(1) ಓ ಸತ್ಯವಿಶ್ವಾಸಿಗಳೇ! ನೀವು ಕರಾರುಗಳನ್ನು ನೆರವೇರಿಸಿರಿ. ಮುಂದೆ ನಿಮಗೆ ವಿವರಿಸಿಕೊಡಲಾಗುವುದರ ಹೊರತಾಗಿರುವ ಆಡು, ಕುರಿ, ಒಂಟೆಗಳಲ್ಲಿ ಸೇರಿದ ಜಾನುವಾರುಗಳನ್ನು ನಿಮಗೆ ಅನುಮತಿಸಲಾಗಿದೆ. ಆದರೆ ನೀವು ಇಹ್ರಾಮ್‍ನ(144) ಸ್ಥಿತಿಯಲ್ಲಿರುವಾಗ ಬೇಟೆಯಾಡಲು ನಿಮಗೆ ಅನುಮತಿಯಿರುವುದಿಲ್ಲ. ಖಂಡಿತವಾಗಿಯೂ ಅಲ್ಲಾಹು ತಾನಿಚ್ಛಿಸುವುದನ್ನು ವಿಧಿಸುವನು.
144. ಹಜ್ಜ್ ಅಥವಾ ಉಮ್ರಾ ನಿರ್ವಹಿಸುತ್ತೇನೆ ಎಂಬ ನಿಯ್ಯತ್ತಿನೊಂದಿಗೆ ಸಾಂಕೇತಿಕವಾಗಿ ಹಜ್ ಅಥವಾ ಉಮ್ರಾ ಕರ್ಮದಲ್ಲಿ ಪ್ರವೇಶಿಸುವುದನ್ನು ‘ಇಹ್ರಾಮ್’ ಎನ್ನಲಾಗುತ್ತದೆ. ‘ಇಹ್ರಾಮ್’ ಎಂಬ ಪದದ ಭಾಷಿಕ ಅರ್ಥವು ನಿಷಿದ್ಧಗೊಳಿಸುವುದು ಎಂದಾಗಿದೆ. ಹಜ್ ಅಥವಾ ಉಮ್ರಾ ಕರ್ಮದಲ್ಲಿ ಸಾಂಕೇತಿಕವಾಗಿ ಪ್ರವೇಶಿಸುವುದರೊಂದಿಗೆ ಕೆಲವು ಕರ್ಮಗಳನ್ನು ನಿಷಿದ್ಧವೆಂದು ಪರಿಗಣಿಸಿ ವರ್ಜಿಸಬೇಕಾಗಿದೆ ಆದ್ದರಿಂದ ಅದಕ್ಕೆ ಈ ಹೆಸರು ಬಂದಿದೆ. ಒಂದೊಂದು ದಿಕ್ಕಿನಿಂದ ಹೊರಡುವ ಯಾತ್ರಾರ್ಥಿಗಳು ಇಹ್ರಾಮ್‍ನಲ್ಲಿ ಪ್ರವೇಶಿಸಲು ನಿಶ್ಚಿತ ಸ್ಥಳ (ಮೀಕಾತ್)ಗಳಿವೆ.
(2) ಓ ಸತ್ಯವಿಶ್ವಾಸಿಗಳೇ! ಅಲ್ಲಾಹುವಿನ ಧರ್ಮ ಲಾಂಛನಗಳಿಗೆ ನೀವು ಅನಾದರ ತೋರದಿರಿ. ಪವಿತ್ರವಾದ ತಿಂಗಳಿಗೆ, (ಕಅ್‌ಬಾದೆಡೆಗೆ ಕೊಂಡೊಯ್ಯುವ) ಬಲಿಮೃಗಗಳಿಗೆ, (ಅವುಗಳ ಕತ್ತುಗಳಲ್ಲಿರುವ) ಪದಕಗಳಿಗೆ ಮತ್ತು ತಮ್ಮ ರಬ್‌ನ ಔದಾರ್ಯ ಹಾಗೂ ತೃಪ್ತಿಯನ್ನು ಅರಸುತ್ತಾ ಪವಿತ್ರ ಭವನವನ್ನು ಗುರಿಯಾಗಿಸಿ ತೀರ್ಥಾಟನೆ ಮಾಡುವವರಿಗೆ (ನೀವು ಅನಾದರ ತೋರದಿರಿ). ಆದರೆ ನೀವು ಇಹ್ರಾಮ್‍ನಿಂದ ವಿಮುಕ್ತರಾದರೆ ನೀವು ಬೇಟೆಯಾಡಬಹುದು. ಮಸ್ಜಿದುಲ್ ಹರಾಮ್‍ನಿಂದ ನಿಮ್ಮನ್ನು ತಡೆದರು ಎಂಬ ಕಾರಣದಿಂದ ಒಂದು ಜನತೆಯೊಂದಿಗೆ ನಿಮಗಿರುವ ಕ್ರೋಧವು ಅನ್ಯಾಯವೆಸಗಲು ನಿಮಗೆಂದೂ ಪ್ರೇರಣೆಯಾಗದಿರಲಿ. ಪುಣ್ಯ ಮತ್ತು ಧರ್ಮನಿಷ್ಠೆಯಲ್ಲಿ ಪರಸ್ಪರ ಸಹಕರಿಸಿರಿ. ಪಾಪ ಮತ್ತು ಅತಿಕ್ರಮದಲ್ಲಿ ಪರಸ್ಪರ ಸಹಕರಿಸದಿರಿ. ನೀವು ಅಲ್ಲಾಹುವನ್ನು ಭಯಪಡಿರಿ. ಖಂಡಿತವಾಗಿಯೂ ಅಲ್ಲಾಹು ಕಠಿಣವಾಗಿ ಶಿಕ್ಷಿಸುವವನಾಗಿರುವನು.
(3) ಶವ, ರಕ್ತ, ಹಂದಿ ಮಾಂಸ, ಅಲ್ಲಾಹುವೇತರರ ಹೆಸರಲ್ಲಿ ಘೋಷಿಸ(ಕೊಯ್ಯ)ಲಾಗಿರುವುದು, ಉಸಿರುಗಟ್ಟಿ ಸತ್ತಿರುವುದು, ಹೊಡೆದು ಸಾಯಿಸಿರುವುದು, ಕೆಳಗೆ ಬಿದ್ದು ಸತ್ತಿರುವುದು, ಇರಿತಕ್ಕೊಳಗಾಗಿ ಸತ್ತಿರುವುದು, ವನ್ಯಮೃಗಗಳು ಕಚ್ಚಿ ತಿಂದಿರುವುದು ಇತ್ಯಾದಿ ನಿಮಗೆ ನಿಷಿದ್ಧಗೊಳಿಸಲಾಗಿದೆ. ಆದರೆ (ಸಾಯುವ ಮೊದಲೇ) ನೀವು ಕೊಯ್ದಿರುವುದು ಇದರಿಂದ ಹೊರತಾಗಿದೆ. ವಿಗ್ರಹಗಳ ಮುಂದೆ ಬಲಿಯರ್ಪಿಸಲಾಗಿರುವುದು ಕೂಡ (ನಿಮಗೆ ನಿಷಿದ್ಧವಾಗಿದೆ). ಬಾಣಗಳನ್ನು ಬಳಸಿ ಅದೃಷ್ಟ ಪರೀಕ್ಷಿಸುವುದನ್ನು(145) ಕೂಡ (ನಿಮಗೆ ನಿಷಿದ್ಧಗೊಳಿಸಲಾಗಿದೆ). ಅವೆಲ್ಲವೂ ಧಿಕ್ಕಾರ ಪ್ರವೃತ್ತಿಗಳಾಗಿವೆ. ನಿಮ್ಮ ಧರ್ಮವನ್ನು ಸೋಲಿಸುವ ವಿಷಯದಲ್ಲಿ ಇಂದು ಸತ್ಯನಿಷೇಧಿಗಳು ನಿರಾಶರಾಗಿರುವರು. ಆದ್ದರಿಂದ ನೀವು ಅವರನ್ನು ಭಯಪಡದಿರಿ. ನನ್ನನ್ನು ಭಯಪಡಿರಿ. ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪೂರ್ತೀಕರಿಸಿ ಕೊಟ್ಟಿರುವೆನು. ನನ್ನ ಅನುಗ್ರಹವನ್ನು ನಾನು ನಿಮಗೆ ನೆರವೇರಿಸಿಕೊಟ್ಟಿರುವೆನು. ಇಸ್ಲಾಮನ್ನು ಧರ್ಮವಾಗಿ ನಾನು ನಿಮಗೆ ತೃಪ್ತಿಪಟ್ಟಿರುವೆನು. ಯಾರಾದರೂ ಹಸಿವಿನ ನಿಮಿತ್ತ (ನಿಷಿದ್ಧವಾಗಿರುವುದನ್ನು ತಿನ್ನಲು) ನಿರ್ಬಂಧಿತನಾದರೆ ಮತ್ತು ಅವನು ಧಿಕ್ಕಾರದತ್ತ ವಾಲುವವನಲ್ಲದಿದ್ದರೆ ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
145. ವಿಶೇಷವಾದ ಕೆಲವು ಚಿಹ್ನೆಗಳನ್ನು ಹೊಂದಿರುವ ಬಾಣಗಳಂತಿರುವ ಕೆಲವು ಕೋಲುಗಳನ್ನು ಬತ್ತಳಿಕೆಯಲ್ಲಿಟ್ಟು ಅದನ್ನು ಅಲ್ಲಾಡಿಸಿ ಅದರಿಂದ ಒಂದನ್ನು ಹೊರತೆಗೆದು ಅದರಲ್ಲಿರುವ ಚಿಹ್ನೆಯ ಆಧಾರದಲ್ಲಿ ಭಾಗ್ಯ-ನಿರ್ಭಾಗ್ಯಗಳನ್ನು ನಿರ್ಧರಿಸುವ ಒಂದು ಸಂಪ್ರದಾಯ ಅರಬರಲ್ಲಿ ರೂಢಿಯಲ್ಲಿತ್ತು.
(4) ತಮಗೆ ಏನೆಲ್ಲಾ ಅನುಮತಿಸಲಾಗಿವೆಯೆಂದು ಅವರು ತಮ್ಮೊಂದಿಗೆ ಕೇಳುವರು. ಹೇಳಿರಿ: ‘ಉತ್ತಮವಾದ ವಸ್ತುಗಳೆಲ್ಲವನ್ನೂ ನಿಮಗೆ ಅನುಮತಿಸಲಾಗಿದೆ. ಅಲ್ಲಾಹು ನಿಮಗೆ ನೀಡಿದ ವಿದ್ಯೆಯನ್ನು ಬಳಸಿ ಬೇಟೆಗಾರಿಕೆಯನ್ನು ತರಬೇತಿ ನೀಡುವ ರೀತಿಯಲ್ಲಿ ನೀವು ತರಬೇತುಗೊಳಿಸಿದ ಯಾವುದಾದರೂ ಬೇಟೆಮೃಗವು ನಿಮಗೋಸ್ಕರ ಹಿಡಿದು ತಂದಿರುವುದರಿಂದ ನೀವು ತಿನ್ನಿರಿ. ಆ ಬೇಟೆಯ ಮೇಲೆ ನೀವು ಅಲ್ಲಾಹುವಿನ ನಾಮವನ್ನು ಉಚ್ಛರಿಸಿರಿ. ನೀವು ಅಲ್ಲಾಹುವನ್ನು ಭಯಪಡಿರಿ. ಖಂಡಿತವಾಗಿಯೂ ಅಲ್ಲಾಹು ಅತಿಶೀಘ್ರವಾಗಿ ವಿಚಾರಣೆ ನಡೆಸುವವನಾಗಿರುವನು.
(5) ಇಂದು ನಿಮಗೆ ಎಲ್ಲ ಉತ್ತಮ ವಸ್ತುಗಳನ್ನೂ ಧರ್ಮಸಮ್ಮತಗೊಳಿಸಲಾಗಿದೆ. ಗ್ರಂಥ ನೀಡಲಾದವರ ಆಹಾರವು ನಿಮಗೆ ಧರ್ಮಸಮ್ಮತವಾಗಿದೆ. ನಿಮ್ಮ ಆಹಾರವು ಅವರಿಗೂ ಧರ್ಮಸಮ್ಮತವಾಗಿದೆ. ಸತ್ಯವಿಶ್ವಾಸಿನಿಯರ ಪೈಕಿ ಪತಿವ್ರತೆಯರಾದ ಸ್ತ್ರೀಯರು ಮತ್ತು ನಿಮಗಿಂತ ಮುಂಚೆ ಗ್ರಂಥ ನೀಡಲ್ಪಟ್ಟವರ ಪೈಕಿ ಪತಿವ್ರತೆಯರಾದ ಸ್ತ್ರೀಯರು -ನೀವು ಅವರಿಗೆ ವಧುದಕ್ಷಿಣೆಯನ್ನು ನೀಡಿದ್ದರೆ- (ನಿಮಗೆ ಧರ್ಮಸಮ್ಮತವಾಗಿದ್ದಾರೆ). ನೀವು ವೈವಾಹಿಕ ಬದುಕು ಸಾಗಿಸುವುದನ್ನು ಬಯಸುವವರೂ, ವ್ಯಭಿಚಾರ ಮಾಡದವರೂ, ಗುಪ್ತ ಸಂಗಾತಿಗಳನ್ನು ಇಟ್ಟುಕೊಳ್ಳದವರೂ ಆಗಿರಬೇಕಾಗಿದೆ. ಯಾರಾದರೂ ಸತ್ಯವಿಶ್ವಾಸವನ್ನು ತಿರಸ್ಕರಿಸುವುದಾದರೆ ಅವನ ಕರ್ಮವು ನಿಷ್ಫಲವಾಗಿ ಬಿಡುವುದು. ಪರಲೋಕದಲ್ಲಿ ಅವನು ನಷ್ಟ ಹೊಂದಿದವರೊಂದಿಗೆ ಸೇರುವನು.
(6) ಓ ಸತ್ಯವಿಶ್ವಾಸಿಗಳೇ! ನೀವು ನಮಾಝ್‍ಗಾಗಿ ಸಿದ್ಧರಾದರೆ ನಿಮ್ಮ ಮುಖಗಳನ್ನು ಮತ್ತು ಮೊಣಕೈಗಳವರೆಗೆ ಎರಡು ಕೈಗಳನ್ನು ತೊಳೆಯಿರಿ, ತಲೆಗಳನ್ನು ಸವರಿರಿ ಮತ್ತು ಎರಡು ಕಾಲುಗಳನ್ನು ಹರಡುಗಂಟಿನ ತನಕ ತೊಳೆಯಿರಿ. ನೀವು ಜನಾಬತ್ (ದೊಡ್ಡ ಅಶುದ್ಧಿ)ನಲ್ಲಿರುವವರಾದರೆ (ಸ್ನಾನ ಮಾಡಿ) ಶುದ್ಧರಾಗಿರಿ. ನೀವು ರೋಗಿಗಳಾಗಿದ್ದರೆ ಅಥವಾ ಯಾತ್ರಿಕರಾಗಿದ್ದರೆ ಅಥವಾ ನಿಮ್ಮಲ್ಲೊಬ್ಬನು ಮಲಮೂತ್ರ ವಿಸರ್ಜನೆ ಮಾಡಿ ಬರುವವನಾಗಿದ್ದರೆ ಅಥವಾ ನೀವು ಸ್ತ್ರೀಯರೊಂದಿಗೆ ಲೈಂಗಿಕ ಸಂಪರ್ಕ ಮಾಡಿದ ಸ್ಥಿತಿಯಲ್ಲಿದ್ದರೆ ಹಾಗೂ ನಿಮಗೆ ನೀರು ದೊರೆಯದಿದ್ದರೆ ಶುದ್ಧವಾದ ಭೂಮಿಯ ಮೇಲ್ಭಾಗವನ್ನು ಅರಸಿರಿ.(146) ತರುವಾಯ ಅದರಿಂದ ನಿಮ್ಮ ಮುಖ ಮತ್ತು ಕೈಗಳನ್ನು ಸವರಿರಿ. ಅಲ್ಲಾಹು ನಿಮಗೆ ತೊಂದರೆಕೊಡಲು ಇಚ್ಛಿಸುವುದಿಲ್ಲ. ಆದರೆ ಅವನು ನಿಮ್ಮನ್ನು ಶುದ್ಧೀಕರಿಸಲು ಮತ್ತು ತನ್ನ ಅನುಗ್ರಹವನ್ನು ನಿಮಗೆ ಪೂರ್ತೀಕರಿಸಿ ಕೊಡಲು ಇಚ್ಛಿಸುವನು. ನೀವು ಕೃತಜ್ಞತೆ ಸಲ್ಲಿಸುವವರಾಗಲೂಬಹುದು.
146. 4:43ರ ಟಿಪ್ಪಣಿಯನ್ನು ನೋಡಿರಿ.
(7) ‘ನಾವು ಆಲಿಸಿರುವೆವು ಮತ್ತು ಅನುಸರಿಸಿರುವೆವು’ ಎಂದು ನೀವು ಹೇಳಿದ ಸಂದರ್ಭ ಅಲ್ಲಾಹು ನಿಮಗೆ ನೀಡಿರುವ ಅನುಗ್ರಹವನ್ನು ಮತ್ತು ಅವನು ನಿಮ್ಮೊಂದಿಗೆ ಬಲಿಷ್ಠವಾದ ಕರಾರು ಪಡೆದಿರುವುದನ್ನೂ (ಸ್ಮರಿಸಿರಿ). ನೀವು ಅಲ್ಲಾಹುವನ್ನು ಭಯಪಡಿರಿ. ಖಂಡಿತವಾಗಿಯೂ ಅಲ್ಲಾಹು ಹೃದಯಗಳೊಳಗಿರುವುದನ್ನು ಅರಿಯುವವನಾಗಿರುವನು.
(8) ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವಿಗೋಸ್ಕರ ನೆಲೆಗೊಳ್ಳುವವರೂ, ನ್ಯಾಯಕ್ಕೆ ಸಾಕ್ಷಿವಹಿಸುವವರೂ ಆಗಿರಿ. ಒಂದು ಜನತೆಯೊಂದಿಗೆ ನಿಮಗಿರುವ ಆಕ್ರೋಶವು ನ್ಯಾಯ ಪಾಲಿಸದಿರಲು ನಿಮ್ಮನ್ನು ಪ್ರೇರೇಪಿಸದಿರಲಿ. ನ್ಯಾಯ ಪಾಲಿಸಿರಿ. ಅದು ಧರ್ಮನಿಷ್ಠೆಗೆ ಅತ್ಯಂತ ನಿಕಟವಾಗಿದೆ. ನೀವು ಅಲ್ಲಾಹುವನ್ನು ಭಯಪಡಿರಿ. ಖಂಡಿತವಾಗಿಯೂ ನೀವು ಮಾಡುತ್ತಿರುವುದನ್ನು ಅಲ್ಲಾಹು ಸೂಕ್ಷ್ಮವಾಗಿ ಅರಿಯುವವನಾಗಿರುವನು.
(9) ವಿಶ್ವಾಸವಿಟ್ಟವರು ಮತ್ತು ಸತ್ಕರ್ಮಗೈದವರು ಯಾರೋ ಅವರಿಗೆ ಅಲ್ಲಾಹು ಪಾಪಮುಕ್ತಿಯನ್ನು ಮತ್ತು ಮಹಾ ಪ್ರತಿಫಲವನ್ನು ವಾಗ್ದಾನ ಮಾಡಿರುವನು.
(10) ಅವಿಶ್ವಾಸವಿಟ್ಟವರು ಮತ್ತು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರು ಯಾರೋ ಅವರು ನರಕವಾಸಿಗಳಾಗಿರುವರು.
(11) ಓ ಸತ್ಯವಿಶ್ವಾಸಿಗಳೇ! ಒಂದು ಜನತೆಯು ನಿಮ್ಮ ವಿರುದ್ಧ (ದಾಳಿ ಮಾಡುವ ಸಲುವಾಗಿ) ತಮ್ಮ ಕೈಗಳನ್ನು ಚಾಚಲು ಮುಂದಾದಾಗ, ಅವರ ಕೈಗಳನ್ನು ನಿಮ್ಮಿಂದ ತಡೆಗಟ್ಟುವ ಮೂಲಕ ಅಲ್ಲಾಹು ನಿಮಗೆ ಮಾಡಿದ ಅನುಗ್ರಹವನ್ನು ಸ್ಮರಿಸಿರಿ. ನೀವು ಅಲ್ಲಾಹುವನ್ನು ಭಯಪಡಿರಿ. ಸತ್ಯವಿಶ್ವಾಸಿಗಳು ಭರವಸೆಯನ್ನಿಡುವುದು ಅಲ್ಲಾಹುವಿನ ಮೇಲೆಯೇ ಆಗಿರಲಿ.
