47 - Muhammad ()

|

(1) ಅವಿಶ್ವಾಸವಿಟ್ಟವರು ಮತ್ತು ಅಲ್ಲಾಹುವಿನ ಮಾರ್ಗದಿಂದ (ಜನರನ್ನು) ತಡೆದವರಾರೋ ಅವರ ಕರ್ಮಗಳನ್ನು ಅವನು (ಅಲ್ಲಾಹು) ನಿಷ್ಫಲಗೊಳಿಸುವನು.

(2) ವಿಶ್ವಾಸವಿಟ್ಟವರು, ಸತ್ಕರ್ಮವೆಸಗಿದವರು ಮತ್ತು ಮುಹಮ್ಮದ್‍ರಿಗೆ ಅವತೀರ್ಣಗೊಂಡಿರುವುದರಲ್ಲಿ –ಅದು ಅವರ ರಬ್‌ನ ಕಡೆಯ ಸತ್ಯವಾಗಿದೆ- ವಿಶ್ವಾಸವಿಟ್ಟವರು ಯಾರೋ ಅವರಿಂದ ಅವನು (ಅಲ್ಲಾಹು) ಅವರ ಕೆಡುಕುಗಳನ್ನು ಅಳಿಸುವನು ಮತ್ತು ಅವರ ಸ್ಥಿತಿಯನ್ನು ಸುಧಾರಣೆಗೊಳಿಸುವನು.

(3) ಅದೇಕೆಂದರೆ ಸತ್ಯನಿಷೇಧಿಗಳು ಅನುಸರಿಸುತ್ತಿರುವುದು ಅಸತ್ಯವನ್ನಾಗಿದೆ ಮತ್ತು ಸತ್ಯವಿಶ್ವಾಸಿಗಳು ಅನುಸರಿಸುತ್ತಿರುವುದು ತಮ್ಮ ರಬ್‌ನ ಕಡೆಯ ಸತ್ಯವನ್ನಾಗಿದೆ ಎಂಬುದರಿಂದಾಗಿದೆ. ಹೀಗೆ ಅಲ್ಲಾಹು ಜನರಿಗೋಸ್ಕರ ಅವರ ಮಾದರಿಗಳನ್ನು ವಿವರಿಸಿಕೊಡುವನು.

(4) ಆದುದರಿಂದ ನೀವು ಸತ್ಯನಿಷೇಧಿಗಳನ್ನು ಮುಖಾಮುಖಿಯಾದರೆ ಅವರ ಕತ್ತುಗಳನ್ನು ಕತ್ತರಿಸಿರಿ. ಹೀಗೆ ನೀವು ಅವರನ್ನು ಬಗ್ಗುಬಡಿದರೆ ಅವರನ್ನು ಬಿಗಿಯಾಗಿ ಬಂಧಿಸಿರಿ.(1122) ತರುವಾಯ ಅದರ ನಂತರ ನೀವು (ಅವರೊಂದಿಗೆ) ದಾಕ್ಷಿಣ್ಯ ತೋರುವುದನ್ನೋ ಅಥವಾ ವಿಮೋಚನಾ ಮೌಲ್ಯವನ್ನು ಪಡೆದು ಅವರನ್ನು ಬಿಟ್ಟುಬಿಡುವುದನ್ನೋ ಮಾಡಿರಿ. ಇದು ಯುದ್ಧವು ಅದರ ಭಾರವನ್ನು ಕೆಳಗಿಡುವವರೆಗೆ ಮಾತ್ರವಾಗಿದೆ.(1123) ಇದಾಗಿದೆ (ಯುದ್ಧದ) ರಿವಾಜು. ಅಲ್ಲಾಹು ಇಚ್ಛಿಸುವುದಾದರೆ ಅವರ ಮೇಲೆ ಅವನು ಶಿಕ್ಷಾಕ್ರಮಗಳನ್ನು ಕೈಗೊಳ್ಳುತ್ತಿದ್ದನು. ಆದರೆ ಇದು ನಿಮ್ಮ ಪೈಕಿ ಕೆಲವರನ್ನು ಇತರ ಕೆಲವರ ಮೂಲಕ ಪರೀಕ್ಷಿಸುವ ಸಲುವಾಗಿದೆ. ಅಲ್ಲಾಹುವಿನ ಮಾರ್ಗದಲ್ಲಿ ಹತರಾದವರಾರೋ ಅವರ ಕರ್ಮಗಳನ್ನು ಅವನು ಎಂದೂ ನಿಷ್ಫಲಗೊಳಿಸಲಾರನು.
1122. ಒಂದೋ ಶತ್ರುಗಳಿಂದ ನಿರ್ನಾಮವಾಗಬೇಕು ಅಥವಾ ಶತ್ರುಗಳನ್ನು ನಿರ್ನಾಮ ಮಾಡಬೇಕು, ಇವೆರಡರಲ್ಲೊಂದು ಅನಿವಾರ್ಯವಾಗುವ ಪರಿಸ್ಥಿತಿಯಲ್ಲಿ ಪ್ರವಾದಿ(ಸ) ರವರು ಮತ್ತು ಸಹಾಬಾಗಳು ಯುದ್ಧಕ್ಕೆ ಸನ್ನದ್ಧರಾಗುತ್ತಿದ್ದರು. ಇಂತಹ ಯುದ್ಧದಲ್ಲಿ ಶತ್ರುವನ್ನು ಬಗ್ಗುಬಡಿಯುವ ಮುಂಚೆ ಅವರೊಂದಿಗೆ ಯಾವುದೇ ವಿಧದಲ್ಲಿ ದಾಕ್ಷಿಣ್ಯ ತೋರಿಸುವುದೂ ಆತ್ಮಹತ್ಯೆಗೆ ಸಮಾನವಾಗಿದೆ. ನಿರ್ನಾಮದ ಬೆದರಿಕೆಯು ನಿವಾರಣೆಯಾದರೆ ರಕ್ತಹರಿಸುವುದನ್ನು ಇಲ್ಲದಾಗಿಸಲು ಇತರ ಸೂಕ್ತ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. 1123. ಯುದ್ಧದ ಬೆದರಿಕೆಯು ನಿವಾರಣೆಯಾದರೆ ಎಲ್ಲರೊಂದಿಗೆ ಶಾಂತಿಯಿಂದ ವರ್ತಿಸಲು ಕುರ್‌ಆನ್ (60:8) ಕರೆ ನೀಡುತ್ತದೆ.

