67 - Al-Mulk ()

|

(1) ಆಧಿಪತ್ಯವು ಯಾರ ಕೈಯ್ಯಲ್ಲಿದೆಯೋ ಅವನು ಅನುಗ್ರಹಪೂರ್ಣನಾಗಿರುವನು. ಅವನು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.

(2) ನಿಮ್ಮಲ್ಲಿ ಹೆಚ್ಚು ಉತ್ತಮವಾಗಿ ಕರ್ಮವೆಸಗುವವರು ಯಾರು ಎಂದು ಪರೀಕ್ಷಿಸುವ ಸಲುವಾಗಿ ಅವನು ಮರಣ ಮತ್ತು ಜೀವನವನ್ನು ಸೃಷ್ಟಿಸಿರುವನು. ಅವನು ಪ್ರತಾಪಶಾಲಿಯೂ ಅತ್ಯಧಿಕ ಕ್ಷಮಿಸುವವನೂ ಆಗಿರುವನು.

(3) ಅವನು ಏಳು ಆಕಾಶಗಳನ್ನು ಪದರಗಳಾಗಿ ಸೃಷ್ಟಿಸಿದವನಾಗಿರುವನು. ಪರಮ ದಯಾಮಯನ ಸೃಷ್ಟಿಯಲ್ಲಿ ಯಾವುದೇ ನ್ಯೂನತೆಯನ್ನೂ ತಾವು ಕಾಣಲಾರಿರಿ. ಆದರೆ ತಾವು ದೃಷ್ಟಿಯನ್ನು ಮತ್ತೊಮ್ಮೆ ಮರಳಿಸಿರಿ. ಯಾವುದಾದರೂ ಬಿರುಕನ್ನು ತಾವು ಕಾಣುತ್ತಿರುವಿರಾ?(1271)
1271. ಉಪರಿಲೋಕದ -ಮಹಾ ಪ್ರಪಂಚದ- ರಚನೆಯ ಬಗ್ಗೆ ಮನುಷ್ಯನಿಗೆ ಸ್ವಲ್ಪ ಮಾತ್ರ ಅರಿತುಕೊಳ್ಳಲು ಸಾಧ್ಯವಾಗಿದೆ. ನಮಗೆ ಲಭ್ಯವಾಗಿರುವ ಅರಿವಿನ ಪ್ರಕಾರ ಆಕಾಶಕಾಯಗಳ ಸ್ಥಾನ, ಚಲನೆ ಇತ್ಯಾದಿಗಳೆಲ್ಲವೂ ವ್ಯವಸ್ಥಿತವಾಗಿವೆ, ಎಲ್ಲಿಯೂ ಯಾವುದೇ ನ್ಯೂನತೆಯೂ ಗೋಚರವಲ್ಲ ಎಂದು ಸ್ಪಷ್ಟವಾಗಿ ಹೇಳಬಹುದಾಗಿದೆ.

(4) ತರುವಾಯ ಎರಡು ಬಾರಿ ತಾವು ದೃಷ್ಟಿಯನ್ನು ಮರಳಿಸಿರಿ. ಆ ಕಣ್ಣು ತಮ್ಮ ಬಳಿಗೆ ಪರಾಭವಗೊಂಡ ಸ್ಥಿತಿಯಲ್ಲಿ ನಿತ್ರಾಣದೊಂದಿಗೆ ಮರಳುವುದು.

