65 - At-Talaaq ()

|

(1) ಓ ಪ್ರವಾದಿಯವರೇ! ನೀವು (ವಿಶ್ವಾಸಿಗಳು) ಸ್ತ್ರೀಯರನ್ನು ವಿಚ್ಛೇದಿಸುವುದಾದರೆ ಅವರನ್ನು ಅವರ ಇದ್ದಃ ಕಾಲಕ್ಕೆ (ಲೆಕ್ಕಹಾಕಿ) ವಿಚ್ಛೇದಿಸಿರಿ ಮತ್ತು ಇದ್ದಃ ಕಾಲವನ್ನು ಎಣಿಸಿಕೊಳ್ಳಿರಿ.(1257) ನಿಮ್ಮ ರಬ್ ಆದ ಅಲ್ಲಾಹುವನ್ನು ಭಯಪಡಿರಿ. ನೀವು ಅವರನ್ನು ಅವರ ಮನೆಗಳಿಂದ ಹೊರಗೆ ಕಳಿಸದಿರಿ ಮತ್ತು ಸ್ವತಃ ಅವರು ಹೊರಹೋಗದಿರಲಿ.(1258) ಅವರು ಪ್ರತ್ಯಕ್ಷವಾದ ಯಾವುದಾದರೂ ನೀಚಕೃತ್ಯವನ್ನು ಮಾಡುವ ಹೊರತು. ಇವು ಅಲ್ಲಾಹುವಿನ ನಿಯಮವ್ಯಾಪ್ತಿಗಳಾಗಿವೆ. ಅಲ್ಲಾಹುವಿನ ನಿಯಮವ್ಯಾಪ್ತಿಗಳನ್ನು ಯಾರಾದರೂ ಮೀರುವುದಾದರೆ ಅವನು ಸ್ವತಃ ಅವನ ಮೇಲೆಯೇ ಅನ್ಯಾಯವೆಸಗಿರುವನು. ಇದರ ಬಳಿಕ ಅಲ್ಲಾಹು ಹೊಸದಾಗಿ ಯಾವುದಾದರೂ ವಿಷಯವನ್ನು ತರುವನೋ ಎಂಬುದರ ಬಗ್ಗೆ ತಾವು ಅರಿತಿಲ್ಲ.(1259)
1257. ಗರ್ಭಿಣಿಯರಲ್ಲದ ವಿಚ್ಛೇದಿತೆಯರ ಇದ್ದಃ ಕಾಲ ಅಥವಾ ಪುನರ್ವಿವಾಹ ಮಾಡದೆ ಅವರು ಕಾಯಬೇಕಾದ ಕಾಲ ಮೂರು ಶುದ್ಧಾವಸ್ಥೆಗಳಾಗಿವೆ. ಲೈಂಗಿಕ ಸಂಬಂಧ ಉಂಟಾಗದ ಒಂದು ಶುದ್ಧಾವಸ್ಥೆಯಲ್ಲಿ ಮಾತ್ರ ಪತಿ ತನ್ನ ಪತ್ನಿಗೆ ವಿಚ್ಛೇದನೆ ನೀಡಬಹುದು. ಋತುಸ್ರಾವದ ಅವಧಿಯಲ್ಲಿ ತಲಾಕ್ ನೀಡಕೂಡದು. ಗರ್ಭಿಣಿಯರ ಇದ್ದಃ ಅವರ ಹೆರಿಗೆಯ ತನಕವಾಗಿದೆ. 1258. ವಿಚ್ಛೇದಿತೆಯು ಇದ್ದಃ ಕಾಲದಲ್ಲಿ ವಿಚ್ಛೇದನ ನೀಡಿದ ಪತಿಯ ಮನೆಯಲ್ಲೇ ತಂಗಿರಬೇಕು. ದಾಂಪತ್ಯವನ್ನು ಪುನಃ ಸ್ಥಾಪಿಸಲು ಮತ್ತು ಅಗಲಿಕೆಯ ನೋವನ್ನು ನಿವಾರಿಸಲು ಇದು ಸಹಾಯಕವಾಗಬಹುದು. 1259. ಜಗಳ ಮತ್ತು ವಿಚ್ಛೇದನೆಯ ನಂತರ ದಂಪತಿಗಳ ಮನಸ್ಸಿನಲ್ಲಿ ವಿಷಾದ ಮತ್ತು ವಿವಾಹ ಸಂಬಂಧವನ್ನು ಪುನಃಸ್ಥಾಪಿಸಬೇಕೆಂಬ ಆಸೆಯನ್ನು ಅಲ್ಲಾಹು ಹುಟ್ಟಿಸಬಹುದು. ಅದನ್ನು ಮುಂಚಿತವಾಗಿ ಅರಿತುಕೊಳ್ಳಲು ಮನುಷ್ಯರಿಗೆ ಸಾಧ್ಯವಿಲ್ಲ ಎಂದರ್ಥ.

