42 - Ash-Shura ()

|

(1) ಹಾ-ಮೀಮ್.

(2) ಐನ್-ಸೀನ್-ಕ್ವಾಫ್.

(3) ಹೀಗೆ ತಮಗೂ ತಮಗಿಂತ ಮುಂಚಿನವರಿಗೂ ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವ ಅಲ್ಲಾಹು ದಿವ್ಯಸಂದೇಶವನ್ನು ನೀಡುವನು.

(4) ಆಕಾಶಗಳಲ್ಲಿರುವುದು ಮತ್ತು ಭೂಮಿಯಲ್ಲಿರುವುದು ಅವನದ್ದಾಗಿವೆ. ಅವನು ಅತ್ಯುನ್ನತನೂ ಮಹಾನನೂ ಆಗಿರುವನು.

(5) ಆಕಾಶಗಳು ತಮ್ಮ ಮೇಲ್ಭಾಗದಿಂದ ಒಡೆದು ಚೂರಾಗುವಂತಿದೆ.(1078) ಮಲಕ್‍ಗಳು ತಮ್ಮ ರಬ್‌ನ ಸ್ತುತಿಯೊಂದಿಗೆ ಅವನ ಕೀರ್ತನೆ ಮಾಡುತ್ತಿರುವರು. ಭೂಮಿಯಲ್ಲಿರುವವರಿಗೆ ಅವರು ಪಾಪಮುಕ್ತಿಯನ್ನು ಬೇಡುತ್ತಿರುವರು. ಅರಿಯಿರಿ! ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
1078. ಅಲ್ಲಾಹುವಿನ ಅಪ್ಪಣೆಯುಂಟಾದ ತಕ್ಷಣ ಒಂದಿಷ್ಟೂ ತಡವಾಗದೆ ಆಕಾಶಕಾಯಗಳು ಸಿಡಿದು ನುಚ್ಚುನೂರಾಗಲಿವೆ.

(6) ಅವನ ಹೊರತು ಅನ್ಯರನ್ನು ರಕ್ಷಕರನ್ನಾಗಿ ಮಾಡಿಕೊಂಡವರನ್ನು ಅಲ್ಲಾಹು ಸೂಕ್ಷ್ಮವಾಗಿ ಗಮನಿಸುತ್ತಿರುವನು. ಅವರ ವಿಷಯದಲ್ಲಿ ತಾವು ಹೊಣೆಗಾರರಲ್ಲ.

(7) ಹೀಗೆ, ನಾವು ತಮಗೆ ಅರಬಿ ಭಾಷೆಯಲ್ಲಿರುವ ಕುರ್‌ಆನನ್ನು ದಿವ್ಯ ಸಂದೇಶವಾಗಿ ನೀಡಿದೆವು. ಉಮ್ಮುಲ್ ಕುರಾ (ಮಕ್ಕಾ)(1079) ಮತ್ತು ಅದರ ಪರಿಸರದಲ್ಲಿರುವವರಿಗೆ ತಾವು ಮುನ್ನೆಚ್ಚರಿಕೆ ನೀಡುವ ಸಲುವಾಗಿ. ಒಟ್ಟುಗೂಡಿಸುವ ದಿನದ ಬಗ್ಗೆ ತಾವು ಮುನ್ನೆಚ್ಚರಿಕೆ ನೀಡುವ ಸಲುವಾಗಿ. ಅದರಲ್ಲಿ ಸಂದೇಹವೇ ಇಲ್ಲ. ಅಂದು ಒಂದು ಗುಂಪು ಸ್ವರ್ಗದಲ್ಲಿಯೂ ಇನ್ನೊಂದು ಗುಂಪು ಜ್ವಲಿಸುವ ನರಕಾಗ್ನಿಯಲ್ಲಿಯೂ ಇರುವರು.
1079. ‘ಉಮ್ಮುಲ್ ಕುರಾ’ ಎಂದರೆ ನಗರಗಳ ಮಾತೆ ಅಥವಾ ಮಾತೃನಗರಿ ಎಂದರ್ಥ. ಈ ಸೂಕ್ತಿಯು ಮಕ್ಕಾ ನಗರವನ್ನು ಜಾಗತಿಕ ಸಾಂಸ್ಕೃತಿಕ ಕೇಂದ್ರ ಎಂಬ ಪದವಿಗೆ ಏರಿಸುತ್ತದೆ.

(8) ಅಲ್ಲಾಹು ಇಚ್ಛಿಸುತ್ತಿದ್ದರೆ ಅವನು ಅವರನ್ನು (ಮನುಷ್ಯರನ್ನು) ಏಕೈಕ ಸಮುದಾಯವನ್ನಾಗಿ ಮಾಡುತ್ತಿದ್ದನು.(1080) ಆದರೆ ಅವನಿಚ್ಛಿಸುವವರನ್ನು ಅವನು ತನ್ನ ಕಾರುಣ್ಯದಲ್ಲಿ ಪ್ರವೇಶ ಮಾಡಿಸುವನು. ಅಕ್ರಮಿಗಳಿಗೆ ಯಾವುದೇ ರಕ್ಷಕರಾಗಲಿ, ಸಹಾಯಕರಾಗಲಿ ಇರಲಾರರು.
1080. ಯಾರೂ ಪಥಭ್ರಷ್ಟರಾಗದಂತೆ ಸಂಪೂರ್ಣ ಮನುಕುಲವನ್ನು ಸತ್ಯದಲ್ಲಿ ಅಚಲವಾಗಿ ನಿಲ್ಲಿಸಲು ಅಲ್ಲಾಹುವಿಗೆ ಸಾಧ್ಯವಿದೆ. ಆದರೆ ಹಾಗೆ ಮಾಡುವ ಬದಲು ಅವನು ಮನುಷ್ಯನಿಗೆ ಒಳಿತು-ಕೆಡುಕುಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಿದ್ದಾನೆ. ಸ್ವಾತಂತ್ರ್ಯರಾಹಿತ್ಯದ ಒಳಿತಿಗಿಂತಲೂ ಸ್ವಾತಂತ್ರ್ಯದ ಒಳಿತೇ ಉನ್ನತವಾಗಿದೆ.

(9) ಅಥವಾ, ಅವರು ಅವನ ಹೊರತು ಅನ್ಯರನ್ನು ರಕ್ಷಕರನ್ನಾಗಿ ಮಾಡಿಕೊಂಡಿರುವರೇ? ಆದರೆ ರಕ್ಷಕನು ಅಲ್ಲಾಹು ಮಾತ್ರವಾಗಿರುವನು. ಅವನು ಮರಣಹೊಂದಿದವರಿಗೆ ಜೀವವನ್ನು ನೀಡುವನು. ಅವನು ಸರ್ವ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.

