63 - Al-Munaafiqoon ()

|

(1) ಕಪಟವಿಶ್ವಾಸಿಗಳು ತಮ್ಮ ಬಳಿಗೆ ಬಂದರೆ ಅವರು ಹೇಳುವರು: ‘ಖಂಡಿತವಾಗಿಯೂ ತಾವು ಅಲ್ಲಾಹುವಿನ ಸಂದೇಶವಾಹಕರಾಗಿರುವಿರಿ ಎಂಬುದಕ್ಕೆ ನಾವು ಸಾಕ್ಷ್ಯ ವಹಿಸುವೆವು’. ಖಂಡಿತವಾಗಿಯೂ ತಾವು ಅಲ್ಲಾಹುವಿನ ಸಂದೇಶವಾಹಕರಾಗಿರುವಿರಿ ಎಂಬುದು ಅಲ್ಲಾಹುವಿಗೆ ತಿಳಿದಿದೆ. ಖಂಡಿತವಾಗಿಯೂ ಕಪಟವಿಶ್ವಾಸಿಗಳು ಸುಳ್ಳು ನುಡಿಯುವವರಾಗಿರುವರು ಎಂಬುದಕ್ಕೆ ಅಲ್ಲಾಹು ಸಾಕ್ಷ್ಯ ವಹಿಸುವನು.

(2) ಅವರು ತಮ್ಮ ಪ್ರತಿಜ್ಞೆಗಳನ್ನು ಒಂದು ಗುರಾಣಿಯನ್ನಾಗಿ ಮಾಡಿಕೊಂಡಿರುವರು.(1249) ಹೀಗೆ ಅವರು ಅಲ್ಲಾಹುವಿನ ಮಾರ್ಗದಿಂದ (ಜನರನ್ನು) ತಡೆದಿರುವರು. ಖಂಡಿತವಾಗಿಯೂ ಅವರು ಮಾಡುತ್ತಿರುವುದು ಅತಿ ನಿಕೃಷ್ಟವಾದುದಾಗಿದೆ.
1249. ಇಸ್ಲಾಮ್ ಮತ್ತು ಮುಸ್ಲಿಮರ ವಿರುದ್ಧ ಅನೇಕ ಪಿತೂರಿಗಳನ್ನು ರೂಪಿಸುತ್ತಿದ್ದ ಕಪಟವಿಶ್ವಾಸಿಗಳು ಆತ್ಮರಕ್ಷಣೆಗಾಗಿ ತಾವು ಸತ್ಯವಿಶ್ವಾಸಿಗಳು ಎಂದು ಆಣೆಯಿಟ್ಟು ಹೇಳುವುದು ಒಂದು ತಂತ್ರ ಮಾತ್ರವಾಗಿತ್ತು.

(3) ಅದು ಅವರು ಮೊದಲು ವಿಶ್ವಾಸವಿಟ್ಟು ತರುವಾಯ ನಿಷೇಧಿಸಿದರು ಎಂಬುದರಿಂದಾಗಿದೆ. ಆದ್ದರಿಂದ ಅವರ ಹೃದಯಗಳ ಮೇಲೆ ಮುದ್ರೆಯೊತ್ತಲಾಯಿತು. ತನ್ನಿಮಿತ್ತ ಅವರು (ವಿಷಯವನ್ನು) ಗ್ರಹಿಸಲಾರರು.

