70 - Al-Ma'aarij ()

|

(1) ಸಂಭವಿಸಲಿರುವ ಶಿಕ್ಷೆಯ ಬಗ್ಗೆ ಕೇಳುಗನೊಬ್ಬನು ಕೇಳಿರುವನು.(1293)
1293. ‘ಸಅಲ’ ಎಂಬ ಪದಕ್ಕೆ ಕೇಳಿದನು, ಬೇಡಿದನು ಇತ್ಯಾದಿ ಅರ್ಥಗಳಿವೆ.

(2) ಅಂದರೆ ಸತ್ಯನಿಷೇಧಿಗಳಿಗೆ ಸಂಭವಿಸಲಿರುವ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

(3) ಅದು ಆರೋಹಣ ದಾರಿಗಳ ಒಡೆಯನಾದ ಅಲ್ಲಾಹುವಿನ ವತಿಯಿಂದಿರುವ ಶಿಕ್ಷೆ.

(4) ಐವತ್ತು ಸಾವಿರ ವರ್ಷಗಳ ಗಾತ್ರವಿರುವ ಒಂದು ದಿನದಲ್ಲಿ ಮಲಕ್‍ಗಳು ಮತ್ತು ಆತ್ಮವು ಅವನೆಡೆಗೆ ಏರಿ ಹೋಗುವುವು.

(5) ಆದರೆ (ಓ ಪ್ರವಾದಿಯವರೇ!) ತಾವು ಸುಂದರವಾದ ಸಹನೆಯನ್ನು ಪಾಲಿಸಿರಿ.

(6) ಖಂಡಿತವಾಗಿಯೂ ಅವರು ಅದನ್ನು ವಿದೂರವಾಗಿ ಕಾಣುತ್ತಿರುವರು.

(7) ನಾವು ಅದನ್ನು ಹತ್ತಿರವಾಗಿ ಕಾಣುತ್ತಿರುವೆವು.

(8) ಆಕಾಶವು ಕಾಯಿಸಿದ ಲೋಹದಂತಾಗುವ ದಿನ!

(9) ಪರ್ವತಗಳು (ಹಿಂಜಿದ) ಉಣ್ಣೆಯಂತಾಗುವ ದಿನ!

(10) (ಅಂದು) ಯಾವುದೇ ಆಪ್ತಮಿತ್ರನೂ ಬೇರೊಬ್ಬ ಆಪ್ತಮಿತ್ರನೊಂದಿಗೆ ಏನನ್ನೂ ಕೇಳಲಾರನು.

(11) ಅವರಿಗೆ ಪರಸ್ಪರರನ್ನು ತೋರಿಸಲಾಗುವುದು. ತನ್ನ ಮಕ್ಕಳನ್ನು ಪ್ರಾಯಶ್ಚಿತ್ತವಾಗಿ ನೀಡಿ ಆ ದಿನದ ಶಿಕ್ಷೆಯಿಂದ ಮುಕ್ತಿ ಪಡೆಯಲಾಗುತ್ತಿದ್ದರೆ ಎಂದು ಅಪರಾಧಿಯು ಆಶಿಸುವನು.

(12) ತನ್ನ ಪತ್ನಿಯನ್ನು ಮತ್ತು ತನ್ನ ಸಹೋದರನನ್ನು,

(13) ತನಗೆ ಆಶ್ರಯ ನೀಡಿದ ತನ್ನ ಸಂಬಂಧಿಕರನ್ನು,

(14) ಮತ್ತು ಭೂಮಿಯಲ್ಲಿರುವ ಸರ್ವರನ್ನೂ ಪ್ರಾಯಶ್ಚಿತ್ತವಾಗಿ ನೀಡಿ ತರುವಾಯ ಅದು ತನ್ನನ್ನು ರಕ್ಷಿಸುತ್ತಿದ್ದರೆ (ಎಂದು ಅಪರಾಧಿಯು ಆಶಿಸುವನು).

(15) ಅನುಮಾನವೇ ಬೇಡ! ಖಂಡಿತವಾಗಿಯೂ ಅದು ಧಗಧಗಿಸುವ ನರಕಾಗ್ನಿಯಾಗಿದೆ.

(16) ತಲೆಯ ಚರ್ಮವನ್ನು ಸುಲಿಯುವ ಅಗ್ನಿಯಾಗಿದೆ.

(17) ಹಿಂದೆ ಸರಿದವನನ್ನೂ, ವಿಮುಖನಾದವನನ್ನೂ ಅದು ಕರೆಯುವುದು.(1294)
1294. ಸತ್ಯಸಂದೇಶವನ್ನು ಆಲಿಸದೆ ವಿಮುಖನಾದವನು ಮತ್ತು ಅಲ್ಲಾಹು ಆದೇಶಿಸಿದ ಮಾರ್ಗದಲ್ಲಿ ವ್ಯಯಿಸದೆ ಸಂಪತ್ತನ್ನು ಕೂಡಿಟ್ಟವನು ನರಕವನ್ನು ಪ್ರವೇಶಿಸುವನು ಎಂದರ್ಥ.

