(1) (ಓ ಪ್ರವಾದಿಯವರೇ!) ಹೇಳಿರಿ: ‘ಜಿನ್ನ್‌ಗಳಲ್ಲಿ ಸೇರಿದ ಒಂದು ಗುಂಪು ಕುರ್‌ಆನನ್ನು ಕಿವಿಗೊಟ್ಟು ಆಲಿಸಿರುವರೆಂದು ನನಗೆ ದಿವ್ಯ ಸಂದೇಶ ನೀಡಲಾಗಿದೆ.’ ತರುವಾಯ ಅವರು (ತಮ್ಮ ಸಮುದಾಯದೊಂದಿಗೆ) ಹೇಳಿದರು: ‘ಖಂಡಿತವಾಗಿಯೂ ನಾವು ಅದ್ಭುತವಾದ ಒಂದು ಕುರ್‌ಆನನ್ನು ಆಲಿಸಿರುವೆವು.
(2) ಅದು ಸನ್ಮಾರ್ಗದೆಡೆಗೆ ದಾರಿ ತೋರಿಸುತ್ತದೆ. ಆದ್ದರಿಂದ ನಾವು ಅದರಲ್ಲಿ ವಿಶ್ವಾಸವಿಟ್ಟಿರುವೆವು. ಇನ್ನು ಮುಂದೆ ನಾವು ನಮ್ಮ ರಬ್‌ನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡಲಾರೆವು.
(3) ನಮ್ಮ ರಬ್‌ನ ಮಹಾತ್ಮೆಯು ಅತ್ಯುನ್ನತವಾಗಿದೆ. ಅವನು ಸಂಗಾತಿಯನ್ನಾಗಲಿ, ಸಂತತಿಯನ್ನಾಗಲಿ ಮಾಡಿಕೊಂಡಿಲ್ಲ.
(4) ನಮ್ಮಲ್ಲಿರುವ ಮೂರ್ಖರು ಅಲ್ಲಾಹುವಿನ ಬಗ್ಗೆ ಅತಿರೇಕದ ಮಾತುಗಳನ್ನು ಹೇಳುತ್ತಿರುವರು.
(5) ಮನುಷ್ಯರು ಮತ್ತು ಜಿನ್ನ್‌ಗಳು ಅಲ್ಲಾಹುವಿನ ಮೇಲೆ ಎಂದೂ ಸುಳ್ಳುಹೇಳಲಾರರೆಂದು ನಾವು ಭಾವಿಸಿದ್ದೆವು.
(6) ಮನುಷ್ಯರಲ್ಲಿ ಕೆಲವರು ಜಿನ್ನ್‌ಗಳಲ್ಲಿ ಸೇರಿದ ಕೆಲವರೊಂದಿಗೆ ಅಭಯ ಯಾಚಿಸುತ್ತಿದ್ದರು. ಇದು ಅವರಿಗೆ (ಜಿನ್ನ್‌ಗಳಿಗೆ) ಗರ್ವವನ್ನು ಅಧಿಕಗೊಳಿಸಿತು.
(7) ಅಲ್ಲಾಹು ಯಾರನ್ನೂ ಪುನರುತ್ಥಾನಗೊಳಿಸಲಾರನು ಎಂದು ನೀವು ಭಾವಿಸಿದಂತೆ ಅವರೂ ಭಾವಿಸಿದ್ದರು.
(8) ನಾವು ಆಕಾಶವನ್ನು ಮುಟ್ಟಿ ನೋಡಿದೆವು.(1301) ಆಗ ಅದು ಬಲಿಷ್ಠ ಕಾವಲುಗಾರರಿಂದ ಮತ್ತು ಅಗ್ನಿಜ್ವಾಲೆಗಳಿಂದ ತುಂಬಿರುವುದಾಗಿ ನಾವು ಕಂಡೆವು.
1301. ಆಕಾಶದಲ್ಲಿ ರಹಸ್ಯಗಳನ್ನು ಕದ್ದಾಲಿಸಲು ಯತ್ನಿಸಿದರು ಎಂದರ್ಥ.
