(1) ನೂನ್. ಲೇಖನಿ ಮತ್ತು ಅವರು ಬರೆಯುವುದರ ಮೇಲಾಣೆ.
(2) ತಮ್ಮ ರಬ್‌ನ ಅನುಗ್ರಹದಿಂದಾಗಿ ತಾವು ಒಬ್ಬ ಹುಚ್ಚನಲ್ಲ.
(3) ಖಂಡಿತವಾಗಿಯೂ ತಮಗೆ ಕಡಿದುಹೋಗದ ಪ್ರತಿಫಲವಿದೆ.
(4) ಖಂಡಿತವಾಗಿಯೂ ತಾವು ಸರ್ವಶ್ರೇಷ್ಠ ಸ್ವಭಾವದಲ್ಲಿರುವಿರಿ.
(5) ಆದ್ದರಿಂದ ತರುವಾಯ ತಾವು ಕಾಣುವಿರಿ. ಅವರೂ ಕಾಣುವರು.
(6) ನಿಮ್ಮ ಪೈಕಿ ಕ್ಷೋಭೆಯಲ್ಲಿ ಒಳಪಟ್ಟವನು ಯಾರೆಂದು.(1277)
1277. ಮುಹಮ್ಮದ್(ಸ) ರವರನ್ನು ಮಾನಸಿಕವಾದ ಯಾವುದೇ ತೊಂದರೆಯಿರುವ ವ್ಯಕ್ತಿಯೆಂದು ದೂಷಿಸುವವರಿಗೆ ಇಲ್ಲಿ ಉತ್ತರ ನೀಡಲಾಗಿದೆ. ಇಪ್ಪತ್ತಮೂರು ವರ್ಷಗಳ ಕಾಲ ಸಂಪೂರ್ಣ ಮನಸ್ಸಾನಿಧ್ಯದೊಂದಿಗೆ ಸಂದೇಶ ಪ್ರಚಾರದ ದೌತ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಪ್ರವಾದಿ(ಸ) ರವರು ಅನ್ಯೂನವಾದ ಮತ್ತು ವೈಕಲ್ಯರಹಿತ ಮನಸ್ಸಿನ ಒಡೆಯರಾಗಿದ್ದರೆಂಬುದಕ್ಕೆ ಇತಿಹಾಸವು ಸಾಕ್ಷಿಯಾಗಿದೆ.
(7) ಖಂಡಿತವಾಗಿಯೂ ತಮ್ಮ ರಬ್ ಅವನ ಮಾರ್ಗದಿಂದ ಭ್ರಷ್ಟರಾದವರ ಬಗ್ಗೆ ಚೆನ್ನಾಗಿ ಅರಿತಿರುವನು. ಸನ್ಮಾರ್ಗ ಪಡೆದವರ ಬಗ್ಗೆಯೂ ಅವನು ಚೆನ್ನಾಗಿ ಅರಿತಿರುವನು.
(8) ಆದ್ದರಿಂದ ತಾವು ಸತ್ಯನಿಷೇಧಿಗಳನ್ನು ಅನುಸರಿಸದಿರಿ.
(9) ತಾವು ಮಣಿಯುವುದಾದರೆ ಅವರೂ ಮಣಿಯುತ್ತಿದ್ದರು ಎಂದು ಅವರು ಆಶಿಸುವರು.(1278)
1278. ಇಸ್ಲಾಮಿನ ವಿಶ್ವಾಸಾಚಾರಗಳನ್ನು ಕಟ್ಟುನಿಟ್ಟಾಗಿ ಪ್ರಚಾರ ಮಾಡುವ ಬದಲು ಜಾಹಿಲಿಯ್ಯತ್ತಿನ ಕೆಲವು ಆಚಾರಗಳೊಂದಿಗೆ ಹೊಂದಾಣಿಕೆ ಮಾಡಲು ಪ್ರವಾದಿ(ಸ) ರವರು ಸನ್ನದ್ಧರಾದರೆ ಅವರೊಂದಿಗೆ ಹೊಂದಾಣಿಕೆ ಮಾಡಲು ಅರಬ್ ಬಹುದೇವ ವಿಶ್ವಾಸಿಗಳು ಸಿದ್ಧರಿದ್ದರು.
(10) ಅತ್ಯಧಿಕ ಆಣೆ ಹಾಕುವವನೂ,(1279) ನೀಚನೂ ಆಗಿರುವ ಯಾರನ್ನೂ ತಾವು ಅನುಸರಿಸದಿರಿ.
