(1) ಕ್ವಾಫ್. ಮಹತ್ವಪೂರ್ಣವಾದ ಕುರ್‌ಆನಿನ ಮೇಲಾಣೆ.
(2) ಅವರಲ್ಲೇ ಸೇರಿದ ಒಬ್ಬ ಮುನ್ನೆಚ್ಚರಿಕೆಗಾರರು ಅವರ ಬಳಿಗೆ ಬಂದಿರುವುದರಿಂದ ಅವರು ಅಚ್ಚರಿಪಟ್ಟರು. ಆಗ ಸತ್ಯನಿಷೇಧಿಗಳು ಹೇಳಿದರು: ‘ಇದೊಂದು ಅಚ್ಚರಿದಾಯಕ ವಿಷಯವಾಗಿದೆ.
(3) ನಾವು ಮೃತಪಟ್ಟು ಮಣ್ಣಾಗಿ ಹೋದ ಬಳಿಕ (ಪುನರುತ್ಥಾನವೇ)? ಅದು ವಿದೂರವಾಗಿರುವ ಒಂದು ಮರಳುವಿಕೆಯಾಗಿದೆ.
(4) ಖಂಡಿತವಾಗಿಯೂ ಅವರಿಂದ ಭೂಮಿಯು ಕುಗ್ಗುತ್ತಿರುವುದನ್ನು ನಾವು ಅರಿತಿರುವೆವು.(1141) (ಮಾಹಿತಿಗಳನ್ನು) ಸೂಕ್ಷ್ಮವಾಗಿ ದಾಖಲಿಸಿರುವ ಒಂದು ಗ್ರಂಥವು ನಮ್ಮ ಬಳಿಯಿದೆ.
1141. ಮಣ್ಣು ತಿನ್ನುವ ಅವರ ಮೃತದೇಹಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಅಲ್ಲಾಹು ಅರಿತಿದ್ದಾನೆ ಎಂದರ್ಥ.
(5) ಆದರೆ ಸತ್ಯವು ಅವರ ಬಳಿಗೆ ಬಂದಾಗ ಅವರು ಅದನ್ನು ನಿಷೇಧಿಸಿದರು. ಆದ್ದರಿಂದ ಅವರು ಅಲುಗಾಡುತ್ತಿರುವ (ಅನಿಶ್ಚಿತವಾಗಿರುವ) ಒಂದು ಸ್ಥಿತಿಯಲ್ಲಿರುವರು.
(6) ಅವರ ಮೇಲ್ಭಾಗದಲ್ಲಿರುವ ಆಕಾಶದೆಡೆಗೆ ಅವರು ನೋಡಿಲ್ಲವೇ? ಅದನ್ನು ನಾವು ಹೇಗೆ ನಿರ್ಮಿಸಿದೆವು ಮತ್ತು ಅಲಂಕರಿಸಿದೆವು ಎಂದು? ಅದಕ್ಕೆ ಯಾವುದೇ ಬಿರುಕುಗಳಿಲ್ಲ.(1142)
1142. ಆಕಾಶಕಾಯಗಳೆಲ್ಲವೂ ಕರಾರುವಾಕ್ಕಾದ ಪ್ರಾಪಂಚಿಕ ನಿಯಮಗಳಿಗೆ ಬದ್ಧವಾಗಿವೆ. ಆಕಾಶಲೋಕವು ಸುವ್ಯವಸ್ಥಿತವೂ ಪೂರ್ವಯೋಜಿತವೂ ಆಗಿದೆಯೆಂದು ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಅಧ್ಯಯನಗಳು ಸ್ಪಷ್ಟಪಡಿಸಿವೆ.
(7) ಭೂಮಿಯನ್ನು ನಾವು ವಿಕಸನಗೊಳಿಸಿದೆವು, ಅದರಲ್ಲಿ ಅಚಲವಾಗಿ ನಿಲ್ಲುವ ಪರ್ವತಗಳನ್ನು ಸ್ಥಾಪಿಸಿದೆವು ಮತ್ತು ಆಕರ್ಷಕವಾದ ಸರ್ವ ವಿಧ ಸಸ್ಯವರ್ಗಗಳನ್ನು ಅದರಲ್ಲಿ ಬೆಳೆಯುವಂತೆ ಮಾಡಿದೆವು.
