ. ಯೂಸುಫ್(ಅ) ರವರ ಮರಣಾನಂತರ ಈ ದೇಶಕ್ಕೆ ಅಲ್ಲಾಹು ಬೇರೊಬ್ಬ ಪ್ರವಾದಿಯನ್ನು ಕಳುಹಿಸಲಾರನೆಂದು ಅವರು ವಾದಿಸಿದರು. ತರುವಾಯ ಬಂದ ಪ್ರವಾದಿಗಳನ್ನು ನಿಷೇಧಿಸಲು ಅವರದನ್ನು ಒಂದು ಸಮರ್ಥನೆಯನ್ನಾಗಿ ಮಾಡಿಕೊಂಡರು.

(35) ಅಂದರೆ ತಮ್ಮ ಬಳಿಗೆ ಯಾವುದೇ ಅಧಿಕೃತ ಆಧಾರಪ್ರಮಾಣವೂ ಬರದೆ ಅಲ್ಲಾಹುವಿನ ದೃಷ್ಟಾಂತಗಳಲ್ಲಿ ತರ್ಕಿಸುವವರನ್ನು. ಅದು ಅಲ್ಲಾಹುವಿನ ಬಳಿ ಮತ್ತು ಸತ್ಯವಿಶ್ವಾಸಿಗಳ ಬಳಿ ಮಹಾಕ್ರೋಧಕ್ಕೆ ಹೇತುವಾಗುವುದು. ಹೀಗೆ ಸರ್ವ ಅಹಂಕಾರಿಗಳ ಮತ್ತು ಗರ್ವಿಷ್ಠರ ಹೃದಯಗಳಿಗೆ ಅಲ್ಲಾಹು ಮುದ್ರೆಯೊತ್ತುವನು.

(36) ಫಿರ್‍ಔನ್ ಹೇಳಿದನು: “ಓ ಹಾಮಾನ್! ನನಗೆ ಆ ಮಾರ್ಗಗಳ ಮೂಲಕ ತಲುಪಲು ಒಂದು ಉನ್ನತ ಗೋಪುರವನ್ನು ನಿರ್ಮಿಸಿಕೊಡು!

(37) ಅಂದರೆ ಆಕಾಶಮಾರ್ಗಗಳ ಮೂಲಕ ತಲುಪಿ, ತರುವಾಯ ಮೂಸಾನ ಆರಾಧ್ಯನನ್ನು ಇಣುಕಿನೋಡಲು. ಖಂಡಿತವಾಗಿಯೂ ಅವನು ಸುಳ್ಳು ಹೇಳುತ್ತಿರುವನೆಂದು ನಾನು ಭಾವಿಸುತ್ತಿರುವೆನು”. ಹೀಗೆ ಫಿರ್‍ಔನ್‍ನಿಗೆ ಅವನ ದುಷ್ಕೃತ್ಯವನ್ನು ಆಕರ್ಷಣೀಯಗೊಳಿಸಿ ತೋರಿಸಲಾಯಿತು ಮತ್ತು ಅವನನ್ನು ನೇರ ಮಾರ್ಗದಿಂದ ತಡೆಯಲಾಯಿತು. ಫಿರ್‍ಔನನ ತಂತ್ರವು ನಷ್ಟದಲ್ಲೇ ಆಗಿತ್ತು.

(38) ವಿಶ್ವಾಸವಿಟ್ಟ ಆ ವ್ಯಕ್ತಿ ಹೇಳಿದರು: “ಓ ನನ್ನ ಜನರೇ! ನೀವು ನನ್ನನ್ನು ಅನುಸರಿಸಿರಿ! ನಾನು ನಿಮಗೆ ಸರಿಯಾದ ಮಾರ್ಗವನ್ನು ತೋರಿಸುವೆನು.

(39) ಓ ನನ್ನ ಜನರೇ! ಈ ಐಹಿಕ ಜೀವನವು ಒಂದು (ತಾತ್ಕಾಲಿಕ) ಸುಖ ಮಾತ್ರವಾಗಿದೆ. ಖಂಡಿತವಾಗಿಯೂ ಶಾಶ್ವತ ವಾಸಕ್ಕಿರುವ ಭವನವು ಪರಲೋಕವಾಗಿದೆ.

(40) ಯಾರಾದರೂ ಒಂದು ಕೆಡುಕನ್ನು ಮಾಡಿದರೆ ಅದಕ್ಕೆ ಸಮಾನವಾದ ಪ್ರತಿಫಲವನ್ನೇ ಅವನಿಗೆ ನೀಡಲಾಗುವುದು.(1056) ಪುರುಷನಾಗಿರಲಿ, ಸ್ತ್ರೀಯಾಗಿರಲಿ ಯಾರು ಸತ್ಯವಿಶ್ವಾಸಿಯಾಗಿದ್ದುಕೊಂಡು ಸತ್ಕರ್ಮವೆಸಗುವರೋ ಅವರು ಸ್ವರ್ಗವನ್ನು ಪ್ರವೇಶಿಸುವರು. ಅವರಿಗೆ ಅಲ್ಲಿ ಲೆಕ್ಕವಿಲ್ಲದೆ ಅನ್ನಾಧಾರವನ್ನು ಒದಗಿಸಲಾಗುವುದು.
1056. ಅಲ್ಲಾಹು ಒಳಿತಿಗೆ ಅನೇಕ ಪಟ್ಟು ಪ್ರತಿಫಲ ನೀಡುವನೆಂದು ಕುರ್‌ಆನ್ ಮತ್ತು ಹದೀಸ್‍ಗಳು ನಮಗೆ ಕಲಿಸುತ್ತವೆ. ಆದರೆ ಕೆಡುಕಿಗಾದರೋ ಅದಕ್ಕೆ ತಕ್ಕ ಶಿಕ್ಷೆಯನ್ನು ಮಾತ್ರ ನೀಡುತ್ತಾನೆ. ಕ್ಷಮೆಗೆ ಅರ್ಹರಾದವರನ್ನು ಅವನು ಕ್ಷಮಿಸುತ್ತಾನೆ. ಅಲ್ಲಾಹನಿನ ಕ್ಷಮೆ ಮತ್ತು ಕರುಣೆ ಶಿಕ್ಷೆಗಿಂತಲೂ ಮುಂಚೂಣಿಯಲ್ಲಿದೆಯೆಂದು ಈ ಸೂಕ್ತಿಯು ಸೂಚಿಸುತ್ತದೆ.

