(1) ಖಂಡಿತವಾಗಿಯೂ ನಾವು ತಮಗೆ ಸ್ಪಷ್ಟವಾದ ಒಂದು ವಿಜಯವನ್ನು ದಯಪಾಲಿಸಿರುವೆವು.(1130)
1130. ಅನೇಕ ವ್ಯಾಖ್ಯಾನಕಾರರ ಅಭಿಪ್ರಾಯ ಪ್ರಕಾರ ಹುದೈಬಿಯಾದಲ್ಲಿ ಪ್ರವಾದಿ(ಸ) ರವರು ಶತ್ರುಗಳೊಂದಿಗೆ ಮಾಡಿದ ಒಪ್ಪಂದವನ್ನು ಇಲ್ಲಿ ಸ್ಪಷ್ಟವಾದ ವಿಜಯವೆಂದು ಹೇಳಲಾಗಿದೆ. ಈ ಹುದೈಬಿಯಾ ಒಪ್ಪಂದವು ಮಕ್ಕಾ ವಿಜಯ ಸೇರಿದಂತೆ ಇಸ್ಲಾಮ್ ಅರೇಬಿಯಾದಲ್ಲಿ ಪಡೆದ ಮಹಾನ್ ಗೆಲುವುಗಳಿಗೆ ನಾಂದಿಯಾಯಿತು. ಈ ಒಪ್ಪಂದದ ನಂತರ ಪ್ರವಾದಿ(ಸ) ರವರು ಮದೀನಕ್ಕೆ ಮರಳುವ ಹಾದಿಯಲ್ಲಿ ಈ ಅಧ್ಯಾಯವು ಅವತೀರ್ಣಗೊಂಡಿತು. ಈ ಸೂಕ್ತಿಯು ಮಕ್ಕಾ ವಿಜಯದ ಬಗ್ಗೆಯಿರುವ ಭವಿಷ್ಯವೆಂದು ಇತರ ಕೆಲವು ವ್ಯಾಖ್ಯಾನಕಾರರು ಹೇಳಿದ್ದಾರೆ.
(2) ಅದು ತಮ್ಮ ಪಾಪಗಳ ಪೈಕಿ(1131) ಮುಂಚೆ ಗತಿಸಿರುವುದನ್ನು ಮತ್ತು ಮುಂದೆ ಸಂಭವಿಸಲಿರುವುದನ್ನು ಅಲ್ಲಾಹು ತಮಗೆ ಕ್ಷಮಿಸುವ ಸಲುವಾಗಿ, ಅವನ ಅನುಗ್ರಹವನ್ನು ತಮ್ಮ ಮೇಲೆ ಪೂರ್ಣಗೊಳಿಸುವ ಸಲುವಾಗಿ ಮತ್ತು ತಮ್ಮನ್ನು ನೇರಮಾರ್ಗದಲ್ಲಿ ಮುನ್ನಡೆಸುವ ಸಲುವಾಗಿ.
1131. ಇಲ್ಲಿ ಪಾಪ ಎಂಬ ಪದದ ತಾತ್ಪರ್ಯವು ನಿಲುವು ಮತ್ತು ದೃಷ್ಟಿಕೋನಗಳಲ್ಲಿ ಬರುವಂತಹ ಕ್ಷುಲ್ಲಕ ಪ್ರಮಾದಗಳಾಗಿವೆ.
(3) ಪ್ರತಾಪದಿಂದ ಕೂಡಿದ ಒಂದು ಸಹಾಯವನ್ನು ಅಲ್ಲಾಹು ತಮಗೆ ನೀಡುವ ಸಲುವಾಗಿ.
(4) ಸತ್ಯವಿಶ್ವಾಸಿಗಳ ಹೃದಯಗಳಲ್ಲಿ ಶಾಂತಿಯನ್ನು ಇಳಿಸಿದವನು ಅವನಾಗಿರುವನು.(1132) ಅವರಲ್ಲಿರುವ ವಿಶ್ವಾಸದೊಂದಿಗೆ ವಿಶ್ವಾಸವು ಇನ್ನೂ ಹೆಚ್ಚಾಗುವ ಸಲುವಾಗಿ. ಭೂಮ್ಯಾಕಾಶಗಳ ಸೈನ್ಯಗಳು ಅಲ್ಲಾಹುವಿನದ್ದಾಗಿವೆ. ಅಲ್ಲಾಹು ಸರ್ವಜ್ಞನೂ ಯುಕ್ತಿಪೂರ್ಣನೂ ಆಗಿರುವನು.
1132. ಹುದೈಬಿಯಾ ಒಪ್ಪಂದಕ್ಕೆ ಮುಂಚಿತವಾಗಿ ಒಂದು ಸಂಘರ್ಷವುಂಟಾಗಲಿದೆಯೆಂಬ ಭೀತಿಯುಂಟಾದಾಗ ದೃಢವಿಶ್ವಾಸಿಗಳಲ್ಲದ ಕೆಲವರು ಹಿಂದೆ ಸರಿದರು. ಆಗ ನಿಷ್ಕಳಂಕ ವಿಶ್ವಾಸವಿದ್ದ ಸಹಾಬಿಗಳು ಮರಣದವರೆಗೆ ಪ್ರವಾದಿ(ಸ) ರವರೊಂದಿಗೆ ಅಚಲವಾಗಿ ನಿಲ್ಲುವೆವು ಎಂದು ಪ್ರತಿಜ್ಞೆ ಮಾಡಿದರು. ಇಲ್ಲಿ ಪ್ರಸ್ತಾಪಿಸಿದ್ದು ಈ ಸಹಾಬಾಗಳ ಮನಃಶಾಂತಿಯ ಬಗ್ಗೆಯಾಗಿದೆ.