(4) ತಾವು ಅವರನ್ನು ಕಂಡರೆ ಅವರ ಶರೀರಗಳು ತಮ್ಮನ್ನು ಅಚ್ಚರಿಪಡಿಸುವುದು! ಅವರು ಮಾತನಾಡ ತೊಡಗಿದರೆ ತಾವು ಅವರ ಮಾತನ್ನು ಕೇಳುತ್ತಾ ಕೂರುವಿರಿ.(1250) ಅವರು ಒರಗಿ ನಿಲ್ಲಿಸಲಾದ ಮರದ ದಿಮ್ಮಿಗಳಂತಿರುವರು. ಪ್ರತಿಯೊಂದು ಸದ್ದೂ ತಮಗೆ ವಿರುದ್ಧವಾಗಿದೆಯೆಂದು ಅವರು ಭಾವಿಸುವರು.(1251) ಅವರೇ ವೈರಿಗಳು! ಆದ್ದರಿಂದ ಅವರ ಬಗ್ಗೆ ಎಚ್ಚರವಹಿಸಿರಿ. ಅಲ್ಲಾಹು ಅವರನ್ನು ನಾಶ ಮಾಡಲಿ. ಅವರನ್ನು ಹೇಗೆ ದಾರಿತಪ್ಪಿಸಲಾಗುತ್ತಿದೆ?
1250. ಕಪಟವಿಶ್ವಾಸಿಗಳು ದೈಹಿಕ ಸೌಷ್ಟವವುಳ್ಳವರೂ ಮತ್ತು ಸಮರ್ಥವಾಗಿ ಮಾತನಾಡುವ ಸಾಮರ್ಥ್ಯವುಳ್ಳವರೂ ಆಗಿದ್ದರು. 1251. ಕಪಟವಿಶ್ವಾಸಿಗಳು ಸದಾ ಭಯದಲ್ಲಿರುತ್ತಿದ್ದರು. ತಮ್ಮ ನಿಜಸ್ಥಿತಿಯನ್ನು ಯಾರಾದರೂ ಅರಿಯುತ್ತಿದ್ದಾರೆಯೇ ಎಂದು ಅವರು ಸದಾ ಮೈಯೆಲ್ಲಾ ಕಿವಿಯಾಗಿಸಿ ನಡೆಯುತ್ತಿದ್ದರು. ಆಗ ಅವರು ಆಲಿಸುವ ಕೆಲವು ಸದ್ದುಗಳನ್ನು ತಮಗೆ ವಿರುದ್ಧವಾಗಿದೆಯೆಂದು ಭಾವಿಸಿ ಅವರು ಆತಂಕಗೊಳ್ಳುತ್ತಿದ್ದರು.

(5) ‘ಬನ್ನಿರಿ. ಅಲ್ಲಾಹುವಿನ ಸಂದೇಶವಾಹಕರು ನಿಮಗೋಸ್ಕರ ಪಾಪಮುಕ್ತಿಯನ್ನು ಬೇಡುವರು’ ಎಂದು ಅವರೊಂದಿಗೆ ಹೇಳಲಾದರೆ ಅವರು ಅವರ ತಲೆಯನ್ನು ತಿರುಗಿಸುವರು. ಅವರು ಅಹಂಕಾರಪಡುತ್ತಾ ವಿಮುಖರಾಗಿ ಹೋಗುವುದನ್ನು ತಾವು ಕಾಣುವಿರಿ.

(6) ತಾವು ಅವರಿಗೋಸ್ಕರ ಪಾಪಮುಕ್ತಿಯನ್ನು ಬೇಡಿದರೂ ಅಥವಾ ಬೇಡದಿದ್ದರೂ ಅವರ ಪಾಲಿಗೆ ಅದು ಸಮಾನವಾಗಿದೆ. ಅಲ್ಲಾಹು ಎಂದಿಗೂ ಅವರನ್ನು ಕ್ಷಮಿಸಲಾರನು. ಖಂಡಿತವಾಗಿಯೂ ದುರ್ಮಾರ್ಗಿಗಳಾದ ಜನರನ್ನು ಅಲ್ಲಾಹು ಸನ್ಮಾರ್ಗದಲ್ಲಿ ಸೇರಿಸಲಾರನು.

(7) ‘ಅಲ್ಲಾಹುವಿನ ಸಂದೇಶವಾಹಕರ ಬಳಿಯಿರುವವರಿಗೆ, ಅವರು (ಅಲ್ಲಿಂದ) ಹೊರಟುಹೋಗುವ ತನಕ ನೀವು ಏನನ್ನೂ ವ್ಯಯಿಸದಿರಿ’ ಎಂದು ಹೇಳುವವರಾಗಿರುವರು ಅವರು.(1252) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಖಜಾನೆಗಳು ಅಲ್ಲಾಹುವಿನದ್ದಾಗಿವೆ. ಆದರೆ ಕಪಟವಿಶ್ವಾಸಿಗಳು ವಿಷಯವನ್ನು ಗ್ರಹಿಸುವುದಿಲ್ಲ.
1252. ಕಪಟವಿಶ್ವಾಸಿಗಳು ಅನ್ಸಾರ್‌ಗಳ ಬಳಿ ತೆರಳಿ ಅವರು ಮುಹಾಜಿರ್‌ಗಳಿಗೆ ಒದಗಿಸುತ್ತಿದ್ದ ಸಹಾಯವನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದರು.

