54 - Al-Qamar ()

|

(1) ಆ (ಅಂತ್ಯ)ಘಳಿಗೆಯು ಆಸನ್ನವಾಗಿರುವುದು ಮತ್ತು ಚಂದ್ರನು ಹೋಳಾಗಿರುವನು.(1180)
1180. ಪ್ರವಾದಿ(ಸ) ರವರ ಪ್ರವಾದಿತ್ವದಲ್ಲಿ ನಾವು ವಿಶ್ವಾಸವಿಡಬೇಕಾದರೆ ಸ್ಪಷ್ಟವಾದ ಯಾವುದಾದರೂ ದೃಷ್ಟಾಂತವನ್ನು ತೋರಿಸಲೇಬೇಕು ಎಂದು ಮಕ್ಕಾದ ಸತ್ಯನಿಷೇಧಿಗಳು ಪಟ್ಟುಹಿಡಿದಾಗ ಚಂದ್ರನು ಹೋಳಾಗಿ ಮಕ್ಕಾದಲ್ಲಿದ್ದವರು ಅದನ್ನು ನೇರವಾಗಿ ಕಂಡರೆಂದು ಬುಖಾರಿ, ಮುಸ್ಲಿಮ್ ಹಾಗೂ ಇನ್ನಿತರ ಹದೀಸ್ ಗ್ರಂಥಗಳಲ್ಲಿ ಕಾಣಬಹುದು.

(2) ಅವರು ಯಾವುದೇ ದೃಷ್ಟಾಂತವನ್ನು ಕಂಡರೂ ವಿಮುಖರಾಗುವರು ಮತ್ತು ‘ಇದು ಜರುಗುತ್ತಲೇ ಇರುವ ಮಾಂತ್ರಿಕತೆಯಾಗಿದೆ’ ಎನ್ನುವರು.

(3) ಅವರು ನಿಷೇಧಿಸಿರುವರು ಮತ್ತು ತಮ್ಮ ದೇಹೇಚ್ಛೆಗಳನ್ನು ಅನುಸರಿಸಿರುವರು. ಯಾವುದೇ ವಿಷಯವೂ ಒಂದು ನಿಶ್ಚಿತ ಸ್ಥಾನವನ್ನು ತಲುಪುವುದು.

(4) ಅವರನ್ನು (ಅವಿಶ್ವಾಸದಿಂದ) ಹಿಂದೆ ಸರಿಸಲು ಪರ್ಯಾಪ್ತವಾಗಿರುವ ವಿಷಯಗಳನ್ನು ಹೊಂದಿರುವ ಕೆಲವು ವೃತ್ತಾಂತಗಳು ಖಂಡಿತವಾಗಿಯೂ ಅವರ ಬಳಿಗೆ ಬಂದಿವೆ.

(5) ಪರಿಪೂರ್ಣವಾದ ಜ್ಞಾನ. ಆದರೂ ಮುನ್ನೆಚ್ಚರಿಕೆಗಳು ಪಯೋಜನಪಡುತ್ತಿಲ್ಲ.

(6) ಆದ್ದರಿಂದ (ಓ ಪ್ರವಾದಿಯವರೇ!) ತಾವು ಅವರಿಂದ ವಿಮುಖರಾಗಿರಿ. ಅನಿಷ್ಟಕರವಾದ ಒಂದು ವಿಷಯದೆಡೆಗೆ ಕರೆ ನೀಡುವಾತನು(1181) ಕರೆ ನೀಡುವ ದಿನ!
1181. ಪ್ರಮುಖ ವ್ಯಾಖ್ಯಾನಕಾರರ ಪ್ರಕಾರ ಇಲ್ಲಿ ಕರೆ ನೀಡುವವನು ಎಂದರೆ ಅಂತ್ಯದಿನದ ವಿಚಾರಣೆಗಾಗಿ ಜನರೆಲ್ಲರೂ ಎದ್ದುಬರಲು ಕಹಳೆಯಲ್ಲಿ ಊದುವ ಇಸ್ರಾಫೀಲ್(ಅ) ಎಂಬ ಮಲಕ್ ಆಗಿರುವರು.