(12) ಅಲ್ಲಾಹು ಇಸ್ರಾಈಲ್ ಸಂತತಿಗಳೊಂದಿಗೆ ಕರಾರನ್ನು ಪಡೆದಿರುವನು. ಅವರ ಪೈಕಿ ಹನ್ನೆರಡು ಜನರನ್ನು ನಾವು ನಾಯಕರನ್ನಾಗಿ ಮಾಡಿ ಕಳುಹಿಸಿರುವೆವು. ಅಲ್ಲಾಹು (ಅವರೊಂದಿಗೆ) ಹೇಳಿದನು: ‘ಖಂಡಿತವಾಗಿಯೂ ನಾನು ನಿಮ್ಮೊಂದಿಗಿರುವೆನು. ನೀವು ನಮಾಝ್ ಸಂಸ್ಥಾಪಿಸುವುದಾದರೆ, ಝಕಾತ್ ನೀಡುವುದಾದರೆ, ನನ್ನ ಸಂದೇಶವಾಹಕರಲ್ಲಿ ವಿಶ್ವಾಸವಿಟ್ಟರೆ, ಅವರಿಗೆ ಸಹಾಯಮಾಡಿದರೆ ಮತ್ತು ಅಲ್ಲಾಹುವಿಗೆ ಉತ್ತಮವಾದ ಸಾಲವನ್ನು ನೀಡಿದರೆ ಖಂಡಿತವಾಗಿಯೂ ನಾನು ನಿಮ್ಮಿಂದ ನಿಮ್ಮ ಪಾಪಗಳನ್ನು ಅಳಿಸುವೆನು ಮತ್ತು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಲ್ಲಿ ನಿಮ್ಮನ್ನು ಪ್ರವೇಶ ಮಾಡಿಸುವೆನು. ಆದರೆ ಅದರ ಬಳಿಕವೂ ನಿಮ್ಮ ಪೈಕಿ ಯಾರು ಅವಿಶ್ವಾಸವಿಡುವನೋ ಅವನು ನೇರಮಾರ್ಗದಿಂದ ವ್ಯತಿಚಲಿಸಿದವನಾಗಿರುವನು.
(13) ತರುವಾಯ ಅವರು ಕರಾರು ಉಲ್ಲಂಘಿಸಿದ ನಿಮಿತ್ತ ನಾವು ಅವರನ್ನು ಶಪಿಸಿದೆವು ಮತ್ತು ಅವರ ಹೃದಯಗಳನ್ನು ಕಠೋರಗೊಳಿಸಿದೆವು. ಅವರು ಗ್ರಂಥದ ವಾಕ್ಯಗಳನ್ನು ಅವುಗಳ ಸ್ಥಳದಿಂದ ಸ್ಥಾನಾಂತರಗೊಳಿಸುತ್ತಿರುವರು.(147) ಅವರಿಗೆ ಉಪದೇಶ ನೀಡಲಾಗಿರುವುದರಲ್ಲಿ ಒಂದಂಶವನ್ನು ಅವರು ಮರೆತುಬಿಟ್ಟರು. ಅವರ ಪೈಕಿ ಕೆಲವರ ಹೊರತು ಅವರು ನಡೆಸುತ್ತಿರುವ ವಂಚನೆಯನ್ನು ತಾವು (ಮುಂದೆಯೂ) ಕಾಣುತ್ತಲೇ ಇರುವಿರಿ. ತಾವು ಅವರನ್ನು ಮನ್ನಿಸಿರಿ ಮತ್ತು ಕಡೆಗಣಿಸಿರಿ. ಖಂಡಿತವಾಗಿಯೂ ಉತ್ತಮ ರೀತಿಯಲ್ಲಿ ವರ್ತಿಸುವವರನ್ನು ಅಲ್ಲಾಹು ಮೆಚ್ಚುವನು.
147. ಅಂದರೆ ಅವರು ಗ್ರಂಥದ ವಾಕ್ಯಗಳನ್ನು ಅಸಾಂದರ್ಭಿಕವಾಗಿ ಉದ್ಧರಿಸುವ ಮೂಲಕ ದುರ್ವ್ಯಾಖ್ಯಾನ ಮಾಡುತ್ತಿದ್ದರು ಅಥವಾ ವಾಕ್ಯರಚನೆಯಲ್ಲೇ ಬದಲಾವಣೆ ಮಾಡುತ್ತಿದ್ದರು.
(14) ‘ನಾವು ಕ್ರೈಸ್ತರು’ ಎಂದು ಹೇಳಿದವರಿಂದಲೂ ನಾವು ಕರಾರನ್ನು ಪಡೆದಿರುವೆವು. ತರುವಾಯ ಅವರಿಗೆ ಉಪದೇಶ ನೀಡಲಾಗಿರುವುದರಲ್ಲಿ ಒಂದಂಶವನ್ನು ಅವರು ಮರೆತುಬಿಟ್ಟರು. ಆದ್ದರಿಂದ ಅವರ ನಡುವೆ ಪುನರುತ್ಥಾನದ ದಿನದ ತನಕ ನಾವು ಶತ್ರುತ್ವವನ್ನೂ ವಿದ್ವೇಷವನ್ನೂ ಹಚ್ಚಿದೆವು. ಅವರು ಮಾಡುತ್ತಿರುವುದರ ಬಗ್ಗೆ ಅಲ್ಲಾಹು ತರುವಾಯ ಅವರಿಗೆ ತಿಳಿಸಿಕೊಡುವನು.
(15) ಓ ಗ್ರಂಥದವರೇ! ನೀವು ಗ್ರಂಥದಿಂದ ಮರೆಮರೆಮಾಚುತ್ತಿರುವ ಅನೇಕ ವಿಷಯಗಳನ್ನು ನಿಮಗೆ ಬಹಿರಂಗಪಡಿಸುತ್ತಾ ನಮ್ಮ ಸಂದೇಶವಾಹಕರು (ಇಗೋ) ನಿಮ್ಮ ಬಳಿಗೆ ಬಂದಿರುವರು. ಹೆಚ್ಚಿನವುಗಳನ್ನೂ ಅವರು ಕ್ಷಮಿಸುವರು. ನಿಮಗೆ ಅಲ್ಲಾಹುವಿನ ವತಿಯಿಂದ ಒಂದು ಪ್ರಕಾಶವೂ ಸ್ಪಷ್ಟವಾದ ಒಂದು ಗ್ರಂಥವೂ ಬಂದಿದೆ.
(16) ತನ್ನ ಸಂತೃಪ್ತಿಯನ್ನು ಅರಸುತ್ತಿರುವವರನ್ನು ಅಲ್ಲಾಹು ಅದರ ಮೂಲಕ ಶಾಂತಿಯ ಹಾದಿಗಳೆಡೆಗೆ ಮುನ್ನಡೆಸುವನು. ಅವನು ಅವರನ್ನು ತನ್ನ ಅಪ್ಪಣೆಯೊಂದಿಗೆ ಅಂಧಕಾರಗಳಿಂದ ಪ್ರಕಾಶದೆಡೆಗೆ ಹೊರತರುವನು ಮತ್ತು ಅವರನ್ನು ನೇರವಾದ ಮಾರ್ಗದೆಡೆಗೆ ಮುನ್ನಡೆಸುವನು.
(17) ‘ಮರ್ಯಮ್‍ರ ಪುತ್ರ ಮಸೀಹನೇ ಅಲ್ಲಾಹು’(148) ಎಂದು ಹೇಳಿದವರು ಖಂಡಿತವಾಗಿಯೂ ಅವಿಶ್ವಾಸಿಗಳಾಗಿರುವರು. (ಓ ಪ್ರವಾದಿಯವರೇ!) ತಾವು ಹೇಳಿರಿ: ‘ಮರ್ಯಮ್‍ರ ಪುತ್ರ ಮಸೀಹರನ್ನು, ಅವರ ತಾಯಿಯನ್ನು ಮತ್ತು ಭೂಮಿಯಲ್ಲಿರುವ ಸರ್ವರನ್ನೂ ಅಲ್ಲಾಹು ನಾಶ ಮಾಡಲು ಬಯಸಿದರೆ ಅವನ ಯಾವುದೇ ನಿರ್ಧಾರದಲ್ಲಿ ಪ್ರಭಾವ ಬೀರಲು ಯಾರಿಗೆ ಸಾಧ್ಯವಿದೆ?’ ಆಕಾಶಗಳಲ್ಲಿ, ಭೂಮಿಯಲ್ಲಿ ಮತ್ತು ಅವೆರಡರ ಮಧ್ಯೆಯಿರುವ ಎಲ್ಲದರ ಆಧಿಪತ್ಯ ಅಲ್ಲಾಹುವಿಗಿರುವುದಾಗಿದೆ. ತಾನಿಚ್ಛಿಸುವುದನ್ನು ಅವನು ಸೃಷ್ಟಿಸುವನು. ಅಲ್ಲಾಹು ಸರ್ವ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.
148. ಯೇಸು ದೇವಪುತ್ರರಾಗಿದ್ದಾರೆ ಎಂಬ ವಾದವನ್ನು ವಿಸ್ತಾರಗೊಳಿಸಿದರೆ ಯೇಸುವೇ ಸ್ವತಃ ದೇವರಾಗಿದ್ದಾರೆ ಎಂಬ ತನಕ ಅದು ತಲುಪುತ್ತದೆ. ಬಹುಸಂಖ್ಯಾತ ಕ್ರೈಸ್ತರ ಅಭಿಪ್ರಾಯ ಪ್ರಕಾರ ತಂದೆ, ಪುತ್ರ ಮತ್ತು ಪವಿತ್ರಾತ್ಮ ಒಂದೇ ಅಸ್ತಿತ್ವದ ವಿವಿಧ ರೂಪಗಳಾಗಿದ್ದಾರೆ. ಕ್ರೈಸ್ತರು ಯೇಸುವನ್ನು ಕರ್ತ, ದೇವರು, ಪ್ರಭು ಎಂಬಿತ್ಯಾದಿ ಹೆಸರುಗಳಲ್ಲಿ ಕರೆಯುತ್ತಿರುವರು.
(18) ಯಹೂದರು ಮತ್ತು ಕ್ರೈಸ್ತರು ಹೇಳಿದರು: ‘ನಾವು ಅಲ್ಲಾಹುವಿನ ಮಕ್ಕಳಾಗಿರುವೆವು ಮತ್ತು ಅವನಿಗೆ ಅತ್ಯಂತ ಪ್ರೀತಿಪಾತ್ರರಾಗಿರುವೆವು.’ (ಓ ಪ್ರವಾದಿಯವರೇ!) ತಾವು ಹೇಳಿರಿ: ‘ಮತ್ತೇಕೆ ನಿಮ್ಮ ಪಾಪಗಳಿಗಾಗಿ ಅವನು ನಿಮ್ಮನ್ನು ಶಿಕ್ಷಿಸುವುದು?’ ಅಲ್ಲ, ನೀವು ಕೇವಲ ಅವನ ಸೃಷ್ಟಿಗಳಲ್ಲಿ ಸೇರಿದ ಮನುಷ್ಯರು ಮಾತ್ರವಾಗಿರುವಿರಿ. ತಾನಿಚ್ಛಿಸಿದವರಿಗೆ ಅವನು ಕ್ಷಮಿಸುವನು ಮತ್ತು ತಾನಿಚ್ಛಿಸಿದವರನ್ನು ಅವನು ಶಿಕ್ಷಿಸುವನು. ಆಕಾಶಗಳ, ಭೂಮಿಯ ಮತ್ತು ಅವೆರಡರ ಮಧ್ಯೆಯಿರುವ ಎಲ್ಲದರ ಆಧಿಪತ್ಯವು ಅಲ್ಲಾಹುವಿಗಿರುವುದಾಗಿದೆ. ಮರಳುವಿಕೆಯು ಅವನ ಬಳಿಗೇ ಆಗಿದೆ.
(19) ಓ ಗ್ರಂಥದವರೇ! ಸಂದೇಶವಾಹಕರು ಬರದಂತಹ ಒಂದು ಮಧ್ಯಾವಧಿಯು ಕಳೆದ ಬಳಿಕ ನಿಮಗೆ (ವಾಸ್ತವಿಕತೆಗಳನ್ನು) ವಿವರಿಸಿಕೊಡುತ್ತಾ ನಮ್ಮ ಸಂದೇಶವಾಹಕರು ನಿಮ್ಮ ಬಳಿಗೆ ಬಂದಿರುವರು. ಇದು ‘ಒಬ್ಬ ಶುಭವಾರ್ತೆ ತಿಳಿಸುವವನಾಗಲಿ ಮುನ್ನೆಚ್ಚರಿಕೆ ನೀಡುವವನಾಗಲಿ ನಮ್ಮ ಬಳಿಗೆ ಬಂದಿರಲಿಲ್ಲ’ ಎಂದು ನೀವು ಹೇಳಬಾರದೆಂದಾಗಿದೆ. ಈಗ ನಿಮಗೆ ಶುಭವಾರ್ತೆ ತಿಳಿಸುವ ಮತ್ತು ಮುನ್ನೆಚ್ಚರಿಕೆ ನೀಡುವ ವ್ಯಕ್ತಿ (ಇಗೋ) ನಿಮ್ಮ ಬಳಿಗೆ ಬಂದಿರುವರು. ಅಲ್ಲಾಹು ಸಕಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.
(20) ಮೂಸಾ ತನ್ನ ಜನತೆಯೊಂದಿಗೆ ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ): ‘ಓ ನನ್ನ ಜನರೇ! ನಿಮ್ಮಲ್ಲಿ ಪ್ರವಾದಿಗಳನ್ನು ಕಳುಹಿಸಿದಾಗಲೂ, ನಿಮ್ಮನ್ನು ಅರಸರನ್ನಾಗಿ ಮಾಡಿದಾಗಲೂ ಮತ್ತು ಮನುಷ್ಯರ ಪೈಕಿ ಯಾರಿಗೂ ನೀಡಿರದಂತಹ ಹಲವನ್ನೂ ನಿಮಗೆ ನೀಡಿದಾಗಲೂ ಅಲ್ಲಾಹು ನಿಮಗೆ ದಯಪಾಲಿಸಿದ ಅನುಗ್ರಹಗಳನ್ನು ಸ್ಮರಿಸಿರಿ.’
(21) ‘ಓ ನನ್ನ ಜನರೇ! ಅಲ್ಲಾಹು ನಿಮಗೆ ವಾಗ್ದಾನ ಮಾಡಿರುವ ಪವಿತ್ರ ಭೂಮಿಯನ್ನು ಪ್ರವೇಶಿಸಿರಿ.(149) ನೀವು ಹಿಂದಕ್ಕೆ ಮರಳಿಹೋಗದಿರಿ. ಅನ್ಯಥಾ ನೀವು ನಷ್ಟ ಹೊಂದಿದವರಾಗುವಿರಿ.’
149. ಯೂಸುಫ್(ಅ) ರವರು ಈಜಿಪ್ಟಿನಲ್ಲಿ ತಮ್ಮ ನೆಲೆಯನ್ನು ಭದ್ರಪಡಿಸುವುದರೊಂದಿಗೆ ಇಸ್ರಾಈಲರು ಅಲ್ಲಿನ ಪೌರರಾದರು. ಆದರೆ ತದನಂತರ ಫರೋವ ಚಕ್ರವರ್ತಿಗಳ ಕೆಳಗೆ ಅವರು ಕ್ರೂರವಾದ ಗುಲಾಮಗಿರಿಯನ್ನು ಅನುಭವಿಸಬೇಕಾಗಿ ಬಂತು. ಪವಿತ್ರ ಭೂಮಿಯಲ್ಲಿ (ಪ್ಯಾಲಸ್ತೀನ್‍ನಲ್ಲಿ) ಅವರನ್ನು ವಾಸ ಮಾಡಿಸುವೆನೆಂದು ಅಲ್ಲಾಹು ಅವರಿಗೆ ಪ್ರವಾದಿಗಳ ಮೂಲಕ ವಾಗ್ದಾನ ಮಾಡಿದ್ದನು. ಅಲ್ಲಾಹು ಒಂದು ಜನಸಮೂಹವನ್ನು ಒಂದು ಸ್ಥಳದಲ್ಲಿ ನೆಲೆಗೊಳಿಸುವನು ಎಂದರೆ ಅದರರ್ಥ ಅವನು ಅಲ್ಲಿನ ನಿವಾಸಿಗಳನ್ನು ಒಕ್ಕಲೆಬ್ಬಿಸಿ ಸ್ಥಳ ಖಾಲಿ ಮಾಡಿಸಿ ಅದನ್ನು ಇವರಿಗೆ ನೀಡುವನು ಎಂದರ್ಥವಲ್ಲ. ಶಿಸ್ತು ಮತ್ತು ಶೌರ್ಯದೊಂದಿಗೆ ಮುಂದಡಿಯಿಟ್ಟು, ಅಡೆತಡೆಗಳನ್ನು ಬೇಧಿಸಿ ಅಧಿವಾಸ ಮಾಡುವವರನ್ನು ಅಲ್ಲಾಹು ಅನುಗ್ರಹಿಸುವನು. ಇದು ಅಲ್ಲಾಹುವಿನ ಕಾರ್ಯವಿಧಾನವಾಗಿದೆ. ಅಲ್ಲಾಹನ ಕಾರ್ಯವಿಧಾನದ ಬಗ್ಗೆ ಅವರಿಗಿದ್ದ ವಿಕಲ ಕಲ್ಪನೆ ಮತ್ತು ಹೇಡಿತನವು ಜೊತೆಗೂಡಿದಾಗ ಇಸ್ರಾಈಲರು ವಿಧೇಯತೆಯೆಂಬುದೇ ಇಲ್ಲದ ಒಂದು ಜನತೆಯಾಗಿ ಮಾರ್ಪಟ್ಟರು. ಸೀನಾ ಮರುಭೂಮಿಯಲ್ಲಿ ನಲ್ವತ್ತು ವರ್ಷಗಳ ಕಾಲ ಉನ್ಮಾದಿತರಾಗಿ ಅಲೆದಾಡುವ ಶಿಕ್ಷೆಯನ್ನು ಅಲ್ಲಾಹು ಅವರಿಗೆ ನೀಡಿದನು. ಈ ಮಧ್ಯೆ ಮೂಸಾ(ಅ) ಮತ್ತು ಹಾರೂನ್(ಅ) ವರು ಮರಣಹೊಂದಿದರು. ನಂತರ ಯೂಶಅ್(ಅ) ರವರ ಕಾಲದಲ್ಲಿ ಇಸ್ರಾಈಲರಿಗೆ ವಾಗ್ದಾನ ಮಾಡಲಾದ ಭೂಮಿಯಲ್ಲಿ ಅಧಿವಾಸ ಮಾಡಲು ಸಾಧ್ಯವಾಯಿತು.
(22) ಅವರು ಹೇಳಿದರು: ‘ಓ ಮೂಸಾ! ಅಲ್ಲಿ ಪರಾಕ್ರಮಿಗಳಾದ ಜನರಿರುವರು. ಅವರು ಅಲ್ಲಿಂದ ಹೊರಹೋಗುವವರೆಗೆ ನಾವು ಅದನ್ನು ಎಂದಿಗೂ ಪ್ರವೇಶಿಸಲಾರೆವು. ಅವರು ಅಲ್ಲಿಂದ ನಿರ್ಗಮಿಸಿದರೆ ಖಂಡಿತವಾಗಿಯೂ ನಾವು (ಅದನ್ನು) ಪ್ರವೇಶಿಸುವೆವು.’
(23) ಭಯಭಕ್ತಿಯಿರುವವರ ಪೈಕಿ ಅಲ್ಲಾಹು ಅನುಗ್ರಹಿಸಿದ ಇಬ್ಬರು ಹೇಳಿದರು: ‘ನೀವು ದ್ವಾರವನ್ನು ದಾಟಿ ಅವರೆಡೆಗೆ ಪ್ರವೇಶಿಸಿರಿ. ನೀವೇನಾದರೂ ಪ್ರವೇಶಿಸುವುದಾದರೆ ಖಂಡಿತವಾಗಿಯೂ ನೀವೇ ಜಯಶಾಲಿಗಳಾಗುವಿರಿ! ನೀವು ವಿಶ್ವಾಸಿಗಳಾಗಿದ್ದರೆ ಅಲ್ಲಾಹುವಿನ ಮೇಲೆ ಭರವಸೆಯನ್ನಿಡಿರಿ.’