(41) ಓ ನನ್ನ ಜನರೇ! ನನಗೆ ಇದೇನು ಅನುಭವವಾಗುತ್ತಿದೆ? ನಾನು ನಿಮ್ಮನ್ನು ರಕ್ಷೆಯೆಡೆಗೆ ಆಹ್ವಾನಿಸುತ್ತಿರುವೆನು. ಆದರೆ ನೀವು ನನ್ನನ್ನು ನರಕಾಗ್ನಿಯೆಡೆಗೆ ಆಹ್ವಾನಿಸುತ್ತಿದ್ದೀರಿ!

(42) ನಾನು ಅಲ್ಲಾಹುವಿನಲ್ಲಿ ಅವಿಶ್ವಾಸವಿಡಲು ಮತ್ತು ನನಗೆ ಯಾವುದೇ ಅರಿವೂ ಇಲ್ಲದಿರುವುದನ್ನು ಅವನೊಂದಿಗೆ ಸಹಭಾಗಿಯನ್ನಾಗಿ ಮಾಡಲು ನೀವು ನನ್ನನ್ನು ಆಹ್ವಾನಿಸುತ್ತಿದ್ದೀರಿ! ಆದರೆ ನಾನು ಪ್ರತಾಪಶಾಲಿಯೂ ಅತ್ಯಧಿಕ ಕ್ಷಮಿಸುವವನೂ ಆಗಿರುವ ಅಲ್ಲಾಹುವಿನೆಡೆಗೆ ನಿಮ್ಮನ್ನು ಆಹ್ವಾನಿಸುತ್ತಿರುವೆನು.

(43) ನೀವು ನನ್ನನ್ನು ಯಾವುದರೆಡೆಗೆ ಆಹ್ವಾನಿಸುತ್ತಿರುವಿರೋ ಅದಕ್ಕೆ ಇಹಲೋಕದಲ್ಲಾಗಲಿ ಪರಲೋಕದಲ್ಲಾಗಲಿ ಯಾವುದೇ ಪ್ರಾರ್ಥನೆಯೂ ಇರಕೂಡದು.(1057) ನಮ್ಮ ಮರಳುವಿಕೆಯು ಅಲ್ಲಾಹುವಿನೆಡೆಗಾಗಿದೆ ಮತ್ತು ಅತಿಕ್ರಮಿಗಳು ನರಕವಾಸಿಗಳಾಗಿರುವರು ಎಂಬುದು ದೃಢಪಟ್ಟ ವಿಷಯವಾಗಿದೆ.
1057. ‘ದಅ್‌ವತ್’ ಎಂಬ ಪದಕ್ಕೆ ಕರೆ (ಅಥವಾ ಆಹ್ವಾನ) ಎಂಬ ಅರ್ಥವಿದೆ. ಹಾಗೆಯೇ ಪ್ರಾರ್ಥನೆ ಎಂಬ ಅರ್ಥವೂ ಇದೆ. ಆದುದರಿಂದಲೇ ಈ ಸೂಕ್ತಿಯಲ್ಲಿರುವ ‘ಲೈಸಲಹೂ ದಅ್‌ವತುನ್ ಫಿದ್ದುನ್ಯಾ ವಲಾ ಫಿಲ್ ಆಖಿರಃ’ ಎಂಬ ವಾಕ್ಯಕ್ಕೆ ಎರಡು ರೀತಿಯಲ್ಲಿ ಅರ್ಥ ನೀಡಲಾಗಿದೆ. ಇಹಲೋಕದಲ್ಲಾಗಲಿ, ಪರಲೋಕದಲ್ಲಾಗಲಿ ಅದರೊಂದಿಗೆ (ಮಿಥ್ಯಾರಾಧ್ಯದೊಂದಿಗೆ) ಪ್ರಾರ್ಥಿಸಕೂಡದು ಎಂಬುದು ಒಂದರ್ಥವಾದರೆ ಇಹಲೋಕದಲ್ಲಾಗಲಿ ಪರಲೋಕದಲ್ಲಾಗಲಿ (ತಮ್ಮನ್ನು ಆರಾಧಿಸಬೇಕೆಂದು) ಆಹ್ವಾನ ನೀಡುವ ಸಾಮರ್ಥ್ಯ ಅವುಗಳಿಗೆ (ವಿಗ್ರಹಗಳಿಗೆ) ಇಲ್ಲ ಎಂಬುದು ಇನ್ನೊಂದು ಅರ್ಥವಾಗಿದೆ.

