74 - Al-Muddaththir ()

|

(1) ಓ ಹೊದ್ದುಕೊಂಡವರೇ!(1316)
1316. ಪ್ರವಾದಿ(ಸ) ರಿಗೆ ಮೊಟ್ಟಮೊದಲಾಗಿ ಹಿರಾ ಗುಹೆಯಲ್ಲಿ ಅವತೀರ್ಣವಾದ ದಿವ್ಯಸಂದೇಶವು ಸೂರತುಲ್ ಅಲಕ್ ಆಗಿತ್ತು. ತರುವಾಯ ಕೆಲವು ಕಾಲದವರೆಗೆ ದಿವ್ಯಸಂದೇಶವು ಅವತೀರ್ಣಗೊಳ್ಳಲಿಲ್ಲ. ಹೀಗೆ ಒಂದು ವಿರಾಮದ ನಂತರ ಮೊಟ್ಟಮೊದಲು ಅವತೀರ್ಣಗೊಂಡದ್ದು ಈ ಅಧ್ಯಾಯವಾಗಿದೆಯೆಂದು ಹಲವು ವರದಿಗಳು ಸೂಚಿಸುತ್ತವೆ. ಭೀತಿಜನಕವಾದ ಒಂದು ದರ್ಶನವುಂಟಾದ ಬಳಿಕ ಪ್ರವಾದಿ(ಸ) ರವರು ಹೊದ್ದು ಮಲಗಿರುವಾಗ ಈ ಅಧ್ಯಾಯ ಅವತೀರ್ಣಗೊಂಡಿತೆಂದು ಅನೇಕ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ.

(2) ಎದ್ದೇಳಿರಿ! (ಜನರಿಗೆ) ಎಚ್ಚರಿಕೆ ನೀಡಿರಿ.

(3) ತಮ್ಮ ರಬ್ಬನ್ನು ಮಹತ್ವಪಡಿಸಿರಿ.

(4) ತಮ್ಮ ಉಡುಪುಗಳನ್ನು ಶುದ್ಧೀಕರಿಸಿರಿ.

(5) ಪಾಪವನ್ನು ವರ್ಜಿಸಿರಿ.

(6) ಹೆಚ್ಚಿನ ಲಾಭವನ್ನು ಆಶಿಸಿ ತಾವು ಉದಾರತೆ ತೋರದಿರಿ.(1317)
1317. ಒಬ್ಬ ಸತ್ಯವಿಶ್ವಾಸಿಯು ಉದಾರತೆ ತೋರುವುದು ಜನರಿಂದ ಪ್ರತ್ಯುಪಕಾರ ಅಥವಾ ಉದಾರವಾದ ಸೌಲಭ್ಯಗಳು ಸಿಗಲೆಂಬ ಉದ್ದೇಶದಿಂದಾಗಿರಬಾರದು. ಸತ್ಯವಿಶ್ವಾಸಿ ಮಾಡುವ ಎಲ್ಲ ಸತ್ಕರ್ಮಗಳ ಪರಮ ಗುರಿ ಅಲ್ಲಾಹುವಿನ ಸಂತೃಪ್ತಿಯಾಗಿರಬೇಕಾಗಿದೆ.

(7) ತಮ್ಮ ರಬ್‌ಗೋಸ್ಕರ ತಾಳ್ಮೆ ವಹಿಸಿರಿ.

(8) ಆದರೆ ಕಹಳೆಯಲ್ಲಿ ಮೊಳಗಿಸ(ಊದ)ಲಾಗುವಾಗ.

(9) ಅಂದು ಅದೊಂದು ಪ್ರಯಾಸಕರ ದಿನವಾಗಿರುವುದು.

(10) ಸತ್ಯನಿಷೇಧಿಗಳಿಗೆ ಸುಗಮವಲ್ಲದ ಒಂದು ದಿನ!

(11) ನನ್ನನ್ನೂ, ನಾನು ಒಬ್ಬಂಟಿಯಾಗಿ ಸೃಷ್ಟಿಸಿದವನನ್ನೂ ಬಿಟ್ಟುಬಿಡಿರಿ.(1318)
1318. ಅವನನ್ನು ಅಲ್ಲಾಹು ನೋಡಿಕೊಳ್ಳುವನು ಎಂದರ್ಥ.

(12) ನಾನು ಅವನಿಗೆ ಹೇರಳ ಸಂಪತ್ತನ್ನು ಮಾಡಿಕೊಟ್ಟೆನು.

