56 - Al-Waaqia ()

|

(1) ಆ ಘಟನೆಯು ಸಂಭವಿಸಿದಾಗ.

(2) ಅದರ ಸಂಭವನೀಯತೆಯನ್ನು ನಿಷೇಧಿಸುವವರು ಯಾರೂ ಇರಲಾರರು.

(3) (ಆ ಘಟನೆಯು ಕೆಲವರನ್ನು) ಕೆಳಗಿಳಿಸುವುದು ಮತ್ತು (ಕೆಲವರನ್ನು) ಮೇಲೇರಿಸುವುದು.(1198)
1198. ಇಹಲೋಕದಲ್ಲಿ ಉನ್ನತ ಸ್ಥಾನದಲ್ಲಿದ್ದ ಅನೇಕ ಮಂದಿಯ ಪದವಿ ಅಂತ್ಯದಿನದಂದು ಕೀಳಾಗಿಸಲಾಗುವುದು ಮತ್ತು ಇಹಲೋಕದಲ್ಲಿ ದೌರ್ಜನ್ಯಕ್ಕೊಳಗಾಗಿದ್ದ ಹಾಗೂ ಅವಹೇಳನಕ್ಕೊಳಗಾಗಿದ್ದ ಅನೇಕ ಜನರ ಪದವಿ ಉನ್ನತವಾಗಿರುವುದು ಎಂದರ್ಥ.

(4) ಭೂಮಿಯನ್ನು ತೀಕ್ಷ್ಣವಾಗಿ ನಡುಗಿಸಲಾಗುವಾಗ.

(5) ಪರ್ವತಗಳು ನುಚ್ಚುನೂರಾಗುವಾಗ.

(6) ತರುವಾಯ ಅದು ಹಾರುವ ಧೂಳಿಯಾಗುವಾಗ.

(7) ಆಗ ನೀವು ಮೂರು ಗುಂಪುಗಳಾಗುವಿರಿ.

(8) ಒಂದು ಗುಂಪು ಬಲಭಾಗದವರು. ಈ ಬಲಭಾಗದವರ ಸ್ಥಿತಿಯೇನು?

(9) ಇನ್ನೊಂದು ಗುಂಪು ಎಡಭಾಗದವರು. ಈ ಎಡಭಾಗದವರ ಸ್ಥಿತಿಯೇನು?(1199)
1199. ಸತ್ಯವಿಶ್ವಾಸಿಗಳಿಗೆ ಮತ್ತು ಸತ್ಕರ್ಮಿಗಳಿಗೆ ಪರಲೋಕದಲ್ಲಿ ಅವರ ಕರ್ಮ ದಾಖಲೆಯನ್ನು ಬಲಗೈಯಲ್ಲಿ ನೀಡಲಾಗುವುದೆಂದು ಕುರ್‌ಆನ್ ಸ್ಪಷ್ಟಪಡಿಸಿದೆ (17:71; 69:19; 84:7). ಇಲ್ಲಿ ಬಲಭಾಗದವರು ಎಂಬ ಪದವು ಇದನ್ನೇ ಸೂಚಿಸುತ್ತದೆಂದು ಹೆಚ್ಚಿನ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ. ಸತ್ಯನಿಷೇಧಿ ಮತ್ತು ದುಷ್ಕರ್ಮಿಗಳಾಗಿರುವ ಜನರಿಗೆ ಪರಲೋಕದಲ್ಲಿ ಅವರ ಕರ್ಮ ದಾಖಲೆಯನ್ನು ಎಡಗೈಯ ಮೂಲಕ ನೀಡಲಾಗುವುದೆಂದೂ ಹೇಳಲಾಗಿದೆ. (69:25). ಇಲ್ಲಿ ಎಡಭಾಗದವರು ಎಂಬ ಪದವು ಇದನ್ನೇ ಸೂಚಿಸುತ್ತದೆಂದು ಹೆಚ್ಚಿನ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ. ಬಲಭಾಗ ಎಂಬ ಅರ್ಥದ ಹೊರತಾಗಿ ‘ಮೈಮನಃ’ ಎಂಬ ಪದಕ್ಕೆ ಉತ್ಕೃಷ್ಟ ಎಂಬ ಅರ್ಥವಿದೆ. ‘ಮಶ್‍ಅಮಃ’ ಎಂಬ ಪದಕ್ಕೆ ಎಡಭಾಗ ಎಂಬ ಅರ್ಥದ ಹೊರತಾಗಿ ನಿಕೃಷ್ಟ ಎಂಬ ಅರ್ಥವಿದೆ. ಆದ್ದರಿಂದ ‘ಅಸ್‍ಹಾಬುಲ್ ಮೈಮನಃ’ ಮತ್ತು ‘ಅಸ್‍ಹಾಬುಲ್ ಮಶ್‍ಅಮಃ’ ಎಂಬ ಪದಗಳಿಗೆ ಅನುಕ್ರಮವಾಗಿ ಉತ್ಕೃಷ್ಟರು ಮತ್ತು ನಿಕೃಷ್ಟರು ಎಂಬ ಅರ್ಥವೂ ಬರುತ್ತದೆ.

