51 - Adh-Dhaariyat ()

|

(1) ಬಲವಾಗಿ (ಧೂಳಿಯನ್ನು) ಹರಡುವವುಗಳ (ಗಾಳಿಯ) ಮೇಲಾಣೆ!

(2) (ನೀರಿನ) ಭಾರವನ್ನು ಹೊರುವ (ಮೋಡಗಳ) ಮೇಲಾಣೆ!

(3) ಸುಗಮವಾಗಿ ಚಲಿಸುವ (ಹಡಗುಗಳ) ಮೇಲಾಣೆ!

(4) ವಿಷಯಗಳನ್ನು ವಿಭಾಗಿಸಿಕೊಡುವವರ (ಮಲಕ್‍ಗಳ) ಮೇಲಾಣೆ!

(5) ಖಂಡಿತವಾಗಿಯೂ ನಿಮಗೆ ಎಚ್ಚರಿಕೆ ನೀಡಲಾಗುವ ವಿಷಯವು ಸತ್ಯವೇ ಆಗಿದೆ.

(6) ಖಂಡಿತವಾಗಿಯೂ ವಿಚಾರಣೆಯು ಸಂಭವಿಸುವುದೇ ಆಗಿದೆ.

(7) ಕಕ್ಷೆಗಳನ್ನು ಹೊಂದಿರುವ ಆಕಾಶದ ಮೇಲಾಣೆ!

(8) ಖಂಡಿತವಾಗಿಯೂ ನೀವು ವಿಭಿನ್ನ ಅಭಿಪ್ರಾಯಗಳಲ್ಲಿರುವಿರಿ.

(9) (ಸತ್ಯದಿಂದ) ತಪ್ಪಿಸಲ್ಪಟ್ಟವನು ಅದರಿಂದ (ಕುರ್‌ಆನ್‍ನಿಂದ) ತಪ್ಪಿಸಲ್ಪಡುವನು.

(10) ಊಹಾಪೋಹದ ಜನರಿಗೆ ಶಾಪವಿರಲಿ.

(11) ಅಂದರೆ ಅಜ್ಞಾನದಲ್ಲಿ ಮೈಮರೆತಿರುವವರು.

(12) ‘ವಿಚಾರಣೆಯ ದಿನ ಯಾವಾಗ?’ ಎಂದು ಅವರು ಕೇಳುವರು.

(13) ಅದು ಅವರನ್ನು ನರಕಾಗ್ನಿಯಲ್ಲಿ ಪರೀಕ್ಷೆಗೆ ಒಡ್ಡಲಾಗುವ ದಿನವಾಗಿದೆ.

(14) (ಅವರೊಂದಿಗೆ ಹೇಳಲಾಗುವುದು): ‘ನಿಮಗಿರುವ ಪರೀಕ್ಷೆಯನ್ನು ಅನುಭವಿಸಿರಿ. ಇದು ನೀವು ಯಾವುದಕ್ಕಾಗಿ ಆತುರಪಡುತ್ತಿದ್ದಿರೋ ಅದೇ ಆಗಿದೆ’.

(15) ಖಂಡಿತವಾಗಿಯೂ ಭಯಭಕ್ತಿ ಪಾಲಿಸುವವರು ಸ್ವರ್ಗೋದ್ಯಾನಗಳಲ್ಲಿ ಮತ್ತು ತೊರೆಗಳಲ್ಲಿರುವರು.

(16) ಅವರಿಗೆ ಅವರ ರಬ್ ದಯಪಾಲಿಸಿರುವುದನ್ನು ಅವರು ಪಡೆಯುತ್ತಿರುವರು. ಖಂಡಿತವಾಗಿಯೂ ಅವರು ಅದಕ್ಕಿಂತ ಮೊದಲು ಸಜ್ಜನರಾಗಿದ್ದರು.

(17) ಅವರು ರಾತ್ರಿಯಲ್ಲಿ ಸ್ವಲ್ಪ ಸಮಯ ಮಾತ್ರ ನಿದ್ರಿಸುತ್ತಿದ್ದರು.(1148)
1148. ಅಥವಾ ಅವರು ರಾತ್ರಿಯಲ್ಲಿ ಅಧಿಕ ಸಮಯವೂ ಆರಾಧನಾ ಮಗ್ನರಾಗುತ್ತಿದ್ದರು.

