(1) ಹಾ-ಮೀಮ್.
(2) ಸುಸ್ಪಷ್ಟ ಗ್ರಂಥದ ಮೇಲಾಣೆ!
(3) ಖಂಡಿತವಾಗಿಯೂ ನಾವು ಅದನ್ನು ಒಂದು ಅನುಗ್ರಹೀತ ರಾತ್ರಿಯಲ್ಲಿ ಅವತೀರ್ಣಗೊಳಿಸಿದೆವು. ಖಂಡಿತವಾಗಿಯೂ ನಾವು ಮುನ್ನೆಚ್ಚರಿಕೆ ನೀಡುವವರಾಗಿರುವೆವು.
(4) ಆ ರಾತ್ರಿಯಲ್ಲಿ ಯುಕ್ತಿಪೂರ್ಣವಾದ ಎಲ್ಲ ವಿಷಯವನ್ನೂ ಬೇರ್ಪಡಿಸಿ ವಿವರಿಸಲಾಗುವುದು.
(5) ನಮ್ಮ ಕಡೆಯಿಂದಿರುವ ಆಜ್ಞೆ! ಖಂಡಿತವಾಗಿಯೂ ನಾವು (ಸಂದೇಶವಾಹಕರನ್ನು) ಕಳುಹಿಸುತ್ತಿರುವವರಾಗಿರುವೆವು.
(6) ಅದು ತಮ್ಮ ರಬ್‌ನ ಕಡೆಯ ಒಂದು ಕರುಣೆಯಾಗಿದೆ. ಖಂಡಿತವಾಗಿಯೂ ಅವನು ಎಲ್ಲವನ್ನು ಆಲಿಸುವವನೂ ಆಗಿರುವನು.
(7) ಆಕಾಶಗಳ, ಭೂಮಿಯ ಮತ್ತು ಅವುಗಳ ಮಧ್ಯೆಯಿರುವವುಗಳ ರಬ್. ನೀವು ದೃಢವಿಶ್ವಾಸವುಳ್ಳವರಾಗಿದ್ದರೆ.
(8) ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನು ಜೀವವನ್ನು ನೀಡುವನು ಮತ್ತು ಮರಣವನ್ನು ನೀಡುವನು. ಅವನು ನಿಮ್ಮ ರಬ್ ಮತ್ತು ನಿಮ್ಮ ಪೂರ್ವಿಕರ ರಬ್ ಆಗಿರುವನು.
(9) ಆದರೂ, ಅವರು ಸಂಶಯದಲ್ಲಿ ಆಡುತ್ತಿರುವರು.
(10) ಆದುದರಿಂದ ಆಕಾಶವು ಸ್ಪಷ್ಟವಾದ ಒಂದು ಹೊಗೆಯೊಂದಿಗೆ ಬರುವ ದಿನವನ್ನು ನಿರೀಕ್ಷಿಸಿರಿ.
(11) ಅದು ಮನುಷ್ಯರನ್ನು ಆವರಿಸುವುದು. ಇದು ಒಂದು ಯಾತನಾಮಯವಾದ ಶಿಕ್ಷೆಯಾಗಿದೆ.(1111)
1111. ಮನುಷ್ಯರನ್ನು ಪೂರ್ಣವಾಗಿ ಆವರಿಸುವ ಹೊಗೆ ಪ್ರವಾದಿರವರ ಕಾಲದಲ್ಲೇ ಉಂಟಾಗಿತ್ತೆಂದು ಕೆಲವು ವ್ಯಾಖ್ಯಾನಕಾರರು ಹೇಳಿದರೆ ಇತರರ ಪ್ರಕಾರ ಈ ಹೊಗೆ ಉಂಟಾಗುವುದು ಅಂತ್ಯಕಾಲದಲ್ಲಾಗಿದೆ.
(12) (ಅವರು ಹೇಳುವರು): “ನಮ್ಮ ಪ್ರಭೂ! ನಮ್ಮಿಂದ ಈ ಶಿಕ್ಷೆಯನ್ನು ನಿವಾರಿಸು. ಖಂಡಿತವಾಗಿಯೂ ನಾವು ವಿಶ್ವಾಸವಿಡುವೆವು”.
