(1) ಅವರು ಪರಸ್ಪರ ಯಾವುದರ ಬಗ್ಗೆ ವಿಚಾರಿಸುತ್ತಿರುವರು?
(2) ಆ ಮಹಾ ವೃತ್ತಾಂತದ ಬಗ್ಗೆಯೋ?
(3) ಅಂದರೆ ಅವರು ಭಿನ್ನಾಭಿಪ್ರಾಯದಲ್ಲಿರುವ (ಆ ವೃತ್ತಾಂತದ ಬಗ್ಗೆಯೋ)?
(4) ಅನುಮಾನವೇ ಇಲ್ಲ. ಅವರು ತರುವಾಯ ಅರಿತುಕೊಳ್ಳುವರು.
(5) ಪುನಃ ಅನುಮಾನವೇ ಇಲ್ಲ. ಅವರು ತರುವಾಯ ಅರಿತುಕೊಳ್ಳುವರು.
(6) ನಾವು ಭೂಮಿಯನ್ನು ಒಂದು ಹಾಸನ್ನಾಗಿ ಮಾಡಿಲ್ಲವೇ?
(7) ಪರ್ವತಗಳನ್ನು ಗೂಟಗಳನ್ನಾಗಿ ಮಾಡಿಲ್ಲವೇ?
(8) ನಿಮ್ಮನ್ನು ನಾವು ಜೋಡಿಗಳನ್ನಾಗಿ ಸೃಷ್ಟಿಸಿರುವೆವು.
(9) ನಿಮ್ಮ ನಿದ್ದೆಯನ್ನು ನಾವು ವಿಶ್ರಾಂತಿಯನ್ನಾಗಿ ಮಾಡಿರುವೆವು.
(10) ರಾತ್ರಿಯನ್ನು ನಾವು ಒಂದು ಉಡುಪನ್ನಾಗಿ ಮಾಡಿರುವೆವು.(1342)
1342. ಒಂದು ಉಡುಪು ನೀಡುವಂತಹ ಗೋಪ್ಯತೆ ಮತ್ತು ಖಾಸಗಿತನವನ್ನು ರಾತ್ರಿಯ ಕತ್ತಲು ನಮಗೆ ನೀಡುತ್ತದೆ.
(11) ಹಗಲನ್ನು ನಾವು ಜೀವನೋಪಾಯ ವೇಳೆಯನ್ನಾಗಿ ಮಾಡಿರುವೆವು.
(12) ನಿಮ್ಮ ಮೇಲ್ಭಾಗದಲ್ಲಿ ನಾವು ಬಲಿಷ್ಠವಾದ ಏಳು ಆಕಾಶಗಳನ್ನು ನಿರ್ಮಿಸಿರುವೆವು.
(13) ಉರಿಯುವ ಒಂದು ದೀಪವನ್ನು ನಾವು ಮಾಡಿರುವೆವು.
(14) ಕಾರ್ಮೋಡಗಳಿಂದ ಧಾರಾಕಾರವಾಗಿ ಸುರಿಯುವ ನೀರನ್ನು ನಾವು ಇಳಿಸಿಕೊಟ್ಟಿರುವೆವು.
(15) ತನ್ಮೂಲಕ ಧಾನ್ಯವನ್ನು ಹಾಗೂ ಸಸ್ಯವನ್ನು ನಾವು ಹೊರತರುವ ಸಲುವಾಗಿ.
(16) ಮತ್ತು ದಟ್ಟವಾಗಿ ಬೆಳೆಯುವ ತೋಟಗಳನ್ನು.
(17) ಖಂಡಿತವಾಗಿಯೂ ತೀರ್ಮಾನದ ದಿನವು ಸಮಯ ನಿಶ್ಚಯಿಸಲ್ಪಟ್ಟದ್ದಾಗಿದೆ.
(18) ಅಂದರೆ ಕಹಳೆಯಲ್ಲಿ ಊದಲಾಗುವ ಮತ್ತು ನೀವು ಗುಂಪು ಗುಂಪಾಗಿ ಬರುವ ದಿನ!
