(1) ಪುನರುತ್ಥಾನದ ದಿನದ ಮೇಲೆ ನಾನು ಆಣೆಯಿಡುತ್ತಿರುವೆನು.
(2) ದೂಷಿಸುವ ಮನಸ್ಸಿನ ಮೇಲೆ ನಾನು ಆಣೆಯಿಡುತ್ತಿರುವೆನು.
(3) ನಾವು ಮನುಷ್ಯನ ಮೂಳೆಗಳನ್ನು ಒಟ್ಟುಗೂಡಿಸಲಾರೆವು ಎಂದು ಮನುಷ್ಯನು ಭಾವಿಸುತ್ತಿರುವನೇ?(1327)
1327. ನಾವು ಮಣ್ಣು ಮತ್ತು ಅಸ್ಥಿಪಂಜರವಾಗಿ ಹೋದ ಬಳಿಕವೂ ನಮ್ಮನ್ನು ಪುನರ್ಜೀವಗೊಳಿಸಲಾಗುವುದೇ? ಎಂದು ಕೇಳಿದವರೊಂದಿಗೆ ಇಲ್ಲಿ ಪ್ರಶ್ನಿಸಲಾಗಿದೆ. ಮನುಷ್ಯ ಶರೀರವನ್ನು ಸರಿಯಾದ ವ್ಯವಸ್ಥೆಯೊಂದಿಗೆ ಒಮ್ಮೆ ಸೃಷ್ಟಿಸಿದವನಿಗೆ ಚೂರು ಚೂರಾಗಿ ಬಿಟ್ಟ ಅಸ್ಥಿಪಂಜರವನ್ನು ಪುನರ್ಜೋಡಣೆ ಮಾಡಲು ಕಷ್ಟವಾಗದು.
(4) ಹೌದು! ಅವನ ಬೆರಳ ತುದಿಗಳನ್ನು ಕೂಡ ಸರಿಪಡಿಸಲು ನಾವು ಸಾಮರ್ಥ್ಯವುಳ್ಳವರಾಗಿರುವೆವು.(1328)
1328. ಕೋಟ್ಯಾನುಕೋಟಿ ಮನುಷ್ಯರ ಪೈಕಿ ಪ್ರತಿಯೊಬ್ಬರ ಬೆರಳ ತುದಿಗಳು ವಿಭಿನ್ನವಾಗಿವೆ. ಬೆರಳಚ್ಚು ಎಂಬುದು ಗುರುತು ಪತ್ತೆಹಚ್ಚಲು ಬಳಸುವ ಎಂದೆಂದಿಗೂ ಬದಲಾಗದ ಒಂದು ಉಪಾಧಿಯಾಗಿದೆ. ಬೆರಳ ತುದಿಗಳ ಗಾತ್ರದಲ್ಲಿರುವ ಅನುಪಾತಕ್ಕನುಗುಣವಾಗಿರುವ ವ್ಯತ್ಯಾಸವು ಕೂಡ ಅತ್ಯಂತ ಪ್ರಯೋಜನಕಾರಿಯಾಗಿದೆ. ಇವೆಲ್ಲವೂ ಅಲ್ಲಾಹುವಿನ ಸೃಷ್ಟಿ ವಿಸ್ಮಯಗಳ ಉತ್ತಮ ಉದಾಹರಣೆಗಳಾಗಿವೆ.
(5) ಆದರೂ ಮನುಷ್ಯನು ತನ್ನ ಭಾವೀ ಜೀವನದಲ್ಲಿ ಧಿಕ್ಕಾರವೆಸಗಲು ಇಚ್ಛಿಸುತ್ತಿರುವನು.
(6) ‘ಈ ಪುನರುತ್ಥಾನ ದಿನ ಯಾವಾಗ?’ ಎಂದು ಅವನು ಕೇಳುವನು.
(7) ಆದರೆ ಕಣ್ಣು ಕೋರೈಸುವಾಗ,
(8) ಚಂದ್ರನಿಗೆ ಗ್ರಹಣ ಹಿಡಿಯುವಾಗ,
(9) ಸೂರ್ಯ ಚಂದ್ರರನ್ನು ಒಟ್ಟುಗೂಡಿಸಲಾಗುವಾಗ.
(10) ಆ ದಿನದಂದು ಮನುಷ್ಯನು ಹೇಳುವನು: ‘ಓಡಿ ಪಾರಾಗುವುದಾದರೂ ಎಲ್ಲಿಗೆ?’
(11) ಇಲ್ಲ, ಯಾವುದೇ ರಕ್ಷಣೆಯೂ ಇಲ್ಲ.(1329)
1329. ‘ವಝರ್’ ಎಂಬ ಪದಕ್ಕೆ ರಕ್ಷಣೆ, ರಕ್ಷಣಾ ಸ್ಥಳ ಇತ್ಯಾದಿ ಅರ್ಥಗಳಿವೆ.