1279. ಕೆಲವು ಸುಳ್ಳರಿದ್ದಾರೆ. ಸಾಮಾನ್ಯವಾಗಿ ಅವರ ಮಾತಿಗೆ ಯಾರೂ ಬೆಲೆ ಕೊಡುವುದಿಲ್ಲ. ಅದು ಅವರಿಗೂ ಚೆನ್ನಾಗಿ ಗೊತ್ತಿದೆ. ಆದ್ದರಿಂದ ಅವರು ಏನೇ ಹೇಳುವಾಗಲೂ ಇತರರು ನಂಬಬೇಕೆಂಬ ಕಾರಣದಿಂದ ಅತ್ಯಧಿಕವಾಗಿ ಆಣೆ ಹಾಕುತ್ತಾರೆ.
(11) ಚುಚ್ಚಿ ಮಾತನಾಡುವವನೂ, ಚಾಡಿಮಾತಿನೊಂದಿಗೆ ನಡೆಯುವವನೂ,
(12) ಒಳಿತಿಗೆ ಅಡ್ಡಿಪಡಿಸುವವನೂ, ಅತಿಕ್ರಮಿಯೂ, ಮಹಾಪಾಪಿಯೂ,
(13) ಕ್ರೂರಿಯೂ ಮಾತ್ರವಲ್ಲದೆ ಕುಲಗೆಟ್ಟವನೂ ಆಗಿರುವವನನ್ನು.
(14) ಅವನು ಸಂಪತ್ತು ಮತ್ತು ಸಂತತಿಗಳಿರುವವನಾಗಿರುವನು ಎಂಬ ಕಾರಣದಿಂದ (ಅವನು ಅಂತಹ ನಿಲುವನ್ನು ಹೊಂದಿರುವನು).
(15) ಅವನಿಗೆ ನಮ್ಮ ದೃಷ್ಟಾಂತಗಳನ್ನು ಓದಿಕೊಡಲಾದರೆ ಅವನು ‘ಪೂರ್ವಿಕರ ಪುರಾಣಗಳು’ ಎನ್ನುವನು.
(16) ನಾವು (ಅವನ) ಸೊಂಡಿಲಿನ ಮೇಲೆ ಅವನಿಗೆ ತರುವಾಯ ಬರೆ ಹಾಕುವೆವು.(1280)
1280. ಪ್ರವಾದಿ(ಸ) ರವರನ್ನು ಮತ್ತು ಸತ್ಯವಿಶ್ವಾಸಿಗಳನ್ನು ನಿರ್ನಾಮ ಮಾಡುವ ಹೀನ ಪರಿಶ್ರಮಗಳಿಗೆ ನಾಯಕತ್ವ ವಹಿಸಿದ್ದ ವಲೀದ್ ಇಬ್ನ್ ಮುಗೀರ ಎಂಬವನ ಬಗ್ಗೆ ಈ ಸೂಕ್ತಿಗಳು ಅವತೀರ್ಣಗೊಂಡಿವೆಯಾದರೂ ಇಂತಹ ದುರ್ಗುಣಗಳನ್ನು ಹೊಂದಿರುವ ಎಲ್ಲರಿಗೂ ಇದು ಅನ್ವಯಿಸುತ್ತವೆ.
(17) ನಾವು ಆ ತೋಟದವರನ್ನು ಪರೀಕ್ಷಿಸಿದಂತೆ ಖಂಡಿತವಾಗಿಯೂ ಅವರನ್ನೂ ಪರೀಕ್ಷಿಸಿರುವೆವು. ಪ್ರಭಾತ ವೇಳೆಯಲ್ಲಿ ಆ ತೋಟದ ಫಲಗಳನ್ನು ಕೀಳುವೆವೆಂದು ಅವರು ಆಣೆ ಹಾಕಿ ಹೇಳಿದ ಸಂದರ್ಭ.