(10) (ಸತ್ಯವಿಶ್ವಾಸದಲ್ಲಿ ಮತ್ತು ಸತ್ಕರ್ಮಗಳಲ್ಲಿ) ಮುಂಚೂಣಿಯಲ್ಲಿದ್ದವರು (ಪರಲೋಕದಲ್ಲಿಯೂ) ಮುಂಚೂಣಿಯಲ್ಲಿರುವರು.

(11) ಅವರು ಸಾಮೀಪ್ಯ ನೀಡಲಾದವರಾಗಿರುವರು.

(12) ಸುಖಾನುಭೂತಿಗಳು ತುಂಬಿದ ಸ್ವರ್ಗೋದ್ಯಾನಗಳಲ್ಲಿ.

(13) ಇವರು ಪೂರ್ವಿಕರಲ್ಲಿನ ಒಂದು ವಿಭಾಗವೂ.

(14) ನಂತರದವರಲ್ಲಿರುವ ಕೆಲವರೂ ಆಗಿರುವರು.(1200)
1200. ಸ್ವರ್ಗವಾಸಿಗಳ ಪೈಕಿ ಸತ್ಯವಿಶ್ವಾಸದ ಪರಿಪೂರ್ಣತೆಯಿಂದ ಮತ್ತು ಸತ್ಕರ್ಮಗಳ ಆಧಿಕ್ಯದಿಂದ ಅಲ್ಲಾಹುವಿನ ಬಳಿ ಅತಿಹೆಚ್ಚು ಸಾಮೀಪ್ಯ ಗಳಿಸಿದವರು ಮತ್ತು ಅದಕ್ಕಿಂತ ಕೆಳಗಿನ ದರ್ಜೆಯಲ್ಲಿರುವವರು ಇದ್ದಾರೆಂದು ಇದರಿಂದ ಗ್ರಹಿಸಬಹುದಾಗಿದೆ.

(15) ಅವರು ಸ್ವರ್ಣದಾರದಿಂದ ನೇಯಲಾದ ಮಂಚಗಳಲ್ಲಿರುವರು.

(16) ಅವುಗಳಲ್ಲಿ ಅವರು ಪರಸ್ಪರ ಅಭಿಮುಖವಾಗಿ ಒರಗಿ ಕುಳಿತಿರುವರು.

(17) ಚಿರಂಜೀವಿಗಳಾದ ಬಾಲಕರು ಅವರ ನಡುವೆ ಸುತ್ತುತ್ತಿರುವರು.

(18) ಲೋಟಗಳು, ಹೂಜಿಗಳು ಮತ್ತು ಶುದ್ಧವಾದ ಒರತೆ ನೀರು ತುಂಬಲಾದ ಪಾನೀಯ ಪಾತ್ರೆಯೊಂದಿಗೆ.

(19) ಅದನ್ನು (ಕುಡಿಯುವುದರಿಂದ) ಅವರಿಗೆ ತಲೆನೋವಾಗಲಿ, ನಶೆಯಾಗಲಿ ಉಂಟಾಗದು.

(20) ಅವರು ಇಷ್ಟಪಟ್ಟು ಆರಿಸುವ ವಿಧದಲ್ಲಿರುವ ಫಲಗಳೊಂದಿಗೆ.

(21) ಅವರು ಆಸೆಪಡುವ ಹಕ್ಕಿಗಳ ಮಾಂಸದೊಂದಿಗೆ (ಆ ಬಾಲಕರು ಸುತ್ತುತ್ತಿರುವರು).