(5) ಸತ್ಯವಿಶ್ವಾಸಿಗಳನ್ನು ಮತ್ತು ಸತ್ಯವಿಶ್ವಾಸಿನಿಯರನ್ನು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಲ್ಲಿ ಶಾಶ್ವತವಾಸಿಗಳಾಗಿ ಪ್ರವೇಶ ಮಾಡಿಸುವ ಸಲುವಾಗಿ ಮತ್ತು ಅವರಿಂದ ಅವರ ಕೆಡುಕುಗಳನ್ನು ಅಳಿಸಿಹಾಕುವ ಸಲುವಾಗಿ. ಅದು ಅಲ್ಲಾಹುವಿನ ಬಳಿ ಒಂದು ಮಹಾ ವಿಜಯವಾಗಿದೆ.
(6) ಅಲ್ಲಾಹುವಿನ ಬಗ್ಗೆ ಪ್ರಮಾದಪೂರಿತ ಊಹೆಗಳನ್ನು ಇಟ್ಟುಕೊಂಡಿರುವ ಕಪಟವಿಶ್ವಾಸಿಗಳನ್ನು ಮತ್ತು ಕಪಟವಿಶ್ವಾಸಿನಿಯರನ್ನು, ಬಹುದೇವವಿಶ್ವಾಸಿಗಳನ್ನು ಮತ್ತು ಬಹುದೇವವಿಶ್ವಾಸಿನಿಯರನ್ನು ಶಿಕ್ಷಿಸುವ ಸಲುವಾಗಿ. ಅವರ ಮೇಲೆ ಕೆಡುಕಿನ ಆವರಣವಿದೆ. ಅಲ್ಲಾಹು ಅವರ ಮೇಲೆ ಕ್ರೋಧಗೊಂಡಿರುವನು, ಅವರನ್ನು ಶಪಿಸಿರುವನು ಮತ್ತು ಅವರಿಗೆ ನರಕಾಗ್ನಿಯನ್ನು ಸಿದ್ಧಗೊಳಿಸಿರುವನು. ತಲುಪಲಿರುವ ಆ ಸ್ಥಳವು ಎಷ್ಟು ನಿಕೃಷ್ಟವಾದುದು!
(7) ಭೂಮ್ಯಾಕಾಶಗಳಲ್ಲಿರುವ ಸೈನ್ಯಗಳು ಅಲ್ಲಾಹುವಿನದ್ದಾಗಿವೆ. ಅಲ್ಲಾಹು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.
(8) ಖಂಡಿತವಾಗಿಯೂ ನಾವು ತಮ್ಮನ್ನು ಒಬ್ಬ ಸಾಕ್ಷಿಯಾಗಿ, ಶುಭವಾರ್ತೆ ತಿಳಿಸುವವರಾಗಿ ಮತ್ತು ಮುನ್ನೆಚ್ಚರಿಕೆ ನೀಡುವವರಾಗಿ ಕಳುಹಿಸಿರುವೆವು.
(9) ನೀವು ಅಲ್ಲಾಹುವಿನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡುವ ಸಲುವಾಗಿ, ಅವರಿಗೆ ನೆರವು ನೀಡುವ ಸಲುವಾಗಿ, ಅವರನ್ನು ಗೌರವಿಸುವ ಸಲುವಾಗಿ ಮತ್ತು ಬೆಳಗ್ಗೆ ಹಾಗೂ ಸಂಜೆ ಅವನ (ಅಲ್ಲಾಹುವಿನ) ಮಹತ್ವವನ್ನು ಕೊಂಡಾಡುವ ಸಲುವಾಗಿ.
(10) ಖಂಡಿತವಾಗಿಯೂ ತಮ್ಮೊಂದಿಗೆ ಪ್ರತಿಜ್ಞೆ ಮಾಡುವವರು ಪ್ರತಿಜ್ಞೆ ಮಾಡುತ್ತಿರುವುದು ಅಲ್ಲಾಹುವಿನೊಂದಿಗಾಗಿದೆ. ಅಲ್ಲಾಹುವಿನ ಕೈ ಅವರ ಕೈಗಳ ಮೇಲಿದೆ. ಆದುದರಿಂದ ಯಾರಾದರೂ (ಪ್ರತಿಜ್ಞೆಯನ್ನು) ಉಲ್ಲಂಘಿಸುವುದಾದರೆ ಅದನ್ನು ಉಲ್ಲಂಘಿಸುವುದರ ದೋಷವು ಅವನಿಗೇ ಆಗಿದೆ. ಯಾರಾದರೂ ತಾನು ಅಲ್ಲಾಹುವಿನೊಂದಿಗೆ ಮಾಡಿಕೊಂಡಿರುವ ಕರಾರನ್ನು ಪೂರ್ಣಗೊಳಿಸುವುದಾದರೆ ಅವನಿಗೆ ಅವನು ಮಹಾ ಪ್ರತಿಫಲವನ್ನು ನೀಡುವನು.