(24) ಅವರು ಹೇಳಿದರು: ‘ಓ ಮೂಸಾ! ಅವರು ಅಲ್ಲಿರುವ ತನಕ ನಾವೆಂದೂ ಅದನ್ನು ಪ್ರವೇಶಿಸಲಾರೆವು. ಆದ್ದರಿಂದ ತಾವು ಮತ್ತು ತಮ್ಮ ರಬ್ ಹೋಗಿ ಯುದ್ಧ ಮಾಡಿರಿ. ನಾವು ಇಲ್ಲೇ ಕುಳಿತುಕೊಂಡಿರುವೆವು.’
(25) ಅವರು (ಮೂಸಾ) ಹೇಳಿದರು: ‘ಓ ನನ್ನ ರಬ್ ನನ್ನ ಮತ್ತು ನನ್ನ ಸಹೋದರನ ವಿಷಯವಲ್ಲದೇ ಬೇರೇನೂ ನನ್ನ ಅಧೀನದಲ್ಲಿಲ್ಲ. ಆದ್ದರಿಂದ ನಮ್ಮನ್ನು ಮತ್ತು ಈ ಧಿಕ್ಕಾರಿಗಳಾದ ಜನರನ್ನು ಪರಸ್ಪರ ಬೇರ್ಪಡಿಸು.’
(26) ಅವನು (ಅಲ್ಲಾಹು) ಹೇಳಿದನು: ‘ಖಂಡಿತವಾಗಿಯೂ ಆ ಭೂಮಿಯು ನಲ್ವತ್ತು ವರ್ಷಗಳ ಕಾಲ ಅವರಿಗೆ ನಿಷಿದ್ಧವಾಗಿರುವುದು. (ಅದುವರೆಗೆ) ಅವರು ಭೂಮಿಯಲ್ಲಿ ದಿಗ್ಭ್ರಾಂತರಾಗಿ ಅಲೆದಾಡುವರು. ಆದ್ದರಿಂದ ಆ ಧಿಕ್ಕಾರಿಗಳಾದ ಜನರ ನಿಮಿತ್ತ ತಾವು ದುಃಖಿಸದಿರಿ.’
(27) (ಓ ಪ್ರವಾದಿಯವರೇ!) ಅವರಿಗೆ ಆದಮ್‍ರ ಇಬ್ಬರು ಮಕ್ಕಳ ವೃತ್ತಾಂತವನ್ನು ಸತ್ಯಸಂಧವಾಗಿ ಓದಿ ಕೊಡಿರಿ. ಅವರಿಬ್ಬರೂ ಒಂದೊಂದು ಬಲಿಯನ್ನು ಅರ್ಪಿಸಿದ ಸಂದರ್ಭ. ಒಬ್ಬನಿಂದ ಅದು ಸ್ವೀಕರಿಸಲ್ಪಟ್ಟಿತು. ಆದರೆ ಇನ್ನೊಬ್ಬನಿಂದ ಸ್ವೀಕರಿಸಲ್ಪಡಲಿಲ್ಲ. ಅವನು ಹೇಳಿದನು: ‘ಖಂಡಿತವಾಗಿಯೂ ನಾನು ನಿನ್ನನ್ನು ಕೊಲ್ಲುವೆನು.’ ಅವನು (ಬಲಿ ಸ್ವೀಕರಿಸಲ್ಪಟ್ಟವನು) ಹೇಳಿದನು: ‘ಅಲ್ಲಾಹು ಸ್ವೀಕರಿಸುವುದು ಭಯಭಕ್ತಿಯುಳ್ಳವರಿಂದ ಮಾತ್ರವಾಗಿದೆ.’
(28) ‘ನನ್ನನ್ನು ಕೊಲ್ಲುವುದಕ್ಕಾಗಿ ನೀನು ನನ್ನೆಡೆಗೆ ನಿನ್ನ ಕೈಯನ್ನು ಚಾಚಿದರೂ ನಿನ್ನನ್ನು ಕೊಲ್ಲುವುದಕ್ಕಾಗಿ ನಾನು ನಿನ್ನೆಡೆಗೆ ನನ್ನ ಕೈಯನ್ನು ಚಾಚಲಾರೆ. ಖಂಡಿತವಾಗಿಯೂ ನಾನು ಸರ್ವಲೋಕಗಳ ರಬ್ಬಾದ ಅಲ್ಲಾಹುವನ್ನು ಭಯಪಡುತ್ತಿರುವೆನು.’
(29) ‘ನನ್ನ ಪಾಪಕ್ಕೆ ಮತ್ತು ನಿನ್ನ ಪಾಪಕ್ಕೆ ನೀನು ಅರ್ಹನಾಗಿ, ತರುವಾಯ ನೀನು ನರಕವಾಸಿಗಳ ಪೈಕಿ ಸೇರಿದವನಾಗಬೇಕೆಂದು ನಾನು ಬಯಸುತ್ತಿರುವೆನು. ಅದು ಅಕ್ರಮಿಗಳಿಗಿರುವ ಪ್ರತಿಫಲವಾಗಿದೆ.’
(30) ಕೊನೆಗೆ ಅವನ ಸಹೋದರನನ್ನು ಕೊಲ್ಲುವಂತೆ ಅವನ ಮನಸ್ಸು ಅವನನ್ನು ಪ್ರೇರೇಪಿಸಿತು. ಅವನು ಅವನನ್ನು ಕೊಂದನು ಮತ್ತು ನಷ್ಟ ಹೊಂದಿದವರಲ್ಲಿ ಸೇರಿದವನಾದನು.
(31) ಆಗ ಅವನ ಸಹೋದರನ ಕಳೇಬರವನ್ನು ಮರೆಮಾಚುವುದು ಹೇಗೆಂದು ಅವನಿಗೆ ತೋರಿಸಿಕೊಡುವ ಸಲುವಾಗಿ ನೆಲವನ್ನು ಅಗೆಯುವ ಒಂದು ಕಾಗೆಯನ್ನು ಅಲ್ಲಾಹು ಕಳುಹಿಸಿದನು. ಅವನು ಹೇಳಿದನು: ‘ಅಯ್ಯೋ! ನನ್ನ ಸಹೋದರನ ಕಳೇಬರವನ್ನು ಮರೆಮಾಚಲು ಈ ಕಾಗೆಯಂತಾಗಲಾದರೂ ನನಗೆ ಸಾಧ್ಯವಾಗಲಿಲ್ಲವಲ್ಲ!’ ಹೀಗೆ ಅವನು ವಿಷಾದಿಸುವವರ ಪೈಕಿ ಸೇರಿದವನಾದನು.
(32) ತನ್ನಿಮಿತ್ತ ನಾವು ಇಸ್ರಾಈಲ್ ಸಂತತಿಗಳಿಗೆ ಈ ರೀತಿ ವಿಧಿ ನೀಡಿದೆವು: ಒಬ್ಬನನ್ನು ಕೊಂದಿರುವುದಕ್ಕೆ ಪ್ರತಿಯಾಗಿ ಅಥವಾ ಭೂಮಿಯಲ್ಲಿ ಕ್ಷೋಭೆ ಮಾಡಿರುವುದಕ್ಕಾಗಿ ವಿನಾ ಒಬ್ಬ ವ್ಯಕ್ತಿಯನ್ನು ಯಾರಾದರೂ ಹತ್ಯೆ ಮಾಡಿದರೆ ಅದು ಸಂಪೂರ್ಣ ಮನುಷ್ಯಕುಲವನ್ನು ಹತ್ಯೆ ಮಾಡಿರುವುದಕ್ಕೆ ಸಮಾನವಾಗಿದೆ. ಒಬ್ಬ ವ್ಯಕ್ತಿಯ ಜೀವವನ್ನು ಯಾರಾದರೂ ಉಳಿಸಿದರೆ ಅದು ಸಂಪೂರ್ಣ ಮನುಷ್ಯಕುಲದ ಜೀವವನ್ನು ಉಳಿಸಿರುವುದಕ್ಕೆ ಸಮಾನವಾಗಿದೆ. ನಮ್ಮ ಸಂದೇಶವಾಹಕರು ಸ್ಪಷ್ಟವಾದ ಪುರಾವೆಗಳೊಂದಿಗೆ ಅವರ (ಇಸ್ರಾಈಲರ) ಬಳಿಗೆ ಹೋಗಿದ್ದರು. ಆ ಬಳಿಕವೂ ಅವರ ಪೈಕಿ ಅನೇಕ ಮಂದಿ ಭೂಮಿಯಲ್ಲಿ ಅತಿಕ್ರಮವೆಸಗುವವರೇ ಆಗಿದ್ದರು.
(33) ಅಲ್ಲಾಹು ಮತ್ತು ಅವನ ಸಂದೇಶವಾಹಕರ ವಿರುದ್ಧ ಹೋರಾಡುವವರು ಮತ್ತು ಭೂಮಿಯಲ್ಲಿ ಕ್ಷೋಭೆ ಮಾಡಲು ಯತ್ನಿಸುವವರು ಯಾರೋ ಅವರಿಗಿರುವ ಪ್ರತಿಫಲವು ಅವರನ್ನು ವಧಿಸಲಾಗುವುದು ಅಥವಾ ಶಿಲುಬೆಗೇರಿಸಲಾಗುವುದು ಅಥವಾ ಅವರ ಕೈಕಾಲುಗಳನ್ನು ವಿರುದ್ಧ ದಿಕ್ಕಿನಿಂದ ಕತ್ತರಿಸಲಾಗುವುದು ಅಥವಾ ಅವರನ್ನು ಗಡಿಪಾರುಗೊಳಿಸಲಾಗುವುದು ಎಂಬುದು ಮಾತ್ರವಾಗಿದೆ. ಅದು ಅವರಿಗೆ ಇಹಲೋಕದಲ್ಲಿರುವ ಅಪಮಾನವಾಗಿದೆ. ಪರಲೋಕದಲ್ಲಿ ಅವರಿಗೆ ಕಠೋರವಾದ ಶಿಕ್ಷೆಯಿದೆ.
(34) ಆದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲು ನಿಮಗೆ ಸಾಧ್ಯವಾಗುವುದಕ್ಕೆ ಮುಂಚಿತವಾಗಿ ಪಶ್ಚಾತ್ತಾಪಪಟ್ಟು ಮರಳಿದವರಾರೋ ಅವರು ಇದರಿಂದ ಹೊರತಾಗಿರುವರು. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನೆಂಬುದನ್ನು ಅರಿತುಕೊಳ್ಳಿರಿ.
(35) ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು ಅವನೆಡೆಗೆ ಸಮೀಪಗೊಳಿಸುವ ಮಾರ್ಗವನ್ನು ಹುಡುಕಿರಿ(150) ಹಾಗೂ ಅವನ ಮಾರ್ಗದಲ್ಲಿ ಹೋರಾಡಿರಿ. (ತನ್ಮೂಲಕ) ನಿಮಗೆ ಯಶಸ್ವಿಯಾಗಲು ಸಾಧ್ಯವಾಗಬಹುದು.
150. ಅಲ್ಲಾಹು ನಿರ್ದೇಶಿಸಿದ ಮಾತು ಹಾಗೂ ಕರ್ಮಗಳಾಗಿವೆ ಅಲ್ಲಾಹುವಿನೆಡೆಗೆ ಸಮೀಪಗೊಳ್ಳಲಿರುವ ಮಾರ್ಗ. ಅದು ಮಧ್ಯವರ್ತಿಗಳೋ ಶಿಫಾರಸುಗಾರರೋ ಅಲ್ಲ.
(36) ಪುನರುತ್ಥಾನ ದಿನದ ಶಿಕ್ಷೆಯಿಂದ ವಿಮುಕ್ತಿ ಪಡೆಯುವ ಸಲುವಾಗಿ ಪ್ರಾಯಶ್ಚಿತ್ತ ನೀಡಲು ಸತ್ಯನಿಷೇಧಿಗಳ ವಶದಲ್ಲಿ ಭೂಮಿಯಲ್ಲಿರುವುದೆಲ್ಲವೂ ಮತ್ತು ಅದರಷ್ಟೇ ಬೇರೆಯೂ ಇದ್ದರೂ ಅವರಿಂದ ಅದನ್ನು ಸ್ವೀಕರಿಸಲಾಗದು. ಅವರಿಗೆ ಯಾತನಾಮಯ ಶಿಕ್ಷೆಯಿರುವುದು.
(37) ಅವರು ನರಕದಿಂದ ಹೊರಹೋಗಲು ಬಯಸುವರು. ಆದರೆ ಅದರಿಂದ ಹೊರಹೋಗಲು ಅವರಿಗೆಂದೂ ಸಾಧ್ಯವಾಗಲಾರದು. ಅವರಿಗೆ ಶಾಶ್ವತವಾದ ನೆಲೆನಿಲ್ಲುವ ಶಿಕ್ಷೆಯಿದೆ.
(38) ಕದಿಯುವವನು ಮತ್ತು ಕದಿಯುವವಳು (ಯಾರೋ) ಅವರಿಬ್ಬರ ಕೈಗಳನ್ನು ಕಡಿಯಿರಿ. ಅದು ಅವರು ಗಳಿಸಿರುವುದಕ್ಕಿರುವ ಪ್ರತಿಫಲವೂ, ಅಲ್ಲಾಹುವಿನ ವತಿಯ ಮಾದರಿಯೋಗ್ಯ ಶಿಕ್ಷೆಯೂ ಆಗಿದೆ. ಅಲ್ಲಾಹು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.
(39) ಆದರೆ ಅಕ್ರಮವೆಸಗಿದ ನಂತರ ಯಾರಾದರೂ ಪಶ್ಚಾತ್ತಾಪಪಟ್ಟು ನಿಲುವನ್ನು ಉತ್ತಮಗೊಳಿಸುವುದಾದರೆ ಖಂಡಿತವಾಗಿಯೂ ಅಲ್ಲಾಹು ಅವನ ಪಶ್ಚಾತ್ತಾಪವನ್ನು ಸ್ವೀಕರಿಸುವನು. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(40) ಆಕಾಶಗಳ ಮತ್ತು ಭೂಮಿಯ ಆಧಿಪತ್ಯವು ಅಲ್ಲಾಹುವಿಗೆ ಸೇರಿದ್ದಾಗಿದೆಯೆಂದು ತಾವು ಅರಿತಿಲ್ಲವೇ? ಅವನು ತಾನಿಚ್ಛಿಸುವವರನ್ನು ಶಿಕ್ಷಿಸುವನು ಮತ್ತು ತಾನಿಚ್ಛಿಸುವವರನ್ನು ಕ್ಷಮಿಸುವನು. ಅಲ್ಲಾಹು ಸಕಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.
(41) ಓ ಸಂದೇಶವಾಹಕರೇ! ಸತ್ಯನಿಷೇಧದೆಡೆಗೆ ಧಾವಂತದಿಂದ ಮುನ್ನುಗ್ಗುವವರು (ಅವರ ಕೃತ್ಯಗಳು) ತಮ್ಮನ್ನು ದುಃಖಕ್ಕೀಡು ಮಾಡದಿರಲಿ. ಅವರು ವಿಶ್ವಾಸವು ತಮ್ಮ ಹೃದಯಕ್ಕೆ ಇಳಿಯದೆ ನಾವು ವಿಶ್ವಾಸವಿಟ್ಟಿರುವೆವು ಎಂದು ಬಾಯಿಯ ಮೂಲಕ ಹೇಳುವವರಲ್ಲಿ ಸೇರಿದವರಾಗಿರುವರು ಮತ್ತು ಯಹೂದರಲ್ಲಿ ಸೇರಿದವರಾಗಿರುವರು. ಅವರು ಸುಳ್ಳನ್ನು ಕಿವಿಗೊಟ್ಟು ಆಲಿಸುವವರೂ ತಮ್ಮ ಬಳಿಗೆ ಬರದಂತಹ ಇತರ ಜನರ ಮಾತುಗಳನ್ನು ಕಿವಿಗೊಟ್ಟು ಆಲಿಸುವವರೂ ಆಗಿರುವರು. ಅವರು ಗ್ರಂಥದ ವಾಕ್ಯಗಳನ್ನು ಅವುಗಳ ಸಂದರ್ಭಗಳಿಂದ ಸ್ಥಾನಾಂತರಗೊಳಿಸುತ್ತಿರುವರು. ಅವರು ಹೇಳುವರು: ‘ನಿಮಗೆ (ಪ್ರವಾದಿಯವರ ಬಳಿ) ಇದೇ ತೀರ್ಪು ನೀಡಲಾಗುವುದಾದರೆ ಅದನ್ನು ಒಪ್ಪಿಕೊಳ್ಳಿರಿ. ಇದೇ ತೀರ್ಪು ನೀಡಲಾಗುವುದಿಲ್ಲವೆಂದಾದರೆ ನೀವು ಎಚ್ಚರ ವಹಿಸಿರಿ.’ ಅಲ್ಲಾಹು ಯಾರನ್ನಾದರೂ ನಾಶ ಮಾಡಲು ಇಚ್ಛಿಸುವುದಾದರೆ ಅವನಿಗೋಸ್ಕರ ಅಲ್ಲಾಹುವಿನಿಂದ ಏನನ್ನಾದರೂ ಅಧೀನಗೊಳಿಸಲು ತಮಗೆಂದೂ ಸಾಧ್ಯವಾಗದು. ಅಲ್ಲಾಹು ಅಂತಹವರ ಹೃದಯಗಳನ್ನು ಶುದ್ಧೀಕರಿಸಲು ಇಚ್ಛಿಸಿಲ್ಲ. ಅವರಿಗೆ ಇಹಲೋಕದಲ್ಲಿ ಅಪಮಾನವಿದೆ ಮತ್ತು ಪರಲೋಕದಲ್ಲಿ ಕಠೋರವಾದ ಶಿಕ್ಷೆಯಿದೆ.
(42) ಅವರು ಸುಳ್ಳನ್ನು ಕಿವಿಗೊಟ್ಟು ಆಲಿಸುವವರೂ ನಿಷಿದ್ಧವಾದ ಸಂಪಾದನೆಯನ್ನು ಯಥೇಷ್ಟವಾಗಿ ತಿನ್ನುವವರೂ ಆಗಿರುವರು. ಅವರು ತಮ್ಮ ಬಳಿಗೆ ಬರುವುದಾದರೆ ಅವರ ನಡುವೆ ತೀರ್ಪು ನೀಡಿರಿ ಅಥವಾ ಅವರನ್ನು ಅವಗಣಿಸಿರಿ. ತಾವು ಅವರನ್ನು ಅವಗಣಿಸುವುದಾದರೆ ಅವರು ತಮಗೆ ಯಾವುದೇ ಹಾನಿಯನ್ನೂ ಮಾಡಲಾರರು. ಆದರೆ ತಾವು ತೀರ್ಪು ನೀಡುವುದಾದರೆ ಅವರ ನಡುವೆ ನ್ಯಾಯಬದ್ಧ ತೀರ್ಪನ್ನೇ ನೀಡಿರಿ. ನ್ಯಾಯ ಪಾಲಿಸುವವರನ್ನು ಅಲ್ಲಾಹು ಖಂಡಿತವಾಗಿಯೂ ಮೆಚ್ಚುವನು.
(43) ಅವರು ತಮ್ಮನ್ನು ತೀರ್ಪುಗಾರರನ್ನಾಗಿ ಮಾಡುವುದಾದರೂ ಹೇಗೆ? ಅವರ ಬಳಿ ತೌರಾತ್ ಇದೆ. ಅದರಲ್ಲಿ ಅಲ್ಲಾಹುವಿನ ವಿಧಿ ನಿಷೇಧಗಳಿವೆ. ತರುವಾಯ ಅದರ ಬಳಿಕವೂ ಅವರು ವಿಮುಖರಾಗುತ್ತಿರುವರು. ವಾಸ್ತವಿಕವಾಗಿ ಅವರು ವಿಶ್ವಾಸಿಗಳೇ ಅಲ್ಲ.