(18) ರಾತ್ರಿಯ ಕೊನೆಯ ಹಂತಗಳಲ್ಲಿ ಅವರು ಪಾಪಮುಕ್ತಿಯನ್ನು ಬೇಡುವವರಾಗಿದ್ದರು.

(19) ಅವರ ಸಂಪತ್ತಿನಲ್ಲಿ ಬೇಡುವವನಿಗೆ ಮತ್ತು (ಅನ್ನಾಧಾರ) ತಡೆಯಲ್ಪಟ್ಟವನಿಗೆ(1149) ಒಂದು ಹಕ್ಕಿರುವುದು.
1149. ಅವರು ತಾವು ಸಂಪಾದಿಸಿದ ಸಂಪತ್ತು ತಮಗೆ ಮಾತ್ರ ಹಕ್ಕುಳ್ಳದ್ದಲ್ಲ, ಅದರಲ್ಲಿ ಬಡವರಿಗೂ, ಜೀವನೋಪಾಯಕ್ಕೆ ದಾರಿಯಿಲ್ಲದ ನಿರ್ಗತಿಕರಿಗೂ ಹಕ್ಕಿದೆಯೆಂದು ಭಾವಿಸಿಕೊಂಡವರಾಗಿದ್ದಾರೆ.

(20) ದೃಢವಿಶ್ವಾಸವುಳ್ಳವರಿಗೆ ಭೂಮಿಯಲ್ಲಿ ಅನೇಕ ದೃಷ್ಟಾಂತಗಳಿವೆ.

(21) ಸ್ವತಃ ನಿಮ್ಮ ಶರೀರಗಳಲ್ಲೂ (ಅನೇಕ ದೃಷ್ಟಾಂತಗಳಿವೆ). ಆದರೂ ನೀವು ಕಾಣುವುದಿಲ್ಲವೇ?

(22) ಆಕಾಶದಲ್ಲಿ ನಿಮ್ಮ ಅನ್ನಾಧಾರವಿದೆ ಮತ್ತು ನಿಮ್ಮೊಂದಿಗೆ ವಾಗ್ದಾನ ಮಾಡಲಾಗಿರುವುದೂ ಇದೆ.(1150)
1150. ಜೀವರಾಶಿಗಳಿಗೆಲ್ಲ ಆಹಾರ ಲಭ್ಯವಾಗುವುದು ಆಕಾಶದಿಂದ ಸುರಿಯುವ ಮಳೆಯಿಂದಲೇ ಆಗಿದೆ. ಅಲ್ಲಾಹು ವಾಗ್ದಾನ ಮಾಡಿರುವ ರಕ್ಷೆ ಮತ್ತು ಶಿಕ್ಷೆ ಕೂಡ ಆಕಾಶದಿಂದಲೇ ಬರುತ್ತದೆ.

(23) ಆಕಾಶಗಳ ಮತ್ತು ಭೂಮಿಯ ರಬ್‌ನ ಮೇಲಾಣೆ! ನೀವು ಮಾತನಾಡುತ್ತಿರುವಿರಿ ಎಂಬಂತೆಯೇ ಖಂಡಿತವಾಗಿಯೂ ಇದು ಕೂಡ ಸತ್ಯವಾಗಿದೆ.(1151)
1151. ನಿಮಗೆ ಮಾತನಾಡಲು ಸಾಧ್ಯವಿದೆ ಎಂಬುದು ನಿಮಗೆ ನಿಷೇಧಿಸಲು ಸಾಧ್ಯವಾಗದ ಸತ್ಯವಾಗಿದ್ದರೆ ಅದರಂತೆಯೇ ದೈವಿಕವಾದ ರಕ್ಷೆ ಮತ್ತು ಶಿಕ್ಷೆಗಳ ವಿಷಯವು ಕೂಡ ಅನಿಷೇಧ್ಯವಾಗಿದೆ.

(24) ಇಬ್ರಾಹೀಮ್‍ರ ಗೌರವಾನ್ವಿತ ಅತಿಥಿಗಳ ವೃತ್ತಾಂತವು ತಮ್ಮ ಬಳಿಗೆ ಬಂದಿದೆಯೇ?