(19) ಆಕಾಶವನ್ನು ತೆರೆಯಲಾಗುವುದು. ತರುವಾಯ ಅದು ಹಲವು ದ್ವಾರಗಳಾಗಿ ಮಾರ್ಪಡುವುದು.
(20) ಪರ್ವತಗಳು ಚಲಿಸಲ್ಪಡುವುವು. ಆಗ ಅವು ಮರೀಚಿಕೆಯಂತೆ ಆಗಿ ಬಿಡುವುದು.
(21) ಖಂಡಿತವಾಗಿಯೂ ನರಕಾಗ್ನಿಯು ಕಾಯುತ್ತಿರುವ ಸ್ಥಳವಾಗಿದೆ.
(22) ಅತಿಕ್ರಮಿಗಳಿಗೆ ಮರಳಿ ತಲುಪಬೇಕಾದ ಸ್ಥಳವೂ ಆಗಿದೆ.
(23) ಅವರು ಅದರಲ್ಲಿ ಯುಗಯುಗಾಂತರ ತಂಗುವವರಾಗಿರುವರು.
(24) ಅವರು ಅಲ್ಲಿ ತಂಪನ್ನಾಗಲಿ, ಪಾನೀಯವನ್ನಾಗಲಿ ಆಸ್ವಾದಿಸಲಾರರು.
(25) ಕುದಿಯುವ ನೀರು ಮತ್ತು ಅತಿತಣ್ಣಗಿನ ನೀರಿನ ಹೊರತು.
(26) ಅದು ಸೂಕ್ತವಾದ ಪ್ರತಿಫಲವಾಗಿದೆ.
(27) ಖಂಡಿತವಾಗಿಯೂ ಅವರು ವಿಚಾರಣೆಯನ್ನು ನಿರೀಕ್ಷಿಸುತ್ತಿರಲಿಲ್ಲ.
(28) ಅವರು ನಮ್ಮ ದೃಷ್ಟಾಂತಗಳನ್ನು ಸಂಪೂರ್ಣವಾಗಿ ನಿಷೇಧಿಸಿದರು.
(29) ನಾವು ಎಲ್ಲ ವಿಷಯಗಳನ್ನೂ ಲಿಖಿತವಾಗಿ ಎಣಿಸಿಟ್ಟಿರುವೆವು.
(30) ಆದ್ದರಿಂದ ನೀವು (ಶಿಕ್ಷೆಯನ್ನು) ಆಸ್ವಾದಿಸಿರಿ. ಖಂಡಿತವಾಗಿಯೂ ನಾವು ನಿಮಗೆ ಶಿಕ್ಷೆಯ ಹೊರತು ಇನ್ನೇನನ್ನೂ ಹೆಚ್ಚಿಸಿಕೊಡಲಾರೆವು.
(31) ಖಂಡಿತವಾಗಿಯೂ ಭಯಭಕ್ತಿ ಪಾಲಿಸಿದವರಿಗೆ ವಿಜಯವಿದೆ.
(32) ಅಂದರೆ (ಸ್ವರ್ಗದಲ್ಲಿರುವ) ತೋಟಗಳು ಮತ್ತು ದ್ರಾಕ್ಷಿಗಳು.
(33) ಉಬ್ಬಿದ ಎದೆಗಳುಳ್ಳ ಸಮವಯಸ್ಕರಾದ ತರುಣಿಯರು.
(34) ತುಂಬಿದ ಲೋಟಗಳು.
(35) ಅವರು ಅಲ್ಲಿ ಒಂದು ಅನಾವಶ್ಯಕ ಮಾತನ್ನಾಗಲಿ, ಒಂದು ಮಿಥ್ಯವಾರ್ತೆಯನ್ನಾಗಲಿ ಆಲಿಸಲಾರರು.
(36) (ಅದು) ತಮ್ಮ ರಬ್‌ನ ವತಿಯ ಒಂದು ಪ್ರತಿಫಲವೂ ಗಣಿಸಲಾದ ಒಂದು ಉಡುಗೊರೆಯೂ ಆಗಿದೆ.