(18) ಅವರು (ಏನನ್ನೂ) ಹೊರತುಪಡಿಸಿ ಹೇಳಿರಲಿಲ್ಲ.(1281)
1281. ಫಲಗಳನ್ನು ಕೀಳಲು ತೀರ್ಮಾನಿಸಿದಾಗ ಅವರು ಇನ್‍ಶಾ ಅಲ್ಲಾಹ್ (ಅಲ್ಲಾಹು ಇಚ್ಛಿಸಿದರೆ) ಎಂದು ಹೇಳಲಿಲ್ಲ ಎಂದು ‘ವಲಾ ಯಸ್ತಸ್ನೂನ್’ ಎಂಬ ಪದಕ್ಕೆ ಹೆಚ್ಚಿನ ವ್ಯಾಖ್ಯಾನಕಾರರು ಅರ್ಥ ನೀಡಿದ್ದಾರೆ. ಬಡವರಿಗಾಗಿ ಅವರು ಏನನ್ನೂ ತೆಗೆದಿಡಲು ನಿರ್ಧರಿಸಲಿಲ್ಲ ಎಂದು ಇತರ ಕೆಲವು ವ್ಯಾಖ್ಯಾನಕಾರರು ಅರ್ಥ ನೀಡಿದ್ದಾರೆ.
(19) ತರುವಾಯ ಅವರು ನಿದ್ರಿಸುತ್ತಿರುವಾಗ ತಮ್ಮ ರಬ್‌ನ ವತಿಯ ಒಂದು ಶಿಕ್ಷೆಯು ಆ ತೋಟದ ಮೇಲೆರಗಿತು.
(20) ಆಗ ಅದು ಕತ್ತರಿಸಿ ತೆಗೆದಂತಾಗಿ ಬಿಟ್ಟಿತು.
(21) ತರುವಾಯ ಪ್ರಭಾತವಾದಾಗ ಅವರು ಪರಸ್ಪರ ಕರೆದು ಹೇಳಿದರು:
(22) ‘ನೀವು ಫಲ ಕೀಳಲು ತೆರಳುವುದಾದರೆ ಪ್ರಭಾತದಲ್ಲೇ ನಿಮ್ಮ ಕೃಷಿ ಸ್ಥಳಕ್ಕೆ ಹೊರಡಿರಿ’.
(23) ಅವರು ಪರಸ್ಪರ ಪಿಸುಗುಡುತ್ತಾ ತೆರಳಿದರು.
(24) ‘ಇಂದು ಆ ತೋಟದಲ್ಲಿ ನಿಮ್ಮ ಬಳಿಗೆ ಯಾವುದೇ ಬಡವನೂ ಪ್ರವೇಶಿಸುವಂತಾಗಲು ಅನುವು ಮಾಡಿ ಕೊಡದಿರಿ’ ಎಂದು.
(25) (ಬಡವರಿಗೆ) ತಡೆ ಹೇರಲು ಸಾಮರ್ಥ್ಯವುಳ್ಳವರಾಗಿಯೇ ಅವರು ಪ್ರಭಾತದಲ್ಲಿ ಹೊರಟರು.
(26) ತರುವಾಯ ಅದನ್ನು (ತೋಟವನ್ನು) ಕಂಡಾಗ ಅವರು ಹೇಳಿದರು: ‘ಖಂಡಿತವಾಗಿಯೂ ನಮಗೆ ಪ್ರಮಾದ ಸಂಭವಿಸಿದೆ.
(27) ಅಲ್ಲ, ನಮಗೆ ನಷ್ಟ ಎದುರುಗೊಂಡಿದೆ’.
(28) ಅವರ ಪೈಕಿ ಮಧ್ಯಮ ನಿಲುವನ್ನು ಹೊಂದಿದ್ದ ಒಬ್ಬನು ಹೇಳಿದನು: ‘ನೀವು ಅಲ್ಲಾಹುವನ್ನು ಸ್ತುತಿಸಲಿಲ್ಲವೇಕೆ ಎಂದು ನಾನು ನಿಮ್ಮೊಂದಿಗೆ ಹೇಳಿರಲಿಲ್ಲವೇ?’
(29) ಅವರು ಹೇಳಿದರು: ‘ನಮ್ಮ ರಬ್ ಪರಮ ಪಾವನನು. ಖಂಡಿತವಾಗಿಯೂ ನಾವು ಅಕ್ರಮಿಗಳಾಗಿರುವೆವು’.
(30) ಆಗ ಅವರು ಪರಸ್ಪರ ದೋಷಾರೋಪಣೆ ಮಾಡುತ್ತಾ ಅವರಲ್ಲಿ ಕೆಲವರು ಕೆಲವರ ವಿರುದ್ಧ ತಿರುಗಿ ನಿಂತರು.
