(1) ಓ ಪ್ರವಾದಿಯವರೇ! ತಾವು ತಮ್ಮ ಪತ್ನಿಯರ ಸಂತೃಪ್ತಿಯನ್ನು ಅರಸುತ್ತಾ, ಅಲ್ಲಾಹು ತಮಗೆ ಧರ್ಮಸಮ್ಮತಗೊಳಿಸಿರುವುದನ್ನು ಏಕೆ ನಿಷಿದ್ಧಗೊಳಿಸುತ್ತಿರುವಿರಿ?(1263) ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
1263. ಪ್ರವಾದಿಪತ್ನಿಯರು ಉನ್ನತವಾದ ಧಾರ್ಮಿಕ ಮಾನದಂಡಗಳನ್ನು ಪಾಲಿಸುವವರಾಗಿದ್ದರೂ ಸ್ತ್ರೀ ಸಹಜವಾದ ಕೆಲವು ಬಲಹೀನತೆಗಳು ಅವರಲ್ಲಿದ್ದವು. ಪ್ರವಾದಿ(ಸ) ರಿಗೆ ಇತರ ಪತ್ನಿಯರಿಗಿಂತಲೂ ಹೆಚ್ಚು ಪ್ರೀತಿ ತನ್ನೊಂದಿಗೆ ಇರಬೇಕೆಂದು ಅವರ ಪೈಕಿ ಕೆಲವರು ಆಸೆಪಟ್ಟಿದ್ದರು. ಒಮ್ಮೆ ಪ್ರವಾದಿ(ಸ) ರವರು ತಮ್ಮ ಪತ್ನಿಯರಲ್ಲಿ ಒಬ್ಬರಾದ ಝೈನಬ್ ಬಿನ್ತ್ ಜಹ್ಶ್(ರ) ರವರ ಮನೆಯಲ್ಲಿ ಸ್ವಲ್ಪ ಜೇನು ಸವಿದರು. ಹೇಗೋ ಈ ಮಾಹಿತಿಯನ್ನು ಪಡೆದ ಆಯಿಶಾ(ರ) ಮತ್ತು ಹಫ್ಸಾ(ರ) ರಿಗೆ ಅದು ಅಷ್ಟೊಂದು ಹಿಡಿಸಲಿಲ್ಲ. ಪ್ರವಾದಿ(ಸ) ರವರು ತಮ್ಮ ಬಳಿಗೆ ಬಂದಾಗ ತಾವು ಮಆಫಿರ್ ಅಂಟನ್ನು ಜಗಿದಿದ್ದೀರಿ, ತಮ್ಮ ಬಾಯಿ ವಾಸನೆ ಬರುತ್ತಿದೆ ಎಂದು ಹೇಳಬೇಕೆಂದು ಅವರಿಬ್ಬರೂ ತೀರ್ಮಾನಿಸಿದರು. ತಾನು ಸ್ವಲ್ಪ ಜೇನನ್ನು ಸವಿದಿರುವೆನೆಂದು ಪ್ರವಾದಿ(ಸ) ರವರು ಅವರಿಗೆ ಹೇಳಿದರು. ತರುವಾಯ ತಮ್ಮ ಪತ್ನಿಯರಿಗೆ ಇಷ್ಟವಿಲ್ಲದ ಜೇನನ್ನು ತಾನಿನ್ನು ಸೇವಿಸುವುದಿಲ್ಲವೆಂದು ಅವರು ಶಪಥ ಮಾಡಿದರು. ಅಲ್ಲಾಹು ಧರ್ಮಸಮ್ಮತಗೊಳಿಸಿದ ಜೇನನ್ನು ಪತ್ನಿಯರ ಹಿತಾಸಕ್ತಿಯನ್ನು ಗೌರವಿಸಿ ವರ್ಜಿಸುವುದು ಸರಿಯಲ್ಲವೆಂದು ಅಲ್ಲಾಹು ಈ ಸೂಕ್ತಿಯ ಮೂಲಕ ಪ್ರವಾದಿ(ಸ) ರವರನ್ನು ಎಚ್ಚರಿಸಿದ್ದಾನೆ.