(9) ಆಕಾಶದಲ್ಲಿರುವ ಕೆಲವು ಆಸನಗಳಲ್ಲಿ ನಾವು ಆಲಿಸುವುದಕ್ಕಾಗಿ ಕೂರುತ್ತಿದ್ದೆವು. ಆದರೆ ಈಗ(1302) ಯಾರಾದರೂ ಕಿವಿಗೊಟ್ಟು ಆಲಿಸುವುದಾದರೆ ಹೊಂಚುಹಾಕುತ್ತಿರುವ ಒಂದು ಅಗ್ನಿಜ್ವಾಲೆಯನ್ನು ಅವನು ಕಾಣುವನು.
1302. ‘ಈಗ’ ಎಂಬ ಪದದ ತಾತ್ಪರ್ಯ ಕುರ್‌ಆನ್ ಅವತೀರ್ಣಗೊಳ್ಳತೊಡಗಿದ ಬಳಿಕ ಎಂದು ಹೆಚ್ಚಿನ ವ್ಯಾಖ್ಯಾನಕಾರರು ವಿವರಿಸಿದ್ದಾರೆ. ಕುರ್‌ಆನ್ ಅವತೀರ್ಣಗೊಳ್ಳುವುದಕ್ಕೆ ಮುಂಚೆ ಜಿನ್ನ್‌ಗಳು ಆಕಾಶಲೋಕದಿಂದ ಏನೋ ಕೆಲವನ್ನು ಆಲಿಸುತ್ತಿದ್ದರು ಹಾಗೂ ತರುವಾಯ ಅದು ಅವರಿಗೆ ಅಸಾಧ್ಯವಾಯಿತು ಎಂದು ಈ ಸೂಕ್ತಿಗಳು ಸೂಚಿಸುತ್ತವೆ. ಹೆಚ್ಚಿನ ವಿವರಣೆಗಳು ಕುರ್‌ಆನ್‍ನಿಂದಾಗಲಿ ಹದೀಸ್‍ಗಳಿಂದಾಗಲಿ ಲಭ್ಯವಿಲ್ಲ.
(10) ಭೂಮಿಯಲ್ಲಿರುವವರ ವಿಷಯದಲ್ಲಿ ಕೆಡುಕನ್ನು ಉದ್ದೇಶಿಸಲಾಗಿದೆಯೋ ಅಥವಾ ಅವರ ರಬ್ ಅವರನ್ನು ಸನ್ಮಾರ್ಗದಲ್ಲಿ ಸೇರಿಸಲು ಉದ್ದೇಶಿಸಿರುವನೋ ಎಂಬುದನ್ನು ನಾವು ಅರಿಯಲಾರೆವು.
(11) ನಮ್ಮ ಪೈಕಿ ಸಜ್ಜನರಿರುವರು. ಅದಕ್ಕಿಂತ ಕೆಳಗಿನವರೂ ನಮ್ಮಲ್ಲಿರುವರು. ನಾವು ವಿಭಿನ್ನ ಮಾರ್ಗಗಳಲ್ಲಾಗಿರುವೆವು.
(12) ಭೂಮಿಯಲ್ಲಿ ನಮಗೆ ಅಲ್ಲಾಹುವನ್ನು ಸೋಲಿಸಲಾಗದು ಮತ್ತು ಪಲಾಯನ ಮಾಡುವ ಮೂಲಕವೂ ಅವನನ್ನು ಸೋಲಿಸಲಾಗದು(1303) ಎಂದು ನಾವು ಭಾವಿಸಿರುವೆವು.
1303. ಅಲ್ಲಾಹುವಿಗೆ ಗೊತ್ತಾಗದ ರೀತಿಯಲ್ಲಿ ಎಲ್ಲಿಗಾದರೂ ಓಡಿ ತಪ್ಪಿಸಿಕೊಳ್ಳಲು ಸಾಧ್ಯವಾಗದು.