(31) ಅವರು ಹೇಳಿದರು: ‘ಅಯ್ಯೋ! ನಮ್ಮ ದುರದೃಷ್ಟವೇ! ಖಂಡಿತವಾಗಿಯೂ ನಾವು ಅತಿಕ್ರಮಿಗಳಾಗಿರುವೆವು.
(32) ನಮ್ಮ ರಬ್ ಅದಕ್ಕಿಂತಲೂ ಉತ್ತಮವಾಗಿರುವುದನ್ನು ನಮಗೆ ಬದಲಿಯಾಗಿ ಕೊಡಬಹುದು. ಖಂಡಿತವಾಗಿಯೂ ನಾವು ನಮ್ಮ ರಬ್‌ನೆಡೆಗೆ ಆಸೆಯಿಂದ ತೆರಳುವವರಾಗಿರುವೆವು’.
(33) ಹೀಗಿದೆ ಶಿಕ್ಷೆ! ಪರಲೋಕ ಶಿಕ್ಷೆಯಂತೂ ಹೆಚ್ಚು ಘೋರವಾಗಿರುವುದಾಗಿದೆ. ಅವರು ಅರಿತಿರುತ್ತಿದ್ದರೆ.
(34) ಖಂಡಿತವಾಗಿಯೂ ಭಯಭಕ್ತಿ ಪಾಲಿಸುವವರಿಗೆ ಅವರ ರಬ್‌ನ ಬಳಿ ಅನುಗ್ರಹಗಳ ಸ್ವರ್ಗೋದ್ಯಾನಗಳಿವೆ.
(35) ಹಾಗಾದರೆ ನಾವು ಮುಸ್ಲಿಮರನ್ನು ಅಪರಾಧಿಗಳಂತೆ ಮಾಡುವೆವೇ?
(36) ನಿಮಗೇನಾಗಿದೆ? ನೀವು ಹೇಗೆ ತೀರ್ಪು ನೀಡುತ್ತಿರುವಿರಿ?
(37) ಅಥವಾ, ನಿಮಗೆ ಯಾವುದಾದರೂ ಗ್ರಂಥವು ದೊರಕಿ ನೀವು ಅದರಲ್ಲಿ ಅಧ್ಯಯನ ನಡೆಸುತ್ತಿರುವಿರಾ?
(38) ನೀವು (ಯಥೇಷ್ಟವಾಗಿ) ಆರಿಸುವ ವಿಷಯಗಳು ನಿಮಗೆ ಅದರಲ್ಲಿ (ಆ ಗ್ರಂಥದಲ್ಲಿ) ಬಂದಿವೆಯೇ?
(39) ಅಥವಾ ಪುನರುತ್ಥಾನ ದಿನದವರೆಗೆ ತಲುಪುವಂತಹ, -‘ನೀವು ತೀರ್ಪು ನೀಡುವುದೆಲ್ಲವೂ ನಿಮಗಿರುವುದು’ ಎಂಬುದಕ್ಕಿರುವ- ಯಾವುದಾದರೂ ಕರಾರುಗಳು ನಾವು ನಿಮ್ಮೊಂದಿಗೆ ಹೊಣೆ ವಹಿಸಿಕೊಂಡದ್ದಾಗಿ ಇವೆಯೇ?
(40) ಅವರ ಪೈಕಿ ಆ ವಿಷಯಕ್ಕೆ ಹೊಣೆ ಹೊರಿಸಲಾಗುವವನಾಗಿ ಯಾರಿರುವನು ಎಂದು ಅವರೊಂದಿಗೆ ಕೇಳಿ ನೋಡಿರಿ.
(41) ಅಥವಾ, ಅವರಿಗೆ ಯಾರಾದರೂ ಸಹಭಾಗಿಗಳಿರುವರೇ? ಹಾಗಾದರೆ ಆ ಸಹಭಾಗಿಗಳನ್ನು ಅವರು ಕರೆತರಲಿ. ಅವರು ಸತ್ಯಸಂಧರಾಗಿದ್ದರೆ.
(42) ಕಣಕಾಲನ್ನು ಪ್ರದರ್ಶಿಸಲಾಗುವ(1282) (ಭೀಕರವಾದ) ಒಂದು ದಿನವನ್ನು ಸ್ಮರಿಸಿರಿ! (ಅಂದು) ಸುಜೂದ್ ಮಾಡಲು ಅವರನ್ನು ಕರೆಯಲಾಗುವುದು. ಆದರೆ ಅವರಿಗೆ ಅದು ಸಾಧ್ಯವಾಗದು.
