(1) ‘ತಮ್ಮ ಜನತೆಯ ಬಳಿಗೆ ಯಾತನಾಮಯ ಶಿಕ್ಷೆಯು ಬರುವುದಕ್ಕೆ ಮುಂಚಿತವಾಗಿ ಅವರಿಗೆ ಎಚ್ಚರಿಕೆ ನೀಡಿರಿ’ ಎಂಬ ಆದೇಶದೊಂದಿಗೆ ಖಂಡಿತವಾಗಿಯೂ ನಾವು ನೂಹ್‍ರನ್ನು ಅವರ ಜನತೆಯೆಡೆಗೆ ಕಳುಹಿಸಿದೆವು.
(2) ಅವರು ಹೇಳಿದರು: ‘ಓ ನನ್ನ ಜನರೇ! ಖಂಡಿತವಾಗಿಯೂ ನಾನು ನಿಮಗೆ ಸ್ಪಷ್ಟವಾದ ಮುನ್ನೆಚ್ಚರಿಕೆಗಾರನಾಗಿರುವೆನು.
(3) ನೀವು ಅಲ್ಲಾಹುವನ್ನು ಆರಾಧಿಸಿರಿ ಮತ್ತು ಅವನನ್ನು ಭಯಪಡಿರಿ ಹಾಗೂ ನನ್ನನ್ನು ಅನುಸರಿಸಿರಿ.
(4) ಹಾಗಾದರೆ ಅಲ್ಲಾಹು ನಿಮಗೆ ನಿಮ್ಮ ಪಾಪಗಳಲ್ಲಿ ಕೆಲವನ್ನು ಕ್ಷಮಿಸುವನು ಮತ್ತು ನಿಶ್ಚಿತವಾದ ಒಂದು ಅವಧಿಯವರೆಗೆ ಅವನು ನಿಮಗೆ ದೀರ್ಘಿಸಿ ಕೊಡುವನು. ಖಂಡಿತವಾಗಿಯೂ ಅಲ್ಲಾಹುವಿನ ಅವಧಿಯು ಬಂದರೆ ಅದನ್ನು ದೀರ್ಘಿಸಿಕೊಡಲಾಗದು. ನೀವು ಅರಿತಿದ್ದರೆ’.
(5) ಅವರು ಹೇಳಿದರು: ‘ನನ್ನ ಪ್ರಭೂ! ಖಂಡಿತವಾಗಿಯೂ ನಾನು ನನ್ನ ಜನತೆಯನ್ನು ರಾತ್ರಿಯೂ ಹಗಲೂ ಆಹ್ವಾನಿಸಿದೆನು.
(6) ತರುವಾಯ ನನ್ನ ಆಹ್ವಾನವು ಅವರಿಗೆ ಪಲಾಯನವನ್ನೇ ವಿನಾ ಇನ್ನೇನನ್ನೂ ಅಧಿಕಗೊಳಿಸಲಿಲ್ಲ.
(7) ಖಂಡಿತವಾಗಿಯೂ ನೀನು ಅವರಿಗೆ ಕ್ಷಮಿಸುವುದಕ್ಕಾಗಿ ನಾನು ಅವರನ್ನು ಆಹ್ವಾನಿಸಿದಾಗಲೆಲ್ಲ ಅವರು ತಮ್ಮ ಬೆರಳುಗಳನ್ನು ಕಿವಿಗಳಲ್ಲಿಟ್ಟರು, ಅವರ ಉಡುಪುಗಳನ್ನು ಹೊದ್ದುಕೊಂಡರು, ಅವರು ಹಟತೊಟ್ಟು ನಿಂತರು ಮತ್ತು ಕಡು ಅಹಂಕಾರವನ್ನು ಪ್ರದರ್ಶಿಸಿದರು.
(8) ತರುವಾಯ ನಾನು ಅವರನ್ನು ಬಹಿರಂಗವಾಗಿ ಆಹ್ವಾನಿಸಿದೆನು.
(9) ತರುವಾಯ ನಾನು ಅವರಿಗೆ ಪ್ರತ್ಯಕ್ಷವಾಗಿ ಮತ್ತು ಅತ್ಯಂತ ರಹಸ್ಯವಾಗಿ ಉಪದೇಶ ಮಾಡಿದೆನು’.
(10) ನಾನು ಹೇಳಿದೆನು: ‘ನೀವು ನಿಮ್ಮ ರಬ್‌ನಲ್ಲಿ ಪಾಪಮುಕ್ತಿಯನ್ನು ಬೇಡಿರಿ. ಖಂಡಿತವಾಗಿಯೂ ಅವನು ಅತ್ಯಧಿಕ ಕ್ಷಮಿಸುವವನಾಗಿರುವನು.
(11) ಅವನು ನಿಮಗೆ ಮಳೆಯನ್ನು ಹೇರಳವಾಗಿ ಸುರಿಸುವನು.