(44) ನಾನು ನಿಮ್ಮೊಂದಿಗೆ ಹೇಳುವುದನ್ನು ನೀವು ತರುವಾಯ ಸ್ಮರಿಸಿಕೊಳ್ಳುವಿರಿ. ನಾನು ನನ್ನ ಕಾರ್ಯವನ್ನು ಅಲ್ಲಾಹುವಿಗೆ ವಹಿಸಿಕೊಡುತ್ತಿರುವೆನು. ಖಂಡಿತವಾಗಿಯೂ ಅಲ್ಲಾಹು ದಾಸರನ್ನು ವೀಕ್ಷಿಸುತ್ತಿರುವನು”.

(45) ಆಗ ಅವರು ಹೂಡಿದ ಕುತಂತ್ರಗಳ ದುಷ್ಪರಿಣಾಮಗಳಿಂದ ಅಲ್ಲಾಹು ಅವರನ್ನು ಕಾಪಾಡಿದನು. ಫಿರ್‍ಔನನ ಜನರನ್ನು ಕಠೋರ ಶಿಕ್ಷೆಯು ಆವರಿಸಿಕೊಂಡಿತು.

(46) ನರಕಾಗ್ನಿ! ಬೆಳಿಗ್ಗೆ ಮತ್ತು ಸಂಜೆ ಅವರನ್ನು ಅದರ ಮುಂದೆ ಪ್ರದರ್ಶಿಸಲಾಗುವುದು.(1058) ಅಂತ್ಯಘಳಿಗೆಯು ಸಂಭವಿಸುವ ದಿನ “ಫಿರ್‍ಔನನ ಜನರನ್ನು ಅತಿಕಠಿಣವಾದ ಶಿಕ್ಷೆಗೆ ಪ್ರವೇಶಮಾಡಿಸಿರಿ” (ಎಂದು ಆದೇಶಿಸಲಾಗುವುದು).
1058. ಮರಣದಿಂದ ತೊಡಗಿ ಪುನರುತ್ಥಾನ ದಿನದವರೆಗೆ ಅವರನ್ನು ಹೀಗೆ ಬೆಳಿಗ್ಗೆ ಮತ್ತು ಸಂಜೆ ನರಕಾಗ್ನಿಯ ಮುಂದೆ ಹಾಜರುಪಡಿಸಲಾಗುವುದು ಎಂದು ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ.

(47) ನರಕದಲ್ಲಿ ಅವರು ಪರಸ್ಪರ ಸಮರ್ಥಿಸಿಕೊಳ್ಳುವ ಸಂದರ್ಭ. ಆಗ ಬಲಹೀನರು ಅಹಂಕಾರಪಟ್ಟವರೊಂದಿಗೆ ಹೇಳುವರು: “ಖಂಡಿತವಾಗಿಯೂ ನಾವು ನಿಮ್ಮನ್ನು ಅನುಸರಿಸಿ ಬದುಕುತ್ತಿದ್ದೆವು. ಆದುದರಿಂದ ನರಕ ಶಿಕ್ಷೆಯಿಂದ ಯಾವುದಾದರೂ ಒಂದು ಪಾಲನ್ನು ನಮ್ಮಿಂದ ದೂರಮಾಡಲು ನಿಮಗೆ ಸಾಧ್ಯವೇ?”

(48) ಅಹಂಕಾರಪಟ್ಟವರು ಹೇಳುವರು: “ಖಂಡಿತವಾಗಿಯೂ ನಾವೆಲ್ಲರೂ ಇದರಲ್ಲೇ ಇರುವೆವು. ಖಂಡಿತವಾಗಿಯೂ ಅಲ್ಲಾಹು ದಾಸರ ಮಧ್ಯೆ ತೀರ್ಪು ನೀಡಿರುವನು!”

(49) ನರಕದಲ್ಲಿರುವವರು ನರಕದ ಕಾವಲುಗಾರರೊಂದಿಗೆ ಹೇಳುವರು: “ನೀವು ನಿಮ್ಮ ರಬ್‌ನೊಂದಿಗೆ ಪ್ರಾರ್ಥಿಸಿರಿ! ನಮಗೆ ಒಂದು ದಿನದ ಮಟ್ಟಿಗಾದರೂ ಅವನು ಶಿಕ್ಷೆಯನ್ನು ಹಗುರಗೊಳಿಸಲಿ”.

(50) ಅವರು (ಕಾವಲುಗಾರರು) ಹೇಳುವರು: “ನಿಮ್ಮ ಬಳಿಗೆ (ಕಳುಹಿಸಲಾದ) ಸಂದೇಶವಾಹಕರು ಸ್ಪಷ್ಟವಾದ ಪುರಾವೆಗಳೊಂದಿಗೆ ನಿಮ್ಮ ಬಳಿಗೆ ಬಂದಿರಲಿಲ್ಲವೇ?” ಅವರು ಹೇಳುವರು: “ಹೌದು”. ಅವರು (ಕಾವಲುಗಾರರು) ಹೇಳುವರು: “ಹಾಗಾದರೆ ನೀವೇ ಪ್ರಾರ್ಥಿಸಿರಿ. ಸತ್ಯನಿಷೇಧಿಗಳ ಪ್ರಾರ್ಥನೆಯು ವ್ಯರ್ಥವಲ್ಲದೆ ಇನ್ನೇನೂ ಅಲ್ಲ”.

