(1) ಓ ಸತ್ಯವಿಶ್ವಾಸಿಗಳೇ! ನನ್ನ ಶತ್ರುವೂ, ನಿಮ್ಮ ಶತ್ರುವೂ ಆಗಿರುವ ಜನರೊಂದಿಗೆ ಮೈತ್ರಿ ಮಾಡಿಕೊಂಡು ನೀವು ಅವರನ್ನು ಮಿತ್ರರನ್ನಾಗಿ ಮಾಡಿಕೊಳ್ಳದಿರಿ. ನಿಮ್ಮ ಬಳಿಗೆ ಬಂದಿರುವ ಸತ್ಯವನ್ನು ಅವರು ನಿಷೇಧಿಸಿರುವರು. ನೀವು ನಿಮ್ಮ ರಬ್ ಆಗಿರುವ ಅಲ್ಲಾಹುವಿನಲ್ಲಿ ವಿಶ್ವಾಸವಿಡುತ್ತಿರುವಿರಿ ಎಂಬುದರಿಂದಾಗಿ ಅವರು ಸಂದೇಶವಾಹಕರನ್ನೂ, ನಿಮ್ಮನ್ನೂ ಊರಿನಿಂದ ಹೊರಗಟ್ಟುತ್ತಿರುವರು. ನನ್ನ ಮಾರ್ಗದಲ್ಲಿ ಯುದ್ಧ ಮಾಡಲು ಮತ್ತು ನನ್ನ ಸಂತೃಪ್ತಿಯನ್ನು ಅರಸಲು ನೀವು ಹೊರಟಿರುವುದಾದರೆ (ಅವರೊಂದಿಗೆ ಮೈತ್ರಿ ಮಾಡದಿರಿ). ನೀವು ಅವರೊಂದಿಗೆ ಗುಪ್ತವಾಗಿ ಮೈತ್ರಿ ಮಾಡುತ್ತಿರುವಿರಿ. ನೀವು ಮರೆಮಾಚುವುದನ್ನೂ, ಬಹಿರಂಗಪಡಿಸುವುದನ್ನೂ ನಾನು ಚೆನ್ನಾಗಿ ಅರಿಯುತ್ತಿರುವೆನು. ನಿಮ್ಮ ಪೈಕಿ ಯಾರಾದರೂ ಹಾಗೆ ಮಾಡಿದರೆ ಅವನು ನೇರ ಮಾರ್ಗದಿಂದ ಪಥಭ್ರಷ್ಟಗೊಂಡಿರುವನು.
(2) ಅವರು ನಿಮ್ಮನ್ನು ಸಂಧಿಸುವುದಾದರೆ ಅವರು ನಿಮ್ಮ ಶತ್ರುಗಳಾಗಿರುವರು. ಅವರು ಕೆಟ್ಟ ಉದ್ದೇಶದೊಂದಿಗೆ ನಿಮ್ಮ ವಿರುದ್ಧ ತಮ್ಮ ಕೈಗಳನ್ನು ಮತ್ತು ನಾಲಗೆಗಳನ್ನು ಚಾಚುತ್ತಿರುವರು ಮತ್ತು ‘ನೀವು ಅವಿಶ್ವಾಸಿಗಳಾಗುತ್ತಿದ್ದರೆ’ ಎಂದು ಅವರು ಆಶಿಸುವರು.
(3) ಪುನರುತ್ಥಾನ ದಿನದಂದು ನಿಮ್ಮ ರಕ್ತ ಸಂಬಂಧಗಳಾಗಲಿ, ನಿಮ್ಮ ಸಂತತಿಗಳಾಗಲಿ ನಿಮ್ಮ ಪ್ರಯೋಜನಕ್ಕೆ ಬರದು. ಅವನು ನಿಮ್ಮನ್ನು ಪರಸ್ಪರ ಬೇರ್ಪಡಿಸುವನು.(1237) ಅಲ್ಲಾಹು ನೀವು ಮಾಡುತ್ತಿರುವುದನ್ನು ವೀಕ್ಷಿಸುವವನಾಗಿರುವನು.