(11) ಗ್ರಾಮೀಣ ಅರಬರ ಪೈಕಿ ಹಿಂದೆ ಸರಿದವರು ತಮ್ಮೊಂದಿಗೆ ಹೇಳುವರು: “ನಮ್ಮ ಸಂಪತ್ತುಗಳು ಮತ್ತು ಕುಟುಂಬಗಳು (ನಿಮ್ಮೊಂದಿಗೆ ಬರಲು ಸಾಧ್ಯವಾಗದಂತೆ) ನಮ್ಮನ್ನು ಮಗ್ನಗೊಳಿಸಿವೆ. ಆದುದರಿಂದ ತಾವು ನಮಗಾಗಿ ಪಾಪಮುಕ್ತಿಯನ್ನು ಬೇಡಿರಿ”. ಅವರು ತಮ್ಮ ಹೃದಯಗಳಲ್ಲಿ ಇಲ್ಲದಿರುವುದನ್ನು ತಮ್ಮ ನಾಲಗೆಗಳ ಮೂಲಕ ಹೇಳುತ್ತಿರುವರು. ಹೇಳಿರಿ: “ಹಾಗಾದರೆ ಅಲ್ಲಾಹು ನಿಮಗೆ ಯಾವುದಾದರೂ ಹಾನಿಯನ್ನು ಮಾಡಲು ಇಚ್ಛಿಸಿದರೆ ಅಥವಾ ಅವನು ನಿಮಗೆ ಯಾವುದಾದರೂ ಒಳಿತನ್ನು ನೀಡಲು ಇಚ್ಛಿಸಿದರೆ ಅವನ ಬಳಿಯಿಂದ ಏನನ್ನಾದರೂ ನಿಮಗೆ ಅಧೀನಪಡಿಸಿ ಕೊಡುವವರು ಯಾರಿರುವರು?” ಅಲ್ಲ, ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹು ಸೂಕ್ಷ್ಮವಾಗಿ ಅರಿಯುವವನಾಗಿರುವನು.
(12) ಅಲ್ಲ, ಸಂದೇಶವಾಹಕರು ಮತ್ತು ಸತ್ಯವಿಶ್ವಾಸಿಗಳು ಎಂದಿಗೂ ಅವರ ಕುಟುಂಬದವರ ಬಳಿಗೆ ಮರಳಲಾರರು ಎಂದು ನೀವು ಭಾವಿಸಿದಿರಿ. ಅದನ್ನು ನಿಮ್ಮ ಹೃದಯಗಳಲ್ಲಿ ಆಕರ್ಷಣೀಯವಾಗಿ ತೋರಿಸಿಕೊಡಲಾಗಿತ್ತು. ನೀವು ಭಾವಿಸಿರುವುದು ನಿಕೃಷ್ಟ ಭಾವನೆಯಾಗಿತ್ತು. ನೀವು ನಾಶವಾಗುವ ಒಂದು ಜನತೆಯಾಗಿದ್ದೀರಿ.
(13) ಅಲ್ಲಾಹುವಿನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ಯಾರು ವಿಶ್ವಾಸವಿಡುವುದಿಲ್ಲವೋ ಅಂತಹ ಸತ್ಯನಿಷೇಧಿಗಳಿಗೆ ನಾವು ಜ್ವಲಿಸುವ ನರಕಾಗ್ನಿಯನ್ನು ಸಿದ್ಧಗೊಳಿಸಿರುವೆವು.
(14) ಭೂಮ್ಯಾಕಾಶಗಳ ಆಧಿಪತ್ಯವು ಅಲ್ಲಾಹುವಿಗಾಗಿದೆ. ಅವನಿಚ್ಛಿಸುವವರನ್ನು ಅವನು ಕ್ಷಮಿಸುತ್ತಾನೆ ಮತ್ತು ಅವನಿಚ್ಛಿಸುವವರನ್ನು ಅವನು ಶಿಕ್ಷಿಸುತ್ತಾನೆ. ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(15) ನೀವು ಸಂಪತ್ತನ್ನು ಅಧೀನಪಡಿಸಲಿರುವ ಕಡೆಗೆ (ಯುದ್ಧಕ್ಕಾಗಿ) ಹೋಗುವುದಾದರೆ ಹಿಂದೆ ಸರಿದವರು ಹೇಳುವರು: “ನಮ್ಮನ್ನು ಬಿಟ್ಟುಬಿಡಿರಿ (ತಡೆಯದಿರಿ!), ನಾವೂ ನಿಮ್ಮನ್ನು ಹಿಂಬಾಲಿಸುವೆವು”. ಅಲ್ಲಾಹುವಿನ ವಚನಗಳಿಗೆ ಬದಲಾವಣೆಯನ್ನು ತರಲು ಅವರು ಇಚ್ಛಿಸುತ್ತಿರುವರು. ಹೇಳಿರಿ: “ನೀವೆಂದೂ ನಮ್ಮನ್ನು ಹಿಂಬಾಲಿಸಲಾರಿರಿ. ಹೀಗೆಂದು ಅಲ್ಲಾಹು ಮುಂಚೆಯೇ ಹೇಳಿರುವನು”. ಆಗ ಅವರು ಹೇಳುವರು: “ಅಲ್ಲ, ನೀವು ನಮ್ಮ ಬಗ್ಗೆ ಅಸೂಯೆಪಡುತ್ತಿದ್ದೀರಿ”. ಅಲ್ಲ, ಅವರು ಅತ್ಯಲ್ಪವಾಗಿಯೇ ಹೊರತು (ವಿಷಯವನ್ನು) ಗ್ರಹಿಸಲಾರರು.