(5) ಅತಿ ಸಮೀಪದ ಆಕಾಶವನ್ನು ನಾವು ಕೆಲವು ದೀಪಗಳಿಂದ ಅಲಂಕರಿಸಿರುವೆವು.(1272) ಸೈತಾನರನ್ನು ಎಸೆದು ಓಡಿಸುವಂತದ್ದಾಗಿ ನಾವು ಅವುಗಳನ್ನು ಮಾಡಿರುವೆವು.(1273) ಅವರಿಗೆ ನಾವು ಜ್ವಲಿಸುವ ನರಕ ಶಿಕ್ಷೆಯನ್ನು ಸಿದ್ಧಗೊಳಿಸಿರುವೆವು.
1272. ಒಂದನೇ ಆಕಾಶವೇ ಅಸಂಖ್ಯಾತ ನಕ್ಷತ್ರಗಳನ್ನು ಒಳಗೊಂಡಿದೆಯೆಂದು ಈ ಸೂಕ್ತಿಯು ಸೂಚಿಸುತ್ತದೆ. 1273. ಇದರ ತಾತ್ಪರ್ಯ ಉಲ್ಕೆಗಳಾಗಿವೆಯೆಂದು ಕೆಲವು ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ. ತಫ್ಸೀರ್ ಗ್ರಂಥಗಳಲ್ಲಿ ಬೇರೆ ವ್ಯಾಖ್ಯಾನಗಳನ್ನೂ ಕಾಣಬಹುದು. ಇಂತಹ ವಿಷಯಗಳಲ್ಲಿ ಅಲ್ಲಾಹು ತಿಳಿಸಿಕೊಟ್ಟಿರುವುದಕ್ಕಿಂತ ಹೆಚ್ಚಾಗಿ ಏನನ್ನೂ ಖಚಿತವಾಗಿ ಹೇಳಲು ನಮಗೆ ಸಾಧ್ಯವಿಲ್ಲ.

(6) ತಮ್ಮ ರಬ್‌ನಲ್ಲಿ ಅವಿಶ್ವಾಸವಿಟ್ಟವರಿಗೆ ನರಕ ಶಿಕ್ಷೆಯಿದೆ. ತಲುಪಲಿರುವ ಆ ಸ್ಥಳವು ನಿಕೃಷ್ಟವೇ ಆಗಿದೆ.

(7) ಅವರನ್ನು ಅದಕ್ಕೆ (ನರಕಾಗ್ನಿಗೆ) ಎಸೆಯಲಾದಾಗ ಅವರು ಅದರ ಒಂದು ಗರ್ಜನೆಯನ್ನು ಆಲಿಸುವರು. ಅದು ಕೊತಕೊತನೆ ಕುದಿಯುತ್ತಿರುವುದು.

(8) ಕ್ರೋಧದಿಂದಾಗಿ ಅದು ಸಿಡಿದು ಹೋಗುವಂತಿರುವುದು. ಒಂದೊಂದು ಗುಂಪನ್ನು ಅದರೊಳಗೆ (ನರಕದೊಳಗೆ) ಎಸೆಯಲಾಗುವಾಗಲೆಲ್ಲ ಅದರ ಕಾವಲುಗಾರರು ಅವರೊಂದಿಗೆ ಕೇಳುವರು: ‘ನಿಮ್ಮ ಬಳಿಗೆ ಮುನ್ನೆಚ್ಚರಿಕೆ ನೀಡುವವರು ಬಂದಿರಲಿಲ್ಲವೇ?’

(9) ಅವರು ಹೇಳುವರು: ‘ಹೌದು! ನಮ್ಮ ಬಳಿಗೆ ಮುನ್ನೆಚ್ಚರಿಕೆ ನೀಡುವವರು ಬಂದಿದ್ದರು. ಆಗ ನಾವು ನಿಷೇಧಿಸಿದೆವು ಮತ್ತು ಅಲ್ಲಾಹು ಏನನ್ನೂ ಅವತೀರ್ಣಗೊಳಿಸಿಲ್ಲ, ನೀವು ಮಹಾ ಪಥಭ್ರಷ್ಟತೆಯಲ್ಲೇ ಇರುವಿರಿ(1274) ಎಂದು ನಾವು ಹೇಳಿದೆವು’.
1274. ಇಹಲೋಕದಲ್ಲಿ ಸತ್ಯಧರ್ಮದ ವಕ್ತಾರರೊಂದಿಗೆ ಅವರು ಹೇಳುತ್ತಿದ್ದ ಮಾತುಗಳನ್ನು ನರಕಾಗ್ನಿಯ ಕಾವಲುಗಾರರೊಂದಿಗೆ ಅವರು ಹೇಳುವರು.

(10) ‘ನಾವು ಆಲಿಸುವುದಾಗಲಿ, ಚಿಂತಿಸುವುದಾಗಲಿ ಮಾಡಿರುತ್ತಿದ್ದರೆ ನಾವು ಜ್ವಲಿಸುವ ನರಕಾಗ್ನಿಯ ನಿವಾಸಿಗಳಲ್ಲಿ ಸೇರಿದವರಾಗುತ್ತಿರಲಿಲ್ಲ’ ಎಂದು ಅವರು ಹೇಳುವರು.