1237. ನಿಮ್ಮ ರಕ್ತ ಸಂಬಂಧಗಳಾಗಲಿ, ನಿಮ್ಮ ಸಂತತಿಗಳಾಗಲಿ ನಿಮಗೆ ಪ್ರಯೋಜನ ನೀಡದು. ಪುನರುತ್ಥಾನ ದಿನದಂದು ಅಲ್ಲಾಹು ನಿಮ್ಮ ಮಧ್ಯೆ ತೀರ್ಪು ನೀಡುವನು -ಹೀಗೂ ಈ ಸೂಕ್ತಿಯನ್ನು ಅರ್ಥೈಸಿಕೊಳ್ಳಬಹುದು.
(4) ನಿಮಗೆ ಇಬ್ರಾಹೀಮ್‌ರಲ್ಲಿ ಮತ್ತು ಅವರ ಜೊತೆಗಿದ್ದವರಲ್ಲಿ ಒಂದು ಉತ್ತಮ ಮಾದರಿಯಿದೆ. ಅವರು ತಮ್ಮ ಜನರೊಂದಿಗೆ ಹೇಳಿದ ಸಂದರ್ಭ: ‘ಖಂಡಿತವಾಗಿಯೂ ನಾವು ನಿಮ್ಮಿಂದ ಮತ್ತು ಅಲ್ಲಾಹುವಿನ ಹೊರತು ನೀವು ಆರಾಧಿಸುತ್ತಿರುವವುಗಳಿಂದ ಸಂಪೂರ್ಣ ವಿಮುಕ್ತರಾಗಿರುವೆವು. ನಾವು ನಿಮ್ಮಲ್ಲಿ ಅವಿಶ್ವಾಸವಿಟ್ಟಿರುವೆವು. ನೀವು ಅಲ್ಲಾಹುವಿನಲ್ಲಿ ಮಾತ್ರ ವಿಶ್ವಾಸವಿಡುವ ತನಕ ಎಂದೆಂದಿಗೂ ನಮ್ಮ ಮತ್ತು ನಿಮ್ಮ ನಡುವೆ ಶತ್ರುತ್ವ ಹಾಗೂ ವಿದ್ವೇಷವು ಬಹಿರಂಗವಾಗಿಬಿಟ್ಟಿದೆ’.(1238) ಖಂಡಿತವಾಗಿಯೂ ನಾನು ತಮಗೋಸ್ಕರ ಪಾಪಮುಕ್ತಿ ಬೇಡುವೆನು ಮತ್ತು ತಮಗಾಗಿ ಅಲ್ಲಾಹುವಿನಿಂದ ಏನನ್ನೂ ಸ್ವಾಧೀನಪಡಿಸಲು ನನಗೆ ಸಾಧ್ಯವಿಲ್ಲ ಎಂದು ಇಬ್ರಾಹೀಮ್ ತಮ್ಮ ತಂದೆಯೊಂದಿಗೆ ಹೇಳಿದ ಮಾತಿನ ಹೊರತು.(1239) (ಅವರು ಪ್ರಾರ್ಥಿಸಿದರು): ‘ನಮ್ಮ ಪ್ರಭೂ! ನಾವು ನಿನ್ನ ಮೇಲೆ ಭರವಸೆಯಿಟ್ಟಿರುವೆವು ಮತ್ತು ನಾವು ನಿನ್ನೆಡೆಗೆ ಮರಳಿರುವೆವು. ಮರಳುವಿಕೆಯು ನಿನ್ನೆಡೆಗೇ ಆಗಿದೆ.