(16) ಗ್ರಾಮೀಣ ಅರಬಿಗಳ ಪೈಕಿ ಹಿಂದೆ ಸರಿದವರೊಂದಿಗೆ ಹೇಳಿರಿ: “ಪ್ರಬಲ ಆಕ್ರಮಣ ಶಕ್ತಿಯಿರುವ ಒಂದು ಜನತೆಯನ್ನು ಎದುರಿಸುವ ಸಲುವಾಗಿ ನಿಮ್ಮನ್ನು ತರುವಾಯ ಕರೆಯಲಾಗುವುದು. ಅವರು ಶರಣಾಗುವವರೆಗೆ ನೀವು ಅವರೊಂದಿಗೆ ಯುದ್ಧ ಮಾಡಬೇಕಾಗುವುದು! ಆಗ ನೀವು ಅನುಸರಿಸುವುದಾದರೆ ಅಲ್ಲಾಹು ನಿಮಗೆ ಉತ್ತಮ ಪ್ರತಿಫಲವನ್ನು ನೀಡುವನು. ಮುಂಚೆ ನೀವು ವಿಮುಖರಾದಂತೆ (ಮುಂದೆಯೂ) ವಿಮುಖರಾಗುವುದಾದರೆ ಅವನು ನಿಮಗೆ ಯಾತನಾಮಯವಾದ ಶಿಕ್ಷೆಯನ್ನು ನೀಡುವನು”.
(17) ಕುರುಡನ ಮೇಲೆ ದೋಷವಿಲ್ಲ. ಕುಂಟನ ಮೇಲೂ ದೋಷವಿಲ್ಲ. ರೋಗಿಯ ಮೇಲೂ ದೋಷವಿಲ್ಲ. ಯಾರಾದರೂ ಅಲ್ಲಾಹುವನ್ನು ಮತ್ತು ಅವನ ಸಂದೇಶವಾಹಕರನ್ನು ಅನುಸರಿಸಿದರೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಅವನು ಅವನನ್ನು ಪ್ರವೇಶ ಮಾಡಿಸುವನು. ಯಾರಾದರೂ ವಿಮುಖನಾಗುವುದಾದರೆ ಅವನಿಗೆ ಯಾತನಾಮಯ ಶಿಕ್ಷೆಯನ್ನು ನೀಡುವನು.
(18) ಆ ಮರದ ಬುಡದಲ್ಲಿ ಸತ್ಯವಿಶ್ವಾಸಿಗಳು ತಮ್ಮೊಂದಿಗೆ ಪ್ರತಿಜ್ಞೆಗೈದ ಸಂದರ್ಭದಲ್ಲಿ ಖಂಡಿತವಾಗಿಯೂ ಅಲ್ಲಾಹು ಅವರ ಬಗ್ಗೆ ಸಂತೃಪ್ತನಾಗಿದ್ದನು. ಅವನು ಅವರ ಹೃದಯಗಳಲ್ಲಿರುವುದನ್ನು ಅರಿತಿರುವನು. ತರುವಾಯ ಅವನು ಅವರಿಗೆ ಮನಃಶಾಂತಿಯನ್ನು ಇಳಿಸಿಕೊಟ್ಟನು ಮತ್ತು ಶೀಘ್ರ ವಿಜಯವೊಂದನ್ನು ಅವರಿಗೆ ಪ್ರತಿಫಲವಾಗಿ ನೀಡಿದನು.
(19) ಅವರಿಗೆ ವಶಪಡಿಸಿಕೊಳ್ಳಲು ಹೇರಳ ಸಮರಾರ್ಜಿತ ಸೊತ್ತನ್ನು (ಅವನು ನೀಡಿದನು). ಅಲ್ಲಾಹು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.
