(1) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹುವಿನ ಕೀರ್ತನೆ ಮಾಡುತ್ತಿವೆ. ಅವನು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.
(2) ಆಕಾಶಗಳ ಮತ್ತು ಭೂಮಿಯ ಆಧಿಪತ್ಯವು ಅವನದ್ದಾಗಿದೆ. ಅವನು ಜೀವವನ್ನು ನೀಡುವನು ಮತ್ತು ಮರಣವನ್ನು ನೀಡುವನು. ಅವನು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.
(3) ಅವನು ಆದಿಯೂ, ಅಂತ್ಯನೂ, ಪ್ರತ್ಯಕ್ಷನೂ, ಪರೋಕ್ಷನೂ ಆಗಿರುವನು. ಅವನು ಸರ್ವ ವಿಷಯಗಳ ಬಗ್ಗೆಯೂ ಅರಿವುಳ್ಳವನಾಗಿರುವನು.
(4) ಆಕಾಶಗಳನ್ನು ಮತ್ತು ಭೂಮಿಯನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು ಅವನಾಗಿರುವನು. ತರುವಾಯ ಅವನು ಸಿಂಹಾಸನಾರೂಢನಾದನು. ಭೂಮಿಯನ್ನು ಪ್ರವೇಶಿಸುವ, ಅದರಿಂದ ಹೊರಹೋಗುವ, ಆಕಾಶದಿಂದ ಇಳಿಯುವ ಮತ್ತು ಅದರೆಡೆಗೆ ಏರಿಹೋಗುವ ಎಲ್ಲವನ್ನೂ ಅವನು ಅರಿಯುವನು. ನೀವೆಲ್ಲೇ ಇದ್ದರೂ ಅವನು ನಿಮ್ಮ ಜೊತೆಗಿರುವನು. ಅಲ್ಲಾಹು ನೀವು ಮಾಡುತ್ತಿರುವುದನ್ನು ವೀಕ್ಷಿಸುವವನಾಗಿರುವನು.
(5) ಆಕಾಶಗಳ ಮತ್ತು ಭೂಮಿಯ ಆಧಿಪತ್ಯವಿರುವುದು ಅವನಿಗಾಗಿದೆ. ವಿಷಯಗಳೆಲ್ಲವೂ ಮರಳುವುದು ಅಲ್ಲಾಹುವಿನೆಡೆಗಾಗಿದೆ.
(6) ಅವನು ರಾತ್ರಿಯನ್ನು ಹಗಲಿನಲ್ಲಿ ನುಸುಳಿಸುವನು ಮತ್ತು ಹಗಲನ್ನು ರಾತ್ರಿಯಲ್ಲಿ ನುಸುಳಿಸುವನು. ಅವನು ಹೃದಯಗಳಲ್ಲಿರುವುದನ್ನು ಅರಿಯುವವನಾಗಿರುವನು.
(7) ನೀವು ಅಲ್ಲಾಹುವಿನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡಿರಿ. ಅವನು ನಿಮ್ಮನ್ನು ಯಾವ ಸಂಪತ್ತಿಗೆ ಉತ್ತರಾಧಿಕಾರಿಯನ್ನಾಗಿ ಮಾಡಿರುವನೋ ಆ ಸಂಪತ್ತಿನಿಂದ ವ್ಯಯಿಸಿರಿ. ನಿಮ್ಮ ಪೈಕಿ ವಿಶ್ವಾಸವಿಟ್ಟವರು ಮತ್ತು ವ್ಯಯಿಸಿದವರು ಯಾರೋ ಅವರಿಗೆ ಮಹಾ ಪ್ರತಿಫಲವಿದೆ.
(8) ಅಲ್ಲಾಹುವಿನಲ್ಲಿ ವಿಶ್ವಾಸವಿಡದಿರಲು ನಿಮಗಿರುವ ಸಮರ್ಥನೆಯಾದರೂ ಏನು? ನೀವು ನಿಮ್ಮ ರಬ್‌ನಲ್ಲಿ ವಿಶ್ವಾಸವಿಡುವ ಸಲುವಾಗಿ ಸಂದೇಶವಾಹಕರು ನಿಮ್ಮನ್ನು ಆಹ್ವಾನಿಸುತ್ತಿರುವರು. ಅಲ್ಲಾಹು ನಿಮ್ಮಿಂದ ಖಾತ್ರಿಯನ್ನು ಪಡೆದಿರುವನು.(1211) ನೀವು ವಿಶ್ವಾಸವಿಡುವವರಾಗಿದ್ದರೆ.