1282. ಅಂತ್ಯದಿನದಂದು ಅಲ್ಲಾಹು ಅವನ ಕಣಕಾಲನ್ನು ಪ್ರದರ್ಶಿಸುವನು. ಆಗ ಸತ್ಯವಿಶ್ವಾಸಿಗಳು ಅವನಿಗೆ ಸುಜೂದ್ ಮಾಡುವರು. ಆದರೆ ಇಹಲೋಕದಲ್ಲಿ ಜನಮನ್ನಣೆಗಾಗಿ ಅಥವಾ ತೋರಿಕೆಗಾಗಿ ಸುಜೂದ್ ಮಾಡಿದವರಿಗೆ ಆಗ ಸುಜೂದ್ ಮಾಡಲು ಸಾಧ್ಯವಾಗದು. ಬುಖಾರಿ ಮತ್ತು ಮುಸ್ಲಿಮ್ ಉದ್ಧರಿಸಿದ ಹದೀಸಿನಲ್ಲಿ ಇದನ್ನು ಸ್ಪಷ್ಟವಾಗಿ ಹೇಳಲಾಗಿದೆ. ಅಲ್ಲಾಹುವಿನ ಕೈ, ಅಲ್ಲಾಹುವಿನ ಕಾಲು ಮೊದಲಾದ ಕುರ್‌ಆನ್ ಮತ್ತು ಸುನ್ನತ್ತಿನಲ್ಲಿ ದೃಢಪಟ್ಟಿರುವ ವಿಶೇಷಣಗಳನ್ನು ಯಾವುದೇ ಹೋಲಿಕೆಯಾಗಲಿ, ವ್ಯಾಖ್ಯಾನವಾಗಲಿ ಇಲ್ಲದೆ ಅದು ಹೇಗೆ ಬಂದಿದೆಯೋ ಹಾಗೆಯೇ ಅಂಗೀಕರಿಸಿ ಅದರಲ್ಲಿ ವಿಶ್ವಾಸವಿಡಬೇಕಾಗಿದೆ. ಅದರ ರೂಪವು ನಮಗೆ ಅಜ್ಞಾತವಾಗಿದೆ.
(43) ಅವರ ಕಣ್ಣುಗಳು ಕೆಳಭಾಗಕ್ಕೆ ತಗ್ಗಿರುವುವು. ಅಪಮಾನವು ಅವರನ್ನು ಆವರಿಸಿಕೊಂಡಿರುವುದು. ಅವರು ಸುರಕ್ಷಿತರಾಗಿದ್ದ ಸಮಯದಲ್ಲಿ ಸುಜೂದ್ ಮಾಡುವುದಕ್ಕಾಗಿ ಅವರನ್ನು ಕರೆಯಲಾಗಿತ್ತು.(1283)
1283. ಇಹಲೋಕದಲ್ಲಿ ಅವರು ಸ್ವತಂತ್ರರು ಮತ್ತು ಆರೋಗ್ಯವಂತರಾಗಿದ್ದಾಗ ಅಲ್ಲಾಹುವಿಗೆ ಸುಜೂದ್ ಮಾಡಲು ಆದೇಶಿಸಲಾದ ಸಂದರ್ಭದಲ್ಲಿ ಅವರು ಧಿಕ್ಕರಿಸಿದ್ದರು.
(44) ಆದ್ದರಿಂದ ತಾವು ನನ್ನನ್ನೂ, ಈ ವೃತ್ತಾಂತವನ್ನು ನಿಷೇಧಿಸುವವರನ್ನೂ ಬಿಟ್ಟುಬಿಡಿರಿ.(1284) ಅವರು ಅರಿಯದ ರೀತಿಯಲ್ಲಿ ನಾವು ಅವರನ್ನು ಹಂತ ಹಂತವಾಗಿ ಹಿಡಿಯುವೆವು.
1284. ಸತ್ಯನಿಷೇಧಿಗಳ ಸ್ವಚ್ಛಂದತೆಯನ್ನು ಕಂಡು ಕಳವಳ ಪಡದಿರಿ. ಸೂಕ್ತ ವಿಧದಲ್ಲಿ ನಾನೇ ಅವರನ್ನು ನೋಡಿಕೊಳ್ಳುವೆನು ಎಂದು ಅಲ್ಲಾಹು ಪ್ರವಾದಿ(ಸ) ರನ್ನು ಮತ್ತು ಸತ್ಯವಿಶ್ವಾಸಿಗಳನ್ನು ಸಂತೈಸುತ್ತಿದ್ದಾನೆ.