(44) ಖಂಡಿತವಾಗಿಯೂ ನಾವು ತೌರಾತನ್ನು ಅವತೀರ್ಣಗೊಳಿಸಿರುವೆವು. ಅದರಲ್ಲಿ ಮಾರ್ಗದರ್ಶನ ಮತ್ತು ಪ್ರಕಾಶವಿತ್ತು. (ಅಲ್ಲಾಹುವಿಗೆ) ಶರಣಾಗತರಾದ ಪ್ರವಾದಿಗಳು ಅದಕ್ಕನುಗುಣವಾಗಿ ಯಹೂದರಿಗೆ ತೀರ್ಪು ನೀಡುತ್ತಿದ್ದರು. ಸಜ್ಜನರೂ, ಧರ್ಮವಿದ್ವಾಂಸರೂ (ಹಾಗೆಯೇ ತೀರ್ಪು ನೀಡುತ್ತಿದ್ದರು). ಯಾಕೆಂದರೆ ಅಲ್ಲಾಹುವಿನ ಗ್ರಂಥದ ಸಂರಕ್ಷಣೆಯನ್ನು ಅವರಿಗೆ ವಹಿಸಿಕೊಡಲಾಗಿತ್ತು. ಅವರು ಅದಕ್ಕೆ ಸಾಕ್ಷಿಗಳೂ ಆಗಿದ್ದರು. ಆದ್ದರಿಂದ ನೀವು ಜನರನ್ನು ಭಯಪಡದಿರಿ. ನನ್ನನ್ನು ಮಾತ್ರ ಭಯಪಡಿರಿ. ನನ್ನ ಸೂಕ್ತಿಗಳನ್ನು ನೀವು ತುಚ್ಛಬೆಲೆಗೆ ಮಾರಾಟ ಮಾಡದಿರಿ. ಅಲ್ಲಾಹು ಅವತೀರ್ಣಗೊಳಿಸಿರುವುದಕ್ಕೆ ಅನುಗುಣವಾಗಿ ಯಾರು ತೀರ್ಪು ನೀಡುವುದಿಲ್ಲವೋ ಅವರೇ ಅವಿಶ್ವಾಸಿಗಳಾಗಿರುವರು.
(45) ಪ್ರಾಣಕ್ಕೆ ಪ್ರಾಣ, ಕಣ್ಣಿಗೆ ಕಣ್ಣು, ಮೂಗಿಗೆ ಮೂಗು, ಕಿವಿಗೆ ಕಿವಿ, ಹಲ್ಲಿಗೆ ಹಲ್ಲು, ಗಾಯಗಳಿಗೆ ತತ್ಸಮಾನವಾದ ಪ್ರತೀಕಾರ, ಈ ರೀತಿ ನಾವು ಅವರಿಗೆ ಅದರಲ್ಲಿ (ತೌರಾತ್‍ನಲ್ಲಿ) ವಿಧಿಸಿರುವೆವು. ಯಾರಾದರೂ (ಪ್ರತೀಕಾರ ಕೈಗೊಳ್ಳದೆ) ಮನ್ನಿಸುವುದಾದರೆ ಅದು ಅವನಿಗೆ ಪಶ್ಚಾತ್ತಾಪ(ಕ್ಕೆ ನೆರವಾಗುವ ಒಂದು ಪುಣ್ಯಕರ್ಮ)ವಾಗಿದೆ. ಅಲ್ಲಾಹು ಅವತೀರ್ಣಗೊಳಿಸಿರುವುದಕ್ಕೆ ಅನುಗುಣವಾಗಿ ಯಾರು ತೀರ್ಪು ನೀಡುವುದಿಲ್ಲವೋ ಅವರೇ ಅಕ್ರಮಿಗಳಾಗಿರುವರು.(151)
151. ಬಡವರು ಯಾವುದಾದರೂ ತಪ್ಪೆಸಗಿದರೆ ಯಹೂದರು ಗ್ರಂಥದಲ್ಲಿ ಹೇಳಿರುವ ರೀತಿಯ ಶಿಕ್ಷೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದ್ದರು. ಆದರೆ ಶ್ರೀಮಂತರು ಅಥವಾ ಪ್ರಮುಖರು ತಪ್ಪೆಸಗಿದರೆ ಯಾವುದಾದರೂ ಸಣ್ಣ ಶಿಕ್ಷೆಯನ್ನು ನೀಡುತ್ತಿದ್ದರು.
(46) ತರುವಾಯ ಅವರ (ಆ ಪ್ರವಾದಿಗಳ) ಹೆಜ್ಜೆ ಗುರುತುಗಳಲ್ಲಿಯೇ ಮರ್ಯಮ್‍ರ ಮಗನಾದ ಈಸಾರನ್ನು ತನ್ನ ಮುಂದಿರುವ ತೌರಾತನ್ನು ದೃಢೀಕರಿಸುವವರಾಗಿ ನಾವು ಕಳುಹಿಸಿದೆವು. ಸನ್ಮಾರ್ಗದರ್ಶನ ಮತ್ತು ಸತ್ಯಪ್ರಕಾಶವನ್ನು ಹೊಂದಿದ್ದ ಇಂಜೀಲನ್ನು ನಾವು ಅವರಿಗೆ ನೀಡಿದೆವು. ಅದು ತನ್ನ ಮುಂದಿರುವ ತೌರಾತನ್ನು ದೃಢೀಕರಿಸುವ ಗ್ರಂಥವೂ, ಭಯಭಕ್ತಿ ಪಾಲಿಸುವವರಿಗೆ ಮಾರ್ಗದರ್ಶಿಯೂ, ಸದುಪದೇಶವೂ ಆಗಿದೆ.
(47) ಇಂಜೀಲ್‍ನ ಜನರು ಅಲ್ಲಾಹು ಅದರಲ್ಲಿ ಅವತೀರ್ಣಗೊಳಿಸಿರುವ ಪ್ರಕಾರ ತೀರ್ಪು ನೀಡಲಿ. ಅಲ್ಲಾಹು ಅವತೀರ್ಣಗೊಳಿಸಿರುವುದಕ್ಕೆ ಅನುಗುಣವಾಗಿ ಯಾರು ತೀರ್ಪು ನೀಡುವುದಿಲ್ಲವೋ ಅವರೇ ಧಿಕ್ಕಾರಿಗಳಾಗಿರುವರು.
(48) (ಓ ಪ್ರವಾದಿಯವರೇ!) ತಮಗೆ ನಾವು ಗ್ರಂಥವನ್ನು ಸತ್ಯದೊಂದಿಗೆ ಅವತೀರ್ಣಗೊಳಿಸಿರುವೆವು. ಅದು ತನ್ನ ಮುಂದಿರುವ ಗ್ರಂಥಗಳನ್ನು ದೃಢೀಕರಿಸುತ್ತದೆ ಮತ್ತು ಅವುಗಳನ್ನು ಸಂರಕ್ಷಿಸುತ್ತದೆ.(152) ಆದ್ದರಿಂದ ಅಲ್ಲಾಹು ಅವತೀರ್ಣಗೊಳಿಸಿರುವುದಕ್ಕೆ ಅನುಗುಣವಾಗಿ ತಾವು ಅವರ ಮಧ್ಯೆ ತೀರ್ಪು ನೀಡಿರಿ. ತಮಗೆ ತಲುಪಿದ ಸತ್ಯವನ್ನು ತೊರೆದು ತಾವು ಅವರ ದೇಹೇಚ್ಛೆಗಳನ್ನು ಅನುಸರಿಸದಿರಿ. ನಿಮ್ಮಲ್ಲಿ ಪ್ರತಿಯೊಂದು ಸಮುದಾಯಕ್ಕೂ ನಾವು ಒಂದೊಂದು ನಿಯಮಸಂಹಿತೆ ಮತ್ತು ಕರ್ಮಮಾರ್ಗವನ್ನು ಮಾಡಿಕೊಟ್ಟಿರುವೆವು. ಅಲ್ಲಾಹು ಇಚ್ಛಿಸಿದ್ದರೆ ಅವನು ನಿಮ್ಮನ್ನು ಒಂದೇ ಸಮುದಾಯವನ್ನಾಗಿ ಮಾಡುತ್ತಿದ್ದನು. ಆದರೆ ಅವನು ನಿಮಗೆ ದಯಪಾಲಿಸಿರುವುದರಲ್ಲಿ ನಿಮ್ಮನ್ನು ಪರೀಕ್ಷಿಸಲು (ಇಚ್ಛಿಸುವನು). ಆದ್ದರಿಂದ ನೀವು ಸತ್ಕರ್ಮಗಳೆಡೆಗೆ ಸ್ಪರ್ಧಿಸಿ ಧಾವಿಸಿರಿ. ನಿಮ್ಮೆಲ್ಲರ ಮರಳುವಿಕೆಯು ಅಲ್ಲಾಹುವಿನ ಬಳಿಗೇ ಆಗಿದೆ. ಆಗ ಅವನು ನಿಮಗೆ ನೀವು ಭಿನ್ನರಾಗಿರುವ ವಿಷಯಗಳ ಬಗ್ಗೆ ತಿಳಿಸಿಕೊಡುವನು.
152. ಪೂರ್ವ ಗ್ರಂಥಗಳ ನೈಜ ಒಳಾಂಶವು ಏನೆಂಬುದನ್ನು ಸ್ಪಷ್ಟಪಡಿಸುತ್ತಾ ಮತ್ತು ಅವುಗಳಲ್ಲಿ ನಡೆದ ಹಸ್ತಕ್ಷೇಪಗಳನ್ನು ಬಹಿರಂಗಪಡಿಸುತ್ತಾ ಕುರ್‌ಆನ್ ಅವುಗಳನ್ನು ಸಂರಕ್ಷಿಸುತ್ತದೆ.
(49) ಅಲ್ಲಾಹು ಅವತೀರ್ಣಗೊಳಿಸಿರುವುದಕ್ಕೆ ಅನುಗುಣವಾಗಿ ತಾವು ಅವರ ನಡುವೆ ತೀರ್ಪು ನೀಡಲು, ಅವರ ದೇಹೇಚ್ಛೆಗಳನ್ನು ಅನುಸರಿಸದಿರಲು ಮತ್ತು ಅಲ್ಲಾಹು ತಮಗೆ ಅವತೀರ್ಣಗೊಳಿಸಿರುವ ಯಾವುದಾದರೂ ಆದೇಶದಿಂದ ಅವರು ತಮ್ಮನ್ನು ವ್ಯತಿಚಲನೆಗೊಳಿಸುವುದರ ಬಗ್ಗೆ ಎಚ್ಚರ ವಹಿಸಲು (ನಾವು ತಮ್ಮೊಂದಿಗೆ ಆದೇಶಿಸುತ್ತಿರುವೆವು). ಇನ್ನು ಅವರೇನಾದರೂ ವಿಮುಖರಾಗುವುದಾದರೆ ಅರಿತುಕೊಳ್ಳಿರಿ! ಅವರ ಕೆಲವು ಪಾಪಗಳ ನಿಮಿತ್ತ ಅಲ್ಲಾಹು ಅವರನ್ನು ನಾಶ ಮಾಡಲು ಇಚ್ಛಿಸುತ್ತಿರುವನು. ಖಂಡಿತವಾಗಿಯೂ ಮನುಷ್ಯರಲ್ಲಿ ಹೆಚ್ಚಿನವರೂ ಧಿಕ್ಕಾರಿಗಳಾಗಿರುವರು.
(50) ಜಾಹಿಲಿಯ್ಯತ್ತಿನ (ಇಸ್ಲಾಮೇತರ) ತೀರ್ಪನ್ನು ಅವರು ಅರಸುತ್ತಿರುವರೇ? ದೃಢವಿಶ್ವಾಸಿಗಳಾದ ಜನರಿಗೆ ಅಲ್ಲಾಹುವಿಗಿಂತಲೂ ಉತ್ತಮವಾಗಿ ತೀರ್ಪು ನೀಡುವವನು ಯಾರಿರುವನು?
(51) ಓ ಸತ್ಯವಿಶ್ವಾಸಿಗಳೇ! ಯಹೂದರನ್ನು ಮತ್ತು ಕ್ರೈಸ್ತರನ್ನು ನೀವು ಆಪ್ತ ಮಿತ್ರರನ್ನಾಗಿ ಮಾಡಿಕೊಳ್ಳದಿರಿ. ಅವರು ಪರಸ್ಪರ ಆಪ್ತ ಮಿತ್ರರಾಗಿರುವರು. ನಿಮ್ಮ ಪೈಕಿ ಯಾರು ಅವರನ್ನು ಆಪ್ತ ಮಿತ್ರರನ್ನಾಗಿ ಮಾಡಿಕೊಳ್ಳುವನೋ ಅವನು ಕೂಡ ಅವರೊಂದಿಗೇ ಸೇರಿದವನಾಗಿರುವನು. ಖಂಡಿತವಾಗಿಯೂ ಅಕ್ರಮಿಗಳಾದ ಜನರನ್ನು ಅಲ್ಲಾಹು ಸನ್ಮಾರ್ಗಕ್ಕೆ ಸೇರಿಸಲಾರನು.
(52) ಆದರೆ ಹೃದಯಗಳಲ್ಲಿ ರೋಗವಿರುವ ಕೆಲವರು ಅವರ ಬಗ್ಗೆ (ಅವರೊಂದಿಗೆ ಮೈತ್ರಿ ಸ್ಥಾಪಿಸುವ ಬಗ್ಗೆ) ಆತುರಪಡುತ್ತಿರುವುದಾಗಿ ತಾವು ಕಾಣುವಿರಿ. ‘ನಮಗೇನಾದರೂ ಆಪತ್ತು ಸಂಭವಿಸಬಹುದೆಂದು ನಾವು ಭಯಪಡುತ್ತಿರುವೆವು’ ಎಂದು ಅವರು ಹೇಳುವರು. ಆದರೆ ಅಲ್ಲಾಹು (ನಿಮಗೆ) ಪೂರ್ಣವಾದ ವಿಜಯವನ್ನು ನೀಡುವುದಾಗಲಿ ಅಥವಾ ತನ್ನ ವತಿಯ ಬೇರೇನಾದರೂ ಆದೇಶವನ್ನು ತರುವುದಾಗಲಿ ಮಾಡಬಹುದು. ಆಗ ತಮ್ಮ ಮನಸ್ಸುಗಳೊಳಗೆ ಮರೆಮಾಚಿಟ್ಟಿರುವುದರ ಬಗ್ಗೆ ಅವರು ವಿಷಾದಿಸುವವರಾಗಿ ಮಾರ್ಪಡುವರು.
(53) (ಅಂದು) ಸತ್ಯವಿಶ್ವಾಸಿಗಳು ಹೇಳುವರು: ‘ನಾವು ನಿಮ್ಮೊಂದಿಗೇ ಇರುವೆವು ಎಂದು ಅಲ್ಲಾಹುವಿನ ಮೇಲೆ ಬಲವಾದ ಆಣೆಯಿಟ್ಟು ಹೇಳಿದವರು ಇವರಾಗಿರುವರೇ?’ ಅವರ ಕರ್ಮಗಳು ನಿಷ್ಫಲವಾದವು ಮತ್ತು ಅವರು ನಷ್ಟ ಹೊಂದಿದವರಾಗಿ ಮಾರ್ಪಟ್ಟರು.
(54) ಓ ಸತ್ಯವಿಶ್ವಾಸಿಗಳೇ! ನಿಮ್ಮಲ್ಲಿ ಯಾರಾದರೂ ತನ್ನ ಧರ್ಮವನ್ನು ತ್ಯಜಿಸಿ ಹಿಂದಿರುಗಿ ಹೋಗುವುದಾದರೆ ಖಂಡಿತವಾಗಿಯೂ ಅಲ್ಲಾಹು ತಾನು ಪ್ರೀತಿಸುವಂತಹ ಬೇರೊಂದು ಜನತೆಯನ್ನುಬದಲಿಯಾಗಿ ತರುವನು.(153) ಅವರು ಅಲ್ಲಾಹುವನ್ನು ಪ್ರೀತಿಸುವರು. ಅವರು ವಿಶ್ವಾಸಿಗಳೊಂದಿಗೆ ವಿನಯತೋರುವವರೂ ಸತ್ಯನಿಷೇಧಿಗಳೊಂದಿಗೆ ಪ್ರತಾಪ ಪ್ರಕಟಿಸುವವರೂ ಆಗಿರುವರು. ಅವರು ಅಲ್ಲಾಹುವಿನ ಮಾರ್ಗದಲ್ಲಿ ಹೋರಾಡುವರು ಮತ್ತು ಆಕ್ಷೇಪಿಸುವವನ ಯಾವುದೇ ಆಕ್ಷೇಪವನ್ನೂ ಭಯಪಡಲಾರರು. ಅದು ಅಲ್ಲಾಹುವಿನ ಅನುಗ್ರಹವಾಗಿದೆ. ತಾನಿಚ್ಛಿಸುವವರಿಗೆ ಅವನು ಅದನ್ನು ದಯಪಾಲಿಸುವನು. ಅಲ್ಲಾಹು ಅಪಾರ ಸಾಮರ್ಥ್ಯವುಳ್ಳವನೂ ಸರ್ವಜ್ಞನೂ ಆಗಿರುವನು.
153. ಅಲ್ಲಾಹುವಿನ ಧರ್ಮವು ಅಸ್ತಿತ್ವದಲ್ಲಿರುವುದು ನಿಮ್ಮನ್ನು ಅವಲಂಬಿಸಿಯಲ್ಲ. ನೀವು ನಿಷ್ಠೆ ಬದಲಾಯಿಸಿದರೆ ಸತ್ಯಧರ್ಮವೆಂದೂ ನಾಶವಾಗಲಾರದು. ಅಲ್ಲಾಹುವಿನೊಂದಿಗೆ ಸುದೃಢ ನಂಟನ್ನು ಹೊಂದಿರುವ ಒಂದು ಗುಂಪು ಎಲ್ಲ ಕಾಲಗಳಲ್ಲೂ ಧರ್ಮಸೇವೆ ಮಾಡುತ್ತಲೇ ಇರುವುದು. ಆದರೆ ನಿಮ್ಮ ಇಹಪರ ವಿಜಯವು ಅಲ್ಲಾಹುವಿನ ಅನುಗ್ರಹವನ್ನು ಅವಲಂಬಿಸಿಕೊಂಡಿದೆ ಎಂಬ ವಾಸ್ತವಿಕತೆಯನ್ನು ನೀವೆಂದೂ ಮರೆಯದಿರಿ.
(55) ನಿಮ್ಮ ಆಪ್ತಮಿತ್ರರು ಅಲ್ಲಾಹು, ಅವನ ಸಂದೇಶವಾಹಕರು ಮತ್ತು ವಿನಮ್ರತೆಯುಳ್ಳವರಾಗಿ ನಮಾಝ್ ಸಂಸ್ಥಾಪಿಸುವ ಹಾಗೂ ಝಕಾತ್ ನೀಡುವ ಸತ್ಯವಿಶ್ವಾಸಿಗಳು ಮಾತ್ರವಾಗಿರುವರು.
(56) ಯಾರಾದರೂ ಅಲ್ಲಾಹುವನ್ನು, ಅವನ ಸಂದೇಶವಾಹಕರನ್ನು ಮತ್ತು ಸತ್ಯವಿಶ್ವಾಸಿಗಳನ್ನು ಆಪ್ತಮಿತ್ರರಾಗಿ ಮಾಡಿಕೊಳ್ಳುವುದಾದರೆ ಖಂಡಿತವಾಗಿಯೂ ಅಲ್ಲಾಹುವಿನ ಪಕ್ಷದವರೇ ವಿಜಯಗಳಿಸುವವರಾಗಿರುವರು.
(57) ಓ ಸತ್ಯವಿಶ್ವಾಸಿಗಳೇ! ನಿಮಗಿಂತ ಮುಂಚೆ ಗ್ರಂಥ ನೀಡಲಾದವರ ಪೈಕಿ ನಿಮ್ಮ ಧರ್ಮವನ್ನು ಮೋಜು ಹಾಗೂ ವಿನೋದವಾಗಿ ಮಾಡಿಕೊಂಡವರನ್ನಾಗಲಿ, ಸತ್ಯನಿಷೇಧಿಗಳನ್ನಾಗಲಿ ನೀವು ಆಪ್ತಮಿತ್ರರನ್ನಾಗಿ ಮಾಡದಿರಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹುವನ್ನು ಭಯಪಡಿರಿ.
(58) ನೀವು ನಮಾಝ್‍ಗಾಗಿ ಕರೆ ಕೊಟ್ಟರೆ ಅವರು ಅದನ್ನೊಂದು ಮೋಜು ಹಾಗೂ ವಿನೋದವನ್ನಾಗಿ ಮಾಡಿಕೊಳ್ಳುವರು. ಅದು ಅವರು ಚಿಂತಿಸಿ ಗ್ರಹಿಸದ ಒಂದು ಜನತೆಯಾಗಿರುವ ಕಾರಣದಿಂದಾಗಿದೆ.