1211. ಮನುಷ್ಯ ಪ್ರಕೃತಿಯು ಖಂಡಿತವಾಗಿಯೂ ಅಲ್ಲಾಹುವಿನ ಅಸ್ತಿತ್ವದ ಬಗ್ಗೆ ಖಾತ್ರಿಯನ್ನು ನೀಡುತ್ತದೆ ಮತ್ತು ಇಲ್ಲಿ ಉದ್ದೇಶಿಸಲಾಗಿರುವುದು ಆ ಖಾತ್ರಿಯನ್ನಾಗಿದೆಯೆಂದು ಕೆಲವು ವ್ಯಾಖ್ಯಾನಕಾರರು ಹೇಳಿದ್ದಾರೆ. ಅಲ್ಲಾಹು ಆಧ್ಯಾತ್ಮಿಕ ಲೋಕದಲ್ಲಿ ಮನುಷ್ಯರೆಲ್ಲರಿಂದ ಏಕದೇವವಿಶ್ವಾಸದ ಬಗ್ಗೆ ಕರಾರು ಪಡೆದಿರುವುದರ ಬಗ್ಗೆ ಇಲ್ಲಿ ಸೂಚಿಸಲಾಗಿದೆಯೆಂದು ಬೇರೆ ಕೆಲವು ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ.
(9) ನಿಮ್ಮನ್ನು ಅಂಧಕಾರಗಳಿಂದ ಪ್ರಕಾಶದೆಡೆಗೆ ಹೊರತರುವ ಸಲುವಾಗಿ ತನ್ನ ದಾಸನ ಮೇಲೆ ಸ್ಪಷ್ಟವಾದ ದೃಷ್ಟಾಂತಗಳನ್ನು ಇಳಿಸಿಕೊಡುವವನು ಅವನಾಗಿರುವನು. ಖಂಡಿತವಾಗಿಯೂ ಅಲ್ಲಾಹು ನಿಮ್ಮೊಂದಿಗೆ ಅತ್ಯಂತ ದಯೆಯುಳ್ಳವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(10) ಆಕಾಶಗಳ ಮತ್ತು ಭೂಮಿಯ ಉತ್ತರಾಧಿಕಾರವು ಅಲ್ಲಾಹುವಿನದ್ದಾಗಿರುವಾಗ ಅಲ್ಲಾಹುವಿನ ಮಾರ್ಗದಲ್ಲಿ ವ್ಯಯಿಸದಿರಲು ನಿಮಗಿರುವ ಸಮರ್ಥನೆಯಾದರೂ ಏನು? ನಿಮ್ಮ ಪೈಕಿ (ಮಕ್ಕಾ) ವಿಜಯಕ್ಕೆ ಮುಂಚಿತವಾಗಿ ವ್ಯಯಿಸಿದವರು ಮತ್ತು ಯುದ್ಧದಲ್ಲಿ ಪಾಲ್ಗೊಂಡವರು (ಮತ್ತು ಅವರಲ್ಲದವರು) ಸಮಾನರಾಗಲಾರರು. ಅವರು ನಂತರದ ಕಾಲದಲ್ಲಿ ವ್ಯಯಿಸಿದವರಿಗಿಂತಲೂ ಮತ್ತು ಯುದ್ಧದಲ್ಲಿ ಪಾಲ್ಗೊಂಡವರಿಗಿಂತಲೂ ಉನ್ನತ ಪದವಿಗಳಲ್ಲಿರುವರು. ಅಲ್ಲಾಹು ಎಲ್ಲರಿಗೂ ಸ್ವರ್ಗವನ್ನು ವಾಗ್ದಾನ ಮಾಡಿರುವನು.(1212) ಅಲ್ಲಾಹು ನೀವು ಮಾಡುತ್ತಿರುವುದರ ಬಗ್ಗೆ ಸೂಕ್ಷ್ಮಜ್ಞಾನಿಯಾಗಿರುವನು.
1212. ಇಸ್ಲಾಮ್ ತೀವ್ರವಾಗಿ ವಿರೋಧಿಸಲ್ಪಟ್ಟು, ಮುಸ್ಲಿಮರು ಕಠಿಣ ಹಿಂಸೆಗೊಳಗಾಗಿದ್ದ ಆರಂಭಕಾಲದಲ್ಲಿ ವಿಶ್ವಾಸವನ್ನು ಘೋಷಿಸಿ ಆಕ್ರಮಣಕಾರಿಗಳೊಂದಿಗೆ ಹೋರಾಡಿದವರ ಪದವಿ ಅತ್ಯುನ್ನತವಾಗಿದೆ. ತರುವಾಯ ವಿಶ್ವಾಸವಿಟ್ಟು ತ್ಯಾಗದೊಂದಿಗೆ ಯುದ್ಧದಲ್ಲಿ ಪಾಲ್ಗೊಂಡವರಿಗೂ ಅಲ್ಲಾಹು ವಿಶೇಷ ಪ್ರತಿಫಲದ ವಾಗ್ದಾನವಿತ್ತಿದ್ದಾನೆ.