(51) ಖಂಡಿತವಾಗಿಯೂ ನಾವು ನಮ್ಮ ಸಂದೇಶವಾಹಕರಿಗೆ ಮತ್ತು ವಿಶ್ವಾಸವಿಟ್ಟವರಿಗೆ ಐಹಿಕ ಜೀವನದಲ್ಲೂ, ಸಾಕ್ಷಿಗಳು ಎದ್ದುನಿಲ್ಲುವ ದಿನದಲ್ಲೂ(1059) ಸಹಾಯ ಮಾಡುವೆವು.
1059. ಅಂದರೆ ವಿಚಾರಣೆಯ ದಿನ.

(52) ಅಂದರೆ ಅಕ್ರಮಿಗಳಿಗೆ ಅವರ ನೆಪಗಳು ಪ್ರಯೋಜನಕಾರಿಯಾಗದ ದಿನ! ಶಾಪವಿರುವುದು ಅವರಿಗೆ ಮತ್ತು ನಿಕೃಷ್ಟ ಭವನವಿರುವುದೂ ಅವರಿಗೇ ಆಗಿದೆ.

(53) ನಾವು ಮೂಸಾರಿಗೆ ಮಾರ್ಗದರ್ಶನವನ್ನು ನೀಡಿದೆವು ಮತ್ತು ಇಸ್ರಾಈಲರನ್ನು ನಾವು ಗ್ರಂಥದ ಹಕ್ಕುದಾರರನ್ನಾಗಿ ಮಾಡಿದೆವು.

(54) ಅದು ಬುದ್ಧಿವಂತರಿಗಿರುವ ಮಾರ್ಗದರ್ಶಿಯೂ ಉಪದೇಶವೂ ಆಗಿತ್ತು.

(55) ಆದುದರಿಂದ ತಾವು ತಾಳ್ಮೆ ವಹಿಸಿರಿ. ಖಂಡಿತವಾಗಿಯೂ ಅಲ್ಲಾಹುವಿನ ವಾಗ್ದಾನವು ಸತ್ಯವಾಗಿದೆ. ತಾವು ತಮ್ಮ ಪಾಪಕ್ಕೆ ಕ್ಷಮೆಬೇಡಿರಿ. ಸಂಜೆ ಹಾಗೂ ಬೆಳಿಗ್ಗೆ ತಮ್ಮ ರಬ್‌ನ ಸ್ತುತಿಯೊಂದಿಗೆ ಅವನ ಕೀರ್ತನೆ ಮಾಡುತ್ತಿರಿ.

(56) ತಮ್ಮ ಬಳಿಗೆ ಯಾವುದೇ ಅಧಿಕೃತ ಆಧಾರಪ್ರಮಾಣವೂ ಬರದೆ ಅಲ್ಲಾಹುವಿನ ದೃಷ್ಟಾಂತಗಳಲ್ಲಿ ತರ್ಕಿಸುವವರಾರೋ ಅವರ ಹೃದಯಗಳಲ್ಲಿರುವುದು ಖಂಡಿತವಾಗಿಯೂ ಅಹಂಕಾರ ಮಾತ್ರವಾಗಿದೆ. ಅವರು ಅಲ್ಲಿಗೆ ಎಂದೂ ತಲುಪಲಾರರು.(1060) ಆದುದರಿಂದ ತಾವು ಅಲ್ಲಾಹುವಿನೊಂದಿಗೆ ಅಭಯವನ್ನು ಯಾಚಿಸಿರಿ. ಖಂಡಿತವಾಗಿಯೂ ಅವನು ಎಲ್ಲವನ್ನು ಆಲಿಸುವವನೂ ಕಾಣುವವನೂ ಆಗಿರುವನು.
1060. ಅಲ್ಲಾಹುವಿನ ದೃಷ್ಟಾಂತಗಳನ್ನು ನಿಷೇಧಿಸುವವರು ಆ ನಿಷೇಧದ ಮೂಲಕ ಏನನ್ನು ಸಾಧಿಸಬೇಕೆಂದಿರುವರೋ ಅದನ್ನು ಸಾಧಿಸಲು ಅವರಿಗೆ ಸಾಧ್ಯವಾಗದು ಎಂದರ್ಥ.

(57) ಖಂಡಿತವಾಗಿಯೂ ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸುವುದು ಮನುಷ್ಯನನ್ನು ಸೃಷ್ಟಿಸುವುದಕ್ಕಿಂತಲೂ ಮಿಗಿಲಾಗಿದೆ. ಆದರೆ ಅವರಲ್ಲಿ ಹೆಚ್ಚಿನವರೂ ಅರ್ಥಮಾಡಿಕೊಳ್ಳುವುದಿಲ್ಲ.

(58) ಕುರುಡನು ಮತ್ತು ದೃಷ್ಟಿಯುಳ್ಳವನು ಸಮಾನರಾಗಲಾರರು. ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರು ಹಾಗೂ ದುಷ್ಕೃತ್ಯವೆಸಗಿದವರು ಸಮಾನರಾಗಲಾರರು. ನೀವು ಅಲ್ಪವೇ ಚಿಂತಿಸಿ ಗ್ರಹಿಸುತ್ತಿದ್ದೀರಿ.