(13) ಅವರಿಗೆ ಉಪದೇಶವು ಪ್ರಯೋಜನಪಡುವುದಾದರೂ ಹೇಗೆ? (ವಿಷಯವನ್ನು) ಸ್ಪಷ್ಟಗೊಳಿಸುವ ಒಬ್ಬ ಸಂದೇಶವಾಹಕರು ಅವರ ಬಳಿಗೆ ಬಂದಿರುವರು.
(14) ತರುವಾಯ ಅವರು ಅವರಿಂದ (ಸಂದೇಶವಾಹಕರಿಂದ) ವಿಮುಖರಾದರು. “ಯಾರಿಂದಲೋ ಕಲಿಸಲ್ಪಟ್ಟವನು! ಹುಚ್ಚನು!” ಎಂದು ಅವರು ಹೇಳಿದರು.
(15) ಖಂಡಿತವಾಗಿಯೂ ನಾವು ಶಿಕ್ಷೆಯನ್ನು ಸ್ವಲ್ಪ ನಿವಾರಿಸುವೆವು. ಆದರೆ ನೀವು ಖಂಡಿತವಾಗಿಯೂ (ಹಿಂದಿನ ಸ್ಥಿತಿಗೇ) ಮರಳುವಿರಿ!
(16) ನಾವು ಭಾರೀ ಹಿಡಿತದೊಂದಿಗೆ ಹಿಡಿಯುವ ದಿನ! ಖಂಡಿತವಾಗಿಯೂ ನಾವು ಶಿಕ್ಷಾಕ್ರಮವನ್ನು ಕೈಗೊಳ್ಳುವೆವು.
(17) ಇವರಿಗಿಂತ ಮುಂಚೆ ಫಿರ್‍ಔನನ ಜನತೆಯನ್ನು ನಾವು ಪರೀಕ್ಷಿಸಿದ್ದೆವು. ಗೌರವಾರ್ಹರಾದ ಒಬ್ಬ ಸಂದೇಶವಾಹಕರು ಅವರ ಬಳಿಗೆ ಬಂದರು.
(18) “ಅಲ್ಲಾಹುವಿನ ದಾಸರನ್ನು ನೀವು ನನಗೆ ಒಪ್ಪಿಸಿರಿ. ಖಂಡಿತವಾಗಿಯೂ ನಾನು ನಿಮ್ಮೆಡೆಗಿರುವ ಒಬ್ಬ ವಿಶ್ವಾಸಯೋಗ್ಯ ಸಂದೇಶವಾಹಕನಾಗಿರುವೆನು” (ಎಂದು ಅವರು ಹೇಳಿದರು).
(19) “ನೀವು ಅಲ್ಲಾಹುವಿಗೆದುರಾಗಿ ದರ್ಪ ತೋರದಿರಿ. ಖಂಡಿತವಾಗಿಯೂ ನಾನು ಸ್ಪಷ್ಟವಾದ ಪುರಾವೆಯೊಂದಿಗೆ ನಿಮ್ಮ ಬಳಿಗೆ ಬರುವೆನು.
(20) ನೀವು ನನಗೆ ಕಲ್ಲೆಸೆಯದಿರಲು ನನ್ನ ರಬ್ ಮತ್ತು ನಿಮ್ಮ ರಬ್ ಆಗಿರುವವನೊಂದಿಗೆ ಖಂಡಿತವಾಗಿಯೂ ನಾನು ಅಭಯವನ್ನು ಯಾಚಿಸಿರುವೆನು.
(21) ನಿಮಗೆ ನನ್ನ ಮೇಲೆ ವಿಶ್ವಾಸವಿಲ್ಲದಿದ್ದರೆ ನೀವು ನನ್ನಿಂದ ದೂರ ಸರಿಯಿರಿ”.
(22) ಇವರು ಅಪರಾಧಿಗಳಾದ ಜನತೆಯಾಗಿರುವುದರಿಂದ ಅವರು ತಮ್ಮ ರಬ್ಬನ್ನು ಕರೆದು (ಸಹಾಯಕ್ಕಾಗಿ) ಪ್ರಾರ್ಥಿಸಿದರು.
(23) (ಅಲ್ಲಾಹು ಹೇಳಿದನು): “ತಾವು ರಾತ್ರಿ ವೇಳೆಯಲ್ಲಿ ನನ್ನ ದಾಸರೊಂದಿಗೆ ಪ್ರಯಾಣ ಮಾಡಿರಿ. ಖಂಡಿತವಾಗಿಯೂ ನೀವು (ಶತ್ರುಗಳಿಂದ) ಹಿಂಬಾಲಿಸಲ್ಪಡುವಿರಿ.