(12) ಸಂಪತ್ತು ಮತ್ತು ಸಂತತಿಗಳ ಮೂಲಕ ಅವನು ನಿಮ್ಮನ್ನು ಪೋಷಿಸುವನು. ಅವನು ನಿಮಗೆ ತೋಟಗಳನ್ನು ಮಾಡಿಕೊಡುವನು ಮತ್ತು ಅವನು ನಿಮಗೆ ನದಿಗಳನ್ನು ಮಾಡಿಕೊಡುವನು’.
(13) ನಿಮಗೇನಾಗಿದೆ? ನೀವೇಕೆ ಅಲ್ಲಾಹುವಿಗೆ ಯಾವುದೇ ಮಹತ್ವವನ್ನೂ ನಿರೀಕ್ಷಿಸುತ್ತಿಲ್ಲ?
(14) ಅವನು ನಿಮ್ಮನ್ನು ಹಲವು ಹಂತಗಳಲ್ಲಿ ಸೃಷ್ಟಿಸಿರುವನು.
(15) ಅಲ್ಲಾಹು ಏಳು ಆಕಾಶಗಳನ್ನು ಹೇಗೆ ಪದರಗಳಾಗಿ ಸೃಷ್ಟಿಸಿರುವನೆಂದು ನೀವು ಕಂಡಿಲ್ಲವೇ?
(16) ಅವನು ಅದರಲ್ಲಿ ಚಂದ್ರನನ್ನು ಒಂದು ಪ್ರಕಾಶವನ್ನಾಗಿಯೂ ಸೂರ್ಯನನ್ನು ಒಂದು ದೀಪವನ್ನಾಗಿಯೂ ಮಾಡಿರುವನು.(1298)
1298. ಬೆಳಕಿನ ಮೂಲವಾದ ಸೂರ್ಯನನ್ನು ದೀಪವೆಂದು ಮತ್ತು ಸೂರ್ಯ ಪ್ರಕಾಶದಿಂದ ಪ್ರತಿಫಲನಗೊಳ್ಳುವ ಚಂದ್ರನನ್ನು ಪ್ರಕಾಶವೆಂದು ಇಲ್ಲಿ ಕರೆಯಲಾಗಿದೆ. ಕುರ್‌ಆನ್ ಅವತೀರ್ಣಗೊಳ್ಳುವ ಕಾಲದಲ್ಲಿ ಸೂರ್ಯನ ಮತ್ತು ಚಂದ್ರನ ಬೆಳಕುಗಳ ನಡುವೆಯಿರುವ ಈ ಅಂತರ ವಿದ್ವಾಂಸರಿಗೆ ಅಜ್ಞಾತವಾಗಿತ್ತು. ಆದ್ದರಿಂದ ಕುರ್‌ಆನಿನ ಅಮಾನುಷಿಕತೆಗೆ ಇದೊಂದು ಪುರಾವೆಯಾಗಿದೆ.
(17) ಅಲ್ಲಾಹು ನಿಮ್ಮನ್ನು ಭೂಮಿಯಿಂದ ಒಂದು ಬೆಳೆಯಾಗಿ ಬೆಳೆಸಿರುವನು.(1299)
1299. ಆತ್ಯಂತಿಕ ವಿಶ್ಲೇಷಣೆಯ ಪ್ರಕಾರ ಭೂಮಿಯಲ್ಲಿರುವ ಧಾತುಲವಣಗಳೇ ಮನುಷ್ಯನೆಂಬ ಮಹಾ ವಿದ್ಯಮಾನವಾಗಿ ಬೆಳೆಯುತ್ತದೆ. ಪರಿಪೂರ್ಣವಾಗಿ ಯೋಜನಾಬದ್ಧ ಮತ್ತು ಸುವ್ಯವಸ್ಥಿತವಾದ ಈ ಬೆಳವಣಿಗೆಯ ಬಗ್ಗೆ ಚಿಂತಿಸುವ ಯಾರಿಗೂ ಅಲ್ಲಾಹುವಿನ ಅಸ್ತಿತ್ವವನ್ನು ನಿಷೇಧಿಸಲು ಸಾಧ್ಯವಿಲ್ಲ.
(18) ತರುವಾಯ ಅವನು ನಿಮ್ಮನ್ನು ಅದಕ್ಕೆ ಮರಳಿಸುವನು ಮತ್ತು ನಿಮ್ಮನ್ನು ಹೊರತರುವನು.
(19) ಅಲ್ಲಾಹು ನಿಮಗಾಗಿ ಭೂಮಿಯನ್ನು ಒಂದು ಹಾಸನ್ನಾಗಿ ಮಾಡಿರುವನು.
(20) ಅದರ ವಿಸ್ತಾರವಾಗಿರುವ ಹಾದಿಗಳಲ್ಲಿ ನೀವು ಪ್ರವೇಶಿಸುವ ಸಲುವಾಗಿ.