(25) ಅವರು ಅವರ (ಇಬ್ರಾಹೀಮ್‍ರ) ಬಳಿಗೆ ಬಂದು ‘ಸಲಾಮ್’ ಎಂದು ಹೇಳಿದ ಸಂದರ್ಭ. ಆಗ ಅವರು ಹೇಳಿದರು: ‘ಸಲಾಮ್, (ನೀವು) ಅಪರಿಚಿತ ಜನರಾಗಿರುವಿರಿ’.

(26) ತರುವಾಯ ಅವರು ಆತುರದಿಂದ ತಮ್ಮ ಪತ್ನಿಯ ಬಳಿ ತೆರಳಿದರು. ಬಳಿಕ ಒಂದು ಕೊಬ್ಬಿದ ಕರುವನ್ನು (ಬೇಯಿಸಿ) ತಂದರು.

(27) ತರುವಾಯ ಅದನ್ನು ಅವರ ಬಳಿ ಇಟ್ಟರು. ಅವರು ಕೇಳಿದರು: ‘ನೀವು ತಿನ್ನುವುದಿಲ್ಲವೇ?’

(28) ಆಗ ಅವರ ಬಗ್ಗೆ ಅವರ (ಇಬ್ರಾಹೀಮ್‍ರ) ಮನಸ್ಸಿನಲ್ಲಿ ಭಯವುಂಟಾಯಿತು. ಅವರು ಹೇಳಿದರು: ‘ತಾವು ಭಯಪಡದಿರಿ’. ಜ್ಞಾನಿಯಾದ ಒಂದು ಗಂಡು ಮಗುವಿನ ಬಗ್ಗೆ ಅವರು ಅವರಿಗೆ (ಇಬ್ರಾಹೀಮ್‍ರಿಗೆ) ಶುಭವಾರ್ತೆಯನ್ನು ತಿಳಿಸಿದರು.

(29) ಆಗ ಅವರ ಪತ್ನಿ ಗಟ್ಟಿಯಾಗಿ ಸದ್ದು ಮಾಡುತ್ತಾ ಮುಂದಕ್ಕೆ ಬಂದರು. ತರುವಾಯ ಆಕೆ ತನ್ನ ಮುಖಕ್ಕೆ ಬಡಿದು ಹೇಳಿದರು: ‘ಬಂಜೆಯಾಗಿರುವ ಒಬ್ಬ ವೃದ್ಧೆಯೇ (ಹಡೆಯುವುದು)?’

(30) ಅವರು (ಮಲಕ್‍ಗಳು) ಹೇಳಿದರು: ‘ಹೀಗೆ ತಮ್ಮ ರಬ್ ಹೇಳಿರುವನು. ಖಂಡಿತವಾಗಿಯೂ ಅವನು ಯುಕ್ತಿಪೂರ್ಣನೂ ಸರ್ವಜ್ಞನೂ ಆಗಿರುವನು’.

(31) ಅವರು ಕೇಳಿದರು: ‘ಓ ದೂತರೇ, ಹಾಗಾದರೆ ನಿಮ್ಮ ಸಮಾಚಾರವೇನು?’

(32) ಅವರು ಹೇಳಿದರು: ‘ನಮ್ಮನ್ನು ಅಪರಾಧಿಗಳಾದ ಒಂದು ಜನತೆಯೆಡೆಗೆ ಕಳುಹಿಸಲಾಗಿದೆ.(1152)
1152. ಪ್ರವಾದಿ ಲೂತ್(ಅ) ರವರು ತಮ್ಮ ಜನತೆಗೆ ಪ್ರಕೃತಿ ವಿರುದ್ಧ ಲೈಂಗಿಕತೆ ಮತ್ತು ಇತರ ನೀಚಕೃತ್ಯಗಳನ್ನು ಕೊನೆಗೊಳಿಸಲು ನಿರಂತರ ಉಪದೇಶಿಸಿದರೂ ಅವರು ಅದಕ್ಕೆ ಕಿವಿಗೊಡದೆ ನಿರ್ಲಕ್ಷಿಸಿದಾಗ ಅವರನ್ನು ನಾಶಮಾಡುವುದಕ್ಕಾಗಿ ಮಲಕ್‍ಗಳನ್ನು ಕಳುಹಿಸಲಾಯಿತು. ಲೂತ್(ಅ) ರವರ ಊರಿಗೆ ಹೋಗುವ ದಾರಿಮಧ್ಯೆ ಅವರು ಇಬ್ರಾಹೀಮ್(ಅ) ರವರ ಬಳಿಗೆ ಬಂದಿದ್ದರು.