(2) ಅವರು (ವಿಚ್ಛೇದಿತೆಯರು) ತಮ್ಮ ಅವಧಿಯನ್ನು ತಲುಪಿದರೆ ಶಿಷ್ಟಾಚಾರಕ್ಕೆ ಅನುಗುಣವಾಗಿ ಅವರನ್ನು ಬಳಿ ಇರಿಸಿಕೊಳ್ಳಿರಿ ಅಥವಾ ಶಿಷ್ಟಾಚಾರಕ್ಕೆ ಅನುಗುಣವಾಗಿ ಅವರನ್ನು ಕಳುಹಿಸಿಕೊಡಿರಿ. ನಿಮ್ಮಲ್ಲಿನ ಇಬ್ಬರು ನ್ಯಾಯವಂತರನ್ನು ಸಾಕ್ಷಿ ನಿಲ್ಲಿಸಿರಿ. ಅಲ್ಲಾಹುವಿಗೋಸ್ಕರ ಸಾಕ್ಷ್ಯವನ್ನು ಸರಿಯಾದ ವಿಧದಲ್ಲಿ ಸ್ಥಾಪಿಸಿರಿ.(1260) ಅದು ಅಲ್ಲಾಹುವಿನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರಿಗೆ ನೀಡಲಾಗುವ ಉಪದೇಶವಾಗಿದೆ. ಯಾರಾದರೂ ಅಲ್ಲಾಹುವನ್ನು ಭಯಪಡುವುದಾದರೆ ಅಲ್ಲಾಹು ಅವನಿಗೆ ಹೊರಹೋಗುವ ಒಂದು ಮಾರ್ಗವನ್ನು ಮಾಡಿಕೊಡುವನು.
1260. ಅಗತ್ಯ ಬರುವಾಗ ಸಾಕ್ಷಿಗಳು ನಿಷ್ಪಕ್ಷವಾಗಿ ಸಾಕ್ಷಿ ಹೇಳಬೇಕು ಎಂದರ್ಥ.

(3) ಅವನು ಊಹಿಸಿರದ ವಿಧದಲ್ಲಿ ಅವನಿಗೆ ಅನ್ನಾಧಾರವನ್ನು ಒದಗಿಸುವನು. ಯಾರಾದರೂ ಅಲ್ಲಾಹು ವಿನ ಮೇಲೆ ಭರವಸೆಯಿಡುವುದಾದರೆ ಅವನಿಗೆ ಅಲ್ಲಾಹು ಸಾಕು. ಖಂಡಿತವಾಗಿಯೂ ಅಲ್ಲಾಹು ತನ್ನ ಕಾರ್ಯವನ್ನು ಪೂರ್ಣಗೊಳಿಸುವನು. ಪ್ರತಿಯೊಂದು ವಿಷಯಕ್ಕೂ ಅಲ್ಲಾಹು ಒಂದು ಕ್ರಮವನ್ನು ನಿಶ್ಚಯಿಸಿರುವನು.

(4) ನಿಮ್ಮ ಸ್ತ್ರೀಯರ ಪೈಕಿ ಋತುಸ್ರಾವದ ಬಗ್ಗೆ ನಿರಾಶರಾಗಿರುವವರ(1261) ಬಗ್ಗೆ ಹೇಳುವುದಾದರೆ ಅವರ ಇದ್ದಃದ ವಿಷಯದಲ್ಲಿ ನಿಮಗೆ ಸಂದೇಹವಿದ್ದರೆ, ಅವರ ಇದ್ದಃವು ಮೂರು ತಿಂಗಳುಗಳಾಗಿವೆ. ಋತುಸ್ರಾವವಾಗದಿರುವವರ ವಿಷಯವೂ ಇದೇ ರೀತಿಯಾಗಿದೆ. ಗರ್ಭಿಣಿಯರ ಬಗ್ಗೆ ಹೇಳುವುದಾದರೆ ಅವರ ಅವಧಿಯು ಅವರು ತಮ್ಮ ಗರ್ಭವನ್ನು ಹೆರುವ ತನಕವಾಗಿದೆ. ಯಾರಾದರೂ ಅಲ್ಲಾಹುವನ್ನು ಭಯಪಡುವುದಾದರೆ ಅಲ್ಲಾಹು ಅವನಿಗೆ ಅವನ ವಿಷಯವನ್ನು ಸರಳೀಕರಿಸಿ ಕೊಡುವನು.
1261. ಋತುಸ್ರಾವದ ಪ್ರಾಯವನ್ನು ದಾಟಿದವರು.