(10) ನೀವು ಯಾವುದೇ ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರೂ ಅದರ ಬಗ್ಗೆ ತೀರ್ಪು ನೀಡುವ ಹಕ್ಕಿರುವುದು ಅಲ್ಲಾಹುವಿಗಾಗಿದೆ. ಅವನೇ ನನ್ನ ರಬ್ ಆದ ಅಲ್ಲಾಹು! ಅವನ ಮೇಲೆ ನಾನು ಭರವಸೆಯನ್ನಿಟ್ಟಿರುವೆನು. ಅವನೆಡೆಗೆ ನಾನು ವಿನಮ್ರತೆಯೊಂದಿಗೆ ಮರಳುವೆನು.

(11) (ಅವನು) ಭೂಮ್ಯಾಕಾಶಗಳ ಸೃಷ್ಟಿಕರ್ತನು. ಅವನು ನಿಮ್ಮಿಂದಲೇ ನಿಮಗೆ ಜೋಡಿಗಳನ್ನು ಮಾಡಿಕೊಟ್ಟಿರುವನು. ಅವನು ಜಾನುವಾರುಗಳಿಂದಲೂ ಜೋಡಿಗಳನ್ನು (ಮಾಡಿರುವನು). ತನ್ಮೂಲಕ ಅವನು ನಿಮ್ಮನ್ನು ಸೃಷ್ಟಿಸಿ ಅಧಿಕಗೊಳಿಸುವನು.(1081) ಅವನಿಗೆ ಹೋಲಿಕೆಯಾಗಿ ಯಾವುದೂ ಇಲ್ಲ. ಅವನು ಎಲ್ಲವನ್ನು ಆಲಿಸುವವನೂ ಎಲ್ಲವನ್ನು ವೀಕ್ಷಿಸುವವನೂ ಆಗಿರುವನು.
1081. ಅಂದರೆ ಮನುಷ್ಯರನ್ನು ಮತ್ತು ಪ್ರಾಣಿಗಳನ್ನು ಅವನು ಜೋಡಿಗಳಾಗಿ ಸೃಷ್ಟಿಸಿದ ಕಾರಣದಿಂದ ಸಂತಾನಾಭಿವೃದ್ಧಿಯುಂಟಾಗುತ್ತದೆ ಎಂದರ್ಥ.

(12) ಭೂಮ್ಯಾಕಾಶಗಳ ಕೀಲಿಕೈಗಳು ಅವನ ಅಧೀನದಲ್ಲಿವೆ. ಅವನಿಚ್ಛಿಸುವವರಿಗೆ ಅವನು ಅನ್ನಾಧಾರವನ್ನು ವಿಶಾಲಗೊಳಿಸುವನು ಮತ್ತು (ಅವನಿಚ್ಛಿಸುವವರಿಗೆ) ಅದನ್ನು ಸಂಕುಚಿತಗೊಳಿಸುವನು. ಖಂಡಿತವಾಗಿಯೂ ಅವನು ಸರ್ವ ವಿಷಯಗಳ ಬಗ್ಗೆಯೂ ಅರಿವುಳ್ಳವನಾಗಿರುವನು.

(13) ನೂಹ್‍ರಿಗೆ ಆದೇಶಿಸಿರುವುದನ್ನು, ತಮಗೆ ದಿವ್ಯ ಸಂದೇಶವಾಗಿ ನೀಡಿರುವುದನ್ನು, ಇಬ್ರಾಹೀಮ್, ಮೂಸಾ, ಈಸಾ ಮುಂತಾದವರಿಗೆ ನಾವು ಆದೇಶಿಸಿರುವುದನ್ನು(1082) –ಅಂದರೆ ನೀವು ಧರ್ಮವನ್ನು ಸಂಸ್ಥಾಪಿಸಿರಿ ಮತ್ತು ಅದರಲ್ಲಿ ಭಿನ್ನರಾಗದಿರಿ ಎಂಬ ವಿಷಯವನ್ನು- ಅವನು ನಿಮಗೆ ಧರ್ಮನಿಯಮವಾಗಿ ನಿರ್ದೇಶಿಸಿರುವನು. ನೀವು ಆ ಬಹುದೇವವಿಶ್ವಾಸಿಗಳನ್ನು ಯಾವುದರೆಡೆಗೆ ಆಹ್ವಾನಿಸುತ್ತಿರುವಿರೋ ಅದು ಅವರಿಗೆ ಅತಿಭಾರವಾಗಿ ಕಾಣುತ್ತಿದೆ. ಅಲ್ಲಾಹು ಅವನಿಚ್ಛಿಸುವವರನ್ನು ಅವನ ಬಳಿಗೆ ಆರಿಸಿಕೊಳ್ಳುವನು. ವಿನಮ್ರತೆಯೊಂದಿಗೆ ಮರಳುವವರನ್ನು ಅವನು ತನ್ನೆಡೆಗಿರುವ ಮಾರ್ಗದಲ್ಲಿ ಮುನ್ನಡೆಸುವನು.
1082. ಆದಮ್(ಅ) ರಿಗೆ ಅಲ್ಲಾಹು ಸತ್ಯದ ಬಗ್ಗೆ ಬೋಧಿಸಿದ್ದನು. ಅನಂತರದ ತಲೆಮಾರುಗಳಲ್ಲಿ ಮಿಥ್ಯ ವಿಶ್ವಾಸಾಚಾರಗಳು ಹೇಗೋ ಸೇರಿಕೊಂಡವು. ಜನರು ಸತ್ಯದಿಂದ ವ್ಯತಿಚಲಿಸಿದಾಗಲೆಲ್ಲ ಅವರನ್ನು ನೇರದಾರಿಗೆ ತರಲು ಮತ್ತು ಧರ್ಮವನ್ನು ಸರಿಯಾದ ವಿಧದಲ್ಲಿ ಸ್ಥಾಪಿಸಲು ಪ್ರವಾದಿಗಳನ್ನು ಕಳುಹಿಸಲಾಗುತ್ತಿತ್ತು.