(11) ಹೀಗೆ ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳುವರು. ಆದ್ದರಿಂದ ಆ ನರಕವಾಸಿಗಳ ಮೇಲೆ ಶಾಪವಿರಲಿ.

(12) ಖಂಡಿತವಾಗಿಯೂ ತಮ್ಮ ರಬ್ಬನ್ನು ಅಗೋಚರ ಸ್ಥಿತಿಯಲ್ಲಿ ಭಯಪಡುವವರಾರೋ ಅವರಿಗೆ ಪಾಪಮುಕ್ತಿ ಮತ್ತು ಮಹಾ ಪ್ರತಿಫಲವಿದೆ.

(13) ನೀವು ನಿಮ್ಮ ಮಾತನ್ನು ಗುಟ್ಟಾಗಿರಿಸಿರಿ ಅಥವಾ ಬಹಿರಂಗಪಡಿಸಿರಿ. ಖಂಡಿತವಾಗಿಯೂ ಅವನು (ಅಲ್ಲಾಹು) ಹೃದಯಗಳಲ್ಲಿರುವುದನ್ನು ಅರಿಯುವವನಾಗಿರುವನು.

(14) ಸೃಷ್ಟಿಸಿದವನು (ಎಲ್ಲವನ್ನೂ) ಅರಿಯಲಾರನೇ? ಅವನು ನಿಗೂಢ ರಹಸ್ಯಗಳನ್ನು ಅರಿಯುವವನೂ ಸೂಕ್ಷ್ಮಜ್ಞಾನಿಯೂ ಆಗಿರುವನು.

(15) ನಿಮಗೋಸ್ಕರ ಭೂಮಿಯನ್ನು ವಿಧೇಯಗೊಳಿಸಿಕೊಟ್ಟವನು ಅವನಾಗಿರುವನು. ಆದ್ದರಿಂದ ನೀವು ಅದರ ಭುಜಗಳ ಮೇಲೆ ನಡೆಯಿರಿ ಮತ್ತು ಅವನು ಒದಗಿಸಿದ ಅನ್ನಾಧಾರದಿಂದ ತಿನ್ನಿರಿ. ಪುನರುತ್ಥಾನವು ಅವನೆಡೆಗೇ ಆಗಿದೆ.

(16) ಆಕಾಶದಲ್ಲಿರುವವನು ನಿಮ್ಮನ್ನು ಭೂಮಿಯಲ್ಲಿ ಹುದುಗಿಸುವುದರ ಬಗ್ಗೆ ನೀವು ನಿರ್ಭೀತರಾಗಿರುವಿರಾ? ಆಗ ಅದು (ಭೂಮಿ) ಓಲಾಡುತ್ತಿರುವುದು.

(17) ಅಥವಾ, ಆಕಾಶದಲ್ಲಿರುವವನು ನಿಮ್ಮ ಮೇಲೆ ಹರಳು ಕಲ್ಲುಗಳ ಮಳೆಯನ್ನು ಕಳುಹಿಸುವುದರ ಬಗ್ಗೆ ನೀವು ನಿರ್ಭೀತರಾಗಿರುವಿರಾ? ನನ್ನ ಎಚ್ಚರಿಕೆ ಹೇಗಿದೆಯೆಂದು ನೀವು ತರುವಾಯ ಅರಿತುಕೊಳ್ಳುವಿರಿ.

(18) ಖಂಡಿತವಾಗಿಯೂ ಅವರಿಗಿಂತ ಮುಂಚಿನವರೂ ನಿಷೇಧಿಸಿರುವರು. ಆಗ ನನ್ನ ಪ್ರತಿಭಟನೆ ಹೇಗಿತ್ತು?

(19) ಅವರ ಮೇಲ್ಭಾಗದಲ್ಲಿ ರೆಕ್ಕೆಯನ್ನು ಹರಡುತ್ತಲೂ, ಮಡಚುತ್ತಲೂ ಹಾರಾಡುವ ಹಕ್ಕಿಗಳೆಡೆಗೆ ಅವರು ನೋಡಿಲ್ಲವೇ? ಪರಮ ದಯಾಮಯನ ಹೊರತು (ಇನ್ನಾರೂ) ಅವುಗಳನ್ನು ಆಧರಿಸಿ ಹಿಡಿಯಲಾರರು. ಖಂಡಿತವಾಗಿಯೂ ಅವನು ಎಲ್ಲ ವಿಷಯಗಳನ್ನೂ ವೀಕ್ಷಿಸುವವನಾಗಿರುವನು.