(22) ವಿಶಾಲವಾದ ಕಣ್ಣುಗಳುಳ್ಳ ಬೆಳ್ಳಗಿನ ತರುಣಿಯರು (ಅವರಿಗಿರುವರು).

(23) (ಚಿಪ್ಪುಗಳಲ್ಲಿ) ಬಚ್ಚಿಡಲಾಗಿರುವ ಮುತ್ತುಗಳಂತಿರುವವರು.

(24) ಅವರು ಮಾಡುತ್ತಿರುವುದಕ್ಕಿರುವ ಪ್ರತಿಫಲವಾಗಿ (ಇವೆಲ್ಲವನ್ನೂ ದಯಪಾಲಿಸಲಾಗುವುದು).

(25) ಅನಾವಶ್ಯಕ ಮಾತುಗಳನ್ನಾಗಲಿ ದೋಷಾರೋಪಗಳನ್ನಾಗಲಿ ಅವರು ಅಲ್ಲಿ ಆಲಿಸಲಾರರು.

(26) ಶಾಂತಿ! ಶಾಂತಿ! ಎಂಬ ಮಾತಿನ ಹೊರತು.

(27) ಬಲಭಾಗದವರು! ಈ ಬಲಭಾಗದವರ ಸ್ಥಿತಿಯೇನು?

(28) ಅವರು ಮುಳ್ಳುಗಳಿಲ್ಲದ ಬೋರೆ ಮರದಲ್ಲಿ.

(29) ಪದರ ಪದರವಾದ ಗೊನೆಗಳಿರುವ ಬಾಳೆಗಳಲ್ಲಿ.

(30) ವಿಶಾಲವಾದ ನೆರಳಿನಲ್ಲಿ.

(31) ಸದಾ ಹರಿಯುತ್ತಿರುವ ನೀರಿನಲ್ಲಿ.

(32) ಹೇರಳ ಹಣ್ಣುಹಂಪಲುಗಳಲ್ಲಿ.

(33) ಎಂದಿಗೂ ಮುಗಿಯದ ಮತ್ತು ತಡೆಯಲ್ಪಡದ.

(34) ಮತ್ತು ಎತ್ತರದ ಹಾಸಿಗೆಗಳಲ್ಲಿರುವರು.

(35) ಖಂಡಿತವಾಗಿಯೂ ನಾವು ಅವರನ್ನು (ಸ್ವರ್ಗದ ಸ್ತ್ರೀಯರನ್ನು) ವಿಶೇಷ ರೀತಿಯಲ್ಲಿ ಸೃಷ್ಟಿಸಿರುವೆವು.(1201)
1201. ಸ್ವರ್ಗವಾಸಿಗಳಾದ ಸ್ತ್ರೀಯರನ್ನು ಇಹಲೋಕದ ಸ್ಥಿತಿಗಿಂತ ಭಿನ್ನವಾಗಿ ಅನ್ಯೂನವಾಗಿ ಸೃಷ್ಟಿಸಲಾಗುವುದು ಎಂದರ್ಥ.

(36) ನಾವು ಅವರನ್ನು ಕನ್ಯೆಯರನ್ನಾಗಿ ಮಾಡಿರುವೆವು.

(37) ಪ್ರಿಯತಮೆಯರನ್ನಾಗಿ ಮತ್ತು ಸಮವಯಸ್ಕರನ್ನಾಗಿ ಮಾಡಿರುವೆವು.

(38) ಬಲಭಾಗದವರಿಗಾಗಿ.

(39) ಅವರು ಪೂರ್ವಿಕರಲ್ಲಿನ ಒಂದು ವಿಭಾಗವೂ,

(40) ನಂತರದವರಲ್ಲಿನ ಒಂದು ವಿಭಾಗವೂ ಆಗಿರುವರು.

(41) ಎಡಭಾಗದವರು. ಈ ಎಡಭಾಗದವರ ಸ್ಥಿತಿಯೇನು?

(42) (ಅವರು) ತೂರಿ ಸಾಗುವ ಬಿಸಿ ಗಾಳಿ ಮತ್ತು ಕುದಿಯುವ ನೀರಿನಲ್ಲಿರುವರು.

(43) ಕಪ್ಪು ಹೊಗೆಯ ನೆರಳುಗಳಲ್ಲಿರುವರು.

(44) ಅದು ತಂಪಾಗಲಿ, ಸುಖಕರವಾಗಲಿ ಅಲ್ಲ.