(7) ದೃಷ್ಟಿಗಳು ತಗ್ಗಿದ ಸ್ಥಿತಿಯಲ್ಲಿ (ನಾಲ್ಕು ದಿಕ್ಕುಗಳೆಡೆಗೂ) ಹಾರಾಡುವ ಮಿಡತೆಗಳಂತೆ ಅವರು ಗೋರಿಗಳಿಂದ ಹೊರಟು ಬರುವರು.

(8) ಕರೆ ನೀಡುವಾತನ ಬಳಿಗೆ ಅವರು ಆತುರದಿಂದ ತೆರಳುವರು. ‘ಇದೊಂದು ಪ್ರಯಾಸಕರವಾದ ದಿನವಾಗಿದೆ’ ಎಂದು ಸತ್ಯನಿಷೇಧಿಗಳು ಹೇಳುವರು.

(9) ಅವರಿಗಿಂತ ಮೊದಲು ನೂಹ್‍ರ ಜನತೆಯು ನಿಷೇಧಿಸಿತ್ತು. ಅವರು ನಮ್ಮ ದಾಸನನ್ನು ನಿಷೇಧಿಸಿದರು ಮತ್ತು ಹುಚ್ಚನೆಂದು ಕರೆದರು. ಅವರನ್ನು (ನೂಹ್‍ರನ್ನು) ಬೆದರಿಸಿ ಓಡಿಸಲಾಯಿತು.

(10) ಆಗ ಅವರು ತಮ್ಮ ರಬ್ಬನ್ನು ಕರೆದು ಪ್ರಾರ್ಥಿಸಿದರು: ‘ನಾನು ಪರಾಭವಗೊಂಡಿರುವೆನು. ಆದ್ದರಿಂದ (ನನ್ನ) ರಕ್ಷಣೆಗಾಗಿ ಕ್ರಮ ಕೈಗೊಳ್ಳು’.

(11) ಆಗ ರಭಸವಾಗಿ ಸುರಿಯುವ ನೀರಿನೊಂದಿಗೆ ನಾವು ಆಕಾಶದ್ವಾರಗಳನ್ನು ತೆರೆದೆವು.

(12) ಭೂಮಿಯಲ್ಲಿ ನಾವು ಒರತೆಗಳನ್ನು ಹರಿಸಿದೆವು. ತರುವಾಯ ನಿಶ್ಚಿತವಾದ ಒಂದು ಆಜ್ಞೆಗಾಗಿ(1182) ನೀರು ಸಂಗಮವಾಯಿತು.
1182. ಎಲ್ಲ ಸತ್ಯನಿಷೇಧಿಗಳೂ ಮುಳುಗಿ ಸಾಯಬೇಕೆಂಬುದು ನಿಶ್ಚಿತ ಆಜ್ಞೆಯಾಗಿತ್ತು.

(13) ಹಲಗೆಗಳು ಮತ್ತು ಮೊಳೆಗಳಿರುವ ಒಂದು ಹಡಗಿನಲ್ಲಿ ನಾವು ಅವರನ್ನು ಹೊತ್ತೊಯ್ದೆವು.

(14) ಅದು ನಮ್ಮ ಕಣ್ಣೋಟದಲ್ಲಿ ಚಲಿಸುತ್ತಿದೆ. ಅದು ನಿಷೇಧಿಸಲ್ಪಟ್ಟವರಿಗೆ (ನೂಹ್‍ರಿಗೆ) ಇರುವ ಪ್ರತಿಫಲವಾಗಿದೆ.

(15) ಖಂಡಿತವಾಗಿಯೂ ಅದನ್ನು (ಪ್ರಳಯವನ್ನು) ನಾವು ಒಂದು ದೃಷ್ಟಾಂತವಾಗಿ ಬಾಕಿಯುಳಿಸಿರುವೆವು. ಆದರೆ ಚಿಂತಿಸಿ ಗ್ರಹಿಸುವವರು ಯಾರಾದರೂ ಇರುವರೇ?

(16) ಆಗ ನನ್ನ ಶಿಕ್ಷೆ ಮತ್ತು ಎಚ್ಚರಿಕೆಗಳು ಹೇಗಿದ್ದವು (ಎಂಬುದನ್ನು ನೋಡಿರಿ).