(13) ಸನ್ನದ್ಧರಾಗಿ ನಿಲ್ಲುವ ಸಂತತಿಗಳನ್ನೂ ಮಾಡಿಕೊಟ್ಟೆನು.

(14) ನಾನು ಅವನಿಗೆ ಉತ್ತಮ ಸೌಕರ್ಯಗಳನ್ನು ಮಾಡಿಕೊಟ್ಟೆನು.

(15) ಇನ್ನೂ ನಾನು ಇನ್ನಷ್ಟು ನೀಡಬೇಕೆಂದು ಅವನು ಆಸೆಪಡುವನು.

(16) ಇಲ್ಲ, ಖಂಡಿತವಾಗಿಯೂ ಅವನು ನಮ್ಮ ದೃಷ್ಟಾಂತಗಳೊಂದಿಗೆ ವಿರೋಧ ತೋರುವವನಾಗಿರುವನು.

(17) ಕಷ್ಟಕರವಾದ ಒಂದು ಏರುವಿಕೆಯನ್ನು ಏರಲು ನಾವು ಅವನನ್ನು ತರುವಾಯ ನಿರ್ಬಂಧಿಸುವೆವು.

(18) ಖಂಡಿತವಾಗಿಯೂ ಅವನು ಆಲೋಚಿಸಿದನು ಮತ್ತು ಎಣಿಸಿದನು.

(19) ಆದ್ದರಿಂದ ಅವನು ನಾಶವಾಗಲಿ! ಅವನು ಎಣಿಸಿದ್ದಾದರೂ ಹೇಗೆ?

(20) ಪುನಃ ಅವನು ನಾಶವಾಗಲಿ! ಅವನು ಎಣಿಸಿದ್ದಾದರೂ ಹೇಗೆ?

(21) ತರುವಾಯ ಅವನು ನೋಡಿದನು.

(22) ತರುವಾಯ ಅವನು ಮುಖವನ್ನು ಸಿಂಡರಿಸಿದನು ಮತ್ತು ಹುಬ್ಬುಗಂಟಿಕ್ಕಿದನು.

(23) ತರುವಾಯ ಅವನು ಹಿಂದಕ್ಕೆ ತಿರುಗಿದನು ಮತ್ತು ಅಹಂಕಾರ ಪಟ್ಟನು.

(24) ತರುವಾಯ ಅವನು ಹೇಳಿದನು: ‘ಇದು (ಯಾರಿಂದಲೋ) ಉದ್ಧರಿಸಲಾಗುತ್ತಿರುವ ಮಾಂತ್ರಿಕತೆಯಲ್ಲದೆ ಇನ್ನೇನೂ ಅಲ್ಲ.

(25) ಇದು ಮನುಷ್ಯನ ವಚನವಲ್ಲದೆ ಇನ್ನೇನೂ ಅಲ್ಲ’.(1319)
1319. ಪ್ರವಾದಿ(ಸ) ರವರನ್ನು ಸಂದರ್ಶಿಸಿ, ಕುರ್‌ಆನ್ ದೈವಿಕ ಸಂದೇಶವೆಂದು ಮನದಟ್ಟಾದ ಬಳಿಕ ಅಬೂ ಜಹಲ್ ಮುಂತಾದವರ ಪ್ರೇರಣೆಗೆ ಮಣಿದು ಪ್ರವಾದಿ(ಸ) ರವರನ್ನು ತಿರಸ್ಕರಿಸಿದ ವಲೀದ್ ಇಬ್ನ್ ಮುಗೀರಃ ಎಂಬ ಕುರೈಶೀ ಮುಖಂಡನ ಬಗ್ಗೆ 11ರಿಂದ 30ರವರೆಗಿನ ಸೂಕ್ತಿಗಳು ಅವತೀರ್ಣಗೊಂಡವು. ಇದು ಇಂತಹ ನಿಲುವನ್ನು ತಾಳುವ ಎಲ್ಲರಿಗೂ ಅನ್ವಯವಾಗುತ್ತದೆ.

(26) ನಾನು ಅವನನ್ನು ತರುವಾಯ ಸಖರ್ (ನರಕಾಗ್ನಿ)ನಲ್ಲಿಟ್ಟು ಉರಿಸುವೆನು.

