6 - Al-An'aam ()

|

(1) ಆಕಾಶಗಳನ್ನೂ ಭೂಮಿಯನ್ನೂ ಸೃಷ್ಟಿಸಿರುವ ಮತ್ತು ಅಂಧಕಾರಗಳನ್ನೂ ಪ್ರಕಾಶವನ್ನೂ ಉಂಟುಮಾಡಿರುವ ಅಲ್ಲಾಹುವಿಗೆ ಸ್ತುತಿ.(171) ಆದರೂ ಸತ್ಯನಿಷೇಧಿಗಳು ತಮ್ಮ ರಬ್‌‌ನೊಂದಿಗೆ ಸಮಾನರನ್ನು ಕಲ್ಪಿಸುತ್ತಿರುವರು.
171. ಅಕಾಶಗಳಿಗೆ ಮತ್ತು ಭೂಮಿಗೆ ಬೇರೆ ಬೇರೆ ಸೃಷ್ಟಿಕರ್ತರನ್ನು ಪರಿಕಲ್ಪಿಸಿ ಆರಾಧಿಸುವ ಜನರಿದ್ದಾರೆ. ಅಂಧಕಾರಗಳು ಭೂತಗಳ ಸೃಷ್ಟಿಯಾಗಿದೆ ಮತ್ತು ಪ್ರಕಾಶವು ದೇವರ ಸೃಷ್ಟಿಯಾಗಿದೆಯೆಂದು ಅವರು ನಂಬುತ್ತಾರೆ. ಅವೆಲ್ಲವನ್ನೂ ನಿಷೇಧಿಸುತ್ತಾ ಜಗತ್ತಿನ ಸರ್ವ ವಸ್ತುಗಳನ್ನು ಮತ್ತು ವಿದ್ಯಮಾನಗಳನ್ನು ಸೃಷ್ಟಿಸಿರುವುದು ಅಲ್ಲಾಹು ಮಾತ್ರವಾಗಿರುವನು ಎಂದು ಈ ಸೂಕ್ತಿ ಸ್ಪಷ್ಟಪಡಿಸುತ್ತದೆ.

(2) ನಿಮ್ಮನ್ನು ಜೇಡಿ ಮಣ್ಣಿನಿಂದ ಸೃಷ್ಟಿಸಿದವನು ಅವನೇ ಆಗಿರುವನು. ತರುವಾಯ ಅವನು ಒಂದು ಅವಧಿಯನ್ನು ನಿಶ್ಚಯಿಸಿದನು. ಅವನ ಬಳಿ ನಿಶ್ಚಿತವಾದ ಇನ್ನೊಂದು ಅವಧಿಯೂ ಇದೆ. ಹೀಗಿದ್ದೂ ನೀವು ಸಂದೇಹ ಪಡುತ್ತಿರುವಿರಿ.

(3) ಆಕಾಶಗಳಲ್ಲೂ ಭೂಮಿಯಲ್ಲೂ (ಆರಾಧಿಸಬೇಕಾದ) ಅಲ್ಲಾಹು ಅವನೇ ಆಗಿರುವನು. ನಿಮ್ಮ ರಹಸ್ಯವನ್ನೂ ಬಹಿರಂಗವನ್ನೂ ಅವನು ಅರಿಯುವನು ಮತ್ತು ನೀವು ಸಂಪಾದಿಸುತ್ತಿರುವುದನ್ನೂ ಅವನು ಅರಿಯುವನು.

(4) ಅವರ ರಬ್‌‌ನ ದೃಷ್ಟಾಂತಗಳಲ್ಲಿ ಸೇರಿದ ಯಾವುದೇ ದೃಷ್ಟಾಂತವು ಅವರ ಬಳಿಗೆ ಬಂದಾಗಲೂ ಅವರು ಅದರಿಂದ ವಿಮುಖರಾಗುತ್ತಲೇ ಇರುವರು.

(5) ಖಂಡಿತವಾಗಿಯೂ ಸತ್ಯವು ಅವರೆಡೆಗೆ ಬಂದಾಗ ಅವರು ಅದನ್ನು ನಿಷೇಧಿಸಿದರು. ಆದರೆ ಅವರು ಯಾವುದನ್ನು ಗೇಲಿ ಮಾಡುತ್ತಿದ್ದರೋ ಅದರ ವೃತ್ತಾಂತಗಳು ತರುವಾಯ ಅವರ ಬಳಿಗೆ ಬರಲಿವೆ.

(6) ಅವರಿಗಿಂತ ಮುಂಚಿನ ಎಷ್ಟೋ ತಲೆಮಾರುಗಳನ್ನು ನಾವು ನಾಶ ಮಾಡಿರುವೆವು ಎಂಬುದನ್ನು ಅವರು ಕಾಣಲಿಲ್ಲವೇ? ನಿಮಗೆ ನಾವು ಮಾಡಿಕೊಡದಂತಹ ಸೌಲಭ್ಯಗಳನ್ನು ಅವರಿಗೆ ಭೂಮಿಯಲ್ಲಿ ಮಾಡಿಕೊಟ್ಟಿದ್ದೆವು. ನಾವು ಅವರಿಗೆ ಯಥೇಷ್ಟವಾಗಿ ಮಳೆಯನ್ನು ಸುರಿಸಿಕೊಟ್ಟೆವು ಮತ್ತು ನದಿಗಳನ್ನು ಅವರ ತಳಭಾಗದಿಂದ ಹರಿಯುವಂತೆ ಮಾಡಿದ್ದೆವು. ತರುವಾಯ ಅವರ ಪಾಪಗಳ ನಿಮಿತ್ತ ನಾವು ಅವರನ್ನು ನಾಶಮಾಡಿದೆವು. ಅವರ ನಂತರ ನಾವು ಬೇರೊಂದು ತಲೆಮಾರನ್ನು ಸೃಷ್ಟಿಸಿದೆವು.

(7) (ಓ ಪ್ರವಾದಿಯವರೇ!) ಕಾಗದದಲ್ಲಿ ಬರೆದಿರುವ ಒಂದು ಗ್ರಂಥವನ್ನು ನಾವು ತಮಗೆ ಇಳಿಸಿಕೊಟ್ಟು, ನಂತರ ಅವರು ಅದನ್ನು ಸ್ವತಃ ತಮ್ಮ ಕೈಗಳಿಂದ ಸ್ಪರ್ಶಿಸಿ ನೋಡಿದರೂ ‘ಇದು ಸ್ಪಷ್ಟವಾದ ಇಂದ್ರಜಾಲವಲ್ಲದೆ ಇನ್ನೇನೂ ಅಲ್ಲ’ ಎಂದು ಸತ್ಯನಿಷೇಧಿಗಳು ಹೇಳುವರು.

(8) ‘ಅವರೊಂದಿಗೆ (ಪ್ರವಾದಿಯವರೊಂದಿಗೆ) ಒಬ್ಬ ಮಲಕ್‍ನನ್ನು ಏಕೆ ಇಳಿಸಲಾಗಿಲ್ಲ?’ ಎಂದು ಅವರು ಹೇಳಿದರು. ಆದರೆ ನಾವು ಮಲಕನ್ನು ಇಳಿಸಿರುತ್ತಿದ್ದರೆ ವಿಷಯವು (ಅಂತಿಮವಾಗಿ) ತೀರ್ಮಾನಿಸಲಾಗುತ್ತಿತ್ತು. ತರುವಾಯ ಅವರಿಗೆ ಕಾಲಾವಕಾಶವನ್ನು ದೀರ್ಘಗೊಳಿಸಲಾಗುತ್ತಿರಲಿಲ್ಲ.

(9) ನಾವು ಓರ್ವ ಮಲಕನ್ನು (ಸಂದೇಶವಾಹಕನನ್ನಾಗಿ) ನಿಶ್ಚಯಿಸುವುದಾದರೂ ಆ ಮಲಕನ್ನು ನಾವು ಮನುಷ್ಯನನ್ನಾಗಿಯೇ ಮಾಡುತ್ತಿದ್ದೆವು(172) ಮತ್ತು ಅವರು (ಇಂದು) ಗೊಂದಲಗೊಳಿಸುತ್ತಿರುವ ವಿಷಯದಲ್ಲಿ ನಾವು (ಆಗಲೂ) ಅವರಿಗೆ ಸಂಶಯವನ್ನುಂಟುಮಾಡುವೆವು.
172. ಮನುಷ್ಯರೆಡೆಗೆ ಓರ್ವ ಮಲಕನ್ನು ಸಂದೇಶವಾಹಕನನ್ನಾಗಿ ನಿಯೋಗಿಸುವುದಾದರೆ ಆ ಮಲಕನ್ನು ಮನುಷ್ಯ ರೂಪದಲ್ಲೇ ಕಳುಹಿಸಬೇಕಾಗಿದೆ. ಆಗಲೂ ಆ ಸಂದೇಶವಾಹಕನ ಅಸ್ತಿತ್ವ ಮತ್ತು ವಿಶ್ವಾಸಾರ್ಹತೆಯ ಕುರಿತು ಗೊಂದಲವನ್ನುಂಟು ಮಾಡಲು ಅವರಿಗೆ ಸಾಧ್ಯವಾಗುತ್ತಿತ್ತು.

(10) ತಮಗಿಂತ ಮುಂಚೆ ಅನೇಕ ಸಂದೇಶವಾಹಕರು ಅಪಹಾಸ್ಯಕ್ಕೀಡಾಗಿರುವರು. ತರುವಾಯ ಅವರನ್ನು ಗೇಲಿ ಮಾಡುತ್ತಿದ್ದವರಿಗೆ ಅವರು ಏನೆಲ್ಲ ಅಪಹಾಸ್ಯ ಮಾಡುತ್ತಿದ್ದರೋ ಅವೆಲ್ಲವೂ ಆವರಿಸಿಯೇ ಬಿಟ್ಟವು.

(11) (ಓ ಪ್ರವಾದಿಯವರೇ!) ಹೇಳಿರಿ: ‘ನೀವು ಭೂಮಿಯಲ್ಲಿ ಸಂಚರಿಸಿರಿ. ತರುವಾಯ ಸತ್ಯನಿಷೇಧಿಗಳ ಅಂತ್ಯವು ಹೇಗಿತ್ತೆಂಬುದನ್ನು ನೋಡಿರಿ.’

(12) ತಾವು ಕೇಳಿರಿ: ‘ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಯಾರದ್ದು?’ ಹೇಳಿರಿ: ‘ಅಲ್ಲಾಹುವಿನದ್ದು.’ ಅವನು ಸ್ವತಃ ಅವನ ಮೇಲೆ ಕಾರುಣ್ಯವನ್ನು (ಬಾಧ್ಯತೆಯಾಗಿ) ವಿಧಿಸಿರುವನು. ಪುನರುತ್ಥಾನದ ದಿನದೆಡೆಗೆ ಖಂಡಿತವಾಗಿಯೂ ಅವನು ನಿಮ್ಮನ್ನು ಒಟ್ಟುಗೂಡಿಸುವನು. ಅದರಲ್ಲಿ ಸಂದೇಹವೇ ಇಲ್ಲ.(173) ಆದರೆ ಯಾರು ಸ್ವತಃ ತಮ್ಮನ್ನೇ ನಷ್ಟಕ್ಕೀಡು ಮಾಡಿರುವರೋ ಅವರು ವಿಶ್ವಾಸವಿಡಲಾರರು.
173. ಮನುಷ್ಯರಿಗೆ ಅವರ ಕರ್ಮಗಳಿಗೆ ಅನುಗುಣವಾಗಿ ಪ್ರತಿಫಲ ನೀಡಲು ಇಹಲೋಕವು ಪರ್ಯಾಪ್ತವಲ್ಲ. ಒಬ್ಬನನ್ನು ಕೊಂದವನಿಗೂ ಸಾವಿರ ಜನರನ್ನು ಕೊಂದವನಿಗೂ ಇಲ್ಲಿ ನೀಡಲಾಗುವ ಗರಿಷ್ಠ ಶಿಕ್ಷೆಯು ಒಮ್ಮೆ ಗಲ್ಲಿಗೇರಿಸುವುದಾಗಿದೆ. ಆದ್ದರಿಂದ ಸರ್ವ ಮನುಷ್ಯರನ್ನೂ ಶಾಶ್ವತವಾದ ಒಂದು ಲೋಕದಲ್ಲಿ ಶಾಶ್ವತವಾದ ಒಂದು ದಿನದಂದು ಒಟ್ಟುಗೂಡಿಸುವೆನೆಂದು ಅಲ್ಲಾಹು ವಾಗ್ದಾನವಿತ್ತಿರುವನು. ಅಂದು ಅವರ ಕರ್ಮಫಲಗಳಿಗೆ ಅನುಗುಣವಾಗಿ ಶಾಶ್ವತ ಶಿಕ್ಷೆಯನ್ನು ಅಥವಾ ಶಾಶ್ವತ ರಕ್ಷೆಯನ್ನು ಅವನು ನೀಡುವನು. ಅದು ಅವನ ಅಪಾರವಾದ ಕಾರುಣ್ಯದ ನಿಮಿತ್ತವಾಗಿದೆ.

(13) ರಾತ್ರಿಯಲ್ಲಿ ಮತ್ತು ಹಗಲಿನಲ್ಲಿ ಒಳಗೊಂಡಿರುವುದೆಲ್ಲವೂ ಅವನದ್ದಾಗಿವೆ. ಅವನು ಎಲ್ಲವನ್ನು ಆಲಿಸುವವನೂ ಅರಿಯುವವನೂ ಆಗಿರುವನು.

(14) ಹೇಳಿರಿ: ‘ಆಕಾಶಗಳ ಮತ್ತು ಭೂಮಿಯ ಸೃಷ್ಟಿಕರ್ತನಾಗಿರುವ ಅಲ್ಲಾಹುವಿನ ಹೊರತು ಅನ್ಯರನ್ನು ನಾನು ರಕ್ಷಕನನ್ನಾಗಿ ಮಾಡಿಕೊಳ್ಳುವುದೇ? ಅವನು ಆಹಾರ ಉಣಿಸುವವನಾಗಿರುವನು. ಆದರೆ ಅವನು ಉಣಿಸಲ್ಪಡುವವನಲ್ಲ.’ ಹೇಳಿರಿ: ‘ಖಂಡಿತವಾಗಿಯೂ ಅಲ್ಲಾಹುವಿಗೆ ಶರಣಾಗತರಾದವರ ಪೈಕಿ ಮೊದಲನೆಯವನಾಗಬೇಕೆಂದು ನನ್ನೊಂದಿಗೆ ಆಜ್ಞಾಪಿಸಲಾಗಿದೆ.’ ತಾವು ಎಂದಿಗೂ ಬಹುದೇವಾರಾಧಕರಲ್ಲಿ ಸೇರಿದವರಾಗದಿರಿ.

(15) ಹೇಳಿರಿ: ‘ನಾನು ನನ್ನ ರಬ್‌‌ನೊಂದಿಗೆ ಅವಿಧೇಯತೆ ತೋರುವುದಾದರೆ ಭಯಾನಕವಾದ ದಿನವೊಂದರ ಶಿಕ್ಷೆಯ ಬಗ್ಗೆ ಖಂಡಿತವಾಗಿಯೂ ನಾನು ಭಯಪಡುತ್ತಿರುವೆನು.’

(16) ಆ ದಿನದಂದು ಯಾರನ್ನು ಅದರಿಂದ (ಶಿಕ್ಷೆಯಿಂದ) ಹೊರತುಪಡಿಸಲಾಗುವುದೋ ಅವನ ಮೇಲೆ ಖಂಡಿತವಾಗಿಯೂ ಅಲ್ಲಾಹು ಕರುಣೆ ತೋರಿರುವನು. ಅದೇ ಸ್ಪಷ್ಟವಾದ ವಿಜಯವಾಗಿದೆ.

(17) (ಓ ಪ್ರವಾದಿಯವರೇ!) ಅಲ್ಲಾಹು ತಮಗೆ ಏನಾದರೂ ಹಾನಿಯನ್ನುಂಟು ಮಾಡುವುದಾದರೆ ಅದನ್ನು ಸರಿಸಿಬಿಡಲು ಅವನಲ್ಲದೆ ಇನ್ನಾರೂ ಇರಲಾರರು. ಅವನು ತಮಗೆ ಏನಾದರೂ ಒಳಿತನ್ನುಂಟು ಮಾಡುವುದಾದರೆ ಅವನು ಸಕಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.

(18) ಅವನು ತನ್ನ ದಾಸರ ಮೇಲೆ ಪರಮಾಧಿಕಾರವುಳ್ಳವನಾಗಿರುವನು. ಅವನು ಯುಕ್ತಿಪೂರ್ಣನೂ ಸೂಕ್ಷ್ಮಜ್ಞಾನಿಯೂ ಆಗಿರುವನು.

(19) (ಓ ಪ್ರವಾದಿಯವರೇ!) ಕೇಳಿರಿ: ‘ಸಾಕ್ಷ್ಯಗಳ ಪೈಕಿ ಹಿರಿಯ ಸಾಕ್ಷ್ಯ ಯಾವುದು?’ ಹೇಳಿರಿ: ‘ನನ್ನ ಮತ್ತು ನಿಮ್ಮ ನಡುವೆ ಅಲ್ಲಾಹು ಸಾಕ್ಷಿಯಾಗಿರುವನು. ಈ ಕುರ್‌ಆನನ್ನು ನನಗೆ ದಿವ್ಯಸಂದೇಶವಾಗಿ ನೀಡಲಾಗಿರುವುದು ಇದರ ಮೂಲಕ ನಿಮಗೆ ಮತ್ತು ಇದು (ಇದರ ಸಂದೇಶವು) ತಲುಪುವ ಸರ್ವರಿಗೂ ನಾನು ಮುನ್ನೆಚ್ಚರಿಕೆ ನೀಡುವ ಸಲುವಾಗಿದೆ. ಅಲ್ಲಾಹುವಿನೊಂದಿಗೆ ಬೇರೆ ಆರಾಧ್ಯರಿರುವರೆಂದು ನಿಜವಾಗಿಯೂ ನೀವು ಸಾಕ್ಷ್ಯ ವಹಿಸುವಿರಾ?’ ಹೇಳಿರಿ: ‘ನಾನು ಸಾಕ್ಷ್ಯ ವಹಿಸಲಾರೆ’. ಹೇಳಿರಿ: ‘ಏಕಮೇವ ಆರಾಧ್ಯನು ಅವನು ಮಾತ್ರವಾಗಿರುವನು. ನೀವು (ಅವನೊಂದಿಗೆ) ಸಹಭಾಗಿಯನ್ನಾಗಿ ಮಾಡುತ್ತಿರುವುದರೊಂದಿಗೆ ನನಗೆ ಯಾವುದೇ ಸಂಬಂಧವೂ ಇಲ್ಲ.’

(20) ನಾವು ಯಾರಿಗೆ ಗ್ರಂಥವನ್ನು ನೀಡಿರುವೆವೋ ಅವರು ತಮ್ಮ ಮಕ್ಕಳನ್ನು ಅರಿಯುವಂತೆ ಅದನ್ನು ಅರಿಯುತ್ತಿರುವರು. ಸ್ವತಃ ತಮ್ಮನ್ನೇ ನಷ್ಟಕ್ಕೊಳಪಡಿಸಿದವರಾರೋ ಅವರು ವಿಶ್ವಾಸವಿಡಲಾರರು.

(21) ಅಲ್ಲಾಹುವಿನ ಮೇಲೆ ಸುಳ್ಳನ್ನು ಹೆಣೆದವನಿಗಿಂತ ಅಥವಾ ಅವನ ದೃಷ್ಟಾಂತಗಳನ್ನು ತಿರಸ್ಕರಿಸಿದವನಿಗಿಂತ ದೊಡ್ಡ ಅಕ್ರಮಿ ಇನ್ನಾರಿರುವನು? ಖಂಡಿತವಾಗಿಯೂ ಅಕ್ರಮಿಗಳು ಯಶಸ್ವಿಯಾಗಲಾರರು.

(22) ನಾವು ಅವರೆಲ್ಲರನ್ನೂ ಒಟ್ಟುಗೂಡಿಸುವ ದಿನ (ವನ್ನು ಸ್ಮರಿಸಿರಿ). ತರುವಾಯ ನಾವು ಬಹುದೇವಾರಾಧಕರೊಂದಿಗೆ ಕೇಳುವೆವು: ‘ನೀವು ವಾದಿಸುತ್ತಿದ್ದ ನಿಮ್ಮ ವತಿಯ ಆ ಸಹಭಾಗಿಗಳು ಎಲ್ಲಿರುವರು?’

(23) ತರುವಾಯ ಅವರ ಗತಿಗೇಡು ‘ನಮ್ಮ ರಬ್ ಅಲ್ಲಾಹುವಿನ ಮೇಲಾಣೆ! ಖಂಡಿತವಾಗಿಯೂ ನಾವು ಸಹಭಾಗಿತ್ವ ಮಾಡುವವರಾಗಿರಲಿಲ್ಲ’ ಎಂದು ಹೇಳುವುದರ ವಿನಾ ಇನ್ನೇನೂ ಆಗಿರದು.

(24) ಅವರು ಸ್ವತಃ ತಮ್ಮ ಮೇಲೆಯೇ ಹೇಗೆ ಸುಳ್ಳು ಹೇಳಿರುವರೆಂಬುದನ್ನು ನೋಡಿರಿ. ಅವರು ಯಾವುದನ್ನು ಹೆಣೆದಿದ್ದರೋ ಅದು ಅವರ ಪ್ರಯೋಜನಕ್ಕೆ ಬರಲೇ ಇಲ್ಲ.

(25) ತಾವು ಹೇಳುವುದನ್ನು ಕಿವಿಗೊಟ್ಟು ಕೇಳುವ ಕೆಲವರು ಅವರಲ್ಲಿರುವರು. ಆದರೆ ಅವರು ಅದನ್ನು ಗ್ರಹಿಸದಂತೆ ನಾವು ಅವರ ಹೃದಯಗಳ ಮೇಲೆ ಮುಚ್ಚಳಗಳನ್ನಿಟ್ಟಿರುವೆವು ಮತ್ತು ಅವರ ಕಿವಿಗಳಲ್ಲಿ ಬಿರಟೆಯನ್ನಿಟ್ಟಿರುವೆವು. ಸರ್ವ ದೃಷ್ಟಾಂತಗಳನ್ನು ಕಂಡರೂ ಅವರು ಅದರಲ್ಲಿ ವಿಶ್ವಾಸವಿಡಲಾರರು. ಹಾಗೆ ಅವರು ತಮ್ಮೊಂದಿಗೆ ತರ್ಕಿಸುವ ಸಲುವಾಗಿ ತಮ್ಮ ಬಳಿಗೆ ಬಂದರೆ ಆ ಸತ್ಯನಿಷೇಧಿಗಳು ಹೇಳುವರು: ‘ಇದು ಪೂರ್ವಿಕರ ಕಟ್ಟುಕಥೆಗಳೇ ವಿನಾ ಇನ್ನೇನೂ ಅಲ್ಲ.’

(26) ಅವರು ಅದರಿಂದ ಜನರನ್ನು ತಡೆಯುತ್ತಿರುವರು ಮತ್ತು (ಸ್ವತಃ) ಅದರಿಂದ ದೂರ ಸರಿಯುತ್ತಿರುವರು. (ವಾಸ್ತವಿಕವಾಗಿ) ಅವರು ನಾಶ ಮಾಡುತ್ತಿರುವುದು ಸ್ವತಃ ತಮ್ಮನ್ನೇ ಆಗಿದೆ. ಅವರು (ಅದರ ಬಗ್ಗೆ) ಪ್ರಜ್ಞಾವಂತರಾಗಲಾರರು.

(27) ಅವರನ್ನು ನರಕದಲ್ಲಿ ನಿಲ್ಲಿಸಲಾಗುವ ದೃಶ್ಯವನ್ನು ತಾವು ನೋಡಿರುತ್ತಿದ್ದರೆ! ಆಗ ಅವರು ಹೇಳುವರು: ‘ನಮ್ಮನ್ನು (ಇಹಲೋಕಕ್ಕೆ) ಮರಳಿ ಕಳುಹಿಸಲಾಗುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು! ಹಾಗಿರುತ್ತಿದ್ದರೆ ನಾವು ನಮ್ಮ ರಬ್‌‌ನ ದೃಷ್ಟಾಂತಗಳನ್ನು ನಿಷೇಧಿಸದವರೂ, ಸತ್ಯವಿಶ್ವಾಸಿಗಳೊಂದಿಗೆ ಸೇರಿದವರೂ ಆಗುತ್ತಿದ್ದೆವು.’

(28) ಅಲ್ಲ, ಅವರು ಈ ಹಿಂದ ಏನನ್ನು ಮರೆಮಾಚುತ್ತಿದ್ದರೋ ಅದು (ಈಗ) ಅವರಿಗೆ ಬಹಿರಂಗವಾಗಿದೆ. ಮರಳಿ ಕಳುಹಿಸಲಾದರೂ ಯಾವುದರಿಂದ ಅವರನ್ನು ತಡೆಯಲಾಗಿತ್ತೋ ಅದರೆಡೆಗೇ ಅವರು ಮರಳಿಹೋಗುವರು. ಖಂಡಿತವಾಗಿಯೂ ಅವರು ಸುಳ್ಳು ಹೇಳುವವರಾಗಿರುವರು.