(45) ಯಾಕೆಂದರೆ ಖಂಡಿತವಾಗಿಯೂ ಅವರು ಅದಕ್ಕೆ ಮುಂಚೆ ಸುಖಲೋಲುಪರಾಗಿದ್ದರು.

(46) ಅವರು ಘೋರವಾದ ಪಾಪದಲ್ಲಿ ಹಟತೊಟ್ಟು ನಿಂತವರಾಗಿದ್ದರು.

(47) ಅವರು ಹೇಳುತ್ತಿದ್ದರು: ‘ನಮ್ಮನ್ನು ಪುನರುತ್ಥಾನಗೊಳಿಸಲಾಗುವುದು ನಾವು ಮೃತರಾಗಿ ಮಣ್ಣು ಮತ್ತು ಮೂಳೆಗಳಾಗಿ ಮಾರ್ಪಟ್ಟ ಬಳಿಕವೇ?

(48) ನಮ್ಮ ಪೂರ್ವಿಕರನ್ನೂ (ಪುನರುತ್ಥಾನಗೊಳಿಸಲಾಗುವುದೇ)?’

(49) ಹೇಳಿರಿ: ‘ಖಂಡಿತವಾಗಿಯೂ ಪೂರ್ವಿಕರೂ ನಂತರದವರೂ ಎಲ್ಲರೂ.

(50) ಒಂದು ನಿಶ್ಚಿತ ದಿನದ ನಿಖರವಾದ ಒಂದು ಅವಧಿಯಲ್ಲಿ ಒಟ್ಟುಗೂಡಿಸಲಾಗುವರು.

(51) ತರುವಾಯ, ಓ ಸತ್ಯನಿಷೇಧಿಗಳಾಗಿರುವ ದುರ್ಮಾರ್ಗಿಗಳೇ!

(52) ಖಂಡಿತವಾಗಿಯೂ ನೀವು ಝಕ್ಕೂಮ್ ಮರದಿಂದ(1202) ತಿನ್ನುವಿರಿ.
1202. ‘ಝಕ್ಕೂಮ್’ ಎಂದರೆ ನರಕದಲ್ಲಿರುವ ಒಂದು ಮರ. ಇದನ್ನು 17:60ರಲ್ಲಿ ಶಪಿಸಲಾದ ಮರ ಎನ್ನಲಾಗಿದೆ. ಜ್ವಲಿಸುವ ನರಕಾಗ್ನಿಯ ಬುಡದಲ್ಲಿ ಬೆಳೆಯುವ ಮರ ಎಂದು 37:64ರಲ್ಲಿ ಇದರ ಬಗ್ಗೆ ಹೇಳಲಾಗಿದೆ. ಈ ಮರ ಅಥವಾ ಅದರ ಫಲ ದುಷ್ಕರ್ಮಿಗಳಿಗೆ ನೀಡಲಾಗುವ ಆಹಾರವಾಗಿದೆ. ಅದು ಅವರ ಉದರಗಳಲ್ಲಿ ಕಾಯಿಸಿದ ಲೋಹದಂತೆ ಕುದಿಯಲಿದೆಯೆಂದು 44:43-46ರಲ್ಲಿ ವಿವರಿಸಲಾಗಿದೆ.

(53) ಅದರಿಂದ ನೀವು ಹೊಟ್ಟೆಗಳನ್ನು ತುಂಬಿಸುವಿರಿ.

(54) ಅದರ ಮೇಲೆ ನೀವು ಕುದಿಯುವ ನೀರನ್ನು ಕುಡಿಯುವಿರಿ.

(55) ದಾಹದಿಂದ ಬಳಲಿದ ಒಂಟೆಯು ಕುಡಿಯು ವಂತೆ ನೀವು ಕುಡಿಯುವಿರಿ.

(56) ಇದು ಪ್ರತಿಫಲ ದಿನದಂದು ಅವರಿಗಿರುವ ಆತಿಥ್ಯವಾಗಿದೆ.

(57) ನಿಮ್ಮನ್ನು ಸೃಷ್ಟಿಸಿದವರು ನಾವಾಗಿರುವೆವು. ಹೀಗಿರುವಾಗ ನೀವು (ನನ್ನ ಸಂದೇಶಗಳನ್ನು) ಸತ್ಯವೆಂದು ಅಂಗೀಕರಿಸದಿರುವುದೇಕೆ?