(2) ನಿಮ್ಮ ಶಪಥಗಳಿಗಿರುವ ಪರಿಹಾರವನ್ನು(1264) ಅಲ್ಲಾಹು ನಿಮಗೆ ನಿಯಮವನ್ನಾಗಿ ಮಾಡಿರುವನು. ಅಲ್ಲಾಹು ನಿಮ್ಮ ಒಡೆಯನಾಗಿರುವನು. ಅವನು ಸರ್ವಜ್ಞನೂ ಯುಕ್ತಿಪೂರ್ಣನೂ ಆಗಿರುವನು.
1264. ಒಂದು ಸತ್ಕರ್ಮವನ್ನಾಗಲಿ, ಧರ್ಮಸಮ್ಮತವಾದ ಒಂದು ಕರ್ಮವನ್ನಾಗಲಿ ಮಾಡುವುದಿಲ್ಲವೆಂದು ಅಲ್ಲಾಹುವಿನ ಹೆಸರಲ್ಲಿ ಶಪಥ ಮಾಡಕೂಡದು. ಯಾರಾದರೂ ಹಾಗೆ ಮಾಡಿದರೆ ಆ ಶಪಥವನ್ನು ಉಲ್ಲಂಘಿಸಿ ಅದಕ್ಕೆ ಪ್ರಾಯಶ್ಚಿತ್ತ ನೀಡಬೇಕು.
(3) ಪ್ರವಾದಿಯವರು ತನ್ನ ಪತ್ನಿಯರ ಪೈಕಿ ಒಬ್ಬಳೊಂದಿಗೆ ಒಂದು ಮಾತನ್ನು ಗುಟ್ಟಾಗಿ ಹೇಳಿದ ಸಂದರ್ಭ. ತರುವಾಯ ಆಕೆ ಅದನ್ನು (ಇನ್ನೊಬ್ಬಳಿಗೆ) ತಿಳಿಸಿದರು.(1265) ಅಲ್ಲಾಹು ಅದನ್ನು ಅವರಿಗೆ (ಪ್ರವಾದಿಗೆ) ಬಹಿರಂಗಪಡಿಸಿದಾಗ ಅವರು ಅದರ ಕೆಲವು ಭಾಗವನ್ನು (ಆ ಪತ್ನಿಗೆ) ತಿಳಿಸಿದರು ಮತ್ತು ಕೆಲವು ಭಾಗವನ್ನು ಬಿಟ್ಟರು. ತರುವಾಯ ಆಕೆಯೊಂದಿಗೆ ಅವರು ಅದನ್ನು ತಿಳಿಸಿದಾಗ ಆಕೆ (ಪತ್ನಿ) ಕೇಳಿದರು: ‘ತಮಗೆ ಇದನ್ನು ತಿಳಿಸಿಕೊಟ್ಟವರು ಯಾರು?’ ಅವರು ಹೇಳಿದರು: ‘ಸರ್ವಜ್ಞನೂ ಸೂಕ್ಷ್ಮಜ್ಞಾನಿಯೂ ಆಗಿರುವವನು ನನಗೆ ತಿಳಿಸಿಕೊಟ್ಟಿರುವನು’.