(29) ಅವರು ಹೇಳಿದರು: ‘ನಮ್ಮ ಈ ಇಹಲೋಕ ಜೀವನವಲ್ಲದೆ ಇನ್ನೇನೂ ಇಲ್ಲ. ನಮ್ಮನ್ನು ಪುನರುತ್ಥಾನಗೊಳಿಸಲಾಗುವುದೂ ಇಲ್ಲ’.

(30) ಅವರನ್ನು ಅವರ ರಬ್‌‌ನ ಮುಂದೆ ನಿಲ್ಲಿಸಲಾಗುವುದನ್ನು ತಾವು ನೋಡಿರುತ್ತಿದ್ದರೆ! ಅವನು ಕೇಳುವನು: ‘ಇದು ಸತ್ಯವಲ್ಲವೇ?’ ಅವರು ಹೇಳುವರು: ‘ಹೌದು! ನಮ್ಮ ರಬ್‌‌ನ ಮೇಲಾಣೆ.’ ಅವನು ಹೇಳುವನು: ‘ಹಾಗಾದರೆ ನೀವು ನಿಷೇಧಿಸಿರುವುದರ ಫಲವಾಗಿ ಶಿಕ್ಷೆಯನ್ನು ಸವಿಯಿರಿ.’

(31) ಅಲ್ಲಾಹುವಿನೊಂದಿಗಿರುವ ಭೇಟಿಯನ್ನು ನಿರಾಕರಿಸಿದವರು ಖಂಡಿತವಾಗಿಯೂ ನಷ್ಟಕ್ಕೊಳಗಾಗಿರುವರು. ಕೊನೆಗೆ ಆ ಘಳಿಗೆಯು ಅವರೆಡೆಗೆ ಹಠಾತ್ತಾಗಿ ಬರುವಾಗ ಅವರು ಹೇಳುವರು: ‘ನಾವು ಈ ವಿಷಯದಲ್ಲಿ ಲೋಪವೆಸಗಿದ ಕಾರಣ ಅಯ್ಯೋ! ನಮ್ಮ ದುರ್ಗತಿಯೇ!’ ಅವರು ತಮ್ಮ ಪಾಪಗಳ ಭಾರವನ್ನು ತಮ್ಮ ಬೆನ್ನುಗಳಲ್ಲಿ ಹೊರುತ್ತಿರುವರು. ಅವರು ಹೊರುತ್ತಿರುವ ಭಾರವು ಎಷ್ಟು ನಿಕೃಷ್ಟವಾದುದು!

(32) ಐಹಿಕ ಜೀವನವು ಆಟ ಮತ್ತು ಮನರಂಜನೆಯ ವಿನಾ ಇನ್ನೇನೂ ಅಲ್ಲ. ಭಯಭಕ್ತಿ ಪಾಲಿಸುವವರಿಗೆ ಉತ್ತಮವಾಗಿರುವುದು ಪರಲೋಕವೇ ಆಗಿದೆ. ನೀವು ಆಲೋಚಿಸುವುದಿಲ್ಲವೇ?

(33) (ಓ ಪ್ರವಾದಿಯವರೇ!) ಅವರು ಹೇಳುತ್ತಿರುವ ವಿಷಯಗಳು ತಮ್ಮನ್ನು ದುಃಖಪಡಿಸುತ್ತಿವೆಯೆಂದು ಖಂಡಿತವಾಗಿಯೂ ನಾವು ಅರಿತಿರುವೆವು. ಆದರೆ (ವಾಸ್ತವಿಕವಾಗಿ) ಅವರು ನಿಷೇಧಿಸುತ್ತಿರುವುದು ತಮ್ಮನ್ನಲ್ಲ. ಆದರೆ ಆ ಅಕ್ರಮಿಗಳು ನಿಷೇಧಿಸುತ್ತಿರುವುದು ಅಲ್ಲಾಹುವಿನ ದೃಷ್ಟಾಂತಗಳನ್ನಾಗಿವೆ.

(34) ತಮಗಿಂತ ಮುಂಚೆಯೂ ಸಂದೇಶವಾಹಕರು ನಿಷೇಧಿಸಲ್ಪಟ್ಟಿರುವರು. ತರುವಾಯ ತಾವು ನಿಷೇಧಿಸಲ್ಪಡುವುದನ್ನು ಮತ್ತು ಹಿಂಸಿಸಲ್ಪಡುವುದನ್ನು ನಮ್ಮ ಸಹಾಯವು ಅವರೆಡೆಗೆ ಬರುವ ತನಕ ಅವರು ಸಹಿಸಿದರು. ಅಲ್ಲಾಹುವಿನ ವಚನಗಳಿಗೆ (ಆದೇಶಗಳಿಗೆ) ಬದಲಾವಣೆ ತರುವವರಾರೂ ಇಲ್ಲ. ಸಂದೇಶವಾಹಕರ ವೃತ್ತಾಂತಗಳ ಪೈಕಿ ಕೆಲವಂತೂ ತಮಗೆ ತಲುಪಿದೆ.

(35) ಅವರು ವಿಮುಖರಾಗಿ ಹೋಗುವುದು ತಮಗೆ ದುಸ್ಸಹವಾಗಿ ತೋರುವುದಾದರೆ, ಭೂಮಿಯಲ್ಲಿ (ಇಳಿದು ಹೋಗಲು) ಒಂದು ಸುರಂಗವನ್ನು ಅಥವಾ ಆಕಾಶಕ್ಕೆ (ಏರಿ ಹೋಗಲು) ಒಂದು ಏಣಿಯನ್ನು ಹುಡುಕಿ, ತರುವಾಯ ಅವರಿಗೊಂದು ದೃಷ್ಟಾಂತವನ್ನು ತಂದುಕೊಡಲು ತಮಗೆ ಸಾಧ್ಯವಾಗುವುದಾದರೆ (ಹಾಗೆ ಮಾಡಿರಿ). ಅಲ್ಲಾಹು ಇಚ್ಛಿಸಿದ್ದರೆ ಅವರೆಲ್ಲರನ್ನೂ ಅವನು ಸನ್ಮಾರ್ಗದಲ್ಲಿ ಒಟ್ಟುಗೂಡಿಸುತ್ತಿದ್ದನು. ಆದ್ದರಿಂದ ತಾವೆಂದೂ ಅಜ್ಞಾನಿಗಳ ಪೈಕಿ ಸೇರಿಬಿಟ್ಟವರಾಗದಿರಿ.

(36) ಆಲಿಸುವವರು ಮಾತ್ರ ಉತ್ತರಿಸುವರು. ಮರಣಹೊಂದಿದವರನ್ನು ಅಲ್ಲಾಹು ಪುನರುತ್ಥಾನಗೊಳಿಸುವನು.(174) ತರುವಾಯ ಅವರನ್ನು ಮರಳಿಸಲಾಗುವುದು ಅವನೆಡೆಗೇ ಆಗಿದೆ.
174. ಸತ್ಯವನ್ನು ಗ್ರಹಿಸಲು ಸಿದ್ಧರಿಲ್ಲದವರು ಆತ್ಮಚೈತನ್ಯವನ್ನು ಕಳೆದುಕೊಂಡವರಾಗಿರುವರು. ಅವರ ಸ್ಥಿತಿಯು ಸತ್ತವನಿಗೆ ಸಮಾನವಾಗಿ ಬದುಕುವುದು ಎಂಬಂತಿರುವುದು. ಅವರು ಸತ್ಯಸಂದೇಶವನ್ನು ಕೇಳದಿರುವುದರಲ್ಲಿ ದುಃಖಿಸಬೇಕಾಗಿಲ್ಲ. ಅವರ ವಿಷಯವನ್ನು ಅಲ್ಲಾಹು ನೋಡಿಕೊಳ್ಳುವನು. ಅವರ ಮರಳುವಿಕೆಯು ಅವನೆಡೆಗಾಗಿದೆ.

(37) ‘ಇವರ ಮೇಲೆ ಇವರ ರಬ್‌‌ನ ವತಿಯಿಂದ ಯಾವುದಾದರೂ ದೃಷ್ಟಾಂತವನ್ನೇಕೆ ಇಳಿಸಲಾಗಿಲ್ಲ’ ಎಂದು ಅವರು ಕೇಳುವರು. ತಾವು ಹೇಳಿರಿ: ‘ದೃಷ್ಟಾಂತವನ್ನು ಇಳಿಸಲು ಅಲ್ಲಾಹು ಖಂಡಿತವಾಗಿಯೂ ಸಾಮರ್ಥ್ಯವುಳ್ಳನಾಗಿರುವನು.’ ಆದರೆ ಅವರ ಪೈಕಿ ಹೆಚ್ಚಿನವರೂ (ವಾಸ್ತವಿಕತೆಯನ್ನು) ಅರ್ಥಮಾಡಿಕೊಳ್ಳುವುದಿಲ್ಲ.

(38) ಭೂಮಿಯಲ್ಲಿ ಯಾವುದೇ ಜೀವಿಯೂ ಇಲ್ಲ ಮತ್ತು ಎರಡು ರೆಕ್ಕೆಗಳೊಂದಿಗೆ ಹಾರಾಡುವ ಯಾವುದೇ ಹಕ್ಕಿಯೂ ಇಲ್ಲ, ಅವು ನಿಮ್ಮಂತಿರುವ ಕೆಲವು ಸಮುದಾಯಗಳಾಗಿರುವ ಹೊರತು.(175) ನಾವು ಗ್ರಂಥದಲ್ಲಿ ಯಾವುದೇ ಲೋಪವೆಸಗಿಲ್ಲ. ತರುವಾಯ ಅವರನ್ನು ಒಟ್ಟುಗೂಡಿಸಲಾಗುವುದು ಅವರ ರಬ್‌‌ನೆಡೆಗೇ ಆಗಿದೆ.(176)
175. ಪ್ರತಿಯೊಂದು ಜೀವಗೂ ಅದರದ್ದೇ ಆದ ಹಲವಾರು ವೈಶಿಷ್ಟ್ಯತೆಗಳಿವೆ. ಹಾಗೆಯೇ ಮನುಷ್ಯನೂ ಹಲವಾರು ವಿಭಿನ್ನ ವೈಶಿಷ್ಟ್ಯತೆಗಳಿರುವ ಜೀವಿಯಾಗಿದ್ದಾನೆ. ತನ್ನ ವಿಶೇಷ ನೈಸರ್ಗಿಕ ಹಿತಾಸಕ್ತಿಗಳನ್ನು ಈಡೇರಿಸಲು ಮನುಷ್ಯನಿಗೆ ದೈವಿಕ ಮಾರ್ಗದರ್ಶನವು ನೆರವಾಗುತ್ತದೆ. 176. ಪ್ರಾಣಿಗಳಿಗೆ ಮರಣಾನಂತರ ಜೀವನವಿದೆಯೇ? ಈ ಸೂಕ್ತಿಯು ಅದನ್ನು ಸೂಚಿಸುತ್ತದೆಯೆಂದು ಕೆಲವು ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ. ಪ್ರಾಣಿಗಳನ್ನು ಪುನರ್ಜೀವಗೊಳಿಸಲಾಗುವುದೆಂದು ಸೂಚಿಸುವ ಕೆಲವು ಹದೀಸುಗಳೂ ಇವೆ.

(39) ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರು ಯಾರೋ ಅವರು ಕಿವುಡರೂ, ಮೂಕರೂ, ಅಂಧಕಾರಗಳಲ್ಲಿರುವವರೂ ಆಗಿರುವರು. ಅಲ್ಲಾಹು ತಾನಿಚ್ಛಿಸುವವರನ್ನು ದಾರಿಗೆಡಿಸುವನು ಮತ್ತು ತಾನಿಚ್ಛಿಸುವವರನ್ನು ಅವನು ನೇರವಾದ ಮಾರ್ಗಕ್ಕೆ ಸೇರಿಸುವನು.

(40) (ಓ ಪ್ರವಾದಿಯವರೇ!) ಹೇಳಿರಿ: ‘ನನಗೊಮ್ಮೆ ಹೇಳಿಕೊಡಿರಿ! ಅಲ್ಲಾಹುವಿನ ಶಿಕ್ಷೆಯು ನಿಮ್ಮ ಬಳಿಗೆ ಬಂದರೆ ಅಥವಾ ಅಂತ್ಯಘಳಿಗೆಯು ನಿಮ್ಮ ಬಳಿಗೆ ಬಂದರೆ ನೀವು ಅಲ್ಲಾಹುವಿನ ಹೊರತು ಇತರರನ್ನು ಕರೆದು ಪ್ರಾರ್ಥಿಸುವಿರಾ?(177) ನೀವು ಸತ್ಯಸಂಧರಾಗಿದ್ದರೆ (ಹೇಳಿರಿ.)
177. ಜಾಗತಿಕವಾಗಿ ಕಂಡುಬರುವ ಬಹುದೇವಾರಾಧಕರ ಪೈಕಿ ಹೆಚ್ಚಿನವರೂ ಏಕಮೇವ ಸೃಷ್ಟಿಕರ್ತನಲ್ಲಿ ವಿಶ್ವಾಸವಿಡುವವರಾಗಿದ್ದರು. ಈಗಲೂ ಅದೇ ಸ್ಥಿತಿಯಿದೆ. ಆದರೆ ಆರಾಧನೆಯ (ಪ್ರಾರ್ಥನೆಯು ಆರಾಧನೆಯ ತಿರುಳಾಗಿದೆ) ವಿಷಯದಲ್ಲಿ ಜಗದೊಡೆಯನ ಹೊರತು ಇತರರನ್ನೂ ಅವರು ಅರಸುತ್ತಿದ್ದರು. ದೇವಸಾಮೀಪ್ಯವನ್ನು ಗಳಿಸಿದ ಸಜ್ಜನರೊಂದಿಗೆ (ಅವರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ ಅಥವಾ ಪ್ರತಿಷ್ಠಾಪಿಸದೆ) ಪ್ರಾರ್ಥಿಸುವುದು ಅವರು ಮಾಡುತ್ತಿದ್ದ ಬಹುದೇವಾರಾಧನೆಯ ಪ್ರಮುಖ ಅಂಗವಾಗಿತ್ತು. ಆದರೆ ಅತಿಕಠಿಣ ವಿಪತ್ತುಗಳು ಎದುರಾದಾಗ ಅವರು ಎಲ್ಲ ಸೃಷ್ಟಿಗಳನ್ನೂ ತೊರೆದು ಸೃಷ್ಟಿಕರ್ತನಲ್ಲಿ ಅಭಯ ಯಾಚಿಸುತ್ತಿದ್ದರು. ಆದರೆ ಇಂದು ಸೃಷ್ಟಿಕರ್ತನಲ್ಲಿ ವಿಶ್ವಾಸವಿಡುವವರ ಪೈಕಿ ಕೆಲವರು ನಿರ್ಣಾಯಕ ಘಟ್ಟಗಳಲ್ಲ್ಲಿ ಸಹ ಮೃತರೊಂದಿಗೆ ಪ್ರಾರ್ಥಿಸುತ್ತಿರುವರು. ಇಂತಹವರ ಸ್ಥಿತಿಯು ನಿಜಕ್ಕೂ ಪರಿತಾಪಕರವಾಗಿದೆ!

(41) ಇಲ್ಲ, ನೀವು ಅವನನ್ನು ಮಾತ್ರ ಕರೆದು ಪ್ರಾರ್ಥಿಸುವಿರಿ. ಆಗ ಅವನಿಚ್ಛಿಸಿದರೆ ಯಾವ ವಿಪತ್ತಿನ ನಿಮಿತ್ತ ನೀವು ಅವನನ್ನು ಕರೆದು ಪ್ರಾರ್ಥಿಸುವಿರೋ ಅದನ್ನು ಅವನು ನಿವಾರಿಸುವನು. (ಆಗ) ನೀವು (ಅವನೊಂದಿಗೆ) ಸಹಭಾಗಿಯನ್ನಾಗಿ ಮಾಡುತ್ತಿರುವವುಗಳನ್ನು ಮರೆತು ಬಿಡುವಿರಿ.

(42) ತಮಗಿಂತ ಮುಂಚೆ ನಾವು ಅನೇಕ ಸಮುದಾಯಗಳೆಡೆಗೆ (ಸಂದೇಶವಾಹಕರನ್ನು) ಕಳುಹಿಸಿರುವೆವು. ತರುವಾಯ ಅವರು ವಿನಮ್ರರಾಗುವ ಸಲುವಾಗಿ ನಾವು ಅವರನ್ನು (ಆ ಸಮುದಾಯಗಳನ್ನು) ಸಂಕಷ್ಟ ಮತ್ತು ವಿಪತ್ತುಗಳಿಂದ ಹಿಡಿದೆವು.

(43) ನಮ್ಮ ಶಿಕ್ಷೆಯು ಅವರ ಬಳಿಗೆ ಬಂದಾಗ ಅವರೇಕೆ ವಿನಮ್ರರಾಗಲಿಲ್ಲ? ಆದರೆ ಅವರ ಹೃದಯಗಳು ಕಠಿಣವಾದವು ಮತ್ತು ಅವರು ಮಾಡುತ್ತಿರುವವುಗಳನ್ನು ಸೈತಾನನು ಅವರಿಗೆ ಆಕರ್ಷಣೀಯಗೊಳಿಸಿ ತೋರಿಸಿದನು.

(44) ಅವರೊಂದಿಗೆ ಉಪದೇಶಿಸಲಾದ ಸಂಗತಿಗಳನ್ನು ಅವರು ಮರೆತು ಬಿಟ್ಟಾಗ ಸಕಲ ವಿಷಯಗಳ ದ್ವಾರಗಳನ್ನೂ ನಾವು ಅವರಿಗೆ ತೆರೆದುಕೊಟ್ಟೆವು.(178) ಕೊನೆಗೆ ಅವರಿಗೆ ನೀಡಲಾಗಿರುವುದರಲ್ಲಿ ಅವರು ಆನಂದಿಸುತ್ತಿದ್ದಾಗ ಹಠಾತ್ತನೆ ನಾವು ಅವರನ್ನು ಹಿಡಿದುಕೊಂಡೆವು. ಆಗ ಅಗೋ ಅವರು ನಿರಾಶರಾಗಿ ಬಿಟ್ಟರು!
178. ಅಲ್ಲಾಹು ಅವರಿಗೆ ಅಭಿವೃದ್ಧಿ ಮತ್ತು ಸುಖಲೋಲುಪತೆಯ ದ್ವಾರಗಳನ್ನು ತೆರೆದುಕೊಟ್ಟನು. ತನ್ನೊಂದಿಗೆ ಶತ್ರುತ್ವ ಹೊಂದಿರುವವನಿಗೂ ಅಲ್ಲಾಹು ಇಹಲೋಕದಲ್ಲಿ ತನ್ನ ಅನುಗ್ರಹಗಳನ್ನು ಸಮೃದ್ಧವಾಗಿ ನೀಡುವನು. ಇದರ ಬಗ್ಗೆ ಯಾರೂ ತಪ್ಪು ತಿಳಿಯಬೇಕಾಗಿಲ್ಲ. ಅಹಂಕಾರಿಗಳು ಮತ್ತು ಸುಖಭೋಗಿಗಳಿಗೆ ಅಲ್ಲಾಹುವಿನ ಹಿಡಿತದಿಂದ ಪಾರಾಗಲು ಸಾಧ್ಯವಿಲ್ಲ. ತಾನಿಚ್ಛಿಸುವ ವೇಳೆಯಲ್ಲಿ ಅವನು ಅವರನ್ನು ಹಿಡಿಯುವನು ಮತ್ತು ತಾನಿಚ್ಛಿಸುವ ವಿಧದಲ್ಲಿ ಅವನು ಅವರನ್ನು ಇಹಲೋಕದಲ್ಲೋ ಪರಲೋಕದಲ್ಲೋ ಶಿಕ್ಷಿಸುವನು.

(45) ಅಕ್ರಮಿಗಳಾದ ಆ ಜನತೆಯನ್ನು ಬೇರುಸಹಿತ ಕೀಳಲಾಯಿತು. ಸರ್ವಲೋಕಗಳ ರಬ್ಬಾದ ಅಲ್ಲಾಹುವಿಗೆ ಸ್ತುತಿ.

(46) (ಓ ಪ್ರವಾದಿಯವರೇ!) ಹೇಳಿರಿ: ‘‘ನೀವು ಆಲೋಚಿಸಿದ್ದೀರಾ! ಅಲ್ಲಾಹು ನಿಮ್ಮ ಶ್ರವಣ ಮತ್ತು ದೃಷ್ಟಿಯನ್ನು ವಶಪಡಿಸಿದರೆ ಮತ್ತು ನಿಮ್ಮ ಹೃದಯಗಳ ಮೇಲೆ ಮುದ್ರೆಯೊತ್ತಿದರೆ ಅಲ್ಲಾಹುವಿನ ಹೊರತು ಅದನ್ನು ನಿಮಗೆ ತಂದುಕೊಡುವ ಅನ್ಯ ಆರಾಧ್ಯನು ಯಾರಿರುವನು?’ ನಾವು ಅವರಿಗೆ ಯಾವೆಲ್ಲಾ ವಿಧದಲ್ಲಿ ನಮ್ಮ ದೃಷ್ಟಾಂತಗಳನ್ನು ವಿವರಿಸಿಕೊಡುತ್ತಿರುವೆವೆಂಬುದನ್ನು ನೋಡಿರಿ. ಅದರ ಬಳಿಕವೂ ಅವರು ವಿಮುಖರಾಗುತ್ತಿರುವರು.

(47) (ಓ ಪ್ರವಾದಿಯವರೇ!) ಹೇಳಿರಿ: ‘ನನಗೊಮ್ಮೆ ಹೇಳಿಕೊಡಿರಿ! ಅಲ್ಲಾಹುವಿನ ಶಿಕ್ಷೆಯು ಹಠಾತ್ತನೆ ಅಥವಾ ಬಹಿರಂಗವಾಗಿ(179) ನಿಮ್ಮೆಡೆಗೆ ಬಂದರೆ ಅಕ್ರಮಿಗಳಾದ ಜನತೆಯ ವಿನಾ ಇನ್ನಾರಾದರೂ ನಾಶ ಮಾಡಲಾಗುವರೇ?’
179. ನೀವು ಮಲಗಿರುವಾಗ ಅಥವಾ ಅಲಕ್ಷಿತರಾಗಿರುವಾಗ ಶಿಕ್ಷೆಯು ಹಠಾತ್ತನೆ ಬರಬಹುದು. ಅಥವಾ ನೀವು ನೋಡುತ್ತಿರುವಂತೆಯೇ ಶಿಕ್ಷೆಯು ಬಹಿರಂಗವಾಗಿ ಬಂದೆರಗಲೂಬಹುದು.

(48) ಶುಭವಾರ್ತೆ ತಿಳಿಸುವವರಾಗಿ ಮತ್ತು ಮುನ್ನೆಚ್ಚರಿಕೆ ನೀಡುವವರಾಗಿಯೇ ವಿನಾ ನಾವು ಸಂದೇಶವಾಹಕರನ್ನು ಕಳುಹಿಸಲಾರೆವು. ತರುವಾಯ ಯಾರು ವಿಶ್ವಾಸವಿಡುವನೋ ಮತ್ತು ನಿಲುವನ್ನು ಸುಧಾರಿಸುವನೋ ಅವರು ಏನನ್ನೂ ಭಯಪಡಬೇಕಾಗಿಲ್ಲ. ಅವರು ದುಃಖಿಸಬೇಕಾಗಿಯೂ ಬರದು.

(49) ಆದರೆ ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರು ಯಾರೋ ಅವರು ಧಿಕ್ಕಾರಿಗಳಾಗಿರುವ ಕಾರಣ ಶಿಕ್ಷೆಯು ಅವರನ್ನು ಸ್ಪರ್ಶಿಸುವುದು.

(50) ಹೇಳಿರಿ: ‘ಅಲ್ಲಾಹುವಿನ ಖಜಾನೆಗಳು ನನ್ನ ಬಳಿಯಿವೆಯೆಂದು ನಾನು ನಿಮ್ಮೊಂದಿಗೆ ಹೇಳುವುದಿಲ್ಲ. ಅಗೋಚರ ವಿಷಯವನ್ನು ನಾನು ಅರಿಯುವುದೂ ಇಲ್ಲ. ನಾನೊಬ್ಬ ಮಲಕ್ ಆಗಿರುವೆನೆಂದು ನಿಮ್ಮೊಂದಿಗೆ ಹೇಳುವುದಿಲ್ಲ. ನನಗೆ ದಿವ್ಯಸಂದೇಶವಾಗಿ ನೀಡಲಾಗುವುದನ್ನೇ ವಿನಾ ನಾನು ಅನುಸರಿಸುವುದಿಲ್ಲ.’ ಹೇಳಿರಿ: ‘ಕುರುಡನೂ, ದೃಷ್ಟಿಯುಳ್ಳವನೂ ಸಮಾನರಾಗುವರೇ?(180) ನೀವೇಕೆ ಚಿಂತಿಸುವುದಿಲ್ಲ?’
180. ಪ್ರವಾದಿ(ಸ) ರವರ ಶತ್ರುಗಳು ಹೊಂದಿದ್ದ ದೇವಪರಿಕಲ್ಪನೆಗಳು ಮತ್ತು ಅಲ್ಲಾಹುವಿನ ಮೇಲೆ ಅವರು ಹೊರಿಸಿದ್ದ ಮಿಥ್ಯಾರೋಪಗಳು ಕೇವಲ ಅಂಧವಾದ ಊಹೆಗಳ ಮೇಲೆ ನಿರ್ಮಿತವಾದುದಾಗಿತ್ತು. ಈ ವಿಷಯದಲ್ಲಿ ಅವರು ಕುರುಡರಾಗಿದ್ದರು. ಪ್ರವಾದಿ(ಸ) ರವರು ಮಾತನಾಡುತ್ತಿದ್ದುದು ದಿವ್ಯಸಂದೇಶವೆಂಬ ಸ್ಪಷ್ಟ ಜ್ಞಾನದ ಆಧಾರದಲ್ಲಾಗಿತ್ತು.