(13) ಸನ್ಮಾರ್ಗವನ್ನು ಆಲಿಸಿದಾಗ ನಾವು ಅದರಲ್ಲಿ ವಿಶ್ವಾಸವಿಟ್ಟೆವು. ಆದ್ದರಿಂದ ಯಾರು ತನ್ನ ರಬ್‌ನಲ್ಲಿ ವಿಶ್ವಾಸವಿಡುವನೋ ಅವನು ಯಾವುದೇ ನಷ್ಟವನ್ನಾಗಲಿ ಅನ್ಯಾಯವನ್ನಾಗಲಿ ಭಯಪಡಬೇಕಾಗಿ ಬರದು.
(14) ಖಂಡಿತವಾಗಿಯೂ ನಮ್ಮ ಪೈಕಿ ಶರಣಾಗತರಾಗಿ ಬದುಕುವವರಿರುವರು. ಅನ್ಯಾಯವೆಸಗುವವರೂ ನಮ್ಮಲ್ಲಿರುವರು. ಆದರೆ ಯಾರು ಶರಣಾಗಿರುವನೋ ಅಂತಹವರು ಸನ್ಮಾರ್ಗವನ್ನು ಅವಲಂಬಿಸಿದವರಾಗಿರುವರು.
(15) ಆದರೆ ಅನ್ಯಾಯವೆಸಗಿದವರು ನರಕಾಗ್ನಿಯ ಸೌದೆಗಳಾಗಿ ಮಾರ್ಪಡುವರು (ಎಂದು ಅವರು ಹೇಳಿದರು).
(16) ಅವರು ಆ ಮಾರ್ಗದಲ್ಲಿ (ಇಸ್ಲಾಮಿನಲ್ಲಿ) ನೇರವಾಗಿ ನೆಲೆಗೊಳ್ಳುವುದಾದರೆ ನಾವು ಅವರಿಗೆ ಕುಡಿಯಲು ಹೇರಳ ನೀರನ್ನು ನೀಡುವೆವು.
(17) ತನ್ಮೂಲಕ ನಾವು ಅವರನ್ನು ಪರೀಕ್ಷಿಸುವ ಸಲುವಾಗಿ. ತನ್ನ ರಬ್‌ನ ಉಪದೇಶವನ್ನು ಬಿಟ್ಟು ಯಾರು ವಿಮುಖನಾಗುವನೋ ಅವನನ್ನು ಅವನು (ಅಲ್ಲಾಹು) ಕಠೋರವಾದ ಶಿಕ್ಷೆಗೆ ಪ್ರವೇಶ ಮಾಡಿಸುವನು (ಎಂದು ನನಗೆ ಬೋಧನೆ ನೀಡಲಾಗಿದೆ.)
(18) ಮಸೀದಿಗಳು ಅಲ್ಲಾಹುವಿಗಿರುವುದಾಗಿವೆ. ಆದ್ದರಿಂದ ನೀವು ಅಲ್ಲಾಹುವಿನ ಜೊತೆಗೆ ಯಾರನ್ನೂ ಕರೆದು ಪ್ರಾರ್ಥಿಸದಿರಿ.(1304)
1304. ಇಂದು ಕೆಲವು ವಿದ್ವಾಂಸ ವೇಷಧಾರಿಗಳು ಅಲ್ಲಾಹುವಿನ ಮಸೀದಿಗಳಲ್ಲೇ ಸೃಷ್ಟಿಗಳನ್ನು ಕರೆದು ಪ್ರಾರ್ಥಿಸಲು ಹಲವಾರು ವಾದಗಳನ್ನು ಮುಂದಿಟ್ಟು ಈ ಸೂಕ್ತಿ ಮತ್ತು 20ನೇ ಸೂಕ್ತಿಯನ್ನು ದುರ್ವ್ಯಾಖ್ಯಾನ ಮಾಡುತ್ತಿದ್ದಾರೆ.