(12) ಆ ದಿನದಂದು ತೆರಳಬೇಕಾಗಿರುವುದು ತಮ್ಮ ರಬ್‌ನೆಡೆಗೇ ಆಗಿದೆ.
(13) ಆ ದಿನದಂದು ಮನುಷ್ಯನು ಪೂರ್ವಭಾವಿಯಾಗಿ ಮಾಡಿರುವ ಕರ್ಮಗಳನ್ನು ಮತ್ತು ಮುಂದೂಡಿರುವ ಕರ್ಮಗಳನ್ನು ಅವನಿಗೆ ತಿಳಿಸಿಕೊಡಲಾಗುವುದು.
(14) ಅಲ್ಲ, ಮನುಷ್ಯನು ಸ್ವತಃ ಅವನ ವಿರುದ್ಧವೇ ಒಬ್ಬ ಸಾಕ್ಷಿಯಾಗಿರುವನು.
(15) ಅವನು ನೆಪಗಳನ್ನು ಒಡ್ಡಿದರೂ ಸರಿ.
(16) ತಾವು ಅದನ್ನು (ಕುರ್‌ಆನನ್ನು) ಅವಸರದಿಂದ ಕಂಠಪಾಠ ಮಾಡುವ ಸಲುವಾಗಿ ಅದರೊಂದಿಗೆ ತಮ್ಮ ನಾಲಗೆಯನ್ನು ಅಲ್ಲಾಡಿಸದಿರಿ.
(17) ಖಂಡಿತವಾಗಿಯೂ ಅದರ (ಕುರ್‌ಆನಿನ) ಕ್ರೋಢೀಕರಣ ಮತ್ತು ಅದರ ಪಾರಾಯಣವು ನಮ್ಮ ಕರ್ತವ್ಯವಾಗಿದೆ.(1330)
1330. ಜಿಬ್ರೀಲ್(ಅ) ಎಂಬ ಮಲಕ್ ದಿವ್ಯ ಸಂದೇಶವನ್ನು ಓದಿಕೊಟ್ಟು ನಿರ್ಗಮಿಸಿದರೆ ತಕ್ಷಣ ಪ್ರವಾದಿ(ಸ) ರವರು ಅದನ್ನು ಕಂಠಪಾಠ ಮಾಡುವ ಸಲುವಾಗಿ ಪುನರಾವರ್ತಿಸಿ ಉಚ್ಛರಿಸುವುದು ಸಾಮಾನ್ಯವಾಗಿತ್ತು. ಹಾಗೆ ಪುನರಾವರ್ತಿಸಿ ಕಲಿಯದಿದ್ದರೆ ಮರೆತು ಹೋಗಬಹುದೋ ಎಂದು ಅವರು ಭಯಪಟ್ಟಿದ್ದರು. ಈ ರೀತಿ ಭಯಪಡಬೇಕಾಗಿಲ್ಲ, ಕುರ್‌ಆನನ್ನು ಸಂಪೂರ್ಣವಾಗಿ ಪ್ರವಾದಿ(ಸ) ರವರ ಹೃದಯದಲ್ಲಿ ಕ್ರೋಢೀಕರಿಸುವ ಹೊಣೆ ಅಲ್ಲಾಹುವಿನದ್ದಾಗಿದೆಯೆಂದು ಈ ಸೂಕ್ತಿಯು ಸ್ಪಷ್ಟಪಡಿಸುತ್ತದೆ.
(18) ನಾವು ಅದನ್ನು ಪಾರಾಯಣ ಮಾಡಿಕೊಟ್ಟರೆ ಆ ಪಾರಾಯಣವನ್ನು ಹಿಂಬಾಲಿಸಿರಿ.
(19) ತರುವಾಯ ಅದನ್ನು ವಿವರಿಸಿಕೊಡಬೇಕಾದುದು ನಮ್ಮ ಕರ್ತವ್ಯವಾಗಿದೆ.
(20) ಅಲ್ಲ, ನೀವು ಕ್ಷಣಿಕವಾದ ಈ ಬದುಕನ್ನು ಇಷ್ಟಪಡುತ್ತಿರುವಿರಿ.
(21) ಪರಲೋಕವನ್ನು ನೀವು ಬಿಟ್ಟುಬಿಡುತ್ತಿರುವಿರಿ.
(22) ಆ ದಿನದಂದು ಕೆಲವು ಮುಖಗಳು ಪ್ರಸನ್ನವಾಗಿರುವುವು.
(23) ಅವುಗಳ ರಬ್‌ನೆಡೆಗೆ ಅವು ನೋಡುತ್ತಿರುವುವು.