(5) ಅವನು ಅವರನ್ನು ಗುರಿಯೆಡೆಗೆ ಮುನ್ನಡೆಸುವನು ಮತ್ತು ಅವರ ಸ್ಥಿತಿಯನ್ನು ಸುಧಾರಣೆಗೊಳಿಸುವನು.

(6) ಅವನು ಅವರನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸುವನು. ಅವನು ಅದನ್ನು ಅವರಿಗೆ ಮುಂಚೆಯೇ ಪರಿಚಯಿಸಿ ಕೊಟ್ಟಿರುವನು.

(7) ಓ ಸತ್ಯವಿಶ್ವಾಸಿಗಳೇ!, ನೀವು ಅಲ್ಲಾಹುವಿಗೆ ಸಹಾಯ ಮಾಡುವುದಾದರೆ(1124) ಅವನು ನಿಮಗೆ ಸಹಾಯ ಮಾಡುವನು ಮತ್ತು ನಿಮ್ಮ ಪಾದಗಳನ್ನು ಅಚಲವಾಗಿ ನಿಲ್ಲಿಸುವನು.
1124. ಅಲ್ಲಾಹುವಿಗೆ ಸಹಾಯ ಮಾಡುವುದು ಎಂದರೆ ಅಲ್ಲಾಹುವಿನ ಧರ್ಮದ ಸೇವೆ ಮಾಡುವುದು ಎಂದರ್ಥ.

(8) ಅವಿಶ್ವಾಸವಿಟ್ಟವರಾರೋ ಅವರಿಗೆ ನಾಶವಿರಲಿ. ಅವನು ಅವರ ಕರ್ಮಗಳನ್ನು ವ್ಯರ್ಥಗೊಳಿಸುವನು.

(9) ಅದೇಕೆಂದರೆ ಅಲ್ಲಾಹು ಅವತೀರ್ಣಗೊಳಿಸಿದ್ದನ್ನು ಅವರು ಅಸಹ್ಯಪಟ್ಟರು ಎಂಬುದರಿಂದಾಗಿದೆ. ಆದುದರಿಂದ ಅವನು ಅವರ ಕರ್ಮಗಳನ್ನು ನಿಷ್ಫಲಗೊಳಿಸಿದನು.

(10) ಅವರು ಭೂಮಿಯಲ್ಲಿ ಸಂಚರಿಸಿ ತಮಗಿಂತ ಮುಂಚಿನವರ ಅಂತ್ಯವು ಹೇಗಿತ್ತೆಂಬುದನ್ನು ನೋಡಲಾರರೇ? ಅಲ್ಲಾಹು ಅವರನ್ನು ಧ್ವಂಸ ಮಾಡಿರುವನು. ಅದರಂತಿರುವುದು (ಶಿಕ್ಷೆಯು) ಈ ಸತ್ಯನಿಷೇಧಿಗಳಿಗೂ ಇದೆ.