(14) ಗ್ರಂಥದವರು ಭಿನ್ನರಾಗಿರುವುದು ಅವರ ಬಳಿಗೆ ಅರಿವು ಬಂದ ಬಳಿಕವಾಗಿತ್ತು. ಅದು ಅವರು ಪರಸ್ಪರ ಇಟ್ಟುಕೊಂಡಿದ್ದ ವಿರೋಧದ ಕಾರಣದಿಂದಾಗಿತ್ತು.(1083) ನಿಶ್ಚಿತವಾದ ಒಂದು ಅವಧಿಯವರೆಗೆ ಬಾಧಕವಾದ ಒಂದು ವಚನವು ತಮ್ಮ ರಬ್‌ನ ಕಡೆಯಿಂದ ಪೂರ್ವಭಾವಿಯಾಗಿ ಇಲ್ಲದಿರುತ್ತಿದ್ದರೆ ಅವರ ಮಧ್ಯೆ (ತಕ್ಷಣ) ತೀರ್ಪು ನೀಡಲಾಗಿರುತ್ತಿತ್ತು.(1084) ಅವರ ಬಳಿಕ ಗ್ರಂಥದ ಉತ್ತರಾಧಿಕಾರವನ್ನು ಪಡೆದವರು ಖಂಡಿತವಾಗಿಯೂ ಅದರ ಬಗ್ಗೆ ಅವಿಶ್ವಾಸವನ್ನು ಹುಟ್ಟಿಸುವಂತಹ ಸಂದೇಹದಲ್ಲಿರುವರು.
1083. ಜನರು ಗ್ರಂಥದ ನೈಜ ಉಪದೇಶಗಳಿಂದ ವ್ಯತಿಚಲಿಸಿದ ಪ್ರಮುಖ ಕಾರಣವು ಧಾರ್ಮಿಕ ಮುಖಂಡರ ಮತ್ತು ಪುರೋಹಿತರ ಮಧ್ಯೆ ನಡೆಯುತ್ತಿದ್ದಂತಹ ಸಂಘರ್ಷಗಳಾಗಿದ್ದವು. 1084. ಇಹಲೋಕದಲ್ಲಿ ಒಂದು ಮಿತಿಯವರೆಗೆ ಪಾಪಿಗಳನ್ನು ಅವರ ಪಾಡಿಗೆ ಬಿಟ್ಟುಬಿಡಲು ಮತ್ತು ಅವರನ್ನು ಪರಲೋಕದಲ್ಲಿ ಶಿಕ್ಷಿಸಲು ಅಲ್ಲಾಹು ಪೂರ್ವ ನಿರ್ಧಾರ ಕೈಗೊಳ್ಳದಿರುತ್ತಿದ್ದರೆ ಪಾಪಿಗಳಿಗೆ ತಕ್ಷಣ ಶಿಕ್ಷೆ ನೀಡಲಾಗುತ್ತಿತ್ತು ಎಂದರ್ಥ.

(15) ಆದುದರಿಂದ ತಾವು ಉಪದೇಶ ನೀಡಿರಿ. ತಮಗೆ ಆಜ್ಞಾಪಿಸಲಾಗಿರುವಂತೆ ನೇರವಾಗಿ ನೆಲೆಗೊಳ್ಳಿರಿ. ಅವರ ದೇಹೇಚ್ಛೆಗಳನ್ನು ಹಿಂಬಾಲಿಸದಿರಿ. ಹೇಳಿರಿ: “ಅಲ್ಲಾಹು ಅವತೀರ್ಣಗೊಳಿಸಿರುವ ಎಲ್ಲ ಗ್ರಂಥಗಳಲ್ಲೂ ನಾನು ವಿಶ್ವಾಸವಿಟ್ಟಿರುವೆನು. ನಿಮ್ಮ ಮಧ್ಯೆ ನ್ಯಾಯಪಾಲಿಸುವಂತೆ ನನಗೆ ಆಜ್ಞಾಪಿಸಲಾಗಿದೆ. ನಮ್ಮ ರಬ್ ಮತ್ತು ನಿಮ್ಮ ರಬ್ ಅಲ್ಲಾಹುವಾಗಿರುವನು. ನಮಗೆ ನಮ್ಮ ಕರ್ಮಗಳು ಮತ್ತು ನಿಮಗೆ ನಿಮ್ಮ ಕರ್ಮಗಳು. ನಮ್ಮ ಮತ್ತು ನಿಮ್ಮ ಮಧ್ಯೆ ಯಾವುದೇ ತರ್ಕವೂ ಇಲ್ಲ. ಅಲ್ಲಾಹು ನಮ್ಮನ್ನು ಪರಸ್ಪರ ಒಟ್ಟುಗೂಡಿಸುವನು. ಮರಳುವಿಕೆಯು ಅವನೆಡೆಗೇ ಆಗಿದೆ”.

(16) ಅಲ್ಲಾಹುವಿನ ಕರೆಗೆ ಅಂಗೀಕಾರ ಸಿಕ್ಕಿದ ಬಳಿಕ(1085) ಅವನ ವಿಷಯದಲ್ಲಿ ತರ್ಕಿಸುವವರಾರೋ ಅವರ ತರ್ಕವು ಅವರ ರಬ್‌ನ ಬಳಿ ನಿಷ್ಫಲವಾಗಿದೆ. ಅವರ ಮೇಲೆ ಕ್ರೋಧವಿರುವುದು ಮತ್ತು ಅವರಿಗೆ ಕಠಿಣವಾದ ಶಿಕ್ಷೆಯಿರುವುದು.
1085. ಎಲ್ಲರನ್ನೂ ಒಮ್ಮೆಲೇ ವಿಶ್ವಾಸಿಗಳನ್ನಾಗಿ ಮಾಡುವುದು ಪ್ರವಾದಿಗಳ ಕರ್ತವ್ಯವಲ್ಲ. ನಿಷ್ಪಕ್ಷಪಾತಿಗಳಾದ ಸತ್ಯಾನ್ವೇಷಿಗಳು ಸತ್ಯವನ್ನು ಅಂಗೀಕರಿಸುವುದರೊಂದಿಗೆ ಪ್ರವಾದಿಗಳ ಕರ್ತವ್ಯವು ಸಫಲವಾಗುತ್ತದೆ. ತರುವಾಯ ಅವರ ವಿರುದ್ಧ ತರ್ಕಿಸುವವರ ಸರ್ವ ತರ್ಕಗಳೂ ನಿಷ್ಫಲವಾಗಿವೆ.