1238. ಸತ್ಯವಿಶ್ವಾಸಿಗಳೊಂದಿಗೆ ಶತ್ರುಗಳಂತೆ ವರ್ತಿಸುವವರೊಂದಿಗೆ ಮಾತ್ರ ಶತ್ರುತ್ವ ತೋರಿಸಬೇಕು, ಮುಸ್ಲಿಮರೊಂದಿಗೆ ಶಾಂತಿಯುತವಾಗಿ ಸಹಬಾಳ್ವೆ ನಡೆಸಲು ಆಶಿಸುವವರೊಂದಿಗೆ ಮುಸ್ಲಿಮರು ಶಾಂತಿಯುತವಾಗಿ ವರ್ತಿಸಬೇಕೆಂದು ಕುರ್‌ಆನಿನ 8:60-61 ಸೂಕ್ತಿಗಳಲ್ಲಿ ಹೇಳಲಾಗಿದೆ. ಈ ಅಧ್ಯಾಯದ 8, 9 ಸೂಕ್ತಿಗಳನ್ನೂ ನೋಡಿರಿ. 1239. ಇಬ್ರಾಹೀಮ್(ಅ) ತನ್ನ ತಂದೆಗೆ ಮಾತು ಕೊಟ್ಟ ಕಾರಣದಿಂದಾಗಿ ಅವರಿಗೆ ಪಾಪಮುಕ್ತಿಯನ್ನು ಬೇಡಿದ್ದರು. ಆದರೆ ಮುಸ್ಲಿಮರು ಈ ಮಾದರಿಯನ್ನು ಸ್ವೀಕರಿಸಿ ಅವಿಶ್ವಾಸಿಗಳಾದ ಹೆತ್ತವರಿಗೋಸ್ಕರ ಪ್ರಾರ್ಥಿಸಕೂಡದೆಂದು ಇದರಿಂದ ಗ್ರಹಿಸಬಹುದು.
(5) ನಮ್ಮ ಪ್ರಭೂ! ನಮ್ಮನ್ನು ಸತ್ಯನಿಷೇಧಿಗಳ ಪರೀಕ್ಷೆಗೆ ಬಲಿಯಾಗಿಸದಿರು. ನಮ್ಮ ಪ್ರಭೂ! ನಮ್ಮನ್ನು ಕ್ಷಮಿಸು. ಖಂಡಿತವಾಗಿಯೂ ನೀನು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವೆ’.
(6) ಖಂಡಿತವಾಗಿಯೂ ನಿಮಗೆ -ಅಲ್ಲಾಹುವನ್ನು ಮತ್ತು ಅಂತ್ಯದಿನವನ್ನು ಆಶಿಸುವವರಿಗೆ- ಅವರಲ್ಲಿ ಉತ್ತಮ ಮಾದರಿಯಿದೆ. ಯಾರಾದರೂ ವಿಮುಖನಾಗುವುದಾದರೆ ಖಂಡಿತವಾಗಿಯೂ ಅಲ್ಲಾಹು ನಿರಪೇಕ್ಷನೂ ಸ್ತುತ್ಯರ್ಹನೂ ಆಗಿರುವನು.
(7) ನಿಮ್ಮ ಮತ್ತು ಅವರ ಪೈಕಿ ನೀವು ಶತ್ರುತ್ವ ಹೊಂದಿರುವವರ ನಡುವೆ ಅಲ್ಲಾಹು ಮೈತ್ರಿಯನ್ನು ಸ್ಥಾಪಿಸಲೂಬಹುದು. ಅಲ್ಲಾಹು ಸಾಮರ್ಥ್ಯವುಳ್ಳವನಾಗಿರುವನು. ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(8) ಧರ್ಮದ ವಿಷಯದಲ್ಲಿ ನಿಮ್ಮೊಂದಿಗೆ ಯುದ್ಧ ಮಾಡದವರು ಮತ್ತು ನಿಮ್ಮ ಮನೆಗಳಿಂದ ನಿಮ್ಮನ್ನು ಹೊರಗಟ್ಟದವರು ಯಾರೋ ಅವರಿಗೆ ನೀವು ಒಳಿತು ಮಾಡುವುದನ್ನು ಮತ್ತು ಅವರೊಂದಿಗೆ ನ್ಯಾಯಪಾಲಿಸುವುದನ್ನು ಅಲ್ಲಾಹು ನಿಮಗೆ ವಿರೋಧಿಸುವುದಿಲ್ಲ. ಖಂಡಿತವಾಗಿಯೂ ಅಲ್ಲಾಹು ನ್ಯಾಯ ಪಾಲಿಸುವವರನ್ನು ಇಷ್ಟಪಡುವನು.