(8) ಅವರು ಹೇಳುವರು: ‘ನಾವು ಮದೀನಕ್ಕೆ ಮರಳಿದರೆ ಹೆಚ್ಚು ಪ್ರತಾಪವಿರುವವರು ಕೀಳಾಗಿರುವವರನ್ನು ಖಂಡಿತವಾಗಿಯೂ ಹೊರಗಟ್ಟುವರು’.(1253) ಪ್ರತಾಪವಿರುವುದು ಅಲ್ಲಾಹುವಿಗೆ, ಅವನ ಸಂದೇಶವಾಹಕರಿಗೆ ಮತ್ತು ಸತ್ಯವಿಶ್ವಾಸಿಗಳಿಗಾಗಿದೆ. ಆದರೆ ಕಪಟವಿಶ್ವಾಸಿಗಳು (ವಿಷಯವನ್ನು) ಅರ್ಥ ಮಾಡಿಕೊಳ್ಳುವುದಿಲ್ಲ.
1253. ತಾವು ಪ್ರತಾಪಶಾಲಿಗಳಾಗಿರುವುದರಿಂದ ಬಲಹೀನರಾದ ಮುಸ್ಲಿಮರನ್ನು ಮದೀನದಿಂದ ಹೊರಗಟ್ಟಲು ತಮಗೆ ಸಾಧ್ಯವಿದೆಯೆಂದು ಕಪಟವಿಶ್ವಾಸಿಗಳು ಭಾವಿಸಿದ್ದರು. ಆದ್ದರಿಂದಲೇ ಅವರು ಮುಸ್ಲಿಮರ ಶತ್ರುಗಳೊಂದಿಗೆ ಸಂಚುಗಳಲ್ಲಿ ಭಾಗಿಯಾದರು. ಗುಪ್ತ ಮಾತುಕತೆಗಳಲ್ಲಿ ಅವರು ಈ ವಿಷಯವನ್ನು ಸ್ಪಷ್ಟವಾಗಿ ಹೇಳುತ್ತಿದ್ದರು. ‘ಮುರೈಸಿಅ್’ ಯುದ್ಧದಲ್ಲಿ ಅವರ ಮುಖಂಡ ಅಬ್ದುಲ್ಲಾಹ್ ಇಬ್ನ್ ಉಬಯ್ಯ್ ಈ ವಿಷಯವನ್ನು ಬಹಿರಂಗವಾಗಿ ಹೇಳಿದ್ದನು.

(9) ಓ ಸತ್ಯವಿಶ್ವಾಸಿಗಳೇ! ನಿಮ್ಮ ಸಂಪತ್ತು ಮತ್ತು ಸಂತತಿಗಳು ಅಲ್ಲಾಹುವಿನ ಸ್ಮರಣೆಯಿಂದ ನಿಮ್ಮನ್ನು ಅಲಕ್ಷ್ಯಗೊಳಿಸದಿರಲಿ. ಯಾರು ಹಾಗೆ ಮಾಡುವರೋ ಅವರೇ ನಷ್ಟ ಹೊಂದಿದವರಾಗಿರುವರು.

(10) ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಮರಣವು ಆಸನ್ನವಾಗುವುದಕ್ಕೆ ಮುಂಚಿತವಾಗಿ ನಾವು ನಿಮಗೆ ನೀಡಿರುವುದರಿಂದ ವ್ಯಯಿಸಿರಿ. ಆ ಸಮಯದಲ್ಲಿ ಅವನು ಹೇಳುವನು: ‘ನನ್ನ ಪ್ರಭೂ! ಸಮೀಪದ ಒಂದು ಅವಧಿಯವರೆಗೆ ನೀನೇಕೆ ನನಗೆ ಕಾಲಾವಕಾಶವನ್ನು ನೀಡಲಿಲ್ಲ? ಹಾಗಿದ್ದರೆ ನಾನು ದಾನಧರ್ಮ ಮಾಡುವವನಾಗುತ್ತಿದ್ದೆನು ಮತ್ತು ಸಜ್ಜನರಲ್ಲಿ ಸೇರಿದವನಾಗುತ್ತಿದ್ದೆನು’.

(11) ಯಾವುದೇ ಒಬ್ಬ ವ್ಯಕ್ತಿಯ ಅವಧಿಯು ಬಂದರೆ ತರುವಾಯ ಅಲ್ಲಾಹು ಅವನಿಗೆ ಎಂದಿಗೂ ಕಾಲಾವಕಾಶವನ್ನು ನೀಡಲಾರನು. ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹು ಸೂಕ್ಷ್ಮವಾಗಿ ಅರಿಯುವವನಾಗಿರುವನು.