(5) ಅದು ಅಲ್ಲಾಹುವಿನ ಆಜ್ಞೆಯಾಗಿದೆ. ಅವನು ಅದನ್ನು ನಿಮಗೆ ಅವತೀರ್ಣಗೊಳಿಸಿರುವನು. ಯಾರಾದರೂ ಅಲ್ಲಾಹುವನ್ನು ಭಯಪಡುವುದಾದರೆ ಅವನ ಪಾಪಗಳನ್ನು ಅವನು ಅಳಿಸಿಹಾಕುವನು ಮತ್ತು ಅವನಿಗೆ ಪ್ರತಿಫಲವನ್ನು ಹಿಗ್ಗಿಸಿ ಕೊಡುವನು.

(6) ನಿಮ್ಮ ಸಾಮರ್ಥ್ಯಕ್ಕೆ ಸೇರಿದ, ನೀವು ವಾಸ ಮಾಡುವ ಸ್ಥಳದಲ್ಲೇ ಅವರನ್ನು ವಾಸಮಾಡಿಸಿರಿ. ಅವರನ್ನು ಇಕ್ಕಟ್ಟುಗೊಳಿಸುವ ಸಲುವಾಗಿ ಅವರಿಗೆ ಕಿರುಕುಳ ಕೊಡದಿರಿ. ಅವರು ಗರ್ಭಿಣಿಯರಾಗಿದ್ದರೆ ಅವರು ಹೆರುವ ತನಕ ಅವರಿಗೆ ಖರ್ಚು ಮಾಡುತ್ತಿರಿ. ಅವರು ನಿಮಗಾಗಿ (ಶಿಶುವಿಗೆ) ಸ್ತನಪಾನ ಮಾಡುವುದಾದರೆ ಅವರಿಗೆ ಅವರ ಪ್ರತಿಫಲವನ್ನು ಕೊಡಿರಿ. ನೀವು ಪರಸ್ಪರ ಶಿಷ್ಟಾಚಾರದೊಂದಿಗೆ ಸಮಾಲೋಚನೆ ಮಾಡಿರಿ. ನಿಮ್ಮ ಪೈಕಿ ಎರಡೂ ಕಡೆಯವರಿಗೂ ಇಕ್ಕಟ್ಟಾಗುವುದಾದರೆ ಅವನಿಗಾಗಿ ಬೇರೊಬ್ಬ ಸ್ತ್ರೀ ಸ್ತನಪಾನ ಮಾಡಲಿ.

(7) ಸಾಮರ್ಥ್ಯವಿರುವವನು ತನ್ನ ಸಾಮರ್ಥ್ಯದಿಂದ ಖರ್ಚಿಗೆ ನೀಡಲಿ. ಯಾರಿಗಾದರೂ ತನ್ನ ಅನ್ನಾಧಾರವು ಇಕ್ಕಟ್ಟಾದರೆ ಅಲ್ಲಾಹು ಅವನಿಗೆ ನೀಡಿರುವುದರಿಂದ ಅವನು ಖರ್ಚಿಗೆ ನೀಡಲಿ. ಅಲ್ಲಾಹು ಅವನಿಗೆ ನೀಡಿರುವುದನ್ನೇ ವಿನಾ (ಕೊಡಬೇಕೆಂದು) ಯಾರನ್ನೂ ಅವನು ಬಲವಂತಪಡಿಸಲಾರನು. ಅಲ್ಲಾಹು ಇಕ್ಕಟ್ಟಿನ ಬಳಿಕ ಅನುಕೂಲತೆಯನ್ನು ಮಾಡಿಕೊಡುವನು.

(8) ಎಷ್ಟೊಂದು ದೇಶದವರು ತಮ್ಮ ರಬ್‌ನ ಮತ್ತು ಅವನ ಸಂದೇಶವಾಹಕರ ಆಜ್ಞೆಯನ್ನು ಧಿಕ್ಕರಿಸಿರುವರು! ಆದ್ದರಿಂದ ನಾವು ಅವರನ್ನು ಕಠೋರವಾಗಿ ವಿಚಾರಣೆ ಮಾಡಿದೆವು ಮತ್ತು ಅವರನ್ನು ಹೀನವಾದ ರೀತಿಯಲ್ಲಿ ಶಿಕ್ಷಿಸಿದೆವು.