(51) ತಮ್ಮ ರಬ್‌‌ನೆಡೆಗೆ ತಮ್ಮನ್ನು ಒಟ್ಟುಗೂಡಿಸಲಾಗುವುದು ಎಂದು ಭಯಪಡುವವರಿಗೆ ಇದರ (ದಿವ್ಯ ಸಂದೇಶದ) ಮೂಲಕ ಮುನ್ನೆಚ್ಚರಿಕೆ ನೀಡಿರಿ. ಅವರಿಗೆ ಅವನ ಹೊರತು ಅನ್ಯ ರಕ್ಷಕನಾಗಲಿ ಶಿಫಾರಸುಗಾರನಾಗಲಿ ಇರಲಾರರು. ಅವರು ಭಯಭಕ್ತಿ ಪಾಲಿಸುವವರಾಗಲೂ ಬಹುದು.

(52) ತಮ್ಮ ರಬ್‌‌ನ ಪ್ರೀತಿಯನ್ನು ಆಶಿಸುತ್ತಾ ಮುಂಜಾನೆ ಮತ್ತು ಸಂಜೆಯಲ್ಲಿ ಅವನೊಂದಿಗೆ ಪ್ರಾರ್ಥಿಸುತ್ತಿರುವವರನ್ನು ತಾವು ದೂರ ಅಟ್ಟದಿರಿ.(181) ಅವರ ಲೆಕ್ಕ ವಿಚಾರಣೆ ಮಾಡಬೇಕಾದ ಯಾವುದೇ ಹೊಣೆಯೂ ತಮಗಿಲ್ಲ. ತಮ್ಮನ್ನು ವಿಚಾರಣೆ ಮಾಡಬೇಕಾದ ಯಾವುದೇ ಹೊಣೆಯೂ ಅವರಿಗಿಲ್ಲ.(182) ಹಾಗಿದ್ದರಲ್ಲವೇ ತಾವು ಅವರನ್ನು ಅಟ್ಟಬೇಕಾದುದು. ತಾವೇನಾದರೂ ಹಾಗೆ ಮಾಡುವುದಾದರೆ ತಾವು ಅಕ್ರಮಿಗಳ ಪೈಕಿ ಸೇರಿದವರಾಗುವಿರಿ.
181. ಪ್ರವಾದಿ(ಸ) ರವರ ಆಪ್ತ ಅನುಯಾಯಿಗಳಲ್ಲಿ ಹೆಚ್ಚಿನವರೂ ಗುಲಾಮರು, ನಿರ್ಗತಿಕರು, ಮರ್ದಿತರು ಮತ್ತು ದೌರ್ಜನ್ಯಕ್ಕೊಳಗಾದವರಾಗಿದ್ದರು. ಅರೇಬಿಯನ್ ಜನತೆಯಲ್ಲಿದ್ದ ಧನಾಢ್ಯರಿಗೆ ಅವರೊಂದಿಗೆ ಅತಿಯಾದ ತಿರಸ್ಕಾರವಿತ್ತು. ಈ ಬಡಪಾಯಿಗಳನ್ನು ತಮ್ಮ ಬಳಿಯಿಂದ ದೂರ ಅಟ್ಟಿದರೆ ನಾವು ತಮ್ಮ ಹಿಂದೆ ಸೇರುವೆವು ಎಂದು ಅವರು ಪ್ರವಾದಿರೊಂದಿಗೆ ವಾಗ್ದಾನವಿತ್ತರು. ಇದು ಅವರನ್ನು ವಿಮರ್ಶಿಸುತ್ತಾ ಅವತೀರ್ಣಗೊಂಡ ಸೂಕ್ತಿಯಾಗಿದೆ. 182. ಆ ಬಡಪಾಯಿಗಳು ಪ್ರವಾದಿ(ಸ) ರೊಂದಿಗೆ ಸೇರಿರುವುದು ದಾನಧರ್ಮಗಳ ಮೂಲಕ ಜೀವನಾಧಾರವನ್ನು ಕಂಡುಕೊಳ್ಳುವ ಉದ್ದೇಶದಿಂದಾಗಿದೆಯೆಂಬ ಕುರೈಶೀ ಮುಖಂಡರ ಆರೋಪಕ್ಕೆ ಇಲ್ಲಿ ಉತ್ತರಿಸಲಾಗಿದೆ. ಮನಸ್ಸಿನಲ್ಲಿರುವ ವಿಚಾರಗಳನ್ನು ಸೂಕ್ಷವಾಗಿ ಅರಿಯುವ ಅಲ್ಲಾಹುವಿಗೆ ಮಾತ್ರ ಇಂತಹ ವಿಚಾರಗಳನ್ನು ಕೂಲಂಕುಶ ಪರಿಶೀಲಿಸಿ ತಕ್ಕ ಪ್ರತಿಫಲವನ್ನು ನೀಡಲು ಸಾಧ್ಯವಾಗುವುದು. ಯಾರನ್ನೇ ಆದರೂ ಅವನ ಬಾಹ್ಯವನ್ನಾಧರಿಸಿ ಮಾತ್ರ ಮೌಲ್ಯ ನಿರ್ಧಾರ ಮಾಡಬೇಕಾಗಿದೆ.

(53) ಹೀಗೆ ಅವರ ಪೈಕಿ ಕೆಲವರನ್ನು ಇತರ ಕೆಲವರ ಮೂಲಕ ನಾವು ಪರೀಕ್ಷಿಸಿರುವೆವು. ನಮ್ಮ ನಡುವಿನಿಂದ ಅಲ್ಲಾಹು ಅನುಗ್ರಹಿಸಿರುವುದು ಇವರನ್ನೇ ಏನು ಎಂದು ಅವರು ಹೇಳುವ ಸಲುವಾಗಿ. ಕೃತಜ್ಞತೆ ಸಲ್ಲಿಸುವವರ ಬಗ್ಗೆ ಅಲ್ಲಾಹು ಬಹಳ ಚೆನ್ನಾಗಿ ಅರಿಯುವವನಲ್ಲವೇ?

(54) ನಮ್ಮ ದೃಷ್ಟಾಂತಗಳಲ್ಲಿ ವಿಶ್ವಾಸವಿಡುವವರು ತಮ್ಮ ಬಳಿಗೆ ಬಂದರೆ ‘ನಿಮ್ಮ ಮೇಲೆ ಶಾಂತಿಯಿರಲಿ. ನಿಮ್ಮ ರಬ್ ಕಾರುಣ್ಯವನ್ನು ತನ್ನ ಮೇಲೆ (ಬಾಧ್ಯತೆಯಾಗಿ) ವಿಧಿಸಿರುವನು’ ಎಂದು ಹೇಳಿರಿ. ನಿಮ್ಮ ಪೈಕಿ ಯಾರಾದರೂ ಅಜ್ಞಾನ ನಿಮಿತ್ತ ಏನಾದರೂ ಕೆಡುಕನ್ನು ಮಾಡಿ, ತರುವಾಯ ಪಶ್ಚಾತ್ತಾಪಪಟ್ಟು ತನ್ನ ನಿಲುವನ್ನು ಸುಧಾರಿಸುವುದಾದರೆ ಖಂಡಿತವಾಗಿಯೂ ಅವನು (ಅಲ್ಲಾಹು) ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.

(55) ಅಪರಾಧಿಗಳ ಮಾರ್ಗವು ಸ್ಪಷ್ಟವಾಗಿ ಪ್ರಕಟವಾಗುವ ಸಲುವಾಗಿ ಹೀಗೆ ನಾವು ದೃಷ್ಟಾಂತಗಳನ್ನು ವಿವರಿಸಿಕೊಡುತ್ತಿರುವೆವು.

(56) (ಓ ಪ್ರವಾದಿಯವರೇ!) ಹೇಳಿರಿ: ‘ಅಲ್ಲಾಹುವಿನ ಹೊರತು ನೀವು ಯಾರನ್ನು ಕರೆದು ಪ್ರಾರ್ಥಿಸುತ್ತಿರುವಿರೋ ಅವರ ಆರಾಧನೆ ಮಾಡುವುದನ್ನು ಖಂಡಿತವಾಗಿಯೂ ನನಗೆ ವಿರೋಧಿಸಲಾಗಿದೆ.’ ಹೇಳಿರಿ: ‘ನಾನು ನಿಮ್ಮ ದೇಹೇಚ್ಛೆಗಳನ್ನು ಅನುಸರಿಸಲಾರೆನು. ಹಾಗೆ ಮಾಡಿದರೆ ನಾನು ಪಥಭ್ರಷ್ಟನಾಗುವೆನು ಮತ್ತು ಸನ್ಮಾರ್ಗ ಪಡೆದವರೊಂದಿಗೆ ಸೇರಿದವನಾಗಲಾರೆನು.’

(57) ಹೇಳಿರಿ: ‘ಖಂಡಿತವಾಗಿಯೂ ನಾನು ನನ್ನ ರಬ್‌‌ನ ಕಡೆಯ ಸ್ಪಷ್ಟವಾದ ಪುರಾವೆಗಳ ಆಧಾರದಲ್ಲಿರುವೆನು. ನೀವದನ್ನು ನಿಷೇಧಿಸಿರುವಿರಿ. ನೀವು ಯಾವುದಕ್ಕಾಗಿ ಆತುರಪಡುತ್ತಿರುವಿರೋ ಅದು (ಶಿಕ್ಷೆ) ನನ್ನ ಬಳಿಯಿಲ್ಲ. (ಅದರ) ಆಜ್ಞಾಧಿಕಾರವಿರುವುದು ಅಲ್ಲಾಹುವಿಗೆ ಮಾತ್ರ ವಾಗಿದೆ. ಅವನು ಸತ್ಯವನ್ನು ವಿವರಿಸಿಕೊಡುವನು. ತೀರ್ಪು ನೀಡುವವರಲ್ಲಿ ಅವನು ಅತ್ಯುತ್ತಮನಾಗಿರುವನು.’

(58) ಹೇಳಿರಿ: ‘ನೀವು ಆತುರಪಡುತ್ತಿರುವ ವಿಷಯವು ನನ್ನ ಬಳಿಯಿರುತ್ತಿದ್ದರೆ ನನ್ನ ಮತ್ತು ನಿಮ್ಮ ಮಧ್ಯೆ ವಿಷಯವು ಈಗಾಗಲೇ ತೀರ್ಮಾನಿಸಲಾಗಿರುತ್ತಿತ್ತು. ಅಲ್ಲಾಹು ಅಕ್ರಮಿಗಳ ಬಗ್ಗೆ ಚೆನ್ನಾಗಿ ಅರಿಯುವವನಾಗಿರುವನು.

(59) ಅಗೋಚರ ವಿಷಯಗಳ ಖಜಾನೆಗಳಿರುವುದು ಅವನ ಬಳಿಯಲ್ಲಾಗಿವೆ.(183) ಅವನ ಹೊರತು ಅವುಗಳನ್ನು ಯಾರೂ ಅರಿಯಲಾರರು. ನೆಲದಲ್ಲಿ ಮತ್ತು ಸಮುದ್ರದಲ್ಲಿರುವುದನ್ನು ಅವನು ಅರಿಯುವನು. ಅವನು ಅರಿಯುವ ವಿನಾ ಒಂದು ಎಲೆಯೂ ಉದುರದು. ಭೂಮಿಯ ಅಂಧಕಾರಗಳಲ್ಲಿರುವ ಒಂದು ಧಾನ್ಯವಾಗಿರಲಿ, ಹಸಿಯಾಗಿರುವ ಅಥವಾ ಒಣಗಿರುವ ಯಾವುದೇ ವಸ್ತುವಾಗಿರಲಿ ಸ್ಪಷ್ಟವಾದ ಒಂದು ಗ್ರಂಥದಲ್ಲಿ ದಾಖಲಿಸಲ್ಪಡದೆ ಇರಲಾರದು.
183. ಮಫಾತಿಹ್ ಎಂಬ ಪದಕ್ಕೆ ಖಜಾನೆಗಳು, ಕೀಲಿಕೈಗಳು ಎಂಬ ಅರ್ಥಗಳಿವೆ. ಅಗೋಚರ ವಿಷಯಗಳ ಖಜಾನೆಗಳು ಮತ್ತು ಕೀಲಿಕೈಗಳೆಲ್ಲವೂ ಅಲ್ಲಾಹುವಿನ ವಶದಲ್ಲಿವೆ.

(60) ರಾತ್ರಿಯಲ್ಲಿ (ನಿದ್ರಿಸುವಾಗ) ನಿಮ್ಮನ್ನು ಸಂಪೂರ್ಣವಾಗಿ ವಹಿಸಿಕೊಳ್ಳುವವನು ಅವನಾಗಿರುವನು. ಹಗಲು ನೀವು ಮಾಡಿರುವುದನ್ನೆಲ್ಲ ಅವನು ಅರಿಯುವನು. ತರುವಾಯ ನಿಶ್ಚಿತವಾದ ಜೀವಿತಾವಧಿ ಪೂರ್ತಿಯಾಗುವ ಸಲುವಾಗಿ ಹಗಲಿನಲ್ಲಿ ಅವನು ನಿಮ್ಮನ್ನು ಎಬ್ಬಿಸುವನು. ತರುವಾಯ ನಿಮ್ಮ ಮರಳುವಿಕೆಯು ಅವನೆಡೆಗಾಗಿದೆ. ತರುವಾಯ ನೀವು ಮಾಡುತ್ತಿರುವುದರ ಬಗ್ಗೆ ಅವನು ನಿಮಗೆ ತಿಳಿಸಿಕೊಡುವನು.

(61) ಅವನು ತನ್ನ ದಾಸರ ಮೇಲೆ ಪರಮಾಧಿಕಾರವುಳ್ಳವನಾಗಿರುವನು. ನಿಮ್ಮ ಮೇಲ್ನೋಟಕ್ಕಾಗಿ ಅವನು ಕಾವಲುಗಾರರನ್ನು ಕಳುಹಿಸುವನು. ಕೊನೆಗೆ ಅವರ ಪೈಕಿ ಓರ್ವನಿಗೆ ಮರಣವು ಆಸನ್ನವಾಗುವಾಗ ನಮ್ಮ ದೂತರು (ಮಲಕ್‍ಗಳು) ಅವನನ್ನು ಸಂಪೂರ್ಣವಾಗಿ ವಹಿಸಿಕೊಳ್ಳುವರು. (ಈ ವಿಷಯದಲ್ಲಿ) ಅವರು ಯಾವುದೇ ಲೋಪವೆಸಗಲಾರರು.

(62) ತರುವಾಯ ಅವರನ್ನು ಅವರ ನೈಜ ರಕ್ಷಕನಾದ ಅಲ್ಲಾಹುವಿನೆಡೆಗೆ ಮರಳಿಸಲಾಗುವುದು. ತಿಳಿಯಿರಿ! ಆಜ್ಞಾಧಿಕಾರವು ಅವನಿಗಿರುವುದಾಗಿದೆ. ಅವನು ಅತಿವೇಗವಾಗಿ ವಿಚಾರಣೆ ಮಾಡುವವನಾಗಿರುವನು.

(63) ಹೇಳಿರಿ: ‘ಅಲ್ಲಾಹು ನಮ್ಮನ್ನು ಇದರಿಂದ (ಈ ವಿಪತ್ತುಗಳಿಂದ) ರಕ್ಷಿಸಿದರೆ ನಿಸ್ಸಂಶಯವಾಗಿಯೂ ನಾವು ಕೃತಜ್ಞತೆ ಸಲ್ಲಿಸುವವರ ಪೈಕಿ ಸೇರುವೆವು’ ಎನ್ನುತ್ತಾ ವಿನಮ್ರವಾಗಿಯೂ ರಹಸ್ಯವಾಗಿಯೂ ನೀವು ಅವನನ್ನು ಕರೆದು ಪ್ರಾರ್ಥಿಸುವಾಗ ನೆಲ ಮತ್ತು ಸಮುದ್ರದ ಅಂಧಕಾರಗಳಿಂದ(184) ನಿಮ್ಮನ್ನು ರಕ್ಷಿಸುವವನು ಯಾರು?
184. ‘ಝುಲುಮಾತ್’ ಎಂಬುದರ ಭಾಷಿಕ ಅರ್ಥವು ಅಂಧಕಾರಗಳು ಎಂದಾಗಿದೆ. ಸಂಕಷ್ಟಗಳು, ವಿಪತ್ತುಗಳು, ಮೌಢ್ಯತೆಗಳು ಇತ್ಯಾದಿಗಳಿಗೆ ಈ ಪದವನ್ನು ಆಲಂಕಾರಿಕವಾಗಿ ಬಳಸಲಾಗುತ್ತದೆ. ಇಲ್ಲಿ ಎಲ್ಲ ರೀತಿಯ ಅಂಧಕಾರಗಳನ್ನೂ ಉದ್ದೇಶಿಸಬಹುದಾಗಿದೆ.

(64) ಹೇಳಿರಿ: ‘ಅವುಗಳಿಂದ ಮತ್ತು ಇತರೆಲ್ಲಾ ವಿಷಮಸ್ಥಿತಿಗಳಿಂದ ನಿಮ್ಮನ್ನು ರಕ್ಷಿಸುವವನು ಅಲ್ಲಾಹುವಾಗಿರುವನು. ಅದರ ಬಳಿಕವೂ ನೀವು ಅವನೊಂದಿಗೆ ಸಹಭಾಗಿತ್ವವನ್ನು ಮಾಡುತ್ತಿರುವಿರಿ.’

(65) ಹೇಳಿರಿ: ‘ನಿಮ್ಮ ಮೇಲ್ಭಾಗದಿಂದ ಅಥವಾ ನಿಮ್ಮ ಕಾಲುಗಳ ಅಡಿಭಾಗದಿಂದ ನಿಮ್ಮ ಮೇಲೆ ಶಿಕ್ಷೆಯನ್ನು ಕಳುಹಿಸಲು ಅಥವಾ ನಿಮ್ಮನ್ನು ವಿಭಿನ್ನ ಬಣಗಳನ್ನಾಗಿ ಮಾಡಿ ದಿಗ್ಭ್ರಾಂತಿಗೊಳಿಸಲು ಮತ್ತು ನಿಮ್ಮ ಪೈಕಿ ಕೆಲವರ ಹಿಂಸೆಯನ್ನು ಇತರ ಕೆಲವರು ಅನುಭವಿಸುವಂತೆ ಮಾಡಲು ಅವನು ಸಾಮರ್ಥ್ಯವುಳ್ಳವನಾಗಿರುವನು.’ ಅವರು ಗ್ರಹಿಸುವ ಸಲುವಾಗಿ ನಾವು ಅವರಿಗೆ ದೃಷ್ಟಾಂತಗಳನ್ನು ವಿವಿಧ ರೂಪಗಳಲ್ಲಿ ಹೇಗೆ ವಿವರಿಸಿಕೊಡುತ್ತಿರುವೆವು ಎಂಬುದನ್ನು ನೋಡಿರಿ.

(66) (ಓ ಪ್ರವಾದಿಯವರೇ!) ಇದು ಸತ್ಯವಾಗಿದ್ದೂ ಸಹ ತಮ್ಮ ಜನತೆಯು ಇದನ್ನು ನಿಷೇಧಿಸಿದೆ. ಹೇಳಿರಿ: ‘ನಾನು ನಿಮ್ಮ ಮೇಲೆ (ಹೊಣೆ) ವಹಿಸಲ್ಪಟ್ಟವನಲ್ಲ.’

(67) ಪ್ರತಿಯೊಂದು ವೃತ್ತಾಂತಕ್ಕೂ ಅದು (ಸತ್ಯವಾಗಿ) ಪ್ರಕಟವಾಗುವ ಒಂದು ಸಂದರ್ಭವಿದೆ. ನೀವು ತರುವಾಯ ಅರಿತುಕೊಳ್ಳುವಿರಿ.

(68) ನಮ್ಮ ದೃಷ್ಟಾಂತಗಳನ್ನು ಅಪಹಾಸ್ಯ ಮಾಡುವುದರಲ್ಲಿ ಮಗ್ನರಾಗಿರುವವರನ್ನು ಕಂಡರೆ ಅವರು ಬೇರಾವುದಾದರೂ ವಿಷಯವನ್ನು ಪ್ರವೇಶಿಸುವವರೆಗೆ ತಾವು ಅವರಿಂದ ವಿಮುಖರಾಗಿರಿ. ಇನ್ನು ಸೈತಾನನೇನಾದರೂ ಅದನ್ನು ಮರೆಯುವಂತೆ ಮಾಡಿದರೆ ಜ್ಞಾಪಕವಾದ ನಂತರ ಅಕ್ರಮಿಗಳಾಗಿರುವ ಆ ಜನರ ಜೊತೆಗೆ ತಾವು ಕೂರದಿರಿ.

(69) ಭಯಭಕ್ತಿ ಪಾಲಿಸುವವರಿಗೆ ಅವರ (ಅಕ್ರಮಿಗಳ) ವಿಚಾರಣೆ ಮಾಡಬೇಕಾದ ಯಾವುದೇ ಹೊಣೆಯೂ ಇಲ್ಲ. ಆದರೆ ನೆನಪಿಸಿಕೊಡಬೇಕಾಗಿದೆ. ಅವರು ಭಯಭಕ್ತಿ ಪಾಲಿಸುವವರಾಗಲೂಬಹುದು.

(70) ತಮ್ಮ ಧರ್ಮವನ್ನು ಆಟ ಮತ್ತು ಮನರಂಜನೆಯಾಗಿ ಮಾಡಿಕೊಂಡವರನ್ನು ಹಾಗೂ ಐಹಿಕ ಜೀವನವನ್ನು ಕಂಡು ವಂಚನೆಗೊಳಗಾದವರನ್ನು ಅವರ ಪಾಡಿಗೆ ಬಿಟ್ಟುಬಿಡಿರಿ. ಓರ್ವ ವ್ಯಕ್ತಿಯು ತಾನು ಮಾಡಿಟ್ಟಿರುವ ಕರ್ಮಗಳ ಫಲವಾಗಿ ವಿನಾಶದೆಡೆಗೆ ತಳ್ಳಲ್ಪಡುವ ಸಾಧ್ಯತೆಯಿರುವುದರಿಂದ ಇದರ (ಈ ಕುರ್‌ಆನ್‍ನ) ಮೂಲಕ ಅವರಿಗೆ ಉಪದೇಶ ನೀಡಿರಿ. ಆ ವ್ಯಕ್ತಿಗೆ ಅಲ್ಲಾಹುವಿನ ಹೊರತು ಅನ್ಯ ರಕ್ಷಕನಾಗಲಿ, ಶಿಫಾರಸುಗಾರನಾಗಲಿ ಇರಲಾರರು. ಸಕಲ ಪ್ರಾಯಶ್ಚಿತ್ತ ನೀಡಿದರೂ ಅವನಿಂದ ಅದನ್ನು ಸ್ವೀಕರಿಸಲಾಗದು. ಅವರು ತಾವು ಸ್ವತಃ ಮಾಡಿಟ್ಟಿರುವ ಕರ್ಮಗಳ ಫಲವಾಗಿ ವಿನಾಶದೆಡೆಗೆ ತಳ್ಳಲ್ಪಟ್ಟವರಾಗಿರುವರು. ಅವರು ನಿಷೇಧಿಸುತ್ತಿರುವುದರ ಫಲವಾಗಿ ಅವರಿಗೆ ಕುದಿಯುವ ನೀರು ಮತ್ತು ಯಾತನಾಮಯ ಶಿಕ್ಷೆಯಿದೆ.