(19) ಅಲ್ಲಾಹುವಿನ ದಾಸರು (ಪ್ರವಾದಿ) ಅವನೊಂದಿಗೆ ಪ್ರಾರ್ಥಿಸುವ ಸಲುವಾಗಿ ಎದ್ದು ನಿಂತಾಗ ಅವರು(1305) ಅವರ ಸುತ್ತಲೂ ದಟ್ಟವಾಗಿ ಸೇರತೊಡಗಿದರು.
1305. ಇಲ್ಲಿ ‘ಅವರು’ ಎಂದರೆ ಜಿನ್ನ್‌ಗಳು ಅಥವಾ ಸಹಾಬಿಗಳು ಅಥವಾ ಪ್ರವಾದಿ(ಸ) ರವರನ್ನು ಅಪಮಾನಿಸಲು ಮತ್ತು ಅಪಹಾಸ್ಯಗೈಯಲು ದಟ್ಟವಾಗಿ ಸೇರುತ್ತಿದ್ದ ಶತ್ರುಗಳು ಎಂಬ ವಿಭಿನ್ನ ಅಭಿಪ್ರಾಯಗಳನ್ನು ವ್ಯಾಖ್ಯಾನಕಾರರು ಹೇಳಿದ್ದಾರೆ. ಪ್ರಬಲಾಭಿಪ್ರಾಯ ಪ್ರಕಾರ ಇಲ್ಲಿ ‘ಅವರು’ ಎಂದರೆ ಶತ್ರುಗಳಾಗಿದ್ದಾರೆ.
(20) (ಓ ಪ್ರವಾದಿಯವರೇ!) ಹೇಳಿರಿ: ‘ನಾನು ನನ್ನ ರಬ್ಬನ್ನು ಮಾತ್ರ ಕರೆದು ಪ್ರಾರ್ಥಿಸುವೆನು. ಅವನೊಂದಿಗೆ ಯಾರನ್ನೂ ನಾನು ಸಹಭಾಗಿಯನ್ನಾಗಿ ಮಾಡಲಾರೆನು’.
(21) ಹೇಳಿರಿ: ‘ನಿಮಗೆ ಹಾನಿಯನ್ನಾಗಲಿ, ಸನ್ಮಾರ್ಗವನ್ನಾಗಲಿ ನೀಡುವುದು ನನ್ನ ಅಧೀನದಲ್ಲಿಲ್ಲ’.
(22) ಹೇಳಿರಿ: ‘ಖಂಡಿತವಾಗಿಯೂ ಅಲ್ಲಾಹುವಿನಿಂದ (ಶಿಕ್ಷೆಯಿಂದ) ಯಾರೂ ನನಗೆ ಎಂದೂ ಅಭಯವನ್ನು ನೀಡಲಾರರು. ಅವನಲ್ಲೇ ವಿನಾ ಬೇರೊಂದು ಅಭಯ ಸ್ಥಾನವನ್ನು ನಾನು ಎಂದಿಗೂ ಕಾಣಲಾರೆನು.
(23) ಅಲ್ಲಾಹುವಿನ ವತಿಯ ಉಪದೇಶ ಮತ್ತು ಅವನ ಸಂದೇಶಗಳ ಹೊರತು (ಯಾವುದೂ ನನ್ನ ಅಧೀನದಲ್ಲಿಲ್ಲ). ಯಾರಾದರೂ ಅಲ್ಲಾಹುವನ್ನು ಮತ್ತು ಅವನ ಸಂದೇಶವಾಹಕರನ್ನು ಧಿಕ್ಕರಿಸುವುದಾದರೆ ಖಂಡಿತವಾಗಿಯೂ ಅವನಿಗೆ ನರಕಾಗ್ನಿಯಿದೆ. ಅಂತಹವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು’.