(9) ಅಲ್ಲಾಹು ವಿರೋಧಿಸುವುದು ಧರ್ಮದ ವಿಷಯದಲ್ಲಿ ನಿಮ್ಮೊಂದಿಗೆ ಯುದ್ಧ ಮಾಡಿದವರು, ನಿಮ್ಮ ಮನೆಗಳಿಂದ ನಿಮ್ಮನ್ನು ಹೊರಗಟ್ಟಿದವರು ಮತ್ತು ನಿಮ್ಮನ್ನು ಹೊರಗಟ್ಟುವುದರಲ್ಲಿ ಪರಸ್ಪರ ಸಹಕರಿಸಿದವರು ಯಾರೋ ಅವರೊಂದಿಗೆ ಮೈತ್ರಿ ಮಾಡುವುದನ್ನು ಮಾತ್ರವಾಗಿದೆ. ಯಾರಾದರೂ ಅವರೊಂದಿಗೆ ಮೈತ್ರಿ ಮಾಡಿಕೊಂಡರೆ ಅವರೇ ಅಕ್ರಮಿಗಳಾಗಿರುವರು.
(10) ಓ ಸತ್ಯವಿಶ್ವಾಸಿಗಳೇ! ವಿಶ್ವಾಸಿನಿಯರಾದ ಸ್ತ್ರೀಯರು ಅಭಯಾರ್ಥಿಗಳಾಗಿ ನಿಮ್ಮ ಬಳಿಗೆ ಬಂದರೆ ಅವರನ್ನು ಪರೀಕ್ಷಿಸಿರಿ. ಅವರ ವಿಶ್ವಾಸದ ಬಗ್ಗೆ ಅಲ್ಲಾಹು ಚೆನ್ನಾಗಿ ಅರಿತಿರುವನು. ತರುವಾಯ ಅವರು ವಿಶ್ವಾಸಿನಿಯರೆಂದು ನಿಮಗೆ ಮನದಟ್ಟಾದರೆ ಅವರನ್ನು ಸತ್ಯನಿಷೇಧಿಗಳ ಬಳಿಗೆ ಮರಳಿ ಕಳುಹಿಸದಿರಿ. ಆ ಸ್ತ್ರೀಯರು ಅವರಿಗೆ ಧರ್ಮಸಮ್ಮತರಲ್ಲ. ಅವರು ಆ ಸ್ತ್ರೀಯರಿಗೂ ಧರ್ಮಸಮ್ಮತರಲ್ಲ. ಅವರಿಗೆ(1240) ಅವರು ವ್ಯಯಿಸಿರುವುದನ್ನು ನೀಡಿರಿ. ನೀವು ಆ ಸ್ತ್ರೀಯರಿಗೆ ಅವರ ಪ್ರತಿಫಲವನ್ನು ನೀಡಿದರೆ ಅವರನ್ನು ವರಿಸುವುದರಲ್ಲಿ ನಿಮ್ಮ ಮೇಲೆ ದೋಷವಿಲ್ಲ. ಅವಿಶ್ವಾಸಿನಿಯರೊಂದಿಗಿನ ವಿವಾಹ ಸಂಬಂಧದಲ್ಲಿ ನೀವು ಗಟ್ಟಿಯಾಗಿ ನಿಲ್ಲದಿರಿ.(1241) ನೀವೇನನ್ನು ವ್ಯಯಿಸಿರುವಿರೋ ಅದನ್ನು ಕೇಳಿ ಪಡೆಯಿರಿ.(1242) ಅವರು ಏನನ್ನು ವ್ಯಯಿಸಿರುವರೋ ಅದನ್ನು ಅವರೂ ಕೇಳಿ ಪಡೆಯಲಿ. ಅದು ಅಲ್ಲಾಹುವಿನ ನಿಯಮವಾಗಿದೆ. ಅವನು ನಿಮ್ಮ ಮಧ್ಯೆ ತೀರ್ಪು ನೀಡುವನು. ಅಲ್ಲಾಹು ಸರ್ವಜ್ಞನೂ ಯುಕ್ತಿಪೂರ್ಣನೂ ಆಗಿರುವನು.