(71) ಹೇಳಿರಿ: ‘ಅಲ್ಲಾಹುವಿನ ಹೊರತು ನಮಗೆ ಉಪಕಾರವನ್ನಾಗಲಿ, ಹಾನಿಯನ್ನಾಗಲಿ ಮಾಡಲು ಸಾಧ್ಯವಿಲ್ಲದವರನ್ನು ನಾವು ಕರೆದು ಪ್ರಾರ್ಥಿಸುವುದೇ? ಅಲ್ಲಾಹು ನಮ್ಮನ್ನು ಸನ್ಮಾರ್ಗಕ್ಕೆ ಸೇರಿಸಿದ ಬಳಿಕ ನಾವು ಹಿಂದಕ್ಕೆ ಮರಳಿಸಲ್ಪಡುವುದೇ? (ತರುವಾಯ) ಸೈತಾನರು ಮರುಳು ಮಾಡಿ ಭೂಮಿಯಲ್ಲಿ ದಿಗ್ಭ್ರಾಂತನಾಗಿ (ಅಲೆದಾಡುವಂತೆ) ಮಾಡಿದ ಒಬ್ಬನಂತೆ (ನಾವಾಗುವುದೇ?). ‘ನಮ್ಮ ಬಳಿಗೆ ಬಾ’ ಎಂದು ಹೇಳುತ್ತಾ ಸನ್ಮಾರ್ಗಕ್ಕೆ ಆಹ್ವಾನಿಸುವ ಕೆಲವು ಗೆಳೆಯರೂ ಅವನಿಗಿರುವರು. ಹೇಳಿರಿ: ‘ಖಂಡಿತವಾಗಿಯೂ ಅಲ್ಲಾಹುವಿನ ಮಾರ್ಗದರ್ಶನವೇ ನೈಜ ಮಾರ್ಗದರ್ಶನ. ಸರ್ವಲೋಕಗಳ ರಬ್‌ಗೆ ನಾವು ಶರಣಾಗತರಾಗಬೇಕೆಂದು ನಮ್ಮೊಂದಿಗೆ ಆಜ್ಞಾಪಿಸಲಾಗಿದೆ.’

(72) ನಮಾಝನ್ನು ಸಂಸ್ಥಾಪಿಸಿರಿ ಮತ್ತು ಅವನನ್ನು ಭಯಪಡಿರಿ ಎಂದೂ (ಆಜ್ಞಾಪಿಸಲಾಗಿದೆ). ನಿಮ್ಮೆಲ್ಲರನ್ನೂ ಒಟ್ಟುಗೂಡಿಸಲಾಗುವುದು ಅವನೆಡೆಗೇ ಆಗಿದೆ.

(73) ಆಕಾಶಗಳನ್ನು ಮತ್ತು ಭೂಮಿಯನ್ನು ಸತ್ಯದೊಂದಿಗೆ ಸೃಷ್ಟಿಸಿದವನು ಅವನಾಗಿರುವನು. ಅವನು ‘ಉಂಟಾಗು’ ಎಂದು ಹೇಳುವ ದಿನ ಅದು ಉಂಟಾಗುವುದು. ಅವನ ಮಾತು ಸತ್ಯವಾಗಿದೆ. ಕಹಳೆಯಲ್ಲಿ ಊದಲಾಗುವ ದಿನದಂದು(185) ಆಧಿಪತ್ಯವು ಅವನಿಗೆ ಮಾತ್ರವಾಗಿದೆ. ಅವನು ಅಗೋಚರ ಮತ್ತು ಗೋಚರವಾಗಿರುವುದನ್ನು ಅರಿಯುವವನಾಗಿರುವನು. ಅವನು ಯುಕ್ತಿಪೂರ್ಣನೂ ಸೂಕ್ಷ್ಮಜ್ಞಾನಿಯೂ ಆಗಿರುವನು.
185. ಅಂತ್ಯದಿನದಂದು ಮತ್ತು ಪುನರುತ್ಥಾನದಂದು ಕಹಳೆಯಲ್ಲಿ ಊದಲಾಗುವುದೆಂದು ಕುರ್‌ಆನ್ ಸ್ಪಷ್ಟಪಡಿಸಿದೆ. ಆದರೆ ಕಹಳೆಯ ಆಕೃತಿಯ ಕುರಿತಾಗಲಿ ಅಥವಾ ಊದಲಾಗುವ ರೀತಿಯ ಕುರಿತಾಗಲಿ ನಮಗೆ ತಿಳಿದಿಲ್ಲ. ಅಗೋಚರ ವಿಷಯಗಳ ಪೈಕಿ ಪ್ರವಾದಿಗಳ ಮೂಲಕ ತಿಳಿಸಿಕೊಡಲಾಗಿರುವುದರ ಹೊರತು ಬೇರೇನನ್ನೂ ತಿಳಿಯಲು ನಮಗೆ ಸಾಧ್ಯವಿಲ್ಲ.

(74) ಇಬ್ರಾಹೀಮ್‍ರು ತಮ್ಮ ತಂದೆ ಆಝರ್‌ನೊಂದಿಗೆ ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ). ‘ತಾವು ಕೆಲವು ವಿಗ್ರಹಗಳನ್ನು ಆರಾಧ್ಯರನ್ನಾಗಿ ಮಾಡಿಕೊಂಡಿರುವಿರಾ? ಖಂಡಿತವಾಗಿಯೂ ತಾವು ಮತ್ತು ತಮ್ಮ ಜನತೆಯು ಸ್ಪಷ್ಟವಾದ ಪಥಭ್ರಷ್ಟತೆಯಲ್ಲಿರುವುದಾಗಿ ನಾನು ಕಾಣುತ್ತಿರುವೆನು.’

(75) ಹೀಗೆ ನಾವು ಇಬ್ರಾಹೀಮ್‍ರಿಗೆ, ಅವರು ದೃಢ ವಿಶ್ವಾಸಿಗಳ ಪೈಕಿ ಸೇರಿದವರಾಗುವ ಸಲುವಾಗಿ ಆಕಾಶಗಳ ಮತ್ತು ಭೂಮಿಯ ಆಧಿಪತ್ಯಗಳನ್ನು ತೋರಿಸಿಕೊಟ್ಟೆವು.

(76) ರಾತ್ರಿಯು ಅವರನ್ನು (ಅಂಧಕಾರದಿಂದ) ಮುಚ್ಚಿದಾಗ ಅವರು ಒಂದು ನಕ್ಷತ್ರವನ್ನು ಕಂಡರು. ಅವರು ಹೇಳಿದರು: ‘ಇದು ನನ್ನ ರಬ್!’ ತರುವಾಯ ಅದು ಅಸ್ತಮಿಸಿದಾಗ ಅವರು ಹೇಳಿದರು: ‘ಅಸ್ತಮಿಸಿ ಹೋಗುವವರನ್ನು ನಾನು ಮೆಚ್ಚಲಾರೆನು.’(186)
186. ಇಬ್ರಾಹೀಮ್(ಅ) ರವರ ಜನತೆಯು ವಿಗ್ರಹಗಳ ಜೊತೆಗೆ ಸೂರ್ಯ, ಚಂದ್ರ ಹಾಗೂ ನಕ್ಷತ್ರಗಳನ್ನು ಆರಾಧಿಸುತ್ತಿದ್ದರು. ಅಲ್ಲಾಹುವಿನ ಸೃಷ್ಟಿಗಳಾದ ಆಕಾಶಕಾಯಗಳಿಗೆ ದಿವ್ಯತ್ವವನ್ನು ಕಲ್ಪಿಸಿ ಆರಾಧಿಸುವುದು ಬಹಳ ದೊಡ್ಡ ಮೌಢ್ಯವಾಗಿದೆಯೆಂದು ಅವರನ್ನು ಮನದಟ್ಟು ಮಾಡಿಸಲು ಇಬ್ರಾಹೀಮ್(ಅ) ರವರು ಇಲ್ಲಿ ಪ್ರಯತ್ನಿಸುತ್ತಿದ್ದಾರೆ.

(77) ತರುವಾಯ ಚಂದ್ರ ಉದಯವಾಗುವುದನ್ನು ಕಂಡಾಗ ಅವರು ಹೇಳಿದರು: ‘ಇದು ನನ್ನ ರಬ್!’ ತರುವಾಯ ಅದೂ ಅಸ್ತಮಿಸಿದಾಗ ಅವರು ಹೇಳಿದರು: ‘ನನ್ನ ರಬ್ ನನಗೆ ಸನ್ಮಾರ್ಗವನ್ನು ತೋರಿಸಿಕೊಡದಿದ್ದರೆ ಖಂಡಿತವಾಗಿಯೂ ನಾನು ಪಥಭ್ರಷ್ಟ ಜನತೆಯೊಂದಿಗೆ ಸೇರಿದವನಾಗುವೆನು.’

(78) ತರುವಾಯ ಸೂರ್ಯ ಉದಯವಾಗುವುದನ್ನು ಕಂಡಾಗ ಅವರು ಹೇಳಿದರು: ‘ಇದು ನನ್ನ ರಬ್. ಇದು ಬಹಳ ದೊಡ್ಡದಾಗಿದೆ.’ ತರುವಾಯ ಅದೂ ಅಸ್ತಮಿಸಿ ದಾಗ ಅವರು ಹೇಳಿದರು: ‘ಓ ನನ್ನ ಜನರೇ! ಖಂಡಿತವಾಗಿಯೂ ನೀವು (ಅಲ್ಲಾಹುವಿನೊಂದಿಗೆ) ಸಹಭಾಗಿಯನ್ನಾಗಿ ಮಾಡುತ್ತಿರುವ ಎಲ್ಲದರಿಂದಲೂ ನಾನು ವಿಮುಕ್ತನಾಗಿರುವೆನು.’

(79) ‘ಖಂಡಿತವಾಗಿಯೂ ನಾನು ಸತ್ಯಮಾರ್ಗದಲ್ಲಿ ದೃಢವಾಗಿ ನಿಂತವನಾಗಿ ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನೆಡೆಗೆ ನನ್ನ ಮುಖವನ್ನು ತಿರುಗಿಸಿರುವೆನು. ನಾನು ಬಹುದೇವವಿಶ್ವಾಸಿಗಳಲ್ಲಿ ಸೇರಿದವನಲ್ಲ.’

(80) ಅವರ ಜನತೆಯು ಅವರೊಂದಿಗೆ ತರ್ಕಿಸಿತು. ಅವರು ಹೇಳಿದರು: ‘ನೀವು ಅಲ್ಲಾಹುವಿನ ವಿಷಯದಲ್ಲಿ ನನ್ನೊಂದಿಗೆ ತರ್ಕಿಸುತ್ತಿರುವಿರಾ? ಖಂಡಿತವಾಗಿಯೂ ಅವನು ನನ್ನನ್ನು ಸನ್ಮಾರ್ಗದಲ್ಲಿ ಸೇರಿಸಿರುವನು. ನೀವು ಅವನೊಂದಿಗೆ ಸಹಭಾಗಿಗಳನ್ನಾಗಿ ಮಾಡುತ್ತಿರುವ ಯಾವುದನ್ನೂ ನಾನು ಭಯಪಡಲಾರೆನು. ನನ್ನ ರಬ್ ಇಚ್ಛಿಸುವುದರ ಹೊರತು (ಏನೂ ಸಂಭವಿಸದು). ನನ್ನ ರಬ್‌‌ನ ಜ್ಞಾನವು ಸರ್ವ ವಿಷಯಗಳನ್ನೂ ಆವರಿಸುವಷ್ಟು ವಿಶಾಲವಾಗಿದೆ. ನೀವೇಕೆ ಚಿಂತಿಸುವುದಿಲ್ಲ?’

(81) ‘ನೀವು (ಅಲ್ಲಾಹುವಿನೊಂದಿಗೆ) ಸಹಭಾಗಿಯನ್ನಾಗಿ ಮಾಡಿರುವವರನ್ನು ನಾನು ಹೇಗೆ ಭಯಪಡಲಿ? ಅಲ್ಲಾಹು ನಿಮ್ಮ ಮೇಲೆ ಯಾವುದೇ ಪುರಾವೆಯನ್ನೂ ಇಳಿಸಿಕೊಡದಂತಹವುಗಳನ್ನು ಅವನೊಂದಿಗೆ ಸಹಭಾಗಿಯನ್ನಾಗಿ ಮಾಡಿರುವುದರ ಬಗ್ಗೆ ನೀವಂತೂ ಭಯಪಡುತ್ತಿಲ್ಲ.(187) ಹೀಗಿರುವಾಗ ಈ ಎರಡು ಬಣಗಳ ಪೈಕಿ ನಿರ್ಭೀತರಾಗಿರಲು ಹೆಚ್ಚು ಅರ್ಹರು ಯಾರು? ನಿಮಗೆ ತಿಳಿದಿದ್ದರೆ (ಹೇಳಿರಿ).’
187. ಅಲ್ಲಾಹುವನ್ನು ಭಯಪಡುವವರು ಸೃಷ್ಟಿಗಳಲ್ಲಿ ಯಾರನ್ನೂ ಭಯಪಡಬೇಕಾದ ಪ್ರಮೇಯವೇ ಬರುವುದಿಲ್ಲ. ಬಹುದೇವವಿಶ್ವಾಸಿಗಳಿಗೆ ಅಸಂಖ್ಯ ದೇವದೇವತೆಗಳನ್ನು ಭಯಪಡಬೇಕಾಗಿ ಬರುತ್ತದೆ. ನಿಜವಾದ ನಿರ್ಭೀತಿಯ ಬಗ್ಗೆ ಅವರಿಗೆ ಚಿಂತಿಸಲೂ ಸಹ ಸಾಧ್ಯವಿಲ್ಲ.

(82) ಸತ್ಯವಿಶ್ವಾಸವಿಟ್ಟವರು ಮತ್ತು ತಮ್ಮ ವಿಶ್ವಾಸದಲ್ಲಿ ಅಕ್ರಮವನ್ನು ಬೆರೆಸದವರು ಯಾರೋ ಅವರಿಗೆ ನಿರ್ಭೀತಿಯಿದೆ. ಸನ್ಮಾರ್ಗ ಪಡೆದವರು ಅವರೇ ಆಗಿರುವರು.

(83) ಅದು ನಾವು ಇಬ್ರಾಹೀಮ್‍ರಿಗೆ ಅವರ ಜನತೆಯ ವಿರುದ್ಧ ನೀಡಿದ ನಮ್ಮ ಪುರಾವೆಯಾಗಿದೆ. ನಾವಿಚ್ಛಿಸುವವರ ಪದವಿಗಳನ್ನು ನಾವು ಏರಿಸುವೆವು. ಖಂಡಿತವಾಗಿಯೂ ತಮ್ಮ ರಬ್ ಯುಕ್ತಿಪೂರ್ಣನೂ ಸರ್ವಜ್ಞನೂ ಆಗಿರುವನು.

(84) ನಾವು ಅವರಿಗೆ ಇಸ್‍ಹಾಕ್ ಮತ್ತು ಯಅ್‌ಕೂಬ್‍ರನ್ನು ದಯಪಾಲಿಸಿದೆವು. ಅವರೆಲ್ಲರನ್ನೂ ನಾವು ಸನ್ಮಾರ್ಗದಲ್ಲಿ ಸೇರಿಸಿದೆವು. ಅವರಿಗಿಂತ ಮುಂಚೆ ನೂಹ್‍ರನ್ನು ನಾವು ಸನ್ಮಾರ್ಗದಲ್ಲಿ ಸೇರಿಸಿದ್ದೆವು. ಅವರ ಸಂತತಿಗಳಲ್ಲಿ ಸೇರಿದ ದಾವೂದ್, ಸುಲೈಮಾನ್, ಅಯ್ಯೂಬ್, ಯೂಸುಫ್, ಮೂಸಾ ಮತ್ತು ಹಾರೂನ್‌ರನ್ನೂ (ನಾವು ಸನ್ಮಾರ್ಗದಲ್ಲಿ ಸೇರಿಸಿದೆವು). ಹೀಗೆ ನಾವು ಸತ್ಕರ್ಮಿಗಳಿಗೆ ಪ್ರತಿಫಲವನ್ನು ನೀಡುವೆವು.

(85) ಝಕರಿಯ್ಯಾ, ಯಹ್ಯಾ, ಈಸಾ ಮತ್ತು ಇಲ್ಯಾಸ್‍ರನ್ನೂ (ನಾವು ಸನ್ಮಾರ್ಗದಲ್ಲಿ ಸೇರಿಸಿದೆವು). ಅವರೆಲ್ಲರೂ ಸಜ್ಜನರ ಪೈಕಿ ಸೇರಿದವರಾಗಿರುವರು.

(86) ಇಸ್ಮಾಈಲ್, ಅಲ್‍ಯಸಅ್, ಯೂನುಸ್ ಮತ್ತು ಲೂತ್‍ರನ್ನೂ (ನಾವು ಸನ್ಮಾರ್ಗದಲ್ಲಿ ಸೇರಿಸಿದೆವು). ಅವರೆಲ್ಲರನ್ನೂ ನಾವು ಸರ್ವಲೋಕದವರ ಪೈಕಿ ಶ್ರೇಷ್ಠರನ್ನಾಗಿ ಮಾಡಿದೆವು.

(87) ಅವರ ಪೂರ್ವಜರಿಂದಲೂ, ಸಂತತಿಗಳಿಂದಲೂ, ಸಹೋದರರಿಂದಲೂ (ಕೆಲವರನ್ನು ನಾವು ಶ್ರೇಷ್ಠರನ್ನಾಗಿ ಮಾಡಿದೆವು). ಅವರನ್ನು ನಾವು ವಿಶೇಷವಾಗಿ ಆರಿಸಿದೆವು ಮತ್ತು ನೇರಮಾರ್ಗದೆಡೆಗೆ ಮುನ್ನಡೆಸಿದೆವು.

(88) ಇದು ಅಲ್ಲಾಹುವಿನ ಮಾರ್ಗದರ್ಶನವಾಗಿದೆ. ತನ್ಮೂಲಕ ಅವನು ತನ್ನ ದಾಸರ ಪೈಕಿ ತಾನಿಚ್ಛಿಸುವವರನ್ನು ಸನ್ಮಾರ್ಗದೆಡೆಗೆ ಮುನ್ನಡೆಸುವನು. ಅವರೇನಾದರೂ (ಅಲ್ಲಾಹುವಿನೊಂದಿಗೆ) ಸಹಭಾಗಿತ್ವ ಮಾಡಿರುತ್ತಿದ್ದರೆ ಅವರು ಮಾಡಿರುವುದೆಲ್ಲವೂ ಅವರ ಪಾಲಿಗೆ ನಿಷ್ಫಲವಾಗಿ ಹೋಗುತ್ತಿದ್ದವು.(188)
188. ಒಬ್ಬ ವ್ಯಕ್ತಿ ಅಲ್ಲಾಹುವಿಗೆ ಮಾತ್ರ ಸಲ್ಲಿಸಬೇಕಾದ ಆರಾಧನೆಯನ್ನು ಅಲ್ಲಾಹೇತರರಿಗೆ ಸಲ್ಲಿಸಿದರೆ ಅವನು ಆ ತನಕ ಮಾಡಿರುವ ಸತ್ಕರ್ಮಗಳೆಲ್ಲವೂ ನಿಷ್ಫಲವಾಗಿ ಹೋಗುವುದು.

(89) ನಾವು ಗ್ರಂಥ, ಜ್ಞಾನ ಮತ್ತು ಪ್ರವಾದಿತ್ವವನ್ನು ನೀಡಿರುವುದು ಅವರಿಗೇ ಆಗಿದೆ. ಇವರೇನಾದರೂ ಅವುಗಳನ್ನು ನಿಷೇಧಿಸುವುದಾದರೆ ಅವುಗಳನ್ನು ನಿಷೇಧಿಸದಂತಹ ಒಂದು ಜನತೆಗೆ ನಾವು ಅದನ್ನು ವಹಿಸಿಕೊಟ್ಟಿರುವೆವು.(189)
189. ಮನುಷ್ಯರೆಲ್ಲರೂ ಸತ್ಯನಿಷೇಧಿಗಳೂ, ಸೃಷ್ಟಿಪೂಜಕರೂ ಆಗಿ ಮಾರ್ಪಡಲಾರರು ಮತ್ತು ಅಂತ್ಯದಿನದವರೆಗೆ ಇಲ್ಲಿ ಏಕದೇವವಿಶ್ವಾಸಿಗಳು ಇರುವರು ಎಂಬುದನ್ನು ಈ ಸೂಕ್ತಿಯಿಂದ ಗ್ರಹಿಸಬಹುದಾಗಿದೆ.

(90) ಅಲ್ಲಾಹು ಸನ್ಮಾರ್ಗದಲ್ಲಿ ಸೇರಿಸಿದ್ದು ಅವರನ್ನೇ ಆಗಿದೆ. ಆದ್ದರಿಂದ ಅವರ ಸನ್ಮಾರ್ಗವನ್ನು ತಾವೂ ಅನುಸರಿಸಿರಿ. (ಓ ಪ್ರವಾದಿಯವರೇ!) ಹೇಳಿರಿ: ‘ಇದಕ್ಕಾಗಿ ನಾನು ನಿಮ್ಮೊಂದಿಗೆ ಯಾವುದೇ ಪ್ರತಿಫಲವನ್ನೂ ಬೇಡುವುದಿಲ್ಲ. ಇದು ಸರ್ವಲೋಕದವರಿಗಿರುವ ಒಂದು ಉಪದೇಶವಲ್ಲದೆ ಇನ್ನೇನೂ ಅಲ್ಲ.’

(91) ಅಲ್ಲಾಹು ಯಾವುದೇ ಮನುಷ್ಯನ ಮೇಲೂ ಏನನ್ನೂ ಅವತೀರ್ಣಗೊಳಿಸಿಲ್ಲ ಎಂದು ಅವರು ಹೇಳಿದ ಸಂದರ್ಭ ಅವರು ಅಲ್ಲಾಹುವನ್ನು ಗಣನೆ ಮಾಡಬೇಕಾದ ರೀತಿಯಲ್ಲಿ ಗಣನೆ ಮಾಡಲಿಲ್ಲ. ಹೇಳಿರಿ: ‘ಹಾಗಾದರೆ ಸತ್ಯಪ್ರಕಾಶವಾಗಿ ಮತ್ತು ಮನುಷ್ಯರಿಗೆ ಮಾರ್ಗದರ್ಶಿಯಾಗಿ ಮೂಸಾ ತಂದಿರುವ ಗ್ರಂಥವನ್ನು ಅವತೀರ್ಣಗೊಳಿಸಿದವನು ಯಾರು? ನೀವದನ್ನು ಕಾಗದದ ತುಂಡುಗಳಾಗಿ ಮಾಡುತ್ತಾ ಅದರ ಕೆಲವು ಭಾಗಗಳನ್ನು ಬಹಿರಂಗಪಡಿಸುತ್ತಿರುವಿರಿ ಮತ್ತು ಹೆಚ್ಚಿನ ಭಾಗಗಳನ್ನು ಮರೆಮಾಚುತ್ತಿರುವಿರಿ. ನೀವಾಗಲಿ ನಿಮ್ಮ ಪೂರ್ವಜರಾಗಲಿ ಅರಿತಿರದಂತಹ ಹಲವನ್ನೂ (ಆ ಗ್ರಂಥದ ಮೂಲಕ) ನಿಮಗೆ ಕಲಿಸಿಕೊಡಲಾಗಿತ್ತು.’ ಹೇಳಿರಿ:(ಇದನ್ನು ಅವತೀರ್ಣಗೊಳಿಸಿದವನು) ಅಲ್ಲಾಹುವಾಗಿರುವನು’. ತರುವಾಯ ತಮ್ಮ ವ್ಯರ್ಥ ಮಾತುಗಳೊಂದಿಗೆ ಆಟವಾಡುತ್ತಿರಲು ಅವರನ್ನು ಬಿಟ್ಟು ಬಿಡಿರಿ.

(92) ಇದು ನಾವು ಅವತೀರ್ಣಗೊಳಿಸಿರುವ ಅನುಗ್ರಹೀತವಾದ ಗ್ರಂಥವಾಗಿದೆ. ಇದು ಇದಕ್ಕಿಂತ ಮುಂಚಿನ ಗ್ರಂಥಗಳನ್ನು ದೃಢೀಕರಿಸುತ್ತದೆ. ಉಮ್ಮುಲ್ ಕುರಾ (ಮಕ್ಕಾ) ಮತ್ತು ಅದರ ಆಸುಪಾಸಿನಲ್ಲಿರುವವರಿಗೆ ತಾವು ಮುನ್ನೆಚ್ಚರಿಕೆ ನೀಡುವ ಸಲುವಾಗಿ (ಇದನ್ನು ಅವತೀರ್ಣಗೊಳಿಸಲಾಗಿದೆ). ಪರಲೋಕದಲ್ಲಿ ವಿಶ್ವಾಸವಿಡುವವರು ಈ ಗ್ರಂಥದಲ್ಲಿ ವಿಶ್ವಾಸವಿಡುವರು. ಅವರು ತಮ್ಮ ನಮಾಝ್‍ಗಳನ್ನು ಸ್ಥಿರವಾಗಿ ಸಂರಕ್ಷಿಸುವವರಾಗಿರುವರು.