(17) ಚಿಂತಿಸಿ ಗ್ರಹಿಸುವುದಕ್ಕಾಗಿ ಖಂಡಿತವಾಗಿಯೂ ನಾವು ಕುರ್‌ಆನನ್ನು ಸರಳಗೊಳಿಸಿರುವೆವು. ಆದರೆ ಚಿಂತಿಸಿ ಗ್ರಹಿಸುವವರು ಯಾರಾದರೂ ಇರುವರೇ?

(18) ಆದ್ ಜನಾಂಗವು (ಸತ್ಯವನ್ನು) ನಿಷೇಧಿಸಿತು. ತರುವಾಯ ನನ್ನ ಶಿಕ್ಷೆ ಮತ್ತು ಎಚ್ಚರಿಕೆಗಳು ಹೇಗಿದ್ದವು (ಎಂಬುದನ್ನು ನೋಡಿರಿ).

(19) ಬಿಟ್ಟಗಲದ ಅಪಶಕುನದ ಒಂದು ದಿನದಲ್ಲಿ ಭೀಕರವಾದ ಗಾಳಿಯೊಂದನ್ನು ನಾವು ಅವರೆಡೆಗೆ ಕಳುಹಿಸಿದೆವು.

(20) ಬುಡಸಮೇತ ಉರುಳುವ ಖರ್ಜೂರದ ಕಾಂಡಗಳಂತೆ ಅದು ಮನುಷ್ಯರನ್ನು ಕಿತ್ತೆಸೆಯುತ್ತಿತ್ತು.

(21) ಆಗ ನನ್ನ ಶಿಕ್ಷೆ ಮತ್ತು ಎಚ್ಚರಿಕೆಗಳು ಹೇಗಿದ್ದವು (ಎಂಬುದನ್ನು ನೋಡಿರಿ).

(22) ಚಿಂತಿಸಿ ಗ್ರಹಿಸುವುದಕ್ಕಾಗಿ ಖಂಡಿತವಾಗಿಯೂ ನಾವು ಕುರ್‌ಆನನ್ನು ಸರಳಗೊಳಿಸಿರುವೆವು. ಆದರೆ ಚಿಂತಿಸಿ ಗ್ರಹಿಸುವವರು ಯಾರಾದರೂ ಇರುವರೇ?

(23) ಸಮೂದ್ ಜನಾಂಗವು ಎಚ್ಚರಿಕೆಗಳನ್ನು ನಿಷೇಧಿಸಿತು.

(24) ಅವರು ಹೇಳಿದರು: ‘ನಮ್ಮಲ್ಲೇ ಒಬ್ಬನನ್ನು, ಒಬ್ಬ ಏಕಾಂಗಿ ಮನುಷ್ಯನನ್ನು ನಾವು ಅನುಸರಿಸುವುದೇ? ಹಾಗಾದರೆ ಖಂಡಿತವಾಗಿಯೂ ನಾವು ದುರ್ಮಾರ್ಗದಲ್ಲಿ ಮತ್ತು ಬುದ್ಧಿಭ್ರಮಣೆಯಲ್ಲಾಗುವೆವು.

(25) ನಮ್ಮ ನಡುವೆ ಅವನಿಗೆ ಮಾತ್ರ ಉಪದೇಶ ನೀಡಲಾಗಿದೆ ಎಂದೇ? ಅಲ್ಲ, ಅವನು ದುರಹಂಕಾರಿಯಾದ ಒಬ್ಬ ಮಿಥ್ಯವಾದಿಯಾಗಿರುವನು’.

(26) ಆದರೆ ದುರಹಂಕಾರಿಯಾದ ಮಿಥ್ಯವಾದಿ ಯಾರೆಂದು ಅವರು ನಾಳೆ ಅರಿತುಕೊಳ್ಳುವರು.

(27) (ಸಾಲಿಹ್‍ರೊಂದಿಗೆ ನಾವು ಹೇಳಿದೆವು): ‘ಖಂಡಿತವಾಗಿಯೂ ನಾವು ಅವರಿಗೆ ಒಂದು ಪರೀಕ್ಷೆ ಎಂಬ ನಿಟ್ಟಿನಲ್ಲಿ ಒಂಟೆಯನ್ನು ಕಳುಹಿಸುವೆವು. ಆದ್ದರಿಂದ ತಾವು ಅವರನ್ನು ವೀಕ್ಷಿಸುತ್ತಿರಿ ಮತ್ತು ತಾಳ್ಮೆ ವಹಿಸಿರಿ.