(59) (ಓ ಪ್ರವಾದಿಯವರೇ!) ಹೇಳಿರಿ: ‘ಓ ಗ್ರಂಥದವರೇ! ನಾವು ಅಲ್ಲಾಹುವಿನಲ್ಲಿಯೂ (ಅವನ ವತಿಯಿಂದ) ನಮಗೆ ಅವತೀರ್ಣಗೊಂಡ ಗ್ರಂಥದಲ್ಲಿಯೂ, ನಮಗಿಂತ ಮುಂಚೆ ಅವತೀರ್ಣಗೊಂಡ ಗ್ರಂಥದಲ್ಲಿಯೂ ವಿಶ್ವಾಸವಿಟ್ಟಿರುವುದರಿಂದ ಮತ್ತು ನಿಮ್ಮಲ್ಲಿ ಹೆಚ್ಚಿನವರೂ ಧಿಕ್ಕಾರಿಗಳಾಗಿರುವುದರಿಂದಲೇ ಹೊರತು ಇನ್ನಾವ ಕಾರಣಕ್ಕಾಗಿ ನೀವು ನಮ್ಮನ್ನು ಆಪಾದಿಸುತ್ತಿರುವಿರಿ?’
(60) ಹೇಳಿರಿ: ‘ಅಲ್ಲಾಹುವಿನ ಬಳಿ ಅದಕ್ಕಿಂತಲೂ ನಿಕೃಷ್ಟ ಪ್ರತಿಫಲವಿರುವವರ ಬಗ್ಗೆ ನಾನು ನಿಮಗೆ ತಿಳಿಸಿಕೊಡಲೇ? ಯಾರನ್ನು ಅಲ್ಲಾಹು ಶಪಿಸಿರುವನೋ, ಯಾರೊಂದಿಗೆ ಅವನು ಕ್ರೋಧಗೊಂಡಿರುವನೋ, ಯಾವ ಪಂಗಡಕ್ಕೆ ಸೇರಿದವರನ್ನು ಅಲ್ಲಾಹು ಕಪಿಗಳನ್ನಾಗಿಯೂ ಹಂದಿಗಳನ್ನಾಗಿಯೂ ಮಾಡಿರುವನೋ, ಯಾವ ಪಂಗಡವು ಮಿಥ್ಯಾರಾಧ್ಯರನ್ನು ಆರಾಧಿಸಿತೋ, ಅವರೇ ಅತ್ಯಂತ ನಿಕೃಷ್ಟ ಸ್ಥಾನದಲ್ಲಿರುವವರೂ, ನೇರಮಾರ್ಗದಿಂದ ಅತ್ಯಧಿಕವಾಗಿ ವ್ಯತಿಚಲಿಸಿದವರೂ ಆಗಿರುವರು.’
(61) ನಿಮ್ಮ ಬಳಿ ಬಂದಾಗ ‘ನಾವು ವಿಶ್ವಾಸವಿಟ್ಟಿರುವೆವು’ ಎಂದು ಅವರು ಹೇಳುವರು. ವಾಸ್ತವಿಕವಾಗಿ ಅವರು ಅವಿಶ್ವಾಸದೊಂದಿಗೇ ಬಂದಿರುವರು ಮತ್ತು ಅವಿಶ್ವಾಸದೊಂದಿಗೇ ಅವರು ಹೊರಟು ಹೋಗಿರುವರು. ಅವರು ಮರೆಮಾಚುವುದರ ಕುರಿತು ಅಲ್ಲಾಹು ಚೆನ್ನಾಗಿ ಅರಿಯುವವನಾಗಿರುವನು.
(62) ಅವರಲ್ಲಿ ಹೆಚ್ಚಿನವರೂ ಪಾಪಕೃತ್ಯಗಳೆಡೆಗೆ, ಅತಿಕ್ರಮಗಳೆಡೆಗೆ ಮತ್ತು ನಿಷಿದ್ಧ ಸಂಪಾದನೆಯನ್ನು ತಿನ್ನುವುದರೆಡೆಗೆ ಧಾವಂತದಿಂದ ಮುನ್ನುಗ್ಗುತ್ತಿರುವವರಾಗಿ ತಾವು ಕಾಣುವಿರಿ. ಅವರು ಮಾಡುತ್ತಿರುವುದು ಅತ್ಯಂತ ನಿಕೃಷ್ಟವಾಗಿರುವುದೇ ಆಗಿದೆ.
(63) ಅವರು ಪಾಪಕರ ಮಾತುಗಳನ್ನು ಆಡುವುದರಿಂದಲೂ, ನಿಷಿದ್ಧ ಸಂಪಾದನೆಯನ್ನು ತಿನ್ನುವುದರಿಂದಲೂ ಸಜ್ಜನರು ಮತ್ತು ವಿದ್ವಾಂಸರು ಅವರನ್ನು ತಡೆಯಲಿಲ್ಲವೇಕೆ? ಅವರು ಮಾಡುತ್ತಿರುವುದು ಅತ್ಯಂತ ನಿಕೃಷ್ಟವಾಗಿರುವುದೇ ಆಗಿದೆ.
(64) ‘ಅಲ್ಲಾಹುವಿನ ಕೈಗಳನ್ನು ಕಟ್ಟಿಹಾಕಲಾಗಿದೆ’ ಎಂದು ಯಹೂದರು ಹೇಳಿದರು.(154) ಅವರ ಕೈಗಳನ್ನೇ ಕಟ್ಟಿಹಾಕಲಾಗಲಿ! ಅವರು ಹೇಳಿದ ಆ ಮಾತಿನ ನಿಮಿತ್ತ ಅವರು ಶಪಿಸಲ್ಪಟ್ಟಿರುವರು. ಅಲ್ಲ, (ವಾಸ್ತವಿಕವಾಗಿ) ಅವನ ಎರಡು ಕೈಗಳೂ ಚಾಚಿಕೊಂಡಿವೆ. ತಾನಿಚ್ಛಿಸುವಂತೆ ಅವನು ವ್ಯಯಿಸುವನು. ತಮಗೆ ತಮ್ಮ ರಬ್‌ನ ವತಿಯಿಂದ ಅವತೀರ್ಣಗೊಳಿಸಲಾದ ಸಂದೇಶವು ಅವರ ಪೈಕಿ ಹೆಚ್ಚಿನವರಿಗೂ ಧಿಕ್ಕಾರ ಮತ್ತು ಅವಿಶ್ವಾಸವನ್ನು ಹೆಚ್ಚಿಸುತ್ತಲೇ ಇರುವುದು. ಪುನರುತ್ಥಾನದ ದಿನದ ತನಕ ನಾವು ಅವರ ನಡುವೆ ಶತ್ರುತ್ವ ಮತ್ತು ವಿದ್ವೇಷವನ್ನು ಹಾಕಿ ಬಿಟ್ಟಿರುವೆವು. ಅವರು ಯುದ್ಧಾಗ್ನಿಯನ್ನು ಉರಿಸುವಾಗಲೆಲ್ಲ ಅಲ್ಲಾಹು ಅದನ್ನು ನಂದಿಸಿಬಿಡುವನು. ಅವರು ಭೂಮಿಯಲ್ಲಿ ವಿನಾಶವನ್ನುಂಟುಮಾಡಲು ಯತ್ನಿಸುತ್ತಿರುವರು. ಅಲ್ಲಾಹು ವಿನಾಶಕಾರಿಗಳನ್ನು ಇಷ್ಟಪಡಲಾರನು.
154. ಜಿಪುಣರನ್ನು ಆಲಂಕಾರಿಕವಾಗಿ ‘ಕೈಗಳನ್ನು ಕಟ್ಟಿಹಾಕಲಾದವರು’ ಎನ್ನಲಾಗುತ್ತದೆ. ಬರಗಾಲ ಮತ್ತು ಸಂಕಷ್ಟಗಳು ಎದುರಾದಾಗ ಅಲ್ಲಾಹು ಈಗ ಜಿಪುಣನಾಗಿದ್ದಾನೆ ಎಂದು ಕೆಲವು ಯಹೂದರು ಹೇಳುತ್ತಿದ್ದುದನ್ನು ಇಲ್ಲಿ ತೀಕ್ಷ್ಣವಾಗಿ ಟೀಕಿಸಲಾಗಿದೆ.
(65) ಗ್ರಂಥದವರು ವಿಶ್ವಾಸವಿಟ್ಟಿರುತ್ತಿದ್ದರೆ ಮತ್ತು ಭಯಭಕ್ತಿ ಪಾಲಿಸಿರುತ್ತಿದ್ದರೆ ನಾವು ಅವರಿಂದ ಅವರ ಪಾಪಗಳನ್ನು ಅಳಿಸುತ್ತಿದ್ದೆವು ಮತ್ತು ಅನುಗ್ರಹಪೂರ್ಣವಾದ ಸ್ವರ್ಗೋದ್ಯಾನಗಳಲ್ಲಿ ಅವರನ್ನು ಪ್ರವೇಶಮಾಡಿಸುತ್ತಿದ್ದೆವು.
(66) ತೌರಾತ್, ಇಂಜೀಲ್ ಮತ್ತು ಅವರಿಗೆ ಅವರ ರಬ್‌ನಿಂದ ಅವತೀರ್ಣಗೊಳಿಸಲಾದ ಸಂದೇಶಗಳನ್ನು ಅವರು ಸರಿಯಾದ ವಿಧದಲ್ಲಿ ಸ್ಥಾಪಿಸಿರುತ್ತಿದ್ದರೆ ಅವರ ಮೇಲ್ಭಾಗದಿಂದ ಮತ್ತು ಕಾಲುಗಳ ಅಡಿಭಾಗದಿಂದ ಅವರಿಗೆ ಆಹಾರವು ದೊರೆಯುತ್ತಿತ್ತು. ಅವರ ಪೈಕಿ ಮಿತತ್ವವನ್ನು ಪಾಲಿಸುವ ಒಂದು ಪಂಗಡವಿದೆ. ಆದರೆ ಅವರ ಪೈಕಿ ಹೆಚ್ಚಿನವರ ಕರ್ಮಗಳೂ ಅತ್ಯಂತ ನಿಕೃಷ್ಟವಾದುದಾಗಿವೆ.
(67) ಓ ಸಂದೇಶವಾಹಕರೇ! ತಮ್ಮ ರಬ್‌ನ ವತಿಯಿಂದ ತಮಗೆ ಅವತೀರ್ಣಗೊಂಡಿರುವುದನ್ನು (ಜನರಿಗೆ) ತಲುಪಿಸಿಕೊಡಿರಿ. ತಾವು ಹಾಗೆ ಮಾಡದಿದ್ದರೆ ತಾವು ಅವನ ದೌತ್ಯವನ್ನು ನೆರವೇರಿಸಿದವರಾಗಲಾರಿರಿ. ಅಲ್ಲಾಹು ತಮ್ಮನ್ನು ಜನರಿಂದ ಕಾಪಾಡುವನು. ಅಲ್ಲಾಹು ಸತ್ಯನಿಷೇಧಿಗಳಾದ ಜನರನ್ನು ಖಂಡಿತವಾಗಿಯೂ ಸನ್ಮಾರ್ಗಕ್ಕೆ ಸೇರಿಸಲಾರನು.
(68) ತಾವು ಹೇಳಿರಿ: ‘ಓ ಗ್ರಂಥದವರೇ! ತೌರಾತ್, ಇಂಜೀಲ್ ಮತ್ತು ನಿಮಗೆ ನಿಮ್ಮ ರಬ್‌ನ ವತಿಯಿಂದ ಅವತೀರ್ಣಗೊಳಿಸಲಾದ ಸಂದೇಶಗಳನ್ನು ನೀವು (ಸರಿಯಾದ ವಿಧದಲ್ಲಿ) ಸ್ಥಾಪಿಸುವ ತನಕ ನೀವು ಯಾವುದೇ ತಳಹದಿಯಲ್ಲೂ ಇರಲಾರಿರಿ. ತಮಗೆ ತಮ್ಮ ರಬ್‌ನ ವತಿಯಿಂದ ಅವತೀರ್ಣಗೊಳಿಸಲಾದ ಸಂದೇಶವು ಅವರಲ್ಲಿ ಹೆಚ್ಚಿನವರಿಗೂ ಧಿಕ್ಕಾರ ಮತ್ತು ಅವಿಶ್ವಾಸವನ್ನು ಹೆಚ್ಚಿಸುತ್ತಲೇ ಇರುವುದು. ಆದ್ದರಿಂದ ಸತ್ಯನಿಷೇಧಿಗಳಾದ ಜನರ ಬಗ್ಗೆ ತಾವು ದುಃಖಿಸದಿರಿ.
(69) ಸತ್ಯವಿಶ್ವಾಸಿಗಳು, ಯಹೂದರು, ಸಾಬಿಈಗಳು, ಕ್ರೈಸ್ತರು, ಇವರಲ್ಲಿ ಯಾರು ಅಲ್ಲಾಹುವಿನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವರೋ ಮತ್ತು ಸತ್ಕರ್ಮವೆಸಗುವರೋ ಅವರು ಏನನ್ನೂ ಭಯಪಡಬೇಕಾಗಿಲ್ಲ. ಅವರು ದುಃಖಿಸಬೇಕಾಗಿಯೂ ಬರದು.(155)
155. ಮೋಕ್ಷಕ್ಕಿರುವ ಮಾನದಂಡ ಯಾವುದಾದರೂ ಪ್ರಾಂತೀಯ ಧರ್ಮದ ಹೆಸರಿನಲ್ಲಿರುವ ಸಂಕುಚಿತತೆವಲ್ಲ. ಬದಲಾಗಿ ಇಲ್ಲಿ ಪರಮ ಪ್ರಧಾನವಾಗಿರುವುದು ಏಕದೇವತ್ವ ಮತ್ತು ಮರಣಾನಂತರ ಜೀವನದಲ್ಲಿರುವ ವಸ್ತುನಿಷ್ಟವಾದ ವಿಶ್ವಾಸವಾಗಿದೆ.
(70) ನಾವು ಇಸ್ರಾಈಲ್ ಸಂತತಿಗಳಿಂದ ಕರಾರನ್ನು ಪಡೆದಿರುವೆವು ಮತ್ತು ಅವರ ಬಳಿಗೆ ಸಂದೇಶವಾಹಕರನ್ನು ಕಳುಹಿಸಿರುವೆವು. ಅವರ ಮನಸ್ಸಿಗೆ ಹಿಡಿಸದ ವಿಷಯಗಳೊಂದಿಗೆ ಅವರ ಬಳಿಗೆ ಯಾವೊಬ್ಬ ಸಂದೇಶವಾಹಕನು ಬಂದಾಗಲೂ ಸಂದೇಹವಾಹಕರ ಪೈಕಿ ಕೆಲವರನ್ನು ಅವರು ನಿಷೇಧಿಸಿದರು ಮತ್ತು ಕೆಲವರನ್ನು ಕೊಲೆಗೈದರು.
(71) ಯಾವುದೇ ಕ್ಷೋಭೆಯೂ ಉಂಟಾಗಲಾರದೆಂದು ಅವರು ಭಾವಿಸಿದರು. ಆದ್ದರಿಂದ ಅವರು ಅಂಧರೂ ಕಿವುಡರೂ ಆದರು. ತರುವಾಯ ಅಲ್ಲಾಹು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ಅನಂತರ ಪುನಃ ಅವರ ಪೈಕಿ ಹೆಚ್ಚಿನವರು ಅಂಧರೂ ಕಿವುಡರೂ ಆದರು. ಅಲ್ಲಾಹು ಅವರು ಮಾಡುತ್ತಿರುವುದನ್ನೆಲ್ಲ ವೀಕ್ಷಿಸುವವನಾಗಿರುವನು.
(72) ‘ಮರ್ಯಮ್‍ರ ಮಗನಾದ ಮಸೀಹನೇ ಅಲ್ಲಾಹು’ ಎಂದು ಹೇಳಿದವರು ಖಂಡಿತವಾಗಿಯೂ ಅವಿಶ್ವಾಸಿಗಳಾಗಿರುವರು. ಆದರೆ ಮಸೀಹರು ಹೇಳಿರುವುದೇನೆಂದರೆ: ‘ಓ ಇಸ್ರಾಈಲ್ ಸಂತತಿಗಳೇ! ನೀವು ನನ್ನ ಮತ್ತು ನಿಮ್ಮ ರಬ್ಬಾದ ಅಲ್ಲಾಹುವನ್ನು ಆರಾಧಿಸಿರಿ. ಯಾರು ಅಲ್ಲಾಹುವಿನೊಂದಿಗೆ ಸಹಭಾಗಿತ್ವ ಮಾಡುವನೋ ಖಂಡಿತವಾಗಿಯೂ ಅಲ್ಲಾಹು ಅವನಿಗೆ ಸ್ವರ್ಗವನ್ನು ನಿಷಿದ್ಧಗೊಳಿಸಿರುವನು ಮತ್ತು ನರಕಾಗ್ನಿಯು ಅವನ ವಾಸಸ್ಥಳವಾಗಿದೆ. ಅಕ್ರಮಿಗಳಿಗೆ(156) ಸಹಾಯಕರಾಗಿ ಯಾರೂ ಇರಲಾರರು.’
156. ಸೃಷ್ಟಿಗಳನ್ನು ಆರಾಧಿಸುವುದು ಅಥವಾ ದಿವ್ಯತ್ವದಲ್ಲಿ ಅಲ್ಲಾಹುವಿನೊಂದಿಗೆ ಯಾರನ್ನಾದರೂ ಅಥವಾ ಯಾವುದೇ ವಸ್ತುವನ್ನಾದರೂ ಸಹಭಾಗಿಯನ್ನಾಗಿ ಮಾಡುವುದು ಅಕ್ಷಮ್ಯವಾದ ಗಂಭೀರ ಅಪರಾಧವಾಗಿದೆ.
(73) ‘ಅಲ್ಲಾಹು ಮೂವರಲ್ಲಿ ಒಬ್ಬನಾಗಿರುವನು’(157) ಎಂದು ಹೇಳಿದವರು ಖಂಡಿತವಾಗಿಯೂ ಅವಿಶ್ವಾಸಿಗಳಾಗಿರುವರು. ಏಕಮೇವ ಆರಾಧ್ಯನ ಹೊರತು ಅನ್ಯ ಆರಾಧ್ಯರಿಲ್ಲ. ಅವರು ಹಾಗೆ ಹೇಳುವುದನ್ನು ನಿಲ್ಲಿಸದಿದ್ದರೆ ಅವರ ಪೈಕಿ ಅವಿಶ್ವಾಸವಿಟ್ಟವರನ್ನು ಖಂಡಿತವಾಗಿಯೂ ಯಾತನಾಮಯವಾದ ಶಿಕ್ಷೆಯು ಸ್ಪರ್ಶಿಸಲಿರುವುದು.
157. ಯೇಸುಕ್ರಿಸ್ತರಿಗೆ ಮನುಷ್ಯ ಪ್ರವಾದಿ ಎಂಬ ಪದವಿಯನ್ನು ನೀಡಿದರೆ ಸಾಕಾಗದು ಎಂದು ಕ್ರೈಸ್ತರು ಭಾವಿಸಿದರು. ಆದ್ದರಿಂದ ಅವರು ಯೇಸುವಿಗೆ ದೇವಪುತ್ರ ಎಂಬ ಪದವಿಯನ್ನು ನೀಡಿದರು. ಧರ್ಮಾಧ್ಯಕ್ಷರಿಗೂ ಮಾನವಾತೀತ ಪದವಿ ಬೇಕೆಂದು ಅವರು ಭಾವಿಸಿದರು. ಆದ್ದರಿಂದ ಅವರಲ್ಲಿ ಪವಿತ್ರಾತ್ಮನು ನೆಲೆಸುತ್ತಾನೆಂದು ವಾದಿಸಿದರು. ಹೀಗೆ ಏಕದೇವವಿಶ್ವಾಸಕ್ಕೆ ಬದಲಾಗಿ ಒಂದಾಗಿರುವ ಮೂರು ಅಥವಾ ಮೂರಾಗಿರುವ ಒಂದು (ತ್ರಿಯೇಕತ್ವ) ಎಂಬ ವಾದ ಕ್ರೈಸ್ತ ದೇವಪರಿಕಲ್ಪನೆಯಲ್ಲಿ ಗೊಂದಲಮಯ ಸಮಸ್ಯೆಯಾಗಿ ಪರಿಣಮಿಸಿತು.