(93) ಅಲ್ಲಾಹುವಿನ ಮೇಲೆ ಸುಳ್ಳು ಹೆಣೆದವನಿಗಿಂತಲೂ ಅಥವಾ ತನಗೆ ಯಾವುದೇ ದಿವ್ಯಸಂದೇಶವು ನೀಡಲ್ಪಡದಿದ್ದರೂ ‘ನನಗೆ ದಿವ್ಯಸಂದೇಶ ನೀಡಲ್ಪಟ್ಟಿದೆ’ ಎಂದು ಹೇಳಿದವನಿಗಿಂತಲೂ ಮತ್ತು ‘ಅಲ್ಲಾಹು ಅವತೀರ್ಣಗೊಳಿಸಿದಂತಿರುವುದನ್ನು ನಾನೂ ಅವತೀರ್ಣಗೊಳಿಸುವೆನು’ ಎಂದು ಹೇಳಿದವನಿಗಿಂತಲೂ ದೊಡ್ಡ ಅಕ್ರಮಿ ಯಾರಿರುವನು? ಆ ಅಕ್ರಮಿಗಳು ಮರಣ ಸಂಕಟದಲ್ಲಿರುವ ದೃಶ್ಯವನ್ನು ತಾವು ಕಂಡಿರುತ್ತಿದ್ದರೆ! ನೀವು ನಿಮ್ಮ ಆತ್ಮಗಳನ್ನು ಹೊರತಳ್ಳಿರಿ ಎಂದು ಹೇಳುತ್ತಾ ಮಲಕ್‍ಗಳು ಅವರೆಡೆಗೆ ತಮ್ಮ ಕೈಗಳನ್ನು ಚಾಚಿಕೊಂಡಿರುವರು.(190) ‘ನೀವು ಅಲ್ಲಾಹುವಿನ ಮೇಲೆ ಸತ್ಯಕ್ಕೆ ವಿರುದ್ಧವಾಗಿರುವುದನ್ನು ಹೇಳಿರುವ ಕಾರಣದಿಂದಾಗಿ ಮತ್ತು ಅವನ ದೃಷ್ಟಾಂತಗಳನ್ನು ಅಹಂಕಾರದೊಂದಿಗೆ ನಿಷೇಧಿಸಿರುವ ಕಾರಣದಿಂದಾಗಿ ಇಂದು ನಿಮಗೆ ಹೀನಾಯ ಶಿಕ್ಷೆಯನ್ನು ನೀಡಲಾಗುವುದು’ (ಎಂದು ಮಲಕ್‍ಗಳು ಹೇಳುವರು).
190. ಮರಣ ಎಂಬ ವಾಸ್ತವಿಕತೆಯ ಬಗ್ಗೆ ನಿಖರವಾದ ಯಾವುದೇ ಜ್ಞಾನವು ಯಾರಿಗೂ ಇಲ್ಲ. ಮನುಷ್ಯನನ್ನು ಮೃತಪಡಿಸುವ ಹೊಣೆಯನ್ನು ಅಲ್ಲಾಹು ಮಲಕ್‍ಗೆ ವಹಿಸಿಕೊಟ್ಟಿರುವನೆಂದು ಕುರ್‌ಆನ್ ಹೇಳುತ್ತದೆ. ಮಲಕ್‍ಗಳ ಜಗತ್ತು ನಮ್ಮ ಜಗತ್ತಿಗಿಂತ ಭಿನ್ನವಾಗಿದೆ. ಆದ್ದರಿಂದ ಅವರ ಸ್ಥಿತಿಗತಿಗಳ ಕುರಿತು ಅಲ್ಲಾಹು ತಿಳಿಸಿಕೊಟ್ಟಿರುವುದರ ಹೊರತು ಬೇರೇನನ್ನೂ ತಿಳಿಯಲು ನಮಗೆ ಸಾಧ್ಯವಿಲ್ಲ.

(94) (ಅಲ್ಲಾಹು ಅವರೊಂದಿಗೆ ಹೇಳುವನು): ‘ನಾವು ನಿಮ್ಮನ್ನು ಪ್ರಥಮ ಬಾರಿ ಸೃಷ್ಟಿಸಿದ ರೀತಿಯಲ್ಲೇ ನೀವು ನಮ್ಮ ಬಳಿಗೆ ಏಕಾಂಗಿಗಳಾಗಿ ಬಂದಿರುವಿರಿ. ನಿಮಗೆ ನಾವು ಅಧೀನಪಡಿಸಿಕೊಟ್ಟಿರುವುದನ್ನೆಲ್ಲ ನಿಮ್ಮ ಬೆನ್ನ ಹಿಂದೆ ಬಿಟ್ಟು ಬಂದಿರುವಿರಿ. ನೀವು (ಅಲ್ಲಾಹುವಿನ) ಸಹಭಾಗಿಗಳೆಂದು ವಾದಿಸುತ್ತಿದ್ದ ಆ ನಿಮ್ಮ ಶಿಫಾರಸುಗಾರರನ್ನು ನಾವು ನಿಮ್ಮೊಂದಿಗೆ ಕಾಣುತ್ತಿಲ್ಲ. ನೀವು ಪರಸ್ಪರ ಹೊಂದಿದ್ದ ಸಂಬಂಧಗಳು ಮುರಿದು ಬಿದ್ದಿವೆ ಮತ್ತು ನೀವು ವಾದಿಸುತ್ತಿದ್ದ ವಾದಗಳೆಲ್ಲವೂ ನಿಮ್ಮನ್ನು ಬಿಟ್ಟು ಹೋಗಿವೆ.’(191)
191. ಸಜ್ಜನರೊಂದಿಗೆ ಪ್ರಾರ್ಥಿಸುವವರ ಪ್ರಮುಖ ನಿರೀಕ್ಷೆಯು ಅವರು ಅಲ್ಲಾಹುವಿನ ಬಳಿ ತಮಗಾಗಿ ಶಿಫಾರಸು ಮಾಡುವರು ಎಂಬುದಾಗಿದೆ. ಆದರೆ ಅಲ್ಲಾಹು ಆದೇಶಿಸದ ಮತ್ತು ಪ್ರವಾದಿಗಳು ಮಾದರಿಯಾಗಿ ತೋರಿಸದ ಈ ‘ಶಿಫಾರಸು ಸಂಬಂಧ’ವು ಪರಲೋಕದಲ್ಲಿ ಮುರಿದು ಬೀಳುವುದೆಂದು ಅಲ್ಲಾಹು ನಮಗೆ ಜ್ಞಾಪಿಸುತ್ತಿದ್ದಾನೆ.

(95) ಖಂಡಿತವಾಗಿಯೂ ಧಾನ್ಯವನ್ನು ಮತ್ತು ಖರ್ಜೂರದ ಬೀಜವನ್ನು ಸೀಳುವವನು ಅಲ್ಲಾಹುವಾಗಿರುವನು.(192) ಅವನು ನಿರ್ಜೀವದಿಂದ ಜೀವವನ್ನು ಹೊರತರುವನು ಮತ್ತು ಜೀವದಿಂದ ನಿರ್ಜೀವವನ್ನು ಹೊರತರುವನು. ಹಾಗಿರುವವನೇ ಅಲ್ಲಾಹು. ಹೀಗಿದ್ದೂ ನಿಮ್ಮನ್ನು ದಾರಿತಪ್ಪಿಸಲಾಗುತ್ತಿರುವುದು ಹೇಗೆ?
192. ಧಾನ್ಯ ಮತ್ತು ಬೀಜಗಳನ್ನು ಸೀಳಿ ಅವುಗಳ ಮೊಳಕೆಯನ್ನು ಹೊರತರುವವನು ಅಲ್ಲಾಹುವಾಗಿರುವನು.

(96) ಅವನು ಪ್ರಭಾತವನ್ನು ಸೀಳುವವನಾಗಿರುವನು. ರಾತ್ರಿಯನ್ನು ಅವನು ಶಾಂತವಾದ ವಿಶ್ರಾಂತಿ ವೇಳೆಯನ್ನಾಗಿ ಮಾಡಿರುವನು. ಸೂರ್ಯ ಮತ್ತು ಚಂದ್ರರನ್ನು ಎಣಿಕೆಗೆ ಆಧಾರವನ್ನಾಗಿ (ಮಾಡಿರುವನು).(193) ಇದು ಪ್ರತಾಪಶಾಲಿಯೂ ಸರ್ವಜ್ಞನೂ ಆಗಿರುವ ಅಲ್ಲಾಹುವಿನ ಕ್ರಮೀಕರಣವಾಗಿದೆ.
193. ಸೂರ್ಯನನ್ನು ಅವಲಂಬಿಸಿ ನಾವು ದಿನಗಳನ್ನು ಎಣಿಸುತ್ತೇವೆ ಮತ್ತು ಚಂದ್ರನನ್ನು ಅವಲಂಬಿಸಿ ತಿಂಗಳುಗಳನ್ನು ಎಣಿಸುತ್ತೇವೆ. ಸೌರಮಾನ ವರ್ಷ ಮತ್ತು ಚಾಂದ್ರಮಾನ ವರ್ಷ ಈ ವಿಧದಲ್ಲಿರುವ ಕಾಲಗಣನೆಯ ಭಾಗವಾಗಿದೆ.

(97) ನಕ್ಷತ್ರಗಳನ್ನು, ಅವುಗಳ ಮೂಲಕ ನೀವು ನೆಲ ಮತ್ತು ಸಮುದ್ರದ ಅಂಧಕಾರಗಳಲ್ಲಿ ದಾರಿ ಕಾಣುವ ಸಲುವಾಗಿ ಸಜ್ಜೀಕರಿಸಿದವನು ಅವನಾಗಿರುವನು. ಅರಿತುಕೊಳ್ಳುವ ಜನರಿಗಾಗಿ ನಾವು ನಮ್ಮ ದೃಷ್ಟಾಂತಗಳನ್ನು ವಿವರಿಸಿಕೊಟ್ಟಿರುವೆವು.

(98) ನಿಮ್ಮನ್ನು ಒಂದೇ ಆತ್ಮದಿಂದ ಸೃಷ್ಟಿಸಿದವನು ಅವನಾಗಿರುವನು. ತರುವಾಯ (ನಿಮಗೆ) ಒಂದು ವಾಸ್ತವ್ಯವೂ, ಸಂಗ್ರಹಣ ಸ್ಥಳವೂ ಇರುವುದು.(194) ಗ್ರಹಿಸುವ ಜನರಿಗಾಗಿ ನಾವು ದೃಷ್ಟಾಂತಗಳನ್ನು ವಿವರಿಸಿಕೊಟ್ಟಿರುವೆವು.
194. ‘ಮುಸ್ತಕರ್‍ರ್’ (ವಾಸ್ತವ್ಯ) ಎಂಬುದರ ತಾತ್ಪರ್ಯ ಪುರುಷ ಬೀಜ ರೂಪುಗೊಳ್ಳುವ ಸ್ಥಳವಾಗಿದೆ ಮತ್ತು ‘ಮುಸ್ತೌದಅ್’ (ಸಂಗ್ರಹಣ ಸ್ಥಳ) ಎಂಬುದರ ತಾತ್ಪರ್ಯ ಗರ್ಭಾಶಯವಾಗಿದೆ ಎಂದು ಹಲವು ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿರುವರು. ಇವುಗಳಿಗೆ ಬೇರೆ ವ್ಯಾಖ್ಯಾನಗಳೂ ಇವೆ.

(99) ಆಕಾಶದಿಂದ ನೀರನ್ನು ಸುರಿಸಿದವನು ಅವನಾಗಿರುವನು. ತರುವಾಯ ಅದರ ಮೂಲಕ ನಾವು ಸರ್ವ ವಸ್ತುಗಳ ಮೊಳಕೆಗಳನ್ನು ಹೊರತಂದೆವು. ಬಳಿಕ ಅದರಿಂದ ಹಸಿರಾದ ಸಸ್ಯಗಳನ್ನು ಬೆಳೆಸಿದೆವು. ಆ ಸಸ್ಯಗಳಿಂದ ನಾವು ತುಂಬಿತುಳುಕುವ ಧಾನ್ಯವನ್ನು ಹೊರತರುವೆವು. ಖರ್ಜೂರದ ಮರದಿಂದ ಅಥವಾ ಅದರ ಮೊಗ್ಗುಗಳಿಂದ ತೂಗಿ ನಿಲ್ಲುವ ಗೊನೆಗಳು ಹೊರಬರುತ್ತವೆ. (ಹಾಗೆಯೇ) ದ್ರಾಕ್ಷಿ ತೋಟಗಳನ್ನು ಮತ್ತು ಪರಸ್ಪರ ಸಾದೃಶ್ಯವಿದ್ದರೂ ಸಮಾನವಾಗಿರದಂತಹ ಆಲಿವ್ ಮತ್ತು ದಾಳಿಂಬೆಯನ್ನು (ನಾವು ಉತ್ಪಾದಿಸಿದೆವು). ಅವುಗಳು ಕಾಯಿಬಿಡುವಾಗ ಅವುಗಳ ಹಣ್ಣುಗಳೆಡೆಗೆ ಮತ್ತು ಪಕ್ವವಾಗುವುದರೆಡೆಗೆ ನೋಡಿರಿ. ವಿಶ್ವಾಸವಿಡುವ ಜನರಿಗೆ ಖಂಡಿತವಾಗಿಯೂ ಇವುಗಳಲ್ಲಿ ದೃಷ್ಟಾಂತಗಳಿವೆ.(195)
195. ಹವಾಮಾನ ನಿಯಮಗಳ ಕುರಿತು ಮತ್ತು ವಿಸ್ಮಯಕರವಾದ ಜೈವ-ಸಸ್ಯ ವ್ಯವಸ್ಥೆಗಳ ಕುರಿತು ಚಿಂತಿಸುವ ಯಾರಿಗೂ ಇದೊಂದೂ ಆಕಸ್ಮಿಕವಾಗಿ ಉದ್ಭವಿಸಿದ್ದಲ್ಲವೆಂದು ಮನದಟ್ಟಾಗುವುದು. ಸರ್ವಜ್ಞನೂ ಸರ್ವಶಕ್ತನೂ ಆದ ಸೃಷ್ಟಿಕರ್ತನ ಅಸ್ತಿತ್ವಕ್ಕೆ ಇವೆಲ್ಲವೂ ಸಾಕ್ಷಿಗಳಾಗಿವೆ.

(100) ಅವರು ಜಿನ್ನ್‌ಗಳನ್ನು ಅಲ್ಲಾಹುವಿಗೆ ಸಹಭಾಗಿಗಳನ್ನಾಗಿ ಮಾಡಿಕೊಂಡಿರುವರು. ಆದರೆ ಅವರನ್ನು ಸೃಷ್ಟಿಸಿದವನು ಅವನಾಗಿರುವನು. ಅವನಿಗೆ ಪುತ್ರರು ಮತ್ತು ಪುತ್ರಿಯರಿರುವರೆಂದು ಯಾವುದೇ ಅರಿವೂ ಇಲ್ಲದೆ ಅವರು ಆರೋಪಿಸಿರುವರು. ಅವರು ವರ್ಣಿಸುತ್ತಿರುವುದರಿಂದೆಲ್ಲ ಅಲ್ಲಾಹು ಪರಮಪಾವನನೂ ಉನ್ನತನೂ ಆಗಿರುವನು.

(101) ಅವನು ಆಕಾಶಗಳನ್ನು ಮತ್ತು ಭೂಮಿಯನ್ನು ಯಾವುದೇ ಪೂರ್ವ ಮಾದರಿಯಿಲ್ಲದೆ ನಿರ್ಮಿಸಿದವನಾಗಿರುವನು. ಅವನಿಗೆ ಸಂಗಾತಿಯೇ ಇಲ್ಲದಿರುವಾಗ ಒಂದು ಸಂತತಿಯಿರುವುದಾದರೂ ಹೇಗೆ? ಅವನು ಸಕಲ ವಸ್ತುಗಳನ್ನೂ ಸೃಷ್ಟಿಸಿರುವನು. ಅವನು ಸರ್ವ ವಿಷಯಗಳ ಬಗ್ಗೆಯೂ ಅರಿವುಳ್ಳವನಾಗಿರುವನು.

(102) ಹಾಗಿರುವವನೇ ನಿಮ್ಮ ರಬ್ಬಾದ ಅಲ್ಲಾಹು. ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನು ಸರ್ವ ವಸ್ತುಗಳ ಸೃಷ್ಟಿಕರ್ತನಾಗಿರುವನು. ಆದ್ದರಿಂದ ಅವನನ್ನು ಆರಾಧಿಸಿರಿ. ಅವನು ಸಕಲ ವಿಷಯಗಳ ಮೇಲೂ ಕಾರ್ಯನಿರ್ವಾಹಕನಾಗಿರುವನು.

(103) ಕಣ್ಣುಗಳು ಅವನನ್ನು ಗ್ರಹಿಸಲಾರವು. ಅವನು ಕಣ್ಣುಗಳನ್ನು ಗ್ರಹಿಸುವನು.(196) ಅವನು ಸೂಕ್ಷ್ಮಗ್ರಾಹಿಯೂ ಸೂಕ್ಷ್ಮಜ್ಞಾನಿಯೂ ಆಗಿರುವನು.
196. ಈ ಸೂಕ್ತಿಯಲ್ಲಿ ತಿಳಿಸಲಾಗಿರುವುದು ಐಹಿಕ ಜೀವನದ ಬಗ್ಗೆಯಾಗಿದೆ. ಆದರೆ ಪರಲೋಕದಲ್ಲಿ ಸತ್ಯವಿಶ್ವಾಸಿಗಳು ಅಲ್ಲಾಹುವನ್ನು ಕಾಣುವರೆಂದು ಸಹೀಹಾದ ಹದೀಸ್‍ಗಳಲ್ಲಿ ಬಂದಿವೆ. ಮರಣಾನಂತರ ಜೀವನದಲ್ಲಿ ದೃಷ್ಟಿಯ ಪರದೆಯನ್ನು ತೆಗೆದು ಹಾಕಲಾಗುವುದು ಮತ್ತು ಭೌತಿಕ ಜೀವನದಲ್ಲಿ ದೃಷ್ಟಿಯ ಮೂಲಕ ಕಾಣಲು ಸಾಧ್ಯವಾಗದ ಹಲವನ್ನೂ ಕಾಣಲು ಸಾಧ್ಯವಾಗುವುದು ಎಂದು ಕುರ್‌ಆನ್ ನಮಗೆ ಸ್ಪಷ್ಟಪಡಿಸಿಕೊಟ್ಟಿದೆ. (ನೋಡಿ: 50:22)

(104) ನಿಮ್ಮ ರಬ್‌‌ನ ವತಿಯಿಂದ ಕಣ್ತೆರೆಸುವಂತಹ ಪುರಾವೆಗಳು ನಿಮ್ಮ ಬಳಿಗೆ ಬಂದಿವೆ. ಆದ್ದರಿಂದ ಯಾರು ಅದನ್ನು ಕಣ್ತೆರೆದು ನೋಡುವನೋ ಅದರ ಒಳಿತು ಅವನಿಗೇ ಆಗಿದೆ. ಯಾರು ಕುರುಡನಾಗುವನೋ ಅದರ ದೋಷವು ಅವನಿಗೇ ಆಗಿದೆ. ನಾನು ನಿಮ್ಮ ಮೇಲೆ ಒಬ್ಬ ಕಾವಲುಗಾರನೇನೂ ಅಲ್ಲ.

(105) ಹೀಗೆ ನಾವು ನಾನಾ ವಿಧಗಳಲ್ಲಿ ದೃಷ್ಟಾಂತಗಳನ್ನು ವಿವರಿಸಿಕೊಡುತ್ತಿರುವೆವು. ಇದು ತಾವು (ಯಾರಿಂದಲೋ) ಕಲಿತುಬಂದದ್ದೆಂದು(197) ಸತ್ಯನಿಷೇಧಿಗಳು ಹೇಳುವ ಸಲುವಾಗಿಯೂ ಅರ್ಥಮಾಡಿಕೊಳ್ಳುವ ಜನರಿಗೆ ನಾವು ಅದನ್ನು ವಿವರಿಸಿಕೊಡುವ ಸಲುವಾಗಿಯೂ ಆಗಿದೆ.
197. ಮುಹಮ್ಮದ್(ಸ) ರವರು ಬೋಧಿಸುತ್ತಿರುವುದು ಯಾವುದೋ ಯಹೂದ ವಿದ್ವಾಂಸನಿಂದ ಅಥವಾ ಕ್ರೈಸ್ತ ಪುರೋಹಿತನಿಂದ ಕಲಿತು ಬಂದ ವಿಷಯಗಳನ್ನಾಗಿವೆಯೆಂದು ಅವರ ವಿರೋಧಿಗಳಲ್ಲಿ ಕೆಲವರು ವಾದಿಸಿದ್ದರು.

(106) ತಮಗೆ ತಮ್ಮ ರಬ್‌‌ನ ವತಿಯಿಂದ ದಿವ್ಯಸಂದೇಶವಾಗಿ ನೀಡಲಾಗಿರುವುದನ್ನು ಅನುಸರಿಸಿರಿ. ಅವನ ಹೊರತು ಅನ್ಯ ಆರಾಧ್ಯರಿಲ್ಲ. ಬಹುದೇವಾರಾಧಕರಿಂದ ತಾವು ವಿಮುಖರಾಗಿರಿ.

(107) ಅಲ್ಲಾಹು ಇಚ್ಛಿಸುತ್ತಿದ್ದರೆ ಅವರು (ಅವನೊಂದಿಗೆ) ಸಹಭಾಗಿತ್ವ ಮಾಡುತ್ತಿರಲಿಲ್ಲ. ತಮ್ಮನ್ನು ನಾವು ಅವರ ಮೇಲೆ ಒಬ್ಬ ಕಾವಲುಗಾರನನ್ನಾಗಿ ಮಾಡಿಲ್ಲ. ತಾವು ಅವರ ಮೇಲೆ ಹೊಣೆ ವಹಿಸಲ್ಪಟ್ಟವರೂ ಅಲ್ಲ.

(108) ಅಲ್ಲಾಹುವಿನ ಹೊರತು ಅವರು ಕರೆದು ಪ್ರಾರ್ಥಿಸುತ್ತಿರುವವರನ್ನು ನೀವು ದೂಷಿಸದಿರಿ. ಅವರು ಅರಿವಿಲ್ಲದೆ ಅತಿಕ್ರಮವಾಗಿ ಅಲ್ಲಾಹುವನ್ನು ದೂಷಿಸಲು ಅದು ಕಾರಣವಾಗಬಹುದು. ಹೀಗೆ ಪ್ರತಿಯೊಂದು ಸಮುದಾಯಕ್ಕೂ ಅವರ ಕರ್ಮಗಳನ್ನು ನಾವು ಆಕರ್ಷಣೀಯಗೊಳಿಸಿ ತೋರಿಸಿರುವೆವು. ತರುವಾಯ ಅವರ ಮರಳುವಿಕೆಯು ಅವರ ರಬ್‌‌ನೆಡೆಗಾಗಿದೆ. ಆಗ ಅವರು ಮಾಡುತ್ತಿದ್ದವುಗಳ ಬಗ್ಗೆ ಅವನು ಅವರಿಗೆ ತಿಳಿಸಿಕೊಡುವನು.

(109) ಒಂದು ದೃಷ್ಟಾಂತವು ತಮ್ಮೆಡೆಗೆ ಬರುವುದಾದರೆ ತಾವು ಅದರಲ್ಲಿ ವಿಶ್ವಾಸವಿಡುವೆವು ಎಂದು ಅಲ್ಲಾಹುವಿನ ಮೇಲೆ ತಮಗೆ ಸಾಧ್ಯವಾಗುವಷ್ಟು ಬಲವಾದ ಆಣೆಯಿಟ್ಟು ಅವರು ಹೇಳುವರು. ಹೇಳಿರಿ: ‘ದೃಷ್ಟಾಂತಗಳಿರುವುದು ಅಲ್ಲಾಹುವಿನ ಅಧೀನದಲ್ಲಿ ಮಾತ್ರವಾಗಿದೆ.’ ನಿಮಗೇನು ಗೊತ್ತು? ಅದು ಬಂದರೂ ಅವರು ವಿಶ್ವಾಸವಿಡಲಾರರು.

(110) ಇದರಲ್ಲಿ (ಈ ಕುರ್‌ಆನ್‍ನಲ್ಲಿ) ಮೊದಲ ಬಾರಿ ಅವರು ವಿಶ್ವಾಸವಿಡದಂತೆಯೇ (ಈಗಲೂ) ನಾವು ಅವರ ಹೃದಯಗಳನ್ನು ಮತ್ತು ಕಣ್ಣುಗಳನ್ನು ತಿರುಗಿಸಿ ಬಿಡುವೆವು. ಅವರು ತಮ್ಮ ಧಿಕ್ಕಾರದೊಂದಿಗೆ ಅಲೆದಾಡುವಂತೆ ನಾವು ಅವರನ್ನು ಬಿಟ್ಟು ಬಿಡುವೆವು.

(111) ನಾವು ಅವರೆಡೆಗೆ ಮಲಕ್‍ಗಳನ್ನು ಇಳಿಸಿದರೂ, ಮೃತಪಟ್ಟವರು ಅವರೊಂದಿಗೆ ಮಾತನಾಡಿದರೂ, ಸರ್ವ ವಸ್ತುಗಳನ್ನೂ ನಾವು ಅವರ ಮುಂದೆ ಒಟ್ಟುಗೂಡಿಸಿದರೂ, ಅಲ್ಲಾಹು ಇಚ್ಛಿಸಿದ ಹೊರತು ಅವರು ವಿಶ್ವಾಸವಿಡಲಾರರು. ಆದರೆ ಅವರ ಪೈಕಿ ಹೆಚ್ಚಿನವರೂ ಅಜ್ಞಾನಿಗಳಾಗಿರುವರು.