(27) ಸಖರ್ ಎಂದರೇನೆಂದು ತಮಗೆ ಗೊತ್ತೇ?

(28) ಅದು ಏನನ್ನೂ ಬಾಕಿಯುಳಿಸದು ಮತ್ತು ಬಿಟ್ಟುಬಿಡದು.

(29) ಅದು ಚರ್ಮವನ್ನು ಸುಟ್ಟು ಕರಕಲಾಗಿಸಿ ರೂಪವನ್ನು ಬದಲಾಯಿಸುವುದು.

(30) ಅದರ ಮೇಲ್ನೋಟ ವಹಿಸಲು ಹತ್ತೊಂಬತ್ತು ಮಂದಿಯಿರುವರು.

(31) ನರಕಾಗ್ನಿಯ ಮೇಲ್ನೋಟ ವಹಿಸಲು ನಾವು ನೇಮಿಸಿರುವುದು ಮಲಕ್‍ಗಳನ್ನು ಮಾತ್ರವಾಗಿದೆ. ಅವರ ಸಂಖ್ಯೆಯನ್ನು ನಾವು ಸತ್ಯನಿಷೇಧಿಗಳಿಗೆ ಒಂದು ಪರೀಕ್ಷೆಯನ್ನಾಗಿ ಮಾತ್ರ ಮಾಡಿರುವೆವು.(1320) ಅದು ಗ್ರಂಥ ನೀಡಲಾದವರಿಗೆ ದೃಢವಿಶ್ವಾಸವುಂಟಾಗುವ ಸಲುವಾಗಿ,(1321) ಸತ್ಯವಿಶ್ವಾಸಿಗಳಿಗೆ ವಿಶ್ವಾಸವು ಅಧಿಕವಾಗುವ ಸಲುವಾಗಿ, ಗ್ರಂಥ ನೀಡಲಾದವರು ಮತ್ತು ಸತ್ಯವಿಶ್ವಾಸಿಗಳು ಸಂದೇಹಪಡದಿರುವ ಸಲುವಾಗಿ ಮತ್ತು ‘ಅಲ್ಲಾಹು ಇದರ ಮೂಲಕ ಯಾವ ಉದಾಹರಣೆಯನ್ನು ತೋರಿಸಲು ಬಯಸುತ್ತಿರುವನು?’ ಎಂದು ಹೃದಯಗಳಲ್ಲಿ ರೋಗವಿರುವವರು ಮತ್ತು ಸತ್ಯನಿಷೇಧಿಗಳು ಹೇಳುವ ಸಲುವಾಗಿದೆ.(1322) ಹೀಗೆ ಅಲ್ಲಾಹು ಅವನಿಚ್ಛಿಸುವವರನ್ನು ದಾರಿಗೆಡಿಸುವನು ಮತ್ತು ಅವನಿಚ್ಛಿಸುವವರನ್ನು ಸನ್ಮಾರ್ಗದಲ್ಲಿ ಸೇರಿಸುವನು. ತಮ್ಮ ರಬ್‌ನ ಸೈನ್ಯಗಳನ್ನು ಅವನ ಹೊರತು ಯಾರೂ ಅರಿಯಲಾರರು. ಇದು ಮನುಷ್ಯರಿಗಿರುವ ಒಂದು ಉಪದೇಶವಲ್ಲದೆ ಇನ್ನೇನೂ ಅಲ್ಲ.
1320. ಸಾಮಾನ್ಯವಾಗಿ ಅಲೌಕಿಕ ವಿಷಯಗಳ ಬಗ್ಗೆಯುಳ್ಳ ಎಲ್ಲ ವಿಶದೀಕರಣಗಳನ್ನೂ ಸತ್ಯನಿಷೇಧಿಗಳು ತಿರಸ್ಕರಿಸುತ್ತಾರೆ. ನರಕದ ಕಾವಲುಗಾರರಾದ ಮಲಕ್‍ಗಳ ಸಂಖ್ಯೆ ಕೂಡ ಅವರ ಅಪಹಾಸ್ಯಕ್ಕೆ ಗುರಿಯಾಗುವುದು ಸಹಜವಾಗಿದೆ. 1321. ತೌರಾತ್ ಮತ್ತು ಇಂಜೀಲ್‍ಗಳಲ್ಲಿ ಮಲಕ್‍ಗಳ ಮತ್ತು ಸ್ವರ್ಗ ನರಕಗಳ ಬಗ್ಗೆ ಹೇರಳವಾಗಿ ಪ್ರಸ್ತಾಪಿಸಲಾಗಿರುವುದರಿಂದ ಗ್ರಂಥದವರಿಗೆ ಈ ವಿಷಯ ಅಪರಿಚಿತವಾಗಿರುವ ಸಾಧ್ಯತೆಯಿಲ್ಲ.