(11) ಅಲ್ಲಾಹುವಿಗೆ ಉತ್ತಮ ಸಾಲವನ್ನು ನೀಡುವವನು ಯಾರಿರುವನು? ಹಾಗಾದರೆ ಅವನು ಅದನ್ನು ಅವನಿಗೆ ಇಮ್ಮಡಿಗೊಳಿಸಿ ಕೊಡುವನು. ಅವನಿಗೆ ಗೌರವಾನ್ವಿತ ಪ್ರತಿಫಲವೂ ಇರುವುದು.
(12) ಸತ್ಯವಿಶ್ವಾಸಿಗಳ ಮತ್ತು ಸತ್ಯವಿಶ್ವಾಸಿನಿಯರ ಪ್ರಕಾಶವು ಅವರ ಮುಂಭಾಗದಿಂದಲೂ, ಬಲಭಾಗದಿಂದಲೂ ಚಲಿಸುತ್ತಿರುವುದಾಗಿ ತಾವು ಕಾಣುವ ದಿನ! (ಅಂದು ಅವರೊಂದಿಗೆ ಹೇಳಲಾಗುವುದು): ‘ಇಂದು ನಿಮಗಿರುವ ಶುಭವಾರ್ತೆಯು ಸ್ವರ್ಗೋದ್ಯಾನಗಳಾಗಿವೆ. ಅವುಗಳ ತಳಭಾಗದಿಂದ ನದಿಗಳು ಹರಿಯುತ್ತಿರುವುವು. ನೀವು ಅದರಲ್ಲಿ ಶಾಶ್ವತವಾಗಿ ವಾಸಿಸುವಿರಿ. ಅದು ಮಹಾ ವಿಜಯವಾಗಿದೆ’.
(13) ಕಪಟವಿಶ್ವಾಸಿಗಳು ಮತ್ತು ಕಪಟವಿಶ್ವಾಸಿನಿಯರು ಸತ್ಯವಿಶ್ವಾಸಿಗಳೊಂದಿಗೆ ಹೇಳುವ ದಿನ: ‘ನಮ್ಮನ್ನು ನೋಡಿರಿ! ನಿಮ್ಮ ಪ್ರಕಾಶದಿಂದ ನಾವೂ ಸ್ವಲ್ಪ ಎರವಲು ಪಡೆಯುವೆವು’. (ಆಗ ಅವರೊಂದಿಗೆ) ಹೇಳಲಾಗುವುದು: ‘ನೀವು ನಿಮ್ಮ ಹಿಂಭಾಗಕ್ಕೆ ಮರಳಿ ಹೋಗಿರಿ. ತರುವಾಯ ಪ್ರಕಾಶವನ್ನು ಅರಸಿರಿ’. ಆಗ ಅವರ ಮಧ್ಯೆ ಒಂದು ಗೋಡೆಯ ಮೂಲಕ ಮರೆಹಾಕಲಾಗುವುದು. ಅದಕ್ಕೊಂದು ಬಾಗಿಲಿರುವುದು. ಅದರ ಒಳಭಾಗದಲ್ಲಿ ಕಾರುಣ್ಯವಿರುವುದು(1213) ಮತ್ತು ಹೊರಭಾಗದಲ್ಲಿ ಶಿಕ್ಷೆಯಿರುವುದು.
1213. ಯಾಕೆಂದರೆ ಅದು ಸತ್ಯವಿಶ್ವಾಸಿಗಳಿಗೆ ಹತ್ತಿರವಿರುವ ಭಾಗವಾಗಿದೆ.
(14) ಅವರು (ಕಪಟವಿಶ್ವಾಸಿಗಳು) ಅವರನ್ನು (ಸತ್ಯವಿಶ್ವಾಸಿಗಳನ್ನು) ಕರೆದು ಹೇಳುವರು: ‘ನಾವು ನಿಮ್ಮೊಂದಿಗಿರಲಿಲ್ಲವೇ?’ ಅವರು (ಸತ್ಯವಿಶ್ವಾಸಿಗಳು) ಹೇಳುವರು: ‘ಹೌದು! ಆದರೆ ನೀವು ನಿಮ್ಮನ್ನೇ ಕ್ಷೋಭೆಗೆ ದೂಡಿದಿರಿ. (ಇತರರಿಗೆ ಕೇಡುಂಟಾಗುವುದನ್ನು) ಕಾಯುವವರಾಗಿದ್ದಿರಿ. (ಧರ್ಮದಲ್ಲಿ) ಸಂದೇಹಪಟ್ಟಿರಿ. ಅಲ್ಲಾಹುವಿನ ಆಜ್ಞೆ ಬರುವವರೆಗೆ ವ್ಯರ್ಥ ನಿರೀಕ್ಷೆಗಳು ನಿಮ್ಮನ್ನು ವಂಚಿಸಿದವು. ಮಹಾವಂಚಕನಾದ ಸೈತಾನನು ಅಲ್ಲಾಹುವಿನ ವಿಷಯದಲ್ಲಿ ನಿಮ್ಮನ್ನು ವಂಚಿಸಿದನು.