(112) ಹೀಗೆ ನಾವು ಪ್ರತಿಯೊಬ್ಬ ಸಂದೇಶವಾಹಕರಿಗೂ ಮನುಷ್ಯರಲ್ಲಿ ಮತ್ತು ಜಿನ್ನ್‌ಗಳಲ್ಲಿ ಸೇರಿದ ಸೈತಾನರನ್ನು ಶತ್ರುಗಳನ್ನಾಗಿ ಮಾಡಿರುವೆವು. ವಂಚನೆಯಿಂದ ಕೂಡಿದ ಆಕರ್ಷಕ ಮಾತುಗಳನ್ನು ಅವರು ಪರಸ್ಪರ ದುರ್ಬೋಧನೆ ಮಾಡುತ್ತಿರುವರು.(198) ತಮ್ಮ ರಬ್ ಇಚ್ಛಿಸುತ್ತಿದ್ದರೆ ಅವರದನ್ನು ಮಾಡುತ್ತಿರಲಿಲ್ಲ. ಆದ್ದರಿಂದ ಅವರು ಹೆಣೆಯುತ್ತಿರುವ ವಿಷಯಗಳೊಂದಿಗೆ ಅವರನ್ನು ಬಿಟ್ಟು ಬಿಡಿರಿ.
198. ಒಳಿತೆನೆಡೆಗೆ ಆಹ್ವಾನಿಸುವವರನ್ನು ಮತ್ತು ಕೆಡುಕಿನಿಂದ ತಡೆಯುವವರನ್ನು ಹೆಚ್ಚಿನವರೂ ದ್ವೇಷಿಸುತ್ತಾರೆ. ವಾಸ್ತವಿಕವಾಗಿ ಅವರು ಹಿತಾಕಾಂಕ್ಷಿಗಳಾದ ಮಿತ್ರರಾಗಿದ್ದಾರೆ. ಆದರೆ ಜನರನ್ನು ನೀಚಕೃತ್ಯಗಳಲ್ಲಿ ತಲ್ಲೀನರಾಗುವಂತೆ ಮಾಡಿ ಅವರನ್ನು ದಾರಿಗೆಡಿಸಿ, ಶೋಷಣೆ ಮಾಡಲು ಯತ್ನಿಸುವವರು ಆಕರ್ಷಕ ಮಾತುಗಳಿಂದ ದುರ್ಬೋಧನೆ ಮಾಡುತ್ತಾರೆ. ಹೆಚ್ಚಿನವರೂ ಅವರನ್ನು ಪ್ರೀತಿಸುತ್ತಲೂ ಅವರಿಗೆ ನೆರವಾಗುತ್ತಲೂ ಇರುತ್ತಾರೆ. ವಾಸ್ತವಿಕವಾಗಿ ಅವರು ನಿಜವಾದ ಶತ್ರುಗಳಾಗಿದ್ದಾರೆ.

(113) ಅದು ಪರಲೋಕದಲ್ಲಿ ವಿಶ್ವಾಸವಿಡದವರ ಹೃದಯಗಳು ಅದರೆಡೆಗೆ (ಆಕರ್ಷಕ ಮಾತುಗಳೆಡೆಗೆ) ವಾಲುವುದಕ್ಕಾಗಿ, ಅವರು ಅದರಲ್ಲಿ ಸಂತೃಪ್ತರಾಗುವುದಕ್ಕಾಗಿ ಮತ್ತು ಅವರು ಮಾಡುತ್ತಿರುವುದೆಲ್ಲವನ್ನೂ ಮಾಡಿಕೊಂಡಿರುವುದಕ್ಕಾಗಿದೆ.(199)
199. ಪ್ರತಿಯೊಬ್ಬನಿಗೂ ಅವನು ಆರಿಸುವ ಕರ್ಮ ಮಾರ್ಗದ ಮೂಲಕ ಮುನ್ನಡೆಯಲು ಅಲ್ಲಾಹು ಅನುವು ಮಾಡಿಕೊಡುವನು. ಅವನು ಯಾರನ್ನೂ ಬಲವಂತವಾಗಿ ಸನ್ಮಾರ್ಗದಲ್ಲಿ ಹಿಡಿದಿಡುವುದಿಲ್ಲ. ಜನರ ಮೇಲೆ ಬಲಪ್ರಯೋಗ ಮಾಡಲು ಪ್ರವಾದಿ(ಸ) ರವರಿಗೂ ಅನುಮತಿಯಿಲ್ಲ.

(114) (ಹೇಳಿರಿ): ‘ವಿಶದವಾಗಿ ವಿವರಿಸಲಾಗಿರುವ ಗ್ರಂಥವನ್ನು ನಿಮಗೆ ಅವತೀರ್ಣಗೊಳಿಸಿದವನು ಅಲ್ಲಾಹುವಾಗಿರುವಾಗ ನಾನು ಅಲ್ಲಾಹೇತರರನ್ನು ತೀರ್ಪುಗಾರರನ್ನಾಗಿ ಅರಸುವುದೇ?’ ಇದು ತಮ್ಮ ರಬ್‌‌ನ ವತಿಯಿಂದ ಸತ್ಯದೊಂದಿಗೆ ಅವತೀರ್ಣಗೊಂಡಿದ್ದಾಗಿದೆಯೆಂದು ನಾವು ಈ ಮುಂಚೆ ಯಾರಿಗೆ ಗ್ರಂಥ ನೀಡಿರುವೆವೋ ಅವರು ಅರಿತಿರುವರು. ಆದ್ದರಿಂದ ತಾವು ಯಾವತ್ತೂ ಸಂದೇಹಪಡುವವರಲ್ಲಿ ಸೇರದಿರಿ.

(115) ಸತ್ಯದಲ್ಲಿಯೂ, ನ್ಯಾಯದಲ್ಲಿಯೂ ತಮ್ಮ ರಬ್‌‌ನ ವಚನವು ಪರಿಪೂರ್ಣವಾಗಿದೆ. ಅವನ ವಚನಗಳಿಗೆ ಬದಲಾವಣೆ ತರುವವರಾರೂ ಇಲ್ಲ. ಅವನು ಎಲ್ಲವನ್ನು ಆಲಿಸುವವನೂ ಅರಿಯುವವನೂ ಆಗಿರುವನು.

(116) ತಾವು ಭೂಮಿಯಲ್ಲಿರುವವರ ಪೈಕಿ ಹೆಚ್ಚಿನವರನ್ನು ಅನುಸರಿಸುವುದಾದರೆ ಅವರು ತಮ್ಮನ್ನು ಅಲ್ಲಾಹುವಿನ ಮಾರ್ಗದಿಂದ ಭ್ರಷ್ಟಗೊಳಿಸುವರು. ಅವರು ಕೇವಲ ಊಹೆಯನ್ನಲ್ಲದೆ ಅನುಸರಿಸುವುದಿಲ್ಲ. ಅವರು ಕೇವಲ ಸುಳ್ಳನ್ನಲ್ಲದೆ ನುಡಿಯುವುದೂ ಇಲ್ಲ.

(117) ತನ್ನ ಮಾರ್ಗದಿಂದ ಭ್ರಷ್ಟನಾಗುವವನು ಯಾರೆಂದು ಖಂಡಿತವಾಗಿಯೂ ತಮ್ಮ ರಬ್ ಅರಿತಿರುವನು. ಸನ್ಮಾರ್ಗ ಪಡೆದವರ ಬಗ್ಗೆಯೂ ಅವನು ಚೆನ್ನಾಗಿ ಅರಿತಿರುವನು.

(118) ಆದ್ದರಿಂದ ಅಲ್ಲಾಹುವಿನ ನಾಮವನ್ನು ಉಚ್ಛರಿಸಿ (ಕೊಯ್ಯ)ಲಾಗಿರುವುದರಿಂದ ತಿನ್ನಿರಿ. ನೀವು ಅವನ ಸೂಕ್ತಿಗಳಲ್ಲಿ ವಿಶ್ವಾಸವಿಡುವವರಾಗಿದ್ದರೆ!

(119) ಅಲ್ಲಾಹುವಿನ ನಾಮವನ್ನು ಉಚ್ಛರಿಸಿ (ಕೊಯ್ಯ) ಲಾಗಿರುವುದರಿಂದ ತಿನ್ನದಿರಲು ನಿಮಗೇನಾಗಿದೆ? ನಿಮ್ಮ ಮೇಲೆ ನಿಷಿದ್ಧಗೊಳಿಸಿರುವುದನ್ನು ಅವನು ಈಗಾಗಲೇ ನಿಮಗೆ ವಿವರಿಸಿಕೊಟ್ಟಿರುವನು. ಆದರೆ ನೀವು (ತಿನ್ನಲು) ನಿರ್ಬಂಧಿತರಾಗುವುದರ ಹೊರತು. ಹೆಚ್ಚಿನವರೂ ಯಾವುದೇ ಅರಿವಿಲ್ಲದೆ ತಮ್ಮ ದೇಹೇಚ್ಛೆಗಳನ್ನು ಅನುಸರಿಸುತ್ತಾ (ಜನರನ್ನು) ದಾರಿತಪ್ಪಿಸುತ್ತಿರುವರು. ಖಂಡಿತವಾಗಿಯೂ ತಮ್ಮ ರಬ್ ಅತಿಕ್ರಮಿಗಳ ಬಗ್ಗೆ ಚೆನ್ನಾಗಿ ಅರಿತಿರುವನು.

(120) ಪಾಪಗಳ ಪೈಕಿ ಪ್ರತ್ಯಕ್ಷವಾಗಿರುವುದನ್ನೂ ಪರೋಕ್ಷವಾಗಿರುವುದನ್ನೂ ನೀವು ವರ್ಜಿಸಿರಿ. ಪಾಪವನ್ನು ಗಳಿಸುವವರು ಯಾರೋ ಅವರು ಮಾಡಿಕೊಂಡಿರುವುದಕ್ಕೆ ತಕ್ಕ ಪ್ರತಿಫಲವನ್ನು ಖಂಡಿತವಾಗಿಯೂ ಅವರಿಗೆ ನೀಡಲಾಗುವುದು.

(121) ಅಲ್ಲಾಹುವಿನ ನಾಮವನ್ನು ಉಚ್ಛರಿಸಲ್ಪಡದವುಗಳಿಂದ ನೀವು ತಿನ್ನದಿರಿ.(200) ಖಂಡಿತವಾಗಿಯೂ ಅದು ಧರ್ಮಬಾಹಿರವಾಗಿದೆ. ನಿಮ್ಮೊಂದಿಗೆ ತರ್ಕಿಸುವುದಕ್ಕಾಗಿ ಖಂಡಿತವಾಗಿಯೂ ಸೈತಾನರು ಅವರ ಮಿತ್ರರಿಗೆ ದುರ್ಬೋಧನೆ ಮಾಡುತ್ತಿರುವರು. ನೀವೇನಾದರೂ ಅವರನ್ನು ಅನುಸರಿಸಿದರೆ ಖಂಡಿತವಾಗಿಯೂ ನೀವು (ಅಲ್ಲಾಹುವಿನೊಂದಿಗೆ) ಸಹಭಾಗಿತ್ವ ಮಾಡಿದವರಾಗುವಿರಿ.(201)
200. ಅಲ್ಲಾಹೇತರರಿಗಿರುವ ಹರಕೆ, ಬಲಿ ಇತ್ಯಾದಿಗಳಿಗೋಸ್ಕರ ಕೊಯ್ದ ಪ್ರಾಣಿಯ ಮಾಂಸವನ್ನು ತಿನ್ನುವುದು ನಿಷಿದ್ಧವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಓರ್ವ ಮುಸ್ಲಿಮನು ಆಹಾರಕ್ಕಾಗಿ ಪ್ರಾಣಿಯನ್ನು ಕೊಯ್ಯುವ ಸಂದರ್ಭದಲ್ಲಿ ಅಲ್ಲಾಹುವಿನ ನಾಮವನ್ನು ಉಚ್ಛರಿಸಲು (ಬಿಸ್ಮಿಲ್ಲಾಹ್.... ಎನ್ನಲು) ಮರೆತರೆ ಆ ಮಾಂಸವು ನಿಷಿದ್ಧವಾಗದೆಂದು ಹೆಚ್ಚಿನ ವಿದ್ವಾಂಸರು ಅಭಿಪ್ರಾಯಪಟ್ಟಿರುವರು. ಆದರೆ ಉದ್ದೇಶಪೂರ್ವಕವಾಗಿ ಬಿಸ್ಮಿ ಹೇಳದಿದ್ದರೆ ಆ ಮಾಂಸವು ನಿಷಿದ್ಧವೆಂಬುದು ಪ್ರಬಲವಾದ ಅಭಿಪ್ರಾಯವಾಗಿದೆ. 201. ಸಜ್ಜನರ ಹೆಸರಲ್ಲಿ ಹರಕೆ ಹೊರುವುದು ಬಹುದೇವಾರಾಧನೆಯಾಗಿದೆ. ಆದರೆ ಅದು ಅಲ್ಲಾಹುವಿನ ಧರ್ಮದ ಭಾಗವಾಗಿದೆ ಎಂದು ಸ್ಥಾಪಿಸಲು ದುರ್ಬೋಧನೆಗೈಯುವ ಧಾರಾಳ ಜನರು ಎಲ್ಲಾ ಕಾಲಗಳಲ್ಲಿಯೂ ಇದ್ದರು. ಅವರನ್ನು ಅನುಸರಿಸಬಾರದೆಂದು ಅಲ್ಲಾಹು ಇಲ್ಲಿ ಎಚ್ಚರಿಕೆ ನೀಡುತ್ತಿದ್ದಾನೆ.

(122) ನಿರ್ಜೀವ ಸ್ಥಿತಿಯಲ್ಲಿದ್ದ ಒಬ್ಬನಿಗೆ ನಾವು ಜೀವವನ್ನು ನೀಡಿದೆವು. ತರುವಾಯ ಅವನಿಗೆ ಒಂದು (ಸತ್ಯ)ಪ್ರಕಾಶವನ್ನು ನೀಡಿದೆವು. ಅವನು ಅದರೊಂದಿಗೆ ಜನರ ಮಧ್ಯೆ ಓಡಾಡುತ್ತಿರುವನು. ಅಂತಹವನು ಹೊರ ಬರಲಾಗದಂತೆ ಅಂಧಕಾರಗಳಲ್ಲಿ ಸಿಲುಕಿಕೊಂಡವನಂತಾಗುವನೇ? ಹೀಗೆ ಸತ್ಯನಿಷೇಧಿಗಳಿಗೆ ಅವರು ಮಾಡುತ್ತಿರುವುದನ್ನು ಆಕರ್ಷಣೀಯಗೊಳಿಸಿ ತೋರಿಸಲಾಗಿದೆ.

(123) ಹೀಗೆ ಪ್ರತಿಯೊಂದು ಊರಿನಲ್ಲೂ ಅಲ್ಲಿನ ಅಪರಾಧಿಗಳ ನಾಯಕರನ್ನು ಪಿತೂರಿಗಳಲ್ಲಿ ಮಗ್ನರಾಗುವಂತೆ ನಾವು ಮಾಡಿರುವೆವು. ಆದರೆ ಅವರು ಸ್ವತಃ ಅವರ ವಿರುದ್ಧವಲ್ಲದೆ ಸಂಚು ಹೂಡುತ್ತಿಲ್ಲ.(202) ಅವರು (ಅದರ ಬಗ್ಗೆ) ಪ್ರಜ್ಞಾವಂತರಾಗುವುದಿಲ್ಲ.
202. ಯಾರು ಏನೇ ಪಿತೂರಿ ಮಾಡಿದರೂ ಅದರಿಂದ ಅಲ್ಲಾಹುವಿಗೇನೂ ನಷ್ಟವಿಲ್ಲ. ಕುತಂತ್ರ ಹೂಡಿದುದಕ್ಕಿರುವ ಶಿಕ್ಷೆಯನ್ನು ಸ್ವತಃ ಅವರೇ ಅನುಭವಿಸಬೇಕಾಗಿ ಬರುವುದು.

(124) ಯಾವುದೇ ದೃಷ್ಟಾಂತವು ಅವರ ಬಳಿಗೆ ಬಂದಾಗಲೂ ‘ಅಲ್ಲಾಹುವಿನ ಸಂದೇಶವಾಹಕರಿಗೆ ನೀಡಲಾಗಿರುವಂತಹದ್ದು ನಮಗೂ ನೀಡಲಾಗುವವರೆಗೆ ನಾವೆಂದೂ ವಿಶ್ವಾಸವಿಡಲಾರೆವು’ ಎಂದು ಅವರು ಹೇಳುವರು.(203) ಆದರೆ ತನ್ನ ಸಂದೇಶವಾಹಕತ್ವವನ್ನು ಎಲ್ಲಿ ಸ್ಥಾಪಿಸಬೇಕೆಂಬುದನ್ನು ಅಲ್ಲಾಹು ಚೆನ್ನಾಗಿ ಅರಿತಿರುವನು. ಅಪರಾಧಿಗಳಿಗೆ, ಅವರು ರೂಪಿಸಿದ ಒಳಸಂಚಿನ ಫಲವಾಗಿ ಅಲ್ಲಾಹುವಿನ ಬಳಿ ನಿಕೃಷ್ಟತೆಯನ್ನು ಮತ್ತು ಕಠಿಣವಾದ ಶಿಕ್ಷೆಯನ್ನು ಅನುಭವಿಸಬೇಕಾಗಿ ಬರುವುದು.
203. ‘ಮುಹಮ್ಮದ್‍ರಿಗೆ ಅಷ್ಟು ದೊಡ್ಡ ವಿಶೇಷತೆಯೇನಿದೆ? ದಿವ್ಯ ಸಂದೇಶವು ನಮಗೂ ಸಿಗಬಾರದೇಕೆ? ನಾವು ವಿಶ್ವಾಸವಿಡಬೇಕೆಂಬ ಅಗತ್ಯ ಅಲ್ಲಾಹುವಿಗಿದ್ದರೆ ಅವನು ನಮಗೂ ದಿವ್ಯಸಂದೇಶಗಳನ್ನು ತಲುಪಿಸಿಕೊಡಲಿ’ ಎಂಬ ಮೊಂಡುವಾದವನ್ನು ಅರೇಬಿಯಾದ ಸತ್ಯನಿಷೇಧಿಗಳ ಪೈಕಿ ಕೆಲವರು ಹೊಂದಿದ್ದರು.

(125) ಯಾರನ್ನು ಸನ್ಮಾರ್ಗದೆಡೆಗೆ ಮುನ್ನಡೆಸಬೇಕೆಂದು ಅಲ್ಲಾಹು ಇಚ್ಛಿಸುವನೋ ಅವನ ಹೃದಯವನ್ನು ಅವನು ಇಸ್ಲಾಮಿಗಾಗಿ ತೆರೆದುಕೊಡುವನು. ಯಾರನ್ನು ಪಥಭೃಷ್ಟಗೊಳಿಸಬೇಕೆಂದು ಅಲ್ಲಾಹು ಇಚ್ಛಿಸುವನೋ ಅವನ ಹೃದಯವನ್ನು ಬಿಗಿಯಾಗಿಯೂ ಸಂಕುಚಿತವಾಗಿಯೂ ಮಾಡುವನು. ಅವನು ಆಕಾಶದ ಮೂಲಕ ಏರಿ ಹೋಗುತ್ತಿರುವನೋ ಎಂಬಂತೆ!(204) ಹೀಗೆ ಅಲ್ಲಾಹು ವಿಶ್ವಾಸವಿಡದವರ ಮೇಲೆ ಶಿಕ್ಷೆಯನ್ನು ಹಾಕುವನು.
204. ಇದು ದುರ್ಮಾರ್ಗವು ರೂಢಿಯಾಗಿ ಬಿಟ್ಟಿರುವ ಕಾರಣ ಸತ್ಯವನ್ನು ಅಂಗೀಕರಿಸಲು ತೀವ್ರ ಸಂಕಟ ಅನುಭವಿಸುವವರಿಗೆ ನೀಡಿದ ಒಂದು ಉಪಮೆಯಾಗಿದೆ. ಒಂದೇ ಸವನೆ ಮೇಲೇರುವ ಓರ್ವ ವ್ಯಕ್ತಿಗೆ ಮೇಲೇರಿದಷ್ಟು ಇಕ್ಕಟ್ಟು ಹೆಚ್ಚುತ್ತಲೇ ಇರುತ್ತದೆ. ಅವನ ಶ್ವಾಸೋಚ್ಛಾಸದಲ್ಲಿ ಏರುಪೇರುಂಟಾಗುತ್ತದೆ ಮತ್ತು ಹೃದಯ ಬಡಿತವು ಕ್ರಮ ತಪ್ಪುತ್ತದೆ. ಸತ್ಯವನ್ನು ಅಂಗೀಕರಿಸಬೇಕೆಂದು ಹೇಳುವಾಗ ಕೆಲವರಿಗೆ ಇಂತಹ ಬಿಗುವು ಅನುಭವವಾಗುತ್ತದೆ.

(126) ಇದು ತಮ್ಮ ರಬ್‌‌ನ ನೇರ ಮಾರ್ಗವಾಗಿದೆ. ಚಿಂತಿಸಿ ಅರ್ಥಮಾಡಿಕೊಳ್ಳುವ ಜನರಿಗಾಗಿ ನಾವು ದೃಷ್ಟಾಂತಗಳನ್ನು ವಿವರಿಸಿಕೊಟ್ಟಿರುವೆವು.
205. ಜಿನ್ನ್‌ಗಳ ಪ್ರಪಂಚದ ಬಗ್ಗೆ ಕುರ್‌ಆನ್ ಮತ್ತು ಸುನ್ನತ್ ವಿವರಿಸಿಕೊಟ್ಟಿರುವುದಕ್ಕಿಂತ ಹೆಚ್ಚು ತಿಳಿಯಲು ನಮಗೆ ಸಾಧ್ಯವಿಲ್ಲ. ಜಿನ್ನ್‌ಗಳಲ್ಲಿ ಸೇರಿದ ಸೈತಾನರು ನಾವು ತಿಳಿಯದ ರೀತಿಯಲ್ಲಿ ನಮ್ಮನ್ನು ದಾರಿಗೆಡಿಸಲು ಸದಾ ಪ್ರಯತ್ನಿಸುತ್ತಿರುವರೆಂದು ಕುರ್‌ಆನ್ ನಮಗೆ ಎಚ್ಚರಿಕೆ ನೀಡಿದೆ.

(127) ಅವರಿಗೆ ಅವರ ರಬ್‌‌ನ ಬಳಿ ಶಾಂತಿಯ ಭವನವಿದೆ. ಅವನು ಅವರ ರಕ್ಷಕನಾಗಿರುವನು. ಇದು ಅವರು ಮಾಡುತ್ತಿದ್ದುದರ ಪ್ರತಿಫಲವಾಗಿದೆ.

(128) ಅವನು (ಅಲ್ಲಾಹು) ಅವರೆಲ್ಲರನ್ನೂ ಒಟ್ಟುಗೂಡಿಸುವ ದಿನ. (ಅವನು ಜಿನ್ನ್‌ಗಳೊಂದಿಗೆ ಹೇಳುವನು): ‘ಓ ಜಿನ್ನ್‌ಗಳ ಸಮೂಹವೇ! ಮನುಷ್ಯರ ಪೈಕಿ ಅನೇಕ ಜನರನ್ನು ನೀವು ದಾರಿಗೆಡಿಸಿರುವಿರಿ.’(205) ಮನುಷ್ಯರಲ್ಲಿ ಸೇರಿದ ಅವರ ಆಪ್ತಮಿತ್ರರು ಹೇಳುವರು: ‘ಓ ನಮ್ಮ ರಬ್! ನಮ್ಮಲ್ಲಿ ಕೆಲವರು ಇತರ ಕೆಲವರಿಂದ ಸುಖಾನುಭೂತಿಯನ್ನು ಪಡೆದಿರುವರು.(206) ತರುವಾಯ ನೀನು ನಮಗೆ ನಿಶ್ಚಯಿಸಿದ ಅವಧಿಯನ್ನು ನಾವು ತಲುಪಿರುವೆವು.’ ಅವನು ಹೇಳುವನು: ‘ನರಕಾಗ್ನಿಯೇ ನಿಮ್ಮ ವಾಸಸ್ಥಳ! ಅಲ್ಲಾಹು ಇಚ್ಛಿಸಿದ ವಿನಾ ನೀವದರಲ್ಲಿ ಶಾಶ್ವತವಾಗಿ ವಾಸಿಸುವಿರಿ.’ ಖಂಡಿತವಾಗಿಯೂ ತಮ್ಮ ರಬ್ ಯುಕ್ತಿಪೂರ್ಣನೂ ಸರ್ವಜ್ಞನೂ ಆಗಿರುವನು.
206. ಸೈತಾನರು ದುರ್ಬೋಧನೆ ಮಾಡುವುದು ತಾತ್ಕಾಲಿಕ ಸುಖಾನುಭೂತಿ ಮತ್ತು ಮುಂದೆ ಘೋರ ಭವಿಷ್ಯವನ್ನು ಉಂಟುಮಾಡುವ ವಿಷಯಗಳನ್ನಾಗಿವೆ.

(129) ಹೀಗೆ ನಾವು ಆ ಅಕ್ರಮಿಗಳ ಪೈಕಿ ಕೆಲವರನ್ನು ಕೆಲವರಿಗೆ ಮಿತ್ರರನ್ನಾಗಿ ಮಾಡುವೆವು. ಅದು ಅವರು ಸಂಪಾದಿಸುತ್ತಿದ್ದುದರ ಫಲವಾಗಿದೆ.