(11) ಇದೇಕೆಂದರೆ ಅಲ್ಲಾಹು ಸತ್ಯವಿಶ್ವಾಸಿಗಳ ರಕ್ಷಕನಾಗಿರುವನು ಮತ್ತು ಸತ್ಯನಿಷೇಧಿಗಳಿಗೆ ಯಾವುದೇ ರಕ್ಷಕರೂ ಇಲ್ಲ ಎಂಬುದರಿಂದಾಗಿದೆ.

(12) ಖಂಡಿತವಾಗಿಯೂ ಅಲ್ಲಾಹು ಸತ್ಯವಿಶ್ವಾಸವಿಟ್ಟವರನ್ನು ಮತ್ತು ಸತ್ಕರ್ಮವೆಸಗಿದವರನ್ನು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶ ಮಾಡಿಸುವನು. ಸತ್ಯನಿಷೇಧಿಗಳು (ಇಹಲೋಕದಲ್ಲಿ) ಸುಖವನ್ನು ಅನುಭವಿಸುತ್ತಲೂ, ಜಾನುವಾರುಗಳು ತಿನ್ನುವಂತೆ ತಿನ್ನುತ್ತಲೂ ಇರುವರು. ಅವರಿಗಿರುವ ವಾಸಸ್ಥಳವು ನರಕಾಗ್ನಿಯಾಗಿದೆ.

(13) ತಮ್ಮನ್ನು ಹೊರಗಟ್ಟಿದ ತಮ್ಮ ಪಟ್ಟಣಕ್ಕಿಂತಲೂ ಬಲಿಷ್ಠವಾದ ಎಷ್ಟು ಪಟ್ಟಣಗಳು! ಅವರನ್ನು ನಾವು ನಾಶ ಮಾಡಿದೆವು. ಅವರಿಗೆ ಸಹಾಯಕರಾಗಿ ಯಾರೂ ಇರಲಿಲ್ಲ.

(14) ತನ್ನ ರಬ್‌ನ ಕಡೆಯ ಸ್ಪಷ್ಟವಾದ ಪುರಾವೆಯ ಮೇಲೆ ನೆಲೆಗೊಳ್ಳುವ ಒಬ್ಬ ವ್ಯಕ್ತಿ ತನ್ನ ದುಷ್ಕರ್ಮಗಳನ್ನು ಆಕರ್ಷಣೀಯವಾಗಿ ತೋರಿಸಲಾದ ಮತ್ತು ದೇಹೇಚ್ಛೆಗಳನ್ನು ಅನುಸರಿಸಿದ ಒಬ್ಬನಂತಾಗುವನೇ?

(15) ಭಯಭಕ್ತಿ ಪಾಲಿಸುವವರಿಗೆ ವಾಗ್ದಾನ ಮಾಡಲಾಗಿರುವ ಸ್ವರ್ಗವು ಹೇಗಿದೆಯೆಂದರೆ ಅದರಲ್ಲಿ ಮಾರ್ಪಾಡುಗೊಳ್ಳದ ನೀರಿನ ನದಿಗಳಿವೆ, ರುಚಿ ಬದಲಾಗದ ಹಾಲಿನ ನದಿಗಳಿವೆ, ಕುಡಿಯುವವರಿಗೆ ಮಧುರವಾದ ಮದ್ಯದ ನದಿಗಳಿವೆ ಮತ್ತು ಶುದ್ಧೀಕರಿಸಲಾದ ಜೇನಿನ ನದಿಗಳಿವೆ. ಅವರಿಗೆ ಅದರಲ್ಲಿ ಎಲ್ಲ ವಿಧದ ಫಲಗಳಿವೆ. ಅವರ ರಬ್‌ನ ಕಡೆಯ ಪಾಪಮುಕ್ತಿಯೂ ಇದೆ. (ಈ ಸ್ವರ್ಗವಾಸಿಗಳ ಸ್ಥಿತಿಯು) ನರಕಾಗ್ನಿಯಲ್ಲಿ ಶಾಶ್ವತವಾಗಿ ವಾಸಿಸುವವನಂತಾಗಿರುವುದೇ? ಅವರಿಗೆ ಕುಡಿಯಲು ನೀಡಲಾಗುವುದು ಕುದಿಯುವ ನೀರನ್ನಾಗಿದೆ. ಅದು ಅವರ ಕರುಳುಗಳನ್ನು ತುಂಡು ತುಂಡಾಗಿ ಕತ್ತರಿಸುವುದು.