(15) ಆದ್ದರಿಂದ ಇಂದು ನಿಮ್ಮಿಂದ ಅಥವಾ ಸತ್ಯನಿಷೇಧಿಗಳಿಂದ ಯಾವುದೇ ಪ್ರಾಯಶ್ಚಿತ್ತವನ್ನೂ ಸ್ವೀಕರಿಸಲಾಗದು. ನಿಮ್ಮ ವಾಸಸ್ಥಳವು ನರಕಾಗ್ನಿಯಾಗಿದೆ. ಅದೇ ನಿಮ್ಮ ಸಂಬಂಧಿಯಾಗಿದೆ.(1214) ತಲುಪಲಿರುವ ಆ ಸ್ಥಳವು ನಿಕೃಷ್ಟವೇ ಆಗಿದೆ!
1214. ‘ಮೌಲಾಕುಂ’ ಎಂದರೆ ನಿಮಗೆ ಅತ್ಯಂತ ಯೋಗ್ಯವಾದ ಅಭಯಸ್ಥಾನ ಎಂದು ಕೆಲವರು ಅರ್ಥ ನೀಡಿದ್ದಾರೆ.
(16) ಸತ್ಯವಿಶ್ವಾಸಿಗಳಿಗೆ, ಅವರ ಹೃದಯಗಳು ಅಲ್ಲಾಹುವಿನ ಸ್ಮರಣೆಗೆ ಮತ್ತು ಅವತೀರ್ಣಗೊಂಡಿರುವ ಸತ್ಯಕ್ಕೆ ಶರಣಾಗಲು ಹಾಗೂ ಮುಂಚೆ ಗ್ರಂಥ ನೀಡಲಾದವರಂತೆ ಆಗದಿರಲು ಸಮಯವಾಗಲಿಲ್ಲವೇ?(1215) ಆ ಗ್ರಂಥದವರಿಗೆ ಕಾಲವು ದೀರ್ಘವಾಯಿತು ಮತ್ತು ತನ್ಮೂಲಕ ಅವರ ಹೃದಯಗಳು ಕಠೋರವಾದವು. ಅವರ ಪೈಕಿ ಹೆಚ್ಚಿನವರೂ ಧಿಕ್ಕಾರಿಗಳಾಗಿದ್ದರು.
1215. ಓರ್ವ ಪ್ರವಾದಿಯ ಮರಣಾನಂತರ ಕೆಲವು ವರ್ಷಗಳು ಕಳೆದಾಗ ಆ ಪ್ರವಾದಿಯ ಶಿಕ್ಷಣಗಳು ವಿಸ್ಮರಿಸಲಾಗಿ ಧರ್ಮೋಪದೇಶಗಳನ್ನು ಸ್ವೀಕರಿಸಲಾಗದಷ್ಟು ಕಠಿಣ ಮನಸ್ಕರಾಗಿ ಬಿಡುವುದು ಪೂರ್ವಸಮುದಾಯದವರ ರೂಢಿಯಾಗಿತ್ತು. ಮುಸ್ಲಿಮರು ಹಾಗಾಗಕೂಡದೆಂದು ಇಲ್ಲಿ ಉಪದೇಶ ನೀಡಲಾಗಿದೆ.
(17) ಅರಿಯಿರಿ! ಖಂಡಿತವಾಗಿಯೂ ಅಲ್ಲಾಹು ಭೂಮಿಗೆ ಅದು ನಿರ್ಜೀವವಾದ ಬಳಿಕ ಜೀವ ನೀಡುವನು. ನೀವು ಚಿಂತಿಸುವ ಸಲುವಾಗಿ ಖಂಡಿತವಾಗಿಯೂ ನಾವು ನಿಮಗೆ ದೃಷ್ಟಾಂತಗಳನ್ನು ವಿವರಿಸಿಕೊಟ್ಟಿರುವೆವು.
(18) ಖಂಡಿತವಾಗಿಯೂ ದಾನಧರ್ಮ ಮಾಡಿದ ಪುರುಷರು ಮತ್ತು ಸ್ತ್ರೀಯರು ಹಾಗೂ ಅಲ್ಲಾಹುವಿಗೆ ಉತ್ತಮ ಸಾಲ ನೀಡಿದವರು ಯಾರೋ ಅವರಿಗೆ ಅದನ್ನು ಇಮ್ಮಡಿಯಾಗಿ ನೀಡಲಾಗುವುದು. ಅವರಿಗೆ ಗೌರವಾನ್ವಿತ ಪ್ರತಿಫಲವಿರುವುದು.
(19) ಅಲ್ಲಾಹುವಿನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಟ್ಟವರು ಯಾರೋ ಅವರು ತಮ್ಮ ರಬ್‌ನ ಬಳಿ ಸತ್ಯಸಂಧರೂ ಸತ್ಯಸಾಕ್ಷಿಗಳೂ ಆಗಿರುವರು. ಅವರಿಗೆ ಅವರ ಪ್ರತಿಫಲ ಮತ್ತು ಅವರ ಪ್ರಕಾಶವಿರುವುದು. ಅವಿಶ್ವಾಸವಿಟ್ಟವರು ಮತ್ತು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರಾರೋ ಅವರು ನರಕವಾಸಿಗಳಾಗಿರುವರು.