(24) ಹಾಗೆ ಅವರಿಗೆ ಎಚ್ಚರಿಕೆ ನೀಡಲಾಗುವುದನ್ನು ಕಣ್ಣಾರೆ ಕಂಡಾಗ ಅತ್ಯಂತ ಬಲಹೀನ ಸಹಾಯಕನು ಯಾರು ಮತ್ತು ಎಣಿಕೆಯಲ್ಲಿ ಅತ್ಯಂತ ಕಡಿಮೆ ಯಾರು ಎಂಬುದನ್ನು ಅವರು ಅರಿತುಕೊಳ್ಳುವರು.(1306)
1306. ಲೌಕಿಕ ಶಕ್ತಿ ಮತ್ತು ಜನಬಲವನ್ನು ಪರಿಗಣಿಸಿ ಅನೇಕ ಮಂದಿ ಅಸತ್ಯದ ಕಡೆಗೆ ವಾಲುತ್ತಾರೆ. ಆದರೆ ಅಲ್ಲಾಹುವಿನ (ಐಹಿಕ ಅಥವಾ ಪಾರಲೌಕಿಕ) ಶಿಕ್ಷೆ ಬರುವಾಗ, ಅಸತ್ಯವಾದಿಗಳಿಗೆ ಸಹಾಯ ಮಾಡಲು ಯಾರೂ ಇರಲಾರರೆಂದು ಅವರಿಗೆ ಸ್ಪಷ್ಟವಾಗಲಿದೆ.
(25) (ಓ ಪ್ರವಾದಿಯವರೇ!) ಹೇಳಿರಿ: ‘ನಿಮಗೆ ಎಚ್ಚರಿಕೆ ನೀಡಲಾಗುವ ವಿಷಯವು ಹತ್ತಿರದಲ್ಲೇ ಇದೆಯೋ ಅಥವಾ ನನ್ನ ರಬ್ ಅದಕ್ಕೆ ಅವಧಿಯನ್ನು ನಿಶ್ಚಯಿಸುವನೋ ಎಂಬುದು ನನಗೆ ತಿಳಿದಿಲ್ಲ’.
(26) ಅವನು ಅಗೋಚರವನ್ನು ಅರಿಯುವವನಾಗಿರುವನು. ಆದರೆ ಅವನು ಅವನ ಅಗೋಚರ ಜ್ಞಾನವನ್ನು ಯಾರಿಗೂ ಪ್ರಕಟಗೊಳಿಸಲಾರನು.
(27) ಅವನು ತೃಪ್ತಿಪಟ್ಟಿರುವ ಯಾರಾದರೂ ಸಂದೇಶವಾಹಕರಿಗೆ ಹೊರತು. ಆದರೆ ಖಂಡಿತವಾಗಿಯೂ ಅವನು ಅವರ (ಸಂದೇಶವಾಹಕರ) ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಕಾವಲುಗಾರರನ್ನು ಇರಿಸುವನು.
(28) ಅವರು (ಸಂದೇಶವಾಹಕರು) ಅವರ ರಬ್‌ನ ಸಂದೇಶಗಳನ್ನು ತಲುಪಿಸಿಕೊಟ್ಟಿರುವರೆಂದು ಅವನು (ಅಲ್ಲಾಹು) ಅರಿಯುವ ಸಲುವಾಗಿ.(1307) ಅವರ ಬಳಿಯಿರುವುದನ್ನು ಅವನು ಸಂಪೂರ್ಣವಾಗಿ ಅರಿತಿರುವನು. ಅವನು ಸಕಲ ವಸ್ತುಗಳ ಎಣಿಕೆಯನ್ನೂ ಎಣಿಸಿಟ್ಟಿರುವನು.
1307. ‘ಅವರು (ಸಂದೇಶವಾಹಕರು) ತಮ್ಮ ರಬ್‌ನ ಸಂದೇಶಗಳನ್ನು ತಲುಪಿಸಿಕೊಟ್ಟಿರುವರೆಂದು ಅವರು [ಮುಹಮ್ಮದ್(ಸ) ರವರು] ಅರಿಯುವ ಸಲುವಾಗಿ’ ಎಂದೂ ಇದಕ್ಕೆ ಅರ್ಥ ನೀಡಲಾಗಿದೆ.