(74) ಅವರು ಅಲ್ಲಾಹುವಿನೆಡೆಗೆ ಪಶ್ಚಾತ್ತಾಪದೊಂದಿಗೆ ಮರಳುವುದಾಗಲಿ, ಅವನೊಂದಿಗೆ ಪಾಪಮುಕ್ತಿ ಬೇಡುವುದಾಗಲಿ ಮಾಡಲಾರರೇ? ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(75) ಮರ್ಯಮ್‍ರ ಮಗ ಮಸೀಹರು ಒಬ್ಬ ಸಂದೇಶವಾಹಕರಾಗಿದ್ದರೇ ವಿನಾ ಇನ್ನಾರೂ ಆಗಿರಲಿಲ್ಲ. ಅವರಿಗಿಂತ ಮುಂಚೆ ಅನೇಕ ಸಂದೇಶವಾಹಕರು ಗತಿಸಿಹೋಗಿರುವರು. ಅವರ ತಾಯಿ ಓರ್ವ ಸತ್ಯವಂತೆಯಾಗಿದ್ದರು. ಅವರಿಬ್ಬರೂ ಆಹಾರವನ್ನು ಸೇವಿಸುತ್ತಿದ್ದರು. ನಾವು ಅವರಿಗೆ ಯಾವೆಲ್ಲ ವಿಧಗಳಲ್ಲಿ ದೃಷ್ಟಾಂತಗಳನ್ನು ಸ್ಪಷ್ಟಪಡಿಸಿಕೊಡುತ್ತಿರುವೆವೆಂಬುದನ್ನು ನೋಡಿರಿ. ಆದರೂ ಅವರು (ಸತ್ಯದಿಂದ) ಹೇಗೆ ತಪ್ಪಿಸಲ್ಪಡುತ್ತಿರುವರೆಂಬುದನ್ನೂ ನೋಡಿರಿ.
(76) (ಓ ಪ್ರವಾದಿಯವರೇ!) ಹೇಳಿರಿ: ‘ಅಲ್ಲಾಹುವಿನ ಹೊರತು ನಿಮಗೆ ಲಾಭವನ್ನಾಗಲಿ ಹಾನಿಯನ್ನಾಗಲಿ ಅಧೀನದಲ್ಲಿಟ್ಟುಕೊಳ್ಳದವುಗಳನ್ನು ನೀವು ಆರಾಧಿಸುತ್ತಿರುವಿರಾ?’ ಅಲ್ಲಾಹುವಾದರೋ ಎಲ್ಲವನ್ನೂ ಆಲಿಸುವವನೂ ಅರಿಯುವವನೂ ಆಗಿರುವನು.
(77) ಹೇಳಿರಿ: ‘ಓ ಗ್ರಂಥದವರೇ! ಸತ್ಯಕ್ಕೆ ವಿರುದ್ಧವಾಗಿ ನೀವು ನಿಮ್ಮ ಧರ್ಮದಲ್ಲಿ ಹದ್ದುಮೀರದಿರಿ. ಈ ಮೊದಲೇ ದಾರಿಗೆಟ್ಟಿರುವ ಮತ್ತು ಅನೇಕ ಜನರನ್ನು ದಾರಿಗೆಡಿಸಿ, ಸನ್ಮಾರ್ಗದಿಂದ ವ್ಯತಿಚಲಿಸಿ ಹೋದ ಜನತೆಯೊಂದರ ದೇಹೇಚ್ಛೆಗಳನ್ನು ನೀವು ಅನುಸರಿಸದಿರಿ.’
(78) ಇಸ್ರಾಈಲ್ ಸಂತತಿಗಳಲ್ಲಿ ಸೇರಿದ ಸತ್ಯನಿಷೇಧಿಗಳು ದಾವೂದ್‍ರ ಮತ್ತು ಮರ್ಯಮ್‍ರ ಮಗನಾದ ಈಸಾರ ನಾಲಗೆಯಿಂದ ಶಪಿಸಲ್ಪಟ್ಟಿರುವರು. ಇದು ಅವರು ಧಿಕ್ಕಾರ ತೋರಿರುವುದರ ಮತ್ತು ಅತಿಕ್ರಮವೆಸಗಿರುವುದರ ಫಲವಾಗಿದೆ.
(79) ಅವರು ಮಾಡುತ್ತಿದ್ದ ದುಷ್ಕೃತ್ಯಗಳನ್ನು ಅವರು ಪರಸ್ಪರ ತಡೆಯುತ್ತಿರಲಿಲ್ಲ. ಅವರು ಮಾಡುತ್ತಿದ್ದುದು ಅತ್ಯಂತ ನಿಕೃಷ್ಟವಾದುದೇ ಆಗಿತ್ತು.
(80) ಅವರಲ್ಲಿ ಹೆಚ್ಚಿನವರೂ ಸತ್ಯನಿಷೇಧಿಗಳನ್ನು ಆಪ್ತಮಿತ್ರರಾಗಿ ಮಾಡಿಕೊಳ್ಳುವುದಾಗಿ ತಾವು ಕಾಣುವಿರಿ. ಅವರು ಸ್ವತಃ ತಮಗೋಸ್ಕರ ಮುಂಗಡವಾಗಿ ಮಾಡಿಟ್ಟಿರುವುದು(158) ಅತ್ಯಂತ ನಿಕೃಷ್ಟವಾದುದೇ ಆಗಿದೆ. (ಇದರಿಂದಾಗಿ) ಅಲ್ಲಾಹು ಅವರ ಮೇಲೆ ಕ್ರೋಧಗೊಂಡಿರುವನು ಮತ್ತು ಶಿಕ್ಷೆಯಲ್ಲಿ ಅವರು ಶಾಶ್ವತವಾಗಿ ವಾಸಿಸುವರು.
158. ಪ್ರತಿಯೊಬ್ಬನಿಗೂ ಶಾಶ್ವತವಾಗಿ ಅನುಭವಿಸಬೇಕಾಗಿ ಬರುವುದು ಐಹಿಕ ಜೀವನದಲ್ಲಿ ಅವನು ಮುಂಗಡವಾಗಿ ಮಾಡಿಟ್ಟಿರುವ ಕರ್ಮಗಳ ಫಲವನ್ನು ಮಾತ್ರವಾಗಿದೆ.
(81) ಅವರು ಅಲ್ಲಾಹುವಿನಲ್ಲಿ, ಪ್ರವಾದಿಯಲ್ಲಿ ಮತ್ತು ಅವರಿಗೆ (ಪ್ರವಾದಿಗೆ) ಅವತೀರ್ಣಗೊಂಡಿರುವುದರಲ್ಲಿ ವಿಶ್ವಾಸವಿಡುತ್ತಿದ್ದರೆ ಅವರನ್ನು (ಸತ್ಯನಿಷೇಧಿಗಳನ್ನು) ಆಪ್ತಮಿತ್ರರನ್ನಾಗಿ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ಅವರಲ್ಲಿ ಹೆಚ್ಚಿನವರೂ ಧಿಕ್ಕಾರಿಗಳಾಗಿರುವರು.
(82) ಜನರ ಪೈಕಿ ಸತ್ಯವಿಶ್ವಾಸಿಗಳೊಂದಿಗೆ ಕಠಿಣ ಶತ್ರುತ್ವವಿರುವವರು ಯಹೂದರು ಮತ್ತು ಬಹುದೇವಾರಾಧಕರಾಗಿರುವರೆಂದು ಖಂಡಿತವಾಗಿಯೂ ತಾವು ಕಾಣುವಿರಿ. ‘ನಾವು ಕ್ರೈಸ್ತರಾಗಿರುವೆವು’ ಎಂದು ಹೇಳಿದವರು ಜನರ ಪೈಕಿ ಸತ್ಯವಿಶ್ವಾಸಿಗಳೊಂದಿಗೆ ಅತ್ಯಂತ ಪ್ರೀತಿಯಿರುವವರಾಗಿ ತಾವು ಕಾಣುವಿರಿ. ಅವರಲ್ಲಿ ವಿದ್ವಾಂಸರು ಮತ್ತು ಸನ್ಯಾಸಿಗಳಿರುವರು ಮತ್ತು ಅವರು ಅಹಂಭಾವ ಪಡುವವರಲ್ಲ ಎಂಬುದೇ ಇದಕ್ಕಿರುವ ಕಾರಣವಾಗಿದೆ.
(83) ಸಂದೇಶವಾಹಕರಿಗೆ ಅವತೀರ್ಣಗೊಳಿಸಲಾಗಿರುವುದನ್ನು ಆಲಿಸಿದರೆ ಸತ್ಯವನ್ನು ಗ್ರಹಿಸಿದ ಕಾರಣ ಅವರ ಕಣ್ಣುಗಳಿಂದ ಕಣ್ಣೀರು ಹರಿಯುವುದನ್ನು ತಾವು ಕಾಣುವಿರಿ.(159) ಅವರು ಹೇಳುವರು: ‘ಓ ನಮ್ಮ ರಬ್! ನಾವು ವಿಶ್ವಾಸವಿಟ್ಟಿರುವೆವು. ಆದ್ದರಿಂದ ಸತ್ಯಕ್ಕೆ ಸಾಕ್ಷ್ಯವಹಿಸಿದವರೊಂದಿಗೆ ನಮ್ಮನ್ನೂ ದಾಖಲಿಸು.
159. ಇಲ್ಲಿ ಪ್ರಸ್ತಾಪಿಸಲಾಗಿರುವುದು ಪ್ರವಾದಿ(ಸ) ರವರ ಕಾಲದಲ್ಲಿ ಇಸ್ಲಾಮ್ ಸ್ವೀಕರಿಸಿದ ಕೆಲವು ಕ್ರೈಸ್ತ ಧರ್ಮೀಯರ ಕುರಿತಾಗಿದೆ.
(84) ನಮ್ಮ ರಬ್ ನಮ್ಮನ್ನು ಸಜ್ಜನರೊಂದಿಗೆ ಪ್ರವೇಶ ಮಾಡಿಸಬೇಕೆಂದು ನಾವು ಹಂಬಲಿಸುತ್ತಿರುವಾಗ ಅಲ್ಲಾಹುವಿನಲ್ಲಿ ಮತ್ತು ನಮ್ಮ ಬಳಿಗೆ ಬಂದ ಸತ್ಯದಲ್ಲಿ ವಿಶ್ವಾಸವಿಡದಿರಲು ನಮಗೇನಾಗಿದೆ?’
(85) ಅವರು ಹೇಳಿರುವ ಮಾತಿನ ಫಲವಾಗಿ ಅಲ್ಲಾಹು ಅವರಿಗೆ ತಳಭಾಗದಿಂದ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳನ್ನು ಪ್ರತಿಫಲವಾಗಿ ನೀಡಿದನು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅದು ಸತ್ಕರ್ಮಿಗಳಿಗಿರುವ ಪ್ರತಿಫಲವಾಗಿದೆ.
(86) ಅವಿಶ್ವಾಸವಿಟ್ಟವರು ಮತ್ತು ನಮ್ಮ ದೃಷ್ಟಾಂತಗಳನ್ನು ತಿರಸ್ಕರಿಸಿದವರಾರೋ ಅವರು ನರಕವಾಸಿಗಳಾಗಿರುವರು.
(87) ಓ ಸತ್ಯವಿಶ್ವಾಸಿಗಳೇ! ಅಲ್ಲಾಹು ನಿಮಗೆ ಧರ್ಮಸಮ್ಮತಗೊಳಿಸಿದ ಉತ್ತಮ ವಸ್ತುಗಳನ್ನು ನೀವು ನಿಷಿದ್ಧಗೊಳಿಸದಿರಿ ಮತ್ತು ಮಿತಿಮೀರದಿರಿ. ಮಿತಿ ಮೀರುವವರನ್ನು ಖಂಡಿತವಾಗಿಯೂ ಅಲ್ಲಾಹು ಇಷ್ಟಪಡಲಾರನು.
(88) ಅಲ್ಲಾಹು ನಿಮಗೆ ಅನ್ನಾಧಾರವಾಗಿ ಒದಗಿಸಿರುವುದರಲ್ಲಿ ಧರ್ಮಸಮ್ಮತವಾಗಿರುವ ಮತ್ತು ಉತ್ತಮವಾಗಿರುವವುಗಳನ್ನು ತಿನ್ನಿರಿ. ಯಾರ ಮೇಲೆ ನೀವು ವಿಶ್ವಾಸವಿಡುತ್ತಿರುವಿರೋ ಆ ಅಲ್ಲಾಹುವನ್ನು ಭಯಪಡಿರಿ.
(89) ಮನಃಪೂರ್ವಕವಲ್ಲದ ನಿಮ್ಮ ಶಪಥಗಳ ನಿಮಿತ್ತ ಅಲ್ಲಾಹು ನಿಮ್ಮನ್ನು ಶಿಕ್ಷಿಸಲಾರನು. ಆದರೆ ನೀವು ದೃಢಮನಸ್ಕರಾಗಿ ಮಾಡಿದ ಶಪಥಗಳ ನಿಮಿತ್ತ ಅವನು ನಿಮ್ಮನ್ನು ಶಿಕ್ಷಿಸುವನು. ಆದ್ದರಿಂದ ಅದರ (ಅದನ್ನು ಉಲ್ಲಂಘಿಸಿರುವುದರ) ಪ್ರಾಯಶ್ಚಿತ್ತವು ನೀವು ನಿಮ್ಮ ಮನೆಯವರಿಗೆ ನೀಡುವ ಮಧ್ಯಮ ತರಹದ ಆಹಾರದಿಂದ ಹತ್ತು ಮಂದಿ ಬಡವರಿಗೆ ಉಣಿಸುವುದು ಅಥವಾ ಅವರಿಗೆ ಉಡುಪನ್ನು ನೀಡುವುದು ಅಥವಾ ಓರ್ವ ಗುಲಾಮನನ್ನು ವಿಮೋಚನೆಗೊಳಿಸುವುದಾಗಿದೆ. ಇನ್ನು ಯಾರಿಗಾದರೂ (ಅದಾವುದೂ) ಲಭಿಸದಿದ್ದರೆ ಅವನು ಮೂರು ದಿನ ಉಪವಾಸ ಆಚರಿಸಲಿ. ಇದು ನೀವು ಆಣೆಯಿಟ್ಟು ಹೇಳಿದ ನಿಮ್ಮ ಶಪಥಗಳನ್ನು ನೀವು ಉಲ್ಲಂಘಿಸಿದರೆ ಅದಕ್ಕಿರುವ ಪ್ರಾಯಶ್ಚಿತ್ತವಾಗಿದೆ. ನಿಮ್ಮ ಶಪಥಗಳನ್ನು ನೀವು ಕಾಯ್ದುಕೊಳ್ಳಿರಿ. ಹೀಗೆ ನೀವು ಕೃತಜ್ಞತೆ ಸಲ್ಲಿಸುವವರಾಗುವ ಸಲುವಾಗಿ ಅಲ್ಲಾಹು ತನ್ನ ಸೂಕ್ತಿಗಳನ್ನು ನಿಮಗೆ ವಿವರಿಸಿಕೊಡುತ್ತಿರುವನು.
(90) ಓ ಸತ್ಯವಿಶ್ವಾಸಿಗಳೇ! ಮದ್ಯ, ಜೂಜಾಟ, ಪ್ರತಿಷ್ಠಾಪನೆಗಳು(160) ಮತ್ತು ಭಾಗ್ಯ ಪರೀಕ್ಷಿಸುವ ಬಾಣಗಳು ಪೈಶಾಚಿಕವಾಗಿರುವ ನೀಚಕೃತ್ಯಗಳಾಗಿವೆ. ಆದ್ದರಿಂದ ನೀವು ಅವೆಲ್ಲವನ್ನೂ ವರ್ಜಿಸಿರಿ. ನೀವು ಯಶಸ್ಸುಗಳಿಸಲೂಬಹುದು.
160. ಅಮಲುಂಟು ಮಾಡುವ ಯಾವುದೇ ಪಾನೀಯವೂ ಮದ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಒಂದು ವಸ್ತುವಿನ ಬೆಲೆಯಾಗಿ ಅಥವಾ ಶ್ರಮದ ಪ್ರತಿಫಲವಾಗಿ ಹೊರತು ಭಾಗ್ಯ ನಿರ್ಭಾಗ್ಯಗಳನ್ನು ಆಕಸ್ಮಿಕತೆಯ ಆಧಾರದ ಮೇಲೆ ನಿರ್ಣಯಿಸುವ ಸ್ಪರ್ಧೆಗಳು, ಲಾಟರಿಗಳು, ಹಣವಿಟ್ಟು ಆಡುವ ಆಟಗಳು ಇತ್ಯಾದಿಗಳೆಲ್ಲವೂ ಜೂಜಾಟದ ವ್ಯಾಪ್ತಿಯಲ್ಲಿ ಬರುತ್ತದೆ. ಅಲ್ಲಾಹೇತರರಿಗಿರುವ ಬಲಿಪೀಠಗಳು ಮತ್ತು ಬಹುದೇವಾರಾಧನೆಗಾಗಿರುವ ಸರ್ವ ಪ್ರತಿಷ್ಠಾಪನೆಗಳೂ ಅನ್ಸಾಬ್ ಎಂಬ ಪದದ ವ್ಯಾಪ್ತಿಯಲ್ಲಿ ಬರುತ್ತದೆ.
(91) ಸೈತಾನನು ಇಚ್ಛಿಸುವುದು ಮದ್ಯ ಮತ್ತು ಜೂಜಾಟದಿಂದ ನಿಮ್ಮ ಮಧ್ಯೆ ಶತ್ರುತ್ವ ಹಾಗೂ ವಿದ್ವೇಷವನ್ನು ಬಿತ್ತಲು ಮತ್ತು ಅಲ್ಲಾಹುವಿನ ಸ್ಮರಣೆ ಹಾಗೂ ನಮಾಝ್‍ನಿಂದ ನಿಮ್ಮನ್ನು ತಡೆಯಲು ಮಾತ್ರವಾಗಿದೆ. ಆದ್ದರಿಂದ ನೀವು (ಅವುಗಳನ್ನು) ನಿಲ್ಲಿಸಲು ಸಿದ್ಧರಿರುವಿರಾ?
(92) ನೀವು ಅಲ್ಲಾಹುವನ್ನು ಮತ್ತು ಸಂದೇಶವಾಹಕರನ್ನು ಅನುಸರಿಸಿರಿ ಮತ್ತು (ಅವಿಧೇಯತೆಯುಂಟಾಗ ದಂತೆ) ಎಚ್ಚರವಹಿಸಿರಿ. ನೀವು ವಿಮುಖರಾಗುವುದಾದರೆ ನಮ್ಮ ಸಂದೇಶವಾಹಕರ ಹೊಣೆಯು ಸ್ಪಷ್ಟವಾದ ರೀತಿಯಲ್ಲಿ ಸಂದೇಶವನ್ನು ತಲುಪಿಸಿಕೊಡುವುದು ಮಾತ್ರವಾಗಿದೆ ಎಂಬುದನ್ನು ಅರಿತುಕೊಳ್ಳಿರಿ.
(93) ವಿಶ್ವಾಸವಿಟ್ಟವರು ಮತ್ತು ಸತ್ಕರ್ಮಗೈದವರಿಗೆ ಅವರು ಅಲ್ಲಾಹುವನ್ನು ಭಯಪಟ್ಟು (ನಿಷಿದ್ಧವಾಗಿರುವವುಗಳನ್ನು ವರ್ಜಿಸಿದರೆ) ಮತ್ತು ವಿಶ್ವಾಸವಿಟ್ಟರೆ ಹಾಗೂ ಸತ್ಕರ್ಮಗೈದರೆ (ಮುಂಚೆ) ಸೇವಿಸಿರುವುದರಲ್ಲಿ ಅವರಿಗೆ ದೋಷವಿಲ್ಲ.(161) ಅವರು ಆ ಬಳಿಕವೂ ಭಯಭಕ್ತಿ ಪಾಲಿಸಿದರೆ ಮತ್ತು ವಿಶ್ವಾಸದಲ್ಲಿ ದೃಢವಾಗಿ ನಿಂತರೆ. ಅದರ ನಂತರವೂ ಅವರು ಭಯಭಕ್ತಿ ಪಾಲಿಸಿದರೆ ಮತ್ತು ಉತ್ತಮ ರೀತಿಯಲ್ಲಿ ವರ್ತಿಸಿದರೆ, ಸದ್ವರ್ತನೆ ತೋರುವವರನ್ನು ಅಲ್ಲಾಹು ಇಷ್ಟಪಡುವನು.