(20) ಅರಿಯಿರಿ! ಐಹಿಕ ಜೀವನವು ಆಟ, ಮನೋರಂಜನೆ, ಶೃಂಗಾರ, ನೀವು ಪರಸ್ಪರ ಅಹಂಭಾವ ಪಡುವುದು, ಸಂಪತ್ತಿನಲ್ಲಿ ಮತ್ತು ಸಂತತಿಯಲ್ಲಿ ಹಿರಿಮೆ ತೋರಿಸುವುದು ಮಾತ್ರವಾಗಿವೆ. ಒಂದು ಮಳೆಯಂತೆ. ಅದರಿಂದ ಬೆಳೆಯುವ ಸಸ್ಯಗಳು ಕೃಷಿಕರನ್ನು ಅಚ್ಚರಿಪಡಿಸಿದವು. ತರುವಾಯ ಅದು ಒಣಗಿದಾಗ ಅದು ಹಳದಿ ಬಣ್ಣವಾಗಿ ಮಾರ್ಪಡುವುದನ್ನು ತಾವು ಕಾಣುವಿರಿ. ತರುವಾಯ ಅದು ಕಿಲುಬುಗಳಾಗಿ ಬಿಡುತ್ತವೆ. ಆದರೆ ಪರಲೋಕದಲ್ಲಿ (ದುರ್ಜನರಿಗೆ) ಕಠಿಣ ಶಿಕ್ಷೆಯಿದೆ ಮತ್ತು (ಸಜ್ಜನರಿಗೆ) ಅಲ್ಲಾಹುವಿನ ವತಿಯ ಪಾಪಮುಕ್ತಿ ಮತ್ತು ಸಂತೃಪ್ತಿಯಿದೆ. ಐಹಿಕ ಜೀವನವು ವಂಚನಾತ್ಮಕ ಅನುಭೋಗವಲ್ಲದೆ ಬೇರೇನೂ ಅಲ್ಲ.
(21) ನಿಮ್ಮ ರಬ್‌ನ ವತಿಯ ಪಾಪಮುಕ್ತಿಯೆಡೆಗೆ ಮತ್ತು ಸ್ವರ್ಗದೆಡೆಗೆ ಮುಂಚೂಣಿಯಲ್ಲಿ ಬನ್ನಿರಿ. ಅದರ ವಿಸ್ತಾರವು ಆಕಾಶಗಳ ಮತ್ತು ಭೂಮಿಯ ವಿಸ್ತಾರದಷ್ಟಿದೆ. ಅಲ್ಲಾಹುವಿನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಟ್ಟವರಿಗಾಗಿ ಅದನ್ನು ಸಜ್ಜೀಕರಿಸಲಾಗಿದೆ. ಅದು ಅಲ್ಲಾಹುವಿನ ಅನುಗ್ರಹವಾಗಿದೆ. ಅವನಿಚ್ಛಿಸುವವರಿಗೆ ಅವನು ಅದನ್ನು ದಯಪಾಲಿಸುವನು. ಅಲ್ಲಾಹು ಮಹಾ ಅನುಗ್ರಹದ ಒಡೆಯನಾಗಿರುವನು.
(22) ಭೂಮಿಯಲ್ಲಾಗಲಿ ನಿಮ್ಮ ಶರೀರಗಳಲ್ಲಾಗಲಿ ಯಾವುದೇ ವಿಪತ್ತು ಕೂಡ ಬಾಧಿಸಲಾರದು; ಅದನ್ನು ನಾವು ಸೃಷ್ಟಿಸುವುದಕ್ಕೆ ಮುಂಚೆಯೇ ಒಂದು ದಾಖಲೆಯಲ್ಲಿ ಸೇರಿಸಿಕೊಂಡಿರುವ ಹೊರತು. ಖಂಡಿತವಾಗಿಯೂ ಅದು ಅಲ್ಲಾಹುವಿನ ಮಟ್ಟಿಗೆ ಸುಲಭವಾದುದಾಗಿದೆ.
(23) (ನಾವು ಹೀಗೆ ಮಾಡಿರುವುದೇಕೆಂದರೆ) ನೀವು ಏನನ್ನು ಕಳಕೊಂಡಿರುವಿರೋ ಅದಕ್ಕಾಗಿ ನೀವು ದುಃಖಿಸದಿರುವ ಸಲುವಾಗಿ ಮತ್ತು ಅವನು ನಿಮಗೆ ದಯಪಾಲಿಸಿರುವುದರಲ್ಲಿ ನೀವು ಅತಿಯಾಗಿ ಹಿಗ್ಗದಿರುವ ಸಲುವಾಗಿ.(1216) ಅಹಂಕಾರಿಯೂ, ದುರಾಭಿಮಾನಿಯೂ ಆಗಿರುವ ಯಾರನ್ನೂ ಅಲ್ಲಾಹು ಇಷ್ಟಪಡಲಾರನು.