(20) ಅಥವಾ, ಪರಮ ದಯಾಮಯನ ಹೊರತು ನಿಮಗೆ ಸಹಾಯ ಮಾಡಲು ಒಂದು ಸೈನ್ಯವಾಗಿರುವವನು ಯಾರಿರುವನು? ಸತ್ಯನಿಷೇಧಿಗಳು ವಂಚನೆಯಲ್ಲಿಯೇ ಒಳಪಟ್ಟಿರುವರು.

(21) ಅಥವಾ, ಅಲ್ಲಾಹು ಅವನ ಅನ್ನಾಧಾರವನ್ನು ನಿಲ್ಲಿಸಿದರೆ ನಿಮಗೆ ಅನ್ನಾಧಾರ ನೀಡುವವನು ಯಾರಿರುವನು? ಆದರೂ ಅವರು ಧಿಕ್ಕಾರದಲ್ಲಿ ಮತ್ತು ದ್ವೇಷದಲ್ಲಿ ಮಗ್ನರಾಗಿರುವರು.

(22) ಹಾಗಾದರೆ ಸನ್ಮಾರ್ಗ ಪಡೆಯುವವನು ಮುಖವನ್ನು ನೆಲಕ್ಕೆ ಚುಚ್ಚಿ ನಡೆಯುವವನೋ?(1275) ಅಥವಾ ನೇರವಾದ ಮಾರ್ಗದಲ್ಲಿ ಸರಿಯಾಗಿ ನಡೆಯುವವನೋ?
1275. ದುರ್ಮಾರ್ಗದಲ್ಲಿ ಬುಡಮೇಲಾಗಿ ಬೀಳುವವನು.

(23) ಹೇಳಿರಿ: ‘ನಿಮ್ಮನ್ನು ಸೃಷ್ಟಿಸಿದವನು ಮತ್ತು ನಿಮಗೆ ಶ್ರವಣವನ್ನು, ದೃಷ್ಟಿಗಳನ್ನು ಮತ್ತು ಹೃದಯಗಳನ್ನು ಮಾಡಿಕೊಟ್ಟವನು ಅವನಾಗಿರುವನು. ನೀವು ಸ್ವಲ್ಪ ಮಾತ್ರ ಕೃತಜ್ಞತೆ ಸಲ್ಲಿಸುತ್ತಿರುವಿರಿ’.

(24) ಹೇಳಿರಿ: ‘ನಿಮ್ಮನ್ನು ಭೂಮಿಯಲ್ಲಿ ಸೃಷ್ಟಿಸಿ ಬೆಳೆಸಿದವನು ಅವನಾಗಿರುವನು. ನಿಮ್ಮನ್ನು ಒಟ್ಟುಗೂಡಿಸಲಾಗುವುದು ಅವನೆಡೆಗೇ ಆಗಿದೆ’.

(25) ಅವರು ಹೇಳುವರು: ‘ಈ ವಾಗ್ದಾನ (ಸತ್ಯವಾಗುವುದು) ಯಾವಾಗ? ನೀವು ಸತ್ಯಸಂಧರಾಗಿದ್ದರೆ (ಅದನ್ನು ಹೇಳಿಕೊಡಿರಿ)’.

(26) ಹೇಳಿರಿ: ‘ಆ ಅರಿವಿರುವುದು ಅಲ್ಲಾಹುವಿನ ಬಳಿ ಮಾತ್ರವಾಗಿದೆ. ನಾನು ಸ್ಪಷ್ಟವಾದ ಮುನ್ನೆಚ್ಚರಿಕೆಗಾರನು ಮಾತ್ರವಾಗಿರುವೆನು’.