(8) (ಸತ್ಯದೆಡೆಗೆ) ಮರಳುವ ಪ್ರತಿಯೊಬ್ಬ ದಾಸನಿಗೂ ನೋಡಿ ಅರ್ಥಮಾಡಿಕೊಳ್ಳಲು ಮತ್ತು ಸ್ಮರಿಸಲು.
(9) ನಾವು ಆಕಾಶದಿಂದ ಅನುಗ್ರಹೀತವಾದ (ಮಳೆ)ನೀರನ್ನು ಸುರಿಸಿದೆವು. ತರುವಾಯ ಅದರಿಂದ ಹಲವಾರು ವಿಧದ ತೋಟಗಳನ್ನೂ ಕಟಾವು ಮಾಡುವ ಧಾನ್ಯಗಳನ್ನೂ ಬೆಳೆಸಿದೆವು.
(10) ಪದರ ಪದರವಾಗಿ ಗೊನೆಗಳನ್ನು ಹೊಂದಿರುವ ಎತ್ತರವಾದ ಖರ್ಜೂರ ಮರಗಳನ್ನು.
(11) ಅದು (ನಮ್ಮ) ದಾಸರಿಗಿರುವ ಅನ್ನಾಧಾರವಾಗಿದೆ. ನಿರ್ಜೀವವಾಗಿದ್ದ ಭೂಮಿಗೆ ತನ್ಮೂಲಕ ನಾವು ಜೀವವನ್ನು ನೀಡಿದೆವು. (ಗೋರಿಗಳಿಂದ) ಹೊರತರಲಾಗುವುದೂ ಹೀಗೆಯೇ ಆಗಿದೆ.(1143)
1143. ನಿರ್ಜೀವ ಭೂಮಿಯನ್ನು ಜೀವಂತಗೊಳಿಸಿದಂತೆಯೇ ಮೃತಪಟ್ಟು ಮಣ್ಣಾಗಿ ಹೋದವರನ್ನು ಅಲ್ಲಾಹು ಪುನರುತ್ಥಾನಗೊಳಿಸುವನು.
(12) ಇವರಿಗಿಂತ ಮೊದಲು ನೂಹ್‍ರ ಜನತೆ, ರಸ್ಸ್‌ನ ಜನರು ಮತ್ತು ಸಮೂದ್ ಸಮುದಾಯದವರು ಸತ್ಯವನ್ನು ನಿಷೇಧಿಸಿದ್ದರು.
(13) ಆದ್ ಸಮುದಾಯದವರು, ಫಿರ್‍ಔನ್ ಮತ್ತು ಲೂತ್‍ರ ಸಹೋದರರು ಕೂಡ.
(14) ವೃಕ್ಷವನದಲ್ಲಿ ವಾಸವಾಗಿದ್ದವರು ಮತ್ತು ತುಬ್ಬಅ್ ಜನತೆ ಕೂಡ (ಸತ್ಯವನ್ನು ನಿಷೇಧಿಸಿದ್ದರು). ಅವರೆಲ್ಲರೂ ಸಂದೇಶವಾಹಕರನ್ನು ತಿರಸ್ಕರಿಸಿದ್ದರು. ಆಗ (ಅವರ ಮೇಲೆ) ನನ್ನ ಎಚ್ಚರಿಕೆ ಸತ್ಯವಾಗಿ ಬಿಟ್ಟಿತು.
(15) ಹಾಗಾದರೆ ಮೊದಲ ಬಾರಿ ಸೃಷ್ಟಿಸುವ ಮೂಲಕ ನಾವು ದಣಿದಿರುವೆವೇ? ಅಲ್ಲ, ಅವರು ಹೊಸದೊಂದು ಸೃಷ್ಟಿಯ ಬಗ್ಗೆ ಸಂದೇಹದಲ್ಲಿರುವರು.