(28) ನೀರನ್ನು ಅವರ ಮಧ್ಯೆ (ಅವರಿಗೆ ಮತ್ತು ಒಂಟೆಗೆ) ಪಾಲು ಮಾಡಲಾಗಿದೆಯೆಂದು ತಾವು ಅವರಿಗೆ ತಿಳಿಸಿರಿ. ತಮ್ಮ ತಮ್ಮ ಜಲಪಾನದ ಸರದಿಯಲ್ಲಿ (ಅದರ ಹಕ್ಕುದಾರರು) ಹಾಜರಾಗಲಿ’.

(29) ಆಗ ಅವರು ತಮ್ಮ ಗೆಳೆಯನನ್ನು ಕರೆದರು.(1183) ಅವನು (ಆ ಕೃತ್ಯವನ್ನು) ವಹಿಸಿಕೊಂಡನು. ತರುವಾಯ (ಒಂಟೆಯ) ಕತ್ತನ್ನು ಕೊಯ್ದನು.
1183. ಅವರ ಪೈಕಿ ಯಾವುದಕ್ಕೂ ಸಿದ್ಧನಾಗಿದ್ದ ಒಬ್ಬ ವ್ಯಕ್ತಿಯ ಮೂಲಕ ಅವರು ಆ ಕ್ರೂರಕೃತ್ಯವನ್ನು ಮಾಡಿಸಿದರು.

(30) ಆಗ ನನ್ನ ಶಿಕ್ಷೆ ಮತ್ತು ಎಚ್ಚರಿಕೆಗಳು ಹೇಗಿದ್ದವು (ಎಂಬುದನ್ನು ನೋಡಿರಿ).

(31) ನಾವು ಅವರ ಮೇಲೆ ಒಂದು ಭಯಾನಕ ಶಬ್ದವನ್ನು ಕಳುಹಿಸಿದೆವು. ಆಗ ಅವರು ಹಟ್ಟಿ ನಿರ್ಮಿಸುವವನು ಬಿಟ್ಟು ಹೋಗುವ ಹುಲ್ಲಿನ ಕಡ್ಡಿಗಳಂತಾದರು.

(32) ಚಿಂತಿಸಿ ಗ್ರಹಿಸುವುದಕ್ಕಾಗಿ ಖಂಡಿತವಾಗಿಯೂ ನಾವು ಕುರ್‌ಆನನ್ನು ಸರಳಗೊಳಿಸಿರುವೆವು. ಆದರೆ ಚಿಂತಿಸಿ ಗ್ರಹಿಸುವವರು ಯಾರಾದರೂ ಇರುವರೇ?

(33) ಲೂತ್‌ರ ಜನತೆ ಎಚ್ಚರಿಕೆಗಳನ್ನು ನಿಷೇಧಿಸಿದರು.

(34) ಖಂಡಿತವಾಗಿಯೂ ನಾವು ಅವರ ಮೇಲೆ ಹರಳುಗಲ್ಲುಗಳ ಒಂದು ಗಾಳಿಯನ್ನು ಕಳುಹಿಸಿದೆವು. ಲೂತ್‌ರ ಕುಟುಂಬದ ಹೊರತು. ರಾತ್ರಿಯ ಅಂತ್ಯ ಸಮಯದಲ್ಲಿ ನಾವು ಅವರನ್ನು ರಕ್ಷಿಸಿದೆವು.

(35) ನಮ್ಮ ವತಿಯ ಒಂದು ಅನುಗ್ರಹವಾಗಿ. ಕೃತಜ್ಞತೆ ಸಲ್ಲಿಸುವವರಿಗೆ ನಾವು ಹೀಗೆ ಪ್ರತಿಫಲವನ್ನು ನೀಡುವೆವು.