(24) ಆ ದಿನದಂದು ಕೆಲವು ಮುಖಗಳು ವಿಷಣ್ಣವಾಗಿರುವುವು.
(25) ಯಾವುದೋ ಮಹಾ ವಿಪತ್ತು ಅವುಗಳ ಮೇಲೆ ಎರಗಲಿರುವುದು ಎಂದು ಅವರು ಭಾವಿಸುವರು.
(26) ಇಲ್ಲ, (ಪ್ರಾಣವು) ಗಂಟಲಿಗೆ ತಲುಪಿದಾಗ.
(27) ‘ಮಂತ್ರಿಸುವವರು ಯಾರಾದರೂ ಇರುವರೇ?’ ಎಂದು ಕೇಳಲಾಗುವಾಗ.
(28) ಅದು (ತನ್ನ) ಅಗಲುವಿಕೆಯಾಗಿದೆಯೆಂದು ಅವನಿಗೆ ಖಾತ್ರಿಯಾಗುವಾಗ
(29) ಕಣಕಾಲು ಕಣಕಾಲಿನೊಂದಿಗೆ ಜೋಡಣೆಯಾಗುವಾಗ(1331)
1331. ಮರಣ ಭೀತಿಯಿಂದ ಕಣಕಾಲುಗಳು ಒಂದಕ್ಕೊಂದು ಸುತ್ತಿಕೊಂಡ ಸ್ಥಿತಿಯಲ್ಲಾಗಲಿವೆ ಎಂದಾಗಿರಬಹುದು ಇದರ ತಾತ್ಪರ್ಯ.
(30) ಆ ದಿನದಂದು (ಅವನನ್ನು) ಸಾಗಿಸುವುದು ತಮ್ಮ ರಬ್‌ನೆಡೆಗಾಗಿರುವುದು.
(31) ಆದರೆ ಅವನು ವಿಶ್ವಾಸವಿಡಲಿಲ್ಲ, ನಮಾಝ್ ನಿರ್ವಹಿಸಲಿಲ್ಲ.
(32) ಆದರೆ ಅವನು ನಿಷೇಧಿಸಿದನು ಮತ್ತು ವಿಮುಖನಾದನು.
(33) ತರುವಾಯ ದುರಭಿಮಾನಪಡುತ್ತಾ ಅವನು ತನ್ನ ಮನೆಯವರ ಕಡೆಗೆ ತೆರಳಿದನು.
(34) (ಶಿಕ್ಷೆಯು) ನಿನಗೆ ಅತ್ಯಂತ ಅರ್ಹವಾದುದಾಗಿದೆ. ನಿನಗೆ ಅತ್ಯಂತ ಅರ್ಹವಾದುದಾಗಿದೆ.
(35) ಪುನಃ ನಿನಗೆ ಅತ್ಯಂತ ಅರ್ಹವಾದುದಾಗಿದೆ. ನಿನಗೆ ಅತ್ಯಂತ ಅರ್ಹವಾದುದಾಗಿದೆ.(1332)
1332. ಶಿಕ್ಷೆಯ ಖಚಿತತೆಯನ್ನು ಖಾತ್ರಿಯಾಗಿ ಹೇಳುವ ಸಲುವಾಗಿ ನಾಲ್ಕು ಬಾರಿ ಅದರ ಬಗ್ಗೆ ಪುನರಾವರ್ತಿಸಲಾಗಿದೆ.
(36) ತನ್ನನ್ನು ಸುಮ್ಮನೆ ಬಿಟ್ಟುಬಿಡಲಾಗುವುದು ಎಂದು ಮನುಷ್ಯನು ಭಾವಿಸುವನೇ?
(37) ಅವನು ಸ್ರವಿಸಲಾಗುವ ವೀರ್ಯದ ಒಂದು ಕೋಶವಾಗಿರಲಿಲ್ಲವೇ?
(38) ತರುವಾಯ ಅವನೊಂದು ರಕ್ತಪಿಂಡವಾದನು. ತರುವಾಯ ಅಲ್ಲಾಹು (ಅವನನ್ನು) ಸೃಷ್ಟಿಸಿ ಸರಿಪಡಿಸಿದನು.
(39) ತರುವಾಯ ಅವನು ಅದರಿಂದ ಗಂಡು ಮತ್ತು ಹೆಣ್ಣು ಎಂಬ ಎರಡು ಜೋಡಿಗಳನ್ನು ಮಾಡಿದನು.
(40) ಅಂತಹವನು ಮೃತಪಟ್ಟವರಿಗೆ ಜೀವ ನೀಡಲು ಸಾಮರ್ಥ್ಯವುಳ್ಳವನಲ್ಲವೇ?