(33) ಜೇಡಿಮಣ್ಣಿನ ಕಲ್ಲುಗಳನ್ನು ನಾವು ಅವರ ಮೇಲೆ ಕಳುಹಿಸುವ ಸಲುವಾಗಿ.

(34) ಅತಿಕ್ರಮಿಗಳಿಗಾಗಿ ಅವರ ರಬ್‌ನ ಬಳಿ ಗುರುತು ಹಾಕಲಾದ.

(35) ಆಗ ಅಲ್ಲಿದ್ದ ಸತ್ಯವಿಶ್ವಾಸಿಗಳಲ್ಲಿ ಸೇರಿದವರನ್ನು ನಾವು ಹೊರತಂ(ದು ರಕ್ಷಿಸಿ)ದೆವು.

(36) ಆದರೆ ನಾವು ಅಲ್ಲಿ ಮುಸ್ಲಿಮರಿಗೆ ಸೇರಿದ ಒಂದೇ ಒಂದು ಮನೆಯ ವಿನಾ ಕಾಣಲಿಲ್ಲ.

(37) ಯಾತನಾಮಯ ಶಿಕ್ಷೆಯನ್ನು ಭಯಪಡುವವರಿಗೆ ನಾವು ಅಲ್ಲಿ ಒಂದು ದೃಷ್ಟಾಂತವನ್ನು ಬಾಕಿಯುಳಿಸಿದೆವು.

(38) ಮೂಸಾರ ಚರಿತ್ರೆಯಲ್ಲೂ (ದೃಷ್ಟಾಂತಗಳಿವೆ). ಸ್ಪಷ್ಟವಾದ ಆಧಾರ ಪ್ರಮಾಣದೊಂದಿಗೆ ನಾವು ಅವರನ್ನು ಫಿರ್‍ಔನ್‍ನ ಬಳಿಗೆ ಕಳುಹಿಸಿದ ಸಂದರ್ಭ.

(39) ಆಗ ಅವನು ಅವನ ಶಕ್ತಿಯ ಬಗ್ಗೆ ಅಹಂಕಾರಪಟ್ಟು ವಿಮುಖನಾದನು. (ಮೂಸಾರನ್ನು) ಒಬ್ಬ ಮಾಂತ್ರಿಕ ಅಥವಾ ಹುಚ್ಚ ಎಂದು ಅವನು ಹೇಳಿದನು.

(40) ಆದ್ದರಿಂದ ನಾವು ಅವನನ್ನು ಮತ್ತು ಅವನ ಸೈನ್ಯಗಳನ್ನು ಹಿಡಿದೆವು. ತರುವಾಯ ಅವರನ್ನು ಕಡಲಿಗೆಸೆದೆವು. ಅವನು ಆಕ್ಷೇಪಾರ್ಹನಾಗಿದ್ದನು.

(41) ಆದ್ ಜನತೆಯಲ್ಲೂ (ದೃಷ್ಟಾಂತವಿದೆ). ನಾವು ಅವರ ಮೇಲೆ ಬರಡು ಗಾಳಿಯನ್ನು ಕಳುಹಿಸಿದ ಸಂದರ್ಭ.

(42) ಆ ಗಾಳಿ ಯಾವೆಲ್ಲ ವಸ್ತುಗಳ ಮೇಲೆ ಬಂದಿತೋ ಅವೆಲ್ಲವನ್ನೂ ಅದು ಶಿಥಿಲ ಕಿಲುಬುಗಳಂತೆ ಮಾಡದೆ ಬಿಡುತ್ತಿರಲಿಲ್ಲ.

(43) ಸಮೂದ್ ಜನಾಂಗದಲ್ಲೂ (ದೃಷ್ಟಾಂತವಿದೆ). ‘ಒಂದು ಅವಧಿಯವರೆಗೆ ನೀವು ಸುಖವಾಗಿ ಜೀವಿಸಿರಿ’ ಎಂದು ಅವರೊಂದಿಗೆ ಹೇಳಲಾದ ಸಂದರ್ಭ.