(20) ನಿಮಗೆ ವಶಪಡಿಸಿಕೊಳ್ಳಬಹುದಾದ ಹೇರಳ ಸಮರಾರ್ಜಿತ ಸೊತ್ತನ್ನು ಅಲ್ಲಾಹು ನಿಮಗೆ ವಾಗ್ದಾನ ಮಾಡಿರುವನು. ಆದರೆ ಇದನ್ನು (ಖೈಬರ್ ಯುದ್ಧದ ಸಮರಾರ್ಜಿತ ಸೊತ್ತನ್ನು) ಅವನು ಈಗಾಗಲೇ ನಿಮಗೆ ನೀಡಿರುವನು. ಅವನು ಜನರ ಕೈಗಳನ್ನು ನಿಮ್ಮಿಂದ ತಡೆದಿರುವನು. ಅದು ಸತ್ಯವಿಶ್ವಾಸಿಗಳಿಗೆ ಒಂದು ದೃಷ್ಟಾಂತವಾಗುವ ಸಲುವಾಗಿ ಮತ್ತು ಅವನು ನಿಮ್ಮನ್ನು ನೇರವಾದ ಮಾರ್ಗದೆಡೆಗೆ ಮುನ್ನಡೆಸುವ ಸಲುವಾಗಿ.
(21) ನಿಮಗೆ ಗಳಿಸಲು ಸಾಧ್ಯವಾಗಿರದಂತಹ ಇತರ (ವಿಜಯಗಳನ್ನು ಅವನು ನಿಮಗೆ ವಾಗ್ದಾನ ಮಾಡಿರುವನು). ಅಲ್ಲಾಹು ಅವುಗಳನ್ನು ಆವರಿಸಿಕೊಂಡಿರುವನು. ಅಲ್ಲಾಹು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.
(22) ಆ ಸತ್ಯನಿಷೇಧಿಗಳು ನಿಮ್ಮೊಂದಿಗೆ ಯುದ್ಧ ಹೂಡಿದ್ದರೂ ಅವರು ಹಿಂದಿರುಗಿ ಓಡುತ್ತಿದ್ದರು. ತರುವಾಯ ಅವರು ಯಾವುದೇ ರಕ್ಷಕನನ್ನಾಗಲಿ ಸಹಾಯಕನನ್ನಾಗಲಿ ಕಾಣಲಾರರು.
(23) ಅದು ಮುಂಚಿನಿಂದಲೇ ಗತಿಸಿ ಹೋಗಿರುವ ಅಲ್ಲಾಹುವಿನ ಕ್ರಮವಾಗಿದೆ. ಅಲ್ಲಾಹುವಿನ ಕ್ರಮಕ್ಕೆ ತಾವು ಯಾವುದೇ ಬದಲಾವಣೆಯನ್ನೂ ಕಾಣಲಾರಿರಿ.
(24) ಅವರ (ಶತ್ರುಗಳ) ಮೇಲೆ ನಿಮಗೆ ಗೆಲುವನ್ನು ದಯಪಾಲಿಸಿದ ಬಳಿಕ(1133) ಮಕ್ಕಾದೊಳಗೆ ಅವರ ಕೈಗಳನ್ನು ನಿಮ್ಮಿಂದ ಮತ್ತು ನಿಮ್ಮ ಕೈಗಳನ್ನು ಅವರಿಂದ ತಡೆದವನು ಅವನಾಗಿರುವನು. ಅಲ್ಲಾಹು ನೀವು ಮಾಡುತ್ತಿರುವುದರ ಬಗ್ಗೆ ವೀಕ್ಷಿಸುತ್ತಿರುವನು.
1133. ಹುದೈಬಿಯಾ ಒಪ್ಪಂದಕ್ಕೆ ಮುಂಚೆ ಮುಸ್ಲಿಮರ ಮೇಲೆ ಆಕ್ರಮಣ ಮಾಡಲು ಮುಂದಾದ ಒಂದು ಗುಂಪು ಆಯುಧಧಾರಿಗಳನ್ನು ಸಹಾಬಿಗಳು ಸೆರೆಹಿಡಿದು ಪ್ರವಾದಿ(ಸ) ರವರ ಸಮ್ಮುಖದಲ್ಲಿ ಹಾಜರುಪಡಿಸಿದಾಗ ಪ್ರವಾದಿ(ಸ) ರವರು ಅವರನ್ನು ಬಿಟ್ಟುಬಿಡುವಂತೆ ಆದೇಶಿಸಿದ್ದನ್ನು ಇಲ್ಲಿ ಪರಾಮರ್ಶಿಸಲಾಗಿದೆ.