(17) ಸತ್ಯದೊಂದಿಗೆ ಗ್ರಂಥವನ್ನು ಮತ್ತು (ಸರಿ ತಪ್ಪು ಗಳನ್ನು ತೂಗುವ) ತಕ್ಕಡಿಯನ್ನು(1086) ಅವತೀರ್ಣಗೊಳಿಸಿದವನು ಅಲ್ಲಾಹುವಾಗಿರುವನು. ತಮಗೇನು ಗೊತ್ತು? ಆ ಅಂತ್ಯಘಳಿಗೆಯು ಸಮೀಪದಲ್ಲೇ ಇರಬಹುದು.
1086. ಬದುಕಿನ ಯಾವುದೇ ಸಮಸ್ಯೆಯನ್ನೂ ತೂಗಿ ನೋಡಿ ಸತ್ಯ ಮತ್ತು ಅಸತ್ಯವನ್ನು ಬೇರ್ಪಡಿಸಲು ದಿವ್ಯ ಸಂದೇಶವು ನೆರವಾಗುತ್ತದೆ.

(18) ಅದರಲ್ಲಿ (ಅಂತ್ಯಘಳಿಗೆಯಲ್ಲಿ) ವಿಶ್ವಾಸವಿಡದವರು ಅದರ ಬಗ್ಗೆ ಆತುರಪಡುತ್ತಿರುವರು. ಆದರೆ ವಿಶ್ವಾಸಿಗಳು ಅದರ ಬಗ್ಗೆ ಭಯಭೀತರಾಗಿರುವರು. ಅದು ಸತ್ಯವೆಂದು ಅವರು ಅರಿತಿರುವರು. ಅರಿಯಿರಿ! ಖಂಡಿತವಾಗಿಯೂ ಅಂತ್ಯಘಳಿಗೆಯ ವಿಷಯದಲ್ಲಿ ತರ್ಕಿಸುವವರು ವಿದೂರವಾದ ಪಥಭ್ರಷ್ಟತೆಯಲ್ಲಿರುವರು.

(19) ಅಲ್ಲಾಹು ತನ್ನ ದಾಸರೊಂದಿಗೆ ದಯೆಯುಳ್ಳವನಾಗಿರುವನು. ಅವನಿಚ್ಛಿಸುವವರಿಗೆ ಅವನು ಅನ್ನಾಧಾರವನ್ನು ಒದಗಿಸುವನು. ಅವನು ಬಲಿಷ್ಠನೂ, ಪ್ರತಾಪಶಾಲಿಯೂ ಆಗಿರುವನು.

(20) ಯಾರಾದರೂ ಪರಲೋಕದ ಕೃಷಿಯನ್ನು ಬಯಸುವುದಾದರೆ ಅವನ ಕೃಷಿಯಲ್ಲಿ ನಾವು ಅವನಿಗೆ ಹೆಚ್ಚುವರಿಯನ್ನು ನೀಡುವೆವು. ಯಾರಾದರೂ ಇಹಲೋಕದ ಕೃಷಿಯನ್ನು ಬಯಸುವುದಾದರೆ ನಾವು ಅವನಿಗೆ ಅದರಿಂದ ನೀಡುವೆವು. ಪರಲೋಕದಲ್ಲಿ ಅವನಿಗೆ ಯಾವುದೇ ಪಾಲೂ ಇರಲಾರದು.(1087)
1087. ಭೌತಿಕ ಲಾಭವನ್ನೇ ಜೀವನದ ಗುರಿಯಾಗಿ ಮಾಡಿಕೊಂಡವರಿಗೆ ಪಾರಲೌಕಿಕ ಸೌಭಾಗ್ಯವು ನಷ್ಟವಾಗುತ್ತದೆ ಎಂದರ್ಥ.

(21) ಅಲ್ಲಾಹು ಅನುಮತಿಸದ ವಿಷಯವನ್ನು ಅವರಿಗೆ ಧರ್ಮವನ್ನಾಗಿ ಮಾಡಿಕೊಟ್ಟ ಯಾರಾದರೂ ಸಹಭಾಗಿಗಳು ಅವರಿಗಿರುವರೇ? ನಿರ್ಣಾಯಕ ವಿಧಿಯ ಬಗ್ಗೆಯಿರುವ ಆಜ್ಞೆಯು ಇಲ್ಲದಿರುತ್ತಿದ್ದರೆ ಅವರ ಮಧ್ಯೆ ತಕ್ಷಣ ತೀರ್ಪು ನೀಡಲಾಗುತ್ತಿತ್ತು. ಖಂಡಿತವಾಗಿಯೂ ಅಕ್ರಮಿಗಳಿಗೆ ಯಾತನಾಮಯವಾದ ಶಿಕ್ಷೆಯಿದೆ.

(22) ಆ ಅಕ್ರಮಿಗಳು ತಾವು ಸಂಪಾದಿಸಿರುವುದರ ಬಗ್ಗೆ (ಪರಲೋಕದಲ್ಲಿ) ಭಯಭೀತರಾಗಿರುವುದಾಗಿ ತಾವು ಕಾಣುವಿರಿ. ಅದು (ಸಂಪಾದಿಸಿದ್ದಕ್ಕಿರುವ ಶಿಕ್ಷೆಯು) ಅವರ ಮೇಲೆ ಸಂಭವಿಸಿಯೇ ತೀರುವುದು. ಸತ್ಯವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರು ಸ್ವರ್ಗೋದ್ಯಾನಗಳಲ್ಲಿರುವರು. ಅವರು ಏನನ್ನು ಬಯಸುವರೋ ಅದು ಅವರ ರಬ್‌ನ ಬಳಿ ಅವರಿಗಿರುವುದು. ಮಹಾ ಅನುಗ್ರಹವು ಅದೇ ಆಗಿದೆ.