(16) ಖಂಡಿತವಾಗಿಯೂ ನಾವು ಮನುಷ್ಯನನ್ನು ಸೃಷ್ಟಿಸಿರುವೆವು. ಅವನ ಮನಸ್ಸು ಪಿಸುಗುಟ್ಟುವುದನ್ನು ನಾವು ಅರಿಯುವೆವು. ನಾವು (ಅವನ) ಕಂಠನಾಡಿಗಿಂತಲೂ ಅವನಿಗೆ ಹೆಚ್ಚು ನಿಕಟವಾಗಿರುವೆವು.
(17) ಬಲಭಾಗದಲ್ಲಿ ಮತ್ತು ಎಡಭಾಗದಲ್ಲಿ ಕುಳಿತು ಈರ್ವರು ಪಡೆಯುವವರು ಪಡೆಯುವ ಸಂದರ್ಭ.(1144)
1144. ಪ್ರತಿಯೊಬ್ಬ ವ್ಯಕ್ತಿಯ ಇಕ್ಕೆಲಗಳಲ್ಲಿದ್ದು ಈರ್ವರು ಮಲಕ್‍ಗಳು ಅವರ ಮಾತು, ಕೃತಿಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಒಂದು ಮಲಕ್ ಒಳಿತುಗಳನ್ನು ಹಾಗೂ ಮತ್ತೊಂದು ಮಲಕ್ ಕೆಡುಕುಗಳನ್ನು ದಾಖಲಿಸಿಕೊಳ್ಳುತ್ತಾರೆ.
(18) ಅವನು ಯಾವುದೇ ಮಾತನ್ನೂ ಉಚ್ಛರಿಸಲಾರನು, ಅವನ ಬಳಿ ಸಿದ್ಧನಾಗಿ ನಿಂತಿರುವ ವೀಕ್ಷಕನು ಇಲ್ಲದಿರುವ ಹೊರತು.
(19) ಮರಣವೇದನೆಯು ಸತ್ಯದೊಂದಿಗೆ ಬರುವುದು. ಇದು ನೀನು ಯಾವುದರಿಂದ ದೂರ ಸರಿಯುತ್ತಿದ್ದಿಯೋ ಅದೇ ಆಗಿದೆ.
(20) ಕಹಳೆಯಲ್ಲಿ ಊದಲಾಗುವುದು. ಅದು ಎಚ್ಚರಿಕೆಯ ದಿನವಾಗಿದೆ.
(21) (ಅಂದು) ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೊತೆಯಲ್ಲಿ ಒಬ್ಬ ಸಾಗಿಸುವವನೂ ಮತ್ತು ಒಬ್ಬ ಸಾಕ್ಷಿಯೂ ಇರುವ ಸ್ಥಿತಿಯಲ್ಲಿ(1145) ಬರುವರು.
1145. ವಿಚಾರಣೆಯ ದಿನದಂದು ಪ್ರತಿಯೊಬ್ಬ ವ್ಯಕ್ತಿಯ ಜೊತೆಗೆ ಅವನನ್ನು ವಿಚಾರಣಾ ವೇದಿಕೆಗೆ ಸಾಗಿಸಲು ಒಬ್ಬ ಮಲಕ್ ಮತ್ತು ಅವನ ಕರ್ಮಗಳಿಗೆ ಸಾಕ್ಷ್ಯವಹಿಸುವ ಇನ್ನೊಬ್ಬ ಮಲಕ್ ಇರಲಿದ್ದಾರೆ ಎಂದರ್ಥ.