(58) ಹಾಗಾದರೆ ನೀವು ಸ್ರವಿಸುವ ವೀರ್ಯದ ಬಗ್ಗೆ ನೀವು ಚಿಂತಿಸಿ ನೋಡಿರುವಿರಾ?

(59) ಅದನ್ನು ಸೃಷ್ಟಿಸುವವರು ನೀವೋ? ಅಥವಾ ಸೃಷ್ಟಿಕರ್ತರು ನಾವೋ?

(60) ನಾವು ನಿಮ್ಮ ಮಧ್ಯೆ ಮರಣವನ್ನು ನಿರ್ಣಯಿಸಿರುವೆವು. ನಾವು ಎಂದಿಗೂ ಸೋಲಿಸಲ್ಪಡಲಾರೆವು.

(61) ನಿಮ್ಮ ಬದಲಿಗೆ ನಿಮ್ಮಂತಿರುವವರನ್ನು ತರುವೆವು(1203) ಮತ್ತು ನಿಮಗೆ ಅರಿವಿಲ್ಲದ ವಿಧದಲ್ಲಿ ನಿಮ್ಮನ್ನು ಪುನಃ ಸೃಷ್ಟಿಸುವೆವು ಎಂಬ ವಿಷಯದಲ್ಲಿ.
1203. ‘ಅನ್ ನುಬದ್ದಿಲ ಅಮ್ಸಾಲಕುಮ್’ ಎಂದರೆ ‘ನಿಮ್ಮ ಸ್ವರೂಪವನ್ನು ಬದಲಾಯಿಸಲು’ ಎಂದು ಕೆಲವರು ಅರ್ಥ ನೀಡಿದ್ದಾರೆ.

(62) ಮೊದಲ ಬಾರಿ ಸೃಷ್ಟಿಸಲಾಗಿರುವ ಬಗ್ಗೆ ಖಂಡಿತವಾಗಿಯೂ ನೀವು ಅರಿತುಕೊಂಡಿರುವಿರಿ. ಆದರೂ ನೀವೇಕೆ ಚಿಂತಿಸಿ ನೋಡುವುದಿಲ್ಲ.(1204)
1204. ಮೊದಲ ಬಾರಿ ನಿಮ್ಮನ್ನು ಸೃಷ್ಟಿಸಿದ ಅಲ್ಲಾಹುವಿಗೆ ನಿಮ್ಮನ್ನು ಪುನಃ ಸೃಷ್ಟಿಸುವುದು ಕಷ್ಟಕರವಲ್ಲವೆಂದು ನೀವೇಕೆ ಅರ್ಥ ಮಾಡಿಕೊಳ್ಳುವುದಿಲ್ಲ ಎಂದರ್ಥ.

(63) ನೀವು ಮಾಡುತ್ತಿರುವ ಕೃಷಿಯ ಬಗ್ಗೆ ನೀವು ಚಿಂತಿಸಿ ನೋಡಿರುವಿರಾ?

(64) ಅದನ್ನು ಬೆಳೆಸುವವರು ನೀವೋ? ಅಥವಾ ಅದನ್ನು ಬೆಳೆಸುವವರು ನಾವೋ?(1205)
1205. ಬೀಜ ಮೊಳಕೆಯೊಡೆದು ಬೆಳೆದು ಉತ್ಪಾದನಾ ಶಕ್ತಿಯನ್ನು ಪಡೆಯುವುದರಲ್ಲಿ ಕೃಷಿಕನ ಮೂಲಭೂತವಾದ ಯಾವುದೇ ಪಾತ್ರವಿಲ್ಲ. ಸಸ್ಯ ಬೆಳವಣಿಗೆಯು ನಡೆಯುವುದು ಬೀಜದ ಕೋಶಗಳಲ್ಲಿರುವ ಜೀನ್‍ಗಳಲ್ಲಿ ದಾಖಲಿಸಲಾಗಿರುವ ಅನುವಂಶೀಯ ನಿಯಮವ್ಯವಸ್ಥೆಯ ಪ್ರಕಾರವಾಗಿರುತ್ತದೆ. ಈ ವ್ಯವಸ್ಥೆಯು ಸಂಪೂರ್ಣವಾಗಿಯೂ ಅಲ್ಲಾಹುವಿನದ್ದಾಗಿದೆ.