(59) ಆ ಅಂತ್ಯಘಳಿಗೆಯು ಬಂದೇ ಬರುವುದು. ಅದರಲ್ಲಿ ಅನುಮಾನವೇ ಇಲ್ಲ. ಆದರೆ ಜನರ ಪೈಕಿ ಹೆಚ್ಚಿನವರೂ ವಿಶ್ವಾಸವಿಡುವುದಿಲ್ಲ.

(60) ನಿಮ್ಮ ರಬ್ ಹೇಳಿರುವನು: “ನೀವು ನನ್ನೊಂದಿಗೆ ಪ್ರಾರ್ಥಿಸಿರಿ. ನಾನು ನಿಮಗೆ ಉತ್ತರವನ್ನು ನೀಡುವೆನು. ನನ್ನನ್ನು ಆರಾಧಿಸದೆ(1061) ಅಹಂಕಾರಪಡುವವರಾರೋ ಖಂಡಿತವಾಗಿಯೂ ಅವರು ತರುವಾಯ ಅಪಮಾನಿತರಾಗಿ ನರಕಾಗ್ನಿಯನ್ನು ಪ್ರವೇಶಿಸುವರು”.
1061. ಪ್ರಾರ್ಥನೆ ಆರಾಧನೆಯಾಗಿದೆಯೆಂದು ಈ ಸೂಕ್ತಿಯು ಸಂಶಯಕ್ಕೆಡೆಯಿಲ್ಲದಂತೆ ಸ್ಪಷ್ಟಪಡಿಸುತ್ತದೆ.

(61) ರಾತ್ರಿಯನ್ನು ನಿಮಗೆ ವಿಶ್ರಾಂತಿ ಪಡೆಯುವುದಕ್ಕಾಗಿಯೂ, ಹಗಲನ್ನು ಪ್ರಕಾಶಮಾನವಾಗಿಯೂ ಮಾಡಿದವನು ಅಲ್ಲಾಹುವಾಗಿರುವನು. ಖಂಡಿತವಾಗಿಯೂ ಅಲ್ಲಾಹು ಜನರೊಂದಿಗೆ ಔದಾರ್ಯವುಳ್ಳವನಾಗಿರುವನು. ಆದರೆ ಜನರ ಪೈಕಿ ಹೆಚ್ಚಿನವರೂ ಕೃತಜ್ಞರಾಗುವುದಿಲ್ಲ.

(62) ನಿಮ್ಮ ರಬ್ ಮತ್ತು ಸರ್ವ ವಸ್ತುಗಳ ಸೃಷ್ಟಿಕರ್ತನಾದ ಅಲ್ಲಾಹು ಅವನೇ ಆಗಿರುವನು. ಅವನ ಹೊರತು ಅನ್ಯ ಆರಾಧ್ಯರಿಲ್ಲ. ಆದರೂ ನೀವು (ಸನ್ಮಾರ್ಗದಿಂದ) ತಪ್ಪಿಸಲ್ಪಡುವುದಾದರೂ ಹೇಗೆ?

(63) ಅಲ್ಲಾಹುವಿನ ದೃಷ್ಟಾಂತಗಳನ್ನು ನಿಷೇಧಿಸಿದವರು ಹೀಗೆಯೇ (ಸನ್ಮಾರ್ಗದಿಂದ) ತಪ್ಪಿಸಲ್ಪಡುತ್ತಿರುವರು.

(64) ನಿಮಗೋಸ್ಕರ ಭೂಮಿಯನ್ನು ವಾಸಸ್ಥಳವನ್ನಾಗಿ ಮತ್ತು ಆಕಾಶವನ್ನು ಮೇಲ್ಛಾವಣಿಯನ್ನಾಗಿ ಮಾಡಿಕೊಟ್ಟವನು ಅಲ್ಲಾಹುವಾಗಿರುವನು. ಅವನು ನಿಮಗೆ ರೂಪವನ್ನು ನೀಡಿದನು. ತರುವಾಯ ಅವನು ನಿಮ್ಮ ರೂಪಗಳನ್ನು ಉತ್ತಮಗೊಳಿಸಿದನು. ಉತ್ಕೃಷ್ಟ ವಸ್ತುಗಳಿಂದ ಅವನು ನಿಮಗೆ ಅನ್ನಾಧಾರವನ್ನು ಒದಗಿಸಿದನು. ನಿಮ್ಮ ರಬ್ ಆದ ಅಲ್ಲಾಹು ಅವನೇ ಆಗಿರುವನು. ಆದುದರಿಂದ ಸರ್ವಲೋಕಗಳ ರಬ್ ಆದ ಅಲ್ಲಾಹು ಅನುಗ್ರಹೀತನಾಗಿರುವನು.

(65) ಅವನು ಬದುಕಿರುವವನಾಗಿರುವನು. ಅವನ ಹೊರತು ಅನ್ಯ ಆರಾಧ್ಯರಿಲ್ಲ. ಆದುದರಿಂದ ಶರಣಾಗತಿಯನ್ನು ಅವನಿಗೆ ನಿಷ್ಕಳಂಕಗೊಳಿಸಿ ಅವನೊಂದಿಗೆ ಪ್ರಾರ್ಥಿಸಿರಿ. ಸರ್ವಲೋಕಗಳ ರಬ್ ಆದ ಅಲ್ಲಾಹುವಿಗೆ ಸ್ತುತಿ.