(22) (ಅಂದು ಸತ್ಯನಿಷೇಧಿಯೊಂದಿಗೆ ಹೇಳಲಾಗುವುದು): ‘ಖಂಡಿತವಾಗಿಯೂ ನೀನು ಇದರ ಬಗ್ಗೆ ಅಲಕ್ಷ್ಯನಾಗಿದ್ದೆ. ಆದರೆ ಈಗ ನಾವು ನಿನ್ನಿಂದ ನಿನ್ನ ಆ ಮುಸುಕನ್ನು ತೆಗೆದಿರುವೆವು.(1146) ಆದ್ದರಿಂದ ಇಂದು ನಿನ್ನ ದೃಷ್ಟಿಯು ಬಹಳ ಹರಿತವಾಗಿದೆ’.
1146. ಸೂಕ್ಷ್ಮ ಸತ್ಯಗಳನ್ನು ಗ್ರಹಿಸಲು ಇಹಲೋಕದಲ್ಲಿ ಅನೇಕ ಅಡ್ಡಿಗಳಿರಬಹುದು. ಪರಲೋಕದಲ್ಲಿ ಎಲ್ಲ ಮುಸುಕುಗಳನ್ನೂ ಮರೆಗಳನ್ನೂ ಸರಿಸುವುದರೊಂದಿಗೆ ಎಲ್ಲ ಸತ್ಯಗಳೂ ಅನಾವರಣಗೊಳ್ಳಲಿವೆ.
(23) ಅವನ ಸಹಚರ (ಮಲಕ್) ಹೇಳುವರು: ‘ಇದು ನನ್ನ ಬಳಿ ಸಿದ್ಧವಾಗಿರುವ (ದಾಖಲೆಯಾಗಿದೆ)’.
(24) (ಅಲ್ಲಾಹು ಮಲಕ್‍ಗಳೊಂದಿಗೆ ಆಜ್ಞಾಪಿಸುವನು): ‘ಸತ್ಯನಿಷೇಧಿ ಮತ್ತು ಧಿಕ್ಕಾರಿಯಾಗಿರುವ ಪ್ರತಿಯೊಬ್ಬರನ್ನೂ ನೀವು ನರಕಾಗ್ನಿಯಲ್ಲಿ ಹಾಕಿರಿ’.
(25) ಅಂದರೆ ಒಳಿತನ್ನು ತಡೆದವನೂ, ಅತಿಕ್ರಮಿಯೂ, ಸಂದೇಹಿಯೂ ಆಗಿರುವ ಪ್ರತಿಯೊಬ್ಬರನ್ನೂ.
(26) ಅಲ್ಲಾಹುವಿನ ಜೊತೆಗೆ ಅನ್ಯ ಆರಾಧ್ಯನನ್ನು ಮಾಡಿಕೊಂಡವನನ್ನು. ಆದ್ದರಿಂದ ಅವನನ್ನು ನೀವು ಕಠಿಣವಾದ ಶಿಕ್ಷೆಯಲ್ಲಿ ಹಾಕಿರಿ.
(27) ಅವನ ಸಹಚರನು ಹೇಳುವನು:(1147) ‘ನಮ್ಮ ಪ್ರಭೂ! ನಾನು ಅವನನ್ನು ದಾರಿತಪ್ಪಿಸಿಲ್ಲ. ಆದರೆ ಅವನು ವಿದೂರವಾದ ದುರ್ಮಾರ್ಗದಲ್ಲಿದ್ದನು’.
1147. ಈ ಸೂಕ್ತಿಯಲ್ಲಿ ಹೇಳಲಾಗಿರುವ ‘ಕರೀನ್’ (ಸಹಚರ ಅಥವಾ ಜೊತೆಗಾರ) ಮನುಷ್ಯನ ಜೊತೆಗಿದ್ದು ಅವನನ್ನು ಪಥಭ್ರಷ್ಟಗೊಳಿಸುವ ಸೈತಾನನಾಗಿದ್ದಾನೆ.
(28) ಅವನು (ಅಲ್ಲಾಹು) ಹೇಳುವನು: ‘ನೀವು ನನ್ನ ಬಳಿ ತರ್ಕಿಸದಿರಿ. ನಾನು ನಿಮಗೆ ಮೊದಲೇ ಎಚ್ಚರಿಕೆ ನೀಡಿರುವೆನು.