(37) ಆಕಾಶಗಳ, ಭೂಮಿಯ ಮತ್ತು ಅವುಗಳ ಮಧ್ಯೆಯಿರುವವುಗಳ ರಬ್ ಮತ್ತು ಪರಮ ದಯಾಮಯನಾಗಿರುವವನ (ಉಡುಗೊರೆ). ಅವನೊಂದಿಗೆ ಸಂಭಾಷಣೆ ಮಾಡಲು ಅವರಿಗೆ ಸಾಧ್ಯವಾಗದು.(1343)
1343. ಅಲ್ಲಾಹುವಿನೊಂದಿಗೆ ಮಾತನಾಡಿ ಅವನ ತೀರ್ಮಾನವನ್ನು ಬದಲಾಯಿಸಲು ಅಥವಾ ಶಿಕ್ಷೆಯನ್ನು ಹಗುರವಾಗಿಸಲು ಅಥವಾ ಅವನು ತನ್ನ ಅನುಗ್ರಹಗಳನ್ನು ವಾಪಸು ಪಡೆಯುವಂತೆ ಮಾಡಲು ಯಾರಿಗೂ ಸಾಧ್ಯವಾಗದು.
(38) ರೂಹ್(1344) ಮತ್ತು ಮಲಕ್‍ಗಳು ಸಾಲು ಸಾಲಾಗಿ ನಿಲ್ಲುವ ದಿನ. ಪರಮ ದಯಾಮಯನಾದ ಅಲ್ಲಾಹು ಅನುಮತಿ ನೀಡಿದವನ ಮತ್ತು ಸತ್ಯವನ್ನೇ ನುಡಿಯುವವನ ವಿನಾ ಇನ್ನಾರೂ ಅಂದು ಮಾತನಾಡಲಾರರು.
1344. ಆತ್ಮ ಎಂಬ ಅರ್ಥದಲ್ಲಿ ‘ರೂಹ್’ ಎಂಬ ಪದವನ್ನು ಕುರ್‌ಆನ್ ಯಥೇಷ್ಟವಾಗಿ ಬಳಸಿದೆ. ಕೆಲವು ಸ್ಥಳಗಳಲ್ಲಿ ಜಿಬ್ರೀಲ್(ಅ) ಎಂಬ ಮಲಕನ್ನು ‘ರೂಹ್’ ಎಂಬ ಹೆಸರಿನಿಂದ ಕುರ್‌ಆನ್ ಕರೆದಿದೆ. ಇಲ್ಲಿ ಯಾವ ಅರ್ಥದಲ್ಲಿ ಬಳಸಲಾಗಿದೆ ಎಂಬ ಬಗ್ಗೆ ವ್ಯಾಖ್ಯಾನಕಾರರ ಮಧ್ಯೆ ಒಮ್ಮತವಿಲ್ಲ.
(39) ಅದು ಸತ್ಯವಾದ ದಿನವಾಗಿದೆ. ಆದ್ದರಿಂದ ಯಾರಾದರೂ ಇಚ್ಛಿಸುವುದಾದರೆ ಅವನು ತನ್ನ ರಬ್‌ನೆಡೆಗಿರುವ ಮರಳುವಿಕೆಯ ಮಾರ್ಗವನ್ನು ಪಡೆದುಕೊಳ್ಳಲಿ.
(40) ಹತ್ತಿರದಲ್ಲೇ ಇರುವ ಒಂದು ಶಿಕ್ಷೆಯ ಬಗ್ಗೆ ಖಂಡಿತವಾಗಿಯೂ ನಾವು ನಿಮಗೆ ಮುನ್ನೆಚ್ಚರಿಕೆ ನೀಡಿರುವೆವು. ತನ್ನ ಕೈಗಳು ಪೂರ್ವಭಾವಿಯಾಗಿ ಮಾಡಿಟ್ಟಿರುವುದನ್ನು ಮನುಷ್ಯನು ಕಾಣುವ ಮತ್ತು ಸತ್ಯನಿಷೇಧಿಯು ‘ಅಯ್ಯೋ! ನಾನು ಮಣ್ಣಾಗಿ ಹೋಗುತ್ತಿದ್ದರೆ ಎಷ್ಟು ಚೆನ್ನಾಗಿತ್ತು’ ಎಂದು ಹೇಳುವ ದಿನ!