(16) ತಾವು ಹೇಳುವುದನ್ನು ಕಿವಿಗೊಟ್ಟು ಆಲಿಸುವ ಕೆಲವರು ಅವರಲ್ಲಿರುವರು. ಆದರೆ ಅವರು ತಮ್ಮ ಬಳಿಯಿಂದ ಹೊರಟರೆ ಅವರು ಜ್ಞಾನ ನೀಡಲಾದವರೊಂದಿಗೆ(1125) (ಹಾಸ್ಯ ಮಾಡುತ್ತಾ) ಹೇಳುವರು: “ಇವರು ಈಗ ಹೇಳಿದ್ದೇನು?” ಅಂತಹವರ ಹೃದಯಗಳ ಮೇಲೆ ಅಲ್ಲಾಹು ಮುದ್ರೆಯನ್ನೊತ್ತಿರುವನು. ಅವರು ಅವರ ದೇಹೇಚ್ಛೆಗಳನ್ನು ಅನುಸರಿಸುತ್ತಿರುವರು.
1125. ಅಂದರೆ ಯಹೂದಿಗಳು ಮತ್ತು ಕ್ರೈಸ್ತರೊಂದಿಗೆ.

(17) ಸನ್ಮಾರ್ಗ ಪಡೆದವರಾರೋ ಅವರಿಗೆ ಅಲ್ಲಾಹು ಹೆಚ್ಚಿನ ಮಾರ್ಗದರ್ಶನವನ್ನು ನೀಡುವನು ಮತ್ತು ಅವರಿಗೆ ಇರಬೇಕಾದ ಭಯಭಕ್ತಿಯನ್ನು ಅವರಿಗೆ ನೀಡುವನು.

(18) ಆ ಅಂತ್ಯಘಳಿಗೆಯು ಅವರ ಬಳಿಗೆ ಹಠಾತ್ತನೆ ಬರುವುದನ್ನೇ ಹೊರತು ಇನ್ನೇನಾದರೂ ಅವರು ಕಾಯುತ್ತಿರುವರೇ? ಆದರೆ ಅದರ ಕುರುಹುಗಳು ಬಂದು ಬಿಟ್ಟಿವೆ. ತರುವಾಯ ಅದು ಅವರ ಬಳಿಗೆ ಬಂದರೆ ಅವರಿಗಿರುವ ಉಪದೇಶವು ಅವರಿಗೆ ಪ್ರಯೋಜನಪಡುವುದಾದರೂ ಹೇಗೆ?

(19) ಆದುದರಿಂದ ಅಲ್ಲಾಹುವಿನ ಹೊರತು ಅನ್ಯ ಆರಾಧ್ಯರಿಲ್ಲ ಎಂಬುದನ್ನು ಅರಿತುಕೊಳ್ಳಿರಿ ಮತ್ತು ತಮ್ಮ ಪಾಪಕ್ಕೆ ಕ್ಷಮೆಯನ್ನು ಬೇಡಿರಿ. ಸತ್ಯವಿಶ್ವಾಸಿಗಳಿಗೆ ಮತ್ತು ಸತ್ಯವಿಶ್ವಾಸಿನಿಯರಿಗೆ (ಕ್ಷಮೆಯನ್ನು ಬೇಡಿರಿ). ನಿಮ್ಮ ಚಲನವಲನಗಳನ್ನು ಮತ್ತು ವಾಸಸ್ಥಳವನ್ನು ಅಲ್ಲಾಹು ಅರಿಯುವನು.

(20) ಸತ್ಯವಿಶ್ವಾಸಿಗಳು ಹೇಳುವರು: “ಒಂದು ಅಧ್ಯಾಯವು ಅವತೀರ್ಣಗೊಳ್ಳಲಿಲ್ಲವೇಕೆ?” ಆದರೆ ಖಚಿತವಾದ ನಿಯಮಗಳಿರುವ ಅಧ್ಯಾಯವೊಂದು ಅವತೀರ್ಣಗೊಂಡು ಅದರಲ್ಲಿ ಯುದ್ಧದ ಬಗ್ಗೆ ಪ್ರಸ್ತಾಪಿಸ ಲಾದರೆ ಮೃತ್ಯು ಆವರಿಸಿ ಪ್ರಜ್ಞೆ ಕಳಕೊಂಡ ವ್ಯಕ್ತಿಯು ನೋಡುವಂತೆ, ಹೃದಯಗಳಲ್ಲಿ ರೋಗವಿರುವವರು ತಮ್ಮತ್ತ ನೋಡುತ್ತಿರುವುದಾಗಿ ತಾವು ಕಾಣುವಿರಿ. ಅದು ಅವರಿಗೆ ಅತ್ಯಂತ ಸೂಕ್ತವಾದುದಾಗಿದೆ.