1216. ಅಲ್ಲಾಹುವಿನ ಯುಕ್ತಿ ಮತ್ತು ನಿರ್ಧಾರಕ್ಕೆ ಅನುಸಾರವಾಗಿ ನಷ್ಟ ಮತ್ತು ಹಾನಿ ಉಂಟಾಗುವುದೆಂದು ವಿಶ್ವಾಸವಿಡುವ ವ್ಯಕ್ತಿಗೆ ಸಂಕಷ್ಟದ ಸಮಯದಲ್ಲಿ ತಾಳ್ಮೆ ವಹಿಸಲು ಸಾಧ್ಯವಾಗುತ್ತದೆ. ಯಾವುದೇ ಸಾಧನೆಯೂ ಅಲ್ಲಾಹುವಿನ ದಾನವೇ ಆಗಿದೆಯೆಂದು ವಿಶ್ವಾಸವಿಡುವವನು ತನ್ನ ವ್ಯಕ್ತಿ ಸಾಧನೆಯಿಂದಾಗಿ ಮೈಮರೆತು ಹಿಗ್ಗುವುದಾಗಲಿ ಅಹಂಕಾರ ಪಡುವುದಾಗಲಿ ಮಾಡಲಾರನು.
(24) ಅಂದರೆ ಜಿಪುಣತನ ತೋರಿಸುವವರನ್ನು ಮತ್ತು ಜಿಪುಣತನ ತೋರಿಸುವಂತೆ ಜನರಿಗೆ ಆದೇಶಿಸುವವರನ್ನು. ಯಾರಾದರೂ ವಿಮುಖರಾಗುವುದಾದರೆ ಖಂಡಿತವಾಗಿಯೂ ಅಲ್ಲಾಹು ನಿರಪೇಕ್ಷನೂ ಸ್ತುತ್ಯರ್ಹನೂ ಆಗಿರುವನು.
(25) ಖಂಡಿತವಾಗಿಯೂ ನಾವು ನಮ್ಮ ಸಂದೇಶವಾಹಕರನ್ನು ಸ್ಪಷ್ಟವಾದ ದೃಷ್ಟಾಂತಗಳೊಂದಿಗೆ ಕಳುಹಿಸಿರುವೆವು. ಜನರು ನ್ಯಾಯಬದ್ಧವಾಗಿ ನೆಲೆಗೊಳ್ಳುವ ಸಲುವಾಗಿ ನಾವು ಅವರೊಂದಿಗೆ ಗ್ರಂಥವನ್ನೂ ತಕ್ಕಡಿಯನ್ನೂ(1217) ಇಳಿಸಿಕೊಟ್ಟಿರುವೆವು. ನಾವು ಕಬ್ಬಿಣವನ್ನೂ ಇಳಿಸಿಕೊಟ್ಟಿರುವೆವು.(1218) ಅದರಲ್ಲಿ ಕಠಿಣವಾದ ಹೋರಾಟ ಶಕ್ತಿಯಿದೆ ಮತ್ತು ಜನರಿಗೆ ಪ್ರಯೋಜನಗಳಿವೆ. ಇವೆಲ್ಲವೂ ಅಲ್ಲಾಹುವಿಗೆ ಮತ್ತು ಅವನ ಸಂದೇಶವಾಹಕರಿಗೆ ಅಗೋಚರವಾಗಿ ಸಹಾಯ ಮಾಡುವವರು ಯಾರೆಂದು ಅವನು ತಿಳಿಯುವ ಸಲುವಾಗಿದೆ. ಖಂಡಿತವಾಗಿಯೂ ಅಲ್ಲಾಹು ಬಲಿಷ್ಠನೂ ಪ್ರತಾಪಶಾಲಿಯೂ ಆಗಿರುವನು.