(29) ನನ್ನ ಬಳಿ ಮಾತು ಬದಲಾಗದು. ನಾನು ದಾಸರಿಗೆ ಕಿಂಚಿತ್ತೂ ಅನ್ಯಾಯ ಮಾಡುವವನಲ್ಲ’.
(30) ‘ನೀನು ತುಂಬಿದೆಯಾ’ ಎಂದು ನಾವು ನರಕಾಗ್ನಿಯೊಂದಿಗೆ ಕೇಳುವ ಮತ್ತು ‘ಇನ್ನೂ ಹೆಚ್ಚು ಏನಾದರೂ ಇದೆಯೇ’ ಎಂದು ಅದು (ನರಕಾಗ್ನಿಯು) ಹೇಳುವ ದಿನ!
(31) ಭಯಭಕ್ತಿ ಪಾಲಿಸಿದವರಿಗೆ ವಿದೂರವಲ್ಲದ ಸ್ಥಿತಿಯಲ್ಲಿ ಸ್ವರ್ಗವನ್ನು ಹತ್ತಿರಕ್ಕೆ ತರಲಾಗುವುದು.
(32) (ಅವರೊಂದಿಗೆ ಹೇಳಲಾಗುವುದು): ‘ಇದು ಅಲ್ಲಾಹುವಿನೆಡೆಗೆ ಅತಿಹೆಚ್ಚು ಮರಳುವ ಮತ್ತು (ಬದುಕನ್ನು) ಸಂರಕ್ಷಿಸುವ ಪ್ರತಿಯೊಬ್ಬರಿಗೂ ನೀಡಲಾಗುವುದೆಂದು ನಿಮಗೆ ವಾಗ್ದಾನ ಮಾಡಲಾಗಿರುವುದಾಗಿದೆ’.
(33) ಅಂದರೆ ಅಗೋಚರ ಸ್ಥಿತಿಯಲ್ಲಿ ಪರಮ ದಯಾಮಯನನ್ನು ಭಯಪಟ್ಟು ವಿನಮ್ರವಾದ ಹೃದಯದೊಂದಿಗೆ ಬಂದವನಿಗೆ.
(34) (ಅವರೊಂದಿಗೆ ಹೇಳಲಾಗುವುದು): ‘ನೀವು ಶಾಂತಿಯೊಂದಿಗೆ ಅದನ್ನು ಪ್ರವೇಶಿಸಿರಿ. ಇದು ಶಾಶ್ವತ ವಾಸಕ್ಕಿರುವ ದಿನವಾಗಿದೆ’.
(35) ಅಲ್ಲಿ ಅವರಿಗೆ ಅವರು ಇಚ್ಛಿಸುವುದೆಲ್ಲವೂ ಇದೆ. ನಮ್ಮ ಬಳಿ ಇನ್ನೂ ಹೆಚ್ಚುವರಿಯಿದೆ.
(36) ಇವರಿಗಿಂತ ಮುಂಚೆ ನಾವು ಎಷ್ಟು ತಲೆಮಾರುಗಳನ್ನು ನಾಶ ಮಾಡಿರುವೆವು! ಅವರು ಇವರಿಗಿಂತಲೂ ಹೆಚ್ಚು ಬಲಿಷ್ಠರಾಗಿದ್ದರು. ತರುವಾಯ ಅವರು ಪಾರಾಗಲು ಯಾವುದಾದರೂ ಸ್ಥಳವಿದೆಯೇ ಎಂದು ಊರನ್ನೆಲ್ಲ ಜಾಲಾಡಿ ನೋಡಿದರು.
(37) ಹೃದಯವುಳ್ಳವನಿಗೆ ಮತ್ತು ಮನಸ್ಸಿನ ಸಾನಿಧ್ಯತೆಯೊಂದಿಗೆ ಕಿವಿಗೊಟ್ಟು ಆಲಿಸುವವನಿಗೆ ಖಂಡಿತವಾಗಿಯೂ ಅದರಲ್ಲಿ ಒಂದು ಉಪದೇಶವಿದೆ.