(27) ಅವರು ಅದನ್ನು (ಎಚ್ಚರಿಕೆ ನೀಡಲಾದ ವಿಷಯವನ್ನು) ಸಮೀಪದಲ್ಲಿರುವುದಾಗಿ ಕಾಣುವಾಗ ಸತ್ಯನಿಷೇಧಿಗಳ ಮುಖಗಳು ಕಳೆಗುಂದುವುದು. ‘ನೀವು ಯಾವುದರ ಬಗ್ಗೆ ವಾದಿಸುತ್ತಿದ್ದಿರೋ ಅದು ಇದೇ ಆಗಿದೆ’ ಎಂದು (ಅವರೊಂದಿಗೆ) ಹೇಳಲಾಗುವುದು.

(28) ಹೇಳಿರಿ: ‘ನೀವು ಚಿಂತಿಸಿ ನೋಡಿರುವಿರಾ? ನನ್ನನ್ನು ಮತ್ತು ನನ್ನೊಂದಿಗಿರುವವರನ್ನು ಅಲ್ಲಾಹು ನಾಶ ಮಾಡುವುದಾದರೆ ಅಥವಾ ನಮಗೆ ಅವನು ಕರುಣೆ ತೋರಿಸುವುದಾದರೆ ಯಾತನಾಮಯ ಶಿಕ್ಷೆಯಿಂದ ಸತ್ಯನಿಷೇಧಿಗಳನ್ನು ಪಾರು ಮಾಡುವವರು ಯಾರಿರುವರು?’(1276)
1276. ಅಲ್ಲಾಹು ಇಹಲೋಕದಲ್ಲಿ ಶಿಕ್ಷಿಸುವುದಾದರೆ ಅದರಲ್ಲಿ ತಾವು ಮಾತ್ರವಲ್ಲ ಬದಲಾಗಿ ಪ್ರವಾದಿ(ಸ) ರವರು ಮತ್ತು ಅವರ ಅನುಯಾಯಿಗಳು ಕೂಡ ಭಾಗಿಯಾಗುವರು ಎಂದು ಭಾವಿಸಿ ಸಮಾಧಾನ ಪಟ್ಟಿದ್ದ ಬಹುದೇವಾರಾಧಕರಿಗೆ ಇಲ್ಲಿ ಉತ್ತರ ನೀಡಲಾಗಿದೆ. ಅವಿಶ್ವಾಸಿಗಳ ವಿಧಿನಿಯತಿಯನ್ನು ನಿರ್ಣಯಿಸಲಾಗುವುದು ಪ್ರವಾದಿ(ಸ) ರವರನ್ನು ಮತ್ತು ಅವರ ಅನುಯಾಯಿಗಳನ್ನು ಶಿಕ್ಷಿಸಲಾಗುವುದೋ ಅಥವಾ ರಕ್ಷಿಸಲಾಗುವುದೋ ಎಂಬುದರ ಆಧಾರದಲ್ಲಲ್ಲ. ಅವಿಶ್ವಾಸ ಮತ್ತು ಅಧರ್ಮದ ದುಷ್ಫಲದಿಂದ ಹೇಗೆ ರಕ್ಷಣೆಯನ್ನು ಪಡೆಯಬಹುದು ಎಂಬುದನ್ನು ಅವರು ಆಲೋಚಿಸಬೇಕಾಗಿದೆ.

(29) ಹೇಳಿರಿ: ‘ಅವನು ಪರಮ ದಯಾಮಯನಾಗಿರುವನು. ನಾವು ಅವನ ಮೇಲೆ ವಿಶ್ವಾಸವಿಟ್ಟಿರುವೆವು. ನಾವು ಅವನ ಮೇಲೆ ಭರವಸೆಯನ್ನಿಟ್ಟಿರುವೆವು. ಸ್ಪಷ್ಟವಾದ ಪಥಭ್ರಷ್ಟತೆಯಲ್ಲಿರುವವರು ಯಾರು ಎಂದು ತರುವಾಯ ನೀವು ಅರಿತುಕೊಳ್ಳುವಿರಿ’.

(30) ಹೇಳಿರಿ: ‘ನೀವು ಚಿಂತಿಸಿ ನೋಡಿರುವಿರಾ? ನಿಮ್ಮ ನೀರು ಬತ್ತಿ ಹೋದರೆ ಹರಿಯುವ ಒರತೆ ನೀರನ್ನು ನಿಮಗೆ ತಂದು ಕೊಡುವವರು ಯಾರಿರುವರು?’