(24) ಸಮುದ್ರವನ್ನು ಶಾಂತವಾದ ಸ್ಥಿತಿಯಲ್ಲಿ ಬಿಡಿರಿ. ಖಂಡಿತವಾಗಿಯೂ ಅವರು ಮುಳುಗಿಸಲಾಗುವ ಒಂದು ಸೈನ್ಯವಾಗಿರುವರು.(1112)
1112. ‘ರಹ್ವನ್’ ಎಂದರೆ ಶಾಂತ ಸ್ಥಿತಿಯಲ್ಲಿರುವುದು, ಸೀಳಲಾದದ್ದು ಇತ್ಯಾದಿ ಅರ್ಥ ನೀಡಲಾಗಿದೆ. ಅಂದರೆ ಮೂಸಾ(ಅ) ರಿಗೆ ಮತ್ತು ಅವರ ಅನುಯಾಯಿಗಳಿಗೆ ಹೀಗೆ ಆದೇಶಿಸಲಾಯಿತು: ಸಮುದ್ರವನ್ನು ಸೀಳಲಾದ ದಾರಿಯ ಮೂಲಕ ಹಾದು ಹೋಗಿರಿ. ಸಮುದ್ರವನ್ನು ಸೀಳಲಾದ -ಶಾಂತ- ಸ್ಥಿತಿಯಲ್ಲಿ ತೊರೆದು ನೀವು ಮುಂದಕ್ಕೆ ಸಾಗಿರಿ.
(25) ಎಷ್ಟೊಂದು ತೋಟಗಳನ್ನು ಮತ್ತು ತೊರೆಗಳನ್ನು ಅವರು ಬಿಟ್ಟು ಹೋದರು!
(26) (ಎಷ್ಟೊಂದು) ಕೃಷಿಗಳನ್ನು ಮತ್ತು ಗೌರವಾನ್ವಿತ ವಸತಿಗಳನ್ನು!
(27) ಅವರು ಆನಂದದಿಂದ ಅನುಭವಿಸುತ್ತಿದ್ದ (ಎಷ್ಟೊಂದು) ಸೌಭಾಗ್ಯಗಳನ್ನು!
(28) ಹೀಗೆ ಅದು (ಕೊನೆಗೊಂಡಿತು). ಅವೆಲ್ಲವನ್ನೂ ನಾವು ಬೇರೊಂದು ಜನತೆಗೆ ಉತ್ತರಾಧಿಕಾರವಾಗಿ ಕೊಟ್ಟೆವು.
(29) ಆಗ ಅವರಿಗೋಸ್ಕರ ಆಕಾಶವಾಗಲಿ ಭೂಮಿಯಾಗಲಿ ಅಳಲಿಲ್ಲ. ಅವರಿಗೆ ಕಾಲಾವಕಾಶವನ್ನೂ ನೀಡಲಾಗಲಿಲ್ಲ.
(30) ನಾವು ಇಸ್ರಾಈಲ್ ಸಂತತಿಗಳನ್ನು ಅಪಮಾನಕರ ಶಿಕ್ಷೆಯಿಂದ ಪಾರು ಮಾಡಿದೆವು.
(31) ಫಿರ್‍ಔನ್‍ನಿಂದ. ಖಂಡಿತವಾಗಿಯೂ ಅವನು ಅಹಂಕಾರಿಯಾಗಿದ್ದನು ಮತ್ತು ಅತಿಕ್ರಮಿಗಳ ಪೈಕಿ ಸೇರಿದವನಾಗಿದ್ದನು.
(32) ಖಂಡಿತವಾಗಿಯೂ ಅರಿತವರಾಗಿದ್ದೇ ನಾವು ಅವರನ್ನು ಸರ್ವಲೋಕದವರ ಪೈಕಿ ಉತ್ಕೃಷ್ಟರನ್ನಾಗಿ ಆರಿಸಿದೆವು.
(33) ಸ್ಪಷ್ಟವಾದ ಪರೀಕ್ಷೆಯನ್ನು ಒಳಗೊಂಡಿರುವ ಕೆಲವು ದೃಷ್ಟಾಂತಗಳನ್ನು ನಾವು ಅವರಿಗೆ ನೀಡಿದೆವು.