(36) ನಮ್ಮ ಶಿಕ್ಷಾಕ್ರಮದ ಬಗ್ಗೆ ಅವರು (ಲೂತ್) ಅವರಿಗೆ ಎಚ್ಚರಿಕೆ ನೀಡಿದ್ದರು. ಆದರೆ ಅವರು ಅನುಮಾನಪಟ್ಟು ಎಚ್ಚರಿಕೆಗಳನ್ನು ತಿರಸ್ಕರಿಸಿದರು.

(37) ಅವರು ಅವರೊಂದಿಗೆ (ಲೂತ್‌ರೊಂದಿಗೆ) ಅವರ ಅತಿಥಿಗಳನ್ನು (ನೀಚಕೃತ್ಯಕ್ಕಾಗಿ) ಬಿಟ್ಟುಕೊಡಬೇಕೆಂದು ಬೇಡಿಕೆಯಿಟ್ಟರು. ಆಗ ಅವರ ಕಣ್ಣುಗಳನ್ನು ನಾವು ಅಳಿಸಿ ಹಾಕಿದೆವು. ‘ನನ್ನ ಶಿಕ್ಷೆ ಮತ್ತು ಎಚ್ಚರಿಕೆಗಳನ್ನು ಆಸ್ವಾದಿಸಿರಿ’ (ಎಂದು ನಾವು ಅವರೊಂದಿಗೆ ಹೇಳಿದೆವು).

(38) ಶಾಶ್ವತವಾದ ಶಿಕ್ಷೆಯು ಮುಂಜಾನೆ ಅವರ ಬಳಿಗೆ ಬಂದೇ ಬಿಟ್ಟಿತು.

(39) ‘ನನ್ನ ಶಿಕ್ಷೆ ಮತ್ತು ಎಚ್ಚರಿಕೆಗಳನ್ನು ಆಸ್ವಾದಿಸಿರಿ’ (ಎಂದು ನಾವು ಅವರೊಂದಿಗೆ ಹೇಳಿದೆವು).

(40) ಚಿಂತಿಸಿ ಗ್ರಹಿಸುವುದಕ್ಕಾಗಿ ಖಂಡಿತವಾಗಿಯೂ ನಾವು ಕುರ್‌ಆನನ್ನು ಸರಳಗೊಳಿಸಿರುವೆವು. ಆದರೆ ಚಿಂತಿಸಿ ಗ್ರಹಿಸುವವರು ಯಾರಾದರೂ ಇರುವರೇ?

(41) ಫಿರ್‍ಔನ್ ಕುಟುಂಬಕ್ಕೂ ಎಚ್ಚರಿಕೆಗಳು ಬಂದಿದ್ದವು.

(42) ಅವರು ನಮ್ಮ ದೃಷ್ಟಾಂತಗಳನ್ನು ಸಂಪೂರ್ಣವಾಗಿ ನಿಷೇಧಿಸಿದರು. ಆಗ ಪ್ರತಾಪಶಾಲಿ ಮತ್ತು ಬಲಿಷ್ಠನು ಹಿಡಿಯುವಂತೆ ನಾವು ಅವರನ್ನು ಹಿಡಿದೆವು.

(43) (ಓ ಅರಬ್ ಜನರೇ!) ನಿಮ್ಮಲ್ಲಿರುವ ಸತ್ಯನಿಷೇಧಿಗಳು ಅವರಿಗಿಂತಲೂ ಒಳ್ಳೆಯವರೇ? ಅಥವಾ ಪ್ರಮಾಣ ಗ್ರಂಥಗಳಲ್ಲಿ ನಿಮಗೇನಾದರೂ ವಿನಾಯಿತಿಯಿದೆಯೇ?

(44) ಅಥವಾ, ‘ನಾವು ಸಂಘಟಿತರಾಗಿರುವೆವು ಮತ್ತು ಆತ್ಮರಕ್ಷಣೆಗೆ ನಾವು ಸಮರ್ಥರಾಗಿರುವೆವು’ ಎಂದು ಅವರು ಹೇಳುತ್ತಿರುವರೇ?

(45) ಆದರೆ ಆ ಗುಂಪು ತರುವಾಯ ಪರಾಭವಗೊಳ್ಳುವುದು. ಅವರು ಬೆನ್ನು ತೋರಿಸಿ ಓಡುವರು.