(23) ಅದು ವಿಶ್ವಾಸವಿಡುವ ಮತ್ತು ಸತ್ಕರ್ಮವೆಸಗುವ ತನ್ನ ದಾಸರಿಗೆ ಅಲ್ಲಾಹು ತಿಳಿಸುವ ಶುಭವಾರ್ತೆಯಾಗಿದೆ. ಹೇಳಿರಿ: “ಅದಕ್ಕಾಗಿ ನಾನು ನಿಮ್ಮೊಂದಿಗೆ ಯಾವುದೇ ಪ್ರತಿಫಲವನ್ನೂ ಬೇಡಲಾರೆನು. ನಿಕಟ ಸಂಬಂಧದ ಹೆಸರಲ್ಲಿರುವ ಪ್ರೀತಿಯ ಹೊರತು.(1088) ಯಾರಾದರೂ ಒಂದು ಸತ್ಕರ್ಮವನ್ನು ಮಾಡಿದರೆ ನಾವು ಅವನಿಗೆ ತನ್ಮೂಲಕ ಒಳಿತನ್ನು ಹೆಚ್ಚಿಸಿಕೊಡುವೆವು. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ, ಅತ್ಯಧಿಕ ಕೃತಜ್ಞನೂ ಆಗಿರುವನು.
1088. ಪ್ರತಿಯೊಬ್ಬರೂ ತಮ್ಮ ನಿಕಟ ಸಂಬಂಧಿಕರಿಂದ ಮತ್ತು ಆಪ್ತಮಿತ್ರರಿಂದ ಪ್ರೀತಿ ತುಂಬಿದ ವರ್ತನೆಯನ್ನು ಆಶಿಸುವುದು ಸಹಜ. ಆದರೆ ಪ್ರವಾದಿ(ಸ) ರಿಗೆ ಅದು ಕೂಡ ಇಲ್ಲದಾಯಿತು. ಅವರ ಅನೇಕ ಸಂಬಂಧಿಕರು ಅವರೊಂದಿಗೆ ಕಠಿಣ ವಿರೋಧ ತೋರಿಸಿದ್ದು ಮಾತ್ರವಲ್ಲದೆ ಅವರ ಮೇಲೆ ನಡೆಸಲಾಗುವ ದೌರ್ಜನ್ಯಗಳಿಗೆ ನಾಯಕತ್ವವನ್ನೂ ವಹಿಸಿದ್ದರು.

(24) ಅಥವಾ, ಅವರು (ಪ್ರವಾದಿ) ಅಲ್ಲಾಹುವಿನ ಮೇಲೆ ಸುಳ್ಳನ್ನು ಹೆಣೆದಿರುವರು ಎಂದು ಅವರು ಹೇಳುತ್ತಿರುವರೇ? ಅಲ್ಲಾಹು ಇಚ್ಛಿಸುತ್ತಿದ್ದರೆ ಅವನು ತಮ್ಮ ಹೃದಯದ ಮೇಲೆ ಮುದ್ರೆಯೊತ್ತುತ್ತಿದ್ದನು. ಅಲ್ಲಾಹು ಅಸತ್ಯವನ್ನು ಅಳಿಸುವನು ಮತ್ತು ತನ್ನ ವಚನಗಳ ಮೂಲಕ ಸತ್ಯವನ್ನು ಸ್ಥಿರಪಡಿಸುವನು. ಖಂಡಿತವಾಗಿಯೂ ಅವನು ಹೃದಯಗಳಲ್ಲಿರುವುದನ್ನು ಅರಿಯುವವನಾಗಿರುವನು.

(25) ಅವನು ತನ್ನ ದಾಸರಿಂದ ಪಶ್ಚಾತ್ತಾಪವನ್ನು ಸ್ವೀಕರಿಸುವವನಾಗಿರುವನು. ಅವನು ದುಷ್ಕೃತ್ಯಗಳನ್ನು ಮನ್ನಿಸುವನು. ನೀವೇನು ಮಾಡುತ್ತಿರುವಿರೋ ಅದನ್ನು ಅವನು ಅರಿಯುವನು.

(26) ಸತ್ಯವಿಶ್ವಾಸವಿಟ್ಟವರಿಗೂ ಸತ್ಕರ್ಮವೆಸಗಿದವರಿಗೂ (ಅವರ ಪ್ರಾರ್ಥನೆಗಳಿಗೆ) ಅವನು ಉತ್ತರವನ್ನು ನೀಡುವನು ಮತ್ತು ತನ್ನ ಅನುಗ್ರಹದಿಂದ ಅವರಿಗೆ ಹೆಚ್ಚಿಸಿಕೊಡುವನು. ಸತ್ಯನಿಷೇಧಿಗಳಾರೋ ಅವರಿಗೆ ಕಠಿಣವಾದ ಶಿಕ್ಷೆಯಿದೆ.

(27) ಅಲ್ಲಾಹು ತನ್ನ ದಾಸರಿಗೆ ಅನ್ನಾಧಾರವನ್ನು ವಿಶಾಲಗೊಳಿಸಿರುತ್ತಿದ್ದರೆ ಅವರು ಭೂಮಿಯಲ್ಲಿ ಅತಿಕ್ರಮವೆಸಗುತ್ತಿದ್ದರು. ಆದರೆ ಅವನು ತಾನು ಇಚ್ಛಿಸುವುದನ್ನು ಒಂದು ಪ್ರಮಾಣಕ್ಕನುಗುಣವಾಗಿ ಇಳಿಸಿಕೊಡುವನು. ಖಂಡಿತವಾಗಿಯೂ ಅವನು ತನ್ನ ದಾಸರ ಬಗ್ಗೆ ಸೂಕ್ಷ್ಮಜ್ಞಾನಿಯೂ, ವೀಕ್ಷಿಸುವವನೂ ಆಗಿರುವನು.

(28) ಮನುಷ್ಯರು ನಿರಾಶರಾದ ಬಳಿಕ ಮಳೆಯನ್ನು ಸುರಿಸುವವನು ಮತ್ತು ತನ್ನ ಕಾರುಣ್ಯವನ್ನು ವಿಸ್ತರಿಸುವವನು ಅವನಾಗಿರುವನು. ಅವನು ಸ್ತುತ್ಯರ್ಹನಾದ ರಕ್ಷಕನಾಗಿರುವನು.

(29) ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿರುವುದು ಹಾಗೂ ಅವೆರಡರಲ್ಲೂ ಅವನು ಜೀವರಾಶಿಗಳನ್ನು ಹಬ್ಬಿಸಿರುವುದು ಅವನ ದೃಷ್ಟಾಂತಗಳಲ್ಲಿ ಸೇರಿದ್ದಾಗಿವೆ. ಅವನಿಚ್ಛಿಸುವಾಗ ಅವರನ್ನು ಒಟ್ಟುಗೂಡಿಸಲು ಅವನು ಸಾಮರ್ಥ್ಯವುಳ್ಳವನಾಗಿರುವನು.

(30) ನಿಮಗೆ ಯಾವುದಾದರೂ ವಿಪತ್ತು ಬಾಧಿಸಿದ್ದರೆ ಅದು ನಿಮ್ಮ ಕೈಗಳು ಮಾಡಿರುವುದರ ಫಲವಾಗಿಯೇ ಆಗಿದೆ. ಹೆಚ್ಚಿನವುಗಳನ್ನೂ ಅವನು ಮನ್ನಿಸುವನು.