1265. ತಾನು ಇನ್ನು ಮೇಲೆ ಜೇನು ಸೇವಿಸುವುದಿಲ್ಲ ಎಂದು ಶಪಥ ಮಾಡಿದ ವಿಷಯ ಹಾಗೂ ಇನ್ನಿತರ ವಿಷಯಗಳನ್ನು ಪ್ರವಾದಿ(ಸ) ರವರು ಪತ್ನಿಯರ ಪೈಕಿ ಓರ್ವರಾದ ಹಫ್ಸಾ(ರ) ರಿಗೆ ತಿಳಿಸಿದ್ದರು. ಇದನ್ನು ಇತರ ಯಾರಿಗೂ ತಿಳಿಸಕೂಡದೆಂದು ಅವರು ಹಫ್ಸಾ(ರ) ರಿಗೆ ಆದೇಶಿಸಿದ್ದರು. ಆದರೆ ಅಷ್ಟೊಂದು ಗಂಭೀರ ವಿಷಯವಲ್ಲವೆಂಬ ಭಾವನೆಯಿಂದ ಹಫ್ಸಾ(ರ) ಇದನ್ನು ಆಯಿಶಾ(ರ) ರಿಗೆ ತಿಳಿಸಿದ್ದರು.
(4) ನೀವಿಬ್ಬರೂ(1266) ಅಲ್ಲಾಹುವಿನೆಡೆಗೆ ಪಶ್ಚಾತ್ತಾಪಪಟ್ಟು ಮರಳುವುದಾದರೆ (ಹಾಗೆ ಮಾಡಿರಿ). ಯಾಕೆಂದರೆ ನಿಮ್ಮಿಬ್ಬರ ಹೃದಯಗಳೂ (ಕೆಡುಕಿನೆಡೆಗೆ) ವಾಲಿಕೊಂಡಿವೆ. ಇನ್ನು ನೀವಿಬ್ಬರೂ ಅವರ (ಪ್ರವಾದಿಯ) ವಿರುದ್ಧ ಪರಸ್ಪರ ಸಹಕರಿಸುವುದಾದರೆ ಖಂಡಿತವಾಗಿಯೂ ಅಲ್ಲಾಹು ಅವರ ಒಡೆಯನಾಗಿರುವನು. ಜಿಬ್ರೀಲ್ ಮತ್ತು ಸಜ್ಜನರಾದ ಸತ್ಯವಿಶ್ವಾಸಿಗಳೂ, ಅದರ ಜೊತೆಗೆ ಮಲಕ್ಗಳೂ ಅವರ ಸಹಾಯಕರಾಗಿರುವರು.
1266. ಪ್ರವಾದಿಪತ್ನಿಯರಾದ ಆಯಿಶಾ(ರ) ಮತ್ತು ಹಫ್ಸಾ(ರ) ರ ಬಗ್ಗೆ ಸೂಚನೆ. ಯಾವುದೇ ಸಣ್ಣ ವಿಷಯದಲ್ಲಾದರೂ ಸರಿ, ಪ್ರವಾದಿ(ಸ) ರವರ ಆದೇಶವನ್ನು ಅವರ ಪತ್ನಿಯರು ಸುತರಾಂ ಪಾಲಿಸಬೇಕಾಗಿದೆ. ಇದರಲ್ಲಿರುವ ಚಿಕ್ಕ ಪ್ರಮಾದವನ್ನೂ ಅಲ್ಲಾಹು ಗಂಭೀರವಾಗಿ ಪರಿಗಣಿಸುತ್ತಾನೆ.
(5) (ಓ ಪ್ರವಾದಿಪತ್ನಿಯರೇ!) ಅವರು ನಿಮ್ಮನ್ನು ವಿಚ್ಛೇದಿಸುವುದಾದರೆ ನಿಮಗಿಂತಲೂ ಉತ್ತಮರಾದ ಪತ್ನಿಯರನ್ನು ಅವರ ರಬ್ ಅವರಿಗೆ ಬದಲಿಯಾಗಿ ನೀಡಲೂಬಹುದು. ಮುಸ್ಲಿಮರೂ, ಸತ್ಯವಿಶ್ವಾಸಿನಿಯರೂ, ಭಯಭಕ್ತಿ ಪಾಲಿಸುವವರೂ, ಪಶ್ಚಾತ್ತಾಪಪಡುವವರೂ, ಆರಾಧನಾ ಮಗ್ನರೂ, ಉಪವಾಸ ಆಚರಿಸುವವರೂ, ವಿಧವೆಗಳೂ, ಕನ್ಯೆಯರೂ ಆಗಿರುವವರನ್ನು.