(9) ಹೀಗೆ ಅವರು ಅವರ ಕರ್ಮಗಳ ದುಷ್ಫಲವನ್ನು ಆಸ್ವಾದಿಸಿದರು. ಅವರ ಕರ್ಮಗಳ ಪರ್ಯಾವಸಾನವು ನಷ್ಟವೇ ಆಗಿತ್ತು.

(10) ಅಲ್ಲಾಹು ಅವರಿಗೆ ಕಠೋರವಾದ ಶಿಕ್ಷೆಯನ್ನು ಸಿದ್ಧಪಡಿಸಿರುವನು. ಆದ್ದರಿಂದ ಸತ್ಯವಿಶ್ವಾಸಿಗಳಾದ ಬುದ್ಧಿವಂತರೇ! ನೀವು ಅಲ್ಲಾಹುವನ್ನು ಭಯಪಡಿರಿ. ಖಂಡಿತವಾಗಿಯೂ ಅಲ್ಲಾಹು ನಿಮಗೊಂದು ಸ್ಮರಣೆಯನ್ನು (ಸಂದೇಶ)ವನ್ನು ಅವತೀರ್ಣಗೊಳಿಸಿರುವನು.

(11) ಅಥವಾ ಅಲ್ಲಾಹುವಿನ ಸ್ಪಷ್ಟವಾದ ದೃಷ್ಟಾಂತಗಳನ್ನು ನಿಮಗೆ ಓದಿಕೊಡುವ ಒಬ್ಬ ಸಂದೇಶವಾಹಕರನ್ನು ನಿಮ್ಮ ಬಳಿಗೆ ಇಳಿಸಿರುವನು. ವಿಶ್ವಾಸವಿಟ್ಟವರನ್ನು ಮತ್ತು ಸತ್ಕರ್ಮವೆಸಗಿದವರನ್ನು ಅಂಧಕಾರಗಳಿಂದ ಪ್ರಕಾಶದೆಡೆಗೆ ಹೊರತರುವ ಸಲುವಾಗಿ. ಯಾರಾದರೂ ಅಲ್ಲಾಹುವಿನಲ್ಲಿ ವಿಶ್ವಾಸವಿಟ್ಟು ಸತ್ಕರ್ಮವೆಸಗುವುದಾದರೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಅವನು ಅವನನ್ನು ಪ್ರವೇಶ ಮಾಡಿಸುವನು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅವನಿಗೆ ಅಲ್ಲಾಹು ಅನ್ನಾಧಾರ ವನ್ನು ಉತ್ತಮಗೊಳಿಸಿರುವನು.

(12) ಏಳು ಆಕಾಶಗಳನ್ನು ಮತ್ತು ಭೂಮಿಯಿಂದ ಅದಕ್ಕೆ ಸಮಾನವಾಗಿರುವುದನ್ನು ಸೃಷ್ಟಿಸಿದವನು ಅಲ್ಲಾಹುವಾಗಿರುವನು.(1262) ಅವುಗಳ ಮಧ್ಯೆ (ಅವನ) ಆಜ್ಞೆಯು ಇಳಿಯುವುದು. ಅಲ್ಲಾಹು ಎಲ್ಲ ವಿಷಯದಲ್ಲೂ ಸಾಮರ್ಥ್ಯವುಳ್ಳವನಾಗಿರುವನು ಮತ್ತು ಅವನು ಎಲ್ಲ ವಸ್ತುವನ್ನೂ ಅರಿವಿನೊಂದಿಗೆ ಪೂರ್ಣವಾಗಿ ಆವರಿಸಿರುವನು ಎಂಬುದನ್ನು ನೀವು ಅರಿಯುವ ಸಲುವಾಗಿ.
1262. ಏಳು ಆಕಾಶಗಳಂತೆ ಏಳು ಭೂಮಿಗಳೂ ಇವೆಯೆಂದು ವ್ಯಾಖ್ಯಾನಕಾರರು ಇದಕ್ಕೆ ಅರ್ಥ ನೀಡಿದ್ದಾರೆ. ಸಹೀಹಾದ ಹದೀಸ್‍ಗಳಲ್ಲೂ ಇದನ್ನು ಬೆಂಬಲಿಸುವ ಪರಾಮರ್ಶೆಗಳನ್ನು ಕಾಣಬಹುದು.