(31) ಭೂಮಿಯಲ್ಲಿ (ಅಲ್ಲಾಹುವನ್ನು) ಸೋಲಿಸಲು ನಿಮಗೆ ಸಾಧ್ಯವಾಗದು. ಅಲ್ಲಾಹುವಿನ ಹೊರತು ನಿಮಗೆ ಅನ್ಯ ರಕ್ಷಕರಾಗಲಿ ಸಹಾಯಕರಾಗಲಿ ಇಲ್ಲ.

(32) ಸಮುದ್ರಗಳಲ್ಲಿ ಬೆಟ್ಟಗಳಂತೆ ಚಲಿಸುವ ಹಡಗುಗಳು ಅವನ ದೃಷ್ಟಾಂತಗಳಲ್ಲಿ ಸೇರಿದ್ದಾಗಿವೆ.

(33) ಅವನು ಇಚ್ಛಿಸಿದರೆ ಅವನು ಗಾಳಿಯನ್ನು ಸ್ತಬ್ದ ಗೊಳಿಸುವನು. ಆಗ ಅವು ಸಮುದ್ರಗಳ ಮೇಲ್ಭಾಗದಲ್ಲಿ ನಿಶ್ಚಲವಾಗಿ ನಿಲ್ಲುವುವು. ಖಂಡಿತವಾಗಿಯೂ ತಾಳ್ಮೆ ವಹಿಸುವ ಮತ್ತು ಕೃತಜ್ಞತೆ ಸಲ್ಲಿಸುವ ಎಲ್ಲರಿಗೂ ಅದರಲ್ಲಿ ದೃಷ್ಟಾಂತಗಳಿವೆ.

(34) ಅಥವಾ ಅವರು ಮಾಡಿಕೊಂಡಿರುವುದರ ಫಲವಾಗಿ ಅವುಗಳನ್ನು (ಹಡಗುಗಳನ್ನು) ಅವನು ನಾಶ ಮಾಡುವನು. ಹೆಚ್ಚಿನವುಗಳನ್ನೂ ಅವನು ಮನ್ನಿಸುವನು.

(35) ನಮ್ಮ ದೃಷ್ಟಾಂತಗಳ ಬಗ್ಗೆ ತರ್ಕಿಸುವವರು ತಮಗೆ ಯಾವುದೇ ಅಭಯಸ್ಥಾನವೂ ಇಲ್ಲ ಎಂಬುದನ್ನು ಅರಿಯುವ ಸಲುವಾಗಿ.

(36) ನಿಮಗೇನಾದರೂ ನೀಡಲಾಗಿದ್ದರೆ ಅದು ಐಹಿಕ ಜೀವನದ (ತಾತ್ಕಾಲಿಕ) ಸುಖಾನುಭೂತಿ ಮಾತ್ರವಾಗಿದೆ. ಅಲ್ಲಾಹುವಿನ ಬಳಿಯಿರುವುದು(1089) ಅತ್ಯುತ್ತಮವೂ ಹೆಚ್ಚು ಅವಶೇಷಿಸುವುದೂ ಆಗಿದೆ. ಅದು ವಿಶ್ವಾಸವಿಟ್ಟವರಿಗೆ ಮತ್ತು ತಮ್ಮ ರಬ್‌ನ ಮೇಲೆ ಭರವಸೆಯಿಟ್ಟವರಿಗೆ ಇರುವುದಾಗಿದೆ.
1089. ಅರ್ಥಾತ್ ಓರ್ವ ಸತ್ಯವಿಶ್ವಾಸಿಗೆ ಪರಲೋಕದಲ್ಲಿ ಅಲ್ಲಾಹುವಿನ ವತಿಯಿಂದ ಸಿಗಲಿರುವ ಅನುಗ್ರಹಗಳು.

(37) ಮಹಾಪಾಪಗಳನ್ನು ಮತ್ತು ನೀಚ ಕೃತ್ಯಗಳನ್ನು ವರ್ಜಿಸುವವರಿಗೆ ಮತ್ತು ಕೋಪ ಬಂದಾಗ ಕ್ಷಮಿಸುವವರಿಗೆ.

(38) ತಮ್ಮ ರಬ್‌ನ ಕರೆಯನ್ನು ಸ್ವೀಕರಿಸಿದವರಿಗೆ, ನಮಾಝನ್ನು ಸಂಸ್ಥಾಪಿಸಿದವರಿಗೆ, ತಮ್ಮ ವಿಷಯವನ್ನು ಪರಸ್ಪರ ಸಮಾಲೋಚನೆಯ ಮೂಲಕ ತೀರ್ಮಾನಿಸುವವರಿಗೆ ಮತ್ತು ನಾವು ಒದಗಿಸಿರುವುದರಿಂದ ವ್ಯಯಿಸುವವರಿಗೆ.

(39) ತಾವು ಯಾವುದಾದರೂ ದೌರ್ಜನ್ಯವನ್ನು ಎದುರಿಸಬೇಕಾಗಿ ಬಂದರೆ ರಕ್ಷಣಾಕ್ರಮವನ್ನು ಕೈಗೊಳ್ಳುವವರಿಗೆ.(1090)
1090. ಕ್ಷಮೆ, ತಾಳ್ಮೆ ಇತ್ಯಾದಿಗಳನ್ನು ಪಾಲಿಸಬೇಕು ಎಂದರೆ ದೌರ್ಜನ್ಯಕ್ಕೀಡಾಗುವಾಗ ಕೈಕಟ್ಟಿ ನಿಷ್ಕ್ರಿಯನಾಗಿರಬೇಕು ಎಂದರ್ಥವಲ್ಲ. ಆತ್ಮರಕ್ಷಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವವರು ಅಲ್ಲಾಹುವಿನ ಅನುಗ್ರಹಕ್ಕೆ ಅರ್ಹರೆಂದು ಈ ಸೂಕ್ತಿಯು ಕಲಿಸುತ್ತದೆ.