1217. ತಕ್ಕಡಿ ಎಂಬ ಪದದ ತಾತ್ಪರ್ಯ ಅಲ್ಲಾಹುವಿನ ಸಮತೋಲನ ನಿಯಮವಾಗಿರಬಹುದು. 1218. ಅಲ್ಲಾಹು ತನ್ನ ಮಹಾ ಸಾಮರ್ಥ್ಯದಿಂದ ಮನುಷ್ಯರಿಗೆ ಸಜ್ಜೀಕರಿಸಿಕೊಟ್ಟ ಅನೇಕ ವಿಷಯಗಳನ್ನು ಸೂಚಿಸುವ ಕಡೆ ಕುರ್‌ಆನ್ ‘ಇಳಿಸಿಕೊಟ್ಟನು’ ಎಂಬ ಪದವನ್ನು ಬಳಸಿದ್ದಾಗಿ ಕಾಣಬಹುದು. ಕಬ್ಬಿಣವು ಮನುಷ್ಯರಿಗೆ ಬಹಳ ಪ್ರಯೋಜನವನ್ನು ನೀಡಿದ ಒಂದು ಲೋಹವಾಗಿದೆ. ಅಸಂಖ್ಯಾತ ಜನರ ಮರಣಕ್ಕೆ ಕಾರಣವಾದುದೂ ಕೂಡ ಕಬ್ಬಿಣದಿಂದ ನಿರ್ಮಿಸಲಾದ ಆಯುಧಗಳಾಗಿವೆ. ಲೋಹಗಳು ಮತ್ತು ಧಾತುಗಳನ್ನು ಹೊಂದಿರುವ ಪದಾರ್ಥವು ಅಲ್ಲಾಹುವಿನ ದಾನವಾಗಿದೆ. ಅದನ್ನು ಮನುಷ್ಯರು ಹೇಗೆ ಬಳಸುತ್ತಾರೆ ಎಂಬುದರಲ್ಲಿ ಅದರ ಲಾಭ ಮತ್ತು ಹಾನಿಗಳು ಅಡಗಿವೆ.
(26) ಖಂಡಿತವಾಗಿಯೂ ನಾವು ನೂಹ್‍ರನ್ನು ಮತ್ತು ಇಬ್ರಾಹೀಮ್‌ರನ್ನು (ಸಂದೇಶವಾಹಕರಾಗಿ) ಕಳುಹಿಸಿದೆವು. ಅವರಿಬ್ಬರ ಸಂತತಿಗಳಲ್ಲಿ ಪ್ರವಾದಿತ್ವವನ್ನು ಮತ್ತು ಗ್ರಂಥವನ್ನು ನಾವು ಮಾಡಿದೆವು. ಅವರ ಪೈಕಿ ಸನ್ಮಾರ್ಗ ಪಡೆದವರಿರುವರು. ಅವರ ಪೈಕಿ ಹೆಚ್ಚಿನವರೂ ದುರ್ಮಾರ್ಗಿಗಳಾಗಿರುವರು.
(27) ತರುವಾಯ ಅವರ ಹಿಂದೆಯೇ ನಾವು ನಮ್ಮ ಸಂದೇಶವಾಹಕರನ್ನು ನಿರಂತರವಾಗಿ ಕಳುಹಿಸಿದೆವು. ಮರ್ಯಮ್‍ರ ಮಗನಾದ ಈಸಾರನ್ನೂ ಕಳುಹಿಸಿದೆವು.(1219) ನಾವು ಅವರಿಗೆ ಇಂಜೀಲನ್ನು ನೀಡಿದೆವು. ಅವರನ್ನು ಅನುಸರಿಸಿದವರ ಹೃದಯಗಳಲ್ಲಿ ನಾವು ಕೃಪೆ ಮತ್ತು ಕರುಣೆಯನ್ನು ಇಟ್ಟೆವು. ಸನ್ಯಾಸತ್ವವನ್ನು ಸ್ವತಃ ಅವರೇ ಹೊಸದಾಗಿ ನಿರ್ಮಿಸಿದರು. ಅಲ್ಲಾಹುವಿನ ಸಂತೃಪ್ತಿಯನ್ನು ಗಳಿಸಲು ಅವರು (ಅವರು ಹೀಗೆ ಮಾಡಿದರೇ) ವಿನಾ ನಾವು ಅದನ್ನು ಅವರಿಗೆ ನಿಯಮವನ್ನಾಗಿ ಮಾಡಿರಲಿಲ್ಲ.(1220) ತರುವಾಯ ಅವರು ಅದನ್ನು ಪಾಲಿಸಬೇಕಾದ ರೀತಿಯಲ್ಲಿ ಪಾಲಿಸಲೂ ಇಲ್ಲ. ಆಗ ಅವರ ಪೈಕಿ ವಿಶ್ವಾಸವಿಟ್ಟವರಿಗೆ ನಾವು ಅವರ ಪ್ರತಿಫಲವನ್ನು ನೀಡಿದೆವು. ಅವರಲ್ಲಿ ಹೆಚ್ಚಿನವರೂ ದುರ್ಮಾರ್ಗಿಗಳಾಗಿದ್ದರು.