(32) ಅನುಮಾನವೇ ಇಲ್ಲ, ಚಂದ್ರನ ಮೇಲಾಣೆ!

(33) ರಾತ್ರಿ ಹಿಂದೆ ಸರಿದು ಹೋಗುವಾಗ ಅದರ ಮೇಲಾಣೆ!

(34) ಪ್ರಭಾತವು ಬೆಳ್ಳಗಾಗುವಾಗ ಅದರ ಮೇಲಾಣೆ!

(35) ಖಂಡಿತವಾಗಿಯೂ ಅದು (ನರಕಾಗ್ನಿಯು) ಗಂಭೀರ ವಿಷಯಗಳಲ್ಲೊಂದಾಗಿದೆ.

(36) ಮನುಷ್ಯರಿಗೆ ಒಂದು ಎಚ್ಚರಿಕೆ ಎಂಬ ನೆಲೆಯಲ್ಲಿ.

(37) ಅಂದರೆ ನಿಮ್ಮ ಪೈಕಿ ಮುಂದಕ್ಕೆ ಸಾಗಲು ಅಥವಾ ಹಿಂದಕ್ಕೆ ಸಾಗಲು ಇಚ್ಛಿಸುವವರಿಗೆ.(1323)
1323. ಎಚ್ಚರಿಕೆಗಳನ್ನು ಪಾಲಿಸಿ ಸನ್ಮಾರ್ಗದಲ್ಲಿ ಮುನ್ನಡೆಯಲು ಇಚ್ಛಿಸುವವರಿಗೆ ಹಾಗೆ ಮಾಡಬಹುದು. ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ಹಿಂದಕ್ಕೆ ಚಲಿಸಲು ಇಚ್ಛಿಸುವವರಿಗೆ ಹಾಗೆ ಮಾಡುವ ಸ್ವಾತಂತ್ರ್ಯವೂ ಇದೆ.

(38) ಪ್ರತಿಯೊಬ್ಬ ವ್ಯಕ್ತಿಯೂ ತಾನು ಗಳಿಸಿರುವುದಕ್ಕೆ ಒತ್ತೆಯಿಡಲಾದವನಾಗಿರುವನು.(1324)
1324. ಪ್ರತಿಯೊಬ್ಬ ಮನುಷ್ಯನೂ ಇಹಲೋಕದಲ್ಲಿ ಮಾಡಿದ ಕರ್ಮಗಳ ಫಲವನ್ನು ಶಾಶ್ವತವಾಗಿ ಅನುಭವಿಸಲು ವಿಧಿಸಲ್ಪಟ್ಟವನಾಗಿರುವನು ಎಂದರ್ಥ.

(39) ಬಲಭಾಗದವರ ಹೊರತು.(1325)
1325. ಸತ್ಯವಿಶ್ವಾಸಿಯಾಗಿದ್ದುಕೊಂಡು, ದುಷ್ಕರ್ಮಗಳಿಗಿಂತಲೂ ಅಧಿಕವಾಗಿ ಸತ್ಕರ್ಮಗಳನ್ನು ಮಾಡಿದವರು ತಮ್ಮ ಕ್ಷುಲ್ಲಕ ಪಾಪಗಳಿಗಾಗಿ ಶಿಕ್ಷೆಯನ್ನು ಅನುಭವಿಸಬೇಕಾಗಿ ಬರದು. ಪ್ರಜ್ಞಾಪೂರ್ವಕವಾಗಿ ಪಾಪ ಮಾಡಿ ಪಶ್ಚಾತ್ತಾಪ ಪಡದವರು ಶಿಕ್ಷೆಯನ್ನು ಅನುಭವಿಸಿಯೇ ತೀರುವರು.

(40) ಅವರು ಕೆಲವು ಸ್ವರ್ಗೋದ್ಯಾನಗಳಲ್ಲಿ ಪರಸ್ಪರ ವಿಚಾರಿಸುವರು.

(41) ಅಪರಾಧಿಗಳ ಬಗ್ಗೆ.