(40) ಒಂದು ಕೆಡುಕಿಗಿರುವ ಪ್ರತಿಫಲವು ಅದಕ್ಕೆ ಸಮಾನವಾಗಿರುವ ಕೆಡುಕಾಗಿದೆ.(1091) ಆದರೆ ಯಾರಾದರೂ ಮನ್ನಿಸುವುದಾದರೆ ಮತ್ತು ಸಂಧಾನ ಮಾಡುವುದಾದರೆ ಅವನಿಗಿರುವ ಪ್ರತಿಫಲವನ್ನು ನೀಡುವುದು ಅಲ್ಲಾಹುವಿನ ಬಾಧ್ಯತೆಯಾಗಿದೆ. ಖಂಡಿತವಾಗಿಯೂ ಅವನು ಅಕ್ರಮವೆಸಗುವವರನ್ನು ಮೆಚ್ಚುವುದಿಲ್ಲ.
1091. ದೌರ್ಜನ್ಯಕ್ಕೀಡಾದ ವ್ಯಕ್ತಿಗೆ ತನ್ನ ಮೇಲೆ ಎಸಗಲಾದ ದೌರ್ಜನ್ಯಕ್ಕೆ ಸಮಾನವಾಗಿ ಪ್ರತಿ ದೌರ್ಜನ್ಯ ಮಾಡುವ ಹಕ್ಕಿದೆ. ಆದರೆ ಅತಿಕ್ರಮ ಸಲ್ಲದು. ಇನ್ನು ಯಾರಾದರೂ ಪ್ರತೀಕಾರ ಕೈಗೊಳ್ಳದೆ ತಾಳ್ಮೆ ವಹಿಸಿದರೆ ಅದೊಂದು ಪ್ರತಿಫಲಾರ್ಹ ಸತ್ಕರ್ಮವಾಗಿದೆ.

(41) ತಾನು ದೌರ್ಜನ್ಯಕ್ಕೊಳಗಾದ ಬಳಿಕ ಯಾರಾದರೂ ರಕ್ಷಣಾಕ್ರಮವನ್ನು ಕೈಗೊಳ್ಳುವುದಾದರೆ ಅವರ ಮೇಲೆ (ತಪ್ಪನ್ನು ಹೊರಿಸಲು) ಯಾವುದೇ ಮಾರ್ಗವೂ ಇಲ್ಲ.

(42) (ತಪ್ಪು ಹೊರಿಸಲು) ಮಾರ್ಗವಿರುವುದು ಜನರೊಂದಿಗೆ ಅನ್ಯಾಯವೆಸಗುವ ಮತ್ತು ಭೂಮಿಯಲ್ಲಿ ಅನ್ಯಾಯವಾಗಿ ಅತಿಕ್ರಮವೆಸಗುವವರ ಮೇಲೆ ಮಾತ್ರವಾಗಿದೆ. ಯಾತನಾಮಯ ಶಿಕ್ಷೆಯಿರುವುದು ಅವರಿಗಾಗಿದೆ.

(43) ಯಾರಾದರೂ ತಾಳ್ಮೆ ವಹಿಸುವುದಾದರೆ ಮತ್ತು ಕ್ಷಮಿಸುವುದಾದರೆ ಖಂಡಿತವಾಗಿಯೂ ಅದು ದೃಢ ನಿರ್ಧಾರ ಕೈಗೊಳ್ಳಬೇಕಾದ ವಿಷಯಗಳಲ್ಲಿ ಸೇರಿದ್ದಾಗಿದೆ.(1092)
1092. ನಿಶ್ಚಯದಾರ್ಢ್ಯತೆಯಿರುವ ಮತ್ತು ಚೆನ್ನಾಗಿ ಆಲೋಚಿಸಿ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯವಿರುವ ವ್ಯಕ್ತಿಗೆ ಮಾತ್ರ ತಾಳ್ಮೆ ಮತ್ತು ವಿನಾಯಿತಿ ತೋರಲು ಸಾಧ್ಯ.

(44) ಅಲ್ಲಾಹು ಯಾರನ್ನು ಪಥಭ್ರಷ್ಟಗೊಳಿಸುವನೋ ತರುವಾಯ ಅವನಿಗೆ ಯಾವುದೇ ರಕ್ಷಕನೂ ಇಲ್ಲ. ಶಿಕ್ಷೆಯನ್ನು ಕಣ್ಣಾರೆ ಕಾಣುವಾಗ ಮರಳಿ ಹೋಗಲು ಯಾವುದಾದರೂ ದಾರಿಯಿದೆಯೇ ಎಂದು ಅಕ್ರಮವೆಸಗಿದವರು ಹೇಳುತ್ತಿರುವುದಾಗಿ ತಾವು ಕಾಣುವಿರಿ.

(45) ಅವಮಾನದಿಂದ ಶರಣಾಗತರಾದವರಾಗಿ ಅವರನ್ನು ಅದರ (ನರಕಾಗ್ನಿಯ) ಮುಂದೆ ಪ್ರದರ್ಶಿಸಲಾಗುವುದನ್ನು ತಾವು ಕಾಣುವಿರಿ. ಅವರು ಕುಡಿನೋಟದಿಂದ ನೋಡುತ್ತಿರುವರು. ವಿಶ್ವಾಸವಿಟ್ಟವರು ಹೇಳುವರು: “ಪುನರುತ್ಥಾನ ದಿನದಂದು ಸ್ವತಃ ತಮ್ಮನ್ನು ಮತ್ತು ತಮ್ಮ ಸಂಬಂಧಿಕರನ್ನು ಕಳೆದುಕೊಂಡವರು ಯಾರೋ ಅವರೇ ನಷ್ಟ ಹೊಂದಿದವರಾಗಿರುವರು. ಅರಿಯಿರಿ! ಖಂಡಿತವಾಗಿಯೂ ಅಕ್ರಮಿಗಳು ಶಾಶ್ವತವಾದ ಶಿಕ್ಷೆಯಲ್ಲಿರುವರು.

(46) ಅಲ್ಲಾಹುವಿನ ಹೊರತು ಅವರಿಗೆ ಸಹಾಯ ಮಾಡುವ ಅನ್ಯ ರಕ್ಷಕರಾರೂ ಅವರಿಗಿರಲಾರರು. ಅಲ್ಲಾಹು ಯಾರನ್ನು ಪಥಭ್ರಷ್ಟಗೊಳಿಸುವನೋ ಅವನಿಗೆ (ಗುರಿ ಮುಟ್ಟಲು) ಯಾವುದೇ ಮಾರ್ಗವೂ ಇಲ್ಲ.

(47) ಒಂದು ದಿನ ಬರುವುದಕ್ಕೆ ಮುಂಚೆ ನೀವು ನಿಮ್ಮ ರಬ್‌ನ ಕರೆಯನ್ನು ಸ್ವೀಕರಿಸಿರಿ. ಅಲ್ಲಾಹುವಿನಿಂದಿರುವ ಆ ದಿನವನ್ನು ತಡೆಹಿಡಿಯಲು ಸಾಧ್ಯವಾಗದು. ಅಂದು ನಿಮಗೆ ಯಾವುದೇ ಅಭಯಸ್ಥಾನವೂ ಇರಲಾರದು. (ಪಾಪಗಳನ್ನು) ನಿರಾಕರಿಸಲೂ ನಿಮ್ಮಿಂದಾಗದು.