(21) ಅನುಸರಣೆ ಹಾಗೂ ಸಭ್ಯವಾದ ಮಾತು ಬೇಕಾಗಿದೆ. ಆದರೆ ವಿಷಯವು ಖಾತ್ರಿಯಾದಾಗ ಅವರು ಅಲ್ಲಾಹುವಿನೊಂದಿಗೆ ಸತ್ಯಸಂಧತೆ ತೋರಿಸಿರುತ್ತಿದ್ದರೆ ಅದು ಅವರಿಗೆ ಅತ್ಯುತ್ತಮವಾಗಿರುತ್ತಿತ್ತು.

(22) ಆದರೆ ನೀವು ಕಾರ್ಯನಿರ್ವಹಣೆಯನ್ನು ವಹಿಸಿಕೊಳ್ಳುವುದಾದರೆ ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡುತ್ತಲೂ, ನಿಮ್ಮ ಕುಟುಂಬ ಸಂಬಂಧಗಳನ್ನು ಕಡಿಯುತ್ತಲೂ ಇರುವಿರಾ?

(23) ಅಂತಹವರನ್ನು ಅಲ್ಲಾಹು ಶಪಿಸಿರುವನು. ಅವನು ಅವರನ್ನು ಕಿವುಡರನ್ನಾಗಿ ಮಾಡಿದನು ಮತ್ತು ಅವರ ಕಣ್ಣುಗಳಿಗೆ ಅಂಧತೆಯನ್ನು ನೀಡಿದನು.

(24) ಹಾಗಾದರೆ ಅವರು ಕುರ್‌ಆನನ್ನು ಚಿಂತಿಸಿ ಅರ್ಥಮಾಡಿಕೊಳ್ಳಲಾರರೇ? ಅಥವಾ ಹೃದಯಗಳ ಮೇಲೆ ಬೀಗ ಜಡಿಯಲಾಗಿದೆಯೇ?

(25) ಖಂಡಿತವಾಗಿಯೂ ತಮಗೆ ಸನ್ಮಾರ್ಗವು ಸ್ಪಷ್ಟವಾದ ಬಳಿಕ ವಿಮುಖರಾಗುತ್ತಾ ತಿರುಗಿ ನಡೆದವರಾರೋ ಅವರಿಗೆ ಸೈತಾನನು (ಅವರ ಕೃತ್ಯಗಳನ್ನು) ಆಕರ್ಷಣೀಯಗೊಳಿಸಿ ತೋರಿಸಿರುವನು. ಅವರಿಗೆ ಅವನು (ವ್ಯರ್ಥ ನಿರೀಕ್ಷೆಗಳನ್ನು) ದೀರ್ಘಿಸಿ ಕೊಟ್ಟಿರುವನು.

(26) ಅದು ಅಲ್ಲಾಹು ಅವತೀರ್ಣಗೊಳಿಸಿರುವುದನ್ನು ಅಸಹ್ಯಪಡುವವರೊಂದಿಗೆ “ಕೆಲವೊಂದು ವಿಷಯಗಳಲ್ಲಿ ನಾವು ನಿಮ್ಮ ಆಜ್ಞೆಯನ್ನು ಅನುಸರಿಸುವೆವು” ಎಂದು ಅವರು ಹೇಳಿದರು ಎಂಬುದರಿಂದಾಗಿದೆ. ಅವರು ರಹಸ್ಯವಾಗಿಡುವುದನ್ನು ಅಲ್ಲಾಹು ಅರಿಯುವನು.

(27) ಹಾಗಾದರೆ ಮಲಕ್‍ಗಳು ಅವರ ಮುಖ ಮತ್ತು ಹಿಂಭಾಗಗಳಿಗೆ ಬಡಿಯುತ್ತಾ ಅವರನ್ನು ಮೃತಪಡಿಸುವ ಸಂದರ್ಭದಲ್ಲಿ ಅವರ ಸ್ಥಿತಿ ಹೇಗಿರಬಹುದು?