(42) ‘ನಿಮ್ಮನ್ನು ನರಕದಲ್ಲಿ ಪ್ರವೇಶ ಮಾಡಿಸಿದ್ದೇನು?’ ಎಂದು.

(43) ಅವರು (ಅಪರಾಧಿಗಳು) ಹೇಳುವರು: ‘ನಾವು ನಮಾಝ್ ಮಾಡುವವರಲ್ಲಿ ಸೇರಿದವರಾಗಿರಲಿಲ್ಲ.

(44) ನಾವು ನಿರ್ಗತಿಕರಿಗೆ ಆಹಾರ ನೀಡುತ್ತಿರಲಿಲ್ಲ.

(45) ಸ್ವೇಚ್ಛೆಯಲ್ಲಿ ಮಗ್ನರಾಗಿರುವವರೊಂದಿಗೆ ನಾವೂ ಮಗ್ನರಾಗಿದ್ದೆವು.

(46) ನಾವು ಪ್ರತಿಫಲ ದಿನವನ್ನು ನಿಷೇಧಿಸುತ್ತಿದ್ದೆವು.

(47) ಹಾಗಿರುವಾಗ ಖಚಿತವಾದ ಆ ಮರಣವು ನಮ್ಮ ಬಳಿಗೆ ಬಂದಿತು’.

(48) ಇನ್ನು ಶಿಫಾರಸು ಮಾಡುವವರ ಯಾವುದೇ ಶಿಫಾರಸೂ ಅವರಿಗೆ ಪ್ರಯೋಜನಪಡದು.

(49) ಅವರಿಗೇನಾಗಿದೆ? ಅವರೇಕೆ ಉಪದೇಶದಿಂದ ವಿಮುಖರಾಗುತ್ತಿದ್ದಾರೆ?

(50) ರಕ್ಷಣೆಗಾಗಿ ಓಡುವ ಕತ್ತೆಗಳಂತೆ.

(51) ಸಿಂಹವನ್ನು ಭಯಪಟ್ಟು ಓಡುವ (ಕತ್ತೆಗಳಂತೆ).

(52) ಅಲ್ಲ, ತನಗೆ ಅಲ್ಲಾಹುವಿನ ವತಿಯಿಂದ ತೆರೆದಿಡಲಾದ ಗ್ರಂಥಗಳನ್ನು ನೀಡಲಾಗಬೇಕೆಂದು ಅವರ ಪೈಕಿ ಪ್ರತಿಯೊಬ್ಬರೂ ಬಯಸುತ್ತಿರುವರು.(1326)
1326. ಮುಹಮ್ಮದ್(ಸ) ರವರನ್ನು ಪ್ರವಾದಿಯೆಂದು ಒಪ್ಪಿಕೊಳ್ಳದ ಸತ್ಯನಿಷೇಧಿಗಳ ಪೈಕಿ ಪ್ರತಿಯೊಬ್ಬರೂ ತಾನು ವಿಶ್ವಾಸವಿಡಬೇಕಾದರೆ ತನಗೇ ನೇರವಾಗಿ ಗ್ರಂಥ ಅವತೀರ್ಣಗೊಳ್ಳಬೇಕು ಎಂಬ ನಿಲುವನ್ನು ತಾಳಿದ್ದರು ಎಂದರ್ಥ.

(53) ಅಲ್ಲ, ಆದರೆ ಅವರು ಪರಲೋಕವನ್ನು ಭಯಪಡುತ್ತಿಲ್ಲ.

(54) ಅಲ್ಲ, ಖಂಡಿತವಾಗಿಯೂ ಇದೊಂದು ಉಪದೇಶವಾಗಿದೆ.

(55) ಆದ್ದರಿಂದ ಇಚ್ಛೆಯುಳ್ಳವರು ಅದನ್ನು ಸ್ಮರಿಸಿಕೊಳ್ಳಲಿ.

(56) ಅಲ್ಲಾಹು ಇಚ್ಛಿಸಿದ ಹೊರತು ಅವರು ಸ್ಮರಿಸಲಾರರು. ಭಯಭಕ್ತಿ ತೋರಿಸಲು ಅರ್ಹನಾಗಿರುವವನು ಮತ್ತು ಪಾಪಮುಕ್ತಿ ಬೇಡಲು ಅರ್ಹನಾಗಿರುವವನು ಅವನಾಗಿರುವನು.