(21) ನೂಹ್ ಹೇಳಿದರು: ‘ನನ್ನ ಪ್ರಭೂ! ಖಂಡಿತವಾಗಿಯೂ ಇವರು ನನ್ನನ್ನು ಧಿಕ್ಕರಿಸಿರುವರು. ಯಾರಿಗೆ ಅವನ ಸಂಪತ್ತು ಮತ್ತು ಸಂತತಿಯು (ಪಾರಲೌಕಿಕ) ನಷ್ಟವನ್ನೇ ಹೊರತು ಅಧಿಕಗೊಳಿಸುವುದಿಲ್ಲವೋ ಅಂತಹವರನ್ನು ಅವರು ಅನುಸರಿಸಿರುವರು.
(22) (ಮಾತ್ರವಲ್ಲದೆ) ಅವರು (ಮುಖಂಡರು) ಮಹಾ ಒಳಸಂಚು ಹೂಡಿರುವರು.
(23) ಅವರು ಹೇಳಿದರು: ‘(ಓ ಜನರೇ!) ನೀವು ನಿಮ್ಮ ಆರಾಧ್ಯರನ್ನು ಕೈಬಿಡದಿರಿ. ವದ್ದ್, ಸುವಾಅ್, ಯಗೂಸ್, ಯಊಕ್ ಮತ್ತು ನಸ್ರ್‌ರನ್ನು ಬಿಡದಿರಿ’.
(24) ಹೀಗೆ ಅವರು ಅನೇಕ ಜನರನ್ನು ದಾರಿಗೆಡಿಸಿದರು. (ಓ ಪ್ರಭೂ!) ಆ ಅಕ್ರಮಿಗಳಿಗೆ ನೀನು ಮಾರ್ಗಭ್ರಷ್ಟತೆಯನ್ನೇ ಹೊರತು ಇನ್ನೇನನ್ನೂ ಅಧಿಕಗೊಳಿಸದಿರು’.
(25) ಅವರ ಪಾಪಗಳ ನಿಮಿತ್ತ ಅವರನ್ನು ಮುಳುಗಿಸಲಾಯಿತು. ತರುವಾಯ ಅವರನ್ನು ನರಕಾಗ್ನಿಯಲ್ಲಿ ಪ್ರವೇಶ ಮಾಡಿಸಲಾಯಿತು.(1300) ಆಗ ಅಲ್ಲಾಹುವಿನ ಹೊರತು ತಮಗೆ ಯಾವುದೇ ಸಹಾಯಕರನ್ನೂ ಅವರು ಕಾಣಲಿಲ್ಲ.
1300. ಭವಿಷ್ಯದಲ್ಲಿ ನರಕಾಗ್ನಿಗೆ ಪ್ರವೇಶ ಮಾಡಿಸಲಾಗುವವರ ಬಗ್ಗೆ ಪ್ರವೇಶ ಮಾಡಿಸಲಾಯಿತು ಎಂದು ಭೂತಕಾಲ ಕ್ರಿಯೆಯಲ್ಲಿ ಹೇಳಿರುವುದು ಅವರು ನರಕಾಗ್ನಿಯನ್ನು ಪ್ರವೇಶಿಸುವುದು ಖಚಿತ ಎಂಬುದನ್ನು ಸೂಚಿಸುವುದಕ್ಕಾಗಿರಬಹುದು.
(26) ನೂಹ್ ಹೇಳಿದರು: ‘ನನ್ನ ಪ್ರಭೂ! ಭೂಮುಖದಲ್ಲಿ ಸತ್ಯನಿಷೇಧಿಗಳಲ್ಲಿ ಸೇರಿದ ಒಬ್ಬನೇ ಒಬ್ಬ ನಿವಾಸಿಯನ್ನೂ ಉಳಿಸದಿರು.
(27) ನೀನೇನಾದರೂ ಅವರನ್ನು ಉಳಿಸುವುದಾದರೆ ಖಂಡಿತವಾಗಿಯೂ ಅವರು ನಿನ್ನ ದಾಸರನ್ನು ದಾರಿಗೆಡಿಸುವರು. ದುಷ್ಟರಿಗೆ ಮತ್ತು ಸತ್ಯನಿಷೇಧಿಗಳಿಗೇ ಹೊರತು ಅವರು ಜನ್ಮ ನೀಡಲಾರರು.
(28) ನನ್ನ ಪ್ರಭೂ! ನನಗೆ, ನನ್ನ ಮಾತಾಪಿತರಿಗೆ, ಸತ್ಯವಿಶ್ವಾಸಿಯಾಗಿ ನನ್ನ ಮನೆಯನ್ನು ಪ್ರವೇಶಿಸಿದವನಿಗೆ, ಸತ್ಯವಿಶ್ವಾಸಿಗಳಿಗೆ ಮತ್ತು ಸತ್ಯವಿಶ್ವಾಸಿನಿಯರಿಗೆ ಕ್ಷಮಿಸು. ಅಕ್ರಮಿಗಳಿಗೆ ವಿನಾಶದ ಹೊರತು ಇನ್ನೇನನ್ನೂ ಅಧಿಕಗೊಳಿಸದಿರು.