61 - As-Saff ()

|

(1) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವವುಗಳು ಅಲ್ಲಾಹುವಿನ ಕೀರ್ತನೆ ಮಾಡಿವೆ. ಅವನು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.

(2) ಓ ಸತ್ಯವಿಶ್ವಾಸಿಗಳೇ! ನೀವು ಮಾಡದಿರುವುದನ್ನು ನೀವು ಏಕೆ ಹೇಳುತ್ತಿರುವಿರಿ?

(3) ನೀವು ಮಾಡದಿರುವುದನ್ನು ನೀವು ಹೇಳುವುದು ಅಲ್ಲಾಹುವಿನ ಬಳಿ ಮಹಾ ಕ್ರೋಧಕ್ಕೆ ಕಾರಣವಾಗುತ್ತದೆ.

(4) (ಇಟ್ಟಿಗೆಗಳನ್ನು) ಸದೃಢವಾಗಿ ಜೋಡಿಸಲಾಗಿರುವ ಒಂದು ಗೋಡೆಯಂತೆ ಸಾಲು ಸಾಲಾಗಿ ನಿಂತು ತನ್ನ ಮಾರ್ಗದಲ್ಲಿ ಯುದ್ಧ ಮಾಡುವವರನ್ನು ಅಲ್ಲಾಹು ಖಂಡಿತವಾಗಿಯೂ ಇಷ್ಟಪಡುವನು.

(5) ಮೂಸಾ ತಮ್ಮ ಜನತೆಯೊಂದಿಗೆ ಹೇಳಿದ ಸಂದರ್ಭ: ‘ಓ ನನ್ನ ಜನರೇ! ನೀವೇಕೆ ನನಗೆ ಕಿರುಕುಳ ಕೊಡುತ್ತಿರುವಿರಿ? ನಾನು ನಿಮ್ಮೆಡೆಗೆ ಕಳುಹಿಸಲಾಗಿರುವ ಅಲ್ಲಾಹುವಿನ ಸಂದೇಶವಾಹಕನಾಗಿರುವೆನು ಎಂಬುದನ್ನು ನೀವು ಅರಿತಿರುವಿರಿ!’ ತರುವಾಯ ಅವರು ಜಾರಿ ಹೋದಾಗ ಅಲ್ಲಾಹು ಅವರ ಹೃದಯಗಳನ್ನು ಜಾರುವಂತೆ ಮಾಡಿದನು. ಅಲ್ಲಾಹು ಧಿಕ್ಕಾರಿಗಳಾದ ಜನರನ್ನು ಸನ್ಮಾರ್ಗದಲ್ಲಿ ಸೇರಿಸಲಾರನು.

(6) ಮರ್ಯಮ್‍ರ ಪುತ್ರ ಈಸಾ ಹೇಳಿದ ಸಂದರ್ಭ: ‘ಓ ಇಸ್ರಾಈಲ್ ಸಂತತಿಗಳೇ! ನಾನು ನನಗಿಂತ ಮುಂಚಿನ ತೌರಾತನ್ನು ದೃಢೀಕರಿಸುವವನಾಗಿ ಮತ್ತು ನನ್ನ ನಂತರ ಬರುವ ಅಹ್ಮದ್ ಎಂಬ ಹೆಸರಿನ ಒಬ್ಬ ಸಂದೇಶವಾಹಕರ ಬಗ್ಗೆ(1244) ಶುಭವಾರ್ತೆ ತಿಳಿಸುವವನಾಗಿ ನಿಮ್ಮೆಡೆಗೆ ಕಳುಹಿಸಲಾಗಿರುವ ಅಲ್ಲಾಹುವಿನ ಸಂದೇಶವಾಹಕನಾಗಿರುವೆನು. ತರುವಾಯ ಅವರು ಸ್ಪಷ್ಟವಾದ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಾಗ ಅವರು ಹೇಳಿದರು: ‘ಇದು ಸ್ಪಷ್ಟವಾದ ಮಾಂತ್ರಿಕತೆಯಾಗಿದೆ’.
1244. ಅಹ್ಮದ್ ಎಂಬುದು ಪ್ರವಾದಿ(ಸ) ರವರ ಇನ್ನೊಂದು ಹೆಸರಾಗಿದೆ. ಅಹ್ಮದ್, ಮುಹಮ್ಮದ್ ಎಂಬೀ ಹೆಸರುಗಳ ಅರ್ಥ ಪ್ರಶಂಸನೀಯ ಎಂದಾಗಿದೆ. ಈಸಾ(ಅ) ರವರ (ಯೇಸುವಿನ) ನಂತರ ಬರುವ ಸಂದೇಶವಾಹಕರ ಬಗ್ಗೆ ಯೋಹಾನನ ಸುವಾರ್ತೆಯಲ್ಲಿ ಪ್ರಸ್ತಾಪಿಸಲಾದ ಪೆರಿಕ್ಲೀಟಸ್ ಎಂಬ ಗ್ರೀಕ್ ಪದದ ಅರ್ಥ ಕೂಡ ಇದೇ ಆಗಿದೆ.

(7) ತನ್ನನ್ನು ಇಸ್ಲಾಮಿನೆಡೆಗೆ ಆಹ್ವಾನಿಸಲಾಗುವಾಗ ಅಲ್ಲಾಹುವಿನ ಹೆಸರಲ್ಲಿ ಸುಳ್ಳನ್ನು ಹೆಣೆದವನಿಗಿಂತಲೂ ದೊಡ್ಡ ಅಕ್ರಮಿ ಇನ್ನಾರಿರುವನು? ಅಕ್ರಮಿಗಳಾಗಿರುವ ಜನರನ್ನು ಅಲ್ಲಾಹು ಸನ್ಮಾರ್ಗದಲ್ಲಿ ಸೇರಿಸಲಾರನು.