(38) ಆಕಾಶಗಳನ್ನು, ಭೂಮಿಯನ್ನು ಮತ್ತು ಅವುಗಳ ಮಧ್ಯೆಯಿರುವವುಗಳನ್ನು ನಾವು ಆರು ದಿನಗಳಲ್ಲಿ ಸೃಷ್ಟಿಸಿರುವೆವು. ನಮ್ಮನ್ನು ಯಾವುದೇ ದಣಿವೂ ಸ್ಪರ್ಶಿಸಲಿಲ್ಲ.
(39) ಆದ್ದರಿಂದ ಅವರು ಹೇಳುವುದರ ಬಗ್ಗೆ ತಾವು ತಾಳ್ಮೆ ವಹಿಸಿರಿ. ಸೂರ್ಯೋದಯಕ್ಕೆ ಮುಂಚೆ ಮತ್ತು ಸೂರ್ಯಾಸ್ತಕ್ಕೆ ಮುಂಚೆ ತಮ್ಮ ರಬ್‌ನ ಸ್ತುತಿಯೊಂದಿಗೆ (ಅವನ) ಪರಿಪಾವನತೆಯನ್ನು ಕೊಂಡಾಡಿರಿ.
(40) ರಾತ್ರಿಯಲ್ಲಿ ಸ್ವಲ್ಪ ಸಮಯ ಮತ್ತು ಸಾಷ್ಟಾಂಗ (ನಮಾಝ್)ಗಳ ಬಳಿಕ ಅವನ ಪರಿಪಾವನತೆಯನ್ನು ಕೊಂಡಾಡಿರಿ.
(41) ಸಮೀಪದ ಒಂದು ಸ್ಥಳದಿಂದ ಕೂಗಿ ಕರೆಯುವ ವನು ಕೂಗಿ ಕರೆಯುವ ದಿನದ ಬಗ್ಗೆ ಕಿವಿಗೊಟ್ಟು ಆಲಿಸಿರಿ.
(42) ಅಂದರೆ ಆ ಭಯಾನಕ ಶಬ್ದವನ್ನು ಅವರು ಸತ್ಯವಾಗಿಯೂ ಆಲಿಸುವ ದಿನ! ಅದು (ಗೋರಿಗಳಿಂದ) ಹೊರಬರುವ ದಿನವಾಗಿದೆ.
(43) ಖಂಡಿತವಾಗಿಯೂ ನಾವು ಜೀವವನ್ನು ನೀಡುವೆವು ಮತ್ತು ಮರಣವನ್ನು ನೀಡುವೆವು. ಮರಳುವಿಕೆಯು ನಮ್ಮ ಬಳಿಗೇ ಆಗಿದೆ.
(44) ಭೂಮಿಯು ಅವರಿಂದ ಒಡೆದು ಅವರು ಅತಿ ವೇಗವಾಗಿ (ಹೊರ)ಬರುವ ದಿನ. ಅದು ನಮ್ಮ ಮಟ್ಟಿಗೆ ಸುಲಭವಾಗಿರುವ ಒಂದು ಒಗ್ಗೂಡಿಸುವಿಕೆಯಾಗಿದೆ.
(45) ಅವರು ಹೇಳುತ್ತಿರುವುದರ ಬಗ್ಗೆ ನಾವು ಚೆನ್ನಾಗಿ ಅರಿಯುತ್ತಿರುವೆವು. ತಾವು ಅವರ ಮೇಲಿರುವ ಸರ್ವಾಧಿಕಾರಿಯಲ್ಲ. ಆದ್ದರಿಂದ ನನ್ನ ಎಚ್ಚರಿಕೆಯನ್ನು ಭಯಪಡುವವರಿಗೆ ತಾವು ಕುರ್‌ಆನ್‍ನ ಮೂಲಕ ಉಪದೇಶವನ್ನು ನೀಡಿರಿ.