(44) ತರುವಾಯ ಅವರು ತಮ್ಮ ರಬ್‌ನ ಆಜ್ಞೆಯನ್ನು ಧಿಕ್ಕರಿಸಿದರು. ಆದ್ದರಿಂದ ಅವರು ನೋಡುತ್ತಿರುವಂತೆಯೇ ಆ ಭಯಾನಕ ಶಬ್ದವು ಅವರನ್ನು ಹಿಡಿಯಿತು.

(45) ಆಗ ಅವರಿಗೆ ಎದ್ದು ನಿಲ್ಲಲೂ ಸಾಧ್ಯವಾಗಲಿಲ್ಲ. ಅವರಿಗೆ ಸ್ವತಃ ರಕ್ಷಿಸಿಕೊಳ್ಳಲೂ ಆಗಲಿಲ್ಲ.

(46) ಅದಕ್ಕಿಂತ ಮುಂಚೆ ನೂಹ್‍ರ ಜನತೆಯನ್ನೂ (ನಾವು ನಾಶ ಮಾಡಿದ್ದೆವು). ಖಂಡಿತವಾಗಿಯೂ ಅವರು ಧಿಕ್ಕಾರಿಗಳಾದ ಒಂದು ಜನತೆಯಾಗಿದ್ದರು.

(47) ಆಕಾಶವನ್ನು ನಾವು ಶಕ್ತಿಯಿಂದ ನಿರ್ಮಿಸಿರುವೆವು. ಖಂಡಿತವಾಗಿಯೂ ನಾವು ವಿಕಾಸಗೊಳಿಸುವವರಾಗಿ ರುವೆವು.(1153)
1153. ಅಲ್ಲಾಹು ವಿಶ್ವವನ್ನು ಹಿಗ್ಗಿಸುತ್ತಿದ್ದಾನೆಂದು ಇದರಿಂದ ಗ್ರಹಿಸಬಹುದಾಗಿದೆ.

(48) ಭೂಮಿಯನ್ನು ನಾವು ಒಂದು ಹಾಸಿನಂತೆ ಹರಡಿರುವೆವು. ಅದನ್ನು ಹಾಸಿದವನು ಎಷ್ಟು ಉತ್ತಮನು!

(49) ಎಲ್ಲ ವಸ್ತುಗಳಲ್ಲೂ ನಾವು ಎರಡೆರಡು ಜೋಡಿಗಳನ್ನು ಸೃಷ್ಟಿಸಿರುವೆವು. ನೀವು ಚಿಂತಿಸಿ ಗ್ರಹಿಸುವ ಸಲುವಾಗಿ.

(50) ಆದ್ದರಿಂದ ನೀವು ಅಲ್ಲಾಹುವಿನೆಡೆಗೆ ಧಾವಿಸಿರಿ. ಖಂಡಿತವಾಗಿಯೂ ನಾನು ನಿಮಗೆ ಅವನ ವತಿಯ ಸ್ಪಷ್ಟ ಮುನ್ನೆಚ್ಚರಿಕೆಗಾರನಾಗಿರುವೆನು.

(51) ನೀವು ಅಲ್ಲಾಹುವಿನೊಂದಿಗೆ ಅನ್ಯ ಆರಾಧ್ಯನನ್ನು ಮಾಡಿಕೊಳ್ಳದಿರಿ. ಖಂಡಿತವಾಗಿಯೂ ನಾನು ನಿಮಗೆ ಅವನ ವತಿಯ ಸ್ಪಷ್ಟವಾದ ಮುನ್ನೆಚ್ಚರಿಕೆಗಾರನಾಗಿರುವೆನು.

(52) ಹೀಗೆ ಇವರಿಗಿಂತ ಮುಂಚಿನವರ ಬಳಿಗೆ ಯಾವುದೇ ಸಂದೇಶವಾಹಕರು ಬಂದಾಗಲೂ ಅವರು ಅವರನ್ನು ಮಾಂತ್ರಿಕ ಅಥವಾ ಹುಚ್ಚ ಎಂದು ಹೇಳದಿರಲಿಲ್ಲ.