(45) ನಾನು ಅವರಿಗೆ ಕಾಲಾವಕಾಶವನ್ನು ನೀಡುವೆನು. ಖಂಡಿತವಾಗಿಯೂ ನನ್ನ ತಂತ್ರವು ಬಲಿಷ್ಠವಾಗಿದೆ.
(46) ಅಥವಾ, ತಾವು ಅವರೊಂದಿಗೆ ಯಾವುದಾದರೂ ಪ್ರತಿಫಲವನ್ನು ಬೇಡಿ ಅವರು ಸಾಲ ಬಾಧ್ಯತೆಯ ನಿಮಿತ್ತ ಇಕ್ಕಟ್ಟಿನಲ್ಲಿರುವರೇ?
(47) ಅಥವಾ, ಅವರ ಬಳಿ ಅಗೋಚರ ಜ್ಞಾನವಿದ್ದು ಅವರು ಬರೆದಿಡುತ್ತಿರುವರೇ?(1285)
1285. ಅಗೋಚರ ಜ್ಞಾನಕ್ಕೆ ಸಂಬಂಧಿಸಿದಂತೆ ಬಹುದೇವಾರಾಧಕರಿಗೆ ಯಾವುದಾದರೂ ಆಧಾರಪ್ರಮಾಣವಿದೆಯೇ ಎಂದರ್ಥ.
(48) ಆದ್ದರಿಂದ ತಾವು ತಮ್ಮ ರಬ್‌ನ ತೀರ್ಪನ್ನು ಕಾಯುತ್ತಾ ತಾಳ್ಮೆ ವಹಿಸಿರಿ. ತಾವು ಮತ್ಸ್ಯದವರಂತೆ (ಪ್ರವಾದಿ ಯೂನುಸ್‍ರಂತೆ) ಆಗದಿರಿ. ಅವರು ತೀವ್ರ ಸಂಕಟದಿಂದ ಕರೆದು ಪ್ರಾರ್ಥಿಸಿದ ಸಂದರ್ಭ.
(49) ಅವರ ರಬ್‌ನ ವತಿಯ ಅನುಗ್ರಹವು ಅವರನ್ನು ಮರಳಿ ಪಡೆಯದಿರುತ್ತಿದ್ದರೆ ಅವರನ್ನು ಆ ಪಾಳು ಭೂಮಿಯಲ್ಲಿ ಆಕ್ಷೇಪಾರ್ಹರಾಗಿ ಹೊರತಳ್ಳಲಾಗುತ್ತಿತ್ತು.
(50) ಆಗ ಅವರ ರಬ್ ಅವರನ್ನು ಆರಿಸಿದನು ಮತ್ತು ಅವರನ್ನು ಸಜ್ಜನರಲ್ಲಿ ಸೇರಿಸಿದನು.
(51) ಸತ್ಯನಿಷೇಧಿಗಳು ಈ ಉಪದೇಶವನ್ನು ಆಲಿಸುವಾಗ ಅವರ ಕಣ್ಣುಗಳಿಂದ ನೋಡಿ ತಮ್ಮನ್ನು ಮುಗ್ಗರಿಸಿ ಬೀಳಿಸುವಂತಾಗಿಸುವರು.(1286) ‘ಖಂಡಿತವಾಗಿಯೂ ಇವನೊಬ್ಬ ಹುಚ್ಚನಾಗಿರುವನು’ ಎಂದು ಅವರು ಹೇಳುವರು.
1286. ತಾತ್ಸಾರ ಮತ್ತು ಮೂದಲಿಕೆಯ ನೋಟದ ಮೂಲಕ ಅವರು ಪ್ರವಾದಿ(ಸ) ರವರನ್ನು ಹಿಂದೆ ಸರಿಯುವಂತೆ ಮಾಡಲು ಮತ್ತು ಕರ್ತವ್ಯ ನಿರ್ವಹಣೆಯನ್ನು ಅಸ್ತವ್ಯಸ್ತಗೊಳಿಸಲು ಖಂಡಿತವಾಗಿಯೂ ಪ್ರಯತ್ನಿಸುವರು ಎಂದರ್ಥ.
(52) ಇದು ಸರ್ವಲೋಕದವರಿಗಿರುವ ಒಂದು ಉಪದೇಶವಲ್ಲದೆ ಇನ್ನೇನೂ ಅಲ್ಲ.