(66) (ಓ ಪ್ರವಾದಿಯವರೇ!) ಹೇಳಿರಿ: “ನನ್ನ ರಬ್‌ನ ಕಡೆಯಿಂದ ನನಗೆ ಪುರಾವೆಗಳು ಸಿಕ್ಕಿರುವುದರಿಂದ ಅಲ್ಲಾಹುವಿನ ಹೊರತು ನೀವು ಕರೆದು ಪ್ರಾರ್ಥಿಸುತ್ತಿರುವವರನ್ನು ಆರಾಧಿಸುವುದರಿಂದ ಖಂಡಿತವಾಗಿಯೂ ನನ್ನನ್ನು ವಿರೋಧಿಸಲಾಗಿದೆ. ಸರ್ವಲೋಕಗಳ ರಬ್‌ಗೆ ಶರಣಾಗಬೇಕೆಂದು ನನ್ನೊಂದಿಗೆ ಆಜ್ಞಾಪಿಸಲಾಗಿದೆ”.

(67) ನಿಮ್ಮನ್ನು ಮಣ್ಣಿನಿಂದ, ತರುವಾಯ ವೀರ್ಯದಿಂದ, ತರುವಾಯ ಭ್ರೂಣದಿಂದ ಸೃಷ್ಟಿಸಿದವನು ಅವನಾಗಿರುವನು. ತರುವಾಯ ಅವನು ನಿಮ್ಮನ್ನು ಒಂದು ಶಿಶುವನ್ನಾಗಿ ಹೊರತರುವನು. ತರುವಾಯ ನೀವು ನಿಮ್ಮ ಪೂರ್ಣಶಕ್ತಿಯನ್ನು ಪಡೆಯುವುದಕ್ಕಾಗಿ ಮತ್ತು ತರುವಾಯ ನೀವು ವೃದ್ಧರಾಗುವುದಕ್ಕಾಗಿ. ನಿಮ್ಮ ಪೈಕಿ ಕೆಲವರು ಮೊದಲೇ ಮೃತಪಡುವರು. ನಿಶ್ಚಿತ ಅವಧಿಯನ್ನು ನೀವು ತಲುಪುವುದಕ್ಕಾಗಿ ಮತ್ತು ನೀವು ಚಿಂತಿಸಲೂಬಹುದು ಎಂಬುದಕ್ಕಾಗಿ.

(68) ಜೀವವನ್ನು ನೀಡುವವನು ಮತ್ತು ಮೃತಪಡಿಸುವವನು ಅವನಾಗಿರುವನು. ಅವನು ಒಂದು ವಿಷಯವನ್ನು ತೀರ್ಮಾನಿಸಿದರೆ, ಅವನ ಆಜ್ಞೆಯು ಅದರೊಂದಿಗೆ “ಉಂಟಾಗು” ಎಂದು ಹೇಳುವುದು ಮಾತ್ರವಾಗಿರುವುದು. ತಕ್ಷಣ ಅದು ಉಂಟಾಗುವುದು!

(69) ಅಲ್ಲಾಹುವಿನ ದೃಷ್ಟಾಂತಗಳ ಬಗ್ಗೆ ತರ್ಕಿಸುವವರೆಡೆಗೆ ತಾವು ನೋಡಲಿಲ್ಲವೇ? ಅವರು ಪಥಭ್ರಷ್ಟಗೊಳಿಸಲಾಗುತ್ತಿರುವುದು ಹೇಗೆಂದು!

(70) ಅವರು ಗ್ರಂಥವನ್ನೂ, ಯಾವುದಕ್ಕಾಗಿ ನಾವು ನಮ್ಮ ಸಂದೇಶವಾಹಕರನ್ನು ಕಳುಹಿಸಿದೆವೋ ಅದನ್ನೂ ನಿಷೇಧಿಸಿದವರಾಗಿರುವರು. ತರುವಾಯ ಅವರು ಅರಿತುಕೊಳ್ಳುವರು.

(71) ಅವರ ಕತ್ತುಗಳಲ್ಲಿರುವ ಉರುಳುಗಳು ಮತ್ತು ಸಂಕೋಲೆಗಳೊಂದಿಗೆ ಅವರನ್ನು ಎಳೆದೊಯ್ಯಲಾಗುವ ಸಂದರ್ಭ.

(72) ಕುದಿಯುವ ನೀರಿನಲ್ಲಿ. ತರುವಾಯ ಅವರನ್ನು ನರಕಾಗ್ನಿಯಲ್ಲಿ ಉರಿಸಲಾಗುವುದು.

(73) ತರುವಾಯ ಅವರೊಂದಿಗೆ ಹೇಳಲಾಗುವುದು: “ನೀವು ಸಹಭಾಗಿಗಳನ್ನಾಗಿ ಮಾಡಿಕೊಂಡವರು ಎಲ್ಲಿರುವರು?”