(48) (ಓ ಪ್ರವಾದಿಯವರೇ!) ಅವರೇನಾದರೂ ವಿಮುಖರಾಗುವುದಾದರೆ ತಮ್ಮನ್ನು ನಾವು ಅವರ ಮೇಲೆ ಕಾವಲುಗಾರರನ್ನಾಗಿ ಕಳುಹಿಸಿಲ್ಲ. ತಮ್ಮ ಮೇಲಿರುವುದು ಸಂದೇಶವನ್ನು ತಲುಪಿಸುವ ಹೊಣೆ ಮಾತ್ರವಾಗಿದೆ. ಖಂಡಿತವಾಗಿಯೂ ನಾವು ನಮ್ಮ ಕಡೆಯ ಒಂದು ಅನುಗ್ರಹವನ್ನು ಮನುಷ್ಯನಿಗೆ ಆಸ್ವಾದಿಸುವಂತೆ ಮಾಡಿದರೆ ಅದರಿಂದಾಗಿ ಅವನು ಆಹ್ಲಾದಿತನಾಗುವನು. ಅವರ ಕೈಗಳು ಮುಂಚೆ ಮಾಡಿಟ್ಟಿರುವುದರ ಫಲವಾಗಿ ಯಾವುದಾದರೂ ಕೆಡುಕು ಅವರಿಗೆ ಬಾಧಿಸಿದರೆ ಖಂಡಿತವಾಗಿಯೂ ಮನುಷ್ಯನು ಕೃತಘ್ನತೆ ತೋರುವವನಾಗುವನು.

(49) ಭೂಮ್ಯಾಕಾಶಗಳ ಆಧಿಪತ್ಯವು ಅಲ್ಲಾಹುವಿಗಾಗಿದೆ. ಅವನಿಚ್ಛಿಸುವುದನ್ನು ಅವನು ಸೃಷ್ಟಿಸುವನು. ಅವನಿಚ್ಛಿಸುವವರಿಗೆ ಅವನು ಹೆಣ್ಣು ಮಕ್ಕಳನ್ನು ಕರುಣಿಸುವನು. ಅವನಿಚ್ಛಿಸುವವರಿಗೆ ಅವನು ಗಂಡು ಮಕ್ಕಳನ್ನು ಕರುಣಿಸುವನು.

(50) ಅಥವಾ ಅವನು ಅವರಿಗೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಜೊತೆಯಾಗಿ ಕರುಣಿಸುವನು. ಅವನಿಚ್ಛಿಸುವವರನ್ನು ಅವನು ಬಂಜೆಯನ್ನಾಗಿ ಮಾಡುವನು. ಖಂಡಿತವಾಗಿಯೂ ಅವನು ಸರ್ವಜ್ಞನೂ, ಸರ್ವಶಕ್ತನೂ ಆಗಿರುವನು.

(51) (ನೇರವಾಗಿರುವ) ದಿವ್ಯ ಸಂದೇಶ ಎಂಬ ನೆಲೆಯಲ್ಲಿ ಅಥವಾ ಒಂದು ಪರದೆಯ ಹಿಂದಿನಿಂದ, ಅಥವಾ ಒಬ್ಬ ದೂತರನ್ನು(1093) ಕಳುಹಿಸಿ, ಅಲ್ಲಾಹುವಿನ ಅನುಮತಿ ಪ್ರಕಾರ ಅವನು ಇಚ್ಛಿಸುವುದನ್ನು ಅವರು (ದೂತರು) ಸಂದೇಶವಾಗಿ ನೀಡುವರು ಎಂಬ ನೆಲೆಯಲ್ಲಿ ಹೊರತು ಅಲ್ಲಾಹು ತನ್ನೊಂದಿಗೆ ಮಾತನಾಡುವನು ಎಂಬ ಸ್ಥಿತಿಯು ಯಾವ ಮನುಷ್ಯನಿಗೂ ಉಂಟಾಗಲಾರದು. ಖಂಡಿತವಾಗಿಯೂ ಅವನು ಉನ್ನತನೂ ಯುಕ್ತಿಪೂರ್ಣನೂ ಆಗಿರುವನು.
1093. ಮುಹಮ್ಮದ್(ಸ) ರಿಗೆ ವಹ್ಯ್ ತಲುಪಿಸುವ ಕರ್ತವ್ಯವನ್ನು ಅಲ್ಲಾಹು ಜಿಬ್ರೀಲ್ ಎಂಬ ಮಲಕ್‍ಗೆ ವಹಿಸಿಕೊಟ್ಟಿರುವನು.

(52) ಹೀಗೆ, ನಾವು ತಮಗೆ ನಮ್ಮ ಆಜ್ಞೆಯಿಂದಾಗಿ ಒಂದು ಸ್ಫೂರ್ತಿದಾಯಕ ಸಂದೇಶವನ್ನು ನೀಡಿರುವೆವು. ಗ್ರಂಥವಾಗಲಿ ಸತ್ಯವಿಶ್ವಾಸವಾಗಲಿ ಏನೆಂದು ತಮಗೆ ತಿಳಿದಿರಲಿಲ್ಲ. ಆದರೆ ನಾವು ಅದನ್ನು ಒಂದು ಪ್ರಕಾಶವನ್ನಾಗಿ ಮಾಡಿದೆವು. ಅದರ ಮೂಲಕ ನಮ್ಮ ದಾಸರ ಪೈಕಿ ನಾವಿಚ್ಛಿಸುವವರಿಗೆ ನಾವು ಹಾದಿಯನ್ನು ತೋರಿಸುವೆವು. ಖಂಡಿತವಾಗಿಯೂ ತಾವು ಮಾರ್ಗದರ್ಶನ ಮಾಡುತ್ತಿರುವುದು ನೇರವಾದ ಮಾರ್ಗದೆಡೆಗೇ ಆಗಿದೆ.

(53) ಆಕಾಶಗಳಲ್ಲಿರುವುದು ಮತ್ತು ಭೂಮಿಯಲ್ಲಿರುವುದು ಯಾರದ್ದಾಗಿದೆಯೋ ಆ ಅಲ್ಲಾಹುವಿನ ಮಾರ್ಗದೆಡೆಗೆ. ಅರಿಯಿರಿ! ವಿಷಯಗಳೆಲ್ಲವೂ ಮರಳುವುದು ಅಲ್ಲಾಹುವಿನೆಡೆಗೇ ಆಗಿದೆ.