161. ಇಸ್ಲಾಮ್ ಮದ್ಯವನ್ನು ಹಂತ ಹಂತವಾಗಿ ನಿಷಿದ್ಧಗೊಳಿಸಿತ್ತು. ಮದ್ಯವನ್ನು ಸಂಪೂರ್ಣವಾಗಿ ನಿಷಿದ್ಧಗೊಳಿಸುವುದಕ್ಕೆ ಮುಂಚೆ ಕುರ್‌ಆನ್ ಅದರಲ್ಲಿರುವ ಹಾನಿಗಳ ಕುರಿತು ಎಚ್ಚರಿಸಿತು. ಪಾನಮತ್ತನಾಗಿ ನಮಾಝ್ ಮಾಡುವುದನ್ನು ವಿರೋಧಿಸಿತು. ‘ನೀವು ನಿಲ್ಲಿಸಲು ಸಿದ್ಧರಿರುವಿರಾ’ ಎಂಬ ಸೂಕ್ತಿಯ ಮೂಲಕ ಮದ್ಯವನ್ನು ಸಂಪೂರ್ಣವಾಗಿ ನಿಷಿದ್ಧಗೊಳಿಸಲಾಯಿತು. ಪಾನನಿಷೇಧವು ಅವತೀರ್ಣಗೊಳ್ಳುವುದಕ್ಕೆ ಮುಂಚಿತವಾಗಿ ಮದ್ಯಪಾನ ಮಾಡಿದವರಿಗೆ ಪಾಪಪ್ರಜ್ಞೆ ಇರಬೇಕಾದ ಅಗತ್ಯವಿಲ್ಲವೆಂದು ಈ ಸೂಕ್ತಿಯು ಸ್ಪಷ್ಟಪಡಿಸುತ್ತದೆ.
(94) ಓ ಸತ್ಯವಿಶ್ವಾಸಿಗಳೇ! ನಿಮ್ಮ ಕೈಗಳ ಮೂಲಕ ಮತ್ತು ಭರ್ಚಿಗಳ ಮೂಲಕ ನೀವು ಬೇಟೆಯಾಡಿ ಹಿಡಿಯುವಂತಹ ಯಾವುದೇ ಜೀವಿಯ ಮೂಲಕವೂ ಅಲ್ಲಾಹು ನಿಮ್ಮನ್ನು ಪರೀಕ್ಷಿಸುವನು.(162) ಇದು ಅಗೋಚರ ಸ್ಥಿತಿಯಲ್ಲಿ ಅಲ್ಲಾಹುವನ್ನು ಭಯಪಡುವವರು ಯಾರೆಂದು ಅವನು ಅರಿಯುವುದಕ್ಕಾಗಿದೆ. ಯಾರಾದರೂ ಅದರ ಬಳಿಕವೂ ಅತಿಕ್ರಮವೆಸಗಿದರೆ ಅವನಿಗೆ ಯಾತನಾಮಯವಾದ ಶಿಕ್ಷೆಯಿದೆ.
162. ಹಜ್ಜ್ ಉಮ್ರಾ ಕರ್ಮಗಳಲ್ಲಿ ಪ್ರವೇಶಿಸಿದವರಿಗೆ ಬೇಟೆಯಾಡುವುದು ನಿಷಿದ್ಧವಾಗಿದೆ. ಕೈಚಾಚಿ ಹಿಡಿಯುವ ದೂರದಲ್ಲಿ ಪ್ರಾಣಿಗಳನ್ನು ಕಾಣುವಾಗ ಯಾತ್ರಾರ್ಥಿಯು ಈ ನಿಷೇಧವನ್ನು ಉಲ್ಲಂಘಿಸುವನೋ ಎಂದು ಅಲ್ಲಾಹು ಪರೀಕ್ಷಿಸುವನು.
(95) ಓ ಸತ್ಯವಿಶ್ವಾಸಿಗಳೇ! ನೀವು ಇಹ್ರಾಮ್‍ನಲ್ಲಿರುವಾಗ ಬೇಟೆಮೃಗವನ್ನು ಕೊಲ್ಲದಿರಿ. ನಿಮ್ಮಲ್ಲಿ ಯಾರಾದರೂ ಉದ್ದೇಶಪೂರ್ವಕವಾಗಿ ಅದನ್ನು ಕೊಂದರೆ ನಿಮ್ಮ ಪೈಕಿ ಇಬ್ಬರು ನ್ಯಾಯಸಮ್ಮತ ವ್ಯಕ್ತಿಗಳು ಅವನು ಕೊಂದಿರುವುದಕ್ಕೆ ಸಮಾನವೆಂದು ತೀರ್ಪು ನೀಡುವ ಜಾನುವಾರನ್ನು (ಅಥವಾ ಜಾನುವಾರುಗಳನ್ನು) ಕಅ್‌ಬಾಲಯಕ್ಕೆ ತಲುಪಬೇಕಾದ ಬಲಿಮೃಗವಾಗಿ ನೀಡಲಿ. ಅಥವಾ ಪ್ರಾಯಶ್ಚಿತ್ತವಾಗಿ ಕೆಲವು ಬಡವರಿಗೆ ಆಹಾರವನ್ನು ನೀಡಲಿ. ಅಥವಾ ಅದಕ್ಕೆ ಸಮಾನವಾಗಿ ಉಪವಾಸವನ್ನು ಆಚರಿಸಲಿ.(163) ಅದು ಅವರು ಮಾಡಿದ ಕೃತ್ಯದ ಪರಿಣಾಮವನ್ನು ಅವರು ಸ್ವತಃ ಅನುಭವಿಸುವುದಕ್ಕಾಗಿದೆ. ಈ ಮುಂಚೆ ಮಾಡಿರುವುದನ್ನು ಅಲ್ಲಾಹು ಕ್ಷಮಿಸಿರುವನು. ಯಾರಾದರೂ ಅದನ್ನು ಪುನರಾವರ್ತಿಸುವುದಾದರೆ ಅಲ್ಲಾಹು ಅವನಿಗೆದುರಾಗಿ ಶಿಕ್ಷಾಕ್ರಮ ಕೈಗೊಳ್ಳುವನು. ಅಲ್ಲಾಹು ಪ್ರತಾಪಶಾಲಿಯೂ ಶಿಕ್ಷಾಕ್ರಮ ಕೈಗೊಳ್ಳುವವನೂ ಆಗಿರುವನು.
163. ಕೊಂದ ಪ್ರಾಣಿಯ ಬೆಲೆಯಿಂದ ಎಷ್ಟು ಬಡವರಿಗೆ ಆಹಾರವನ್ನು ನೀಡಲು ಸಾಧ್ಯವಾಗುವುದೋ ಅಷ್ಟು ದಿನಗಳ ಕಾಲ ಉಪವಾಸ ಆಚರಿಸಬೇಕಾಗಿದೆ.
(96) ನಿಮಗೆ ಮತ್ತು ಯಾತ್ರಿಕರಿಗೆ ಜೀವನಾನುಕೂಲತೆಗಾಗಿ ಸಮುದ್ರದಲ್ಲಿ ಬೇಟೆಯಾಡುವುದನ್ನು ಮತ್ತು ಸಮುದ್ರದಲ್ಲಿರುವ ಭಕ್ಷ್ಯ ಸೇವಿಸುವುದನ್ನು ಅನುಮತಿಸಲಾಗಿದೆ. ನೀವು ಇಹ್ರಾಮ್‍ನಲ್ಲಿರುವಾಗಲೆಲ್ಲ ನಿಮಗೆ ದಡದಲ್ಲಿರುವ ಬೇಟೆ ಮೃಗಗಳನ್ನು ನಿಷಿದ್ಧಗೊಳಿಸಲಾಗಿದೆ. ಯಾರೆಡೆಗೆ ನೀವು ಒಟ್ಟುಗೂಡಿಸಲಾಗುವಿರೋ ಆ ಅಲ್ಲಾಹುವನ್ನು ನೀವು ಭಯಪಡಿರಿ.
(97) ಪವಿತ್ರ ಭವನವಾದ ಕಅ್‌ಬಾಲಯವನ್ನು ಮತ್ತು ಯುದ್ಧ ನಿಷಿದ್ಧವಾದ ತಿಂಗಳನ್ನು ಅಲ್ಲಾಹು ಜನರ ಅಸ್ತಿತ್ವಕ್ಕೆ ಆಧಾರವಾಗಿಸಿರುವನು. (ಅದೇ ರೀತಿ ಕಅ್‌ಬಾಲಯಕ್ಕೆ ಒಯ್ಯಲಾಗುವ) ಬಲಿಮೃಗವನ್ನೂ, (ಅವುಗಳ) ಕೊರಳಪಟ್ಟಿಗಳನ್ನೂ (ಅಲ್ಲಾಹು ನಿಶ್ಚಯಿಸಿರುವನು.). ಇದು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವನ್ನೂ ಅಲ್ಲಾಹು ಅರಿಯುತ್ತಿರುವನು ಮತ್ತು ಪ್ರತಿಯೊಂದು ವಿಷಯದ ಬಗ್ಗೆಯೂ ಅವನು ಅರಿವುಳ್ಳವನಾಗಿರುವನು ಎಂದು ನೀವು ತಿಳಿದುಕೊಳ್ಳುವ ಸಲುವಾಗಿದೆ.
(98) ಅಲ್ಲಾಹು ಕಠಿಣವಾಗಿ ಶಿಕ್ಷಿಸುವವನಾಗಿರುವನು ಮತ್ತು ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು ಎಂದು ಅರಿತುಕೊಳ್ಳಿರಿ.
(99) ಸಂದೇಶವಾಹಕರ ಮೇಲಿರುವುದು ಸಂದೇಶವನ್ನು ತಲುಪಿಸಿಕೊಡುವ ಹೊಣೆಗಾರಿಕೆ ಮಾತ್ರವಾಗಿದೆ. ನೀವು ಬಹಿರಂಗಪಡಿಸುವುದನ್ನು ಮತ್ತು ಮರೆಮಾಚುವುದನ್ನು ಅಲ್ಲಾಹು ಅರಿಯುವನು.
(100) (ಓ ಪ್ರವಾದಿಯವರೇ!) ಹೇಳಿರಿ: ‘ನಿಕೃಷ್ಟವಾದುದು ಮತ್ತು ಉತ್ಕೃಷ್ಟವಾದುದು ಸಮಾನವಾಗಲಾರದು. ನಿಕೃಷ್ಟವಾದುದರ ಹೆಚ್ಚಳವು ತಮ್ಮನ್ನು ಅಚ್ಚರಿಗೊಳಿಸಿದರೂ ಸರಿಯೇ! ಆದ್ದರಿಂದ ಓ ಬುದ್ಧಿವಂತರೇ! ನೀವು ಅಲ್ಲಾಹುವನ್ನು ಭಯಪಡಿರಿ. ನೀವು ಯಶಸ್ಸುಗಳಿಸಲೂ ಬಹುದು.
(101) ಓ ಸತ್ಯವಿಶ್ವಾಸಿಗಳೇ! ಕೆಲವೊಂದು ವಿಷಯಗಳ ಬಗ್ಗೆ ನೀವು ಪ್ರಶ್ನಿಸದಿರಿ.(164) ಅವುಗಳನ್ನು ನಿಮಗೆ ಬಹಿರಂಗಪಡಿಸಲಾದರೆ ಅವು ನಿಮಗೆ ಮನಃ ಕ್ಲೇಶವನ್ನುಂಟುಮಾಡುವುದು. ಕುರ್‌ಆನ್ ಅವತೀರ್ಣ ಗೊಳ್ಳುವ ಸಂದರ್ಭದಲ್ಲಿ ನೀವು ಅವುಗಳ ಬಗ್ಗೆ ಪ್ರಶ್ನಿಸುವುದಾದರೆ ನಿಮಗೆ ಅವುಗಳನ್ನು ಬಹಿರಂಗಪಡಿಸಲಾಗುವುದು. (ನೀವು ಈಗಾಗಲೇ ಪ್ರಶ್ನಿಸಿದವುಗಳನ್ನು) ಅಲ್ಲಾಹು (ನಿಮಗೆ) ಮನ್ನಿಸಿರುವನು. ಅಲ್ಲಾಹು ಅತ್ಯಧಿಕ ಮನ್ನಿಸುವವನೂ ಸಹನಾಶೀಲನೂ ಆಗಿರುವನು.
164. ಕೆಲವೊಂದು ವಿಷಯಗಳನ್ನು ಅಲ್ಲಾಹು ಕಟ್ಟುನಿಟ್ಟಾಗಿ ನಿರ್ಣಯಿಸದೆ ಬಿಟ್ಟುಬಿಡುವುದು ಮನುಷ್ಯರ ಅನುಕೂಲತೆಗಾಗಿದೆ. ಸೂರಃ ಅಲ್‍ಬಕರಾದಲ್ಲಿ ಇದಕ್ಕೊಂದು ಉದಾಹರಣೆಯನ್ನು ಕಾಣಬಹುದು. ಒಂದು ಹಸುವನ್ನು ಕೊಯ್ಯಲು ಇಸ್ರಾಈಲರೊಂದಿಗೆ ಅಲ್ಲಾಹು ಆದೇಶಿಸಿದಾಗ ಯಾವುದಾದರೂ ಒಂದು ಹಸುವನ್ನು ಕೊಯ್ದರೆ ಸಾಕಾಗುತ್ತಿತ್ತು. ಆದರೆ ಅವರು ಅನಗತ್ಯವಾದ ಪ್ರಶ್ನೆಗಳನ್ನು ಕೇಳಿದರು. ಎಲ್ಲ ಸಂಶಯಗಳನ್ನೂ ನಿವಾರಿಸಿ ಅಲ್ಲಾಹು ಹಸುವಿನ ರೂಪವನ್ನು ವಿವರಿಸಿದಾಗ ಅಂತಹ ಒಂದು ಹಸುವನ್ನು ಹುಡುಕಲು ಅವರಿಗೆ ಬಹಳ ಕಷ್ಟವಾಯಿತು. ಅನಗತ್ಯ ಪ್ರಶ್ನೆಗಳು ಸೃಷ್ಟಿಸುವ ಅವಾಂತರವನ್ನು ಇದರಿಂದ ಗ್ರಹಿಸಬಹುದಾಗಿದೆ.
(102) ನಿಮಗಿಂತ ಮುಂಚಿನ ಒಂದು ಜನತೆಯು ಅಂತಹ ಪ್ರಶ್ನೆಗಳನ್ನು ಕೇಳಿತ್ತು. ತರುವಾಯ ಅವರು ಅವುಗಳ ಬಗ್ಗೆ ಅವಿಶ್ವಾಸಿಗಳಾಗಿ ಮಾರ್ಪಟ್ಟರು.
(103) ಬಹೀರಃ, ಸಾಇಬಃ, ವಸೀಲ ಮತ್ತು ಹಾಮ್(165) ಎಂಬ ಹರಕೆ ಮೃಗಗಳೊಂದನ್ನೂ ಅಲ್ಲಾಹು ನಿಶ್ಚಯಿಸಿಲ್ಲ. ಆದರೆ ಸತ್ಯನಿಷೇಧಿಗಳು ಅಲ್ಲಾಹುವಿನ ಮೇಲೆ ಸುಳ್ಳು ಹೆಣೆಯುತ್ತಿರುವರು. ಅವರಲ್ಲಿ ಹೆಚ್ಚಿನವರೂ ಚಿಂತಿಸಿ ಅರ್ಥಮಾಡಿಕೊಳ್ಳುವುದಿಲ್ಲ.
165. ಒಂದು ಒಂಟೆಯು ಐದು ಬಾರಿ ಮರಿಹಾಕಿದರೆ ಅರಬರು ಅದನ್ನು ಆರಾಧ್ಯರಿಗಾಗಿ ಮೀಸಲಿಡುತ್ತಿದ್ದರು ಮತ್ತು ಅವುಗಳ ಕಿವಿಯನ್ನು ಕತ್ತರಿಸಿ ಗುರುತನ್ನಿಡುತ್ತಿದ್ದರು. ಇದನ್ನು ಅವರು ‘ಬಹೀರಃ’ ಎನ್ನುತ್ತಿದ್ದರು. ಉದ್ದೇಶಸಾಫಲ್ಯಕ್ಕಾಗಿ ಹರಕೆ ಮಾಡಿ ಅನಿರ್ಬಂಧಿತವಾಗಿ ಮೇಯಲು ಬಿಡುವ ಒಂಟೆಯನ್ನು ಅವರು ‘ಸಾಇಬಃ’ ಎನ್ನುತ್ತಿದ್ದರು. ಒಂದು ಆಡು ಚೊಚ್ಚಲ ಹೆರಿಗೆಯಲ್ಲಿ ಗಂಡು ಮತ್ತು ಹೆಣ್ಣು ಮರಿಗಳನ್ನು ಹಾಕಿದರೆ ಅರಬರು ಆ ಆಡನ್ನು ‘ವಸೀಲಃ’ ಎಂಬ ಹೆಸರಿನಲ್ಲಿ ಹರಕೆ ಹೊರುತ್ತಿದ್ದರು. ಒಂದು ನಿರ್ದಿಷ್ಟ ಪ್ರಾಯವನ್ನು ತಲುಪಿದ ಒಂಟೆಯನ್ನು ‘ಹಾಮ್’ ಎಂಬ ಹೆಸರಿನಲ್ಲಿ ಹರಕೆ ಹೊರುತ್ತಿದ್ದರು.
(104) ‘ಅಲ್ಲಾಹು ಅವತೀರ್ಣಗೊಳಿಸಿರುವುದರೆಡೆಗೆ ಮತ್ತು ಸಂದೇಶವಾಹಕರೆಡೆಗೆ ಬನ್ನಿರಿ’ ಎಂದು ಅವರೊಂದಿಗೆ ಹೇಳಲಾದರೆ ‘ನಮ್ಮ ಪೂರ್ವಿಕರು ಯಾವ ಸ್ಥಿತಿಯಲ್ಲಿರುವುದಾಗಿ ನಾವು ಕಂಡಿರುವೆವೋ ಅದು ನಮಗೆ ಸಾಕು’ ಎಂದು ಅವರು ಹೇಳುವರು. ಅವರ ಪೂರ್ವಿಕರು ಏನನ್ನೂ ಅರಿಯದವರೂ ಸನ್ಮಾರ್ಗ ಪಡೆಯದವರಾಗಿದ್ದರೂ (ಅದು ಅವರಿಗೆ ಸಾಕೇ?)
(105) ಓ ಸತ್ಯವಿಶ್ವಾಸಿಗಳೇ! ನೀವು ನಿಮ್ಮ ಬಗ್ಗೆ ಎಚ್ಚರ ವಹಿಸಿರಿ. ನೀವು ಸನ್ಮಾರ್ಗದಲ್ಲಿರುವವರಾದರೆ ಪಥಭ್ರಷ್ಟರಾದವರು ನಿಮಗೆ ಯಾವುದೇ ಹಾನಿಯನ್ನೂ ಮಾಡಲಾರರು. ನಿಮ್ಮೆಲ್ಲರ ಮರಳುವಿಕೆಯು ಅಲ್ಲಾಹುವಿನೆಡೆಗಾಗಿದೆ. ನೀವು ಮಾಡುತ್ತಿದ್ದುದರ ಬಗ್ಗೆ ಆಗ ಅವನು ನಿಮಗೆ ತಿಳಿಸಿಕೊಡುವನು.
(106) ಓ ಸತ್ಯವಿಶ್ವಾಸಿಗಳೇ! ನಿಮ್ಮಲ್ಲೊಬ್ಬನು ಮರಣಾಸನ್ನನಾದರೆ ವಸಿಯ್ಯತ್ತಿನ ಸಂದರ್ಭದಲ್ಲಿ ನಿಮ್ಮಲ್ಲಿನ ನ್ಯಾಯವಂತರಾದ ಇಬ್ಬರು ನಿಮ್ಮ ನಡುವೆ ಸಾಕ್ಷ್ಯವಹಿಸಲಿ. ನೀವು ಭೂಮಿಯಲ್ಲಿ ಯಾತ್ರೆ ಮಾಡುವವರಾಗಿದ್ದರೆ ಹಾಗೂ ನಿಮಗೆ ಮರಣಾಸನ್ನತೆಯುಂಟಾದರೆ (ವಸಿಯ್ಯತ್ತಿಗೆ ಸಾಕ್ಷಿಯಾಗಿ) ನಿಮ್ಮವರಲ್ಲದ ಇಬ್ಬರಾದರೂ ಸಾಕು.(166) ನಿಮಗೆ ಸಂಶಯವುಂಟಾದರೆ ನಮಾಝ್ ನಿರ್ವಹಿಸಿದ ನಂತರ ಅವರಿಬ್ಬರನ್ನೂ ತಡೆದು ನಿಲ್ಲಿಸಿರಿ ಮತ್ತು ಅವರು ಅಲ್ಲಾಹುವಿನ ಮೇಲೆ ಪ್ರಮಾಣ ಮಾಡಿ ‘ನಾವು ಇದಕ್ಕೆ (ಈ ಸತ್ಯವನ್ನು ಮರೆಮಾಚುವುದಕ್ಕೆ) ಬದಲಾಗಿ ಯಾವುದೇ ಶುಲ್ಕವನ್ನೂ ಪಡೆಯುವುದಿಲ್ಲ, ಅದು ನಿಕಟ ಸಂಬಂಧಿಕನಿಗೆ ಸೇರಿದ ವಿಷಯವಾಗಿದ್ದರೂ ಸರಿಯೇ. ಅಲ್ಲಾಹುವಿಗೋಸ್ಕರ ವಹಿಸಿದ ಸಾಕ್ಷ್ಯವನ್ನು ನಾವು ಮರೆಮಾಚುವುದಿಲ್ಲ, ನಾವೇನಾದರೂ ಹಾಗೆ ಮಾಡಿದರೆ ಖಂಡಿತವಾಗಿಯೂ ನಾವು ಪಾಪಿಗಳಲ್ಲಿ ಸೇರಿದವರಾಗುವೆವು.’ (ಎಂದು ಹೇಳಲಿ).