1240. ವಿವಾಹಿತೆಯಾದ ಓರ್ವ ಮುಸ್ಲಿಮೇತರ ಸ್ತ್ರೀ ಇಸ್ಲಾಮ್ ಸ್ವೀಕರಿಸಿ ಅವಿಶ್ವಾಸಿ ಸಮುದಾಯದಿಂದ ಮುಸ್ಲಿಮ್ ಸಮುದಾಯಕ್ಕೆ ಬಂದರೆ ಏನು ಮಾಡಬೇಕೆಂದು ಇಲ್ಲಿ ಹೇಳಲಾಗಿದೆ. ಅವಳನ್ನು ಅವಿಶ್ವಾಸಿಗಳ ಕಡೆಗೆ ಮರಳಿ ಕಳುಹಿಸಬಾರದು. ಇಸ್ಲಾಮ್ ಸ್ವೀಕರಿಸಿದ ಓರ್ವ ಸ್ತ್ರೀ ಓರ್ವ ಸತ್ಯನಿಷೇಧಿಯ ಪತ್ನಿಯಾಗಿ ಮುಂದುವರಿಯಕೂಡದು. ಆದರೆ ಅವಿಶ್ವಾಸಿಯಾದ ಪತಿ ಆಕೆಗೆ ನೀಡಿದ ವಧುದಕ್ಷಿಣೆಯನ್ನು (ಮಹ್ರ್) ಮುಸ್ಲಿಮರು ಅವನಿಗೆ ಹಿಂದಿರುಗಿಸಬೇಕು. ಇದ್ದಃ ಕಳೆದ ನಂತರ ನ್ಯಾಯಬದ್ಧವಾದ ಮಹ್ರ್ ನೀಡಿ ಯಾವುದೇ ಮುಸ್ಲಿಮನಿಗೂ ಆಕೆಯನ್ನು ವರಿಸಬಹುದಾಗಿದೆ. 1241. ಇಸ್ಲಾಮ್ ಸ್ವೀಕರಿಸಿದ ಓರ್ವ ವ್ಯಕ್ತಿ ಅವಿಶ್ವಾಸಿಯಾದ ಸ್ತ್ರೀಯೊಂದಿಗೆ ದಾಂಪತ್ಯ ಸಂಬಂಧವನ್ನು ಮುಂದುವರಿಸಕೂಡದು.
1242. ಮುಸ್ಲಿಮರ ಪತ್ನಿಯರ ಪೈಕಿ ಯಾರಾದರೂ ಅವಿಶ್ವಾಸಿಯಾಗಿ, ಅವಿಶ್ವಾಸಿಗಳ ಪತ್ನಿಯರಾಗಿ ಬಿಟ್ಟರೆ ಮೊದಲ ಪತಿ ನೀಡಿದ ಮಹ್ರನ್ನು ಅವಿಶ್ವಾಸಿಗಳಿಂದ ವಸೂಲು ಮಾಡುವ ಹಕ್ಕು ಮುಸ್ಲಿಮರಿಗಿರುತ್ತದೆ.