(46) ಅಲ್ಲ, ಅವರಿಗಿರುವ ನಿಶ್ಚಿತ ಸಮಯವು ಅಂತ್ಯಘಳಿಗೆಯಾಗಿದೆ. ಆ ಅಂತ್ಯಘಳಿಗೆಯು ಅತಿ ಅಪಾಯಕಾರಿಯೂ ಅತ್ಯಂತ ಕಹಿಯೂ ಆಗಿದೆ.

(47) ಖಂಡಿತವಾಗಿಯೂ ಆ ಅಪರಾಧಿಗಳು ಪಥಭ್ರಷ್ಟತೆಯಲ್ಲೂ, ಬುದ್ಧಿಭ್ರಮಣೆಯಲ್ಲೂ ಇರುವರು.

(48) ಮುಖವನ್ನು ನೆಲಕ್ಕೆ ಚುಚ್ಚಿ ಅವರನ್ನು ನರಕಾಗ್ನಿಯಲ್ಲಿ ಎಳೆದೊಯ್ಯಲಾಗುವ ದಿನ! (ಅಂದು ಅವರೊಂದಿಗೆ ಹೇಳಲಾಗುವುದು): ‘ನೀವು ನರಕಾಗ್ನಿಯ ಸ್ಪರ್ಶವನ್ನು ಆಸ್ವಾದಿಸಿರಿ!’

(49) ಖಂಡಿತವಾಗಿಯೂ ಪ್ರತಿಯೊಂದು ವಸ್ತುವನ್ನೂ ನಾವು ಒಂದು ನಿರ್ಣಯದ ಪ್ರಕಾರ ಸೃಷ್ಟಿಸಿರುವೆವು.

(50) ನಮ್ಮ ಆಜ್ಞೆಯು ಕಣ್ಣೆವೆಯಿಕ್ಕುವಂತೆ ಕೇವಲ ಒಂದು ಘೋಷಣೆ ಮಾತ್ರವಾಗಿದೆ.(1184)
1184. ಮನುಷ್ಯರು ತೀರ್ಮಾನಗಳನ್ನು ಘೋಷಿಸಲು ಹಾಗೂ ಜಾರಿಗೆ ತರಲು ಹಲವಾರು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಮತ್ತು ಸಂದರ್ಭ ಸನ್ನಿವೇಶಗಳು ಅದಕ್ಕೆ ಅನುಕೂಲವಾಗಿರಬೇಕಾಗುತ್ತದೆ. ಆದರೆ ಅಲ್ಲಾಹುವಿನ ಆದೇಶವು ಒಂದಿಷ್ಟೂ ತಡವಾಗದೆ ತಕ್ಷಣ ಜಾರಿಗೊಳ್ಳುತ್ತದೆ.

(51) (ಓ ಸತ್ಯನಿಷೇಧಿಗಳೇ!) ಖಂಡಿತವಾಗಿಯೂ ನಿಮ್ಮ ಪಂಗಡದವರನ್ನು ನಾವು ನಾಶ ಮಾಡಿರುವೆವು. ಆದರೆ ಚಿಂತಿಸಿ ಗ್ರಹಿಸುವವರು ಯಾರಾದರೂ ಇರುವರೇ?

(52) ಅವರು ಮಾಡಿರುವುದೆಲ್ಲವೂ ದಾಖಲೆಗಳಲ್ಲಿದೆ.

(53) ಚಿಕ್ಕದಾಗಿರುವ ಮತ್ತು ದೊಡ್ಡದಾಗಿರುವ ಎಲ್ಲ ವಿಷಯಗಳನ್ನೂ ಲಿಖಿತಗೊಳಿಸಲಾಗಿದೆ.

(54) ಖಂಡಿತವಾಗಿಯೂ ಭಯಭಕ್ತಿ ಪಾಲಿಸಿದವರು ಉದ್ಯಾನಗಳಲ್ಲಿ ಮತ್ತು ನದಿಗಳಲ್ಲಿರುವರು.

(55) ಸತ್ಯದ ಆಸನದಲ್ಲಿ. ಬಲಿಷ್ಠನಾಗಿರುವ ಸಾಮ್ರಾಟನ ಬಳಿಯಲ್ಲಿ.