(74) ಅಲ್ಲಾಹುವನ್ನು ಬಿಟ್ಟು. ಅವರು ಹೇಳುವರು: “ಅವರು ನಮ್ಮನ್ನು ಬಿಟ್ಟು ಅಪ್ರತ್ಯಕ್ಷರಾಗಿರುವರು. ಅಲ್ಲ, ನಾವು ಮುಂಚೆ ಯಾವುದನ್ನೂ ಕರೆದು ಪ್ರಾರ್ಥಿಸುತ್ತಿರಲಿಲ್ಲ”.(1062) ಹೀಗೆ ಅಲ್ಲಾಹು ಸತ್ಯನಿಷೇಧಿಗಳನ್ನು ಪಥಭ್ರಷ್ಟಗೊಳಿಸುವನು.
1062. ಪ್ರಾರ್ಥಿಸಲು ಯಾವುದೇ ಅರ್ಹತೆಯೂ ಇಲ್ಲದವುಗಳೊಂದಿಗೆ ನಾವು ಪ್ರಾರ್ಥಿಸಿದ್ದು ಕೇವಲ ಶೂನ್ಯದೊಂದಿಗೆ ಪ್ರಾರ್ಥಿಸಿದ್ದಕ್ಕೆ ಸಮಾನವಾಗಿತ್ತೆಂದು ತಮಗೆ ಈಗ ಮನದಟ್ಟಾಗಿದೆ ಎಂದು ಅವರು ಒಪ್ಪಿಕೊಳ್ಳುವರು.

(75) “ಅದೇಕೆಂದರೆ ನೀವು ಭೂಮಿಯಲ್ಲಿ ಅನ್ಯಾಯವಾಗಿ ಬೀಗುತ್ತಿದ್ದಿರಿ ಮತ್ತು ಅಹಂಕಾರ ಪಡುತ್ತಿದ್ದಿರಿ ಎಂಬುದರಿಂದಾಗಿದೆ.

(76) ನರಕದ ಬಾಗಿಲುಗಳನ್ನು ಅದರಲ್ಲಿ ಶಾಶ್ವತವಾಗಿ ವಾಸಿಸುವವರಾಗಿ ಪ್ರವೇಶಿಸಿರಿ. ಅಹಂಕಾರಿಗಳ ವಾಸಸ್ಥಳವು ಎಷ್ಟು ನಿಕೃಷ್ಟವಾದುದು!” (ಎಂದು ಅವರೊಂದಿಗೆ ಹೇಳಲಾಗುವುದು).

(77) ಆದುದರಿಂದ ತಾವು ತಾಳ್ಮೆ ವಹಿಸಿರಿ. ಖಂಡಿತವಾಗಿಯೂ ಅಲ್ಲಾಹುವಿನ ವಾಗ್ದಾನವು ಸತ್ಯವಾಗಿದೆ. ನಾವು ಅವರಿಗೆ ಎಚ್ಚರಿಕೆ ನೀಡುತ್ತಿರುವ ಶಿಕ್ಷೆಗಳ ಪೈಕಿ ಕೆಲವನ್ನು ನಾವು ತಮಗೆ ತೋರಿಸಿಕೊಡುವುದಾದರೂ, (ಅಥವಾ ಅದಕ್ಕಿಂತ ಮೊದಲೇ) ತಮ್ಮನ್ನು ಮೃತಪಡಿಸುವುದಾದರೂ ಅವರನ್ನು ಮರಳಿಸಲಾಗುವುದು ನಮ್ಮೆಡೆಗೇ ಆಗಿದೆ.

(78) ತಮಗಿಂತ ಮುಂಚೆ ನಾವು ಅನೇಕ ಸಂದೇಶವಾಹಕರನ್ನು ಕಳುಹಿಸಿರುವೆವು. ಅವರಲ್ಲಿ ಕೆಲವರ ಬಗ್ಗೆ ನಾವು ತಮಗೆ ವಿವರಿಸಿಕೊಟ್ಟಿರುವೆವು. ಅವರಲ್ಲಿ ಇನ್ನು ಕೆಲವರ ಬಗ್ಗೆ ನಾವು ತಮಗೆ ವಿವರಿಸಿಕೊಟ್ಟಿಲ್ಲ. ಅಲ್ಲಾಹುವಿನ ಅನುಮತಿಯ ವಿನಾ ಯಾವುದೇ ಸಂದೇಶವಾಹಕರಿಗೂ ಒಂದು ದೃಷ್ಟಾಂತವನ್ನು ತರಲು ಸಾಧ್ಯವಾಗದು. ಆದರೆ ಅಲ್ಲಾಹುವಿನ ಆಜ್ಞೆ ಬಂದರೆ ನ್ಯಾಯಬದ್ಧವಾಗಿ ತೀರ್ಪು ನೀಡಲಾಗುವುದು. ಅಲ್ಲಿ ನಷ್ಟ ಹೊಂದಿದವರು ಮಿಥ್ಯವಾದಿಗಳಾಗಿರುವರು.

(79) ನಿಮಗಾಗಿ ಜಾನುವಾರುಗಳನ್ನು ಸೃಷ್ಟಿಸಿದವನು ಅಲ್ಲಾಹುವಾಗಿರುವನು. ಅವುಗಳಲ್ಲಿ ಕೆಲವನ್ನು ನೀವು ವಾಹನಗಳನ್ನಾಗಿ ಬಳಸುವುದಕ್ಕಾಗಿ. ಅವುಗಳಲ್ಲಿ ಕೆಲವನ್ನು ನೀವು ತಿನ್ನುತ್ತಿದ್ದೀರಿ.