(28) ಅದೇಕೆಂದರೆ ಅಲ್ಲಾಹುವನ್ನು ಕ್ರೋಧಗೊಳಿಸುವ ವಿಷಯವನ್ನು ಅವರು ಅನುಸರಿಸಿದರು ಮತ್ತು ಅವನ ಸಂತೃಪ್ತಿಯನ್ನು ಅವರು ಅಸಹ್ಯಪಟ್ಟರು ಎಂಬುದರಿಂದಾಗಿದೆ. ಆದುದರಿಂದ ಅವನು ಅವರ ಕರ್ಮಗಳನ್ನು ನಿಷ್ಫಲಗೊಳಿಸಿದನು.

(29) ಅಥವಾ, ಹೃದಯಗಳಲ್ಲಿ ರೋಗವಿರುವವರು ಅವರ ಅಂತರಂಗದಲ್ಲಿರುವ ಹಗೆಯನ್ನು ಅಲ್ಲಾಹು ಎಂದೂ ಬಹಿರಂಗಪಡಿಸಲಾರನು ಎಂದು ಭಾವಿಸಿರುವರೇ?

(30) ನಾವು ಇಚ್ಛಿಸುತ್ತಿದ್ದರೆ ತಮಗೆ ಅವರನ್ನು ತೋರಿಸಿ ಕೊಡುತ್ತಿದ್ದೆವು. ತರುವಾಯ ಅವರ ಲಕ್ಷಣಗಳಿಂದ ತಾವು ಅವರನ್ನು ಗುರುತಿಸುತ್ತಿದ್ದಿರಿ.(1126) ಮಾತಿನ ಶೈಲಿಯಿಂದಲೂ ತಮಗೆ ಅವರನ್ನು ಖಂಡಿತವಾಗಿಯೂ ಗುರುತಿಸಬಹುದಾಗಿದೆ. ಅಲ್ಲಾಹು ನಿಮ್ಮ ಕರ್ಮಗಳನ್ನು ಅರಿಯುತ್ತಿರುವನು.
1126. ಮುಸ್ಲಿಮ್ ಸಮುದಾಯದ ಸದಸ್ಯರಂತೆ ನಟಿಸುತ್ತಿದ್ದ ಮತ್ತು ಮನಸ್ಸಿನಲ್ಲಿ ಮುಸ್ಲಿಮರೊಂದಿಗೆ ಹಗೆಯನ್ನು ಇಟ್ಟುಕೊಂಡಿದ್ದ ಕಪಟವಿಶ್ವಾಸಿಗಳ ಬಗ್ಗೆ 25ರಿಂದ 30ರವರೆಗಿನ ಸೂಕ್ತಿಗಳಲ್ಲಿ ಪ್ರಸ್ತಾಪಿಸಲಾಗಿದೆ. ಕಪಟ ವೇಷದೊಂದಿಗೆ ಚಲಿಸಿ ಎಲ್ಲ ಕಾಲದಲ್ಲೂ ಜನರನ್ನು ಮೋಸ ಮಾಡಬಹುದೆಂದು ಅವರು ಭಾವಿಸಿದ್ದರು. ಆದರೆ ಅಲ್ಲಾಹು ಪ್ರವಾದಿ(ಸ) ರವರಿಗೆ ಅವರ ಪೈಕಿ ಹಲವರ ಬಗ್ಗೆ ಮತ್ತು ಅವರ ಗುಣಲಕ್ಷಣಗಳ ಬಗ್ಗೆ ತಿಳಿಸಿಕೊಟ್ಟ ಕಾರಣ ಪ್ರವಾದಿ(ಸ) ರವರನ್ನು ಮತ್ತು ಸತ್ಯವಿಶ್ವಾಸಿಗಳನ್ನು ಹೆಚ್ಚು ಕಾಲ ಮೋಸ ಮಾಡಲು ಅವರಿಂದ ಸಾಧ್ಯವಾಗಲಿಲ್ಲ.

(31) ನಿಮ್ಮ ಪೈಕಿ ಹೋರಾಡುವವರನ್ನು ಮತ್ತು ತಾಳ್ಮೆ ವಹಿಸುವವರನ್ನು ನಾವು ಗುರುತಿಸುವ ತನಕ ಮತ್ತು ನಿಮ್ಮ ಸಂಗತಿಗಳನ್ನು ನಾವು ಪರಿಶೋಧಿಸುವ ತನಕ ಖಂಡಿತವಾಗಿಯೂ ನಾವು ನಿಮ್ಮನ್ನು ಪರೀಕ್ಷಿಸುವೆವು.