(53) ಅವರು ಅದನ್ನು (ಹಾಗೆ ಹೇಳುವುದನ್ನು) ಪರಸ್ಪರ ಉಪದೇಶ ಮಾಡಿರುವರೇ? ಅಲ್ಲ, ಅವರು ಅತಿಕ್ರಮಿಗಳಾದ ಒಂದು ಜನತೆಯಾಗಿರುವರು.

(54) ಆದ್ದರಿಂದ ತಾವು ಅವರಿಂದ ವಿಮುಖರಾಗಿರಿ. ತಾವು ಆಕ್ಷೇಪಾರ್ಹರಲ್ಲ.

(55) ತಾವು ಉಪದೇಶ ಮಾಡಿರಿ. ಖಂಡಿತವಾಗಿಯೂ ಉಪದೇಶವು ಸತ್ಯವಿಶ್ವಾಸಿಗಳಿಗೆ ಪ್ರಯೋಜನಪಡುವುದು.

(56) ನನ್ನನ್ನು ಆರಾಧಿಸುವುದಕ್ಕಾಗಿಯೇ ವಿನಾ ನಾನು ಜಿನ್ನ್‌ಗಳನ್ನು ಮತ್ತು ಮನುಷ್ಯರನ್ನು ಸೃಷ್ಟಿಸಿಲ್ಲ.

(57) ನಾನು ಅವರಿಂದ ಅನ್ನಾಧಾರವನ್ನು ಬಯಸುವುದಿಲ್ಲ. ಅವರು ನನಗೆ ಆಹಾರ ಒದಗಿಸಬೇಕೆಂದೂ ನಾನು ಬಯಸುವುದಿಲ್ಲ.(1154)
1154. ಗುಲಾಮ ಪದ್ಧತಿಯಲ್ಲಿ ಯಜಮಾನರು ಗುಲಾಮರನ್ನು ಖರೀದಿಸಿ ಅವರನ್ನು ಸಂರಕ್ಷಿಸುವುದು ಆ ಗುಲಾಮರಿಂದ ತಮಗೇನಾದರೂ ಆದಾಯ ಸಿಗಬೇಕು ಎಂಬ ಉದ್ದೇಶದಿಂದಾಗಿದೆ. ಆದರೆ ಅಲ್ಲಾಹು ಮತ್ತು ಮನುಷ್ಯರ ಸಂಬಂಧ ಹೀಗಲ್ಲ. ಅಲ್ಲಾಹು ತನ್ನ ದಾಸರಿಂದ ಅನ್ನಾಧಾರ ಬೇಡುವುದಿಲ್ಲ. ಅಲ್ಲಾಹು ಜಿನ್ನ್ ಮತ್ತು ಮನುಷ್ಯರಿಗೆ ಆಜ್ಞಾಪಿಸಿರುವುದು ಅವನನ್ನು ಮಾತ್ರ ಆರಾಧಿಸುತ್ತಾ, ಅವನ ಆಜ್ಞೆಗಳನ್ನು ಅನುಸರಿಸುತ್ತಾ ಯಶಸ್ವಿಯಾದ ಬದುಕನ್ನು ಸಾಗಿಸಲು ಮಾತ್ರವಾಗಿದೆ.

(58) ಖಂಡಿತವಾಗಿಯೂ ಅನ್ನಾಧಾರ ಒದಗಿಸುವವನು, ಶಕ್ತನು ಮತ್ತು ಬಲಿಷ್ಠನು ಅಲ್ಲಾಹುವಾಗಿರುವನು.

(59) (ಇಂದು) ಅಕ್ರಮವೆಸಗಿದವರಿಗೆ ಅವರ (ಪೂರ್ವಿಕರಾದ) ಸಂಗಡಿಗರಿಗೆ ಸಿಕ್ಕಿದ ಪಾಲಿನಂತಿರುವ ಪಾಲು ಖಂಡಿತವಾಗಿಯೂ ಇದೆ. ಆದ್ದರಿಂದ ಅವರು ನನ್ನೊಂದಿಗೆ ಆತುರ ಪಡದಿರಲಿ.

(60) ಆದ್ದರಿಂದ ತಮಗೆ ಮುನ್ನೆಚ್ಚರಿಕೆ ನೀಡಲಾಗುತ್ತಿರುವ ಆ ದಿನದ ನಿಮಿತ್ತ ಸತ್ಯನಿಷೇಧಿಗಳಿಗೆ ವಿನಾಶವಿದೆ.