(25) ಅವರು ಸತ್ಯವನ್ನು ನಿಷೇಧಿಸಿದವರು, ಪವಿತ್ರ ಮಸೀದಿಯಿಂದ ನಿಮ್ಮನ್ನು ತಡೆದವರು ಮತ್ತು ಬಲಿಮೃಗಗಳು ಅವುಗಳ ನಿಶ್ಚಿತ ಸ್ಥಾನದೆಡೆಗೆ ತಲುಪುವುದನ್ನು ಅನುಮತಿಸದೆ ತಡೆಹಿಡಿದವರಾಗಿರುವರು.(1134) ನೀವು ತಿಳಿದಿರದಂತಹ ಸತ್ಯವಿಶ್ವಾಸಿಗಳಾದ ಕೆಲವು ಪುರುಷರನ್ನು ಮತ್ತು ಸತ್ಯವಿಶ್ವಾಸಿನಿಯರಾದ ಕೆಲವು ಸ್ತ್ರೀಯರನ್ನು ನೀವು ತುಳಿದು, ಬಳಿಕ (ನಿಮಗೆ) ಅರಿವಿಲ್ಲದೆ ಅವರಿಂದಾಗಿ ನಿಮ್ಮ ಮೇಲೆ ಪಾಪವು ಸಂಭವಿಸುವ ಸಾಧ್ಯತೆ ಇಲ್ಲದಿರುತ್ತಿದ್ದರೆ (ಅಲ್ಲಾಹು ನಿಮ್ಮ ಎರಡು ಬಣಗಳನ್ನು ಯುದ್ಧ ಮಾಡುವುದರಿಂದ ತಡೆಯುತ್ತಿರಲಿಲ್ಲ). ಇದು ಅಲ್ಲಾಹು ಅವನಿಚ್ಛಿಸುವವರನ್ನು ಅವನ ಕಾರುಣ್ಯದಲ್ಲಿ ಸೇರಿಸಿಕೊಳ್ಳುವ ಸಲುವಾಗಿದೆ. ಅವರು (ಮಕ್ಕಾದಲ್ಲಿರುವ ವಿಶ್ವಾಸಿಗಳು ಮತ್ತು ಸತ್ಯನಿಷೇಧಿಗಳು) ಬೇರೆ ಬೇರೆಯಾಗಿ ವಾಸಿಸಿರುತ್ತಿದ್ದರೆ ಅವರ ಪೈಕಿ ಸತ್ಯನಿಷೇಧಿಗಳಿಗೆ ನಾವು ಯಾತನಾಮಯ ಶಿಕ್ಷೆಯನ್ನು ನೀಡುತ್ತಿದ್ದೆವು.
1134. ಉಮ್ರಾ ನಿರ್ವಹಿಸಲು ಹೊರಟ ಪ್ರವಾದಿ(ಸ) ರವರನ್ನು ಮತ್ತು ಸಹಾಬಿಗಳನ್ನು ಶತ್ರುಗಳು ತಡೆಹಿಡಿದಾಗ, ತರುವಾಯ ಉಂಟಾದ ಒಪ್ಪಂದದ ನಿಯಮಗಳನ್ನು ಗೌರವಿಸಿ ಅವರು ಮಕ್ಕಾ ಪ್ರವೇಶಿಸದೆ ಮರಳಿ ಹೋದರು.
(26) ಸತ್ಯನಿಷೇಧಿಗಳು ತಮ್ಮ ಹೃದಯಗಳಲ್ಲಿ ದುರಭಿಮಾನವನ್ನು -ಆ ಅಜ್ಞಾನಕಾಲದ ದುರಭಿಮಾನವನ್ನು- ಇಟ್ಟುಕೊಂಡಿದ್ದ ಸಂದರ್ಭ! ಆಗ ಅಲ್ಲಾಹು ಅವನ ಸಂದೇಶವಾಹಕರ ಮೇಲೆ ಮತ್ತು ಸತ್ಯವಿಶ್ವಾಸಿಗಳ ಮೇಲೆ ತನ್ನ ಕಡೆಯ ಮನಃಶಾಂತಿಯನ್ನು ಇಳಿಸಿಕೊಟ್ಟನು. ಭಯಭಕ್ತಿ ಪಾಲಿಸಲಿಕ್ಕಿರುವ ಆಜ್ಞೆ ಸ್ವೀಕರಿಸುವಂತೆ ಅವರನ್ನು ನಿರ್ಬಂಧಿಸಿದನು. ಅವರು ಅದಕ್ಕೆ (ಅದನ್ನು ಸ್ವೀಕರಿಸಲು) ಹೆಚ್ಚು ಅರ್ಹತೆಯುಳ್ಳವರು ಮತ್ತು ಹಕ್ಕುಳ್ಳವರಾಗಿದ್ದರು. ಅಲ್ಲಾಹು ಎಲ್ಲ ವಿಷಯಗಳ ಬಗ್ಗೆ ಅರಿವುಳ್ಳವನಾಗಿರುವನು.
(27) ಅಲ್ಲಾಹು ತನ್ನ ಸಂದೇಶವಾಹಕರಿಗೆ ಕನಸನ್ನು ಸತ್ಯದೊಂದಿಗೆ ಸಾಕಾರಗೊಳಿಸಿದನು. ಅಂದರೆ ಅಲ್ಲಾಹು ಇಚ್ಛಿಸಿದರೆ ಶಾಂತಚಿತ್ತರಾಗಿ, ತಲೆಬೋಳಿಸಿದವರೂ, ಕೂದಲನ್ನು ಕತ್ತರಿಸಿದವರೂ ಆಗಿರುತ್ತಾ ನೀವು ಏನನ್ನೂ ಭಯಪಡದೆ ಪವಿತ್ರ ಮಸೀದಿಯನ್ನು ಖಂಡಿತವಾಗಿಯೂ ಪ್ರವೇಶಿಸುವಿರಿ ಎಂಬ ಕನಸು.(1135) ಆದರೆ ನೀವು ಅರಿಯದಿರುವುದನ್ನು ಅವನು ಅರಿತಿರುವನು. ಆದುದರಿಂದ ಅದರ ಹೊರತಾಗಿ ಸನ್ನಿಹಿತವಾದ ಒಂದು ವಿಜಯವನ್ನು ಅವನು ದಯಪಾಲಿಸಿರುವನು.