(130) ‘ಓ ಜಿನ್ನ್ ಮತ್ತು ಮನುಷ್ಯರ ಸಮೂಹವೇ! ನಿಮಗೆ ನನ್ನ ದೃಷ್ಟಾಂತಗಳನ್ನು ವಿವರಿಸಿಕೊಡುತ್ತಲೂ, ನಿಮ್ಮ ಈ ದಿನದ(207) ಭೇಟಿಯ ಬಗ್ಗೆ ನಿಮಗೆ ಎಚ್ಚರಿಕೆ ನೀಡುತ್ತಲೂ, ನಿಮ್ಮಿಂದಲೇ ಇರುವ ಸಂದೇಶವಾಹಕರು ನಿಮ್ಮ ಬಳಿಗೆ ಬಂದಿರಲಿಲ್ಲವೇ?’ ಅವರು ಹೇಳುವರು: ‘ನಾವು ಸ್ವತಃ ನಮ್ಮ ವಿರುದ್ಧವೇ ಸಾಕ್ಷ್ಯ ವಹಿಸಿರುವೆವು.’ ಐಹಿಕ ಜೀವನವು ಅವರನ್ನು ವಂಚಿಸಿತು. ತಾವು ಸತ್ಯನಿಷೇಧಿಗಳಾಗಿದ್ದೆವೆಂದು ಸ್ವತಃ ತಮ್ಮ ವಿರುದ್ಧವೇ ಅವರು ಸಾಕ್ಷ್ಯವಹಿಸುವರು.
207. ಅಂದರೆ ಪುನರುತ್ಥಾನದ ದಿನ.

(131) ಅದು (ಸಂದೇಶವಾಹಕರನ್ನು ಕಳುಹಿಸಿರುವುದು) ತಮ್ಮ ರಬ್ ನಾಡುಗಳನ್ನು, ಅದರ ನಿವಾಸಿಗಳು (ಸತ್ಯದ ಬಗ್ಗೆ) ಅಜ್ಞರಾಗಿರುತ್ತಾ ಮಾಡಿದ ಅಕ್ರಮದ ನಿಮಿತ್ತ ನಾಶ ಮಾಡುವವನಲ್ಲ(208) ಎಂಬುದರಿಂದಾಗಿದೆ.
208. ಪ್ರವಾದಿಗಳ ಅಥವಾ ಧರ್ಮಬೋಧಕರ ಮೂಲಕ ದೈವಿಕ ಮಾರ್ಗದರ್ಶನವನ್ನು ಅರಿಯುವ ಅವಕಾಶವು ಜೀವನದಲ್ಲಿ ಒಮ್ಮೆಯೂ ಲಭ್ಯವಾಗದವರನ್ನು ಅಲ್ಲಾಹು ಶಿಕ್ಷಿಸಲಾರನು ಎಂದು ಇದರಿಂದ ಗ್ರಹಿಸಬಹುದು.

(132) ಪ್ರತಿಯೊಬ್ಬರಿಗೂ ಅವರು ಮಾಡಿರುವುದರ ಪ್ರತಿಫಲವಾಗಿ ಹಲವು ಪದವಿಗಳಿರುವುದು. ಅವರು ಮಾಡುತ್ತಿರುವುದರ ಬಗ್ಗೆ ತಮ್ಮ ರಬ್ ಅಲಕ್ಷ್ಯನಲ್ಲ.

(133) ತಮ್ಮ ರಬ್ ನಿರಪೇಕ್ಷನೂ, ಕರುಣೆಯುಳ್ಳವನೂ ಆಗಿರುವನು. ಅವನಿಚ್ಛಿಸಿದರೆ ಬೇರೊಂದು ಜನತೆಯ ಸಂತತಿಯಿಂದ ನಿಮ್ಮನ್ನು ಬೆಳೆಸಿದಂತೆ, ನಿಮ್ಮನ್ನು ಅಳಿಸಿ, ನಿಮ್ಮ ಬಳಿಕ ತಾನಿಚ್ಛಿಸುವ ಬೇರೊಂದು ಜನತೆಯನ್ನು ಉತ್ತರಾಧಿಕಾರಿಯನ್ನಾಗಿ ಮಾಡುವನು.

(134) ನಿಮಗೆ ಮುನ್ನೆಚ್ಚರಿಕೆ ನೀಡಲಾಗುತ್ತಿರುವ ಸಂಗತಿಯು ಖಂಡಿತವಾಗಿಯೂ ಬಂದೇ ಬರುವುದು. (ಆ ವಿಷಯದಲ್ಲಿ ಅಲ್ಲಾಹುವನ್ನು) ಸೋಲಿಸಲು ನಿಮಗೆ ಸಾಧ್ಯವಾಗದು.

(135) (ಓ ಪ್ರವಾದಿಯವರೇ!) ಹೇಳಿರಿ: ‘ಓ ನನ್ನ ಜನರೇ! ನೀವು ನಿಮ್ಮ ನಿಲುವಿನಂತೆ ಕರ್ಮವೆಸಗಿರಿ. ಖಂಡಿತವಾಗಿಯೂ ನಾನೂ ಕರ್ಮವೆಸಗುವೆನು. ಜಗತ್ತಿನ ಪರ್ಯಾವಸಾನವು ಯಾರ ಪಾಲಿಗೆ ಅನುಕೂಲಕರವಾಗಿರುವುದೆಂದು ನೀವು ತರುವಾಯ ಅರಿಯಲಿರುವಿರಿ. ಖಂಡಿತವಾಗಿಯೂ ಅಕ್ರಮಿಗಳು ಯಶಸ್ವಿಯಾಗಲಾರರು.’

(136) ಅಲ್ಲಾಹು ಸೃಷ್ಟಿಸಿದ ಕೃಷಿಯಿಂದಲೂ, ಜಾನುವಾರುಗಳಿಂದಲೂ ಅವರು ಅವನಿಗೆ ಒಂದು ಪಾಲನ್ನು ನಿಶ್ಚಯಿಸಿರುವರು. ತರುವಾಯ ತಮ್ಮ ವಾದಕ್ಕನುಸಾರವಾಗಿ ‘ಇದು ಅಲ್ಲಾಹುವಿಗಾಗಿದೆ ಮತ್ತು ಇನ್ನೊಂದು ನಾವು ಸಹಭಾಗಿಗಳನ್ನಾಗಿ ಮಾಡಿರುವ ನಮ್ಮ ಆರಾಧ್ಯರುಗಳಿಗಾಗಿದೆ’ ಎನ್ನುವರು. ಅವರ ಸಹಭಾಗಿಗಳಿಗಿರುವುದು ಅಲ್ಲಾಹುವಿನೆಡೆಗೆ ತಲುಪಲಾರದು. ಆದರೆ ಅಲ್ಲಾಹುವಿಗಿರುವುದು ಅವರ ಸಹಭಾಗಿಗಳೆಡೆಗೆ ತಲುಪುವುದು.(209) ಅವರು ನೀಡುತ್ತಿರುವ ತೀರ್ಪು ಎಷ್ಟು ನಿಕೃಷ್ಟವಾದುದು!
209. ಝಕಾತ್ ಮತ್ತು ಸದಕಾ ಮನುಷ್ಯರ ಸೊತ್ತಿನಲ್ಲಿರುವ ಅಲ್ಲಾಹುವಿನ ಹಕ್ಕಾಗಿದೆ. ಹರಕೆಗಳು ಜನರು ಸಜ್ಜನರಿಗೋಸ್ಕರ ಸ್ವತಃ ನಿರ್ಮಿಸಿದ ಹಕ್ಕುಗಳಾಗಿವೆ. ಝಕಾತ್ ಮತ್ತು ಸದಕಾ ನೀಡುವುದರಲ್ಲಿ ಲೋಪವೆಸಗಿಯಾದರೂ ಅವರು ಸಜ್ಜನರ ಮೇಲೆ ಹೊರಲಾಗಿರುವ ಹರಕೆಗಳನ್ನು ಸಂದಾಯ ಮಾಡುವರು. ಹರಕೆಗೆ ಮೀಸಲಿಟ್ಟಿರುವುದನ್ನು ಅವರು ಎಂದಿಗೂ ಬೇರಾವ ಉದ್ದೇಶಕ್ಕೂ ವ್ಯಯಿಸಲಾರರು. ಅಲ್ಲಾಹುವಿನ ವಿಷಯದಲ್ಲಿರುವುದಕ್ಕಿಂತಲೂ ಎಷ್ಟೋ ಹೆಚ್ಚು ನಿಷ್ಠೆಯನ್ನು ಅವರು ಸಜ್ಜನರಿಗೆ ಹರಕೆ ಸಂದೈಯ ಮಾಡುವುದರಲ್ಲಿ ಪಾಲಿಸುತ್ತಿರುವರು.

(137) ಹೀಗೆ ಬಹುದೇವವಿಶ್ವಾಸಿಗಳ ಪೈಕಿ ಹಲವರಿಗೂ ಅವರು ಸಹಭಾಗಿಗಳನ್ನಾಗಿ ಮಾಡಿರುವ ಆರಾಧ್ಯರುಗಳು ಅವರ ಮಕ್ಕಳ ವಧೆಯನ್ನು ಆಕರ್ಷಣೀಯವಾಗಿ ತೋರುವಂತೆ ಮಾಡಿರುವರು.(210) ತನ್ಮೂಲಕ ಅವರನ್ನು ವಿನಾಶಕ್ಕೀಡು ಮಾಡುವ ಸಲುವಾಗಿ ಮತ್ತು ಅವರು ತಮ್ಮ ಧರ್ಮದ ವಿಷಯದಲ್ಲಿ ಗೊಂದಲಪಡುವಂತೆ ಮಾಡುವ ಸಲುವಾಗಿ. ಅಲ್ಲಾಹು ಇಚ್ಛಿಸುತ್ತಿದ್ದರೆ ಅವರದನ್ನು ಮಾಡುತ್ತಿರಲಿಲ್ಲ. ಆದ್ದರಿಂದ ಅವರು ಹೆಣೆಯುತ್ತಿರುವುದರೊಂದಿಗೆ ಅವರನ್ನು ಬಿಟ್ಟುಬಿಡಿರಿ.
210. ಅರೇಬಿಯಾದಲ್ಲಿದ್ದ ಬಹುದೇವವಿಶ್ವಾಸಿಗಳಲ್ಲಿ ಶಿಶುಹತ್ಯೆಯು ಸಾಮಾನ್ಯವಾಗಿತ್ತು. ದೇವ-ದೇವತೆಗಳಿಗೆ ಶಿಶುಗಳನ್ನು ಬಲಿಕೊಡಲಾಗುತ್ತಿತ್ತು. ಬಡತನದ ಭಯದಿಂದಲೂ ಶಿಶುಗಳನ್ನು ಹತ್ಯೆ ಮಾಡಲಾಗುತ್ತಿತ್ತು. ಅಪಮಾನ ನಿಮಿತ್ತವೂ ಅವರು ಹೆಣ್ಣು ಶಿಶುಗಳನ್ನು ಹತ್ಯೆ ಮಾಡುತ್ತಿದ್ದರು. ಇವಾವುದನ್ನೂ ಅವರು ಧರ್ಮಬಾಹಿರ ಕೃತ್ಯಗಳಾಗಿ ಪರಿಗಣಿಸುತ್ತಿರಲಿಲ್ಲ.

(138) ಅವರು ಹೇಳಿದರು: ‘ಇವು ನಿಷೇಧಿತ ಜಾನುವಾರುಗಳು ಮತ್ತು ಕೃಷಿಗಳಾಗಿವೆ. ನಾವು ಇಚ್ಛಿಸುವವರಲ್ಲದೆ ಯಾರೂ ಇವುಗಳನ್ನು ತಿನ್ನಬಾರದು.’ ಇದು ಅವರ ವಾದವಾಗಿದೆ. ಬೆನ್ನ ಮೇಲೆ ಸವಾರಿ ಮಾಡುವುದು ನಿಷಿದ್ಧವಾಗಿರುವ ಕೆಲವು ಜಾನುವಾರುಗಳಿವೆ. ಅವರು ಅಲ್ಲಾಹುವಿನ ನಾಮವನ್ನು ಉಚ್ಛರಿಸದಂತಹ ಬೇರೆ ಕೆಲವು ಜಾನುವಾರುಗಳಿವೆ. ಇವೆಲ್ಲವೂ ಅವರು ಅವನ (ಅಲ್ಲಾಹುವಿನ) ಮೇಲೆ ಹೆಣೆದಿರುವುದಾಗಿವೆ. ಅವರು ಹೆಣೆಯುತ್ತಿದ್ದುದಕ್ಕೆ ಅವನು ಅವರಿಗೆ ತಕ್ಕ ಪ್ರತಿಫಲವನ್ನು ನೀಡಲಿರುವನು.

(139) ಅವರು ಹೇಳಿದರು: ‘ಈ ಜಾನುವಾರುಗಳ ಗರ್ಭಾಶಯಗಳಲ್ಲಿರುವುದು ನಮ್ಮ ಪೈಕಿ ಪುರುಷರಿಗೆ ಮಾತ್ರವಿರುವುದಾಗಿದೆ ಮತ್ತು ಅವು ನಮ್ಮ ಪತ್ನಿಯರಿಗೆ ನಿಷಿದ್ಧವಾಗಿವೆ.’ ಅದು ಸತ್ತಿರುವುದಾಗಿದ್ದರೆ ಅವರೆಲ್ಲರೂ ಅದರಲ್ಲಿ ಪಾಲುದಾರರಾಗುವರು. ಅವರ ಈ ವಾದಕ್ಕೆ ಅವನು ಅವರಿಗೆ ತಕ್ಕ ಪ್ರತಿಫಲವನ್ನು ನೀಡಲಿರುವನು. ಖಂಡಿತವಾಗಿಯೂ ಅವನು ಯುಕ್ತಿಪೂರ್ಣನೂ ಸರ್ವಜ್ಞನೂ ಆಗಿರುವನು.

(140) ಯಾವುದೇ ಅರಿವಿಲ್ಲದೆ ಮೂರ್ಖತನದಿಂದ ತಮ್ಮ ಮಕ್ಕಳನ್ನು ವಧಿಸಿದವರು ಮತ್ತು ಅಲ್ಲಾಹು ಅವರಿಗೆ ದಯಪಾಲಿಸಿರುವುದನ್ನು ಅಲ್ಲಾಹುವಿನ ಹೆಸರಿನಲ್ಲಿ ಸುಳ್ಳಾರೋಪಿಸುತ್ತಾ ನಿಷಿದ್ಧಗೊಳಿಸಿದವರು ಖಂಡಿತವಾಗಿಯೂ ನಷ್ಟಕ್ಕೊಳಗಾಗಿರುವರು. ನಿಸ್ಸಂಶಯವಾಗಿಯೂ ಅವರು ಪಥಭ್ರಷ್ಟರಾದರು ಮತ್ತು ಅವರು ಸನ್ಮಾರ್ಗವನ್ನು ಪಡೆದವರಾಗಲಿಲ್ಲ.(211)
211. ಯಾವುದೆಲ್ಲಾ ಪವಿತ್ರವಾಗಿದೆ ಮತ್ತು ಯಾವುದೆಲ್ಲಾ ನಿಷಿದ್ಧವಾಗಿದೆ ಎಂದು ನಿರ್ಧರಿಸುವ ಹಕ್ಕಿರುವುದು ಅಲ್ಲಾಹುವಿಗೆ ಮಾತ್ರವಾಗಿದೆ. ಅವನು ಏನನ್ನು ಆದೇಶಿಸುತ್ತಾನೋ ಅದು ಮಾತ್ರ ಧರ್ಮವಾಗಿದೆ. ಧರ್ಮನಿಯಮಗಳನ್ನು ಸ್ವತಃ ತಮ್ಮ ವತಿಯಿಂದ ನಿಶ್ಚಯಿಸುವ ಅರ್ಚಕರು ಮತ್ತು ಪುರೋಹಿತರು ಅಲ್ಲಾಹುವಿನ ಅಧಿಕಾರದಲ್ಲಿ ಹಸ್ತಕ್ಷೇಪ ನಡೆಸುವ ಧಿಕ್ಕಾರಿಗಳಾಗಿದ್ದಾರೆ.

(141) ಚಪ್ಪರಗಳಿರುವ ಮತ್ತು ಚಪ್ಪರಗಳಿಲ್ಲದ ತೋಟಗಳನ್ನು, ಖರ್ಜೂರದ ಮರಗಳನ್ನು, ವೈವಿಧ್ಯಮಯ ಫಲಗಳಿರುವ ಕೃಷಿಗಳನ್ನು, ಪರಸ್ಪರ ಸಾದೃಶ್ಯವಿರುವ ಮತ್ತು ಸಾದೃಶ್ಯವಿಲ್ಲದಿರುವಂತಹ ಆಲಿವ್ ಮತ್ತು ದಾಳಿಂಬೆಗಳೆಲ್ಲವನ್ನು ಸೃಷ್ಟಿಸಿದವನು ಅವನೇ ಆಗಿರುವನು. ಅವು ಫಲಬಿಡುವಾಗ ಅವುಗಳ ಫಲಗಳನ್ನು ತಿನ್ನಿರಿ ಮತ್ತು ಅವುಗಳ ಫಸಲುಗಳನ್ನು ಕೊಯ್ಯುವ ದಿನದಂದು ಅವುಗಳ ಹಕ್ಕನ್ನು ನೀಡಿರಿ. ಆದರೆ ದುಂದುಗಾರಿಕೆ ಮಾಡದಿರಿ. ಖಂಡಿತವಾಗಿಯೂ ದುಂದುಗಾರಿಕೆ ಮಾಡುವವರನ್ನು ಅಲ್ಲಾಹು ಮೆಚ್ಚಲಾರನು.

(142) ಜಾನುವಾರುಗಳ ಪೈಕಿ ಭಾರ ಹೊರುವವುಗಳನ್ನೂ, ಕೊಯ್ದು ತಿನ್ನುವಂತಹವುಗಳನ್ನೂ (ಸೃಷ್ಟಿಸಿದವನು ಅವನೇ ಆಗಿರುವನು). ಅಲ್ಲಾಹು ನಿಮಗೆ ಅನ್ನಾಧಾರವಾಗಿ ಕರುಣಿಸಿದವುಗಳಿಂದ ನೀವು ತಿನ್ನಿರಿ. ಸೈತಾನನ ಹೆಜ್ಜೆ ಗುರುತುಗಳನ್ನು ಹಿಂಬಾಲಿಸದಿರಿ. ಖಂಡಿತವಾಗಿಯೂ ಅವನು ನಿಮ್ಮ ಪ್ರತ್ಯಕ್ಷ ಶತ್ರುವಾಗಿರುವನು.

(143) ಎಂಟು ವರ್ಗಗಳನ್ನು (ಅವನು ಸೃಷ್ಟಿಸಿರುವನು). ಕುರಿಗಳಿಂದ ಎರಡು (ಗಂಡು ಮತ್ತು ಹೆಣ್ಣು) ಹಾಗೂ ಆಡುಗಳಿಂದ ಎರಡು (ಗಂಡು ಮತ್ತು ಹೆಣ್ಣು). ಹೇಳಿರಿ:(ಅವೆರಡರ ಪೈಕಿ) ಅಲ್ಲಾಹು ನಿಷಿದ್ಧಗೊಳಿಸಿರುವುದು ಎರಡು ಗಂಡು ವರ್ಗಗಳನ್ನೋ ಅಥವಾ ಎರಡು ಹೆಣ್ಣು ವರ್ಗಗಳನ್ನೋ? ಅಥವಾ ಎರಡು ಹೆಣ್ಣು ವರ್ಗಗಳ ಗರ್ಭಾಶಯಗಳ ಒಳಗಿರುವುದನ್ನೋ? ಅರಿವಿನ ಆಧಾರದೊಂದಿಗೆ ನೀವು ನನಗೆ ಹೇಳಿಕೊಡಿರಿ; ನೀವು ಸತ್ಯವಂತರಾಗಿದ್ದರೆ.’

(144) ಒಂಟೆಯಿಂದ ಎರಡು (ಗಂಡು ಮತ್ತು ಹೆಣ್ಣು) ಮತ್ತು ಹಸುವಿನಿಂದ ಎರಡು (ಗಂಡು ಮತ್ತು ಹೆಣ್ಣು) (ವರ್ಗಗಳನ್ನು ಅವನು ಸೃಷ್ಟಿಸಿರುವನು). ಹೇಳಿರಿ:(ಅವೆರಡರ ಪೈಕಿ) ಅಲ್ಲಾಹು ನಿಷಿದ್ಧಗೊಳಿಸಿರುವುದು ಎರಡು ಗಂಡು ವರ್ಗಗಳನ್ನೋ ಅಥವಾ ಎರಡು ಹೆಣ್ಣು ವರ್ಗಗಳನ್ನೋ ಅಥವಾ ಎರಡು ಹೆಣ್ಣು ವರ್ಗಗಳ ಗರ್ಭಾಶಯಗಳ ಒಳಗಿರುವುದನ್ನೋ? ಅಲ್ಲಾಹು ನಿಮಗಿದನ್ನು ಉಪದೇಶ ಮಾಡುವಾಗ ನೀವಲ್ಲಿ ಹಾಜರಿದ್ದಿರಾ?’ ಹೀಗಿರುವಾಗ ಯಾವುದೇ ಅರಿವಿಲ್ಲದೆ ಜನರನ್ನು ದಾರಿಗೆಡಿಸುವುದಕ್ಕಾಗಿ ಅಲ್ಲಾಹುವಿನ ಮೇಲೆ ಸುಳ್ಳು ಹೆಣೆದವನಿಗಿಂತ ದೊಡ್ಡ ಅಕ್ರಮಿ ಇನ್ನಾರಿರುವನು? ಖಂಡಿತವಾಗಿಯೂ ಅಕ್ರಮಿಗಳಾದ ಜನರನ್ನು ಅಲ್ಲಾಹು ಸನ್ಮಾರ್ಗದಲ್ಲಿ ಸೇರಿಸಲಾರನು.

(145) (ಓ ಪ್ರವಾದಿಯವರೇ!) ಹೇಳಿರಿ: ‘ನನಗೆ ದಿವ್ಯಸಂದೇಶವಾಗಿ ನೀಡಲಾಗಿರುವುದರಲ್ಲಿ ತಿನ್ನುವವನಿಗೆ ತಿನ್ನಲು ನಿಷಿದ್ಧವಾಗಿರುವಂತಹ ಏನನ್ನೂ ನಾನು ಕಾಣುತ್ತಿಲ್ಲ. ಅದು ಶವ ಅಥವಾ ಹರಿಸಲ್ಪಟ್ಟ ರಕ್ತ ಅಥವಾ ಹಂದಿ ಮಾಂಸವಾಗಿರುವುದರ ಹೊರತು. ಏಕೆಂದರೆ ಅದು ಮಲಿನವಾಗಿದೆ ಅಥವಾ ಅಲ್ಲಾಹೇತರರ ಹೆಸರಲ್ಲಿ (ಹರಕೆಯಾಗಿ) ಘೋಷಿಸಲ್ಪಡುವ ಮೂಲಕ ಧರ್ಮಬಾಹಿರವಾಗಿ ಬಿಟ್ಟಿರುವವುಗಳ ಹೊರತು.’ ಆದರೆ ಯಾರಾದರೂ (ಇವುಗಳನ್ನು ತಿನ್ನಲು) ನಿರ್ಬಂಧಿತನಾಗಿದ್ದು, ಅವನು ನಿಯಮೋಲ್ಲಂಘನೆ ಮಾಡಲು ಇಚ್ಛಿಸದವನೂ ಮಿತಿಮೀರದವನೂ ಆಗಿದ್ದರೆ ಖಂಡಿತವಾಗಿಯೂ ತಮ್ಮ ರಬ್ ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.

(146) ಉಗುರನ್ನು ಹೊಂದಿರುವ ಸರ್ವ ಜೀವಿಗಳನ್ನೂ ನಾವು ಯಹೂದರಿಗೆ ನಿಷಿದ್ಧಗೊಳಿಸಿದ್ದೆವು. ಹಸು, ಆಡು ಮುಂತಾದವುಗಳ ಪೈಕಿ, ಅವುಗಳ ಕೊಬ್ಬುಗಳನ್ನು ನಾವು ಅವರಿಗೆ ನಿಷಿದ್ಧಗೊಳಿಸಿದ್ದೆವು. ಅವುಗಳ ಬೆನ್ನಿನಲ್ಲಿರುವುದು ಅಥವಾ ಕರುಳುಗಳಲ್ಲಿರುವುದು ಅಥವಾ ಮೂಳೆಗಳೊಂದಿಗೆ ಅಂಟಿಕೊಂಡಿರುವುದರ ಹೊರತು. ಇದು ನಾವು ಅವರ ಧಿಕ್ಕಾರಕ್ಕೆ ನೀಡಿದ ಪ್ರತಿಫಲವಾಗಿದೆ. ಖಂಡಿತವಾಗಿಯೂ ನಾವು ಸತ್ಯವನ್ನೇ ಹೇಳುತ್ತಿರುವೆವು.

(147) ಅವರೇನಾದರೂ ತಮ್ಮನ್ನು ನಿಷೇಧಿಸುವುದಾದರೆ ತಾವು ಹೇಳಿರಿ: ‘ನಿಮ್ಮ ರಬ್ ವಿಶಾಲವಾದ ಕರುಣೆಯುಳ್ಳವನಾಗಿರುವನು. ಆದರೆ ಅಕ್ರಮಿಗಳಾದ ಜನರಿಂದ ಅವನ ಶಿಕ್ಷೆಯು ನಿವಾರಣೆಯಾಗದು.’