(34) ಆದರೆ ಇವರು ಹೇಳುವರು.
(35) “ನಮ್ಮ ಮೊದಲ ಮರಣದ ಹೊರತು ಬೇರೇನೂ ಇಲ್ಲ. ನಮ್ಮನ್ನು ಪುನರುತ್ಥಾನಗೊಳಿಸಲಾಗುವುದೂ ಇಲ್ಲ.
(36) ಆದುದರಿಂದ ನೀವು ಸತ್ಯಸಂಧರಾಗಿದ್ದರೆ ನಮ್ಮ ಪೂರ್ವಿಕರನ್ನು (ಜೀವ ನೀಡಿ) ತನ್ನಿರಿ”.
(37) ಅತ್ಯುತ್ತಮರು ಇವರೇ? ಅಥವಾ ತುಬ್ಬಅ್(1113)ನ ಜನತೆ ಮತ್ತು ಅವರಿಗಿಂತ ಮುಂಚಿನವರೇ? ನಾವು ಅವರೆಲ್ಲರನ್ನು ನಾಶ ಮಾಡಿದೆವು. ಯಾಕೆಂದರೆ ಖಂಡಿತವಾಗಿಯೂ ಅವರು ಅಪರಾಧಿಗಳಾಗಿದ್ದರು.
1113. ‘ತುಬ್ಬಅ್’ ಪುರಾತನ ಯಮನ್ ಚಕ್ರವರ್ತಿಗಳ ಪದವಿಯೋ ಕುಲನಾಮವೋ ಆಗಿತ್ತು. ಒಂದು ಕಾಲದಲ್ಲಿ ಈ ರಾಜವಂಶಕ್ಕೆ ಅರೇಬಿಯನ್ ಉಪಭೂಖಂಡ ಮತ್ತು ಪೂರ್ವ ಆಫ್ರಿಕದ ಮೇಲೆ ಆಧಿಪತ್ಯವಿತ್ತು.
(38) ನಾವು ಆಕಾಶಗಳನ್ನು, ಭೂಮಿಯನ್ನು ಮತ್ತು ಅವುಗಳ ಮಧ್ಯೆಯಿರುವವುಗಳನ್ನು ವಿನೋದಕ್ಕಾಗಿ ಸೃಷ್ಟಿಸಿಲ್ಲ.
(39) ನಿಖರವಾದ ಉದ್ದೇಶದೊಂದಿಗೇ ವಿನಾ ನಾವು ಅವೆರಡನ್ನೂ ಸೃಷ್ಟಿಸಿಲ್ಲ. ಆದರೆ ಅವರಲ್ಲಿ ಹೆಚ್ಚಿನವರೂ ಅರಿಯುವುದಿಲ್ಲ.
(40) ಖಂಡಿತವಾಗಿಯೂ ಅವರೆಲ್ಲರಿಗಿರುವ ನಿಶ್ಚಿತ ಸಮಯವು ಆ ನಿರ್ಣಾಯಕ ತೀರ್ಮಾನ ಕೈಗೊಳ್ಳುವ ದಿನವಾಗಿದೆ.
(41) ಒಬ್ಬ ಸಂಬಂಧಿಕನು ಇನ್ನೊಬ್ಬ ಸಂಬಂಧಿಕನಿಗೆ ಯಾವುದೇ ಪ್ರಯೋಜನವನ್ನೂ ಮಾಡದ ಮತ್ತು ಅವರಿಗೆ ಯಾವುದೇ ಸಹಾಯವೂ ಲಭ್ಯವಾಗದ ದಿನ!
(42) ಅಲ್ಲಾಹು ಯಾರಿಗೆ ಕರುಣೆ ತೋರಿರುವನೋ ಅವರ ಹೊರತು. ಖಂಡಿತವಾಗಿಯೂ ಅವನು ಪ್ರತಾಪಶಾಲಿಯೂ ಕರುಣಾನಿಧಿಯೂ ಆಗಿರುವನು.
(43) ಖಂಡಿತವಾಗಿಯೂ ಝಕ್ಕೂಮ್ ಮರವು.
(44) (ನರಕದಲ್ಲಿ) ಪಾಪಿಯ ಆಹಾರವಾಗಿದೆ.