(32) ಅವಿಶ್ವಾಸವಿಟ್ಟವರು, ಅಲ್ಲಾಹುವಿನ ಮಾರ್ಗದಿಂದ (ಜನರನ್ನು) ತಡೆದವರು ಮತ್ತು ತಮಗೆ ಸನ್ಮಾರ್ಗವು ಸ್ಪಷ್ಟವಾದ ಬಳಿಕ ಸಂದೇಶವಾಹಕರೊಂದಿಗೆ ವಿರೋಧ ತಾಳಿದವರು ಯಾರೋ ಅವರು ಖಂಡಿತವಾಗಿಯೂ ಅಲ್ಲಾಹುವಿಗೆ ಯಾವುದೇ ಹಾನಿಯನ್ನೂ ಮಾಡಲಾರರು. ಅವನು ಅವರ ಕರ್ಮಗಳನ್ನು ತರುವಾಯ ವ್ಯರ್ಥಗೊಳಿಸಿ ಬಿಡುವನು.

(33) ಓ ಸತ್ಯವಿಶ್ವಾಸಿಗಳೇ!, ನೀವು ಅಲ್ಲಾಹುವನ್ನು ಅನುಸರಿಸಿರಿ ಮತ್ತು ಸಂದೇಶವಾಹಕರನ್ನು ಅನುಸರಿಸಿರಿ. ನಿಮ್ಮ ಕರ್ಮಗಳನ್ನು ನಿಷ್ಫಲಗೊಳಿಸದಿರಿ.

(34) ಅವಿಶ್ವಾಸವಿಟ್ಟವರು, ಅಲ್ಲಾಹುವಿನ ಮಾರ್ಗದಿಂದ (ಜನರನ್ನು) ತಡೆದವರು, ತರುವಾಯ ಸತ್ಯನಿಷೇಧಿಗಳಾಗಿಯೇ ಮರಣ ಹೊಂದಿದವರಾರೋ ಅವರಿಗೆ ಅಲ್ಲಾಹು ಎಂದೂ ಕ್ಷಮಿಸಲಾರನು.

(35) ಆದುದರಿಂದ ನೀವು ಬಲಹೀನತೆಯನ್ನು ತೋರದಿರಿ. ನೀವು ಶ್ರೇಷ್ಠರು ಎಂದಿರುವಾಗ ನೀವು (ಶತ್ರುಗಳನ್ನು) ಸಂಧಾನಕ್ಕೆ ಆಹ್ವಾನಿಸದಿರಿ.(1127) ಅಲ್ಲಾಹು ನಿಮ್ಮ ಜೊತೆಗಿರುವನು. ಅವನು ನಿಮಗೆ ನಿಮ್ಮ ಕರ್ಮಗಳನ್ನು ಎಂದಿಗೂ ನಷ್ಟಪಡಿಸಲಾರನು.
1127. ಅಲ್ಲಾಹು ಮುಸ್ಲಿಮರಿಗೆ ಪ್ರತ್ಯಾಕ್ರಮಣ ಮಾಡಲು ಆಜ್ಞೆ ನೀಡಿದ್ದು ಅವರು ಅನ್ಯಾಯವಾಗಿ ಹಿಂಸೆಗೆ ಬಲಿಯಾಗುತ್ತಿದ್ದ ಪರಿಸ್ಥಿತಿಯಲ್ಲಾಗಿತ್ತು. ಈ ಪರಿಸ್ಥಿತಿಯಲ್ಲಿ ಮುಸ್ಲಿಮರೇ ಮುಂದೆ ಬಂದು ಸಂಧಾನಕ್ಕೆ ಸಿದ್ಧರಾಗುವುದನ್ನು ಬಲಹೀನತೆಯೆಂದೇ ಪರಿಗಣಿಸಲಾಗುತ್ತದೆ. ಸತ್ಯವಿಶ್ವಾಸ ಮತ್ತು ಆತ್ಮಸ್ಥೈರ್ಯದಲ್ಲಿ ಶತ್ರುಗಳಿಗಿಂತಲೂ ಎಷ್ಟೋ ಶ್ರೇಷ್ಠರಾಗಿರುವ ಮುಸ್ಲಿಮರು ಯಾವುದೇ ಕಾರಣಕ್ಕೂ ಹೇಡಿತನದ ನಿರ್ಧಾರ ಕೈಗೊಳ್ಳಕೂಡದು. ಆದರೆ ಶತ್ರುಗಳು ಆಕ್ರಮಣವನ್ನು ನಿಲ್ಲಿಸಿ ಸಂಧಾನದೊಂದಿಗೆ ಮುಂದೆ ಬಂದರೆ ಅದನ್ನು ಸ್ವೀಕರಿಸಬೇಕೆಂದು ಕುರ್‌ಆನ್ (8:61) ಕರೆ ನೀಡುತ್ತದೆ.