(65) ನಾವು ಇಚ್ಛಿಸಿದ್ದರೆ ಅದನ್ನು (ಬೆಳೆಯನ್ನು) ಕಿಲುಬುಗಳನ್ನಾಗಿ ಮಾಡಿಬಿಡುತ್ತಿದ್ದೆವು. ಆಗ ನೀವು ಅಚ್ಚರಿಪಟ್ಟು ಹೇಳುವಿರಿ.

(66) ‘ಖಂಡಿತವಾಗಿಯೂ ನಾವು ಸಾಲಬಾಧಿತರಾಗಿರುವೆವು.

(67) ಅಲ್ಲ, ನಾವು (ಜೀವನಾಧಾರದಿಂದ) ತಡೆಯಲ್ಪಟ್ಟವರಾಗಿರುವೆವು’.

(68) ನೀವು ಕುಡಿಯುವ ನೀರಿನ ಬಗ್ಗೆ ಚಿಂತಿಸಿ ನೋಡಿರುವಿರಾ?

(69) ಅದನ್ನು ಮೋಡದಿಂದ ಇಳಿಸಿದವರು ನೀವೋ? ಅಥವಾ ಇಳಿಸಿದವರು ನಾವೋ?

(70) ನಾವು ಇಚ್ಛಿಸುತ್ತಿದ್ದರೆ ಅದನ್ನು ಅಹಿತಕರ ಉಪ್ಪು ನೀರನ್ನಾಗಿ ಮಾಡುತ್ತಿದ್ದೆವು. ಆದರೂ ನೀವು ಕೃತಜ್ಞತೆ ಸಲ್ಲಿಸುತ್ತಿಲ್ಲವೇಕೆ?

(71) ನೀವು ಉಜ್ಜಿ ಉರಿಸುವ ಬೆಂಕಿಯ ಬಗ್ಗೆ ಚಿಂತಿಸಿ ನೋಡಿರುವಿರಾ?

(72) ಅದರ ಮರವನ್ನು ಸೃಷ್ಟಿಸಿದವರು(1206) ನೀವೋ? ಅಥವಾ ಸೃಷ್ಟಿಸಿದವರು ನಾವೋ?
1206. ಹಿಂದಿನ ಕಾಲದವರು ಮರದ ತುಂಡುಗಳನ್ನು ಪರಸ್ಪರ ಉಜ್ಜಿ ಬೆಂಕಿಯುರಿಸುತ್ತಿದ್ದರು.

(73) ನಾವು ಅದನ್ನೊಂದು ಚಿಂತನಾರ್ಹ ವಿಷಯವನ್ನಾಗಿ ಮಾಡಿರುವೆವು ಮತ್ತು ಬಡ ಪ್ರಯಾಣಿಕರಿಗೆ(1207) ಒಂದು ಜೀವನಾನುಕೂಲತೆಯನ್ನಾಗಿ ಮಾಡಿರುವೆವು.
1207. ‘ಮುಖ್ವೀನ್’ ಎಂಬುದಕ್ಕೆ ಮರುಭೂಮಿ ನಿವಾಸಿಗಳೆಂದೂ ಅರ್ಥ ನೀಡಲಾಗಿದೆ. ಮರುಭೂಮಿ ವಾಸಿಗಳ ಮಧ್ಯೆ ಯಾರಾದರೂ ಔತಣಕೂಟ ಏರ್ಪಡಿಸಿದರೆ ಅದಕ್ಕೆ ಪ್ರಯಾಣಿಕರನ್ನೂ ಇತರರನ್ನೂ ಆಕರ್ಷಿಸಲು ದೂರದಿಂದಲೇ ಕಾಣುವಂತೆ ಬೆಂಕಿಯುರಿಸುತ್ತಿದ್ದರು. ರಾತ್ರಿಯಲ್ಲಿ ನಿರ್ಜನವಾದ ಮರುಭೂಮಿಯಲ್ಲಿ ಪ್ರಯಾಣಿಸುವವರು ಪರಿಸರದಲ್ಲಿ ಜನವಾಸವಿದೆಯೆಂದು ತಿಳಿಯುತ್ತಿದ್ದುದು ಈ ದೊಂದಿಗಳ ಮೂಲಕವಾಗಿತ್ತು. ವನ್ಯಮೃಗಗಳನ್ನು ದೂರವಿರಿಸಲೂ ಅವರು ಬೆಂಕಿಯನ್ನು ಬಳಸುತ್ತಿದ್ದರು.