(148) ಬಹುದೇವಾರಾಧಕರು ಹೇಳುವರು: ‘ಅಲ್ಲಾಹು ಇಚ್ಛಿಸುತ್ತಿದ್ದರೆ ನಾವಾಗಲಿ, ನಮ್ಮ ಪೂರ್ವಿಕರಾಗಲಿ ಅಲ್ಲಾಹುವಿನೊಂದಿಗೆ ಸಹಭಾಗಿತ್ವವನ್ನು ಮಾಡುತ್ತಿರಲಿಲ್ಲ ಮತ್ತು ನಾವು ಏನನ್ನೂ ನಿಷಿದ್ಧಗೊಳಿಸುತ್ತಿರಲಿಲ್ಲ.’ ಇದೇ ರೀತಿ ನಮ್ಮ ಶಿಕ್ಷೆಯನ್ನು ಆಸ್ವಾದಿಸುವ ತನಕ ಅವರ ಪೂರ್ವಿಕರೂ ನಿಷೇಧಿಸಿದ್ದರು. ಹೇಳಿರಿ: ‘ನಿಮ್ಮ ಬಳಿ ಏನಾದರೂ ಅರಿವಿದೆಯೇ? ಇದ್ದರೆ ಅದನ್ನು ನಮಗೆ ಬಹಿರಂಗಪಡಿಸಿರಿ. ನೀವು ಊಹೆಯನ್ನಲ್ಲದೆ ಹಿಂಬಾಲಿಸುವುದಿಲ್ಲ. ನೀವು ಸುಳ್ಳನ್ನಲ್ಲದೆ ನುಡಿಯುವುದೂ ಇಲ್ಲ.

(149) ಹೇಳಿರಿ: ‘ಉಚ್ಛವಾದ ಪುರಾವೆಯಿರುವುದು ಅಲ್ಲಾಹುವಿನಲ್ಲಾಗಿದೆ. ತಾನಿಚ್ಛಿಸುತ್ತಿದ್ದರೆ ಖಂಡಿತವಾಗಿಯೂ ನಿಮ್ಮೆಲ್ಲರನ್ನೂ ಅವನು ಸನ್ಮಾರ್ಗದಲ್ಲಿ ಸೇರಿಸುತ್ತಿದ್ದನು.’

(150) ಹೇಳಿರಿ: ‘ಅಲ್ಲಾಹು ಇವೆಲ್ಲವನ್ನೂ ನಿಷಿದ್ಧಗೊಳಿಸಿರುವನು ಎಂಬುದಕ್ಕೆ ಸಾಕ್ಷ್ಯವಹಿಸುವ ನಿಮ್ಮ ಸಾಕ್ಷಿಗಳನ್ನು ತನ್ನಿರಿ.’ ಅವರೇನಾದರೂ (ಸುಳ್ಳು) ಸಾಕ್ಷ್ಯವಹಿಸಿದರೆ ತಾವು ಅವರೊಂದಿಗೆ ಸಾಕ್ಷ್ಯವಹಿಸದಿರಿ. ನಮ್ಮ ದೃಷ್ಟಾಂತಗಳನ್ನು ನಿಷೇಧಿಸುವವರೂ, ಪರಲೋಕದಲ್ಲಿ ವಿಶ್ವಾಸವಿಡದವರೂ ಆಗಿರುವವರ ದೇಹೇಚ್ಛೆಗಳನ್ನು ತಾವು ಹಿಂಬಾಲಿಸದಿರಿ. ಅವರು ತಮ್ಮ ರಬ್‌‌ನೊಂದಿಗೆ ಸರಿಸಮಾನರನ್ನು ನಿಶ್ಚಯಿಸುವವರಾಗಿರುವರು.

(151) (ಓ ಪ್ರವಾದಿಯವರೇ!) ಹೇಳಿರಿ: ‘ಬನ್ನಿರಿ! ನಿಮ್ಮ ರಬ್ ನಿಮ್ಮ ಮೇಲೆ ಏನೆಲ್ಲ ನಿಷಿದ್ಧಗೊಳಿಸಿರುವನೆಂದು ನಾನು ನಿಮಗೆ ಓದಿ ಕೊಡುವೆನು: ಅವನೊಂದಿಗೆ ನೀವು ಏನನ್ನೂ ಸಹಭಾಗಿಯನ್ನಾಗಿ ಮಾಡದಿರಿ, ಮಾತಾಪಿತರೊಂದಿಗೆ ಉತ್ತಮವಾಗಿ ವರ್ತಿಸಿರಿ, ಬಡತನದಿಂದಾಗಿ ನಿಮ್ಮ ಮಕ್ಕಳನ್ನು ವಧಿಸದಿರಿ, -ನಿಮಗೂ, ಅವರಿಗೂ ಆಹಾರ ನೀಡುವವರು ನಾವಾಗಿರುವೆವು- ಬಹಿರಂಗವಾಗಿರುವ ಮತ್ತು ಗುಪ್ತವಾಗಿರುವ ಯಾವುದೇ ನೀಚಕೃತ್ಯಗಳನ್ನೂ ಸಮೀಪಿಸದಿರಿ ಮತ್ತು ಅಲ್ಲಾಹು ಪವಿತ್ರಗೊಳಿಸಿದ ಜೀವವನ್ನು ನ್ಯಾಯಬದ್ಧವಾಗಿಯೇ ವಿನಾ ಕೊಲ್ಲದಿರಿ. ಇವು ನೀವು ಚಿಂತಿಸಿ ಗ್ರಹಿಸುವುದಕ್ಕಾಗಿ ಅವನು ನಿಮಗೆ ನೀಡಿದ ಉಪದೇಶಗಳಾಗಿವೆ.

(152) ಅತ್ಯುತ್ತಮವಾದ ಮಾರ್ಗದ ಮೂಲಕವಲ್ಲದೆ ನೀವು ಅನಾಥನ ಸಂಪತ್ತನ್ನು ಸಮೀಪಿಸದಿರಿ. ಅವನು ಪ್ರೌಢಾವಸ್ಥೆಯನ್ನು ತಲುಪುವ ತನಕ (ನೀವು ಅವನ ಸಂರಕ್ಷಣೆಯ ಹೊಣೆಯನ್ನು ವಹಿಸಿರಿ). ಅಳತೆ ಮತ್ತು ತೂಕವನ್ನು ಪೂರ್ಣವಾಗಿ ಮತ್ತು ನ್ಯಾಯಬದ್ಧವಾಗಿ ನೀಡಿರಿ. ಯಾವುದೇ ವ್ಯಕ್ತಿಗೂ ಅವನ ಸಾಮರ್ಥ್ಯಕ್ಕಿಂತ ಮಿಗಿಲಾಗಿರುವುದನ್ನು ನಾವು ಬಾಧ್ಯತೆಯಾಗಿ ಹೊರಿಸಲಾರೆವು. ನೀವು ಮಾತನಾಡುವಾಗ ನ್ಯಾಯ ಪಾಲಿಸಿರಿ. ಅದು ನಿಕಟ ಸಂಬಂಧಿಕನ ವಿಷಯದಲ್ಲಾದರೂ ಸರಿ. ಅಲ್ಲಾಹುವಿನೊಂದಿಗಿರುವ ಕರಾರನ್ನು ಈಡೇರಿಸಿರಿ. ಇವು ನೀವು ಚಿಂತಿಸಿ ಗ್ರಹಿಸುವುದಕ್ಕಾಗಿ ಅವನು ನಿಮಗೆ ನೀಡಿದ ಉಪದೇಶಗಳಾಗಿವೆ.

(153) ಖಂಡಿತವಾಗಿಯೂ ನನ್ನ ನೇರವಾದ ಮಾರ್ಗವು ಇದೇ ಆಗಿದೆ. ಆದ್ದರಿಂದ ಇದನ್ನು ಅನುಸರಿಸಿರಿ. ಇತರ ಮಾರ್ಗಗಳನ್ನು ಅನುಸರಿಸದಿರಿ. ಅವು ಅವನ (ಅಲ್ಲಾಹುವಿನ) ಮಾರ್ಗದಿಂದ ನಿಮ್ಮನ್ನು ಬೇರ್ಪಡಿಸಿ ಬಿಡುವುವು. ಇವು ನೀವು ಭಯಭಕ್ತಿ ಪಾಲಿಸುವುದಕ್ಕಾಗಿ ಅವನು ನಿಮಗೆ ನೀಡಿದ ಉಪದೇಶಗಳಾಗಿವೆ.’

(154) ಒಳಿತು ಮಾಡಿದವನಿಗೆ (ಅನುಗ್ರಹದ) ಪೂರ್ತೀಕರಣವಾಗಿ ಮತ್ತು ಪ್ರತಿಯೊಂದು ವಿಷಯಕ್ಕಿರುವ ವಿವರಣೆಯೂ, ಮಾರ್ಗದರ್ಶಿಯೂ, ಕಾರುಣ್ಯವೂ ಆಗಿ ತರುವಾಯ ನಾವು ಮೂಸಾರಿಗೆ ಗ್ರಂಥವನ್ನು ದಯಪಾಲಿಸಿದೆವು. ಅವರು ತಮ್ಮ ರಬ್‌‌ನೊಂದಿಗಿರುವ ಭೇಟಿಯಲ್ಲಿ ವಿಶ್ವಾಸವಿಡುವ ಸಲುವಾಗಿ.

(155) ಇದು ನಾವು ಅವತೀರ್ಣಗೊಳಿಸಿದ ಒಂದು ಅನುಗ್ರಹೀತ ಗ್ರಂಥವಾಗಿದೆ. ಆದ್ದರಿಂದ ಇದನ್ನು ಅನುಸರಿಸಿರಿ ಮತ್ತು ಭಯಭಕ್ತಿ ಪಾಲಿಸಿರಿ. ನಿಮಗೆ ಕಾರುಣ್ಯವು ಲಭ್ಯವಾಗಲೂಬಹುದು.

(156) ‘ನಮಗಿಂತ ಮುಂಚಿನ ಎರಡು ಸಮುದಾಯಗಳಿಗೆ ಮಾತ್ರ ಗ್ರಂಥವನ್ನು ಅವತೀರ್ಣಗೊಳಿಸಲಾಗಿದೆ, ಅವರು ಅದನ್ನು ಓದಿ ಕಲಿಯುತ್ತಿರುವುದರ ಬಗ್ಗೆ ನಾವಂತೂ ಅಜ್ಞರಾಗಿದ್ದೆವು’ ಎಂದು ನೀವು ಹೇಳಲೂಬಹುದು ಎಂಬುದರಿಂದ (ಇದನ್ನು ಅವತೀರ್ಣಗೊಳಿಸಲಾಗಿದೆ)(212)
212. ಪರಲೋಕದಲ್ಲಿ ವಿಚಾರಣೆಯನ್ನೆದುರಿಸುವಾಗ ಬಹುಶಃ ನೀವು ಹೀಗೆ ಹೇಳುವಿರಿ: ‘ಅರಬಿಗಳಾದ ನಮಗೆ ನಮ್ಮ ಭಾಷೆಯಲ್ಲಿ ಯಾವುದೇ ಗ್ರಂಥವನ್ನೂ ನೀಡಲಾಗಿಲ್ಲ. ಯಹೂದರಿಗೂ ಕ್ರೈಸ್ತರಿಗೂ ನೀಡಲಾದ ಗ್ರಂಥದ ಕುರಿತು ನಮಗೇನೂ ತಿಳಿದಿಲ್ಲ. ಆದ್ದರಿಂದ ನಮ್ಮನ್ನು ಶಿಕ್ಷಿಸದಿರು.’ ಇಂತಹ ಒಂದು ಸಮರ್ಥನೆ ಮಂಡಿಸಲು ನಿಮಗೆ ಅವಕಾಶ ಸಿಗದಿರಲೆಂದು ನಿಮ್ಮ ತಿಳುವಳಿಕೆಗಾಗಿ ಗ್ರಂಥವು ಅವತೀರ್ಣಗೊಂಡಿದೆ.

(157) ಅಥವಾ ‘ನಮಗೊಂದು ಗ್ರಂಥವು ಅವತೀರ್ಣಗೊಂಡಿರುತ್ತಿದ್ದರೆ ನಾವು ಅವರಿಗಿಂತಲೂ ಹೆಚ್ಚು ಸನ್ಮಾರ್ಗಿಗಳಾಗಿರುತ್ತಿದ್ದೆವು’ ಎಂದು ನೀವು ಹೇಳಬಹುದು ಎಂಬುದರಿಂದ. ಆದ್ದರಿಂದ ಈಗ ನಿಮಗೆ ನಿಮ್ಮ ರಬ್‌‌ನ ವತಿಯಿಂದ ಸ್ಪಷ್ಟವಾದ ಪ್ರಮಾಣವೂ, ಮಾರ್ಗದರ್ಶಿಯೂ, ಕಾರುಣ್ಯವೂ ಬಂದಿದೆ. ಇದರ ಬಳಿಕವೂ ಅಲ್ಲಾಹುವಿನ ದೃಷ್ಟಾಂತಗಳನ್ನು ನಿಷೇಧಿಸುವವನು ಮತ್ತು ಅದರಿಂದ ವಿಮುಖನಾಗುವವನು ಯಾರೋ ಅವನಿಗಿಂತಲೂ ದೊಡ್ಡ ಅಕ್ರಮಿ ಇನ್ನಾರಿರುವನು? ನಮ್ಮ ದೃಷ್ಟಾಂತಗಳಿಂದ ವಿಮುಖರಾಗುವವರಿಗೆ ಅವರು ವಿಮುಖರಾಗಿರುವುದರ ಪ್ರತಿಫಲವಾಗಿ ನಾವು ಹೀನ ಶಿಕ್ಷೆಯನ್ನು ನೀಡುವೆವು.

(158) ಅವರ ಬಳಿಗೆ ಮಲಕ್‍ಗಳು ಬರುವುದನ್ನು ಅಥವಾ ಸ್ವತಃ ತಮ್ಮ ರಬ್ ಬರುವುದನ್ನು ಅಥವಾ ತಮ್ಮ ರಬ್‌‌ನ ವತಿಯಿಂದ ಯಾವುದಾದರೂ ಒಂದು ದೃಷ್ಟಾಂತವು ಬರುವುದನ್ನು ಹೊರತು ಅವರು ಇನ್ನೇನನ್ನು ಕಾಯುತ್ತಿರುವರು?(213) ತಮ್ಮ ರಬ್‌‌ನ ಕೆಲವು ದೃಷ್ಟಾಂತಗಳು ಬರುವ ದಿನದಂದು ಅದಕ್ಕಿಂತ ಮುಂಚೆ ವಿಶ್ವಾಸವಿಟ್ಟಿರುವವನ ಅಥವಾ ವಿಶ್ವಾಸದೊಂದಿಗೆ ಏನಾದರೂ ಒಳಿತನ್ನು ಮಾಡಿಟ್ಟಿರುವವನ ವಿನಾ ಯಾರಿಗೂ ಅವನ ವಿಶ್ವಾಸವು ಪ್ರಯೋಜನಕಾರಿಯಾಗದು. ಹೇಳಿರಿ: ‘ನೀವು ಕಾಯುತ್ತಿರಿ, ನಾವೂ ಕಾಯುತ್ತಿರುವೆವು.’
213. ಹೃದಯವನ್ನು ಬಡಿದೆಬ್ಬಿಸುವಂತಹ ದೃಷ್ಟಾಂತಗಳೊಂದಿಗೆ ಅಲ್ಲಾಹು ಪ್ರವಾದಿಗಳನ್ನು ಕಳುಹಿಸಿರುವನು. ಪ್ರವಾದಿ ಮುಹಮ್ಮದ್(ಸ) ರವರ ಮೂಲಕ ಅವತೀರ್ಣಗೊಂಡ ದೃಷ್ಟಾಂತಗಳ ಪೈಕಿ ಅತಿ ಪ್ರಮುಖವಾದುದು ಅಪೌರುಷೇಯ ಗ್ರಂಥವಾಗಿರುವ ಈ ಕುರ್‌ಆನ್ ಆಗಿದೆ. ಆದರೆ ಯಾವುದೇ ದೃಷ್ಟಾಂತವನ್ನು ಕಂಡರೂ ಅದು ಮಾಂತ್ರಿಕತೆಯಾಗಿದೆ ಎನ್ನುತ್ತಾ ವಿರೋಧಿಗಳು ಅದನ್ನು ತಿರಸ್ಕರಿಸುತ್ತಿದ್ದರು. ಇವಾವುದೂ ದೃಷ್ಟಾಂತಗಳಲ್ಲ. ಸ್ಪಷ್ಟವೂ ಅನಿಷೇಧ್ಯವೂ ಆಗಿರುವ ದೃಷ್ಟಾಂತವನ್ನು ತನ್ನಿರಿ’ ಎಂದು ಹಟಹಿಡಿಯುತ್ತಿದ್ದರು. ಈ ಸೂಕ್ತಿಯು ಇದಕ್ಕಿರುವ ಉತ್ತರವಾಗಿದೆ. ತಮ್ಮನ್ನು ಸ್ತಬ್ಧಗೊಳಿಸುವ (ಮರಣ ಅಥವಾ ಅಂತ್ಯದಿನ) ದೃಷ್ಟಾಂತವನ್ನು ಕಾಣುವಾಗ ಅವರು ವಿಶ್ವಾಸವಿಟ್ಟರೆ, ಅದು ಗತ್ಯಂತರವಿಲ್ಲದೆ ಇಡುವ ವಿಶ್ವಾಸವಾಗಿರುವುದರಿಂದ ಆ ವಿಶ್ವಾಸವನ್ನು ಅಲ್ಲಾಹು ಪರಿಗಣಿಸುವುದಿಲ್ಲವೆಂದು ಈ ಸೂಕ್ತಿಯು ಸ್ಪಷ್ಟಪಡಿಸುತ್ತದೆ.

(159) ತಮ್ಮ ಧರ್ಮವನ್ನು ವಿಭಜನೆ ಮಾಡಿದವರು ಮತ್ತು ವಿವಿಧ ಬಣಗಳಾಗಿ ಮಾರ್ಪಟ್ಟವರು ಯಾರೋ ಅವರೊಂದಿಗೆ ತಮಗೆ ಯಾವುದೇ ಸಂಬಂಧವೂ ಇಲ್ಲ.(214) ಅವರ ವಿಷಯವು ಅಲ್ಲಾಹುವಿನೆಡೆಗೇ ಆಗಿದೆ. ಅವರು ಮಾಡುತ್ತಿದ್ದುದರ ಬಗ್ಗೆ ತರುವಾಯ ಅವನು ಅವರಿಗೆ ತಿಳಿಸಿಕೊಡುವನು.
214. ಈ ಸೂಕ್ತಿಯಲ್ಲಿ ಪ್ರತಿಪಾದಿಸಿರುವುದು ಅಲ್ಲಾಹುವಿನ ಏಕತ್ವಕ್ಕೂ, ಧರ್ಮದ ಅಖಂಡತೆಗೂ ವಿರುದ್ಧವಾಗಿರುವ ವಾದಗಳೊಂದಿಗೆ ವಿವಿಧ ಪಂಗಡಗಳಾಗಿ ಬೇರ್ಪಟ್ಟವರ ಕುರಿತಾಗಿದೆ. ಆದರೆ ಸಮುದಾಯದಲ್ಲಿ ಬಹುದೇವಾರಾಧನೆ ಮತ್ತು ಇಸ್ಲಾಮೇತರ ಸಂಪ್ರದಾಯಗಳು ಬೆಳೆದು ಬರುವಾಗ ಅದನ್ನು ಖಂಡಿಸುವುದಕ್ಕಾಗಿ ಸಂಘಟಿತರಾಗುವವರು ಆಕ್ಷೇಪಾರ್ಹರಲ್ಲ. ಅವರು ಮಾಡುತ್ತಿರುವುದು ಒಂದು ಮಹಾ ಸೇವೆಯಾಗಿದೆ. ಪ್ರವಾದಿಗಳೆಲ್ಲರೂ ನಿರ್ವಹಿಸಿದ ಕರ್ತವ್ಯವು ಸಹ ಅದೇ ಆಗಿದೆ.

(160) ಯಾರು ಒಂದು ಒಳಿತನ್ನು ತರುವನೋ ಅವನಿಗೆ ಅದರ ಹತ್ತು ಪಟ್ಟು ಸಿಗುವುದು. ಯಾರು ಒಂದು ಕೆಡುಕನ್ನು ತರುವನೋ ಅವನಿಗೆ ಅದಕ್ಕೆ ಸಮಾನವಾಗಿರುವ ಪ್ರತಿಫಲವನ್ನಲ್ಲದೆ ನೀಡಲಾಗದು. ಅವರೊಂದಿಗೆ ಕಿಂಚಿತ್ತೂ ಅನ್ಯಾಯವೆಸಗಲಾಗದು.

(161) ಹೇಳಿರಿ: ‘ಖಂಡಿತವಾಗಿಯೂ ನನ್ನ ರಬ್ ನನ್ನನ್ನು ನೇರವಾದ ಮಾರ್ಗದೆಡೆಗೆ ಮುನ್ನಡೆಸಿರುವನು. ವಕ್ರತೆಯಿಲ್ಲದ ಧರ್ಮದೆಡೆಗೆ, ಋಜುಮಾರ್ಗದಲ್ಲಿ ನೆಲೆನಿಂತ ಇಬ್ರಾಹೀಮ್‍ರ ಮಾರ್ಗದೆಡೆಗೆ. ಅವರು ಬಹುದೇವವಿಶ್ವಾಸಿಗಳಲ್ಲಿ ಸೇರಿದವರಾಗಿರಲಿಲ್ಲ.’

(162) ಹೇಳಿರಿ: ‘ಖಂಡಿತವಾಗಿಯೂ ನನ್ನ ನಮಾಝ್, ನನ್ನ ಬಲಿಕರ್ಮಗಳು, ನನ್ನ ಜೀವನ ಮತ್ತು ನನ್ನ ಮರಣ ಸರ್ವಲೋಕಗಳ ರಬ್ಬಾದ ಅಲ್ಲಾಹುವಿಗಿರುವುದಾಗಿವೆ.

(163) ಅವನಿಗೆ ಸಹಭಾಗಿಗಳೇ ಇಲ್ಲ. ನನಗೆ ಆಜ್ಞಾಪಿಸಲಾಗಿರುವುದು ಇದನ್ನೇ ಆಗಿದೆ. (ಅವನಿಗೆ) ಶರಣಾಗುವವರ ಪೈಕಿ ನಾನು ಮೊದಲಿಗನಾಗಿರುವೆನು.’

(164) ಹೇಳಿರಿ: ‘ಅಲ್ಲಾಹು ಸರ್ವ ವಸ್ತುಗಳ ರಬ್ಬಾಗಿರುವಾಗ ನಾನು ಅವನ ಹೊರತು ಇತರರನ್ನು ರಬ್ ಆಗಿ ಅರಸುವುದೇ?’ ಪ್ರತಿಯೊಬ್ಬನೂ ತಾನು ಮಾಡಿರುವ ಕರ್ಮಕ್ಕೆ ತಾನೇ ಹೊಣೆಗಾರನಾಗಿರುವನು. ಭಾರವನ್ನು ಹೊರುವ ಯಾರೂ ಇನ್ನೊಬ್ಬನ ಭಾರವನ್ನು ಹೊರಲಾರನು.(215) ತರುವಾಯ ನಿಮ್ಮ ಮರಳುವಿಕೆಯು ನಿಮ್ಮ ರಬ್‌‌ನೆಡೆಗಾಗಿದೆ. ಯಾವ ವಿಷಯದಲ್ಲಿ ನೀವು ಭಿನ್ನರಾಗಿದ್ದಿರೋ ಅದರ ಬಗ್ಗೆ ಆಗ ಅವನು ನಿಮಗೆ ತಿಳಿಸಿಕೊಡುವನು.
215. ಯಾರ ಪಾಪಭಾರವನ್ನೂ ಇನ್ನೊಬ್ಬನು ಹೊರಲಾರನು.

(165) ನಿಮ್ಮನ್ನು ಭೂಮಿಯಲ್ಲಿ ಉತ್ತರಾಧಿಕಾರಿಗಳನ್ನಾಗಿ ಮಾಡಿದವನು ಅವನಾಗಿರುವನು. ಅವನು ನಿಮಗೆ ಏನನ್ನು ದಯಪಾಲಿಸಿರುವನೋ ಅದರಲ್ಲಿ ನಿಮ್ಮನ್ನು ಪರೀಕ್ಷಿಸುವ ಸಲುವಾಗಿ ನಿಮ್ಮ ಪೈಕಿ ಕೆಲವರ ಪದವಿಗಳನ್ನು ಇತರ ಕೆಲವರಿಗಿಂತಲೂ ಉನ್ನತಗೊಳಿಸಿರುವನು. ಖಂಡಿತವಾಗಿಯೂ ತಮ್ಮ ರಬ್ ವೇಗವಾಗಿ ಶಿಕ್ಷಾಕ್ರಮಗಳನ್ನು ಕೈಗೊಳ್ಳುವವನಾಗಿರುವನು. ಖಂಡಿತವಾಗಿಯೂ ಅವನು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.