(6) ಓ ಸತ್ಯವಿಶ್ವಾಸಿಗಳೇ! ಮನುಷ್ಯರನ್ನು ಮತ್ತು ಕಲ್ಲುಗಳನ್ನು ಇಂಧನವಾಗಿ ಬಳಸುವ ನರಕಾಗ್ನಿಯಿಂದ ಸ್ವತಃ ನಿಮ್ಮನ್ನೂ, ನಿಮ್ಮ ಕುಟುಂಬದವರನ್ನೂ ರಕ್ಷಿಸಿರಿ. ಅದರ ಮೇಲ್ನೋಟ ವಹಿಸಲು ಕಠೋರ ಸ್ವಭಾವದವರೂ, ಅತಿ ಬಲಿಷ್ಠರೂ ಆಗಿರುವ ಮಲಕ್ಗಳಿರುವರು. ಅಲ್ಲಾಹು ಅವರೊಂದಿಗೆ ಆಜ್ಞಾಪಿಸಿದ ಯಾವುದೇ ವಿಷಯವನ್ನೂ ಅವರು ಧಿಕ್ಕರಿಸಲಾರರು. ಅವರೊಂದಿಗೆ ಆಜ್ಞಾಪಿಸಲಾಗುವ ಯಾವುದೇ ಆಜ್ಞೆಯನ್ನೂ ಅವರು ಪಾಲಿಸುವರು.
(7) ಓ ಸತ್ಯನಿಷೇಧಿಗಳೇ! ಇಂದು ನೀವು ನೆಪಗಳನ್ನು ಹೇಳದಿರಿ. ನಿಮಗೆ ಪ್ರತಿಫಲ ನೀಡಲಾಗುವುದು ನೀವು ಮಾಡಿರುವುದಕ್ಕೆ ಮಾತ್ರವಾಗಿದೆ.(1267)
1267. ನರಕಾಗ್ನಿಗೆ ಪ್ರವೇಶ ಮಾಡಿಸಲಾಗುವ ಸಮಯದಲ್ಲಿ ಸತ್ಯನಿಷೇಧಿಗಳೊಂದಿಗೆ ಹೀಗೆನ್ನಲಾಗುವುದು.
(8) ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವಿನೆಡೆಗೆ ನಿಷ್ಕಳಂಕವಾದ ಪಶ್ಚಾತ್ತಾಪದೊಂದಿಗೆ ಮರಳಿರಿ. ನಿಮ್ಮ ರಬ್ ನಿಮ್ಮ ಪಾಪಗಳನ್ನು ಅಳಿಸಿಹಾಕಬಹುದು ಮತ್ತು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಲ್ಲಿ ನಿಮ್ಮನ್ನು ಪ್ರವೇಶ ಮಾಡಿಸಬಹುದು. ಅಲ್ಲಾಹು ಪ್ರವಾದಿಯನ್ನು ಮತ್ತು ಅವರೊಂದಿಗೆ ವಿಶ್ವಾಸವಿಟ್ಟವರನ್ನು ಅಪಮಾನಗೊಳಿಸದ ದಿನ! ಅವರ ಪ್ರಕಾಶವು ಅವರ ಮುಂಭಾಗದಿಂದಲೂ, ಬಲಭಾಗದಿಂದಲೂ ಚಲಿಸುತ್ತಿರುವುದು. ಅವರು ಹೇಳುವರು: ‘ನಮ್ಮ ಪ್ರಭೂ! ನಮ್ಮ ಪ್ರಕಾಶವನ್ನು ನಮಗೆ ಪೂರ್ಣಗೊಳಿಸಿಕೊಡು ಮತ್ತು ನಮಗೆ ಕ್ಷಮೆ ನೀಡು. ಖಂಡಿತವಾಗಿಯೂ ನೀನು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವೆ’.