(8) ಅವರು ತಮ್ಮ ಬಾಯಿಯ ಮೂಲಕ ಅಲ್ಲಾಹುವಿನ ಪ್ರಕಾಶವನ್ನು ಊದಿ ನಂದಿಸಲು ಇಚ್ಛಿಸುತ್ತಿರುವರು. ಆದರೆ ಸತ್ಯನಿಷೇಧಿಗಳು ಅಸಹ್ಯಪಟ್ಟರೂ ಅಲ್ಲಾಹು ತನ್ನ ಪ್ರಕಾಶವನ್ನು ಪೂರ್ಣಗೊಳಿಸುವವನಾಗಿರುವನು.

(9) ಸನ್ಮಾರ್ಗ ಮತ್ತು ಸತ್ಯಧರ್ಮದೊಂದಿಗೆ, ಅದನ್ನು ಸರ್ವ ಧರ್ಮಗಳ ಮೇಲೂ ಪ್ರಕಟಗೊಳಿಸಿ ತೋರಿಸುವ ಸಲುವಾಗಿ ತನ್ನ ಸಂದೇಶವಾಹಕರನ್ನು ಕಳುಹಿಸಿದವನು ಅವನಾಗಿರುವನು. ಬಹುದೇವಾರಾಧಕರಿಗೆ (ಅದು) ಅಸಹ್ಯಕರವಾದರೂ ಸರಿಯೇ!

(10) ಓ ಸತ್ಯವಿಶ್ವಾಸಿಗಳೇ! ಯಾತನಾಮಯವಾದ ಶಿಕ್ಷೆಯಿಂದ ನಿಮ್ಮನ್ನು ಪಾರು ಮಾಡುವ ಒಂದು ವ್ಯಾಪಾರದ ಬಗ್ಗೆ ನಾನು ನಿಮಗೆ ತಿಳಿಸಿಕೊಡಲೇ?

(11) ನೀವು ಅಲ್ಲಾಹುವಿನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡಿರಿ. ಅಲ್ಲಾಹುವಿನ ಮಾರ್ಗದಲ್ಲಿ ನಿಮ್ಮ ಸಂಪತ್ತುಗಳ ಮೂಲಕ ಮತ್ತು ಶರೀರಗಳ ಮೂಲಕ ಹೋರಾಡಿರಿ. ಅದು ನಿಮಗೆ ಅತ್ಯುತ್ತಮವಾಗಿದೆ. ನೀವು ಅರಿವುಳ್ಳವರಾಗಿದ್ದರೆ.

(12) ಹಾಗಾದರೆ ಅವನು ನಿಮಗೆ ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಲ್ಲಿ ಮತ್ತು ಶಾಶ್ವತ ವಾಸಕ್ಕಾಗಿರುವ ಸ್ವರ್ಗೋದ್ಯಾನಗಳ ವಿಶಿಷ್ಟ ವಸತಿಗಳಲ್ಲಿ ಅವನು ನಿಮ್ಮನ್ನು ಪ್ರವೇಶ ಮಾಡಿಸುವನು. ಮಹಾ ವಿಜಯವು ಅದೇ ಆಗಿದೆ.

(13) ನೀವು ಇಷ್ಟಪಡುವ ಇನ್ನೊಂದನ್ನೂ (ಅವನು ನಿಮಗೆ ನೀಡುವನು). ಅದು ಅಲ್ಲಾಹುವಿನ ಕಡೆಯ ಸಹಾಯ ಮತ್ತು ಸನ್ನಿಹಿತವಾಗಿರುವ ವಿಜಯವಾಗಿದೆ. (ಓ ಪ್ರವಾದಿಯವರೇ!) ಸತ್ಯವಿಶ್ವಾಸಿಗಳಿಗೆ ಶುಭವಾರ್ತೆಯನ್ನು ತಿಳಿಸಿರಿ.

(14) ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವಿನ ಸಹಾಯಕರಾಗಿರಿ. ಮರ್ಯಮ್‍ರ ಪುತ್ರ ಈಸಾ ‘ಅಲ್ಲಾಹುವಿನೆಡೆಗಿರುವ ಮಾರ್ಗದಲ್ಲಿ ನನ್ನ ಸಹಾಯಕರಾಗಿ ಯಾರಿರುವಿರಿ?’ ಎಂದು ಹವಾರಿಗಳೊಂದಿಗೆ ಕೇಳಿದಂತೆ. ಹವಾರಿಗಳು ಹೇಳಿದರು: ‘ನಾವು ಅಲ್ಲಾಹುವಿನ ಸಹಾಯಕರಾಗಿರುವೆವು’. ಆಗ ಇಸ್ರಾಈಲ್ ಸಂತತಿಗಳಲ್ಲಿ ಸೇರಿದ ಒಂದು ಪಂಗಡವು ವಿಶ್ವಾಸವಿಟ್ಟಿತು ಹಾಗೂ ಮತ್ತೊಂದು ಪಂಗಡವು ನಿಷೇಧಿಸಿತು. ತರುವಾಯ ವಿಶ್ವಾಸವಿಟ್ಟವರಿಗೆ ಅವರ ಶತ್ರುಗಳ ವಿರುದ್ಧ ನಾವು ಬೆಂಬಲವನ್ನು ನೀಡಿದೆವು. ಹಾಗೆ ಅವರು ವಿಜಯಶಾಲಿಗಳಾದರು.