(80) ನಿಮಗೆ ಅವುಗಳಲ್ಲಿ ಅನೇಕ ಉಪಯೋಗಗಳಿವೆ. ಅವುಗಳ ಮೂಲಕ ನೀವು ನಿಮ್ಮ ಹೃದಯಗಳಲ್ಲಿರುವ ಯಾವುದಾದರೂ ಅಗತ್ಯದೆಡೆಗೆ ತಲುಪುತ್ತಿದ್ದೀರಿ.(1063) ಅವುಗಳ ಬೆನ್ನುಗಳಲ್ಲೂ, ಹಡಗುಗಳಲ್ಲೂ ನಿಮ್ಮನ್ನು ಸಾಗಿಸಲಾಗುತ್ತಿದೆ.
1063. ಯಾತ್ರೆ, ಯುದ್ಧ, ಸರಕು ಸಾಗಣೆ ಮುಂತಾದ ಅನೇಕ ಅಗತ್ಯಗಳಿಗಾಗಿ ಮನುಷ್ಯರು ಜಾನುವಾರುಗಳನ್ನು ಬಳಸುತ್ತಾರೆ.

(81) ಅವನು ತನ್ನ ದೃಷ್ಟಾಂತಗಳನ್ನು ನಿಮಗೆ ತೋರಿಸಿಕೊಡುವನು. ಆಗ ಅಲ್ಲಾಹುವಿನ ದೃಷ್ಟಾಂತಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(82) ಅವರು ಭೂಮಿಯಲ್ಲಿ ಸಂಚರಿಸಿ ತಮಗಿಂತ ಮುಂಚಿನವರ ಪರ್ಯಾವಸಾನವು ಹೇಗಿತ್ತೆಂದು ನೋಡಲಾರರೇ? ಅವರು ಇವರಿಗಿಂತಲೂ ಹೆಚ್ಚು ಜನಸಂಖ್ಯೆಯುಳ್ಳವರೂ, ಶಕ್ತಿಯಲ್ಲೂ, ಭೂಮಿಯಲ್ಲಿ ಬಿಟ್ಟುಹೋದ ಅವಶೇಷಗಳಿಂದಲೂ ಅತಿಬಲಿಷ್ಠರೂ ಆಗಿದ್ದರು. ಆದರೂ ಅವರು ಸಂಪಾದಿಸಿದ ಯಾವುದೂ ಅವರಿಗೆ ಪ್ರಯೋಜನಕರವಾಗಲಿಲ್ಲ.

(83) ಅವರೆಡೆಗೆ ಕಳುಹಿಸಲಾಗಿರುವ ಸಂದೇಶವಾಹಕರು ಸ್ಪಷ್ಟವಾದ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಾಗ ತಮ್ಮ ಬಳಿಯಿರುವ ಜ್ಞಾನದಲ್ಲಿ ಅವರು ಬೀಗುತ್ತಿದ್ದರು. ಯಾವುದರ ಬಗ್ಗೆ ಅವರು ಗೇಲಿ ಮಾಡುತ್ತಿದ್ದರೋ ಅದು (ಶಿಕ್ಷೆ) ಅವರನ್ನು ಆವರಿಸಿಬಿಟ್ಟಿತು.

(84) ತರುವಾಯ ನಮ್ಮ ಶಿಕ್ಷೆಯನ್ನು ಕಂಡಾಗ ಅವರು ಹೇಳಿದರು: “ನಾವು ಅಲ್ಲಾಹುವಿನಲ್ಲಿ ಮಾತ್ರ ವಿಶ್ವಾಸವಿಟ್ಟಿರುವೆವು ಮತ್ತು ಅವನೊಂದಿಗೆ ನಾವು ಸಹಭಾಗಿಯನ್ನಾಗಿ ಮಾಡಿರುವ (ಆರಾಧ್ಯರನ್ನು) ನಾವು ನಿಷೇಧಿಸಿರುವೆವು”.

(85) ಆದರೆ ನಮ್ಮ ಶಿಕ್ಷೆಯನ್ನು ಕಂಡಾಗ ಅವರ ಸತ್ಯವಿಶ್ವಾಸವು ಅವರಿಗೆ ಪ್ರಯೋಜನಪಡಲಿಲ್ಲ.(1064) ಇದು ಅಲ್ಲಾಹು ತನ್ನ ದಾಸರ ವಿಷಯದಲ್ಲಿ ಹಿಂದೆಯೇ ಜಾರಿಗೊಳಿಸಿದ್ದ ಕ್ರಮವಾಗಿದೆ. ಅಲ್ಲಿ ಸತ್ಯನಿಷೇಧಿಗಳು ನಷ್ಟ ಹೊಂದಿದವರಾದರು.
1064. ಅಲ್ಲಾಹುವಿನ ಶಿಕ್ಷೆಯ ಬಗ್ಗೆ ಪ್ರವಾದಿಗಳು ನೀಡಿದ ಎಚ್ಚರಿಕೆಗಳನ್ನು ಕಡೆಗಣಿಸಿದ ಜನರೆಲ್ಲರೂ ಶಿಕ್ಷೆಯನ್ನು ಕಣ್ಣಾರೆ ಕಾಣುವಾಗ ಅಲ್ಲಾಹನಿನಲ್ಲಿ ವಿಶ್ವಾಸವಿಡಲು ಸನ್ನದ್ಧರಾಗುತ್ತಾರೆ. ಆದರೆ ಮರಣವನ್ನು ಕಣ್ಣಾರೆ ಕಾಣುವ ಸಂದರ್ಭ ಮಾಡುವ ಆ ವಿಶ್ವಾಸ ಘೋಷಣೆಯನ್ನು ಅಲ್ಲಾಹು ಎಂದೂ ಪರಿಗಣಿಸಲಾರನು. ಶಿಕ್ಷೆ ಹಗುರವಾಗಲೂ ಅದು ಪ್ರಯೋಜನ ನೀಡಲಾರದು.