166. ಮುಸ್ಲಿಮರಾದ ಇಬ್ಬರು ಸಾಕ್ಷಿಗಳು ಸಿಗದಿದ್ದಲ್ಲಿ ಮುಸ್ಲಿಮೇತರರನ್ನು ವಸಿಯ್ಯತ್ತಿಗೆ ಸಾಕ್ಷಿಗಳನ್ನಾಗಿ ಮಾಡಬಹುದಾಗಿದೆ.
(107) ಇನ್ನು ಅವರು (ಇಬ್ಬರು ಸಾಕ್ಷಿಗಳು) ಪಾಪಕ್ಕೆ ಪಾತ್ರರಾಗಿರುವರು ಎಂಬುದು ಸಾಬೀತಾದರೆ(167) ತಪ್ಪುಗೈದಿದ್ದು(168) ಯಾರ ವಿರುದ್ಧವಾಗಿತ್ತೋ ಅವರ ಪೈಕಿ (ಮೃತನೊಂದಿಗೆ) ಹೆಚ್ಚು ಆಪ್ತರಾಗಿರುವ ಬೇರೆ ಇಬ್ಬರು ಅವರ ಸ್ಥಾನದಲ್ಲಿ (ಸಾಕ್ಷಿಗಳಾಗಿ) ನಿಲ್ಲಲಿ. ತರುವಾಯ ಅವರಿಬ್ಬರೂ ಅಲ್ಲಾಹುವಿನ ಮೇಲೆ ಪ್ರಮಾಣ ಮಾಡಿ ‘ಖಂಡಿತವಾಗಿಯೂ ಇವರ ಸಾಕ್ಷ್ಯಕ್ಕಿಂತಲೂ ಸತ್ಯಸಂಧವಾಗಿರುವುದು ನಮ್ಮ ಸಾಕ್ಷ್ಯವಾಗಿದೆ, ನಾವು ಯಾವುದೇ ಅತಿಕ್ರಮವನ್ನೂ ಮಾಡಿಲ್ಲ, ಹಾಗೆ ಮಾಡಿದರೆ ಖಂಡಿತವಾಗಿಯೂ ನಾವು ಅಕ್ರಮಿಗಳಲ್ಲಿ ಸೇರಿದವರಾಗಿರುವೆವು’ (ಎಂದು ಹೇಳಲಿ).
167. ವಸಿಯ್ಯತ್ತಿನ ಸಾಕ್ಷ್ಯವಹಿಸಿದವರು ನಕಲಿಯಾಗಿದ್ದಾರೆಂಬುದಕ್ಕೆ ಸ್ಪಷ್ಟವಾದ ಪುರಾವೆಯು ಲಭಿಸಿದರೆ ಅವರ ಸತ್ಯಸಂಧತೆಗೆ ವಿರುದ್ಧವಾಗಿ ಮೃತನಿಗೆ ಆಪ್ತರಾದ ಇಬ್ಬರು ವಾರೀಸುದಾರರು ಸಾಕ್ಷ್ಯವಹಿಸಬಹುದಾಗಿದೆ.
168. ನಕಲಿ ವಸಿಯ್ಯತ್ತಿನ ವಾದದಿಂದಾಗಿ ನಷ್ಟ ಹೊಂದುವವರು ನಿಯಮ ಪ್ರಕಾರ ವಾರೀಸುದಾರರಾಗಿರುವುದರಿಂದ ನಕಲಿ ವಸಿಯ್ಯತ್ತಿನ ಸಾಕ್ಷ್ಯವು ವಾರೀಸು ಹಕ್ಕುದಾರರ ವಿರುದ್ಧ ಮಾಡುವ ಅಪರಾಧವಾಗಿದೆ.
(108) ಅವರು (ಸಾಕ್ಷಿಗಳು) ನ್ಯಾಯಬದ್ಧವಾಗಿ ಸಾಕ್ಷ್ಯ ವಹಿಸಲು ಇದು ಹೆಚ್ಚು ಸೂಕ್ತವಾಗಿದೆ. ತಾವು ಪ್ರಮಾಣ ಮಾಡಿದ ಬಳಿಕ (ವಾರೀಸುದಾರರಿಗೆ) ಪ್ರಮಾಣ ಮಾಡಲು ಅವಕಾಶ ನೀಡಲಾಗುವುದೆಂದು ಅವರಿಗೆ (ಸಾಕ್ಷಿಗಳಿಗೆ) ಭಯವುಂಟಾಗಲು (ಇದು ಹೆಚ್ಚು ಸಹಕಾರಿಯಾಗಿದೆ). ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು (ಅವನ ಆದೇಶಗಳನ್ನು) ಕಿವಿಗೊಟ್ಟು ಆಲಿಸಿರಿ. ಧಿಕ್ಕಾರಿಗಳಾಗಿರುವ ಜನರನ್ನು ಅಲ್ಲಾಹು ಸನ್ಮಾರ್ಗದಲ್ಲಿ ಸೇರಿಸಲಾರನು.
(109) ಅಲ್ಲಾಹು ಸಂದೇಶವಾಹಕರನ್ನು ಒಟ್ಟುಗೂಡಿಸಿ ‘ನಿಮಗೆ ಸಿಕ್ಕಿದ ಪ್ರತಿಕ್ರಿಯೆ ಏನು?’ ಎಂದು ಪ್ರಶ್ನಿಸುವ ದಿನದಂದು ಅವರು ಹೇಳುವರು: ‘ನಮಗೆ ಯಾವ ಅರಿವೂ ಇಲ್ಲ. ಅಗೋಚರ ವಿಷಯಗಳನ್ನು ಚೆನ್ನಾಗಿ ಅರಿಯುವವನು ನೀನೇ ಆಗಿರುವೆ.’
(110) ಅಲ್ಲಾಹು (ಈಸಾರೊಂದಿಗೆ) ಹೇಳಿದ ಸಂದರ್ಭ(ವನ್ನು ಗಮನಿಸಿರಿ). ‘ಓ ಮರ್ಯಮ್‍ರ ಪುತ್ರ ಈಸಾ! ತೊಟ್ಟಿಲಿನಲ್ಲಿರುವಾಗಲೂ ಮಧ್ಯವಯಸ್ಕನಾಗಿರುವಾಗಲೂ ತಾವು ಜನರೊಂದಿಗೆ ಮಾತನಾಡುತ್ತಿದ್ದಾಗ ನಾನು ತಮಗೆ ಪವಿತ್ರಾತ್ಮನ ಮೂಲಕ ಬೆಂಬಲ ನೀಡಿದ ಸಂದರ್ಭದಲ್ಲೂ,(169) ಗ್ರಂಥ, ಜ್ಞಾನ, ತೌರಾತ್ ಮತ್ತು ಇಂಜೀಲನ್ನು ನಾನು ತಮಗೆ ಕಲಿಸಿಕೊಟ್ಟ ಸಂದರ್ಭದಲ್ಲೂ, ನನ್ನ ಅನುಮತಿ ಪ್ರಕಾರ ತಾವು ಜೇಡಿ ಮಣ್ಣಿನಿಂದ ಹಕ್ಕಿಯ ರೂಪವನ್ನು ಮಾಡಿ ತರುವಾಯ ತಾವು ಅದರಲ್ಲಿ ಊದುವಾಗ ನನ್ನ ಅನುಮತಿ ಪ್ರಕಾರ ಅದು ಹಕ್ಕಿಯಾಗಿ ಮಾರ್ಪಡುವ ಸಂದರ್ಭದಲ್ಲೂ, ನನ್ನ ಅನುಮತಿ ಪ್ರಕಾರ ತಾವು ಹುಟ್ಟು ಕುರುಡನನ್ನೂ ಕುಷ್ಠರೋಗಿಯನ್ನೂ ಗುಣಪಡಿಸುವ ಸಂದರ್ಭದಲ್ಲೂ, ನನ್ನ ಅನುಮತಿ ಪ್ರಕಾರ ತಾವು ಮರಣಹೊಂದಿದವರನ್ನು ಹೊರತರುವ ಸಂದರ್ಭದಲ್ಲೂ, ಇಸ್ರಾಈಲ್ ಸಂತತಿಗಳ ಬಳಿಗೆ ತಾವು ಸ್ಪಷ್ಟವಾದ ದೃಷ್ಟಾಂತಗಳೊಂದಿಗೆ ಹೋದಾಗ ಅವರ ಪೈಕಿ ಸತ್ಯನಿಷೇಧಿಗಳು ‘ಇದು ಸ್ಪಷ್ಟವಾದ ಮಾಂತ್ರಿಕತೆಯಲ್ಲದೆ ಬೇರೇನೂ ಅಲ್ಲ’ ಎಂದು ಹೇಳುತ್ತಾ ತಮ್ಮನ್ನು ಆಪತ್ತಿನಲ್ಲಿ ಸಿಲುಕಿಸುವುದರಿಂದ ಅವರನ್ನು ನಾನು ತಡೆದ ಸಂದರ್ಭದಲ್ಲೂ ನಾನು ತಮಗೆ ಮತ್ತು ತಮ್ಮ ತಾಯಿಗೆ ಕರುಣಿಸಿದ ಅನುಗ್ರಹವನ್ನು ಸ್ಮರಿಸಿರಿ.’
169. ಯಹೂದರು ಈಸಾ(ಅ) ರನ್ನು ವೇಶ್ಯಾಸಂತತಿಯಾಗಿ ಚಿತ್ರೀಕರಿಸಿದ್ದಕ್ಕೆ ಅವರು ತೊಟ್ಟಿಲಿನಲ್ಲಿ ಮಲಗಿರುವಾಗ ಪವಿತ್ರಾತ್ಮ (ಜಿಬ್ರೀಲ್)ರ ಬೆಂಬಲದೊಂದಿಗೆ ಉತ್ತರ ನೀಡಿದ್ದರು. ಹಾಗೆಯೇ ಮಧ್ಯಪ್ರಾಯದಲ್ಲಿ ಪ್ರವಾದಿಯಾಗಿದ್ದಾಗ ಅವರು ಪವಿತ್ರಾತ್ಮನು ತಲುಪಿಸಿಕೊಡುತ್ತಿದ್ದ ದಿವ್ಯಸಂದೇಶದ ತಳಹದಿಯಲ್ಲಿ ಜನರೊಂದಿಗೆ ಮಾತನಾಡುತ್ತಿದ್ದರು.
(111) ‘ನೀವು ನನ್ನಲ್ಲಿ ಮತ್ತು ನನ್ನ ಸಂದೇಶವಾಹಕರಲ್ಲಿ ವಿಶ್ವಾಸವಿಡಿರಿ ಎಂದು ನಾನು ಹವಾರಿಗಳಿಗೆ(170) ಬೋಧನೆ ನೀಡಿದ ಸಂದರ್ಭದಲ್ಲೂ.’ ಅವರು ಹೇಳಿದರು: ‘ನಾವು ವಿಶ್ವಾಸವಿಟ್ಟಿರುವೆವು. ನಾವು ಮುಸ್ಲಿಮರಾಗಿರುವೆವು ಎಂಬುದಕ್ಕೆ ತಾವು ಸಾಕ್ಷ್ಯ ವಹಿಸಿರಿ.’
170. ಹವಾರಿಗಳು ಈಸಾ(ಅ) ರವರ ಉತ್ತಮ ಶಿಷ್ಯರಾಗಿದ್ದರು.
(112) ಹವಾರಿಗಳು ಹೇಳಿದ ಸಂದರ್ಭ(ವನ್ನು ಗಮನಿಸಿರಿ). ‘ಓ ಮರ್ಯಮ್‍ರ ಪುತ್ರ ಈಸಾ! ಆಕಾಶದಿಂದ ನಮಗೋಸ್ಕರ ಒಂದು ಭಕ್ಷ್ಯ ಹರಿವಾಣವನ್ನು ಇಳಿಸಿಕೊಡಲು ತಮ್ಮ ರಬ್‌ಗೆ ಸಾಧ್ಯವೇ?’ ಅವರು ಹೇಳಿದರು: ‘ನೀವು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹುವನ್ನು ಭಯಪಡಿರಿ.’
(113) ಅವರು ಹೇಳಿದರು: ‘ನಮಗೆ ಅದರಿಂದ ತಿನ್ನಲು, ತನ್ನಿಮಿತ್ತ ನಮಗೆ ಮನಃಶಾಂತಿ ದೊರೆಯಲು, ತಾವು ನಮ್ಮೊಂದಿಗೆ ಹೇಳಿದ್ದು ಸತ್ಯವಾಗಿತ್ತೆಂದು ನಮಗೆ ಮನದಟ್ಟಾಗಲು ಮತ್ತು ನಾವು ಅದಕ್ಕೆ ಸಾಕ್ಷಿಗಳಾಗಲು ಬಯಸುತ್ತಿರುವೆವು.’
(114) ಮರ್ಯಮ್‍ರ ಪುತ್ರ ಈಸಾ ಹೇಳಿದರು: ‘ಓ ಅಲ್ಲಾಹ್! ಓ ನಮ್ಮ ರಬ್! ನಮಗೆ ನೀನು ಆಕಾಶದಿಂದ ಒಂದು ಭಕ್ಷ್ಯ ಹರಿವಾಣವನ್ನು ಇಳಿಸಿಕೊಡು. ನಮಗೂ, ನಮ್ಮ ಪೈಕಿ ಮೊದಲಿನವರಿಗೂ ಮತ್ತು ಕೊನೆಯವರಿಗೂ ಅದೊಂದು ಹಬ್ಬವೂ ನಿನ್ನ ವತಿಯ ಒಂದು ದೃಷ್ಟಾಂತವೂ ಆಗಿರಲಿ. ನಮಗೆ ನೀನು ಅನ್ನಾಧಾರವನ್ನು ಕರುಣಿಸು. ಅನ್ನಾಧಾರವನ್ನು ಕರುಣಿಸುವವರಲ್ಲಿ ನೀನು ಅತ್ಯತ್ತಮನಾಗಿರುವೆ.’
(115) ಅಲ್ಲಾಹು ಹೇಳಿದನು: ‘ನಾನು ನಿಮಗೆ ಅದನ್ನು ಖಂಡಿತವಾಗಿಯೂ ಇಳಿಸಿಕೊಡುವೆನು. ಆದರೆ ಅದರ ನಂತರವೂ ನಿಮ್ಮ ಪೈಕಿ ಯಾರು ಅವಿಶ್ವಾಸವಿಡುವನೋ ಅವನಿಗೆ ನಾನು ಜಗತ್ತಿನವರ ಪೈಕಿ ಯಾರಿಗೂ ನೀಡದ (ಕಠಿಣವಾದ) ಶಿಕ್ಷೆಯನ್ನು ನೀಡುವೆನು.’
(116) ಅಲ್ಲಾಹು ಹೇಳುವ ಸಂದರ್ಭ(ವನ್ನು ಗಮನಿಸಿರಿ): ‘ಓ ಮರ್ಯಮ್‍ರ ಪುತ್ರ ಈಸಾ! ಅಲ್ಲಾಹುವಿನ ಹೊರತು ನನ್ನನ್ನು ಮತ್ತು ನನ್ನ ತಾಯಿಯನ್ನು ಆರಾಧ್ಯರನ್ನಾಗಿ ಮಾಡಿಕೊಳ್ಳಿರಿ ಎಂದು ತಾವು ಜನರೊಂದಿಗೆ ಹೇಳಿರುವಿರಾ?’ ಅವರು ಹೇಳುವರು: ‘ನೀನು ಪರಮ ಪಾವನನು. ನನಗೆ (ಹೇಳಲು) ಯಾವುದೇ ಹಕ್ಕಿಲ್ಲದ ಒಂದು ಮಾತನ್ನು ನಾನು ಹೇಳುವೆನೇ? ನಾನದನ್ನು ಹೇಳಿರುತ್ತಿದ್ದರೆ ಖಂಡಿತವಾಗಿಯೂ ನೀನು ಅರಿತಿರುತ್ತಿದ್ದೆ. ನನ್ನ ಮನಸ್ಸಿನಲ್ಲಿರುವುದನ್ನು ನೀನು ಅರಿಯುವೆ. ನಿನ್ನ ಮನಸ್ಸಿನಲ್ಲಿರುವುದನ್ನು ನಾನು ಅರಿಯಲಾರೆ. ಖಂಡಿತವಾಗಿಯೂ ನೀನು ಅಗೋಚರ ವಿಷಯಗಳನ್ನು ಅರಿಯುವವನಾಗಿರುವೆ.’
(117) ‘ನೀನು ನನ್ನೊಂದಿಗೆ ಆದೇಶಿಸಿರುವಂತೆ ನನ್ನ ಮತ್ತು ನಿಮ್ಮ ರಬ್ಬಾದ ಅಲ್ಲಾಹುವನ್ನು ಆರಾಧಿಸಿರಿ ಎಂಬುದರ ವಿನಾ ಬೇರೇನನ್ನೂ ನಾನು ಅವರೊಂದಿಗೆ ಹೇಳಿರಲಿಲ್ಲ. ನಾನು ಅವರೊಂದಿಗೆ ಇದ್ದಾಗಲೆಲ್ಲವೂ ನಾನು ಅವರ ಮೇಲೆ ಸಾಕ್ಷಿಯಾಗಿದ್ದೆ. ತರುವಾಯ ನೀನು ನನ್ನನ್ನು ಪೂರ್ಣವಾಗಿ ಎತ್ತಿದ ನಂತರ ಅವರ ಪರಿವೀಕ್ಷಕನು ನೀನೇ ಆಗಿದ್ದೆ. ನೀನು ಸರ್ವ ವಿಷಯಗಳ ಮೇಲೂ ಸಾಕ್ಷಿಯಾಗಿರುವೆ.’
(118) ‘ನೀನು ಅವರನ್ನು ಶಿಕ್ಷಿಸುವುದಾದರೆ ಖಂಡಿತವಾಗಿಯೂ ಅವರು ನಿನ್ನ ದಾಸರಾಗಿರುವರು. ನೀನು ಅವರಿಗೆ ಕ್ಷಮೆ ನೀಡುವುದಾದರೆ ಖಂಡಿತವಾಗಿಯೂ ನೀನು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವೆ.’
(119) ಅಲ್ಲಾಹು ಹೇಳುವನು: ‘ಈ ದಿನವು ಸತ್ಯಸಂಧರಿಗೆ ಅವರ ಸತ್ಯಸಂಧತೆಯು ಪ್ರಯೋಜನಪಡುವ ದಿನವಾಗಿದೆ. ಅವರಿಗೆ ತಳಭಾಗದಿಂದ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿವೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅಲ್ಲಾಹು ಅವರ ಬಗ್ಗೆ ಸಂತೃಪ್ತನಾಗಿರುವನು ಮತ್ತು ಅಲ್ಲಾಹುವಿನ ಬಗ್ಗೆ ಅವರೂ ಸಂತೃಪ್ತರಾಗಿರುವರು. ಅದೇ ಮಹಾ ವಿಜಯವಾಗಿದೆ.’
(120) ಆಕಾಶಗಳಲ್ಲಿ, ಭೂಮಿಯಲ್ಲಿ ಮತ್ತು ಅವುಗಳಲ್ಲಿರುವುದರ ಆಧಿಪತ್ಯವು ಅಲ್ಲಾಹುವಿಗಾಗಿದೆ. ಅವನು ಸರ್ವ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.