1219. ಈಸಾ(ಅ) ರಿಗಿಂತ ಮುಂಚೆ ಕಳುಹಿಸಲಾದ ಪ್ರವಾದಿಗಳನ್ನು ಕ್ರೈಸ್ತರು ಪ್ರವಾದಿಗಳೆಂದೇ ಪರಿಗಣಿಸುತ್ತಾರೆ. ಆದರೆ ಈಸಾ(ಅ) ರವರು ಪ್ರವಾದಿಯಲ್ಲ, ದೇವಪುತ್ರರೆಂದು ಅವರು ವಾದಿಸುತ್ತಾರೆ. ಅದನ್ನು ಖಂಡಿಸಿ ಈಸಾ(ಅ) ರವರು ಪ್ರವಾದಿ ಪರಂಪರೆಯ ಒಂದು ಕೊಂಡಿಯಾಗಿದ್ದಾರೆಂದು ಈ ಸೂಕ್ತಿಯು ಒತ್ತಿಹೇಳುತ್ತದೆ. 1220. ಬ್ರಹ್ಮಚರ್ಯೆ, ವನವಾಸ ಇತ್ಯಾದಿಗಳನ್ನು ಅನೇಕ ಮಂದಿ ಧಾರ್ಮಿಕ ಜೀವನದ ಪರಿಪೂರ್ಣತೆಯನ್ನಾಗಿ ಪರಿಗಣಿಸುತ್ತಾರೆ. ಇಸ್ಲಾಮ್ ಇದನ್ನು ಪ್ರೋತ್ಸಾಹಿಸುವುದಿಲ್ಲ. ಸಾಮಾಜಿಕ ಜೀವಿಯಾಗಿ ಬದುಕಿಕೊಂಡೇ ಸತ್ಯಕ್ಕೆ ಸಾಕ್ಷಿಯಾಗುವುದರಲ್ಲಿ ಮತ್ತು ಪ್ರತಿಕೂಲ ಸನ್ನಿವೇಶಗಳನ್ನು ಹಿಮ್ಮೆಟ್ಟಿಸುವುದರಲ್ಲಿ ಇಸ್ಲಾಮ್ ಮಹತ್ವವನ್ನು ಕಾಣುತ್ತದೆ.
(28) ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡಿರಿ. ಹಾಗಾದರೆ ಅವನು ತನ್ನ ಕಾರುಣ್ಯದಿಂದ ನಿಮಗೆ ಎರಡು ಪಾಲನ್ನು ದಯಪಾಲಿಸುವನು.(1221) ಅವನು ನಿಮಗೆ ಒಂದು ಪ್ರಕಾಶವನ್ನು ಮಾಡಿಕೊಡುವನು. ಅದರ ಮೂಲಕ ನಿಮಗೆ (ಸರಿಯಾದ ಮಾರ್ಗದಲ್ಲಿ) ನಡೆಯಬಹುದು. ಅವನು ನಿಮಗೆ ಕ್ಷಮಿಸುವನು. ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
1221. ಪೂರ್ವ ಗ್ರಂಥಗಳಲ್ಲಿ ವಿಶ್ವಾಸವಿಟ್ಟಿದ್ದ ಯಹೂದರು ಮತ್ತು ಕ್ರೈಸ್ತರ ಪೈಕಿ ಇಸ್ಲಾಮ್ ಸ್ವೀಕರಿಸಿದವರ ಬಗ್ಗೆ ಈ ಸೂಕ್ತಿಯಲ್ಲಿ ಪ್ರಸ್ತಾಪಿಸಲಾಗಿದೆ ಮತ್ತು ಇಸ್ಲಾಮಿಗಿಂತ ಮುಂಚೆ ತೌರಾತ್ ಅಥವಾ ಇಂಜೀಲ್‍ಗಳಲ್ಲಿ ವಿಶ್ವಾಸವಿಟ್ಟ ಕಾರಣ ಅಲ್ಲಾಹುವಿನ ಕಾರುಣ್ಯದ ಒಂದು ಪಾಲು ಮತ್ತು ತರುವಾಯ ಕುರ್‌ಆನಿನಲ್ಲಿ ವಿಶ್ವಾಸವಿಟ್ಟ ಕಾರಣ ಎರಡನೇ ಪಾಲು ಅವರಿಗಿದೆ ಎಂದು ವ್ಯಾಖ್ಯಾನಕಾರರು ಹೇಳಿದ್ದಾರೆ.
(29) ಅಲ್ಲಾಹುವಿನ ಅನುಗ್ರಹದಿಂದ ಏನನ್ನೂ ಸ್ವಾಧೀನದಲ್ಲಿಟ್ಟುಕೊಳ್ಳಲು ತಮಗೆ ಸಾಧ್ಯವಾಗದು ಹಾಗೂ ಖಂಡಿತವಾಗಿಯೂ ಅನುಗ್ರಹವಿರುವುದು ಅಲ್ಲಾಹುವಿನ ಕೈಯಲ್ಲಾಗಿದೆ ಮತ್ತು ಅವನು ಇಚ್ಛಿಸುವವರಿಗೆ ಅವನು ಅದನ್ನು ನೀಡುವನು ಎಂದು ಗ್ರಂಥದವರು ಅರಿತುಕೊಳ್ಳುವ ಸಲುವಾಗಿ. ಅಲ್ಲಾಹು ಮಹಾ ಅನುಗ್ರಹದ ಒಡೆಯನಾಗಿರುವನು.