(18) ಸಂಗ್ರಹಿಸಿ ಜೋಪಾನವಾಗಿಟ್ಟವನನ್ನೂ.

(19) ಖಂಡಿತವಾಗಿಯೂ ಮನುಷ್ಯನನ್ನು ಅತ್ಯಂತ ಅಸಹನೆಯುಳ್ಳವನಾಗಿ ಸೃಷ್ಟಿಸಲಾಗಿದೆ.

(20) ಅವನಿಗೆ ಹಾನಿಯೇನಾದರೂ ತಟ್ಟಿದರೆ ಅಸಹಿಷ್ಣುತೆ ಪ್ರಕಟಿಸುವವನಾಗಿ.

(21) ಅವನಿಗೆ ಒಳಿತೇನಾದರೂ ದಯಪಾಲಿಸಲಾದರೆ ತಡೆದಿರಿಸುವವನಾಗಿ.

(22) ನಮಾಝ್ ನಿರ್ವಹಿಸುವವರ ಹೊರತು.

(23) ಅಂದರೆ ತಮ್ಮ ನಮಾಝ್‍ನಲ್ಲಿ ಸದಾ ನಿಷ್ಠೆಯುಳ್ಳವರು,

(24) ತಮ್ಮ ಸಂಪತ್ತಿನಿಂದ ನಿಶ್ಚಿತ ಹಕ್ಕನ್ನು ನೀಡುವವರು,

(25) ಬೇಡುವವನಿಗೆ ಮತ್ತು ಅನ್ನಾಧಾರ ತಡೆಯಲಾದವನಿಗೆ.

(26) ಪ್ರತಿಫಲ ದಿನದಲ್ಲಿ ವಿಶ್ವಾಸವಿಡುವವರು.

(27) ತಮ್ಮ ರಬ್‌ನ ವತಿಯ ಶಿಕ್ಷೆಯ ಬಗ್ಗೆ ಭಯಭೀತರಾಗಿರುವವರು (ಮುಂತಾದವರ ಹೊರತು).

(28) ಖಂಡಿತವಾಗಿಯೂ ಅವರ ರಬ್‌ನ ಶಿಕ್ಷೆಯು (ಬರದೆಂದು) ನೆಮ್ಮದಿಯಾಗಿರಲು ಸಾಧ್ಯವಿಲ್ಲದ್ದಾಗಿದೆ.

(29) ತಮ್ಮ ಗುಪ್ತಾಂಗಗಳನ್ನು ಸಂರಕ್ಷಿಸುವವರ (ಹೊರತು).

(30) ತಮ್ಮ ಪತ್ನಿಯರ ಅಥವಾ ಬಲಗೈಗಳು ಸ್ವಾಧೀನದಲ್ಲಿಟ್ಟುಕೊಂಡಿರುವವರ(1295) ವಿಷಯದಲ್ಲಿ ಹೊರತು. ಖಂಡಿತವಾಗಿಯೂ ಅವರು ಆಕ್ಷೇಪಮುಕ್ತರಾಗಿರುವರು.
1295. ಬಲಗೈಗಳು ಸ್ವಾಧೀನದಲ್ಲಿಟ್ಟುಕೊಂಡಿರುವವರು ಎಂದರೆ ಇಸ್ಲಾಮ್ ಆದೇಶಿಸಿದ ನಿಯಮಗಳಿಗೆ ಅನ್ವಯವಾಗಿ ಪಡೆದ ದಾಸಿಯರು ಎಂದರ್ಥ.

(31) ಆದರೆ ಯಾರಾದರೂ ಅದಕ್ಕಿಂತಲೂ ಆಚೆಗೆ ಬಯಸುವುದಾದರೆ ಅಂತಹವರು ಅತಿಕ್ರಮಿಗಳಾಗಿರುವರು.

(32) ತಮ್ಮ ಮೇಲೆ ನಂಬಿಕೆಯಿಂದ ವಹಿಸಲಾಗಿರುವುದನ್ನು ಮತ್ತು ತಮ್ಮ ಕರಾರುಗಳನ್ನು ಪಾಲಿಸುವವರು.

(33) ತಮ್ಮ ಸಾಕ್ಷ್ಯಗಳಲ್ಲಿ ನೇರವಾಗಿ ನಿಲ್ಲುವವರು.

(34) ತಮ್ಮ ನಮಾಝ್‍ಗಳನ್ನು ನಿಷ್ಠೆಯೊಂದಿಗೆ ನಿರ್ವಹಿಸುವವರು (ಮುಂತಾದವರ ಹೊರತು).