(11) ನಿಮ್ಮ ಪತ್ನಿಯರ ಪೈಕಿ ಯಾರಾದರೂ ಸತ್ಯನಿಷೇಧಿಗಳ ಕಡೆಗೆ ಹೋಗಿ ಅವರು ನಿಮಗೆ ನಷ್ಟವಾದರೆ, ತರುವಾಯ ನೀವು ಕ್ರಮಕೈಗೊಳ್ಳುವುದಾದರೆ, ಯಾರ ಪತ್ನಿಯರು ನಷ್ಟವಾಗಿರುವರೋ, ಅವರಿಗೆ ಅವರು ವ್ಯಯಿಸಿದ ಮೊತ್ತ (ಮಹ್ರ್)ದಂತಿರುವುದನ್ನು ನೀಡಿರಿ. ಯಾವ ಅಲ್ಲಾಹುವಿನಲ್ಲಿ ನೀವು ವಿಶ್ವಾಸವಿಡುತ್ತಿರುವಿರೋ ಅವನನ್ನು ಭಯಪಡಿರಿ.
(12) ಓ ಪ್ರವಾದಿಯವರೇ! ‘ಅಲ್ಲಾಹುವಿನೊಂದಿಗೆ ಯಾವುದನ್ನೂ ಸಹಭಾಗಿತ್ವ ಮಾಡಲಾರೆವು, ಕಳ್ಳತನ ಮಾಡಲಾರೆವು, ವ್ಯಭಿಚಾರ ಮಾಡಲಾರೆವು, ತಮ್ಮ ಮಕ್ಕಳನ್ನು ವಧಿಸಲಾರೆವು, ತಮ್ಮ ಕೈಕಾಲುಗಳ ಮಧ್ಯೆ ಸುಳ್ಳಾರೋಪವನ್ನು ಹೊರಿಸಲಾರೆವು(1243) ಮತ್ತು ಯಾವುದೇ ಸತ್ಕರ್ಮದಲ್ಲೂ ತಮ್ಮೊಂದಿಗೆ ಅವಿಧೇಯತೆ ತೋರಲಾರೆವು’ ಎಂದು ಪ್ರತಿಜ್ಞೆ ಮಾಡುತ್ತಾ ಸತ್ಯವಿಶ್ವಾಸಿನಿಯರು ತಮ್ಮ ಬಳಿಗೆ ಬಂದರೆ ತಾವು ಅವರ ಪ್ರತಿಜ್ಞೆಯನ್ನು ಸ್ವೀಕರಿಸಿರಿ ಮತ್ತು ಅವರಿಗಾಗಿ ಅಲ್ಲಾಹುವಿನೊಂದಿಗೆ ಪಾಪಮುಕ್ತಿಯನ್ನು ಬೇಡಿರಿ. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
1243. ವ್ಯಭಿಚಾರದ ಮೂಲಕ ಗರ್ಭಿಣಿಯಾಗಿ ಅದನ್ನು ಪತಿಯ ಮೇಲೆ ಆರೋಪಿಸುವ ಸ್ತ್ರೀಯರ ಕಡೆಗಿರುವ ಸೂಚನೆ.
(13) ಓ ಸತ್ಯವಿಶ್ವಾಸಿಗಳೇ! ಅಲ್ಲಾಹು ಕ್ರೋಧಗೊಂಡಿರುವ ಒಂದು ಜನತೆಯೊಂದಿಗೆ ನೀವು ಮೈತ್ರಿ ಮಾಡದಿರಿ. ಗೋರಿಗಳಲ್ಲಿರುವವರ ಬಗ್ಗೆ ಸತ್ಯನಿಷೇಧಿಗಳು ನಿರಾಶರಾದಂತೆ ಪರಲೋಕದ ಬಗ್ಗೆ ಅವರು ನಿರಾಶರಾಗಿರುವರು.