(45) (ಅದರ ಹಣ್ಣು) ಕಾಯಿಸಿದ ಲೋಹದಂತಿರುವುದು. ಅದು ಉದರಗಳಲ್ಲಿ ಕುದಿಯುವುದು.
(46) ಬಿಸಿನೀರು ಕುದಿಯುವಂತೆ.
(47) “ಅವನನ್ನು ಹಿಡಿಯಿರಿ! ಮತ್ತು ನರಕಾಗ್ನಿಯ ಮಧ್ಯಭಾಗಕ್ಕೆ ಎಳೆದೊಯ್ಯಿರಿ!
(48) ತರುವಾಯ ಕುದಿಯುವ ನೀರಿನ ಶಿಕ್ಷೆಯನ್ನು ಅವನ ತಲೆಯ ಮೇಲೆ ಸುರಿಯಿರಿ” (ಎಂದು ಆದೇಶಿಸಲಾಗುವುದು).
(49) ಇದನ್ನು ಆಸ್ವಾದಿಸು! ಖಂಡಿತವಾಗಿಯೂ ನೀನು ಪ್ರತಾಪಶಾಲಿಯೂ ಗೌರವಾನ್ವಿತನೂ ಆಗಿದ್ದೆ.
(50) ಯಾವ ವಿಷಯದ ಬಗ್ಗೆ ನೀವು ಸಂದೇಹಪಡುತಿದ್ದಿರೋ ಆ ವಿಷಯವು ಇದೇ ಆಗಿದೆ.
(51) ಭಯಭಕ್ತಿ ಪಾಲಿಸಿದವರು ಖಂಡಿತವಾಗಿಯೂ ನಿರ್ಭೀತವಾದ ವಾಸಸ್ಥಳದಲ್ಲಿರುವರು.
(52) ತೋಟಗಳ ಮತ್ತು ತೊರೆಗಳ ಮಧ್ಯೆ.
(53) ನಯವಾದ ರೇಷ್ಮೆ ಉಡುಪು ಮತ್ತು ದಪ್ಪವಾದ ರೇಷ್ಮೆ ಉಡುಪುಗಳನ್ನು ಅವರು ಧರಿಸುವರು. ಅವರು ಪರಸ್ಪರ ಅಭಿಮುಖಿಗಳಾಗಿ ಕುಳಿತಿರುವರು.
(54) ಹೀಗಿದೆ (ಅವರ ಸ್ಥಿತಿ). ವಿಶಾಲ ಕಣ್ಣುಗಳುಳ್ಳ ಬೆಳ್ಳಗಿನ ಸ್ತ್ರೀಯರನ್ನು ನಾವು ಅವರಿಗೆ ಸಂಗಾತಿಗಳಾಗಿ ನೀಡುವೆವು.
(55) ಅವರು ಸುರಕ್ಷಿತರಾಗಿದ್ದು ಎಲ್ಲ ವಿಧದ ಫಲಗಳಿಗಾಗಿ ಅಲ್ಲಿ ಬೇಡಿಕೆಯಿಡುವರು.
(56) ಮೊದಲನೆಯ ಮರಣದ ಹೊರತು ಬೇರೊಂದು ಮರಣವನ್ನು ಅವರಿಗೆ ಅಲ್ಲಿ ಆಸ್ವಾದಿಸಬೇಕಾಗಿ ಬರದು. ಅವನು (ಅಲ್ಲಾಹು) ಅವರನ್ನು ನರಕ ಶಿಕ್ಷೆಯಿಂದ ಪಾರುಗೊಳಿಸಿರುವನು.
(57) ಅದು ತಮ್ಮ ರಬ್‌ನ ಕಡೆಯ ಔದಾರ್ಯವಾಗಿದೆ. ಮಹಾ ವಿಜಯವು ಅದೇ ಆಗಿದೆ.
(58) ನಾವು ಇದನ್ನು (ಕುರ್‌ಆನನ್ನು) ತಮ್ಮ ಭಾಷೆಯಲ್ಲಿ ಸರಳಗೊಳಿಸಿರುವುದು ಅವರು ಚಿಂತಿಸಿ ಗ್ರಹಿಸುವ ಸಲುವಾಗಿ ಮಾತ್ರವಾಗಿದೆ.
(59) ಆದುದರಿಂದ ತಾವು ಕಾಯುತ್ತಿರಿ. ಅವರೂ ಕಾಯುತ್ತಿರುವವರೇ ಆಗಿರುವರು.