1135. ಸಹಾಬಿಗಳೊಂದಿಗೆ ಸೇರಿ ತಾನು ಶಾಂತಿಯುತವಾಗಿ ಉಮ್ರಾ ನಿರ್ವಹಿಸುವೆನೆಂದು ಕನಸು ಕಂಡ ನಿಮಿತ್ತ ಪ್ರವಾದಿ(ಸ) ರವರು ಸಹಾಬಿಗಳನ್ನು ಸೇರಿಸಿ ಮಕ್ಕಾದತ್ತ ಹೊರಟಿದ್ದರು. ಆದರೆ ಕುರೈಶಿಗಳು ಅವರನ್ನು ಮಧ್ಯದಲ್ಲಿಯೇ ತಡೆದು ನಿಲ್ಲಿಸಿದಾಗ, ಒಂದು ಯುದ್ಧದ ಹಂತಕ್ಕೆ ತಲುಪಿದ ಸಂಘರ್ಷವು ತರುವಾಯ ಹುದೈಬಿಯಾ ಒಪ್ಪಂದದಲ್ಲಿ ಕೊನೆಗೊಂಡು ಪ್ರವಾದಿ(ಸ) ರವರು ಮತ್ತು ಸಹಾಬಾಗಳು ಉಮ್ರಾ ನಿರ್ವಹಿಸದೆ ಮದೀನಕ್ಕೆ ಮರಳಿದರು. ಪ್ರವಾದಿ(ಸ) ರವರ ಕನಸು ಸಾಕಾರಗೊಂಡಿಲ್ಲವೆಂದು ಕಪಟವಿಶ್ವಾಸಿಗಳು ಹಾಗೂ ಇತರ ಜನರು ಗೇಲಿ ಮಾಡತೊಡಗಿದರು. ಈ ಸೂಕ್ತಿಯು ಅವರಿಗೆ ನೀಡಲಾದ ಉತ್ತರವಾಗಿದೆ. ಪ್ರವಾದಿ(ಸ) ರವರು ಕಂಡದ್ದು ವ್ಯರ್ಥವಾದ ಕನಸಲ್ಲ, ಬದಲಾಗಿ ಅದು ಅಲ್ಲಾಹುವಿನ ಸತ್ಯವಾಗ್ದಾನವಾಗಿದೆ. ಮಕ್ಕಕ್ಕೆ ತೆರಳಿ ಶಾಂತಿಯುತವಾಗಿ ಉಮ್ರ ನಿರ್ವಹಿಸಲು ಮುಸ್ಲಿಮರಿಗೆ ಸಾಧ್ಯವಾಗಲಿದೆ ಮತ್ತು ಅದಕ್ಕಿರುವ ಮುನ್ನುಡಿಯಾದ ನಿರ್ಣಾಯಕವಾದ ವಿಜಯವನ್ನು ಮುಸ್ಲಿಮರು ಹುದೈಬಿಯಾ ಒಪ್ಪಂದದ ಮೂಲಕ ಗಳಿಸಿದ್ದಾರೆಂದು ಈ ಸೂಕ್ತಿಯು ಸ್ಪಷ್ಟಪಡಿಸುತ್ತದೆ. ಒಪ್ಪಂದದ ಪ್ರಕಾರ ಮಾರನೇ ವರ್ಷ ಪ್ರವಾದಿ(ಸ) ರವರು ಮತ್ತು ಸಹಾಬಿಗಳು ಶಾಂತಿಯುತವಾಗಿ ಉಮ್ರಾ ನಿರ್ವಹಿಸಿದರು.
(28) ಸನ್ಮಾರ್ಗದೊಂದಿಗೆ ಮತ್ತು ಸತ್ಯಧರ್ಮದೊಂದಿಗೆ ತನ್ನ ಸಂದೇಶವಾಹಕರನ್ನು ಕಳುಹಿಸಿದವನು ಅವನಾಗಿರುವನು. ಅದನ್ನು ಎಲ್ಲ ಧರ್ಮಗಳ ಮೇಲೆ ಪ್ರಕಟಗೊಳಿಸುವ ಸಲುವಾಗಿ. ಸಾಕ್ಷಿಯಾಗಿ ಅಲ್ಲಾಹು ಸಾಕು.