(74) ಆದ್ದರಿಂದ ಮಹೋನ್ನತನಾದ ತಮ್ಮ ರಬ್‌ನ ನಾಮವನ್ನು ತಾವು ಕೊಂಡಾಡಿರಿ.

(75) ಇಲ್ಲ, ನಾನು ನಕ್ಷತ್ರಗಳ ಅಸ್ತಮ ಸ್ಥಾನದ ಮೇಲೆ ಆಣೆಯಿಟ್ಟು ಹೇಳುತ್ತಿರುವೆನು.

(76) ನೀವು ಅರಿತಿರುವುದಾದರೆ ಖಂಡಿತವಾಗಿಯೂ ಅದೊಂದು ಮಹಾ ಆಣೆಯಾಗಿದೆ.

(77) ಖಂಡಿತವಾಗಿಯೂ ಇದೊಂದು ಆದರಣೀಯ ಕುರ್‌ಆನ್ ಆಗಿದೆ.

(78) ಅದು ಭದ್ರವಾಗಿ ಕಾಪಾಡಲಾಗಿರುವ ಒಂದು ದಾಖಲೆಯಲ್ಲಿದೆ.

(79) ಪರಿಶುದ್ಧಿಯನ್ನು ನೀಡಲಾದವರ ಹೊರತು ಯಾರೂ ಅದನ್ನು ಸ್ಪರ್ಶಿಸಲಾರರು.(1208)
1208. ಮುಹಮ್ಮದ್(ಸ) ರಿಗೆ ಅವತೀರ್ಣಗೊಳ್ಳುವುದಕ್ಕೆ ಮುಂಚೆ ಕುರ್‌ಆನ್ ‘ಲೌಹುಲ್ ಮಹ್ಫೂಝ್’ನಲ್ಲಿ ಸುರಕ್ಷಿತವಾಗಿತ್ತು. ‘ಲೌಹುಲ್ ಮಹ್ಫೂಝ್’ ಎಂದರೆ ಸುರಕ್ಷಿತ ಹಲಗೆ ಎಂದರ್ಥ. ಈ ಹಲಗೆಯನ್ನು ಪರಿಶುದ್ಧರಾದ ಮಲಕ್‍ಗಳ ಹೊರತು ಯಾರೂ ಸ್ಪರ್ಶಿಸಲಾರರೆಂದು ಹೆಚ್ಚಿನ ವ್ಯಾಖ್ಯಾನಕಾರರು ಈ ಸೂಕ್ತಿಗೆ ಅರ್ಥ ನೀಡಿದ್ದಾರೆ. ಹೃದಯ ಶುದ್ಧಿಯಿರುವವರ ಹೊರತು ಯಾರೂ ಕುರ್‌ಆನ್ ಗ್ರಹಿಸಲಾರರೆಂದು ಕೆಲವು ವ್ಯಾಖ್ಯಾನಕಾರರು ‘ಲಾ ಯಮಸ್ಸುಹೂ ಇಲ್ಲಲ್ ಮುತಹ್ಹರೂನ್’ ಎಂಬ ಸೂಕ್ತಿಗೆ ಅರ್ಥ ನೀಡಿದ್ದಾರೆ.

(80) ಅದು ಸರ್ವಲೋಕಗಳ ರಬ್‌ನಿಂದ ಅವತೀರ್ಣಗೊಂಡಿರುವುದಾಗಿದೆ.

(81) ಹಾಗಾದರೆ ಈ ವೃತ್ತಾಂತದ ಬಗ್ಗೆಯೇ ನೀವು ನಿರ್ವಿಕಾರ ತೋರಿಸುವುದು?