(35) ಅಂತಹವರು ಸ್ವರ್ಗೋದ್ಯಾನಗಳಲ್ಲಿ ಗೌರವಿಸಲ್ಪಡುವವರಾಗಿರುವರು.

(36) ಹಾಗಾದರೆ ಸತ್ಯನಿಷೇಧಿಗಳಿಗೇನಾಗಿದೆ? ಅವರು ತಮ್ಮೆಡೆಗೆ ಕತ್ತು ಚಾಚುತ್ತಾ ಬರುತ್ತಿರುವರು.

(37) ಬಲಭಾಗಕ್ಕೂ ಎಡಭಾಗಕ್ಕೂ ಗುಂಪುಗಳಾಗಿ ಚದುರಿ ಹೋಗುತ್ತಿರುವರು.(1296)
1296. ಎಡ ಮತ್ತು ಬಲಭಾಗಗಳಿಂದ ಗುಂಪುಗಳಾಗಿ ಅವರು ತಮ್ಮತ್ತ ಕತ್ತು ಚಾಚಿ ಬರುವರು ಎಂದು ಕೆಲವರು ಅರ್ಥ ನೀಡಿದ್ದಾರೆ.

(38) ಸುಖಾನುಭೂತಿಗಳು ತುಂಬಿದ ಸ್ವರ್ಗದಲ್ಲಿ ತನ್ನನ್ನು ಪ್ರವೇಶ ಮಾಡಿಸಲಾಗಬೇಕೆಂದು ಅವರ ಪೈಕಿ ಪ್ರತಿಯೊಬ್ಬರೂ ಆಸೆ ಪಡುತ್ತಿರುವರೇ?

(39) ಇಲ್ಲ! ಖಂಡಿತವಾಗಿಯೂ ಅವರಿಗೆ ಅರಿವಿರುವುದರಿಂದಲೇ ನಾವು ಅವರನ್ನು ಸೃಷ್ಟಿಸಿರುವೆವು.(1297)
1297. ತುಚ್ಛವಾದ ವೀರ್ಯದಿಂದ ಮನುಷ್ಯನನ್ನು ಸೃಷ್ಟಿಸಲಾಗಿದೆ ಎಂಬ ವಿಷಯ ಎಲ್ಲರಿಗೂ ತಿಳಿದಿದೆ. ಯಾರಿಗೂ ಹುಟ್ಟಿನಿಂದಾಗಿ ಔನ್ನತ್ಯವಿಲ್ಲ. ಆದರ್ಶದಲ್ಲಿ ಅಧಿಷ್ಟಿತವಾದ ಜೀವನವೇ ಔನ್ನತ್ಯದ ಮಾನದಂಡವಾಗಿದೆ.

(40) ಉದಯಸ್ಥಾನಗಳ ಮತ್ತು ಅಸ್ತಮಸ್ಥಾನಗಳ ರಬ್‌ನ ಮೇಲೆ ನಾನು ಆಣೆಯಿಟ್ಟು ಹೇಳುತ್ತಿರುವೆನು. ನಾವು ಸಾಮರ್ಥ್ಯವುಳ್ಳವರಾಗಿರುವೆವು.

(41) ಅವರಿಗಿಂತಲೂ ಉತ್ತಮರಾಗಿರುವವರನ್ನು ಬದಲಿಯಾಗಿ ತರಲು. ಖಂಡಿತವಾಗಿಯೂ ನಾವು ಸೋಲಿಸಲ್ಪಡಲಾರೆವು.

(42) ಆದ್ದರಿಂದ ಅವರಿಗೆ ಎಚ್ಚರಿಕೆ ನೀಡಲಾಗುತ್ತಿರುವ ಅವರ ಆ ದಿನವನ್ನು ಅವರು ಸಂಧಿಸುವ ತನಕ ಅವರನ್ನು ವ್ಯರ್ಥ ಮಾತಿನಲ್ಲಿ ಮಗ್ನರಾಗಿರಲು ಮತ್ತು ಆಟವಾಡುತ್ತಿರಲು ಬಿಟ್ಟುಬಿಡಿರಿ.

(43) ಅಂದರೆ ಅವರು ಒಂದು ಗುರಿಗಂಬದೆಡೆಗೆ ಆತುರದಿಂದ ಸಾಗುವಂತೆ ಗೋರಿಗಳಿಂದ ತ್ವರೆಪಟ್ಟು ಹೊರಟುಬರುವ ದಿನ!

(44) ಅವರ ಕಣ್ಣುಗಳು ಕೆಳಭಾಗಕ್ಕೆ ತಗ್ಗಿರುವುವು. ಅಪಮಾನವು ಅವರನ್ನು ಆವರಿಸಿರುವುದು. ಅದು ಅವರಿಗೆ ಎಚ್ಚರಿಕೆ ನೀಡಲಾಗಿರುವ ದಿನವಾಗಿದೆ.