(9) ಓ ಪ್ರವಾದಿಯವರೇ! ತಾವು ಸತ್ಯನಿಷೇಧಿಗಳೊಂದಿಗೆ ಮತ್ತು ಕಪಟವಿಶ್ವಾಸಿಗಳೊಂದಿಗೆ ಹೋರಾಡಿರಿ. ಅವರೊಂದಿಗೆ ಕಠೋರವಾಗಿ ವರ್ತಿಸಿರಿ. ಅವರ ವಾಸಸ್ಥಳವು ನರಕಾಗ್ನಿಯಾಗಿದೆ. ತಲುಪಲಿರುವ ಆ ಸ್ಥಳ ಎಷ್ಟು ನಿಕೃಷ್ಟವಾದುದು!
(10) ನೂಹ್ರ ಪತ್ನಿಯನ್ನು ಮತ್ತು ಲೂತ್ರ ಪತ್ನಿಯನ್ನು ಅಲ್ಲಾಹು ಸತ್ಯನಿಷೇಧಿಗಳಿಗೆ ಉದಾಹರಣೆಯಾಗಿ ತೋರಿಸಿರುವನು. ಅವರಿಬ್ಬರೂ ನಮ್ಮ ದಾಸರ ಪೈಕಿ ಸಜ್ಜನರಾಗಿದ್ದ ಇಬ್ಬರು ದಾಸರ ಕೆಳಗಿದ್ದರು. ತರುವಾಯ ಅವರಿಬ್ಬರನ್ನೂ ಇವರು (ಪತ್ನಿಯರು) ವಂಚಿಸಿದರು. ಆಗ ಅಲ್ಲಾಹುವಿನ ಶಿಕ್ಷೆಯಿಂದ ಏನನ್ನೂ ಅವರಿಬ್ಬರೂ ಇವರಿಗೆ (ಪತ್ನಿಯರಿಗೆ) ನಿವಾರಿಸಿಕೊಡಲಿಲ್ಲ.(1268) ‘ನರಕಾಗ್ನಿಯನ್ನು ಪ್ರವೇಶಿಸುವ ಜನರೊಂದಿಗೆ ನೀವಿಬ್ಬರೂ ಪ್ರವೇಶಿಸಿರಿ’ ಎಂದು ಅವರೊಂದಿಗೆ ಹೇಳಲಾಯಿತು.
1268. ಇಬ್ಬರು ಪ್ರವಾದಿಗಳ ಪತ್ನಿಯರಾಗಿದ್ದೂ ಅಲ್ಲಾಹುವಿನ ಶಿಕ್ಷೆಯಿಂದ ಪಾರುಗೊಳಿಸಲು ಆ ದಾಂಪತ್ಯ ಸಂಬಂಧವು ಅವರಿಗೆ ಸಹಾಯ ಮಾಡಲಿಲ್ಲ. ಅದೇ ರೀತಿ ಮುಹಮ್ಮದ್(ಸ) ರವರೊಂದಿಗೆ ಕುಟುಂಬ ಸಂಬಂಧವಿದೆ ಎಂಬ ಹೆಸರಿನಲ್ಲಿ ಪರಲೋಕ ಮೋಕ್ಷ ಸಿಗಲಾರದು. ಅವರು ವಿಶ್ವಾಸವಿಟ್ಟು ಸತ್ಕರ್ಮವೆಸಗಿದವರಾಗಿರುವ ಹೊರತು.