(36) ಇಹಲೋಕ ಜೀವನವು ಆಟ ಮತ್ತು ಮನೋರಂಜನೆ ಮಾತ್ರವಾಗಿದೆ. ನೀವು ವಿಶ್ವಾಸವಿಡುವುದಾದರೆ ಮತ್ತು ಭಯಭಕ್ತಿ ಪಾಲಿಸುವುದಾದರೆ ನಿಮ್ಮ ಪ್ರತಿಫಲವನ್ನು ಅವನು ನಿಮಗೆ ನೀಡುವನು. ಅವನು ನಿಮ್ಮೊಂದಿಗೆ ನಿಮ್ಮ ಸಂಪತ್ತನ್ನು ಬೇಡಲಾರನು.(1128)
1128. ಓರ್ವ ವ್ಯಕ್ತಿ ವಿಶ್ವಾಸವಿಟ್ಟು ಧರ್ಮನಿಷ್ಠೆಯನ್ನು ಪಾಲಿಸಿದರೆ ಅದರಿಂದ ಅಲ್ಲಾಹು ಸಂತೃಪ್ತನಾಗುತ್ತಾನೆ. ಅವನ ಸಂಪತ್ತನ್ನು ತನಗೆ ನೀಡಬೇಕೆಂದು ಅಲ್ಲಾಹು ಬೇಡಿಕೆಯಿಡಲಾರನು. ದಾನಧರ್ಮ ಮಾಡಬೇಕೆಂದು ಅಲ್ಲಾಹು ಉಪದೇಶ ಮಾಡುವುದು ಅಲ್ಲಾಹುವಿಗಾಗಿ ಅಲ್ಲ, ಬದಲಾಗಿ ಮನುಷ್ಯರ ಒಳಿತಿಗಾಗಿದೆ.

(37) ನಿಮ್ಮೊಂದಿಗೆ ಅದನ್ನು (ಸಂಪತ್ತನ್ನು) ಕೇಳಿ ಅವನು ನಿಮಗೆ ತೊಂದರೆ ಕೊಡುತ್ತಿದ್ದರೆ ನೀವು ಜಿಪುಣ ತನ ತೋರಿಸುತ್ತಿದ್ದಿರಿ ಮತ್ತು ನಿಮ್ಮ ಅಂತರಂಗದಲ್ಲಿರುವ ಹಗೆಯನ್ನು ಅವನು ಹೊರ ತರುತ್ತಿದ್ದನು.(1129)
1129. ವರ್ತನೆಯಲ್ಲಿ ಸಭ್ಯತೆಯನ್ನು ತೋರಿಸುವವರ ಪೈಕಿ ಹಲವರೊಂದಿಗೆ ಹಣವನ್ನು ಕೇಳಿದಾಗ ಅವರ ಮುಖಭಾವ ಬದಲಾಗಿ ಕೋಪ ಪ್ರಕಟವಾಗುವುದನ್ನು ಕಾಣಬಹುದು.

(38) ಓ ಜನರೇ! ನಿಮ್ಮನ್ನು ಕರೆಯಲಾಗುತ್ತಿರುವುದು ಅಲ್ಲಾಹುವಿನ ಮಾರ್ಗದಲ್ಲಿ ನೀವು ಖರ್ಚು ಮಾಡುವ ಸಲುವಾಗಿದೆ. ಆಗ ನಿಮ್ಮ ಪೈಕಿ ಕೆಲವರು ಜಿಪುಣತನ ತೋರಿಸುವರು. ಯಾರಾದರೂ ಜಿಪುಣತನ ತೋರಿಸುವುದಾದರೆ ಅವನು ಜಿಪುಣತನ ತೋರಿಸುವುದು ಸ್ವತಃ ಅವನೊಂದಿಗೇ ಆಗಿದೆ. ಅಲ್ಲಾಹು ನಿರಪೇಕ್ಷನಾಗಿರುವನು. ನೀವು ನಿರ್ಗತಿಕರಾಗಿದ್ದೀರಿ. ನೀವು ವಿಮುಖರಾಗುವುದಾದರೆ ಅವನು ನಿಮ್ಮ ಹೊರತಾದ ಬೇರೊಂದು ಜನತೆಯನ್ನು ಬದಲಿಯಾಗಿ ತರುವನು. ತರುವಾಯ ಅವರು ನಿಮ್ಮಂತೆ ಆಗಿರಲಾರರು.