(29) ಮುಹಮ್ಮದ್ ಅಲ್ಲಾಹುವಿನ ಸಂದೇಶವಾಹಕರಾಗಿರುವರು. ಅವರ ಜೊತೆಗಿರುವವರು ಸತ್ಯನಿಷೇಧಿಗಳ ಮೇಲೆ ಕಠೋರವಾಗಿ ವರ್ತಿಸುವವರಾಗಿರುವರು ಮತ್ತು ತಮ್ಮೊಳಗೆ ಅಪಾರ ದಯೆಯುಳ್ಳವರಾಗಿರುವರು. ಅಲ್ಲಾಹುವಿನ ಕಡೆಯ ಅನುಗ್ರಹ ಮತ್ತು ಸಂತೃಪ್ತಿಯನ್ನು ಅರಸುತ್ತಾ ಅವರು ತಲೆಬಾಗುತ್ತಲೂ ಸಾಷ್ಟಾಂಗವೆರಗುತ್ತಲೂ ನಮಾಝ್ ಮಾಡುತ್ತಿರುವುದಾಗಿ ತಾವು ಕಾಣುವಿರಿ. ಸಾಷ್ಟಾಂಗದಿಂದಾಗಿ ಅವರ ಮುಖಗಳಲ್ಲಿ ಅವರ ಗುರುತಿರುವುದು. ಅದು ಅವರ ಬಗ್ಗೆ ತೌರಾತಿನಲ್ಲಿರುವ ಉಪಮೆಯಾಗಿದೆ. ಅವರ ಬಗ್ಗೆ ಇಂಜೀಲಿನಲ್ಲಿರುವ ಉಪಮೆಯು ಹೀಗಿದೆ:(1136) ಒಂದು ಬೆಳೆ ಅದರ ಮೊಳಕೆ ಯನ್ನು ಹೊರಹೊಮ್ಮಿಸಿತು. ತರುವಾಯ ಅದನ್ನು ಪುಷ್ಟೀಕರಿಸಿತು. ತರುವಾಯ ಅದು ಬಲವನ್ನು ಪಡೆಯಿತು. ತರುವಾಯ ಅದು ಕೃಷಿಕರಿಗೆ ಪುಳಕವನ್ನು ನೀಡುತ್ತಾ ಅದರ ಕಾಂಡದಲ್ಲಿ ನೆಟ್ಟಗೆ ನಿಂತಿತು. (ಸತ್ಯವಿಶ್ವಾಸಿಗಳನ್ನು ಹೀಗೆ ಬೆಳೆಸುವುದು) ಅವರ ನಿಮಿತ್ತ ಸತ್ಯನಿಷೇಧಿಗಳನ್ನು ರೇಗಿಸುವ ಸಲುವಾಗಿದೆ. ಅವರ ಪೈಕಿ ವಿಶ್ವಾಸವಿಟ್ಟವರಿಗೆ ಮತ್ತು ಸತ್ಕರ್ಮಗೈದವರಿಗೆ ಅಲ್ಲಾಹು ಪಾಪಮುಕ್ತಿಯನ್ನು ಮತ್ತು ಮಹಾ ಪ್ರತಿಫಲವನ್ನು ವಾಗ್ದಾನ ಮಾಡಿರುವನು.
1136. ತೌರಾತ್ ಅಥವಾ ಮೂಸಾ(ಅ) ರಿಗೆ ಅವತೀರ್ಣಗೊಂಡ ಗ್ರಂಥ ಇಂದು ಮೂಲರೂಪದಲ್ಲಿ ಲಭ್ಯವಿಲ್ಲ. ಬೈಬಲಿನ ಹಳೆಯ ಒಡಂಬಡಿಕೆಯ ಅನೇಕ ಪುಸ್ತಕಗಳಲ್ಲಿ ತೌರಾತಿನ ಅನೇಕ ಭಾಗಗಳು ಕಾಣಲು ಸಾಧ್ಯವಿರುವುದರಿಂದ ಬೈಬಲಿನ ಹಳೆಯ ಒಡಂಬಡಿಕೆಯನ್ನು ತೌರಾತೆಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಹಳೆಯ ಒಡಂಬಡಿಕೆಯ ಅರಣ್ಯಕಾಂಡ ಎಂಬ ಪುಸ್ತಕದಲ್ಲಿ ಸಾಷ್ಟಾಂಗ ನಿರತರಾದ ಸತ್ಯವಿಶ್ವಾಸಿಗಳ ಬಗ್ಗೆ ಪ್ರಸ್ತಾಪವಿದೆ. ಇಂಜೀಲ್ ಅಥವಾ ಈಸಾ(ಅ) ರಿಗೆ ಅವತೀರ್ಣಗೊಂಡ ಗ್ರಂಥ ಕೂಡ ಮೂಲರೂಪದಲ್ಲಿ ಲಭ್ಯವಿಲ್ಲ. ಬೈಬಲಿನ ಹೊಸ ಒಡಂಬಡಿಕೆಯ ನಾಲ್ಕು ಸುವಾರ್ತೆಗಳಲ್ಲಿ ಇಂಜೀಲಿನ ಅನೇಕ ಭಾಗಗಳು ಕಾಣಲು ಸಾಧ್ಯವಿರುವುದರಿಂದ ಬೈಬಲಿನ ಹೊಸ ಒಡಂಬಡಿಕೆಯನ್ನು ಇಂಜೀಲೆಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಒಂದು ಬೀಜ ಕ್ರಮಾನುಗತವಾಗಿ ಬೆಳೆದು ದೃಢತೆಯನ್ನು ಪಡೆಯುವ ಉಪಮೆಯನ್ನು ಮಾರ್ಕನ ಸುವಾರ್ತೆಯಲ್ಲಿ ಕಾಣಬಹುದು.