(11) ಸತ್ಯವಿಶ್ವಾಸಿಗಳಿಗೆ ಉಪಮೆಯಾಗಿ ಅಲ್ಲಾಹು ಫಿರ್ಔನನ ಪತ್ನಿಯನ್ನು ತೋರಿಸಿರುವನು.(1269) ಆಕೆ ಹೇಳಿದ ಸಂದರ್ಭ: ‘ನನ್ನ ಪ್ರಭೂ! ನನಗೆ ನಿನ್ನ ಬಳಿ ಸ್ವರ್ಗದಲ್ಲಿ ಒಂದು ಭವನವನ್ನು ನಿರ್ಮಿಸಿಕೊಡು. ಫಿರ್ಔನ್ ಮತ್ತು ಅವನ ಕೃತ್ಯಗಳಿಂದ ನನ್ನನ್ನು ಕಾಪಾಡು. ಅಕ್ರಮಿಗಳಾದ ಜನರಿಂದಲೂ ನನ್ನನ್ನು ರಕ್ಷಿಸು’.
1269. ಮೂಸಾ(ಅ) ರವರ ವಿರೋಧಿಯೂ ನಿರಂಕುಶ ಸರ್ವಾಧಿಕಾರಿಯೂ ಆಗಿದ್ದ ಫಿರ್ಔನ್ನ ಪತ್ನಿಯು (ವ್ಯಾಖ್ಯಾನಕಾರರ ಪ್ರಕಾರ ಆ ಮಹಿಳೆಯ ಹೆಸರು ಆಸಿಯಾ ಎಂದಾಗಿದೆ) ಮೂಸಾ(ಅ) ರವರ ಸಂದೇಶದಲ್ಲಿ ದೃಢವಾಗಿ ವಿಶ್ವಾಸವಿಟ್ಟಿದ್ದರು. ಅವರು ವಿಶ್ವಾಸಿನಿಯಾದ ಮಾಹಿತಿ ಪಡೆದ ಫಿರ್ಔನ್ ಅವರನ್ನು ಕ್ರೂರ ಹಿಂಸೆಗೊಳಪಡಿಸಿದ್ದನು.
(12) ತನ್ನ ಗುಪ್ತಾಂಗವನ್ನು ಸಂರಕ್ಷಿಸಿದ ಇಮ್ರಾನ್ರ ಮಗಳಾದ ಮರ್ಯಮ್ರನ್ನೂ (ಉಪಮೆಯಾಗಿ ತೋರಿಸಿರುವನು). ಆಗ ನಮ್ಮ ವತಿಯ ಆತ್ಮದಿಂದ(1270) ನಾವು ಅದರಲ್ಲಿ ಊದಿದೆವು. ತನ್ನ ರಬ್ನ ವಚನಗಳಲ್ಲಿ ಮತ್ತು ಗ್ರಂಥಗಳಲ್ಲಿ ಅವರು (ಮರ್ಯಮ್) ವಿಶ್ವಾಸವಿಟ್ಟಿರುವರು ಮತ್ತು ಅವರು ಭಯಭಕ್ತಿ ಪಾಲಿಸುವವರಲ್ಲಿ ಸೇರಿದವರಾಗಿದ್ದರು.
1270. ಅಲ್ಲಾಹುವಿನ ವತಿಯ ಆತ್ಮ ಎಂದರೆ ಅಲ್ಲಾಹುವಿನ ಸೃಷ್ಟಿಗಳಾದ ಆತ್ಮಗಳ ಪೈಕಿ ಒಂದು ಆತ್ಮ ಎಂದಾಗಿದೆ. ಆತ್ಮಗಳೆಲ್ಲವೂ ಅಲ್ಲಾಹುವಿನ ಸೃಷ್ಟಿಗಳಾಗಿವೆ. ಇಲ್ಲಿ ಆತ್ಮವನ್ನು ಅಲ್ಲಾಹುವಿನೊಂದಿಗೆ ಸೇರಿಸಿ ಹೇಳಲಾಗಿರುವುದು ಅದನ್ನು ಸೃಷ್ಟಿಸಿದವನು ಅಲ್ಲಾಹುವಾಗಿರುವನು ಎಂಬ ಅರ್ಥದಲ್ಲಾಗಿದೆ.