(82) ಸತ್ಯ ನಿಷೇಧಿಸುವುದನ್ನು ನೀವು ನಿಮ್ಮ ಹಿಸ್ಸೆಯನ್ನಾಗಿ ಮಾಡಿರುವಿರಾ?(1209)
1209. ಅಲ್ಲಾಹುವಿನ ಅನುಗ್ರಹಗಳನ್ನು ಒಪ್ಪಿಕೊಂಡು ಕೃತಜ್ಞತಾ ಪೂರ್ವಕವಾಗಿ ಸ್ಪಂದಿಸುವ ಬದಲು ಮಳೆ ಮತ್ತು ಬೆಳೆಯನ್ನು ನಕ್ಷತ್ರಗಳ ಅಥವಾ ಪ್ರಕೃತಿಯ ವರದಾನವೆಂದು ಚಿತ್ರೀಕರಿಸುವವರ ವಿಷಯದಲ್ಲಿ ಈ ಸೂಕ್ತಿಯು ಅವತೀರ್ಣಗೊಂಡಿದೆಯೆಂದು ಅನೇಕ ವ್ಯಾಖ್ಯಾನಕಾರರು ಹೇಳಿದ್ದಾರೆ.

(83) ಆದರೆ ಅದು (ಪ್ರಾಣ) ಗಂಟಲಿಗೆ ತಲುಪುವಾಗ (ಅದನ್ನು ತಡೆದು ನಿಲ್ಲಿಸಲು ನಿಮಗೆ ಸಾಧ್ಯವಾಗುವುದಿಲ್ಲ) ಏಕೆ?

(84) ಆ ಸಮಯದಲ್ಲಿ ನೀವು ನೋಡುತ್ತಲೇ ಇರುವಿರಿ!

(85) ಆ ವ್ಯಕ್ತಿಯ ಪಾಲಿಗೆ ನಿಮಗಿಂತಲೂ ಹೆಚ್ಚು ಹತ್ತಿರದಲ್ಲಿರುವವರು ನಾವಾಗಿರುವೆವು. ಆದರೆ ನೀವು ಕಂಡು ತಿಳಿಯುವುದಿಲ್ಲ.

(86) ನೀವು (ಅಲ್ಲಾಹುವಿನ ನಿಯಮಕ್ಕೆ) ವಿಧೇಯರಲ್ಲದವರಾದರೆ.

(87) ಅದನ್ನು (ಪ್ರಾಣವನ್ನು) ಮರಳಿ ಪಡೆಯಲು ನಿಮಗೇಕೆ ಸಾಧ್ಯವಾಗುತ್ತಿಲ್ಲ? ನೀವು ಸತ್ಯಸಂಧರಾಗಿದ್ದರೆ.

(88) ಅವನು (ಮೃತಪಟ್ಟವನು) ಸಾಮೀಪ್ಯ ಗಳಿಸಿದವರಲ್ಲಿ ಸೇರಿದವನಾಗಿದ್ದರೆ.

(89) (ಅವನಿಗೆ) ಸಾಂತ್ವನವೂ, ವಿಶಿಷ್ಟವಾದ ಅನ್ನಾಧಾರವೂ(1210) ಸುಖಾನುಭೂತಿಯ ಸ್ವರ್ಗೋದ್ಯಾನವೂ ಇರುವುದು.
1210. ರೈಹಾನ್ ಎಂದರೆ ಪರಿಮಳ ಎಂದೂ ಅರ್ಥವಿದೆ.

(90) ಅವನು ಬಲಭಾಗದವರಲ್ಲಿ ಸೇರಿದವನಾಗಿದ್ದರೆ.

(91) (ಅವನಿಗಿರುವ ಅಭಿವಂದನೆಯು) ‘ಬಲಭಾಗದವರಲ್ಲಿ ಸೇರಿದ ನಿನಗೆ ಶಾಂತಿಯಿರಲಿ’ ಎಂದಾಗಿರುವುದು.

(92) ಆದರೆ ಅವನು ದುರ್ಮಾರ್ಗಿಗಳಾದ ಸತ್ಯನಿಷೇಧಿಗಳಲ್ಲಿ ಸೇರಿದವನಾಗಿದ್ದರೆ.

(93) ಕುದಿಯುವ ನೀರಿನ ಆತಿಥ್ಯವಿರುವುದು.

(94) ನರಕಾಗ್ನಿಯಲ್ಲಿ ಉರಿಯುವಿಕೆಯೂ ಇರುವುದು.

(95) ಖಂಡಿತವಾಗಿಯೂ ಇದು ದೃಢವಾದ ಸತ್ಯವಾಗಿದೆ.

(96) ಆದ್ದರಿಂದ ಮಹೋನ್ನತನಾಗಿರುವ ತಮ್ಮ ರಬ್‌ನ ನಾಮವನ್ನು ತಾವು ಕೊಂಡಾಡಿರಿ.